ಶಂಕರ ಮತ್ತು ಆನಂದವರ್ಧನ - 6
ಇಂತಿದ್ದರೂ ಶಂಕರ-ಆನಂದವರ್ಧನರು ತಮ್ಮ ಕಾಲವನ್ನಷ್ಟೇ ಅಲ್ಲ, ಎಲ್ಲ ಕಾಲವನ್ನೂ ಮೀರಿ ನಿಲ್ಲಬಲ್ಲ ಸತ್ತ್ವವನ್ನು ಹೊಂದಿದ್ದಾರೆ. ಅವರ ವಿಚಾರಗಳನ್ನು ರೂಪಮಾತ್ರದಿಂದ ಅಳೆಯುವುದು ಅವರಿಗೆ ಮಾತ್ರವಲ್ಲ, ನಮಗೂ ಮಾಡಿಕೊಳ್ಳುವ ಅನ್ಯಾಯ; ಜ್ಞಾನಜಗತ್ತಿಗೇ ಮಾಡುವ ಅನ್ಯಾಯ. ಅಭಿವ್ಯಕ್ತಿಯ ಜಟಿಲತೆಯಿಂದ, ಉದಾಹರಣೆಗಳ ಅಸುಂದರತೆಯಿಂದ, ವಾದೋಪಯೋಗಿಯಾದ ನ್ಯಾಯ-ದೃಷ್ಟಾಂತಗಳ ಏಕದೇಶೀಯತೆಯಿಂದ ಅವರ ತತ್ತ್ವಕ್ಕೆ ಯಾವುದೇ ಕೊರತೆಯಾಗಿಲ್ಲ. ಈ ಅಂಶಗಳನ್ನು ನಾವು ಅವರಿಗಿಂತ ಚೆನ್ನಾಗಿ ಆ ಪರಂಪರೆಯಿಂದಲೋ ನಮ್ಮ ಪರಿಸರದಿಂದಲೋ ತುಂಬಿಕೊಳ್ಳಬಹುದು. ಇದು ಕಷ್ಟದ ಸಂಗತಿಯೇನಲ್ಲ. ಆದರೆ ಅವರು ಕಾಣಿಸಿದ ತತ್ತ್ವವನ್ನು ಮಾತ್ರ ಯಾರೇ ಆಗಲಿ ತಾವಾಗಿ ಸಾಕ್ಷಾತ್ಕರಿಸಿಕೊಳ್ಳುವುದು ಅಸಾಧ್ಯವೆಂಬಷ್ಟರ ಮಟ್ಟಿಗೆ ದುಷ್ಕರ.