ಭವಭೂತಿ
ಮಹಾಕವಿ ಭವಭೂತಿಯ ರೂಪಕಗಳಲ್ಲಿ ಆತನ ವ್ಯಕ್ತಿತ್ವ ಮತ್ತು ಕೃತಿತ್ವಗಳಲ್ಲದೆ ಕಾವ್ಯಮೀಮಾಂಸೆಯ ಸೂಚನೆಗಳೂ ಗಣ್ಯವಾಗಿವೆ. ಅವುಗಳನ್ನು ಪರಾಮರ್ಶಿಸಬಹುದು. “ಮಾಲತೀಮಾಧವ”ದ ಪ್ರಸ್ತಾವನೆಯಲ್ಲಿ ತನ್ನೀ ರೂಪಕದ ವೈಶಿಷ್ಟ್ಯವನ್ನು ಹೀಗೆ ಹೇಳಿಕೊಳ್ಳುತ್ತಾನೆ:
ಭೂಮ್ನಾ ರಸಾನಾಂ ಗಹನಪ್ರಯೋಗಾಃ
ಸೌಹಾರ್ದಹೃದ್ಯಾನಿ ವಿಚೇಷ್ಟಿತಾನಿ |
ಔದ್ಧತ್ಯಮಾಯೋಜಿತಕಾಮಸೂತ್ರಂ
ಚಿತ್ರಾಃ ಕಥಾ ವಾಚಿ ವಿದಗ್ಧತಾ ಚ || (ಮಾಲತೀಮಾಧವ, ೧.೪)
ರಸಸಮೃದ್ಧಿಯಿಂದ ಕೂಡಿದ ಗಹನವಾದ ಸಂವಿಧಾನಕ, ಸ್ನೇಹ-ವಿಶ್ವಾಸಗಳಿಂದ ಪ್ರೇರಿತವಾದ ವರ್ತನೆಗಳು, ಕಾಮಸೂತ್ರದ ಸೂಕ್ಷ್ಮತೆಗಳ ವಿಜೃಂಭಣೆ, ಆಕರ್ಷಕವಾದ ಕಥೆ ಮತ್ತು ನುಡಿಗಾರಿಕೆಯ ಪ್ರೌಢಿಮೆಗಳು [ಈ ರೂಪಕದ ವಿಶೇಷಗಳು].
ಇದು “ಪ್ರಕರಣ”ಕ್ಕೆ ಇರಬೇಕಾದ ಅರ್ಹತೆಗಳನ್ನು ತಕ್ಕಮಟ್ಟಿಗೆ ಹೇಳಿದೆ. ಮುಖ್ಯವಾಗಿ ಯಾವುದೇ ಸಾಹಿತ್ಯಕೃತಿಯು ರಸಪುಷ್ಟಿಯಿಂದ ಕೂಡಿರಬೇಕು. ಇದು ಆಳದ ಅನುಭವದಿಂದ ಜನಿಸಿರಬೇಕೆಂಬುದು ಮತ್ತೂ ಮುಖ್ಯವಾದ ಸಂಗತಿ. ಜೊತೆಗೆ ಇತಿವೃತ್ತವು ವಿವಿಧಪಾತ್ರಗಳ ಸ್ನೇಹ-ವಿಶ್ವಾಸಗಳನ್ನು ಬಿಂಬಿಸುವಂಥ ಘಟನೆಗಳಿಂದ ಮೈದುಂಬಿಕೊಳ್ಳಬೇಕು. ಜೀವನವಿಮರ್ಶೆ ಮತ್ತು ಜನಾಕರ್ಷಣೆಗಳಿಗೆ ಒದಗಿಬರುವಂತೆ ಶೃಂಗಾರದ ಪಾರಮ್ಯವೂ ಬೇಕು. ಇಷ್ಟೆಲ್ಲ ಆಗುವುದು ರೋಚಕವಾದ ಕಥೆ ಮತ್ತು ಪ್ರೌಢಿಮೆಯಿಂದ ಕೂಡಿದ ವರ್ಣನೆಗಳಿಂದ. ಹೀಗೆ ರಸ, ಪಾತ್ರ, ಕಥೆ ಮತ್ತು ಉಕ್ತಿವೈಚಿತ್ರ್ಯಗಳನ್ನೆಲ್ಲ ಒಳಗೊಳ್ಳುವ ಈ ಹೇಳಿಕೆ ಸಂಧಿ, ಅವಸ್ಥೆ ಮತ್ತು ಅರ್ಥಪ್ರಕೃತಿಗಳನ್ನು ಇತಿವೃತ್ತ-ವರ್ಣನೆಗಳೊಡನೆ ಬೆಸೆದಿದೆ. ಇದೊಂದು ಬಗೆಯಲ್ಲಿ ದೃಶ್ಯಕಾವ್ಯ-ಶ್ರವ್ಯಕಾವ್ಯಗಳ ಮೂಲಾಂಶಗಳನ್ನೆಲ್ಲ ಪಿಂಡೀಕರಿಸಿದ ಉಕ್ತಿಯೆನ್ನಬೇಕು. ಈ ಅಂತರ್ದೃಷ್ಟಿಯನ್ನು ಭರತನಿಂದ ಮೊದಲ್ಗೊಂಡು ಎಲ್ಲ ಆಲಂಕಾರಿಕರೂ ಆದರಿಸಿರುವುದು ಸ್ಮರಣೀಯ. ದುರ್ದೈವವೆಂದರೆ, ಇಂಥ ಅಭೇದದೃಷ್ಟಿಯು ನಮ್ಮ ಕಾವ್ಯಮೀಮಾಂಸೆಯ ಪರಂಪರೆಯಲ್ಲಿ ಇರಲೇ ಇಲ್ಲವೆಂದು ಇಂದಿಗೂ ಅನೇಕರು ವಾದಿಸುತ್ತಾರೆ! ಇಲ್ಲಿ ಭವಭೂತಿಯು ಕಾಮಸೂತ್ರದ ಪ್ರಸ್ತಾವವನ್ನು ತರುವ ಮೂಲಕ ನಾಟ್ಯಶಾಸ್ತ್ರಕ್ಕೆ ಸಮಾನತಂತ್ರವೆನಿಸಿದ ಮತ್ತೊಂದು ವಿದ್ಯೆಯನ್ನು ಕಟಾಕ್ಷಿಸಿರುವುದು ಗಮನಾರ್ಹ. ಈ ಅಂಶವೂ ನಮ್ಮ ಆಲಂಕಾರಿಕರಿಂದ ಆದೃತವಾದದ್ದೇ. ಆದರೆ ಇದು ಆಧುನಿಕಕಾಲದಲ್ಲಿ ಉಪೇಕ್ಷಿತವಾಗಿದೆ. ಎಂ. ಹಿರಿಯಣ್ಣ, ತೀ. ನಂ. ಶ್ರೀಕಂಠಯ್ಯ, ಕೆ. ಕೃಷ್ಣಮೂರ್ತಿಗಳಂಥವರು ಕೂಡ ನಾಟ್ಯಶಾಸ್ತ್ರ-ಕಾಮಶಾಸ್ತ್ರಗಳಿಗಿರುವ ಅನ್ಯೋನ್ಯಸಂಬಂಧವನ್ನು ಕಂಠೋಕ್ತವಾಗಿ ವಿಸ್ತರಿಸಿಲ್ಲ. ಇನ್ನು ಪಾಶ್ಚಾತ್ತ್ಯವಿದ್ವಾಂಸರಂತೂ ಇಂಥ ಪ್ರಭಾವಗಳನ್ನು ಗಣಿಸುವಾಗ ಆಕ್ಷೇಪಕ್ಕಲ್ಲದೆ ಅಂತರ್ದೃಷ್ಟಿಗಾಗಿ ಯತ್ನಿಸುವುದಿಲ್ಲ. ಪ್ರಾಯಶಃ ವಿಕ್ಟೋರಿಯನ್ ಯುಗದ ಮಡಿವಂತಿಕೆ ಮತ್ತು ಸೆಮೆಟಿಕ್ ಮತಗಳ ಶೀತಲಕಠೋರತೆ ಇದಕ್ಕೆ ಕಾರಣವಿರಬಹುದು. ಸುದೈವದಿಂದ ಈ ನಿಟ್ಟಿನಲ್ಲಿ ವಿ. ರಾಘವನ್ ಮತ್ತು ರಾಧಾವಲ್ಲಭ ತ್ರಿಪಾಠಿಗಳು ಬೋಧಪ್ರದವಾದ ಮಾಹಿತಿ ನೀಡಿದ್ದಾರೆ.
ಬಳಿಕ ಭವಭೂತಿಯು ತನ್ನ ಕೃತಿಗಳ ಆಕ್ಷೇಪಕರ್ತರನ್ನು ಉದ್ದೇಶಿಸಿ ಆಡಿದ ಪ್ರಸಿದ್ಧೋಕ್ತಿ ವಿಮರ್ಶನೀಯ:
ಯೇ ನಾಮ ಕೇಚಿದಿಹ ನಃ ಪ್ರಥಯಂತ್ಯವಜ್ಞಾಂ
ಜಾನಂತಿ ತೇ ಕಿಮಪಿ ತಾನ್ ಪ್ರತಿ ನೈಷ ಯತ್ನಃ |
ಉತ್ಪತ್ಸ್ಯತೇऽಸ್ತಿ ಮಮ ಕೋऽಪಿ ಸಮಾನಧರ್ಮಾ
ಕಾಲೋ ಹ್ಯಯಂ ನಿರವಧಿರ್ವಿಪುಲಾ ಚ ಪೃಥ್ವೀ || (ಮಾಲತೀಮಾಧವ, ೧.೬)
ನಮ್ಮನ್ನು ಯಾರು ಉಪೇಕ್ಷೆ ಮಾಡುವರೋ ಅವರನ್ನು ಉದ್ದೇಶಿಸಿ ಈ ಕೃತಿ ರಚಿತವಾಗಿಲ್ಲ. ಅವರಿಗೆ ಏನು ತಾನೆ ಗೊತ್ತು? ನನ್ನ ಸಮಾನಧರ್ಮನಾದವನು ಎಂದಾದರೂ ಹುಟ್ಟುವನು, ಅಥವಾ ಈಗಲೇ ಹುಟ್ಟಿರಬಹುದು. ಕಾಲವು ಅನಂತ, ದೇಶವು ವಿಶಾಲ.
ಇದು ನಮ್ಮ ಕಾವ್ಯಮೀಮಾಂಸಕರು ಹೆಚ್ಚಾಗಿ ಚರ್ಚಿಸದ ಒಂದಂಶ. ಆನಂದವರ್ಧನನ ಒಂದು ಮಾತು ಇದಕ್ಕೆ ಅಪವಾದವೆನ್ನಬಹುದು.[1] ಸತ್ಕವಿಯಾದವನು ತನ್ನನ್ನು ಆದರಿಸಬಲ್ಲ ಸಹೃದಯರಿಗಾಗಿ ಹಾತೊರೆಯಬೇಕಿಲ್ಲ; ಆ ಭರದಲ್ಲಿ ತನ್ನ ಮನೋಧರ್ಮಕ್ಕೆ ವಿರುದ್ಧವಾಗಿ ಸ್ವೀಯಕಾವ್ಯಧರ್ಮವನ್ನು ಮಾರ್ಪಡಿಸಿಕೊಳ್ಳಲೂ ಬೇಕಿಲ್ಲ. ಏಕೆಂದರೆ, ದೇಶ-ಕಾಲಗಳ ಅಸೀಮವಿಸ್ತರದಲ್ಲಿ ಅವನ ಕೃತಿಗಳಿಗೆ ಎಲ್ಲಿಯಾದರೂ ಯಾವಗಲಾದರೂ ಯಾರಾದರೂ ಸ್ಪಂದಿಸಬಹುದು. ಇದು ಕವಿಯೊಬ್ಬನ ಆತ್ಮನಿಷ್ಠೆಗೆ ಸೊಗಸಾದ ನಿದರ್ಶನ. ಇಂಥ ನಿಷ್ಠೆಯಿಲ್ಲದಿದ್ದಲ್ಲಿ ಆಯಾ ಕವಿಗೆ ವಿಶಿಷ್ಟವಾದ, ಸತ್ತ್ವಪೂರ್ಣವೂ ವೈವಿಧ್ಯಮಯವೂ ಆದ ಕಾವ್ಯ ಸೃಷ್ಟಿಯಾಗದು. ಈ ಬಗೆಯ ಪ್ರತ್ಯಭಿಜ್ಞಾನವಿಲ್ಲದ ಲೇಖಕರಿಂದಾಗಿಯೇ ಗತಾನುಗತಿಕವಾದ ಅಗ್ಗದ ಕಾವ್ಯಗಳು ಹುಲುಸಾಗಿ ಹುಟ್ಟಿಕೊಂಡಿವೆ. ಇಂಥವನ್ನು ಕಾವ್ಯಾಭಾಸಗಳೆಂದು ಕರಿಯುವುದೇ ಉಚಿತ. ಹೇಗೆ ಗಾಯಕನೊಬ್ಬನಿಗೆ ತನ್ನದಾದ ಶ್ರುತಿಯಲ್ಲಿ ಹಾಡುವುದು ಸಹಜ, ಸುಲಭ ಮತ್ತು ಸುಂದರವೋ ಹಾಗೆಯೇ ಕವಿಯೊಬ್ಬನಿಗೆ ತನ್ನದಾದ ಮನೋಧರ್ಮದಿಂದ ರಚಿಸುವುದು ಶ್ರೇಯಸ್ಕರ. ಈ ತನ್ನತನದಲ್ಲಿ ಉತ್ಕೃಷ್ಟಸ್ತರದ ಪ್ರತಿಭೆ-ವ್ಯುತ್ಪತ್ತಿ-ಅಭ್ಯಾಸಗಳು ಇದ್ದೇ ಇರಬೇಕೆಂಬುದು ಸ್ವಯಂವೇದ್ಯ. ಇಂತಲ್ಲದಿದ್ದಲ್ಲಿ ಸ್ವಂತಿಕೆಯ ಹೆಸರಿನಲ್ಲಿ ಅಹಂಕಾರವು ಕಳಪೆಯ ಸರಕನ್ನು ಕಾವ್ಯಜಗತ್ತಿನಲ್ಲಿ ಬಿತ್ತರಿಸದಿರದು.
ಭವಭೂತಿಯು ತನ್ನ ಸ್ವಂತಿಕೆಯಲ್ಲಿ ಸಾಮರ್ಥ್ಯವನ್ನೂ ಹೊಂದಿದ್ದನೆಂಬುದಕ್ಕೆ ಮುಂದಿನ ಪದ್ಯವೇ ಸಾಕ್ಷಿ. ಇದು ಸಾಮರ್ಥ್ಯದೊಡನೆ ಪ್ರಾಮಾಣಿಕವಾದ ಆತ್ಮವಿಮರ್ಶೆಯನ್ನೂ ಒಳಗೊಂಡಿದೆ:
ಯದ್ವೇದಾಧ್ಯಯನಂ ತಥೋಪನಿಷದಾಂ ಸಾಂಖ್ಯಸ್ಯ ಯೋಗಸ್ಯ ಚ
ಜ್ಞಾನಂ ತತ್ಕಥನೇನ ಕಿಂ ನ ಹಿ ತತಃ ಕಶ್ಚಿದ್ಗುಣೋ ನಾಟಕೇ |
ಯತ್ಪ್ರೌಢಿತ್ವಮುದಾರತಾ ಚ ವಚಸಾಂ ಯಚ್ಚಾರ್ಥತೋ ಗೌರವಂ
ತಚ್ಚೇದಸ್ತಿ ತತಸ್ತದೇವ ಗಮಕಂ ಪಾಂಡಿತ್ಯವೈದಗ್ಧ್ಯಯೋಃ || (ಮಾಲತೀಮಾಧವ, ೧.೭)
ನನ್ನ ವೇದಾಧ್ಯಯನ, ವೇದಾಂತವ್ಯಾಸಂಗ, ಸಾಂಖ್ಯ-ಯೋಗಾದಿಗಳ ಪಾಟವಗಳನ್ನು ಹೇಳಿಕೊಂಡೇನು? ಅವುಗಳಿಂದ ರೂಪಕರಚನೆಗೆ ಯಾವುದೇ ಪ್ರಯೋಜನವಿಲ್ಲ. ಮಾತಿನಲ್ಲಿ ಪ್ರೌಢಿಮೆ-ಉದಾರತೆಗಳು ಹಾಗೂ ಅರ್ಥದಲ್ಲಿ ಘನತೆಯಿದ್ದಲ್ಲಿ ಮಾತ್ರ ಪಾಂಡಿತ್ಯ-ನೈಪುಣ್ಯಗಳಿಗೆ ಸಾರ್ಥಕ್ಯ ಬರುತ್ತದೆ.
ಕಾವ್ಯರಚನೆಗೆ ಸರ್ವತೋಮುಖವಾದ ಪಾಂಡಿತ್ಯ ತುಂಬ ಸಹಕಾರಿಯೆಂಬುದರಲ್ಲಿ ಸಂದೇಹವಿಲ್ಲ. ಆದರೆ ಪ್ರತಿಭೆಗೆ ಅಧೀನವಾಗದ ಪಾಂಡಿತ್ಯ ಆ ಮಟ್ಟಿಗೆ ಅನರ್ಥಕಾರಿ. ಇದನ್ನೇ ಭವಭೂತಿಯು ಪ್ರಕೃತಪದ್ಯದಲ್ಲಿ ಸೂಚಿಸಿದ್ದಾನೆ. ಈ ವಿಷಯವನ್ನು ಕುರಿತು ಆಲಂಕಾರಿಕರು ವಿಪುಲವಾಗಿ ಚರ್ಚಿಸಿ ಎಚ್ಚರಿಸಿಯೂ ಇದ್ದಾರೆ. ಆದರೆ ಅವರನ್ನು ಕಿವುಡುಗೇಳಿದ ಕವಿಗಳೇ ಅಧಿಕ! ಭವಭೂತಿಯು ಪಾಂಡಿತ್ಯದ ಕೊರತೆಯಿಂದ ಕಾವ್ಯಜಗತ್ತಿಗೆ ಇಳಿಯಲಿಲ್ಲ. ಅಂತೆಯೇ ತನ್ನ ಪಾಂಡಿತ್ಯವನ್ನು ಪ್ರತಿಭಾದಾರಿದ್ರ್ಯಕ್ಕೆ ಪ್ರತ್ಯಾಮ್ನಾಯವಾಗಿಯೂ ಮುಂದಿಡಲಿಲ್ಲ. ಇದನ್ನು ಮುಂದೆ ಬಂದ ಆನಂದವರ್ಧನ ಮಾರ್ಮಿಕವಾಗಿ ಒಕ್ಕಣಿಸಿದ್ದಾನೆ:
ಅವ್ಯುತ್ಪತ್ತಿಕೃತೋ ದೋಷಃ ಶಕ್ತ್ಯಾ ಸಂವ್ರಿಯತೇ ಕವೇಃ |
ಯಸ್ತ್ವಶಕ್ತಿಕೃತಸ್ತಸ್ಯ ಸ ಝಟಿತ್ಯವಭಾಸತೇ || (೩.೬ ವೃತ್ತಿಯಲ್ಲಿಯ ಪರಿಕರಶ್ಲೋಕ)
ಕವಿಯ ಪಾಂಡಿತ್ಯದ ಕೊರತೆಯಿಂದಾದ ಲೋಪವನ್ನು ಆತನ ಪ್ರತಿಭೆ ಮುಚ್ಚಿಹಾಕಬಲ್ಲುದು. ಆದರೆ ಪ್ರತಿಭೆಯ ಕೊರತೆಯಿಂದಾದ ಲೋಪ-ದೋಷಗಳು ಒಡನೆಯೇ ಎದ್ದುತೋರುತ್ತವೆ.
ಭವಭೂತಿಯು ನಿಜವಾದ ರಸಿಕನು ಕವಿಯಲ್ಲಿ ಕಾಣಬೇಕಿರುವುದು ಏನೆಂಬುದನ್ನೂ ಸತ್ಕೃತಿಯಲ್ಲಿ ಯಾವ ಅಂಶಗಳು ಮುಖ್ಯವೆಂಬುದನ್ನೂ ಇಲ್ಲಿ ಸೂಚಿಸಿದ್ದಾನೆ. ಈ ಮೂಲಕ ಕಾವ್ಯಸಾಮಾನ್ಯದ ಲಕ್ಷಣವೂ ಧ್ವನಿತವಾಗಿದೆ. ಇದು ಮತ್ತೆ ಶಬ್ದಾರ್ಥೌ ಸಹಿತಂ ಕಾವ್ಯಂ ಎಂಬ ಆದರ್ಶವನ್ನೇ ಪೋಷಿಸಿದೆ. ಕುಂತಕನ ಪರಿಭಾಷೆಯನ್ನು ಆಶ್ರಯಿಸುವುದಾದರೆ, ಭವಭೂತಿ ಹೇಳುವ ಪ್ರೌಢಿತ್ವವು ವಿಚಿತ್ರಮಾರ್ಗದ ಸಂಕೇತವಾದರೆ ಉದಾರತೆಯು ಸುಕುಮಾರಮಾರ್ಗದ ಪ್ರತೀಕ. ಇವೆರಡೂ ನಿರಪವಾದವಾಗಿ ಅರ್ಥಗಾಂಭೀರ್ಯದಲ್ಲಿ ಪರಿಣಮಿಸಬೇಕು. ರಸವಲ್ಲದೆ ಮತ್ತಾವುದು ತಾನೆ ಕಾವ್ಯಾರ್ಥ? ಹೀಗೆ ವ್ಯುತ್ಪತ್ತಿ ಮತ್ತು ಅಭ್ಯಾಸಗಳು ಪ್ರತಿಭಾಧೀನವಾಗಿ ವಾಗರ್ಥವ್ಯಾಪಾರವನ್ನು ರೂಪಿಸಿದರೆ ಒಳ್ಳೆಯ ಕಾವ್ಯವು ಹುಟ್ಟದಿರುವುದಾದರೂ ಹೇಗೆ?
ಭವಭೂತಿಯು “ಉತ್ತರರಾಮಚರಿತೆ”ಯಲ್ಲಿ ಮತ್ತೆ ಮತ್ತೆ ಶಬ್ದಬ್ರಹ್ಮದ ಪ್ರಸ್ತಾವವನ್ನು ತರುತ್ತಾನೆ. ಎರಡನೆಯ ಅಂಕದ ಶುದ್ಧವಿಷ್ಕಂಭಕದಲ್ಲಿಯೂ ಭರತವಾಕ್ಯದಲ್ಲಿಯೂ ಬಂದಿರುವ ಉಲ್ಲೇಖಗಳು ಪರಿಶೀಲನೀಯ.[2] ವಿಶೇಷತಃ ಸಾಹಿತ್ಯವನ್ನು ಶಬ್ದಬ್ರಹ್ಮದ ವಿವರ್ತರೂಪವೆಂದು ಹೇಳುವುದಂತೂ ಅತಿಶಯ. ಈ ಮಟ್ಟದಲ್ಲಿ ಕಾವ್ಯತತ್ತ್ವವನ್ನು ಕಂಡರಿಸಿದವರು ವಿರಳ. ಭಟ್ಟತೌತನು ದರ್ಶನಾದ್ವರ್ಣನಾಚ್ಚಾಥ ರೂಢಾ ಲೋಕೇ ಕವಿಶ್ರುತಿಃ ಎಂದಿರುವುದು ಭವಭೂತಿಯ ಮಾತಿನ ವ್ಯಾಖ್ಯಾನವೇ ಆಗಿದೆ. ಶಬ್ದಬ್ರಹ್ಮವು ದರ್ಶನವಾದರೆ ಅದರ ವಿವರ್ತವೇ ವರ್ಣನೆ. ಹೀಗಾಗಿ ಕವಿಯು ನಿರ್ಗುಣಬ್ರಹ್ಮದಿಂದ ಸಗುಣಬ್ರಹ್ಮವನ್ನು ಜಗತ್ತಿಗೆ ಸಾಕ್ಷಾತ್ಕರಿಸಿಕೊಡುವ ದಾರ್ಶನಿಕ. ಈ ಕಾರಣದಿಂದಲೇ ಆತನ ವ್ಯಕ್ತಿತ್ವವೂ ಮಿಗಿಲಾಗಿರಬೇಕು. ಒಟ್ಟಿನಲ್ಲಿ ಕವಿಯ ಬಾಧ್ಯತೆ ಹಿರಿದು. ಇಂಥ ಘನತೆಯನ್ನು ಕವಿ-ಕಾವ್ಯತತ್ತ್ವಗಳಿಗೆ ತಂದುಕೊಟ್ಟ ಭವಭೂತಿಯ ಕಾಣ್ಕೆ ಮಿಗಿಲು. ವಿವರ್ತವೆಂದೊಡನೆಯೇ ಕಾವ್ಯಪ್ರಕಾರಗಳ ಅನಂತತೆಯೂ ಧ್ವನಿತವಾಗುತ್ತದೆ. ಹೀಗಾಗಿ ಒಳ್ಳೆಯ ಕಾವ್ಯಕ್ಕೆ ಪುನರುಕ್ತಿಯ ದೋಷ ಅಂಟುವುದಿಲ್ಲ.
ಭವಭೂತಿಯು “ವಿವರ್ತ”ಶಬ್ದವನ್ನು ಮತ್ತೂ ಒಂದು ಕಡೆ ಬಳಸುತ್ತಾನೆ. ಇದು ಅತ್ಯಂತ ಪ್ರಸಿದ್ಧವಾದ ಕರುಣರಸಂಬಂಧಿ ಪದ್ಯದಲ್ಲಿ ಬಂದಿದೆ:
ಏಕೋ ರಸಃ ಕರುಣ ಏವ ನಿಮಿತ್ತಭೇದಾ-
ದ್ಭಿನ್ನಃ ಪೃಥಕ್ ಪೃಥಗಿವಾಶ್ರಯತೇ ವಿವರ್ತಾನ್ |
ಆವರ್ತಬುದ್ಬುದತರಂಗಮಯಾನ್ ವಿಕಾರಾ-
ನಂಭೋ ಯಥಾ ಸಲಿಲಮೇವ ಹಿ ತತ್ಸಮಸ್ತಮ್ || (ಉತ್ತರರಾಮಚರಿತ, ೩.೪೭)
ಇರುವುದೊಂದೇ ಕರುಣರಸ. ಅದು ಬೇರೆಬೇರೆ ಕಾರಣಗಳಿಂದ ಭಿನ್ನಭಿನ್ನವಾದ ರೂಪಗಳನ್ನು ತಾಳುತ್ತದೆ. ನೀರು ತೆರೆ, ನೊರೆ, ಸುಳಿ, ತುಂತುರು ಮೊದಲಾದ ರೂಪಾಂತರಗಳನ್ನು ತಾಳಿದ್ದರೂ ಅದು ಒಂದೇ.
ಈ ಪದ್ಯವನ್ನು ಅನೇಕರು ವ್ಯಾಪಕವಾಗಿ ಚರ್ಚಿಸಿದ್ದಾರೆ. ಈ ಚರ್ಚೆ ಭವಭೂತಿಯು ಕರುಣವೊಂದನ್ನೇ ರಸವೆಂದು ಸಾರಿರುವನು ಎಂಬಷ್ಟರ ಮಟ್ಟಿಗೆ ಸಾಗಿದೆ. ಬಹುಶಃ ಭೋಜ, ಅಭಿನವಗುಪ್ತ, ಹೇಮಾದ್ರಿ, ವೋಪದೇವ, ಮಧುಸೂದನಸರಸ್ವತಿಗಳೇ ಮುಂತಾದ ಪರವರ್ತಿಗಳೆಲ್ಲ ಶೃಂಗಾರ, ಶಾಂತ ಮತ್ತು ಭಕ್ತಿಗಳನ್ನು ಪರಮರಸವೆಂದು ಪ್ರತಿಪಾದಿಸಲು ಈ ಶ್ಲೋಕವೇ ಸ್ಫೂರ್ತಿ ನೀಡಿರಬಹುದು. ಆದರೆ ಪ್ರಕೃತಿರಸವಾದ ಶಾಂತವನ್ನುಳಿದು ಮಿಕ್ಕ ಯಾವುದೇ ವಿಕೃತರಸವನ್ನು ಪರಮರಸವೆಂದು ಪ್ರತಿಪಾದಿಸುವ ಎಲ್ಲ ಉಪಕ್ರಮಗಳೂ ಅಸಮರ್ಪಕಗಳೆಂಬುದರಲ್ಲಿ ಸಂದೇಹವಿಲ್ಲ. ಭವಭೂತಿಯಂಥ ವಶ್ಯವಾಕ್ಕಾದ ಮಹಾಕವಿ ಇಂಥ ತಪ್ಪನ್ನು ಮಾಡಿರಲಾರ. ಇಲ್ಲಿರುವುದು ಕರುಣವೊಂದೇ ಪರಮರಸವೆಂಬ ಆಲಂಕಾರಿಕತತ್ತ್ವದ ಪ್ರತಿಪಾದನೆಯಲ್ಲ. ಇದನ್ನು ಎಂ. ಮಹೇಶ ಅಡಕೋಳಿ ಅವರು ತಮ್ಮ ಉಪನ್ಯಾಸವೊಂದರಲ್ಲಿ ಸಹೇತುಕವಾಗಿ ನಿರೂಪಿಸಿದ್ದಾರೆ. ಆ ಪ್ರಕಾರ ಈ ಶ್ಲೋಕದ ತಾತ್ಪರ್ಯ ಹೀಗೆ: ಒಂದೇ ಕರುಣರಸವು ರಾಮ, ಸೀತೆ, ವಾಸಂತಿ, ತಮಸೆ ಮೊದಲಾದ ಎಲ್ಲ ಪಾತ್ರಗಳ ಮೂಲಕವೂ ಬೇರೆ ಬೇರೆ ಛಾಯೆಗಳಾಗಿ ತೋರಿಕೊಳ್ಳುತ್ತದೆ. ಅಂದರೆ, ಇಡಿಯ ರೂಪಕದ ಕರುಣರಸವು ಇಲ್ಲಿಯ ಎಲ್ಲ ಹಿರಿಯ ಪಾತ್ರಗಳ ಮೂಲಕ ಪರಿಪುಷ್ಟವಾಗುತ್ತದೆ. ಹೀಗಲ್ಲವಾದಲ್ಲಿ ಅದಕ್ಕೆ ಏಕತಾನತೆ ಬಂದೊದಗುತ್ತಿತ್ತು. ಈ ಪದ್ಯದಲ್ಲಿಯ “ವಿವರ್ತ”ಶಬ್ದವು ಕಾವ್ಯಮೀಮಾಂಸೆಯ ದೃಷ್ಟಿಯಿಂದಲೂ ಗಮನಾರ್ಹ. ಹೇಗೆ ಕಾವ್ಯವು ಶಬ್ದಬ್ರಹ್ಮದ ವಿವರ್ತವೋ ಹಾಗೆಯೇ ಸಕಲರಸಗಳೂ ಶಾಂತರಸದ ವಿವರ್ತಗಳು.
[1] ಧ್ವನ್ಯಾಲೋಕ, ೪.೧೭
[2] ತಂ ಭಗವಂತಮ್ ಆವಿರ್ಭೂತಶಬ್ದಬ್ರಹ್ಮಪ್ರಕಾಶಮ್ ಋಷಿಮುಪಸಂಗಮ್ಯ ಭಗವಾನ್ ಭೂತಭಾವನಃ ಪದ್ಮಯೋನಿರವೋಚತ್: “ಋಷೇ ಪ್ರಬುದ್ಧೋऽಸಿ | ವಾಗಾತ್ಮನಿ ಬ್ರಹ್ಮಣಿ ತದ್ಬ್ರೂಹಿ ರಾಮಚರಿತಮ್ | ಅವ್ಯಾಹಿತಂ ಜ್ಯೋತಿರಾರ್ಷಂ ತೇ ಪ್ರತಿಭಾಚಕ್ಷುಃ | ಆದ್ಯಃ ಕವಿರಸಿ |” ಇತ್ಯುಕ್ತ್ವಾ ತತ್ರೈವಾಂತರ್ಹಿತಃ | ಅಥ ಸ ಭಗವಾನ್ ಪ್ರಾಚೇತಸಃ ಪ್ರಥಮಂ ಮನುಷ್ಯೇಷು ಶಬ್ದಬ್ರಹ್ಮಣಸ್ತಾದೃಶಂ ವಿವರ್ತಮಿತಿಹಾಸಂ ರಾಮಾಯಣಂ ಪ್ರಣಿನಾಯ || (ಎರಡನೆಯ ಅಂಕದ ಶುದ್ಧವಿಷ್ಕಂಭಕ)
ಶಬ್ದಬ್ರಹ್ಮವಿದಃ ಕವೇಃ ಪರಿಣತಪ್ರಜ್ಞಸ್ಯ ವಾಣೀಮಿಮಾಮ್ || (೭.೨೦)
To be continued.