ಯೌಗಂಧರಾಯಣ-ಚಾರುದತ್ತರ ಭೇಟಿ - ರಾಜ್ಯವ್ಯವಸ್ಥೆಗಳ ಬಗೆಗೆ ಚಿಂತನ
ಕಾದಂಬರಿಯ ಮೊದಲ ಅಧ್ಯಾಯದಲ್ಲಿ ಉದಯನ ಮತ್ತು ಚಾರುದತ್ತರ ಭೇಟಿಗಿಂತ ಚಾರುದತ್ತ ಹಾಗೂ ಯೌಗಂಧರಾಯಣರ ಭೇಟಿ ಹೆಚ್ಚು ವ್ಯಾಪಕವೂ ಪರಿಣಾಮಕಾರಿಯೂ ಆಗಿದೆ. ಇದು ಅಂದಿನ ಆರ್ಯಾವರ್ತದ ಮತ್ತು ಹಲವು ರಾಜ್ಯಗಳ ರಾಜಕೀಯ ಪರಿಸ್ಥಿತಿಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಇದು ಸುಮಾರು ಹದಿನಾರು, ಹದಿನೇಳು ಪುಟಗಳಲ್ಲಿ ವಿಸ್ತರಿಸಿಕೊಂಡಿದೆ.
ಆ ಕಾಲಘಟ್ಟದಲ್ಲಿ ಪ್ರಾಮುಖ್ಯವನ್ನು ಗಳಿಸುತ್ತಿದ್ದ ಶ್ರಮಣವರ್ಗಗಳು ತಮ್ಮ ಮತತತ್ತ್ವಗಳ ಪ್ರಚಾರಕ್ಕೂ ಅದಕ್ಕೆ ಬೇಕಾದ ಆರ್ಥಿಕ ಬಲದ ಸಹಾಯಕ್ಕೂ ಆಳುವ ವರ್ಗವನ್ನಲ್ಲದೆ ವ್ಯಾಪಾರಿಗಳ ವರ್ಗವನ್ನೂ ಬಲವಾಗಿ ನೆಮ್ಮಿರುತ್ತಿದ್ದವು. ಉಪವನ, ಆರಾಮಗಳನ್ನು ಆಶ್ರಯಿಸಿ ವಸತಿ-ವಿಹಾರಗಳನ್ನು ಕಟ್ಟಿಕೊಂಡು ಪೂರ್ಣಾವಧಿಯ ಕಾರ್ಯಕರ್ತರಾಗಿ ದುಡಿಯುವ ನೂರಾರು ಶಿಷ್ಯರ, ಶ್ರಮಣರ ವ್ಯವಸ್ಥೆ ಮಾಡಿಕೊಂಡು ಸರಳ, ಸಾಮೂಹಿಕ ರೂಪದ ಉಪದೇಶವನ್ನು ವಿತರಿಸುವ ಹೊಸ ಬಗೆಯ ಪಂಗಡಗಳು ವರ್ತಕಜಗತ್ತನ್ನು ಮಿಗಿಲಾಗಿ ಮರುಳುಗೊಳಿಸಿವೆ - ಎಂಬ ಅಭಿಪ್ರಾಯ ಇಲ್ಲಿ ಬರುತ್ತದೆ. ಇವುಗಳ ಸಾಧಕ-ಬಾಧಕಗಳನ್ನು ಮಹಾಮಾತ್ಯನ ಮಾತಿನಲ್ಲಿ ಹೀಗೆ ಸಂಗ್ರಹಿಸಲಾಗಿದೆ:
ಎಲ್ಲ ಶ್ರಮಣವರ್ಗಗಳೂ ಹೇಳುವ ಮೂಲತತ್ತ್ವಗಳು ಹೆಚ್ಚು-ಕಡಮೆ ಚಿರಂತನವಾದ ಅದೇ ಸಾಂಖ್ಯ-ಯೋಗಗಳ ಸಾಮಾನ್ಯಧರ್ಮಗಳೇ, ಧ್ಯಾನ-ಪ್ರಾಣಾಯಾಮದ ಪದ್ಧತಿಗಳೇ ... ಈ ಸಮೂಹೋನ್ಮಾದದ ಗತಿ ಮುಂದೆ ಹೇಗೆ ಪರಿಣಮಿಸುತ್ತೋ ಸ್ಪಷ್ಟವಾಗುತ್ತಿಲ್ಲ. ಅಧಿಕಾರ-ಸಂಪತ್ತಿಗಳ ಅನುಕೂಲ ಹೆಚ್ಚಾಗಿರುವವರು ಈ ಬಗೆಯ ಅತಿರೇಕಗಳಿಗೆ ಮರುಳಾದರೆ ಮಾತ್ರ ಕಷ್ಟ ತಪ್ಪಿದ್ದಲ್ಲ; ಅದು ಯಾರಿಗೂ ತಪ್ಪಿದ್ದಲ್ಲ. ಇದೇ ನನ್ನ ಕಳವಳ. (ಪು. ೩೩)
ಅನಂತರಕಾಲದಲ್ಲಿ ಅಶೋಕ ಬೌದ್ಧಮತಕ್ಕೆ ಮನಸೋತದ್ದು ನೆನಪಾಗುತ್ತದೆ. ಇಲ್ಲಿಯೇ ಮಹಾಮಾತ್ಯ ಹೇಳುವ ಮುಂದಿನ ಮಾತುಗಳೂ ಗಮನಾರ್ಹ:
ಈಗ ಸಾಮೂಹಿಕಸಂನ್ಯಾಸದ ರೂಪದಲ್ಲಿ ಹೊಮ್ಮುತ್ತಿರುವ ಹೊಸತೊಂದು ಬ್ರಾಹ್ಮವು ವಿವೇಕಿಯಾಗದಿದ್ದಲ್ಲಿ, ಬ್ರಾಹ್ಮದ ಆಭಾಸವೇ ಆದಲ್ಲಿ ಅಪಾಯ ತಪ್ಪಿದ್ದಲ್ಲ. (ಪು. ೩೩)
ಅರಸೊತ್ತಿಗೆ, ನಿರಂಕುಶ ಪ್ರಭುತ್ವ, ಗಣತಂತ್ರ ಮುಂತಾದ ಎಲ್ಲ ವ್ಯವಸ್ಥೆಗಳ ಬಗೆಗೆ ಯೌಗಂಧರಾಯಣ ಮತ್ತು ಚಾರುದತ್ತರ ನಡುವೆ ಸಾಗುವ ಚಿಂತನೆಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿದ್ದು ದೀರ್ಘ ಪ್ರಬಂಧದ ವಸ್ತುವಾಗಬಲ್ಲವು.
ಷೋಡಶ ಮಹಾಜನಪದಗಳು ಪರಸ್ಪರ ಸ್ಪರ್ಧೆಗಳಲ್ಲಿಯೇ ತಮ್ಮ ಸಂಪನ್ಮೂಲಗಳನ್ನು ಕಳೆದುಕೊಳ್ಳುತ್ತಾ ಸೇನೆ ಮತ್ತು ಆಯುಧಗಳಿಗೆ, ಕೋಟೆ ಮತ್ತು ಕಾವಲುಗಳಿಗೆ ಬೊಕ್ಕಸದ ಹೆಚ್ಚಿನ ಪಾಲನ್ನು ಖರ್ಚು ಮಾಡಿದರೆ ಪ್ರಜಾಹಿತಕ್ಕೆ ಉಳಿಯುವುದು ಎಷ್ಟು? ಮತ್ತೆ ಮತ್ತೆ ಪ್ರಜೆಗಳಿಂದ ತೆರಿಗೆ ಸಂಗ್ರಹ, ಹೆಚ್ಚಿನ ದುಡಿಮೆಗಳನ್ನು ನಿರೀಕ್ಷಿಸಿದರೆ, ಯುದ್ಧವೂ ಆದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವುದಿಲ್ಲವೇ? ಈ ಕಾರಣಗಳಿಂದ ಜನತೆಗೆ ಈ ಜನಪದಗಳಲ್ಲಿ ನಂಬಿಕೆ ಇಲ್ಲ; ಈ ವ್ಯವಸ್ಥೆಯಲ್ಲಿ ವರ್ತಕರಿಗೂ ಕ್ರಮೇಣ ಅವನತಿ ತಪ್ಪಿದ್ದಲ್ಲ - ಎನ್ನುವುದು ಯೌಗಂಧರಾಯಣನ ಅಭಿಪ್ರಾಯ.
ಗಣತಂತ್ರಗಳ ಗತಿಯೂ ಹೆಚ್ಚು-ಕಡಿಮೆ ಹೀಗೆಯೇ ಇದೆಯಲ್ಲವೆ? ಎಂಬ ಚಾರುದತ್ತನ ಪ್ರಶ್ನೆಗೆ ಯೌಗಂಧರಾಯಣನ ಉತ್ತರ ಹೀಗಿದೆ:
ಗಣತಂತ್ರಗಳ ಗತಿಯೂ ಅರಸೊತ್ತಿಗೆಗಳಿಗಿಂತ ತುಂಬ ಭಿನ್ನವಾಗಿಲ್ಲ ... ಇವನ್ನೂ ಇವುಗಳ ಪರಿಪಾಲನಕ್ರಮವನ್ನೂ ಮೆಚ್ಚಿಕೊಳ್ಳುವವರು ಅಲ್ಲಿ ಪ್ರಜೆಗಳಿಗೆ ಹೆಚ್ಚಿನ ಅಧಿಕಾರವಿದೆ, ಆಳ್ವಿಕೆಯಲ್ಲಿ ತೊಡಕು ಕಡಮೆ, ಸಾಮರಸ್ಯ ಕೂಡ ಹೆಚ್ಚು ಎನ್ನುತ್ತಾರೆ. ಆದರೆ ಇದೆಲ್ಲ ಮೇಲ್ನೋಟದ ಮಾತು. ನಾನು ನನ್ನ ಯೌವನದಲ್ಲಿ ಆರ್ಯಾವರ್ತವನ್ನೆಲ್ಲ ಸುತ್ತಾಡಿದ್ದೇನೆ ... ಅರಸೊತ್ತಿಗೆಯ ಅಧಿಕಾರಿಗಳಿಗಿಂತ ಗಣತಂತ್ರದ ಜನಪ್ರತಿನಿಧಿಗಳಿಗೇ ಹಮ್ಮು-ಬಿಮ್ಮು ಹೆಚ್ಚು. ಜೊತೆಗೆ ತಮ್ಮ ತಮ್ಮ ಕುಲಗಳ ಅಭಿಮಾನ; ತಮ್ಮಂತೆಯೇ ಗಣತಂತ್ರವ್ಯವಸ್ಥೆ ಇರುವ ಮಿಕ್ಕ ಗಣಗಳ ವಿಷಯದಲ್ಲಿ ಕೂಡ ಅಸೂಯೆ, ಅಸಹನೆ ಅಷ್ಟಿಷ್ಟಲ್ಲ. ವಿವೇಕವಿಲ್ಲದ ಕಟ್ಟಲೆ, ಕಂದಾಚಾರ ಅಂತೂ ಹೇಳತೀರದು. (ಪು. ೨೧)
ಯೌಗಂಧರಾಯಣನ ಈ ಮಾತುಗಳಿಗೆ ಅವನದೇ ನುಡಿಗಳು ಪುಷ್ಟಿ ನೀಡುವಂತೆ ಬರುತ್ತವೆ. ಇವೂ ಗಮನಾರ್ಹ:
ಮಹಾಭಾರತದ ಕಾಲದಿಂದಲೂ ಈ ಸಮಸ್ಯೆ ಹಾಗೆಯೇ ಇದೆ. ಇಲ್ಲವಾದರೆ ಗಣತಂತ್ರವ್ಯವಸ್ಥೆಯೇ ಇದ್ದ ಯದುವಂಶದಲ್ಲಿ ಹುಟ್ಟಿದ ಶ್ರೀಕೃಷ್ಣ ರಾಜವ್ಯವಸ್ಥೆಯ ಪಾಂಡವರನ್ನೇಕೆ ಬೆಂಬಲಿಸಿದ? ಅವರ ಮೂಲಕವೇ ಸಾಮ್ರಾಜ್ಯಸ್ಥಾಪನೆ ಮಾಡಿಸಿ, ಅದನ್ನು ಮತ್ತಷ್ಟು ವಿಸ್ತರಿಸಿ ಗಟ್ಟಿಗೊಳಿಸುವಂಥ ರಾಜಸೂಯ-ಅಶ್ವಮೇಧಗಳನ್ನೂ ಏಕೆ ಮಾಡಿಸಿದ? ಇದು ಹೀಗಿರಲಿ. ಯಾದವರ ಒಳಜಗಳ ಲೋಕಪ್ರಸಿದ್ಧ. ಅದಕ್ಕೆ ಮುಖ್ಯಕಾರಣ ಅಲ್ಲಿದ್ದ ಗಣತಂತ್ರವ್ಯವಸ್ಥೆಯೇ. ಕಡೆಗೆ ಇದು ಇಡಿಯ ವಂಶವನ್ನೇ ನಾಶ ಮಾಡುವ ಮಟ್ಟಕ್ಕೆ ಹೋದದ್ದು ಭಗವಾನ್ ಕೃಷ್ಣದ್ವೈಪಾಯನರ ಬರೆವಣಿಗೆಯಿಂದ ಸ್ಪಷ್ಟವಾಗಿಯೇ ತಿಳಿಯುತ್ತಿದೆ. ಯಾವುದೋ ಕಾಲದಲ್ಲಿ - ಅಂದರೆ ಇಕ್ಷ್ವಾಕುವಂಶ-ಪುರುವಂಶಗಳಂಥ ರಾಜಕುಲಗಳ ಹುಟ್ಟಿಗೆ ಮುನ್ನ - ಎಲ್ಲೆಲ್ಲಿಯೂ ಗಣತಂತ್ರಗಳೇ ಇದ್ದವಂತೆ. ವೇದಗಳಲ್ಲಿ ಮತ್ತೆ ಮತ್ತೆ ಪಂಚಜನರ ಉಲ್ಲೇಖ ಬರುತ್ತದಲ್ಲ! ಋಕ್ಸಂಹಿತೆಯಲ್ಲಿ ದಾಶರಾಜ್ಞಯುದ್ಧದ ಪ್ರಸ್ತಾವವೇ ಇದೆಯಲ್ಲ! (ಪು. ೨೧-೨೨)
ಯೌಗಂಧರಾಯಣನ ಆಲೋಚನೆಯಲ್ಲಿಯ ಭವಿಷ್ಯದ ಆಗುಹೋಗುಗಳ ಬಗೆಗಿನ ಚಿಂತೆಯನ್ನೂ ಗಮನಿಸಬೇಕಾಗಿದೆ:
... ಇನ್ನೊಂದು ನಾಲ್ಕೈದು ತಲೆಮಾರು ಮುಗಿಯುವ ಹೊತ್ತಿಗೆ - ಅಂದರೆ ನೂರು-ನೂರಿಪ್ಪತ್ತು ವರ್ಷಗಳ ಅವಧಿಯಲ್ಲಿ - ಯಾರಾದರೂ ಅನಾರ್ಯರು ಭಾರತವರ್ಷದ ಮೇಲೆ ದಂಡೆತ್ತಿ ಬಂದರೆ ಈ ಗಣತಂತ್ರಗಳ ಒಳಜಗಳಗಳಿಂದಲೇ ಅವರ ಗೆಲವಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ಅಪಾಯಕ್ಕಿಂತ ಮೊದಲೇ ನಾವು ವಿವೇಕ ತಂದುಕೊಂಡು ಒಗ್ಗಟ್ಟಾದರೆ ಒಳಿತು. ಶ್ರೀಕೃಷ್ಣನ ಕಾಲದಲ್ಲಿ ಕಾಲಯವನ ದಂಡೆತ್ತಿ ಬಂದಿದ್ದನಂತೆ. ಭರತಭೂಮಿಯಿಂದ ಹೊರಗಿನವರು ನಮ್ಮ ಮೇಲೆ ನುಗ್ಗಿಬಂದರೆ ಅವರೆದುರು ಹೋರಾಡುವಾಗ ನಮಗೆ ನಮ್ಮನ್ನೂ ನಮ್ಮ ಎಲ್ಲ ಬಗೆಯ ಸಂಪತ್ತಿಗಳನ್ನೂ ಕಾಪಾಡಿಕೊಂಡು ಸೆಣಸುವ ಇಬ್ಬಗೆಯ ಹೊಣೆ ಇರುತ್ತದೆ. ಅದೇ ದಾಳಿಗಾರರಿಗೆ ಇಂಥ ಕಷ್ಟವಿಲ್ಲ. (ಪು. ೨೨)
ಯೌಗಂಧರಾಯಣನ ಈ ಚಿಂತೆ-ಆಶಂಕೆಗಳು ಮುಂದೆ ನಮ್ಮ ಭಾರತದ ಇತಿಹಾಸದ ಘಟನೆಗಳಲ್ಲಿ ಸತ್ಯವಾದದ್ದನ್ನು ನಾವು ಕಾಣಬಹುದಾಗಿದೆ.
ಕ್ಷಾತ್ತ್ರದ ಅಹಂಕಾರವನ್ನು ಸಂಪೂರ್ಣವಾಗಿ ತೊಡೆದುಹಾಕುವುದು ಸಾಧ್ಯವಿಲ್ಲ. ಈ ಬಗೆಯ ಲೋಪ-ದೋಷಗಳು ಪ್ರತಿಯೊಂದು ವರ್ಣಕ್ಕೂ ಇವೆ. ಬ್ರಾಹ್ಮದ ಶಬ್ದಶಾರಣ್ಯ, ವೈಶ್ಯದ ಲೋಭ, ಶೌದ್ರದ ಆಲಸ್ಯ ... ಇವೆಲ್ಲ ಸುಲಭದಲ್ಲಿ ಹೋಗುವಂಥವಲ್ಲ. ಎಂಥ ಮಹಾತ್ಮ ಧರೆಗಿಳಿದು ಬಂದರೂ ಯಾವ ಋಷಿ ತನ್ನ ದರ್ಶನದ ಮೂಲಕ ಹೊಸ ಬೆಳಕನ್ನು ಕೊಟ್ಟರೂ ನಮ್ಮ ಸುತ್ತಲಿನ ಜಗತ್ತು ಅಂತರಂಗದಲ್ಲಿ ಮಾರ್ಪಡುವುದಿಲ್ಲ. (ಪು. ೨೯)
ಈ ಮಾತಿನ ಸತ್ಯ ಪ್ರಶ್ನಾತೀತ.
ಚಾರುದತ್ತನ ಪ್ರಶ್ನೆಗಳಿಗೆ ಉತ್ತರಿಸುತ್ತ ಕಡೆಯದಾಗಿ ಬರುವ ಯೌಗಂಧರಾಯಣನ ಮಾತುಗಳಲ್ಲಿ ಒಬ್ಬೊಬ್ಬ ದೊರೆಯನ್ನೂ ಹಾದಿಗೆ ತರುವುದು ಅನೇಕ ಜನರನ್ನು ತಿದ್ದುವುದಕ್ಕಿಂತಲೂ ಸುಲಭದ ಮಾರ್ಗವೆಂಬ ಅಭಿಪ್ರಾಯ ಕಂಡುಬರುತ್ತದೆ:
ದೊರೆ ಧಾರ್ಮಿಕನಾಗದೆ ದೇಶಕ್ಕೆ ನೆಮ್ಮದಿಯಿಲ್ಲ. ಧಾರ್ಮಿಕ ಎಂಬ ಶಬ್ದದಲ್ಲಿ ಬಲ, ಪ್ರಜ್ಞೆ, ಔದಾರ್ಯ, ರಸಜ್ಞತೆಗಳೆಲ್ಲ ಸೇರಿವೆ ಅನ್ನೋದನ್ನ ಮರೆಯಲೇಬಾರದು. ಆದರೆ ನನ್ನ ಈ ಹೊತ್ತಿನ ನಿಶ್ಚಯವಿಷ್ಟೆ: ದೊರೆಯನ್ನು ಧಾರ್ಮಿಕನಾಗಿರುವಂತೆ ನೋಡಿಕೊಳ್ಳೋಣ, ಸಂದರ್ಭವೇ ಒದಗಿಬಂದಲ್ಲಿ ಧಾರ್ಮಿಕನನ್ನೇ ದೊರೆಯನ್ನಾಗಿ ಮಾಡಿಕೊಳ್ಳೋಣ. ಇಷ್ಟಾಗಿಯೂ ದೊರೆ ಅಧಾರ್ಮಿಕನಾದರೆ ಅವನನ್ನ ಮತ್ತೆ ಧರ್ಮದ ಜಾಡಿಗೆ ತರೋಣ. ಹೀಗೆ ಒಬ್ಬನನ್ನು ಸರಿಯಾಗಿ ರೂಪಿಸಿಕೊಂಡರೆ ಮಿಕ್ಕೆಲ್ಲ ಸರಿಯಾದೀತು. ಹಾಗಲ್ಲದೆ ನೂರು ಜನರನ್ನ ಅನುನಯದಿಂದ ತಿದ್ದಲು ಹೊರಟರೆ ಅದು ಸಫಲವಾಗುವುದಿಲ್ಲ ... ಶುಷ್ಕನೀತಿಗಿಂತ ವಿಶಾಲದೃಷ್ಟಿಯ ಧರ್ಮ ದೊಡ್ಡದು ಅಂತ ನಂಬಿದವನು. ಹೀಗಾಗಿ ಗಣತಂತ್ರಗಳಂಥ ವ್ಯವಸ್ಥೆಗಳ ಚಿಕ್ಕ ಚಿಕ್ಕ ರಾಜ್ಯಗಳ ಅನೇಕ ನಾಯಕರನ್ನು ಓಲೈಸಿ ಅವರನ್ನ ವಿವೇಕದ ಹಾದಿಗೆ ತರೋದಿಕ್ಕಿಂತ ದೊಡ್ಡ ದೊಡ್ಡ ರಾಜ್ಯಗಳ ಒಬ್ಬಿಬ್ಬರು ನಾಯಕರನ್ನ ಧಾರ್ಮಿಕರನ್ನಾಗಿ ಉಳಿಸೋದು ಅರ್ಥಪೂರ್ಣ ಅಂತ ಅರಿತಿದ್ದೇನೆ. (ಪು. ೩೧)
ಈ ರಾಜಕೀಯ ಜಿಜ್ಞಾಸೆ ದೇಶ-ದೇಶಗಳಲ್ಲಿ ಎಲ್ಲ ಕಾಲದಲ್ಲಿಯೂ ನಡೆಯುತ್ತಿರುವ - ಗಣತಂತ್ರವೋ ಪ್ರಜಾಪ್ರಭುತ್ವವೋ ಯಾವುದು ಸಂಪೂರ್ಣ ದೋಷರಹಿತ ಮತ್ತು ದೇಶ ಹಾಗೂ ಪ್ರಜೆಗಳ ಹಿತಸಾಧಕ - ಎನ್ನುವುದರ ಬಗೆಗೆ ಬೆಳಕು ಚೆಲ್ಲುವ ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿದೆ.
* * *
‘ಮಣ್ಣಿನ ಕನಸು’ ಕಾದಂಬರಿಯ ನಾಯಕ ಯಾರು ಎಂದು ಕೇಳಿದರೆ ರಾಜ-ಮಹಾರಾಜರಾಗಲಿ, ಪಟ್ಟಮಹಿಷಿಯರಾಗಲಿ, ರಾಜಕುಮಾರಿಯರಾಗಲಿ ಅಲ್ಲ. ಮುಪ್ಪಿನಲ್ಲಿ ಕಾಲಿಡುತ್ತಿದ್ದರೂ ತನ್ನ ನಿಶಿತ ಮತಿ, ಧೀಶಕ್ತಿ, ರಾಜತಂತ್ರದ ಅಪಾರ ಅನುಭವ, ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಳ್ಳದೆ ಮುನ್ನಡೆದು ಸ್ಪಷ್ಟವಾಗಿ ಆಲೋಚಿಸಬಲ್ಲ ಹಾಗೂ ತನ್ನ ರಾಜ ಮತ್ತು ರಾಜ್ಯಕ್ಕೆ ಪರಮನಿಷ್ಠನಾಗಿರುವ ಯೌಗಂಧರಾಯಣನೇ ಎಂದು ಹೇಳಬಹುದು. ಉದಯನ, ವಾಸವದತ್ತೆ, ಪದ್ಮಾವತಿ, ಚಾರುದತ್ತ, ವಸಂತಸೇನೆ, ಬದುಕುಳಿದ ಆರ್ಯಕ ಮುಂತಾದ ಎಲ್ಲರ ಜೀವ-ಜೀವನಗಳನ್ನು ವಿಧಿಗಿಂತ ಮಿಗಿಲಾಗಿ ನಿರ್ದೇಶಿಸಿ ರಕ್ಷಿಸುತ್ತಿರುವ, ವತ್ಸ ಮತ್ತು ಅವಂತಿ ಜನಪದಗಳಲ್ಲಿ ಸುವ್ಯವಸ್ಥೆಯನ್ನು ಮತ್ತೆ ಸ್ಥಾಪಿಸಿದ ಮಹಾರಾಜನೀತಿಜ್ಞ ಯೌಗಂಧರಾಯಣ. ರಾಜನೀತಿಯೊಡನೆಯೇ ಉದಯನನ ಬಗೆಗೆ ತಂದೆಯಂತಹ ವಾತ್ಸಲ್ಯನಿಷ್ಠೆ, ತನ್ನ ರಾಜನನ್ನು ಬಂಧನದಿಂದ ಬಿಡಿಸಿ ಕರೆತಂದವಳೆಂದು ವಾಸವದತ್ತೆಯ ಬಗೆಗೆ ಅಪಾರ ಪ್ರೀತಿ-ಕೃತಜ್ಞತೆ, ವ್ಯಕ್ತಿಗಳನ್ನು ಪರಸ್ಪರ ಬೆಸೆಯಲು ಸಹಾಯವಾಗುವ ಸಹಾನುಭೂತಿಪೂರ್ಣ ಅಂತಃಕರಣ - ಇವು ಯೌಗಂಧರಾಯಣನನ್ನು ಅಪ್ರತಿಮ ಮಾನವೀಯ ಮೌಲ್ಯಗಳುಳ್ಳ ವ್ಯಕ್ತಿಯನ್ನಾಗಿಸುತ್ತವೆ.
ತನ್ನ ಅನುಪಸ್ಥಿತಿಯಲ್ಲಿ ಉದಯನ ನಡಾಗಿರಿಯಂಥ ಮಹಾಗಜವನ್ನು ನೋಡುವ, ಸಾಧ್ಯವಾದರೆ ಅದನ್ನು ಹಿಡಿದು, ಮೇಲೇರಿ ಕೌಶಾಂಬಿಗೆ ಬರುವ ಸಾಹಸದಿಂದ ತನ್ನ ಆಪ್ತ ಭಟರೊಡನೆ ಕಾಡಿಗೆ ಹೋಗಿ ಪಾಲಕನ ಮೋಸದ ಬಲೆಗೆ ಸಿಲುಕಿ ಸೆರೆಯಾದಾಗ ಮಹಾಮಾತ್ಯನಿಗೆ ತನ್ನ ಅರಸನ ಹುಚ್ಚುಸಾಹಸದ ಬಗೆಗೆ ಕೋಪಕ್ಕೆ ಬದಲಾಗಿ ಅಪಾರ ಆತಂಕ, ದುಃಖಗಳು ಉಂಟಾಗುತ್ತವೆ. ತನ್ನ ಅರಸನನ್ನು ಬಂಧಮುಕ್ತಗೊಳಿಸಲು ಅವನು ಹೂಡುವ ನೂರಾರು ತಂತ್ರಗಳು - ಇಲ್ಲಿ ಚತುರುಪಾಯಗಳು ಸಾಲುವುದಿಲ್ಲ - ಹೆಚ್ಚು-ಕಡಿಮೆ ಯುದ್ಧವೇ ಎನ್ನುವಂತಹ ಪರಿಸ್ಥಿತಿಯನ್ನು ಎದುರಿಸಲು ಮಾಡಿಕೊಳ್ಳುವ ಅಚ್ಚುಕಟ್ಟಾದ ಸಿದ್ಧತೆ, ಉಜ್ಜಯಿನಿಯ ಇಂದ್ರಧ್ವಜೋತ್ಸವದಂದೇ ಉದಯನ-ವಾಸವದತ್ತೆಯರನ್ನು ಅಲ್ಲಿಂದ ಹೊರಡಿಸಿಕೊಂಡು ಬರಲು ಮಾಡುವ ಏರ್ಪಾಟುಗಳು - ಎಲ್ಲವೂ ಒಂದು ರೀತಿ ಮಾನವನ ಮಿದುಳನ್ನು ಮೀರಿದಂತಹವು. ಉದಯನ ನಡಾಗಿರಿಯಂಥ ಯಾವ ಮಹಾಗಜಕ್ಕಾಗಿ ಸೆರೆಯಾದನೋ ಅದೇ ನಡಾಗಿರಿಯ ನೆರವಿನಿಂದ, ಅದನ್ನೇ ಏರಿ ಅವನು ಉಜ್ಜಯಿನಿಯಿಂದ ಪಾರಾಗಿ ಬರುವ ತಂತ್ರವಂತೂ ನಿಬ್ಬೆರಗಾಗಿಸುತ್ತದೆ. ಉದಯನನ ವಿಮೋಚನೆಯ ಸಂದರ್ಭದಲ್ಲಿ ಪಾಲಕನು ದೊರೆಯಿಲ್ಲದ ಕೌಶಾಂಬಿಯ ಬಗೆಗೆ ಆರುಣಿಗೆ ಸುದ್ದಿ ನೀಡಿ ಅವನು ಅದನ್ನು ವಶಪಡಿಸಿಕೊಳ್ಳುವಂತಾಗುತ್ತದೆ. ನವದಂಪತಿಗಳ ರಕ್ಷಣೆಯ ಹೊಣೆ ಹೊತ್ತು ಕೌಶಾಂಬಿಯ ಮುಕ್ತಿಗಾಗಿ ಉದಯನನಿಗೆ ಮಗಧ ರಾಜಪುತ್ರಿ ಪದ್ಮಾವತಿಯೊಡನೆ ಮದುವೆ ಮಾಡಿಸುವ ರಾಜಕಾರಣದ ತಂತ್ರಕ್ಕೆ ಮಹಾಮಾತ್ಯ ಮುಂದಾಗುತ್ತಾನೆ. ಇದಕ್ಕಾಗಿ ವಾಸವದತ್ತೆಯನ್ನು ಅನುನಯಿಸಿ ತಾವಿಬ್ಬರೂ ಮಹಾರಾಜನ ಪಾಲಿಗೆ ಇಲ್ಲದಂತೆ ತೋರಿಸಿಕೊಳ್ಳಲು ಬೆಂಕಿಯಲ್ಲಿ ಉರಿದುಹೋದಂತೆ ಸಂದರ್ಭವೊಂದನ್ನು ಕಲ್ಪಿಸಬೇಕಾಗುತ್ತದೆ. ಕೌಶಾಂಬಿಯಲ್ಲಿ ಉದಯನನನ್ನು ನೆಲೆಗೊಳಿಸಿದ ಬಳಿಕ ಪಾಲಕನ ಆಳ್ವಿಕೆಯಲ್ಲಿ ಹದಗೆಟ್ಟ ಉಜ್ಜಯಿನಿಗೆ ಆರ್ಯಕನನ್ನು ದೊರೆಯಾಗಿಸುವ ಕಾರ್ಯವನ್ನು ಕೈಗೊಳ್ಳುತ್ತಾನೆ. ಹೀಗೆ ರಾಜರ, ರಾಜ್ಯಗಳ, ಪ್ರಜೆಗಳ ಬದುಕಿನ ಆಗು-ಹೋಗುಗಳನ್ನು ನಿರ್ದೇಶಿಸುವ ರಾಜನೀತಿಜ್ಞ ಯೌಗಂಧರಾಯಣ ಈ ಕಥಾನಕದ ನಾಯಕನೆನಿಸುತ್ತಾನೆ.
To be continued.