ಕೌಶಾಂಬಿ-ಉಜ್ಜಯಿನಿಗಳ ನಡುವೆ ರಾಜಕೀಯ ಸಂಘರ್ಷ
“ಭಾರತವರ್ಷದ ಮಧ್ಯಮಣಿ ಉಜ್ಜಯಿನಿ. ಹೀಗಾಗಿಯೇ ಇದನ್ನು ವಿದ್ವಾಂಸರು ಬಹುಕಾಲದಿಂದ ಸಮಗ್ರದೇಶದ ಕಾಲನಿಷ್ಕರ್ಷೆಯ ಕೇಂದ್ರವೆಂದು ಗುರುತಿಸಿಕೊಂಡಿದ್ದರು. ಉಜ್ಜಯಿನಿಯು ಮಹಾಕಾಲನಗರಿಯೆಂಬ ಖ್ಯಾತಿಗೆ ಇದೇ ಬಹುಶಃ ಕಾರಣ” (ಪು. ೪೯) ಎಂದಿದ್ದಾರೆ ಲೇಖಕರು. ಇಲ್ಲಿಯ ಪ್ರಾಕೃತಿಕ ಸೌಂದರ್ಯವನ್ನೂ ಪೌರಾಣಿಕ ಮಹತ್ತ್ವವನ್ನೂ ವಿವರಿಸಿ ಅವಂತಿ ಜನಪದಕ್ಕೆ ಉಜ್ಜಯಿನಿಯು ಸರ್ವವಿಧದಿಂದಲೂ ಅಲಂಕಾರವಾಗಿತ್ತೆಂದು ತಿಳಿಸುತ್ತಾರೆ. ಪ್ರದ್ಯೋತ ಮಹಾರಾಜ ತನ್ನ ಪ್ರಚಂಡ ಶಕ್ತಿ ಮತ್ತು ಪ್ರಖರ ವರ್ತನೆಗಳಿಂದಾಗಿ ಚಂಡಮಹಾಸೇನ ಎಂದು ಹೆಸರಾಗಿದ್ದ. ಅಂಗಾರಕನೆಂಬ ರಾಕ್ಷಸನನ್ನು ಕೊಂದು ಅವನ ಮಗಳು ಅಂಗಾರವತಿಯನ್ನು ಮದುವೆಯಾದ ಧೈರ್ಯಶಾಲಿ ಈತ. ಪ್ರದ್ಯೋತ ಮತ್ತು ಅಂಗಾರವತಿಯರ ಮಕ್ಕಳು ಗೋಪಾಲಕ ಮತ್ತು ವಾಸವದತ್ತೆ. ಪ್ರದ್ಯೋತನ ಮತ್ತೊಬ್ಬ ರಾಣಿ ಶಿವೆಯಲ್ಲಿ ಜನಿಸಿದ ಮಗನೇ ಪಾಲಕ. ಶಿವೆಯ ಮರಣದಿಂದಾಗಿ ಅಂಗಾರವತಿಯೇ ಪಾಲಕನನನ್ನು ಮಾತೃವಾತ್ಸಲ್ಯದಿಂದ ಸಾಕಿದ್ದಳು. ಆದರೂ ಅವನು ವಿದ್ಯೆಗೆ ವಿಮುಖನಾಗಿ ವ್ಯಾಯಾಮ, ಆನೆ-ಕುದುರೆಗಳ ಹುಚ್ಚು ಹತ್ತಿಸಿಕೊಂಡು ತಂದೆಗೆ ಮಾತ್ರ ತಗ್ಗಿ-ಬಗ್ಗಿ ನಡೆಯುವಂತೆ ವರ್ತಿಸುತ್ತಿದ್ದ. ಗೋಪಾಲಕ ಇದಕ್ಕೆ ತದ್ವಿರುದ್ಧ. ಅವನು ವಿದ್ಯಾವ್ಯಸನಿ, ಅರ್ಥಶಾಸ್ತ್ರ-ದಂಡನೀತಿಗಳಲ್ಲಿ ಕೃಷಿ ಮಾಡಿದ್ದಲ್ಲದೆ ಸುಸಂಕೃತನಾಗಿದ್ದ. ಆರ್ಯಕ ಇವನ ಮಗ. ಪ್ರದ್ಯೋತನಿಂದ ಮೊದಲ್ಗೊಂಡು ಯಾವ ಅರಸುಕುವರರಿಗೂ ಕಲೆಯಲ್ಲಿ ಅಭಿರುಚಿ ಇರಲಿಲ್ಲ. ವಾಸವದತ್ತೆಗೆ ಮಾತ್ರ ಇವುಗಳಲ್ಲಿ ಆಸಕ್ತಿ. ಅವುಳು ವೀಣಾವಾದನರಸಿಕೆ. ಆನೆಗಳನ್ನೂ ಪ್ರೀತಿಸುತ್ತಿದ್ದಳು; ಭದ್ರವತಿ ಎಂಬ ಅನೆಯ ಪ್ರೀತಿಯ ಒಡತಿಯಾಗಿದ್ದಳು. ಕೌಶಾಂಬಿಯ ಉದಯನನಿಗೂ ಉಜ್ಜಯಿನಿಯ ವಾಸವದತ್ತೆಗೂ ಪ್ರೇಮಸಂಬಂಧ ಬೆಳೆಯಲಿರುವುದರಿಂದ ಉಜ್ಜಯಿನಿಯ ಅರಸರ, ಅರಸುಕುವರರ ಮತ್ತು ಅರಮನೆಯ ಪರಿಸರದ ವಿವರಗಳು ದೀರ್ಘವಾಗಿಯೇ ಚಿತ್ರಿಸಲ್ಪಟ್ಟಿವೆ. ವಾಸವದತ್ತೆ ರೇಭಿಲನಿಂದ ಸಂಗೀತ ಕಲಿಯುತ್ತಿರುತ್ತಾಳೆ.
ಪ್ರದ್ಯೋತ ಮಹಾರಾಜ ತನಗೆ ಇಂದ್ರನ ವರದಿಂದ ಪ್ರಾಪ್ತಳಾದ ಪುತ್ರಿ ವಾಸವದತ್ತೆಗೆ ತಕ್ಕ ವರನನ್ನು ಹುಡುಕುವ ಪ್ರಯತ್ನದಲ್ಲಿರುವಾಗಲೇ ಪಾಲಕನ ಅಸೂಯೆ-ವಂಚನೆಗಳಿಂದ ಉದಯನ ಸೆರೆಗೆ ಸಿಲುಕುತ್ತಾನೆ. ಪ್ರದ್ಯೋತ ಈ ಅವಕಾಶವನ್ನು ಬಹಳ ಜಾಣ್ಮೆಯಿಂದ ಬಳಸಿಕೊಳ್ಳುತ್ತಾನೆ. ಉದಯನನ ಬಗೆಗೆ ಪಾಲಕನಿಗಿದ್ದ ಅಸೂಯೆ ಇತ್ಯಾತ್ಮಕ ಫಲವನ್ನೇ ನೀಡುವುದೊಂದು ಚೋದ್ಯ.
ಆಳುವವರಿಗೆ ಆರಣ್ಯಕರ ಸ್ನೇಹದ ಆವಶ್ಯಕತೆ
ಉದಯನ ಮಹಾರಾಜ ತರುಣ. ಇನ್ನೂ ಮದುವೆಯಾಗದವ. ಕಲಾಪ್ರೇಮಿ, ಸಾಹಸಿ. ಇವನು ತನ್ನ ವೀಣಾವಾದನದಿಂದ ಮದ್ದಾನೆಗಳನ್ನೂ ಪಳಗಿಸುತ್ತಿದ್ದನೆಂಬ ಪ್ರತೀತಿಯಿತ್ತು. ಪ್ರದ್ಯೋತ ಮಹಾರಾಜನ ಪಟ್ಟದಾನೆ ನಡಾಗಿರಿ ಅತ್ಯಂತ ಬಲಶಾಲಿ ಎಂದು ಜಾನಪದರಲ್ಲಿ, ಆಟವಿಕರಲ್ಲಿ ಹೆಸರು ಗಳಿಸಿತ್ತು.
ಉದಯನ ಮತ್ತು ಪ್ರದ್ಯೋತರ ರಾಜ್ಯಗಳ ಅರಣ್ಯಭಾಗದಲ್ಲಿ ವಾಸಿಸುವ ಬುಡಕಟ್ಟುಜನರೊಡನೆ ಅವರು ರೂಢಿಸಿಕೊಂಡಿದ್ದ ಸ್ನೇಹ ಹಾಗೂ ಈ ಆಟವಿಕರು ಕೂಡ ದೊರೆಗಳೊಡನೆ ತಳೆದಿದ್ದ ನಿಷ್ಠೆ-ಗೌರವಗಳು ಉಲ್ಲೇಖಾರ್ಹ.
ಪ್ರದ್ಯೋತನು ಮಹಾಜನಪದಗಳ ಒಡೆಯರ ನಡುವೆ ಗಣ್ಯನಾಗಿದ್ದು ತನ್ನ ಪರಾಕ್ರಮ, ಸೇನಾಸನ್ನಾಹ, ಬಿರುಕಿಲ್ಲದ ಅಂತಃಪುರ ಮತ್ತು ಆಜ್ಞಾನುವರ್ತಿಗಳಾದ ಕುಟುಂಬಸದಸ್ಯರ ಕಾರಣ ಯಾವ ಬಗೆಯ ಶತ್ರುಗಳಿಗೂ ಆಸ್ಪದವಿತ್ತಿರಲಿಲ್ಲ ಎಂದು ತಿಳಿಸುವ ಲೇಖಕರು ಮತ್ತೊಂದು ಮುಖ್ಯ ಸಂಗತಿಯನ್ನೂ ನಮ್ಮ ಗಮನಕ್ಕೆ ತರುತ್ತಾರೆ:
ಅವಂತಿಯ ಪರಿಸರವು ತಮ್ಮ ಅಸ್ಮಿತೆಗೆ ಮಿಗಿಲಾಗಿ ಅನುಕೂಲಿಸುವುದೆಂಬ ನಂಬುಗೆ ಇಲ್ಲಿಯ ಕಾಡುಗಳ ಬುಡಕಟ್ಟುಗಳಿಗೆ ಪ್ರದ್ಯೋತನ ಮೂಲಕ ದೊರಕಿತ್ತು. ಈ ನಿಟ್ಟಿನಲ್ಲಿ ಅಂಗಾರವತಿಯ ಪಾತ್ರವೂ ದೊಡ್ಡದೇ. ಮಹಾಸೇನನ ಮಹಾಕಾಲಭಕ್ತಿಯಾಗಲಿ, ಅವನು ಶ್ರದ್ಧೆಯಿಂದ ಕೈಗೊಳ್ಳುವ ಯಾಗಗಳ, ಉತ್ಸವಗಳ ಪರಿಯಾಗಲಿ ಆರಣ್ಯಕರ ನಿಸರ್ಗಶಕ್ತಿಗಳ ಪೂಜೆ, ಮಾತೃದೇವತೆಗಳ ಪೂಜೆಗಳಂಥ ಕ್ರಮಗಳಿಗಿಂತ ರೂಪ-ಸ್ವರೂಪಗಳಲ್ಲಿ ಭಿನ್ನವಲ್ಲದ ಕಾರಣ ಅವರ ವಿಶ್ವಾಸ ಮತ್ತಷ್ಟು ಕುದುರಿತ್ತು. ಎಲ್ಲಕ್ಕೂ ಮಿಗಿಲಾಗಿ ಉಜ್ಜಯಿನಿಯಲ್ಲಿ ನಡೆಯುತ್ತಿದ್ದ ವೇದೋಕ್ತವೇ ಆದ ಬಗೆಬಗೆಯ ಋತುಸಂಬಂಧಿ ಉತ್ಸವಗಳು ತಮ್ಮ ಹಾಡು, ಕುಣಿತ, ತಿಂಡಿ, ತೀರ್ಥ, ಉಲ್ಲಾಸ, ಉತ್ಸಾಹಗಳ ಮೂಲಕ ಆಟವಿಕರ ಮೂಲಧಾತುವಾದ ಜೀವನಶ್ರದ್ಧೆಯನ್ನು ಚೆನ್ನಾಗಿ ತಟ್ಟಿದ್ದವು. ಹೀಗಾಗಿ ಪ್ರದ್ಯೋತನ ಮಾತಿಗೆ ಹೆಚ್ಚಿನ ಆರಣ್ಯಕರು ಹಿಂದು ಮುಂದು ನೋಡದೆ ಬೆಲೆ ಕೊಡುತ್ತಿದ್ದರು. (ಪು. ೫೧)
ಅಂದಿನ ಕಾಲಘಟ್ಟದಲ್ಲಿ ರಾಜ್ಯಗಳ ಸುತ್ತಲಿನ ಅರಣ್ಯಗಳು ಅದೊಂದು ಬಗೆಯಲ್ಲಿ ಗಡಿಯ ರಕ್ಷಣೆ ನೀಡುತ್ತಿದ್ದ ಕಾವಲುಗಳೇ ಆಗಿರುತ್ತಿದ್ದವು. ಶತ್ರುಗಳು ಈ ಕಾಡನ್ನು ದಾಟಿಯೇ ರಾಜಧಾನಿಗೆ ಮುತ್ತಿಗೆ ಹಾಕಬೇಕಾಗಿದ್ದುದರಿಂದ ಅಲ್ಲಿಯ ಆರಣ್ಯಕರು ಅರಸನ ಪರವಾಗಿ ನಿಂತರೆ ರಾಜ್ಯಕ್ಕೆ ಹೆಚ್ಚಿನ ರಕ್ಷಣೆ ದೊರೆಯುತ್ತಿತ್ತು.
ವತ್ಸರಾಜ ಉದಯನನು ವ್ಯಾಪಕವಾದ ವಿಂಧ್ಯಾಟವಿಯ ಎಲ್ಲ ಬುಡಕಟ್ಟುಗಳ ಭಕ್ತಿ-ಪ್ರೀತಿಗಳನ್ನು ಗೆದ್ದುಕೊಂಡಿದ್ದ. ಅವನು ಪ್ರದ್ಯೋತನಿಗಿಂತ ಸುಲಭವಾಗಿ ಆಟವಿಕರೊಡನೆ ಬೆರೆಯುತ್ತಿದ್ದ. ತನ್ನ ಬಾಲ್ಯ-ಕೌಮಾರಗಳನ್ನು ಕಾಡಿನವರ ನಡುವೆಯೇ ಕಳೆದಿದ್ದ ಕಾರಣ ಅವರ ಜೀವನಪದ್ಧತಿ, ಗಾನ-ವಾದನಗಳ ಶೈಲಿ, ರಣತಂತ್ರ, ಬೇಟೆಯ ಕ್ರಮ ಮುಂತಾದ ಎಷ್ಟೋ ಅಂಶಗಳನ್ನು ಅಕ್ಕರೆಯಿಂದ ಗಮನಿಸಿ ಅಳವಡಿಸಿಕೊಂಡು, ಅವುಗಳಲ್ಲಿ ಸುಧಾರಣೆ ಮಾಡಿ ಅವನ್ನು ಅವರಿಗೇ ಕಲಿಸಿ ಒಪ್ಪಿಸಿದ ಗುರುವೂ ಆಗಿದ್ದ. ಇಂಥ ಸಾಧನೆಗೆ ಬೆಂಬಲವಿತ್ತವನು ಯೌಗಂಧರಾಯಣ. ಹೀಗಾಗಿಯೇ ಪ್ರದ್ಯೋತನಿಗೆ ಉದಯನನ ಬಗೆಗೆ ಮೆಚ್ಚುಗೆ ಬೆರೆತ ಅಸೂಯೆಯೂ ಇದ್ದಿತಂತೆ.
ಈ ವಿವರಗಳು ಆಳುವ ಪ್ರಭುಗಳಿಗೆ ನಗರವಾಸಿ ಪ್ರಜೆಗಳೊಡನೆ ಸ್ನೇಹ, ಅನುರಾಗ, ಕಳಕಳಿ ಇದ್ದರಷ್ಟೇ ಸಾಕಾಗುವುದಿಲ್ಲ; ಅರಣ್ಯಸೀಮೆಯ ಬುಡಕಟ್ಟುಗಳವರ, ಗ್ರಾಮಾಂತರಗಳಲ್ಲಿ ಇರುವವರ ಸ್ನೇಹ, ವಿಶ್ವಾಸ, ಸಹಾಯಗಳೂ ಅವರಿಗೆ ಅತ್ಯವಶ್ಯ ಎಂಬ ಸತ್ಯವನ್ನು ತೆರೆದಿಡುತ್ತವೆ. ಬುಡಕಟ್ಟು ವರ್ಗಗಳಿಗೆ ಸೇರಿದ ಸಂತಾಲರು, ಭಿಲ್ಲರು ಮುಂತಾದ ಅನೇಕರು ಬ್ರಿಟಿಷ್ ಪ್ರಭುತ್ವದ ವಿರುದ್ಧ ದಂಗೆಯೆದ್ದುದನ್ನು ನಾವು ನೆನೆಯಬಹುದು. ಅವರ ಈ ಹೋರಾಟ ನಮ್ಮ ಸ್ವಾತಂತ್ರ್ಯಸಂಗ್ರಾಮದ ಒಂದು ಅವಿಭಾಜ್ಯ ಅಂಗವೆಂದು ನಾವು ಪರಿಗಣಿಸಬೇಕು.
* * *
ಮಗಳು ವಾಸವದತ್ತೆಗೆ ಉದಯನನೇ ಸೂಕ್ತ ವರನೆಂದು ಪ್ರದ್ಯೋತನ ಮನಸ್ಸಿನಲ್ಲಿದ್ದರೂ ಅದನ್ನು ಒಪ್ಪಿಕೊಳ್ಳಲು ಅಭಿಮಾನ ಅಡ್ಡ ಬರುತ್ತದೆ. ಮಂತ್ರಿಗಳಾದ ಶಾಲಂಕಾಯನ ಮತ್ತು ಭರತರೋಹಕರೊಡನೆ ಈ ವಿಷಯವನ್ನು ಚರ್ಚಿಸುವಾಗ ಭರತಖಂಡದ ಎಲ್ಲ ರಾಜರ ಗುಣಾವಗುಣಗಳ ಚಿತ್ರಣ ನಮಗೆ ದೊರೆಯುತ್ತದೆ. ಇದೇ ಸಂದರ್ಭದಲ್ಲಿ ಉಜ್ಜಯಿನಿಯ ಸಾರ್ಥವಾಹಪ್ರಮುಖ ಚಾರುದತ್ತನಿಂದಾಗಿ ಪ್ರದ್ಯೋತನಿಗೆ ಉದಯನನ್ನು ಕುರಿತು ಮತ್ತೂ ಹೆಚ್ಚಿನ ಮಾಹಿತಿ ಸಿಗುತ್ತದೆ. ಎರಡು ರಾಜಮನೆತನಗಳ ನಡುವೆ, ರಾಜ್ಯಗಳ ನಡುವೆ ಸಾರ್ಥವಾಹರು ಮಾಡಿಸಬಹುದಾದ ಸಂಬಂಧದ ವಿಶಿಷ್ಟ ಸಂಗತಿ ಇಲ್ಲಿ ಗೊತ್ತಾಗುತ್ತದೆ.
ಮಹಾರಾಜ ಪ್ರದ್ಯೋತ ಮತ್ತು ರಾಣಿ ಅಂಗಾರವತಿಯರ ಮಧುರ ದಾಂಪತ್ಯದ ಚಿತ್ರದೊಂದಿಗೇ ಅಂದಿನ ಅರಮನೆ, ಅಂತಃಪುರಗಳಲ್ಲಿ ಬೆಳಗುತ್ತಿದ್ದ ಪರಿಮಳಭರಿತ ತೈಲಗಳ ಸಂಧ್ಯಾದೀಪಗಳೂ ಅವುಗಳ ಕಾಂತಿಯಲ್ಲಿ ಹೊಳೆಯುತ್ತಿದ್ದ ಸುಂದರ ರಂಗವಲ್ಲಿಗಳೂ ವಾತಾವರಣವನ್ನು ಸಮರ್ಥವಾಗಿ ಹಿಡಿದಿಡುತ್ತವೆ. “ವಾತಾಯನಗಳ ಜಾಲರಂಧ್ರಗಳ ಮೂಲಕ ಹೊಮ್ಮುತ್ತಿದ್ದ ಆ ಧೂಪಸಮೂಹವು ದೀಪಗಳ ಬೆಳಕಿಗೆ ಅಂಜಿ ಹೊರಗಿ ದಾಪಿಡುತ್ತಿರುವ ಕತ್ತಲ ಮೊತ್ತದಂತೆ ತೋರುತ್ತಿತ್ತು” (ಪು. ೭೦) ಎನ್ನುವಂಥ ಸುಂದರ ವರ್ಣನೆಗಳಲ್ಲಿರುವ ಕಲ್ಪನೆಯು ಕಾವ್ಯ ಮತ್ತು ವಾಸ್ತವಗಳಿಗಿರುವ ಸುಮಧುರ ಸಂಬಂಧದಂತೆ ಈ ಕಾದಂಬರಿಯ ಪುಟಪುಟದಲ್ಲಿಯೂ ಹೊಮ್ಮಿದೆ.
ಮಗಳ ಮದುವೆ ಸುಮುಖವಾಗಿ ನಡೆಯಬೇಕೆಂದೂ ಉದಯನನೇ ವಾಸವದತ್ತೆಗೆ ತಕ್ಕವನೆಂದೂ ಅರಿತ ಮಹಾರಾಣಿ ತನ್ನ ಪತಿದೇವನ ಮನಸ್ಸನ್ನು ಒಲಿಸಿ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ಪಾಲಕನ ಕುಟಿಲ ತಂತ್ರದಿಂದ ಉದಯನ ಸೆರೆಗೆ ಸಿಲುಕುತ್ತಾನೆ. ಅವನ ಗೌರವ-ಅಭಿಮಾನಗಳಿಗೆ ಕುಂದು ಬಾರದಂತೆ ಎಚ್ಚರ ವಹಿಸುವ ಹೊಣೆ ರಾಜ-ರಾಣಿಯರದಾಗುತ್ತದೆ. ಅದಕ್ಕೆ ಅನುಗುಣವಾದ ವ್ಯವಸ್ಥೆ, ಸೇವಕರು ಮುಂತಾದ ಪ್ರತಿ ಸನ್ನಿವೇಶದಲ್ಲಿಯೂ ನಿರ್ದುಷ್ಟ ಹಾಗೂ ವಿಸ್ತಾರವಾದ ಆವರಣನಿರ್ಮಾಣವಿದ್ದು ಅದು ಈ ಕೃತಿಯ ಪ್ರಧಾನಲಕ್ಷಣವೇ ಆಗಿದೆ; ಇದನ್ನು ಇಲ್ಲಿಯ ಪ್ರತಿ ಹಂತದಲ್ಲಿ, ಪ್ರತಿಸನ್ನಿವೇಶದಲ್ಲಿ ಕಾಣಬಹುದು.
ಋತುವರ್ಣನೆ
ಉದಯನ ತನ್ನ ಆಪ್ತ ಭಟರೊಡನೆ ಮಹಾಗಜವನ್ನು ಹುಡುಕುತ್ತ ಕಾಡಿಗೆ ಹೊರಡುವ ಸಂದರ್ಭದಲ್ಲಿ ಗ್ರೀಷ್ಮಋತುವಿನ ಹಾಗೂ ವನ್ಯಮೃಗಗಳ ವರ್ಣನೆ ಮನೋಹರವಾಗಿ ಮೂಡಿದೆ. ಲೇಖಕರು ಋತುಗಳ ಬಗೆಗೆ ಕಾವ್ಯವನ್ನೇ ಬರೆದವರು ಎಂಬುದನ್ನು ನಾವಿಲ್ಲಿ ನೆನೆಯಬಹುದು. ಮೂರನೆಯ ಅಧ್ಯಾಯದ ೯೨-೯೪ ಪುಟಗಳಲ್ಲಿ ವಿಂಧ್ಯಾಟವಿಯಲ್ಲಿ ವಸಂತ ಮುಗಿದು ಗ್ರೀಷ್ಮ ಆಗಮಿಸಿದ ವಿಸ್ತೃತವಾದ ವರ್ಣನೆಯಿದೆ. “ಗ್ರೀಷ್ಮವು ತನ್ನ ತಪ್ತಬಾಹುಗಳಿಂದ ಜಗತ್ತನ್ನೆಲ್ಲ ಧೃತರಾಷ್ಟ್ರನ ಹಾಗೆ ತಬ್ಬಿಕೊಂಡು ಅವನ ಆಲಿಂಗನಕ್ಕೆ ಸಿಲುಕಿದ ಭೀಮನ ಲೋಹಮೂರ್ತಿಯ ಸ್ಥಿತಿಗೆ ಜನತೆಯನ್ನು ದೂಡುತ್ತಿತ್ತು”. ಇದು ಈ ಅಧ್ಯಾಯದ ಮೊದಲ ವಾಕ್ಯ. ಗ್ರೀಷ್ಮಋತುವಿಗೆ ಮಾನವನ ಸ್ವರೂಪವನ್ನು ಅಧ್ಯಾರೋಪ ಮಾಡಿರುವುದು ಮಾತ್ರವಲ್ಲ (ಬರಿಯ ಪರ್ಸಾನಿಫಿಕೇಷನ್ ಅಲ್ಲ); ಅದರ ಜೊತೆಗೆ ಧೃತರಾಷ್ಟ್ರನ ಕುರುಡುತನವನ್ನೂ ನೀಡಿ ಆ ಮೂಲಕ ದೃಷ್ಟಿವಿವೇಚನೆಯೇ ಇಲ್ಲದೆ ಎಲ್ಲವನ್ನೂ ಎಲ್ಲರನ್ನೂ ಸುಡುತ್ತಿರುವ ದೃಶ್ಯ ನಮ್ಮ ಕಣ್ಣ ಮುಂದೆ ಬರುವಂತಾಗಿದೆ. ಇನ್ನು ಜನತೆಯಾದರೋ ಚಲನೆಯಿಲ್ಲದ ಭೀಮನ ಲೋಹಮೂರ್ತಿಯಂತೆ ಆಗಿತ್ತು. ಈ ಕಾದಂಬರಿಯಲ್ಲಿ ಹೀಗೆ ತಲೆದೋರುವ ಅಲಂಕಾರಗಳ ಬಗೆಗೆ ಯಾರಾದರೂ ಪ್ರಬಂಧ ರಚಿಸಬಹುದು.
ಕೌಶಾಂಬಿಯಿಂದ ಚಿತ್ರಕೂಟಕ್ಕೆ ಪಯಣಿಸಿದ ಉದಯನ ಕಾಡಿನ ಹೃದಯದ ಮಿಡಿತಕ್ಕೆ ಸರಿಸಮನಾಗಿ ಮಿಡಿಯುತ್ತಿದ್ದನಂತೆ. ಆ ಪರಿಸರ ಗ್ರೀಷ್ಮಸೌಂದರ್ಯವನ್ನು ಸವಿಯಲು ಪು. ೯೪-೯೫ ಪುಟಗಳನ್ನು ಓದಬೇಕು. ಅಲ್ಲಿಯ ಒಂದೆರಡು ವಾಕ್ಯಗಳು ಉಲ್ಲೇಖಾರ್ಹ:
ಸುತ್ತಲೂ ಬಾಲಭಾಸ್ಕರನ ಕಾಂಚನಕಾಂತಿ ವಿಸ್ತರಿಸಿತ್ತು. ಇಡಿಯ ಕಾಡೇ ಆ ಕುಂಕುಮರೋಚಿಯಲ್ಲಿ ಮಿಂದು ಮೆರೆಯುತ್ತಿರುವಂತೆ ತೋರಿತ್ತು. ಮುಗಿದ ವಸಂತನು ತನ್ನ ಅಧಿಕಾರದ ಅವಧಿಯಲ್ಲಿ ಇಡಿಯ ಸಸ್ಯಜಗತ್ತಿಗೆ ನೀಡಿದ್ದ ಚಿಗುರೆಲೆಗಳ, ಬಿರಿಮಲರುಗಳ ಕೊಡುಗೆ ಇದೀಗ ಗ್ರೀಷ್ಮನ ಆಳ್ವಿಕೆಯಲ್ಲಿ ಬೇರೊಂದು ಭಂಗಿಯನ್ನು ತಳೆದಿತ್ತು. ಅಂದಿನ ನವಪಲ್ಲವಗಳ ಗಿಳಿಹಸುರು ಇಂದು ಗಾಢವಾದ ಮರಕತಮಣಿಯ ಕಠಿನಕಾಂತಿಯಾಗಿ ಮೆರೆದಿತ್ತು. ಅಂದಿನ ಮೃದುಮಧುರ ಪುಷ್ಪಗಳ ವರ್ಣ-ಪರಿಮಳಸೌಂದರ್ಯ ಇಂದು ಹಲವೆಡೆ ಮಾಯವೇ ಆಗಿ ಮತ್ತೆ ಕೆಲವೆಡೆ ಕಾಯಿ-ಹಣ್ಣುಗಳ ಅನಾಕರ್ಷಕ ಸ್ಥೂಲತೆಯಷ್ಟೇ ಕೊಂಬೆ-ರೆಂಬೆಗಳನ್ನು ತುಂಬಿತ್ತು. (ಪು. ೯೪)
ಒಬ್ಬರ ಅಧಿಕಾರಾವಧಿಯಲ್ಲಿ ಮಾಡಿದ್ದ ಕಾರ್ಯಗಳ ರೂಪರೇಷೆಗಳನ್ನು ಆ ಬಳಿಕ ಬಂದವರು ತಮ್ಮ ಅವಧಿಯಲ್ಲಿ ಸಂಪೂರ್ಣವಾಗಿ ಬದಲಾಯಿಸಿಬಿಡುವರಷ್ಟೆ. ಮನುಷ್ಯರು - ವಿಶೇಷವಾಗಿ ರಾಜಕಾರಣಿಗಳು, ಅಧಿಕಾರಿಗಳು - ಇದನ್ನು ಪ್ರಕೃತಿಯಿಂದಲೇ ಕಲಿತಿರಬಹುದೇ? ಮುಖ್ಯ ವ್ಯತ್ಯಾಸವೆಂದರೆ ಪ್ರಕೃತಿಯ ಮಾರ್ಪಾಡುಗಳು ಪರಿಣಾಮದಲ್ಲಿ ಒಳಿತಿಗೇ ಆಗುತ್ತವೆ. ಮಾನವನ ಕೈವಾಡದಲ್ಲಿ ಆ ನಚ್ಚಿಕೆ ಇಲ್ಲ.
ಕಾಡಿನಲ್ಲಿ ತಾರೆಮರವನ್ನು ಕಂಡಾಗ ಉದಯನನಿಗೆ ನಳಮಹಾರಾಜನನ್ನು ಕಾಡುತ್ತಿದ್ದ ಶನಿ ಅವನನ್ನು ಬಿಟ್ಟು ತಾರೆಮರಕ್ಕೆ ಸೇರಿಕೊಂಡ ಕಥೆ ನೆನಪಾಗುತ್ತದೆ. ಶನಿಮಹಾರಾಯನ ಈ ನೆನಪು ಮುಂದೆ ಉದಯನ ಸೆರೆಸಿಕ್ಕಿ ಒಡನೊಡನೆಯೇ ರಾಜ್ಯವನ್ನೂ ಕಳೆದುಕೊಳ್ಳುವ ಸೂಚನೆಯೇ? ಹಂಸಕನು ಉದಯನನ ಪ್ರಶ್ನೆಗಳಿಗೆ ಉತ್ತರಿಸುತ್ತ ಅವನೊಡನೆಯೇ ಇದ್ದರೂ ತನ್ನ ದೊರೆ ಸೆರೆಯಾಗುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಆದರೂ ತನ್ನ ಪ್ರಾಣವನ್ನೇ ಪಣವಾಗಿಟ್ಟು ಅಪಹರಣಕಾರರ ಆಕ್ರಮಣದಿಂದ ತಪ್ಪಿಸಿಕೊಂಡು ಬಂದು ಮಹಾಮಾತ್ಯನಿಗೆ ಈ ಸಂಗತಿಯನ್ನು ತಿಳಿಸುವ ಪ್ರಾಮಾಣಿಕ ಯೋಧ ಅವನಾಗುತ್ತಾನೆ.
To be continued.