ಸಾಹಿತ್ಯಕೃತಿಗಳ ಭಾಷೆ
ನ ಭಾಷಾನಿಯಮಃ ಪಾತ್ರೇ ಕಾವ್ಯೇ ಸ್ಯಾತ್ ಸೈಂಧವೀಮಿತಿ || (ಅಭಿನವಭಾರತೀ, ಸಂ. ೪, ಪು. ೨೭೮)
ಪಾತ್ರದಲ್ಲಿ ಭಾಷೆಯ ನಿಯಮ ಇಲ್ಲ. ಕಾವ್ಯದಲ್ಲಿ ಅದು ಸೈಂಧವೀ ಎಂದಾಗಬಹುದು.
ಇದೊಂದು ಸಂದಿಗ್ಧವಾದ ವಾಕ್ಯ. ಭಟ್ಟತೌತನದೇ ಆದ ಪೂರ್ವಾಪರ ವಿವರಗಳಿಲ್ಲದ ಕಾರಣ ಅಭಿನವಗುಪ್ತನ ಮಾತುಗಳಿಂದ ಇದರ ಅರ್ಥವನ್ನು ಊಹಿಸಬೇಕು.[1] ಪ್ರಕೃತ ಶ್ಲೋಕಶಕಲವು ಉಲ್ಲೇಖಗೊಂಡಿರುವ ಅಭಿನವಭಾರತಿಯ ಸಂದರ್ಭವನ್ನು ನೋಡುವುದಾದರೆ, ಈ ಭಾಗವು ನಾಟ್ಯಶಾಸ್ತ್ರದ ತಾಳಾಧ್ಯಾಯದಲ್ಲಿರುವ ಲಾಸ್ಯಾಂಗಗಳ ವಿವರಣೆಯಲ್ಲಿ ಬಂದಿದೆ. ಲಾಸ್ಯಾಂಗಗಳು ಗೀತವನ್ನು ಆಶ್ರಯಿಸಿವೆ. ಇಂಥ ಹಾಡುಗಳೆಲ್ಲ ಹೆಚ್ಚಾಗಿ ಗಾನಕ್ಕೆ ಅನುಕೂಲಿಸುವ ಬಗೆಬಗೆಯ ಪ್ರಾಕೃತಭಾಷೆಗಳಲ್ಲಿ ಇರುತ್ತವೆ. ‘ಸೈಂಧವಕ’ ಎಂಬ ಗೇಯಬಂಧವನ್ನು ಹೇಗೆ ರಚಿಸಬೇಕೆಂಬ ಚರ್ಚೆ ಬಂದಾಗ ಅಭಿನವಗುಪ್ತನು ಬೇರೆ ಬೇರೆಯವರ ಅಭಿಪ್ರಾಯಗಳನ್ನು ಉಲ್ಲೇಖಿಸುತ್ತಾನೆ. ಆ ಪ್ರಕಾರ ಇವು ಸಂಸ್ಕೃತದಲ್ಲಿಯೇ ಇರಬೇಕು; ಅಥವಾ ಯಾವುದೇ ಪ್ರಾಕೃತದಲ್ಲಿರಬಹುದು. ಆದರೆ ಭಟ್ಟತೌತನ ಪ್ರಕಾರ ಸೈಂಧವಕವು ಸಿಂಧುದೇಶದಲ್ಲಿ ಬಳಕೆಯಲ್ಲಿರುವ ಸೈಂಧವೀ ಎಂಬ ಪ್ರಾಕೃತದಲ್ಲಿ ರಚಿತವಾಗಬೇಕು ಎಂದು ನಿರ್ಣಯಿಸುತ್ತಾನೆ. ಇದು ಆ ಗೇಯಬಂಧದ ಹೆಸರಿನಿಂದಲೇ ಸಮರ್ಥಿತವಾಗುವಂತಿದೆ.
ಈ ಸಂದರ್ಭದಲ್ಲಿ ಭಟ್ಟತೌತನು ವಿವಿಧ ರೀತಿಯ ದೃಶ್ಯಕಾವ್ಯಗಳಲ್ಲಿ ಪಾತ್ರ, ಸಂದರ್ಭ ಮತ್ತು ಧ್ರುವಗೀತಗಳ ರೀತಿಗೆ ಅನುಸಾರವಾಗಿ ಭಾಷೆಯನ್ನು ಬಳಸಿಕೊಳ್ಳಬೇಕೆಂಬ ನಿಲವನ್ನು ತಳೆದಂತೆ ತೋರುತ್ತದೆ. ಇದು ಭರತಮುನಿಯ ಅಭಿಮತಕ್ಕೆ ಅನುಗುಣವಾಗಿರುವುದಲ್ಲದೆ ಭಾರತೀಯ ರಂಗಭೂಮಿ ಮತ್ತು ಸಾಹಿತ್ಯಲೋಕದ ಬಹುಭಾಷಿಕತೆಗೆ ಸಲ್ಲುವಂತಿದೆ. ಸಂಸ್ಕೃತದಲ್ಲಿ ಶಾಸ್ತ್ರಗ್ರಂಥಗಳನ್ನು ಬರೆದ ಯಾವ ಲಾಕ್ಷಣಿಕರೂ ಭಾಷೆಯ ವಿಷಯದಲ್ಲಿ ಆಗ್ರಹವನ್ನು ತಳೆದಿರಲಿಲ್ಲ. ಇದು ಭರತ, ದಂಡಿ, ರುದ್ರಟ, ವಾಮನ, ಆನಂದವರ್ಧನ, ಕುಂತಕ, ಅಭಿನವಗುಪ್ತ, ಭೋಜ, ಮಮ್ಮಟ ಮೊದಲಾದ ಎಲ್ಲ ಕಾವ್ಯಮೀಮಾಂಸಕರ ಬಗೆಗೂ ಸಲ್ಲುವ ಮಾತು. ಪ್ರಾಚೀನ ಪ್ರಾಕೃತಭಾಷೆಗಳು ಬಲುಮಟ್ಟಿಗೆ ಅಸ್ತಂಗತಿಸಿದ ಕಾಲದಲ್ಲಿಯೂ ವಿಶ್ವನಾಥ, ವಿದ್ಯಾನಾಥ, ಕವಿಕರ್ಣಪೂರ ಮುಂತಾದ ಹಲವರು ತಮ್ಮ ಕೃತಿಗಳಲ್ಲಿ ಈ ನುಡಿಗಳನ್ನು ಬಳಸಿಕೊಂಡಿರುವುದು ಗಮನಾರ್ಹ. ಹೀಗಾಗಿ ಸಂಸ್ಕೃತವಾಗಲಿ, ಅದರಲ್ಲಿ ಕಾವ್ಯ-ಶಾಸ್ತ್ರಗಳನ್ನು ರಚಿಸಿದ ಕವಿ-ಪಂಡಿತರಾಗಲಿ ದೇಶಭಾಷೆಗಳ ವಿರುದ್ಧ ನಿಂತಿರಲಿಲ್ಲ, ಅವನ್ನು ಉಪೇಕ್ಷಿಸಿಯೂ ಇರಲಿಲ್ಲ ಎಂಬ ತಥ್ಯಕ್ಕೆ ಭಟ್ಟತೌತನೂ ಸಾಕ್ಷಿಯಾಗಿ ನಿಲ್ಲುತ್ತಾನೆ.
ಧ್ರುವಗೀತಗಳ ರೀತಿ
ಸಂವಿಶಿಷ್ಟೇನ ಕೇನಾಪಿ ಗ್ರಾಸೀಕಾರಾದಪಹ್ನುತಃ(ತಿಃ) |
ಪ್ರಕಾಶತೇಽತ ಉತ್ತಾನಾ ಸರ್ವಸ್ಯಾಸ್ವಾದನಿರ್ಭರಮ್ || (ಅಭಿನವಭಾರತೀ, ಸಂ. ೪, ಪು. ೩೬೭)
ಈ ಶ್ಲೋಕದ ಅನುವಾದ ಪ್ರಕೃತ ಲೇಖಕನಿಗೆ ದುಸ್ಸಾಧವಾಗಿದೆ. ಇದರ ಹಿನ್ನೆಲೆಯಲ್ಲಿ ಬಂದಿರುವ ಅಭಿನವಭಾರತಿಯ ಭಾಗವೂ ದುರವಗಾಹವೆನಿಸಿದೆ. ಆದರೆ ನಾಟ್ಯಶಾಸ್ತ್ರದ ಮೂಲ ಸುಬೋಧವಾಗಿದೆ. ಆ ಪ್ರಕಾರ ಪ್ರಕೃತ ಸಂದರ್ಭ ಹೀಗಿದೆ: ಧ್ರುವಗೀತಗಳನ್ನು ಹೇಗೆ ರಚಿಸಬೇಕೆಂದು ವಿವರಿಸುತ್ತ ಭರತನು - ದೇವತೆಗಳನ್ನಾಗಲಿ, ಮನುಷ್ಯರನ್ನಾಗಲಿ ನೇರವಾಗಿ ಧ್ರುವಗೀತಗಳ ವಸ್ತುಗಳನ್ನಾಗಿ ಹವಣಿಸಿಕೊಳ್ಳಬಾರದೆಂದು ಒಕ್ಕಣಿಸುತ್ತಾನೆ. ಇದಕ್ಕೆ ಕಾರಣವಿಷ್ಟೇ: ರೂಪಕಗಳಲ್ಲಿ ಬರುವ ಐದು ಬಗೆಯ ಧ್ರುವಗೀತಗಳು ಕವಿಯು ರಚಿಸುವ ಸಾಹಿತ್ಯಕ್ಕಿಂತ ಹೊರತಾದ ರಚನೆಗಳು; ಅವು ತಮ್ಮ ಆಶಯದಿಂದ ಯಾವುದೇ ರೂಪಕಕ್ಕೆ ಅನುಕೂಲಿಸುವಂಥ ಸಾಂಕೇತಿಕ ಇತಿವೃತ್ತವನ್ನು ಹೊಂದಿರುತ್ತವೆ. ಅಂದರೆ ಪ್ರಕೃತಿಯಲ್ಲಿ ಕಾಣುವ ಸೂರ್ಯ, ಚಂದ್ರ, ಬಾನು, ಮುಗಿಲು, ನದಿ, ಬೆಟ್ಟ ಪ್ರಾಣಿ, ಪಕ್ಷಿ ಮುಂತಾದುವುಗಳ ಸ್ಥಿತಿ-ಗತಿಗಳನ್ನೂ ವರ್ತನೆಗಳನ್ನೂ ಬಣ್ಣಿಸುವಂತೆ ಈ ಗೀತಗಳು ಬಗೆಬಗೆಯ ಪ್ರಾಕೃತಗಳಲ್ಲಿ ತಿಳಿಯಾಗಿ ರಚಿತವಾಗಿರುತ್ತವೆ. ಇವೆಲ್ಲ ಸಹಜವಾಗಿಯೇ ತಾಳಬದ್ಧವಾಗಿ ಇರುವ ಕಾರಣ ಗಾನಕ್ಕೆ ಒದಗಿಬರುತ್ತವೆ, ನೃತ್ಯ-ಅಭಿನಯಗಳಿಗೂ ಅನುಕೂಲಿಸುತ್ತವೆ. ಹೀಗೆ ‘ಸಾಮಾನ್ಯ’ (ಜೆನೆರಿಕ್) ರೂಪದಲ್ಲಿರುವ ಧ್ರುವಗೀತಗಳು ನಟರಿಗೂ ಪ್ರೇಕ್ಷಕರಿಗೂ ಸೊಗಸೆನಿಸುತ್ತವೆ. ಪರಿಸ್ಥಿತಿ ಇಂತಿರುವಾಗ ಅಮೂರ್ತತೆಯನ್ನಾಗಲಿ, ದೈವ-ಮಾನುಷ ಭಾವಗಳನ್ನಾಗಲಿ ಇವುಗಳ ಒಡಲಿನಲ್ಲಿ ನೇರವಾಗಿ ತಂದರೆ ಅದು ಆಯಾ ರೂಪಕಗಳ ವಿಶಿಷ್ಟ ಸಂದರ್ಭಕ್ಕೆ ಹೊಂದದೆ ಹೋಗಬಹುದೆಂಬ ಎಚ್ಚರ ಭರತನದು. ಇದನ್ನೇ ಅಭಿನವಗುಪ್ತನು ತನ್ನ ವಿವರಣೆಯಲ್ಲಿ ಎತ್ತಿಹಿಡಿದಿದ್ದಾನೆ. ಅದಕ್ಕೆ ಪೂರಕವಾಗಿ ತೌತನ ಶ್ಲೋಕವನ್ನೂ ಉದ್ಧರಿಸಿದ್ದಾನೆ. ಇಂತಿದ್ದರೂ ಇದರ ನಿಶ್ಚಿತ ಅರ್ಥ ಸ್ಫುಟವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಾಜ್ಞರು ತಮ್ಮ ಗಮನವನ್ನು ಹಾಯಿಸಿ ಹೆಚ್ಚಿನ ಬೆಳಕನ್ನು ಕರುಣಿಸಿಯಾರೆಂದು ಆಶಿಸಬಹುದು. ಕಾವ್ಯಕೌತುಕವು ಸಮಗ್ರವಾಗಿ ದೊರೆತಿದ್ದಲ್ಲಿ ಈ ಶ್ಲೋಕವು ತನ್ನ ಆನುಪೂರ್ವಿಯ ಹಿನ್ನೆಲೆಯಲ್ಲಿ ಸ್ಪಷ್ಟವಾಗುತ್ತಿದ್ದುದರಲ್ಲಿ ಸಂಶಯವಿಲ್ಲ.
ವಿತರ್ಕ ಎಂಬ ವ್ಯಭಿಚಾರಿಭಾವ
ಸಂಭಾವನಾಪ್ರಮಾಣೋ ಹಿ ತೀಕ್ಷ್ಣಪ್ರಜ್ಞೋಽಪಿ ಯದ್ವದೇತ್ |
ಮಾ ಗಾ ವ್ಯಾಪ್ತಂ ನಭೋಂಽಭೋದೈರಂಬುಭಾರಾನತೈರಿತಿ || (ಕಲ್ಪಲತಾವಿವೇಕ, ಪು. ೩೦೨)
ಸಂಭವನೀಯತೆಯನ್ನು ಪ್ರಮಾಣವಾಗಿ ನಚ್ಚಿದ ಬುದ್ಧಿವಂತನೊಬ್ಬನು ಹೇಳಬಹುದು: ‘ನೀನು (ಈಗ) ತೆರಳಬೇಡ, ಬಾನಲ್ಲಿ ಕಾರ್ಮುಗಿಲು ತುಂಬಿತುಳುಕಿದೆ.’
ನಾಟ್ಯಶಾಸ್ತ್ರವು ಮೂವತ್ತಮೂರು ವ್ಯಭಿಚಾರಿಭಾವಗಳನ್ನು ಹೆಸರಿಸಿ ವಿವರಿಸಿದೆ. ಇವೆಲ್ಲ ವಿವಿಧ ಸ್ಥಾಯಿಭಾವಗಳಿಗೆ ಪೂರಕವಾಗಿ ಒದಗಿಬರುತ್ತವೆ. ಅವುಗಳ ಪೈಕಿ ‘ವಿತರ್ಕ’ ಎಂಬುದೂ ಒಂದು. ವಿಚಾರಾರ್ಹವಾದ ಸಂಗತಿಗಳಿಂದ ಕೂಡಿದ್ದರೂ ಸಂಶಯಕ್ಕೆ ಆಸ್ಪದವಿರುವ ಸ್ಥಿತಿಯೇ ವಿತರ್ಕ. ಇದನ್ನು ಹುಬ್ಬುಗಳ ಏರಿಳಿತ, ತಲೆಯ ಒಲೆತ ಮುಂತಾದ ಆಂಗಿಕಾಭಿನಯದಿಂದ ನಿರೂಪಿಸಬಹುದು (ನಾಟ್ಯಶಾಸ್ತ್ರ, ೭.೯೨).
ಅಜ್ಞಾತಕರ್ತೃಕವಾದ ‘ಕಲ್ಪಲತಾವಿವೇಕ’ ಎಂಬ ಗ್ರಂಥವು ವಿತರ್ಕವನ್ನು ವಿಸ್ತರಿಸಿ ವಿವರಿಸುವಾಗ ಭಟ್ಟತೌತನ ಮೇಲಣ ಮಾತನ್ನು ಉಲ್ಲೇಖಿಸಿದೆ. ಇಲ್ಲಿ ವಿತರ್ಕವು ಬರಿಯ ಸಂಶಯವಲ್ಲ; ಅದು ಬುದ್ಧಿವಂತನೊಬ್ಬ ಊಹಾಪೋಹಗಳ ಮೂಲಕ ನಿಶ್ಚಯವೊಂದಕ್ಕೆ ಬರುವ ಹಂತ ಎಂದು ಸೋದಾಹರಣವಾಗಿ ನಿರೂಪಿತವಾಗಿದೆ. ಇಂಥ ಮಾತುಗಳಿಂದ ಭಟ್ಟತೌತನು ಚಿಕ್ಕ-ಪುಟ್ಟ ವಿಷಯಗಳಲ್ಲಿಯೂ ಅದೆಷ್ಟು ಅವಧಾನವಿರಿಸಿದ್ದನೆಂದು ತಿಳಿಯುತ್ತದೆ.
ಕವಿಗಳಿಗೆ ಕಿವಿಮಾತು
ಮಹಾಕವೀನಾಂ ಪದವೀಮುಪಾತ್ತಾಮಾರುರುಕ್ಷತಾಮ್ |
ನಾಸಂಸ್ಮೃತ್ಯ ಪದಸ್ಪರ್ಶಾನ್ ಸಂಪತ್ಸೋಪಾನಪದ್ಧತಿಃ || (ಅಭಿನವಭಾರತೀ, ಸಂ. ೨, ಪು. ೨೧೨)
ಮಹಾಕವಿಗಳ ಕೈಗೆಟುಕಿದ ಸ್ಥಾನವನ್ನು ಮುಟ್ಟಲು ಎಳಸುತ್ತಿರುವವರು (ಆ ಕವಿಗಳ) ಪದಗಳನ್ನು ನೆನೆದಲ್ಲದೆ ಅಭ್ಯುದಯದ ಮೆಟ್ಟಿಲುಗಳು ದಕ್ಕುವುದಿಲ್ಲ.
ಇದು ಉದಾತ್ತಮನೋಹರವಾದ ಆಶಯವನ್ನುಳ್ಳ ಶ್ಲೋಕ. ಇದರ ಅರ್ಥವೂ ಸ್ವಲ್ಪ ಸಾಕಾಂಕ್ಷವಾಗಿದೆ. ಆದರೂ ತಾತ್ಪರ್ಯವನ್ನು ಗ್ರಹಿಸಲು ಯಾವುದೇ ತೊಂದರೆ ಇಲ್ಲ. ‘ಛಂದೋವಿಚಿತಿ’ ಎಂಬ ನಾಟ್ಯಶಾಸ್ತ್ರದ ಹದಿನೈದನೆಯ ಅಧ್ಯಾಯದ ವಿವರಣೆಯನ್ನು ಮುಗಿಸುತ್ತ ಅಭಿನವಗುಪ್ತನು ತನ್ನ ಗುರುವಿನ ಈ ಮಾತನ್ನು ಉಲ್ಲೇಖಿಸಿದ್ದಾನೆ. ಪೂರ್ವಸೂರಿಗಳಾದ ಮಹಾಕವಿಗಳ ರಚನೆಗಳನ್ನು ಬರಿಯ ಛಂದಸ್ಸಿಗೋ ಅಲಂಕಾರಕ್ಕೋ ಅಲ್ಲದೆ ಸಾಹಿತ್ಯನಿರ್ಮಿತಿಯ ಎಲ್ಲ ಸೂಕ್ಷ್ಮತೆಗಳನ್ನು ಅರಿಯಲೂ ಆಶ್ರಯಿಸಬೇಕೆಂಬ ಇಂಗಿತವಿಲ್ಲಿದೆ. ಹಿರಿದಾದ ಕಾರಣವಿಲ್ಲದೆ ಪೂರ್ವಸೂರಿಗಳ ಹಾದಿಯನ್ನು ತೊರೆಯಬೇಕಿಲ್ಲ. ದಿಟವೇ, ಪ್ರತಿಭಾಶಾಲಿಗಳಾದ ವರಕವಿಗಳಿಗೆ ಅವರದಾದ ಅದ್ಭುತ ಪಥ ಇದ್ದೇ ಇರುತ್ತದೆ. ಆದರೆ ಸಾಹಿತ್ಯಜಗತ್ತು ಅನುದಿನವೂ ನಡೆಯುತ್ತಿರುವುದು ಎಂದೋ ಬರುವ ಮಹಾಕವಿಗಳಿಂದ ಮಾತ್ರವಲ್ಲ; ಅಂದಿಗಂದಿಗೆ ಬಂದು ಹೋಗುತ್ತಿರುವ ಮಧ್ಯಮ ಸ್ತರದ ಎಷ್ಟೋ ಕವಿಗಳಿಂದ. ಗಂಗೋತ್ತರಿಯಿಂದ ಹರಿದುಬರುವ ಒಂದೇ ಧಾರೆ ಅದೆಷ್ಟು ಪವಿತ್ರವಾಗಿದ್ದರೂ ಸಾಗರವನ್ನು ಸೇರುವುದು ಕಷ್ಟ. ಅದರ ಪಯಣದಲ್ಲಿ ಎಷ್ಟೋ ತೊರೆ-ಹಳ್ಳಗಳು ಸೇರಿಕೊಳ್ಳಬೇಕು. ಒಂದು ದೊಡ್ಡ ಪರಂಪರೆ ಸಿದ್ಧವಾಗುವುದು ಹೀಗೆಯೇ. ಇದನ್ನು ಜಗತ್ತಿನ ಎಲ್ಲ ವಿವೇಕಿಗಳೂ ಬಲ್ಲರು. ವಿಶೇಷತಃ ಭಾರತೀಯ ಕಾವ್ಯಮೀಮಾಂಸೆ ಪ್ರಕೃತ ನೀತಿಯನ್ನು ಮತ್ತೆ ಮತ್ತೆ ಪ್ರತಿಪಾದಿಸಿದೆ. ಆದುದರಿಂದಲೇ ಕಾವ್ಯಹೇತುಗಳಲ್ಲಿ ಅಡಕವಾದ ವ್ಯುತ್ಪತ್ತಿ ಮತ್ತು ಅಭ್ಯಾಸಗಳು ಪೂರ್ವಸೂರಿಗಳ ಉಪಾಸನೆಯನ್ನೇ ಪ್ರಧಾನವಾಗಿ ನಚ್ಚಿವೆ.
ಅಭಿನವಭಾರತಿಗೆ ಭಟ್ಟತೌತನ ಯೋಗದಾನ
ಈ ಮೊದಲೇ ನೋಡಿದಂತೆ ಅಭಿನವಗುಪ್ತನಿಗೆ ನಾಟ್ಯಶಾಸ್ತ್ರವನ್ನು ಬೋಧಿಸಿ ಅಭಿನವಭಾರತಿಯ ರಚನೆಗೆ ಬೆನ್ನೆಲುಬಾಗಿ ನಿಂತವನು ಭಟ್ಟತೌತ. ಅಭಿನವಭಾರತಿಯಲ್ಲಿ ಉಲ್ಲೇಖಗೊಂಡ ಕಾವ್ಯಕೌತುಕದ ಹಲವು ಶ್ಲೋಕಗಳನ್ನು ಕೂಡ ನಾವಿಲ್ಲಿ ಪರಿಶೀಲಿಸಿದ್ದೇವೆ. ಹೀಗೆ ತೌತನ ನೇರವಾದ ಮಾತುಗಳಲ್ಲದೆ - ಬಹುಶಃ ಅವನ ಪಾಠ-ಪ್ರವಚನಗಳ ಸಾರಾಂಶ ಎನ್ನಬಹುದಾದ - ಹತ್ತಾರು ಅಭಿಪ್ರಾಯಗಳು ಅಭಿನವಭಾರತಿಯಲ್ಲಿ ದಾಖಲೆಗೊಂಡಿವೆ. ಇವುಗಳ ಮೌಲ್ಯವೂ ಅಲ್ಪ-ಸ್ವಲ್ಪದ್ದಲ್ಲ. ಇವುಗಳ ಪೈಕಿ ಮುಖ್ಯವಾದ ಕೆಲವೊಂದನ್ನು ನಾವೀಗ ಗಮನಿಸಬಹುದು.
ಬ್ರಹ್ಮನು ನಾಲ್ಕು ವೇದಗಳ ಸಾರವಾಗಿ ನಾಟ್ಯವೇದವನ್ನು ನಿರ್ಮಿಸಿಕೊಟ್ಟನೆಂಬ ಒಕ್ಕಣೆ ನಾಟ್ಯಶಾಸ್ತ್ರದ ಮೊದಲಿಗೇ ಬರುತ್ತದೆ (೧.೧೭). ಬ್ರಹ್ಮನು ಸಾಮದಿಂದ ಗೀತವನ್ನು ನಿಷ್ಪಾದಿಸಿದನೆಂಬ ಮಾತನ್ನು ಅಭಿನವಗುಪ್ತನು ವಿವರಿಸುತ್ತ ತನ್ನ ಗುರುವಿನ ಅಭಿಪ್ರಾಯವನ್ನು ಹೀಗೆ ಉಟ್ಟಂಕಿಸುತ್ತಾನೆ:
ಗೀತಂ ಪ್ರಾಣಾಃ ಪ್ರಯೋಗಸ್ಯ ಇತಿ ವಕ್ಷ್ಯಮಾಣತ್ವಾತ್ | ತದಾಯತ್ತತ್ವಾದ್ರಸಚರ್ವಣಾಯಾಃ ಸಮುಚಿತಮಸ್ಯಾತ್ರೈವಾಭಿಧಾನಮಿತಿ ಅಸ್ಮದುಪಾಧ್ಯಾಯಾಃ | (ಅಭಿನವಭಾರತೀ, ಸಂ. ೧, ಪು. ೧೩)
ನಾಟ್ಯಕ್ಕೆ ಗೀತವು ಜೀವಾಳ; ರಸಚರ್ವಣೆಗೆ ಗೀತವೇ ಒದಗಿಬರುವಂಥದ್ದು ಎಂಬ ತೌತನ ಅಭಿಪ್ರಾಯ ಮೌಲಿಕವಾಗಿದೆ. ನೃತ್ಯ, ಚಿತ್ರ, ಶಿಲ್ಪ, ಸಾಹಿತ್ಯ ಮುಂತಾದ ಇತರ ಕಲೆಗಳಲ್ಲಿ ಒಂದು ಹಂತದವರೆಗೂ ತೋರಿಕೊಳ್ಳುವ ರೂಪ-ಸ್ವರೂಪಗಳ ಪ್ರತ್ಯೇಕತೆ ಗೀತದಲ್ಲಿ ಪ್ರಾಥಮಿಕ ಹಂತದಿಂದಲೂ ಇಲ್ಲವಾಗುವ ಸಾಧ್ಯತೆ ಹೆಚ್ಚು. ಗಾನದ ಈ ವೈಶಿಷ್ಟ್ಯವೇ ಅದನ್ನು ರಸಕ್ಕೆ ಮಿಗಿಲಾಗಿ ಒದಗಿಬರುವಂತೆ ಮಾಡಿದೆ. ಅಮೂರ್ತ ಗಾನದ ಈ ಬಲವನ್ನು ಗ್ರಹಿಸಿದ ತೌತನ ತಿಳಿವು ಮಿಗಿಲಾದುದು.
* * *
ನಾಟ್ಯಶಾಸ್ತ್ರದ ಮೊದಲನೆಯ ಅಧ್ಯಾಯದಲ್ಲಿ ಬರುವ ‘ಅನುಕೀರ್ತನ’ ಎಂಬ ಸಾರವತ್ತಾದ ಮಾತನ್ನು (೧.೧೦೭) ವಿವರಿಸುತ್ತ ಅಭಿನವಗುಪ್ತನು ಅದನ್ನು ‘ಅನುಕರಣ’ ಎಂಬ ಮತ್ತೊಂದು ಮಾತಿನೊಡನೆ ಮುಖಾಮುಖಿಯಾಗಿಸುತ್ತಾನೆ. ಅವನ ಪ್ರಕಾರ ನಾಟ್ಯವಾಗಲಿ ಮತ್ತಾವ ಕಲೆಯಾಗಲಿ ಬರಿಯ ಲೋಕಾನುಕರಣವಲ್ಲ; ಅದು ಭಾವಾನುಕೀರ್ತನ. ಇದಕ್ಕೆ ತನ್ನ ಗುರುವಿನ ಕೃತಿಯೇ ಆಧಾರವೆಂದು ಸಾರುತ್ತಾನೆ:
ತಸ್ಮಾದನಿಯತಾನುಕಾರೋ ನಾಟ್ಯಮಿತ್ಯಪಿ ನ ಭ್ರಮಿತವ್ಯಮ್ | ಅಸ್ಮದುಪಾಧ್ಯಾಯಕೃತೇ ಕಾವ್ಯಕೌತುಕೇಽಪ್ಯಯಮೇವಾಭಿಪ್ರಾಯೋ ಮಂತವ್ಯಃ | ನ ತ್ವನಿಯತಾನುಕಾರೋಽಪಿ ... ತಸ್ಮಾದ್ ಅನುವ್ಯವಸಾಯಾತ್ಮಕಂ ಕೀರ್ತನಂ ರೂಷಿತವಿಕಲ್ಪಸಂವೇದನಂ ನಾಟ್ಯಮ್ | ತದ್ವೇದನವೇದ್ಯತ್ವಾತ್ | ನ ತ್ವನುಕರಣರೂಪಮ್ | (ಅಭಿನವಭಾರತೀ, ಸಂ. ೧, ಪು. ೩೬)
ಇದೊಂದು ಮಹತ್ತರವಾದ ಕಾಣ್ಕೆ. ಅನುಕರಣವು ಭಾವದಿಂದ ಕೂಡಿರಬೇಕೆಂಬ ಕಟ್ಟಲೆಯೇನಿಲ್ಲ. ಒಂದು ವೇಳೆ ಹಾಗೆ ಕೂಡಿದ್ದರೂ ಅದು ಲೌಕಿಕವಲ್ಲದೆ ಅಲೌಕಿಕವೆನಿಸದು. ಒಟ್ಟಿನಲ್ಲಿ ಅನುಕರಣವು ಬಹಿರಂಗದ ಅಚ್ಚುಕಟ್ಟು. ಅನುಕೀರ್ತನ ಹೀಗಲ್ಲ. ಅದು ಭಾವೋನ್ನತಿ. ಅರ್ಥಾತ್, ರಸಸಿದ್ಧಿ. ಹೀಗಾಗಿ ಅಂತರಂಗದ ಪಾರಮ್ಯವಿಲ್ಲಿ ಅನಿವಾರ್ಯ. ಇದನ್ನು ಭರತನ ಆಶಯದಂತೆ ವಿಸ್ತರಿಸಿ ವಿವರಿಸಿದವನು ಭಟ್ಟತೌತ.
* * *
ರಸಸೂತ್ರದ ವಿವರಣೆಯಲ್ಲಿ ಲೋಲ್ಲಟ, ಶ್ರೀಶಂಕುಕ ಮತ್ತು ಭಟ್ಟನಾಯಕರ ಮತಗಳನ್ನೆಲ್ಲ ಸಾಧಾರವಾಗಿ ಖಂಡಿಸುತ್ತ ಅಭಿವ್ಯಕ್ತಿವಾದವನ್ನು ಮೆರೆಸುವಾಗ ಅಭಿನವಗುಪ್ತನು ಭಟ್ಟತೌತನನ್ನೇ ನಚ್ಚಿಕೊಂಡಿರುವುದು ಸ್ಪಷ್ಟವಾಗಿದೆ. ವಿಶೇಷತಃ ಶ್ರೀಶಂಕುಕನ ಅನುಮಿತಿವಾದವನ್ನು ನಿರಾಕರಿಸುವ ಭಾಗದಲ್ಲಿ ತೌತನ ಪಾಠವನ್ನೇ ಒಪ್ಪಿಸಿದಂತಿದೆ:
... ತದಿದಮಪ್ಯಂತಸ್ತತ್ತ್ವಶೂನ್ಯಂ ನ ವಿಮರ್ದಕ್ಷಮಮಿತ್ಯುಪಾಧ್ಯಾಯಾಃ | (ಅಭಿನವಭಾರತೀ, ಸಂ. ೧, ಪು. ೩೬)
ಈ ಪ್ರಕರಣವು ಕಲಾಮೀಮಾಂಸೆಯ ಇತಿಹಾಸದಲ್ಲಿ ಮುಖ್ಯವಾದುದು. ಅನುಭವಪರ್ಯವಸಾಯಿಯಾದ ರಸವು ಅನುಕರಣರೂಪದ್ದಲ್ಲ; ಆದುದರಿಂದಲೇ ಅದು ಬರಿಯ ಬೌದ್ಧಿಕ ಕಸರತ್ತಾಗದು ಎಂಬ ದರ್ಶನ ಕಲೆ ಮತ್ತು ವಿಚಾರಗಳ ವಿಭಾಗರೇಖೆಯನ್ನು ಸ್ಪಷ್ಟವಾಗಿ ಎಳೆದಿದೆ. ಇದು ಏಕಕಾಲದಲ್ಲಿ ನಾಟ್ಯದ ಅನುಕರಣವಾದಿಗಳನ್ನೂ ಕಾವ್ಯದ ಅನುಮಿತಿವಾದಿಗಳನ್ನೂ ಪರಾಸ್ತಗೊಳಿಸುವ ಮಹಾಯುಕ್ತಿ. ಶಂಕರಭಗವತ್ಪಾದರು ವಿವರ್ತವಾದವನ್ನು ಅವಲಂಬಿಸಿ ನ್ಯಾಯ, ವೈಶೇಷಿಕ, ಸಾಂಖ್ಯ ಮೊದಲಾದ ಕಾರ್ಯ-ಕಾರಣಭಾವಗಳ ವಲಯದಲ್ಲಿಯೇ ನಿಲ್ಲುವ ದರ್ಶನಗಳನ್ನು ನಿರಾಕರಿಸುವ ರೀತಿಗೆ ಇದನ್ನು ಹೋಲಿಸಬಹುದು.
* * *
ಭರತನು ನಿರೂಪಿಸುವ ನೃತ್ತಹಸ್ತಗಳನ್ನು ವಿವರಿಸುವಾಗ ಅಭಿನವಗುಪ್ತನು ‘ಅಭಿನಯ’ ಎಂಬ ಶಬ್ದವನ್ನು ಹೇಗೆ ಅರ್ಥೈಸಿಕೊಳ್ಳಬೇಕೆನ್ನುತ್ತ ತನ್ನ ಗುರುವಿನ ಅಭಿಪ್ರಾಯವನ್ನು ನಿವೇದಿಸುತ್ತಾನೆ:
ಅಭಿನಯಶಬ್ದಸ್ಯ ವೈಚಿತ್ರ್ಯಂ ಪಶ್ಯಂತ ಉಪಾಧ್ಯಾಯಾ ವ್ಯಾಚಕ್ಷತೇ | ಅಭಿಶಬ್ದೇನಾಭಿಮುಖ್ಯಮ್, ನಶಬ್ದೇನ ನಿಷೇಧೋ, ಯಶಬ್ದೇನ ಯದರ್ಥೋ ಲಕ್ಷ್ಯತೇ ತೇನ ಸ್ವಪಾರ್ಶ್ವೋನ್ಮುಖದೇಶಾಗಮನೇನಾಭಿಮುಖ್ಯಮ್ ಅಭಿಮುಖತ್ವಮ್, ಪಾರ್ಶ್ವಕ್ಷೇತ್ರೇ ತು ರೇಚನಪೂರ್ವಮ್ ಅಧೋಮುಖೋತ್ತಾನಪರಿವರ್ತನೇನ ಚ ಯಚ್ಛಬ್ದಾರ್ಥಮಭಿನಯೇದಿತಿ | (ಅಭಿನವಭಾರತೀ, ಸಂ. ೨, ಪು. ೨೨-೨೩)
ಮೇಲ್ನೋಟಕ್ಕೆ ಭಟ್ಟತೌತನ ಮಾತು ಬಲವಂತದ ವಿವರಣೆಯೆಂದು ತೋರಿದರೂ ಸಂದರ್ಭದ ಸೂಕ್ಷ್ಮತೆಯಿಂದ ಅದಕ್ಕೆ ಮಿಗಿಲಾದ ಸಾರ್ಥಕ್ಯ ಸಂದಿದೆ. ಸಾಮಾನ್ಯವಾಗಿ ಅಭಿನಯವೆಂದರೆ ‘ಅಭಿತಃ ನಯನಮ್’ (ಸಹೃದಯರೆಡೆಗೆ ಕೊಂಡೊಯ್ಯುವಿಕೆ) ಎಂದೇ ಅರ್ಥ. ಆದರೆ ಇಲ್ಲಿ ಅದನ್ನು ಬೇರೊಂದು ರೀತಿ ವಿವರಿಸಿರುವುದು ಕುತೂಹಲಕಾರಿಯಾಗಿದೆ. ಇದಕ್ಕೆ ಕಾರಣ ಇಲ್ಲಿರುವುದು ಇಡಿಯ ಕಲೆಯ ಸಾಕಾರವಾದ ವಿಭಾವಾನುಭಾವಸಾಮಗ್ರಿಯನ್ನು ಸಹೃದಯರಿಗೆ ಮುಟ್ಟಿಸುವ ಪ್ರಕ್ರಿಯೆಯಲ್ಲ; ಆಂಗಿಕಾಭಿನಯದ ಒಂದು ಅಂಶವಾದ ನೃತ್ತಹಸ್ತಗಳನ್ನು ನಟ-ನರ್ತಕರು ಸೌಂದರ್ಯಕ್ಕೆ ಇಂಬೀಯುವಂತೆ ಹೇಗೆ ಬಳಸಿಕೊಳ್ಳಬೇಕೆಂಬ ವಿವೇಕ. ಅಭಿನಯ ಎಂದೊಡನೆಯೇ ಆಭಿಮುಖ್ಯ ಎಂದು ಭಾವಿಸಿ ಎಲ್ಲ ನೃತ್ತಹಸ್ತಗಳನ್ನೂ ನೋಡುಗರ ನೇರಕ್ಕೇ ಸಂವಾದಿಯಾಗಿಸುವುದು ಸೊಗಸಲ್ಲ. ಮೂರು ಆಯಾಮಗಳ ನರ್ತನದ ಶೋಭೆಯನ್ನು ಮನಗಾಣಿಸಲು ಅನುವಾಗುವಂತೆ ಎಲ್ಲ ಕಡೆಗಳಿಂದಲೂ ಅವು ಮೈದಾಳಬೇಕು. ಇದು ನೃತ್ತ-ನೃತ್ಯಗಳಿಗೆ ಶಿಲ್ಪದ ಸೊಗಸಿನೊಡನೆ ಗತಿಶೀಲತೆಯ ಶೋಭೆಯನ್ನೂ ನೀಡುತ್ತದೆ. ಹೀಗೆ ನರ್ತನಕಲೆಯ ಪ್ರಾಯೋಗಿಕ ಸೂಕ್ಷ್ಮಗಳನ್ನು ಬಲ್ಲ ಜಾಣ್ಮೆ ಭಟ್ಟತೌತನದು.
[1] “ಯತ್ರ ಭಾಷಾ ನಿಯಮೇನೋಕ್ತಾ ತತ್ರ ಪ್ರಾಥಮ್ಯಾತ್ ಸಂಸ್ಕೃತೈವ | ಯಥೇಚ್ಛಮಿತ್ಯನ್ಯೇ | ಸ್ತ್ರೀಪುಂಭಾವಾಶ್ರಯತ್ವಾತ್ ಪ್ರಾಕೃತಭಾಷೈವೇತ್ಯಪರೇ | ಸೈಂಧವ್ಯೇತಿ ಪ್ರಕರಣಾದಿತಿ ಭಟ್ಟತೋತಃ” (ಅಭಿನವಭಾರತೀ, ಗಾಯಕವಾಡ್ ಸಂಸ್ಕರಣ, ಸಂ. ೪, ಪು. ೨೮೨). ಇಲ್ಲಿ ಅಭಿನವಗುಪ್ತನು ಭಟ್ಟತೌತನ ಮಾತುಗಳನ್ನು ಮಿಕ್ಕ ಶಾಸ್ತ್ರಕಾರರ ಅಭಿಪ್ರಾಯಗಳಿಗೆ ವಿರುದ್ಧವಾಗಿ ಉಲ್ಲೇಖಿಸುತ್ತಿದ್ದಾನೆ. ಮಿಕ್ಕವರ ಪ್ರಕಾರ ಸೈಂಧವಕದ ಭಾಷೆ ಸೈಂಧವಿ ಆಗಬೇಕೆಂದಿಲ್ಲ. ಆದರೆ ತೌತನ ಪ್ರಕಾರ ಆ ಗೀತಕ್ಕೆ ಅದೇ ಭಾಷೆಯೇ ಆಗಬೇಕು. ಹೀಗೆ ರಚನೆಯೊಂದಕ್ಕೆ ನಿರ್ದಿಷ್ಟ ಭಾಷೆಯನ್ನು ವಿಧಿಸುತ್ತಿರುವ ಮಾತಿನಿಂದಲೇ ವಿವಿಧ ರಚನೆಗಳಿಗೆ, ವಿವಿಧ ಪಾತ್ರಗಳಿಗೆ ವಿವಿಧ ಭಾಷೆಗಳೆಂಬ ಅವನ ಇಂಗಿತ ತಾನಾಗಿ ಸ್ಫುರಿಸುತ್ತದೆ.
ಗ್ರಂಥಋಣ
• ಈಶಾದಿದಶೋಪನಿಷದಃ ಶಾಂಕರಭಾಷ್ಯಸಮೇತಾಃ. ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೬೪
• ಋಗ್ವೇದಸಂಹಿತಾ (ಸಂ. ಶ್ರೀಪಾದ ದಾಮೋದರ ಸಾತವಳೇಕರ್). ಆರ್ಯ ಸಾಹಿತ್ಯಮಂಡಲ, ಅಜಮೇರ್, ೧೯೫೨
• ಕಲ್ಪಲತಾವಿವೇಕ (ಸಂ. ಮುರಾರಿಲಾಲ್ ನಾಗರ್, ಹರಿಶಂಕರಶಾಸ್ತ್ರೀ). ಲೇಖಕ ಅಜ್ಞಾತ. ಭಾರತೀಯ ಸಂಸ್ಕೃತಿ ವಿದ್ಯಾಮಂದಿರ, ಅಹಮದಾಬಾದ್, ೧೯೬೮
• ಕಾನೂರು ಹೆಗ್ಗಡಿತಿ. ಕುವೆಂಪು. ಉದಯರವಿ ಪ್ರಕಾಶನ, ಮೈಸೂರು, ೨೦೦೦
• ಕಾವ್ಯಪ್ರಕಾಶ (ಶ್ರೀಧರನ ‘ವಿವೇಕ’ವ್ಯಾಖ್ಯಾನದ ಸಮೇತ; ಸಂ. ಎಸ್. ಪಿ. ಭಟ್ಟಾಚಾರ್ಯ; ಎರಡು ಸಂಪುಟಗಳು). ಮಮ್ಮಟ. ಕಲ್ಕತ್ತಾ ಸಂಸ್ಕೃತ ಮಹಾವಿದ್ಯಾಲಯ ಸಂಶೋಧನಮಾಲಿಕೆ, ಕಲ್ಕತ್ತಾ, ೧೯೫೯, ೧೯೬೧
• ಕಾವ್ಯಪ್ರಕಾಶ (ಚಂಡೀದಾಸನ ‘ದೀಪಿಕಾ’ವ್ಯಾಖ್ಯಾನದ ಸಮೇತ; ಸಂ. ಎಸ್. ಪಿ. ಭಟ್ಟಾಚಾರ್ಯ; ಸಂ. ೨). ಮಮ್ಮಟ. ವಾರಾಣಸೀ ಸಂಸ್ಕೃತವಿಶ್ವವಿದ್ಯಾಲಯ, ವಾರಾಣಸೀ, ೧೯೬೫
• ಕಾವ್ಯಪ್ರಕಾಶ (ಶ್ರೀವಿದ್ಯಾಚಕ್ರವರ್ತಿಯ ‘ಸಂಪ್ರದಾಯಪ್ರಕಾಶಿನೀ’, ಭಟ್ಟಗೋಪಾಲನ ‘ಸಾಹಿತ್ಯಚೂಡಾಮಣಿ’ಗಳ ಸಮೇತ; ಸಂ. ೧; ಸಂ. ರಾ. ಹರಿಹರಶಾಸ್ತ್ರೀ). ಮಮ್ಮಟ. ಅನಂತಶಯನಸಂಸ್ಕೃತಗ್ರಂಥಾವಲಿ, ತಿರುವನಂತಪುರ, ೧೯೨೬
• ಕಾವ್ಯಮೀಮಾಂಸಾ (ಸಂ. ಸಿ. ಡಿ. ದಲಾಲ್, ಆರ್. ಎ. ಶಾಸ್ತ್ರೀ; ಪರಿಷ್ಕಾರ: ಕೆ. ಎಸ್. ರಾಮಸ್ವಾಮಿ ಶಾಸ್ತ್ರೀ). ರಾಜಶೇಖರ. ಗಾಯಕವಾಡ ಪ್ರಾಚ್ಯವಿದ್ಯಾಸಂಸ್ಥೆ, ವಡೋದರಾ, ೧೯೩೪
• ಕಾವ್ಯಾಲಂಕಾರಸಾರಸಂಗ್ರಹ (ಪ್ರತೀಹಾರೇಂದುರಾಜನ ವ್ಯಾಖ್ಯೆಯ ಸಮೇತ; ಸಂ. ನಾರಾಯಣ ದಶರಥ ಬನಹಟ್ಟಿ). ಉದ್ಭಟ. ಭಂಡಾರಕರ್ ಪ್ರಾಚ್ಯವಿದ್ಯಾಸಂಸ್ಥೆ, ಪುಣೆ, ೧೯೮೨
• ಕಾವ್ಯಾಲಂಕಾರಸೂತ್ರವೃತ್ತಿ (ಗೋಪೇಂದ್ರನ ‘ಕಾಮಧೇನು’ವ್ಯಾಖ್ಯೆಯ ಸಮೇತ; ಸಂ. ಕೇದಾರನಾಥ ಮಿಶ್ರ). ವಾಮನ. ಚೌಖಂಬಾ ಅಮರಭಾರತೀ ಪ್ರಕಾಶನ, ವಾರಾಣಸಿ, ೧೯೭೯
• ಕ್ಷೇಮೇಂದ್ರಲಘುಕಾವ್ಯಸಂಗ್ರಹ (ಸಂ. ಶ್ರೀನಿವಾಸಶರ್ಮಾ ಮತ್ತು ಕೆ. ವಿ. ಸೂರ್ಯಪ್ರಕಾಶ). ಕ್ಷೇಮೇಂದ್ರ. ಸಂಸ್ಕೃತಪರಿಷತ್, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್, ೨೦೦೯
• ಚಂದ್ರಾಲೋಕ (ಸಂ. ಮಹಾದೇವ ಗಂಗಾಧರ ಬಾಕ್ರೆ). ಜಯದೇವ. ಗುಜರಾತಿ ಮುದ್ರಣಾಲಯ, ಬಾಂಬೆ, ೧೯೩೯
• ಧ್ವನ್ಯಾಲೋಕ (ಸಂಪಾದನೆ ಮತ್ತು ಆಂಗ್ಲ ಅನುವಾದ: ಕೆ. ಕೃಷ್ಣಮೂರ್ತಿ). ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೮೨
• ಧ್ವನ್ಯಾಲೋಕ (ಅಭಿನವಗುಪ್ತನ ‘ಲೋಚನ’ದ ಸಮೇತ; ಸಂ. ಪಂಡಿತ ದುರ್ಗಾಪ್ರಸಾದ, ಕಾಶೀನಾಥ ಪಾಂಡುರಂಗ ಪರಬ್. ಪರಿಷ್ಕಾರ: ವಾಸುದೇವ ಲಕ್ಷ್ಮಣಶಾಸ್ತ್ರೀ ಪಣಶೀಕರ್). ಮುನ್ಶೀರಾಮ್ ಮನೋಹರಲಾಲ್ ಪ್ರಕಾಶನ, ನವದೆಹಲಿ, ೧೯೯೮
• ನಾಟ್ಯಶಾಸ್ತ್ರ (ಅಭಿನವಗುಪ್ತನ ‘ಅಭಿನವಭಾರತಿ’ಯ ಸಮೇತ; ಸಂ. ಆರ್. ಎಸ್. ನಾಗರ್; ೪ ಸಂಪುಟಗಳು). ಭರತಮುನಿ. ಪರಿಮಳ ಪ್ರಕಾಶನ, ದೆಹಲಿ, ೧೯೮೮
• ನಾಟ್ಯಶಾಸ್ತ್ರ (ಅಭಿನವಗುಪ್ತನ ‘ಅಭಿನವಭಾರತಿ’ಯ ಸಮೇತ; ಸಂ. ಕೆ. ಕೃಷ್ಣಮೂರ್ತಿ; ಸಂ. ೧). ಭರತಮುನಿ. ಗಾಯಕವಾಡ ಪ್ರಾಚ್ಯವಿದ್ಯಾಸಂಸ್ಥೆ, ವಡೋದರಾ, ೧೯೯೨
• ಭಾರತೀಯ ಋಷಿ ಪರಂಪರೆ ಮತ್ತು ಸಂಸ್ಕೃತ ಸಾಹಿತ್ಯ. ಪಾದೆಕಲ್ಲು ನರಸಿಂಹ ಭಟ್ಟ. ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು, ೨೦೦೩
• ಭಾರತೀಯ ಕಾವ್ಯಮೀಮಾಂಸೆ. ತೀ. ನಂ. ಶ್ರೀಕಂಠಯ್ಯ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೭೩
• ಭಾರತೀಲೋಚನ. ಆರ್. ಗಣೇಶ್. ಪ್ರೇಕ್ಷಾ ಪ್ರತಿಷ್ಠಾನ, ಬೆಂಗಳೂರು, ೨೦೧೮
• ಭಾವಪ್ರಕಾಶನ, (ಸಂ. ಯದುಗಿರಿ ಯತಿರಾಜ ಸ್ವಾಮಿ ಮತ್ತು ಕೆ. ಎಸ್. ರಾಮಸ್ವಾಮಿಶಾಸ್ತ್ರೀ) ಶಾರದಾತನಯ. ಪ್ರಾಚ್ಯವಿದ್ಯಾಸಂಸ್ಥೆ, ಬರೋಡಾ, ೧೯೬೮
• ವಕ್ರೋಕ್ತಿಜೀವಿತ (ಸಂಪಾದನೆ ಮತ್ತು ಆಂಗ್ಲಾನುವಾದ: ಕೆ. ಕೃಷ್ಣಮೂರ್ತಿ). ಕುಂತಕ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೭
• ವಾಗರ್ಥವಿಸ್ಮಯಾಸ್ವಾದಃ. ಆರ್. ಗಣೇಶ್. ಪ್ರೇಕ್ಷಾ ಪ್ರತಿಷ್ಠಾನ, ಬೆಂಗಳೂರು, ೨೦೧೮
• ವ್ಯಕ್ತಿವಿವೇಕ. ಮಹಿಮಭಟ್ಟ. ಚೌಖಂಬಾ ಸಂಸ್ಕೃತಸರಣಿ ಕಾರ್ಯಾಲಯ, ವಾರಾಣಸಿ, ೧೯೩೬
• ಸಾಹಿತ್ಯದರ್ಪಣ. ವಿಶ್ವನಾಥ. ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೭೭
• ಸೌಂದರನಂದ (ಸಂ. ಸೂರ್ಯನಾರಾಯಣ ಚೌಧರಿ). ಅಶ್ವಘೋಷ. ಮೋತಿಲಾಲ್ ಬನಾರಸಿದಾಸ್ ಪ್ರಕಾಶನ, ದೆಹಲಿ, ೧೯೮೬
• ಹದನು-ಹವಣು. ಆರ್. ಗಣೇಶ್. ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು, ೨೦೧೮
- Abhinavagupta and his Works. Raghavan, V. Chaukhambha Orientalia, Varanasi, 1981
- Bhoja’s Śrṅgāraprakāśa. Raghavan, V. Punarvasu, Madras, 1978
- Essays in Sanskrit Criticism. Krishnamoorthy, K. Karnatak University, Dharwar, 1974
- Some Aspects of Literary Criticism in Sanskrit. Sankaran, A. Oriental Books Reprint Corporation, New Delhi, 1973
- Studies in Indian Poetics. Bhattacharyya, Sivaprasad. Firma KLM Publishers, Calcutta, 1981
To be continued.