ಲಕ್ಷಣವಿವೇಚನೆ
ಭರತಮುನಿಯು ನಾಟ್ಯಶಾಸ್ತ್ರದ ಹದಿನಾರನೆಯ ಅಧ್ಯಾಯದಲ್ಲಿ ಯಾವುದೇ ರೂಪಕದ ಪಾಠ್ಯರಚನೆಗೆ ಅನುಕೂಲಿಸುವ ಸಾಹಿತ್ಯವಿದ್ಯಾಪ್ರಧಾನವಾದ ಕೆಲವೊಂದು ಅಂಶಗಳ ಚರ್ಚೆಗೆ ತೊಡಗುತ್ತಾನೆ. ಇವುಗಳ ಪೈಕಿ ತುಂಬ ಮುಖ್ಯವಾದದ್ದು ಮೂವತ್ತಾರು ಲಕ್ಷಣಗಳ ನಿರೂಪಣೆ. ಇವನ್ನು ವಿದ್ವಾಂಸರು ಅಲಂಕಾರ, ಗುಣ, ವಕ್ರತೆ ಮತ್ತು ಧ್ವನಿಪ್ರಕಾರಗಳಿಗೂ ಬೀಜಭೂತವಾದ ಕಾವ್ಯತತ್ತ್ವಗಳೆಂದು ಗುರುತಿಸಿದ್ದಾರೆ. ಯದ್ಯಪಿ ಇವುಗಳ ಸಂಯೋಜನೆಯಲ್ಲಿ ವ್ಯವಸ್ಥಿತವಾದ ಕ್ರಮವಾಗಲಿ, ಪರಿಷ್ಕಾರವಾಗಲಿ ಇಲ್ಲದಿದ್ದರೂ ಇವುಗಳಲ್ಲಿ ಅಡಗಿರುವ ತತ್ತ್ವ ಮತ್ತು ಅಲಂಕಾರಶಾಸ್ತ್ರದ ಮುಂದಿನ ಬೆಳೆವಣಿಗೆಯ ಹಿನ್ನೆಲೆಯಲ್ಲಿ ಇವು ನಮಗೆ ಧ್ವನಿಸುವ ಬಗೆಯನ್ನು ಕಂಡಾಗ ಭರತಮುನಿಯು ನಿಜಕ್ಕೂ ಮಹತ್ತ್ವದ ಸಂಗತಿಗಳನ್ನು ಹೇಳಿದ್ದಾನೆಂದು ತಿಳಿಯದಿರದು. ಇವುಗಳನ್ನು ಕುರಿತು ಈಗಾಗಲೇ ವಿ. ರಾಘವನ್[1], ಕೆ. ಕೃಷ್ಣಮೂರ್ತಿ[2] ಮುಂತಾದ ವಿದ್ವಾಂಸರು ವಿವೇಚಿಸಿರುವ ಕಾರಣ ವಿಸ್ತರಿಸುವುದು ಅನವಶ್ಯವಾದರೂ ಇವುಗಳನ್ನು ವ್ಯಾಖ್ಯಾನಿಸುವಲ್ಲಿ ಅಭಿನವಗುಪ್ತನು ತೋರಿರುವ ಅಂತರ್ದೃಷ್ಟಿಯನ್ನು ನಿರೂಪಿಸದಿದ್ದಲ್ಲಿ ಪ್ರಕೃತಲೇಖನವು ಅಪೂರ್ಣವಾಗುವ ಕಾರಣ ಈ ಪ್ರಕಲ್ಪವನ್ನು ಕೈಗೊಳ್ಳಲಾಗಿದೆ. ಮೊದಲಿಗೇ ದಂಡಿಯ “ಕಾವ್ಯಶೋಭಾಕರಾನ್ ಧರ್ಮಾನಲಂಕಾರಾನ್ಪ್ರಚಕ್ಷತೇ” ಎಂಬ ಮಾತಿನಂತೆ ಭರತನು ಹೇಳುವ:
“ವಿಭೂಷಣಂ ಚಾಕ್ಷರಸಂಹತಿಶ್ಚ ಶೋಭಾಯಮಾನೌ ಗುಣಕೀರ್ತನಂ ಚ | ಪ್ರೋತ್ಸಾಹನೋದಾಹರಣೇ ನಿರುಕ್ತಂ ಗುಣಾದಿವಾದೋತಿಶಯಶ್ಚ ಹೇತುಃ ||” (೧೬.೧)
ಎಂದು ಮೊದಲಾಗುವ ಲಕ್ಷಣಾಧ್ಯಾಯದ ವಿವೇಚನೆಗೆ ತೊಡಗುವ ಅಭಿನವಗುಪ್ತನು ಭರತನಿಂದ ದಂಡಿಯವರೆಗೆ ಸಾಗಿ ಬಂದ ಕಾವ್ಯಶೋಭಾಕರಸಂಗತಿಗಳನ್ನು ಕುರಿತು ಶಾಸ್ತ್ರಜ್ಞರಲ್ಲಿದ್ದ ಒಮ್ಮತವನ್ನು ತುಂಬ ಸೊಗಸಾಗಿ ಧ್ವನಿಸಿದ್ದಾನೆ. ಇದು ಬಹಳ ಮುಖ್ಯಸಂಗತಿ. ಏಕೆಂದರೆ ಸಾಮಾನ್ಯವಾಗಿ ಆಧುನಿಕವಿದ್ವಾಂಸರು ಹಲವರು ಭರತನ ನಾಟ್ಯಪ್ರಧಾನವೂ—ಅತ ಏವ ಸಕಲಕಲಾಕೇಂದ್ರಿತವೂ—ಆದ ರಸಪಾರಮ್ಯದ ವಿಚಾರಧಾರೆಗೂ ದಂಡಿ-ಭಾಮಹ-ವಾಮನ-ಉದ್ಭಟ-ರುದ್ರಟಾದಿಗಳ ಶ್ರವ್ಯಕಾವ್ಯಪ್ರಧಾನವೂ—ಅತ ಏವ ವಾಗರ್ಥಕೇಂದ್ರಿತವೂ—ಆದ ಉಕ್ತಿವೈಚಿತ್ರ್ಯಪಾರಮ್ಯದ ವಿಚಾರಧಾರೆಗೂ ವಿರೋಧ-ವಿಚ್ಛೇದಗಳನ್ನು ಕಾಣುತ್ತಾರೆ. ಆದರೆ ವಾಸ್ತವವಾಗಿ ಅಂಥ ಮತಭೇದಗಳು ಇಲ್ಲಿಲ್ಲ. ಇದು ಅಭಿನವಗುಪ್ತನ ಈ ಬಗೆಯ ಉಲ್ಲೇಖಗಳಿಂದ ಸ್ಪಷ್ಟವಾಗುತ್ತದೆ. ಅಭಿನವಗುಪ್ತನು ಕಾವ್ಯಶರೀರದ ಸಾಪೇಕ್ಷತೆಯನ್ನು ಚೆನ್ನಾಗಿ ಬಲ್ಲವನು. ಅಂತೆಯೇ ಸಾಪೇಕ್ಷವಾದರೂ ಅನಿವಾರ್ಯವಾದ ಕಾವ್ಯಶರೀರದ ಮಹತ್ತ್ವವನ್ನೂ ಅರಿತವನು. ಹೀಗಾಗಿ ಮೊದಲಿಗೇ ರಾಚನಿಕರೂಪಗಳ ಆನಂತ್ಯ ಹಾಗೂ ಅವುಗಳ ವಿಭಾಗಸಾಪೇಕ್ಷತೆಗಳ ವಾಸ್ತವವನ್ನು ಹೇಳಿಯೇ ತನ್ನ ಪೂರ್ವಾಚಾರ್ಯರನೇಕರು ಲಕ್ಷಣವನ್ನು ಕುರಿತು ತಳೆದ ಅಭಿಪ್ರಾಯಭೇದಗಳನ್ನು ಯಾದೃಚ್ಛಿಕವಾಗಿ ಒಕ್ಕಣಿಸುತ್ತಾನೆ. ಮೇಲ್ನೋಟಕ್ಕೆ ಇವುಗಳೆಲ್ಲ ಪರಸ್ಪರವಿರುದ್ಧವೆಂಬಂತೆ ಕಂಡರೂ ಅಂತರ್ದೃಷ್ಟಿಯಿಂದ ಪರಿಭಾವಿಸಿದಾಗ ಪ್ರತಿಯೊಂದೂ ಒಂದೊಂದು ಬಗೆಯಲ್ಲಿ ಅರ್ಥಪೂರ್ಣವಾಗಿದೆ. ಈ ಆಪಾತವಿರೋಧಕ್ಕೆ ಕಾರಣ ಕಾವ್ಯರೂಪದ ಸಾಪೇಕ್ಷತೆಯೇ.
“ನನು ಕಾವ್ಯಬಂಧಾಸ್ತು ಕರ್ತವ್ಯಾ ಇತ್ಯುಕ್ತಂ, ತತ್ರ ಗುಣಾಲಂಕಾರಾದಿರಿತಿ ವೃತ್ತಯಶ್ಚೇತಿ ಕಾವ್ಯೇಷು ಪ್ರಸಿದ್ಧೋ ಮಾರ್ಗೋ ಲಕ್ಷಣಾನಿ ತು ನ ಪ್ರಸಿದ್ಧಾನಿ ... ಸತ್ಯಮೇತತ್ | ಕಿಂ ತು ಕವೀನಾಂ ಕಾವ್ಯವಿರಚನವಿವೇಚನಸಾಮರ್ಥ್ಯಸಮರ್ಥನಾಯಾವಶ್ಯಂ ಕಾಲ್ಪನಿಕೋऽಪಿ ವಿಭಾಗ ಆಶ್ರಯಣೀಯಃ ... ತಲ್ಲಕ್ಷಣಂ ಯೇನ ಶರೀರಸ್ಯ ಸೌಂದರ್ಯಂ ಜಾಯತೇ | ತಚ್ಚ ಸಿದ್ಧರೂಪಂ ಸಾಧ್ಯರೂಪಂ ವಾ | ಯಥಾ ಶ್ಯಾಮೇತಿ ಮದಮಂಥರಗಾಮಿನೀತಿ ಚ | ಏತದೇವ ಲಕ್ಷಣಂ ತಚ್ಚಾಲಂಕ್ರಿಯತೇ | ಅಲಂಕಾರೈರ್ಯುಕ್ತಂ ಕಾವ್ಯಂ ಲಕ್ಷಣೈರ್ವಿನಾ ನ ಶೋಭತೇ | ...
ಅನ್ಯೇ ಮನ್ಯಂತೇ ಇತಿವೃತ್ತಖಂಡಕಾನ್ಯೇವ ಸಂಧ್ಯಂಗಕಾನಿ ವೃತ್ತ್ಯಂಗಕಾನಿ ಲಕ್ಷಣಾನೀತಿ ... ಶಬ್ದಾರ್ಥೋಪಸಂಸ್ಕಾರಕಲ್ಪಾನಿ ಕ್ರಿಯಾರೂಪಾಣಿ ಲಕ್ಷಣಾನಿ ... ಪ್ರಬಂಧಧರ್ಮಾ ಲಕ್ಷಣಾನಿ ಇತಿ ಕೇಚಿತ್ತು ಬ್ರುವತೇ | ಕವೇರಭಿಪ್ರಾಯವಿಶೇಷೋ ಲಕ್ಷಣಮಿತೀತರೇ ಪುನರ್ಮನ್ಯಂತೇ ... ಕೇಚಿದ್ಯಥಾಸ್ಥಾನವಿಶೇಷಂ ಯದ್ಗುಣಾಲಂಕಾರಯೋಜನಂ ಲಕ್ಷಣಮಿತಿ | ಪರೇ ತ್ವಭಾಷಂತ ಅಲಂಕಾರಾದಿನಿರಪೇಕ್ಷೇಣೈವ ನಿಸರ್ಗಸುಂದರೋ ಯೋऽಭಿನಯವಿಶೇಷಃ ಕಾವ್ಯೇಷು ದೃಶ್ಯತೇ ಅಮರುಕಶ್ಲೋಕೇಷ್ವಿವ ತತ್ಸೌಂದರ್ಯಹೇತುರ್ಯೋ ಧರ್ಮಃ ಸ ಲಕ್ಷಣಮ್ | ಸ ಏವ ಚಾರ್ಥಃ ಕಾವ್ಯಶರೀರವಿಶೇಷರೂಪೋ ಲಕ್ಷಣಮ್ ... ಅನ್ಯೇ ತು ಶಬ್ದೇನಾರ್ಥೇನ ಚಿತ್ರತ್ವಂ ಲಕ್ಷಣಮಿತಿ” (ಸಂ.೨, ಪು. ೨೧೩-೨೧೪).
ಕಡೆಗೆ ಮೂವತ್ತಾರು ಲಕ್ಷಣಗಳಲ್ಲಿ ಮುಖ್ಯವಾಗಿ ಕಾಣುವುದು ಅರ್ಥಾಲಂಕಾರಗಳ ಸ್ವಾರಸ್ಯವೇ[3] ಎಂದು ತನ್ನ ಗುರುವಾದ ಭಟ್ಟತೌತನ ಅಭಿಪ್ರಾಯವನ್ನು ಹೇಳಿ ಅಲ್ಲಿಯೂ ನಯವಾಗಿ ತನ್ನ ಮತವನ್ನು ಬೇರೊಂದು ರೀತಿ ವ್ಯಕ್ತಪಡಿಸುತ್ತಾನೆ:
“ಉಪಾಧ್ಯಾಯಮತಂ ತು ಲಕ್ಷಣಬಲಾದಲಂಕಾರಾಣಾಂ ವೈಚಿತ್ರ್ಯಮಾಗಚ್ಛತಿ ... ಆತಿಶಯನಾಮ್ನೋತಿऽಶಯೋಕ್ತಿಃ | ಮನೋರಥಾಖ್ಯೇನಾಪ್ರಸ್ತುತಪ್ರಶಂಸಾ | ಮಿಥ್ಯಾಧ್ಯವಸಾಯೇನಾಪಹ್ನುತಿಃ | ಸಿದ್ಧ್ಯಾ ತುಲ್ಯಯೋಗಿತೇತ್ಯೇವಮುತ್ಪ್ರೇಕ್ಷ್ಯಮ್ ... ಉಪಮಾಪ್ರಪಂಚಶ್ಚ ಸರ್ವೋऽಲಂಕಾರ ಇತಿ ... ಬಂಧೋ ಗುಂಫೋ ಭಣಿತಿರ್ವಕ್ರೋಕ್ತಿಃ ಕವಿವ್ಯಾಪಾರ ಇತಿ ಹಿ ಪರ್ಯಾಯಃ ... ಉಪ ಸಮೀಪೇ ಮಾನಂ ಪ್ರಕ್ಷೇಪಣಂ ನಿಮಿತ್ತಾಂತರೈರಪಿ ಸಂಭವತೀತ್ಯತ ಆಹ ಸಾದೃಶ್ಯೇನೇತಿ” (ಸಂ.೨, ಪು. ೨೩೩).
ಇಲ್ಲಿ ಅಭಿನವಗುಪ್ತನಿಗೆ ತನ್ನ ಗುರುವಿನ ನಿಲವು ಬಲುಮಟ್ಟಿಗೆ ಯುಕ್ತವೆನಿಸಿದರೂ ಅದು ಕೇವಲ ಶ್ರವ್ಯಕಾವ್ಯಮಾತ್ರಪಾರಮ್ಯದ್ದಾಯಿತು; ಉಳಿದೆಲ್ಲ ಕಲೆಗಳಿಗೆ ವ್ಯಾಪಿಸಲಿಲ್ಲವೆಂಬ ಕೊರತೆ ಕಂಡಿದೆ. ಏಕೆಂದರೆ ಭತನಂಥ ಮಹರ್ಷಿಯ ಲಕ್ಷಣಕಲ್ಪನವು—ಅರ್ಥಾತ್, ಕಲಾಶರೀರಸ್ವರೂಪವು—ಮತ್ತಷ್ಟು ವ್ಯಾಪಕವಾಗಿರಬೇಕು; ಎಲ್ಲ ಕಲೆಗಳಿಗೂ ಅನ್ವಯಿಸಬೇಕು; ಹೆಚ್ಚೇನು, ಸಕಲಕಲಾನಿರ್ಮಾಣದ ಕೊನೆಯ ಹಂತವಾದ ವಿಭಾವಾನುಭಾವಸಾಮಗ್ರೀಕಲ್ಪನೆಯ ಮಟ್ಟದಲ್ಲಿ ಲಕ್ಷಣವು ವ್ಯವಹರಿಸಬೇಕು. ಇಲ್ಲವಾದಲ್ಲಿ ಶಾಸ್ತ್ರಕ್ಕೆ ಸಮಗ್ರತೆ ಸಿದ್ಧಿಸದು. ಇದನ್ನು ತುಂಬ ಸುಂದರವಾಗಿ ತನ್ನ ನಿಲವಾಗಿ ಹೇಳುತ್ತಾನೆ. ವಸ್ತುತಃ ಇದನ್ನೇ ಭಟ್ಟತೌತನು ತನ್ನ “ಕಾವ್ಯಕೌತುಕ”ದಲ್ಲಿ ಸಂದರ್ಭಾಂತರವಶಾತ್ ಹೇಳಿಯೂ ಇದ್ದಾನೆ:
“ಅನುಭಾವವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ | ತೇಷಾಮೇವ ಪ್ರಯೋಗಸ್ತು ನಾಟ್ಯಂ ಗೀತಾದಿರಂಜಿತಮ್ ||” (ವ್ಯಕ್ತಿವಿವೇಕದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಪು. ೯೬).
ಆದುದರಿಂದ ಅಭಿನವಗುಪ್ತನ ಲಕ್ಷಣತತ್ತ್ವದ ಲಕ್ಷಣೀಕರಣ ತುಂಬ ವ್ಯಾಪಕವಾಗಿದೆ:
“ಯಥಾರಸಂ ಯೇ ಭಾವಾ ವಿಭಾವಾನುಭಾವವ್ಯಭಿಚಾರಿಣಸ್ತೇಷಾಂ ಯೋऽರ್ಥಸ್ತಂ ಸ್ಥಾಯಿಭಾವರಸೀಕರಣಾತ್ಮಕಂ ಪ್ರಯೋಜನಾಂತರಂ ಗತಾನಿ ಪ್ರಾಪ್ತಾನಿ, ಯದಾಭಿಧಾವ್ಯಾಪಾರೋಪಕ್ರಾಂತಾ ಉದ್ಯಾನಾದಯೋऽರ್ಥಾಸ್ತತ್ರ ಸವಿಶೇಷವಿಭಾವಾದಿರೂಪಂ ಪ್ರತಿಪದ್ಯಂತೇ ತಾನಿ ಲಕ್ಷಣಾನೀತಿ ಸಾಮಾನ್ಯಲಕ್ಷಣಮ್ | ಅತ ಏವ ಕಾವ್ಯೇ ಸಮ್ಯಕ್ ಪ್ರಯೋಜ್ಯಾನೀತಿ ವಿಷಯಸ್ತೇಷಾಮುಕ್ತಃ” (ಸಂ.೨, ಪು. ೨೧೫).
ಈ ದೃಷ್ಟಿಯಿಂದ ಕಂಡಾಗ ಲಕ್ಷಣಗಳು ಸಕಲಕಲೆಗಳಿಗೂ ಸಲ್ಲುವಂಥ ವಿಭಾವಾನುಭಾವಸಾಮಗ್ರೀಸಂಯೋಜನಯುಕ್ತಿಗಳು. ಇದನ್ನೇ ಕುಂತಕನು “ವಕ್ರತೆ” ಎಂದಿದ್ದಾನೆ. ಇನ್ನು ಶಬ್ದಾರ್ಥನಿಷ್ಠವಾದ ಶ್ರವ್ಯಕಾವ್ಯದ ರಚನೆಯಲ್ಲಿ ಇವು ಗುಣ-ಅಲಂಕಾರ-ರೀತಿಗಳ ಹಾಗೂ ಗುಣೀಭೂತವ್ಯಂಗ್ಯಗಳ ರೂಪವನ್ನು ಪಡೆಯುತ್ತವೆ. ಹೀಗೆ ಲಕ್ಷಣವು ಎಲ್ಲೆಡೆ ಸಲ್ಲುವಂತಾದರೆ ದೂಷಣವಾಗದೆ ಭೂಷಣವೇ ಹೌದೆಂದು ದೃಢವಾಗಿ ಸಾರುತ್ತಾನೆ:
“ನನ್ವೇವಂ ಸರ್ವತ್ರ ಲಕ್ಷಣಯೋಗಃ? ಕ ಆಕ್ಷೇಪಾರ್ಥಃ? ಪ್ರಿಯಮೇವ ಹ್ಯಸ್ಮಾಕಮದಃ; ತತ್ಸರ್ವಮಲಂಕಾರಯುಕ್ತಂ ಕಾವ್ಯಮ್” (ಸಂ.೨, ಪು. ೨೨೧).
ಇದನ್ನು ಮುಂದೆ ಧ್ವನಿವಿರೋಧಿಗಳೂ ಶಾಂತರಸವೈರಿಗಳೂ ಆದ ಧನಂಜಯ-ಧನಿಕರೂ ಸಮರ್ಥಿಸಿರುವುದು ಗಮನಾರ್ಹ. ಅಭಿನವಗುಪ್ತನು “ಸಾಮಾನ್ಯ” ಮತ್ತು “ವಿಶೇಷ”ವೆಂದು ಲಕ್ಷಣವನ್ನು ಇಬ್ಬಗೆಯಾಗಿ ವಿಭಾಗಿಸಿದ್ದಾನೆ. ರಸೋಚಿತವಾಗಿ ವಿಭಾವಾನುಭಾವಸಾಮಗ್ರಿಗಳ ಸಂಯೋಜನವಿಧಾನವೇ ಸಾಮಾನ್ಯಲಕ್ಷಣವೆಂದು ನಿರ್ವಚಿಸಿರುವುದು ತುಂಬ ವ್ಯಾಪಕವಾಗಿದೆ. ಈ ಪ್ರಕಾರ ಕಾವ್ಯದ ಸಮಸ್ತಸೌಂದರ್ಯಾಮ್ಶವೂ ಲಕ್ಷಣವೇ ಆಗುತ್ತದೆ:
“ಚಿತ್ತವೃತ್ತ್ಯಾತ್ಮಕಂ ರಸಂ ಲಕ್ಷಯಂಸ್ತತ್ತದ್ರಸೋಚಿತವಿಭಾವಾದಿವೈಚಿತ್ರ್ಯಸಂಪಾದಕಸ್ತ್ರಿವಿಧೋऽಭಿಧಾವ್ಯಾಪಾರೋ ಲಕ್ಷಣಶಬ್ದೇನೋಚ್ಯತೇ | ಇತ್ಯೇಷಾಂ ಸಾಮಾನ್ಯಲಕ್ಷಣಮ್” (ಸಂ.೨, ಪು. ೨೧೫).
ಇದಕ್ಕೆ ಪುಷ್ಟಿ ಕೊಡುವಂತೆ ಭಾಮಹನ ಪ್ರಸಿದ್ಧವಾದ ವಕ್ರೋಕ್ತಿತತ್ತ್ವವನ್ನು ಕೂಡ ಉಲ್ಲೇಖಿಸುತ್ತ ವ್ಯಂಜಕವ್ಯಾಪಾರವೇ ಲಕ್ಷಣವೆಂದು ನಿರೂಪಿಸುತ್ತಾನೆ:
“ಭಾಮಹೇನಾಪಿ ’ಸೈಷಾ ಸರ್ವತ್ರ ವಕ್ರೋಕ್ತಿರನಯಾರ್ಥೋ ವಿಭಾವ್ಯತೇ’ ಇತ್ಯಾದಿ | ತೇನ ಚ ಪರಮಾರ್ಥೇ ವ್ಯಾಪಾರ ಏವ ಲಕ್ಷಣಮ್” (ಸಂ.೨, ಪು. ೨೧೬).
ಹೀಗಿದ್ದಲ್ಲಿ ಲಕ್ಷಣಗಳ ಸಂಖ್ಯೆ ಮೂವತ್ತಾರೇ; ಮತ್ತವುಗಳ ಸ್ವರೂಪವು ಇಂತಿಂಥದ್ದೇ ಎಂದು ಭರತನಾದರೂ ಲೆಕ್ಕಾಚಾರದಂತೆ ಹೇಳಿದ್ದಾದರೂ ಹೇಗೆಂಬ, ಏಕೆಂಬ ಪ್ರಶ್ನೆ ಬರುತ್ತದೆ. ಅದಕ್ಕೆ ಅಭಿನವಗುಪ್ತನ ಸಮಾಧಾನ ಹೀಗಿದೆ: ಇಲ್ಲಿ ಸಂಖ್ಯೆ ಮುಖ್ಯವಲ್ಲ; ಕಾವ್ಯಸೌಂದರ್ಯಕಾರಕಗಳು ಅನಂತ. ಪ್ರಯೋಗದೃಷ್ಟ್ಯಾ ಕವಿಗಳಿಗೆ ಕೇವಲ ಈ ಬಗೆಯ ತತ್ತ್ವಗಳ ವ್ಯಾಪ್ತಿ ಗೊತ್ತಿರಬೇಕೆಂಬುದೇ ತಾತ್ಪರ್ಯ:
“ಷಟ್ತ್ರಿಂಶದಿತಿ ಚ ನಾನ್ಯದಿತಿ ವಾರಣಪರಂ ಕವಿಹೃದಯವರ್ತಿನಾಮಪರಾಣಾಮಪರಿಸಂಖ್ಯೇಯತ್ವಾತ್ | ಕಿಂ ತು ಬಾಹುಲ್ಯೇನ ತಾವದಿಯತಾ ಲಕ್ಷ್ಯಂ ವ್ಯಾಪ್ತಂ, ಇಯತಿ ಚ ಕವಿನಾವಧಾತವ್ಯಮಿತಿ ಸಂಖ್ಯಾನಿರೂಪಣಮ್” (ಸಂ.೨, ಪು. ೨೧೬).
ಇಷ್ಟಾಗಿಯೂ ಅಭಿನವಗುಪ್ತನು ತಾನೇ ಮಾಡಿದ ಲಕ್ಷಣತತ್ತ್ವದ ಎರಡನೆಯ ವಿಭಾಗವೆನಿಸಿದ “ವಿಶೇಷ”ದ ಲಕ್ಷಣವೇನೆಂದು ಕಂಠೋಕ್ತವಾಗಿ ಹೇಳಿಲ್ಲ. ಬಹುಶಃ ಮೂವತ್ತಾರು ಲಕ್ಷಣಗಳೇ “ವಿಶೇಷ”ದ ವರ್ಗಕ್ಕೆ ಬರುತ್ತವೆಂದೂ ಅವುಗಳ ಕ್ರಮಪ್ರಾಪ್ತವಾದ ಸೋದಾಹರಣವಿವರಣೆಯೇ ಪರ್ಯಾಪ್ತವೆಂದೂ ಭಾವಿಸಿದಂತೆ ತೋರುತ್ತದೆ.
ಟಿಪ್ಪಣಿಗಳು
[1] Raghavan, V. Studies on Some Concepts of the Alaṅkāraśāstra. Chennai: Adyar Library and Research Centre, 1973. pp. 1-52. [2] Krishnamoorthy, K. Indian Literary Theory: A Reappraisal. New Delhi: Meharchand Lacchmandass Publishers, 1985. pp. 122-130. [3] ತನ್ನ ಗುರುವಿನ ಅಭಿಪ್ರಾಯವನ್ನು ವಿಮರ್ಶಿಸುವಾಗಲೂ ಅಭಿನವಗುಪ್ತನು ಭಟ್ಟತೌತನ ವಿವರಣೆಯಲ್ಲಿರುವ ಹೊಳಹುಗಳನ್ನು ಗುರುತಿಸದಿರುವುದಿಲ್ಲ. ಅಷ್ಟೇಕೆ, ಲಕ್ಷಣದಲ್ಲಿರುವ ಅಲಂಕಾರತತ್ತ್ವದ ಸ್ವಾರಸ್ಯಗಳನ್ನು ಕುರಿತು ತಾನೇ ಮತ್ತಷ್ಟು ವಿಸ್ತರಿಸುತ್ತಾನೆ. ಉದಾಹರಣೆಗೆ: ಉಪಮೆಯು ರೂಪಕವಾಗುವುದು ಅಲ್ಲಿರುವ ವಾಚ್ಯವಾದ ಸಾಧಾರಣಧರ್ಮದ ಅಂತರ್ಲೀನತೆಯಿಂದ ಎಂದು ಹೇಳುವುದೂ ಉಪಮಾ ಎಂಬಲ್ಲಿ ವರ್ಣ್ಯವಸ್ತುವಿನ ಸ್ವಾರಸ್ಯವನ್ನು ಹತ್ತಿರ ತರುವಂತೆ ಅದಕ್ಕೊಂದು ಅಳತೆಯನ್ನು ಕಲ್ಪಿಸುವುದೆಂಬ ನಿರ್ವಚನವನ್ನು ಕೊಡುವುದೂ ಮಿಗಿಲಾಗಿ ಹೃದಯಂಗಮ. ಇದು ಅರ್ಥಾಲಂಕಾರಗಳ ಸಂಜ್ಞಾನಿರುಕ್ತಿಯ ಮೂಲಕ ಅವುಗಳ ಅಂತರಂಗದಲ್ಲಿರುವ ಸೌಂದರ್ಯವಿಭೂತಿಯನ್ನೇ ಹೊರತರುವ ಸಮರ್ಥವಿಧಾನ.
“ತಸ್ಯ ಚ ತ್ರಿಧಾ ಸ್ಥಿತಿಃ | ಸಂಪೂರ್ಣೇನ ಸ್ಫುಟೇನೋಪಮಾನೋಪಮೇಯತ್ವೇನ, ಯತೋऽತ್ರ ವರ್ಣ್ಯಾನಾಂ ಸನ್ನಿಧಿರುಪಮಾನೋಪಮೇಯದ್ಯೋತಕಸಾಧಾರಣಧರ್ಮಾಣಾಂ ತತ್ರೋಪಮಾ | ಕ್ವಚಿದಂತರ್ಲೀನೇನ ತೇನೋಪಮಾನೋಪಮೇಯಮೇಕೀಕ್ರಿಯತೇ ತತ್ರ ರೂಪಕವ್ಯವಹಾರಃ ... ಉಪ ಸಮೀಪೇ ಮಾನಂ ಪ್ರಕ್ಷೇಪಣಂ ನಿಮಿತ್ತಾಂತರೈರಪಿ ಸಂಭವತೀತ್ಯತ ಆಹ ಸಾದೃಶ್ಯೇನೇತಿ” (ಸಂ.೨, ಪು. ೨೩೩-೨೩೪).