ಇನ್ನು ಮುಂದೆ ಸುಭಾಷಿತಚಮತ್ಕಾರದ ಕೆಲವೊಂದು ಅನುವಾದಗಳನ್ನು ಪರಿಶೀಲಿಸೋಣ.
ಮರ್ಕಟಸ್ಯ ಸುರಾಪಾನಂ ಮಧ್ಯೇ ವೃಷ್ಚಿಕದಂಶನಮ್ |
ತನ್ಮಧ್ಯೇ ಭೂತಸಂಚಾರೋ ಯದ್ವಾ ತದ್ವಾ ಭವಿಷ್ಯತಿ ||
ಮಂಗ ಸೆರೆಯ ಕುಡಿಯಿತು,
ಮೇಲೆ ಚೇಳು ಕಡಿಯುತು,
ಮತ್ತೆ ಭೂತ ಬಡಿಯಿತು,
ಏನಕೇನೊ ಆಯಿತು (ಸು.ಚ., ಪುಟ ೯೮)
ಉತ್ಸಾಹಗತಿಯಲ್ಲಿ ಸಾಗಿದ ಅನುವಾದ ತನ್ನ ಮೂರು-ಮೂರು ಮಾತ್ರೆಗಳ ಸಂಕ್ಷಿಪ್ತಗಣಗಳ ಚುರುಕುನಡೆಯ ಮೂಲಕ ಮಂಗನ ಚೇಷ್ಟೆಯನ್ನು ಸೊಗಸಾಗಿ ಧ್ವನಿಸಿದೆ. ಅಲ್ಲದೆ, ಪ್ರತಿಪಾದದ ಕಡೆಯಲ್ಲಿ ಲಘುವೊಂದು ಕರ್ಷಣದ ಮೂಲಕ ಗುರುವಾಗಿ ನಿಲ್ಲುವ ಕ್ರಮದಿಂದ ಪದ್ಯಕ್ಕೆ ಎಲ್ಲಿಲ್ಲದ ಛಂದಶ್ಚಮತ್ಕಾರವೊದಗಿದೆ. ಏಕೆಂದರೆ ಪ್ರತಿಯೊಂದು ಸಾಲೂ ನಿಶ್ಚಿತವಾಗಿ ಮುಗಿದಂತೆ ತೋರುವ ಮೂಲಕವೇ ಮತ್ತೊಂದು ಸಾಲಿಗೆ ಸಾಗುವ ಕಾರಣ, ಕಪಿಯ ಹಾಸ್ಯಾಸ್ಪದ ಅವಸ್ಥೆಯೊಂದು ಮುಗಿಯಿತೆಂಬಂತೆ ಕಂಡರೂ ಮತ್ತೆ ಭಂಗ್ಯಂತರದಿಂದ ಅದು ಮೊದಲಾಗುವ ಪರಿ ಇಲ್ಲಿ ಧ್ವನಿತವಾಗುತ್ತದೆ. “ಮತ್ತೆ” ಎಂಬ ಒಂದು ಪದವನ್ನುಳಿದು ಮಿಕ್ಕೆಲ್ಲಿಯೂ ಸಂಯುಕ್ತಾಕ್ಷರ ಬಾರದಿರುವುದು ಪದ್ಯಕ್ಕೊಂದು ಹೃದ್ಯತರಲತೆಯನ್ನು ತಂದಿದೆ. ಇದು ಮತ್ತೆ ಕಪಿಚೇಷ್ಟೆಗೇ ವ್ಯಂಜಕವಾಗಿದೆ. ಇಷ್ಟೇ ಅಲ್ಲದೆ ಸಹಜವಾಗಿ ಬಂದ ಅಂತ್ಯಪ್ರಾಸ ಹಾಗೂ “ಯದ್ವಾ ತದ್ವಾ” ಎಂಬ ಮೂಲವು “ಏನಕೇನೊ” ಎಂಬ ಅಚ್ಚಗನ್ನಡದ, ಅಷ್ಟೇ ಪರಿಣಾಮಕಾರಿಯಾದ ನುಡಿಗಟ್ಟಿನ ಮೂಲಕ ಹೊಮ್ಮಿದ ಬಗೆ ಪದ್ಯಕ್ಕೆ ಮಿಗಿಲಾದ ಪುಷ್ಟಿ ತಂದಿದೆ. ಎಂಬ ಇಂಥ ಅಡಕವೂ ವ್ಯಂಜಕವೂ ಆದ ಅನುವಾದ ಸ್ವಲ್ಪದ ಸಿದ್ಧಿಯಲ್ಲ.
ಸಪಕ್ಷೋ ಲಭತೇ ಕಾಕೋ ವೃಕ್ಷಸ್ಯ ಮಧುರಂ ಫಲಮ್ |
ಪಕ್ಷಹೀನೋ ಮೃಗೇಂದ್ರೋऽಪಿ ಭೂಮಿಸಂಸ್ಥೋ ನಿರೀಕ್ಷತೇ ||
ಪಕ್ಷವುಳ್ಳ ಕಾಗೆಗೂ
ವೃಕ್ಷದ ಫಲ ದೊರೆವುದು;
ಪಕ್ಷಹೀನ ಸಿಂಹ ಕೆಳಗೆ
ಕಣ್ಣುಕಣ್ಣು ಬಿಡುವುದು (ಸು.ಚ., ಪುಟ ೧೦೨)
ಹಿಂದಿನ ಪದ್ಯದಂತೆ ಇಲ್ಲಿಯೂ ಅದೇ ಛಂದೋಬಂಧ ಬಳಕೆಯಾಗಿದೆ. ಕೇವಲ ಎರಡನೆಯ ಸಾಲಿನಲ್ಲಿ ಸಂತುಲಿತದ್ರುತಾವರ್ತಗತಿ ಇಣಿಕಿದೆ. ಅಂತೆಯೇ ಇಲ್ಲಿ ಬಂದ ಸಂಯುಕ್ತಾಕ್ಷರಗಳು ಮುಖ್ಯವಾಗಿ ಪ್ರಾಸಸ್ಥಾನದಲ್ಲಿಯೇ ನೆಲಸಿರುವುದು ಮತ್ತೊಂದು ಬಗೆಯ ಚಮತ್ಕಾರ. ಸಹಜವಾದ ಅದಿಪ್ರಾಸ ಮೂರು ಪಾದಗಳಲ್ಲಿ ತನ್ನದಾದ ಯೋಗದಾನವಿತ್ತಿದೆ. ಅಲ್ಲಿರುವ ಕ್ಷಕಾರ ಸೊಗಸಾದ ಅವಧಾರಣೆಯನ್ನು ಹಾಕಿದೆ. ತನ್ಮೂಲಕ ಪಕ್ಷದ ಬಲ ಏನೆಂದು ಧ್ವನಿತವಾಗಿದೆ. ಮೂಲದ ಶ್ಲೇಷಾರ್ಥವನ್ನು ಗಮನಿಸಿ “ಪಕ್ಷ”ಪದವನ್ನು ಹಾಗೆಯೇ ಉಳಿಸಿಕೊಳ್ಳುವ ಮೂಲಕ ಪಾ. ವೆಂ. ಅರ್ಥವಂತಿಕೆಯನ್ನು ಸಾಧಿಸಿರುವರಾದರೂ ಒಟ್ಟಂದದ ಅವರ ಪದ್ಯಭಾಷೆಗೆ ಈ ಬಗೆಯ ಪ್ರೌಢಪ್ರಯೋಗ ಸ್ವಲ್ಪ ಹೊರಚ್ಚೆನ್ನಬಹುದು. ಆದರೆ ಗತ್ಯಂತರವಿಲ್ಲದ ಕಾರಣ ಇದು ಸ್ವಾಗತಾರ್ಹ. ಅನುವಾದದ ಜೀವಾಳ ಕೊನೆಯ ಸಾಲಿನಲ್ಲಿದೆ. ಮೂಲದ ಸಪ್ಪೆಯಾದ “ನಿರೀಕ್ಷತೇ” ಎಂಬ ಅಭಿಧಾಮಾತ್ರದಲ್ಲಿ ಉಳಿದುಬಿಡುವ ಕ್ರಿಯಾಪದ ಅನುವಾದದಲ್ಲಿ “ಕಣ್ಣುಕಣ್ಣು ಬಿಡುವುದು” ಎಂಬ ಲಕ್ಷಣಾಮೂಲದ ಧ್ವನಿಯಾಗುವ ಕಾರಣ ಪಾ. ವೆಂ. ಅವರು ಮೂಲವನ್ನು ಮೀರಿಸಿರುವ ಭಾಷಾಂತರವನ್ನಿತ್ತಿದ್ದಾರೆ. ಜೊತೆಗಿದು ಹಾಸ್ಯಕ್ಕೆ ಸೊಗಸಾಗಿ ಒದಗಿಬರುವ ಆಡುನುಡಿಯೂ ಆದ ಕಾರಣ ಗೇಲಿಗೆ ಎಲ್ಲಿಲ್ಲದ ಬಲ ಬಂದಿದೆ.
ಉಪಚಾರಃ ಕರ್ತವ್ಯೋ ಯಾವದನುತ್ಪನ್ನಸೌಹೃದಃ ಪುರುಷಃ |
ಉತ್ಪನ್ನಸೌಹೃದಾನಾಮುಪಚಾರಃ ಕೈತವಂ ಭವತಿ ||
ಉಪಚಾರ ಬೇಕು ಗೆಳೆ-
ತನ ಬೆಸೆಯದನ್ನ;
ಬೆಸೆದ ಬಳಿಕುಪಚಾರ
ಮಾಡಲದು ಗನ್ನ (ಸು.ಚ., ಪುಟ ೧೩೬)
ಸುಂದರಪಾಂಡ್ಯನ “ನೀತಿದ್ವಿಷಷ್ಟಿಕಾ”ಗ್ರಂಥದ ಆರ್ಯೆಯೊಂದು ಇಲ್ಲಿ ಕೇವಲ ಮೂವತ್ತೆಂಟು ಮಾತ್ರೆಗಳಲ್ಲಿ ಅಡಕವಾದ ಅಂದದ ಅನುವಾದವಾಗಿ ಆವಿರ್ಭವಿಸಿದೆ. ಸುಂದರಪಾಂಡ್ಯನ ಶೈಲಿ ನೇರವಾದದ್ದು; ಸಮಾಸ, ಶಬ್ದಶಯ್ಯೆ, ಪ್ರಾಸಾನುಪ್ರಾಸಗಳ ಅಲಂಕಾರವನ್ನು ಉಪೇಕ್ಷಿಸಿರುವಂಥದ್ದು. ಇಂತಿದ್ದರೂ ಅದರ ಸ್ವಂತಿಕೆ ಮತ್ತು ಪರಿಣಾಮಗಳು ಗಮನಾರ್ಹ. ಇದೇ ಸತ್ತ್ವವನ್ನು ಪದ್ಯಶೈಲಿಯ ಮಾಧುರ್ಯವೂ ಇರುವಂತೆ ಭಟ್ಟಿಯಿಳಿಸಿರುವುದು ಪಾ. ವೆಂ. ಅವರ ಹೆಚ್ಚುಗಾರಿಕೆ. ಸಮಪಾದಗಳಲ್ಲಿ ಕಾಣುವ ಅಂತ್ಯಪ್ರಾಸವೂ ಅರ್ಥಪೂರ್ಣ. “ಕೈತವ”ಶಬ್ದವನ್ನು “ಗನ್ನ” ಎಂದು ಕನ್ನಡಿಸುವಲ್ಲಿ ಅನುವಾದಕರ ವ್ಯುತ್ಪತ್ತಿ ಮತ್ತು ಅವರಿಗಿರುವ ಆಡುನುಡಿಯ ನಾಡಿಮಿಡಿತಗಳು ಪ್ರತಿಫಲಿಸಿವೆ.
ಖಲ್ವಾಟೋ ದಿವಸೇಶ್ವರಸ್ಯ ಕಿರಣೈಃ ಸಂತಾಪಿತೋ ಮಸ್ತಕೇ
ವಾಂಛನ್ ದೇಶಮನಾತಪಂ ವಿಧಿವಶಾತ್ತಾಲಸ್ಯ ಮೂಲಂ ಗತಃ |
ತತ್ರಾಪ್ಯಸ್ಯ ಮಹಾಫಲೇನ ಪತತಾ ಭಗ್ನಂ ಸಶಬ್ದಂ ಶಿರಃ
ಪ್ರಾಯೋ ಗಚ್ಛತಿ ಯತ್ರ ಭಾಗ್ಯರಹಿತಸ್ತತ್ರಾಪದಾಂ ಭಾಜನಮ್ ||
ಬಿಸಲಲ್ಲಿ ತಲೆಕಾಯ್ದ ಒಬ್ಬ ಖಲ್ವಾಟ
ತಾಳೆಮರದಡಿ ಗೇಣುನೆರಳಲ್ಲಿ ಕೂತ;
ಕಳಚಿ ಕಾಯೊಂದವನ ನೆತ್ತಿಗೇ ಬಿತ್ತು
ದುರ್ದೈವಿ ಹೋದಲ್ಲಿ ಕಾದಿಹುದು ಕುತ್ತು (ಸು.ಚ., ಪುಟ ೭೯)
ಭರ್ತೃಹರಿಯ ನೀತಿಶತಕದ ಮೂಲಪದ್ಯವು ಸಂಗ್ರಹವಾಗಿ ಅನುವಾದಗೊಂಡಿದೆ. ಮೂಲಕ್ಕಿಂತ ಮತ್ತಷ್ಟು ತೀವ್ರತೆಯನ್ನು ಪಡೆದಿದೆಯೆಂಬುದೂ ಗಮನಾರ್ಹ. ವಿಶೇಷತಃ “ಗೇಣುನೆರಳು,” “ನೆತ್ತಿಗೇ ಬಿತ್ತು,” “ಕಾದಿಗುದು ಕುತ್ತು” ಇತ್ಯಾದಿ ಪದಪುಂಜಗಳು ಅನುವಾದಕರ ಅದ್ಭುತವಾದ ವಾಚೋಯುಕ್ತಿಸಿದ್ಧಿಗೆ ಸಾಕ್ಷಿಗಳು. ಆದರೆ ಖಲ್ವಾಟ ಎಂಬ ಮೂಲದ್ದೇ ಪದಕ್ಕಿಂತ ಕನ್ನಡದ್ದೇ ಪದವನ್ನು ಬಳಸಿಕೊಂಡಿದ್ದಲ್ಲಿ ಮತ್ತಷ್ಟು ಸೊಗಸಿರುತ್ತಿತ್ತು.
ಆಶಾಯಾ ಯೇ ದಾಸಾಸ್ತೇ ದಾಸಾಃ ಸರ್ವಲೋಕಸ್ಯ |
ಆಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ||
ಆಸೆಗಾಳಾದವನು
ಲೋಕಕ್ಕೆ ಆಳು;
ಆಸೆಯನ್ನಾಳುವಗೆ
ಲೋಕವೇ ಆಳು (ಸು.ಚ., ಪುಟ ೨೭)
ಅತ್ಯಂತಮಾರ್ಮಿಕವಾದ ಮೂಲಪದ್ಯವು ತನ್ನ ವಾಕ್ಯವಿನ್ಯಾಸದಿಂದಲೂ ಚಮತ್ಕಾರಿಯಾಗಿದೆ. ಇಂಥದ್ದನ್ನು ಭಾಷಾಂತರಿಸುವುದು ಬಹಳ ಕಷ್ಟ. ಆದರೆ ಪಾ. ವೆಂ. ಅವರು ಅದನ್ನೊಂದು ಲೀಲೆಯೆಂಬಂತೆ ಸಾಧಿಸಿದ್ದಾರೆ. ಸುಂದರಪಾಂಡ್ಯನ ಪದ್ಯಾನುವಾದದಂತೆಯೇ ಇಲ್ಲಿಯೂ ಛಂದಸ್ಸು ಸಾಗಿದೆ. ಪ್ರಾಸಗಳೂ ಅದೇ ಬಗೆಯವು. ವಿಶೇಷತಃ “ಆಳು” ಎಂಬ ಪದ ಮತ್ತೆ ಮತ್ತೆ ಮೂಲಾನುಸಾರಿಯಾಗಿ ಬಂದಿರುವುದಲ್ಲದೆ “ಆಳುವಗೆ” ಎಂಬಲ್ಲಿಯೂ ಶಾಬ್ದಿಕವಾಗಿ ಕಂಡು ಧ್ವನನಶೀಲವೆನಿಸಿದೆ.
ದುರ್ಜನಂ ಪ್ರಥಮಂ ವಂದೇ ಸಜ್ಜನಂ ತದನಂತರಮ್ |
ಮುಖಪ್ರಕ್ಷಾಲನಾತ್ಪೂರ್ವಂ ಗುದಪ್ರಕ್ಷಾಲನಂ ಯಥಾ ||
ಕೇಡಿಗರಿಗೆ ಮೊದಲು ನಮೋ
ಒಳ್ಳಿದರಿಗೆ ಬಳಿಕ;
ಮೋರೆ ತೊಳೆಯುವುದಕ್ಕೆ ಮೊದಲು
ತೊಳೆಯಬೇಕು ತಿಕ (ಸು.ಚ., ಪುಟ ೮೯)
ಉತ್ಸಾಹಗತಿಯ ಈ ಅನುವಾದ ಪಾ. ವೆಂ. ಅವರ ಸ್ವಾಗತಾರ್ಹವಾದ ಕಿಡಿಗೇಡಿತನಕ್ಕೂ ಅವರ ಈ ಕೃತಿಯ ಉದ್ದೇಶ-ವ್ಯಕ್ತಿತ್ವಗಳಿಗೂ ಸರಿಮಿಗಿಲೆನಿಸುವಂಥ ನಿದರ್ಶನ. “ನಮೋ” ಎಂಬ ಪದದಲ್ಲಿ ತಂದಿರುವ “ಲಗಂ”ವಿನ್ಯಾಸವೂ ವ್ಯಂಜಕ. ಈ ಮೂಲಕ ಕೇಡಿಗರಿಗೆ ಮೊದಲು ವಂದಿಸುವಲ್ಲಿ ಇಣಿಕುವ ಆತುರ ಮಾರ್ಮಿಕವಾಗಿ ಧ್ವನಿಸಿದೆ. ಈ ಅನುವಾದದ ಉತ್ಕಟತೆಯಿರುವುದು “ತಿಕ” ಎಂಬ “ಅಶಿಷ್ಟ”ಪದವನ್ನು ಕಟ್ಟಕಡೆಯಲ್ಲಿ ಅಂತ್ಯಪ್ರಾಸವಾಗಿ ಬಳಸುವಲ್ಲಿ! ಮೂಲದ ನಿರ್ಭೀಕವಿಡಂಬನವನ್ನು ಪರಿಭಾವಿಸಿದರೆ ಮಾತ್ರ ಇಂಥ ಪರಿಣಾಮಕಾರಿಯಾದ ಅನುವಾದಗಳು ಸಾಧ್ಯ, ಈ ಬಗೆಯ ಪದಪ್ರಯೋಗಗಳ ಔಚಿತ್ಯವೂ ವೇದ್ಯ. ಅಲ್ಲದೆ, ಇದು ಪಾ. ವೆಂ. ಅವರ ಮನೋಧರ್ಮಕ್ಕೂ ಹಿಡಿದ ಕನ್ನಡಿ. ತೀನಂಶ್ರೀ ಅವರಾದರೋ ಇಂಥ ಪದ್ಯಗಳನ್ನು ಆಯ್ದುಕೊಳ್ಳುತ್ತಲೇ ಇರಲಿಲ್ಲ. ಹಾಗೊಂದು ವೇಳೆ ಆಯ್ದುಕೊಂಡಿದ್ದಲ್ಲಿ ಅನುವಾದವೂ ಹೀಗಿರುತ್ತಿರಲಿಲ್ಲ. ಇವೆಲ್ಲ ಮನೋಧರ್ಮದ ಭಂಗಿ-ಭಣಿತಿಗಳು.
ಆಸೀನೇ ಪೂಷ್ಣಿ ತೂಷ್ಣೀಂ ವ್ಯಸನಿನಿ ಶಶಿನಿ ವ್ಯೋಮ್ನಿ ಕೃಷ್ಣೇ ಸತೃಷ್ಣೇ
ದೈತ್ಯೇಂದ್ರೇ ಜಾತನಿದ್ರೇ ದ್ರವತಿ ಮಘವತಿ ಕ್ಲಾಂತಕಾಂತೌ ಕೃತಾಂತೇ |
ಅಬ್ರಹ್ಮಣ್ಯಂ ಬ್ರುವಾಣೇ ಕಮಲಪುಟಕುಟೀಶ್ರೋತ್ರಿಯೇ ಶಾಂತ್ಯುಪಾಯೇ
ಪಾಯಾದ್ವಃ ಕಾಲಕೂಟಂ ಝಟಿತಿ ಕವಲಯನ್ ಲೀಲಯಾ ನೀಲಕಂಠಃ ||
ರವಿ ನೀರವ, ವಿಧು ವಿಧುರಿತ, ವಿಷ್ಣುವೋ ಸತೃಷ್ಣ
ದೈತ್ಯರಾಜಗಾಯ್ತು ಪೈತ್ಯ, ದೇವೆಂದ್ರನಿಗುಷ್ಣ
ಯಮನಿಗೆ ಭ್ರಮ, ಬ್ರಹ್ಮನೊ ಅಬ್ರಹ್ಮಣ್ಯವಿದೇನೆಂದ—
ಶಿವನೊಬ್ಬನೆ ಜಗದ ಶಿವಕೆ ಚಟ್ಟನೆ ನಂಜುಂಡ (ಸು.ಚ., ಪುಟ ೧೫)
ಪಾಪ, ಪಾ. ವೆಂ. ಅವರ ಶೈಲಿಗೆ ಕೆಣಕು-ತಿಣುಕುಗಳನ್ನು ಅದೆಷ್ಟು ಪರಿಣಾಮಕರವಾಗಿ ರೂಪಿಸಬಲ್ಲ ಕಸುವಿದ್ದರೂ ಇಂಥ ಶಬ್ದಾಲಂಕಾರಪರಿಪ್ಲುತವಾದ ಗೌಡೀರೀತಿಯ ಪ್ರೌಢಪದ್ಯಗಳನ್ನು ಅದೇ ಸತ್ತ್ವ ಉಳಿದುಬರುವಂತೆ ಕನ್ನಡಿಸುವ ಬಲವಿಲ್ಲ; ಒಲವೂ ಇಲ್ಲ. ಸುಭಾಷಿತಚಮತ್ಕಾರಕೃತಿಯಲ್ಲಿ ಇಂಥ ಪದ್ಯಗಳ ಸಂಖ್ಯೆ ಕಡಮೆಯೆಂಬುದು ನಿರೀಕ್ಷಿತವೇ. ಆದರೆ ಇವೂ ಬೇಕಿರಲಿಲ್ಲವೆನ್ನುವುದು ರಸಿಕರು ಒಪ್ಪಬಹುದಾದ ನಿಲವು. ಮೂಲದ ಓಜೋಮಯ ಸ್ರಗ್ಧರಾವೃತ್ತ ತನ್ನ ಲಯರಾಹಿತ್ಯಕ್ಕೆ ಪ್ರಸಿದ್ಧ. ಆದರೆ ಅನುವಾದದಲ್ಲಿ ಪೇಶಲವಾದ ಸಂತುಲಿತದ್ರುತಾವರ್ತಗತಿ ಬಂದಿರುವುದು ಛಂದೋರಸಿಕರಿಗೆ ಸಹಿಸಲಾಗದ ನಿರಾಶೆ. ಮೂಲದ ಶಬ್ದಾಲಂಕಾರಗಳೇನೋ ಕೆಲಮಟ್ಟಿಗೆ ಅನುವಾದದಲ್ಲಿ ಅವತರಿಸಿವೆ. ಆದರೆ ಪಾ. ವೆಂ. ಅವರ ಸಾಹಜಿಕಶೈಲಿಗೆ ಇಂಥ ಉಪಕ್ರಮ ಕೃತಕವೆನಿಸುತ್ತದೆ. ಅಲ್ಲದೆ ಹಾಸ್ಯದೊಟ್ಟಿಗೆ ಮೂಲದಲ್ಲಿ ಅನುಸ್ಯೂತವಾಗಿರುವ ಅಪೇಕ್ಷಿತಗಾಂಭೀರ್ಯ ಭಾಷಾಂತರದಲ್ಲಿ ಅಪ್ಪಿತಪ್ಪಿಯೂ ಸುಳಿದಿಲ್ಲ. ಇದೇ ರೀತಿ ಕಾವ್ಯಸ್ವಾರಸ್ಯವುಳ್ಳ ಕೆಲವೊಂದು ವಿವರಗಳೂ ಅನುವಾದದಲ್ಲಿ ಅಸ್ತಂಗತವಾಗಿವೆ (ಉದಾಹರಣೆಗೆ: “ಕಮಲಪುಟಕುಟೀಶ್ರೋತ್ರಿಯ” ಎಂಬ ಅನರ್ಘಭಾಸ್ವರವಾದ ವಾಕ್ಯಖಂಡ). ಎಲ್ಲಕ್ಕಿಂತ ಮಿಗಿಲಾಗಿ ಹಾಲಾಹಲದ ಭಯಂಕರತೆ ಎಂಥದ್ದೆಂಬುದನ್ನೂ ಅದರೆದುರು ದೇವತೆಗಳ ಅಂಜಿಕೆ ಯಾವ ಪರಿಯೆಂಬುದನ್ನೂ ಸಮರ್ಥವಾಗಿ ಧ್ವನಿಸುವ ಸ್ರಗ್ಧರೆ ಬರಿಯ ಛಂದಸ್ಸಾಗಿ ದುಡಿಯದೆ ಕಾವ್ಯಾಂಗವೇ ಆಗಿ ಮೈವೆತ್ತ ಬಗೆ ಅನುವಾದದ ಬಂಧದಲ್ಲಿಯೂ ಇಲ್ಲ, ಅಂದದಲ್ಲಿಯೂ ಇಲ್ಲ. ಇದನ್ನೆಲ್ಲ ಗಮನಿಸಿದಾಗ ಪಾ. ವೆಂ. ಅವರ ಅನುವಾದದ ಇತಿ-ಮಿತಿಗಳ ದಿಕ್ಕು-ದೆಸೆ ಅರಿವಾಗುತ್ತವೆ.
ತಾತ್ಪರ್ಯತಃ ಹೇಳುವುದಾದರೆ ಪಾ. ವೆಂ. ಅವರು ಸಂಸ್ಕೃತಮೂಲದ ಉದಾತ್ತಮನೋಹರರೂಪಗಳಿಗೆ ಕೆಲವೊಮ್ಮೆ ನ್ಯಾಯ ಸಲ್ಲಿಸುವುದಿಲ್ಲ; ಇದು ವಿಶೇಷತಃ ಛಂದಸ್ಸು-ಅಲಂಕಾರಗಳ ಆಯಾಮಗಳಲ್ಲಿ ಎದ್ದುತೊರುವ ಕೊರತೆ. ಮತ್ತೂ ಸೂಚ್ಯಗ್ರವಾಗಿ ಹೇಳುವುದಾದರೆ, ಅವರು ಚಿಕ್ಕ ಛಂದಸ್ಸುಗಳಾದ ಅನುಷ್ಟುಪ್, ಆರ್ಯೆ, ಉಪಜಾತಿಗಳ ಅನುವಾದದಲ್ಲಿ ಸಾಧಿಸುವ ಯಶಸ್ಸನ್ನು ದೊಡ್ಡ ವೃತ್ತಗಳಾದ ಸ್ರಗ್ಧರೆ-ಶಾರ್ದೂಲವಿಕ್ರೀಡಿತಗಳಂಥವಲ್ಲಿ ಸಾಮಾನ್ಯವಾಗಿ ಕಾಣುವುದಿಲ್ಲ. ಏಕೆಂದರೆ ಚಿಕ್ಕ ಪದ್ಯಗಳಲ್ಲಿ ಅದೆಷ್ಟೋ ಬಾರಿ ಆಶಯಕ್ಕೆ ಮಾತ್ರ ಅವಕಾಶವಿರುತ್ತದೆ; ಆಕೃತಿಯ ಅಂದ-ಚಂದಗಳಿಗೆ ಹೆಚ್ಚಿನ ಹರಹಿರುವುದಿಲ್ಲ. ಇದನ್ನು ಪಾ. ವೆಂ. ಅವರೂ ಬಲ್ಲರು.
* * *
ಒಟ್ಟಿನಲ್ಲಿ ತೀನಂಶ್ರೀ ಮತ್ತು ಪಾ. ವೆಂ. ಅವರ ಮೂಲಕ ಸಂಸ್ಕೃತಸುಭಾಷಿತಗಳು ನಮಗೆ ಹತ್ತಿರವಾಗಿವೆ; ಒಳ್ಳೆಯ ರೀತಿಯಲ್ಲಿಯೇ ಹತ್ತಿರವಾಗಿವೆ. ಇಂದಿಗೂ ಇವರಿಬ್ಬರ ಅನುವಾದಪದ್ಧತಿಗಳು ಇಂಥ ಕೆಲಸವನ್ನು ಕೈಗೊಳ್ಳುವವರಿಗೆ ಮಾರ್ಗದರ್ಶಕವಾಗಿವೆ. ಕೆಲವೆಡೆ ಎಚ್ಚರಿಕೆಗಳೂ ಆಗಿವೆ. ಕನ್ನಡನುಡಿಯನ್ನು ಅಭಿಜಾತಭಾಷೆಯೆಂದು ಘೋಷಿಸಿ ಆ ಬಳಿಕ ದುಷ್ಯಂತಶೀಲರಾಗುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಆಭಿಜಾತ್ಯವನ್ನು ಅಭಿಜ್ಞಾನ ಮಾಡಿಕೊಂಡಾಗ ಮಾತ್ರ ಕನ್ನಡತನದ ಶಕುಂತಲೆ ಪರಿಪಕ್ವತೆಯೆಂಬ ಭರತನನ್ನು ಸಾಹಿತ್ಯಸಾಮ್ರಾಜ್ಯದ ಅಧಿಪತಿಯನ್ನಾಗಿಸಲು ಸಾಧ್ಯ.