ಯೌಗಂಧರಾಯಣ ತನ್ನ ಮಹತ್ತಾದ ಕನಸನ್ನು ರೇಭಿಲನೊಡನೆ ಹಂಚಿಕೊಳ್ಳುತ್ತಾನೆ:
ಗೆಳೆಯಾ, ನಾನು ತುಂಬ ವರ್ಷಗಳಿಂದ ಇಡಿಯ ಭರತಭೂಮಿಯ ಹಿತ ಹೇಗೆ ಅಂತ ಆಲೋಚಿಸ್ತಾನೇ ಇದ್ದೀನಿ. ಯಾವುದೇ ಅಭಿನಿವೇಶ ಬಿಟ್ಟು, ಬುದ್ಧಿ ಮತ್ತು ಹೃದಯಗಳೆರಡನ್ನೂ ನನ್ನ ಕೈಲಾದ ಮಟ್ಟಿಗೆ ಶುದ್ಧವಾಗಿಟ್ಟುಕೊಂಡು ಮತ್ತೆ ಮತ್ತೆ ನಮ್ಮ ಈ ಭೂಮಿಯ ಹಿಂದು, ಮುಂದು, ಇಂದುಗಳನ್ನೆಲ್ಲ ಮಥಿಸಿ ನೋಡ್ತಿದ್ದೀನಿ ... ನೋಡು, ಪಾಂಡವರ ಕಾಲದಲ್ಲೂ ಈ ದೇಶ ಹತ್ತಾರು ಅಧಾರ್ಮಿಕಪ್ರಭುಗಳ ಅಬ್ಬರದಲ್ಲಿ ಹಲವಾರು ರಾಜ್ಯಗಳಾಗಿ ಹರಿದುಹಂಚಿಹೋಗಿತ್ತು. ಶ್ರೀಕೃಷ್ಣ ಮಾಡಿದ್ದೆಲ್ಲ ಅವುಗಳನ್ನ ಒಂದುಗೂಡಿಸಿದ್ದೇ; ಅವುಗಳಲ್ಲಿ ಧರ್ಮದೃಷ್ಟಿಯನ್ನ ಗಟ್ಟಿಗೊಳಿಸಿದ್ದೇ. ಈಗಲಾದರೂ ಅಷ್ಟೇ, ನಮ್ಮ ಈ ಭರತಖಂಡ ಷೋಡಶಮಹಾಜನಪದಗಳು ಮತ್ತೂ ಹತ್ತಾರು ಗಣತಂತ್ರಗಳು ಅಂತ ಛಿದ್ರಛಿದ್ರವಾಗಿದೆ. ಧರ್ಮ-ಬ್ರಹ್ಮ-ರಸಗಳ ಬಲ-ಭಾಗ್ಯಗಳನ್ನ ಮೈಗೂಡಿಸಿಕೊಂಡಿರೋ ಒಬ್ಬ ಸಾರ್ವಭೌಮ ಇವನ್ನೆಲ್ಲ ಅಖಂಡವಾಗಿ ಆಳಿದರೆ, ಪ್ರಜೆಗಳನ್ನ ಚೆನ್ನಾಗಿ ಬಾಳಿಸಿದರೆ ಒಳ್ಳೆಯದು ... ತ್ರಯೀ-ಆನ್ವೀಕ್ಷಿಕಿಗಳಿಗೆ ನಾನಿರ್ತೀನಿ; ವಾರ್ತೆ-ದಂಡನೀತಿಗಳಿಗೆ ಚಾರುದತ್ತ-ವತ್ಸರಾಜರಂಥವರು ಒದಗಿಬರಲಿ ಅಂತ ಕನಸು ಕಾಣ್ತಾ ಇದ್ದೆ. ನನ್ನ ಬದುಕಿನಲ್ಲಿದು ನನಸಾಗೋ ಹಾಗೆ ತೋರ್ತಾ ಇಲ್ಲ ... ಋಷಿಕಲ್ಪನಾದ ಯಾವನಾದರೂ ರಾಜನೀತಿಜ್ಞ ಬೇಗನೆ ಹುಟ್ಟಿಬಂದು ಇದನ್ನ ನನಸು ಮಾಡಲಿ. ಹಾಗೆ ಬರಲಿರುವ ಅರ್ಥಶಾಸ್ತ್ರವಿಧಾತನಿಗೆ ಇದೋ, ನನ್ನ ನಮಸ್ಕಾರ ... ರೇಭಿಲ ನುಡಿದ: “ಆರ್ಯ, ನೀವು ಹೇಳಿದ್ದು ನಿಮ್ಮ ಕನಸಲ್ಲ, ನಮ್ಮೆಲ್ಲರ ಕನಸು. ಅಷ್ಟೇಕೆ, ಇಡಿಯ ಈ ಮಣ್ಣಿನ ಕನಸು.” (ಪು. ೬೩೭-೩೮)
ರೇಭಿಲನ ಮಾತಿಗೆ ನಾವೂ ದನಿಗೂಡಿಸಬೇಕಿನಿಸುತ್ತದೆ. ಈ ಮಣ್ಣು, ಅಂದರೆ ಈ ಭೂಮಿ ಒಬ್ಬ ಫಿಲಾಸಫರ್-ಸ್ಟೇಟ್ಸ್ಮನ್‌ಗಾಗಿ, ಜನಕ ಮಹಾರಾಜನಂಥ ರಾಜರ್ಷಿಯ ಬರವಿಗಾಗಿ ಕಾಯುತ್ತ ಕನಸು ಕಾಣುತ್ತಿದೆಯೇ? ಈ ಕನಸು ನನಸಾಗಬಹುದೇ? ಯೌಗಂಧರಾಯಣ ಅರ್ಥಶಾಸ್ತ್ರವಿಧಾತನೆಂದು ಚಾಣಕ್ಯನ ಬರವನ್ನು ಸೂಚಿಸುತ್ತಿದ್ದಾನೆಯೇ? ಶೌದ್ರದಲ್ಲಿ ನಿರೀಕ್ಷೆ ಮಾಡಬೇಕೆಂದಾಗ ಚಂದ್ರಗುಪ್ತ ಮೌರ್ಯನ ಸೂಚನೆ ಇದೆಯೇ? ಹಾಗೆಯೇ ಕಾಲಘಟ್ಟದಲ್ಲಿ ಈಚಿನದು ಎನಿಸುವ ವಿದ್ಯಾರಣ್ಯರು ಹಕ್ಕ-ಬುಕ್ಕರ ಮೂಲಕ ಸ್ಥಾಪಿಸಿದ ವಿಜಯನಗರಸಾಮ್ರಾಜ್ಯವೂ ನೆನಪಿನಲ್ಲಿ ಸುಳಿಯುವುದಲ್ಲವೇ?
ಮಣ್ಣಿನ ಈ ಮಹಾಕನಸು ಅತ್ಯಂತ ಬೃಹತ್ ಯಂತ್ರವೊಂದರ ಕನಸಿದ್ದಂತೆ. ಅದು ಸುಗಮವಾಗಿ ಕೆಲಸ ಮಾಡಲು ಯಂತ್ರದ ಒಂದೊಂದು ಸಣ್ಣ ಮೊಳೆ, ತಿರುಪು ಸ್ವಸ್ಥಾನದಲ್ಲಿ ದೃಢವಾಗಿ ನೆಲೆಗೊಂಡು ಕಾರ್ಯ ನಿರ್ವಹಿಸಬೇಕು; ಆಗ ಮಾತ್ರ ಕನಸಿನ ಸಾಕ್ಷಾತ್ಕಾರ ಸಾಧ್ಯ.
ಕಾದಂಬರಿಯ ಮೊದಲ ಅಧ್ಯಾಯದಿಂದಲೇ ಯೌಗಂಧರಾಯಣನ ಈ ಕನಸಿನ ಪರಿಚಯವಾಗುತ್ತದೆ. ಆ ಕನಸನ್ನು ಕಣಸುಮಾಡುವ ತನ್ನ ಹಂಬಲವನ್ನು ಅವನು ಚಾರುದತ್ತನೊಡನೆ ಹಂಚಿಕೊಳ್ಳುತ್ತಾನೆ: “ನನ್ನದು ಬರಿಯ ವತ್ಸದೇಶವೊಂದರ ಹಿತಚಿಂತನೆಯಲ್ಲ; ಇಡಿಯ ಆರ್ಯಾವರ್ತದ ಮಾತ್ರವಲ್ಲ, ಸಮಸ್ತ ಭಾರತವರ್ಷದ ಕ್ಷೇಮಕಾತರ” (ಪು. ೧೮).
‘ಮೃಚ್ಛಕಟಿಕ’ ಮತ್ತು ‘ಸ್ವಪ್ನವಾಸವದತ್ತ’ ರೂಪಕಗಳ ಸಂಲಗ್ನತೆ
ಈ ಎರಡೂ ರೂಪಕಗಳನ್ನು ಸಂಯೋಜಿಸುವಲ್ಲಿ ಲೇಖಕರು ಹಲವಾರು ನಿರೂಪಣತಂತ್ರಗಳನ್ನು ಬಳಸಿಕೊಂಡಿದ್ದಾರೆ. ಘಟನೆಗಳು ಸಂಭವಿಸಿರಬಹುದಾದ ಕಾಲದ ಕಲ್ಪನೆಯನ್ನು ಅತ್ಯಂತ ಕೌಶಲದಿಂದ ರೂಪಿಸಿದ್ದಾರೆ. ಕಾದಂಬರಿಯ ಮೊದಲಿಗೇ ಲೇಖಕರು ಕಲಾಪ್ರೀತಿ ಮತ್ತು ವೀಣಾವಾದನಗಳಿಗೆ ಹೆಸರಾದ ಉದಯನನ ಆಹ್ವಾನದ ಮೇರೆಗೆ ವತ್ಸದೇಶದ ವಸಂತೋತ್ಸವವನ್ನು ನೋಡಲು ಉಜ್ಜಯಿನಿಯ ಚಾರುದತ್ತ ಬಂದನೆಂದು ಚಿತ್ರಿಸಿದ್ದಾರೆ. ಇದನ್ನವರು ಆ ಎರಡು ರಾಜ್ಯಗಳ ಸ್ನೇಹ ಬೆಸೆಯುವ ಸನ್ನಿವೇಶವನ್ನಾಗಿ ಬಳಸಿಕೊಂಡಿದ್ದಾರೆ.
‘ಮೃಚ್ಛಕಟಿಕ’ದ ಮುಖ್ಯಪಾತ್ರ ಚಾರುದತ್ತ ಮತ್ತು ‘ಸ್ವಪ್ನವಾಸವದತ್ತ’ದ ಮುಖ್ಯಪಾತ್ರ ಉದಯನ ಮಹಾರಾಜ ಇಬ್ಬರನ್ನೂ ಮೊದಲಿಗೇ ಮುಖಾಮುಖಿಯಾಗಿಸುವ ಲೇಖಕರು ಅಲ್ಲಿಯೇ ಅವರ ವ್ಯಕ್ತಿತ್ವಗಳನ್ನೂ ಓದುಗರಿಗೆ ನಿಖರವಾಗಿ ಪರಿಚಯಿಸುತ್ತಾರೆ. ಚಾರುದತ್ತನ ಸದಭಿರುಚಿ, ಅಬ್ಬರವಿಲ್ಲದ ನಡೆ-ನುಡಿಗಳನ್ನು ಕೆಲವೇ ವಿವರಗಳ ಮೂಲಕ ಕಟ್ಟಿಕೊಡುತ್ತಾರೆ: “ಅನುದಿನವೂ ಬೆಳಗು-ಬೈಗುಗಳಲ್ಲಿ ಕರ್ಪೂರ, ಕಸ್ತೂರಿ, ಚಂದನಗಳ ಅನುಲೇಪನಗಳನ್ನು ಆಸ್ಥೆಯಿಂದ ಮಾಡಿಕೊಳ್ಳುತ್ತಿದ್ದ. ನಾಗರಕರಲ್ಲಿ ರಾಸಿಕ್ಯದ ಅಳತೆಗೋಲೆಂದರೆ ಸುಗಂಧದ್ರವ್ಯಗಳ ಸಂದರ್ಭೋಚಿತ ಬಳಕೆ ತಾನೆ?” ಈ ಮಾತುಗಳು ಅಂದಿನ ಸಮಾಜದ ನಾಗರಿಕರ ವೇಷ-ಭೂಷಣಗಳ ಬಗೆಗೆ ಬೆಳಕು ಚೆಲ್ಲುತ್ತವೆ: “ಚಾರುದತ್ತ ಸುಳಿದಲ್ಲಿ ಮಲ್ಲಿಗೆ, ಜಾಜಿ, ಸಂಪಗೆ, ಪಾರಿಜಾತಗಳ ಮಧುರಸ್ಮೃತಿ ಮಾಸದು. ಅವನಿಗೆ ಆಭರಣಗಳಿಂತ ಈ ಬಗೆಯ ಹೂಗಳು ಇಷ್ಟ” (ಪು. ೩). ಚಾರುದತ್ತನ ಅಲಂಕರಣದ ಈ ವಿವರದಿಂದ ಹೊಮ್ಮುವ ಅವನ ಪ್ರಕೃತಿಪ್ರೇಮ ಇನಿದಾಗಿದೆ. ಈ ಬಣ್ಣನೆಯ ಮರುಕ್ಷಣವೇ ಅವನ ಮಿತ್ರ ಮೈತ್ರೇಯನ ವರ್ಣನೆಯಲ್ಲಿಯ ವೈರುದ್ಧ್ಯದಿಂದಾಗಿ ಚಾರುದತ್ತನ ವ್ಯಕ್ತಿತ್ವ ಮತ್ತಷ್ಟು ಶೋಭಿಸುತ್ತದೆ.
ಉದಯನನು ಪ್ರದ್ಯೋತ ಮಹಾರಾಜನ ಪಟ್ಟದಾನೆ ನಡಾಗಿರಿಯನ್ನು ನೋಡಲು ಹೋಗಿದ್ದ ಘಟನೆಯನ್ನು ತಿಳಿಸುವ ಮೂಲಕ ಆ ಮಹಾಗಜದ ಪರಿಚಯದೊಡನೆ ಮೈತ್ರೇಯನ ಬಾಯಿಚಪಲದ ಮಾತುಗಳಿಂದ ವಾಸವದತ್ತೆಯು ಉದಯನನಿಗೂ ಓದುಗನಿಗೂ ಪರಿಚಯಿಸಲ್ಪಡುತ್ತಾಳೆ: “ಮೈತ್ರೇಯ ಸಲುಗೆಯಿಂದೆಂಬಂತೆ ಉದಯನ ಮಹಾರಾಜನನ್ನು ಕೇಳುತ್ತಾನೆ: ‘ನಡಾಗಿರಿಯನ್ನು ನೋಡಲು ಹೋದಾಗ ನಮ್ಮ ರಾಜಕುಮಾರಿ ವಾಸವದತ್ತೆಯನ್ನೇನಾದರೂ ನೋಡಿದಿರಾ? ಅವಳು ತ್ರಿಲೋಕಸುಂದರಿ, ಅವಳಿಗೂ ವೀಣೆಯಲ್ಲಿ ಆಸಕ್ತಿ’” (ಪು. ೧೩). ಇಂಥ ಹಲವಾರು ಘಟನೆಗಳು, ಸನ್ನಿವೇಶಗಳು, ಆವರಣನಿರ್ಮಾಣಗಳು ಬಹುಕಾಲದ ಅಧ್ಯಯನ, ಆಲೋಚನೆ ಮತ್ತು ಅಭಿಜಾತ ಪ್ರತಿಭೆಯ ಫಲ.
ಉದಯನ ಮಹಾರಾಜನಾದರೂ ಚಾರುದತ್ತನಂಥ ಕಲಾಪ್ರೇಮಿಯೊಡನೆ ಸೋದರಭಾವದಿಂದ ವರ್ತಿಸುವ ರೀತಿ, ಆತನ ವೀಣಾವಾದನದ ಮಾಧುರ್ಯ ಮತ್ತು ಪರಿಣತಿಗಳಿಗೆ ಚಾರುದತ್ತ ಮಾರುಹೋಗುವ ಬಗೆ ಚೆನ್ನಾಗಿ ಮೂಡಿಬಂದಿದೆ.
ಉದಯನನ ವೀಣಾವಾದನ
ಉದಯನನ ವೀಣಾವಾದನವನ್ನು ಸಂಗೀತ, ಸಾಹಿತ್ಯ, ನಾಟ್ಯಗಳಲ್ಲಿ ಪರಿಣತಿ ಪಡೆದ ಕಲಾಭಿಜ್ಞರಿಗೆ ಮಾತ್ರ ಬಣ್ಣಿಸಲು ಸಾಧ್ಯ:
ಈವರೆಗೆ ವಿಲಾಸಪುರುಷನಂತಿದ್ದ ಉದಯನ ತನ್ನ ಕೈಗೆ ಘೋಷವತಿ ಬಂದೊಡನೆಯೇ ಮತ್ತಾವನೋ ಸಾಧಕನೆಂಬಂತೆ ಗಂಭೀರನಾದನು. ಮೊದಲೇ ಶ್ರುತಿಗೊಳಿಸಿಟ್ಟ ಆ ದಿವ್ಯವಾದ್ಯವನ್ನು ತನ್ನ ಮಂದ್ರಸುಂದರ ಧ್ವನಿಯೊಡನೆ ಬೆರೆಸುತ್ತ ಕೆಲವೇ ಕ್ಷಣಗಳಲ್ಲಿ ಆ ಪ್ರಮದವನದ ವಾತಾವರಣವನ್ನು ಅಲೌಕಿಕಸ್ತರಕ್ಕೆ ಏರಿಸಿದ್ದ. ಸಾಮಾನ್ಯವಾಗಿ ಹೇಳುವಂತೆ ಯಂತ್ರವೀಣೆಗೂ ಕಂಠವೀಣೆಗೂ ಅಭೇದವೆನಿಸುವಂತೆ ಗಾನ-ವಾದನಗಳು ಸಾಗುವುದು ಆದರ್ಶದ ಶಿಖರ. ಆದರೆ ಇಲ್ಲಿ ಆ ನಾದಾದ್ವೈತ ಅನ್ಯೋನ್ಯವಾದ ಪೂರಕತೆಯಿಂದ, ಪೌಷ್ಟಿಕತೆಯಿಂದ ಮತ್ತಾವುದೋ ಅದೃಶ್ಯವೀಣೆಯ, ಅಭೌತವೀಣೆಯ ಅನುಭವವನ್ನೇ ಶ್ರೋತೃಗಳಿಗೆ ತುಂಬಿಕೊಡುತ್ತಿದೆ. ಮದಕರಿಗಳನ್ನೂ ಪಳಗಿಸುವ ಕಸುವುಳ್ಳ ಆ ಕೈಗಳು ಘೋಷವತಿಯ ತಂತಿಗಳನ್ನು ಕುಸುಮಕೋಮಲತೆಯಿಂದ ಓಲೈಸುತ್ತಿವೆ. ಮಿಂಚಿನ ಓಟದ ತೊಂಡುಕುದುರೆಗಳ ಕಡಿವಾಣವನ್ನು ಹಿಡಿದು ನಿಯಂತ್ರಿಸುವ ಆ ಬೆರಳುಗಳು ಇದೀಗ ಬಿಗಿದಿಟ್ಟ ತಂತಿಗಳ ಒಳಗೆ ಹುದುಗಿರುವ ಸ್ವರಹಂಸಗಳನ್ನು ನಾದಾಕಾಶಕ್ಕೆ ಅಕ್ಕರೆಯಿಂದ ಹಾರಿಸುತ್ತಿವೆ. ವೀಣೆಯನ್ನು ನುಡಿಸಲು ಬಳಸುವ ಮರದ ತುಂಡು ಕೋಣವನ್ನು ಹಿಡಿದ ಬೆರಳುಗಳಂತೂ ಶ್ರುತಿಲಯಗಳ ಪ್ರಭಾತಕುಸುಮಗಳನ್ನು ಅರುಣಕಿರಣಗಳು ನವುರಾಗಿ ನೇವರಿಸಿ ಮಲರಿಸುವಂತೆ ತಂತ್ರೀವಿಸ್ತರಣದ ಮೇಲೆ ನುಣುಪಾಗಿ ಸಂಚರಿಸಿವೆ. ಅನಪೇಕ್ಷಿತವಾದ ಅಂಗವಿಕಾರಕ್ಕೆ ಆಸ್ಪದವೀಯದ ಉದಯನನ ಗಾನವಿಧಾನ ಅವನ ಕಾಯಸೌಂದರ್ಯವನ್ನು ನಿರ್ಮಾಯಸ್ತರಕ್ಕೆ ಏರಿಸಿದೆ. (ಪು. ೪೪)
ವೀಣಾವಾದನದ ಪ್ರಾತ್ಯಕ್ಷಿಕೆಯಂತಿರುವ ವಿವರಗಳಲ್ಲಿ ಲೇಖಕರು ವಾದನ-ಗಾಯನಗಳನ್ನೆಲ್ಲ ತಮ್ಮ ನುಡಿಯ ವೀಣೆಯಲ್ಲಿ ನುಡಿಸಿಬಿಟ್ಟಿದ್ದಾರೆ. ವಾದನ-ಗಾಯನಗಳ ಮಾಧುರ್ಯಕ್ಕೆ ಸಾಹಿತ್ಯದ ಸೌರಭನ್ನು ತುಂಬಿದ್ದಾರೆ. ಅಪಾರ ಪೌರುಷವಿರುವ ವ್ಯಕ್ತಿ ಕಲಾವಿದನೂ ಆಗಿದ್ದಾಗ ಅಭಿವ್ಯಕ್ತಗೊಳ್ಳುವ ಕಲೆಯ ಪರಿಣತಿ ಹಾಗೂ ಕೋಮಲತೆಗಳ ಚಿತ್ರಣ ಇಲ್ಲಿದೆ.
ಇದೇ ಸಂದರ್ಭದಲ್ಲಿ ಉದಯನನ ಸಂಗೀತಶಾಸ್ತ್ರಪಾಂಡಿತ್ಯವನ್ನೂ ಲೇಖಕರು ವಿವರವಾಗಿ ವಿಶದೀಕರಿಸುತ್ತಾರೆ. ಇಂಥ ಪ್ರತಿಭೆ-ಪಾಂಡಿತ್ಯಗಳ ಸಂಗಮವೆನಿಸಿದ ಕಲೆ ಚಾರುದತ್ತನಂಥ ಕಲಾಪ್ರೇಮಿಯ ಮೇಲೆ ಉಂಟುಮಾಡಿದ ಗಾಢ ಪರಿಣಾಮವನ್ನೂ ವಿವರಿಸುತ್ತಾರೆ. (ಪು. ೪೪ರಿಂದ ೪೬ರ ತನಕ ಇರುವ ಈ ವಿವರಗಳನ್ನು ಸಂಗೀತಶಾಸ್ತ್ರಾಸಕ್ತರು ಗಮನಿಸಬಹುದು.)
ಉದಯನ ಷಡ್ಜಗ್ರಾಮದ ಏಳು ಬಗೆಯ ಜಾತಿಗಳನ್ನೂ ಮಧ್ಯಮಗ್ರಾಮದ ಹನ್ನೊಂದು ಬಗೆಯ ಜಾತಿಗಳನ್ನೂ ಹದವರಿತು ಪ್ರಯೋಗಿಸುತ್ತಿದ್ದ. ಇವುಗಳ ಅನೇಕ ಉಪಭೇದಗಳನ್ನೂ ಅಳವಡಿಸಿಕೊಳ್ಳುತ್ತಿದ್ದ. ಏಳೂ ಸ್ವರಗಳಿರುವ ಇಂಥ ಜಾತಿಗಳ ಜೊತೆಗೆ ಆರು ಅಥವಾ ಐದು ಸ್ವರಗಳೇ ಇರುವ ಜಾತಿಗಳೂ ಅವನ ಸಂಗೀತದಲ್ಲಿ ಸೊಗಸಾಗಿ ಬಳಕೆಯಾಗುತ್ತಿದ್ದವು. ಇಂದಿನ ವಿನಿಕೆ ಕೂಡ ಇಂಥ ಅಂಶಗಳಿಂದ ರಂಜಿಸಿತ್ತು. ಸಾಹಿತ್ಯಪ್ರಧಾನವಾದ ಗಾನದಲ್ಲಿ ಎಲ್ಲ ಬಗೆಯ ರಸಿಕರಿಗೂ ಸುಲಭವಾಗಿ ದಕ್ಕಬಲ್ಲ ಸ್ವಾರಸ್ಯವನ್ನು ಕೇವಲ ಸ್ವರ-ಲಯಗಳಷ್ಟೇ ಸ್ಫುರಿಸುವ ವಾದನದಲ್ಲಿಯೂ ತುಂಬಿಕೊಡುವ ಕೌಶಲ ಆತನದು. ಆದುದರಿಂದಲೇ ಅವನು ರಸಾನುಸಾರವಾಗಿ ವಿಭಿನ್ನಜಾತಿಗಳನ್ನು ಪ್ರಯೋಗಿಸುತ್ತಿದ್ದ. ದಿಟವೇ, ಇಂಥ ರಸಕ್ಕೆ ಇದೊಂದೇ ಜಾತಿ ಎಂಬ ನಿರ್ದಿಷ್ಟನಿರ್ಬಂಧವಿಲ್ಲ. ಆದರೆ ಕೆಲವೊಂದು ಜಾತಿಗಳಲ್ಲಿ ಕೆಲವೊಂದು ರಸಗಳನ್ನು ತುಂಬಿಕೊಡುವುದು ಸುಲಭ; ಸೊಗಸೂ ಕೂಡ. ಉದಯನ ಈ ಸೂಕ್ಷ್ಮತೆಯನ್ನು ಬಲ್ಲ ಕಾರಣ ಶೃಂಗಾರಕ್ಕೆ ಪ್ರಧಾನವಾಗಿ ಷಡ್ಜ-ಮಧ್ಯಮಸ್ವರಗಳ ಸಮೃದ್ಧಿಯಿರುವ ಜಾತಿಗಳನ್ನೂ ಮಧ್ಯಮಗ್ರಾಮದ ಕೆಲವೊಂದು ಜಾತಿಗಳನ್ನೂ ಹೆಚ್ಚಾಗಿ ನಚ್ಚುತ್ತಿದ್ದ. ವೀರ-ಅದ್ಭುತಗಳಿಗೆ ಆರ್ಷಭಿ ಮತ್ತು ಷಾಡ್ಜಿಗಳೂ ಆಂಧ್ರಿ ಮತ್ತು ಕರ್ಮಾರವಿಗಳೂ ಬಳಕೆಯಾಗುತ್ತಿದ್ದವು. ಕರುಣರಸಕ್ಕಂತೂ ಗಾಂಧಾರಸ್ವರದ ಹೆಚ್ಚಳವುಳ್ಳ ಷಡ್ಜಕೈಶಿಕಿ ಮತ್ತು ರಕ್ತಕೈಶಿಕಿಗಳು ಒದಗಿಬರುತ್ತಿದ್ದುವು.
ಇಷ್ಟೆಲ್ಲ ಜಾತಿಗಳ ವೈವಿಧ್ಯ-ವೈಪುಲ್ಯಗಳಿಗೆ ಸರಳವಾದ ಕೆಲವೊಂದು ತಾಳಗಳಿಂದಲೇ ಅವನು ಜೀವಗತಿಯನ್ನು ತುಂಬುತ್ತಿದ್ದ ... ಜಾತಿ-ಗ್ರಾಮಗಳಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಸ್ವರದಲ್ಲಿಯೂ ರಸಾನುಗುಣವಾದ ವಿನಿಯೋಗವಿರಬೇಕೆಂಬುದು ಉದಯನನ ಅಭಿಮತ ... ಆಯಾ ರಸಗಳ ಸ್ಥಾಯಿ-ವ್ಯಭಿಚಾರಿಗಳನ್ನು ವಿಭಿನ್ನವರ್ಣಗಳ ಸ್ಥಾಯಿ-ಸಂಚಾರಿಗಳಿಗೆ ಹದವರಿತು ಬೆಸೆಯುವಂಥ ಸ್ವೋಪಜ್ಞವಾದ ಪ್ರಯೋಗಗಳನ್ನೆಷ್ಟೋ ಮಾಡಿ ಅವನು ಸಫಲನಾಗಿದ್ದ ... ಬಹುಶಃ ದಂತಕಥೆಯಾಗಿ ಹಬ್ಬಿದ ಆತನ ವೀರ-ಶೃಂಗಾರವೆಲ್ಲ ಇಂಥ ನಾದನಿರ್ಭರತೆಯಲ್ಲಿ ಪರ್ಯಂತಭೂಮಿಯನ್ನು ಕಂಡುಕೊಂಡಿತ್ತೇನೋ! ... ಬಹುಕಾಲದಿಂದ ಪಂಚಸ್ವರಗಳ ಜಾತಿಗಳ ಸ್ವಾರಸ್ಯ-ರಹಸ್ಯಗಳನ್ನು ಭೇದಿಸುತ್ತಿದ್ದ ಆತನ ಮನೋಧರ್ಮ ಅಂದು ಕಾರ್ಯಕ್ರಮದ ಹೆಚ್ಚಿನ ಕಾಲವನ್ನು ಆ ಹುಡುಕಾಟಕ್ಕೇ ಮೀಸಲಿರಿಸಿತು ... ಐದೇ ಸ್ವರಗಳ ಆರೋಹ-ಅವರೋಹಗಳನ್ನು ಹೊಂದಿದ್ದರೂ ಈ ಬಗೆಯ ಜಾತಿಗಳಿಗೆ ಅದೆಷ್ಟು ಆಕರ್ಷಣೆ! ಇವು ತನ್ನ ಪಂಚಪ್ರಾಣಗಳನ್ನೇ ಸೆಳೆದೊಯ್ದು ಅವುಗಳ ಸ್ಥಾನದಲ್ಲಿ ಪಂಚಭೂತಗಳಿಂದಾದ ಇಡಿಯ ಈ ವಿಶ್ವದ ಆನಂದವನ್ನೇ ಪ್ರತಿಷ್ಠಾಪಿಸುತ್ತಿರುವಂತೆ ತೋರಿದೆ. ಅದರಲ್ಲಿಯೂ ಷಡ್ಜ, ಗಾಂಧಾರ, ಮಧ್ಯಮ, ಪಂಚಮ ಮತ್ತು ನಿಷಾದಗಳ ಆರೋಹ-ಅವರೋಹವನ್ನುಳ್ಳ ಹೊಸಬಗೆಯ ಜಾತಿಯೊಂದು ತನ್ನ ಅಂತರಂಗವನ್ನೇ ಮೀಟುತ್ತಿರುವಂತೆ ಕಂಡಿದೆ. (ಪು. ೪೪-೪೬)
ಈ ಭಾಗದಲ್ಲಿ ಸಂಗೀತವು ರಸಪ್ರವಾಹವಾಗಿ ಹರಿದು ಕಲಾನಂದವನ್ನು ಅತ್ಯಂತ ಉನ್ನತ ಸ್ತರಕ್ಕೆ ಏರಿಸಿದೆ. ಗಾಯನ-ವಾದನ-ನರ್ತನಗಳ ಅನುಭವವನ್ನು ನುಡಿಯಲ್ಲಿ ಮಿಡಿಸುವ ಕಲಾಭಿಜ್ಞತೆ ಆಯಾ ಕಲೆಗಳಲ್ಲಿ ಪರಿಣತರಾದ ರಸಸಿದ್ಧರಿಗೆ ಮಾತ್ರ ದಕ್ಕುವಂಥದ್ದು. ಇಂತಹ ವಿವರಗಳು ರಸಸಿದ್ಧರಾದ ಭೈರಪ್ಪನವರ ‘ಮಂದ್ರ’ ಕಾದಂಬರಿಯ ರಾಜಾಸಾಹೇಬರ ಗಾಯನ, ಸಾಧುವಿನ ಓಂಕಾರಸಾಧನೆ, ಸೋಹನ್ ಗುರುವಿನ ಭಾವ ಬತಾನಾ ಮುಂತಾದ ವಿವರಗಳ ವರ್ಣನೆಯನ್ನು ನೆನಪಿಗೆ ತರುತ್ತವೆ.[1]
[1] ಘೋಷವತಿ ವೀಣೆಯ ಸ್ವರೂಪ ಈಗಿನ ಗೋಟುವಾದ್ಯದ ಮತ್ತಷ್ಟು ಚಿಕ್ಕ ಆಕಾರವೇ? ಎಂಬ ಸಂಗತಿ ಮನಸ್ಸಿಗೆ ಬರುತ್ತದೆ. ಇದು ಚಿತ್ರವೀಣೆ ಮತ್ತು ಕಿನ್ನರೀವೀಣೆಗಳಂತೆಯೂ ಇದ್ದಿರಬಹುದು. ಇದನ್ನು ನುಡಿಸಲು ಉದಯನ ಕೋಣವನ್ನು - ನಯವಾದ ಮರದ ತುಂಡನ್ನು - ಬಳಸುತ್ತಾನೆ. ಈ ವೀಣೆಗೆ ಸ್ಥಿರವಾದ ಮೆಟ್ಟಿಲುಗಳು ಇರುವುದಿಲ್ಲ. ಘೋಷವತಿಯನ್ನು ಬೆನ್ನಿಗೆ ಕಟ್ಟಿಕೊಂಡೇ ಉದಯನ ಹೊರಡುತ್ತಾನೆ; ಯಾವುದೇ ಹಿಡಿತವಿಲ್ಲದೆ ಆನೆಯ ಮೇಲೆ ಕುಳಿತು ವೀಣೆಯನ್ನು ನುಡಿಸುತ್ತಾನೆ (ಪು. ೨೩೯, ೨೪೦). ಅಂದರೆ, ಘೋಷವತಿ ಇಂದಿನ ಗಿಟಾರಿನ ಗಾತ್ರದಲ್ಲಿ ಇದ್ದಿರಬಹುದೇ? ನಮ್ಮ ತಾಯಿಯವರ ಕಾಲದಲ್ಲಿ ಕೂಡ ವೀಣೆಯನ್ನು ನುಡಿಸುವುದರ ಜೊತೆಗೆ ಹಾಡನ್ನೂ ಹಾಡಬೇಕಾಗಿರುತ್ತಿತ್ತಂತೆ. ಅವರೂ ಹೀಗೆ ಮಾಡುತ್ತಿದ್ದರು.
To be continued.