ಇನ್ನು ಮುಂದೆ ಈ ಎರಡು ಕೃತಿಗಳ ಹಲಕೆಲವು ಪದ್ಯಗಳನ್ನು ತೌಲನಿಕವಾಗಿ ಸಮೀಕ್ಷಿಸಬಹುದು. ಮೊದಲಿಗೆ ಇಬ್ಬರೂ ಅನುವಾದಕ್ಕೆ ತೆಗೆದುಕೊಂಡಿರುವ ಸಮಾನಪದ್ಯಗಳನ್ನು ಪರಿಶೀಲಿಸೋಣ.
ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್ |
ವಟಸ್ಯ ಪತ್ರಸ್ಯ ಪುಟೇ ಶಯಾನಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ ||
ಹಸ್ತಕಮಲದಿಂದ ತನ್ನ ಚರಣಕಮಲವ
ತೆಗೆದು ವದನಕಮಲದೊಳಗೆ ಹೊಗಿಸುತಿರುವನ
ಆಲದೆಲೆಯೆ ತೊಟ್ಟಿಲೊಳಗೆ ಪವಡಿಸಿರುವನ
ನೆನೆವೆನೆನ್ನ ಚಿತ್ತದೊಳಗೆ - ಮಗು ಮುಕುಂದನ (ಬಿ.ಮು., ಪುಟ ೩)
ಅಡಿಯ ತಾವರೆಯನ್ನು ಕೈಯ ತಾವರೆಯಿಂದ
ಬಾಯ ತಾವರೆಯಲ್ಲಿ ಹೊಗಿಸುವವನ,
ಬಾಲಮುಕುಂದನನ್ನು ನೆನೆನೆನೆವೆ ಮನದಲ್ಲಿ
ಆಲದೆಲೆಯ ಮೇಲೆ ಪವಡಿಸಿದವನ (ಸು.ಚ., ಪುಟ ೧೦)
ಎರಡೂ ಅನುವಾದಗಳಲ್ಲಿ ಪ್ರಸಾದಗುಣ ವಿಜೃಂಭಿಸಿದ್ದು, ಮೂಲದ ಲಾಟಾನುಪ್ರಾಸ ಉಳಿದುಬಂದಿದ್ದರೂ ತೀನಂಶ್ರೀ ಅವರ ಪದ್ಯದಲ್ಲಿ ಹೆಚ್ಚಿನ ಲಾಲಿತ್ಯವಿದೆ. ಇದಕ್ಕೆ ಅದರ ತ್ರಿಮಾತ್ರಾಗತಿಯೂ ಕಾರಣ. ಪಾ. ವೆಂ. ಅವರ ಪದ್ಯದ ಉತ್ತರಾರ್ಧದಲ್ಲಿ ಛಂದಸ್ಸು ಎಡವಿರುವುದೊಂದು ಕೊರತೆ.
ದ್ರಾಕ್ಷಾ ಮ್ಲಾನಮುಖೀ ಜಾತಾ ಶರ್ಕರಾ ಚಾಶ್ಮತಾಂ ಗತಾ |
ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂಗತಾ ||
ಸೊರಗಿಹೋಯಿತು ಮುಖವು ದ್ರಾಕ್ಷಿಗೆ;
ಸಕ್ಕರೆಯೊ ಕಲ್ಲಾಯಿತು;
ಸೂಕ್ತಿರಸದೆದುರಿನಲಿ ನಿಲ್ಲಲು
ಹೆದರಿ ಸುಧೆ ದಿವಕೋಡಿತು! (ಬಿ.ಮು., ಪುಟ ೧೪)
ದ್ರಾಕ್ಷಿಯ ಮುಖ ಬಾಡಿತು,
ಸಕ್ಕರೆ ಹರಳಾಯಿತು,
ಸುಭಾಷಿತದ ಸವಿಗೆ ನಾಚಿ
ಅಮೃತ ಸ್ವರ್ಗಕೋಡಿತು! (ಸು.ಚ., ಪುಟ ೫)
ಎರಡು ಅನುವಾದಗಳೂ ಸುಂದರವಾಗಿವೆ. ಆದರೆ ತೀನಂಶ್ರೀ ಅವರಲ್ಲಿ ಲಾಲಿತ್ಯ ಮಿಗಿಲಾಗಿ ಮೆರೆದಿದೆ. ಪಾ. ವೆಂ. ಅವರ ಪದ್ಯದಲ್ಲಿ ಛಂದಸ್ಸು ತುಂಬ ನಾಟಕೀಯತೆಯನ್ನು ಮೈಗೂಡಿಸಿಕೊಂಡು ವಿಸ್ಮಯ-ಚಮತ್ಕಾರಗಳಿಗೆ ಎಡೆ ನೀಡಿದೆ. ವಿಶೇಷತಃ ಸಂತುಲಿತದ್ರುತಾವರ್ತಗತಿಯ ಪೂರ್ವಾರ್ಧಕ್ಕೆ ಒಳ್ಳೆಯ ತಿರುವನ್ನೀಯುವಂತೆ ಉತ್ತರಾರ್ಧದ ಅಪ್ಪಟ ತ್ರಿಮಾತ್ರಾಗತಿ ಮತ್ತು “ಸುಭಾಷಿತದ” ಎಂಬಲ್ಲಿ ಮೊದಲಾಗುವ “ಲಗಂ”ವಿನ್ಯಾಸಗಳು ದುಡಿದಿವೆ. ಸಕ್ಕರೆಯು ಕಲ್ಲಾಯಿತೆಂಬ ತೀನಂಶ್ರೀ ಅವರ ಅನುವಾದ ಸಕ್ಕರೆ ಹರಳಾಯಿತೆಂಬ ಪಾ. ವೆಂ. ಅವರ ಭಾಷಾಂತರಕ್ಕಿಂತ ಹೆಚ್ಚು ಪರಿಣಾಮಕಾರಿ.
ಇತರಕರ್ಮಫಲಾನಿ[1] ಯದೃಚ್ಛಯಾ
ವಿತರ ತಾನಿ[2] ಸಹೇ ಚತುರಾನನ |
ಅರಸಿಕೇಷು ಕವಿತ್ವನಿವೇದನಂ
ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ ||
ಉಳಿದೆಲ್ಲ ಕರ್ಮಫಲಗಳನು ಮನಬಂದಂತೆ
ಕಳುಹು: ಸಹಿಸುವೆನಯ್ಯ ವಿಧಿಯೆ, ನಾನವನು;
ಅರಸಿಕರ ಮುಂದೆ ಕವಿತೆಯನೊಪ್ಪಿಸುವುದೊಂದ
ಬರೆಯದಿರು ಬರೆಯದಿರು ಬರೆಯದಿರು ಶಿರದಿ! (ಬಿ.ಮು., ಪುಟ ೧೭)
ನೂರೊಂದು ಕಷ್ಟಗಳ ಹಣೆಯಲ್ಲಿ ಬರೆ ವಿಧಿಯೆ,
ಎಲ್ಲ ಸೈರಿಸುವೆ ನಾ ತುಟಿಯ ಬಿಚ್ಚದಲೆ:
ರಸವರಿಯದವರೆದುರು ಕವಿತೆಯೋದುವುದೊಂದ
ಬರೆಯದಿರು ಬರೆಯದಿರು ಬರೆಯದಿರು ನನಗೆ (ಸು.ಚ., ಪುಟ ೯)
ಇಬ್ಬರ ಅನುವಾದಗಳೂ ಪಂಚಮಾತ್ರಾಗತಿಯಲ್ಲಿವೆ; ಹೆಚ್ಚಿನ ಪದಗಳು ಕೂಡ ಒಂದೇ ಆಗಿವೆ. ತೀನಂಶ್ರೀ ಅವರು “ನಿವೇದನ”ವೆಂಬ ಮೂಲದ ಮಾತನ್ನು “ಒಪ್ಪಿಸುವುದು” ಎಂದು ಕನ್ನಡೀಕರಿಸಿರುವುದು ತುಂಬ ಧ್ವನಿಪೂರ್ಣ, ರಸಮಯ. ಅಂತೆಯೇ ಪಾ. ವೆಂ. ಅವರು “ಸಹೇ” ಎಂಬ ಮೂಲವನ್ನು “ಸೈರಿಸುವೆ ನಾ ತುಟಿಯ ಬಿಚ್ಚದಲೆ” ಎಂದು ವಿಸ್ತರಿಸಿರುವುದು ಹೆಚ್ಚಿನ ಸ್ವಾರಸ್ಯವನ್ನಿತ್ತಿದೆ.
ಬುಭುಕ್ಷಿತೈರ್ವ್ಯಾಕರಣಂ ನ ಭುಜ್ಯತೇ
ಪಿಪಾಸಿತೈಃ ಕಾವ್ಯರಸೋ ನ ಪೀಯತೇ |
ನ ಚ್ಛಂದಸಾ ಕೇನಚಿದುದ್ಧೃತಂ ಕುಲಂ
ಹಿರಣ್ಯಮೇವಾರ್ಜಯ ನಿಷ್ಫಲಾಃ ಕಲಾಃ[3] ||
ವ್ಯಾಕರಣವನು ಭುಜಿಸರಯ್ಯ ಹಸಿದವರು,
ಕಾವ್ಯರಸವೀಂಟರೈ ಬಾಯಾರಿದವರು;
ಛಂದಸ್ಸಿನಿಂದಾರು ಕುಲವನೆತ್ತಿದರು?
ಹಣವನೊಂದನೆ ಗಳಿಸು, ಫಲವಿಲ್ಲ ಕಲೆಗೆ! (ಬಿ.ಮು., ಪುಟ ೧೬೨)
ಹಸಿದರೆ ತಿನಬಹುದೇ ವ್ಯಾಕರಣ?
ತೃಷೆ ಹಿಂಗಿಸುವುದೆ ಕವಿತಾಪಾನ?
ಕುಲವುದ್ಧರಿಸದು ವೇದದ ಪಠನ
ಸುಡು ಗುಣಗಳ, ಶೇಖರಿಸಯ್ಯ ಹಣ (ಸು.ಚ., ಪುಟ ೨೩)
ಎರಡು ಅನುವಾದಗಳೂ ಚೆನ್ನಾಗಿವೆ. ಆದರೆ ಪಾ. ವೆಂ. ಅವರು “ಛಂದಸ್” ಎಂಬ ಪದಕ್ಕಿರುವ “ವೇದ” ಎನ್ನುವ ಅರ್ಥವನ್ನು ಗ್ರಹಿಸಿ ಭಾಷಾಂತರಿಸಿರುವುದು ಮತ್ತೂ ಸ್ವರಸವಾಗಿದೆ.
ಯಃ ಕೌಮಾರಹರಃ ಸ ಏವ ಹಿ ವರಸ್ತಾ ಏವ ಚೈತ್ರಕ್ಷಪಾ--
ಸ್ತೇ ಚೋನ್ಮೀಲಿತಮಾಲತೀಸುರಭಯಃ ಪ್ರೌಢಾಃ ಕದಂಬಾನಿಲಾಃ |
ಸಾ ಚೈವಾಸ್ಮಿ ತಥಾಪಿ ಚೌರ್ಯಸುರತವ್ಯಾಪಾರಲೀಲಾವಿಧೌ
ರೇವಾರೋಧಸಿ ವೇತಸೀತರುತಲೇ ಚೇತಃ ಸಮುತ್ಕಂಠತೇ ||
ನನ್ನ ಕೌಮಾರವನದಾರು ಕಸಿದನೊ ಅವನೆ
ವಲ್ಲಭನು, ಅದೆ ವಸಂತದ ನಿಶೆಗಳು,
ಮಾಲತಿಯ ಪರಿಮಳದ ಸೆರೆಯ ಬಿಡಿಸಿ ಕದಂಬ-
ವನದ ಮೇಲೈತಂದ ಅದೆ ಸಮೀರ,
ಅದೆ ನಾನು ಮತ್ತೆ; ಈ ಎಲ್ಲವಿಂತಿರಲೇನು—
ಅಲ್ಲಿ ರೇವಾನದಿಯ ತೀರದಲ್ಲಿ,
ಹಬ್ಬೆಗಿಡದಡಿಯಲ್ಲಿ, ಆ ರಹಸ್ಯಪ್ರಣಯ-
ಕೇಳಿಯನು ಬಗೆದು ತುಡಿವುದು ಹೃದಯವು (ಬಿ.ಮು., ಪುಟ ೯೮)
ಕನ್ನೆತನ ಕಳೆದಾತನೇ ವರ,
ಸುಗ್ಗಿತಿಂಗಳಿನಿರುಳಿದೇ,
ಬಿರಿದ ಜಾಜಿಯ ಹೊರೆದ ಕಂಪಿನ
ಬಗುನೆತೋಪುಗಳೆಲರದೇ,
ಅವಳೆ ನಾನೂ ಆದರೂ ಈ
ತುಡುಗುಬೇಟದ ಹೊಂಚಲಿ
ಯಾತಕೋ ಆತುರಿಸುತಿದೆ ಈ
ಜೀವ ನರ್ಮದೆಯಂಚಲಿ (ಬಿ.ಮು., ಪುಟ ೫೨)
ಎಂದಿನಂತೆ ತೀನಂಶ್ರೀ ಅವರ ಅನುವಾದ ಮೂಲದ ರೂಪಕ್ಕೆ ಹೆಚ್ಚು ನಿಷ್ಠವಾಗಿದೆ. ಆದರೆ ಪಾ. ವೆಂ. ಅವರದು ಮೂಲದ ಭಾವವನ್ನೇ ಬಸಿದು ತಂದಂತಿದೆ. ವಿಶೇಷತಃ “ತುಡುಗುಬೇಟದ ಹೊಂಚಲಿ” ಎಂಬ ಪದಪುಂಜವಂತೂ ಅತ್ಯಂತ ರಸಮಯ. ಪಾ. ವೆಂ. ತೀನಂಶ್ರೀ ಅವರಿಗಿಂತಲೂ ಹೆಚ್ಚಾಗಿ ಅಚ್ಚಗನ್ನಡವನ್ನೇ ಬಳಸಿ ಮತ್ತಷ್ಟು ಲಾಲಿತ್ಯವನ್ನು ತಂದಿದ್ದಾರೆ. ಇದಕ್ಕೆ ಅವರು ಆಯ್ದುಕೊಂಡ ಭಾಮಿನೀಗತಿಯೂ ಚೆನ್ನಾಗಿ ಒದಗಿಬಂದಿದೆ. ಆದರೆ ಮೂಲದ “ಉನ್ಮೀಲಿತಮಾಲತೀಸುರಭಯಃ ಪ್ರೌಢಾಃ ಕದಂಬಾನಿಲಾಃ” ಎಂಬ ಭಾವನಿರ್ಭರವಾದ ವಾಕ್ಯಖಂಡದ ಅರ್ಥಗರ್ಭಿತವಾದ ಬಹುವಚನವಾಗಲಿ, “ಪ್ರೌಢ”ಪದದ ವ್ಯಂಜಕತ್ವವಾಗಲಿ ಇಬ್ಬರ ಅನುವಾದಗಳಲ್ಲಿಯೂ ಇಳಿದುಬಂದಿಲ್ಲ. ಇದಕ್ಕೆ ಕನ್ನಡನುಡಿಯ ಸಹಜವಾದ ಜಾಯಮಾನವೂ ಒಂದು ಮಟ್ಟಿಗೆ ಕಾರಣ. ಯಾವುದೇ ಸಮರ್ಥಭಾಷಾಂತರದಲ್ಲಿ ಕೂಡ ಕೈಜಾರಿಹೋಗುವ ಇಂಥ ಸೂಕ್ಷ್ಮತೆಗಳು ದುರ್ನಿವಾರ್ಯ.
ಶೂನ್ಯಂ ವಾಸಗೃಹಂ ವಿಲೋಕ್ಯ ಶಯನಾದುತ್ಥಾಯ ಕಿಂಚಿಚ್ಛನೈ-
ರ್ನಿದ್ರಾವ್ಯಾಜಮುಪಾಗತಸ್ಯ ಸುಚಿರಂ ನಿರ್ವರ್ಣ್ಯ ಪತ್ಯುರ್ಮುಖಮ್ |
ವಿಸ್ರಬ್ಧಂ ಪರಿಚುಂಬ್ಯ ಜಾತಪುಲಕಾಮಾಲೋಕ್ಯ ಗಂಡಸ್ಥಲೀಂ
ಲಜ್ಜಾನಮ್ರಮುಖೀ ಪ್ರಿಯೇಣ ಹಸತಾ[4] ಬಾಲಾ ಚಿರಂ ಚುಂಬಿತಾ ||
ಬರಿಯ ಶಯ್ಯಾಗೃಹದ ಸುತ್ತಲೂ ನೋಡಿ ಮೆ-
ಲ್ಲನೆ ಶಯನದಿಂದಿನಿಸು ಮೇಲಕೆದ್ದು,
ನಿದ್ದೆಯನು ನಟಿಸಿ ಮಲಗಿದ್ದ ಹೃದಯೇಶ್ವರನ
ವದನದಲಿ ನಿಡುಹೊತ್ತು ನೋಟವಿರಿಸಿ
ಬಳಿಕ ನಿಃಶಂಕೆಯಲಿ ಮನಸಾರ ಮುತ್ತಿಡಲು,
ಕೆನ್ನೆಯಲಿ ಪುಳಕವೆದ್ದುದನು ಕಂಡು
ನಾಚಿ ಮೊಗ ಬಾಗಿಸಿದ ಬಾಲೆಯನು ನಗುನಗುತ
ಪ್ರಿಯನು ನಿಲವಿಲ್ಲದೆಯೆ ಚುಂಬಿಸಿದನು (ಬಿ.ಮು., ಪುಟ ೧೦೯)
ಸದ್ದಡಗಿತು ಮನೆ; ಎದ್ದಳು ಮೆಲ್ಲನೆ
ಮುಗ್ಧೆ ಹಾಸಿಗೆಯಲರ್ಧರ್ಧ,
ನಿದ್ದೆ ಬಂದಹಾಗಿದ್ದ ಪತಿಯ ಮುಖ
ನೋಡುತ್ತಿದ್ದಲೆಷ್ಟೋ ನಿಮಿಷ;
ಮೂಡಿತು ನಂಬಿಕೆ; ಮುತ್ತಿಟ್ಟಳು ಮೆತ್ತಗೆ;
ಕಂಡಳು ಕೆನ್ನೆಯಲೆದ್ದ
ಪುಳಕ; ನಾಚಿ ತಗ್ಗಿಸಿದಳು ತಲೆ; ಅವ
ಬಾಚಿ ಕರೆದ ಮುತ್ತಿನ ವರ್ಷ (ಬಿ.ಮು., ಪುಟ ೫೮)
ತೀನಂಶ್ರೀ ಅವರ ಅನುವಾದದಲ್ಲಿ ನಯ-ನವುರುಗಳು ಚೆನ್ನಾಗಿ ಮೈವೆತ್ತಿವೆ. ಮೂಲದ ಎಲ್ಲ ಅಂಶಗಳನ್ನೂ ಅವಧಾನಿಸಿ ಅನುವಾದದಲ್ಲಿ ಸೆರೆಹಿಡಿಯುವ ದಕ್ಷತೆ ಮೆಚ್ಚುವಂತಿದೆ. ಪಾ. ವೆಂ. ಅವರಲ್ಲಿ ನಾಟಕೀಯತೆ ಕಳೆಯೇರಿದೆ. ಇದಕ್ಕೆ ಪೂರಕವಾಗಿ “ಸದ್ದಡಗಿತು,” “ಎದ್ದಳು,” “ಮುಗ್ಧೆ,” “ನಿದ್ದೆ,” “ನೋಡುತ್ತಿದ್ದ,” “ಕೆನ್ನೆಯಲೆದ್ದ” ಮುಂತಾದ—ಪದ್ಯದ ಆದ್ಯಂತ ವಿಸ್ತರಿಸಿಕೊಂಡ—ಅನುಪ್ರಾಸಗಳು ಅಂದವನ್ನು ಹೆಚ್ಚಿಸಿವೆ. ಅಲ್ಲದೆ, ಚತುರ್ಮಾತ್ರಾಗತಿಯಲ್ಲಿ ಸಹಜವಾಗಿ ನುಸುಳಿರುವ ಗಣಪರಿವೃತ್ತಿಗಳೂ ಸ್ವತಂತ್ರವಾಗಿ ನಿಲ್ಲುವ ವಾಕ್ಯಘಟಕಗಳೂ ಅನುವಾದಕ್ಕೊಂದು ಜೀವಂತಿಕೆಯ ಮಿಡುಕನ್ನು ತುಂಬಿಕೊಟ್ಟಿವೆ. ಆದರೆ ಅಲ್ಲಲ್ಲಿ ತೊಡರಿಕೊಳ್ಳುವ ಛಂದಸ್ಸು ನಾಲಗೆ ಮತ್ತು ಕಿವಿಗಳಿಗೆ ಏಕಕಾಲದಲ್ಲಿ ಕಸಿವಿಸಿಯನ್ನುಂಟುಮಾಡಿದೆ.
ಚಿತಾಂ ಪ್ರಜ್ವಲಿತಾಂ ದೃಷ್ಟ್ವಾ ವೈದ್ಯೋ ವಿಸ್ಮಯಮಾಗತಃ |
ನಾಹಂ ಗತೋ ನ ಮೇ ಭ್ರಾತಾ ಕಸ್ಯೇದಂ ಹಸ್ತಲಾಘವಮ್ ||
ಉರಿವ ಚಿತೆಯನು ಕಂಡು
ಬೆರಗುಗೊಂಡನು ವೈದ್ಯ:
“ನಾನು ಹೋಗಿರಲಿಲ್ಲ,
ಅಣ್ಣನೂ ಇರಲಿಲ್ಲ—
ಇದು ಯಾರ ಕೈಯ ಚಳಕ!” (ಬಿ.ಮು., ಪುಟ ೧೬೭)
ಉರಿಯುವ ಚಿತೆಯನು ವೈದ್ಯನು ಕಂಡ
ಮನದಲಿ ತಾನತಿವಿಸ್ಮಯಗೊಂಡ;
ನಾನು ಹೋಗೆ, ನನ್ನಣ್ಣನು ಕೂಡ
ಯಾವನದಪ್ಪಾ ಈ ಕೈವಾಡ! (ಸು.ಚ., ಪುಟ ೬೭)
ಎರಡೂ ಅನುವಾದಗಳು ಸುಂದರವಾಗಿವೆ; ಮೂಲದ ಸಮರ್ಥಪ್ರತಿಬಿಂಬಗಳೆನಿಸಿವೆ. ತೀನಂಶ್ರೀ ಅವರು ಹತ್ತು-ಹತ್ತು ಮಾತ್ರೆಗಳ ನಾಲ್ಕು ಸಾಲುಗಳ ಬಳಿಕ ಹನ್ನೆರಡು ಮಾತ್ರೆಗಳ ಸಾಲೊಂದರಿಂದ ಪದ್ಯವನ್ನು ಮುಗಿಸಿದಂತೆ ತೋರಿದರೂ ವಸ್ತುತಃ ಇಲ್ಲಿರುವುದು ಇಪ್ಪತ್ತಿಪ್ಪತ್ತು ಮಾತ್ರೆಗಳ ಎರಡು ಸಾಲುಗಳನ್ನು ಹಿಂಬಾಲಿಸಿದ ಹನ್ನೆರಡು ಮಾತ್ರೆಗಳ ಒಂದೇ ಸಾಲು. ಹೀಗಾಗಿ ಮೂರನೆಯದಾದ ಹನ್ನೆರಡು ಮಾತ್ರೆಗಳ ಪಾದವು ತತ್ತ್ವತಃ ಎಂಟು ಮಾತ್ರೆಗಳಷ್ಟು ಮೌನದಿಂದಲೇ ಗತಿಯನ್ನು ತುಂಬಿಕೊಳ್ಳಬೇಕಾಗಿದೆ. ಇದು ಪರಿಣಾಮದೃಷ್ಟಿಯಿಂದ ತುಂಬ ಆಕರ್ಷಕ. ಪಾ. ವೆಂ. ಅವರ ಅನುವಾದ ಚತುರ್ಮಾತ್ರಾಗಣಘಟಿತ. ಇಲ್ಲಿಯ ಅಂತ್ಯಪ್ರಾಸಗಳೂ ಗಮನಾರ್ಹ. ಜೊತೆಗೆ, ಮೂರನೆಯ ಸಾಲಲ್ಲಿ ಮೊದಲಿಗೆ ಬರುವ ಗಣಪರಿವೃತ್ತಿ ಪರಿಣಾಮಕಾರಿ. ಇಬ್ಬರಲ್ಲಿಯೂ ಒಳ್ಳೆಯ ನುಡಿಗಟ್ಟಿರುವಂತೆ ಮೂಲದ “ಹಸ್ತಲಾಘವ”ಪದವು ಕನ್ನಡದಲ್ಲಿ ಅವತರಿಸಿದೆ.
ರೇ ರೇ ರಾಸಭ ವಸ್ತ್ರಭಾರವಹನಾತ್ಕುಗ್ರಾಸಮಶ್ನಾಸಿ ಕಿಂ
ರಾಜಾಶ್ವಾವಸಥಾನ್ ಪ್ರಯಾಹಿ ಚಣಕಾಭ್ಯೂಷಂ ಸುಖಂ ಭಕ್ಷಯ |
ಸರ್ವಾನ್ ಪುಚ್ಛವತೋ ಹಯಾ ಇತಿ ವದಂತ್ಯತ್ರಾಧಿಕಾರೇ ಸ್ಥಿತಾ[5]
ರಾಜಾ ತೈರುಪದಿಷ್ಟಮೇವ ಮನುತೇ ಸತ್ಯಂ ತಟಸ್ಥಾಃ ಪರೇ ||
ಎಲೆಲೆ ಗಾರ್ದಭ, ಏಕೆ ಹೊರೆಹೊರೆಯ ಬಟ್ಟೆಗಳ
ಹೊರುತ ಕುಗ್ರಾಸವನು ಮೇಯುತಿರುವೆ?
ಹೋಗು ನೆಟ್ಟಗೆ ದೊರೆಯ ಕುದುರೆಲಾಯಕೆ, ಭುಜಿಸು
ಹಾಯಾಗಿ ಹೊಸ ಕಡಲೆಗುಗ್ಗುರಿಯನು
ಬಾಲವುಳ್ಳರನೆಲ್ಲ ಕುದುರೆಯೆಂದೇ ಕರೆವ-
ರಲ್ಲಿ ಅಧಿಕಾರದಲಿ ನೆಲಸಿದವರು:
ಅವರು ನುಡಿದುದೆ ಸತ್ಯವೆಂದು ದೊರೆ ನಂಬುವನು;
ಇದರ ಗೊಡವೆಗೆ ಬಾರರುಳಿದ ಜನರು! (ಬಿ.ಮು., ಪುಟ ೧೮೭)
ಎಲವೆಲವೊ ಕತ್ತೆ, ತಿನಲೇಕೆ ತರಗ,
ಕೊಳೆಬಟ್ಟೆಯೇಕೆ ಹೊರುವೆ?
ಅರಸುಲಾಯವ ಸೇರು, ಸುಖವಾಗಿ ನೀ ಬಾಳು,
ಮೆಲ್ಲುತ್ತ ಹುರಳಿ-ಕಡಲೆ.
ಅಂಜದಿರು; ಬಾಲವಿದ್ದದ್ದೆಲ್ಲ ಕುದುರೆಯೆಂ-
ಬಧಿಕಾರಿವರ್ಗವಲ್ಲಿ;
ಅರಸಗವರಂದದ್ದೆ ಪದವಾಕ್ಯ, ಮಿಕ್ಕವರು
ತೆಗೆಯುವವರಲ್ಲ ತರಲೆ! (ಸು.ಚ., ಪುಟ ೧೦೮)
ಮೂಲದ ವ್ಯಂಗ್ಯ-ವಿಡಂಬನೆಗಳನ್ನು ಪಾ. ವೆಂ. ಅವರ ಅನುವಾದ ಹೆಚ್ಚು ಯಶಸ್ಚಿಯಾಗಿ ಭಟ್ಟಿಯಿಳಿಸಿದೆ. ಇದಕ್ಕೆ ಅವರು ಕತ್ತೆಯೆಂಬ ಅಚ್ಚಗನ್ನಡಪದವನ್ನು ಬಳಸಿರುವುದೇ ಮೊದಲ ಸಾಕ್ಷಿ. ಈ ಪರಿಣಾಮ ಪದ್ಯದ ಕಡೆಯಲ್ಲಿ ಬರುವ “ತರಲೆ”ಪದದಲ್ಲಿಯೂ ಮಡುಗಟ್ಟಿದೆ. ಅಲ್ಲದೆ, “ರಾಜಾ ತೈರುಪದಿಷ್ಟಮೇವ ಮನುತೇ ಸತ್ಯಂ” ಎಂಬ ಮೂಲವನ್ನು “ಅರಸಗವರಂದದ್ದೆ ಪದವಾಕ್ಯ” ಎಂಬಂತೆ ರಚನಾತ್ಮಕವಾಗಿ ರೂಪಾಂತರಿಸಿರುವ ಕಾರಣ ಮಾರ್ಮಿಕತೆ ಹೆಚ್ಚಿದೆ. ಕಾರಣವಿಷ್ಟೇ: “ಉಪದಿಷ್ಟ” ಎಂಬಲ್ಲಿ ಗಾಂಭೀರ್ಯದ ಸೋಗಿರುವಂತೆ “ಪದವಾಕ್ಯ” ಎಂಬಲ್ಲಿ ಮತ್ತೂ ಹೆಚ್ಚಿನ ಕಟಕಿಯುಂಟು. ವಿದ್ವಾಂಸರು ಬಲ್ಲಂತೆ ಪದ-ವಾಕ್ಯಗಳು ವ್ಯಾಕರಣ-ಮೀಮಾಂಸೆಗಳ ವಾಚಕಗಳು. ಅಂದರೆ ರಾಜನಿಗೆ ಲಾಯದ ಅಧಿಕಾರಿಗಳ ಮಾತು ವ್ಯಾಕರಣದಷ್ಟು ಕರಾರುವಾಕ್ಕು, ಮೀಮಾಂಸಾಶಾಸ್ತ್ರದಷ್ಟು ಅನುಲ್ಲಂಘ್ಯ! ತೀನಂಶ್ರೀ ಅವರಾದರೋ ಮೂಲವನ್ನು ಗಂಭೀರವಾಗಿ ಭಾಷಾಂತರಿಸಿದ್ದಾರೆ. ಹೀಗಾಗಿಯೇ ಚಣಕಾಭ್ಯೂಷವು ಕಡಲೆಗುಗ್ಗುರಿ ಎಂಬ ಸಾಕ್ಷಾತ್ ಅನುವಾದವನ್ನು ಪಡೆದಿದೆ. ಇಂಥ ಕ್ರಮವು ವಿದ್ಯಾರ್ಥಿಗಳಿಗೆ ತುಂಬ ಉಪಯೋಗಿ.
ವಾಸಃ ಖಂಡಮಿದಂ ಪ್ರಯಚ್ಛ ಯದಿ ವಾ ಸ್ವಾಂಗೇ ಗೃಹಾಣಾರ್ಭಕಂ
ರಿಕ್ತಂ ಭೂತಲಮತ್ರ ನಾಥ ಭವತಃ ಪೃಷ್ಠೇ ಪಲಾಲೋಚ್ಚಯಃ |
ದಂಪತ್ಯೋರಿತಿ ಜಲ್ಪಿತಂ ನಿಶಿ ಯದಾ ಚೌರಃ ಪ್ರವಿಷ್ಟಸ್ತದಾ
ಲಬ್ಧಂ ಕರ್ಪಟಮನ್ಯತಸ್ತದುಪರಿ ಕ್ಷಿಪ್ತ್ವಾ ರುದನ್ನಿರ್ಗತಃ ||
“ಆ ಅರಿವೆಯನು ನೀಡು, ಇಲ್ಲದಿರೆ ಕಂದನನು
ಕರೆದುಕೋ ನಿನ್ನ ತೊಡೆಗೆ”
“ಬರಿಯೆ ನೆಲ ಇತ್ತ ಕಡೆ; ನಾಥ, ಹೊಟ್ಟಿನ ರಾಶಿ
ಇಹುದಲ್ಲಿ ನಿನ್ನ ಕೆಳಗೆ”
—ಇರುಳಿನಲಿ ದಂಪತಿಗಳಿಂತು ಮಾತಾಡುತಿರೆ,
ಒಳಗೆ ನುಗ್ಗಿದ ಕಳ್ಳನು
ಇನ್ನೆಲ್ಲೊ ದೊರೆತ ದಟ್ಟವನವರ ಮೇಲೆಸೆದು
ಅಳುತ ಹೊರಗಡೆ ನಡೆದನು (ಬಿ.ಮು., ಪುಟ ೧೫೯)
“ಬಟ್ಟೆತುಂಡನೆನಗಾರೆ ನೀಡು ನೀನಾರೆ
ಮಗುವ ಮಲಗಿಸಿಕೊಳ್ಳು;”
“ಇಲ್ಲಿ ಬರಿಯ ನೆಲ, ನಿನ್ನ ಬೆನ್ನಿಗುಂ-
ಟಷ್ಟಾದರು ಒಣಹುಲ್ಲು”—
ಗಂಡ-ಹೆಂಡಿರೀ ಇರುಳ ಸಲ್ಲಾಪವಾಲಿಸಿ,
ಮನೆ ಹೊಕ್ಕಿದ ಕಳ್ಳ
ಎಲ್ಲೊ ಕದ್ದ ಕವುದಿಯನಾಕೆಯ ಮೇಲೊಗೆದು
ಜಾರಿದನು ಮೆಲ್ಲೆ (ಸು.ಚ., ಪುಟ ೩೬)
ಇಬ್ಬರ ಅನುವಾದಗಳ ಪೈಕಿ ತೀನಂಶ್ರೀ ಅವರದೇ ಉತ್ತಮ. ಸಂದರ್ಭದ ಗಾಂಭೀರ್ಯವನ್ನು ಧ್ವನಿಸುವಂತೆ ಪಂಚಮಾತ್ರಾಗತಿಯಲ್ಲಿ ಸಾಗಿದ ಅವರ ಅನುವಾದ ಪಾ. ವೆಂ. ಅವರ ಚತುರ್ಮಾತ್ರಾಗತಿ ಮತ್ತು ಸಂತುಲಿತಮಧ್ಯಾವರ್ತಗತಿಗಳ ಭಾಷಾಂತರಕ್ಕಿಂತ ಹೆಚ್ಚು ಉಚಿತ. ಪಾ. ವೆಂ. ಅವರ ಪದ್ಯಬಂಧ ಹಲವೆಡೆ ಎಡವಿದಂತೆಯೂ ಕೇಳುತ್ತದೆ. ಅಲ್ಲದೆ ಅವರು ಮೂಲದ “ರುದನ್ನಿರ್ಗತಃ” ಎಂಬ ಅತ್ಯಂತ ಧ್ವನಿಪೂರ್ಣವಾದ ಮಾತನ್ನು ಆಂಶಿಕವಾಗಿ ಮಾತ್ರ ಹಿಡಿದಿದ್ದಾರೆ. ಆದರೆ ತೀನಂಶ್ರೀ ಇದನ್ನು ಸಮಗ್ರವಾಗಿ ಗ್ರಹಿಸಿದ್ದಾರೆ.
[1] “ಇತರದುಃಖಶತಾನಿ” ಎಂಬುದು ಪಾ. ವೆಂ. ಅವರ ಪಾಠ.
[2] “ವಿಲಿಖ ತಾನಿ” ಎಂಬುದು ಪಾ. ವೆಂ. ಅವರ ಪಾಠ.
[3] “ನಿಷ್ಫಲಾ ಗುಣಾಃ” ಎಂಬುದು ಪಾ. ವೆಂ. ಅವರ ಪಾಠ.
[4] “ಸಹಸಾ” ಎಂಬುದು ಪಾ. ವೆಂ. ಅವರ ಪಾಠ.
[5] “ರಾಜಾಶ್ವಾವಸಥಂ ಪ್ರಯಾಹಿ ಚಣಕಾಭ್ಯೂಷಾನ್ ಸುಖಂ ಭಕ್ಷಯ | ಸರ್ವಾನ್ ಪುಚ್ಛವತೋ ಹಯಾನಭಿವದಂತ್ಯತ್ರಾಧಿಕಾರೇ ಸ್ಥಿತಾ” ಎಂಬುದು ಪಾ. ವೆಂ. ಅವರ ಪಾಠ.
To be continued.