ಈ ಮೊದಲೇ ಕಂಡಂತೆ ನವೋದಯದಿಂದೀಚೆಗೆ ನಮ್ಮಲ್ಲಿ ಸಾನೆಟ್ ಹೆಚ್ಚಿನ ಪ್ರಸಿದ್ಧಿ-ಪ್ರಾಶಸ್ತ್ಯಗಳನ್ನು ಗಳಿಸಿದೆ. ನವ್ಯ-ನವ್ಯೋತ್ತರಯುಗಗಳಲ್ಲಿಯೂ ಈ ಬಂಧವು ಉಳಿದುಬಂದಿದೆ. ಆದರೂ ಲಕ್ಷಣಶುದ್ಧವಾದ ಸಾನೆಟ್‌ಗಳನ್ನು ನವೋದಯದಲ್ಲಿಯೇ ಕಾಣಬಹುದು. ಈಚಿನ ದಶಕಗಳಲ್ಲಿ ಮಾತ್ರಾಸಮತೆ, ಪಾದಬದ್ಧತೆ, ಪ್ರಾಸಪೂರ್ಣತೆ ಮುಂತಾದ ಶಿಸ್ತಿಲ್ಲದೆ ಸಾನೆಟ್ ತನ್ನ ಲಕ್ಷಣಶುದ್ಧಿಯನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಲಕ್ಷಣಬದ್ಧವಾದ ಬಂಧಗಳನ್ನೇ ವಿವೇಚಿಸುವ ಈ ಪ್ರಯತ್ನದಲ್ಲಿ ಚ್ಯುತಲಕ್ಷಣಗಳಿಗೆ ಅವಕಾಶವಿಲ್ಲದಿರುವುದು ಯುಕ್ತವೇ ಆಗಿದೆ. ಈ ಹಿನ್ನೆಲೆಯಲ್ಲಿ ನವೋದಯದ ಕೆಲವು ಮಾದರಿಗಳನ್ನು ನಾವು ಪರಿಶೀಲಿಸಬಹುದು:
ನನ್ನವೀ ನುಡಿಗಳಿರ! ಕಾಲದಲೆಗಳಲಿ
ನಿಮ್ಮನುರಿಹಣತೆಯಂತಿದೊ ತೇಲಿಬಿಡುವೆ:
ಅನುಗೊಳಲಿ ಜಗದುಸಿರು ನಿಮಗೆದುರುಗೊಳಲಿ,
ಆಳ್ವಿನಂ ಬಾಳ್ವುದೆಂಬುದೆ ನಿಮ್ಮ ಗೊಡವೆ.
ತನ್ನ ಮರಿಗಳನೊಮ್ಮೆ ಕಟ್ಟೆರಕೆ ಮೂಡಿ-
ದನಿತುಮಂ ಪೊರಮಡಿಸಿದುಲಿವಕ್ಕಿಯಮ್ಮ
ಸಂಜೆಯೊಳವಂ ಗೂಡುಗೊಳಿಪಂತೆ ಕೂಡಿ-
ಸಿಡುವೆನಾನೀ ಹೊತ್ತಗೆಯೊಳೆನ್ನ ನಿಮ್ಮ
ನನ್ನವೆಂದೆನೆ ನಿಮ್ಮನೆಲ್ಲಿಂದಲೆಲ್ಲಿ-
ಗಯ್ದಲಂದಂದು ಹೊರಟಾ ನಡುವೆ ನಿಂತು
ನನ್ನೆದೆಯೊಳರೆಗಳಿಗೆ ಉಲಿದುಲಿಸಿದಲ್ಲಿ
ನನ್ನವಾದಿರೆ? ನಿಮ್ಮನೆನ್ನವೆನಲೆಂತು?
ತೋಟವಾವುದನೊ ತಮ್ಮನುಪಥದಿ ಕಂಡು
ಕ್ಷಣಮೆರಗಲಾ ತೋಟದಹುದೆ ಗಿಳಿವಿಂಡು? (ಗಿಳಿವಿಂಡು (ಸಮಗ್ರಕವಿತೆಗಳು), ಪು. ೩)
ಇದು ರಾಷ್ಟ್ರಕವಿ ಗೋವಿಂದ ಪೈಗಳ ರಚನೆ. ಕನ್ನಡಕ್ಕೆ ಮೊತ್ತಮೊದಲ ಸಾನೆಟ್ಟನ್ನು ಕೊಟ್ಟ ಶ್ರೇಯಸ್ಸು ಅವರದೇ. ಈ ಬಂಧವನ್ನವರು ‘ಚತುರ್ದಶಪದಿ’ ಎಂದಿದ್ದಾರೆ. ನಿರಪವಾದವೆಂಬಂತೆ ಅವರ ಸಾನೆಟ್ಟುಗಳೆಲ್ಲ ಪ್ರತಿಪಾದದ ಅಂತ್ಯದಲ್ಲಿ ಊನಗಣವನ್ನು ಹೊಂದಿವೆ. ಆದರೆ ಅವರು ಅಲ್ಲಲ್ಲಿ ಖಂಡಪ್ರಾಸವನ್ನು ಮಾಡುವ ಕಾರಣ ಪದಗಳು ಶ್ರುತಿಕಟುತ್ವ ಮತ್ತು ಅಪ್ರತೀತತ್ವಗಳ ದೋಷಗಳಿಗೆ ತುತ್ತಾಗಿವೆ. ಉಳಿದಂತೆ ಪೈಗಳ ಸಾನೆಟ್ಟುಗಳಲ್ಲಿ ವಾಗರ್ಥಸೌಂದರ್ಯದ ಸಮೃದ್ಧಿ ಚೆನ್ನಾಗಿದೆ. ಸದ್ಯದ ಸಾನೆಟ್ ಅವರ ‘ಗಿಳಿವಿಂಡು’ ಕವನಸಂಕಲನದ ಪ್ರಸ್ತಾವನೆಯಂತಿದೆ. ಇಲ್ಲಿ ಪೆಟ್ರಾರ್ಕನ್ ಪದ್ಧತಿಯನ್ನು ಅನುಸರಿಸಿದ್ದರೂ ಕಡೆಯ ಎರಡು ಸಾಲುಗಳು ಸಮಾನಪ್ರಾಸದ ಮೂಲಕ ಒಂದು ದ್ವಿಪದಿಯಂತಾಗಿ ಶೇಕ್ಸ್ಪಿಯರಿಯನ್ ಮಾದರಿಗೆ ಹತ್ತಿರವಾಗಿವೆ. ಇಲ್ಲಿಯ ಪದಶುದ್ಧಿ ಮತ್ತು ಭಾವಸಂಪತ್ತಿಗಳು ಅನ್ಯಾದೃಶ. ಸ-ರಿ-ಸ-ರಿ; ಗ-ಮ-ಗ-ಮ; ಪ-ದ-ಪ-ದ; ನಿ-ನಿ ಎಂಬ ಪ್ರಾಸವಿನ್ಯಾಸವುಳ್ಳ ಈ ಸಾನೆಟ್ ಎಂಟು ಸಾಲುಗಳ ಬಳಿಕ ಬರುವ ತಿರುವಿನ ಕಾರಣದಿಂದಲೇ ಪೆಟ್ರಾರ್ಕನ್ ಮಾದರಿಯನ್ನು ಅನುಸರಿಸಿದೆ.
ಹೊಗೆ ಮೋಡ ಹಿಂಜಿ, ಕಣ್ಮರೆಯಾಗುವಂತೆ, ನೆನೆ-
ಸಿದ ರೂಪ ಹುಡಿಯಾಗುತಿದೆ; ಮಬ್ಬುಕವಿದು ಬರು-
ತಿದೆ; ಸ್ವಪ್ನಲೋಕದೊಳು ಆಕಾರ ಪ್ರಳಯವಿರು-
ವಂತೆ, ತುಂಬಿರೆ ನಿರಾಕಾರ ತಮ. ಚಿತ್ತಘನ
ನಿಬಿಡ ವನ; ಹೊತ್ತುಗೊತ್ತಿಲ್ಲ; ಮಿಸುಗುಡದೆ ಮನ
ತನ್ನ ನುಂಗಿದೆ ತಾನು ಯಾವ ಲೋಕವೊ ಇದಿರು?
ಸೃಷ್ಟಿಯಿಲ್ಲದ ದೃಷ್ಟಿ. ಚಿತ್ರ! ನಿಶ್ಚಿತ್ರ. ಇರು-
ವೆನೊ ನಾನು? ಇಹುದೇನು? ಬರಿಬಯಲ ನಿರ್ವಚನ!
ಮರಣ ಮೂರ್ಛಿತ ದೇಹಕುಸಿರು ಹುಟ್ಟಿದ ಹಾಗೆ
ಸ್ಪಂದಿಸುವದಿದೊ ತಮವು; ದಿವ್ಯ ಶಾಲಗ್ರಾಮ-
ಶಿಲೆಯೊಳುದಿಸಿದ ಕೊಳಲ ಕೃಷ್ಣಮೂರ್ತಿಯ ಮಧುರ-
ಮುರಲಿನಾದವು ತಮದ ಕಣ ಕುಣಿಸುತಿದೆ; ಸೋಗೆ
ನವಿಲಂತೆ, ಸುತ್ತು ಕಣ್ಣೋ ಕಣ್ಣು! ಚಿರವಿಧುರ
ಪೂರ್ವವಧು ಪಡೆದಂತೆ, ಮನವೆ ಮಂಗಲಧಾಮ. (ಪ್ರಳಯ ಸೃಷ್ಟಿ (ಉಯ್ಯಾಲೆ), ಪು. ೪)
ಬೇಂದ್ರೆ ಅವರ ಈ ರಚನೆ ಸಾಲಿಗೆ ಇಪ್ಪತ್ತು ಮಾತ್ರೆಗಳಂತೆ ಸಾಗುತ್ತದೆ. ಎಂಟು ಸಾಲುಗಳ ಬಳಿಕ ಬರುವ ತಿರುವು ಸ್ಫುಟವೆನಿಸಿಲ್ಲ. ಆದರೂ ಭಾವದ ವರ್ಣಚ್ಛಾಯೆ ಮಾರ್ಪಡುವ ಸೂಚನೆಯಿದೆ. ತುಂಬ ಅಮೂರ್ತವಾದ ತತ್ತ್ವವನ್ನು ಸಂಕೇತಗಳ ಮೂಲಕ ಘನೀಕರಿಸುವ ಹವಣನ್ನಿಲ್ಲಿ ಕಾಣಬಹುದು. ಪ್ರಾಸನಿರ್ವಾಹವಿಲ್ಲಿ ಶಿಸ್ತಾಗಿ ಸಾಗಿದ್ದರೂ ಒಂದೆರಡು ಕಡೆಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ. ಮೂರು ಕಡೆಗಳಲ್ಲಿ ಬಂದಿರುವ ಖಂಡಪ್ರಾಸಗಳು ತೊರೆಯೋಟದಿಂದ ಪದ್ಯವನ್ನು ಓದಿಕೊಳ್ಳುವಾಗ ಉನ್ಮೀಲಿತವಾಗದೆ ಹೋಗಬಹುದು. ಸ-ರಿ-ರಿ-ಸ; ಸ-ರಿ-ರಿ-ಸ; ಗ-ಮ-ಪ; ಗ-ಪ-ಮ ಎಂಬುದು ಇಲ್ಲಿಯ ಪ್ರಾಸವಿನ್ಯಾಸ.
ಕಾಳಿದಾಸನ ಮಧುರ ಕಾವ್ಯಪ್ರಪಂಚದಲಿ
ರಾಮಗಿರಿ ನೆತ್ತಿಯಲಿ ವಿಧುರ ವಿರಹದಿ ನೊಂದು
ಜಡವ ಚೇತನಗೆತ್ತು ಯಕ್ಷನೊರ್ವನು ಅಂದು
ಮೇಘದೂತನ ಪ್ರಿಯೆಯ ಬಳಿಯಟ್ಟಿದಂದದಲಿ,
ಕೊಳಲಿನಿನಿದನಿ ಕುಣಿದು ಬರೆ ಕರ್ಣಲೋಕದಲಿ,
ವಿಹರಿಸುವೆ ಕಲ್ಪನಾದೃಷ್ಟಿದೂತನನಟ್ಟಿ
ರಾಸಲೀಲಾಮೋಹನಾಂಗನನು ಮೈಮುಟ್ಟಿ,
ರಾಧೆ-ಗೋಪಿಯರೊಡನೆ ನೃತ್ಯದಾ ನಾಕದಲಿ.
ವಾಸ್ತವಜಗತ್ತು ಭಾವದ ಗಂಗೆಯಲಿ ತೇಲಿ,
ತಲ್ಲೀನವಾಗಿ ವಿಸ್ಮೃತಿಯ ಕಾಳಿಂದಿಯಲಿ,
ಮಗ್ನವಹುದಾನಂದವಾರಿಧಿಗೆ. ನೂರಾರು
ಕಾಮಧನುಗಳ್ ಸ್ವಪ್ನಸುಂದರಿಯರನು ಹೋಲಿ
ನರ್ತನಂಗೈದು ಬರೆ ಮೋಹಶೃಂಗಾರದಲಿ,
ಸಂಗೀತಸ್ರೋತದಲಿ ನಾನು ಬಣ್ಣದ ನೀರು! (ಕುವೆಂಪು ಸಮಗ್ರಕಾವ್ಯ, ಸಂ. ೧. ಪು. ೪೪೮)
ಕುವೆಂಪು ಅವರ ಈ ಸಾನೆಟ್ ಕೃಷ್ಣನ ಕೊಳಲನ್ನು ಕುರಿತಾದುದು. ಕೊಳಲಿನ ಮೂಲಕ ಶೃಂಗಾರದ ವಿಪ್ರಲಂಭಸೌಂದರ್ಯವನ್ನು ಧ್ವನಿಸಲಾಗಿದೆ. ಶಿಲ್ಪದೃಷ್ಟಿಯಿಂದ ಪೆಟ್ರಾರ್ಕನ್ ಮಾದರಿಯನ್ನು ಅನುಸರಿಸಿದ್ದರೂ ಎಂಟು ಸಾಲುಗಳ ಬಳಿಕ ಯಾವ ತಿರುವೂ ಇಲ್ಲದ ಕಾರಣ ಶೇಕ್ಸ್ಪಿಯರಿಯನ್ ಪದ್ಧತಿಯನ್ನು ಹೋಲುವಂತಿದೆ. ಸ-ರಿ-ರಿ-ಸ; ಸ-ಗ-ಗ-ಸ; ಮ-ಸ-ಪ; ಮ-ಸ-ಪ ಎಂಬ ಪ್ರಾಸವಿನ್ಯಾಸವನ್ನಿಲ್ಲಿ ಕಾಣಬಹುದು. ಖಂಡಪ್ರಾಸಗಳು ಇಲ್ಲದಿರುವುದರಿಂದ ಪಾದಾಂತಗಳಲ್ಲಿ ಪದಗಳ ಸ್ಫುಟತೆಯೂ ಅರ್ಥಪ್ರತೀತಿಯೂ ತೊಡಕಿಗೆ ತುತ್ತಾಗಿಲ್ಲ.
ಅದಿಗೊ ದೆಸೆ ಕೂಡುವೆಡೆ ತಿರೆಗೂರುತಿದೆ ಮುಗಿಲು
ಹೆಬ್ಬಿದಿರ ಮೆಳೆಯ ಚೆಲುವನು ತೋರಿ, ಬಿಳಲೂರಿ
ಹಬ್ಬಿರುವ ಮಹಾವಟವೃಕ್ಷದೊಲು ಹಸರಿಸುತ
ಇದೆಕೊ ಎನುತಿದೆ ನನಗೆ ಮೈ ಬಿಡದ ಮಿಂಚಿನೊಳು
ಕಾರೊಡಲ ಬಣ್ಣದೊಳು ತನ್ನ ಪನ್ನತಿಕೆಯನು
ಮೆರೆವ ಗುಡುಗಿನೊಳು ಗಿರಿಮೈತ್ರಿಯೊಳು ಸರ್ವಾರ್ತಿ-
ಹರಕ್ಷೀರಧಾರೆಯೊಳು ಹಿಂದೆ ತಾ ಹಿಡಿದಿಟ್ಟ
ನೂರಾರು ಕವಿಮುದಗಳೈಸಿರಿಯ ತರುವಂತೆ!
ಸನಿಯಕೈದಿತು ಮಳೆ, ನೆನೆನೆನೆದುದೆನ್ನ ಮೈ.
ಕುಳಿತೆಡೆಯೆ ಕುಳಿತಿಹೆನು ಚಿರಕಾಲದಭಿಲಷಿತ
ಸಲುವ ತೆರ. ಅರಿತರಾರೀ ಮೇಘವಾವ ಪಾ-
ವನ ನದೀತೀರ್ಥವನು ತಂದಿಹುದೊ ವೇಂಗಡದ
ಮಲೆಮುಟ್ಟಿ ಬಂದಿಹುದೊ ಸೇಚನದೊಳೆನ್ನ ಹರಸೆ
ಕರುಣೆಯೊಳು ನಿಂತೆಡೆಯೆ ಅವಭೃಥಸ್ನಾನನೆನಿಸೆ? (ಮಳೆ (ರಸಸರಸ್ವತಿ), ಪು. ೩೬)
ಇದು ಪುತಿನ ಅವರ ಕವಿತೆ. ಸಾನೆಟ್ಟಿನಲ್ಲಿ ನಮ್ಮ ಪರಂಪರೆಗೆ ಅನುಸಾರವಾದ ಆದಿಪ್ರಾಸವನ್ನು ಬಳಸಿದವರು ಬಹುಶಃ ಇವರೊಬ್ಬರೇ. ಈ ಮೂಲಕ ಇವರು ಪ್ರಾಸಕ್ಕೆ ಸಂಬಂಧಿಸಿದ ಹಲವಾರು ತೊಡಕುಗಳನ್ನು ದಾಟಿಕೊಂಡಿದ್ದಾರೆಂಬುದು ಮತ್ತೊಂದು ವಿಶೇಷ. ಸದ್ಯದ ಸಾನೆಟ್ಟಿನಲ್ಲಿ ಯಾವುದೇ ತಿರುವಿಲ್ಲ. ಪ್ರಾಸವಿನ್ಯಾಸದ ಪರಿ ಶೇಕ್ಸ್ಪಿಯರಿಯನ್ ಮಾದರಿಗೆ ಸಂವಾದಿಯಾಗಿದೆ. ಪುತಿನ ಅವರ ಸಾನೆಟ್ಟುಗಳ ವಿಶೇಷವೆಂದರೆ ಕಡೆಯ ಎರಡು ಸಾಲುಗಳನ್ನು ಇಪ್ಪತ್ತೆರಡು ಮಾತ್ರೆಗಳ ವ್ಯಾಪ್ತಿಗೆ ಹಿಗ್ಗಿಸಿ ಅಂತ್ಯಪ್ರಾಸದಿAದ ಮುಗಿಸುವುದು. ಇಲ್ಲಿಯೂ ಇದೇ ಲಕ್ಷಣ ಪಾಲಿತವಾಗಿದೆ. ಒಂದೆರಡು ಕಡೆ ಛಂದೋಗತಿ ಎಡವಿದಂತಿದೆ (ಉದಾ: ‘ಹಬ್ಬಿರುವ ಮಹಾವಟವೃಕ್ಷ’, ‘ಹರಕ್ಷೀರ-’). ಪದಪದ್ಧತಿ ಅಷ್ಟಾಗಿ ಹೃದ್ಯವೆನಿಸದಿರುವುದು ಇಲ್ಲಿಯ ಮತ್ತೊಂದು ಕೊರತೆ.
ಉಪಸಂಹಾರ
ಈವರೆಗೆ ಸೀಸಪದ್ಯ ಮತ್ತು ಸಾನೆಟ್ಟುಗಳು ಕನ್ನಡದಲ್ಲಿ ಮೈದಳೆದ ಬಗೆಯನ್ನು ಸೋದಾಹರಣವಾಗಿ ಪರಿಶೀಲಿಸಿದ್ದಾಯಿತು. ವಸ್ತುನಿಷ್ಠವಾಗಿ ನೋಡಬಲ್ಲವರಿಗೆ ಈ ಎರಡು ಬಂಧಗಳ ಪೈಕಿ ಶಿಲ್ಪಸೌಷ್ಠವ ಮತ್ತು ರಾಚನಿಕ ವೈವಿಧ್ಯಗಳಿಗೆ ಸೀಸಪದ್ಯವೇ ಹೆಚ್ಚಿನ ಅವಕಾಶವನ್ನು ಕೊಡುತ್ತಿರುವುದು ಸ್ಪಷ್ಟವಾಗದಿರದು. ಇದಕ್ಕೆ ಕಾರಣಗಳನ್ನೂ ನಾವು ಕಂಡಿದ್ದಾಗಿದೆ.
ತಾತ್ತ್ವಿಕವಾಗಿ ಹೇಳುವುದಾದರೆ, ಅಭಿಜಾತ ಭಾರತೀಯಸಾಹಿತ್ಯದ ರಾಚನಿಕ ಸ್ವರೂಪಗಳಾದ ಛಂದಸ್ಸು, ಪದ್ಯಶಿಲ್ಪ, ಪದಪದ್ಧತಿ, ಅಲಂಕಾರವಿನ್ಯಾಸ, ಪ್ರಾಸವೈವಿಧ್ಯ ಮುಂತಾದುವು ಪಾಶ್ಚಾತ್ತ್ಯ ಭಾಷೆಗಳೂ ಸೇರಿದಂತೆ ಮಿಕ್ಕೆಲ್ಲ ಜಗತ್ತಿನ ನುಡಿಗಳಿಗಿಂತ ಸಮೃದ್ಧಿ-ವೈವಿಧ್ಯಗಳನ್ನು ಮೊದಲಿನಿಂದ ಹೊಂದಿವೆ. ಇದಕ್ಕೆ ಕಾರಣ ನಮ್ಮ ನುಡಿಗಳ ಜಾಡು. ಈ ತಥ್ಯವನ್ನು ಚೆನ್ನಾಗಿ ಮನಗಾಣದೆ ಹೊಸತನದ ಹೊಯ್ಲಿನಲ್ಲಿ ಹೊರಗಿನ ರಚನಾಶಿಲ್ಪವನ್ನು ಅನುಕರಿಸಲು ತೊಡಗಿದರೆ ಆಕೃತಿಸ್ವಾರಸ್ಯ ಅಷ್ಟಾಗಿ ಉಳಿಯದು. ಯಾವುದೇ ಆಶಯದ ರೀತಿ ವೈಶ್ವಿಕವೇ ಆದ ಕಾರಣ ಅಲ್ಲಿ ಆಕೃತಿಗಳ ನಿರ್ಬಂಧ ಇರುವುದಿಲ್ಲ. ಹೀಗಾಗಿ ಹೆಚ್ಚು ಆಶಯನಿಷ್ಠವಾದ ಸಾಹಿತ್ಯಪ್ರಕಾರಗಳನ್ನು ನಾವು ಮಿಕ್ಕ ಭಾಷೆಗಳಿಂದ ಗ್ರಹಿಸುವುದು ಅನುಕೂಲಕಾರಿ. ಉದಾ: ಪಾಶ್ಚಾತ್ತ್ಯರಿಂದ ನಾವು ಪಡೆದ ಕಾದಂಬರಿ, ಲಲಿತಪ್ರಬಂಧ, ಪ್ರವಾಸಕಥನ, ಆತ್ಮಕಥೆ ಮುಂತಾದ ಪ್ರಕಾರಗಳು ತಮ್ಮ ಸ್ವರೂಪದಿಂದ ನಮ್ಮ ಸಾಹಿತ್ಯಕ್ಕೆ ಉಪಕಾರಿಗಳಾಗಿವೆ. ಇವುಗಳ ಮಟ್ಟಿಗೆ ಸಾನೆಟ್, ಪ್ರಗಾಥ, ಪ್ರತಿಮೆ, ಕನ್‌ಸೀಟ್ ಮುಂತಾದ ಬಂಧಗಳೂ ಪರಿಕಲ್ಪನೆಗಳೂ ಒದಗುವುದು ಸಾಧ್ಯವಿಲ್ಲ.
ದಿಟವೇ, ಭಾಷೆಯೊಂದು ಹೊಸಹೊಸ ರೀತಿಯ ಅಭಿವ್ಯಕ್ತಿಗಳಿಗಾಗಿ ಬೇರೆಬೇರೆ ಸಂಸ್ಕೃತಿಗಳ ಉಕ್ತಿಸ್ವಾರಸ್ಯಗಳನ್ನು ತನ್ನೊಳಗೆ ತಂದುಕೊಳ್ಳಲು ಉತ್ಸುಕವಾಗಿರಬೇಕು. ಇದನ್ನೇ ಬಿ.ಎಂ.ಶ್ರೀ. ಅವರ ‘ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ’ ಎಂಬ ನುಡಿಯಲ್ಲಿ ನೋಡಬಹುದು. ಇಂಥ ಕೆಲಸಗಳು ಪ್ರಾಯೋಗಿಕವಾಗಿ ಸಾಗುತ್ತವೆ; ಸಾಗಬೇಕು ಕೂಡ. ಈ ಬಗೆಯ ಉದ್ಯಮಗಳ ಸಾರಾಸಾರವಿವೇಚನೆ ಕಾಲಕಾಲಕ್ಕೆ ನಡೆಯಬೇಕು; ಮತ್ತಿದು ತಲಸ್ಪರ್ಶಿಯಾದ ಮೀಮಾಂಸೆಯ ಮಟ್ಟದಲ್ಲಿ ಸಾಗಬೇಕು. ತನ್ಮೂಲಕ ಬರುವ ಮಥಿತಾರ್ಥವನ್ನು ಕವಿ-ವಿಮರ್ಶಕರು ಅರಿತು, ಆದರಿಸಿ ತಮ್ಮ ಮುಂದಿನ ಪ್ರಕಲ್ಪಗಳಲ್ಲಿ ಅನ್ವಯಿಸಿಕೊಳ್ಳಬೇಕು. ಇಲ್ಲವಾದರೆ ನಮ್ಮ ಭಾಷೆ-ಸಾಹಿತ್ಯಗಳ ಸ್ವಂತಿಕೆ-ಸಾಮರ್ಥ್ಯಗಳು ಸೊರಗುವುದರಲ್ಲಿ ಸಂದೇಹವಿಲ್ಲ.
Concluded.