ಲಕ್ಷ್ಮಣನು ಪರ್ಣಶಾಲೆಯನ್ನು ಪಂಚವಟಿಯಲ್ಲಿ ಕಟ್ಟುವಾಗ ರಾಮನಿಗೆ ಹೀಗೆ ಹೇಳುತ್ತಾನೆ: “ಅಣ್ಣ, ನಾನು ನಿನ್ನ ಅಧೀನ. ನೀನು ಹೇಳಿದೆಡೆ ಪರ್ಣಕುಟಿಯನ್ನು ರೂಪಿಸುವೆ”. ಈ ಸಂದರ್ಭದಲ್ಲಿ ಇಂಥ ಹೃದಯಂಗಮವಾದ ಪರಾಧೀನತೆಯನ್ನು ನಿರ್ದೇಶಿಸಲು ಪರವಾನಸ್ಮಿ (೧೫.೭) ಎಂಬ ಪದಪುಂಜವನ್ನು ಬಳಸಿದ್ದಾರೆ. ಮುಂದ್ದೆ ಸಂಸ್ಕೃತಸಾಹಿತ್ಯದಲ್ಲಿದು ಅನೇಕ ಮಹಾಕವಿಗಳಿಗೆ ಉಪಾದೇಯವಾದ ಪದವಾಯಿತು.
ಹೇಮಂತವರ್ಣನೆಯ ಸಂದರ್ಭದಲ್ಲಿ ಆದಿಕವಿಗಳು ವಾಗ್ವೈಚಿತ್ರ್ಯದ ವಿಶ್ವರೂಪವನ್ನೇ ಮೆರೆದಿದ್ದಾರೆ. ಇರುಳು ಕಳೆದು ಮುಂಜಾನೆಯಾದುದನ್ನು ನಿರೂಪಿಸುತ್ತ ಪ್ರಭಾತಾಯಾಂ ಶರ್ವರ್ಯಾಮ್ (೧೬.೨) ಎಂಬ ನುಡಿಗಟ್ಟನ್ನು ವಾಲ್ಮೀಕಿಗಳು ಬಳಸಿರುವುದಂತೂ ಹೃದಯಹಾರಿ. ಇಲ್ಲೊಂದೆಡೆ “ಚಳಿಯ ಕಾರಣದಿಂದ ಜನರ ಚರ್ಮ ಒಡೆದು ಒರಟಾಗಿದೆ” ಎನ್ನುತ್ತಾರೆ: ನೀಹಾರಪರುಷೋ ಲೋಕಃ (೧೬.೫). ಇದನ್ನು ಇಷ್ಟು ಅಡಕವಾಗಿ ನುಡಿಗಟ್ಟೆಂಬಂತೆ ಹೇಳಿರುವುದೇ ಇಲ್ಲಿಯ ಸ್ವಾರಸ್ಯ. ಅಲ್ಲಿಯೇ “ಬೆಂಕಿ ಈಗ ಹಿತಕರವಾಗಿದೆ”: ಸುಭಗೋ ಹವ್ಯವಾಹನಃ (೧೬.೫) ಎನ್ನುತ್ತಾರೆ. ವಸ್ತುತಃ “ಸುಭಗ” ಎಂದರೆ ಸುಂದರ ಎಂದು ಸಾಮಾನ್ಯಾರ್ಥ. ಆದರೆ ಇಲ್ಲದು ಹೃದ್ಯವೆಂಬ ಅರ್ಥದಲ್ಲಿ ಬಳಕೆಯಾಗಿರುವುದು ಒಂದು ಸ್ವಾರಸ್ಯ. ಇಲ್ಲಿಯೇ ದಿವಸಾಃ ಸುಭಗಾದಿತ್ಯಾಃ (೧೬.೧೦) “ಹಿತಕರವಾದ ಸೂರ್ಯನಿಂದ ದಿನಗಳು ಕೂಡಿವೆ” ಎಂಬ ಪ್ರಯೋಗವಿರುವುದೂ ಗಮನಾರ್ಹ. ಜೊತೆಗೆ “ಸುಭಗ”ಶಬ್ದಕ್ಕೆ ವಿರುದ್ಧವಾದ “ದುರ್ಭಗ”ವೆಂಬ ಶಬ್ದವು ಅಹೃದ್ಯವೆಂಬ ಅರ್ಥದಲ್ಲಿ ಬಳಕೆಯಾಗಿರುವುದು ಪರಿಶೀಲನೀಯ: ಛಾಯಾಸಲಿಲದುರ್ಭಗಾಃ (೧೬.೧೦) “ಹೇಮಂತದಲ್ಲಿ ನೆರಳು ಮತ್ತು ನೀರು ಮಾತ್ರ ಬೇಡವೆನಿಸುತ್ತವೆ”. ಇದು ಕೇವಲ ಸಮಾಸವೃತ್ತಿಯಿಂದ ಅರಿವಾಗುವಂಥದ್ದಲ್ಲ; ಸಂದರ್ಭದಿಂದಲೇ ತಾತ್ಪರ್ಯರೂಪದಿಂದ ತಿಳಿಯಬೇಕಾದುದು.
ಹೇಮಂತದ ದಿವಸಗಳು ಮೃದುವಾದ ಸೂರ್ಯನಿಂದ, ಇಬ್ಬನಿಯಿಂದ, ಹೆಚ್ಚಿನ ಚಳಿಯಿಂದ, ಕುಳಿರ್ಗಾಳಿಯಿಂದ, ಬೋಳಾದ ಮರಗಳಿಂದ ಹಾಗೂ ಹಿಮಪಾತದಿಂದ ಕೂಡಿವೆಯೆಂದು ಉಲ್ಲೇಖವುಂಟು: ಮೃದುಸೂರ್ಯಾಃ ಸನೀಹಾರಾಃ ಪಟುಶೀತಾಃ ಸಮಾರುತಾಃ ಶೂನ್ಯಾರಣ್ಯಾ ಹಿಮಧ್ವಸ್ತಾ ದಿವಸಾ ಭಾಂತಿ ಸಾಂಪ್ರತಮ್ (೧೬.೧೧). ಇಲ್ಲಿ ವಿಶೇಷತಃ “ಮೃದುಸೂರ್ಯ” ಮತ್ತು “ಪಟುಶೀತ” ಎಂಬ ಪದಗಳಲ್ಲಿ ತೋರುವ ಉಪಚಾರವಕ್ರತೆ ಹೃದಯಂಗಮ. ಹೀಗೆಯೇ “ಚಳಿಗಾಲದಲ್ಲಿ ಜನರು ಬಯಲಿನಲ್ಲಿ ಮಲಗುವುದಿಲ್ಲ” ಎಂಬ ಉಕ್ತಿಯೂ ಸೊಗಸಾಗಿದೆ: ನಿವೃತ್ತಾಕಾಶಶಯನಾಃ (೧೬.೧೨). “ಆಕಾಶಶಯನ” ಎಂಬಲ್ಲಿಯ ಮುಕ್ತಾವಕಾಶದಲ್ಲಿ ಮಲಗುವುದೆಂಬ ಇಂಗಿತ ತುಂಬ ಮಾರ್ಮಿಕ.
ಮುಂದೆ ಸೀತೆಯನ್ನೂ ಬೆಳದಿಂಗಳನ್ನೂ ವರ್ಣಿಸುವಾಗ ಬೆಳದಿಂಗಳು ಹಿಮದಿಂದ ಕೊಳೆಯಾಗಿದೆಯೆಂದೂ ಸೀತೆಯು ಮಾಗಿಯ ಬಿಸಿಲಿನಲ್ಲಿ ಕಪ್ಪಾಗಿರುವಳೆಂದೂ ಹೇಳುವ ಬಗೆ ಸೊಗಸಾಗಿದೆ: ತುಷಾರಮಲಿನಾ, ಆತಪಶ್ಯಾಮಾ (೧೬.೧೪). ಚಳಿಗಾಲದ ಸೂರ್ಯನು ಬಲವಿಲ್ಲದವನೆಂಬುದನ್ನು ಅಗ್ರಾಹ್ಯವೀರ್ಯಃ (೧೬.೧೯) ಎಂಬ ಪದದಿಂದ ಸೂಚಿಸಿರುವುದಂತೂ ಅಮೋಘವಾಗಿದೆ.
ಚಳಿಗಾಲದಲ್ಲಿ ನದಿಗಳ ಮೇಲೆ ಹಿಮ ಹಾಸಿರುತ್ತದೆ; ಹೀಗಾಗಿ ಅಲ್ಲಿರುವ ಜಲಪಕ್ಷಿಗಳನ್ನು ಅವುಗಳ ಕಲರವದಿಂದಲೇ ಊಹಿಸಬೇಕು: ರುತವಿಜ್ಞೇಯಸಾರಸಾಃ (೧೬.೨೪). ಇದರ ಸ್ವಾರಸ್ಯವಿರುವುದು ಆದಿಕವಿಗಳ ಕಲ್ಪನಾಸ್ವಾರಸ್ಯದಲ್ಲಿ ಅಷ್ಟೇ ಅಲ್ಲದೆ ಪದಗುಂಫನಚಾತುರ್ಯದಲ್ಲಿಯೂ ಹೌದು.
ಶೂರ್ಪಣಖೆಯ ಕಿವಿ-ಮೂಗುಗಳ ಛೇದನವನ್ನು ನಿರೂಪಿಸುವಾಗ ಕರ್ಣನಾಸಂ (೧೮.೨೧) ಎಂಬ ವಿಶಿಷ್ಟಸಮಾಸವು ನುಡಿಗಟ್ಟೆಂಬಂತೆ ಬಳಕೆಯಾಗಿದೆ. ಆಕೆ ಘೋರವಾಗಿ ಅರಚಿದ ಬಗೆಯನ್ನು ಬಣ್ಣಿಸುವಾಗ ನನಾದ ವಿವಿಧಾನ್ ನಾದಾನ್ (೧೮.೨೩) ಎಂಬ ಮಾತು ಬಂದಿದೆ. “ರವಾನ್” ಎಂಬ ಶಬ್ದವಿದ್ದಲ್ಲಿ ಒರಟಾದ ಕೂಗಿಗೆ ಹೆಚ್ಚಿನ ಸಂವಾದವಿರುತ್ತಿತ್ತು. ಆದರೆ ಇಲ್ಲಿ ಶ್ರುತಿಬದ್ಧತೆಯ ಸೂಚನೆಯುಳ್ಳ “ನಾದ”ಶಬ್ದವನ್ನು ಬಳಸುವ ಮೂಲಕ ಆದಿಕವಿಗಳು ವ್ಯಂಗ್ಯವಾಗಿ ಪರಿಹಾಸ ಮಾಡಿದ್ದಾರೆ. ಇದು ಆಡುನುಡಿಯ ವೈಶಿಷ್ಟ್ಯವೇ ಹೌದು.
ಶೂರ್ಪಣಖೆಯು ಖರ-ದೂಷಣರಿಗೆ ರಾಮ-ಲಕ್ಷ್ಮಣರ ವಿವರಗಳನ್ನೀಯುವಾಗ ಪಾರ್ಥಿವವ್ಯಂಜನಾನ್ವಿತೌ (೧೯.೧೬), “ಕ್ಷತ್ತ್ರಿಯರ ಲಕ್ಷಣವುಳ್ಳವರು” ಎನ್ನುತ್ತಾಳೆ. ಈ ಬಗೆಯ ಪ್ರಯೋಗಗಳು ಆಡುನುಡಿಯ ಕ್ರಮವನ್ನಷ್ಟೇ ಅಲ್ಲದೆ ಶಾಸ್ತ್ರಪರಿಷ್ಕಾರವನ್ನೂ ತೋರುತ್ತವೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಗೂಢಚಾರರ ಪ್ರಕಾರಗಳನ್ನು ಹೇಳುವಾಗ “ತಾಪಸವ್ಯಂಜನ” ಎಂಬ ಪರಿಭಾಷೆ ಬರುತ್ತದೆ. ಇದರ ಅರ್ಥ, “ತಾಪಸವೇಷಧಾರಿ” ಎಂದು. ಹೀಗೆಯೇ “ವರ್ಣಿಲಿಂಗೀ”, “ಪಾರ್ಥಿವಲಿಂಗೀ” ಇತ್ಯಾದಿ ಪ್ರಯೋಗಗಳನ್ನು ಭಾರವಿ-ಕಾಳಿದಾಸಾದಿಗಳಲ್ಲಿ ಕಾಣಬಹುದು.
ಖರ-ದೂಷಣರೊಡನೆ ಹೋರಾಡುವಾಗ ರಾಮನು ಲಕ್ಷ್ಮಣನಿಗೆ ಸೀತೆಯ ರಕ್ಷಣಭಾರವನ್ನು ಹೊರಿಸುವುದಲ್ಲದೆ “ನನ್ನ ಪಾದಗಳ ಆಣೆ, ನೀನು ಯುದ್ಧೋದ್ಯಮದಿಂದ ಕೂಡಲೆ ವಿರಮಿಸು” ಎನ್ನುತ್ತಾನೆ: ಶಾಪಿತೋ ಮಮ ಪಾದಾಭ್ಯಾಂ ಗಮ್ಯತಾಂ ವತ್ಸ ಮಾಚಿರಮ್ (೨೪.೧೩). ಇಲ್ಲಿಯ ಆಣೆಯ ಮಾತು ನಿಜಕ್ಕೂ ಒಳ್ಳೆಯ ವಾಗ್ರೂಢಿ. ಅಂತೆಯೇ “ಮಾ ಚಿರಮ್” (ಕೂಡಲೆ, ತಡ ಮಾಡದೆ) ಎಂಬ ನುಡಿಗಟ್ಟೂ ಗಮನಾರ್ಹ.
ರಾವಣನು ಸೀತಾಪಹರಣಕ್ಕಾಗಿ ತಾನೊಬ್ಬನೇ ಹೊರಡುತ್ತಾನೆ. ಆಗ ಅವನು ಅಕಂಪನನಿಗೆ ಹೇಳುವ ಮಾತು ಹೀಗಿದೆ: ಬಾಢಂ ಕಲ್ಯಂ ಗಮಿಷ್ಯಾಮಿ (೩೧.೩೩), “ಒಳ್ಳೆಯದು, ನಾಳೆ ಬೆಳಗ್ಗೆ ಹೊರಡುತ್ತೇನೆ”. ಇದು ಅಪ್ಪಟ ಲೋಕರೂಢಿಯ ನುಡಿ. ಇಂಥವೆಲ್ಲ ಸಂಸ್ಕೃತದ ವ್ಯಹಾರ್ಯತೆಯನ್ನು ಲಕ್ಷಿಸುತ್ತವೆ.
ಶೂರ್ಪಣಖೆಯ ಅಹವಾಲನ್ನು ಕೇಳುತ್ತ ರಾವಣನು ಮುನಿದು “ರಾಮನೆಂದರೆ ಯಾರು? ಅವನ ಶಕ್ತಿ ಏನು? ಅವನು ನೋಡಲು ಹೇಗಿದ್ದಾನೆ? ಅವನ ಪರಾಕ್ರಮ ಎಂಥದ್ದು?” ಎಂದೆಲ್ಲ ಪ್ರಶ್ನಿಸುತ್ತಾನೆ: ಕಶ್ಚ ರಾಮಃ ಕಥಂವೀರ್ಯಃ ಕಿಂರೂಪಃ ಕಿಂಪರಾಕ್ರಮಃ (೩೪.೨). ಇಲ್ಲಿಯ ಕಡೆಯ ಮೂರು ಪ್ರಶ್ನೆಗಳೂ ಸಂಸ್ಕೃತಭಾಷೆಯಲ್ಲಿ ಸೊಗಸಾದ ವಾಗ್ರೂಢಿಗಳೆನಿಸಿವೆ.
ರಾವಣನು ಪುಷ್ಪಕವಿಮಾನದಲ್ಲಿ ಬರುತ್ತ “ಆನೆ-ಕುದುರೆ-ರಥಗಳಿಂದ ಕಿಕ್ಕಿರಿದ ಊರುಗಳನ್ನು ನೋಡಿದನು” ಎನ್ನುವಾಗ ಹಸ್ತ್ಯಶ್ವರಥಗಾಢಾನಿ ನಗರಾಣಿ (೩೫.೩೬) ಎಂಬ ಒಕ್ಕಣೆಯಿದೆ. ಇಲ್ಲಿ “ಕಿಕ್ಕಿರಿದ” ಎಂಬ ಅರ್ಥವನ್ನೀಯುವ “ಗಾಢ”ಶಬ್ದದ ಬಳಕೆ ತುಂಬ ರಸಮಯ.
ರಾಮನ ಹೆಸರನ್ನು ಕೇಳಿದೊಡನೆಯೇ ಮಾರೀಚನ ಬಾಯಿ ಒಣಗಿ ಅವನು ತನ್ನ ತುಟಿಗಳನ್ನು ನಾಲಗೆಯಿಂದ ಸವರಿಕೊಂಡನಂತೆ: ಓಷ್ಠೌ ಪರಿಲಿಹಞ್ ಶುಷ್ಕೌ (೩೬.೨೩). ಇದು ಅಪ್ಪಟವಾಗಿ ಲೋಕಾವೇಕ್ಷಣದ ಫಲ, ಮತ್ತು ಕಂಡದ್ದನ್ನು ಕಂಡಂತೆಯೇ ಹೇಳುವ ಬಗೆ.
ಮಾರೀಚನು ರಾವಣನಿಗೆ ಅಪ್ರಿಯವಾದ ಹಿತವನ್ನು ಹೇಳುವಾಗ್ “ನೀನು ಯುದ್ಧದಲ್ಲಿ ಎಂದಾದರೂ ರಾಮನ ಕಣ್ಣಿಗೆ ಬಿದ್ದರೆ ಅಲ್ಲಿಗೆ ನಿನ್ನ ಕಥೆ ಮುಗಿಯಿತೆಂದು ತಿಳಿ” ಎಂದು ಎಚ್ಚರಿಸುತ್ತಾನೆ: ದೃಷ್ಟಶ್ಚೇತ್ತ್ವಂ ರಣೇ ತೇನ ತದಂತಂ ತವ ಜೀವಿತಮ್ (೩೭.೨೧). ಇದಂತೂ ನಾವೆಲ್ಲ ಇಂದಿಗೂ ಬಳಸುವ ಮಾತುಗಳ ಮೂಲವೇ ಆಗಿದೆ. ಮುಂದೆ, ತಾನು ರಾಮನ ಎಳೆವೆಯಲ್ಲಿಯೇ ಅವನ ಪರಾಕ್ರಮವನ್ನು ಕಂಡವನೆಂದು ಹೇಳುವಾಗ ಪೌಗಂಡವಯಸ್ಸಿನ ರಾಮನನ್ನು ಅಜಾತವ್ಯಂಜನಃ (೩೮.೧೪) ಎಂದು ವರ್ಣಿಸುತ್ತಾನೆ. ಈ ಮಾತಿಗೆ “ಯೌವನದ ಕುರುಹಗಳು ಮೂಡದವನು” ಎಂದರ್ಥ. ಇದೊಂದು ನುಡಿಗಟ್ಟು.
ಖರನು ಅಂಕೆಯಿಲ್ಲದೆ ರಾಮನ ಮೇಲೆ ನುಗ್ಗಿ ಸತ್ತನೆಂದು ಮಾರೀಚ ಹೇಳುವಾಗ ಅತಿವೃತ್ತಃ (೩೯.೨೪) ಎಂಬ ಮಾತು ಬಳಕೆಯಾಗಿದೆ. ಇದು ಎಲ್ಲೆ ಮೀರಿ ವರ್ತಿಸುವುದರ ಸಂಕೇತ. ಹಾಗೆಯೇ ಅವನು ರಾಮನ ನಿಃಸ್ಪೃಹತೆಯನ್ನು ವರ್ಣಿಸುತ್ತ ಆತ ಚಿಕ್ಕಮ್ಮನ ದುರಾಶೆಯ ಮಾತಿಗೂ ತಲೆಬಾಗಿ ಒಮ್ಮೆಲೇ ಕಾಡಿಗೆ ಹೊರಟ ಪರಿಯನ್ನು ನೆನೆಯುತ್ತಾನೆ. ಆಗ ವನಮೇಕಪದೇ ಗತಃ (೪೦.೫) ಎಂಬ ಪದಪುಂಜದ ಬಳಕೆಯಾಗಿದೆ. ಇದೊಂದು ಒಳ್ಳೆಯ ನುಡಿಗಟ್ಟು. ಇದನ್ನೆಲ್ಲ ಕೇಳಿದ ರಾವಣ ಮಾರೀಚನನ್ನು ಮಾಯಾಮೃಗವಾಗಲು ಒಡಂಬಡಿಸುವಾಗ ಬೆದರಿಕೆಯನ್ನೂ ಒಡ್ಡುತ್ತಾನೆ: “ನೀನು ನನ್ನ ಮಾತಿಗೆ ಎದುರಾದರೆ ನಿನ್ನ ಬದುಕೇ ಅತಂತ್ರವಾಗುತ್ತದೆ!” ಆಗ ಜೀವಿತಸಂಶಯಃ (೪೦.೨೭) ಎಂಬ ಪದ ಪ್ರಯುಕ್ತವಾಗಿದೆ. ಇದೊಂದು ಚೆಲುವಾದ ವಾಗ್ರೂಢಿ.
ತನ್ನ ಒಡಂಬಡಿಕೆಯನ್ನು ಒಪ್ಪಿದ ಮಾರೀಚನಿಗೆ ರಾವಣ ಹೀಗೆ ಅಭಿನಂದನೆ ಸಲ್ಲಿಸುತ್ತಾನೆ: ಏತಚ್ಛೌಂಡೀರ್ಯಯುಕ್ತಂ ತೇ ಮಚ್ಛಂದಾದಿವ ಭಾಷಿತಮ್ | ಇದಾನೀಮಸಿ ಮಾರೀಚಃ ಪೂರ್ವಮನ್ಯೋ ನಿಶಾಚರಃ (೪೨.೬). ಇದನ್ನು ವಿದ್ವಾನ್ ರಂಗನಾಥಶರ್ಮರು ಪರಿಣಾಮಕಾರಿಯಾಗಿ ಹೀಗೆ ಭಾಷಾಂತರಿಸಿದ್ದಾರೆ: “ಭಲಾ! ಇದೀಗ ಗಂಡಸುತನದ ಮಾತು! ನನ್ನ ಅಭಿಪ್ರಾಯಕ್ಕೆ ತಕ್ಕಂತಹ ಮಾತು! ಈಗ ನೀನು ನಿಜವಾದ ಮಾರೀಚನಾದೆ! ಇಷ್ಟು ಹೊತ್ತು ಬೇರೊಬ್ಬ ರಾಕ್ಷಸನಾಗಿದ್ದೆ!” ಮಾತಿಗೆ ಈ ಮಟ್ಟದ ನೈಜತೆಯ ಕಸುವನ್ನು ತಂದುಕೊಡುವುದು ಯಾವ ಅಭಿಜಾತಕವಿಗೂ ಕಷ್ಟ.
ಮಾರೀಚನು ರಾಮನನ್ನು ತುಂಬ ದೂರಕ್ಕೆ ಕೊಂಡೊಯ್ದ ಬಳಿಕ, ಇದೇ ಸರಿಯಾದ ಸಮಯವೆಂದು ರಾಮನ ಬಾಣಕ್ಕೆ ತುತ್ತಾಗಿ ಆಕ್ರಂದಿಸುತ್ತಾನೆ. ಆಗ ಪ್ರಾಪ್ತಕಾಲಮ್ (೪೪.೧೯) ಎಂಬ ನುಡಿಗಟ್ಟಿನ ಬಳಕೆಯಾಗಿದೆ. ಮೇಲ್ನೋಟಕ್ಕೆ “ಒದಗಿದ ಕಾಲ” ಎಂಬ ಅರ್ಥವನ್ನು ಹೊಂದಿದ್ದರೂ “ಸರಿಯಾದ ಸಮಯ” ಎಂಬ ತಾತ್ಪರ್ಯವನ್ನುಳ್ಳ ಕಾರಣ ಇದು ಸಂಸ್ಕೃತದ ವಾಗ್ವ್ಯವಹಾರರೀತಿಗೆ ಯುಕ್ತವಾದ ನಿದರ್ಶನ.
ಸೀತೆಯನ್ನು ಅಪಹರಿಸಲು ಮುಂದಾದ ರಾವಣ ಅವಳೆದುರು ತನ್ನ ಪ್ರತಾಪವನ್ನು ಕೊಚ್ಚಿಕೊಳ್ಳುವಾಗ, ರಾಮನು ತನ್ನೊಂದು ಬೆರಳಿಗೂ ಸಮನಲ್ಲವೆಂದು ಹೇಳುತ್ತಾನೆ: ಅಂಗುಲ್ಯಾ ನ ಸಮೋ ರಾಮಃ (೪೮.೧೯). ಇದು ನಾವೆಲ್ಲ ನಿತ್ಯಜೀವನದಲ್ಲಿ ಬಳಸುವ ಮಾತುಗಳಿಗೆ ಸಾಕ್ಷಾತ್ ಸಂವಾದಿ.
ಅಪಹೃತಳಾದ ಸೀತೆಯು ನೆರವಿಗಾಗಿ ಚೀತ್ಕರಿಸುತ್ತ ಪಂಚವಟಿಯ ಮರಗಳನ್ನು ಬೀಳ್ಕೊಟ್ಟು ಬೇಡುವಾಗ ಆಮಂತ್ರಯೇ ಜನಸ್ಥಾನೇ ಕರ್ಣಿಕಾರಾನ್ ಸುಪುಷ್ಪಿತಾನ್ (೪೯.೩೦) ಎನ್ನುತ್ತಾಳೆ. ಇಲ್ಲಿ ಪ್ರಯುಕ್ತವಾದ “ಆಮಂತ್ರಯೇ” ಎಂಬ ಶಬ್ದವು ಆಹ್ವಾನ, ಬೇಡಿಕೆ, ಬೀಳ್ಕೊಡುಗೆ ಮುಂತಾದ ಹಲವು ಅರ್ಥಗಳನ್ನು ಹೊಂದಿದ್ದು ಅವೆಲ್ಲ ಪ್ರಕೃತದಲ್ಲಿ ಸಂಗತವಾಗಿರುವುದು ಒಳ್ಳೆಯ ವಾಗ್ರೂಢಿಗೆ ನಿದರ್ಶನ.
ಜಟಾಯುವನ್ನು ಕಂಡು ಕೆರಳಿದ ರಾವಣನ ಇಪ್ಪತ್ತು ಕಣ್ಣುಗಳೂ ಕೆಂಡವಾದುವಂತೆ. ಇದನ್ನು ಆದಿಕವಿಗಳು ರೇಜುರ್ವಿಂಶತಿದೃಷ್ಟಯಃ (೫೧.೧) ಎಂದು ಬಣ್ಣಿಸಿದ್ದಾರೆ. ಸಂಸ್ಕೃತವ್ಯಾಕರಣವು ಪ್ರಸಿದ್ಧಿಯಿಲ್ಲದ ಸಂಖ್ಯಾವಾಚಕವನ್ನು ಸಮಾಸದಲ್ಲಿ ಬೆಸೆಯುವುದಕ್ಕೆ ಸಂಮತಿ ನೀಡದು. ಆದರೆ ಇಲ್ಲಿ ಆ ನಿಯಮದ ಉಲ್ಲಂಘನೆಯಾಗಿದೆ. ಈ ಬಗೆಯ ನಿಯಮೋಲ್ಲಂಘನವೂ ಆಡುನುಡಿಯ ಒಂದು ವಿಶಿಷ್ಟಲಕ್ಷಣ. ಇಂಥ ಅತಿಕ್ರಮಣವು ಶ್ರುತಿಹಿತವಾಗಿ, ಧ್ವನಿಪೂರ್ಣವಾಗಿ ಸಾಗಿದಲ್ಲಿ ಅದರಲ್ಲಿ ತನ್ನಂತೆಯೇ ಸೊಗಸು ಮೂಡುತ್ತದೆ. ಈ ಅಂಶವನ್ನೂ ಸದ್ಯದ ಪ್ರಯೋಗದಲ್ಲಿ ಪರಿಕಿಸಬಹುದು. ಇದೇ ಸಂದರ್ಭದಲ್ಲಿ ಜಟಾಯುವನ್ನು ಪತ್ತ್ರರಥ (೫೧.೪೬) ಎಂದು ಹೆಸರಿಸಲಾಗಿದೆ. ಇದೊಂದು ಸೊಗಸಾದ ಸಾಧಿತರೂಪ. ರೆಕ್ಕೆಗಳನ್ನೇ ವಾಹನವಾಗಿ ಉಳ್ಳದ್ದು—ಅರ್ಥಾತ್ ಪಕ್ಷಿ—ಎಂಬುದು ಇದರ ತಾತ್ಪರ್ಯ. ಇಂಥ ಹತ್ತಾರು ವಿಶಿಷ್ಟಪ್ರಯೋಗಗಳು ವಾಲ್ಮೀಕಿಮನಿಗಳ ಬತ್ತಳಿಕೆಯಲ್ಲಿವೆ.
ರಾವಣನು ಸೀತೆಯ ಮುಡಿ ಹಿಡಿದು ಕದ್ದೊಯ್ದನೆನ್ನುವಾಗ ಕೇಶೇಷು ಜಗ್ರಾಹ (೫೨.೧೦) ಎಂಬ ಪದಪುಂಜ ಬಳಕೆಯಾಗಿದೆ. ಇದೊಂದು ಸಂಸ್ಕೃತದ ವಾಗ್ರೂಢಿ. ಕಾರಕಪ್ರಕರಣದಲ್ಲಿ ಇದರ ಸ್ವಾರಸ್ಯ ಚರ್ಚಿತವಾಗಿದೆ. ದ್ವಿತೀಯಾವಿಭಕ್ತಿಯ ಕರ್ಮಕಾರಕಕ್ಕೆ ಬದಲಾಗಿ ಸಪ್ತಮೀವಿಭಕ್ತಿಯ ಅಧಿಕರಣಕಾರಕವು ಇಂಥ ಸಂದರ್ಭಗಳಲ್ಲಿ ಬರುವುದು ಆಡುನುಡಿಯ ಬೆಡಗಿಗೊಂದು ಲಕ್ಷಣ.
ಅಶೋಕವನದಲ್ಲಿ ಸೀತೆಯನ್ನು ಪ್ರಲೋಭಿಸುವ ರಾವಣ ತನ್ನನ್ನು ಬ್ರಹ್ಮಮಾನಸಪುತ್ರರಾದ ಮಹರ್ಷಿಗಳ ವಂಶದಲ್ಲಿ ಜನಿಸಿದವನೆಂದು ಬಣ್ಣಿಸಿಕೊಳ್ಳುವ ಬಗೆ ಮೆಚ್ಚುವಂತಿದೆ: ಆರ್ಷೋऽಯಂ ದೈವನಿಷ್ಯಂದಃ (೫೫.೩೫). ಇದನ್ನು ಯಥಾವತ್ತಾಗಿ ಅನುವಾದಿಸುವುದು ಕಷ್ಟ. ಇದರ ಸ್ವಾರಸ್ಯವನ್ನು ಸಂಸ್ಕೃತಭಾಷೆಯ ಬಲ್ಲಿದರಷ್ಟೇ ಬಲ್ಲರು. ಇಂಥ ಉಕ್ತಿವೈಚಿತ್ರ್ಯವನ್ನು ಮುಂದೆ ಭವಭೂತಿಯಂಥ ಗಂಭೀರಪ್ರವೃತ್ತಿಯ ಕವಿಗಳು ಅನುಕರಿಸುದುದನ್ನು ನೆನೆಯಬಹುದು. ಇದೇ ಸಂದರ್ಭದಲ್ಲಿ ಸೀತೆ ರಾವಣನೊಡನೆ ಹುಲ್ಲುಕಡ್ಡಿಯನ್ನು ಅಡ್ಡವಿಟ್ಟುಕೊಂಡು ಮಾತನಾಡಿದುದು ಪ್ರಸಿದ್ಧವಾಗಿದೆ: ತೃಣಮ್ ಅಂತರತಃ ಕೃತ್ವಾ ರಾವಣಂ ಪ್ರತ್ಯಭಾಷತ (೫೬.೧). ಇದರ ಧ್ವನಿಪೂರ್ಣತೆ ಅದೆಷ್ಟು ವಿಖ್ಯಾತವೆಂದರೆ ಮುಂದೆ ಎಲ್ಲ ಭಾಷಗಳಲ್ಲಿಯೂ ಈ ಮಾತು ನುಡಿಗಟ್ಟಂತೆ ಬಳಕೆಯಾಯಿತು.
ಸೀತೆಯನ್ನು ಕಳೆದುಕೊಂಡ ರಾಮ ಸಂಕಟದಿಂದ ಹಲುಬುವಾಗ ಸೀತಾವಿಯೋಗದಲ್ಲಿಯೇ ತಾನು ಅಳಿದರೆ ತಾಯಿ ಕೌಸಲ್ಯೆ ನಿಃಸಹಾಯಳಾಗಿ ಕೈಕೇಯಿಯ ಸೇವೆ ಮಾಡುವ ದುರ್ವಿಧಿ ಬರುವುದಿಲ್ಲ ತಾನೆ! ಎಂದು ಲಕ್ಷ್ಮಣನಲ್ಲಿ ಹೇಳಿಕೊಳ್ಳುತ್ತಾನೆ: ಉಪಸ್ಥಾಸ್ಯತಿ ಕೌಸಲ್ಯಾ ಕಚ್ಚಿತ್ ಸೌಮ್ಯ ನ ಕೈಕಯೀಮ್ (೫೮.೮). ಇಲ್ಲಿ “ಉಪಸ್ಥಾನ”ವೆಂಬುದಕ್ಕೆ ಉಪಾಸನೆ, ಸೇವೆ ಎಂಬೆಲ್ಲ ಅರ್ಥಗಳಿವೆ. ಈ ಇಡಿಯ ವಾಕ್ಯದಲ್ಲಿ ಕಾಕುವಿನ ಮೂಲಕ ರಾಮನು ಇಂಥ ದುಃಸ್ಥಿತಿ ತನ್ನ ತಾಯಿಗೆ ಬರುವುದಿಲ್ಲವಷ್ಟೆ ಎಂಬ ಇಂಗಿತದಿಂದ ಪ್ರಶ್ನಿಸಿದಂತೆ “ಕಚ್ಚಿತ್” ಎಂಬ ಶಬ್ದ ಬಳಕೆಗೊಂಡಿದೆ. ಅಲ್ಲದೆ, ಛಂದಸ್ಸಿಗಾಗಿ “ಕೈಕೇಯೀ” ಎಂಬ ಪದ “ಕೈಕಯೀ” ಎಂದಾಗಿರುವುದು ಗಮನಾರ್ಹ. ಇವೆಲ್ಲ ರಾಮಾಯಣದ ನಿಸರ್ಗರಮಣೀಯವಾದ ಭಾಷೆಗೆ ಸಾಕ್ಷಿ.
ಸೀತೆಯು ತನ್ನನ್ನು ಒತ್ತಾಯದಿಂದ ರಾಮಾನ್ವೇಷಣಕ್ಕಾಗಿ ಕಳುಹಿದ ಕ್ರಮವನ್ನು ಲಕ್ಷ್ಮಣನು ರಾಮನಿಗೆ ಹೇಳುತ್ತಾನೆ. ಆಗ ಅತ್ತಿಗೆಗೆ ತಾನೆಷ್ಟು ಧೈರ್ಯ ಹೇಳಿದರೂ ಅವಳು ಒಪ್ಪಲಿಲ್ಲ; ರಾಮನನ್ನು ಸೋಲಿಸುವಂಥ ವೀರನು ಹಿಂದೆ ಹುಟ್ಟಲಿಲ್ಲ, ಮುಂದೆ ಹುಟ್ಟಲಾರ ಎಂದು ಸಮರ್ಥಿಸಿದರೂ ಸುಮ್ಮನಾಗಲಿಲ್ಲವೆಂದು ನಿವೇದಿಸುವಾಗ ಜಾತೋ ವಾ ಜಾಯಮಾನೋ ವಾ ಸಂಯುಗೇ ಯಃ [ರಾಮಂ] ಪರಾಜಯೇತ್ (೫೯.೧೫) ಎಂಬ ವಾಕ್ಯ ಬರುತ್ತದೆ. ಇದು ಅಪ್ಪಟ ಲೋಕರೂಢಿಯ ಮಾತು. ಇದಕ್ಕಿರುವ ಕಸುವು ಅಪಾರ. ಆಗಲೇ ಮತ್ತೂ ಮುಂದುವರಿದು ಸೀತೆ “ನೀನು ಭರತನೊಡನೆ ಒಳಸಂಚು ಮಾಡಿ ರಾಮನನ್ನು ಹಿಂಬಾಲಿಸಿದ್ದೀಯೆ. ಇಲ್ಲವಾದಲ್ಲಿ ಅವನಿಷ್ಟು ಸಂಕಟ ಪಟ್ಟು ಕೂಗುವಾಗಲೂ ಅದು ಹೇಗೆ ತಾನೆ ಅವನ ಬಳಿ ಹೋಗದೆ ಸುಮ್ಮನಿದ್ದೀಯೆ!” ಎಂದು ತನ್ನನ್ನು ದೂಷಿಸಿದ ಸನ್ನಿವೇಶವನ್ನು ಲಕ್ಷ್ಮಣ ಹೇಳಿಕೊಳ್ಳುತ್ತಾನೆ: ಸಂಕೇತಾದ್ ಭರತೇನ ತ್ವಂ ರಾಮಂ ಸಮನುಗಚ್ಛಸಿ | ಕ್ರೋಶಂತಂ ಹಿ ಯಥಾತ್ಯರ್ಥಂ ನೈನಮಭ್ಯವಪದ್ಯಸೇ (೫೯.೧೮). ಈ ವಾಕ್ಯ ಆಡುನುಡಿಯ ಸೊಗಡನ್ನು ಚೆನ್ನಾಗಿ ತುಂಬಿಕೊಂಡಿದೆ. ಈ ಮೂಲಕವೇ ಮಾತಿಗೆ ಎಲ್ಲಿಲ್ಲದ ಮೊನಚು ದಕ್ಕಿದೆ.
ಶಬರಿಯು ಮತಂಗಮಹರ್ಷಿಗಳ ಮಾಹಾತ್ಮ್ಯವನ್ನು ರಾಮನಿಗೆ ತಿಳಿಸುತ್ತ “ನೀನೀಗ ಕೇಳಬೇಕಾದುದನ್ನು ಕೇಳಿದ್ದೀಯೆ” ಎನ್ನುತ್ತಾಳೆ: ಶ್ರೋತವ್ಯಂ ಚ ಶ್ರುತಂ ತ್ವಯಾ (೭೪.೨೮). ಅನಂತರದ ಸಂಸ್ಕೃತಸಾಹಿತ್ಯದಲ್ಲಿ “ಶ್ರುತಂ ಶ್ರೋತವ್ಯಮ್” ಎಂಬುದೊಂದು ಆಕರ್ಷಕವಾದ ನುಡಿಗಟ್ಟಾಗಿ ಚಿರಂಜೀವಿಯೆನಿಸಿದೆ. ಆ ಬಳಿಕ ಪುಣ್ಯಲೋಕಗಳಿಗೆ ತೆರಳಲಿರುವ ಆಕೆಗೆ ರಾಮ ಹೃದ್ಯವಾದ ವಿದಾಯ ಹೇಳುತ್ತಾನೆ: ಗಚ್ಛ ಕಾಮಂ ಯಥಾಸುಖಮ್ (೭೪.೩೦), “ನಿನ್ನಿಚ್ಛೆ ಬಂದಲ್ಲಿಗೆ ಸುಖವಾಗಿ ಸಾಗು”. ಇದೂ ಸಹ ಮುಂದೆ ಸಮೃದ್ಧವಾಗಿ ಬಳಕೆಯಾಗಿದೆ.