ನಾವಿನ್ನು “ಶಿವಲೀಲಾರ್ಣವ”ದತ್ತ ತಿರುಗಬಹುದು. ಇದರಲ್ಲಿ ನೀಲಕಂಠದೀಕ್ಷಿತನ ವ್ಯಾಪಕವಾದ ಕಾವ್ಯಚಿಂತನೆ ಕಂಡುಬರುತ್ತದೆ. ಮೊದಲಿಗೇ ಕವಿಯು ಧ್ವನಿಯ ಮಹತ್ತ್ವವನ್ನು ಸಾರುತ್ತಾನೆ:
ಸಾಹಿತ್ಯವಿದ್ಯಾಜಯಘಂಟಯೈವ
ಸಂವೇದಯಂತೇ ಕವಯೋ ಯಶಾಂಸಿ |
ಯಥಾ ಯಥಾಸ್ಯಾಂ ಧ್ವನಿರುಜ್ಜಿಹೀತೇ
ತಥಾ ತಥಾ ಸಾರ್ಹತಿ ಮೂಲ್ಯಭೇದಾನ್ || (೧.೮)
ಸಾಹಿತ್ಯವಿದ್ಯೆಯೆಂಬ ಜಯಘಂಟಿಕೆಯಿಂದಲೇ ಕವಿಗಳು ಕೀರ್ತಿಯನ್ನು ಗಳಿಸುತ್ತಾರೆ. ಅದರಲ್ಲಿ ಎಷ್ಟರ ಮಟ್ಟಿಗೆ ಧ್ವನಿಯು ಹೊಮ್ಮುವುದೋ ಅಷ್ಟರ ಮಟ್ಟಿಗೆ ಅದರ ಬೆಲೆ ನಿಗದಿಯಾಗುತ್ತದೆ.
ಆನಂದವರ್ಧನನ ಬಳಿಕ ಬಂದ ಕವಿಗಳ ಪೈಕಿ ತಮ್ಮ ಕಾವ್ಯಗಳಲ್ಲಿ ಧ್ವನಿಯನ್ನು ಕುರಿತು ನೀಲಕಂಠದೀಕ್ಷಿತನಷ್ಟು ಮಾರ್ಮಿಕವಾಗಿ ಮತ್ತಾರೂ ಕವನಿಸಿಲ್ಲ. ಧ್ವನಿಯಿಲ್ಲದ ಕಾವ್ಯ ಇಲ್ಲವೆಂಬಷ್ಟು ವಿರಳ. ಆದರೆ ಧ್ವನಿಪ್ರಾಧಾನ್ಯದಿಂದಲೇ ಅದರ ಅಸ್ತಿತ್ವವನ್ನು ಗಣಿಸುವುದು ಆನಂದವರ್ಧನನ ವಿವೇಕ. ಮಾತ್ರವಲ್ಲ, ಔಚಿತ್ಯಪೂರ್ಣವಾದ ಧ್ವನಿಯೇ ರಸಧ್ವನಿಯೆನಿಸುತ್ತದೆ. ಇದನ್ನೆಲ್ಲ ಗಮನದಲ್ಲಿರಿಸಿಕೊಂಡೇ ಸದ್ಯದಲ್ಲಿ ಧ್ವನಿಯ ಪ್ರಮಾಣವ್ಯತ್ಯಾಸದಿಂದಲೇ ಕಾವ್ಯದ ಮೌಲ್ಯನಿಷ್ಕರ್ಷೆಯಾಗುವುದೆಂಬ ನಿಗಮನ ಬಂದಿದೆ. ಈ ಪದ್ಯದಲ್ಲಿ ಜಯಘಂಟೆ ಅಥವಾ ಜಾಗಟೆಯ ಪ್ರಸ್ತಾವ ಬಂದಿರುವುದು ಗಮನಾರ್ಹ. ಇದು ಧ್ವನಿಯ ಅನುರಣನಶೀಲತೆಯನ್ನೇ ವ್ಯಂಜಿಸಿದೆ. ಧ್ವನಿಸಿದ್ಧಾಂತದ ಪರಾಮರ್ಶೆ ಮುಂದಿನ ಎರಡು ಪದ್ಯಗಳಲ್ಲಿಯೂ ಬಂದಿರುವುದನ್ನು ಸಹೃದಯರು ಗಮನಿಸಬಹುದು (೧.೯,೧೦). ಮತ್ತೊಂದು ಪದ್ಯದಲ್ಲಿ ನೀಲಕಂಠದೀಕ್ಷಿತನು ವಾಚ್ಯವಾದ ವಕ್ರೋಕ್ತಿಗಿಂತಲೂ ವ್ಯಂಗ್ಯವಾಗುವ ಯಾವ ಕಾವ್ಯತತ್ತ್ವವೂ ಶ್ರೇಷ್ಠವೆಂದಿರುವುದು ಗಮನಾರ್ಹ (೧.೧೯). ಧ್ವನಿಯನ್ನು ಕಾವ್ಯದ ಜೀವಿತವೆಂದು ಪ್ರಕಾರಾಂತರವಾಗಿ ಹೀಗೆ ಸಾಧಿಸುತ್ತಾನೆ:
ಅನ್ಯೋನ್ಯಸಂಸರ್ಗವಿಶೇಷರಮ್ಯಾ-
ಪ್ಯಲಂಕೃತಿಃ ಪ್ರತ್ಯುತ ಶೋಚನೀಯಾ |
ನಿರ್ವ್ಯಂಗ್ಯಸಾರೇ ಕವಿಸೂಕ್ತಿಬಂಧೇ
ನಿಷ್ಕ್ರಾಂತಜೀವೇ ವಪುಷೀವ ದತ್ತಾ || (೧.೩೬)
ಪರಸ್ಪರ ಸಾಂಗತ್ಯದಿಂದ ವಿಶೇಷಸೌಂದರ್ಯವುಳ್ಳ ಅಲಂಕಾರಗಳೆಷ್ಟಿದ್ದರೂ ಅವು ಧ್ವನಿಯೆಂಬ ಜೀವವಿಲ್ಲದ ಕಾವ್ಯಶರೀರಕ್ಕೆ ಮಾಡಿದ ಸಿಂಗಾರವೆನಿಸಿ ಶೋಚನೀಯವೇ ಆಗುತ್ತವೆ.
ಕವಿಯ ವಿಕಟಕಲ್ಪನಾಶಕ್ತಿ ಎಷ್ಟೆಷ್ಟೋ ಅಲಂಕಾರಚಮತ್ಕಾರಗಳನ್ನು ಮಾಡಬಹುದು. ಆದರೆ ಅವು ಧ್ವನಿಪೂರ್ಣವಲ್ಲದ ಕಾವ್ಯಕ್ಕೆ ಭಾರವೇ ಆಗುತ್ತವೆ. ಅಂದರೆ, ಪ್ರಕರಣ ಮತ್ತು ಪ್ರಬಂಧಗಳ ಸ್ತರದಲ್ಲಿ ಧ್ವನಿಶೀಲವಲ್ಲದ ಕಾವ್ಯಗಳಿಗೆ ಹೆಚ್ಚಿನ ಅಲಂಕಾರ ವಿಡಂಬನೆಯೆನಿಸುತ್ತದೆ. ಮಾತ್ರವಲ್ಲ, ವಾಕ್ಯಧ್ವನಿಯ ಸ್ತರದಲ್ಲಿ ಕಂಡಾಗ ಎಲ್ಲ ಅರ್ಥಾಲಂಕಾರಗಳಿಗೂ ಅಲಂಕಾರತ್ವವು ಸಲ್ಲುವುದೇ ಧ್ವನಿಸ್ಪರ್ಶದಿಂದ. ಅಂದರೆ, ಗುಣೀಭೂತವ್ಯಂಗ್ಯತ್ವವಿಲ್ಲದೆ ಅಲಂಕಾರವು ಅಲಂಕಾರವೇ ಆಗದು. ಈ ಅಂಶಗಳನ್ನೆಲ್ಲ ಆನಂದವರ್ಧನ ವಿಶದವಾಗಿ ನಿರೂಪಿಸಿದ್ದಾನೆ.[1]
ನೀಲಕಂಠದೀಕ್ಷಿತನಿಗೆ ಶಬ್ದಗುಂಫನದ ವೈಚಿತ್ರ್ಯವನ್ನು ಕುರಿತು ಮಿಗಿಲಾದ ಆಸಕ್ತಿಯುಂಟು:
ಯಾನೇವ ಶಬ್ದಾನ್ ವಯಮಾಲಪಾಮೋ
ಯಾನೇವ ಚಾರ್ಥಾನ್ ವಯಮುಲ್ಲಿಖಾಮಃ |
ತೈರೇವ ವಿನ್ಯಾಸವಿಶೇಷಭವ್ಯೈಃ
ಸಮ್ಮೋಹಯಂತೇ ಕವಯೋ ಜಗಂತಿ || (೧.೧೩)
ಯಾವ ಪದಗಳನ್ನು ನಾವು ನುಡಿಯುವೆವೋ ಯಾವ ಅರ್ಥಗಳನ್ನು ಅವಕ್ಕೆ ಆರೋಪಿಸುವೆವೋ ಅವುಗಳನ್ನೇ ವಿಶಿಷ್ಟಮನೋಹರ ವಿನ್ಯಾಸದಿಂದ ಬಳಸಿ ಕವಿಗಳು ಜಗತ್ತನ್ನು ಮರುಳುಗೊಳಿಸುತ್ತಾರೆ.
ಇದು ಎಲ್ಲ ಕಾಲಕ್ಕೂ ಸಲ್ಲುವ ಸತ್ಯ. ಕವಿಯು ಲೋಕದ ಶಬ್ದಾರ್ಥಗಳನ್ನೇ ಸ್ವೀಕರಿಸಿ ತನ್ನ ಕೃತಿಯನ್ನು ರೂಪಿಸುತ್ತಾನೆ. ಅರ್ಥವೆನ್ನುವಾಗ ಬರಿಯ ಮಾತುಗಳ ತಾತ್ಪರ್ಯವಲ್ಲದೆ ಜಗತ್ತಿನ ಎಲ್ಲ ವಿಚಾರ-ಭಾವನೆಗಳೂ ಅದರಲ್ಲಿ ಸೇರಿವೆಯೆಂಬುದು ಅವಿಸ್ಮರಣೀಯ. ಏಕೆಂದರೆ ಕಾವ್ಯದ ಇತಿವೃತ್ತ, ಪಾತ್ರಗಳು ಮತ್ತು ವರ್ಣ್ಯವರ್ಗದಲ್ಲಿ ಬರುವ ಮಿಕ್ಕೆಲ್ಲ ಸ್ಥಾವರ-ಜಂಗಮಾಸ್ತಿತ್ವಗಳು ಬರಿಯ ಶಬ್ದಪ್ರಪಂಚಕ್ಕೆ ಸೇರಿಲ್ಲ. ಈ ಅಂಶಗಳು ಕೇವಲ ವಾಚಕಶಬ್ದಗಳನ್ನಲ್ಲದೆ ವ್ಯಂಗ್ಯವಾಗುವ ಸಂವೇದನೆಯನ್ನೂ ಒಳಗೊಳ್ಳುವ ಕಾರಣ “ಅರ್ಥ”ಶಬ್ದಕ್ಕೆ ಹೆಚ್ಚಿನ ವ್ಯಾಪ್ತಿಯುಂಟು. ಇಂಥದ್ದೇ ಅಭಿಪ್ರಾಯವನ್ನು ಸಿಂಹಭೂಪಾಲನು ಈ ಮುನ್ನ ದಾಖಲಿಸಿರುವುದು ಸ್ಮರಣೀಯ.[2] ಕಾವ್ಯದಲ್ಲಿ ವಾಗರ್ಥಗಳ ಗುಂಫನಕ್ಕೆ ಎಷ್ಟೇ ಬೆಲೆಯಿದ್ದರೂ ಇಷ್ಟು ಮಾತ್ರದಿಂದಲೇ ಮಹಾಕೃತಿ ಜನಿಸದೆಂಬ ಎಚ್ಚರವೂ ನೀಲಕಂಠದೀಕ್ಷಿತನಿಗಿದೆ:
ಮತ್ವಾ ಪದಗ್ರಂಥನಮೇವ ಕಾವ್ಯಂ
ಮಂದಾಃ ಸ್ವಯಂ ತಾವತಿ ಚೇಷ್ಟಮಾನಾಃ |
ಮಜ್ಜಂತಿ ಬಾಲಾ ಇವ ಪಾಣಿಪಾದ-
ಪ್ರಸ್ಪಂದಮಾತ್ರಂ ಪ್ಲವನಂ ವಿದಂತಃ || (೧.೪೦)
ಮಕ್ಕಳು ಕೈ-ಕಾಲುಗಳನ್ನು ಆಡಿಸುವಷ್ಟೇ ಈಜೆಂದು ಭ್ರಮಿಸಿದಂತೆ ಪದಗುಂಫನವಷ್ಟೇ ಕಾವ್ಯವೆಂದು ಭಾವಿಸಿದ ಹೆಡ್ಡರು ಅದರಲ್ಲಿಯೇ ಮುಳುಗಿಹೋಗುತ್ತಾರೆ.
ಇದು ಕೇವಲ ರಚನಾಕವಿಗಳಿಗೆ ನೀಲಕಂಠದೀಕ್ಷಿತ ನೀಡಿರುವ ಗುದ್ದು. ಏಕೆಂದರೆ ಯಾವುದೇ ಕಲೆಯಲ್ಲಿ ಒಂದು ಮಟ್ಟದ ರೂಪಶುದ್ಧಿ ಸಿದ್ಧಿಸಿದ ಬಳಿಕ ಅದನ್ನೇ ಕುರುಡಾಗಿ ಅನುಸರಿಸಲು ಹೆಚ್ಚಿನ ಶ್ರಮ ಬೇಕಿಲ್ಲ; ಪ್ರತಿಭೆಯಂತೂ ಬೇಕಾಗಿಯೇ ಇಲ್ಲ. ಹೀಗಾಗಿ ಕಾವ್ಯವೆಂಬುದು ಒಂದು ಸ್ತರದ ಕೌಶಲವಾಗಿ ಉಳಿಯುತ್ತದೆ. ಗತಾನುಗತಿಕತ್ವಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಬೇಕಿಲ್ಲ. ಸಂಸ್ಕೃತದಂಥ ಅಭಿಜಾತವೂ ಸದ್ಯದ ಜಗತ್ತಿನ ನಿತ್ಯವ್ಯವಹಾರದಲ್ಲಿ ಅಪ್ರಚುರವೂ ಆದ ಭಾಷೆಯ ಕಾವ್ಯಕ್ಕೆ ಇಂಥ ಅಪಾಯ ಮತ್ತೂ ಹೆಚ್ಚು. ಸಿದ್ಧವಾದ ಶಬ್ದಗಳು, ಸಿದ್ಧವಾದ ಛಂದೋಬಂಧಗಳು, ಸಿದ್ಧರೂಪದ ಅಲಂಕಾರಕಲ್ಪನೆ, ಕವಿಸಮಯ ಮತ್ತು ಪುರಾಣಕಥೆಗಳ ಪರಿಚಿತವಾದ ಜಾಡು ಹಾಗೂ ಕೃತಕವೆನಿಸುವ ಮಟ್ಟದ ಔಪಚಾರಿಕತೆಗಳು ಸಂಸ್ಕೃತಕವಿಗಳನ್ನು ಮತ್ತೆ ಮತ್ತೆ ಕಾಡುವ ಕಟ್ಟಲೆಗಳು. ಇವುಗಳಲ್ಲಿ ಗುಣಾಂಶವಿಲ್ಲದೆ ಇಲ್ಲ. ಆದರೆ ಪ್ರತಿಭಾದರಿದ್ರರಿಗೆ ಇವಿಷ್ಟೇ ಮಹಾಕವಿತ್ವಕ್ಕೆ ಬೇಕಾದ ಸೋಪಾನಗಳೆಂಬ ಭ್ರಮೆಯನ್ನು ತುಂಬುವುದಂತೂ ದಿಟ. ಇಂಥ ಅನಾಹುತವನ್ನು ಕುರಿತು ಕವಿ ಎಚ್ಚರಿಸುತ್ತಿದ್ದಾನೆ. ನಮ್ಮ ಆಲಂಕಾರಿಕರು ಈ ಅಂಶವನ್ನು ಕುರಿತು ಆಗೀಗ ಬಿಡಿಬಿಡಿಯಾಗಿ ಪ್ರಸ್ತಾವಿಸುವರಾದರೂ ಸಮಗ್ರವಾದ ಚಿಕಿತ್ಸಕಶೋಧನವನ್ನು ಈ ನಿಟ್ಟಿನಲ್ಲಿ ಕೈಗೊಂಡಿಲ್ಲ.
ಕವಿಗೆ ತನ್ನ ಕಲೆಯ ಹಿರಿಮೆ ಎಷ್ಟೆಂಬುದು ಗೊತ್ತು. ಅದು ಆತನಿಗೆ ಹೆಮ್ಮೆಯ ವಿಷಯವೂ ಆಗಿದೆ:
ಸ್ತೋತುಂ ಪ್ರವೃತ್ತಾ ಶ್ರುತಿರೀಶ್ವರಂ ಹಿ
ನ ಶಾಬ್ದಿಕಂ ಪ್ರಾಹ ನ ತಾರ್ಕಿಕಂ ವಾ |
ಬ್ರೂತೇ ತು ತಾವತ್ಕವಿರಿತ್ಯಭೀಕ್ಷ್ಣಂ
ಕಾಷ್ಠಾ ಪರಾ ಸಾ ಕವಿತಾ ತತೋ ನಃ || (೧.೧೬)
ಪರಮಾತ್ಮನನ್ನು ಸ್ತುತಿಸುವಾಗ ವೇದವು ಆತನನ್ನು ತಾರ್ಕಿಕನೆಂದೋ ವೈಯಾಕರಣನೆಂದೋ ಹೇಳದೆ ಮತ್ತೆ ಮತ್ತೆ ಕವಿಯೆಂದು ಕೊಂಡಾಡಿದೆ. ಇದು ನಮ್ಮ ಕಾವ್ಯಕಲೆಯ ಹಿರಿಮೆಯೇ ಸರಿ.
ವೇದಗಳಲ್ಲಿ ಪರಮಾತ್ಮನನ್ನು “ಕವಿ”ಯೆಂದು ಕೊಂಡಾಡಿರುವುದು ಸುವಿಖ್ಯಾತ.[3] ಈ ಅಂಶವನ್ನು ಆಲಂಕಾರಿಕರು ಹೆಚ್ಚಾಗಿ ಅವಧರಿಸಿಲ್ಲ. ಇದು ನೀಲಕಂಠದೀಕ್ಷಿತನಿಗೆ ವಿಶೇಷವಾಗಿ ತೋರಿದೆ. ಮಾತ್ರವಲ್ಲ, ರೂಪಪ್ರಪಂಚದ ನ್ಯಾಯ-ವೈಶೇಷಿಕಗಳಿಗೂ ನಾಮಪ್ರಪಂಚದ ವ್ಯಾಕರಣಕ್ಕೂ ಸೀಮಿತವಾಗದೆ ಚಿತ್ತವೃತ್ತಿಗಳ ಪ್ರಪಂಚಕ್ಕೆ ವಿಸ್ತರಿಸಿಕೊಳ್ಳುವ ಕಾವ್ಯ ಈ ಕಾರಣದಿಂದಲೇ ಆಧ್ಯಾತ್ಮಿಕವೆಂಬ ಅರಿವು ಆತನಿಗಿದೆ. ಏಕೆಂದರೆ ಪ್ರತ್ಯಕ್ಷ-ಅನುಮಾನಗಳಲ್ಲಿಯೇ ವಿಸ್ತರಿಸಿಕೊಳ್ಳುವ ತರ್ಕ ಹಾಗೂ ಅಭಿಧೆ-ಲಕ್ಷಣೆಗಳಲ್ಲಿಯೇ ಹೆಚ್ಚಿನ ಸಾರ್ಥಕ್ಯವನ್ನು ಕಾಣುವ ವ್ಯಾಕರಣ ಕಾವ್ಯವಿದ್ಯೆಗೆ ಎಷ್ಟೇ ಪೂರಕವಾದರೂ ರಸದಲ್ಲಿ ಪರ್ಯವಸಿಸುವ ಧ್ವನಿಗಾಗಲಿ, ಆನಂದವನ್ನು ತುಂಬಿ ಕೊಡುವ ರಸಕ್ಕಾಗಲಿ ಮಿಗಿಲಾದ ಪುಷ್ಟಿಯನ್ನು ಕೊಡಲಾರವು. ಅದಕ್ಕೆ ವೇದಾಂತವೊಂದೇ ಶರಣ್ಯ. ಇಲ್ಲಿಯೇ ನೀಲಕಂಠದೀಕ್ಷಿತನು ಮಿಕ್ಕ ಕಲೆಗಳಿಗಿಂತಲೂ ಕಾವ್ಯವು ಮಿಗಿಲೆಂದು ಭಾವಿಸುವುದು ಸ್ಮರಣೀಯ (೧.೧೪).
[1] ಧ್ವನ್ಯಾಲೋಕ, ೩.೩೪,೩೬,೩೭
[2] ತ ಏವ ಪದಸಂಘಾತಾಸ್ತಾ ಏವಾರ್ಥವಿಭೂತಯಃ | ತಥಾಪಿ ನವ್ಯಂ ಭವತಿ ಕಾವ್ಯಂ ಗ್ರಥನಕೌಶಲಾತ್ || (ರಸಾರ್ಣವಸುಧಾಕರ, ೧.೨೪೨).
ಬಲುಮಟ್ಟಿಗೆ ಇದೇ ನುಡಿಗಟ್ಟನ್ನು ಹೊಂದಿರುವ ಶ್ಲೋಕವೊಂದು ಹೀಗಿದೆ: ತ ಏವಾಕ್ಷರವಿನ್ಯಾಸಾಸ್ತಾ ಏವ ಪದಪಂಕ್ತಯಃ | ಪುಂಸಿ ಪುಂಸಿ ವಿಶೇಷೇಣ ಕಾಪಿ ಕಾಪಿ ಸರಸ್ವತೀ || (ಸುಭಾಷಿತಸುಧಾನಿಧಿ, ೨.೫೨.೬). ಇಲ್ಲಿ ಪ್ರತಿಯೊಬ್ಬ ಕವಿಗೂ ತನ್ನದಾದ ಶೈಲಿಯಿರುವುದೆಂಬ ಧ್ವನಿ ಬಂದಿದೆ. ಇದು ನಿಜಕ್ಕೂ ವಿಶೇಷವಾದ ಅಭಿಪ್ರಾಯ. ಏಕೆಂದರೆ ಸಾಮಾನ್ಯವಾಗಿ ನಮ್ಮ ಆಲಂಕಾರಿಕರು ಕವಿಯ ವೈಯಕ್ತಿಕಶೈಲಿಯನ್ನು ಕುರಿತು ಏನನ್ನೂ ಹೇಳುವುದಿಲ್ಲ; ಸಂಸ್ಕೃತಕಾವ್ಯಪರಂಪರೆ ಕೂಡ ಇದನ್ನು ಹೆಚ್ಚಾಗಿ ಅವಧರಿಸುವುದಿಲ್ಲ. ಇಂಥ ಆಲೋಚನೆಗಳೆಲ್ಲ ಪ್ರಾಯಿಕವಾಗಿ ಆಧುನಿಕಸಂವೇದನೆಯ ಫಲವೆನ್ನುತ್ತಾರೆ. ಹೀಗಾಗಿ ಇಲ್ಲಿ ಇಂಥ ಹೊಸ ಹೊಳಹು ಬಂದಿರುವುದು ವಿಸ್ಮಯಾವಹ.
[3] ಕವಿತಮಃ ಸ ವೇಧಾಃ || (ಋಗ್ವೇದ, ೩.೧೪.೧), ಕವಿತಮಃ ಸ ಪಾವಕಃ || (ಋಗ್ವೇದ, ೭.೯.೧), ಕವಿರಮಿತೌಜಾಃ || (ಋಗ್ವೇದ, ೧.೧೧.೪), ಸೂರ್ಯಃ ಕವಿಃ || (ಋಗ್ವೇದ, ೫.೪೪.೭), ಕವಿರ್ಮನೀಷೀ ಪರಿಭೂಃ ಸ್ವಯಂಭೂಃ || (ಈಶಾವಾಸ್ಯೋಪನಿಷತ್, ೮) ಇತ್ಯಾದಿ.
To be continued.