ತೆಲುಗಿನಲ್ಲಿ ಸೀಸಪದ್ಯದ ಬೆಳೆವಣಿಗೆ
ಸಾನೆಟ್ಟಿಗೆ ಸಂವಾದಿಯಾಗುವಂತೆ ಕಾಣುವ ಸೀಸಪದ್ಯದ ಈ ಗುಣ ನಮ್ಮವರ ರೂಪಣವೇನಲ್ಲ. ಸಾವಿರ ವರ್ಷಗಳಿಗೂ ಮುನ್ನವೇ ತೆಲುಗಿನಲ್ಲಿ ಆ ಬಂಧಕ್ಕೆ ಇಂಥ ಕಟ್ಟಡ ಒದಗಿತ್ತು. ಇದಕ್ಕೆ ನನ್ನಯ, ತಿಕ್ಕನ ಮುಂತಾದ ಮಹಾಕವಿಗಳ ರಚನೆಗಳೇ ಸಾಕ್ಷಿ:
ಧರ್ಮತತ್ತ್ವಜ್ಞುಲು ಧರ್ಮಶಾಸ್ತ್ರಂಬನಿ
ಯಧ್ಯಾತ್ಮವಿದುಲು ವೇದಾಂತಮನಿಯು
ನೀತಿವಿಚಕ್ಷಣುಲ್ ನೀತಿಶಾಸ್ತ್ರಂಬನಿ
ಕವಿವೃಷಭುಲು ಮಹಾಕಾವ್ಯಮನಿಯು |
ಲಾಕ್ಷಣಿಕುಲು ಸರ್ವಲಕ್ಷ್ಯಸಂಗ್ರಹಮನಿ
ಯೈತಿಹಾಸಿಕುಲಿತಿಹಾಸಮನಿಯು
ಬರಮಪೌರಾಣಿಕುಲ್ ಬಹುಪುರಾಣಸಮುಚ್ಚ-
ಯಂಬನಿ ಮಹಿ ಗೊನಿಯಾಡುಚುಂಡ ||
ವಿವಿಧವೇದತತ್ತ್ವವೇದಿ ವೇದವ್ಯಾಸು
ಡಾದಿಮುನಿ ಪರಾಶರಾತ್ಮಜುಂಡು |
ವಿಷ್ಣುಸನ್ನಿಭುಂಡು ವಿಶ್ವಜನೀನಮೈ
ಪರಗುಚುಂಡ ಜೇಸೆ ಭಾರತಂಬು || (ಶ್ರೀಮದಾಂಧ್ರಮಹಾಭಾರತ, ೧.೧.೩೧)
ಎವ್ವಾನಿ ವಾಕಿಟನಿಭಮದಪಂಕಂಬು
ರಾಜಭೂಷಣರಜೋರಾಜಿನಡಗು
ನೆವ್ವಾನಿ ಚಾರಿತ್ರಮೆಲ್ಲ ಲೋಕಮುಲಕು
ನೊಜ್ಜಯೈ ವಿನಯಂಬುನೊರಪು ಗರಪು |
ನೆವ್ವಾನಿ ಕಡಗಂಟ ನಿವ್ವಟಿಲ್ಲೆಡಿ ಚೂಡ್ಕಿ
ಮಾನಿತಸಂಪದಲೀನುಚುಂಡು
ಎವ್ವಾನಿ ಗುಣಲತಲೇಡು ವಾರಾಸುಲ
ಕಡಪಟಿ ಕೊಂಡಪೈ ಗಲಯ ಬ್ರಾಕು ||
ನತಡು ಭೂರಿಪ್ರತಾಪಮಹಾಪ್ರದೀಪ
ದೂರವಿಘಟಿತಗರ್ವಾಂಧಕಾರವೈರಿ |
ವೀರಕೋಟೀರಮಣಿಘೃಣಿವೇಷ್ಟಿತಾಂಘ್ರಿ
ತಲುಡು ಕೇವಲಮರ್ತ್ಯುಡೇ ಧರ್ಮಸುತುಡು || (ಶ್ರೀಮದಾಂಧ್ರಮಹಾಭಾರತ, ೩.೨.೧೯೧)
ಮೊದಲ ಪದ್ಯದ ಕಡೆಗೆ ಎತ್ತುಗೀತಿಯಾಗಿ ಆಟವೆಲದಿ ಬಂದಿದ್ದರೆ ಎರಡನೆಯ ಸೀಸಪದ್ಯದ ಕಡೆಗೆ ತೇಟಗೀತಿ ಬಂದಿದೆ. ಇವೆರಡೂ ಪದ್ಯಗಳಲ್ಲಿ ಮೊದಲ ಎಂಟು ಸಾಲುಗಳಲ್ಲಿ ಹರಳುಗಟ್ಟಿದ ಭಾವಕ್ಕೆ ಪೂರಕವಾಗುವ - ಆದರೆ ಅದಕ್ಕಿಂತ ವಿಭಿನ್ನವಾದ - ಗತಿ-ಗಮಕಗಳನ್ನುಳ್ಳ ನಾಲ್ಕು ಸಾಲುಗಳು ಕಡೆಯಲ್ಲಿ ಬಂದಿರುವುದು ಗಮನಾರ್ಹ. ಮೊದಲ ಪದ್ಯದಲ್ಲಿ ಉಲ್ಲೇಖಾಲಂಕಾರದ ಮೂಲಕ ಮಹಾಭಾರತದ ಪ್ರಾಶಸ್ತ್ಯವನ್ನು ಮೊದಲ ಎಂಟು ಸಾಲುಗಳಲ್ಲಿ ತಿಳಿಸಿ ಅನಂತರ ಇಂಥ ಕೃತಿಯನ್ನು ರಚಿಸಿದಾತ ವೇದವ್ಯಾಸನೆಂದು ಒಕ್ಕಣಿಸುವ ಮೂಲಕ ಕಡೆಯ ನಾಲ್ಕು ಸಾಲುಗಳನ್ನು ರೂಪಿಸಲಾಗಿದೆ. ಎರಡನೆಯ ಪದ್ಯದಲ್ಲಿ ಕೂಡ ಉಲ್ಲೇಖಾಲಂಕಾರದ ಮೂಲಕ - ಪದ್ಯವು ಯಾರನ್ನು ಕುರಿತಿದೆಯೆಂಬ ಸೂಚನೆಯನ್ನೂ ಕೊಡದೆ - ಮೊದಲ ಎಂಟು ಸಾಲುಗಳು ರಚಿತವಾಗಿ ಕಡೆಗೆ ಸಮಾಸಭರಿತವಾದ ನಾಲ್ಕು ಸಾಲುಗಳ ಮೂಲಕ ಇಲ್ಲಿ ಪ್ರಶಂಸೆಗೆ ಪಾತ್ರನಾದವನು ಧರ್ಮರಾಜನೆಂದು ಹೇಳಲಾಗಿದೆ. ಹೀಗೆ ಎರಡೂ ಪದ್ಯಗಳಲ್ಲಿ ಕವಿತೆಯ ಭಾವ-ಬಂಧಗಳು ಎದ್ದುಕಾಣುವಂಥ ತಿರುವನ್ನು ಹೊಂದಿವೆ. ಈ ಮುಖ್ಯಾಕೃತಿಯೊಡನೆ ಮತ್ತಷ್ಟು ಸೂಕ್ಷ್ಮವಾದ ವಿವರಗಳೂ ಭಾಷಿಕ ಸ್ತರದಲ್ಲಿ ತೋರಿಕೊಳ್ಳುವುದನ್ನು ಅಭಿಜ್ಞರು ಗಮನಿಸಬಹುದು. ಉದಾಹರಣೆಗೆ: ಇವುಗಳ ಮೊದಲ ಭಾಗಗಳಲ್ಲಿ ವಿನಿಯುಕ್ತವಾಗಿರುವ ಸಮುಚ್ಚಯಗಳಾಗಲಿ, ಎತ್ತುಗಡೆಯ ಪುನರುಕ್ತಿಗಳಾಗಲಿ ತಮ್ಮಂತೆ ತಾವೇ ಆಕರ್ಷಕವಾಗಿವೆ. ಇವುಗಳ ಮೂಲಕ ಪದ್ಯಕ್ಕೆ ಪ್ರಸ್ಫುಟವಾದ ಶಿಲ್ಪಸೌಂದರ್ಯ ಒದಗಿದೆ.
ತೆಲುಗಿನ ಆದಿಮ ಕವಿಗಳಿಂದಲೇ ವಿಶಿಷ್ಟವಾದ ಒಪ್ಪ-ಓರಣಗಳನ್ನು ಗಳಿಸಿದ ಸೀಸಪದ್ಯ ಮುಂದೆ ಶ್ರೀನಾಥ, ಪೋತನ, ಪೆದ್ದನ, ಭಟ್ಟುಮೂರ್ತಿ ಮುಂತಾದ ಹಲವು ಪ್ರೌಢಕವಿಗಳ ಮೂಲಕ ಇನ್ನಷ್ಟು ಪರಿಷ್ಕಾರವನ್ನು ಪಡೆದು ಆಧುನಿಕ ಯುಗದಲ್ಲಿ ತಿರುಪತಿ-ವೇಂಕಟಕವಿಗಳು, ಜಾಷುವಾ, ಕರುಣಶ್ರೀ ಮುಂತಾದವರ ಕಾವ್ಯಗಳಿಗೂ ಮೆರುಗನ್ನು ನೀಡಿತು. ಇಂಗ್ಲಿಷ್ ಸಾಹಿತ್ಯದ ಪ್ರಭಾವ ತೆಲುಗಿಗೆ ತಟ್ಟಿದ ಬಳಿಕ ಅಲ್ಲಿಯ ಎಷ್ಟೋ ಕಾವ್ಯಪ್ರಕಾರಗಳೂ ಕಲ್ಪನಾವಿಶೇಷಗಳೂ ಆಮದಾಗಿ ಬಂದರೂ ಸಾನೆಟ್ ಮಾತ್ರ ಆಂಧ್ರಭೂಮಿಗೆ ಕಾಲಿಡಲಿಲ್ಲ! ಅಪವಾದವೆಂಬಂತೆ ಒಬ್ಬರೋ ಇಬ್ಬರೋ ಒಂದೆರಡು ರಚನೆಗಳಿಗೆ ಕೈಹಾಕಿದರಾದರೂ ಅವರ ಪ್ರಯತ್ನಗಳು ರಸಿಕರ ಆದರಣೆಗೆ ಪಾತ್ರವಾಗಲಿಲ್ಲ. ಮಿಕ್ಕೆಷ್ಟೋ ನವಕಾವ್ಯಪ್ರಕಾರಗಳು ತೆಲುಗಿನಲ್ಲಿ ನೆಲೆಯನ್ನು ಕಂಡರೂ ಸಾನೆಟ್ ತನ್ನ ರೂಪದಿಂದ ನಿಲ್ಲಲಾಗದುದಕ್ಕೆ ಅದಕ್ಕಿಂತ ಸಹಸ್ರಮಾನಕ್ಕೆ ಮೊದಲೇ ಅಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಸೀಸಪದ್ಯವೇ ಕಾರಣವೆಂಬುದರಲ್ಲಿ ಸಂದೇಹವಿಲ್ಲ. ಸಾನೆಟ್‌ಸಾಹಿತ್ಯವನ್ನು ಸಾಕಷ್ಟು ಸೃಜಿಸಿದ ಹಿಂದಿ, ಉರ್ದೂ, ಮರಾಠಿ, ಬಂಗಾಳಿ, ಅಸ್ಸಾಮಿ ಮತ್ತಿತರ ಭಾರತೀಯ ಭಾಷೆಗಳನ್ನು ಗಮನಿಸಿದಾಗ ಆ ನುಡಿಗಳಲ್ಲಿ ಸೀಸದ ಹಾಗಿರುವ ಸ್ವೋಪಜ್ಞಬಂಧವಾವುದೂ ಕಾಣದಿರುವ ಸಂಗತಿ ಕೂಡ ಈ ನಿಗಮನಕ್ಕೆ ಪೂರಕವಾಗಿದೆ.
ಸೀಸಪದ್ಯವು ಗಳಿಸಿಕೊಂಡ ರೂಪ-ಸ್ವರೂಪಗಳ ಸಿದ್ಧಿಗಾಗಿ ಮತ್ತೂ ಕೆಲವೊಂದು ಉದಾಹರಣೆಗಳನ್ನು ನೋಡಬಹುದು:
ನಲಿನಸಂಭವು ಸಾಹಿಣಮು ವಾರುವಂಬುಲು
ಕುಲಮು ಸಾಮುಲು ಮಾಕು ಗುವಲಯಾಕ್ಷಿ
ಚದಲೇಟಿ ಬಂಗಾರು ಜಲರುಹಂಬುಲ ತೂಂಡ್ಲು
ಭೋಜನಂಬುಲು ಮಾಕು ಬುವ್ವು ಬೋಣಿ |
ಸತ್ಯಲೋಕಮುದಾಕ ಸಕಲಲೋಕಂಬುಲು
ನಾಟಪಟ್ಟುಲು ಮಾಕುನಬ್ಜವದನ
ಮಧುರಾಕ್ಷರಮುಲೈನ ಮಾ ಮಾಟಲು ವಿನಂಗ
ನಮೃತಾಂಧಸುಲೆ ಯೋಗ್ಯುಲನುಪಮಾಂಗಿ ||
ಭಾರತೀದೇವಿ ಮುಂಜೇತಿ ಪಲುಕು ಜಿಲುಕ
ಸಮದಗಜಯಾನ ಸಬ್ರಹ್ಮಚಾರಿ ಮಾಕು |
ವೇದಶಾಸ್ತ್ರಪುರಾಣಾದಿವಿದ್ಯಲೆಲ್ಲ
ದರುಣಿ ನೀಯಾನ ಘಂಟಾಪಥಂಬು ಮಾಕು || (ಶೃಂಗಾರನೈಷಧ, ೨.೪೯)
ಇದು ಹಂಸವು ದಮಯಂತಿಗೆ ತನ್ನನ್ನು ಪರಿಚಯಿಸಿಕೊಳ್ಳುತ್ತಿರುವ ಪದ್ಯ. ಸೀಸದ ಮುಖ್ಯಭಾಗದಲ್ಲಿ ಪ್ರತಿಯೊಂದು ಪಾದದ ಕೊನೆಗೂ ಪ್ರಯುಕ್ತವಾದ ವಿಶೇಷಣಗಳು ಗಮನಾರ್ಹ. ಇವೆಲ್ಲ ದಮಯಂತೀಸೌಂದರ್ಯವಾಚಕಗಳಾದ ಸಂಬೋಧನೆಗಳು. ಕೊನೆಯ ಎತ್ತುಗೀತಿಯಲ್ಲಿ ಇಂಥ ಸಂಬೋಧನೆಗಳು ಸಮಪಾದಗಳ ಮೊದಲಿನಲ್ಲಿ ಬಂದಿವೆ. ಸೀಸಪದ್ಯದಲ್ಲಿ ಹಂಸ ತನ್ನ ಕುಲದ ಹೆಚ್ಚಳವನ್ನು ಹೇಳಿಕೊಳ್ಳುವುದಾದರೂ ಎತ್ತುಗೀತಿಯಲ್ಲಿ ವೈಯಕ್ತಿಕವಾದ ಮೇಲ್ಮೆಯನ್ನು ಸಾರಿಕೊಳ್ಳುತ್ತದೆ. ತಾನು ಶಾರದೆಯ ಮುಂಗೈಯ ಗಿಣಿಯ ಸಹಾಧ್ಯಾಯಿಯೆಂದು ಹೇಳಿಕೊಳ್ಳುವ ಮೂಲಕ ಸಾಧಿಸಿದ ಹಿರಿಮೆ ಪದ್ಯಕ್ಕೊಂದು ತಿರುವನ್ನು ನೀಡಿದೆ. ಅದು ತನಗೆ ಸಕಲ ಶಾಸ್ತ್ರಗಳಲ್ಲಿಯೂ ಪಾಂಡಿತ್ಯವಿರುವ ಸಂಗತಿಯನ್ನು ಒತ್ತಿಹೇಳಲು ‘ನಿನ್ನಾಣೆಯಾಗಿಯೂ ಸತ್ಯ’ ಎಂಬ ನುಡಿಗಟ್ಟನ್ನು ಬಳಸಿದ ಬಗೆ ಇಡಿಯ ಪದ್ಯಕ್ಕೆ ಎಲ್ಲಿಲ್ಲದ ಸೊಗಸನ್ನು ನೀಡಿದೆ.
ಖಂಡೇಂದುಮೌಳಿ ಪೈ ಗಲಹಂಸಪಾಳಿ ಪೈ
ಗರ್ಪೂರಧೂಳಿ ಪೈ ಗಾಲು ದ್ರವ್ವು
ಮಿನ್ನೇಟಿ ತೆರಲ ಪೈ ಮಿಂಚು ತಾಮರಲ ಪೈ
ಮಹಿ ಮಂಚು ನುರುಲಪೈ ಮಲ್ಲರಿಂಚು |
ಜಂಭಾರಿಗಜಮು ಪೈ ಜಂದ್ರಿಕಾರಜಮು ಪೈ
ಜಂದನಧ್ವಜಮು ಪೈ ಜೌಕಳಿಂಚು
ಮುತ್ಯಾಲ ಸರುಲ ಪೈ ಮ್ರೊಲ್ಲ ಕ್ರೊವ್ವಿರುಲ ಪೈ
ಮುದಿ ಕಲ್ಪತರುಲ ಪೈ ಮೋಹರಿಂಚು ||
ವೆಂಡಿಮಲಯೆಕ್ಕಿ ಶೇಷಾಹಿ ವೆನ್ನು ದನ್ನಿ
ತೊಡರಿ ದುಗ್ಧಾಬ್ಧಿ ತರಗಲ ತೋಡನಲರಿ |
ನೆರತನಂಬಾಡಿ ನೀ ಕೀರ್ತಿ ನಿಂಡೆನಹಹ
ವಿಜಯರಘುರಾಮ ಅಲ್ಲಾಡ ವಿಭುನಿ ವೇಮ || (ಶೃಂಗಾರಶ್ರೀನಾಥ, ಪು. ೧೮೮)
ಇದು ಶ್ರೀನಾಥನ ಚಾಟುಪದ್ಯಗಳಲ್ಲೊಂದು. ಇದರದೇ ಮತ್ತೊಂದು ಪಾಠಾಂತರ ಕೂಡ ಸಿಗುತ್ತದೆ. ಅದು ಪ್ರೌಢದೇವರಾಯನ ಪ್ರಶಸ್ತಿ. ಇಲ್ಲಿ ಕವಿಯು ಬೇರೊಬ್ಬ ಪ್ರಭುವಿನ ಹೆಸರನ್ನು ಪ್ರಸ್ತಾವಿಸಿದ್ದಾನೆ. ಮಿಕ್ಕಂತೆ ಇಡಿಯ ಪದ್ಯ ಒಂದೇ ಆಗಿದೆ. ಇಲ್ಲಿ ವರ್ಣಿತವಾಗಿರುವುದು ಆಶ್ರಯದಾತರ ಕೀರ್ತಿ. ಕವಿಸಮಯದ ಪ್ರಕಾರ ಬಿಳುಪಾದ ಯಶಸ್ಸು ಜಗದಲ್ಲಿ ಪ್ರಮುಖವಾದ ಎಲ್ಲ ಬಿಳಿಯ ವಸ್ತುಗಳ ಮೇಲೆಯೂ ದಾಳಿಗೆ ಸಿದ್ಧವಾಗಿದೆಯೆಂಬುದು ಶ್ರೀನಾಥನ ಕಲ್ಪನೆ. ಹೀಗಾಗಿ ರಾಜನ ಕೀರ್ತಿಯು ಶಂಕರನ ಮೇಲೆ, ರಾಜಹಂಸಗಳ ಮೇಲೆ, ಕರ್ಪೂರದ ಮೇಲೆ ಕಾಲುಕೆರೆದುಕೊಂಡು ಕದನಕ್ಕೆ ಹೊರಟಿದೆ. ದೇವಗಂಗೆಯ ತೆರೆಗಳ ಮೇಲೆ ಹೊಯ್ದಾಡುವ ಬೆಳ್ದಾವರೆಗಳ ಮೇಲೆ, ಇಬ್ಬನಿಗಳ ಮೇಲೆ ಮಲ್ಲಯುದ್ಧಕ್ಕೆ ಮುಂದಾಗಿದೆ. ಐರಾವತದ ಮೇಲೆ, ಬೆಳ್ದಿಂಗಳಿನ ಮೇಲೆ, ಚಂದನದ ಕೀರ್ತಿಯ ಮೇಲೆ ಕವಿದು ಬಿದ್ದಿದೆ. ಮುತ್ತಿನ ಹಾರಗಳ ಮೇಲೆ, ಮಲ್ಲಿಗೆಹೂಗಳ ಮೇಲೆ, ಕಲ್ಪವೃಕ್ಷಗಳ ಮೇಲೆ ಕೆರಳಿಬಿದ್ದಿದೆ. ಹಿಮಾಲಯವನ್ನೇರಿ, ಆದಿಶೇಷನ ಹೆಡೆಗಳನ್ನು ಒದೆದು, ಪಾಲ್ಗಡಲ ತೆರೆಗಳ ಮದವನ್ನು ಇಳಿಸಿದ ವಿಜಯ ರಘುರಾಮನ ಕೀರ್ತಿ ಜಗವನ್ನು ತುಂಬಿದೆ.
ಈ ಪದ್ಯದ ಸ್ವಾರಸ್ಯವಿರುವುದು ಪ್ರಾಸಾನುಪ್ರಾಸಗಳಲ್ಲಿ, ಸ್ಪರ್ಧೆಯನ್ನು ಸೂಚಿಸಲು ಉಪಚಾರವಕ್ರತೆಯನ್ನು ತುಂಬಿಕೊಂಡ ನುಡಿಗಟ್ಟುಗಳಲ್ಲಿ, ಬಿಳುಪಾದ ವಸುಗಳನ್ನೆಲ್ಲ ಒಂದೆಡೆ ಪೋಣಿಸಿರುವಲ್ಲಿ. ಈ ಸೀಸಪದ್ಯದ ಶಬ್ದಮೈತ್ರಿ ಅದೊಂದು ಬಗೆಯಾಗಿದ್ದರೆ ಎತ್ತುಗೀತಿಯ ಶಬ್ದಮೈತ್ರಿ ಮತ್ತೊಂದು ಬಗೆಯಾಗಿರುವುದು ಗಮನಾರ್ಹ. ಪದ್ಯಕ್ಕೆ ಈ ಮೂಲಕ ಬಂದಿರುವ ತಿರುವು ಸುವೇದ್ಯ. ಸೀಸಪದ್ಯದ ಆದ್ಯಂತ ಎಲ್ಲಿಯೂ ಕೂಡ ಕರ್ಷಣದ ಮೂಲಕ ಲಯಸಾಮ್ಯ ಕಲ್ಪಿತವಾಗದೆ ಯಥಾಕ್ಷರವಾದ ಗುರು-ಲಘುಗಳ ವಿನ್ಯಾಸದಿಂದಲೇ ಸಾಧಿತವಾಗಿರುವುದು ಪದ್ಯಕ್ಕೆ ಅದ್ಭುತವಾದ ಸಮತ್ವವನ್ನು ನೀಡಿದೆ. ಶ್ರೀನಾಥನ ಕಾಲದಿಂದ ಈಚೆಗೆ ಸೀಸಪದ್ಯಕ್ಕೆ ಇಂಥ ಚತುರಸ್ರಶೋಭೆ ಒದಗಿತು. ಈ ನಿಟ್ಟಿನಲ್ಲಿ ಅವನ ಪೂರ್ವಸೂರಿ ನಾಚನ ಚೋಮನನ ಯೋಗದಾನವೂ ಸ್ಮರಣೀಯ.
ಕಮಲಾಕ್ಷುನರ್ಚಿಂಚು ಕರಮುಲು ಕರಮುಲು
ಶ್ರೀನಾಥು ವರ್ಣಿಂಚು ಜಿಹ್ವ ಜಿಹ್ವ
ಸುರರಕ್ಷಕುನಿ ಜೂಚು ಚೂಡ್ಕುಲು ಚೂಡ್ಕುಲು
ಶೇಷಶಾಯಿಕಿ ಮ್ರೊಕ್ಕು ಶಿರಮು ಶಿರಮು |
ವಿಷ್ಣುನಾಕರ್ಣಿಂಚು ವೀನುಲು ವೀನುಲು
ಮಧುವೈರಿ ದವಿಲಿನ ಮನಮು ಮನಮು
ಭಗವಂತು ವಲಗೊನು ಪದಮುಲು ಪದಮುಲು
ಪುರುಷೋತ್ತಮುನಿ ಮೀದಿ ಬುದ್ಧಿ ಬುದ್ಧಿ ||
ದೇವದೇವುನಿ ಜಿಂತಿಂಚು ದಿನಮು ದಿನಮು
ಚಕ್ರಹಸ್ತುನಿ ಬ್ರಕಟಿಂಚು ಚದುವು ಚದುವು |
ಕುಂಭಿನೀಧವು ಜಪ್ಪೆಡಿ ಗುರುಡು ಗುರುಡು
ತಂಡ್ರಿ ಹರಿ ಜೇರುಮನಿಯೆಡಿ ತಂಡ್ರಿ ತಂಡ್ರಿ || (ಶ್ರೀಮಹಾಭಾಗವತ, ೭.೧೬೯)
ಶ್ರೀನಾಥನ ಕಿರಿಯ ಸಮಕಾಲೀನ ಎನ್ನಬಹುದಾದ ಪೋತನನ ಈ ಪದ್ಯವು ಪ್ರಹ್ಲಾದನ ಭಕ್ತಿಭಾವವನ್ನು ಕುರಿತಿದೆ. ಹರಿಯನ್ನು ಪೂಜಿಸುವ ಕೈಗಳೇ ಕೈಗಳು, ಹರಿಯನ್ನು ಸ್ತುತಿಸುವ ನಾಲಗೆಯೇ ನಾಲಗೆ, ಹರಿಯನ್ನು ನೋಡುವ ಕಂಗಳೇ ಕಂಗಳು, ಹರಿಯನ್ನು ನಮಿಸುವ ಶಿರವೇ ಶಿರ ಎಂಬಿತ್ಯಾದಿಯಾಗಿ ಸಾಗುವ ಈ ಪದ್ಯ ‘ಅರ್ಥಾಂತರಸಂಕ್ರಮಿತವಾಚ್ಯ’ ಎಂಬ ಧ್ವನಿಪ್ರಭೇದಕ್ಕೆ ಸೊಗಸಾದ ಉದಾಹರಣೆ. ಈ ಮಾತನ್ನು ಭಕ್ತನ ಪ್ರತಿಯೊಂದು ಅಂಗಕ್ಕೂ ಅನ್ವಯಿಸುವಂತೆ, ಅದು ಪ್ರತಿಯೊಂದು ಪಾದಾಂತದಲ್ಲಿಯೂ ಬರುವ ಹಾಗೆ ಇಡಿಯ ಪದ್ಯಶಿಲ್ಪವೇ ಹವಣುಗೊಂಡಿದೆ. ಈ ಮೂಲಕ ರಚನೆಗೊದಗಿದ ಅಚ್ಚುಕಟ್ಟು ಅನ್ಯಾದೃಶ. ಪದ್ಯದ ಕೊನೆಗೆ ಎದ್ದುಕಾಣುವ ತಿರುವಿಲ್ಲದಿದ್ದರೂ ‘ವಿಷ್ಣುಭಕ್ತಿಯನ್ನು ಮಕ್ಕಳ ಮನದಲ್ಲಿ ಬಿತ್ತುವ ತಂದೆಯೇ ತಂದೆ’ ಎಂಬ ಕಟ್ಟಕಡೆಯ ಸಾಲಿನ ಮಾತಿನ ಮೂಲಕ ಸಿದ್ಧಿಸಿದ ಪ್ರಕೃತತ್ವ ಪರಿಣಾಮಕಾರಿ. ಈ ಕವಿತೆಯ ಆದ್ಯಂತ ವಿಷ್ಣುವಿನ ಬೇರೆ ಬೇರೆ ವಾಚಕಗಳು ಪ್ರಯುಕ್ತವಾಗಿರುವುದು ದೊಡ್ಡ ಸಂಗತಿಯಲ್ಲವಾದರೂ ಪದ್ಯಶಿಲ್ಪಕ್ಕೆ ಇಂಥ ಚಿಕ್ಕ-ಪುಟ್ಟ ವಿವರಗಳೂ ಕೂಡ ಯೋಗದಾನವೀಯುವುದು ದಿಟ.
To be continued.