ಇಂಥ ಎಷ್ಟೋ ಸಂಗತಿಗಳನ್ನು ಧ್ವನಿಸುವಂಥ ಬೆಲೆಯುಳ್ಳ ವಿವರಣೆಯನ್ನು ಅಭಿನವಗುಪ್ತ ನೀಡಿದ್ದಾನೆ. ಅವನ ಪ್ರಕಾರ ಉಭಯಧರ್ಮಿಗಳೂ ಲೋಕಸ್ವಭಾವದಲ್ಲಿಯೇ ಪರಮಾರ್ಥತಃ ನೆಲೆಗೊಂಡಿವೆ. ಲೋಕವೆಂದರೆ ನಮ್ಮ ಸುತ್ತಣ ಜಗತ್ತು. ಇದು ಅಲ್ಲಿಯ ಜನಜೀವನದ ಸಕಲಾಂಶಗಳನ್ನೂ ಒಳಗೊಂಡಿದೆ. ಹೀಗಾಗಿ “ಪ್ರವೃತ್ತಿ”ಯಲ್ಲಿ ಸಾಮಾನ್ಯವಾಗಿ ತೋರಿಕೊಳ್ಳುವ ಎಲ್ಲ ಸಂಗತಿಗಳೂ ಇಲ್ಲಿಗೆ ಅನ್ವಯಿಸುತ್ತವೆ. ಆದುದರಿಂದ “ಲೋಕಧರ್ಮಿ”ಯು ಕೆಲವೊಂದಂಶಗಳಲ್ಲಿ “ಪ್ರವೃತ್ತಿ”ಗೆ ನಿಕಟಬಂಧು. ನಾಟ್ಯವು ಬಲುಮಟ್ಟಿಗೆ ಲೋಕಾಶ್ರಿತವಾದ ಕಾರಣ “ಲೋಕಧರ್ಮಿ”ಯೊಂದೇ ಪಾರಮ್ಯವನ್ನು ತಾಳುವುದೆಂದು ಹೇಳಬಹುದಾದರೂ ರಂಜನೋತ್ಕರ್ಷಕ್ಕಾಗಿ ರಂಗಪ್ರಯೋಗದ ನಿರ್ವಾಹಾನುಕೂಲತೆಗಾಗಿ ಅನುಸರಿಸುವ ಕವಿ-ನಟಪ್ರಸಿದ್ಧಸಮಯರೂಪದ ನಾಟ್ಯಧರ್ಮಿಗೂ ಎಡೆಯುಂಟು.
“ತಥಾ ಹಿ ಲೋಕಸ್ವಭಾವಮೇವಾನುವರ್ತಮಾನಂ ಧರ್ಮೀದ್ವಯಮ್ | ಲೋಕೋ ನಾಮ ಜನಪದವಾಸೀ ಜನಃ, ಜನಪದಶ್ಚ ದೇಶ ಏವ, ಸ ಚ ಪ್ರವೃತ್ತಿಕ್ರಮೇಣ ಪ್ರಪಂಚಿತಃ, ತತ್ಪ್ರಸಂಗೇನೈವ ತಾವದ್ಧರ್ಮ್ಯಾಯಾತಾ | ಸಾ ಚಾಂಗಿಕಶೇಷತಯಾ ವಕ್ತವ್ಯಾ | ಪ್ರಸಂಗಾಚ್ಚ ವಾಚಿಕಾಹಾರ್ಯಾದಿವಿಷಯಾಪ್ಯುಚ್ಯತೇ ತುಲ್ಯಲಕ್ಷಣತ್ವಾದಿತಿ | ಸಾ ಚ ದ್ವೇಧಾ | ಯದ್ಯಪಿ ಲೌಕಿಕಧರ್ಮವ್ಯತಿರೇಕೇಣ ನಾಟ್ಯೇ ನ ಕಶ್ಚಿದ್ಧರ್ಮೋऽಸ್ತಿ ತಥಾಪಿ ಸ ಯತ್ರ ಲೋಕಗತಪ್ರಕ್ರಿಯಾಕ್ರಮೋ ರಂಜನಾಧಿಕ್ಯಪ್ರಾಧಾನ್ಯಮಧಿರೋಹಯಿತುಂ ಕವಿನಟವ್ಯಾಪಾರೇ ವೈಚಿತ್ರ್ಯಂ ಸ್ವೀಕುರ್ವನ್ನಾಟ್ಯಧರ್ಮೀತ್ಯುಚ್ಯತೇ” (ಸಂ.೨, ಪು. ೧೬೨).
ಇಲ್ಲಿ ನಾವು ಗಮನಿಸಬೇಕಾದ ಸ್ವಾರಸ್ಯವೊಂದಿದೆ. ಲೋಕಧರ್ಮಿಯು “ಪ್ರವೃತ್ತಿ”ಗೆ ಎಷ್ಟೇ ನಿಕಟವಾಗಿದ್ದರೂ ಇದಕ್ಕಿಂತ ಮೂಲಭೂತವಾದ ವೃತ್ತಿಚತುಷ್ಟಯದ ಸರ್ವೋಚ್ಚಭಾಗವೆನಿಸಿದ ಸಾತ್ತ್ವತೀವೃತ್ತಿಯ ಜೀವಾಳವೂ ಲೋಕದಿಂದಲೇ—ಅರ್ಥಾತ್, ಲೋಕಜನಜೀವನದಿಂದಲೇ—ಬರುವ ಕಾರಣ ರಸಕ್ಕೆ ಆಯತನವಾದ ಸತ್ತ್ವವು “ಲೋಕಧರ್ಮಿ”ಯ ಸ್ವತ್ತೆನ್ನದೆ ವಿಧಿಯಿಲ್ಲ. ದಿಟವೇ, ಲೋಕ, ವೇದ ಮತ್ತು ಅಧ್ಯಾತ್ಮಗಳೆಂಬ ಮುರು ಪ್ರಮಾಣಗಳ ಪೈಕಿ “ಲೋಕಧರ್ಮಿ”ಯು ಲೋಕಪ್ರಮಾಣವನ್ನೂ “ನಾಟ್ಯಧರ್ಮಿ”ಯು ವೇದ(ನಾಟ್ಯಶಾಸ್ತ್ರೀಯಸಮಯ)ಪ್ರಮಾಣವನ್ನೂ ಹೆಚ್ಚಾಗಿ ಅನುಸರಿಸಿವೆಯೆಂದೂ ರಸದ ಕೇಂದ್ರಭೂತವಾದ ಸಾತ್ತ್ವಿಕಾಭಿನಯವು ಅಧ್ಯಾತ್ಮ(ಸ್ವಸಂವೇದನೆ)ಪ್ರಮಾಣಕ್ಕೆ ಸೇರುತ್ತದೆಂದೂ ಹೇಳಬಹುದು. ಆದರೆ “ಲೋಕಧರ್ಮಿ”ಯಲ್ಲಿ ನಾಟ್ಯಧರ್ಮಿಗಿಂತ ಅಧ್ಯಾತ್ಮದ ಅಂಶ ಹೆಚ್ಚಾಗಿರುತ್ತದೆಂಬುದು ಸಹೃದಯಸಂವೇದ್ಯ. ಈ ಕಾರಣದಿಂದಲೇ ಕಲಾರಸಿಕರಿಗೆ ವಿವಿಧಕಲೆಗಳಲ್ಲಿ ಲೋಕಧರ್ಮಿಯ ಸೂಕ್ಷ್ಮಗಳನ್ನು ಗಮನಿಸಿದಾಗ ಹೆಚ್ಚಿನ ಆನಂದವಾಗುತ್ತದೆ. ಅಷ್ಟೇಕೆ, ನಾಟ್ಯಧರ್ಮಿಯ ಶಿಸ್ತು ಮಿಗಿಲಾಗಿರುವ ಅಭಿಜಾತಕಾವ್ಯ-ಚಿತ್ರ-ಶಿಲ್ಪ-ನೃತ್ಯಗಳಲ್ಲಿಯೂ “ಲೋಕಧರ್ಮಿ”ಯು ಮಿಂಚಿದಾಗ ಉಂಟಾಗುವ ಸ್ವಾರಸ್ಯ ಹೆಚ್ಚಿನದು. ಇದಕ್ಕೆ ಕಾರಣ ಲೋಕಧರ್ಮಿಯ ಸತ್ತ್ವಾಧಿಕ್ಯವೆಂಬುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕವಿ-ಕಲಾವಿದರ ಪ್ರತಿಭಾಶಕ್ತಿ ಕೂಡ. ಏಕೆಂದರೆ “ನಾಟ್ಯಧರ್ಮಿ”ಯು ಶಾಸ್ತ್ರಗತವಾದ (ವೇದಪ್ರಮಾಣವನ್ನು ಅನುಸರಿಸಿದ) ನಿಯಮಗಳನ್ನು ಶ್ರದ್ಧೆಯಿಂದ ಪಾಲಿಸುವುದಷ್ಟೇ ಆಗಿದೆ. ಇದೊಂದು ಬಗೆಯಲ್ಲಿ ಶುಕಪಾಠ. ದಿಟವೇ, ಇದಕ್ಕೆ ಪರಿಶ್ರಮ ಬೇಕು; ಅಭ್ಯಾಸ ಬೇಕು; ವ್ಯಾಸಂಗ-ವ್ಯುತ್ಪತ್ತಿಗಳೂ ಬೇಕು. ಆದರೆ ಪ್ರತಿಭೆ ಅಷ್ಟಾಗಿ ಬೇಕಿಲ್ಲ. ಈ ಕಾರಣದಿಂದಲೇ “ನಾಟ್ಯಧರ್ಮಿ”ಯು ಅದೆಷ್ಟೇ ಅಂದ-ಚಂದ-ಔಚಿತ್ಯ-ಅಲಂಕಾರಗಳ ಪರಿಷ್ಕಾರವನ್ನು ಹೊಂದಿದ್ದರೂ ಕಲೆಯೊಂದರ ರೂಪಸ್ತರದಲ್ಲಿಯೇ ಹೆಚ್ಚಾಗಿ ವಿಜೃಂಭಿಸುವುದಲ್ಲದೆ ಸ್ವರೂಪಸ್ತರದಲ್ಲಲ್ಲ. ಅದೇನಿದ್ದರೂ ಲೋಕಧರ್ಮಿಯ ಆಡುಂಬೊಲ. ಈ ರಸರಹಸ್ಯವನ್ನು ಅರಿಯದ ಪಾಠಮಾತ್ರಪ್ರತಿಷ್ಠಿತರಾದ ಶಾಸ್ತ್ರಶುಂಠರು ಮಹಾಪ್ರತಿಭಾಶಾಲಿಗಳಾದ ಅಭಿಜಾತಕಲಾವಿದರ “ಲೋಕಧರ್ಮೀ”ನಿರ್ವಾಹಧೌರೇಯತೆಯನ್ನು ಕಂಡು ಕರುಬುತ್ತಾರೆ, ವ್ಯಾವಹಾರಿಕವಾದ ಬಲವಿದ್ದಲ್ಲಿ ಹಳಿದು ಅವರ ಹುಟ್ಟಳಿಸಲೂ ಹವಣಿಸುತ್ತಾರೆ. ಆದರೆ ಔಚಿತ್ಯವಿಲ್ಲದೆ ಅನುಷ್ಠಿಸಿದ “ಲೋಕಧರ್ಮಿ”ಯು ಕಲಾಗಾಂಭೀರ್ಯವನ್ನೇ ಕಲಕಿ ಬಗ್ಗಡ ಮಾಡುವುದುಂಟು. ಇಂಥ ಸಂನಿವೇಶಗಳಲ್ಲಿ ಅಶ್ಲೀಲತೆ ಮತ್ತು ಅಪಹಾಸ್ಯಗಳಲ್ಲಿ ಕಲಾಪ್ರಯೋಗವು ಅಸ್ತಂಗತಿಸುತ್ತದೆ. ಆದುದರಿಂದ “ನಾಟ್ಯಧರ್ಮಿ”ಯ ಅತಿರೇಕವು ಶ್ರದ್ಧಾಜಾಡ್ಯವೆನಿಸಿದರೆ “ಲೋಕಧರ್ಮಿ”ಯ ಅತಿರೇಕವು ಲಾಘವರೂಷಿತವೆನಿಸುತ್ತದೆ. ಉಭಯಥಾ ರಸಹಾನಿ. ಮೊದಲಿನ ಬಗೆಯು ರಸಸಿದ್ಧಿಯೆಂಬ ಅಚ್ಛೋದಸರಸ್ಸನ್ನು ಸಮೀಪಿಸದೆ ಶುಷ್ಕಶಾಸ್ತ್ರದ ಮರುಧರೆಯಲ್ಲಿ ಒಣಗಿದರೆ ಎರಡನೆಯ ಬಗೆಯು ಆ ಅಚ್ಛೋದಸರಸ್ಸನ್ನು ಸೇರಿಯೂ ಅಲ್ಲಿಯ ನಿರ್ಮಲಜಲವನ್ನು ಕೆಸರಾಗಿಸಿ ಜೌಗಿನಲ್ಲಿ ಜಾರುತ್ತದೆ. ನಾಟ್ಯಶಾಸ್ತ್ರ ಮತ್ತು ಅಭಿನಭಾರತಿಗಳೆರಡೂ “ಪಾತ್ರ” ಅಥವಾ “ಭೂಮಿಕೆ”ಗಳು “ಉತ್ತಮ”ವಾದಷ್ಟೂ ನಾಟ್ಯಧರ್ಮಿಯನ್ನು ಅಳವಡಿಸಿಕೊಂಡು “ನೀಚ”ವಾದಷ್ಟೂ ಲೋಕಧರ್ಮಿಯನ್ನು ಅನುಸರಿಸಿಕೊಂಡು ವರ್ತಿಸುತ್ತವೆಯೆಂದು ಅಭಿಪ್ರಾಯಪಡುತ್ತವೆ. ಇಲ್ಲಿ ವಿವಕ್ಷಿತವಾದ “ಉತ್ತಮ” ಮತ್ತು “ನೀಚ”ಪದಗಳು ಕೆಲಮಟ್ಟಿಗೆ ಸಮಾಜದ ಮೇಲು-ಕೀಳುಗಳಿಗೆ ಸಂಬಂಧಿಸಿವೆಯಾದರೂ ಹಾಗಲ್ಲದ ಅಂಶಗಳೂ ಸಾಕಷ್ಟಿವೆ. ತಾತ್ಪರ್ಯತಃ ಹೇಳುವುದಾದರೆ, ಹೆಚ್ಚು ಹೆಚ್ಚು ವಿದ್ಯೆ, ಸಂಸ್ಕಾರ, ಅಧಿಕಾರ ಮತ್ತು ಬಾಧ್ಯತೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಚಿತ್ರಿಸುವಾಗ ಸಹಜವಾಗಿಯೇ ಅಂಥವರಲ್ಲಿ ಪರಿನಿಷ್ಠಿತವಾದ ಸಂಯಮ, ಸಮತೋಲನ, ನಯ, ನವುರುಗಳು ಅವರನ್ನು ನಾಟ್ಯಧರ್ಮಿಯಂಥ ರಂಗಸಮಯ-ಸಂಪ್ರದಾಯಗಳಿಗೆ ಬದ್ಧವಾಗಿರುವಂತೆ ತೋರಿಸಲಾಗುತ್ತದೆ. ಇದು ಎಲ್ಲ ಕಾಲದಲ್ಲಿಯೂ ಸಾಮಾನ್ಯಸ್ತರದಲ್ಲಿ ಸ್ಥೂಲರೂಪವಾಗಿಯಾದರೂ ಕಾಣಬಹುದಾದ ತಥ್ಯ. ಇನ್ನು ಇವರಂತಲ್ಲದೆ ಹೆಚ್ಚಿನ ವಿದ್ಯೆ, ಸಂಸ್ಕಾರ, ಅಧಿಕಾರ ಮತ್ತು ಬಾಧ್ಯತೆಗಳನ್ನು ಹೊಂದಿರದ ವ್ಯಕ್ತಿಗಳನ್ನು ಚಿತ್ರಿಸುವಾಗ ಸಹಜವಾಗಿಯೇ ಅವರಲ್ಲಿರುವ ಮುಕ್ತತೆ, ಅಸಂತುಲನ, ರೂಕ್ಷತೆ ಮತ್ತು ಲಾಘವಗಳು ಇವರನ್ನೆಲ್ಲ ಲೋಕಧರ್ಮಿಯ ಮಾಧ್ಯಮಕ್ಕೆ ಬದ್ಧವಾಗಿಸುವಂತೆ ಮಾಡುತ್ತವೆ. ಈ ಅಂಶಗಳು ಸಹ ಇಂದಿನ ಸಮಾಜದಲ್ಲಿಯೂ ದೃಷ್ಟಚರ. ಹೀಗಾಗಿ ನಾಟ್ಯಶಾಸ್ತ್ರದ ಜಗತ್ತಿನಲ್ಲಿ ಮಾತ್ರ ಸಾಮಾಜಿಕವಾದ ಮೇಲು-ಕೀಳುಗಳಿವೆಯೆಂದು ಆರೋಪಿಸಲಾಗದು. ಇದು ಎಲ್ಲ ಕಾಲ-ದೇಶಗಳ—ಸಂವೇದನಶೀಲರು ಎಂದಿಗೂ ಸ್ವಾಗತಿಸದ—ವಿದ್ಯಮಾನ. ನಾಟ್ಯವು ನಮ್ಮೀ ಲೋಕದ ಅನುಕರಣ-ಅನುಕೀರ್ತನಗಳಾಗಬೇಕಾದ ಕಾರಣ ವಾಸ್ತವವನ್ನು ಅದು ನಿರಾಕರಿಸಬಾರದು. ಆದರೆ ಮತ್ತೂ ಒಂದು ಅಂಶವನ್ನು ನಾಟ್ಯಶಾಸ್ತ್ರವು ಗಮನಿಸಿದೆ: ಪಾತ್ರಗಳ ಸತ್ತ್ವವು ಹೆಚ್ಚಾದಷ್ಟೂ ಅವು ಲೋಕಧರ್ಮಿಯತ್ತ ವಾಲುತ್ತವೆ. ಈ ಅಂಶವನ್ನು ನಾವಿಗಾಗಲೇ ಚೆನ್ನಾಗಿ ಪರಿಶೀಲಿಸಿದ್ದೇವೆ. ಅಲ್ಲದೆ, ಪಾತ್ರಗಳಿಗೆ ಅವುಗಳ ಸಾಮಾಜಿಕಸ್ತರದ ನೀಚೋಚ್ಚಸ್ಥಾನಾತೀತವಾಗಿ ಅನನ್ಯತೆ-ವಿಶಿಷ್ಟತೆಗಳು ಕವಿ-ರೂಪಕನಿರ್ಮಾತೃವಿವಕ್ಷಿತವಾಗಿದ್ದಲ್ಲಿ ಯಾವುದೇ ಬಗೆಯ ಧರ್ಮಿಗಳಾಗಲಿ, ಅಂಥ ಪಾತ್ರಗಳ ಉದಾತ್ತತೆಯನ್ನು ಮಸಕಾಗಿಸವು. ಇದು ಪ್ರಧಾನವಾಗಿ ಇತಿವೃತ್ತಾಧೀನ. ಅಲ್ಲದೆ, ಕವಿಯ ಮನೋಧರ್ಮವು ಪ್ರಮುಖಪಾತ್ರವನ್ನಿಲ್ಲಿ ವಹಿಸದಿರದು. ಒಂದಂತೂ ದಿಟ: “ಉತ್ತಮ”ಪಾತ್ರಗಳಿಗೆ ಸರ್ವಥಾ ನಾಟ್ಯಧರ್ಮಿಯೆಂಬ ಯಮನಿಯಮವನ್ನು ಮಾಡಿಕೊಂಡಲ್ಲಿ ಅವು ರಸಸ್ಯಂದಿಯಾಗದೆ ಕೃತಕವೂ ಹಾಸ್ಯಾಸ್ಪದವೂ ಆಗದಿರವು. ಇಂಥ ಪಾತ್ರಗಳಿಂದ ಯಾವ ಘನಕಾರ್ಯ ತಾನೇ ಆದೀತು? ಘನವಾದ ಸಾಧನೆಯನ್ನು ಮಾಡಲಾಗದ ಪಾತ್ರವು ರಸಸಿದ್ಧಿಗೆ ಎಂಥ ಒತ್ತಾಸೆಯನ್ನು ನೀಡೀತು? ಎಷ್ಟೇ ಆಗಲಿ, ನಾಟ್ಯಧರ್ಮಿಯೊಂದು ಅಲಂಕಾರ, ಶಿಷ್ಟಾಚಾರ. ಅಲಂಕಾರ್ಯವೂ ಅಂತರಾಚಾರವೂ ಆದದ್ದು ಲೋಕಧರ್ಮಿಯ ಹೃದ್ಭಾಗವಾದ ಸತ್ತ್ವ. ಇದನ್ನು ಭರತಾಭನವಗುಪ್ತಾದಿಗಳೆಲ್ಲ ಚೆನ್ನಾಗಿ ಬಲ್ಲರು. ಆದರೆ ಅವರೂ ಕೆಲಮಟ್ಟಿಗೆ ತಮ್ಮ ಕಾಲಕ್ಕೆ ಸೀಮಿತರಾಗುವ ಕಾರಣ ಆಧುನಿಕರಿಗೆ ಸ್ವಲ್ಪ ಮುಜುಗರ ತರಬಹುದು. ಇಂತಾದರೂ ಈ ಬಗೆಯ ಮುಜುಗರಗಳು ನಮ್ಮಿಂದಲೂ ಆಗುತ್ತವೆಂಬುದನ್ನು ಮರೆಯುವಂತಿಲ್ಲ. ಅಭಿನವಗುಪ್ತನು ಮತ್ತೂ ಮುಂದುವರಿದು ಲೋಕಧರ್ಮಿಯು ಲೋಕಧರ್ಮವನ್ನು ಮೂಲಭೂತವಾಗಿ ಹೊಂದಿರುವ ಕಾರಣ ನಾಟ್ಯಧರ್ಮಿಗೂ ಆಲಂಬನವಾಗಿದೆಯೆಂದು ಗುರುತಿಸಿ ಜಗದ್ವ್ಯಾಪಾರವೆಲ್ಲ ಈ ಮೂಲಕ ನಿರೂಪಿತವಾಗುತ್ತದೆಂದು ತಿಳಿಸುತ್ತಾನೆ. ಅದೇ ರೀತಿ, ರಂಗಕ್ಕೆ ಬಂದೊಡನೆಯೇ ಇವೆಲ್ಲಕ್ಕೂ ಅದೊಂದು ಬಗೆಯ ನಟನೀಯತೆ ಇರುವ ಕಾರಣ ನಾಟ್ಯಧರ್ಮಿಯ ಅಂಕುರವಾಗುವುದೆಂದೂ ಗುರುತಿಸುತ್ತಾನೆ.
“ಲೌಕಿಕಸ್ಯ ಧರ್ಮಸ್ಯ ಮೂಲಭೂತತ್ತ್ವಾನ್ನಾಟ್ಯಧರ್ಮಂ ವೈಚಿತ್ರ್ಯೋಲ್ಲೇಖ್ಯಭಿತ್ತಿಸ್ಥಾನೀಯತ್ವೇನ ಲೋಕಧರ್ಮೀಮೇವ ಲಕ್ಷಯತಿ ಸ್ವಭಾವಭಾವೋಪಗತಮಿತ್ಯಾದಿ | ಕಾಚಿತ್ತದ್ವಿಷಯಾ ಧರ್ಮೀ, ಕಾಚಿನ್ನಾಟ್ಯವಿಷಯಾ ... ಲೋಕವಾರ್ತಾ ಲೋಕಪ್ರಸಿದ್ಧಿಸ್ತಸ್ಯಾಂ ಯಾ ಕ್ರಿಯಾ ವ್ಯವಹಾರೋ ವೃತ್ತಾಂತಸ್ತಸ್ಯಾಃ ಶುದ್ಧಮೇವ ಕೃತ್ವಾ ಯುಕ್ತಂ ಯನ್ನಾಟ್ಯಂ ನಟನೀಯಂ ಕಾರ್ಯಂ ಸಾ ಲೋಕಧರ್ಮೀ | ಧರ್ಮ್ಯಾಸ್ತದ್ವತಶ್ಚಾಭೇದೋಪಚಾರಾತ್ಸಾಮಾನಾಧಿಕರಣ್ಯಮ್” (ಸಂ.೨, ಪು. ೧೬೨).
ಕವಿ-ಕಲಾವಿದರ ಯಥಾವಲ್ಲೋಕಚಿತ್ರಣವು ಲೋಕಧರ್ಮಿಯೆಂದು ಅಭಿನವಗುಪ್ತನ ಪರಿಶೀಲನೆ.
“ಯದಾ ಕವಿರ್ಯಥಾವೃತ್ತಂ ವಸ್ತುಮಾತ್ರಂ ವರ್ಣಯತಿ ನಟಶ್ಚ ಪ್ರಯುಂಕ್ತೇ ನ ತು ಸ್ವಬುದ್ಧಿಕೃತಂ ರಂಜನಾವೈಚಿತ್ರ್ಯಂ ತತ್ರಾನುಪ್ರವೇಶಯಂಸ್ತದಾ ತಾವಾನ್ಸ ಕಾವ್ಯಭಾಗಃ ಪ್ರಯೋಗಭಾಗಶ್ಚ ಲೋಕಧರ್ಮಾಶ್ರಯಃ, ಅತೋऽತ್ರ ಧರ್ಮೀ” (ಸಂ.೨, ಪು. ೧೬೩).
ಇಲ್ಲೊಂದು ಸ್ವಾರಸ್ಯಕರವಾದ ಶ್ರವ್ಯಕಾವ್ಯ-ದೃಶ್ಯಕಾವ್ಯಸಮಾಹಾರತತ್ತ್ವವನ್ನು ಅಭಿನವಗುಪ್ತನು ಧ್ವನಿಸಿದ್ದಾನೆ. ಇದನ್ನವನು “ಧ್ವನ್ಯಾಲೋಕಲೋಚನ”ದಲ್ಲಿ ಕಂಠೋಕ್ತವಾಗಿ ಹೇಳಿಯೂ ಇದ್ದಾನೆ. ಆ ಪ್ರಕಾರ ಶ್ರವ್ಯಕಾವ್ಯದ ಸ್ವಭಾವೋಕ್ತಿಯೇ ಲೋಕಧರ್ಮಿ, ವಕ್ರೋಕ್ತಿಯೇ ನಾಟ್ಯಧರ್ಮಿ.
“ಕಾವ್ಯೇऽಪಿ ಲೋಕನಾಟ್ಯಧರ್ಮೀಸ್ಥಾನೀಯೇನ ಸ್ವಭಾವೋಕ್ತಿವಕ್ರೋಕ್ತಿಪ್ರಕಾರದ್ವಯೇನಾಲೌಕಿಕಪ್ರಸನ್ನಮಧುರೌಜಸ್ವಿಶಬ್ದಸಮರ್ಪ್ಯಮಾಣವಿಭಾವಾದಿಯೋಗಾದಿಯಮೇವ ರಸವಾರ್ತಾ” (ಧ್ವನ್ಯಾಲೋಕಲೋಚನ, ೨.೪ರ ವ್ಯಾಖ್ಯೆ).
ಇಂಥ ಒಳನೋಟ ಯಾವುದೇ ಶಾಸ್ತ್ರಸಾಹಿತ್ಯಕ್ಕೆ ಹೆಮ್ಮೆಯನ್ನು ತರುವಂಥದ್ದು. ಭಾರತೀಯಕಾವ್ಯಮೀಮಾಂಸೆಯು ಹೇಗೆ ಯಾವುದೇ ಕಲಾಪ್ರಕಾರದ ರೂಪ-ಸ್ವರೂಪಗಳ ವಿಷಯದಲ್ಲಿ ರಸಬ್ರಹ್ಮವಿವರ್ತವಾದವನ್ನು ನಿರಂತರವಾಗಿ ನಚ್ಚಿದೆಯೆಂಬುದನ್ನು ಈ ತೆರೆನಾದ ವಿಶ್ಲೇಷಣೆಗಳು ಸಮರ್ಥಿಸುತ್ತಿವೆ. ಮುಂದೆ ಅಭಿನವಗುಪ್ತನು ಎಲ್ಲ ಬಗೆಯ ಅಭಿನಯಗಳಲ್ಲಿಯೂ ನಾಟ್ಯಧರ್ಮಿಯ ನಯಕ್ಕೆ ಅವಕಾಶವಿರುವುದನ್ನು ನಿರೂಪಿಸುತ್ತ ಸ್ತ್ರೀಪಾತ್ರವನ್ನು ಪುರುಷರೂ ಪುರುಷಪಾತ್ರವನ್ನು ಸ್ತ್ರೀಯರೂ ವಹಿಸುವ ಅಂಶ ಕೂಡ ನಾಟ್ಯಧರ್ಮೀಮೂಲದ್ದೆಂದು ಹೇಳುತ್ತಾನೆ. ಈ ಸಂದರ್ಭದಲ್ಲಿ ತಮ್ಮದಲ್ಲದ ಲಿಂಗ(Gender)ವ್ಯಕ್ತಿಗಳಾಗುವ ಕಲಾವಿದರಿಗೆ “ಅಸ್ವಸ್ಥ”ರೆಂಬ ಅಭಿಧಾನವಿರುವುದನ್ನೂ ಸೂಚಿಸುತ್ತಾನೆ. “ಅಸ್ವಸ್ಥ”ರೆಂದರೆ ತಮ್ಮಲ್ಲಿ ತಾವಿಲ್ಲದವರೆಂದರ್ಥ. ಆದರೆ ಪರಮಾರ್ಥತಃ ಇದು ಲಿಂಗಾತಿರಿಕ್ತವಾಗಿ ಎಲ್ಲ ಭೂಮಿಕಾಭಿನಯಕ್ಕೂ ಅನ್ವಯಿಸುತ್ತದೆಂಬುದು ಅವಿಸ್ಮರಣೀಯ. ಆದರೆ ಸಾಮಾನ್ಯಾರ್ಥದಲ್ಲಿ ಸ್ತ್ರೀಯರು ಸ್ತ್ರೀಪಾತ್ರಗಳನ್ನೇ ಪುರುಷರು ಪುರುಷರ ಪಾತ್ರಗಳನ್ನೇ ವಹಿಸಿದರೆ ಅದು ಆಯಾ ಲಿಂಗವ್ಯಕ್ತಿಗಳ ಹಾವ-ಭಾವ-ಭಾಷಾ-ವೇಷಗಳ ನೈಜತೆಯ ಕಾರಣ ಲೋಕಧರ್ಮಿಯಾಗುವುದೆಂದು ಒಪ್ಪಬಹುದು.
“ಸ್ವರಾಲಂಕಾರಸಂಯೋಜನಯಾ ಯುಕ್ತಂ ಯತ್ರ ಚ ಪುರುಷೋ ನ ಸ್ವರೂಪೇ ತಿಷ್ಠತಿ, ಅಪಿ ತು ಸ್ತ್ರೀಬಲಮಾಶ್ರಯತಿ ಪ್ರಯೋಜ್ಯಃ ಪುರುಷೋ ಯತ್ರ ನ ಸ್ವರೂಪಸ್ಥಃ, ಅಪಿ ತು ಸ್ತ್ರಿಯಾ ಪ್ರಯುಜ್ಯತೇ ತನ್ನಾಟ್ಯಧರ್ಮೀ” (ಸಂ.೨, ಪು. ೧೬೩).
ಇವೆಲ್ಲದರ ಮಥಿತಾರ್ಥವೆಂಬಂತೆ ತನ್ನ ಗುರು ಭಟ್ಟತೌತನ ಶ್ಲೋಕವೊಂದನ್ನು ಉಲ್ಲೇಖಿಸುತ್ತಾನೆ. ಆ ಪ್ರಕಾರ ನಾಟ್ಯಧರ್ಮಿಯೊಂದು ತಂತ್ರ. ಅದು ಕವಿಕಥನದ ವರ್ಣನೆಯಂಥದ್ದು; ಅಭೂತವನ್ನು ಭೂತವೆಂಬಂತೆ, ಸಿದ್ಧವನ್ನು ಅಸಿದ್ಧವೆಂಬಂತೆ ಕಮನೀಯವಾಗಿ ಚಿತ್ರಿಸಬಲ್ಲ ಬಲ್ಮೆ. ಇದೆಲ್ಲ ನಾಟ್ಯಧರ್ಮಿಯ ಬಲ.
“ತದತ್ರಾಸ್ತಿ ನ ತತ್ರಾಸ್ಯ ಕವೇರ್ವರ್ಣನಮರ್ಹತಿ | ಯನ್ನಾಸಂಭವಿ ಯತ್ರ ಸ್ಯಾತ್ಸಂಭವ್ಯತ್ರ ತು ಧರ್ಮತಃ ||” (ಸಂ.೨, ಪು. ೧೬೩).
ಅವನು ಮತ್ತೂ ಮುಂದುವರಿದು, ನಾಟ್ಯಧರ್ಮಿಯು ಕೇವಲ ರಂಗತಂತ್ರಮಾತ್ರದಲ್ಲಿ ಪರ್ಯವಸಿಸದೆ ಸಮಗ್ರಪ್ರಯೋಗ-ನಿರ್ವಾಹದಲ್ಲಿಯೂ ಪರಿಣಾಮಕರಪಾತ್ರವನ್ನು ವಹಿಸಬಲ್ಲುದೆಂದು ವಿಸ್ತರಿಸುತ್ತಾನೆ. ಅಮೂರ್ತವಾದ ತತ್ತ್ವಗಳೂ ಕಲ್ಪನೆಗಳೂ ಜಡವಾದ ತರು-ಲತಾ-ನಗ-ನದೀತ್ಯಾದಿಗಳೂ ತಿರ್ಯಗ್ಜಂತುಗಳಾದ ಪ್ರಾಣಿ-ಪಕ್ಷಿಗಳೂ ರಂಗಸ್ಥಳದಲ್ಲಿ ಮಾನುಷರೂಪದಿಂದ ಪಾತ್ರಧಾರಿಗಳೇ ಆಗಿ ಬರಬಲ್ಲ ಸಾಧ್ಯತೆಯುಳ್ಳ ಸಾಂಕೇತಿಕಸ್ವಾರಸ್ಯ ಮತ್ತದರ ಮಹತ್ತರಪರಿಣಾಮಗಳನ್ನೂ ಸೋದಾಹರಣವಾಗಿ ಮನಮುಟ್ಟಿಸುತ್ತಾನೆ. ಹೀಗೆ ಅಭಿನವಗುಪ್ತನ ಅಂತರ್ದೃಷ್ಟಿ ಬಹುವ್ಯಾಪಕ. (ಸಂ.೨, ಪು. ೧೬೪). ಕಡೆಗೆ ನಾಟ್ಯಧರ್ಮಿಯೆಂಬುದು ಚತುರ್ವಿಧಾಭಿನಯದ ಚಿತ್ರವಾದರೆ ಲೋಕಧರ್ಮಿಯೆಂಬುದು ಆ ಚಿತ್ತಾರದ ಭಿತ್ತಿಯೆಂಬ ರೂಪಕವನ್ನೇ ನಮ್ಮ ಮುಂದಿರಿಸುತ್ತಾನೆ.
“ತದಯಮರ್ಥೋ ಯಸ್ಮಾತ್ಕವಿಗತಾ ನಾಟ್ಯಗತಾ ವಾಗಂಗಾಲಂಕಾರಚೇಷ್ಟಾ ನಾಟ್ಯಧರ್ಮೀರೂಪಾ ಸರ್ವಪ್ರಾಣವತೀ ... ಲೋಕಧರ್ಮಲಕ್ಷಣ ಉಕ್ತೋ ಭಿತ್ತಿಸ್ಥಾನೀಯತ್ವೇನ ನಾಟ್ಯಧರ್ಮ್ಯಾ ಸಹಜಸಂವಾದಿಕರ್ಮಣಃ | ಅಂಗಂ ಗುಣಾ ಲಕ್ಷಣಾನಿ ಚ, ಚೇಷ್ಟಾ ವರ್ತನಾರೂಪಾ, ಅಲಂಕಾರ ಉಪಮಾದಿಃ” (ಸಂ.೨, ಪು. ೧೬೫).
ಅಭಿನವಗುಪ್ತನು ಆಂಗಿಕಾಭಿನಯದ ಮುಖ್ಯಾಂಗಗಳಲ್ಲಿ ಒಂದಾದ ಹಸ್ತಗಳನ್ನು ಕುರಿತು ಹೇಳುವಾಗಲೇ ಧರ್ಮಿಗಳ ಬಗೆಗೂ ಮಿಗಿಲಾದ ಬೆಲೆಯುಳ್ಳ ವಿಚಾರಗಳನ್ನು ವ್ಯಕ್ತಪಡಿಸಿದ್ದಾನೆ. ಆ ಪ್ರಕಾರ ನಾಟ್ಯಧರ್ಮಿ ಮತ್ತು ಲೋಕಧರ್ಮಿಗಳಲ್ಲಿ ಮತ್ತೆ ಎರಡೆರಡು ಉಪವಿಭಾಗಗಳುಂಟು. ಲೋಕಧರ್ಮಿಯ ಎರಡು ಉಪವಿಭಾಗಗಳಿಗೆ ಬಾಹ್ಯ ಮತ್ತು ಆಂತರಗಳೆಂಬ ಅಭಿಧಾನವನ್ನೂ ಇತ್ತಿದ್ದಾನೆ. ಆಂತರಲೋಕಧರ್ಮಿಯು ಅಪ್ಪಟ ಸಾತ್ತ್ವಿಕಾಭಿನಯದ ಮೂಲಕ ಪ್ರೇರಿತವಾದ ಆಂಗಿಕವಾದರೆ (ಉದಾ: ವ್ಯಕ್ತಿಯೊರ್ವನು ಗರ್ವದಿಂದ ಬೀಗಿ ತಲೆಯೆತ್ತಿ, ಎದೆಸೆಟೆಸಿ ನಡೆಯುವುದು) ಬಾಹ್ಯಲೋಕಧರ್ಮಿಯು ಸಾಮಾನ್ಯವಾದ ಲೋಕಾನುಕರಣರೂಪದ ಆಂಗಿಕಚಲನವನ್ನು ಒಳಗೊಂಡದ್ದು. (ಉದಾ: ಅಂಗೈಗಳನ್ನೂ ಬೆರಳುಗಳನ್ನೂ ಬಳಸಿ ಕಮಲವೆಂಬಂತೆ ಬೊಗಸೆಯನ್ನು ಚಾಚುವುದು). ನಾಟ್ಯಧರ್ಮಿಯ ಎರಡು ಬಗೆಗಳಲ್ಲಿ ಒಂದು ಕೇವಲನೃತ್ತಕ್ಕೆ ಬಳಕೆಯಾಗುವಂಥದ್ದು (ಉದಾ : ಯಾವುದೇ ಅರ್ಥ, ಸೂಚನೆ, ಅಶಯ, ರಂಗಸಮಯಾದಿಗಳ ವಿವಕ್ಷೆಯಿಲ್ಲದೆ ಕೇವಲ ಶೋಭಾಮಾತ್ರಕ್ಕಾಗಿ ಮಾಡುವ ಅಂಗವಿಕ್ಷೇಪರೂಪಗಳಲ್ಲೊಂದಾದ ವ್ಯಾವರ್ತಿತ, ಪರಿವರ್ತಿತ, ಉದ್ವೇಷ್ಟಿತ ಮತ್ತು ಅಪವೇಷ್ಟಿತಗಳಂಥ ಹಸ್ತಕರಣಗಳು. ಇವು ಎಲ್ಲ ನೃತ್ತಹಸ್ತಗಳಿಗೂ ಮೂಲಮಾತೃಕೆಗಳು). ಮತ್ತೊಂದು ರಂಗಸ್ಥಲಸಮಯವಾಗಿ ಬಳಕೆಗೆ ಬರುವಂಥದ್ದು (ಉದಾ: ಪಾತ್ರವೊಂದು ತನ್ನ ಮಾತು ಮಿಕ್ಕವರಿಗೆ ಕೇಳದೆ ಯಾರೋ ಒಬ್ಬರಿಗೆ ಮಾತ್ರ ಹೇಳುವಾಗ ಅಥವಾ ತಾನೇ ಸ್ವಗತವನ್ನು ಹೇಳಿಕೊಳ್ಳುವಾಗ ವಿನಿಯೋಗಿಸುವ ಪತಾಕಾಹಸ್ತ). ಈ ಬಗೆಯ ವಿಭಾಗವಿವರಗಳನ್ನು ಮುಂದೆ ಧರ್ಮಿಗಳನ್ನು ಕುರಿತು ವಿಸ್ತರಿಸುವ ಹದಿಮೂರನೆಯ ಅಧ್ಯಾಯದಲ್ಲಿ ಹೇಳದಿರುವುದು ಚೋದ್ಯ. ಮಾತ್ರವಲ್ಲ, ಇದು ಭರಮುನಿಯ ಮೂಲದಲ್ಲಿಯೂ ಕಾಣದ ಮಹತ್ತ್ವದ ವಿವರ.
ಅಭಿನಯಸ್ಯ ದ್ವಿವಿಧೇತಿಕರ್ತವ್ಯತಾ ಲೋಕಧರ್ಮೀ ನಾಟ್ಯಧರ್ಮೀ ಚ | ಆದ್ಯಾ ದ್ವಿವಿಧಾಂತರಾ ಬಾಹ್ಯಾ ಚ | ತತ್ರಾಂತರಾ ಚಿತ್ತವೃತ್ತ್ಯರ್ಪಕತ್ವೇನಾನುಭಾವಸ್ಯ, ಯಥಾ ಗರ್ವೋऽಪ್ಯಹಮಿತಿ ತಜ್ಝೈರ್ಲಲಾಟದೇಶೋಚ್ಛ್ರಿತ ಇತಿ | ಕೇವಲಬಾಹ್ಯಾವಯವರೂಪಾ ವಾ, ಯಥಾ ಪದ್ಮಕೋಶಸ್ಯ ಕಥಮಪಿ ನಿರೂಪಣೇ | ನಾಟ್ಯಧರ್ಮ್ಯಪಿ ದ್ವಿಧಾ ನಾಟ್ಯೋಪಯೋಗಮೂಲಭೂತಕೈಶಿಕೀಸಂಪಾದನೋಚಿತಲೌಕಿಕಶೋಭಾಹೇತುರ್ಯಥಾವೇಷ್ಟಿತಾದಿಚತುರ್ವಿಧಕರಣರೂಪಾ | ಕಾಚಿತ್ವಂಶೇನ ಲೋಕಮುಪಜೀವತಿ ... ಏವಂ ಜನಾಂತಿಕಾದೌ ವಾಚ್ಯಮ್” (ಸಂ ೨, ಪು. ೧೮)
ಮೇಲಣ ವಿಚಾರವು ನಮಗೆ ಧರ್ಮಿಗಳ ವಿನಿಯೋಗ-ಔಚಿತ್ಯಗಳನ್ನು ಕುರಿತಂತೆ ಸ್ವಾರಸ್ಯಸೂಕ್ಷ್ಮಗಳನ್ನು ಚೆನ್ನಾಗಿ ಮನವರಿಕೆಮಾಡಿಕೊಡುವುದರಲ್ಲಿ ಸಂದೇಹವಿಲ್ಲ. ಈ ಸಂದರ್ಭದಲ್ಲಿ ನಾಟ್ಯಶಾಸ್ತ್ರವು ಹೇಳುವ “ಬಾಹ್ಯ” ಮತ್ತು “ಆಭ್ಯಂತರ”ವೆಂಬ ಎರಡು ಬಗೆಯ ಪ್ರಯೋಗಗಳ ಪರಾಮರ್ಶೆ ಅಪೇಕ್ಷಿತ. ಇವುಗಳನ್ನೇ “ಆವಿದ್ಧ” ಮತ್ತು “ಸುಕುಮಾರ”ಗಳೆಂಬ ರಂಗಪ್ರಯೋಗಗಳೊಡನೆಯೂ ಸಮೀಕರಿಸಬಹುದು. ಬಾಹ್ಯ ಮತ್ತು ಆವಿದ್ಧಪ್ರಯೋಗಗಳಲ್ಲಿ ಲೋಕಧರ್ಮೀಪಾರಮ್ಯವೂ ಆಭ್ಯಂತರ ಮತ್ತು ಸುಕುಮಾರಪ್ರಯೋಗಗಳಲ್ಲಿ ನಾಟ್ಯಧರ್ಮಿಯ ಮೇಲ್ಮೆಯೂ ಕಂಡುಬರುವುದೆಂದು ಭರತನ ಮತ (೧೩.೫೮-೬೫). ಆದರೆ ಇವುಗಳನ್ನು ಕುರಿತು ಅಭಿನವಗುಪ್ತನು ಹೆಚ್ಚಿನ ಬೆಳಕನ್ನು ಚೆಲ್ಲಿಲ್ಲ. ಈ ಬಗೆಯ ಸಮೀಕರಣಗಳು ಕೆಲಮಟ್ಟಿಗೆ ಅರ್ಥಪೂರ್ಣ. ಆದರೆ ಒಂದು ಹಂತದ ಬಳಿಕ ಇವನ್ನು ಬೆಳೆಸಲಾಗದು. ಇಂತಿದ್ದೂ ಭರತನ ಪರಿಶೀಲನಶಕ್ತಿ ಅತ್ಯದ್ಭುತ. ಏಕೆಂದರೆ, ಸುಕುಮಾರ ಮತ್ತು ಆಭ್ಯಂತರಪ್ರಯೋಗಗಳು ನಯ-ನಾಜೂಕಿನವೆನಿಸಿ ಅಭಿಜ್ಞರಿಗೆ ಮಾತ್ರ ಮುದಾವಹವಾದಾವು. ಆವಿದ್ಧ ಮತ್ತು ಬಾಹ್ಯಪ್ರಯೋಗಗಳಾದರೋ ಮುಕ್ತವಾದ ಕಾರಣ ಸಾಮಾನ್ಯರಿಗೂ ಸೊಗಯಿಸುತ್ತವೆ.