ಎಲ್ಲಿಂದಲೋ ಒಲವು ಬಂದು ಮನಸನು ಹೊಗಲು
ಯಾರು ತಡೆಯುವರದರ ಪ್ರೇರಣೆಯನು
ಫಲವಿಹುದೆ, ನಲವಿಹುದೆ, ಒಲವು ಪಡಿಮೂಡಿಹುದೆ
ಎನ್ನುವಾಲೋಚನೆಯೆ ಜನಿಸದಂತೆ |
ಮರುಳಾಗಿ ಮೈಮರೆತು ದೂರದಿಂದಲೆ ತನ್ನ
ಪ್ರಿಯಜನಕೆ ಪ್ರೇಮವನು ಸಲಿಸಬಹುದು
ಬಿರಿದುದೇ ಸಾಕೆಂದು ಹೂವು ನಲಿಯದೆ? ಮತ್ತೆ
ದೇವರಡಿಯಲಿ ಬೇಡುವುದೆ ವರವನು!
ಈ ಬಗೆಯ ಕಥೆಯೆಷ್ಟೊ ಧರಣಿಯಲಿ ನಡೆದಿರುವುದು;
ನನ್ನೊಲುಮೆಯೊಂದರೊಳೆ ಜೀವ ತಣಿದಿದ್ದಿತಂದು |
ಬೂದಿ ಮುಸುಕಿದ ಸಣ್ಣ ಕೆಂಡದುರಿ ಕಾಣದಂತೆ
ಆಸೆಗೊಡದೆಯೆ ನನ್ನ ಮನದೊಲವು ಮಲಗಿದ್ದಿತು
(ಸಮಾಧಾನ (ಒಲುಮೆ), ಸಮಗ್ರಕವಿತೆಗಳು, ಪು. ೬೧)
ಸೀಸದಲ್ಲಿ ಪ್ರಣಯಗೀತವನ್ನು ರಚಿಸುವ ವಿಶಿಷ್ಟಪ್ರಯತ್ನ ತೀ.ನಂ.ಶ್ರೀ. ಅವರದು. ಪ್ರಣಯದಲ್ಲಿ ಜೀವ ಕಂಡುಕೊಳ್ಳುವ ಸಮಾಧಾನದ ಪರಿಯನ್ನಿಲ್ಲಿ ಕಾಣಬಹುದು. ಪೂರ್ವಾರ್ಧ ಒಲವಿನ ಹಾದಿಯನ್ನು ಚಿತ್ರಿಸಿದರೆ ಉತ್ತರಾರ್ಧ ಅಲ್ಲಿಯ ಏರಿಳಿತಗಳ ಅರಿವನ್ನು ಮೂಡಿಸಿ ಕಡೆಗೆ ಉಪಶಾಂತಿಯ ನೆಲೆಯನ್ನು ಸೂಚಿಸುತ್ತದೆ. ಕವಿಯ ಮನೋಧರ್ಮ ವಸ್ತು ಮತ್ತು ವಿನ್ಯಾಸಗಳನ್ನು ನಿರ್ದೇಶಿಸುವುದೆಂಬ ಮಾತಿಗೆ ಈ ಪದ್ಯ ನಿದರ್ಶನವೆನಿಸಿದೆ. ಇಲ್ಲಿ ತೀ.ನಂ.ಶ್ರೀ. ಅವರ ಮೃದುಸ್ವಭಾವ, ಪ್ರಸನ್ನತಾಪ್ರೀತಿಯೇ ಮೊದಲಾದ ಗುಣಗಳು ಚೆನ್ನಾಗಿ ಕಂಡುಬರುತ್ತವೆ.
ಇನ್ನುಮೇತಕೆ ನಿನ್ನ ಮುಸುಕು ಮೌನವ ತೊರೆಯೆ?
ಮುಚ್ಚಾಲೆಯಾಡಿ ದೊಲ್ಲಯಿಸುವೇಕೆನ್ನ?
ತಳಮಳಿಪುದೆನ್ನ ಮನ ನಿನ್ನ ತೆರೆಯಂ ಹರಿಯೆ,
ನಿಲುಕದೆಲೆ ತಡೆವೆ; ಬುಲ್ಲಯಿಸುವೇಕೆನ್ನ?
ಸೊಲ್ಲಿಲ್ಲದುಲಿಗಳಿಂದುಲಿವ ನಿನ್ನಯ ಸೊಲ್ಲ
ಸೆಲೆಯಿಂದ ಹಾಡುಲಿಯ ಬಲ್ಲುದೇನೆನ್ನ?
ಸರಿಗೆ ಕುಕಿಲಿನ ಕೊರಳ ಕನಸನೆತ್ತಲು ಸಲ್ಲ!
ಕೊಳದ ಪಡಿವೆರೆಯಂಬರದ ಚಂದ್ರನೆನ್ನ?
ಏಗಾಲಮಿಂತು ವೆಂಟಣಿಸಿ ನೀ ಮುದಿಯ
ಮರಿಯಂತೆ ಕಾವೆ ಪಳನನಸಿನೀ ನಿಧಿಯ?
ನಿನಗಲ್ಲದರ್ಥದಿಂದೇವಾಳ್ತೆ ನಿನಗೆ?
ಹೆರರ್ಗೀಯದರ್ಥಮದು ದೊರೆವುದೇಂ ತನಗೆ?
(ಗೋವಿಂದ ಪೈ ಸಮಗ್ರಕವಿತೆಗಳು: ಪು. ೨೬)
ಕನ್ನಡಕ್ಕೆ ಮೊತ್ತಮೊದಲ ಸಾನೆಟ್ಟನ್ನು ತಂದುಕೊಟ್ಟ ಗೋವಿಂದ ಪೈಗಳಿಗೆ ಸಹಜವಾಗಿಯೇ ಆ ಬಂಧದ ಮೇಲೆ ಅಭಿಮಾನ ಹೆಚ್ಚು. ಹೀಗಾಗಿ ಅವರು ಸೀಸದತ್ತ ಗಮನ ಹರಿಸಿದ್ದು ಕಡಮೆ. ಈ ಸೀಸಪದ್ಯವಾದರೂ ತನ್ನ ಲಕ್ಷಣಕ್ಕೆ ಪೂರ್ಣವಾಗಿ ಬದ್ಧವಾಗಿಲ್ಲ. ಮಾತ್ರಾಸೀಸದ ಲಕ್ಷಣದ ಪ್ರಕಾರ ಸಮಪಾದಗಳಲ್ಲಿ ಐದು ಮಾತ್ರೆಗಳ ಮೂರು ಗಣಗಳ ಬಳಿಕ ಒಂದು ಗುರುವಿರಬೇಕು. ಇದು ಎರಡು ವಿಷ್ಣುಗಣಗಳ ಬಳಿಕ ಬರುವ ಎರಡು ಬ್ರಹ್ಮಗಣಗಳನ್ನುಳ್ಳ ಕರ್ಷಣಜಾತಿಯ ಸೀಸಕ್ಕೆ ಸಂವಾದಿ. ಆದರೆ ಇಲ್ಲಿ ಮೂರು ಪಂಚಮಾತ್ರಾಗಣಗಳ ಬಳಿಕ ನಾಲ್ಕು ಮಾತ್ರೆಗಳ ಊನಗಣ ಬಂದಿದೆ. ಈ ವಿನ್ಯಾಸವನ್ನೇ ಎತ್ತುಗೀತಿಯ ಆದ್ಯಂತ ಕಾಣಬಹುದು. ಪೈಗಳ ಭಾಷೆ ಎಂಥದ್ದೆಂಬ ಸೂಚನೆಯೂ ಈ ಪದ್ಯದಲ್ಲಿದೆ. ಸಾನೆಟ್ಟಿನ ಅಂತ್ಯಪ್ರಾಸದ ವಿನ್ಯಾಸವೂ ಇಲ್ಲಿ ಪಾಲಿತವಾಗಿದೆ.
ಆರ್ಷೇಯದೈವತದ ತನಿಯೊಂದು ದರ್ಶನದಿ
ಕಂಡೊಲಿಯುತಾ ಸವಿಗೆ ತಣಿಯದವನೀತ
ನಿಷ್ಕಳನಿರಂಜನನ ಸಂಗಮಿಸಲೆಳಸುತ್ತ
ತನ್ನ ಕೊರೆಗಳು ತೀರೆ ಮೊರೆಗೊಂಡನೀತ |
ಜಡ-ಜಂಗಮಕ್ಕೆಲ್ಲ ಶಿವನೆ ಪತಿಯೆನ್ನುತ್ತ
ಜೀವಕರುಣೆಯ ಜನದ ಶ್ರದ್ಧೆಗೆರೆದಾತ
ನಿರ್ಭಯದೊಳೆಲ್ಲೆಲ್ಲು ಶಿವನ ಹೊತ್ತಲೆದಾತ
ಶಿವಗು ಶಿವನಾಳ್ಗಳೇ ಮಿಗಿಲು ಎಂದಾತ ||
ನಮ್ಮ ನೆಲದೀ ನುಡಿಯ ಶೈವಾನುಭವರಸದಿ
ಸಂಸ್ಕರಿಸಿದಾತನೀ ವಚನರತ್ನನಿಧಿ |
ಈ ಭಕ್ತನಿಂದೇಕದೈವಾನುರಕ್ತಿಯನು
ಜನ ಪಡೆದು ಬಿತ್ತರಿಸಿದವರಾತ್ಮಪರಿಧಿ || (ನವಿಲುಗರಿ, ಪು. ೨೪)
ಪುತಿನ ಅವರ ಈ ಕವಿತೆ ಬಸವಣ್ಣನವರನ್ನು ಕುರಿತದ್ದು. ಇಲ್ಲಿಯ ಪೂರ್ವಾರ್ಧ ಗೋವಿಂದ ಪೈಗಳ ಸೀಸವನ್ನು ಹೋಲುತ್ತದೆ. ಎತ್ತುಗೀತಿಯಲ್ಲಿ ಮಾತ್ರ ಇಪ್ಪತ್ತು ಮಾತ್ರೆ ಮತ್ತು ಹತ್ತೊಂಬತ್ತು ಮಾತ್ರೆಗಳ ಪಾದಗಳು ಒಂದರ ಬಳಿಕ ಮತ್ತೊಂದರಂತೆ ಬಂದು ವಿಭಿನ್ನತೆಯನ್ನು ತಾಳಿವೆ. ಪೂರ್ವಾರ್ಧದಲ್ಲಿ ಬಸವಣ್ಣನವರ ಸಾಧನೆಗಳ ಅಲೆನೋಟವಿದ್ದರೆ ಉತ್ತರಾರ್ಧದಲ್ಲಿ ಅವರು ನಮಗೆ ಹೇಗೆ ಸ್ಫೂರ್ತಿಯಾಗಬಲ್ಲರೆಂಬ ಸಂದೇಶವಿದೆ. ಹೀಗೆ ಪದ್ಯಕ್ಕೊಂದು ತಿರುವು ಬಂದಿರುವುದು ಗಮನಾರ್ಹ. ಈ ಗುಣ ಸಾನೆಟ್ಟಿಗೆ ಸಂವಾದಿ.
ಹಣ್ಣಿನಿಂ ತರು ನಮ್ರ ಮೋಡ ಹನಿಯಿಂ ನಮ್ರ
ನೆರೆದ ಸಿರಿಯೊಳು ಪುಣ್ಯಪುರುಷ ನಮ್ರ
ಜ್ಞಾನಿಯರಿವಿಂ ನಮ್ರ ಆರ್ತನಳಲಿಂ ನಮ್ರ
ನೆಲೆಯರ್ತಿಗಿಂಬಾಗಿ ಭಕ್ತ ನಮ್ರ |
ಭಾವಂಗಳಿಡಿದಿರಲು ಸತ್ಕವಿಯ ವಾಙ್ನಮ್ರ
ವಿಪುಲದರ್ಶನಶಕ್ತಧರ್ಮ ನಮ್ರ
ಎಲ್ಲರಹಮನು ಕಳೆದು ವೃದ್ಧಮಾದೀ ಗುಡಿಯು
ಸಕಲಜನಕಾಯಿತಾದಾನನಮ್ರ ||
ಇಲ್ಲಿ ಮಣಿದವನೆಲ್ಲೆಡೆಯು ಸೆಟೆದು ನಿಲುವ |
ಇಲ್ಲಿ ಮೈಕುಗ್ಗಿದವನೆಲ್ಲೆಲ್ಲು ನೇರ ನಡೆವ || (ಮಲೆದೇಗುಲ, ಪು. ೧೯)
ಪುತಿನ ಅವರ ಈ ರಚನೆ ಉಚ್ಚಕೋಟಿಯ ಕವಿತೆ ಎಂಬುದರಲ್ಲಿ ಸಂದೇಹವಿಲ್ಲ. ಇದರ ಪೂರ್ವಾರ್ಧ ಅಪ್ಪಟ ಮಾತ್ರಾಸೀಸ. ಉತ್ತರಾರ್ಧದಲ್ಲಿ ಮಾತ್ರ ಬಂಧವು ಅನಿಯತವೆನಿಸಿದೆ. ಮೊತ್ತಮೊದಲಿಗೆ ಇಲ್ಲಿರುವುದು ಎರಡೇ ಸಾಲು. ಇವುಗಳಲ್ಲಿಯೂ ಐಕರೂಪ್ಯವಿಲ್ಲ. ಮೊದಲ ಸಾಲು ಹತ್ತೊಂಬತ್ತು ಮಾತ್ರೆಗಳಷ್ಟಿದ್ದರೆ ಎರಡನೆಯದು ಇಪ್ಪತ್ತೆರಡು ಮಾತ್ರೆಗಳಷ್ಟಿದೆ. ಇಂತಿದ್ದರೂ ಇದರ ಶಿಲ್ಪಸೌಷ್ಠವ ಸೀಸವನ್ನು ನೆನಪಿಸುವ ಹಾಗಿದೆ. ‘ಮಲೆದೇಗುಲ’ದ ಅನೇಕ ರಚನೆಗಳು ಈ ಬಗೆಯವೇ. ಪೂರ್ವಾರ್ಧದಲ್ಲಿ ಸೀಸದ ನೈಯತ್ಯವಿದ್ದು ಉತ್ತರಾರ್ಧದಲ್ಲಿ ಅನಿಯತವೆನಿಸುವ ಇಂಥ ಬಂಧಗಳು ತಮ್ಮ ಭಾವ, ಲಯ ಮತ್ತು ಪದಪದ್ಧತಿಗಳ ಕಾರಣ ಸೀಸಪದ್ಯಕ್ಕೆ ನಿಕಟವೆನಿಸಿವೆ. ಹೇಗೆ ಸಾನೆಟ್ಟಿನಲ್ಲಿ ಕಾಲಕ್ರಮೇಣ ಸಾಲುಗಳ ಸಂಖ್ಯೆ, ಗಣಗಳ ಸಂಖ್ಯೆ ಮತ್ತು ಪ್ರಾಸಗಳ ವಿನ್ಯಾಸಗಳು ಮಾರ್ಪಟ್ಟವೋ ಹಾಗೆಯೇ ಸೀಸಪದ್ಯದ ಗತಿಯೂ ಆಗಿದೆಯೆಂದು ‘ಮಲೆದೇಗುಲ’ದ ಮಟ್ಟಿಗೆ ಹೇಳಬಹುದು.
ಈವರೆಗೆ ನವೋದಯವು ಸೀಸಪದ್ಯವನ್ನು ಮೈದುಂಬಿಸಿಕೊಂಡ ಕೆಲವೊಂದು ಮಾದರಿಗಳನ್ನು ಕಂಡೆವು. ಈ ಜಾಡಿನಲ್ಲಿ ಮತ್ತಷ್ಟು ಮುಂದುವರಿದರೆ ಯಾವೆಲ್ಲ ವೈವಿಧ್ಯಗಳನ್ನು ತರಬಹುದೆಂದು ‘ಋತುಷಡ್ವರ್ಗ’ ಎಂಬ ಕವಿತೆಯ ಮೂಲಕ ನಾನು ಪ್ರಾಯೋಗಿಕವಾಗಿ ನಿರೂಪಿಸಿದ್ದೇನೆ. ಅದನ್ನೀಗ ಪರಿಕಿಸಬಹುದು:
ಭೂಗರ್ಭದೊಲುಮೆಕುಲುಮೆಯ ಕಾಪಿನಲಿ ಬೆಳೆದ
ಬೆಂಕಿಯ ಭ್ರೂಣ ಕಲ್ಪನೆಯ ಚಾಣ
ಬೇರುಗಳ ವಾರಿರತಿರಾತ್ರಿಯಲಿ ರುಚಿ ಸವಿದ
ಜೀವನತ್ರಾಣ ಜೀವಿಕೆಯ ಗಾಣ |
ಕೊಂಬೆಕೊಂಬೆಗಳುಪ್ಪಿನಪ್ಪುಗೆಯ ಬಿಗಿ ತಳೆದ
ಭಾವುಕಪ್ರಾಣ ಭವ್ಯಪ್ರಮಾಣ
ವರ್ಣಪಟಲಪ್ರಣಯಚುಂಬನದ ಮುದ ಕವಿದ
ರಸಿಕನಿರ್ವಾಣ ರಕ್ತಿಪ್ರವೀಣ ||
ಕುಸುಮಮಯಸಮಯಸಾಹಿತ್ಯಸರಸಸೂತ್ರ
ಮಧುವಿನೀ ಹೊತ್ತು ಬಯಕೆಗಳ ತೊತ್ತು ಮಾತ್ರ |
ಜೀವಮಥನಸಂಕಥನಪ್ರಕಾಮದಿಷ್ಟಿ
ಚಿತ್ತಚೈತ್ಯಾಗ್ನಿಸಂಭವಪ್ರಥಮಸೃಷ್ಟಿ ||
ಹಸುರ ಬಯಕೆಯ ಸುಟ್ಟು ಬಸಿರ ಹರಕೆಯ ಬಿಟ್ಟು
ರಜದ ರಕ್ತಿಯ ಗುಟ್ಟನೊಡೆದುಬಿಟ್ಟು
ಜೀವನೇಷ್ಟಿಯ ತುಷ್ಟಿಯಾರ್ದ್ರತೆಯ ಬದಿಗಿಟ್ಟು
ಶುಷ್ಕಕಾಷಾಯಾಗ್ನಿಗೊಗ್ಗಿಬಿಟ್ಟು |
ತಾಳುಮೆಯ ತಳದಲ್ಲಿ ತಳಮಳದ ತೂಬಿಟ್ಟು
ಭುವನವನದಂಗಣವನೊಣಗಿಸಿಟ್ಟು
ತೀಕ್ಷ್ಣವೀಕ್ಷಣಕಷಣಪೂಷಣಾಕ್ಷಿಯ ಬಿಟ್ಟು
ಮುನಿಸನೇ ಮೆಯ್ವೆತ್ತು ಕೆಣಕಿಬಿಟ್ಟು ||
ಕೋಪವೇ ಕನಲಿ ಕೆಂಡಗಳಾಗಿ ಕಡೆದ ರೂಪ
ರೂಪವೇ ಬಿಸಿಲ ಭಾವಗಳಾಗಿ ನುಡಿದ ಶಾಪ |
ಶಾಪವೇ ಸಿಡಿದು ಸಿಡಿಲಂತಾಗಿ ಸೆಡೆದ ಪಾಪ
ಪಾಪವೇ ಫಲಿಸಿ ಫಣಿಯಂತಾಗಿ ಕಡಿದ ಕೋಪ ||
ಕಡಲುಪ್ಪಿನೊಳು ಕುದ್ದು ಕೆಸರ ಮಡಿಲಿಂದೆದ್ದು
ಬಾನ ಸಿಂಹಾಸನವನೇರಿದ ಮದ
ಜ್ಯೋತಿರ್ಜಗತ್ತನ್ನು ಭೀತಿಯೊಳು ಕಪ್ಪಿಡಿಸಿ
ಕವಿದಬ್ಬರಿಸಿ ಕೊಬ್ಬಿ ಮಿಂಚಿದ ಮದ |
ಕೆರೆ-ಬಾವಿಗಳ ಮೆಯ್ಗೆ ನದಿ-ನಿರ್ಝರಿಣಿಗಳ್ಗೆ
ಹೊಸನೆತ್ತರನು ಬಿತ್ತರಿಸುತಿಹ ಮದ
ಕೇದಗೆಯ ಚಾದಗೆಯ ಬಿರಿಬಾಯ್ಗೆ ಬಾಳಿತ್ತು
ಕಮಲ-ಕಲಹಂಸಗಳ ಕಾಡಿದ ಮದ ||
ಬೆಂದ ಬುವಿಗೇಳುಬಣ್ಣಗಳ ನಾಳಿಕೆಗಳಿಂದ
ತಂದಿತ್ತು ತಂಪನ್ನು ಸಿಡಿಮಿಡಿವ ಸರಸ |
ಸುತ್ತಮುತ್ತೆಲ್ಲ ಹಸುಹಸುರ ಬದುಕನ್ನಿತ್ತರೂ
ಮತ್ತೆ ತೋಯಿಸಿ ತತ್ತರಂಗೊಳಿಪ ರಭಸ ||
ಕಪ್ಪು ಚಿಂತೆಗಳನ್ನು ಕಳೆದು ಬಾನ್ಮೊಗದಲ್ಲಿ
ಬೆಳ್ಪನೇರಿಸಿ ನಲಿವ ಚೆಲುವ ಮೋಹ
ಧಾರಾಶ್ರುಗಳನಳಿಸಿ ತಾರಾಕ್ಷಿಯಂಚಿನಲಿ
ಹೊಗರನೇರಿಸಿ ಹೊಳೆವ ಹೊನಲ ಮೋಹ |
ಆಶೆಗಳ ಸಂಕೋಚಕಥೆ ನೀಗಿ ಬೆಡಗೊಲಿದ
ಬೆಳ್ದಿಂಗಳಿನ ಬೆಳೆಯ ತಳೆವ ಮೋಹ
ಅಂಚೆಗಳ ಮಿಂಚಿನಲಿ ಕಂಜಗಳ ಹೊಂಚಿನಲಿ
ಗೋವುಗಳ ಗುಟುರಿನಲಿ ಪುಟಿವ ಮೋಹ ||
ಹಳೆಯ ಕಳೆಯ ಕಿತ್ತು ಹದವಾದ ಮಿದುವಾದ
ಬಯಕೆಹೊಲವ ಬಿತ್ತಿ ಬಲಿವ ಮೋಹ |
ಬಗ್ಗಡಗಳ ಬಾಳು ಕೃತ್ತಿಕಾಕೃತಿಯಾಗೆ
ಬಯಕೆಬಾವಿಗಳನು ತಿಳಿಪ ಮೋಹ ||
ಬೆಳ್ಳಿಮಂಜಿನ ಬೆಳೆಯನೆಲ್ಲ ತಾನೇ ಗಳಿಸಿ
ಹೊನ್ನತರಗೆಲೆಯನ್ನೆಣಿಸುವ ಲೋಭ
ಸೂರ್ಯಮಾಣಿಕ್ಯವನು ಚಂದ್ರಮೌಕ್ತಿಕವನ್ನು
ತಾರಕಾಹೀರವನು ಕಸಿವ ಲೋಭ |
ನಿಸ್ಸ್ನೇಹಶೈತ್ಯದಿಂದಿಳೆಯೆಲ್ಲವನು ಸೀಳಿ
ಕೂರ್ಮವೃತ್ತಿಯನೊಡಲಿಗೀವ ಲೋಭ
ತೆನೆ ಮಾಗಿ ಬಾಗಿಯೂ ಕಾಳ್ದುಂಬಿ ತೂಗಿಯೂ
ಕಬ್ಬು ಕೊಬ್ಬೇರಿಯೂ ಕೊರೆವ ಲೋಭ ||
ಉತ್ತರಾಯಣದಲ್ಲಿ ಪ್ರಶ್ನೆಗಳ ಪಯಣ
ಬಿಲ್ಲತಿಂಗಳಿನಲ್ಲಿ ಪೈಶುನ್ಯಶೂನ್ಯ |
ಮಾರ್ಗಶೀರ್ಷಾಸನದ ಗುರಿಯೊ ಪ್ರಸ್ಥಾನ
ಸಂಕ್ರಾಂತಿಕಾಂತಿಯೊಳು ಸಂಚಯಕ್ರಾಂತಿ ||
ಲಕ್ಷ್ಮೀನಿವಾಸಗಳ ಲಕ್ಷ್ಮೀವಿಲಾಸವನು
ಮಲೆತು ಮುಂಡಿಸಿಬಿಡುವ ಶೀತಲಾರ್ಚಿ
ತರಗೆಲೆಗಳಡಿಯಲ್ಲಿ ತೆವಳುತ್ತ ನಡೆದಿರುವ
ತಿಗ್ಮಪಿಂಗಳಪೀತಮತ್ಸರಾಗ್ನಿ |
ಬಿಸಿಯಪ್ಪುಗೆಗಳಲ್ಲಿ ಬೆಸೆದ ತುಟಿಬಟ್ಟಲಲಿ
ಮಗ್ಗುಲಾಗಿರುವ ಮೈಥುನದಸೂಯೆ
ಸಿಹಿಯೊಡಲ ತೊರೆಯುಪ್ಪುಗಡಲ ಕೂಡುತ್ತಿಹುದ
ಸಹಿಸದೀ ಹೆಪ್ಪುಗಟ್ಟುತಿಹ ನಂಜು ||
ಹೊಟ್ಟೆಯುರಿಯಟ್ಟಹಸಿತಂಗಳೆಷ್ಟು ಸೊಗಸು
ಪ್ರಳಯಗರ್ಭದ ಸೃಷ್ಟಿದೃಷ್ಟಿಯೆಷ್ಟು ಗಡಸು |
ಅನುಭಾವಸಾಹಿತ್ಯದಂತೆ ಮಂಕು ಮಂಜು
ಅನುಭವಾರ್ಕನ ಮುಂದೆ ಶಿಶಿರದೊಂದು ಪಂಜು ||
(ಉದಯವಾಣಿ: ದೀಪಾವಳಿ ವಿಶೇಷಾಂಕ ೨೦೧೧, ಪು. ೩೨-೩೬)
ವಸಂತಕಾಮ, ಗ್ರೀಷ್ಮಕ್ರೋಧ, ವರ್ಷಾಮದ, ಶರನ್ಮೋಹ, ಹೇಮಂತಲೋಭ ಮತ್ತು ಶಿಶಿರಮಾತ್ಸರ್ಯ ಎಂಬ ಉಪಶೀರ್ಷಿಕೆಗಳನ್ನುಳ್ಳ ಆರು ಸೀಸಪದ್ಯಗಳ ಕವಿತೆ ‘ಋತುಷಡ್ವರ್ಗ’. ಇಲ್ಲಿಯ ಸೀಸದ ಭಾಗಗಳು ಸುಪ್ರಸಿದ್ಧವಾದ ಮಾತ್ರಾಸೀಸದ ಎಲ್ಲ ಲಕ್ಷಣಗಳನ್ನೂ ಹೊಂದಿವೆ. ಪ್ರತಿಯೊಂದು ಪದ್ಯದ ಎತ್ತುಗೀತಿಯೂ ಬೇರೆಬೇರೆಯ ಛಂದೋವಿನ್ಯಾಸವನ್ನು ಹೊಂದಿದೆ. ಮೊದಲ ಪದ್ಯದ ಎತ್ತುಗೀತಿ ಮಾತ್ರಾ ತೇಟಗೀತಿ. ಎರಡನೆಯದರದು ಪಾದವೊಂದರಲ್ಲಿ ಇಪ್ಪತ್ತೆರಡು ಮಾತ್ರೆಗಳ ಪ್ರಮಾಣವುಳ್ಳ ಚೌಪದಿ. ಮೂರನೆಯ ಪದ್ಯದ ಎತ್ತುಗೀತಿಯು ಸಮಪಾದಗಳಲ್ಲಿ ಹತ್ತೊಂಬತ್ತು ಮಾತ್ರೆಗಳನ್ನೂ ವಿಷಮಪಾದಗಳಲ್ಲಿ ಇಪ್ಪತ್ತೆರಡು ಮಾತ್ರೆಗಳನ್ನೂ ಹೊಂದಿರುವ ಅರ್ಧಸಮ ಚೌಪದಿ. ನಾಲ್ಕನೆಯ ಪದ್ಯದ್ದು ಮಾತ್ರಾ ಆಟವೆಲದಿ. ಐದನೆಯದರದು ಸಾಲಿಗೆ ಹತ್ತೊಂಬತ್ತು ಮಾತ್ರೆಗಳನ್ನುಳ್ಳ ಚೌಪದಿ. ಕೊನೆಯ ಪದ್ಯದ್ದು ಒಂದು ಸಾಲಿಗೆ ಪಂಚಮಾತ್ರೆಗಳ ಎರಡು ಗಣ ಮತ್ತು ಮೂರು ಮಾತ್ರೆಗಳ ಮೂರು ಗಣಗಳನ್ನುಳ್ಳ ಮಾತ್ರಾಜಾತಿಯ ಛಂದೋವತಂಸ.
‘ವಸಂತಕಾಮ’ ಎಂಬ ಪದ್ಯದ ಪೂರ್ವಾರ್ಧ ಅನುಪ್ರಾಸ-ಅಂತ್ಯಪ್ರಾಸಗಳಿಂದ ತುಂಬಿದೆ. ಉತ್ತರಾರ್ಧದಲ್ಲಿ ಎರಡೆರಡು ಸಾಲುಗಳು ಅಂತ್ಯಪ್ರಾಸದ ಜೋಡಣೆಯಿಂದ ಕೂಡಿವೆ. ಅರ್ಥದ ದೃಷ್ಟಿಯಿಂದ ಗಮನಿಸಿದರೆ ಪೂರ್ವಾರ್ಧ ಬಗೆಬಗೆಯ ರೂಪಕ-ಉಲ್ಲೇಖಗಳ ಮಾಲೆ; ಉತ್ತರಾರ್ಧ ಸಾಂದ್ರವಾದ ಹೇಳಿಕೆಗಳ ಕಾಣ್ಕೆಯೆಂಬುದು ಸ್ಪಷ್ಟವಾಗುತ್ತದೆ. ಈ ಬಗೆಯ ಶಬ್ದಾರ್ಥಶಿಲ್ಪವನ್ನೇ ಇಲ್ಲಿಯ ಮಿಕ್ಕ ಪದ್ಯಗಳಲ್ಲಿಯೂ ಕಾಣಬಹುದು. ಆದರೆ ಅಷ್ಟಿಷ್ಟು ವ್ಯತ್ಯಾಸಗಳಿವೆ.
‘ಗ್ರೀಷ್ಮಕ್ರೋಧ’ ಎಂಬ ಪದ್ಯದ ಮೊದಲ ಎಂಟು ಸಾಲುಗಳಲ್ಲಿ ಒಂದೇ ಪ್ರಾಸವಿದೆ; ಎತ್ತುಗೀತಿಯಲ್ಲಿ ಆದ್ಯಂತ ಏಕರೂಪದ ಪ್ರಾಸವಿದೆ. ಇದು ‘ಮುಕ್ತಪದಗ್ರಸ್ತ’ ಎಂಬ ರೂಪದಲ್ಲಿರುವುದೂ ಗಮನಾರ್ಹ. ಅರ್ಥದ ದೃಷ್ಟಿಯಿಂದ ಇಲ್ಲಿ ಅನೇಕ ಕ್ರಿಯೆಗಳ ರೂಪಕೀಕರಣವನ್ನು ಕಾಣಬಹುದು. ‘ವರ್ಷಾಮದ’, ‘ಶರನ್ಮೋಹ’ ಮತ್ತು ‘ಹೇಮಂತಲೋಭ’ಗಳಲ್ಲಿ ಆಯಾ ಪದಗಳೇ ಪ್ರಾಸಸ್ಥಾನದಲ್ಲಿ ಬಂದಿವೆ. ಇನ್ನು ಎತ್ತುಗೀತಿಯ ಪ್ರಾಸದ ಪರಿಯನ್ನು ಗಮನಿಸಿದರೆ - ‘ವರ್ಷಾಮದ’, ‘ಶರನ್ಮೋಹ’ ಮತ್ತು ‘ಶಿಶಿರಮಾತ್ಸರ್ಯ’ಗಳಲ್ಲಿ ಎರಡೆರಡು ಪಾದಗಳೊಳಗೆ ಅಂತ್ಯಪ್ರಾಸವಿದ್ದರೆ ‘ಹೇಮಂತಲೋಭ’ದಲ್ಲಿ ಪ್ರಾಸವೇ ಇಲ್ಲ.
ಅರ್ಥದ ದೃಷ್ಟಿಯಿಂದ ಈ ಎಲ್ಲ ಪದ್ಯಗಳಲ್ಲಿ ಪ್ರಕೃತಿ, ಕವಿಸಮಯ, ರೂಪಕ, ಪರ್ಯಾಯೋಕ್ತ, ಉಪಚಾರವಕ್ರತೆ, ಅಪ್ರಸ್ತುತಪ್ರಶಂಸೆ ಮುಂತಾದ ಹಲವು ಅಲಂಕಾರ ಹಾಗೂ ಉಕ್ತಿವಿಶೇಷಗಳ ಬಳಕೆಯಿದೆ. ಇವುಗಳೆಲ್ಲ ಒಟ್ಟಾಗಿ ಸಾಂದ್ರಸಂಕೀರ್ಣವಾದ ಕಾವ್ಯಾನುಭವವನ್ನು ಕೊಡುವಲ್ಲಿ ದುಡಿದಿವೆ.
To be continued.