ಪೈಗಳ ಕವಿತೆಯಲ್ಲಿ ಭಕ್ತಿಯ ಮತ್ತೊಂದು ಆಯಾಮವಾದ ಹೃದಯವಿಸ್ತಾರ, ಆತ್ಮನಿವೇದನೆ ಮತ್ತು ಭೂತಾನುಕಂಪೆಗಳನ್ನು ಕೂಡ ಗಮನಿಸಬಹುದು. ಅವರು ಮೇಲ್ನೋಟಕ್ಕೆ ಜಿಗುಟಾದ ಅಭಿಪ್ರಾಯಗಳನ್ನು ಹೊಂದಿದ ನಿರ್ಭೀತ ವಿದ್ವಾಂಸರೆಂದು ತೋರಿದರೂ ಅಂತರಂಗದಲ್ಲಿ ಅವರದು ಸಮಾರ್ದ್ರ ಮನಸ್ಸು. ಹೀಗಾಗಿ ಜಗತ್ತಿನಲ್ಲಿ ಎಲ್ಲಿ ನೋವು ಕಂಡರೂ ಎಲ್ಲಿ ಕಷ್ಟ ಕೆರಳಿದರೂ ಅವರ ಹೃದಯ ಕರಗುತ್ತದೆ, ಅವರ ಮನಸ್ಸು ಮರುಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಹಲವು ಕವಿತೆಗಳಿವೆ. ತುರ್ಕಿಯ ಪರವಾಗಿ ಅವರು ಮಾಡಿದ ಪ್ರಾರ್ಥನೆಯನ್ನು ಈಗಾಗಲೇ ನೋಡಿದ್ದೇವೆ. ‘ಹೊಲೆಯನು ಯಾರು?’ (ಪು. ೧೬) ಎಂಬ ಕವಿತೆಯಲ್ಲಿ ಜನ್ಮಕ್ಕಂಟಿ ಬಂದ ಹೊಲೆ ಎಂಬುದು ಇಲ್ಲವೆಂಬ ಧೀರ ದರ್ಶನಕ್ಕೆ ತಮ್ಮ ದನಿಯನ್ನು ಪೈಗಳು ಜೋಡಿಸುತ್ತಾರೆ. ‘ಅಣು ಬಾಂಬು’ (ಪು. ೧೯೩), ‘ಹಿರೋಶಿಮಾ’ (ಪು. ೨೩೦) ಎಂಬ ಕವಿತೆಗಳಲ್ಲಿ ಹಿರೋಶಿಮಾ-ನಾಗಸಾಕಿಗಳ ದುರಂತಕ್ಕಾಗಿ ಕಂಬನಿ ಮಿಡಿಯುತ್ತಾರೆ. ‘ಈ ಮಹಾಯುದ್ಧದ ನಿಜ ವೀರರು’ (ಪು. ೧೯೭) ಎಂಬ ಸಾನೆಟ್ಟಿನಲ್ಲಿ ಸ್ವಾತಂತ್ರ್ಯಯೋಧರ ಬಲಿದಾನಕ್ಕೆ ಅಶ್ರುತರ್ಪಣ ನೀಡುತ್ತಾರೆ. ‘ನವಾಖಲಿಗೆ’ (ಪು. ೨೨೯) ಎಂಬ ರಚನೆಯಲ್ಲಿ ನೌಖಾಲಿಯಲ್ಲಿ ನಡೆದ ನರಮೇಧವನ್ನು ಕುರಿತು ಸಂಕಟ ಪಡುತ್ತಾರೆ. ‘೩೫,೦೦,೦೦೦’ (ಪು. ೨೩೯) ಎಂಬ ಸಾನೆಟ್ಟಿನಲ್ಲಿ ಬಂಗಾಳದ ಬರಗಾಲದಲ್ಲಿ ಅನ್ನವಿಲ್ಲದೆ ಅಳಿದವರಿಗಾಗಿ ಮರುಗುತ್ತಾರೆ. ‘ಮುಗಿದ ಯುದ್ಧ’ (ಪು. ೩೦೮) ಎಂಬ ಕವಿತೆಯಲ್ಲಿ ಯುದ್ಧದ ದುಷ್ಪರಿಣಾಮಗಳನ್ನು ನೆನೆದು ನೊಂದುಕೊಳ್ಳುತ್ತಾರೆ. ‘ಪ್ರತ್ಯೇಕ ಮನುಜನಿಗೆ, ಪ್ರತ್ಯೇಕ ಜನಗಳಿಗೆ’ (ಪು. ೩೧೯) ಎಂಬ ಸಾನೆಟ್ಟಿನಲ್ಲಿ ಸ್ವಾರ್ಥ-ಪರಾರ್ಥಗಳ ಮೀಮಾಂಸೆ ನಡಸಿ ಪ್ರತ್ಯೇಕತೆಯ ಪಿಡುಗನ್ನು ಕುರಿತು ಎಚ್ಚರಿಸುತ್ತಾರೆ. ಹೀಗೆಂದ ಮಾತ್ರಕ್ಕೆ ಪೈಗಳಿಗೆ ಲೋಕಪ್ರಸಿದ್ಧವಾದ ದೊಡ್ಡ ಪ್ರಮಾಣದ ನೋವು-ನಷ್ಟಗಳಲ್ಲಿ ಮಾತ್ರ ಕಾಳಜಿ ಎಂದಲ್ಲ. ‘ಅಂದಿನಿಂದಾಕೆ ನಕ್ಕಿಲ್ಲ ಅತ್ತಿಲ್ಲ’ (ಪು. ೧೯೫) ಎಂಬ ಸಾನೆಟ್ಟಿನಲ್ಲಿ ಅವರು ಮೂರು ಎಳೆಯ ಮಕ್ಕಳ ವಿಧವೆ ತಾಯಿ ತನ್ನ ಗಂಡ ತೀರಿಕೊಂಡ ಒಂದು ತಿಂಗಳಿನೊಳಗೆ ಹಲವು ಆಕಸ್ಮಿಕಗಳಲ್ಲಿ ಒಂದೇ ದಿನ ಮೂವರು ಮಕ್ಕಳನ್ನೂ ಕಳೆದುಕೊಂಡು ಶವಪ್ರಾಯಳಾಗಿ ಬಾಳುವ ಗೋಳನ್ನು ಹೃದಯಭೇದಕವಾಗಿ ಚಿತ್ರಿಸಿದ್ದಾರೆ. ಈ ಕವಿತೆಯ ಬಡ ತಾಯಿಯ ನೋವನ್ನು ಪೈಗಳು ಅಸಾಮಾನ್ಯವಾದ ಅಡಕದಿಂದ ಹವಣಿಸಿಕೊಟ್ಟ ಪರಿ ಮೈ ಜುಮುಗುಟ್ಟಿಸುವಂತಿದೆ. ಇದೇ ರೀತಿ ‘ತೆಂಕಾಫ್ರಿಕದ ಹಳ್ಳಿ’ (ಪು. ೨೩೧) ಎಂಬ ಸಾನೆಟ್ಟಿನಲ್ಲಿ ದಕ್ಷಿಣ ಆಫ್ರಿಕಾದ ಒಬ್ಬ ಅಳಿದ ಸೈನಿಕನ ತಾಯಿಯ ಗೋಳನ್ನು ಶಕುನಪೂರ್ಣವಾಗಿ ನಿರೂಪಿಸಿದ್ದಾರೆ. ಅಷ್ಟೇಕೆ, ‘ಪಶ್ಚಾತ್ತಾಪ’ (ಪು. ೨೩೨) ಎಂಬ ಕವಿತೆಯೊಂದರಲ್ಲಿ ತಾವು ದುಡುಕಿ ಕೊಂದ ಹೆಸರಿಲ್ಲದ ಒಂದು ಹುಳುವಿನ ಸಾವಿಗಾಗಿ ನಿರ್ದಾಕ್ಷಿಣ್ಯ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ. ಈ ಕವಿತೆಯನ್ನು ಪೈಗಳು ಮುಗಿಸುವುದು ಹೀಗೆ: “ಅದಕೆ ಸದ್ಗತಿ ಈಯ, ಕ್ಷಮೆಯ ನನಗೀಯ - ಕ್ಷಮೆಯ ಮುಂಗುರುತು ಶಾಂತಿಯ ತಾರ ಜೀಯ!” ಒಂದು ಮಾತಿನಲ್ಲಿ ಹೇಳುವುದಾದರೆ, ಪೈಗಳ ಕಾವ್ಯದ ಅಧಿಕ ಭಾಗ ವಿವಿಧ ರೂಪದ ಭಕ್ತಿ; ಮತ್ತದನ್ನು ಬಳಸಿಬರುವ ಕರುಣೆ, ದಯೆ, ಪಶ್ಚಾತ್ತಾಪ, ಆರಾಧನೆ ಮತ್ತು ಆತ್ಮನಿವೇದನೆ.
ನಮ್ಮ ಆಲಂಕಾರಿಕರು ಕಾರ್ಯಕಾರಣಭಾವದಿಂದ ಬದ್ಧವಾದ ವಸ್ತುವಿನ ಘಟನಾತ್ಮಕ ವಿಸ್ತರಣವನ್ನು ‘ಇತಿವೃತ್ತ’ವೆಂದು ಹೇಳುತ್ತಾರೆ. ಬಿಡಿಗವಿತೆಗಳಲ್ಲಿ ವಸ್ತುವು ಇತಿವೃತ್ತವಾಗಿ ಬೆಳೆಯುವ ಅವಕಾಶ ಕಡಮೆ. ಆದರೆ ನವೋದಯದ ಅನೇಕ ಕವಿಗಳು ಕಿರುಗವಿತೆಗಳಲ್ಲಿಯೂ ಇತಿವೃತ್ತಾತ್ಮಕವಾಗಿ ಕಥನವನ್ನು ಶಿಲ್ಪಿಸಿರುವುದುಂಟು. ಇದಕ್ಕೆ ಗೋವಿಂದ ಪೈಗಳೂ ಹೊರತಲ್ಲ. ಅವರ ‘ಕವಿತಾವತಾರ’ (ಪು. ೩೦), ‘ಯೇಸು-ಕೃಷ್ಣ’ (ಪು. ೩೮), ‘ಹೆಂಗಸು’ (ಪು. ೮೩), ‘ಅಂದಿನಿಂದಾಕೆ ನಕ್ಕಿಲ್ಲ ಅತ್ತಿಲ್ಲ’ (ಪು. ೧೯೫) ‘ಎಣ್ಣೆಯ ಬಟ್ಟಲು’ (ಪು. ೧೯೯), ‘ತುರೀಯ’ (ಪು. ೨೨೮), ‘ತೆಂಕಾಫ್ರಿಕದ ಹಳ್ಳಿ’ (ಪು. ೨೩೧), ‘ಭಸ್ಮಾಸುರ’ (ಪು. ೨೪೪). ‘ಶ್ವಪಚನನು ಜತೆಗೊಳದೆ ದಿವಕೇರ್ವೆನೆಂತು?’ (ಪು. ೨೬೦), ‘ಶೂದ್ರರ್ಷಿ ಕವಷ’ (ಪು. ೨೬೨) ಮುಂತಾದ ಹತ್ತಾರು ಕವಿತೆಗಳಲ್ಲಿ ಇತಿವೃತ್ತದ ಮಟ್ಟಕ್ಕೆ ವಸ್ತು ಬೆಳೆಯುವುದನ್ನು ಕಾಣಬಹುದು. ಆದರೆ ಇದನ್ನು ಪೂರ್ಣ ಪ್ರಮಾಣದಲ್ಲಿ ಕಾಣುವುದು ಕಥನಕವನಗಳಲ್ಲಿ.
ನವೋದಯದ ಕವಿಗಳ ವೈಶಿಷ್ಟ್ಯಗಳಲ್ಲೊಂದು ಕಥನಕವನ. ಇದು ಬಿಡಿಗವಿತೆಗೂ ಖಂಡಕಾವ್ಯಕ್ಕೂ ನಡುವಣ ಪ್ರಕಾರವೆಂದು ಹೇಳಬಹುದು. ಬಿಡಿಗವಿತೆಯಲ್ಲಿ ಇತಿವೃತ್ತದ ಹಂಗಿಲ್ಲದಿದ್ದರೆ ಕಥನಕವಿತೆಯಲ್ಲಿ ಉಕ್ತಿವೈಚಿತ್ರ್ಯದ ಮತ್ತು ಭಾವವಿಸ್ತರಣದ ಅನಿವಾರ್ಯತೆ ಇರುವುದಿಲ್ಲ. ಕಥನಕವನಕ್ಕೆ ಪಾತ್ರಪುಷ್ಟಿ, ಉಕ್ತಿವೈಚಿತ್ರ್ಯ ಮತ್ತು ಭಾವಸಮೃದ್ಧಿಗಳು ಸೇರಿದರೆ ಅದು ಖಂಡಕಾವ್ಯದತ್ತ ಸಾಗುವುದೆಂದು ಹೇಳಬಹುದು. ಕಥನಕವಿತೆಯು ಸ್ಮರಣೀಯತೆಗಾಗಿ ಛಂದಸ್ಸನ್ನು ಹೆಚ್ಚಾಗಿ ನೆಮ್ಮುವುದಲ್ಲದೆ ಉಕ್ತಿವಕ್ರತೆಗೆ ಅಲ್ಲ. ಈ ದೃಷ್ಟಿಯಿಂದ ಕಂಡಾಗ ಕಥನಕವನದ ರಚನಾಕ್ರಮದಲ್ಲಿ ಸರಳತೆ ಹೆಚ್ಚು; ಆದರೆ ಪ್ರಬಂಧಧ್ವನಿಗೆ ಕೊರತೆ ಇಲ್ಲ. ಪ್ರತಿಭಾನ್ವಿತನಾದ ಕವಿ ಅಲ್ಲಲ್ಲಿ ಹಿತ-ಮಿತವಾದ ಅಲಂಕಾರಗಳನ್ನು ಹೊಂದಿಸುವನಾದರೂ ಅವು ಒಟ್ಟಂದದ ಕಥನಕ್ಕೆ ತೊಡಕಾಗುವಷ್ಟು ಬೆಳೆಯುವುದಿಲ್ಲ. ಪೈಗಳು ಈ ಬಗೆಯ ಐದು ಕಥನಕವನಗಳನ್ನು ರಚಿಸಿದ್ದಾರೆ: ‘ಭಿಕ್ಷುವೂ ಪಕ್ಷಿಯೂ’ (ಪು. ೨೪೭), ‘ಮಾತಂಗಿ’ (ಪು. ೨೫೩), ‘ವಾಸವದತ್ತೆ’ (ಪು. ೨೬೮), ‘ಹಳ್ಳಿಯ ಹುಡುಗಿ’ (ಪು. ೨೭೪), ‘ಹುಲ್ಲುಕಟಿಗ’ (ಪು. ೨೭೬೯). ಈ ಎಲ್ಲ ಕಥನಕವಿತೆಗಳಲ್ಲಿಯೂ ಸಿದ್ಧ ಪಾತ್ರಗಳಿವೆಯೇ ಹೊರತು ಸಾಧ್ಯಮಾನ ಪಾತ್ರಗಳಿಲ್ಲ. ಇದು ಕಥನಕವಿತೆಯ ಒಂದು ಲಕ್ಷಣವೂ ಹೌದೆನ್ನಬಹುದು. ಆದುದರಿಂದಲೇ ಇಲ್ಲಿ ಕಥೆಯ ಕಾವ್ಯಕ್ಕಿಂತ ಸಂದೇಶ ಮುಖ್ಯವೆನಿಸುತ್ತದೆ. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಬರುವ ಉಪಾಖ್ಯಾನಗಳಿಗೆ ನವೋದಯದ ಕಥನಕವಿತೆ ಸಂವಾದಿ ಎನ್ನಬಹುದು.
‘ಭಿಕ್ಷುವೂ ಪಕ್ಷಿಯೂ’ ಎಂಬ ಕವಿತೆಯಲ್ಲಿ ರತ್ನವನ್ನು ನುಂಗಿದ ಪಕ್ಷಿಯೊಂದನ್ನು ಕಾಪಾಡಲು ರತ್ನಾಪಹಾರದ ಅಪವಾದವನ್ನು ತನ್ನ ಮೇಲೆ ಹಾಕಿಕೊಂಡು ಆ ರತ್ನದ ಸ್ವಾಮಿಯಾದ ಚಿನಿವಾರನ ಆಗ್ರಹಕ್ಕೆ ತುತ್ತಾಗುವ ತಿಷ್ಯನ ವ್ಯಕ್ತಿತ್ವ ಪ್ರಧಾನವಾಗಿದೆ. ಪಕ್ಷಿಯ ಪ್ರಾಣವನ್ನು ಕಾಪಾಡಲು ತನ್ನ ಒಡಲನ್ನೇ ಪಣವಿಟ್ಟ ಈತನ ಅಹಿಂಸಾವ್ರತ ಮತ್ತು ಜೀವದಯೆಗಳೇ ಇಲ್ಲಿಯ ಸಂದೇಶ. ಚಿನಿವಾರನ ಪೆಟ್ಟುಗಳಿಗೆ ಗಾಯಗೊಂಡ ಭಿಕ್ಷುವಿನ ನೆತ್ತರನ್ನು ಸವಿಯಲು ಬಂದ ಪಕ್ಷಿ ಚಿನಿವಾರನ ಮುನಿಸಿಗೆ ಸಿಕ್ಕು ಸತ್ತಾಗಲಷ್ಟೇ ತಿಷ್ಯನು ವಾಸ್ತವವನ್ನು ಹೇಳುತ್ತಾನೆ. ಸತ್ಯವನ್ನರಿತು ಪಶ್ಚಾತ್ತಪಿಸುವ ಚಿನಿವಾರನನ್ನು ಭಿಕ್ಷು ಮನ್ನಿಸುತ್ತಾನೆ. ಇದು ಅವನ ಕ್ಷಮಾಗುಣಕ್ಕೆ ಸಾಕ್ಷಿ. ಹೀಗೆ ಇಡಿಯ ಕಥನ ಸಿದ್ಧ ಸಾಮಗ್ರಿಯ ಹಂದರದ ಮೇಲೆ ಬೆಳೆದು ಸಂದೇಶಸುಮವನ್ನು ತಳೆಯುತ್ತದೆ. ‘ಮಾತಂಗಿ’ಯಲ್ಲಿ ನಿಮ್ನ ವರ್ಗದ ಹೆಣ್ಣೊಬ್ಬಳಿಗೆ ಬುದ್ಧನ ಶಿಷ್ಯ ಆನಂದ ತೋರಿದ ಪ್ರೀತಿ-ವಾತ್ಸಲ್ಯಗಳು ಅವನತ್ತಲೇ ಅನುರಾಗದ ರೂಪದಿಂದ ಬಂದಾಗ ಆತನು ಬುದ್ಧನ ನೆರವಿನಿಂದ ಅವಳಿಗೆ ವಿವೇಕವನ್ನು ಕರುಣಿಸಿದ ಕಥೆಯಿದೆ. ಇಲ್ಲಿಯಾದರೂ ಇರುವುದು ಸಿದ್ಧ ಪಾತ್ರಗಳೇ. ಸಮಾನತೆ, ಸಹಾನುಭೂತಿ, ಮಾನುಷಪ್ರೀತಿ ಮುಂತಾದ ಸದ್ಭಾವಗಳು ಇಲ್ಲದ ಸಲ್ಲದ ನಿರೀಕ್ಷೆಗಳಿಗೆ ಎಡೆಯಾದರೆ ಅದು ಹೇಗೆ ಜೀವಕ್ಕೆ ಉರುಳಾಗುವುದೆಂಬ ಎಚ್ಚರವೂ ಇದನ್ನು ಕಳಚಿಕೊಂಡು ಸಾಗುವ ನಯವೂ ಕಥನದ ಸಂದೇಶವಾಗಿ ಮೂಡುತ್ತವೆ. ಈ ಹದವನ್ನು ಕಾಣಿಸಿಕೊಡುವಲ್ಲಿ ಗೋವಿಂದ ಪೈಗಳ ಕಾವ್ಯಮಾರ್ಗ ಅದ್ಭುತವಾದ ಸಿದ್ಧಿಯನ್ನು ಕಂಡಿದೆ. ಕಥನಕ್ಕೆ ಬೇಕಿರುವ ಸಾಮತಿಗಳು, ದೃಷ್ಟಾಂತಗಳು, ವಾಗ್ರೂಢಿಗಳು ಇಲ್ಲಿಯ ಇತಿವೃತ್ತವಸ್ತ್ರಕ್ಕೆ ಜರಿಯಂಚುಗಳಂತೆ ನೇಯ್ದುಕೊಂಡಿವೆ. ‘ವಾಸವದತ್ತೆ’ಯಲ್ಲಿ ಈ ಮುನ್ನ ಕಂಡ ಎರಡು ಕವಿತೆಗಳಿಗಿಂತ ಮಿಗಿಲಾದ ಮತ್ತೂ ಸೂಕ್ಷ್ಮವಾದ ಭಾವಗಳನ್ನು ವಿವೇಚಿಸುವ ಇತಿವೃತ್ತವಿದೆ. ‘ಭಿಕ್ಷುವೂ ಪಕ್ಷಿಯೂ’ ಅರ್ಥದ ಅನರ್ಥವನ್ನೂ ಜೀವದಯೆಯ ಅನುಸಂಧಾನದಲ್ಲಿ ಎದುರಾಗುವ ಅಗ್ನಿದಿವ್ಯವನ್ನೂ ವರ್ಣಿಸಿದರೆ, ‘ಮಾತಂಗಿ’ಯಲ್ಲಿ ಮಾನುಷ ಕಾರುಣ್ಯ ಮತ್ತು ವಾತ್ಸಲ್ಯಗಳು ಅಸ್ಥಾನದ ಅನುರಾಗವಾದರೆ ಅದನ್ನು ಮತ್ತೊಬ್ಬರಿಗೆ ನೋವಾಗದಂತೆ ಹೇಗೆ ದಾಟಿಕೊಂಡು ಅವರನ್ನೂ ದಾಟಿಸಬೇಕೆಂಬ ನಯವು ಪ್ರಧಾನವಾಗಿದೆ. ‘ವಾಸವದತ್ತೆ’ಯಲ್ಲಾದರೋ ಸಂಪತ್ತಿ-ಸೌಂದರ್ಯಗಳ ಮದವು ಉನ್ಮತ್ತ ಪ್ರೀತಿಯಲ್ಲಿ ನೇಪಥ್ಯಕ್ಕೆ ಸಂದರೂ ಇದಕ್ಕೆ ಶಾಶ್ವತವಾದ ಉಪಶಾಂತಿಯನ್ನು ನೀಡಲು ಬೇರೊಂದು ಬಗೆಯ ಪರಿಹಾರವೇ ಅವಶ್ಯವೆಂಬ ನೀತಿಯನ್ನು ಕಾಣುತ್ತೇವೆ. ಈ ದೃಷ್ಟಿಯಿಂದ ಪೈಗಳ ಕಥನಕವಿತೆಗಳ ಪೈಕಿ ಇದೇ ಅತ್ಯಂತ ಸಂಕೀರ್ಣ. ಇಲ್ಲಿಯ ವೇಶ್ಯೆ ವಾಸವದತ್ತೆ ಕ್ಷಮ್ಯವೆನಿಸುವ ರೀತಿಯಲ್ಲಿಯೇ ತನ್ನ ಸಂಪತ್ತಿ-ಸೌಂದರ್ಯಗಳಿಗೆ ಹೆಮ್ಮೆಗೊಂಡಿರುತ್ತಾಳೆ. ಇದೇ ಸಹಜತೆಯ ನೆಲೆಯಿಂದ ಉಪಗುಪ್ತನಂಥ ಪರಿವ್ರಾಜಕನನ್ನು ಬಯಸುತ್ತಾಳೆ. ಅವನಾದರೂ ತನ್ನ ವಿರಕ್ತಿಗೆ ಅನುಗುಣವಾಗಿ ಅವಳ ಒಲವನ್ನು ಅಕ್ಕರೆಯಿಂದಲೇ ನಿರಾಕರಿಸುತ್ತಾನೆ. ಆದರೆ ವೇಶ್ಯಾವೃತ್ತಿಗೆ ವಿಮುಖಳಾದ ವಾಸವದತ್ತೆಯಲ್ಲಿ ಮುನಿದ ಊರಿನವರು ಅವಳ ವಿಟನೊಬ್ಬನ ಸಾವಿಗೆ ಆಕೆಯೇ ಹೊಣೆಯೆಂದು ಹೇಳಿ ಕೈ-ಕಾಲು-ಕಿವಿ-ಮೂಗುಗಳನ್ನು ಕತ್ತರಿಸುವ ದಂಡನೆಯನ್ನು ಕೊಡಿಸುತ್ತಾರೆ. ಇದು ಈರ್ಷ್ಯಾಳುವಾದ ಜಗತ್ತಿನ ಸಹಜ ಸ್ವಭಾವವಾದರೂ ಅತ್ಯಂತ ನಿಂದ್ಯ, ಹೇಯ. ತನ್ನದಲ್ಲದ ತಪ್ಪಿಗೆ ದಂಡಿತಳಾದ ವಾಸವದತ್ತೆಯ ಶುಷ್ರೂಷೆಗೆಂದು ಅವಳಲ್ಲಿಗೆ ಬರುವ ಉಪಗುಪ್ತ ಲೋಕೋತ್ತರವಾದ ವರ್ತನೆಗೆ ಪ್ರತೀಕ. ಹೀಗೆ ಪೈಗಳು ಹಲವು ಸ್ತರಗಳ ಮಾನುಷ ಭಾವಗಳನ್ನು ಈ ಕಥನಕವಿತೆಯಲ್ಲಿ ನಿರೂಪಿಸಿದ್ದಾರೆ. ಇದೆಲ್ಲ ಮೂಲಕ ಬೌದ್ಧ ಕಥೆಗಳ ಸಾಮಗ್ರಿಯೇ. ಆದರೆ ಅದನ್ನು ಭಾವಪ್ರಧಾನವಾಗಿ ರೂಪಿಸುವಲ್ಲಿ ಕವಿಯ ಕೌಶಲ ಚೆನ್ನಾಗಿ ದುಡಿದಿದೆ. ಈ ಮೂರೂ ಕಥನಕವನಗಳಲ್ಲಿ ಪೈಗಳ ಪದಪ್ರಯೋಗದ ವೈಚಿತ್ರ್ಯ-ವೈದುಷ್ಯಗಳನ್ನು ಕಾಣಬಹುದು. ಹೀಗಾಗಿಯೇ ಇವು ಸರಳವಾದ ಕಥನದ ನುಡಿಯೋಟವನ್ನು ಒಳಗೊಂಡಿದ್ದರೂ ಭಾಷೆಯ ದೃಷ್ಟಿಯಿಂದ ತುಂಬ ವ್ಯುತ್ಪಾದಕವಾಗಿವೆ. ‘ಹಳ್ಳಿಯ ಹುಡುಗಿ’ ತಾಳೀಕೋಟೆಯ ಕದನದ ಬಳಿಕ ಹೇಡಿ ಹಳ್ಳಿಯ ಹೆಣ್ಣೊಬ್ಬಳು ಹೇಡಿಯಾಗಿ ರಣದಿಂದ ಓಡಿ ಬಂದ ತನ್ನ ಜೀವಗಳ್ಳ ಗಂಡನಿಗೆ ಹೇಸಿ ತನ್ನನೇ ಸುಟ್ಟುಕೊಂಡು ಹುತಾತ್ಮಳಾದ ವೀರ ವನಿತೆಯಾಗುವ ಚಿತ್ರಣವನ್ನು ನೀಡಿದೆ. ಇಲ್ಲಿ ಕಥಾಂಶಕ್ಕಿಂತ ವರ್ಣನೆ-ಸಂಭಾಷಣೆಗಳ ಪ್ರಮಾಣ ಹೆಚ್ಚಿದೆ. ವಿಶೇಷತಃ ಇಲ್ಲಿಯ ಉಕ್ತಿವೈಚಿತ್ರ್ಯವು ಆಲಂಕಾರ, ವಾಗ್ರೂಢಿ, ಗಾದೆ ಮುಂತಾದ ಹಲವಂಶಗಳಿಂದ ಪರಿಪುಷ್ಟವಾಗಿದೆ. ಈ ದೃಷ್ಟಿಯಿಂದ ಪೈಗಳ ಕಥನಕವಿತೆಗಳ ಪೈಕಿ ಇದನ್ನು ವಿಭಿನ್ನ ಮಾರ್ಗದ್ದೆಂದು ಹೇಳಬಹುದು. ಕಡೆಯದಾದ ‘ಹುಲ್ಲುಕಟಿಗ’ ಪೈಗಳ ಕಥನಕವನಗಳ ಪೈಕಿ ತುಂಬ ಸರಳವಾದದ್ದು. ಇಲ್ಲಿಯ ಭಾಷೆ ಕೂಡ ತುಂಬ ಸುಬೋಧ. ಈ ಮುನ್ನ ಕಂಡ ಕಥನಕವಿತೆಗಳಂತೆ ಇಲ್ಲಿ ಜೀವನದ ವಿಕಟ-ವೇಧಕ ಸಂದರ್ಭಗಳಿಲ್ಲ, ಆಶೆ-ನಿರಾಶೆಗಳ ಕೆರಳುರುಳುಗಳಿಲ್ಲ. ಶರತ್ಕಾಲದ ನದಿಯಂತೆ ಸಾಗುವ ಕಥೆ ಈ ಕಾರಣದಿಂದಲೇ ಪ್ರಸನ್ನ, ಪಾರದರ್ಶಕ. ಅಂತೆಯೇ ಇಲ್ಲಿಯ ಪಾತ್ರಗಳೆಲ್ಲ ಉದಾರ, ಉದಾತ್ತ; ನಡೆ-ನುಡಿಗಳೂ ನಿರ್ಮಲ, ನಿರಾಕುಲ. ಇದು ಹಸಿದ ಹೊಟ್ಟೆಗೆ ಹೊತ್ತಿಗೆ ಸರಿಯಾಗಿ ಅಕ್ಕರೆಯಿಂದ ಮಾಡಿದ ಅನ್ನದಾನದ ಮಹಿಮೆಯನ್ನೂ ಅದರ ಮಹತ್ತ್ವವನ್ನು ಗುರುತಿಸಿ ಗೌರವಿಸುವ ಸಮಾಜ-ಸಂಸ್ಕೃತಿಗಳನ್ನೂ ಸೊಗಸಾಗಿ ನಿರೂಪಿಸಿದೆ. ಈ ಕಥನಕವಿತೆಯಲ್ಲಿ ಆಗೀಗ ಮಿಂಚುವ ಉಪಮೆ, ಸಾಮತಿ, ದೃಷ್ಟಾಂತ ಮುಂತಾದುವು ಕೂಡ ಅಕೃತ್ರಿಮವಾಗಿ ನಳನಳಿಸಿವೆ.
ಛಂದಸ್ಸು
ಇನ್ನು ಪೈಗಳ ಪದ್ಯಬಂಧದ ಪರಿಯನ್ನು ಗಮನಿಸಬಹುದು. ಇವರು ಅಭಿಜಾತ ಬಂಧಗಳಾದ ಕಂದ, ವೃತ್ತ, ಷಟ್ಪದಿ ಮುಂತಾದುವನ್ನು ಪ್ರಾಸಸಹಿತವಾಗಿಯೂ ಪ್ರಾಸರಹಿತವಾಗಿಯೂ ಬಳಸಿದ್ದಾರೆ; ನವೋದಯದ ಮುಂದಾಳುಗಳು ಹವಣಿಸಿಕೊಂಡಂಥ ಹತ್ತಾರು ಮಾತ್ರಾಬಂಧಗಳನ್ನು ಪೈಗಳು ತಾವೇ ರೂಪಿಸಿಕೊಂಡಿದ್ದಾರೆ; ಈ ನಿಟ್ಟಿನಲ್ಲಿ ಮಿಕ್ಕವರಿಗೆ ಮಾರ್ಗದರ್ಶಕರೂ ಆಗಿದ್ದಾರೆ. ತ್ರಿಕಲ, ಚತುಷ್ಕಲ, ಪಂಚಕಲಗಳೆಂಬ ಏಕರೂಪದ ಮಾತ್ರಾಗಣಗಳ ಬಂಧಗಳನ್ನಷ್ಟೇ ಅಲ್ಲದೆ ಷಟ್ಕಲ ಮತ್ತು ಅಷ್ಟಕಲಗಳೆಂಬ ಸಂತುಲಿತ ದ್ರುತಾವರ್ತ ಹಾಗೂ ಮಧ್ಯಾವರ್ತ ಗತಿಗಳ ಬಂಧಗಳನ್ನೂ ಸಪ್ತಕಲವೆಂಬ ಮಿಶ್ರಗತಿಯ ಬಂಧವನ್ನೂ ಬಳಸಿದ್ದಾರೆ. ಅಚ್ಚರಿಯೆಂಬಂತೆ ನವೋದಯದ ಪ್ರಮುಖರಾದ ಕುವೆಂಪು, ಪು.ತಿ.ನ., ಕೆ.ಎಸ್.ನ. ಮುಂತಾದ ಕವಿಗಳಿಗೆ ಬಹುಪ್ರಿಯವಾದ ಚತುಷ್ಕಲ ಬಂಧಗಳಿಗಿಂತ ಮಿಗಿಲಾಗಿ ಪೈಗಳಿಗೆ ಒದಗಿಬಂದಿರುವುದು ತ್ರಿಕಲ ಮತ್ತು ಸಂತುಲಿತ ದ್ರುತಾವರ್ತಗಳೇ. ಸಂತುಲಿತ ಮಧ್ಯಾವರ್ತವಂತೂ ಇಲ್ಲವೆಂಬಷ್ಟು ವಿರಳವಾಗಿದೆ. ಮಿಶ್ರಗತಿಯ ಬಂಧಗಳೂ ಹೆಚ್ಚಾಗಿಲ್ಲ; ಬಲುಮಟ್ಟಿಗೆ ಭಾಮಿನೀಷಟ್ಪದಿ, ಗೋವಿನ ಹಾಡಿನ ಮಟ್ಟು ಮುಂತಾದ ಕೆಲವೊಂದು ಪ್ರಕಾರಗಳಿಗೆ ಮಾತ್ರ ಮೀಸಲಾಗಿದೆ. ಉಳಿದಂತೆ ಪಂಚಕಲ ಬಂಧಗಳಲ್ಲಿ ಮಿಕ್ಕ ಕವಿಗಳ ಹಾಗೆಯೇ ಪೈಗಳು ಕೂಡ ವಿಜೃಂಭಿಸಿದ್ದಾರೆ.
ಪೈಗಳು ಕಂದ-ಷಟ್ಪದಿಗಳಿಗಿಂತ ಹೆಚ್ಚಾಗಿ ವೃತ್ತಗಳಲ್ಲಿಯೇ ಪ್ರಾಸತ್ಯಾಗ ಮಾಡಿದ್ದಾರೆ. ಅಸಾಂಪ್ರದಾಯಿಕ ಬಂಧಗಳಲ್ಲಿ ಆದಿಪ್ರಾಸವನ್ನು ಬಿಟ್ಟಿರುವರಾದರೂ ಅಂತ್ಯಪ್ರಾಸವನ್ನು ನಿರಪವಾದವೆಂಬಂತೆ - ಆದಿಪ್ರಾಸಕ್ಕಿಂತ ಹೆಚ್ಚಿನ ಶಿಸ್ತಿನಿಂದ - ಪಾಲಿಸಿದ್ದಾರೆ. ಇದನ್ನು ನವೋದಯದ ಎಲ್ಲ ಕವಿಗಳಲ್ಲಿಯೂ ಕಾಣಬಹುದು. ಆದಿಪ್ರಾಸದ ನಿರ್ವಾಹಕ್ಕಿಂತ ಅಂತ್ಯಪ್ರಾಸದ ನಿರ್ವಾಹವೇ ಹೆಚ್ಚು ನಿಯಮನಿಯಂತ್ರಿತವೆಂಬ ತಥ್ಯವನ್ನು ನಾನು ಬೇರೆಯಾಗಿಯೇ ಚರ್ಚಿಸಿದ್ದೇನೆ.[1] ಆ ನಿಗಮನವನ್ನು ಅವಲಂಬಿಸಿ ಪೈಗಳ ಅಂತ್ಯಪ್ರಾಸನಿರ್ವಾಹ ತುಂಬ ವೈದುಷ್ಯಪೂರ್ಣವೆಂದು ಧಾರಾಳವಾಗಿ ಹೇಳಬಹುದು.
ಪೈಗಳು ವೃತ್ತ-ಕಂದಗಳನ್ನು ರಚಿಸುವಾಗ ಬಳಸುವ ಭಾಷೆಯನ್ನು ಅಪ್ಪಟ ಹಳಗನ್ನಡವೆಂದು ಹೇಳುವುದು ಕಷ್ಟ. ಅದೆಷ್ಟೋ ಬಾರಿ ನಡುಗನ್ನಡದ ರೂಪಗಳು ನುಸುಳುತ್ತವೆ. ಇವು ಈ ಬಂಧಗಳ ಆಭಿಜಾತ್ಯವನ್ನು ಕೆಲಮಟ್ಟಿಗೆ ಕುಗ್ಗಿಸುತ್ತವೆನ್ನಬೇಕು. ಆದರೆ ಅವರು ಸಿದ್ಧ ಅಥವಾ ವ್ಯುತ್ಪಾದ್ಯ ಎನಿಸಿದ ವಿವಿಧ ಮಾತ್ರಾಬಂಧಗಳನ್ನು ರಚಿಸುವಾಗ ಬಳಸುವ ಭಾಷೆಯಲ್ಲಿ ಎಂಥ ಹಳಗನ್ನಡದ ರೂಪಗಳು ಹೊಕ್ಕಾಗಲೂ ವಿರಸವೆನ್ನಿಸವು.[2] ಛಂದೋದೃಷ್ಟಿಯಿಂದ ಪೈಗಳ ವೃತ್ತರಚನೆಯಲ್ಲಿ ಯಾವುದೇ ಬಗೆಯ ಲಕ್ಷಣಚ್ಯುತಿ ಕಾಣದಿದ್ದರೂ ಕಂದಗಳಲ್ಲಿ ಮಾತ್ರ ಹಲವೊಮ್ಮೆ ಲೋಪಗಳು ಇಣಿಕುತ್ತವೆ. ಇವೆಲ್ಲ ಮುಖ್ಯವಾಗಿ ದ್ವಿತೀಯ ಪಾದದ ಮೂರನೆಯ ಗಣದಲ್ಲಿ ಜಗಣವನ್ನು ತಾರದ ಅಥವಾ ಆ ಎಡೆಯಲ್ಲಿ ಸರ್ವಲಘುಗಣವನ್ನು ತಂದಾಗ ಅದರ ಮೊದಲ ಲಘುವಿನ ಬಳಿಕ ಯತಿಸ್ಥಾನವನ್ನು ಪಾಲಿಸದ ಸ್ಖಾಲಿತ್ಯಗಳನ್ನೇ ಹೆಚ್ಚಾಗಿ ಕುರಿತಿವೆ. ಇದಕ್ಕೆ ಮುಖ್ಯ ಕಾರಣ ಈ ಎಲ್ಲ ಪದ್ಯಗಳು ಪೈಗಳ ಅವಸಾನದ ಬಳಿಕ ಪ್ರಕಟವಾದದ್ದೋ ಆಯಾ ಸಂಪಾದಕರ ಅನವಧಾನವೋ ಅಲ್ಲದೆ ಮತ್ತೂ ಒಂದೆರಡು ಅಂಶಗಳಿವೆ. ಮೊದಲಿಗೆ ಇವನ್ನೆಲ್ಲ ರಚಿಸಿದಾಗ ಪೈಗಳ ವಯಸ್ಸು ತೀರ ಚಿಕ್ಕದು. ‘ಸುವಾಸಿನಿ’ (ಪು. ೨೮೯) ಕವಿತೆಯನ್ನು ಬರೆದಾಗ ಅವರಿಗೆ ಹದಿನಾರು ವರ್ಷ! ‘ಕಾಲಿಯಮರ್ದನ’ವನ್ನು (೨೦೧) ರಚಿಸಿದಾಗ ಇಪ್ಪತ್ತು ವರ್ಷ! ಮಾತ್ರವಲ್ಲ, ದಕ್ಷಿಣಕನ್ನಡದಲ್ಲಿ ವಿಪುಲ ಪ್ರಚಾರದಲ್ಲಿರುವ ಯಕ್ಷಗಾನಗಳಲ್ಲಿ ಕಾಣಸಿಗುವ ಹೆಚ್ಚಿನ ಕಂದಗಳು ಇಂಥ ಲಕ್ಷಣಚ್ಯುತಿಯನ್ನೇ ಒಳಗೊಂಡಿವೆ. ಇವಕ್ಕೆ ಮುದ್ದಣನಂಥ ಅಭಿಜಾತ ಕವಿಯ ಕುಮಾರವಿಜಯ ಮತ್ತು ರತ್ನಾವತಿ ಕಲ್ಯಾಣ ಎಂಬ ಯಕ್ಷಗಾನಗಳೂ ಹೊರತಾಗಿಲ್ಲ.
[1] ನೋಡಿ: ಛಂದೋವಿವೇಕ, ಪು. ೪೦-೪೩
[2] ಈ ನಿಗಮನವನ್ನು ಗೋವಿಂದ ಪೈಗಳ ರಚನೆಗಳಿಗಷ್ಟೇ ಸೀಮಿತಗೊಳಿಸದೆ ಇಡಿಯ ಕನ್ನಡಸಾಹಿತ್ಯಕ್ಕೇ ಅನ್ವಯಿಸಿ ನೋಡಬಹುದು. ಉದಾಹರಣೆಗೆ: ಡಿ.ವಿ.ಜಿ., ಬೇಂದ್ರೆ, ಕುವೆಂಪು, ಪು.ತಿ.ನ., ಕೆ. ಕೃಷ್ಣಮೂರ್ತಿ, ಗಣಪತಿ ಮೊಳೆಯಾರ, ಶಂಕರನಾರಾಯಣ ಭಟ್ಟ ಮೊಳೆಯಾರ ಮೊದಲಾದವರು ತಮ್ಮ ವೃತ್ತ-ಕಂದಗಳಲ್ಲಿ ಬಳಸುವ ಹಳಗನ್ನಡೇತರ ರೂಪಗಳು ಚಂಪೂಕವಿಗಳ ಬಂಧ-ಭಣಿತಿಗಳಿಂದ ಭಾವನೆಗೊಂಡ ಕಿವಿಗಳಿಗೆ ಅಷ್ಟಿಷ್ಟು ವಿರಸವಾಗುತ್ತವೆ. ಆದರೆ ಬಸವಪ್ಪಶಾಸ್ತ್ರೀ, ನಂಜನಗೂಡು ಅನಂತನಾರಾಯಣಶಾಸ್ತ್ರೀ, ಮೈಸೂರು ಸೀತಾರಾಮಶಾಸ್ತ್ರೀ, ವೈಯಾಕರಣ ಗರಣಿ ಕೃಷ್ಣಾಚಾರ್ಯ, ಮೇಣ ರಾಮಕೃಷ್ಣ ಭಟ್ಟ ಮುಂತಾದವರ ಸಂಸ್ಕೃನಾಟಕಾನುವಾದಗಳಲ್ಲಿ ಇಂಥ ವೈರಸ್ಯ ಎಡತಾಕುವುದಿಲ್ಲ. ಇದೇ ಸಂದರ್ಭದಲ್ಲಿ ಡಿ.ವಿ.ಜಿ., ಬೇಂದ್ರೆ, ಕುವೆಂಪು, ಪು.ತಿ.ನ. ಮುಂತಾದವರು ವಿವಿಧ ಮಾತ್ರಾಬಂಧಗಳನ್ನು ರಚಿಸುವಾಗ ಅದೆಷ್ಟು ಹಳಗನ್ನಡವನ್ನು ತಂದರೂ ವಿಜಾತೀಯವಾಗಿ ತೋರುವುದಿಲ್ಲ. ಇದಕ್ಕೆ ಕಾರಣ ಪ್ರಾಯಶಃ ಭಾಷೆಯೊಂದರ ರೇಖಾತ್ಮಕವಾದ ಬೆಳೆವಣಿಗೆಯಾಗಿರಬಹುದು. ಕಾಲಸಾಪೇಕ್ಷವಾಗಿ ಹಿಂದಿನದಾದ ಭಾಷೆಯನ್ನು ಮುಂದಿನ ಬಂಧಗಳಲ್ಲಿ ಬಳಸಿದಾಗ ತೋರಿಕೊಳ್ಳದ ವಿಜಾತೀಯತೆ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ತಲೆದೋರುವುದು ಮತ್ತಷ್ಟು ಚಿಂತನಾರ್ಹವಾದ ಸಂಗತಿ. ‘ಭಾಷಾವ್ಯಭಿಚಾರ’ದ ಮಟ್ಟಿಗೆ ಛಂದಸ್ಸು ಸ್ವಲ್ಪ ‘ಅಸಹಿಷ್ಣು’ ಎಂದರೆ ತಪ್ಪಾಗದು. ವೃತ್ತ-ಕಂದಗಳನ್ನಾಗಲಿ, ಷಟ್ಪದಿ-ಸಾಂಗತ್ಯಗಳನ್ನಾಗಲಿ ಅಪ್ಪಟ ಹೊಸಗನ್ನಡದಲ್ಲಿ ಬರೆಯಲು ಹೊರಟಾಗ ಎದುರಾಗುವ ತೊಡಕು-ಮುಜುಗರಗಳ ಮೂಲಕ ಈ ತಥ್ಯವನ್ನು ಮನಗಾಣಬಹುದು. ಇದು ಕನ್ನಡದ ಮಟ್ಟಿಗಂತೂ ಆನುಭವಿಕ ಸತ್ಯ.
To be continued.