ಕಿಷ್ಕಿಂಧಾಕಾಂಡ
ಈ ಕಾಂಡದ ಆರಂಭದಲ್ಲಿಯೇ ಸುಗ್ರೀವನು ರಾಮ-ಲಕ್ಷ್ಮಣರನ್ನು ದೂರದಿಂದ ಕಂಡು ಅವರು ವಾಲಿಯ ಗೂಢಚಾರರಾಗಿರಬಹುದೆಂದು ಭ್ರಮಿಸಿ ಕಳವಳಗೊಳ್ಳುತ್ತಾನೆ. “ಇಂಥ ಜನರು ತಾವು ಮಾತ್ರ ನಂಬದೆ ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸಿ ಅನಂತರ ನಮ್ಮ ದುರ್ಬಲಸ್ಥಾನಗಳನ್ನು ಘಾತಿಸುತ್ತಾರೆ” ಎಂದು ಹನೂಮಂತನಿಗೆ ಹೇಳುತ್ತಾನೆ: ವಿಶ್ವಸ್ತಾನಾಮವಿಶ್ವಸ್ತಾ ರಂಧ್ರೇಷು ಪ್ರಹರಂತಿ (೨.೨೨). ಇಡಿಯ ಈ ವಾಕ್ಯವೇ ಒಳ್ಳೆಯ ವಾಚೋಯುಕ್ತಿಗೆ ನಿದರ್ಶನವೆನ್ನಬಹುದು. ಇಂದಿಗೂ ಇಂಥ ಮಾತುಗಳು ಲೋಕರೂಢಿಯಲ್ಲಿವೆ. ಸುಗ್ರೀವನೇ ಮುಂದೆ ವಾಲಿಯ ಧೂರ್ತತೆಯನ್ನು ಪ್ರಸ್ತಾವಿಸುತ್ತ, ದೊರೆಗಳು ಬಗೆಬಗೆಯ ಉಪಾಯಗಳನ್ನು ಬಲ್ಲವರೆನ್ನುತ್ತಾನೆ: ರಾಜಾನೋ ಬಹುದರ್ಶನಾಃ (೨.೨೩). ಇದೊಂದು ಸಶಕ್ತವಾದ ನುಡಿಗಟ್ಟು.
ಸುಗ್ರೀವನು ರಾಮನಲ್ಲಿ ಸಖ್ಯವನ್ನು ಬಯಸುತ್ತ, “ನಿನಗೆ ನನ್ನ ಗೆಳೆತನ ಬೇಕಿದ್ದಲ್ಲಿ, ಇದೋ ನನ್ನ ಕೈ ಚಾಚಿದ್ದೇನೆ” ಎನ್ನುತ್ತಾನೆ: ರೋಚತೇ ಯದಿ ವಾ ಸಖ್ಯಂ ಬಾಹುರೇಷ ಪ್ರಸಾರಿತಃ (೫.೧೨). ಇದಂತೂ ಮೈತ್ರಿಗಾಗಿ ಕೈಕುಲುಕುವ ಭಾವವನ್ನು ಧ್ವನಿಸುವಂಥ ರಸಮಯವಾದ ವಾಗ್ರೂಢಿ. ಮುಂದೆ ಪರಸ್ಪರ ಕೈ-ಕೈ ಬೆಸೆಯುವುದನ್ನೂ ಆದಿಕವಿಗಳು ಹೇಳಿರುವುದು ಗಮನಾರ್ಹ: ಹಸ್ತಂ ಪೀಡಯಾಮಾಸ ಪಾಣಿನಾ (೫.೧೩).
ಸುಗ್ರೀವನು ರಾಮನೊಡನೆ ಮಾತನಾಡುತ್ತ ವಾಲಿಯಿಂದ ತನಗೊದಗಿದ ಭಯವನ್ನು ವಿಸ್ತರಿಸುತ್ತ, “ಭಯಕ್ಕೆ ಎಲ್ಲರೂ ಭಯಪಡುತ್ತಾರೆ” ಎನುತ್ತಾನೆ: ಭಯೇ ಸರ್ವೇ ಹಿ ಬಿಭ್ಯತಿ (೮.೩೫). ಇದೊಂದು ಚಮತ್ಕಾರಪೂರ್ಣವಾದ ನುಡಿಬೆಡಗು. ಇಲ್ಲಿ ಭಯಕಾರಕವಾಗುವ ಸಂಗತಿಯನ್ನೇ ಭಯವೆಂದು ಹೇಳಿರುವುದೊಂದು ಸ್ವಾರಸ್ಯ.
ವಾಲಿ ಮತ್ತು ಮಾಯಾವಿಗಳ ಸೆಣಸಾಟ ಗುಹೆಯೊಳಗೆ ಸಾಗಿದ್ದಾಗ ಅಲ್ಲಿಂದ ರಕ್ತದ ಹೊಳೆ ಹರಿದದ್ದನ್ನು ಕಂಡು ಅಂಜಿದ ಸುಗ್ರೀವ ಗವಿಯ ಬಾಯಿಗೆ ಬೆಟ್ಟದಂಥ ಬಂಡೆಯೊಂದನ್ನಿಟ್ಟು ಓಡಿಬರುತ್ತಾನೆ: ಪಿಧಾಯ ಚ ಬಿಲದ್ವಾರಂ ಶಿಲಯಾ ಗಿರಿಮಾತ್ರಯಾ (೯.೧೯). ಸಾಮಾನ್ಯವಾಗಿ “ಮಾತ್ರ”ಶಬ್ದವನ್ನು ಹೀಗೆ ಸಮಾಸದಲ್ಲಿ ಬಳಿಸಿದಾಗ ಸಣ್ಣ ಪ್ರಮಾಣವನ್ನು ಸೂಚಿಸುತ್ತದೆ. ಆದರೆ ಇಲ್ಲಿ ಬೆಟ್ಟದ ಗಾತ್ರದ ಬಂಡೆಯನ್ನು ವರ್ಣಿಸುವಾಗ ಇಂಥ ಪ್ರಯೋಗವಾಗಿರುವುದು ಚೋದ್ಯ. ಇದು ಸುಗ್ರೀವನ ಗಾಬರಿಯನ್ನು ಧ್ವನಿಸುತ್ತದೆಂದು ಹೇಳಬಹುದು!
ಸುಗ್ರೀವನ ಸಂಕಟವನ್ನೆಲ್ಲ ಕೇಳಿದ ರಾಮನು “ಎಲ್ಲಿಯವರೆಗೆ ವಾಲಿಯು ತನ್ನ ಕಣ್ಣಿಗೆ ಬೀಳುವುದಿಲ್ಲವೋ ಅಲ್ಲಿಯವರೆಗೆ ಮಾತ್ರ ಆ ಕೆಟ್ಟ ನಡತೆಯವನು ಬದುಕಿರುತ್ತಾನೆ” ಎಂದು ಸಮಾಧಾನ ಹೇಳುತ್ತಾನೆ: ಯಾವತ್ತಂ ನಾಭಿಪಶ್ಯಾಮಿ ತವ ಭಾರ್ಯಾಪಹಾರಿಣಮ್ | ತಾವತ್ಸ ಜೀವೇತ್ ಪಾಪಾತ್ಮಾ ವಾಲೀ ಚಾರಿತ್ರ್ಯದೂಷಕಃ (೧೦.೩೩). ಈ ಮಾತು ನಮ್ಮ ಇಂದಿನ ವಾಗ್ರೂಢಿಗಳನ್ನೇ ನೆನಪಿಸುವಂತಿದೆ.
ದುಂದುಭಿಯು ವಾಲಿಯನ್ನು ಗೇಲಿ ಮಾಡುವಾಗ, “ನನ್ನೊಡನೆ ಯುದ್ಧಕ್ಕೆ ಮುನ್ನ ನೀನು ನಿನ್ನ ವಾನರಬಂಧುಗಳನ್ನೆಲ್ಲ ಅಪ್ಪಿ ಬಹೂಕರಿಸಿ ಬೀಳ್ಗೊಟ್ಟು ಬಾ” ಎನ್ನುತ್ತಾನೆ: ದೀಯತಾಂ ಸಂಪ್ರದಾನಂ ಚ ಪರಿಷ್ವಜ್ಯ ಚ ವಾನರಾನ್ | ಸರ್ವಶಾಖಾಮೃಗೇಂದ್ರಸ್ತ್ವಂ ಸಂಸಾದಯ ಸುಹೃಜ್ಜನಮ್ (೧೧.೩೪). ಇಲ್ಲಿ “ಸಂಪ್ರದಾನ” ಮತ್ತು “ಸಂಸಾದಯ” ಶಬ್ದಗಳಿಗೆ “ಉಡುಗೊರೆ” ಹಾಗೂ “ಬೀಳ್ಕೊಡು” ಎಂಬ ಅರ್ಥಗಳುಂಟು. ಇವು ಹೆಚ್ಚಾಗಿ ವಾಗ್ರೂಢಿಗೆ ಸಂಬಂಧಿಸಿವೆ. ಎರಡನೆಯ ಶಬ್ದಕ್ಕೆ “ಸಂಸಾಧಯ” ಎಂಬ ಪಾಠಾಂತರವೂ ಉಂಟು. ಇದು ಬೀಳ್ಕೊಡುಗೆಯನ್ನು ನೇರವಾಗಿ ಹೇಳುತ್ತದೆ. ಇಲ್ಲಿಯೇ ವೀರಪಾಣಮ್ (೧೧.೩೮) ಎಂಬ ಶಬ್ದ ಬಳಕೆಯಾಗಿದೆ. ಇದು ಯುದ್ಧದಲ್ಲಿ ವೀರಯೋಧರು ಉತ್ಸಾಹವರ್ಧನೆಗಾಗಿ ಮಾಡುತ್ತಿದ್ದ ಮದ್ಯಪಾನದ ಹೆಸರು. ಯಾವುದು ಕರ್ತವ್ಯಚ್ಯುತರಾಗುವ ಮಟ್ಟಿಗೆ ಅಮಲೇರದ ಹಾಗೆ ಸ್ವೀಕರಿಸಬೇಕಾದ ಉತ್ತೇಜಕಪಾನವೋ ಅದುವೇ “ವೀರಪಾಣ”.
ವಾಲಿಯೊಡನೆ ಸೆಣಸುವ ಸುಗ್ರೀವನು ಬವಳಿ ಬಸವಳಿದು ದಿಕ್ಕುದಿಕ್ಕು ನೋಡುತ್ತಿದ್ದನೆಂಬ ವರ್ಣನೆ ಬರುತ್ತದೆ: ಪ್ರೇಕ್ಷಮಾಣಂ ದಿಶಃ (೧೬.೩೧). ಇದು ಇಂದಿಗೂ ಬಳಕೆಯಲ್ಲಿರುವ ವಾಗ್ರೂಢಿ. ಇದರ ಸ್ವಾರಸ್ಯ ಸರ್ವವೇದ್ಯ.
ವಾಲಿಯು ರಾಮನನ್ನು ಆಕ್ಷೇಪಿಸುವಾಗ “ನೀನು ನಿನ್ನೊಡನೆ ಯುದ್ಧಕ್ಕೆ ಬಾರದಿದ್ದ ನನ್ನನ್ನು ಕೊಂದಿರುವೆ” ಎನ್ನುತ್ತಾನೆ. ಆಗ ಪರಾಙ್ಮುಖವಧ (೧೭.೧೫) ಎಂಬ ಪದ ಬಳಕೆಯಾಗಿದೆ. ಬಹ್ವರ್ಥಗ್ರಾಸಿಯಾದ ಈ ಮಾತು ತನ್ನ ಅಡಕ ಮತ್ತು ಮೊನಚುಗಳಿಂದ ರಸ್ಯವೆನಿಸಿದೆ. ಇಲ್ಲಿಯೇ ಅವನು ರಾಮನನ್ನು ಧರ್ಮಧ್ವಜ (೧೭.೨೦) ಎಂದು ನಿಂದಿಸುತ್ತಾನೆ. ಮನ್ವಾದಿಸ್ಮೃತಿಗಳಲ್ಲಿ ಪ್ರಸಿದ್ಧವಾದ ಈ ಮಾತು ಸಶಕ್ತ ವಾಚೋಯುಕ್ತಿಗಳಲ್ಲಿ ಒಂದು. ಪತಾಕೆಯು ಅಂಗೈಯಗಲದಲ್ಲಿ ನೆಲೆಯೂರಿದ ಕಂಬದ ಮೇಲೆ ನಿಂತು ಹಾರಾಡುತ್ತ ಗಾವುದ-ಗಾವುದ ದೂರದಿಂದಲೂ ತನ್ನ ಅಸ್ತಿತ್ವವನ್ನು ಸಾರುತ್ತದಷ್ಟೆ. ಇದೇ ರೀತಿ ಸ್ವಲ್ಪಮಾತ್ರದ ಒಳಿತಿನಲ್ಲಿ ನಿಂತು ತುಂಬ ಆಡಂಬರ ಮಾಡುವವರನ್ನು “ಧರ್ಮಧ್ವಜ”ರೆಂದು ಹೀಗಳೆಯುವುದುಂಟು. ಇಂಥದ್ದೇ ಅರ್ಥವುಳ್ಳ ಮತ್ತೊಂದು ಮಾತು ಧರ್ಮಲಿಂಗಪ್ರತಿಚ್ಛನ್ನ (೧೭.೨೬). ಧಾರ್ಮಿಕವಾದ ವೇಷದೊಳಗೆ ತಮ್ಮನ್ನು ಮರೆಮಾಚಿಕೊಂಡವರನ್ನು ಹೀಗೆ ಹಳಿಯುತ್ತಾರೆ. ವಾಲಿ ಮತ್ತೂ ಮುಂದುವರಿದು “ರಾಜರ ವರ್ತನೆಗಳು ಗೋಜಲಾಗಬಾರದು” ಎಂದು ಹೇಳುತ್ತಾನೆ: ರಾಜವೃತ್ತಿರಸಂಕೀರ್ಣಾ (೧೭.೩೧). ಇಲ್ಲಿ “ಅಸಂಕೀರ್ಣ” ಎಂಬ ಪದವು ಲಾಕ್ಷಣಿಕವಾಗಿ ಬಳಕೆಯಾಗಿದೆ.
ವಾಲಿ ಸಾಯುವ ಮುನ್ನ ರಾಮನನ್ನು ಹೀಗೆ ಬೇಡಿಕೊಳ್ಳುತ್ತಾನೆ: “ನನ್ನ ತಪ್ಪಿಗಾಗಿ ಸುಗ್ರೀವನು ತಾರೆಯನ್ನು ತಪ್ಪನ್ನೆಸಗಿದವಳೆಂಬಂತೆ ಭಾವಿಸಿಯಾನು; ಹಾಗೆ ಆಗದಂತೆ ನೀನು ದಯಮಾಡಿ ಗಮನಿಸಿಕೋ”. ಈ ಸಂದರ್ಭದಲ್ಲಿ ಮದ್ದೋಷಕೃತದೋಷಾಮ್ (೧೮.೫೬) ಎಂಬ ಸಮಾಸವನ್ನು ಆದಿಕವಿಗಳು ಬಳಿಸಿದ್ದಾರೆ. ಇದರ ಅರ್ಥವನ್ನು ತಾತ್ಪರ್ಯದಿಂದ ಗ್ರಹಿಸಬೇಕು. ಇಲ್ಲಿ ಆಡುನುಡಿಯ ಸಲುಗೆ ಕಾಣಸಿಗುತ್ತದೆ.
ವಾಲಿಯ ಮರಣದ ಬಳಿಕ ವಾನರರು ತಾರೆಗೆ ಹೀಗೆ ಎಚ್ಚರಿಕೆ ಹೇಳುತ್ತಾರೆ: “ನಿನ್ನ ಮಗನಿನ್ನೂ ಬದುಕಿರುವ ಕಾರಣ ನೀನು ಎಲ್ಲಿಗಾದರೂ ಪಲಾಯನ ಮಾಡಿ ಮಗನನ್ನು ಉಳಿಸಿಕೋ”: ಜೀವಪುತ್ರೇ ನಿವರ್ತಸ್ವ ಪುತ್ರಂ ರಕ್ಷಸ್ವ ಚಾಂಗದಮ್ (೧೯.೧೧). ಇಲ್ಲಿ ಬಳಕೆಯಾಗಿರುವ “ಜೀವಪುತ್ರಾ” ಎಂಬ ಸಮಾಸವು ತುಂಬ ವಿಲಕ್ಷಣ. ಇದು ವಾಗ್ರೂಢಿಯತ್ತ ತನ್ನ ತೋರ್ಬೆರಳನ್ನು ಚಾಚುತ್ತದೆ. ಇದೇ ರೀತಿ ವಾಲಿಯನ್ನು ಕುರಿತು ಶೋಕಿಸುವ ತಾರೆ ಅವನನ್ನು ಪ್ರಿಯಪುತ್ರ (೨೦.೨೪) ಎಂದು ಸಂಬೋಧಿಸುವ ಪರಿಯೂ ಗಮನಾರ್ಹ. ಮೇಲ್ನೋಟಕ್ಕಿದು “ಪ್ರೀತಿಪಾತ್ರನಾದ ಮಗನೇ” ಎಂಬ ಕರ್ಮಧಾರಯಸಮಾಸಮೂಲದ ಸಂದರ್ಭೋಚಿತವಲ್ಲದ ಅರ್ಥವನ್ನು ನೀಡಿದರೂ ಬಹುವ್ರೀಹಿಸಮಾಸದ ಮೂಲಕ “ಪ್ರೀತಿಪಾತ್ರನಾದ ಪುತ್ರನನ್ನು ಉಳ್ಳವನೇ” ಎಂಬ ಇಷ್ಟಾರ್ಥವೇ ಸಲ್ಲುತ್ತದೆ.
ವಾಲಿಯ ಸಾವಿಗಾಗಿ ದುಃಖಿಸುತ್ತಿದ್ದ ಸುಗ್ರೀವಾದಿಗಳನ್ನು ಸಾಂತ್ವಯಿಸುತ್ತ ರಾಮನು “ಇನ್ನು ಅತ್ತಿದ್ದು ಸಾಕು” ಎನ್ನುತ್ತಾನೆ: ಕೃತಂ ವೋ ಬಾಷ್ಪಮೋಕ್ಷಣಮ್ (೨೫.೩). “ಕೃತಂ” ಎಂಬ ಶಬ್ದವು ಯಾವುದಾದರೂ ಕ್ರಿಯೆಯೊಡನೆ ಸೇರಿ ಬಂದಾಗ ಆ ಕ್ರಿಯೆಯನ್ನಿನ್ನು ಮುಂದುವರಿಸುವುದು ಬೇಡವೆಂಬ ಅರ್ಥ ಬರುತ್ತದೆ. ಇದು ಸಂಸ್ಕೃತದ ವಿಶಿಷ್ಟವಾಗ್ರೂಢಿಗಳಲ್ಲೊಂದು. ಇದೇ ಸಂದರ್ಭದಲ್ಲಿ ರಾಮನು “ಲೋಕವೆಲ್ಲ ಕರ್ಮಾನುಗುಣವಾಗಿ ಸಾಗುತ್ತದೆ; ಅದಕ್ಕೆ ಕಾಲವೇ ಪರಮಾಶ್ರಯ” ಎನ್ನುತ್ತಾನೆ: ಸ್ವಭಾವೇ ವರ್ತತೇ ಲೋಕಸ್ತಸ್ಯ ಕಾಲಃ ಪರಾಯಣಮ್ (೨೫.೫). ಇಲ್ಲಿ “ಪರಾಯಣ”ವೆಂಬ ಪದವು “ಶ್ರೇಷ್ಠವಾದ ದಾರಿ” ಎಂಬ ಯೌಗಿಕಾರ್ಥವನ್ನು ಹೊಂದಿದ್ದರೂ “ಕೊನೆಯ ನೆಲೆ” ಎಂಬ ಲಕ್ಷ್ಯಾರ್ಥದಲ್ಲಿಯೇ ಪ್ರಸಿದ್ಧ.
ಮುಂದೆ ರಾಮ-ಲಕ್ಷ್ಮಣರು ಮಾಲ್ಯವತ್ಪರ್ವತದ ಪ್ರಸ್ರವಣಗುಹೆಯಲ್ಲಿ ಮಳೆಗಾಲವನ್ನು ಕಳೆಯಬೇಕಾಗಿ ಬರುತ್ತದೆ. ಆಗ ರಾಮನು ಆ ಗುಹೆಯ ಬಳಿ ಪೂರ್ವಾಭಿಮುಖವಾಗಿ ಹರಿಯುವ ನದಿಯನ್ನು ತಮ್ಮನಿಗೆ ತೋರಿಸುತ್ತಾನೆ. ಈ ಸಂದರ್ಭದಲ್ಲಿ ಪ್ರಾಚೀನವಾಹಿನೀ (೨೭.೧೬) ಎಂಬ ಪದ ಪ್ರಯುಕ್ತವಾಗಿದೆ. ಇದರ ಅರ್ಥ ಹಳೆಯ ನದಿಯೆಂದಲ್ಲ, “ಪೂರ್ವದಿಕ್ಕಿನ ಕಡೆ ಹರಿಯುವ ನದಿ” ಎಂದು. ಇಂಥ ಅಪೂರ್ವಪ್ರಯೋಗಗಳು ರಾಮಾಯಣದಲ್ಲಿ ಸಾಕಷ್ಟಿವೆ.
ಸುಗ್ರೀವನು ರಾಮನ ಕಾರ್ಯಕ್ಕೆ ಮುಂದಾಗದೆ ಅಗ್ಗದ ಭೋಗಗಳಲ್ಲಿ ಮಗ್ನನಾಗಿದ್ದಾನೆಂಬುದನ್ನು ಒಕ್ಕಣಿಸುವಾಗ ಗ್ರಾಮ್ಯಸುಖ (೩೦.೭೦) ಎಂಬ ಪದ ಬಳಕೆಯಾಗಿದೆ. ಸಂಸ್ಕೃತದಲ್ಲಿ “ಗ್ರಾಮ್ಯ”ವೆಂಬ ಶಬ್ದಕ್ಕೆ ಹಳ್ಳಿಯಿಂದ ಬಂದದ್ದೆಂಬ ಯೌಗಿಕಾರ್ಥವು ಎಂದೋ ಲುಪ್ತವಾಗಿ “ಅಗ್ಗದ”, “ಅಸಂಸ್ಕೃತವಾದ”, “ಮರ್ಯಾದೆಯಿಲ್ಲದ” ಎಂಬೆಲ್ಲ ಲಾಕ್ಷಣಿಕಾರ್ಥಗಳು ನೆಲೆಯಾಗಿವೆ. ಈ ಹಿನ್ನೆಲೆಯಲ್ಲಿಯೇ ಇದು ನುಡಿಗಟ್ಟೆಂಬಂತೆ ಬಳಕೆಗೊಂಡಿದೆ.
ಸುಗ್ರೀವನ ಉದಾಸೀನತೆಗೆ ಮುನಿದ ರಾಮ ತನ್ನ ರೂಕ್ಷಸಂದೇಶವನ್ನು ಲಕ್ಷ್ಮಣನ ಮೂಲಕ ಕಳಹುವಾಗ “ನನ್ನ ರೋಷಕ್ಕೆ ಅನುಗುಣವಾದ ಈ ಮಾತನ್ನು ಅವನಿಗೆ ಹೇಳು!” ಎಂದು ಆರಂಭಿಸುತ್ತಾನೆ: ಮಮ ರೋಷಸ್ಯ ಯದ್ರೂಪಂ ಬ್ರೂಯಾಶ್ಚೈನಮಿದಂ ವಚಃ (೩೦.೮೦). ವಸ್ತುತಃ ಇಲ್ಲಿ “ಯದ್ರೂಪಂ” ಎಂಬುದು “ಅನುರೂಪಂ” ಎಂಬುದಕ್ಕೆ ಸಂವಾದಿ. ಇದೊಂದು ಆಡುನುಡಿಯ ಸೊಗಸೆನ್ನಬಹುದು.
ಲಕ್ಷ್ಮಣನು ಅಣ್ಣನ ಮಾತನ್ನು ಸುಗ್ರೀವನಿಗೆ ತಿಳಿಸಲು ಹೊರಟಾಗ ಆದಿಕವಿಗಳು ಆತನನ್ನು ಯಥೋಕ್ತಕಾರೀ (೩೧.೧೨) ಎಂದು ವರ್ಣಿಸುತ್ತಾರೆ. “ಹೇಳಿದಂತೆ ಮಾಡುವವನು” ಯಥೋಕ್ತಕಾರಿ. ಹೀಗೆ ದಾಪಿಟ್ಟು ಬರುತ್ತಿದ್ದ ಲಕ್ಷ್ಮಣನನ್ನು ಕಂಡ ಕಿಷ್ಕಿಂಧೆಯ ವಾನರರು ಗೇಲಿ ಮಾಡಿದರಂತೆ. ಅದನ್ನು ಆದಿಕವಿಗಳು ಕಿಲಕಿಲಾಂಚಕ್ರುಃ (೩೧.೩೯) ಎಂದು ಒಕ್ಕಣಿಸಿದ್ದಾರೆ. ಇಲ್ಲಿಯ “ಕಿಲಕಿಲ”ಶಬ್ದ ನಮಗೆಲ್ಲ ಪರಿಚಿತವಾದ, ಎಲ್ಲ ಭಾಷೆಗಳಿಗೂ ಸಲ್ಲುವ ಅನುಕರಣಶಬ್ದ. ಸ್ವಾರಸ್ಯವಿರುವುದು ಕಿಲಕಿಲ ಎಂದು ನಕ್ಕರೆಂಬುದಾಗಿ ಹೇಳದೆ, ಕಿಲಕಿಲ ಮಾಡಿದರೆಂದು ಹೇಳುವಲ್ಲಿ!
ಆದಿಕವಿಗಳು ಮುನಿದ ಲಕ್ಷ್ಮಣನನ್ನು ಕಂಡು ಅಂಜಿದ ಸುಗ್ರೀವನನ್ನು ಬಣ್ಣಿಸುವಾಗ, ಅವನು ಧರಿಸಿದ ಹೂವಿನ ಹಾರಗಳೆಲ್ಲ ಕಳವಳಿಸಿದ್ದವೆಂದು ಚಮತ್ಕರಿಸುತ್ತಾರೆ: ವ್ಯಾಕುಲಸ್ರಗ್ವಿಭೂಷಣಃ (೩೧.೪೧). ಜಡವಾದ ಹಾರಕ್ಕೆ ವ್ಯಾಕುಲತೆಯೆಂಬ ಜೀವಭಾವವನ್ನು ಆರೋಪಿಸಿರುವುದು ಇಲ್ಲಿಯ ಸ್ವಾರಸ್ಯ. ಇದು ಉಪಚಾರವಕ್ರತೆ. ಈ ಸಂದರ್ಭದಲ್ಲಿ ಹನೂಮಂತನು ಬಂದು ಸುಗ್ರೀವನಿಗೆ, “ಗೆಳೆಯರೇನೋ ಸಿಕ್ಕುವುದು ಸುಲಭ. ಆದರೆ ಗೆಳೆತನವನ್ನು ಉಳಿಸಿಕೊಳ್ಳುವುದು ಕಷ್ಟ. ಏಕೆಂದರೆ ಜನರ ಮನಸ್ಸು ಚಂಚಲ. ಅಲ್ಪ-ಸ್ವಲ್ಪ ಕಾರಣಗಳಿಗಾಗಿಯೇ ಮೈತ್ರಿ ಮುರಿಯುತ್ತದೆ” ಎಂದು ವಿವೇಕ ಹೇಳುತ್ತಾನೆ: ಸರ್ವಥಾ ಸುಕರಂ ಮಿತ್ರಂ ದುಷ್ಕರಂ ಪರಿಪಾಲನಮ್ | ಅನಿತ್ಯತ್ವಾತ್ತು ಚಿತ್ತಾನಾಂ ಪ್ರೀತಿರಲ್ಪೇऽಪಿ ಭಿದ್ಯತೇ (೩೨.೭). ಇಲ್ಲಿ ಮನಸ್ಸಿಗೆ ಅನಿತ್ಯತ್ವವನ್ನು ಚಂಚಲತೆಗೆ ಬದಲಾಗಿ ಕಲ್ಪಿಸಿರುವುದು ತುಂಬ ಸೊಗಸಾದ ನುಡಿಬೆಡಗು.
ತಾರೆಯು ಮುನಿದು ಬಂದ ಲಕ್ಷ್ಮಣನನ್ನು ಸಂತಯಿಸುವಾಗ “ನಿನಗೆ ಕಾಮದ ಕರಾಮತ್ತು ತಿಳಿಯದು” ಎನ್ನುತ್ತಾಳೆ: ನ ಕಾಮತಂತ್ರೇ ತವ ಬುದ್ಧಿರಸ್ತಿ (೩೩.೫೫). ಇಲ್ಲಿ “ಕಾಮತಂತ್ರ” ಎಂಬ ಪದಕ್ಕೆ ಕಾಮಶಾಸ್ತ್ರ, ಮನ್ಮಥನ ಕಪಟೋಪಾಯಗಳು, ಕಾಮುಕತೆಯ ಬಗೆಗಳು ಮುಂತಾದ ಅನೇಕಾರ್ಥಗಳುಂಟು. ಅನಂತರ ಅವಳು ಆತನನ್ನು ಅಂತಃಪುರದೊಳಗೆ ಕರೆದೊಯ್ಯುತ್ತಾಳೆ. ಲಕ್ಷ್ಮಣನು ಸ್ವಲ್ಪ ಹಿಂಜರಿದಾಗ “ಮಹಾವೀರ, ಅಡ್ಡಿಯಿಲ್ಲ, ಒಳಗೆ ಬಾ. ನಿನ್ನ ನಡತೆ ಶುದ್ಧವಾಗಿದೆ. ಕೆಟ್ಟ ನೋಟವಿಲ್ಲದೆ ಸ್ನೇಹಭಾವದಿಂದ ಸಜ್ಜನರು ಪರಸ್ತ್ರೀಯರನ್ನು ಕಾಣುವುದರಲ್ಲಿ ತಪ್ಪಿಲ್ಲ” ಎಂದು ಅನುನಯಿಸುತ್ತಾಳೆ: ತದಾಗಚ್ಛ ಮಹಾಬಾಹೋ ಚಾರಿತ್ರಂ ರಕ್ಷಿತಂ ತ್ವಯಾ | ಅಚ್ಛಲಂ ಮಿತ್ರಭಾವೇನ ಸತಾಂ ದಾರಾವಲೋಕನಮ್ (೩೩.೬೧). ಇಡಿಯ ಈ ಶ್ಲೋಕ ಸೊಗಸಾದ ಸಂವಾದಶೈಲಿಗೆ ಸಾಕ್ಷಿ.
ಸುಗ್ರೀವನನ್ನು ದಬಾಯಿಸುವ ಲಕ್ಷ್ಮಣ ಆತನನ್ನು “ಕಪ್ಪೆಯಂತೆ ವಟಗುಟ್ಟುವ ಸರ್ಪ” ಎಂದು ಹಳಿಯುತ್ತಾನೆ: ಸರ್ಪಂ ಮಂಡೂಕರಾವಿಣಮ್ (೩೪.೧೫). ಈ ಮಾತಿಗೆ ವ್ಯಾಖ್ಯಾನಕಾರರು ಹಲವು ಅರ್ಥಗಳನ್ನು ಮಾಡುತ್ತಾರೆ. ಕಪ್ಪೆಗಳನ್ನು ಕಬಳಿಸಲೆಳಸುವ ಹಾವು ಅವುಗಳನ್ನು ಆಕರ್ಷಿಸಲು ಅವುಗಳಂತೆಯೇ ವಟಗುಟ್ಟಿ ವಂಚಿಸುತ್ತವೆಂಬುದು ಒಂದು ಅರ್ಥ. ಹೀಗಲ್ಲದೆ, ಹಾವಿನ ಬಾಯಲ್ಲಿ ಕಪ್ಪೆ ಸಿಲುಕಿದಾಗ ಮರಣಭೀತಿಯಿಂದ ವಟಗುಟ್ಟುವ ಅದರ ಸದ್ದನ್ನು ಕೇಳಿದ ಜನರು ಹಾವೇ ವಟಗುಟ್ಟುತ್ತಿದೆಯೆಂದು ಭ್ರಮಿಸುವರೆಂಬುದಾಗಿ ಮತ್ತೊಂದು ಅರ್ಥ. ಒಟ್ಟಿನಲ್ಲಿ ಇದೊಂದು ಸ್ವಾರಸ್ಯಕರವಾದ ಲೌಕಿಕನಿದರ್ಶನ.