ರಾಕೇಂದುಬಿಂಬಮೈ ರವಿಬಿಂಬಮೈ ಯೊಪ್ಪ
ನೀರಜಾತೇಕ್ಷಣ ನೆಮ್ಮೊಗಂಬು
ಕಂದರ್ಪಕೇತುವೈ ಘನಧೂಮಕೇತುವೈ
ಯಲರು ಬೂಬೋಡಿಚೇಲಾಂಚಲಮ್ಮು |
ಭಾವಜು ಪರಿಧಿಯೈ ಪ್ರಳಯಾರ್ಕು ಪರಿಧಿಯೈ
ಮೆರಯುನಾಕೃಷ್ಟಮೈ ಮೊಲತ ಚಾಪ-
ಮಮೃತಪ್ರವಾಹಮೈ ಯನಲಸಂದೋಹಮೈ
ತನರಾರುನಿಂತಿ ಸಂದರ್ಶನಂಬು ||
ಹರ್ಷದಾಯಿಯೈ ಮಹಾರೋಷದಾಯಿಯೈ
ಪರಗು ಮುದ್ದರಾಲಿ ಬಾನವೃಷ್ಟಿ |
ಹರಿಕಿನರಿಕಿ ಜೂಡನಂದಂದ ಶೃಂಗಾರ-
ವೀರರಸಮುಲೋಲಿ ವಿಸ್ತರಿಲ್ಲ || (ಶ್ರೀಮಹಾಭಾಗವತ, ೧೦.೨.೧೮೩)
ನರಕಾಸುರನನ್ನು ಸಂಹರಿಸುವಾಗ ಸತ್ಯಭಾಮೆಯ ವ್ಯಕ್ತಿತ್ವ ಶೃಂಗಾರ-ವೀರಗಳನ್ನು ಕೃಷ್ಣ ಮತ್ತು ನರಕರತ್ತ ಒಮ್ಮೆಲೇ ಹೇಗೆ ಬಿಂಬಿಸುತ್ತಿತ್ತೆಂಬ ಭಾವ ಈ ಪದ್ಯದಲ್ಲಿದೆ. ಕವಿ ವಿರುದ್ಧವಾದ ಭಾವಗಳ ಸಮಾನ ಪ್ರಭಾವವನ್ನು ಧ್ವನಿಸಲು ಸಮಾನ ಶ್ರುತಿಸೌಖ್ಯವುಳ್ಳ ಪದಗಳನ್ನು ಬಳಸಿರುವುದು ಇಲ್ಲಿಯ ವಿಶೇಷ. ಇಂಥ ಪದಬಂಧವನ್ನು ರೂಪಿಸಲು ಲಯರಹಿತವಾದ ವರ್ಣವೃತ್ತಗಳು ಆಸ್ಪದವೀಯುವುದಿಲ್ಲ. ಇನ್ನು ಲಯಾನ್ವಿತವಾದ ಪ್ರಸಿದ್ಧವೃತ್ತಗಳಲ್ಲಿ ಏಕತಾನತೆಯ ಅಪಾಯ ಹೆಚ್ಚು. ಲಯಾನ್ವಿತವಾದ ಮಾತ್ರಾಜಾತಿಗಳ ಪೈಕಿ ಕಂದದಂಥವು ತೀರ ಅಲ್ಪಗಾತ್ರದವು. ಹೀಗಾಗಿ ಉದ್ದಿಷ್ಟವಾದ ಪರಿಣಾಮವನ್ನು ತರಬಲ್ಲ ಸಾಮರ್ಥ್ಯವಿರುವುದು ಸೀಸಪದ್ಯಕ್ಕೆ. ಇದನ್ನು ಕವಿ ಗಮನಿಸಿ ಬಳಸಿಕೊಂಡ ಬಗೆ ಪರಿಣಾಮಕಾರಿ.
ಪ್ರಾಸಾದನಿರ್ಮಾಣರಕ್ತಿ ಮೀಕು ನೃಪಾಲ
ಪ್ರಾಸಾದನಿರ್ಮಾಣರಕ್ತಿ ಮಾಕು
ಸಾಧುವೃತ್ತಿವಿಧಾನಸಕ್ತಿ ಮೀಕು ನೃಪಾಲ
ಸಾಧುವೃತ್ತವಿಧಾನಸಕ್ತಿ ಮಾಕು |
ನವರಸಾಸಂಪಾದನರತಿ ಮೀಕು ನೃಪಾಲ
ನವರಸಾಸಂಪಾದನರತಿ ಮಾಕು
ಸತತಸದ್ಗುಣಗಣಾಸಕ್ತಿ ಮೀಕು ನೃಪಾಲ
ಸತತಸದ್ಗಣಗಣಾಸಕ್ತಿ ಮಾಕು ||
ಮೀಕು ಯಾಚವಿರುದು ಮಾಕುನು ಯಾಚಕ
ಬಿರುದು ಗಲದು ವರ್ಣಭೇದಮಾತ್ರ |
ಮುಂಡೆ ದೀನಿನೆನ್ನಕೊಸಗುಮೀ ವೇಂಕಟ
ಕೃಷ್ಣಯಾಚಭೂಪ ಯಿಪುಡು ಸಮತ || (ನಾನಾರಾಜಸಂದರ್ಶನ, ಪು. ೧೩)
ತಿರುಪತಿ ವೇಂಕಟಕವಿಗಳ ರಾಜಚಾಟುರೂಪದ ಆಶುಕವಿತೆಗಳ ಪೈಕಿ ಇದೂ ಒಂದು. ಇಲ್ಲಿ ಶ್ಲೇಷದ ಮೂಲಕ ಅವರು ಸಾಧಿಸಿದ ಶಬ್ದಮೈತ್ರಿ ಸೀಸಪದ್ಯಶಿಲ್ಪವನ್ನು ಸೊಗಯಿಸಿದೆ. ಎತ್ತುಗೀತಿಯಲ್ಲಿ ಬಂದಿರುವ ತಿರುವೂ ಗಮನಾರ್ಹ. ಸೀಸಪದ್ಯದ ಭಾಗದಲ್ಲಿ ಕವಿ ಮತ್ತು ಪ್ರಭುಗಳ ಸಾಮ್ಯದತ್ತ ಅವಧಾರಣೆಯಿದ್ದರೆ ಎತ್ತುಗೀತಿಯಲ್ಲಿ ಅವರ ವೈಷಮ್ಯದತ್ತ ಅವಧಾರಣೆಯುಂಟು.
ಚಿನ್ನಾರಿ ಪೊನ್ನಾರಿ ಚಿರುತ ಪ್ರಾಯಮು ಚೂರ-
ಗೊನ್ನ ವಾಡೆ ಪ್ರಿಯುಂಡು ಕೋಮಲಾಂಗಿ
ತರಪಿ ವೆನ್ನೆಲಲತೋನೊರಪು ಗಲ್ಗಿನ ನಾಟಿ
ಚೈತ್ರರಾತ್ರುಲೆ ಕದಾ ಸರಸಿಜಾಕ್ಷಿ |
ಮಾಲತೀಪರಿಮಳವ್ಯಾಲೋಲಮುಲು ನಾಟಿ
ನೀಪವಾಯುವುಲೆಕಾ ನೀರಜಾಸ್ಯ
ತಲಪುಲೊಕ್ಕಟಿ ಗಾಗ ಗಲಸಿ ಕುಲ್ಕಿನ ನಾಟಿ
ದಾನನೇ ಕದ ಯೇನು ದಲಿರುಬೋಡಿ ||
ನಾಟಿ ಸುರತಪ್ರಸಂಗಮೇ ಬೋಟಿ ಮಿನ್ನ-
ಯೈನ ನಾಮನಮದಿಯೇಮೊ ಕಾನಿ ಮೇಟಿ |
ನಾಟಿ ರೇವಾನದೀತೀರವಾಟಿಯೊಪ್ಪ
ವೇತಸೀತರುಮೂಲಮ್ಮು ವೆದಕ ಬೋವು || (ಶತಾವಧಾನಸಾರ, ಪು. ೪೩)
ಶೀಲಾ ಭಟ್ಟಾರಿಕೆಯ ಪ್ರಸಿದ್ಧಪದ್ಯ ‘ಯಃ ಕೌಮಾರಹರಃ...’ ಎಂಬುದರ ಆಶು ಅನುವಾದವಿದು. ಕವಿಗಳು ಮೂಲದಲ್ಲಿಲ್ಲದ ಸಖೀಸಂಬೋಧನೆಯನ್ನು ಇಲ್ಲಿ ತರುವ ಮೂಲಕ ಸೀಸಪದ್ಯದ ಪಾದಾಂತಗಳಿಗೊಂದು ಏಕರೂಪತೆಯನ್ನು ಕಲ್ಪಿಸಿದ್ದಾರೆ. ಮೂಲದ ಕಡೆಯ ಚರಣದಲ್ಲಿ ಬರುವ ವ್ಯತಿರೇಕವನ್ನು ಇಡಿಯ ಎತ್ತುಗೀತಿಯೊಳಗೆ ಹವಣಿಸುವ ಮೂಲಕ ಸಾಧಿಸಿರುವ ತಿರುವೂ ಸುಂದರವಾಗಿದೆ.
ಕಂಜಾತಭವು ರಾಣಿ ಮುಂಜೇತಿ ರಾಚಿಲ್ಕ
ಕಲ್ಕಿ ಕಂಠಮ್ಮುಲೋನೊಲ್ಕು ಸೂಕ್ತಿ
ಮುದ್ದುಲ ಗೋಪಾಲು ಮೋಹನಮುರಳಿಲೋ
ಅಂದಾಲು ಚಿಂದು ರಾಗಾನುರಕ್ತಿ |
ದ್ರುಹಿಣಮಾನಸಪುತ್ರು ಮಹತೀವಿಪಂಚಿಲೋ
ಸ್ಪಂದಿಂಚು ಭಕ್ತಿರಸಪ್ರಸಕ್ತಿ
ಬಾಲಭಾಸ್ಕರದೇವು ಬಂಗಾರು ಕಿರಣಾಲ
ತನರಾರು ನವ್ಯಚೈತನ್ಯಶಕ್ತಿ ||
ಏಕಮೈ ಲೋಕಮುನ ನವಾಲೋಕಮೈನ
ಆಂಧ್ರಸಂಗೀತಲಹರಿಲೋನೈಕ್ಯಮಂದಿ |
ಕೃತುಲುಗಾ ಮಾರಿ ನವನವಾಕೃತುಲು ದಾಲ್ಚಿ
ತ್ಯಾಗರಾಜುಲ ಗೊಂತುಲೋ ಮ್ರೋಗಸಾಗೆ || (ಉದಯಶ್ರೀ, ಪು. ೨೦೫)
ಇದು ಕರುಣಶ್ರೀ ಎಂಬ ಕಾವ್ಯನಾಮವುಳ್ಳ ಜಂಧ್ಯಾಲ ಪಾಪಯ್ಯಶಾಸ್ತ್ರಿಗಳ ಕವಿತೆ. ತ್ಯಾಗರಾಜರನ್ನು ಸ್ತುತಿಸುವ ಈ ಪದ್ಯದಲ್ಲಿ ಅವರ ಗಾನದ ವೈಶಿಷ್ಟ್ಯ ಹರಳುಗಟ್ಟಿದೆ. ಸೀಸಪದ್ಯದ ಭಾಗದಲ್ಲಿ ಶಾರದೆಯ ಗಿಣಿ, ಕೃಷ್ಣನ ಕೊಳಲು, ನಾರದನ ವೀಣೆ ಮತ್ತು ಬಾಲಭಾಸ್ಕರನ ಕಾಂತಿಗಳು ತ್ಯಾಗರಾಜರ ಗಾನದಲ್ಲಿ ಕಲೆತ ಬಗೆ ಉಲ್ಲೇಖಗೊಂಡಿದ್ದರೆ ಎತ್ತುಗೀತಿಯಲ್ಲಿ ಈ ಮಹತ್ತ್ವ ತೆಲುಗಿಗೆ ಇಳಿದುಬಂದ ಬಗೆ ಬಣ್ಣನೆಗೊಂಡಿದೆ. ಇಡಿಯ ಪದ್ಯದಲ್ಲಿ ತೋರಿಕೊಳ್ಳುವ ಪ್ರಾಸಾನುಪ್ರಾಸಗಳು ಗಾನಕಲೆಗೆ ವ್ಯಂಜಕವಾಗಿ ದುಡಿದಿವೆ.
ಜಯದೇವು ಕಡ ಕ್ರೋಧಮಯಿ ರಾಧ ಚರಣಾಲು
ಮುದ್ದುಲ ಮೌಳಿಪೈ ಮೋಸಿ ಮೋಸಿ
ಅನ್ನಮಾರ್ಯಸಮಕ್ಷಮಂದೇಡುಕೊಂಡಲ
ನೊಂಟಿಗಾ ಕಾಪುರಮುಂಡಿ ಯುಂಡಿ |
ಕ್ಷೇತ್ರಯ್ಯ ರಸಮಯಕ್ಷೇತ್ರಾನ ಪಲು ನಾಯಿ-
ಕಲ ಬಿಗಿಕೌಗಿಳ್ಳ ನಲಿಗಿ ನಲಿಗಿ
ತೀರ್ಥುಲವಾರು ಗದ್ದಿಂಪ ವ್ಯತ್ಯಸ್ತಪಾ-
ದಾರವಿಂದಮುಲತೋನಾಡಿ ಯಾಡಿ ||
ವಿಸಿಗಿಪೋಯಿ ಸುಂತ ವಿಶ್ರಾಂತಿಕೋಸಮೈ
ಸೀತತೋಡ ಅನುಗು ಭ್ರಾತತೋಡ |
ವಿಶ್ವಮಯುಡು ಪ್ರಭುವು ವೇಂಚೇಸಿಯುನ್ನಾಡು
ರಾಮುಡಗುಚು ತ್ಯಾಗರಾಜುನಿಂಟ || (ಉದಯಶ್ರೀ, ಪು. ೨೦೬)
ಇದೂ ಕೂಡ ಕರುಣಶ್ರೀ ಅವರ ರಚನೆ; ತ್ಯಾಗರಾಜಸ್ತುತಿಯ ಮತ್ತೊಂದು ಪದ್ಯ. ಸೀಸದಲ್ಲಿ ಜಯದೇವ, ಅನ್ನಮಾಚಾರ್ಯ, ಕ್ಷೇತ್ರಯ್ಯ ಮತ್ತು ನಾರಾಯಣತೀರ್ಥರ ಪ್ರಸ್ತಾವ ಕಲಾತ್ಮಕವಾಗಿ ಬಂದಿದೆ. ಇವರೆಲ್ಲ ಗೇಯಕಾವ್ಯದ ಪ್ರಸ್ಥಾನಪುರುಷರು; ಮಾತು-ಧಾತುಗಳ ಸಾಮರಸ್ಯಸಾಧಕರು. ಇಂಥ ಪೂರ್ವಸೂರಿಗಳನ್ನು ಮೀರಿಸಿದ ಪ್ರತಿಭೆ ತ್ಯಾಗರಾಜದೆಂದು ಎತ್ತುಗೀತಿಯಲ್ಲಿ ಚಮತ್ಕಾರವುಕ್ಕುವಂತೆ ಕವಿ ಕಲ್ಪಿಸಿದ್ದಾರೆ. ಪ್ರತಿಯೊಂದು ಪಾದದ ಕೊನೆಗೂ ಬರುವ ಪುನರುಕ್ತ ಶಬ್ದಗಳು (ಮೋಸಿ ಮೋಸಿ, ಉಂಡಿ ಉಂಡಿ ಇತ್ಯಾದಿ) ಪೋತನನ ಕಾಲದಿಂದ ಬಂದ ಸೀಸಪದ್ಯಶಿಲ್ಪಕ್ಕೆ ತಕ್ಕುದಾದ ಶೋಭೆ ನೀಡಿವೆ. ಇಡಿಯ ಪದ್ಯದ ವಕ್ರೋಕ್ತಿಸೌಂದರ್ಯ ಪ್ರತ್ಯಂಗಪ್ರಸ್ಫುಟತೆಯನ್ನು ಹೊಂದಿದೆ.
ಲವಣಮನ್ನಮೊಸಂಗು ಲಾವಣ್ಯರಾಶಿಯೌ
ಮುತ್ಯಾಲು ರಾಲ್ಚೆಡಿ ನೃತ್ಯವೇದಿ
ಮೀವಂಟಿ ಕವುಲಕು ಮಿಸಿಮಿ ಭಾವುಕಸೀಮ
ಶಾಸ್ತ್ರಜ್ಞುಲ ಪ್ರಯೋಗಶಾಲ ಯಿದಿಯೆ |
ಪರಿಶೋಧಕುಲಕಿದಿ ಪರಮಹಂಸಸ್ಥಿತಿ
ಉಪರಿಶೋಧಕುಲಕು ಉಪ್ಪುಟೇರು
ಅವನಿಪೈ ಕುರಿಸಿನ ಆಕಾಶಮಿಯ್ಯದಿ
ಪಸಿಪಾಪ ಕಾಳ್ಲಪೈ ಇಸುಕಗೂಡು ||
ಚೂಚು ವಿಧಮು ಬಟ್ಟಿ ತೋಚೆಡು ದೈವಮ್ಮು
ನಿತ್ಯಜೀವನಮ್ಮು ನೀರಧಿಯನ |
ದೀನಿ ಯುಪ್ಪು ತಿನುಚು ದೀನಿಕೇ ದ್ರೋಹಮ್ಮು
ಚೇಯ ಜೂತುರೇಲ ಮಾಯನರುಲು || (ಸಾಗರಘೋಷ, ೮.೨೧)
ಇದು ಗರಿಕಿಪಾಟಿ ನರಸಿಂಹರಾಯರ ಕವಿತೆ. ಇಲ್ಲಿರುವುದು ಸಮುದ್ರದ ಅಳಲಿನ ಬಣ್ಣನೆ. ಸೀಸಪದ್ಯದ ಭಾಗದಲ್ಲಿ ಸಮುದ್ರದ ಸಿರಿ-ಸಂಪದಗಳ ಪ್ರಸ್ತಾವವಿದೆ; ಅದರ ಅಂದ-ಚಂದಗಳ ಪ್ರಶಂಸೆಯಿದೆ. ಎತ್ತುಗೀತಿಯಲ್ಲಿ ಇಂಥ ಸೌಭಾಗ್ಯವುಳ್ಳ ಸಮುದ್ರದ ಉಪ್ಪನ್ನು ಉಂಡ ಜನ ಅದಕ್ಕೆ ಮಾಡುವ ಕೇಡನ್ನು ಕುರಿತು ವಿಷಾದವಿದೆ. ಇವನ್ನೆಲ್ಲ ಅಂದವಾಗಿ ಪೋಣಿಸುವ ಶಬ್ದಾರ್ಥಾಲಂಕಾರಗಳ ಸೂತ್ರ ಸ್ತವನೀಯವೆನಿಸಿದೆ.
ಇರುಕುಸಂದುಲಯಂದು ಮುರಿಕಿ ಕೂಪಾಲಲೋ
ವಸಿಯಿಂಚು ಭಾಗ್ಯಮ್ಮು ಪಟ್ಟಣಮ್ಮು
ಪವಲು ರೇಲುನು ಲೇಕ ಬಾಧಿಂಚು ಮಶಕಾಲ
ಪನಿಪಟ್ಟು ಯುದ್ಧಮ್ಮು ಪಟ್ಟಣಮ್ಮು |
ಪ್ರಕ್ಕ ಕಾಲುವಲೋನ ಪಂದುಲು ಪೊರ್ಲಾಡ
ಭರಿಯಿಂಚು ಸಹನಮ್ಮು ಪಟ್ಟಣಮ್ಮು
ಪ್ರಕ್ಕಿಂಟಿ ಮೃತಿಯೈನ ಪಟ್ಟಿಂಚುಕೋನಟ್ಟಿ
ಪರಮವೈರಾಗ್ಯಮ್ಮು ಪಟ್ಟಣಮ್ಮು ||
ಎನ್ನಿ ಜನ್ಮಲ ಪುನ್ನೆಮೋ ವೆನ್ನುಬಟ್ಟಿ
ವಚ್ಚಿ ಪಟ್ಟಣಮುನ ಜನ್ಮನಿಚ್ಚುನಯ್ಯ |
ಇಚಟ ಪದಿಯೇಂಡ್ಲು ಬ್ರತಿಕಿನ ಎಚಟನೈನ
ಕಡಕು ನರಕಮ್ಮುನಂದೈನ ಹಡಲಿಪೋಡು || (ಸಾಗರಘೋಷ, ೯.೭೬)
ಇದು ಕೂಡ ಗರಿಕಿಪಾಟಿ ಅವರ ಕವಿತೆ. ಆಧುನಿಕ ನಗರಗಳ ವಿಕಟ ಜೀವನದ ವರ್ಣನೆಯಿಲ್ಲಿದೆ. ಸೀಸಪದ್ಯದ ಭಾಗದಲ್ಲಿ ನಗರಗಳ ಇಕ್ಕಟ್ಟಾದ ಬೀದಿಗಳು, ನಾರುವ ಮೋರಿಗಳು, ಕಾಡುವ ಸೊಳ್ಳೆಗಳು, ಬೀಡಾಡಿ ಹಂದಿಗಳು ಹಾಗೂ ಪಕ್ಕದ ಮನೆಯ ಸಾವಿನ ಸುದ್ದಿಗೂ ಸ್ಪಂದಿಸದ ಜನರೇ ಮುಂತಾದ ವಿವರಗಳಿವೆ. ಎತ್ತುಗೀತಿಯಲ್ಲಿ ಇಂಥ ನಗರಗಳಲ್ಲಿ ಸ್ವಲ್ಪಕಾಲವಿದ್ದರೆ ನರಕದ ಬಾಧೆಯೂ ನೋವೆನಿಸದಂತೆ ನೆಮ್ಮದಿ ದೊರಕುವುದೆಂಬ ವ್ಯಂಗ್ಯವಿದೆ. ನುಡಿಗಟ್ಟಿನ ಸೊಗಸು, ಪಟ್ಟಣವೆಂಬ ಪದ ಮತ್ತೆ ಮತ್ತೆ ಪುನರುಕ್ತವಾಗುವ ಪರಿ ಹಾಗೂ ತೀಕ್ಷ÷್ಣ ವಿಡಂಬನೆಗಳು ಈ ಪದ್ಯದ ಶಿಲ್ಪಕ್ಕೆ ಒದಗಿವೆ.
ತೆಲುಗಿನಲ್ಲಿ ಸೀಸಪದ್ಯ ಸಾಗಿಬಂದ ಹಾದಿಯ ಕೆಲವೊಂದು ಹೆಜ್ಜೆಗಳನ್ನು ನಾವೀಗ ಕಂಡೆವು. ಇಲ್ಲಿ ಮತ್ತೆಷ್ಟೋ ಬಗೆಯ ಪದಪದ್ಧತಿಗಳಿವೆ. ಪುನರುಕ್ತಿ, ಪ್ರಾಸಾನುಪ್ರಾಸ, ಸಂವಾದ ಮೊದಲಾದ ಚಮತ್ಕಾರಗಳಲ್ಲದೆ ಅಚ್ಚತೆಲುಗು, ಸಮಸಂಸ್ಕೃತ ಮುಂತಾದ ಭಾಷಾಸಂಬಂಧಿ ಸ್ವಾರಸ್ಯಗಳೂ ಮೈದುಂಬಿವೆ. ತೆಲುಗಿಗೆ ವಿಶಿಷ್ಟವಾದ ಯತಿಮೈತ್ರಿ ಮತ್ತು ಯತಿಪ್ರಾಸಗಳನ್ನು ಅನುಲಕ್ಷಿಸಿ ವೈವಿಧ್ಯವನ್ನು ತಾಳಿದ ಪ್ರಕಾರಗಳ ಅನ್ವಯವೂ ಕಾಣಸಿಗುತ್ತದೆ. ಇವನ್ನೆಲ್ಲ ವಿಸ್ತರಿಸಲು ಎಡೆಯಿಲ್ಲದಿರುವ ಕಾರಣ ಇಷ್ಟು ಮಾತ್ರದ ಹಿನ್ನೆಲೆಯೊಡನೆ ಕನ್ನಡದತ್ತ ನಾವಿನ್ನು ಗಮನ ಹರಿಸಬಹುದು.
To be continued.