ಎಷ್ಟೇ ಗಾಢವಾದ ಸ್ನೇಹ-ಪ್ರೇಮಗಳ ಸಂಬಂಧವಾದರೂ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಮಿಕ್ಕೆಲ್ಲರಿಂದಲೂ - ಪ್ರಿಯರಿಂದರೂ ಸಹ - ಮುಟ್ಟಲಾಗದಂತಹ ತನ್ನದೇ ಆದ ಒಂದು ಖಾಸಗಿ ಮೂಲೆ (ಪರ್ಸನಲ್ ಸ್ಪೇಸ್) ಇರುತ್ತದೆ. ಅದನ್ನು ಯಾರೂ ಎಂದೂ ಮುಟ್ಟಲು, ಒಳಹೊಗಲು ಯತ್ನಿಸಬಾರದು. ಈ ಪ್ರತ್ಯೇಕತೆಯನ್ನು ಉಳಿಸಿಕೊಂಡೂ ಪರಸ್ಪರ ಅರ್ಪಿಸಿಕೊಂಡಾಗಲೇ ಪ್ರೇಮ-ಸ್ನೇಹಗಳ ಪರಿಪೂರ್ಣ ವಿಕಸನ ಸಾಧ್ಯವೆನಿಸುತ್ತದೆ.
ಪದ್ಮಾವತಿ ತಲೆನೋವಿನಿಂದ ಮಲಗಿರುವಳೆಂದು ತಿಳಿದು ಅವಳನ್ನು ಸಂತೈಸಲು ಬಂದ ಆವಂತಿಕೆ ತಪ್ಪುತಿಳಿವಳಿಕೆಯಿಂದ ಉದಯನ ಮಲಗಿರುವ ಕೋಣೆಗೆ ತೆರಳಿ ಮಂಚದ ತೆರೆ ಸರಿಸಲು ಮುಂದಾದಾಗ ಅವಳ ಕೈ ಹಾಗೆಯೇ ಮರಗಟ್ಟಿದಂತೆ ಸ್ತಬ್ಧವಾಗಿಬಿಟ್ಟಿತಂತೆ. ಇದ್ದಕ್ಕಿದ್ದಂತೆಯೇ ಉದಯನ ಮಾತನಾಡತೊಡಗಿದಾಗ ಅವಳಿಗೆ ವಿದ್ಯುದಾಘಾತವಾಯಿತು. ಮರುಕ್ಷಣ ಅವನಿಗೆ ನಿದ್ರೆಯಲ್ಲಿ ಕನವರಿಸಿಕೊಳ್ಳುವ ಅಭ್ಯಾಸವಿದೆಯೆಂಬ ಸ್ವಾನುಭವ ನೆನೆದು ಧೈರ್ಯ ಹುಟ್ಟಿತು. “ಈ ಗೆಲವು ನಿನ್ನದೇ ವಾಸವದತ್ತೇ! ನಿನಗೇ ಇದೆಲ್ಲ! ನನ್ನಿಂದ ದೂರವಾಗಬೇಡ, ಬಾ” ಎಂದು ಕನವರಿಸಿಕೊಂಡ ಅವನ ಕೈ ತನ್ನಂತೆ ಚಾಚಿಕೊಳ್ಳುತ್ತದೆ. ಮಲಗಿದವರ ಮೈ ಹಾಸಿಗೆಯಿಂದ ಆಚೆಗೆ ಚಾಚಿಕೊಂಡರೆ ಅಮಂಗಳವೆಂಬ ನಂಬಿಕೆಯಿಂದ ಅದನ್ನು ಒಳಕ್ಕೆ ಸರಿಸಿ ಒಲ್ಲದ ಮನಸ್ಸಿನಿಂದ ಮಿಂಚಿನಂತೆ ಹೊರಗೆ ಜಾರಿಕೊಂಡಳಂತೆ ಆವಂತಿಕೆ. “ನಿಲ್ಲು ನಿಲ್ಲು ವಾಸವಾ!” ಎಂದು ಆರ್ತನಾಗಿ ಉದಯನ ಎದ್ದುಬಂದಾಗ ಎದುರಿಗೆ ಕಂಡದ್ದು ವಸಂತಕನನ್ನು. ತಾನು ವಾಸವದತ್ತೆಯನ್ನು ಕಂಡೆನೆಂಬ ಅವನ ಮಾತಿಗೆ “ಅವಳು ಎಂದೋ ಸತ್ತು ಪುಣ್ಯಲೋಕದಲ್ಲಿದ್ದಾಳೆ” ಎನ್ನುತ್ತಾನೆ ವಸಂತಕ. ಉದಯನನಿಗೆ ವಾಸ್ತವವೆನಿಸಿದ್ದು ವಸಂತಕನಿಗೆ ಕನಸೆನ್ನಿಸಿದೆ. ವಾಸವದತ್ತೆಯ ಸ್ಪರ್ಶದ ರೋಮಾಂಚನ ಉದಯನನ ಮೈಯಲ್ಲಿ ಹಾಗೆಯೇ ಉಳಿದಿದೆ. ಹೀಗೆ ‘ಸ್ವಪ್ನವಾಸವದತ್ತ’ದ ರಸಘಟ್ಟಗಳು ಇಲ್ಲಿ ಮೂಡಿವೆ.
ಯೌಗಂಧರಾಯಣ ತನ್ನ ಇಳಿವಯಸ್ಸಿನಲ್ಲಿಯೂ ಪಾದರಸದಂತೆ ವತ್ಸದೇಶದ ಆಸುಪಾಸಿನ ಜನಪದಗಳಲ್ಲಿ ಸುತ್ತಿ ಜನಾಭಿಪ್ರಾಯವನ್ನೂ ಅಲ್ಲಿಯ ಅರಸರ ಬೆಂಬಲವನ್ನೂ ಪಡೆಯಬೇಕಿತ್ತು. ಇದಕ್ಕಾಗಿ ದುಡಿಯುವಾಗ ತಾನು ಬದುಕಿರುವ ಸಂಗತಿ ಉದಯನನಿಗೆ ತಿಳಿಯದಂತೆ ಎಚ್ಚರ ವಹಿಸಬೇಕಿತ್ತು. ಶರ್ವಿಲಕನಿಂದ ಆರ್ಯಕ ಬದುಕಿರುವ ಸುದ್ದಿ ತಿಳಿದು ಅವರೆಲ್ಲರ ರಕ್ಷಣೆಯ ಏರ್ಪಾಟು ಮಾಡುವುದಲ್ಲದೆ ಕಾಂಚನಮಾಲೆ, ಸಾಂಕೃತ್ಯಾಯನಿ ಮತ್ತು ಆರ್ಯಕರಿಗೆ ಉದಯನ-ಪದ್ಮಾವತಿಯರ ಮದುವೆಯ ವಿಷಯ ತಿಳಿಯದಂತೆ ಜಾಗರೂಕವಾಗಿರಬೇಕಿತ್ತು. ಅಲ್ಲದೆ ಆರ್ಯಕ ಬದುಕಿರುವನೆಂದೂ ಅವನೇ ಅವಂತಿ ಜನಪದಕ್ಕೆ ಮುಂದೆ ದೊರೆಯಾಗುತ್ತಾನೆಂದೂ ಅಲ್ಲಿಯ ಜನತೆಗೆ ಹಾಗೂ ಪಾಲಕನಿಗೆ ತಿಳಿಸಬೇಕಿತ್ತು. ಪಾಲಕನ “ಹಾಳುಸೂಳೆ” ಕಾಮಲತೆಯ ಬಗೆಗೆ ಜನತೆಯಲ್ಲಿ ಅಸಮಾಧಾನ ಹುಟ್ಟಿಸಲು ಉಜ್ಜಯಿನಿಯ ಗಣಿಕೆಯರನ್ನು ಸಂಘಟಿಸಬೇಕಿತ್ತು. ಈ ನಿಟ್ಟಿನಲ್ಲಿ ವಸಂತಸೇನೆಯ ನೆರವು ಪಡೆಯಲು ಮಹಾಮಾತ್ಯ ರೇಭಿಲನನ್ನು ನೆನಪಿಸಿಕೊಳ್ಳುತ್ತಾನೆ. ವೈಶಾಲಿಯಿಂದ ವಸಂತಸೇನೆಯನ್ನು ಕರೆತರುವ ಹೊಣೆ ಶರ್ವಿಲಕನ ಹೆಗಲೇರುತ್ತದೆ. ವಸಂತಸೇನೆಯೊಡನೆ ಮದನಿಕೆಯೂ ಇರುವ ಕಾರಣ ಅವನು ಈ ಬಾಧ್ಯತೆಯನ್ನು ನೆರವೇರಿಸಲು ಹಿಗ್ಗಿನಿಂದ ಒಪ್ಪುತ್ತಾನೆ.
ಉದಯನ-ಮಹಾಮಾತ್ಯರ ಪುನಃಸಮಾಗಮ
ವತ್ಸರಾಜ ಕೌಶಾಂಬಿಯನ್ನು ಗೆದ್ದುಕೊಂಡ ಬಳಿಕ ಮಹಾಮಾತ್ಯನು ತನ್ನ ಅಜ್ಞಾತವಾಸವನ್ನು ಮುಗಿಸಿ ಅವನೆದುರು ನಿಲ್ಲಲು ವಾಸವದತ್ತೆಯ ಬರವಿಗಾಗಿ ಕಾದಿರುತ್ತಾನೆ. ಆದರೆ ತನ್ನ ಕೆಲಸಗಳನ್ನು ಉದಯನ ಹೇಗೆ ಪರಿಗಣಿಸುವನೋ ಏನೋ ಎಂಬ ಆತಂಕ ಅವನ ಮನದಲ್ಲಿ ಲಾಳಿಯಾಡುತ್ತಿರುತ್ತದೆ. ವಸಂತಕ ಸಮಾಧಾನ ಹೇಳುತ್ತಾನೆ: “ಈ ನಮ್ಮ ದೊರೆಗೆ ಸತ್ತು ಬದುಕಿದ ನೀವು ಕೊಡುವಷ್ಟು ಸಂತೋಷವನ್ನು ಮತ್ಯಾವುದೂ ಕೊಡೋದಿಲ್ಲ ... ವಾಸವದತ್ತೆ ಕೂಡ ... ಯಾಕಂದ್ರೆ ನಿಮಗೆ ಯಾವುದೇ ಪ್ರತ್ಯಾಮ್ನಾಯ ಇಲ್ಲ.” ಇದು ಯೌಗಂಧರಾಯಣನಲ್ಲಿ ಉದಯನನಿಗಿದ್ದ ಪ್ರೀತಿಯ ಸಂಕೇತ.
ಮಹಾಮಾತ್ಯ ಹಾಗೂ ವಾಸವದತ್ತೆಯರು ಬದುಕಿರುವ ಸಂಗತಿಯನ್ನು ವಸಂತಕ ಅವಿನಿಗಿಂತ ಮೊದಲೇ ಉದಯನನಿಗೆ ತಿಳಿಸಿದ ಕಾರಣ ದೊರೆ ಮತ್ತು ಮಂತ್ರಿವರ್ಯರ ಪುನಃಸಮಾಗಮದ ಸನ್ನಿವೇಶ ನಿಯಂತ್ರಿತ ಭಾವಾವೇಶದಿಂದ ಕೂಡಿದ್ದರೂ ಅತೀವ ಭಾವಾಭಿವ್ಯಕ್ತಿಯಿಂದ ತುಂಬಿತುಳುಕುತ್ತಿದೆ. ವತ್ಸಪ್ರಭುವಿನ ಏಕಾಂತಮಂದಿರದತ್ತ ಮಹಾಮಾತ್ಯನನ್ನು ಕಂಚುಕಿ ಕರೆದೊಯ್ದಾಗ ಅವನೊಬ್ಬನಿಗೆ ಮಾತ್ರ ಸಂದಿಗ್ಧ, ಅಚ್ಚರಿ. ಅಲ್ಲಿ ಪದ್ಮಾವತಿ-ವಾಸವದತ್ತೆಯರು ಒಟ್ಟಾಗಿ ಕಾಣಿಸುತ್ತಾರೆ. ಸಾಂಕೃತ್ಯಾಯನಿ, ಕಾಂಚನಮಾಲೆ, ಜಯಸೇನ, ವಸಂತಕ ಎಲ್ಲರೂ ಅಲ್ಲಿಯೇ ಇದ್ದಾರೆ. ವಸಂತಕನನ್ನು ನೋಡಿದೊಡನೆಯೇ ಮಹಾಮಾತ್ಯನಿಗೆ ಎಲ್ಲವೂ ಅರ್ಥವಾಗುತ್ತದೆ. ಉದಯನ ಧಾವಿಸಿ ಬಂದು ಅವನ ಕಾಲಿಗೆ ಬಿದ್ದು ಅಪ್ಪಿಕೊಂಡು ಚಿಕ್ಕಮಗುವಿನಂತೆ ಅತ್ತುಬಿಡುತ್ತಾನೆ. ಅಳುತ್ತಿದ್ದ ಒಡೆಯನನ್ನು ಸಂತೈಸಲಾಗದೆ ಯೌಗಂಧರಾಯಣನೂ ಸ್ವಲ್ಪ ಕಣ್ಣೀರಿಡುತ್ತಾನೆ. ಪುನರ್ಮಿಲನಗೊಂಡವರೆಲ್ಲರ ಹೃದಯಗಳೂ ಸಂತಸ ಮತ್ತು ದುಃಖಗಳಿಂದ ಕಾಣುವ ಹಾಗೂ ಕಾಣದ ದೈವಗಳ ಬಗೆಗೆ ಕೃತಜ್ಞತೆಯಿಂದ ಕೂಡಿದ್ದವು. “ನನಗೊಂದು ಹೆಮ್ಮೆಯಿತ್ತು ... ಸ್ವಾಮಿಗೆ ನಾನೇ ಹೆಚ್ಚು ಹತ್ತಿರದವಳು ಅಂತ. ಆದರೆ ನಿಜವಾಗಿ ನೋಡಿದರೆ ನೀವೇ ಅವರಿಗೆ ಜೀವ ಅಂತ ಗೊತ್ತಾಯ್ತು ... ಇದು ನನಗೆ ಬೇಸರದ ಸಂಗತಿ ಅಲ್ಲ, ನೀವೂ ನನ್ನ ಪಾಲಿಗೆ ಎಷ್ಟು ಮುಖ್ಯ ಅಂತ ತೋರಿಸಿಕೊಟ್ಟ ಸಂಗತಿ ... ನನ್ನ ವಿವೇಕ ಬೆಳಗಿದ ಸಂಗತಿ. ಬೇಕಿದ್ದರೆ ತಂಗಿಯನ್ನ ಕೇಳಿ...” (ಪು. ೫೧೩) ಎಂಬ ವಾಸವದತ್ತೆಯ ಮಾತಿಗೆ ಪದ್ಮಾವತಿಯೂ ದನಿಗೂಡಿಸುತ್ತಾಳೆ: “ಆರ್ಯ, ನೀವಿಲ್ಲದಿದ್ದರೆ ನಾವೂ ಇಲ್ಲ, ಈ ವತ್ಸದೇಶವೂ ಇಲ್ಲ ಅಂತ ನಮ್ಮ ಸ್ವಾಮಿ ನಮಗೆ ಹೀಗೆ ತಿಳಿಸಿಕೊಡ್ತಿದ್ದಾರೆ” (ಪು. ೫೧೩). ಯೌಗಂಧರಾಯಣನಿಗೆ ಇದು ಧನ್ಯತೆಯ ಕ್ಷಣ.
ಇಂತಹ ಭಾಗಗಳನ್ನು ಓದುವಾಗ ಮನುಷ್ಯಜೀವನದಲ್ಲಿ ಅಪ್ಪ-ಅಮ್ಮ, ಅಣ್ಣ-ತಂಗಿ, ಗಂಡ-ಹೆಂಡತಿ, ಸ್ನೇಹಿತರು-ಮಕ್ಕಳು ಮುಂತಾದ ಎಲ್ಲ ಸಂಬಂಧಗಳನ್ನೂ ಮೀರಿದ ನಂಟುಗಳೂ ಇರುತ್ತವೆ; ಅಲ್ಲಿ ರಕ್ತಸಂಬಂಧ, ಪ್ರೀತಿ-ಪ್ರೇಮಗಳ ದೇಹಸಂಬಂಧ, ಹಣ-ಹೆಸರುಗಳ ವ್ಯವಹಾರಸಂಬಂಧ ಮುಂತಾದ ಯಾವುದೂ ಇರುವುದಿಲ್ಲ; ಕೇವಲ ನಿಷ್ಠೆ, ವ್ಯಕ್ತಿಯ ಬಗೆಗೆ, ದೇಶದ ಬಗೆಗೆ, ಧ್ಯೇಯಸಾಧನೆಯ ಬಗೆಗೆ, ನ್ಯಾಯ-ನೀತಿಗಳ ಬಗೆಗೆ ಇರುವ ಅಸೀಮ ನಿಷ್ಠೆ ಹಾಗೂ ಅವ್ಯಾಜ ಪ್ರೀತಿ - ಇಷ್ಟು ಮಾತ್ರ ಸತ್ಯ, ಉಳಿದೆಲ್ಲ ಸಂಬಂಧಗಳೂ ಇದರೆದುರು ತಲೆಬಾಗುತ್ತವೆ ಎಂದು ಧ್ವನಿತವಾಗುತ್ತದೆ.
ಉದಯನನ ಪಶ್ಚಾತ್ತಾಪದ ಹೊನಲನನ್ನು ತಡೆಯುತ್ತ ಆರ್ಯೆ ಸಾಂಕೃತ್ಯಾಯನಿ ಆರ್ಯಕನನ್ನು ಹುಡುಕಿ ಉಜ್ಜಯಿನಿಯ ಸಿಂಹಾಸನಕ್ಕೆ ಅವನನ್ನೇರಿಸುವ ಸದ್ಯದ ಕರ್ತವ್ಯದತ್ತ ಅವನ ಮನ ಸೆಳೆದು ಮತ್ತೊಮ್ಮೆ ಇಂತಹ ಅನರ್ಥವಾಗದಂತೆ, ಭಾವೋದ್ವೇಗವನ್ನು ತಡೆದಿಟ್ಟುಕೊಳ್ಳುವಂತೆ ಎಚ್ಚರಿಸುತ್ತಾಳೆ.
ಉಜ್ಜಯಿನಿಯಲ್ಲಿ ಸುವ್ಯವಸ್ಥೆಯ ಪುನರುಜ್ಜೀವನ
ಪಾಲಕ, ಕಾಮಲತೆ ಮತ್ತು ಸಂಸ್ಥಾನಕ-ಶಕಾರರ ಕೆಟ್ಟ ಆಳ್ವಿಕೆಯನ್ನು ಕೊನೆಗೊಳಿಸಿ ಉಜ್ಜಯಿನಿಯಲ್ಲಿ ಸುವ್ಯವಸ್ಥೆಯನ್ನು ಸ್ಥಾಪಿಸುವ ಮೊದಲ ಹಂತವಾಗಿ ವಸಂತಸೇನೆಯನ್ನು ವೈಶಾಲಿಯಿಂದ ಉಜ್ಜಯಿನಿಗೆ ಕರೆತರುವುದಾಗುತ್ತದೆ. ಕೌಶಾಂಬಿಯಲ್ಲಿ ಉದಯನ, ವಾಸವದತ್ತೆ ಮತ್ತು ಪದ್ಮಾವತಿಯರ ಸ್ನೇಹ ವಸಂತಸೇನೆಯನ್ನು ಮುದಗೊಳಿಸುತ್ತದೆ. ಹೀಗೆ ಸಮಾನಮನಸ್ಕರನ್ನು ಒಂದೆಡೆ ಸೇರಿಸುವ ಕಾರ್ಯ ಕಾದಂಬರಿಯ ಹಲವು ಸನ್ನಿವೇಶಗಳಲ್ಲಿ ಕಾಣಸಿಗುತ್ತದೆ. ವಸಂತಸೇನೆ, ಶರ್ವಿಲಕ, ಜಯಸೇನ, ಕಾಂಚನಮಾಲೆ ಮತ್ತು ಸಾಂಕೃತ್ಯಾಯನಿ ಉಜ್ಜಯಿನಿಯಲ್ಲಿ ಬರಬಹುದಾದ ಅಪಾಯವನ್ನು ಎದುರಿಸಲು ಸಿದ್ಧರಾಗಿಯೇ ಹೊರಟಿದ್ದರೂ ಪ್ರತಿಯೊಂದು ಏರ್ಪಾಟಿನಲ್ಲಿಯೂ ಮಹಾಮಾತ್ಯನ ಎಚ್ಚರಿಕೆ ಕಂಡುಬರುತ್ತದೆ. ಕಾದಂಬರಿಯಲ್ಲಿ ಮತ್ತೆ ಮತ್ತೆ ಪ್ರಸ್ತುತವಾಗುವ ಸಂಗತಿ ಆಟವಿಕರಿಂದ ಸಿಗುವ ನೆರವು. ಅಡವಿಯಲ್ಲಿ ಋಕ್ಷ ಮತ್ತು ಅವನ ಪರಿವಾರ ಶರ್ವಿಲಕನಿಗೆ ಒಳ್ಳೆಯ ಸಹಕಾರ ನೀಡುತ್ತದೆ.
ಉದಯನ ರಾಜ ಎಂದೆನಿಸಿಕೊಂದ್ದರೂ ಅವನ ಅಂತರಂಗದಲ್ಲಿ ನೆಲೆನಿಂತದ್ದು ಆಟವಿಕರ, ಜಾನಪದರ ಮುಗ್ಧಜೀವನವೇ. ಇಲ್ಲವಾದರೆ ನಿಸರ್ಗಭವ್ಯರಾದ ಈ ಆರಣ್ಯಕರು ವತ್ಸರಾಜನಿಗೆ ಜೀವ ಕೊಡುವ ನೇಹಿಗರಾಗುವುದಾದರೂ ಹೇಗೆ? ಇವನ ವಿಷಯದಲ್ಲಿ ಭಾರತವರ್ಷದ ಅದೆಷ್ಟೋ ಪ್ರಭುಗಳ ಒಲವು-ನಿಲವುಗಳು ಆಗೀಗ ಮಾರ್ಪಡುತ್ತಿದ್ದರೂ ಈ ಆಟವಿಕರ ನೇಹ-ನಿಷ್ಠೆಗಳು ಅಚಂಚಲವಾಗಿ ನಿಂತಿರುವ ಪರಿಯನ್ನು ಪರಿಭಾವಿಸಿದಂತೆಲ್ಲ ಇಂಥ ಜೀವಪ್ರೀತಿಯ ನಾಯಕನಿಗಾಗಿ ದುಡಿಯುವುದು ಸಾರ್ಥಕವೆಂದು ಶರ್ವಿಲಕನಿಗೆ ತೋರಿತ್ತು. (ಪು. ೫೧೭-೧೮)
ಅರಣ್ಯಗಳಲ್ಲಿ, ಪರ್ವತಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟುಗಳಿಗೆ ಸೇರಿದ ಗಿರಿಜನರ ಬದುಕನ್ನು, ಅವರ ಕುಲಕಸಬುಗಳನ್ನು ಉತ್ತಮಪಡಿಸಬೇಕೆಂಬ ಬರಿಯ ಕೂಗು ಕೇಳಿಬರುತ್ತಿರುವ ಈ ಕಾಲಕ್ಕೆ ಪ್ರಸ್ತುತವಾದ ಒಂದು ಅಂಶ ಹೀಗಿದೆ - ಆಳ್ವಿಕೆಗೆ ಸಂಬಂಧಿಸಿದ ಅಧಿಕಾರಿವರ್ಗ ಉದಯನನ ಹಾಗೆ ಆಟವಿಕರೊಡನೆ ಬೆರೆತು, ಅವರ ನಾಡಿಮಿಡಿತವನ್ನರಿತು, ದೇಶದ ಬದುಕಿಗೆ ಭದ್ರತೆ ಮತ್ತು ಸಮಗ್ರತೆಗಳನ್ನು ತರಬೇಕೆಂದು ಈ ಕೃತಿಯಲ್ಲಿ ಧ್ವನಿತವಾಗಿದೆ.
ಶರ್ವಿಲಕನ ತಂಡದ ಪಯಣದ ಹಾದಿಯಲ್ಲಿ ಬೌದ್ಧಭಿಕ್ಷುಗಳ ಹಲವು ಬಗೆಯ ಚರ್ಚೆಗಳೂ ಕಾಣಸಿಗುತ್ತವೆ. ಶರ್ವಿಲಕ ಮತ್ತು ಮದನಿಕೆಯರ ಪ್ರಣಯಸಂದೇಶಗಳ ವಿನಿಮಯವೂ ನಡೆಯುತ್ತದೆ. “ಕೇವಲ ಕುಡಿನೋಟದ ಕನ್ನೈದಿಲೆಗಳಿಂದ ನಗೆಮಾತಿನ ಮಲ್ಲಿಗೆಯ ಮಾಲೆಗಳಿಂದ ಆ ಪ್ರಣಯಿಗಳು ಒಬ್ಬರನ್ನೊಬ್ಬರು ನವುರಾಗಿ ಹೊಡೆದುಕೊಳ್ಳುತ್ತಿದ್ದ”ರಂತೆ! “ವಿಪ್ಲವವೊಂದನ್ನು ಹುಟ್ಟುಹಾಕಲು ಸಾಗುತ್ತಿದ್ದ ಆ ತಂಡದಲ್ಲಿ ಸಾಮ-ದಾನ-ಭೇದ-ದಂಡಗಳ ರಣತಂತ್ರ ಮತ್ತು ಮಾರಣಮಂತ್ರಗಳೇ ಮೊಳಗುತ್ತಿದ್ದಾಗ ಈ ಪ್ರೇಮಿಗಳ ಸ್ಮರತಂತ್ರ ಮತ್ತು ಮೋಹನಮಂತ್ರಗಳೂ ಪಿಸುಗುಟ್ಟುತ್ತಿದ್ದುದೊಂದು ಸುಂದರವಾದ ಚೋದ್ಯ” ಎನ್ನುತ್ತಾರೆ ಲೇಖಕರು (ಪು. ೫೧೯). ಬಂಡೆಗಳ ನಡುವೆಯೂ ಮೊಳೆತುನಿಲ್ಲುವ ಗರಿಕೆಯಂತೆ ಪ್ರೀತಿಯ ಕಸುವು.
* * *
ಆರ್ಯಕನನ್ನು ಹುಡುಕಲು ಸಕಲ ಪ್ರಯತ್ನಗಳನ್ನೂ ಮಾಡುವುದು, ಅವನನ್ನೇ ರಾಜನೆಂದು ಘೋಷಿಸುವುದು, ಎಲ್ಲ ಯತ್ನಗಳೂ ವಿಫಲವಾದಲ್ಲಿ ವಾಸವದತ್ತೆಯನ್ನೇ ಮುಂದಿಟ್ಟುಕೊಂಡು ಉಜ್ಜಯಿನಿಯ ರಾಜವಂಶವನ್ನು ಉದ್ಧರಿಸಬೇಕು; ಅವಳ ಮಕ್ಕಳನ್ನಾದರೂ ಸಿಂಹಾಸನಕ್ಕೆ ತರಬೇಕು; ಹೆತ್ತ ತಂದೆ-ತಾಯಿ ಮತ್ತು ಅಣ್ಣನನ್ನೇ ಮಾತ್ರ ಉಳಿಸಬಾರದು; ಈ ವಿಷಯದಲ್ಲಿ ಉಜ್ಜಯಿನಿಯ ಪ್ರಜೆಗಳ ಹಾಗೂ ಪ್ರಾಮಾಣಿಕ ಅಧಿಕಾರಗಳ ಮನಸ್ಸುಗಳನ್ನು ಒಲಿಸಬೇಕು - ಇದು ಯೌಧಂಧರಾಯಣನ ಕಾರ್ಯಯೋಜನೆಯಾಗಿತ್ತು.
ಪಾಲಕನ ಉಜ್ಜಯಿನಿ ಅನಾಚಾರಗಳ ನೆಲೆವೀಡಾಗಿತ್ತು. ಕಾಮಲತೆ ಅವನನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳಲು ತನಗಿಂತ ಚೆಲುವಾಗಿದ್ದ ಬೆಲೆವೆಣ್ಣುಗಳನ್ನು ಉಜ್ಜಯಿನಿಯಿಂದ ಹೊರದಬ್ಬಿಸುತ್ತಿದ್ದಳಂತೆ. ನಯ-ಭಯಗಳಿಂದ ಹೀಗೆ ಹೋಗದವರನ್ನು ಈ ಲೋಕದಿಂದಲೇ ಆಚೆಗೆ ಕಳಿಸುತ್ತಿದ್ದಳಂತೆ. ಇದಕ್ಕೆಲ್ಲ ನೆರವಾಗುತ್ತಿದ್ದವನು ಅವಳ ಅಣ್ಣ ಸಂಸ್ಥಾನಕ-ಶಕಾರ. ವಾಣಿಜ್ಯದ ವಲಯದಲ್ಲಿ ಏರುಪೇರಾಗಿ ಚಾರುದತ್ತನಂತಹ ಸುಸಂಸ್ಕೃತ ಆಗರ್ಭ ಶ್ರೀಮಂತ ಹಾಗೂ ಪ್ರಾಮಾಣಿಕ ಸಾರ್ಥವಾಹ ನಿರ್ಗತಿಕನಾಗುವ ಹಂತವನ್ನು ತಲುಪಿದ್ದನಾದರೂ ತನ್ನ ಸದ್ಗುಣಗಳಾದ ಪ್ರಾಮಾಣಿಕತೆ, ಉದಾರತೆ, ಸುಶೀಲತೆ ಮತ್ತು ಕಲಾಪ್ರೇಮಗಳನ್ನು ಕಳೆದುಕೊಂಡಿರಲಿಲ್ಲ. ಹುಟ್ಟಿನಿಂದ ಬ್ರಾಹ್ಮಣನಾಗಿ ವೃತ್ತಿಯಿಂದ ವೈಶ್ಯನಾಗಿದ್ದರೂ ಎಲ್ಲ ವರ್ಣಗಳ ಸದ್ಗುಣಗಳು ಅವನಲ್ಲಿದ್ದವು. ರೇಭಿಲ ಹೇಳುವಂತೆ ಚಾರುದತ್ತ ತನ್ನ ವೈಶ್ಯಶಕ್ತಿಯನ್ನು ಕ್ಷಾತ್ರದೆಡೆಗೆ ತಿರುಗಿಸಿದ್ದರೆ ಎಂದೋ ಯಾವುದೋ ರಾಜ್ಯಕ್ಕೆ ಒಡೆಯನಾಗಿರುತ್ತಿದ್ದ; ಬ್ರಾಹ್ಮದ ತಿರುಗಿಸಿದ್ದರೆ ಶಾಸ್ತ್ರಕಾರನೋ ಒಳ್ಳೆಯ ಕವಿಯೋ ಆಗಿರುತ್ತಿದ್ದ. ಅಂತಹ ಚಾರುದತ್ತ ಇಂದು ಕೆಲಸದವರಿಗೆ ಸಂಬಳ ಕೊಡಲೂ ಕಾಸಿಲ್ಲದ ಬಡವನಾಗಿದ್ದಾನೆ. ಅದೂ ಅಲ್ಪಾವಧಿಯಲ್ಲಿ. ರೇಭಿಲ ಚಾರುದತ್ತನ ಈ ಪರಿಸ್ಥಿತಿಗೆ ಕಾರಣವನ್ನು ವಿಶ್ಲೇಷಿಸುತ್ತಾನೆ. ಅವನ ಆಲೊಚನೆ ದೀರ್ಘವಾಗಿ ವಿಸ್ತರಿಸಿಕೊಂಡಿದೆ:
ಯಾವಾಗ ಸಾತ್ತ್ವಿಕ-ರಾಜಸಭೋಗಗಳನ್ನ ಪೋಷಿಸ್ತಿರೋ ಅರ್ಥ-ಕಾಮಗಳ ಚೌಕಟ್ಟು ಮುರಿದುಹೋಗುತ್ತೋ ಆಗ ಧರ್ಮಕ್ಕೆ ಒದಗಿಬರುವಂಥ ಶುದ್ಧವಿದ್ವತ್ತೆಗೂ ಜನತೆ ವಿಮುಖವಾಗುತ್ತದೆ; ಯಜ್ಞ-ದಾನ-ತಪಸ್ಸುಗಳತ್ತ ಶ್ರದ್ಧೆ-ವಿಶ್ವಾಸಗಳು ತಗ್ಗುತ್ತವೆ. (ಪು. ೫೩೦)
ಜಗತ್ತು-ಜೀವಗಳನ್ನೆಲ್ಲ ತಾಳಿ ಬಾಳಿಸುವ ಧರ್ಮವೇ ನಿರ್ಣಾಯಕಸ್ಥಾನದಲ್ಲಿದ್ದು ಎಲ್ಲವನ್ನೂ ನಡಸಿದರೆ ಯಾವ ತೊಂದರೆಗಳೂ ಎಂಥ ಅನ್ಯಾಯಗಳೂ ಇರೋದಿಲ್ಲ. ಆದರೆ ಧರ್ಮದ ಅಂಕೆಯನ್ನ ಮೀರಿ ಅರ್ಥ-ಕಾಮಗಳು ಕೊಬ್ಬಿ ನಡೆದಾಗ ಎಂಥ ವ್ಯವಸ್ಥೆಯೂ ಕಷ್ಟ. ಅದನ್ನೇ ನಾವು ಈಗ ನೋಡ್ತಾ ಇದ್ದೇವೆ. (ಪು. ೫೨೮)
ಇಂಥ ಉಜ್ಜಯಿನಿಯ ಕೋಟೆಯ ಅಂಚಿನ ಹಳ್ಳಿಗಳಿಗೆ ಅಂಟಿದಂತಿದ್ದ ಕಾಡಿನ ಸೆರಗಿನಲ್ಲಿ ಯೌಗಂಧರಾಯಣ ಯತಿಯ ವೇಷದಲ್ಲಿದ್ದ. ಅವನ ಸಮಸ್ತ ಪರಿವಾರವೂ ಶಿಷ್ಯರ ವೇಷ ತಾಳಿತ್ತು. ಕೌಶಾಂಬಿಯ ಪ್ರಣಿಧಿಗಳೂ ಸೈನಿಕರೂ ಜಯಸೇನನ ನೇತೃತ್ವದಲ್ಲಿದ್ದರು. ಮದನೋತ್ಸವವು ಕಾಮದಹನದ ಬಳಿಕ ತಿಂಗಳಿಡೀ ನಡೆಯುವ ಹಬ್ಬ. ಇದರ ಅನೇಕ ವಿನೋದಗಳ ಕೋಲಾಹಲದಲ್ಲಿಯೇ ಪಾಲಕನನ್ನು ಮುಗಿಸಬೇಕೆಂಬುದು ಮಹಾಮಾತ್ಯನ ಯೋಜನೆ. ಇದರ ಮೊದಲ ಹಂತವಾಗಿ-
ಉಜ್ಜಯಿನಿಯ ಸಿಂಹಾಸನದ ನಿಜವಾದ ಉತ್ತರಾಧಿಕಾರಿ ಆರ್ಯಕ ಇನ್ನೂ ಬದುಕಿದ್ದಾನೆಂಬ ಸುದ್ದಿಯನ್ನು ವ್ಯಾಪಕವಾಗಿ ಹಬ್ಬಿಸಬೇಕು ... ಹೇಗೂ ಮಹಾಸೇನನಿಗೆ ಶಕುನ, ಸಿದ್ಧಾದೇಶ, ಭವಿಷ್ಯವಾದಿಗಳಲ್ಲಿ ತುಂಬ ನಂಬಿಕೆ ಇದ್ದಿತು. ಆರ್ಯಕ ಹುಟ್ಟಿದಾಗ ಅವನು ಮುಂದೆ ಅವಂತಿಯ ದೊರೆಯಾಗುವನೆಂದು ದೈವಜ್ಞರೆಲ್ಲ ಸಾರಿದ್ದ ಸಂಗತಿ ಸಾಂಕೃತ್ಯಾಯನಿಯೂ ಸೇರಿದಂತೆ ಅನೇಕರಿಗೆ ತಿಳಿದಿದೆ. ಇಂದೂ ಇದನ್ನು ಬಲ್ಲ ಹಿರಿಯರು ಉಜ್ಜಯಿನಿಯಲ್ಲಿ ಇದ್ದಾರೆ. ಇವರೆಲ್ಲರ ನೆನಪುಗಳನ್ನೂ ಯಥೋಚಿತವಾಗಿ ಬಳಸಿಕೊಳ್ಳಬೇಕು. ಈ ಕೆಲಸವನ್ನು ಆರ್ಯೆ ಸಾಂಕೃತ್ಯಾಯನಿ ಮಾಡಬಲ್ಲಳು ... ಕೌಶಾಂಬಿಯಿಂದ ಬಂದ ನುರಿತ ಬೇಹುಗಾರರೂ ರಣತಂತ್ರದಲ್ಲಿ ನಿಪುಣರಾದ ಸೈನಿಕರೂ ಋಕ್ಷನ ಆಟವಿಕಬಲದ ನೆರವಿನಿಂದ ಉಜ್ಜಯಿನಿಯಲ್ಲಿ ತಾಪಸ-ತೀರ್ಥಕರಂತೆ, ವರ್ತಕ-ಪ್ರವಾಸಿಗಳಂತೆ, ಅವಂತಿಯ ಹಳ್ಳಿಗಳ ಜಾನಪದರಂತೆ ನೆಲೆಗೊಳ್ಳಬೇಕು. (ಪು. ೫೩೧-೩೨)
ಮಹಾಮಾತ್ಯನ ಈ ತಂತ್ರಗಾರಿಕೆ, ಸಮರಸಮಯದಲ್ಲಿ ಕೈಗೊಳ್ಳಬೇಕಾದ ಯುದ್ಧನೀತಿ, ಪ್ರಚಾರದ ಜಾಣ್ಮೆ ಎಲ್ಲವೂ ಎಲ್ಲ ಕಾಲದಲ್ಲಿಯೂ ಅನುಕರಣೀಯ.
ಇದೇ ಸಮಯದಲ್ಲಿ ಕಾಮದೇವಾಲಯದ ವಿಶಾಲ ಪ್ರಾಂಗಣದಲ್ಲಿ ಕಾಮದಹನಕಥೆಯನ್ನು ಆಶ್ರಯಿಸಿದ ವಸಂತಸೇನೆಯ ನೃತ್ಯರೂಪಕ ಏರ್ಪಾಟಾಗಿರುತ್ತದೆ. ಈ ಸನ್ನಿವೇಶ ನಾಟ್ಯಾಸಕ್ತರಿಗೆ ಅದ್ಭುತವಾದ ರಸೋಲ್ಲಾಸವನ್ನು ನೀಡಿತು. ಮಹಾಮಾತ್ಯ ಮಾತ್ರ ಇದನ್ನು ತನ್ನ ಕಾರ್ಯಸಾಧನೆಗೆ ಬಳಸಿಕೊಳ್ಳಲು ಆಲೋಚಿಸುತ್ತಿರುತ್ತಾನೆ. ಕಾದಂಬರೀಕಾರರಿಗೆ ದರಿದ್ರ ಚಾರುದತ್ತ ಮತ್ತು ಕಲಾವಿದೆ ವಸಂತಸೇನೆಯರ ನಡುವೆ ಪ್ರೇಮಾಂಕುರ ಮಾಡಿಸುವ ಕನಸು. ಒಂದು ಕಾರ್ಯಕ್ರಮ, ಮೂರು ಹಕ್ಕಿಗಳ ಬೇಟೆ!