ಋಕ್ಷಬಿಲದೊಳಗೆ ಪ್ರವೇಶಿಸಿದ ವಾನರರು ಸ್ವಯಂಪ್ರಭೆಯನ್ನು ಅಲ್ಲಿ ಕಾಣುತ್ತಾರೆ. ಆ ತಪಸ್ವಿನಿಯು ಅವರಿಗೆ ಆತಿಥ್ಯವಿತ್ತು ವಾನರರ ಪೂರ್ವೋತ್ತರವನ್ನು ತಿಳಿಯಬಯಸಿ ಹೀಗೆ ಉಪಕ್ರಮಿಸುತ್ತಾಳೆ: “ನಿಮ್ಮ ವಿಚಾರವನ್ನು ನಾನು ತಿಳಿಯಬಹುದಿದ್ದರೆ ದಯಮಾಡಿ ಹೇಳಿ; ನಾನು ಕೇಳುತ್ತೇನೆ”: ಯದಿ ಚೈತನ್ಮಯಾ ಶ್ರಾವ್ಯಂ ಶ್ರೋತುಮಿಚ್ಛಾಮಿ ಕಥ್ಯತಾಮ್ (೫೨.೨). ಇದು ಹೃದಯಂಗಮವಾದ ಶಿಷ್ಟಾಚಾರವನ್ನು ಧ್ವನಿಸುವ ವಾಕ್ಯ. ಇಂಥ ಮಾತುಗಳು ಸುಸಂಸ್ಕೃತಿಯ ಅಭಿವ್ಯಕ್ತಿಯೇ ಆಗಿ ಪರವರ್ತಿಸಾಹಿತ್ಯದಲ್ಲಿ ಪ್ರಶಸ್ತಿ ಪಡೆದಿವೆ. ಅನಂತರ ಅವಳಿಗೆ ಏನಾದರೂ ಉಪಕಾರವಾಗಬೇಕಿದ್ದಲ್ಲಿ ತಾವೆಲ್ಲ ಸಿದ್ಧರಿರುವುದಾಗಿ ವಾನರರು ಹೇಳುತ್ತಾರೆ. ಆಗ ಅವಳು “ಧರ್ಮದಿಂದ ಬಾಳುತ್ತಿರುವ ನನಗೆ ಯಾರಿಂದಲೂ ಏನೂ ಆಗಬೇಕಾದುದಿಲ್ಲ” ಎನ್ನುತ್ತಾಳೆ: ಚರಂತ್ಯಾ ಮಮ ಧರ್ಮೇಣ ನ ಕಾರ್ಯಮಿಹ ಕೇನಚಿತ್ (೩೨.೭). ಈ ಮಾತುಗಳು ಆತ್ಮತೃಪ್ತರ ಮನೋಧರ್ಮವನ್ನಲ್ಲದೆ ಅದನ್ನು ತಿಳಿಸುವ ನಯವನ್ನೂ ಚೆನ್ನಾಗಿ ಬಿಂಬಿಸಿವೆ.
ಸೀತೆಯನ್ನು ಕಾಣಲಾಗದೆ ನಿರಾಶನಾದ ವಾನರನಾಯಕ ಅಂಗದನಿಗೆ ಎಚ್ಚರ-ಧೈರ್ಯಗಳನ್ನು ತುಂಬುವ ಹನೂಮಂತನ ಮಾತುಗಳಲ್ಲಿ ದುಃಖಶಯ್ಯಾ (೫೪.೧೭) ಎಂಬ ಪದ ಪ್ರಯುಕ್ತವಾಗಿದೆ. ಮುಳ್ಳಿನ ಹಾಸಿಗೆಯೆಂದು ಇದರ ತಾತ್ಪರ್ಯ. ಆದರೆ ಮುಳ್ಳಿನ ಹಾಸಿಗೆಯೆಂಬ ಈ ಅರ್ಥವೂ ಕಷ್ಟದ ಪರಿಸ್ಥಿತಿಯೆಂಬ ಲಕ್ಷ್ಯಾರ್ಥದಲ್ಲಿಯೇ ತಾತ್ಪರ್ಯವನ್ನು ಹೊಂದಿದೆ. ಇವೆಲ್ಲ ಆಡುನುಡಿಯ ಅಂದಗಳು. ಆಗ ಅಂಗದನು ಸುಗ್ರೀವ ತನ್ನನ್ನು ಗುಟ್ಟಾಗಿ ದಂಡಿಸಬಹುದೆಂದು ಅಂಜುತ್ತಾನೆ. ಈ ಸಂದರ್ಭದಲ್ಲಿ ಆದಿಕವಿಗಳು ಉಪಾಂಶುದಂಡಃ (೫೫.೧೦) ಎಂಬ ವಿಶಿಷ್ಟಶಬ್ದವನ್ನು ಪ್ರಯೋಗಿಸಿದ್ದಾರೆ. ಇದೊಂದು ವಾಚೋಯುಕ್ತಿ.
ಮರಣಾಂತ ಉಪವಾಸಕ್ಕೆ (ಪ್ರಾಯೋಪವೇಶ) ಕುಳಿತ ವಾನರರನ್ನು ಕಂಡ ಸಂಪಾತಿಯು “ಒಬ್ಬೊಬ್ಬರನ್ನಾಗಿ ಇವರನ್ನೆಲ್ಲ ಕೊಂದು ತಿನ್ನುವೆ!” ಎಂದು ಹಿಗ್ಗುತ್ತಾನೆ: ಪರಂಪರಾಣಾಂ ಭಕ್ಷಿಕ್ಷ್ಯೇ ವಾನರಾಣಾಂ ಮೃತಂ ಮೃತಮ್ (೫೬.೫). ಇಲ್ಲಿ “ಮೃತಂ ಮೃತಂ” ಎಂಬ ಪದಪುಂಜವು ಅಪ್ಪಟ ನುಡಿಗಟ್ಟು. ಇದಕ್ಕೆ “ತಾವಾಗಿ ಸತ್ತವರು” ಎಂದೂ “ಸಂಪಾತಿಯಿಂದ ಸಾಯಿಸಲ್ಪಟ್ಟವರು” ಎಂದೂ ಅರ್ಥಗಳನ್ನು ವ್ಯಾಖ್ಯಾತೃಗಳು ಮಾಡಿದ್ದಾರೆ.
ಹನೂಮಂತನು ಸಮುದ್ರಲಂಘನಕ್ಕೆ ಸನ್ನದ್ಧನಾದಾಗ ಮಿಕ್ಕ ವಾನರರೆಲ್ಲ “ನೀನು ಮರಳಿ ಬರುವವರೆಗೆ ನಾವೆಲ್ಲ ಒಂಟಿಕಾಲಲ್ಲಿ ನಿಂತು ಕಾಯುವೆವು” ಎನ್ನುತ್ತಾರೆ: ಸ್ಥಾಸ್ಯಾಮಶ್ಚೈಕಪಾದೇನ ಯಾವದಾಗಮನಂ ತವ (೬೭.೩೫). ಇದಂತೂ ಇಂದೂ ನಮ್ಮಲ್ಲಿ ವಾಡಿಕೆಯಲ್ಲಿರುವ ನುಡಿಗಟ್ಟು.
ಸುಂದರಕಾಂಡ
ಮೈನಾಕನನ್ನು ಬೀಳ್ಗೊಟ್ಟು ಹೊರಡುವ ಹನೂಮಂತ “ನಿನ್ನ ಮಾತಿನಿಂದಲೇ ನನಗೆ ಆತಿಥ್ಯವಾಗಿದೆ. ಬೇಸರ ಪಟ್ಟುಕೊಳ್ಳಬೇಡ. ನನ್ನ ಕೆಲಸದ ಕಾಲ ನನ್ನನ್ನು ತ್ವರೆಗೊಳಿಸುತ್ತಿದೆ. ಅಲ್ಲದೆ ಹಗಲೂ ಕಳೆದುಹೋಗುತ್ತಿದೆ” ಎನ್ನುತ್ತಾನೆ: ಪ್ರೀತೋऽಸ್ಮಿ ಕೃತಮಾತಿಥ್ಯಂ ಮನ್ಯುರೇಷೋऽಪನೀಯತಾಮ್ | ತ್ವರತೇ ಕಾರ್ಯಕಾಲೋ ಮೇ ಹ್ಯಹಶ್ಚ ವ್ಯತಿವರ್ತತೇ (೧.೧೩೧). ಈ ಮಾತುಗಳೆಲ್ಲ ಸೊಗಸಾದ ಸಂಭಾಷಣೆಯ ಸಂಸ್ಕೃತಕ್ಕೆ ಸಾಕ್ಷಿ. “ತ್ವರತೇ ಕಾರ್ಯಕಾಲೋ ಮೇ” ಎಂಬ ಮಾತು ಮೂಲತಃ ಅತಿಶಯೋಕ್ತಿಯೇ ಆಗಿದ್ದರೂ ಆಡುನುಡಿಯ ದಟ್ಟವಾದ ಪರಿಮಳದ ಕಾರಣ ಸಹಜವಾದ ನುಡಿಯೆನಿಸಿ ಪರಿಣಾಮವನ್ನು ಹೆಚ್ಚಿಸಿದೆ.
ಹನೂಮಂತನ ವೇಗವನ್ನು ವರ್ಣಿಸುವಾಗ ಮನಃಸಂಪಾತವಿಕ್ರಮಃ (೧.೧೯೩) ಎಂದು ಮನೋವೇಗಕ್ಕೆ ಹೋಲಿಕೆ ನೀಡಲಾಗಿದೆ. ಆದರೆ ಇದು ಲುಪ್ತೋಪಮೆಯಾಗಿ ತೋರದೆ ಹೃದ್ಯವಾದ ವಾಗ್ರೂಢಿಯೆನಿಸಿದೆ. ಇಂಥ ಎಷ್ಟೋ ಪ್ರಸಂಗಗಳಲ್ಲಿ ವಾಲ್ಮೀಕಿಮುನಿಗಳ ಶುದ್ಧಕವಿತ್ವವು ಲೋಕರೂಢಿಯ ಬೆಡಗಿನಲ್ಲಿ ಮತ್ತೂ ಆಕರ್ಷಕವಾಗಿ ತೋರುವುದೊಂದು ಸಾಹಿತ್ಯವೈಚಿತ್ರ್ಯ.
ಸೀತೆ ರಾವಣನನ್ನು ತಿರಸ್ಕರಿಸುತ್ತ “ನಾನು ನಿನ್ನ ಭೋಗಪತ್ನಿಯಲ್ಲ” ಎಂದು ಗದರುತ್ತಾಳೆ: ನಾಹಮೌಪಯಿಕೀ ಭಾರ್ಯಾ (೨೧.೬). ಇಲ್ಲಿ “ಔಪಯಿಕೀ” ಎಂಬ ಶಬ್ದಕ್ಕೆ “ಉಪಯೋಗಾರ್ಹಳಾದ” ಎಂಬ ಅರ್ಥವಿದ್ದರೂ ತಾತ್ಪರ್ಯದಿಂದ “ಭೋಗಾರ್ಹಳಾದ” ಎಂಬ ಅರ್ಥವೇ ಗ್ರಾಹ್ಯ. ಇದು ಮತ್ತೆ ವಾಗ್ರೂಢಿಯತ್ತ ಬೆರಳು ಚಾಚುತ್ತದೆ.
“ಸುತ್ತಲೂ ರಾಕ್ಷಸಿಯರು ಎಡೆಬಿಡಡೆ ಕಾವಲಿರುವ ಕಾರಣ ಸ್ವೇಚ್ಛೆಯಿಂದ ಆತ್ಮಹತ್ಯೆಗೂ ಅವಕಾಶವಾಗುತಿಲ್ಲವಲ್ಲಾ; ಇಂಥ ಮಾನುಷಜನ್ಮಕ್ಕೂ ಪರಾಧೀನತೆಗೂ ಧಿಕ್ಕಾರ!” ಎಂದು ಸೀತೆಯು ಹಲುಬುತ್ತಾಳೆ: ಧಿಗಸ್ತು ಖಲು ಮಾನುಷ್ಯಂ ಧಿಗಸ್ತು ಪರವಶ್ಯತಾಂ ನ ಶಕ್ಯಂ ಯತ್ ಪರಿತ್ಯಕ್ತುಮಾತ್ಮಚ್ಛಂದೇನ ಜೀವಿತಮ್ (೨೫.೨೦). ಇದೊಂದು ಸರಳವಾದ ಸಂಕಟದ ಮಾತಾದರೂ ಇಲ್ಲಿಯ ಸಹಜವಾದ ಕಾವು-ನೋವುಗಳು ಪರಿಣಾಮಕಾರಿ.
ಸೀತೆಗೆ ಉತ್ಸಾಹ-ವಿಶ್ವಾಸಗಳು ಮೂಡುವಂತಾಗಲು ಹನೂಮಂತನು ಹಲವು ಬಗೆಯ ಆಣೆಗಳನ್ನು ಮಾಡುತ್ತಾನೆ. ಆಗ ತಾನು ತಿನ್ನುವ ಹಣ್ಣು-ಗೆಣಸುಗಳ ಮೇಲೆಯೂ ಶಪಥ ಮಾಡುತ್ತಾನೆ: ಶಪೇ ಮೂಲಫಲೇನ ಚ (೩೬.೩೮). ಇದು ಆದಿಕವಿಗಳು ತಮ್ಮ ಪಾತ್ರಗಳ ಅಂತರಂಗವನ್ನು ಹೊಕ್ಕು ನುಡಿಸುವ ಶಕ್ತಿಗೆ ಸಾಕ್ಷಿ. ಇಲ್ಲವಾದಲ್ಲಿ ಮಂಗನ ಬಾಯಿಂದ ಇಂಥ ಆಣೆಮಾತುಗಳನ್ನು ಆಡಿಸಲು ಸಾಧ್ಯವಾಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಸೀತಾವಿರಹದಲ್ಲಿ ನವೆಯುತ್ತಿರುವ ರಾಮ ಊಟ-ಉಪಚಾರಗಳನ್ನು ಲೆಕ್ಕಿಸುತ್ತಿಲ್ಲವೆಂದು ಹೇಳುತ್ತಾನೆ. ಮಾತ್ರವಲ್ಲ, “ನಾಲ್ಕು ಹೊತ್ತು ಉಪವಾಸದ ಬಳಿಕ ಐದನೆ ಹೊತ್ತಿಗೆ ಮಾತ್ರ ಒಂದಿಷ್ಟು ಆಹಾರವನ್ನು ಸ್ವೀಕರಿಸುತ್ತಾನೆ” ಎನ್ನುತ್ತಾನೆ: ಭಕ್ತಮಶ್ನಾತಿ ಪಂಚಮಮ್ (೩೬.೪೧). ಇದು ತುಂಬ ವಿಶಿಷ್ಟವಾದ ಪದಪ್ರಯೋಗ. “ಪಂಚಮ”ಶಬ್ದಕ್ಕೆ ಅನೇಕಾರ್ಥಗಳಿದ್ದರೂ ಸದ್ಯದಲ್ಲಿ “ಐದನೆಯ ಹೊತ್ತು” ಎಂಬ ಉದ್ದಿಷ್ಟಾರ್ಥವು ರೂಢಿಯಿಂದ ಲಭ್ಯ.
ಸಾಮಾನ್ಯವಾನರನ ಪುಟ್ಟ ಆಕಾರದಲ್ಲಿ ಇದ್ದ ಹನೂಮಂತ ಸೀತೆಯನ್ನು ತನ್ನ ಹೆಗಲ ಮೇಲೆ ಹೊತ್ತೊಯ್ಯುವೆನೆಂದಾಗ ಅವಳು “ಇದು ನಿನಗೆ ಹೇಗೆ ಸಾಧ್ಯ? ಹೀಗಾಗಿಯೇ ನಿನ್ನನ್ನು ಕಪಿ ಎನ್ನುವುದು” ಎಂದು ವಿಡಂಬಿಸುತ್ತಾಳೆ: ತದೇವ ಖಲು ತೇ ಮನ್ಯೇ ಕಪಿತ್ವಮ್ (೩೭.೨೯). ಇದು ನಮ್ಮ ಅನುದಿನದ ಮಾತುಗಳಲ್ಲಿ ಬಳಕೆಯಾಗುವ ಬಗೆಯದೇ.
ಸೀತೆಯನ್ನು ಕಂಡ ಬಳಿಕ ತನ್ನ ಕೆಲಸ ಮುಗಿದಂತಾಯಿತಾದರೂ ರಾವಣನನ್ನು ಎಚ್ಚರಿಸುವ ಮತ್ತೊಂದು ಚಿಕ್ಕ ಕೆಲಸವಿದೆಯೆಂದು ಹನೂಮಂತ ಭಾವಿಸುತ್ತಾನೆ. ಇದನ್ನು ಆದ್ಕವಿಗಳು: ಅಲ್ಪಶೇಷಮಿದಂ ಕಾರ್ಯಮ್ (೪೧.೨) ಎಂಬ ಶಬ್ದಗಳಿಂದ ತಿಳಿಸಿದ್ದಾರೆ. ಇದೊಂದು ಸೊಗಸಾದ ನುಡಿಗಟ್ಟು. ಹೀಗೆ ನಿಶ್ಚಯಿಸಿದವನೇ “ರಾಕ್ಷಸರೆಲ್ಲ ಕಣ್ಬಿಟ್ಟು ನೋಡುತ್ತಿರುವಾಗಲೇ ನಾನು ಕೃತಾರ್ಥನಾಗಿ ತೆರಳುವೆನು” ಎಂದು ಸಾರುತ್ತಾನೆ: ಸಮೃದ್ಧಾರ್ಥೋ ಗಮಿಷ್ಯಾಮಿ ಮಿಷತಾಂ ಸರ್ವರಕ್ಷಸಾಮ್ (೪೨.೩೬). ಇದು ಅಪ್ಪಟವಾಗಿ ನಮ್ಮ ನುಡಿಗಳ ಮಾತೇ. ಇದರ ಸ್ವಾರಸ್ಯ ಸ್ವಯಂವೇದ್ಯ.
ಹನೂಮಂತನನ್ನು ರಾಕ್ಷಸರು ಕಟ್ಟಿ ಕೊಂಡೊಯ್ಯುವಾಗ ದ್ರುಮಚೀರಗಳಿಂದ (೪೮.೫೩) ಬಂಧಿಸಿದರೆಂದು ಒಕ್ಕಣೆಯಿದೆ. ನಾರು ಮರಗಳ ಬಟ್ಟೆಯೆಂದು ಆದಿಕವಿಗಳ ಕಾಣ್ಕೆ. ಹೀಗಾಗಿ “ದ್ರುಮಚೀರ”ವೆಂದರೆ ನಾರಲ್ಲದೆ ಮತ್ತೇನು? ಮಹಾಕವಿಗಳು ತಾವು ಒಲಿದಂತೆ ಪದಪ್ರಪಂಚಗಳನ್ನು ಸೃಷ್ಟಿಸಿಕೊಳ್ಳುವರು.
ರಾವಣನನ್ನು ಸಭೆಯಲ್ಲಿ ಕಂಡ ಹನೂಮಂತನು ಆತನ ಶೌರ್ಯ-ಸಾಹಸಗಳನ್ನು ಮೆಚ್ಚಿಕೊಳ್ಳುತ್ತ “ಈತ ಮುನಿದರೆ ಜಗತ್ತನ್ನೇ ಸಮುದ್ರದ ಪಾಲು ಮಾಡಿಯಾನು!” ಎಂದು ಉದ್ಗರಿಸುತ್ತಾನೆ: ಅಯಂ ಹ್ಯುತ್ಸಹತೇ ಕ್ರುದ್ಧಃ ಕರ್ತುಮೇಕಾರ್ಣವಂ ಜಗತ್ (೪೯.೨೦). ಈ ಮಾತು ನಾವು ಇಂದಿಗೂ ಬಳಸುವ ವಾಗ್ರೂಢಿಗಳಲ್ಲಿ ಉಳಿದುಬಂದಿದೆ.
ದೂತನನ್ನು ಕೊಲ್ಲಬಾರದೆಂದು ವಿಭೀಷಣ ಪ್ರತಿಪಾದಿಸುವಾಗ ಪ್ರಮಾಪಣಮ್ (೫೨.೬) ಎಂಬ ಪದ ಬಳಕೆಯಾಗಿದೆ. “ಕೊಲ್ಲಿಸುವಿಕೆ” ಎಂಬುದು ಇದರ ಅರ್ಥ. “ಮಾಪನ” ಎಂಬ ಕೃದಂತಕ್ಕೆ “ಅಳತೆ ಮಾಡುವುದು” ಎಂಬ ಅರ್ಥವಿದ್ದರೂ “ಪ್ರ” ಎಂಬ ಉಪಸರ್ಗ ಸೇರಿ ಇಂಥ ವಿನೂತನಾರ್ಥ ಬಂದಿದೆ. ಇವೆಲ್ಲ ಆಡುನುಡಿಯ ಅಂದಗಳು. ಇದಕ್ಕೆ ಬದಲಾಗಿ ಹನೂಮಂತನ ತಲೆ ಬೋಳಿಸಬಹುದು, ಬರೆ ಹಾಕಬಹುದು ಎಂದೆಲ್ಲ ಪರ್ಯಾಯದಂಡಗಳನ್ನು ಸೂಚಿಸುತ್ತಾನೆ: ಮೌಂಡ್ಯಂ ತಥಾ ಲಕ್ಷಣಸನ್ನಿಪಾತಃ (೫೨.೧೫). ಇಲ್ಲಿ “ಮೌಂಡ್ಯ” ಎಂಬ ತದ್ಧಿತಪ್ರಯೋಗವೂ (ಮುಂಡಕ್ಕೆ, ಅಂದರೆ ತಲೆಗೆ ಸಂಬಂಧಿಸಿದುದು. ಅರ್ಥಾತ್, ಮುಂಡನ) ಬರೆಗೆ “ಲಕ್ಷಣಸನ್ನಿಪಾತ” ಎಂಬ ವಿಶಿಷ್ಟಸಂಕೇತವೂ ಗಮನಾರ್ಹ. ಈ ಮಾತಿಗೆ “ಕಾಸಿದ ಮುದ್ರೆಯನ್ನು ಒತ್ತುವುದು” ಎಂಬ ಅರ್ಥವೂ ಉಂಟು.
ಬಾಲಕ್ಕೆ ಬೆಂಕಿ ಬಿದ್ದಾಗಲೂ ಹನೂಮಂತನಿಗೆ ಬಿಸಿ ತಾಕಲಿಲ್ಲವಂತೆ. ಅದು ಬಾಲದ ಮೇಲೆ ಮಂಜುಗಡ್ಡೆಯನ್ನು ಇಟ್ಟಂತೆ ಇತ್ತೆಂದು ಆದಿಕವಿಗಳ ಒಕ್ಕಣೆ: ಶಿಶಿರಸ್ಯೇವ ಸಂಪಾತೋ ಲಾಂಗೂಲಾಗ್ರೇ ಪ್ರತಿಷ್ಠಿತಃ (೫೩.೩೬). ಇಲ್ಲಿ ತಂಪನ್ನು ಮಂಜುಗಡ್ಡೆಯೆಂದು ಸಮೀಕರಿಸಿರುವುದು ಸ್ವಾರಸ್ಯಕರ. ಇದೇ ಸಂದರ್ಭದಲ್ಲಿ ಬಾಲದ ಬೆಂಕಿಯನ್ನು ಕಂಡ ಹನೂಮಂತ “ಈ ಅಗ್ನಿದೇವನಿಗೆ ಲಂಕೆಯ ಮನೆಗಳನ್ನು ಉಣಿಸಿ ಸಂತರ್ಪಣೆ ಮಾಡಿಸುವುದು ಯುಕ್ತ” ಎಂದು ಭಾವಿಸುತ್ತಾನೆ: ಅಸ್ಯ ಸಂತರ್ಪಣಂ ನ್ಯಾಯ್ಯಮ್ (೫೪.೫). ಇಲ್ಲಿ ಲಂಕೆಗೇ ಬೆಂಕಿಯಿಡಬೇಕೆಂಬ ಭಾವ ಅದೆಷ್ಟು ನವುರಾದ ಪರಿಹಾಸ್ಯವಾಗಿ ಪರಿವರ್ತಿತವಾಗಿದೆಯೆಂಬುದು ಗಮನಾರ್ಹ.
ಲಂಕೆಯನ್ನು ಸುಟ್ಟ ಬಳಿಕ “ಇದರೊಳಗೆ ಸೀತೆಯೂ ಇದ್ದಳಲ್ಲ, ಎಂಥ ಕೆಲಸ ಮಾಡಿಬಿಟ್ಟೆ!“ ಎಂದು ಹನೂಮಂತ ಹಳಹಳಿಸಿಕೊಳ್ಳುತ್ತಾನೆ: ಲಂಕಾಂ ಪ್ರದಹತಾ ಕರ್ಮ ಕಿಂಸ್ವಿತ್ ಕೃತಮಿದಂ ಮಯಾ (೫೫.೩). ಇಲ್ಲಿ “ಕಿಂಸ್ವಿತ್” ಎಂಬ ಅವ್ಯಯವು ಎಲ್ಲಿಲ್ಲದ ನುಡಿಬೆಡಗನ್ನು ತಂದಿದೆ. ಲಂಕೆಯಿಂದ ಮರಳಿಬರುತ್ತಿರುವ ಹನೂಮಂತನನ್ನು ಕಂಡ ವಾನರರು ಹಿಗ್ಗಿದ ಪರಿಯನ್ನು ವರ್ಣಿಸುವಾಗ, ಅವರು ಬಾಲಗಳನ್ನು ನೆಲಕ್ಕೆ ಬಡಿದ ಬಗೆ ಕೂಡ ವಿವೃತವಾಗಿದೆ: ಲಾಂಗೂಲಾನಿ ಪ್ರವಿವ್ಯಧುಃ (೩.೩೯.೨೪). ಇಲ್ಲಿಯೂ ಆದಿಕವಿಗಳ ಪರಿಶೀಲನಶಕ್ತಿ ಅಸಾಧಾರಣವೆನಿಸಿದೆ. ಮುಂದೆ ಹನೂಮಂತನು ತನ್ನ ಕಥೆಯನ್ನೆಲ್ಲ ಹೇಳುವಾಗ, ಸಿಂಹಿಕೆಯನ್ನು ಕೊಂದ ಬಳಿಕ ತುರ್ತಿನ ಕೆಲಸವನ್ನು ನೆನೆದು ವೇಗವಾಗಿ ಸಾಗಿದೆನೆಂದು ಹೇಳುತ್ತಾನೆ: ಕೃತ್ಯಮಾತ್ಯಯಿಕಂ ಸ್ಮರನ್ (೫೮.೪೫). ತುರ್ತಿನ ಕೆಲಸಕ್ಕೆ “ಆತ್ಯಯಿಕಕೃತ್ಯ” ಎಂಬ ಶಬ್ದ ಸೊಗಸಾಗಿದೆ. ಅನಂತರ ಸೀತೆಯ ಸೌಶೀಲ್ಯವನ್ನು ಕಂಡ ಬಳಿಕ ತನ್ನ ಮನಸ್ಸು ನಮ್ರವಾದುದನ್ನು ತಿಳಿಸುತ್ತಾನೆ: ಶೀಲಮಾಸಾದ್ಯ ಸೀತಾಯಾ ಮಮ ಚ ಪ್ರವಣಂ ಮನಃ (೫೯.೨). ಇಲ್ಲಿ “ಆಸಾದ್ಯ” ಎಂಬ ಪದವನ್ನು “ಕಂಡ ಬಳಿಕ” ಎಂಬರ್ಥದಲ್ಲಿ ಬಳಸಿರುವುದು ಹೃದಯಂಗಮವಾದ ವಾಗ್ರೂಢಿ.
ಮಧುವನದಲ್ಲಿ ದಾಂಧಲೆ ಮಾಡುತ್ತಿದ್ದ ಕಪಿಗಳು ಜೇನಿನ ಬಣ್ಣದಲ್ಲಿದ್ದರಂತೆ: ಮಧುಪಿಂಗಲಾಃ (೬೧.೧೧); ಅವರು ತಮ್ಮನ್ನು ದಂಡಿಸಲು ಬಂದ ಕಾವಲಿನವರಿಗೆ ದೇವಮಾರ್ಗವನ್ನು (೬೨.೧೬) ತೋರಿಸುತ್ತಿದ್ದರಂತೆ; ಮಧುವನ್ನೇ ಮೂತ್ರಿಸುತ್ತಿದ್ದರಂತೆ: ಮೇಹಮಾನಾನ್ ಮಧೂದಕಮ್ (೬೪.೪). “ದೇವಮಾರ್ಗ”ವೆಂದರೆ ಗುದ! ಮಲದ್ವಾರಕ್ಕೆ ಮಿಥ್ಯಾಗಾಂಭೀರ್ಯದ ಅಭಿಧಾನವಿದು! ಇನ್ನು ಕುಡಿದವರು ಮೂತ್ರಿಸುವ ಪರಿ ಎಂಥದ್ದೆಂಬುದನ್ನು ಪ್ರತ್ಯೇಕಿಸಿ ಹೇಳಬೇಕಿಲ್ಲ. ಇವೆಲ್ಲ ಆದಿಕವಿಗಳ ಅಸಾಧಾರಣವಾದ ಲೋಕಾವೇಕ್ಷಣಕ್ಕೆ ಸಾಕ್ಷಿಗಳು.
ಯುದ್ಧಕಾಂಡ
ಸೀತೆಯನ್ನು ಕಂಡು, ಲಂಕೆಯನ್ನು ಸುಟ್ಟು, ರಾವಣನಿಗೇ ಭಯ ಹುಟ್ಟಿಸಿ ಬಂದ ಹನೂಮಂತನ ವೀರವಿಹಾರವನ್ನರಿತ ರಾಮನು ಆತನಿಗೆ ಉಡುಗೊರೆಯಾಗಿ ಕೊಡಲು ತನ್ನಲ್ಲಿ ಇರುವುದೊಂದು ಆಲಿಂಗನವಲ್ಲದೆ ಮತ್ತೇನೂ ಇಲ್ಲವೆಂದು ಹೇಳಿ ಅಪ್ಪಿಕೊಳ್ಳುತ್ತಾನೆ: ಏಷ ಸರ್ವಸ್ವಭೂತಸ್ತು ಪರಿಷ್ವಂಗಃ (೧.೧೪). “ಇದೋ ನನ್ನ ಸಮಸ್ತಭೂತವೂ ಆದ ಆಲಿಂಗನ” ಎಂಬ ರಾಮನ ಈ ಮಾತಿನಲ್ಲಿ ಎದ್ದುತೋರುವ ನುಡಿಗಟ್ಟಿಲ್ಲದಿದ್ದರೂ ಅಪ್ಪುಗೆಯಲ್ಲದೆ ಮತ್ತೇನೂ ತನ್ನಲ್ಲಿ ಉಳಿದಿಲ್ಲವೆಂಬ ಈ ಮಾತಿನ ಮೂಲಕ ರಾಮನ ಆಲಿಂಗನ ಅದೆಷ್ಟು ಅಮೂಲ್ಯವೆಂಬ ಧ್ವನಿ ಸ್ಫುರಿಸದಿರದು. ಇಂಥ ಧ್ವನಿದೀಪ್ತವಾದ ಮಾತುಗಳು ರಾಮಾಯಣದಲ್ಲಿ ಸಾವಿರಾರು.
ಮಹಾಪಾರ್ಶ್ವನು ರಾವಣನಿಗೆ “ನೀನು ಸೀತೆಯೊಡನೆ ಹುಂಜದಂತೆ ನಡೆದುಕೊಂಡು ಬಲಾತ್ಕರಿಸು” ಎನ್ನುತ್ತಾನೆ: ಬಲಾತ್ ಕುಕ್ಕುಟವೃತ್ತೇನ ವರ್ತಸ್ವ (೧೩.೪). “ಕುಕ್ಕುಟವೃತ್ತ”ವೆಂದರೆ ಹುಂಜಗಳು ಹೇಗೆ ಕೋಳಿಗಳನ್ನು ಬೆಂಬತ್ತಿಹೋಗಿ ಆಕ್ರಮಿಸಿ ಭೋಗಿಸುವುವೋ ಹಾಗೆ ವರ್ತಿಸುವುದೆಂದು ತಾತ್ಪರ್ಯ. ಇದೊಂದು ಪ್ರಸಿದ್ಧವಾದ ನುಡಿಗಟ್ಟು. “ಕುಕ್ಕುಟಾಚಾರ”ವೆಂದೂ ಇದಕ್ಕೆ ಹೆಸರುಂಟು. ಪ್ರಾಣಿ-ಪಕ್ಷಿಗಳ ಸ್ವಭಾವವನ್ನು ಗಮನಿಸಿ ರೂಪಿಸಿದ ವಾಚೋಯುಕ್ತಿಯಿದು.
ರಾವಣನು ವಿಭೀಷಣನನ್ನು ಹಳಿಯುವಾಗ ದಾಯಾದಿಗಳು ತೆರೆದ ಮನದವರಲ್ಲವೆನ್ನುತ್ತಾನೆ: ಪ್ರಚ್ಛನ್ನಹೃದಯಾ ಜ್ಞಾತಯಃ (೧೬.೫). “ಪ್ರಚ್ಛನ್ನಹೃದಯ” ಎಂದರೆ ತಮ್ಮ ಅಂತರಂಗವನ್ನು ತೋರದಿರುವವರೆಂದು ತಾತ್ಪರ್ಯ. ಇದೊಂದು ರೂಢಿಲಕ್ಷಣೆಯ ಪ್ರಯೋಗ.
ತನಗೆ ಸಹಕರಿಸದ ಸಮುದ್ರವನ್ನು ಕಂಡು ಮುನಿದ ರಾಮನು ಲಕ್ಷ್ಮಣನಿಗೆ ಹೀಗೆನ್ನುತ್ತಾನೆ: “ಗುಣಹೀನರ ಪಾಲಿಗೆ ಸಜ್ಜನರ ಗುಣಗಳು ಅವರ ಅಸಮರ್ಥತೆಯೆಂಬಂತೆ ತೋರುತ್ತವೆ”: ಅಸಾಮರ್ಥ್ಯಫಲಾ ಹ್ಯೇತೇ ನಿರ್ಗುಣೇಷು ಸತಾಂ ಗುಣಾಃ (೨೧.೧೫). ಇಲ್ಲಿ ಗುಣಗಳಿಗೆ “ಅಸಾಮರ್ಥ್ಯಫಲಾಃ” ಎಂಬ ವಿಶೇಷಣವನ್ನು ಕಲ್ಪಿಸಿರುವುದು ಮಾತಿಗೆ ಎಲ್ಲಿಲ್ಲದ ಮೊನಚನ್ನು ತಂದಿದೆ. ಇಲ್ಲಿರುವ ವ್ಯಂಗ್ಯವು ಈ ಬಗೆಯ ಸಮಾಸ್ಯದ ನಿರ್ಮಾಣದಿಂದಲೇ ಉಂಟಾಗಿದೆ. ಹೀಗಾಗಿಯೇ ಈ ಮಾತು ಮುಂದೆ ನಾಣ್ನುಡಿಯಂತಾಗಿದೆ.
ಹೀಗೆ ಮುನಿದ ರಾಮನು ಲೋಕದಲ್ಲಿ ದರ್ಪ ಮಾಡಿಕೊಂಡಿರುವವರೇ ಸತ್ಕಾರವನ್ನು ಹೊಂದುವರೆಂದು ಬೇಸರಿಸುತ್ತಾನೆ: ಸರ್ವತ್ರೋತ್ಸೃಷ್ಟದಂಡಂ ಚ ಲೋಕಃ ಸತ್ಕುರುತೇ ನರಮ್ (೨೧.೧೬). ಇಲ್ಲಿ “ಉತ್ಸೃಷ್ಟದಂಡ” ಎಂಬ ಪದಕ್ಕೆ ಕೋಲಾಹಲ ಮಾಡುವವನೆಂದೂ ಅಂಕೆಯಿಲ್ಲದವನೆಂದೂ ತಾತ್ಪರ್ಯ. “ಉತ್ಸೃಷ್ಟದಂಡ” ಎಂಬುದಕ್ಕೆ ದಂಡವನ್ನು ಬಿಟ್ಟವನೆಂಬ ಅರ್ಥವೂ ಇದೆ. ಆದರೆ ದಂಡಾಧಿಕಾರವನ್ನು ಎಲ್ಲೆಡೆ ಎಗ್ಗಿಲ್ಲದೆ ವಿನಿಯೋಗಿಸುವವನೆಂಬ ಅರ್ಥವೇ ಹೆಚ್ಚು ಯುಕ್ತ.
ಇದೇ ಸಂದರ್ಭದಲ್ಲಿ ರಾಮನು ಸಮುದ್ರವನ್ನು ಒಣಗಿಸುವುದಾಗಿ ಹೇಳುತ್ತಾನೆ: ನಿರ್ಮರ್ಯಾದಂ ಕರಿಷ್ಯಾಮಿ (೨೧.೨೪). “ಮರ್ಯಾದೆ” ಎಂಬ ಪದಕ್ಕೆ ಎಲ್ಲೆಯೆಂದು ಅರ್ಥ. ಸಮುದ್ರಕ್ಕೆ ಎಲ್ಲೆಯಿಲ್ಲದಂತೆ ಮಾಡುವುದೆಂದರೆ ಅದನ್ನು ಬತ್ತಿಸಿಬಿಡುವುದೆಂದೇ ತಾತ್ಪರ್ಯ. ಹೀಗಲ್ಲದೆ “ಎಲ್ಲೆಯೇ ಇಲ್ಲದಂತೆ ಸಮುದ್ರವನ್ನು ಭೂಮಿಗೆಲ್ಲ ವಿಸ್ತರಿಸುವುದು” ಎಂಬ ಅರ್ಥವಿಲ್ಲಿ ಸಂಗತವಲ್ಲ. ಆದರೆ “ಮರ್ಯಾದೆ” ಎಂಬ ಶಬ್ದಕ್ಕೆ “ಮಾನ” ಎಂಬ ರೂಢ್ಯರ್ಥವೂ ಲೋಕಪ್ರಸಿದ್ಧ. ಹೀಗೆ ಕಂಡಾಗ “ಸಮುದ್ರದ ಮಾನವನ್ನು ಕಳೆಯುವೆನು” ಎಂಬುದು ಮತ್ತೊಂದು ಸಂಗತಾರ್ಥವಾಗುತ್ತದೆ. ಆದರೆ ಮೊದಲಿನ ಅರ್ಥವೇ ಹೆಚ್ಚು ಸಮುಚಿತ.
ರಾವಣನ ಗೂಢಚಾರರಾದ ಶುಕ-ಸಾರಣರು ವಾನರಸೈನ್ಯದ ಬಲವನ್ನೆಲ್ಲ ತಿಳಿದುಬಂದು ತಮ್ಮೊಡೆಯನಿಗೆ ನಿವೇದಿಸುವಾಗ ಹೀಗೆನ್ನುತ್ತಾರೆ: “ರಾಮ, ಲಕ್ಷ್ಮಣ, ವಿಭೀಷಣ ಮತ್ತು ಸುಗ್ರೀವರು ನಾಲ್ವರೂ ಮಹಾಪರಾಕ್ರಮಿಗಳು. ಅವರಲ್ಲಿ ಮಿಕ್ಕ ಮೂವರು ಹಾಗಿರಲಿ, ರಾಮನೊಬ್ಬನೇ ನಮ್ಮ ಲಂಕೆಯನ್ನು ನಾಶಗೊಳಿಸಬಲ್ಲ!” ವಧಿಷ್ಯತಿ ಪುರೀಂ ಲಂಕಾಮೇಕಸ್ತಿಷ್ಠಂತು ತೇ ತ್ರಯಃ (೨೫.೩೨). ಇದು ನಮ್ಮಲ್ಲಿ ಇಂದೂ ಉಳಿದುಬಂದಿರುವ ವಾಗ್ರೂಢಿಗೆ ಒಳ್ಳೆಯ ನಿದರ್ಶನ.
ನಾಗಾಸ್ತ್ರದಿಂದ ವೈರಿಗಳನ್ನು ಗೆದ್ದ ಹಿಗ್ಗಿನಲ್ಲಿ ಇಂದ್ರಜಿತ್ತನು “ನಮ್ಮ ಬೇರನ್ನೇ ಕತ್ತರಿಸುವ ಅನರ್ಥವನ್ನು ನಾನು ನಿರ್ಮೂಲಿಸಿದ್ದೇನೆ” ಎನ್ನುತ್ತಾನೆ: ಸೋऽಯಂ ಮೂಲಹರೋऽನರ್ಥಃ ಸರ್ವೇಷಾಂ ನಿಹತೋ ಮಯಾ (೨೫.೩೨). ಇಲ್ಲಿ “ಮೂಲಹರ” ಎಂಬ ಶಬ್ದ ಸ್ವಾರಸ್ಯಕರವಾಗಿದೆ. “ನಮ್ಮ ನೆಲೆಯನ್ನೇ ಕತ್ತರಿಸುವಂಥದ್ದು” ಎಂಬ ಅರ್ಥವುಳ್ಳ ಈ ಪದವು ಮುಂದಿನ ಸಾಹಿತ್ಯದಲ್ಲಿ ನುಡಿಗಟ್ಟೆಂಬಂತೆ ಬೆಳೆದುಬಂದಿದೆ.
ವಿಭೀಷಣನು ನಾಗಪಾಶಕ್ಕೆ ಸಿಲುಕಿದ ರಾಮ-ಲಕ್ಷ್ಮಣರನ್ನು ಕಂಡು “ನಾನು ಬದುಕಿಯೂ ಸತ್ತಂತಾಯಿತು. ನನಗೆ ರಾಜ್ಯವು ಸಿಗುವುದೆಂಬ ಆಶೆ ನಾಶವಾಯಿತು” ಎನ್ನುತ್ತಾನೆ: ಜೀವನ್ನದ್ಯ ವಿಪನ್ನೋऽಸ್ಮಿ ನಷ್ಟರಾಜ್ಯಮನೋರಥಃ (೫೦.೧೯). “ಬದುಕಿದ್ದೂ ಸತ್ತಂತಾಯಿತು” ಎಂಬ ಮಾತು ನಮ್ಮೆಲ್ಲರ ನಿತ್ಯದ ವಾಗ್ರೂಢಿಯಾಗಿದೆ.
ರಾವಣನನ್ನು ಯುದ್ಧರಂಗದಲ್ಲಿ ಕಂಡ ರಾಮ “ಇಂದು ಈ ಪಾಪಿ ನನ್ನ ಕಣ್ಣಿಗೆ ಬಿದ್ದ. ಸೀತಾಪಹರಣದಿಂದ ಉಂಟಾದ ಕೋಪವನ್ನು ಇಂದು ಹೊರಚೆಲ್ಲುತ್ತೇನೆ!” ಎನ್ನುತ್ತಾನೆ: ದಿಷ್ಟ್ಯಾಯಮದ್ಯ ಪಾಪಾತ್ಮಾ ಮಮ ದೃಷ್ಟಿಪಥಂ ಗತಃ | ಅದ್ಯ ಕ್ರೋಧಂ ವಿಮೋಕ್ಷ್ಯಾಮಿ ಸೀತಾಹರಣಸಂಭವಮ್ (೫೯.೩೧). ಈ ಶ್ಲೋಕಾದ ಪೂರ್ವಾರ್ಧ ಲೋಕರೂಢಿಯ ಮಾತೇ ಹೌದು; ಉತ್ತರಾರ್ಧದಲ್ಲಿಯ “ಕ್ರೋಧಂ ವಿಮೋಕ್ಷ್ಯಾಮಿ” ಎಂಬ ಮಾತು “ಕೋಪವನ್ನು ಬಿಡುವೆನು” ಎಂಬರ್ಥದಲ್ಲಲ್ಲದೆ “ಕೋಪವನ್ನು ಪ್ರಯೋಗಿಸುವೆನು” ಎಂಬರ್ಥದಲ್ಲಿ ಗ್ರಹಿಸಬೇಕಾದ ವಾಗ್ರೂಢಿ.
ರಾವಣನಿಗೆ ಕುಂಭಕರ್ಣನು ನೀತಿ ಹೇಳಲು ಹೊರಟಾಗ ಅವನು “ಆದದ್ದಾಯಿತು. ನನ್ನಲ್ಲಿ ವಿಶ್ವಾಸವಿದ್ದರೆ ನೀನು ನನಗಾಗಿ ಸೆಣಸು” ಎನ್ನುತ್ತಾನೆ. ಈ ಸಂದರ್ಭದಲ್ಲಿ ಗತಂ ತು ಗತಮೇವ ಹಿ (೬೩.೨೫) ಎಂಬ ಮಾತು ಬಂದಿದೆ. ಇದು ಅಪ್ಪಟ ವಾಗ್ರೂಢಿ. ಸೀತೆಯನ್ನು ಪ್ರಲೋಭಿಸಬೇಕೆಂಬ ಮಹೋದರನ ಮಾತಿನ ನಡುವೆ ಸ್ತ್ರೀಲಘುತ್ವಮ್ (೬೪.೩೩) ಎಂಬ ಮಾತು ಬರುತ್ತದೆ. ಇದು “ಸ್ತ್ರೀಗೆ ಸಹಜವಾದ ಚಾಂಚಲ್ಯ” ಎಂಬರ್ಥದಲ್ಲಿ ಗ್ರಾಹ್ಯ. ಇದು ಲೋಕರೂಢಿಯ ಮಾತೇ ಹೌದು.
ರಾವಣನು ಲಕ್ಷ್ಮಣನ ಬಾಣಪ್ರಯೋಗವನ್ನು ಮೆಚ್ಚಿಕೊಳ್ಳುತ್ತ “ಇಂಥ ಬಾಣಪ್ರಯೋಗದ ಕಾರಣ ನನ್ನ ವೈರಿಯಾದರೂ ನೀನು ಹೊಗಳಿಕೆಗೆ ಅರ್ಹ” ಎನ್ನುತ್ತಾನೆ: ಸಾಧು ಬಾಣನಿಪಾತೇನ ಶ್ಲಾಘನೀಯೋऽಸಿ ಮೇ ರಿಪುಃ (೭೧.೭೬). ಇಲ್ಲಿ “ಬಾಣನಿಪಾತೇನ” ಎಂಬ ತೃತೀಯಾವಿಭಕ್ತಿಯ ಮಾತು ಕಾರಣವನ್ನು ಹೇಳುವಂತಿರುವುದು ಸ್ವಾರಸ್ಯಕರ. ಜೊತೆಗೆ “ಸಾಧು” ಎಂಬ ಅವ್ಯಯವೂ ಆಡುನುಡಿಯ ಸೊಗಡನ್ನು ತುಂಬಿದೆ.
ಮಕರಾಕ್ಷನ ಸಾವಿನ ಸುದ್ದಿಯನ್ನು ಕೇಳಿ ರಾವಣನು ಕೋಪದಿಂದ ಹಲ್ಲುಗಳನ್ನು ಕಟಕಟನೆ ಕಡಿದನಂತೆ: ದಂತಾನ್ ಕಟಕಟಾಪಯನ್ (೮೦.೧). ಇದಂತೂ ಅಪ್ಪಟ ಅನುಕರಣಶಬ್ದ; ಇಂದೂ ದೇಶಭಾಷೆಗಳಲ್ಲಿರುವ ಮಾತು.
ಇಂದ್ರಜಿತ್ತನ್ನು ನಿಕುಂಭಿಲೆಯ ಯಾಗಭೂಮಿಯಲ್ಲಿ ಎದುರಿಸುವಾಗ ವಿಭೀಷಣನು ಹೀಗೆ ಗೇಲಿಯ ಮಾತನ್ನಾಡುತ್ತಾನೆ: “ಯಜ್ಞಕಾರ್ಯವು ಮಧ್ಯದಲ್ಲಿಯೇ ನಿಂತುಹೋಯಿತೆಂದು ಬೇಸರಿಸಬೇಡ. ಲಕ್ಷ್ಮಣನ ಕೈಯಲ್ಲಿ ಸತ್ತ ನೀನು ಯಮಲೋಕದಲ್ಲಿ ಇದನ್ನು ಮುಗಿಸಬಹುದು!” ಹತಸ್ತ್ವಂ ದೇವತಾಕಾರ್ಯಂ ಕರಿಷ್ಯಸಿ ಯಮಕ್ಷಯೇ (೮೭.೩೦). ಈ ಮಾತಿನ ವ್ಯಂಗ್ಯ ಸ್ವಯಂವೇದ್ಯ. ಇಂಥ ವರಸೆಗಳು ಇಂದೂ ನಮ್ಮ ನಡುವೆ ಕೇಳಸಿಗುತ್ತವೆ. ಆಗಲೇ ಮತ್ತಷ್ಟು ಮುಂದುವರಿದು ವಿಭೀಷಣನು “ನೀನು ನಿನ್ನ ಎಲ್ಲ ಆಯುಧಗಳನ್ನೂ ಖಾಲಿ ಮಾಡು” ಎನ್ನುತ್ತಾನೆ: ಕುರುಷ್ವ ಸರ್ವಾಯುಧಸಾಯಕವ್ಯಯಮ್ (೮೭.೩೧). ಇದು ಇಂದ್ರಜಿತ್ತಿನ ಆಯುಧಗಳಷ್ಟೇ ಖಾಲಿಯಾಗುವುವಲ್ಲದೆ ಅವುಗಳಿಂದ ಕೆಲಸ ಮಾತ್ರ ಆಗುವುದಿಲ್ಲವೆಂಬ ಧ್ವನಿಯನ್ನೀಯುವ ಮಾರ್ಮಿಕವಾದ ವಾಗ್ರೂಢಿ.
ಇಂದ್ರಜಿತ್ತಿನ ಸಾವಿನ ಸುದ್ದಿ ಕೇಳಿದ ರಾಮ ಲಕ್ಷ್ಮಣನನ್ನು ಹೀಗೆ ಮೆಚ್ಚಿಕೊಳ್ಳುತ್ತಾನೆ: “ರಾವಣನ ಮಗ ಸತ್ತ ಬಳಿಕ ನಾವಿನ್ನು ಗೆದ್ದೆವೆಂದೇ ತಿಳಿ!” ರಾವಣೇರ್ಹಿ ವಿನಾಶೇನ ಜಿತಮಿತ್ಯುಪಧಾರಯ (೯೨.೮). ಇನ್ನೂ ಆಗಿಲ್ಲದ ಕೆಲಸ ಆಯಿತೆಂಬಂತೆ ಹೇಳುವುದು ಅದರ ಸೌಲಭ್ಯವನ್ನೇ ಧ್ವನಿಸುವುದಷ್ಟೆ. ಇದು ಆಡುನುಡಿಯ ಕಸುವು. ಅದನ್ನಿಲ್ಲಿ ಕಾಣಬಹುದು.
ಮೂರ್ಚ್ಛಿತನಾದ ರಾವಣನನ್ನು ರಣರಂಗದಿಂದ ಲಂಕೆಗೆ ಸಾಗಿಸುತ್ತಿದ್ದ ಸಾರಥಿಯು ತನ್ನ ಒಡೆಯನ ಆಕ್ಷೇಪಕ್ಕೆ ಉತ್ತರವೀಯುತ್ತ, “ನಾನು ಶತ್ರುಗಳೊಡನೆ ಸಂಚು ಹೂಡಿಲ್ಲ” ಎನ್ನುತ್ತಾನೆ: ನೋಪಜಪ್ತೋऽಸ್ಮಿ ಶತ್ರುಭಿಃ (೧೦೬.೧೧). “ಉಪಜಾಪ” ಎಂದರೆ ಚಾಡಿ, ಸಂಚು, ಹುನ್ನಾರ ಎಂದೆಲ್ಲ ಅರ್ಥಗಳುಂಟು. ಇದೊಂದು ಬಲಿಷ್ಠವಾದ ವಾಗ್ರೂಢಿ. ಅನಂತರ ರಾಮ-ರಾವಣರ ಯುದ್ಧ ಮೊದಲಾಗುತ್ತದೆ. ಗೆಲ್ಲಲೆಂದು ರಾಮನೂ ಸಾಯಲೆಂದು ರಾವಣನೂ ಸೆಣಸಿದರಂತೆ: ಜೇತವ್ಯಮಿತಿ ಕಾಕುತ್ಸ್ಥೋ ಮರ್ತವ್ಯಮಿತಿ ರಾವಣಃ (೧೦೯.೭). ಇಂಥ ಮಾತುಗಳನ್ನು ನಾವು ಇಂದೂ ಲೋಕದಲ್ಲಿ ಕೇಳುತ್ತೇವೆ. ಇದು ಆದಿಕವಿಗಳ ಲೋಕಭಾಷಾಪರಿಜ್ಞಾನಕ್ಕೆ ದೀಪಸಾಕ್ಷಿ.
ತನ್ನ ಅಣ್ಣನಿಗೆ ತಾನು ಅಂತ್ಯೇಷ್ಟಿ ಮಾಡುವುದಿಲ್ಲವೆಂದು ಹಿಂಜರಿದ ವಿಭೀಷಣನಿಗೆ ರಾಮನು ತಿಳಿಯಹೇಳುತ್ತ “ಇವನಿಗೆ ನೀನು ಅಂತ್ಯಕ್ರಿಯೆ ಮಾಡು. ರಾವಣ ನಿನಗೆ ಹೇಗೆ ಅಣ್ಣನೋ ಹಾಗೆಯೇ ನನಗೂ” ಎನ್ನುತ್ತಾನೆ: ಕ್ರಿಯತಾಮಸ್ಯ ಸಂಸ್ಕಾರೋ ಮಮಾಪ್ಯೇಷ ಯಥಾ ತವ (೧೧೪.೧೦೨). ಇದರ ಉತ್ತರಾರ್ಧವಂತೂ ಲೋಕರೂಢಿಯ ಮಾತಿಗೆ ಕನ್ನಡಿ ಹಿಡಿದಂತಿದೆ. ಅಷ್ಟೇಕೆ, ಇಡಿಯ ಈ ಶ್ಲೋಕವೇ ರಾಮನ ವ್ಯಕ್ತಿತ್ವಕ್ಕೂ ವಾಲ್ಮೀಕಿಮುನಿಗಳ ಕವಿತ್ವಕ್ಕೂ ಹೃದಯಂಗವಾದ ನಿದರ್ಶನ.
ಹನೂಮಂತನು ರಾಮವಿಜಯದ ವಾರ್ತೆಯನ್ನು ಸೀತೆಗೆ ತಿಳಿಸುವಾಗ ಮಹರ್ಷಿಗಳು ಅವಳನ್ನು ಪತಿದೇವಾ (೧೧೬.೩೧) ಎಂದು ವರ್ಣಿಸುತ್ತಾರೆ. ಯಾರಿಗೆ ಪತಿಯು ದೇವರೋ ಅಂಥವಳು “ಪತಿದೇವಾ” ಎನ್ನಿಸಿಕೊಳ್ಳುತ್ತಾಳೆ. “ಮಾತೃದೇವ”, “ಪಿತೃದೇವ” ಮುಂತಾದ ಉಪನಿಷತ್ತುಗಳ ಸಂವಾದಿಪ್ರಯೋಗಗಳಿಲ್ಲಿ ಸ್ಮರಣೀಯ.
ಇದೇ ಸಂದರ್ಭದಲ್ಲಿ ಸೀತೆಯನ್ನು ತೊಂದರೆಗೆ ಒಳಪಡಿಸಿದ ರಾಕ್ಷಸಿಯರನ್ನು ಹಿಂಸಿಸುವೆನೆಂದು ಹನೂಮಂತ ಹೇಳಿದಾಗ ಅವಳು ಒಪ್ಪುವುದಿಲ್ಲ. “ಆರ್ಯನು ಕರುಣೆ ತೋರಬೇಕು. ಯಾರು ತಾನೆ ತಪ್ಪು ಮಾಡುವುದಿಲ್ಲ?” ಎನ್ನುತ್ತಾಳೆ: ಕಾರ್ಯಂ ಕರುಣಮಾರ್ಯೇಣ ನ ಕಶ್ಚಿನ್ನಾಪರಾಧ್ಯತಿ (೧೧೬.೪೪). ಇಲ್ಲಿಯ ಕಡೆಯ ಮಾತು ನಾಣ್ನುಡಿಯೇ ಆಗಿದೆ.
ಶ್ರೀರಾಮನು ವಿಭೀಷಣನಿಗೆ ಸೀತೆಯ ಬಗೆಗೆ ತಿಳಿಸುವಾಗ “ಹೆಂಗಸರಿಗೆ ಚಾರಿತ್ರ್ಯವೇ ರಕ್ಷೆ” ಎನ್ನುತ್ತಾನೆ: ವೃತ್ತಮಾವರಣಂ ಸ್ತ್ರಿಯಾಃ (೧೦೬.೧೧). ಇದೊಂದು ಗಾದೆಮಾತಿನಂತಾಗಿದೆ. ಇದೇ ಸಂದರ್ಭದಲ್ಲಿ ಸೀತೆಯು ತನ್ನ ಅಸಹಾಯಕತೆಯನ್ನು ನಿವೇದಿಸುವಾಗ ರಾವಣನ ಸೆರೆಯಲ್ಲಿದ್ದ ತನಗೆ ತನ್ನ ಒಡಲ ಮೇಲೆ ಅಧಿಕಾರವಿರಲಿಲ್ಲ, ಹೀಗಾಗಿ ಅಸಹಾಯಳಾದ ತಾನು ಏನು ಮಾಡಬಹುದಿತ್ತು? ಎನ್ನುತ್ತಾಳೆ: ಪರಾಧೀನೇಷು ಗಾತ್ರೇಷು ಕಿಂ ಕರಿಷ್ಯಾಮ್ಯನೀಶ್ವರಾ (೧೧೯.೯). ಇಲ್ಲಿಯ “ಅನೀಶ್ವರಾ” ಎಂಬ ಮಾತು ಸೊಗಸಾದ ನುಡಿಗಟ್ಟಿನ ಸತ್ತ್ವವನ್ನು ಹೊಂದಿದೆ.
ಇಂದ್ರನಿಗೆ ರಾಮನು ತನ್ನ ನಿಲವನ್ನು ಸ್ಪಷ್ಟಪಡಿಸುವಾಗ ತಾನೆಂದೂ ಎರಡು ಮಾತಾಡಿಲ್ಲ ಎನ್ನುತ್ತಾನೆ: ದ್ವಿರ್ಮಯಾ ನೋಕ್ತಪೂರ್ವಂ ಹಿ (೧೦೬.೧೧). ಇದು ತನ್ನಂತೆಯೇ ಸಮರ್ಥವಾದ ನುಡಿಗಟ್ಟು.
ಭರತನು ರಾಮಾಗಮನದ ವಾರ್ತೆಯನ್ನು ಹನೂಮಂತನಿಂದ ತಿಳಿದು ಹರ್ಷಿಸುತ್ತಾನೆ. ಆದರೆ ಸಾಕಷ್ಟು ಹೊತ್ತು ಕಳೆದ ಬಳಿಕವೂ ಅಣ್ಣನ ಜಾಡು ಕಾಣದಿದ್ದಾಗ “ಏನಯ್ಯಾ, ನೀನು ಕಪಿಗಳಿಗೆ ಸಹಜವಾದ ಚಂಚಲತೆಯಿಂದ ಸುಳ್ಳು ಸುದ್ದಿ ಕೊಟ್ಟಿಲ್ಲ ತಾನೆ!” ಎಂದು ಕೇಳುತ್ತಾನೆ: ಕಚ್ಚಿನ್ನ ಖಲು ಕಾಪೇಯೀ ಸೇವ್ಯತೇ ಚಲಚಿತ್ತತಾ (೧೩೦.೨೨). ಇದು ಎಲ್ಲ ಕಾಲಕ್ಕೂ ಒದಗಿಬರಬಲ್ಲ ಪರಿಣಾಮಕಾರಿಯಾದ ವಿಡಂಬನೋಪಕ್ರಮ.
ಉತ್ತರಕಾಂಡ
ಸೀತಾಪವಾದದ ಸುದ್ದಿಯನ್ನು ಹೊತ್ತು ತಂದ ಭದ್ರನಿಗೆ ರಾಮನು “ಎಲ್ಲವನ್ನೂ ಇದ್ದುದು ಇದ್ದಹಾಗೆ ಹೇಳು. ಸ್ವಲ್ಪವನ್ನೂ ಉಳಿಸಿಕೊಳ್ಳಬೇಡ” ಎನ್ನುತ್ತಾನೆ: ಕಥಯಸ್ವ ಯಥಾತತ್ತ್ವಂ ಸರ್ವಂ ನಿರವಶೇಷತಃ (೪೩.೯). ಇಲ್ಲಿ “ಯಥಾತತ್ತ್ವಂ” ಎಂಬ ಮಾತು ಗಮನಾರ್ಹ. ಇಂದೂ ನಾವು ಈ ರೀತಿಯ ನುಡಿಗಟ್ಟನ್ನು ಬಳಸುತ್ತೇವೆ.
ಅಪಾಣಿನೀಯರೂಪಗಳು
ವಾಲ್ಮೀಕಿಮುನಿಗಳ ಕಾಲ ಪಾಣಿನಿಮಹರ್ಷಿಗಳ ಕಾಲಕ್ಕಿಂತ ಹಿಂದಿನದು. ಹೀಗಾಗಿ ಅಷ್ಟಾಧ್ಯಾಯಿಯ ನಿಯಮಗಳು ಆದಿಕವಿಗಳಿಗೆ ಅನ್ವಯಿಸುವುದಿಲ್ಲ. ಜೊತೆಗೆ, ರಾಮಾಯಣವು ಮಹರ್ಷಿಗಳ ರಚನೆ. ಹೀಗಾಗಿ ಆರ್ಷತ್ವದ ಗೌರವ ಇಲ್ಲುಂಟು. ಇವೆಲ್ಲ ಕಾರಣಗಳಿಂದ ಇಲ್ಲಿ ಬರುವ ಅಪಾಣಿನೀಯರೂಪಗಳನ್ನು ಯಾರೂ ವ್ಯಾಕರಣವಿರುದ್ಧವಾದ ಪ್ರಯೋಗಗಳೆಂದು ಭಾವಿಸುವುದಿಲ್ಲ. ಜೀವಂತವಾದ ಭಾಷೆಯೊಂದರ ಬೆಳೆವಣಿಗೆ ಹೇಗೆ ಆಯಿತೆಂಬ ತಥ್ಯವನ್ನು ಬಲ್ಲವರಿಗೆ ವ್ಯಾಕರಣದ ಸಾಧುತ್ವ-ಅಸಾಧುತ್ವಗಳಿಗಿಂತ ಮಿಗಿಲಾಗಿ ಇಂಥ ವ್ಯತ್ಯಾಸಗಳು ಉದ್ಬೋಧಕ ಮತ್ತು ಆಸ್ವಾದ್ಯ. ಈ ದೃಷ್ಟಿಯಿಂದ ಕೆಲವೊಂದು ಪದಗಳ ಪಟ್ಟಿಯನ್ನು ನಾವಿಲ್ಲಿ ಪರಿಶೀಲಿಸಬಹುದು:
(ಪಾಣಿನಿಸಮ್ಮತವಾದ ರೂಪಗಳನ್ನು ಪಕ್ಕದಲ್ಲಿಯೇ ಕೊಡಲಾಗಿದೆ ಕೊಡಲಾಗಿದೆ.)
ತ್ರಾಹಿ (೧.೬೦.೧೯) - ತ್ರಾಯಸ್ವ; ಆನಯಸ್ವ (೧.೬೧.೮) - ಆನಯ; ಶುಷ್ರೂಷ (೨.೨.೨೩) - ಶುಷ್ರೂಷಸ್ವ; ಕುರ್ಮಿ (೨.೧೨.೩೬) - ಕರೋಮಿ; ಸಹಿತುಮ್ (೨.೨೩.೧೧) - ಸೋಢುಮ್; ರುಷ್ಯ (೨.೯೭.೧೨) - ಪ್ರರುಷ್ಯ; ಲೋಭಯಾನಮ್ (೩.೪೪.೫) - ಲೋಭಯಂತಮ್; ಪ್ರಸ್ಫುರಮಾಣೋಷ್ಠಃ (೩.೫೯.೨೦) - ಪ್ರಸ್ಫುರದೋಷ್ಠಃ; ವಾಲುಕಸೇತವಃ (೩.೬೯.೫೦) - ವಾಲುಕಾಸೇತವಃ; ಶ್ಯಾಮೀಕೃತ್ವಾ (೪.೩೦.೨೪) - ಶ್ಯಾಮೀಕೃತ್ಯ; ಕ್ಷಮಿತವ್ಯಮ್ (೪.೩೬.೧೧) - ಕ್ಷಂತವ್ಯಮ್; ನಯಿತುಮ್ (೫.೩೭.೩೭) - ನೇತುಮ್; ದಾಶರಥಾಯ (೫.೯.೨೨) - ದಾಶರಥಯೇ; ಕಾಮಯಾನಸ್ಯ (೬.೫.೧೦) - ಕಾಮಯಮಾನಸ್ಯ; ಬ್ರೂಮಿ (೬.೯.೨೧) - ಬ್ರವೀಮಿ; ಗೃಹ್ಯ (೬.೧೬.೧೩) - ಪ್ರಗೃಹ್ಯ; ಚಿಂತಯಾನಸ್ಯ (೬.೪೬.೧೬) - ಚಿಂತಯಮಾನಸ್ಯ; ಪಶ್ಯಸ್ವ (೬.೪೮.೩೧) - ಪಶ್ಯ; ಅನುಶಾಸಸಿ (೬.೬೩.೨೩) - ಅನುಶಾಸ್ಸಿ; ಸೀದತೇ (೬.೮೪.೧೭) - ಸೀದತಿ; ಸಂಚೋದಯಾನಃ (೬.೯೦.೭) - ಸಂಚೋದಯಮಾನಃ; ಸ್ವಪ್ನಯಾನಃ (೬.೧೦೨.೭) - ಸ್ವಪ್ನಾಯಮಾನಃ; ಕರೇಣ್ವಃ (೬.೧೧೩.೫) - ಕರೇಣವಃ.
ಇಲ್ಲಿ ಸೂಚಿತವಾದ ಹಾಗೂ ತತ್ಸದೃಶವಾದ ಹಲಕೆಲವು ಪದಗಳನ್ನು ಭಾಸ-ಕಾಳಿದಾಸಾದಿಗಳೂ ತಮ್ಮ ಕೃತಿಗಳಲ್ಲಿ ಆಗೀಗ ಬಳಸಿರುವುದುಂಟು. ಈಚಿನವರಾದ ಶ್ರೀಧರ ಭಾಸ್ಕರ ವರ್ಣೇಕರ್, ರಾಧಾವಲ್ಲಭ ತ್ರಿಪಾಠಿ ಮುಂತಾದ ಎಷ್ಟೋ ಕವಿಗಳೂ ಪ್ರಯೋಗಿಸಿದ್ದಾರೆ. ಹೀಗೆ ಅಪಾಣಿನೀಯರೂಪಗಳನ್ನು ತಮಗೆ ಸರಿಕಂಡಂತೆ ಮುಂದಿನ ಕವಿಗಳು ಬಳಸಿಕೊಳ್ಳುವಲ್ಲಿಯೂ ವಾಲ್ಮೀಕಿಮುನಿಗಳ ಉಪಜೀವಿತೆಯನ್ನು ನಾವು ಗಮನಿಸಬಹುದು.
ಆದಿಕವಿಗಳ ಪದಸಂಪತ್ತಿ
ವಾಲ್ಮೀಕಿಮುನಿಗಳ ಕಥಾನಿರ್ವಾಹ ಅದೆಷ್ಟು ವಿಸ್ಮಯಾವಹವೋ ಕಾವ್ಯಕೌಶಲ ಅದೆಷ್ಟು ಹೃದಯಂಗಮವೋ ಬಗೆಬಗೆಯ ಪದಗಳನ್ನು ಬಳಸುವಲ್ಲಿ ಅವರು ತೋರುವ ಶ್ರೀಮಂತಿಕೆಯೂ ಅಷ್ಟೇ ಸ್ತವನೀಯ. ಮೂಲತಃ ಋಷಿಗಳಾಗಿ ವೈದಿಕಜೀವನವನ್ನು ಕೈಗೊಂಡಿದ್ದ ಅವರಿಗೆ ಆಶ್ರಮ, ಅಧ್ಯಯನ, ಅರಣ್ಯ, ಪ್ರಾಣಿಜೀವನ ಮುಂತಾದುವೆಲ್ಲ ತುಂಬ ನಿಕಟ, ಸಹಜ. ಹೀಗಾಗಿ ಇವುಗಳ ವರ್ಣನೆಯಲ್ಲಿ ಪದಸಮೃದ್ಧಿ ಕಂಡಲ್ಲಿ ಅದು ಅಚ್ಚರಿಯ ಸಂಗತಿಯಲ್ಲ. ಆದರೆ ಅರಮನೆಗಳು, ರಾಜಧಾನಿಗಳು, ನಗರವಾಸಿಗಳ ಜೀವನೋಪಯೋಗಿಯಾದ ವಸ್ತುಗಳು, ಯುದ್ಧದ ವಿವರಗಳು, ರಾಜನೀತಿಯ ಪರಿಭಾಷೆಗಳು ಮುಂತಾದ ಮತ್ತೆಷ್ಟೋ ಸಂಗತಿಗಳು ಅವರಲ್ಲಿ ಸಾರ್ಥಕವಾದ ಪದಪ್ರಯೋಗಗಳ ಮೂಲಕ ಪರಿಣಾಮಕಾರಿಯಾಗಿ ಬಂದಿವೆ. ಇದನ್ನು ಕಂಡಾಗ ಮಹಾಕವಿಯ ವಿದ್ಯಾವ್ಯಾಪ್ತಿ ಎಷ್ಟಿರಬೇಕೆಂಬ ಒಂದು ಅಂದಾಜು ನಮಗಾಗುತ್ತದೆ. ಈ ತಥ್ಯವನ್ನು ದಿಕ್ಸೂಚಿಯಾಗಿ ತೋರಲು ಆದಿಕವಿಗಳು ಬಳಸಿರುವ ಕೆಲವು ಪದಗಳ ಪಟ್ಟಿಯನ್ನಿಲ್ಲಿ ಕೊಡಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳನ್ನು ಮೂಲದಲ್ಲಿಯೇ ಗಮನಿಸಿಕೊಳ್ಳಬಹುದು.
ಬೃಸೀ (೧.೪.೨೨) - ಚಾಪೆ; ಅಭಿಗೀತಮ್ (೧.೪.೨೭) - ಅತಿಶಯವಾಗಿ ಕೊಂಡಾಡಲ್ಪಟ್ಟದ್ದು; ವಧೂನಾಟಕಸಂಘಃ (೧.೫.೧೨) - ಸ್ತ್ರೀಯರಿಂದಲೇ ಸಾಗುತ್ತಿದ್ದ ನಾಟಕಮಂಡಲಿ; ಅಷ್ಟಾಪದಮ್ (೧.೫.೧೬) - ಪಗಡೆಯ ಹಾಸು; ಔಪವಾಹ್ಯಮ್ (೨.೧೬.೪೭) - ರಾಜನ ವಾಹನ; ಕ್ರೋಧಾಗಾರಮ್ (೨.೯.೨೨) - ಕೋಪಗೃಹ; ಕಿಶೋರೀ (೨.೯.೩೭) - ಹೆಣ್ಣು ಕುದುರೆ; ಕುಥಾಸ್ತರಣಮ್ (೨.೩೦.೧೪) - ರತ್ನಗಂಬಳಿ; ಭದ್ರಕಃ (೨.೩೨.೨೦) - ಕಡಲೆ; ಮೇಖಲೀ (೨.೩೨.೨೧) - ಬ್ರಹ್ಮಚಾರಿ; ವ್ಯಂಜನಮ್ (೨.೩೨.೨೧) - ನಂಚಿಕೆಯ ಪದಾರ್ಥ; ದುಶ್ಛದಃ (೨.೩೨.೩೨) - ಹರಕು ಬಟ್ಟೆ; ಏಕಪದೀ (೨.೬೩.೪೪) - ಕಾಲುದಾರಿ; ವರ್ಷವರಃ (೨.೬೫.೭) - ನಪುಂಸಕ; ದಮ್ಯಃ (೨.೭೩.೧೬) - ಎಳೆಯ ಕರು; ಭೂಮಿಪ್ರದೇಶಜ್ಞಃ (೨.೮೦.೧) - ನೆಲದ ಸ್ಥಿತಿ-ಗತಿ ಬಲ್ಲವನು; ಖನಕಃ (೨.೮೦.೧) - ಅಗೆಯುವವನು; ಯಂತ್ರಕಃ (೨.೮೦.೧) - ನೌಕೆ ಮುಂತಾದ ಯಂತ್ರಗಳನ್ನು ನಡಸುವವನು; ಕರ್ಮಾಂತಿಕಃ (೨.೮೦.೨) - ಕೂಲಿಯ ಕೆಲಸದವನು; ವರ್ಧಕಿಃ (೨.೮೦.೨) - ಬಡಗಿ; ಮಾರ್ಗೀ (೨.೮೦.೨) - ರಸ್ತೆ ಮಾಡುವವನು; ವೃಕ್ಷತಕ್ಷಕಃ (೨.೮೦.೨) - ಮರ ಕಡೆಯುವವನು; ಕೂಪಕಾರಃ (೨.೮೦.೩) - ಬಾವಿ ಅಗೆಯುವವನು; ಸುಧಾಕಾರಃ (೨.೮೦.೩) - ಸುಣ್ಣಗೆಲಸದವನು; ವಂಶಕರ್ಮಕೃತ್ (೨.೮೦.೩) - ಮೇದರವನು; ವೀರಣಸ್ತಂಬಃ (೨.೮೦.೮) - ಬಲವಾಗಿ ಬೇರುಬಿಟ್ಟ ಹುಲ್ಲಿನ ಪೊದೆ; ಗಣವಲ್ಲಭಃ (೨.೮೧.೧೨) - ಸೇನಾಪತಿ; ಗೋರಥಃ (೨.೮೨.೨೬) - ಎತ್ತಿನ ಬಂಡಿ; ಗಂಗಾನೂಪಃ (೨.೮೫.೪) - ಗಂಗಾನದಿಯ ಜೌಗು; ಸ್ವಸ್ತಿಕವಿಜ್ಞೇಯಃ (೨.೮೯.೧೧) - ಸ್ವಸ್ತಿಕಾಕಾರದ ನೌಕೆ; ಲೌಹೀ (೨.೯೧.೬೮) - ಲೋಹದ ಪಾತ್ರೆ; ಲಘುಮೂಲಮ್ (೨.೧೦೦.೧೯) - ಅಲ್ಪಪ್ರಯತ್ನದಿಂದ ಸಾಧ್ಯವಾದ ವ್ಯವಸ್ಥೆ; ಮಹೋದಯಃ (೨.೧೦೦.೧೯) - ದೊಡ್ಡ ಫಲವನ್ನು ಕೊಡುವ ವ್ಯವಸ್ಥೆ; ಅರ್ಥಕೃಚ್ಛ್ರಃ (೨.೧೦೦.೨೨) - ಆರ್ಥಿಕವಾದ ಸಂಕಟ; ಮಿಥ್ಯಾಭಿಶಸ್ತಃ (೨.೧೦೦.೫೯) - ಸುಳ್ಳು ಆಪಾದನೆಗೆ ಗುರಿಯಾದವನು; ಪಿಣ್ಯಾಕಃ (೨.೧೦೩.೧೪) - ಹಿಂಡಿ; ವ್ಯಾದಿತಾಸ್ಯಮ್ (೩.೨.೬) - ತೆರೆದ ಬಾಯಿ; ಮೃಧಮ್ (೩.೨.೧೪) - ಯುದ್ಧ; ಅವಟಃ (೩.೪.೨೨) - ಹಳ್ಳ; ನಾಲೀಕಃ (೩.೨೫.೨೫) - ಉಕ್ಕಿನ ತುದಿಯುಳ್ಳ ಬಾಣ; ನಾರಾಚಃ (೩.೨೫.೨೫) - ಉಕ್ಕಿನಿಂದಲೇ ನಿರ್ಮಿತವಾದ ಬಾಣ; ವಿಕರ್ಣೀ (೩.೨೫.೨೫) - ಅಂಕುಶದಂತೆ ತುದಿಯುಳ್ಳ ಬಾಣ; ಕಾದಲೀ, ಪ್ರಿಯಕೀ, ಪ್ರವೇಣೀ (೩.೪೩.೩೫) - ಬಗೆಬಗೆಯ ಜಿಂಕೆಯ ಚರ್ಮಗಳು; ಕೋಯಷ್ಟಿಕಃ (೩.೭೫.೧೮) - ಚಿಕ್ಕ ಬಿಳಿಯ ಕೊಕ್ಕರೆ; ಅರ್ಜುನಕಃ (೩.೭೫.೧೮) - ಬಿಳಿಯ ನವಿಲು; ಶತಪತ್ರಃ (೩.೭೫.೧೮) - ಮರಕುಟಕ; ರಾಜಹಾ (೪.೧೭.೩೪) - ರಾಜನನ್ನು ಕೊಂದವನು; ಬ್ರಹ್ಮಹಾ (೪.೧೭.೩೪) - ವಿಪ್ರನನ್ನು ಕೊಂದವನು; ಗೋಘ್ನಃ (೪.೧೭.೩೪) - ಗೋವನ್ನು ಕೊಂದವನು; ಪರಿವೇತ್ತಾ (೪.೧೭.೩೫) - ಅಣ್ಣನಿಗಿಂತ ಮುನ್ನ ಮದುವೆ ಮಾಡಿಕೊಂಡವನು ಅಥವಾ ಯಜ್ಞ ಮಾಡಿದವನು; ಸೂಚಕಃ (೪.೧೭.೩೫) - ಚಾಡಿಕೋರ; ಗುರುತಲ್ಪಗಃ (೪.೧೭.೩೫) - ತನಗೆ ಮಾತೃಸಮಾನರಾದ ಸ್ತ್ರೀಯರನ್ನು ಭೋಗಿಸಿದವನು; ಶಲ್ಯಕಃ (೪.೧೭.೩೮) - ಮುಳ್ಳುಹಂದಿ; ಶ್ವಾವಿಧಃ (೪.೧೭.೩೮) - ಕಾಡುಹಂದಿ; ಗೋಧಾ (೪.೧೭.೩೮) - ಉಡ; ಕಿಟ್ಟಃ (೪.೨೪.೧೮) - ಲೋಹಸಂಸ್ಕರಣದ ಬಳಿಕ ಉಳಿಯವ ಗಸಿ; ಕುಲಿಂಗಃ (೪.೫೮.೨೬) - ಗುಬ್ಬಚ್ಚಿಯಂಥ ಧಾನ್ಯಜೀವಿಯಾದ ಒಂದು ಬಗೆಯ ಪಕ್ಷಿ; ಬಲಿಭೋಜೀ (೪.೫೮.೨೬) - ಕಾಗೆ ಮತ್ತು ಅದರಂತೆಯೇ ಹಣ್ಣುಗಳನ್ನು ಕುಕ್ಕಿ ತಿನ್ನಬಲ್ಲ ಹಕ್ಕಿಗಳು; ಭಾಸಃ (೪.೫೮.೨೭) - ಹದ್ದು ಮತ್ತು ಅದರಂತೆಯೇ ಪ್ರಾಣಿಗಳ ಮಾಂಸವನ್ನು ಕುಕ್ಕಿ, ಕಿತ್ತು ತಿನ್ನಬಲ್ಲ ಹಕ್ಕಿಗಳು; ಕುರರಃ (೪.೫೮.೨೭) - ಹಾವಸೆಯನ್ನು ತಿಂದು ಬದುಕುವ ಒಂದು ಬಗೆಯ ಜಲಪಕ್ಷಿ; ಚರಣಯೋಧೀ (೪.೫೮.೩೨) - ಕೋಳಿ ಹಾಗೂ ಕಾಲಿನಿಂದ ಕೆದಕಿ ಆಹಾರವನ್ನು ಹುಡುಕಿಕೊಳ್ಳುವ ಹಕ್ಕಿಗಳು; ಮಡ್ಡುಕಃ (೫.೧೦.೩೮) - ಒಂದು ಬಗೆಯ ಮದ್ದಳೆ; ಪಟಹಃ (೫.೧೦.೩೯) - ತಮಟೆ; ಪಣವಃ (೫.೧೦.೪೩) - ಹಲಗೆ; ಡಿಂಡಿಮಃ (೫.೧೦.೪೪) - ನಗಾರಿ; ಆಪಾನಶಾಲಾ (೫.೧೨.೧೩) - ಹೆಂಡದಂಗಡಿ; ಪುಷ್ಪಗೃಹಮ್ (೫.೧೨.೧೩) - ಹೂವಿನ ಅಲಂಕಾರ ಮಾಡಿದ ಕೋಣೆ; ನಿಷ್ಕುಟಾಂತರರಥ್ಯಾ (೫.೧೨.೧೪) - ಉದ್ಯಾನದ ನಡುವಿನ ಬೀದಿ.
ಬಾಲಕಾಂಡದ ಇಪ್ಪತ್ತೇಳನೆಯ ಸರ್ಗದಲ್ಲಿ (೧.೨೭.೪-೨೦) ರಾಮನಿಗೆ ವಿಶ್ವಾಮಿತ್ರರು ಅನುಗ್ರಹಿಸಿದ ಅನೇಕ ಆಯುಧಗಳ ವಿವರಗಳು ಬರುತ್ತವೆ. ಉದಾಹರಣೆಗೆ: ದಂಡಚಕ್ರ, ಕಾಲಚಕ್ರ, ವಿಷ್ಣುಚಕ್ರ, ಬ್ರಹ್ಮಶಿರಸ್, ಐಷೀಕ, ಮೋದಕೀ, ಶಿಖರೀ, ವರುಣಾಸ್ತ್ರ, ಪಿನಾಕಾಸ್ತ್ರ, ನಾರಾಯಣಾಸ್ತ್ರ, ಆಗ್ನೇಯಾಸ್ತ್ರ, ಶಿಖರಾಸ್ತ್ರ, ವಾಯವ್ಯಾಸ್ತ್ರ, ಕಂಕಾಲ, ಮುಸಲ, ಕಾಪಾಲ, ವಿದ್ಯಾಧರಾಸ್ತ್ರ, ಗಾಂಧರ್ವಾಸ್ತ್ರ, ಪ್ರಸ್ವಾಪನಾಸ್ತ್ರ, ಮಾನವಾಸ್ತ್ರ, ಸೌರಾಸ್ತ್ರ ಮುಂತಾದುವು. ಇವುಗಳ ವಿವರಗಳನ್ನು ಮೂಲದಲ್ಲಿಯೇ ಗಮನಿಸಬಹುದು.
ಅಯೋಧ್ಯಾಕಾಂಡದ ನೂರನೆಯ ಸರ್ಗವಾದ ಕಚ್ಚಿತ್ಸರ್ಗದಲ್ಲಿ (೨.೧೦೦.೬೮-೬೯) ರಾಜನೀತಿಯ ಎಷ್ಟೋ ಅಂಶಗಳು ಬರುತ್ತವೆ. ದಶವರ್ಗ, ಪಂಚವರ್ಗ, ಚತುರ್ವರ್ಗ, ಸಪ್ತವರ್ಗ, ಅಷ್ಟವರ್ಗ ಮತ್ತು ತ್ರಿವರ್ಗಗಳು; ತ್ರಿವಿದ್ಯೆ, ಷಾಡ್ಗುಣ್ಯ, ದೈವ-ಮಾನುಷವ್ಯಸನಗಳು, ಭೇದಕೃತ್ಯ, ವಿಂಶತಿವರ್ಗ, ಪಂಚಪ್ರಕೃತಿ, ದ್ವಾದಶಮಂಡಲ ಮುಂತಾದ ಹತ್ತಾರು ಪರಿಭಾಷೆಗಳಿವೆ. ಇವುಗಳಲ್ಲಿ ಒಂದೊಂದರಲ್ಲಿಯೂ ಅನೇಕ ಉಪವಿಭಾಗಗಳಿವೆ. ಇವನ್ನೆಲ್ಲ ವಿದ್ವಾನ್ ಎನ್. ರಂಗನಾಥಶರ್ಮರು ತಮ್ಮ ಅನುವಾದದಲ್ಲಿ ನೀಡಿರುವ ಅನುಬಂಧಗಳ ಮೂಲಕ ಆಸಕ್ತರು ತಿಳಿಯಬಹುದು.
ಆದಿಕವಿಗಳು ಸರ್ವಾರ್ಥದಲ್ಲಿಯೂ ವಶ್ಯವಾಕ್ಕುಗಳು. ಭಾಷೆ ಅವರು ನಡೆಸಿದಂತೆ ನಡೆಯುತ್ತದೆ, ನುಡಿಸಿದಂತೆ ನುಡಿಯುತ್ತದೆ. ಯಾವುದೇ ಕಲ್ಪನೆಯನ್ನಾಗಲಿ, ಎಂಥದ್ದೇ ಕ್ರಿಯೆಯನ್ನಾಗಲಿ ಅನಾಯಾಸವಾಗಿ ಮಾತಿನ ಮೂಲಕ ಅವರು ಮುಂದಿರಿಸಬಲ್ಲರು. ಕಲ್ಪನೆಯನ್ನು ಸಾಕಾರಗೊಳಿಸುವುದು ಅಲಂಕಾರವಾದರೆ ಕ್ರಿಯೆಯನ್ನು ಕಂಡರಿಸುವುದು ಆಖ್ಯಾತರೂಪಗಳು. ವಿಶೇಷತಃ ನಮ್ಮ ಕಾಲಕ್ಕಿಂತ ತುಂಬ ಹಿಂದೆ ನಡೆದುಹೋದ ಘಟನೆಗಳನ್ನು ಹೇಳುವಾಗ ಸಂಸ್ಕೃತದಲ್ಲಿ ಸಾಮಾನ್ಯವಾಗಿ “ಲಿಟ್-ಲಕಾರ”ದ ಬಳಕೆಯುಂಟು. ಇದನ್ನು “ಪರೋಕ್ಷ-ಅನದ್ಯತನ-ಭೂತಕಾಲ”ವೆಂದು ಹೇಳುತ್ತಾರೆ. ಇಂಥ ಕ್ರಿಯೆಗಳ ನಿರೂಪಣೆಯಲ್ಲಿ ಆದಿಕವಿಗಳು ಶ್ರುತಿಹಿತಕರವಾದ ಎಷ್ಟೋ ಸಾರ್ಥಕಪದಗಳನ್ನು ಬಳಸಿದ್ದಾರೆ. ಅಂಥವಲ್ಲಿ ಕೆಲವನ್ನಿಲ್ಲಿ ಮಾದರಿಯಾಗಿ ನೋಡಬಹುದು:
ದುಧುವೇ (೫.೧.೩೨) - ಕೊಡವಿಕೊಂಡನು; ಚಕಂಪೇ (೫.೧.೩೨) - ನಡುಗಿದನು; ದದೃಶೇ (೫.೧.೩೪) - ನೋಡಲ್ಪಟ್ಟನು; ಸಿಷೇವೇ (೫.೧.೮೪) - ಸೇವಿಸಿದನು; ಪುಪ್ಲುವೇ (೫.೫೭.೪) – ತೇಲಿದನು. ಇವೇ ಮುಂತಾದವು ಆತ್ಮನೇಪದಿಯ ಪ್ರಥಮಪುರುಷ-ಏಕವಚನದ ರೂಪಗಳು. ನನಾದ (೫.೧.೩೨) - ನಾದ ಮಾಡಿದನು; ತತಾಪ (೫.೧.೮೪) - ತಪಿಸಿದನು; ಶುಶ್ರಾವ (೫.೪.೧೧) – ಕೇಳಿದನು. ಇವೇ ಮುಂತಾದವು ಪರಸ್ಮೈಪದಿಯ ಪ್ರಥಮಪುರುಷ-ಏಕವಚನದ ರೂಪಗಳು. ವಿವ್ಯಧುಃ (೫.೫೭.೪೨) - ಚುಚ್ಚಿದರು; ಚೇಲುಃ (೬.೬೯.೫೩) - ಚಲಿಸಿದರು; ಪೇತುಃ (೬.೬೯.೫೩) - ಬಿದ್ದರು; ನೇದುಃ (೬.೬೯.೫೩) - ಸದ್ದು ಮಾಡಿದರು; ಬಿಭಿದುಃ (೬.೬೯.೫೩) - ಭೇದಿಸಿದರು; ಜಘ್ನುಃ (೬.೬೯.೫೪) - ಹೊಡೆದರು; ಶೇಕುಃ (೬.೬೯.೭೭) – ಶಕ್ತರಾದರು. ಇವೇ ಮುಂತಾದವು ಪರಸ್ಮೈಪದಿಯ ಪ್ರಥಮಪುರುಷ-ಬಹುವಚನದ ರೂಪಗಳು.
ಹೀಗೆ ಬೇರೆ ಬೇರೆ ಲಕಾರಗಳಲ್ಲಿ, ಬೇರೆ ಬೇರೆ ಪುರುಷ-ವಚನಗಳಲ್ಲಿ ಧಾರಾಳವಾಗಿ ಕ್ರಿಯೆಗಳನ್ನು ಬಣ್ಣಿಸಬಲ್ಲ ಚಾತುರಿ ಮಹರ್ಷಿಗಳದು. ಒಂದೇ ಪದ್ಯದಲ್ಲಿ ಹತ್ತಾರು ಕ್ರಿಯೆಗಳನ್ನು ಅಡಕವಾಗಿ ಹೇಳುವ ಮೂಲಕವೇ ಅದೊಂದು ಬಗೆಯ ತುಮುಲದ ಸಂಕೀರ್ಣತೆಯನ್ನು ಚಿತ್ರಿಸಬಲ್ಲ ಕೌಶಲ ಅವರದು. ಇವೆಲ್ಲ ಆವರಣನಿರ್ಮಾಣಕ್ಕೂ ಶ್ರವಣಾಭಿರಾಮತೆಗೂ ಒದಗಿಬರಬಲ್ಲ ಸಾಧನಗಳು. ಇಂಥ ಬಾಣಗಳು ಆದಿಕವಿಗಳ ಬತ್ತಳಿಕೆಯಲ್ಲಿ ಅಸಂಖ್ಯ.
ಉಪಸಂಹಾರ
ಹೀಗೆ ವಾಗ್ರೂಢಿಯಿಂದಾಗಲಿ, ವಾಚೋಯುಕ್ತಿಯಿಂದಾಗಲಿ, ಸುಬಂತ-ತಿಙಂತ-ಕೃದಂತಗಳಿಂದಾಗಲಿ ತಮ್ಮ ಕಾವ್ಯನೌಕೆಯನ್ನು ಸಮರ್ಥವಾಗಿ ರಸಿಕರ ಹೃದಯತೀರಗಳಿಗೆ ತಲಪಿಸಿಬಲ್ಲ ಶಕ್ತಿ ಆದಿಕವಿಗಳಲ್ಲಿ ಅನ್ಯಾದೃಶವಾಗಿದೆ. ಅವರ ಮಹಾಕೃತಿಯನ್ನು ಸಂಗ್ರಹಾನುವಾದಗಳ ಮೂಲಕ, ಯಥಾವತ್ತಾದ ವಿಸ್ತೃತಾನುವಾದಗಳ ಮೂಲಕ ಬೇರೆ ಬೇರೆ ಭಾಷೆಗಳಲ್ಲಿ ಓದಿಕೊಂಡವರಿಗೆ ಕೈತಪ್ಪಿ ಹೋಗುವ ಇಂಥ ಸ್ವಾರಸ್ಯಗಳು ಎಷ್ಟೋ ಬಾರಿ ಮೂಲವನ್ನು ಓದುವವರ ಕಣ್ಣುಗಳಿಂದಲೂ ಮರೆಯಾಗುವ ಸಾಧ್ಯತೆಯುಂಟು. ಶುಷ್ಕಪಾರಾಯಣಕ್ಕೆ ತೆತ್ತುಕೊಂಡವರಿಗೆ ಇಂಥ ನಷ್ಟ ತುಂಬ ಸಂಭಾವ್ಯ. ಹೀಗಲ್ಲದೆ ಶ್ರೀಮದ್ರಾಮಾಯಣವನ್ನು ಏಕಕಾಲದಲ್ಲಿ ಜೀವನಸಂಹಿತೆಯಾಗಿ, ರಸವತ್ಕಾವ್ಯವಾಗಿ, ಸಂಸ್ಕೃತಿವಿಶ್ವಕೋಶವಾಗಿ, ಭಾಷಾಕೌತುಕವಾಗಿ ಕಾಣಬಲ್ಲವರಿಗೆ ಈ ಎಲ್ಲ ಸೂಕ್ಷ್ಮಗಳೂ ತಾವಾಗಿ ತೆರೆದುಕೊಳ್ಳುತ್ತವೆ. ಅಂಥ ಆಸಕ್ತರಿಗಾಗಿ ಪ್ರಾಥಮಿಕ ಅವಲಂಬನವೆಂಬೆಂತೆ ಹವಣಿಸಿಕೊಟ್ಟ ಈ ಪ್ರವೇಶಿಕೆ ರಾಮಾಯಣವನ್ನು ಮತ್ತಷ್ಟು ನಿಕಟವಾಗಿ ನೋಡುವಲ್ಲಿ ಸಹಕರಿಸಲೆಂದು ಆಶಿಸುತ್ತೇನೆ.