ಇನ್ನು ಮುಂದೆ ಇವರಿಬ್ಬರ ಕೆಲವೊಂದು ಅನುವಾದಗಳನ್ನು ಸ್ವತಂತ್ರವಾಗಿ ಪರಿಶೀಲಿಸೋಣ. ಮೊದಲಿಗೆ ಬಿಡಿಮುತ್ತನ್ನು ಗಮನಿಸಬಹುದು.
ಚತುರ್ಮುಖಮುಖಾಂಭೋಜವನಹಂಸವಧೂರ್ಮಮ |
ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ ||
ನಾಲ್ಮೊಗನ ಸಾಲ್ಮೊಗದ ತಾವರೆಯ ಬನದೊಳಗೆ
ರಾಜಿಸುವ ಹಂಸರಮಣಿ
ಚಿರಕಾಲ ವಿಹರಿಸಲಿ ನನ್ನ ಮಾನಸದೊಳಗೆ
ಸರ್ವಾಂಗಧವಳೆ ವಾಣಿ (ಬಿ.ಮು., ಪುಟ ೬)
ಮೂಲದ ಅನುಪ್ರಾಸಪರಿಪ್ಲುತವಾದ ಪೂರ್ವಾರ್ಧವು ಅಷ್ಟೇ ಸುಂದರವಾಗಿ ಅನುವಾದದ ಪೂರ್ವಾರ್ಧದಲ್ಲಿ ಬಂದಿರುವುದು ಗಮನಾರ್ಹ. ವಿಶೇಷತಃ “ನಾಲ್ಮೊಗನ ಸಾಲ್ಮೊಗದ ತಾವರೆಯ” ಎಂಬ ಸಮಾನಮಾತ್ರಾವಿನ್ಯಾಸದ ಪದಗಳು ತಂದಿರುವ ಸ್ವಾರಸ್ಯ ಸ್ಪೃಹಣೀಯ. ಅಲ್ಲದೆ ಗುರುವೊಂದರ ಬಳಿಕ ಸಾಲುಗಟ್ಟಿ ಸಾಗುವ ಮೂರು ಲಘುಗಳು ಅದೊಂದು ಬಗೆಯ ದೈರ್ಘ್ಯವನ್ನು ಧ್ವನಿಸುವ ಕಾರಣ ಬ್ರಹ್ಮನ ಸಾಲಾದ ನಾಲ್ಕು ಮುಖಗಳ ಚಿತ್ರಣ ತಾನಾಗಿ ಸ್ಫುರಿಸುತ್ತದೆ. ಇದು “ಚತುರ್ಮುಖಮುಖಾಂಭೋಜವನ”ವನ್ನು ಸೊಗಸಾಗಿ ಧ್ವನಿಸುವ ಕ್ರಮವೂ ಹೌದು.
ಕ್ವಾನನಂ ಕ್ವ ನಯನಂ ಕ್ವ ನಾಸಿಕಾ
ಕ್ವ ಶ್ರುತಿಃ ಕ್ವ ಚ ಶಿಖೇತಿ ದೇಶಿತಃ |
ತತ್ರ ತತ್ರ ನಿಹಿತಾಂಗುಲೀದಲೋ
ವಲ್ಲವೀಜನಮನಂದಯತ್ಪ್ರಭುಃ ||
ಎಲ್ಲಿ ಮುಖ, ಕಣ್ಣೆಲ್ಲಿ, ಎಲ್ಲಿಹುದು ಮೂಗು,
ಎಲ್ಲಿ ಕಿವಿ, ಎಲ್ಲಿ ಮುಡಿ—ತೋರು ನೀನೆನಲು
ಅಲ್ಲಲ್ಲಿ ತನ್ನ ನಳಿಬೆರಳುಗಳನಿರಿಸಿ
ಗೊಲ್ಲಿತಿಯರನು ಮೋದಗೊಳಿಸಿದನು ಸ್ವಾಮಿ! (ಬಿ.ಮು., ಪುಟ ೧೧೬)
ಮಕ್ಕಳ ಮುದ್ದುಮುದ್ದಾದ ವರ್ತನೆಯೇ ಈ ಪದ್ಯದಲ್ಲಿ ಹೆಪ್ಪುಗಟ್ಟಿದೆ. ಮೂಲದ ಅತ್ಯಂತ ಸುಂದರಾನುವಾದ ಇಲ್ಲಿದೆ. “ಅಂಗುಲೀದಲ” ಎಂಬ ಮೂಲದ ಮಾತು “ನಳಿಬೆರಳು” ಎಂದು ಕನ್ನಡಕ್ಕೆ ಬಂದಿರುವುದು ತುಂಬ ಹೃದ್ಯ. ಅಲ್ಲದೆ, ಅನುವಾದದಲ್ಲಿ ಸಹಜವಾಗಿ ಹೊಮ್ಮಿರುವ ಆದಿಪ್ರಾಸವೂ ಗಮನಾರ್ಹ.
ಗಚ್ಛ ಗಚ್ಛಸಿ ಚೇತ್ಕಾಂತ ಪಂಥಾನಃ ಸಂತು ತೇ ಶಿವಾಃ |
ಮಮಾಪಿ ಜನ್ಮ ತತ್ರೈವ ಭೂಯಾದ್ಯತ್ರ ಗತೋ ಭವಾನ್ ||
ತೆರಳು ತೆರಳುವೊಡಿನಿಯ, ಪಥದಲಿ
ನಿನಗೆ ಮಂಗಳವೊದಗಲಿ;
ಎಲ್ಲಿಗೊದಗುವೆ ನೀನು, ನನಗೂ
ಅಲ್ಲೆ ಜನ್ಮವು ಲಭಿಸಲಿ (ಬಿ.ಮು., ಪುಟ ೭೮)
ಮೂಲ-ಭಾಷಾಂತರಗಳೆರಡೂ ಪರಸ್ಪರ ಸ್ಪರ್ಧಿಸುವಂತಿವೆ. ಅನುವಾದದ ಭಾಮಿನೀಗತಿ ತುಂಬ ಸಮುಚಿತ, ಸುಂದರ. ಅಂತೆಯೇ ಸಮಪಾದಗಳಲ್ಲಿ ಬಂದಿರುವ ಅನುಪ್ರಾಸವೂ ಸ್ಮರಣೀಯ.
ಅಂಕುರಿತಃ ಪಲ್ಲವಿತಃ ಕೋರಕಿತಃ ಪುಷ್ಪಿತಶ್ಚ ಸಹಕಾರಃ |
ಅಂಕುರಿತಃ ಪಲ್ಲವಿತಃ ಕೋರಕಿತಃ ಪುಷ್ಪಿತಶ್ಚ ಹೃದಿ ಮದನಃ ||
ಮೊಳೆವೆತ್ತಿತು ತಳಿರೊಡೆಯಿತು
ಮುಗುಳೆತ್ತಿತು ಅರಳಿತು ಮಾಮರ ಬನದಿ
ಮೊಳೆವೆತ್ತನು ತಳಿರೊಡೆದನು
ಮುಗುಳೆತ್ತಿದನರಳಿದನೈ ಸ್ಮರ ಮನದಿ! (ಬಿ.ಮು., ಪುಟ ೧೨೫)
ಇದಕ್ಕಿಂತಲೂ ಚೆನ್ನಾಗಿ ಅನುವಾದಿಸಲು ಸಾಧ್ಯವೇ ಇಲ್ಲ. ಮೂಲದ ಆರ್ಯಾಛಂದಸ್ಸಿನ ಸಂತುಲಿತದ್ರುತಾವರ್ತಗತಿಯೇ ಅನುವಾದದಲ್ಲಿ ಉಳಿದುಬಂದಿರುವುದು ಭಾಷಾಂತರದ ಯಶಸ್ಸಿಗೆ ಪುಷ್ಟಿ ನೀಡಿದೆ. ಆದರೆ ಸಂಸ್ಕೃತಭಾಷೆಯ ಲಿಂಗವೈಚಿತ್ರ್ಯ ಮೂಲಕ್ಕೆ ಅನುಗ್ರಹಿಸಿರುವ ಶೋಭೆ ಮತ್ತೂ ಮಿಗಿಲು. ಇದನ್ನು ದಾಕ್ಷಿಣಾತ್ಯಭಾಷೆಗಳಲ್ಲಿ ತರಲು ಸಾಧ್ಯವೇ ಇಲ್ಲ.
ವಿಲಾಸಮಸೃಣೋಲ್ಲಸನ್ಮುಸಲಲೋಲದೋಃಕಂದಲೀ-
ಪರಸ್ಪರಪರಿಸ್ಖಲದ್ವಲಯನಿಸ್ವನೋದ್ಬಂಧುರಾಃ |
ಲಸಂತಿ ಕಲಹುಂಕೃತಿಪ್ರಸಭಕಂಪಿತೋರಃಸ್ಥಲ--
ತ್ರುಟದ್ಗಮಕಸಂಕುಲಾಃ ಕಲಮಕಂಡನೀಗೀತಯಃ ||
ಒನಪಿನಿಂದ ನುಣುಪಿನೊನಕೆಯಾಡಿಸುವೆಳತೋಳುಗಳಲಿ
ಒಂದಕೊಂದು ತಾಗಿ ಬಳೆಗಳಿಂಚರವನು ಬೆಳೆಸುತಿರಲು,
ಮಧುರಹೂಂऽಕಾರಭರಕೆ ನಡುಕವೆತ್ತ ವಕ್ಷದೊಳಗೆ
ಸ್ವರದ ಗಮಕಸರಣಿ ಭಂಗವಡೆಯೆ—ಬತ್ತ ಕುಟ್ಟುವವರ
ಒನಕೆವಾಡು ಬಂಧುರ! (ಬಿ.ಮು., ಪುಟ ೨೭)
ಕನ್ನಡನಾಡಿನ ಸಂಸ್ಕೃತಕವಯಿತ್ರಿ ವಿಜ್ಜಿಕೆಯ ಪದ್ಯವಿದು. ಮೂಲದ ಪೃಥ್ವೀಛಂದಸ್ಸು ವಸ್ತುವಿಗೆ ಮಿಗಿಲಾಗಿ ನ್ಯಾಯ ಸಲ್ಲಿಸಿದೆ. ಇದನ್ನು ಕೂಡಿದ ಮಟ್ಟಿಗೂ ತ್ರಿಮಾತ್ರಾಗತಿಯಲ್ಲಿ ತೀನಂಶ್ರೀ ತಂದಿರುವ ಬಗೆ ಪ್ರಶಂಸನೀಯ. ಆದರೆ ಮೂಲದ ಸಮಾಸಸಮೃದ್ಧವಾದ ಶೈಲಿ ಅನುವಾದಕ್ಕೆ ಇಳಿದುಬಂದಿಲ್ಲ. ಇಂತಿದ್ದರೂ ಭಾಷಾಂತರದ ಬೆಡಗು ಇಳೆಯಷ್ಟೂ ಕುಂದಿಲ್ಲ. ವಿಶೇಷತಃ ಮೂಲದ ಶಬ್ದಾಲಂಕಾರವನ್ನು ಅನುವಾದದಲ್ಲಿ ಅಚ್ಚಗನ್ನಡದ ಮೂಲಕವೇ ಸಾಧಿಸಿಕೊಂಡಿರುವುದು ಸ್ತವನೀಯ. ಈ ಅನುವಾದದ ಜೀವಾಳವಿರುವುದು “ಮಧುರಹೂಂऽಕಾರಭರಕೆ” ಎಂಬಲ್ಲಿ ಹೂಂ ಎಂಬ ಗುರುವಿಗೆ ಪ್ಲುತತ್ವವನ್ನು ಆರೋಪಿಸಿರುವಲ್ಲಿ. ಈ ಮೂಲಕ ಅಪ್ಪಟ ಜಾನಪದೀಯವಾದ ಒನಕೆವಾಡಿನ ಸೊಗಡು ಇಲ್ಲಿ ಸಾಕ್ಷಾತ್ಕರಿಸಿದೆ. ಹೀಗೆ ಮಾತ್ರಾಗತಿಯ ಬಂಧದಲ್ಲಿ ಕರ್ಷಣಗತಿಯ ಸ್ವಾರಸ್ಯವನ್ನು ತರುವುದು ತೀನಂಶೀ ಅವರಂಥ ಛಂದೋವಿದರಿಗೆ ಮಾತ್ರ ಸಾಧ್ಯ. ಕಟ್ಟಕಡೆಯ ಸಾಲಿನಲ್ಲಿ “ಒನಕೆವಾಡು ಬಂಧುರ” ಎಂಬಷ್ಟೇ ಸಾಹಿತ್ಯದ ಮೂಲಕ ಸಾಧಿಸಿರುವ ನಾದಮಯತೆಯು ಅಪೂರ್ಣಪಾದದಿಂದ ಉನ್ಮೀಲಿಸುವ ಪೂರ್ಣತೆಗೊಂದು ಸುಂದರಸಾಕ್ಷಿ.
ಅನಿರೀಕ್ಷಣಮೇವ ದೃಷ್ಟಿರಾರ್ದ್ರಾ
ಪರಿಹಾಸಾಲಪನಾನಿ ಮೌನಮೇವ |
ಅವಧೀರಣಮೇವ ಚಾಭಿಯೋಗೋ
ವಿನಿಗೂಢೋऽಪಿ ಹಿ ಲಕ್ಷ್ಯತೇऽನುರಾಗಃ ||
ನಿಟ್ಟಿಸದಿರುವುದೆ ಕರಗಿದ ನೋಟ,
ಮೌನವೆ ಸಲ್ಲಾಪದ ನಗೆಯಾಟ,
ಕಡೆಗಣಿಸುವುದೇ ಕೂಡುವ ಮಾಟ
ಮುಚ್ಚಿದರೂ ಕಾಂಬುದು ಬೇಟ! (ಬಿ.ಮು., ಪುಟ ೩೬)
ಈ ಪದ್ಯದ ಅಂತ್ಯಪ್ರಾಸ ರಚನೆಗೆ ಸಹಜವಾಗಿ ಒದಗಿದ ಹೃದ್ಯಾಲಂಕಾರ. ಜೊತೆಗೆ, ಇಲ್ಲಿಯ ಚತುರ್ಮಾತ್ರಾಗತಿ ಕಮ್ರಶೃಂಗಾರದ ಚತುರತೆಯನ್ನು ಚೆನ್ನಾಗಿ ಬಿಂಬಿಸಿದೆ.
ಜಲದಸಮಯಘೋಷಣಾಡಂಬರಾನೇಕರೂಪಕ್ರಿಯಾಜಂಭಕಾ ವಜ್ರಭೃದ್ಗೃಷ್ಟಯಃ
ಭಗಣಯವನಿಕಾಸ್ತಡಿತ್ಪನ್ನಗೀವಾಸವಲ್ಮೀಕಭೂತಾ ನಭೋಮಾರ್ಗರೂಢಕ್ಷುಪಾಃ |
ಮದನಶರನಿಶಾನಶೈಲಾಃ ಪ್ರರುಷ್ಟಾಂಗನಾಸಂಧಿಪಾಲಾ ಗಿರಿಸ್ನಾಪನಾಂಭೋಘಟಾ
ಉದಧಿಸಲಿಲಭೈಕ್ಷ್ಯಹಾರಾ ರವೀಂದ್ವರ್ಗಲಾ ದೇವಯಂತ್ರಪ್ರಪಾ ಭಾಂತಿ ನೀಲಾಂಬುದಾಃ ||
ಗುಡುಗಿ ಮಳೆಗಾಲವನು ಸಾರಿ ಬಹುವೇಷದಲಿ ಕುಣಿವ ನಟವೃಂದಗಳು,
ಸುರಪತಿಯ ಕರೆವ ಧೇನುಗಳು,
ಉಡುಗಣದ ಮುಸುಕುಗಳು, ಮಿಂಚಿನುರಗಿಯರ ನೆಲೆಹುತ್ತಗಳು,
ಗಗನಪಥದಲಿ ಹಬ್ಬಿ ಬೆಳೆದ ಹೊದರುಗಳು,
ಮದನಬಾಣವ ಮಸೆವ ಸಾಣೆಗಳು, ಮುಳಿದ ಸತಿಯರ ಸಂಧಿಮಂತ್ರಿಗಳು,
ಗಿರಿಯ ಮಜ್ಜನದ ಕುಂಭಗಳು,
ಉದಧಿಜಲಭಿಕ್ಷುಗಳು, ರವಿಶಶಿಗಳಗುಳಿಗಳು, ಸುರರ ಕಾರಂಜಿಗಳು,
ಮೆರೆಯುವುದು ನೀಲಮೇಘಗಳು! (ಬಿ.ಮು., ಪುಟ ೧೨೭)
ಭಾಸನದೆನ್ನಲಾದ “ಅವಿಮಾರಕ”ರೂಪಕದ ಈ ಪದ್ಯ ಮಳೆಗಾಲದ ಚಿತ್ರವನ್ನು ಅತ್ಯದ್ಭುತವಾಗಿ ಕಟ್ಟಿಕೊಡುತ್ತದೆ. ಮೂಲವು ನಿಡಿದಾದ ದಂಡಕಗತಿಯ ಪದ್ಯ. ಇಪ್ಪತ್ತೇಳು ಅಕ್ಷರಗಳಷ್ಟು ಉದ್ದವಿರುವ ಪ್ರತಿಯೊಂದು ಪಾದವೂ ಮಳೆಗಾಲದ ಹಾಸು-ಬೀಸನ್ನು ಸೊಗಸಾಗಿ ಧ್ವನಿಸುತ್ತದೆ. ಅಲ್ಲದೆ, ಹನ್ನೊಂದು ರೂಪಕಗಳು ಒಂದರ ಮೇಲೊಂದರಂತೆ ದಾಪಿಟ್ಟು ಬರುವ ಮೂಲಕ ಕಾರ್ಗಾಲದ ಅದಮ್ಯಪರಿಣಾಮವನ್ನು ಕೂಡ ಸೂಚಿಸಿವೆ. ಇಂಥ ಪ್ರೌಢಪದ್ಯವನ್ನು ತೀನಂಶ್ರೀ ಅವರು ಮೂಲದ ಸ್ವಾರಸ್ಯಕ್ಕೆ ಸ್ವಲ್ಪವೂ ಕುಂದಾಗದಂತೆ ಪಂಚಮಾತ್ರಾಗತಿಯಲ್ಲಿ ಭಾಷಾಂತರಿಸಿದ್ದಾರೆ. ಇದನ್ನು ಅವರ ಅನುವಾದಸಿದ್ಧಿಯ ಹೆಗ್ಗುರುತುಗಳಲ್ಲಿ ಒಂದೆನ್ನಬಹುದು. ಇಲ್ಲಿಯ ಶಬ್ದಾರ್ಥಸಾಮರಸ್ಯ ಚೇತೋಹಾರಿ.
ಸಮಾನಾನಿ ವ್ಯತೀತಾನಿ ನವಾನಿ ನ ಸಮಾನಿ ಮೇ |
ಆತ್ಮಾನಮನುಶೋಚಾಮಿ ಸಾರ್ಥಭ್ರಷ್ಟ ಇವಾಧ್ವಗಃ ||
ಮುಂಚಿಹೋದರು ಸರಿಸಮಾನರು,
ಸಮಕೆ ಬಾರರು ಹೊಸಬರು:
ಸಾರ್ಥ ತಪ್ಪಿದ ಪಥಿಕನಂದದಿ
ಕುರಿತು ನನ್ನನೆ ಕುದಿವೆನು (ಬಿ.ಮು., ಪುಟ ೨೦೦)
ಮೂಲದ ಸರಳವಾದ ಅನುಷ್ಟುಪ್ ರಚನೆಯನ್ನು ಅಷ್ಟೇ ಸರಳವಾದ ಭಾಮಿನೀಗತಿಯಲ್ಲಿ ಅನುವಾದಿಸುವಾಗ ಪದ್ಯದಲ್ಲಿ ಸ್ಥಾಯಿಯಾಗಿರುವ ಕರುಣ-ನಿರ್ವೇದಗಳು ಅದೆಷ್ಟು ಚೆನ್ನಾಗಿ ಅಡಕಗೊಂಡಿವೆಯೆಂಬುದನ್ನು ರಸಿಕರು ಚೆನ್ನಾಗಿ ಗ್ರಹಿಸಬಲ್ಲರು. ಇಲ್ಲಿಯ ಭಾಷೆಯ ಧ್ವನಿಶೀಲತೆಯಂತೂ ಬಹುಮಾರ್ಮಿಕ. ಮೂಲದ “ಆತ್ಮಾನಮ್ ಅನುಶೋಚಾಮಿ” ಎಂಬ ಪದಪುಂಜ “ನನ್ನನೆ ಕುದಿವೆನು” ಎಂದು ಕನ್ನಡಿಸಲ್ಪಟ್ಟ ಕ್ರಮ ಇದಕ್ಕೆ ಸಮರ್ಥಸಾಕ್ಷ್ಯ.
ಮುಹುರಂಗುಲಿಸಂವೃತಾಧರೋಷ್ಠಂ
ಪ್ರತಿಷೇಧಾಕ್ಷರವಿಕ್ಲವಾಭಿರಾಮಮ್ |
ಮುಖಮಂಸವಿವರ್ತಿ ಪಕ್ಷ್ಮಲಾಕ್ಷ್ಯಾಃ
ಕಥಮಪ್ಯುನ್ನಮಿತಂ ನ ಚುಂಬಿತಂ ತು ||
ಮರಮರಳಿ ಬೆರಳುಗಳು ಕೆಳತುಟಿಯ ಮುಸುಕುತಿರೆ,
ಬೇಡಬೇಡೆಂಬ ನುಡಿ ತೊಡರಿ ರಂಜಿಸಲು,
ಹೆಗಲತ್ತ ಹೊರಳಿಸಿದ ಪಕ್ಷ್ಮಲಾಕ್ಷಿಯ ಮೊಗವ-
ನೆತ್ತಿದೆನದೆಂತೊ, ಮುತ್ತಿಡಲಾದುದಿಲ್ಲ! (ಬಿ.ಮು., ಪುಟ ೩೭)
ಕಾಳಿದಾಸನ ಶಾಕುಂತಲರೂಪಕದ ಈ ಪದ್ಯ ಚುಂಬಿಸಲು ಮುಂದಾದ ದುಷ್ಯಂತನನ್ನು ಶಕುಂತಲೆ ಕಾತರದಿಂದ ತಡೆಯುವ ಸಂದರ್ಭವನ್ನು ಅನಿತರಸಾಧಾರಣವಾಗಿ ಚಿತ್ರಿಸಿದೆ. ಇಲ್ಲಿಯ ಅಡಕ ಮತ್ತು ವಿವರಗಳು ಯಾವ ಕವಿಗೂ ಅಸೂಯೆ ಹುಟ್ಟಿಸುವಂಥವು. ಅಲ್ಲದೆ ಈ ಪದ್ಯದ ಸ್ವಭಾವೋಕ್ತಿಸೌಂದರ್ಯವೂ ಅಪ್ರತಿಮ. ಇದನ್ನು ತೀನಂಶ್ರೀ ಅವರು ತುಂಬ ಚೆನ್ನಾಗಿಯೇನೋ ಭಾಷಾಂತರಿಸಿದ್ದಾರೆ. ಆದರೆ ಸಂಸ್ಕೃತದ ಭಾಷಾಮರ್ಯಾದೆಯಲ್ಲಿ ಸಹಜವಾಗಿ ಬರುವ ವಿಶೇಷ್ಯ-ವಿಶೇಷಣಗಳ ಲಿಂಗ-ವಚನ-ವಿಭಕ್ತಿಸಾಮ್ಯ ಹಾಗೂ ಕಾಳಿದಾಸನು ತನ್ನ ಕಾವ್ಯದೇವಿಗೆ ವಿಶೇಷವಾಗಿ ರೂಪಿಸಿಕೊಂಡ ಸಾಭಿಪ್ರಾಯವಿಶೇಷಣವೆಂಬ ಕೀರ್ತಿಪತಾಕೆ ಅನುವಾದದ ಹಿಡಿತಕ್ಕೆ ಸಿಗದೆ ನುಣುಚಿಕೊಂಡಿವೆ. ಹೀಗಾಗಿ ಮೂಲದಲ್ಲಿ ಪ್ರತಿಯೊಂದು ಕ್ರಿಯೆಯೂ ಶಕುಂತಲೆಯ ಮುಖಕ್ಕೆ ವಿಶೇಷಣವಾಗುವಂತೆ ಬಂದು ಅಂಗೈಯಗಲದ ಮುಖದಲ್ಲಿ ಆಕಾಶದಷ್ಟು ಚಟುವಟಿಕೆಗಳನ್ನು ಧ್ವನಿಸಿದ್ದರೆ ಅನುವಾದದಲ್ಲಿದು ವಿವರಣೆಯ ಮಟ್ಟಕ್ಕೆ ಇಳಿದುಬಿಟ್ಟಿದೆ! ಈ ಅವನತಿ ಎಂಥ ಅನುವಾದಕನಿಗೂ ಹತಾಶಭಾವವನ್ನು ತರುವಂಥದ್ದು. ಇನ್ನು ಕೆಲವೆಡೆ ಅನುವಾದಕ್ಕೆ ಎಟುಕಬಲ್ಲ “ಪ್ರತಿಷೇಧಾಕ್ಷರವಿಕ್ಲವಾಭಿರಾಮಮ್” ಎಂಬಂಥ ಹಲವು ಅನರ್ಘಭಾಸ್ವರವಾದ ವಿವರಗಳೂ ಜಾರಿಹೋಗಿವೆ. ಇಂಥವನ್ನಾದರೂ ತೀನಂಶ್ರೀ ಅವರು ದಕ್ಕಿಸಿಕೊಳ್ಳಬಹುದಿತ್ತು. ಇದನ್ನು ಗಮನಿಸಿದಾಗ ಕಾಳಿದಾಸ ಅದೆಷ್ಟು ಅನುವಾದಾತೀತನಾದ ಕವಿಯೆಂದು ತಿಳಿಯದಿರದು.
ಮ್ಲಾನಸ್ಯ ಜೀವಕುಸುಮಸ್ಯ ವಿಕಾಸನಾನಿ
ಸಂತರ್ಪಣಾನಿ ಸಕಲೇಂದ್ರಿಯಮೋಹನಾನಿ |
ಏತಾನಿ ತೇ ಸುವಚನಾನಿ ಸರೋರುಹಾಕ್ಷ್ಯಾಃ
ಕರ್ಣಾಮೃತಾನಿ ಮನಸಶ್ಚ ರಸಾಯನಾನಿ ||
ಸೊರಗಿದ ಜೀವದ ಹೂವನು ಅರಳಿಸುವುವು ಮರಳಿ;
ತಣಿಸುವುವಿಂದ್ರಿಯವೆಲ್ಲವ ಮೋಹನಗೊಳಿಸುವುವು;
ಇಂದೀವರಲೋಚನೆ, ನಿನ್ನೀ ನಲ್ವಾತುಗಳು
ಸುಧೆ ನನ್ನಯ ಶ್ರವಣಗಳಿಗೆ, ಸಂಜೀವನ ಮನಕೆ (ಬಿ.ಮು., ಪುಟ ೫೦)
ಮೂಲವು ಭವಭೂತಿಯ ಉತ್ತರರಾಮಚರಿತದ ಉತ್ತಮಪದ್ಯಗಳಲ್ಲೊಂದು. ಆ ಕವಿಯ ಓಜಸ್ಸು ಮತ್ತು ಗಾಂಭೀರ್ಯಗಳು ಯಾರಿಗಾದರೂ ಕೀಳರಿಮೆಯನ್ನು ಹುಟ್ಟಿಸುವಂಥವೇ. ತುಂಬ ಸುಲಭವಾದ ಪದಗಳುಳ್ಳ, ಸರಳವೆನಿಸಬಲ್ಲ ಅರ್ಥವನ್ನೂ ತಳೆದ ಇಂಥ ಪದ್ಯವೂ ಹೊಸಗನ್ನಡದ ಹಾದಿಗೆ ಬರುವಾಗ ಹೊಗರನ್ನು ಕಳೆದುಕೊಳ್ಳುವುದೆಂದರೆ ಈ ಹೊತ್ತಿನ ನಮ್ಮ ನುಡಿಯ ಇತಿ-ಮಿತಿಗಳೆಷ್ಟೆಂದು ಸ್ಪಷ್ಟವಾಗುತ್ತದೆ. ಇಲ್ಲಿ ಭವಭೂತಿ ಪ್ರತಿಯೊಂದು ಪದದಲ್ಲಿಯೂ ಸಮಾನಶ್ರುತಿಯನ್ನು ತಂದಿರುವುದು ಗಮನಾರ್ಹ. “ವಚನಾನಿ” (ಮಾತುಗಳು) ಎಂಬ ಬಹುವಚನದ ನಪುಂಸಕಲಿಂಗಪದಕ್ಕೆ ಮಿಕ್ಕೆಲ್ಲ ಪದಗಳೂ ವಿಶೇಷಣಗಳಾಗಿ ಬರುವಾಗ ಮಾತೆಂಬ ಮಾತನ್ನು ಅದೆಷ್ಟು ಪರಿಯಾಗಿ ಪೋಷಿಸಿವೆ ಮತ್ತು ಮಾತಿನ ಮಾಹಾತ್ಮ್ಯವನ್ನು ಧ್ವನಿಸುವ ಈ ಕೃತಿಯಲ್ಲಿ ಸದ್ಯದ ಪದ್ಯವೂ ಅದೆಷ್ಟು ಕಸುವಿನಿಂದ ದುಡಿದಿದೆಯೆಂದು ಅರಿವಾಗುತ್ತದೆ. ಇಲ್ಲಿಯೂ ಮೂಲದ ವಿಶೇಷಣಾಯಿತಕ್ರಿಯೆಗಳು ಅನುವಾದದಲ್ಲಿ ಬರಿಯ ವಿವರಣೆಗಳಾಗಿರುವುದು ದೃಷ್ಟಚರ. ಇದನ್ನೆಲ್ಲ ಕಂಡಾಗ ಶ್ರೇಷ್ಠಸಂಸ್ಕೃತಕಾವ್ಯವನ್ನು ಅದಕ್ಕೆ ಹತ್ತಿರವಿರುವ ನುಡಿಗಳಿಗೆ ಕೂಡ ಅನುವಾದಿಸಿಕೊಳ್ಳುವುದು ಅದೆಷ್ಟು ಆತ್ಮಕ್ಷೋಭಕ ಅನುಭವ ಎನಿಸದಿರದು.
ಯೇ ನಾಮ ಕೇಚಿದಿಹ ನಃ ಪ್ರಥಯಂತ್ಯವಜ್ಞಾಂ
ಜಾನಂತಿ ತೇ ಕಿಮಪಿ ತಾನ್ಪ್ರತಿ ನೈಷ ಯತ್ನಃ |
ಉತ್ಪಸ್ತ್ಯತೇऽಸ್ತಿ ಮಮ ಕೋऽಪಿ ಸಮಾನಧರ್ಮಾ
ಕಾಲೋ ಹ್ಯಯಂ ನಿರವಧಿರ್ವಿಪುಲಾ ಚ ಪೃಥ್ವೀ ||
ಇಲ್ಲಿ ಕೆಲವರದಾರು ನಮ್ಮೊಳವಗಣನೆಯನು ಬೆಳಸಿಹರೊ ಹೂಡಿ,
ಬಲ್ಲರವರೇನನೋ—ಅವರ ಕುರಿತಲ್ಲವೀ ಎಸಕ.
ಜನಿಸುವನು ಮುಂದೆ, ತಾನಿಹನಿಂದೆ ಆವನೋ ಸಮಧರ್ಮಿ ನನಗೆ:
ಕೊನೆಯಿಹುದೆ ಕಾಲಕ್ಕೆ, ಸುವಿಶಾಲವೈಸೆ ಪೃಥಿವಿ! (ಬಿ.ಮು., ಪುಟ ೧೮)
ಇದು ಭವಭೂತಿಯ ಮಾಲತೀಮಾಧವವೆಂಬ ಪ್ರಕರಣದ ಪದ್ಯ. ಹಿಂದಿನ ಪದ್ಯದಂತೆ ಇಲ್ಲಿರುವುದೂ ವಸಂತತಿಲಕಾವೃತ್ತವೇ. ಈ ಛಂದಸ್ಸು ತನ್ನ ತೀವ್ರತೆಗೆ ಹೆಸರುವಾಸಿ. ಇಲ್ಲಿರುವ ಭಾವವಂತೂ ಭವಭೂತಿಗೇ ತಕ್ಕುದಾದದ್ದು. ಇಂಥ ಓಜಸ್ವಿರಚನೆಯನ್ನು ತೀನಂಶ್ರೀ ಅವರು ಯಾಂತ್ರಿಕವಾದ ಪಂಚಮಾತ್ರಾಗತಿಯಲ್ಲಿ ಅಳವಡಿಸಿರುವುದು ಅಷ್ಟಾಗಿ ಹಿತವೆನಿಸದು. ಐದು ಮಾತ್ರೆಗಳ ನಾಲ್ಕು ಗಣಗಳಿರುವ ಚರಣಗಳನ್ನು ರೂಪಿಸಿದ್ದಲ್ಲಿ ಮೂಲದ ಓಜಸ್ಸು ತಕ್ಕಮಟ್ಟಿಗೆ ಉಳಿದುಬರುತ್ತಿತ್ತು. ಆದರೆ ಇಲ್ಲಿ ಪ್ರತಿಯೊಂದು ಪಾದವೂ ಈ ಅಳತೆಗಿಂತ ಹೆಚ್ಚಾಗಿರುವುದೂ ಊನಗಣದಿಂದ ಮುಗಿದಿರುವುದೂ ಮೂಲದ ಕಸುವನ್ನು ಉಳಿಸಿಕೊಳ್ಳುವಲ್ಲಿ ಸೋತಿವೆ. ಅಲ್ಲದೆ “ಯೇ ನಾಮ ಕೇಚಿದಿಹ...” ಇತ್ಯಾದಿಯಾಗಿ ಏರು-ಜೋರುಗಳ ಏಕಾರದಿಂದಲೂ “ನಾಮ” ಎಂಬ ಉಪೇಕ್ಷಾಸೂಚಕವಾದ ಅವ್ಯಯದಿಂದಲೂ ಮೊದಲಾಗುವ ಪ್ರಥಮಪಾದವೇ ಮೂಲದ ಕೆಚ್ಚನ್ನು ಬಿಚ್ಚಿತೋರಿವೆ. ಇದನ್ನು “ಇಲ್ಲಿ” ಎಂಬ ತುಂಬ ನಮ್ರವಾಗುವ ಅಂತಃಸ್ಥಸ್ವರಗಳಿಂದ ಆರಂಭಿಸುವ ತೀನಂಶ್ರೀ ಅವರ ಅನುವಾದ ಆದಿಯಲ್ಲಿಯೇ ಅಸಹಾಯಕವಾಗಿದೆ.
ಮಾತರ್ಮೇದಿನಿ ತಾತ ಮಾರುತ ಸಖೇ ತೇಜಃ ಸುಬಂಧೋ ಜಲ
ಭ್ರಾತರ್ವ್ಯೋಮ ನಿಬದ್ಧ ಏಷ ಭವತಾಮಂತ್ಯಃ ಪ್ರಮಾಣಾಂಜಲಿಃ |
ಯುಷ್ಮತ್ಸಂಗವಶೋಪಜಾತಸುಕೃತಸ್ಫಾರಸ್ಫುರನ್ನಿರ್ಮಲ-
ಜ್ಞಾನಾಪಾಸ್ತಸಮಸ್ತಮೋಹಮಹಿಮಾ ಲೀಯೇ ಪರಬ್ರಹ್ಮಣಿ ||
ತಾಯೆ ಮೇದಿನಿ, ತಂದೆ ಮಾರುತನೆ, ಓ ಗೆಳೆಯ
ತೇಜವೇ, ಸದ್ಬಂಧು ಎಲೆ ಸಲಿಲವೇ,
ಅಣ್ಣ ಆಕಾಶವೇ, ನಿಮಗೆಲ್ಲ ಕೊನೆಯ ಸಲ
ಜೋಡಿಸಿದ ಕರಗಳ ಪ್ರಣಾಮವಿದೆಕೋ!
ನಿಮ್ಮ ಸಹವಾಸದಿಂದೊಗೆದ ಸುಕೃತಕೆ ಲಭಿಸಿ-
ದಮಿತವಿಮಲಜ್ಞಾನದೀಪ್ತಿಯಿಂದ
ಹರಿದು ತೊಲಗೆ ಸಮಸ್ತಮೋಹಪಟಲದ ಮಹಿಮೆ,
ಲೀನನಾಗುವೆ ಪರಬ್ರಹ್ಮದೊಳಗೆ (ಬಿ.ಮು., ಪುಟ ೧೨೭)
ಮೂಲವು ಭರ್ತೃಹರಿಯ ವೈರಾಗ್ಯಶತಕದ ಮಹಾರತ್ನಗಳಲ್ಲೊಂದು. ಪ್ರಾಯಶಃ ವೈರಾಗ್ಯವನ್ನು ಕುರಿತ ಹತ್ತು ಅತ್ಯುತ್ತಪದ್ಯಗಳಲ್ಲಿ ಇದು ಮೊದಲ ಸ್ಥಾನಕ್ಕಾಗಿಯೇ ಸೆಣಸುವುದೇನೋ. ಇಂಥ ಪದ್ಯವನ್ನು ಅನುವಾದಕ್ಕೆ ಕೈಗೆತ್ತಿಕೊಳ್ಳುವುದಕ್ಕೇ ಎಂಟೆದೆ ಬೇಕು! ಈ ಜಾತಿಯ ಕವಿತೆ ತನ್ನೆಡೆಗೆ ಭಾಷಾಂತರಕ್ಕೆಂದು ಸುಳಿಯುವ ಎಂಥ ಸಾಹಸಿಯನ್ನೂ ಅಂಜಿಸುತ್ತದೆ. ಇದು ಎಣ್ದೆಸೆಗಳಿಗೂ ವಿಸ್ತರಿಸಿಕೊಳ್ಳುವ ತನ್ನೊಳಗಿನ ಶಬ್ದಾರ್ಥಸ್ವಾರಸ್ಯವೆಂಬ ಮೃತ್ಯುಬಾಹುಗಳನ್ನು ಭೀಕರತೆಯಿಂದ ಬೀಸುವ ಅಷ್ಟಪಾದಿಯೇ ಸರಿ. ಅರ್ಥಗಾಂಭೀರ್ಯವೆಂಬ ತಿರುಳನ್ನಷ್ಟೇ ಎತ್ತಿಕೊಂಡು, ಮೂಲಕ್ಕೆ ಸುಮ್ಮನೆ ಕೈಮುಗಿದು ಜೀವಗಳ್ಳನಾಗಿ ಓಡುವುದಲ್ಲದೆ ಬಡಪಾಯಿ ಅನುವಾದಕನಿಗೆ ಮಾರ್ಗಾಂತರವಿಲ್ಲ. ತೀನಂಶ್ರೀ ಅವರಾದರೂ ಇದನ್ನು ಚೆನ್ನಾಗಿ ಮಾಡಿದ್ದಾರೆ. ಮೂಲದ ಶಾರ್ದೂಲವಿಕ್ರೀಡಿತವೃತ್ತ ಯಾವುದೇ ಭಾಷೆಯ ಛಂದೋವಾತಾಪಿಗಳಿಗೆ ಸೆಡ್ಡುಹೊಡೆದು ಎದುರುನಿಲ್ಲುವ ಕುಂಭಸಂಭವ! ವಿಶೇಷತಃ ಈ ವೃತ್ತವನ್ನು ಭರ್ತೃಹರಿಯಂತೆ ದೇವಗಾಂಭೀರ್ಯದಿಂದ ನಿರ್ವಹಿಸಿದವರು ವಿರಳ. ತತ್ರಾಪಿ ಮೂರನೆಯ ಪಾದದಲ್ಲಿ ಅವನು ಧ್ವನಿಪೂರ್ಣವಾದ ಸಮಾಸಶೈಲವೊಂದನ್ನು ತಂದಿರಿಸಿ ರಸವಾರಿಧಿಗೆ ಸೇತುವೆ ಕಟ್ಟುವುದರಲ್ಲಿ ನಿಸ್ಸೀಮ. ಇಲ್ಲಿಯೂ ಅದೇ ತಂತ್ರ ಸಾಗಿದೆ. ಆದರೆ ಅದು ಮತ್ತಷ್ಟು ಮುನ್ನುಗ್ಗಿ ನಾಲ್ಕನೆಯ ಸಾಲಿನ ಪಾದಮಧ್ಯದ ಯತಿಸ್ಥಾನದವರೆಗೆ ಅಡೆತಡೆಯಿಲ್ಲದೆ ವಿಸ್ತರಿಸಿಕೊಂಡಿದೆ. ಇದು ಜೀವನ್ಮುಕ್ತನು ತನ್ನ ಜ್ಞಾನಾಗ್ನಿಯಿಂದ ಎಲ್ಲ ಮೋಹಗಳನ್ನೂ ಸುಟ್ಟುರುಬಿಕೊಂಡ ಅಖಂಡಪ್ರಜ್ಞೆಯನ್ನು ಧ್ವನಿಸಿದೆ. ಇಂಥ ಸೂಕ್ಷ್ಮಗಳನ್ನೆಲ್ಲ ತೀನಂಶ್ರೀ ಅವರು ಹಿಡಿದ ಭಾಷಾಂತರಮಾರ್ಗದಲ್ಲಿ ಉಳಿಸಿಕೊಳ್ಳುವುದು ಕಷ್ಟ; ಅಸಾಧ್ಯವೆಂದರೂ ಸರಿ. ಹೀಗಾಗಿ ತಾತ್ಪರ್ಯಕ್ಕವರು ಚ್ಯುತಿ ತಂದಿಲ್ಲವೆಂದರೆ ಸರಿಯಾದೀತು.
ಈ ಮಟ್ಟದ ನಿಶಿತವಿಮರ್ಶೆ ಅನುದಾರವಾದೀತೇನೋ. ಆದರೆ ತೀನಂಶ್ರೀ ಅವರಂಥ ಸೂಕ್ಷ್ಮಸಂವೇದನೆಯ ಸಹಜಕವಿತಾಸ್ಪರ್ಶವುಳ್ಳ ಪ್ರಬುದ್ಧಪಂಡಿತರ ಉತ್ತಮಾನುವಾದಕ್ಕೆ ಇಂಥ ಅಳತೆಗೋಲು ಹಿಡಿಯದಿದ್ದರೆ ವಿದ್ಯಾವ್ಯಸನಿತೆಗೇ ಅಪಚಾರವಾದೀತೆಂದು ಅರೋಚಿಮಾರ್ಗವನ್ನು ಹಿಡಿಯಬೇಕಿದೆ. ಇದನ್ನು ಸಹೃದಯರು ಮನ್ನಿಸಿಯಾರು.