‘ಗೊಲ್ಗೊಥಾ’ ಕೃತಿಯ ಸಾಹಿತ್ಯಸಂಸ್ಕಾರದ ಹಿನ್ನೆಲೆಯಲ್ಲಿ ‘ವೈಶಾಖಿ’ಯನ್ನು ಪರಿಶೀಲಿಸಬಹುದು.
ಅಲ್ಲಿರುವಂತೆಯೇ ಇಲ್ಲಿಯೂ ಕಾವ್ಯ ಮುಂಜಾನೆಯಿಂದ ಮೊದಲಾಗುತ್ತದೆ. ಬುದ್ಧನು ಆನಂದನನ್ನು ಎಬ್ಬಿಸಿ ಅವನ ಮೂಲಕವೇ ಮಿಕ್ಕ ಭಿಕ್ಷುಗಳನ್ನು ಎಚ್ಚರಿಸುವ ಹವಣು ಧ್ವನಿಪೂರ್ಣ. ತ್ರಿಪಿಟಕಗಳ ಬಗೆಯನ್ನು ಬಲ್ಲವರಿಗೆ ಇದು ಮತ್ತೂ ಅರ್ಥಪೂರ್ಣ. ಬುದ್ಧನ ಬದುಕನ್ನು ಕಟ್ಟಿಕೊಡುವ ‘ಸುತ್ತಪಿಟಕ’ ಉಳಿದೆರಡು ಪಿಟಕಗಳಿಗಿಂತ ಹೆಚ್ಚಿನ ಮಹತ್ತ್ವವನ್ನು ಹೊಂದಿದೆ. ಇದನ್ನು ನಮಗೆ ದಕ್ಕಿಸಿದವನು ಆನಂದ. ಮಿಕ್ಕ ಪಿಟಕಗಳಲ್ಲಿ ಉಪದೇಶವೇ ಹೆಚ್ಚು. ಇಲ್ಲಿಯಾದರೋ ಆಚರಣೆ ಮುನ್ನೆಲೆಗೆ ಬಂದಿದೆ; ಮತ್ತಿದು ಭಗವಾನ್ ಬುದ್ಧನ ನಡೆಯಾದ ಕಾರಣ ಮತ್ತಷ್ಟು ಅರ್ಥವತ್ತಾಗಿದೆ. ಹೀಗೆ ಆನಂದನ ಮೂಲಕ ದೊರಕಬಲ್ಲ ಉದ್ಬೋಧನ ನಿಜಕ್ಕೂ ಹಿರಿದು. ಅವನನ್ನು ಎಬ್ಬಿಸುವ ಬುದ್ಧನ ಮಾತುಗಳಲ್ಲಿಯೇ ಸಂದರ್ಭ ಸ್ಪಷ್ಟವಾಗುತ್ತದೆ: ಸೂಕರಮದ್ದವವನ್ನು ಭಿಕ್ಷೆಯ ರೂಪದಲ್ಲಿ ತಿಂದ ಬುದ್ಧನ ಶರೀರಕ್ಕೆ ಸ್ವಾಸ್ಥ್ಯ ತಪ್ಪಿದೆ. ‘ಗೊಲ್ಗೊಥಾ’ ಕೃತಿಯಲ್ಲಿ ಯೇಸುವಿನ ಸಾವು ಹೊರಗಿನ ದುಷ್ಟ ಶಕ್ತಿಗಳಿಂದ ಬಂದರೆ, ಇಲ್ಲಿ ಅದು ಒಳಗಿನ ಕೇಡಾದ ಮಾರನ ನಿಡುಗಾಲದ ಅಂಗಲಾಚುವಿಕೆಯಿಂದ ಬಂದಿದೆ. ಈ ಸಂದರ್ಭದಲ್ಲಿ ಬುದ್ಧನ ಶಾರೀರಿಕ ವೇದನೆಯನ್ನು ಪೈಗಳು ‘ಬಸಿರು ನೋನೋಯುತಿದೆ, ಕರುಳು ನುಲಿನುಲಿಯುತಿದೆ’ (ಪು. ೩೬೫) ಎಂದು ಸಂಸ್ಕೃತದ ‘ಣಮುಲ್’ ಪ್ರಯೋಗಕ್ಕೆ ಸದೃಶವಾದ ಪದಗಳನ್ನು ಬಳಸಿ ಬಣ್ಣಿಸಿರುವುದು ಅವರ ಶಾಬ್ದಿಕ ವ್ಯುತ್ಪತ್ತಿಗೆ ಸಾಕ್ಷಿ.
ಅನಂತರ ಮಾರನಿಗೆ ಬುದ್ಧನು ತನ್ನ ಪರಿನಿರ್ವಾಣದ ಬಗೆಗೆ ಹೇಳಿದ ಮಾತುಗಳು ಹಲವು ದೃಷ್ಟಾಂತಗಳ ಮೂಲಕ ಬಂದಿವೆ:
...ಕಾಸಿದ ಕಾಂಚನಂ ಕೀಳನುಳಿವಂತೆ,
ಆನೆ ನುಂಗಿದ ಬೇಲದಂತೆ, ನಾಗಂ ತನ್ನ
ಹೆರೆಯುಚ್ಚುವಂತೆ...
ಕಾದ ಕಬ್ಬಿಣಕಿತ್ತ ನೀರಂತೆ, ನಿದ್ದೆಯಂ
ತಿಳಿದವನ ಕನಸಾರುವಂತೆ, ಕಪ್ಪುರ ಸುಟ್ಟು
ಬೂದಿಲ್ಲದಂತೆ, ತನಿವಾಲನೊರೆಯಂತೆ, ಪರಿ-
ನಿರ್ವೃತಿಸುವನ್ ಸುಗತಂ... (ಪು. ೩೬೬)
ಇಲ್ಲಿಯ ಸಾಲುಗಟ್ಟುವ ದೃಷ್ಟಾಂತಗಳು ತ್ರಿಪಿಟಕಗಳ ಶೈಲಿಯನ್ನು ಬಲ್ಲವರಿಗೆ ತುಂಬ ನಿಕಟವಾಗಿ ತೋರುತ್ತವೆ. ಈ ಮೂಲಕ ಪೈಗಳು ಬೌದ್ಧ ವಸ್ತುವನ್ನು ಆಧರಿಸಿದ ಈ ಕಾವ್ಯ ಬೌದ್ಧ ಸಾಹಿತ್ಯದ ಶೈಲಿಯನ್ನೂ ಸಮುಚಿತವಾಗಿ ಮೈಗೂಡಿಸಿಕೊಂಡ ಧ್ವನಿಯನ್ನು ಬಿಂಬಿಸಿದ್ದಾರೆ.
ಬುದ್ಧನು ಎಲ್ಲ ಭಿಕ್ಷುಗಳೊಡನೆ ಪಾವೆಯಿಂದ ಕುಶಿನಾರಕ್ಕೆ ಹೊರಟ ಮುಂಜಾನೆಯನ್ನು ಕವಿ ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ. ಆರಂಭದಲ್ಲಿ ಬರುವ ಉತ್ಪ್ರೇಕ್ಷಾಲಂಕಾರದ ವಾಕ್ಯದೊಡನೆ ಮಿಂಚಿ ಮರೆಯಾಗುವ ‘ಪರಿನಿರ್ವಾಣನಾಟಕ’ ಎಂಬ ಚಿಕ್ಕ ರೂಪಕವೊಂದನ್ನು ಬಿಟ್ಟರೆ ಉಳಿದದ್ದೆಲ್ಲ ರಾಶೀಭೂತವಾದ ಸ್ವಭಾವೋಕ್ತಿಯ ಸಾಮ್ರಾಜ್ಯ:
...ಮಿಳ್ಮಿಳನೆ ಮಿಟುಕೆ ಸುತ್ತಣ ತಾರೆ-
ಗಳ ಬಳಗವಸ್ತಮಿಪ ಪೂರ್ಣಚಂದ್ರಂ ತಥಾ-
ಗತನ ಪರಿನಿರ್ವಾಣನಾಟಕವನೊಂದಿನಕೆ
ಮುನ್ನೆ ನಟಿಸುವನೇನೊ! ಮೆಲ್ಲನಿಗೊ ತೀಡುತಿದೆ
ತಂಗಾಳಿ, ಹೂಗಾಳಿ. ಉಲಿಯುತಿದೆ ಒಂದೊಂದೆ
ಹಕ್ಕಿ, ರೀರೀಕರಿಸುತಿದೆ ಝಿಲ್ಲಿ. ತೊಗಲಕ್ಕಿ
ಹಾರುತಿದೆ ಮರದೆಡೆಗೆ, ಹಾಳುಬೀಳಿನ ಬಳಿಗೆ
ಸೇರುತಿದೆ ಗೂಗೆ. ಹಳೆಯಟ್ಟಗಳ ಕಂಡಿಯಂ
ತೂರುತಿದೆ ಮಟಬೆಕ್ಕು. ತುಡುಗುಂಡು ನರಿವಿಂಡು
ನುಗ್ಗುತಿದೆ ಹೊದರೊಳಗೆ. ನೀರ್ಗಳಲಿ ಗೊಡರುತಿದೆ
ಕಪ್ಪೆ. ನಾಯಿಗಳೆದ್ದು ಮೆಯ್ಮುರಿದು ಕಿವಿಗೊಡಹಿ
ಬೊಳಗುತಿವೆ. ಮೆಲ್ಲಮೆಲ್ಲನೆ ರೆಂಬೆ ಜೀಕುತಿವೆ.
ಒಂದೆರಡು ಮೂರು ಮೇಣಂತಂತೆ ಮಿಗುಮಿಗುತ
ಮನೆಬೆಳಕು ಮಿಣುಕುತಿವೆ. ಅಲ್ಲಲ್ಲಿ ಮನೆಯಲ್ಲಿ
ಕುವಿಯುತಿದೆ ಮೊಲೆಗೂಸು. ಮರಳಿ ಕೂಗಿತು ಕೋಳಿ.
ಅರುಣಿಸಿತು ಮೂಡದೆಸೆ. ಬಗೆಬಗೆಯ ವಿಹಗಗಳ
ಮೇಳವಂ ಪಾಡುತಿದೆ ಕಾಕಾರವಂ ಸುತ್ತ-
ಲಲ್ಲಲ್ಲಿ ಕರೆಯುತಿದೆ. ತೊರೆಯ ತಡಿಗಾದಪುದು
ನೀರ್ವಕ್ಕಿಗಳ ಕೇಳಿ. ಮನೆಗಳಲ್ಲಲ್ಲಿಂದ
ಹೊಗೆ ತೆಳ್ಳನೇಳುತಿದೆ. ಒಕ್ಕಲಿಗನೆತ್ತುಗಳ-
ನಟ್ಟಿ ಹೊಲದಾಗೆ, ಮಡಿವಳನರುವೆ ಮೂಟೆಯಂ
ಕಟ್ಟಿ, ಬಲೆಯಂ ಹೊತ್ತು ಧೀವರಂ ಹೊಳೆಯಾಗೆ
ನಡೆದಪಂ ಕರ‍್ರೆಂದು ತಿರುಗಲಾಯಿತು ಗಾಣ.
ಕಮ್ಮಾರಸಾಲೆಯಲಿ ಭುಗುಭುಗಿಸುತಿದೆ ಬೆಂಕಿ. (ಪು. ೩೬೭-೬೮)
ಇಲ್ಲಿರುವ ಮುಂಜಾನೆಯ ಬಣ್ಣನೆ ಬರಿಯ ದೇಶವನ್ನು ಆಶ್ರಯಿಸಿಲ್ಲ; ಕಾಲದಲ್ಲಿಯೂ ವಿಸ್ತರಿಸಿಕೊಂಡಿದೆ. ಸುಮ್ಮನೆ ಈ ಭಾಗದ ಕ್ರಿಯಾಪದಗಳನ್ನೂ ಕ್ರಿಯಾವಿಶೇಷಣಗಳಾದ ಕೃದಂತಗಳನ್ನೂ ಗಮನಿಸಿದರೆ ಸಾಕು, ಈ ಮಾತಿನ ಮಹತ್ತ್ವ ತಿಳಿಯುತ್ತದೆ. ಹೀಗೆ ಪಾವಾ ಗ್ರಾಮವೆಂಬ ಒಂದು ಪ್ರದೇಶದ ಅನೇಕ ಪ್ರಕಾರವಾದ ಕ್ರಿಯೆಗಳನ್ನು ಕಾಲಾಧೀನವಾಗಿ ಬಣ್ಣಿಸುವ ಮೂಲಕ ಪೈಗಳು ತಮ್ಮ ವರ್ಣನೆಯನ್ನೊಂದು ‘ವರ್ಣಚಿತ್ರ’ವಾಗಿ ಸೀಮಿತಗೊಳಿಸದೆ ‘ಚಲನಚಿತ್ರ’ವಾಗಿ ವಿಸ್ತರಿಸಿದ್ದಾರೆ. ಬುದ್ಧನ ಪರಿನಿರ್ವಾಣ ವೇಗವಿಲ್ಲದ, ಕ್ರಿಯಾಬಹುಳವೂ ಅಲ್ಲದ ಒಂದು ದಿವ್ಯ ಘಟನೆ. ಅದಕ್ಕೆ ವಿಸಂವಾದಿಯಾಗಿ ಈ ಕಾವ್ಯದಲ್ಲಿ ಬರುವ ಬೆಳಗಿನ ಮತ್ತು ಸಂಜೆಯ ವರ್ಣನೆಗಳು ತುಂಬ ಸೊಗಸಾದ ಚೌಕಟ್ಟನ್ನು ಕಲ್ಪಿಸಿವೆ. ಈ ಮೂಲಕ ಆಲಂಬನವಿಭಾವವಾದ ಬುದ್ಧಪರಿನಿರ್ವಾಣಕ್ಕೆ ಸ್ವಲ್ಪವೂ ಪೂರಕವಲ್ಲವೆಂದು ಮೇಲ್ನೋಟಕ್ಕೆ ತೋರುವ ‘ಉದ್ದೀಪನವಿಭಾವ’ಗಳು ಕಣ್ಣಿಗೆ ಕಟ್ಟುತ್ತವೆ; ಇಂಥ ಮಹಾ ಆಲಂಬನವಿಭಾವಕ್ಕೆ ಉದ್ದೀಪನವಿಭಾವಗಳು ಬೇಕಿಲ್ಲ ಎಂಬ ಧ್ವನಿಯನ್ನೂ ಒಳಗೊಂಡಂತಿವೆ. ಇದೇ ಸಂದರ್ಭದಲ್ಲಿ ಈ ಪರಿನಿರ್ವಾಣದ ಶಾಂತಿ ಮತ್ತು ನಿಷ್ಪಂದತೆಗಳನ್ನು ಧ್ವನಿಸುವಂತೆ ಇಡಿಯ ಪ್ರಕೃತಿಯೇ ತನ್ನ ಎಂದಿನ ಸ್ನಿಗ್ಧಸರಳ ಗತಿಯಲ್ಲಿ ಸಾಗಿದೆಯೆಂಬ ಅಂಶ ಮತ್ತೊಂದು ರೀತಿಯಿಂದ ಅತ್ಯಂತ ಸಮುಚಿತವಾದ ಉದ್ದೀಪನವಿಭಾವವಾಗಿರುವುದೊಂದು ಕಲಾಚೋದ್ಯ. ಮಾತ್ರವಲ್ಲ, ಭಗವಾನ್ ಬುದ್ಧನ ಜೀವನ-ಉಪದೇಶಗಳು ಆತನ ಮಣ್ಣ ಮೆಯ್ಯನ್ನೂ ಮೀರಿದ ಕಾರಣ ಅದರ ಅಳಿವು-ಉಳಿವುಗಳಿಗೆ ಹೆಚ್ಚಿನ ಮಹತ್ತ್ವವಿಲ್ಲ; ಹೀಗಾಗಿ ಅವನ ಸುತ್ತಣ ಜಗತ್ತು ಎಂದಿನಂತೆ ನಿರುದ್ವಿಗ್ನವಾಗಿ ಸಾಗಿದೆಯೆಂಬ ಧ್ವನಿಯೂ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಆದೆಷ್ಟೇ ಬುದ್ಧರು ಬಂದರೂ ನಮ್ಮ ನಡುವೆಯೇ ಬಾಳಿ ಬೆಳಗಿ ಅಳಿದರೂ ಅವರ ಅಸ್ತಿತ್ವದ ಆರ್ಥಪೂರ್ಣತೆ ಮುಮುಕ್ಷುಗಳಾದ ಕೆಲವರಿಗೆ ಮಾತ್ರ; ಮಿಕ್ಕ ವಿಶಾಲವಾದ ಪ್ರಾಕೃತಜಗತ್ತಿಗೆ ಇದರ ಪರಿವೆಯೇ ಇರದ ಕಾರಣ ಜ್ಞಾನಿಗಳ ಪರಿನಿರ್ವಾಣದ ವಿಷಯದಲ್ಲಿ ವೇದನೆ-ಸಂವೇದನೆಗಳಾದರೂ ಹೇಗೆ ಸಾಧ್ಯವೆಂಬ ಮಾರ್ಮಿಕ ವಿಡಂಬನೆಯ ಸೂಚನೆಯೂ ಇದೆ. ಹೀಗೆ ಇಷ್ಟೆಲ್ಲ ಧ್ವನಿಗಳು ಪ್ರಕೃತ ಕಾವ್ಯದ ಸಂಕೀರ್ಣ ಸೌಂದರ್ಯವನ್ನು ಬಗೆಬಗೆಯಿಂದ ಪೋಷಿಸುತ್ತಿವೆ.
ಪೈಗಳು ಸಣ್ಣ ಸಣ್ಣ ವಿವರಗಳಲ್ಲಿಯೂ ಉಪಮೆ-ದೃಷ್ಟಾಂತಗಳಂಥ ಸರಳವಾದ ಅಲಂಕಾರಗಳನ್ನು ಪರಿಣಾಮಕಾರಿಯಾಗಿ ದುಡಿಸಿಕೊಳ್ಳುತ್ತಾರೆ. ಇವನ್ನು ಮೂರ್ತ ಮತ್ತು ಅಮೂರ್ತ ಸ್ತರಗಳೆರಡರಲ್ಲಿಯೂ ಒಂದೇ ಬಗೆಯ ಸಾಮರ್ಥ್ಯದಿಂದ ಬಳಸುವುದು ಅವರ ಮತ್ತೊಂದು ವೈಶಿಷ್ಟ್ಯ. ಐನೂರು ಎತ್ತಿನ ಬಂಡಿಗಳು ದಾಟಿಹೋಗಿ ಬಗ್ಗಡವಾದ ನಿರಂಜನಾನದಿಯ ನೀರು ತಾನಾಗಿ ತಿಳಿಯಾದ ಬಗೆಯನ್ನು ತಿಳಿಸುವ ಪರಿಯಾಗಲಿ, ಕಂಥೆಯ ಮೇಲೆ ಕುಳಿತ ಬುದ್ಧನನ್ನು ಚುಟುಕಾಗಿ ಬಣ್ಣಿಸುವ ಬಗೆಯಾಗಲಿ ಇದಕ್ಕೆ ಒಳ್ಳೆಯ ಉದಾಹರಣೆಗಳು:
ಕಿಲುಬಿಡಿದ ಕನ್ನಡಿಗೆ ಹುಳಿ ಹಿಡಿಸೆ ಹೊಳೆವಂತೆ,
ವಿಸ್ಮರಿಸೆ ದುಃಸ್ವಪ್ನವೆಚ್ಚರಂ ತಿಳಿವಂತೆ,
ಗಾಳಿ ಮೋಡವ ಸೋಹೆ ಬೆಳರ್ವ ಚಂದ್ರಿಕೆಯಂತೆ
ಎನಿತಚ್ಛವೆನಿತನಾವಿಲವಾಗೆ...
ಡಿಂಡೀರಪಿಂಡದಿ ಮರಾಲ ಮಂಡಿಸಿದಂತೆ,
ತೆರೆದ ರೆಪ್ಪೆಯಲಿ ಕಣ್ಣಿನ ಕೊಂಬೆ ನೆಲೆತಂತೆ,
ಕುಳಿತಿರಲು... (ಪು. ೩೬೮-೬೯)
ಪ್ರಭಾತಕಾಂತಿಯಲ್ಲಿ ಶಾಂತಸ್ತಿಮಿತನಾಗಿ ಕುಳಿತಿದ್ದ ಬುದ್ಧನನ್ನು ಪೈಗಳು ವರ್ಣಿಸಿದ ವಿಧಾನವಂತೂ ಯಾವುದೇ ಭಾಷಾಸಾಹಿತ್ಯಕ್ಕೆ ಹೆಮ್ಮೆ ತರುವಂಥದ್ದು. ಇಲ್ಲಿ ಕವಿ ತಮ್ಮದೇ ಮನಸ್ಸಿನೊಡನೆ ಸಂವಾದಕ್ಕೆ ತೊಡಗುತ್ತಾರೆ. ಭಕ್ತಿ-ಉತ್ಸಾಹಗಳಿಂದ ಅವರ ಭಾಷೆ ನವನವ ಕಲ್ಪನೆಗಳ ಮುಗಿಲನ್ನು ಮುಟ್ಟುತ್ತದೆ. ಸಹಜವಾದ ಶಬ್ದ-ಅರ್ಥ ಅಲಂಕಾರಗಳು ಅಹಮಹಮಿಕೆಯಿಂದ ಮುನ್ನುಗ್ಗಿ ಬರುತ್ತವೆ. ಯಾವುದನ್ನು ಹಳೆಯ ಆಲಂಕಾರಿಕರು ‘ಭಾವಿಕತ್ವ’ ಎಂದು ಅತಿಶಯವಾಗಿ ಬಣ್ಣಿಸಿ ಮೆಚ್ಚಿರುವರೋ ಅದನ್ನಿಲ್ಲಿ ಗುರುತಿಸಬಹುದು:
ಬಾರೆನ್ನ ಮನಸೆ ನೋಡಲ್ಲಿ ಮರದಡಿಯಲ್ಲಿ
ಕುಳಿತಿಹ ತಥಾಗತನ! ನಸುಕಿನಲಿ ನಸುಮುನ್ನ
ಮಸುಕಿದಾ ಸುಗತನನ್ನೀಗ ನೆಟ್ಟನೆ ನೋಡ!
ವರುಷವೆಂಬತ್ತಂತೆ, ಇಂದೆ ತುಂಬಿತ್ತಂತೆ -
ತೊಗಲನಿತು ಸಡಲಿಲ್ಲ, ನವಿರನಿತು ನರೆತಿಲ್ಲ,
ದನಿಯಣಂ ಕುಗ್ಗಿಲ್ಲ, ಹುರಿಯಣಂ ಬಗ್ಗಿಲ್ಲ
ಕಣ್ಣಾಲಿ ಬೆಳತಿಲ್ಲ, ಹಲ್ಲೊಂದು ಜಗುಳಿಲ್ಲ.
ನೋಡ ನಂದ್ಯಾವರ್ತತರುವಂತೆ ಮಧ್ಯಮೋ-
ನ್ನತನ ಜಂಬೂಫಲದ ಧವಲದೇಹಚ್ಛವಿಯ!
ಶೈವಲಾಚ್ಛನ್ನಕಾಸಾರದಂತಾನನಂ
ನೋಡೆನಿತು ಗಂಭೀರ! ನೋಡ ಮೋಡದ ಮರೆಯ
ಮಿಂಚಂತೆ ದೃಗ್ವಿಷಯದಾಚೆ ನಿಟ್ಟಿಪ ಮುಕುಲ-
ನೇತ್ರವಂ! ಕರ್ಣಗಳೊ ಎನಿತೊ ಪ್ರಶ್ನೆಗಳೊಗುವ
ಆನೆಬಾಗಿಲೊ ನೋಡ! ನಾಸಿಕವೊ ಮಾರನಂ
ಸೋವ ಕಹಳೆಯೊ ನೋಡ! ಬಾಯೊ ವಾಗ್ಜಾಹ್ನವಿಯ-
ನಂತಕಾಲದೆ ಹುಯ್ವ ಸಾಗರದ್ವಾರವದೊ
ನೋಡ! ನೋಡ ವಿಶಾಲವೃಕ್ಷವೊ ವಿಭಾತದಾ-
ಪಾಟಲಾಭ್ರವೊ! ನೋಡ ನ್ಯಗ್ರೋಧಶಿಫೆಯೊ ಆ-
ಜಾನುಬಾಹುವೊ! ನೋಡ ವಿಪುಲಾಂಕವೊ ಕಕುತ್ಥೆ-
ಯಂತರೀಪವೊ! ನಿಶೀಥದ ಶಶಾಂಕಾತಪವೊ
ಬ್ರಹ್ಮಚರ್ಯದ ಶೀತಲೋಜಸ್ವಿತೆಯೊ ನೋಡ!
ಕಣ್ತಣಿಯೆ ನೋಡ, ಕಣ್ಗುಡಿದು ನೋಡಿಂದೆ ಈ
ಜ್ಞಾನದೀ ಧ್ಯಾನದೀ ಶಾಂತಿಯೀ ಕಾಂತಿಯೀ
ಅರ್ಹಂತವೀ ಧರ್ಮವಿನಯವಿದ್ಯಾಚರಣ-
ಸಂಪನ್ನವೀ ಅನುತ್ತರವೀ ಪುರುಷದಮ್ಯ-
ಸಾರಥಿಕವೀ ಸುಗತವೀ ದೇವಮಾನುಷ್ಯ-
ಶಾಸ್ತ್ರವೀ ಸಂಬುದ್ಧವೀ ಲೋಕವೇತ್ತೃವೀ
ಭಗವಂತವೀ ದಯೈಕಾಲೋಕವೀ ಅಪರ-
ಭಾನುವಾಳ್ದಪನೊ ನಿಬ್ಬಯಲೊಳಗೆ ನೋಡ! (ಪು. ೩೬೯-೭೦)
ಈ ಸುದೀರ್ಘ ಅವತರಣಿಕೆಯಲ್ಲಿ ಭಾರತೀಯ ಕಾವ್ಯಪರಂಪರೆಯ ಅಭಿಜಾತ ಶೈಲಿಯ ಅತ್ಯುತ್ತಮ ರೂಪವೊಂದನ್ನು ಕಾಣಬಹುದು. ಶಾಂತರಸವನ್ನೇ ಅಂಗಿಯನ್ನಾಗಿ ಉಳ್ಳ ಈ ಕೃತಿಯಲ್ಲಿ ಅದಕ್ಕೆ ಪೂರಕವಾದ ಅದ್ಭುತರಸ ಮತ್ತು ಭಕ್ತಿಭಾವಗಳಿಲ್ಲಿ ಆಳಿವೆ. ಅರೆಮಂಜು ಮಸಕಿದ ಮುಂಜಾನೆಯಲ್ಲಿ ಧ್ವನಿಪೂರ್ಣವಾದ ಬಗೆಯಿಂದ ಸ್ಪಷ್ಟಾಸ್ಪಷ್ಟವಾಗಿ ತೋರಿಕೊಳ್ಳುವ ಬುದ್ಧನ ಆಕೃತಿಯನ್ನು ಕವಿ ತಮಗಾಗಿ ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಈ ಪುಣ್ಯಮೂರ್ತಿಗೆ ಅಂದೇ ಎಂಬತ್ತು ವರ್ಷ ತುಂಬಿದ್ದರೂ ಅದಕ್ಕೆ ಮುಪ್ಪಿನ ಮಂಕುತನ ಬಂದಿಲ್ಲ. ಇದನ್ನು ಪೈಗಳು ವಿನೋಕ್ತಿಗಳ ಮಾಲೆಯಿಂದ, ಉಲ್ಲೇಖ ಅಲಂಕಾರದ ಭಂಗಿಯಿಂದ ‘ಇಲ್ಲ’ಗಳ ಮೂಲಕವೇ ‘ಇರುವ’ ಭಾಗ್ಯವಾಗಿ ಬಣ್ಣಿಸಿದ್ದಾರೆ. ಇಲ್ಲಿಯ ಪದಪದ್ಧತಿಯಾಗಲಿ, ಛಂದೋಗತಿಯ ಸೊಗಸಾಗಲಿ, ಅನುಪ್ರಾಸಗಳ ಅನುವಾಗಲಿ ಅನ್ಯಾದೃಶ. ನಿಸರ್ಗವನ್ನು ನೆಮ್ಮಿದ ಮೂರು ಉಪಮೆಗಳ ಮೂಲಕ ಬುದ್ಧನ ದೇಹವನ್ನು ಬಗೆಗಣ್ಣಿಗೆ ಹತ್ತಿರವಾಗಿಸಿ ಸಸಂದೇಹ ಮತ್ತು ಉತ್ಪ್ರೇಕ್ಷೆಗಳ ಸಮೃದ್ಧ ಪ್ರಯೋಗದಿಂದ ಆ ಪುಣ್ಯಾಕೃತಿಯನ್ನು ಮತ್ತಷ್ಟು ನಿಕಟವಾಗಿಸುತ್ತಾರೆ. ಹೀಗೆ ಕವಿಕಲ್ಪನೆಯ ಪರ್ಯಂತಭೂಮಿಯನ್ನು ಮುಟ್ಟಿದ ಬಳಿಕ ‘ಜ್ಞಾನದೀ ಧ್ಯಾನದೀ ಶಾಂತಿಯೀ ಕಾಂತಿಯೀ’ ಎಂಬ ಸಮಾನಶ್ರುತಿಯ ಯಥಾಗಣ (ರ-ಗಣ) ಶಬ್ದಗಳ ಮೂಲಕ ಬಣ್ಣನೆಗೊಂದು ತಿರುವನ್ನಿತ್ತು, ಅಪ್ಪಟ್ಟ ಬೌದ್ಧ ಪರಿಭಾಷೆಗಳ ಮೂಲಕ ಪ್ರಕೃತ ಪ್ರಕರಣಕ್ಕೆ ಸಂದರ್ಭೌಚಿತ್ಯವನ್ನು ಕಲ್ಪಿಸಿ ಕಡೆಗೊಂದು ಅತಿಶಯೋಕ್ತಿಯಿಂದ ಸಮಾಪನ ಮಾಡುತ್ತಾರೆ. ಇದು ನಿಜಕ್ಕೂ ಶಬ್ದಾರ್ಥಗಳ ಹದವರಿತ ಓಜಸ್ಸಿನಿಂದ ಒಡಮೂಡಿದ ಹೃದ್ಯವಾದ ವಿಚಿತ್ರಮಾರ್ಗದ ಅಕೃತ್ರಿಮ ಕಾವ್ಯಸಾಧನೆ.
ಪುಕ್ಕುಸಮಲ್ಲ ಎಂಬ ಒಬ್ಬ ಸಾಮಾನ್ಯ ಗೃಹಸ್ಥನ ಪ್ರಶ್ನೆಗಳಿಗೆ ಬುದ್ಧನು ಕೊಡುವ ಉತ್ತರದಲ್ಲಿ ಪೈಗಳು ‘ಸುತ್ತನಿಪಾತ’ದ ‘ಮಹಾಮಂಗಲಸುತ್ತ’ದ ಸಾರವನ್ನು ಸಮುಚಿತವಾಗಿ ತಂದಿದ್ದಾರೆ. ಇಲ್ಲಿ ಅಪ್ಪಟ ಕಾವ್ಯವೆನಿಸುವ ಎಳೆಗಳಿಲ್ಲದಿದ್ದರೂ ಇತಿವೃತ್ತದ ದೃಷ್ಟಿಯಿಂದ ವಸ್ತು-ಪಾತ್ರ-ಸಂದರ್ಭಗಳನ್ನು ಪೋಷಿಸುವ ಅಂಶ ಸಮೃದ್ಧವಾಗಿದೆ. ಈ ದಿವ್ಯೋಪದೇಶದಿಂದ ನವ ಚೈತನ್ಯ ಪಡೆದ ಪುಕ್ಕುಸಮಲ್ಲನ ಕೃತಜ್ಞತಾವಾಕ್ಯಗಳಲ್ಲಿ ಪೈಗಳು ಪಾತ್ರೋಚಿತವಾದ ಉಪಮೆಗಳ ಮಾಲೆಯನ್ನೇ ನೇಯ್ದಿದ್ದಾರೆ:
ಭಗವಂತ, ಬರಿಯ ಕಣಜದಿ ಗೋಣಿದವಸಮಂ
ಸುರಿವಂತೆ, ಬಿಟ್ಟ ಬಂಡಿಗೆ ಎತ್ತುಗಳ ಹೂಡ-
ಲೆಳೆವಂತೆ, ಬರಿಗೈಯ ಬಣಜಿಗಗೆ ಬಂಡವಳ-
ವೆರೆದಂತೆ, ಪಾಂಥಗಿರುಳಲಿ ಸತ್ರ ತೋರ್ದಂತೆ,
ಕೃತಕೃತ್ಯನಾದೆನ್... (ಪು. ೩೭೧)
ಪುಕ್ಕುಸಮಲ್ಲನ ವೃತ್ತಿ ಯಾವುದೆಂದು ಪೈಗಳೆಲ್ಲಿಯೂ ಬಾಯ್ಬಿಟ್ಟು ಹೇಳಿಲ್ಲ. ಆದರೆ ಈ ಪಂಕ್ತಿಗಳ ಮೂಲಕವೇ ಅವನೊಬ್ಬ ಧಾನ್ಯವರ್ತಕನೆಂದು ತೋರುತ್ತದೆ. ಕಣಜದಲ್ಲಿ ದವಸವನ್ನು ತುಂಬುವ ಪ್ರಕ್ರಿಯೆಯಿಂದ ಮೊದಲ್ಗೊಂಡು ಅದನ್ನು ಬಂಡಿಗೇರಿಸಿ ಎತ್ತುಗಳನ್ನು ಹೂಡುವವರೆಗೆ, ಇಂಥ ವಾಣಿಜ್ಯಕ್ಕೆ ಬೇಕಾದ ಬಂಡವಾಳವನ್ನು ವಣಿಜನು ಕೈಗೊಳ್ಳುವ ಹಂತದಿಂದ ಕ್ರಯ-ವಿಕ್ರಯಗಳಿಗಾಗಿ ಊರೂರು ಅಲೆದು ಸತ್ರಗಳಲ್ಲಿ ಇರುಳುಗಳನ್ನು ಕಳೆಯುವವರೆಗೆ ಅವೆಷ್ಟೋ ಔದ್ಯೋಗಿಕ ವಿವರಗಳು ಇಲ್ಲಿ ಧ್ವನಿಪೂರ್ಣವಾಗಿ ಬಂದಿವೆ. ಈ ಸಾಲುಗಳು ತಮ್ಮ ಹೋಲಿಕೆಗಳ ಮೂಲಕ ನಯಸೇನನ ‘ಧರ್ಮಾಮೃತ’ದ ಗದ್ಯವನ್ನು ನೆನಪಿಸುವಂತಿವೆ.
ಪುಕ್ಕುಸಮಲ್ಲನು ಬುದ್ಧನಿಗೆ ಹೊದ್ದಿಸಿದ ಹೊಂಬಣ್ಣದ ಹೊದಿಕೆಯಲ್ಲಿ ಭಗವಂತನು ‘ಸಂಜೆಯ ಹೊನ್ನ ಹೊದೆದ ಭಾಸ್ಕರನಂತೆ, ಹಣ್ಣೆಲೆಯೊಳಶ್ವತ್ಥದಂತೆ’ ಕಂಡನೆಂದೂ ಆತನ ಕಾಯಕಾಂತಿಯ ಮುಂದೆ ಅದು ‘ಸಂಧ್ಯಾರುಣಂ ಕೌಮುದಿಸುವಂತೆ, ಪಾರದಂ ತಗುಳ್ದ ಹೊನ್ನಂತೆ, ಹೊಟ್ಟುಡುಗಿದಾ ನೆಲ್ಲಂತೆ’ ಕಳೆಗುಂದಿತೆಂದೂ (ಪು. ೩೭೨) ಕವಿ ಬಣ್ಣಿಸಿರುವುದು ಅವರ ಲೋಕಪರಿಶೀಲನೆಗೆ ಒಳ್ಳೆಯ ನಿದರ್ಶನ. ಅಶ್ವತ್ಥದ ಹೋಲಿಕೆಯಂತೂ ಬುದ್ಧನ ಪ್ರತೀಕವಾದ ಬೋಧಿವೃಕ್ಷದ ಸಾಕಾರವಾಗಿದೆ. ಪಾದರಸ ಅಂಟಿಕೊಂಡ ಹೊನ್ನು ಮಂಕಾಗುವುದೆಂಬ ರಾಸಾಯನಿಕ ತಥ್ಯವನ್ನು ಬಲ್ಲವರಿಗೆ ಪೈಗಳ ವ್ಯುತ್ಪತ್ತಿ ಬೆರಗೀಯದಿರದು.
ಕುಂಬಾರ ಚುಂದನಿತ್ತ ಸೂಕರಮದ್ದವದ ಭಿಕ್ಷೆ ತನಗೆ ಸಾವನ್ನು ತಂದಿತೆಂದು ಆತನನ್ನು ಜರೆಯಬಾರದೆಂದು ಬುದ್ಧನು ಭಿಕ್ಷುಗಳಿಗೆ ಹೇಳುವುದಂತೂ ಆತನ ಮಹನೀಯತೆಗೆ ಸಾಕ್ಷಿ. ಆಗ ಬುದ್ಧನ ಬಾಯಲ್ಲಿ ಪೈಗಳು ಹೊರಡಿಸುವ ದೃಷ್ಟಾಂತಗಳೂ ಅಷ್ಟೇ ಅರ್ಥಪೂರ್ಣವಾಗಿವೆ:
...ಮೃಗವನಿಕ್ಕುವ ಶಬರ-
ನಂಬುವಂ ಜರೆಯದಿರಿ, ಬೇಸಗೆಗೆ ಕೊಳ ಬತ್ತೆ
ಶಫರಿಯಂ ಶಪಿಸದಿರಿ, ಜರಠ ಶಕಟಂ ಕುಸಿಯೆ
ಹೋರಿಯಂ ಹಳಿಯದಿರಿ (ಪು. ೩೭೩)
ಈ ಮಾತುಗಳಲ್ಲಿ ತನ್ನ ಅವಸಾನಕ್ಕೆ ಚುಂದನ ಭಿಕ್ಷೆ ಬರಿಯ ನಿಮಿತ್ತವಲ್ಲದೆ ಅದಕ್ಕಿಂತ ಮಿಗಿಲಾದ ಅನರ್ಥವೇನಲ್ಲವೆಂಬ ಬುದ್ಧನ ಉಪಶಾಂತಿ ಆತನು ತನ್ನ ಮರಣವನ್ನು ಹೇಗೆ ಸ್ವೀಕರಿಸಿದ್ದಾನೆಂಬುದಕ್ಕೂ ನಿದರ್ಶನ. ಇಂಥ ಹಲವು ಸಂದರ್ಭಗಳ ಮೂಲಕ ಪೈಗಳು ‘ವೈಶಾಖಿ’ಯಲ್ಲಿರುವುದು ಶಾಂತವಲ್ಲದೆ ಕರುಣವಲ್ಲ ಎಂದು ಧ್ವನಿಪೂರ್ಣವಾಗಿ ಬಿಂಬಿಸಿದ್ದಾರೆ.
ಮುಂದೆ ಒಂದು ನಿಡಿದಾದ ಭಾಗದಲ್ಲಿ ಸಂಜೆಯ ಬಣ್ಣನೆ ಬಂದಿದೆ. ಇದು ಈ ಮುನ್ನ ಬಂದಿದ್ದ ಪ್ರಭಾತವರ್ಣನೆಗೆ ಸೊಗಸಾದ ಸಂವಾದಿ:
ಅನಿತರೊಳು ಭಾಸ್ಕರಂ ನಡುಪಡುವಣಾಕಾಶ-
ಕಿಳಿಯೆ, ಬಿಸಿಲಿನ ಬೇಗೆ ತವೆಯೆ, ಜುಂಯ್ಯನೆ ಗಾಳಿ
ಬೀಸೆ, ಮಧ್ಯಾಹ್ನ ಮಲ್ಲಿಗೆಯರಳೆ, ತುರುಮಂದೆ
ಮೇಹುಗಾಡಿಂದ ಝಣಝಣಿಸಿ ಮನೆ ಮರಳುತಿರೆ
ಬಿಸಿಲ ಝಳಕೆಲೆಯ ಮರೆಗಾದ ಕಿರುವಕ್ಕಿ ಹೊರ-
ಹೊಮ್ಮಿ ಚಿಲಿಮಿಲಿಸುತಿರೆ, ಹದ್ದು ಮಂಡಲಿಸುತಿರೆ,
ಮರಗಳಲಿ ಕೋಗಿಲೆ ಕುಹೂಕುಹೂಕರಿಸುತಿರೆ,
ಕಃ ಕಃ ಎನುತ್ತ ಕೆಂಬೂತ ಸಂಸ್ಕೃತಿಸುತಿರೆ
ಕಾಡಕ್ಕಿ ಕುಟುಕಿ ಗಿಳಿವಿಂಡು ಹಿಂದೆರಳುತಿರೆ
ಮಿಂಚುಳ್ಳಿ ನೀರಿಳಿಯೆ, ಸೂರ್ಗಗಳಲಿ ಸಸಿನಿದ್ದ
ಪಾರಿವಂ ಗುಬ್ಬಳಿಸೆ, ಕೊರಳನೊಲಿಸುತ ನವಿಲು
ಹೊಲದ ಬಳಿ ಕೆದಕಾಡೆ, ಮರದೊಳಳಿಲೋಲಾಡೆ,
ಕುರಿಯಾಡು ಮರದಡಿಯೊಳುದುರೆಲೆಯ ಜಗಿದಾಡೆ,
ಕೋತಿ ಕಿಚಿಕಿಚಿಸಿ ಜಗ್ಗಿಸಿ ಮರವ ಜಿಗಿದಾಡೆ,
ನೀರೆಡೆಯ ಗರುಕೆಯಲಿ ಗುಂಪೆರಳೆ ಸುಳಿದಾಡೆ,
ಅಗಸನೊಣಬಟ್ಟೆಗಳ ಕಟ್ಟಿ ಮನೆಯಾಗೆ, ಬೆಸ-
ದಂ ಗಾಳಗೊಂಡು ಮಡುವಾಗೆ, ಎಣ್ಣೆಯ ಕೊಡವ-
ನೆತ್ತಿ ಗಾಣಿಗತಿ ಅಂಗಡಿಯಾಗೆ ನಡೆಯೆ, ಅಂ-
ಗಡಿಬೀದಿಯಲಿ ಕೊಡುವ ಕೊಳುವ ಗೊಂದಲವಾಗೆ,
ದಾರಿಯಲಿ ಬರುವ ಹೋಗುವ ದಾರಿಗರ ಹೆಜ್ಜೆ-
ಯಾಗಲಿದೊ ಬುದ್ಧನಲ್ಲಿಂದಲೆದ್ದು... (ಪು. ೩೭೩-೭೪)
ಈ ಸುದೀರ್ಘ ಭಾಗ ಸ್ವಭಾವೋಕ್ತಿಯ ಸಾಮ್ರಾಜ್ಯ. ಅಪರಾಹ್ಣದಿಂದ ಮುಸ್ಸಂಜನೆಯವರೆಗಿನ ಹೊತ್ತಿನ ಮಾರ್ಪಾಡನ್ನು ಈ ಭಾಗ ಕ್ರಮಕ್ರಮವಾಗಿ ರೂಪಿಸಿದೆ. ಮೊದಲ ಹದಿನೈದು ಸಾಲುಗಳಲ್ಲಿ ಪ್ರಾಣಿ-ಪಕ್ಷಿಪ್ರಕೃತಿಯ ಪ್ರಸ್ತಾವವಿದ್ದರೆ ಉಳಿದ ಭಾಗದಲ್ಲಿ ಮಾನವ ಸಂಸ್ಕೃತಿ-ವ್ಯವಹೃತಿಗಳ ವಿವರಗಳಿವೆ. ಇವೆರಡರಲ್ಲಿಯೂ ವಿಶೇಷವೆನಿಸುವುದು ಪೈಗಳು ಕಂಡು ಕಾಣಿಸುವ ಸೂಕ್ಷ್ಮಾತಿಸೂಕ್ಷ್ಮ ವಿವರಗಳ ಸಹಜತೆ ಮತ್ತು ಸುಭಗತೆ. ಈ ಬಗೆಯ ಕಾಣ್ಕೆ ಯಾವ ಕವಿಗೂ ಸುಲಭದಲ್ಲಿ ಸಿದ್ಧಿಸುವುದಿಲ್ಲ. ಇಲ್ಲಿ ಎಲ್ಲಿಯೂ ಉದ್ವೇಗವಿಲ್ಲ, ಸಂಭ್ರಮವಿಲ್ಲ, ಆತಂಕವಿಲ್ಲ, ಅರ್ತಿಯಂತೂ ಮೊದಲೇ ಇಲ್ಲ. ಬುದ್ಧನ ಪರಿನಿರ್ವಾಣವೆಂಬುದು ಬೌದ್ಧರ ಪುಟ್ಟ ಜಗತ್ತಿನ ಮಟ್ಟಿಗೆ ಒಂದು ಆಘಾತಕಾರಿ ಘಟನೆಯಾದರೆ ಮಿಕ್ಕ ಜಗತ್ತಿಗೆ ಇದರ ಪರಿವೆಯೇ ಇಲ್ಲ! ಇಂಥ ಜಗತ್ತಿನ ಸದಸ್ಯರಲ್ಲೊಬ್ಬನೆಂಬಂತೆ ಬುದ್ಧ ಭಗವಂತನು ತನ್ನ ಬಾಳನ್ನು ಮುಗಿಸಿಕೊಳ್ಳುತ್ತಿರುವುದು ಆತನಿಗೇ ಸಲ್ಲುವ ಮಹತ್ತ್ವ. ಇಂಥ ‘ಸಾಧಾರಣ’ ಸಂಧ್ಯೆಯೂ ಪ್ರಕೃತ ಕಾವ್ಯದ ಅಸಾಧಾರಣ ರಸವನ್ನು ಧ್ವನಿಸುತ್ತಿರುವುದು ಸಹೃದಯರಿಗೆ ಸುವೇದ್ಯ. ಇನ್ನು ರಾಚನಿಕಸ್ತರದಲ್ಲಿ ನೋಡಿದರೆ, ಗೋವಿಂದ ಪೈಗಳು ಅದೆಷ್ಟು ಬಗೆಯ ಕ್ರಿಯಾಪದಗಳನ್ನೂ ಕೃದಂತಗಳನ್ನೂ ಬಳಸಿರುವುದು ಯಾರನ್ನೂ ನಿಬ್ಬೆರಗಾಗಿಸುವ ಸಂಗತಿ. ಇಲ್ಲಿಯ ಅನೇಕ ಶಬ್ದನಿಷ್ಕಗಳನ್ನು ಸ್ವಯಂ ಪೈಗಳೇ ಟಂಕಿಸಿದ್ದಾರೆ. ಮಂಡಲಿಸು, ಕುಹೂಕರಿಸು, ಸಂಸ್ಕೃತಿಸು, ಮನೆಯಾಗೆ, ಮಡುವಾಗೆ, ಅಂಗಡಿಯಾಗೆ ಮೊದಲಾದ ಅನೇಕ ಶಬ್ದರೂಪಗಳ ಸಾಧುತ್ವಕ್ಕೆ ಪೈಗಳೇ ಪಾಣಿನಿ, ಪೈಗಳೇ ಪತಂಜಲಿ! ಸಂಸ್ಕೃತಕ್ಕೆ ಹೋಲಿಸಿದರೆ ಕನ್ನಡದಂಥ ದೇಶಭಾಷೆಗಳಲ್ಲಿ ಅಪ್ಪಟ ಆಖ್ಯಾತಪದಗಳ ಕೊರತೆಯುಂಟೆಂದು ಸಾಮಾನ್ಯವಾಗಿ ಹೇಳುವುದುಂಟು. ಇದು ಸತ್ಯವೂ ಹೌದು. ಹೀಗಿರುವಾಗ ಈ ಕಾವ್ಯದ ಪ್ರಸ್ತುತ ಭಾಗವೂ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಪೈಗಳು ಕನ್ನಡದ ಕ್ರಿಯಾಪದಗಳ ಸಮೃದ್ಧಿಯನ್ನು ಹೆಚ್ಚಳಿಸಿ ಕೊಟ್ಟಿರುವುದು ನಿಜಕ್ಕೂ ದೊಡ್ಡ ಭಾಷಿಕ ಸಾಧನೆ.
ಬುದ್ಧನು ಪಾವೆಯಿಂದ ಕುಶಿನಾರದ ಹೊರಗಿರುವ ಸಾಲವನಕ್ಕೆ ಬಂದು ಸಿಂಹಶಯ್ಯೆಯಲ್ಲಿ ವಿಶ್ರಮಿಸುತ್ತಾನೆ. ಅಲ್ಲಿ ಆನಂದನ ಕೆಲವು ಪ್ರಶ್ನೆಗಳಿಗೆ ಉತ್ತರವನ್ನೂ ಕೊಡುತ್ತಾನೆ. ಇವೆಲ್ಲ ಬೌದ್ಧ ಭಿಕ್ಷುಗಳ ಆಚಾರಕ್ಕೂ ಆ ದರ್ಶನದ ವಿಚಾರಕ್ಕೂ ಸಂಬಂಧಿಸಿದ ಮಾತುಗಳು. ಇಲ್ಲಿ ಪ್ರಶ್ನೋತ್ತರವೆಂಬ ಶೃಂಖಲಾಮೂಲದ ಅಲಂಕಾರದ ಛಾಯೆಯನ್ನು ಪೈಗಳು ತಂದಿರುವುದು ಗಮನಾರ್ಹ (ಪು. ೩೭೫). ಈ ಮೂಲಕ ಆಗಮಿಕ ಕಾವ್ಯವೆನಿಸಿದ ‘ವೈಶಾಖಿ’ಯ ಶುದ್ಧ ಕಾವ್ಯತ್ವವನ್ನು ಕಾಪಾಡಿಕೊಳ್ಳುವ ಯಾವೊಂದು ಅವಕಾಶವನ್ನೂ ಕವಿ ಬಿಡುತ್ತಿಲ್ಲವೆಂದು ತಿಳಿಯುತ್ತದೆ. ಇದು ನಿಜಕ್ಕೂ ಮುದಾವಹ. ಅನಂತರ ಇರುಳಾಗುತ್ತದೆ. ಇದನ್ನು ಪೈಗಳು ಹೇತೂತ್ಪ್ರೇಕ್ಷೆಯ ಮಾಲಿಕೆಯ ಮೂಲಕ ಬಣ್ಣಿಸಿದ್ದಾರೆ:
ಅನಿತರೊಳೆ ತನ್ನ ಬಂಧುವಿನ ದೇಹಾತ್ಯಯಂ
ಕಾಣಲಾರದೆ ಅಕಟ; ಆದಿತ್ಯನಸ್ತಮಿಸೆ,
ಒಯ್ಯನೊಯ್ಯನೆ ಹಕ್ಕಿ ತಲೆವಾಗಿ ಗೂಡುಗೊಳೆ,
ಬಲವಂದು ಪೋಪೆವೆನೆ ಗಬ್ಬಿಲಂ ಸುಳಿದಾಡೆ,
ಅಂದೆಮ್ಮ ಕುಂಟುಮರಿಯಂ ಹೆಗಲಿಗೆತ್ತಿ ತಾ-
ಯ್ಬಳಿಗೊಯ್ದ ನಮ್ಮಾತನಿವನೆಂದು ಪರಿಚಿಸುತ
ಮನೆಮರಳ್ವ ಕುರಿವಿಂಡು ಕಂಡು ಮೇಮೇಕರಿಸೆ,
ಈ ಶೋಕವಾರ್ತೆಯಂ ಮುಂದಿಳುಹಲೆನೆ ಗಾಳಿ-
ಬಟ್ಟೆಯಲಿ ಟಿಟ್ಟಿಭಂ ಟಿಟ್ಟಿಸುತ ತೊಳಲಾಡೆ,
ಸುಗತನಂ ಬೀಳ್ಕೊಡುವ ಪಶ್ಚಿಮೋತ್ಸವದೊಳೆ-
ತ್ತೆತ್ತಲುಂ ಬೆಳೆವ ದೀಪಾವಳಿಯೊ ಎನಲು ಮನೆ-
ಮನೆಯ ದೀಪಂ ಮಿಂಚುಹುಳದ ದೀಪಂಬೆರಸು
ಬಾನೊಳಂತೆಯೆ ನೀರೊಳುಡುವ ದೀಪಂ ಬೆಳಗೆ,
ಅಂದಿಗಿದೆ ವೈಶಾಖಪೂರ್ಣಮಿಗೆ ಜನಿಸಿ ಮೇ-
ಣಿಂದಿಗದೆ ವೈಶಾಖಪೂರ್ಣಮಿಯೊಳಿರುಳು ಪರಿ-
ನಿರ್ವಾಣ ಹೊಂದುವೆನ್ನಾತನನ್ನಿರುಳುದ್ದ
ಕೊನೆಗೊಮ್ಮೆ ಕಣ್ದೀವೆ ಕಾಂಬೆನಿಂದೆನೆ ಮಂಜು-
ಕಂಬನಿಯ ಮಿಡಿಯುತ್ತ ತೊಡೆಯುತ್ತಲಿದೊ ಸುಧಾ-
ಸೂತಿ ಮೂಡಣ ಗಗನದಲಿ ನುಣ್ಣನಡರಿ ಬರೆ (ಪು. ೩೭೮-೭೯)
ಇಲ್ಲಿಯವರೆಗೆ ಪ್ರಕೃತಿವರ್ಣನೆಗಳಲ್ಲೆಲ್ಲ ಪೈಗಳು ಹಲವು ಅಲಂಕಾರಗಳನ್ನು ಕಂತುಕಂತೆಂಬಂತೆ ಬಳಸುತ್ತಿದ್ದುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲಿ ಸ್ವಭಾವೋಕ್ತಿಯ ಬಣ್ಣವೇ ಭಾಸವಾಗುವಂತೆ ಹೇತೂತ್ಪ್ರೇಕ್ಷೆಯನ್ನು ಆದ್ಯಂತ ಬಳಸಿರುವುದು ವಿಶೇಷವೆನಿಸಿದೆ. ವಕ್ರೋಕ್ತಿಯನ್ನು ವಿಶೃಂಖಲವಾಗಿ ಬಳಸಿ, ಅದನ್ನು ವಿಚಿತ್ರ ಕಲ್ಪನೆಗಳಿಗೆ ದಾಸಿಯನ್ನಾಗಿಸುವ ಮೂಲಕ ಸಹೃದಯರನ್ನು ವಸ್ತುಗಾಂಭೀರ್ಯದಿಂದ ದೂರಕ್ಕೆ ಸೆಳೆದೊಯ್ಯಬಾರದೆಂಬ ಎಚ್ಚರವನ್ನೂ ಈ ಭಾಗ ಬಿಂಬಿಸಿದೆ. ಇಲ್ಲಿಯ ಪಂಕ್ತಿಗಳಲ್ಲಿ ಕವಿಕಲ್ಪಿತವಾಗಿರುವುದು ‘ಹೇತುಗಳು’ ಮಾತ್ರ. ಮಿಕ್ಕದ್ದೆಲ್ಲ ಯಾವುದೇ ಇರುಳಿನಲ್ಲಿ ಆಗುವಂಥದ್ದೇ. ಹೀಗೆ ಕಣ್ಣುಕೋರೈಸುವಂತೆ ಕಲ್ಪನೆಗಳನ್ನು ಕೆರಳಿಸದೆ, ಅಂಗಿರಸವಾದ ಶಾಂತಕ್ಕೆ ಇಂಬೀಯುವAತೆ ಸೌಮ್ಯವಾಗಿ ಹೆಣೆಯುವುದು ಕವಿಯ ಔಚಿತ್ಯಪರಿಜ್ಞಾನಕ್ಕೆ ಒಳ್ಳೆಯ ಸಾಕ್ಷಿ.
ಅನಂತರ ಕುಶಿನಾರದಿಂದ ಮಲ್ಲರ ಸಮೂಹ ಬಂದು ಬುದ್ಧನಿಂದ ಬಾಳ ಪಯಣದ ಬುತ್ತಿಗಳನ್ನು ದಿವ್ಯೋಪದೇಶದ ರೂಪದಲ್ಲಿ ಗ್ರಹಿಸುತ್ತದೆ. ಆಗ ಆ ಗುಂಪಿಗಾದ ಸಂತೃಪ್ತಿಯನ್ನು ಅದರ ಬಾಯಿಂದಲೇ ದೃಷ್ಟಾಂತಗಳ ಮೂಲಕ ಪೈಗಳು ನಿರೂಪಿಸುತ್ತಾರೆ: ‘ಮಳೆಗೆರೆಯೆ ಕೊಳಗಳ ಹಾಂಸೆ ಹೋಹಂತೆ, ಬರಿಯ ದೊಣೆಯೊಳಗೆ ಕಣೆ ತೀವಂತೆ, ನೆಲಹತ್ತಿದಂಬಿಯಿಂ ನೀರ ಮೊಗೆದಂತೆ, ನೂರಾರು ಜಲಕುಂಭದಲಿ ತರಣಿ ನೆರೆವಂತೆ, ಬಡಬಗ್ಗನಿಗಯಾಚಿತಂ ಕಾಲೆಡವಿ ನಿಧಿಯೊದವಿದಂತೆಮಗೆ ಭಗವಂತನಿಂದ ಧರ್ಮಂ ತಿಳಿದುದು’ (ಪು. ೩೮೧). ಪ್ರಕೃತಿಗೆ ನಿಕಟವಾಗಿ ಬದುಕುತ್ತಿದ್ದ ಕುಶಿನಾರದ ಆ ಮಲ್ಲರ ಸಮೂಹಕ್ಕೆ ಪರಿಚಿತವಾದ ಸಂದರ್ಭಗಳೇ ಇಲ್ಲಿ ದೃಷ್ಟಾಂತಗಳಾಗಿ ಕೋಡಿವರಿದಿರುವುದು ಪಾತ್ರೋಚಿತವಾಗಿದೆ.
ಬುದ್ಧನಿಂದಲೇ ಕಟ್ಟಕಡೆಗೆ ದೀಕ್ಷೆಯನ್ನು ಸ್ವೀಕರಿಸಿದ ಸುಭದ್ರನೆಂಬ ಪರಿವ್ರಾಜಕನ ಬಾಯಲ್ಲಿ ಬರುವ ಮಾತುಗಳು ಅರ್ಥಪೂರ್ಣವಾಗಿವೆ: ‘ಶ್ರಮಣ ಗೌತಮನ ಪರಿನಿರ್ವಾಣವಹುದಂತೆ, ಕಡಲ ನಡಸುವ ಶೈಲದೀಪವಾರುವುದಂತೆ, ನಾಡನೂಡಿಸುವ ಸ್ರವಂತಿ ಬತ್ತುವುದಂತೆ’ (ಪು. ೩೮೧). ಈ ಮಾತುಗಳಲ್ಲಿರುವ ಅಪ್ರಸ್ತುತಪ್ರಶಂಸಾಲಂಕಾರದ ಸೊಗಸು ಮನನೀಯ. ಪ್ರಬುದ್ಧನಾದ ಸುಭದ್ರ ಮಿಕ್ಕವರಂತೆ ಬುದ್ಧನ ಪರಿನಿರ್ವಾಣವನ್ನು ವಾಚ್ಯಾಂಶ ಹೆಚ್ಚಿರುವ ನುಡಿಗಳ ಮೂಲಕ ಬಣ್ಣಿಸದೆ ವ್ಯಂಗ್ಯಾಂಶದ ಪ್ರಾಚುರ್ಯವಿರುವ ಈ ಅಲಂಕಾರದ ಮೂಲಕ ಸೂಚಿಸಿರುವುದು ಅವನ ಸಂವೇದನೆಗೂ ಕವಿಯ ಕೌಶಲಕ್ಕೂ ಏಕಕಾಲದಲ್ಲಿ ಸಮರ್ಥ ನಿದರ್ಶನವೆನಿಸಿದೆ. ಅಂತೆಯೇ ಇವನಿಗೆ ದೀಕ್ಷೆಯನ್ನಿತ್ತು ಧರ್ಮೋಪದೇಶವನ್ನು ಮಾಡಿದ ಬುದ್ಧನಿಗೂ ಸತ್ಪಾತ್ರನಿಗೆ ಜ್ಞಾನವನ್ನು ಹಂಚಿಕೊಟ್ಟ ತೃಪ್ತಿ ಮೂಡುವುದನ್ನು ಪೈಗಳು ಸೊಗಸಾದ ಮೂರು ದೃಷ್ಟಾಂತಗಳ ಮೂಲಕ ತಿಳಿಸಿದ್ದಾರೆ: ‘ಕಾಂಬೊಡನೆ ಕಣ್ಣು ಬಾನ್ದಳವನೊಳಕೊಳುವಂತೆ, ಹಚ್ಚುವುದೆ ದೀವಿಗೆಯ ಬೆಳಕು ಮನೆದೀವಂತೆ, ಜಾಳಿಗೆಯ ತೆರೆವೊಡನೆ ಗಾಳಿಯೊಳವೊಗುವಂತೆ, ನನ್ನ ಮಾತನ್ನವಂ ಗ್ರಹಿಸುವಂ ಕ್ಷಣದೊಳ್’ (ಪು. ೩೮೨). ಇಲ್ಲಿಯ ಒಂದೊಂದು ಅಲಂಕಾರವೂ ಅರ್ಥಪೂರ್ಣವಾಗಿದೆ; ಲೋಕಪರಿಶೀಲನೆಯ ರಸಫಲವಾಗಿದೆ. ಇದಕ್ಕಿಂತ ಪರಿಣಾಮಕಾರಿಯಾಗಿ ತನ್ನ ಉಪದೇಶದ ಸಾರ್ಥಕ್ಯವನ್ನು ಉಪದೇಶಕನು ಬಿಂಬಿಸಲು ಸಾಧ್ಯವಿಲ್ಲ. ಅದ್ವೈತದೃಷ್ಟಿಯುಳ್ಳ ಭಾರತೀಯ ದರ್ಶನಗಳು ಜ್ಞಾನಕ್ಕೂ ಅನುಭವಕ್ಕೂ ವ್ಯತ್ಯಾಸವನ್ನಾಗಲಿ, ಅನುಕ್ರಮವನ್ನಾಗಲಿ ಒಪ್ಪುವುದಿಲ್ಲ. ವಿಶೇಷತಃ ಅರಿವು-ಇರವುಗಳ, ಜ್ಞಾನ-ಅನುಭವಗಳ ನಡುವೆ ಭೇದವಿಲ್ಲವೆಂಬುದು ಬೌದ್ಧ ಮತ್ತು ಶಾಂಕರ ದರ್ಶನಗಳ ನಿಲವು. ಈ ತಥ್ಯವನ್ನು ಇಲ್ಲಿಯ ದೃಷ್ಟಾಂತಗಳು ಮನಮುಟ್ಟುವಂತೆ ಒಕ್ಕಣಿಸಿವೆ. ಕಣ್ಣು ತೆರೆಯುವುದಕ್ಕೂ ಆ ಮೂಲಕ ಅನಂತವಾದ ಆಕಾಶದ ಕಾಣ್ಕೆಯಾಗುವುದಕ್ಕೂ ಅಂತರವಿಲ್ಲ. ದೀವಿಗೆಯ ಬತ್ತಿಗೆ ಬೆಂಕಿ ಅಂಟುವುದಕ್ಕೂ ಅದರ ಬೆಳಕು ಮನೆಯನ್ನು ತುಂಬುವುದಕ್ಕೂ ಅಂತರವಿಲ್ಲ. ಇದೇ ರೀತಿ ಕಿಟಕಿ ತೆರೆಯುವುದಕ್ಕೂ ಗಾಳಿ ಒಳಗೆ ನುಗ್ಗುವುದಕ್ಕೂ ಅಂತರವಿಲ್ಲ. ಹೀಗೆ ತತ್ತ್ವವನ್ನು ಕಾವ್ಯವನ್ನಾಗಿ ಕಂಡರಿಸಬಲ್ಲ ಕವಿಯ ಶಕ್ತಿ ಹಿರಿದು.
ಬುದ್ಧನು ಸುಭದ್ರನನ್ನೂ ಒಳಗೊಂಡಂತೆ ಆನಂದ ಮೊದಲಾದ ಎಲ್ಲ ಭಿಕ್ಷುಗಳಿಗೂ ಚರಮೋಪದೇಶವನ್ನು ಮಾಡುತ್ತಾನೆ. ಇಲ್ಲಿ ಪೈಗಳು ಅಡಕವಾಗಿ ನಾಲ್ಕು ಆರ್ಯಸತ್ಯಗಳನ್ನೂ ಆರ್ಯ ಅಷ್ಟಾಂಗಿಕ ಮಾರ್ಗವನ್ನೂ ನಿರೂಪಿಸುತ್ತಾರೆ. ಇಲ್ಲಿ ಮತ್ತೆ ಉಕ್ತಿವೈಚಿತ್ರ್ಯಗಳ ಮೆರೆವಣಿಗೆ ಅಣಿಗೊಂಡಿದೆ. ಬುದ್ಧನ ಕೊನೆಯ ಮಾತುಗಳಲ್ಲಿ ಸತ್ಯದಂತೆಯೇ ಸೌಂದರ್ಯವೂ ಮೆರೆಯಬೇಕೆಂಬ ಕವಿಯ ಇಂಗಿತವಿಲ್ಲಿ ಸಾಫಲ್ಯ ಗಳಿಸಿದೆ. ಅಲ್ಲಿಯ ಒಂದೆರಡು ಪಂಕ್ತಿಗಳು ಪರಿಭಾವನೀಯ. ಧರ್ಮೋಪದೇಶದ ಹೊರತು ಮುಮುಕ್ಷುವಿಗೆ ಮಾರ್ಗಾಂತರವಿಲ್ಲವೆಂದು ‘ಗೋಳಿಯಾ ಅರಳಂತೆ, ಗಾಳಿಯಾ ನೆರಳಂತೆ, ಗರಿಯಿರದ ಖಗದಂತೆ, ಹೆರೆ ಬಿಡದುರಗದಂತೆ ಯಾರಿಲ್ಲ’ ಎಂಬ ವಿನೋಕ್ತಿಗಳ ಮೂಲಕ ಬುದ್ಧನು ತಾನು ಕಂಡುಕೊಂಡ ಸತ್ಯದ ಮಹತ್ತ್ವವನ್ನು ಸಾರುತ್ತಾನೆ. ವೇದಾಂತದ ‘ನೇತಿಮಾರ್ಗ’ವನ್ನು ಬಲ್ಲವರಿಗೆ ಈ ವಿನೋಕ್ತಿಗಳ ಸ್ವಾರಸ್ಯವನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಇದನ್ನು ಅರಿತು ಆನಂದಿಸಿದ ಸುಭದ್ರ ತನಗೆ ತಥಾಗತನು ಕರುಣಿಸಿದ ತಿಳಿವು ‘ದಾರಿ ತಪ್ಪಿರೆ ದಾರಿಯೊರೆವಂತೆ, ಕತ್ತಲಲಿ ಸೊಡರ ತೋರ್ವಂತೀಸಿ ದಣಿದವಗೆ ನಿಲುಗಾಲು ದೊರೆತಂತೆ, ಕೆರೆಯೊಣಗಿ ತಳವಳಿಪ ಮೀನ್ಗೆ ಮಳೆಗರೆದಂತೆ, ಕಣ್ಣರಸಿ ಸೋತ ಜೋಯಿಸಗೆ ಹೊಸ ತಾರೆ ಕಾಣಿಸಿದಂತೆ, ಭಗವಂತನಿಂದ ಧರ್ಮಂ ಪ್ರಕಾಶಿತವಾಯ್ತು’ (ಪು. ೩೮೪). ತನಗೆ ತಾರಕವಾಯಿತೆಂದು ಕೃತಜ್ಞತೆಯಿಂದ ಉದ್ಗರಿಸುತ್ತಾನೆ. ಇಲ್ಲಿಯ ದೃಷ್ಟಾಂತಗಳು ತುಂಬ ಸಾರ್ಥಕವಾಗಿವೆ. ಬುದ್ಧನ ಉಪದೇಶ ದಾರಿ ತಪ್ಪಿದವರಿಗೆ ದಿಕ್ಕಾಗಿ, ಕಾವಳದಲ್ಲಿ ಕಳೆದುಹೋದವರಿಗೆ ಬೆಳಕಾಗಿ, ನೆಲ್ಲೆಯಿಲ್ಲದವರಿಗೆ ನೆಲೆಯಾಗಿ, ಬಾಳಿಲ್ಲದವರಿಗೆ ಬಾಳಾಗಿ ಸಲ್ಲುವುದೆಂಬ ಸೂಚನೆಯ ಜೊತೆಗೆ ಅವನು ಸಾರಿದ ಸತ್ಯ ‘ಹೊಸತೂ’ ಅಲ್ಲ, ಕೃತ್ರಿಮವೂ ಅಲ್ಲ; ಅದು ಎಂದಿನಿಂದ ಇದ್ದದ್ದೇ; ಆದರೆ ಇದೀಗ ಪ್ರತ್ಯಭಿಜ್ಞಾತವಾಗಿದೆ - ಎಂಬ ದ್ವನಿಯನ್ನು ಮೀಟುತ್ತದೆ. ಇದು ‘ಕಣ್ಣರಸಿ ಸೋತ ಜೋಯಿಸಗೆ ಹೊಸ ತಾರೆ ಕಾಣಿಸಿದಂತೆ’ ಎಂಬ ದೃಷ್ಟಾಂತದಲ್ಲಿ ಸ್ಪಷ್ಟವಾಗಿದೆ. ಜೋಯಿಸನು ಹೊಸ ತಾರೆಗಳನ್ನು ಹುಡುಕುತ್ತ ಕಣ್ಸೋತು ಕೈಚೆಲ್ಲಿದಾಗ ಅವನ ನಯನಪಥಕ್ಕೆ ನವ ನಕ್ಷತ್ರವೊಂದು ತಾನಾಗಿ ಕಾಣಿಸಿಕೊಂಡ ಮಾತ್ರಕ್ಕೆ ಅದು ಅವನ ಸೃಷ್ಟಿಯೂ ಅಲ್ಲ, ನಕ್ಷತ್ರಲೋಕದ ನವ ನಿರ್ಮಿತಿಯೂ ಅಲ್ಲ. ಇದು ಕೇವಲ ಇದ್ದೇ ಇದ್ದುದರ ಅಭಿಜ್ಞಾನ. ದಿಟವಾದ ಜ್ಞಾನವೂ ಅಷ್ಟೇ; ಅದು ವಸ್ತುಸ್ಥಿತಿಯ ಸಾಕ್ಷಾತ್ಕಾರವಲ್ಲದೆ ಉತ್ಪಾದ್ಯವೋ ವೈಕಾರ್ಯವೋ ಆರೋಪಿತವೋ ಅಲ್ಲ. ಇವೆಲ್ಲ ದರ್ಶನಶಾಸ್ತ್ರಗಳಲ್ಲಿ ನೆಲೆನಿಂತ ಮೌಲ್ಯಗಳು. ಇವನ್ನು ಕಲೆಯಾಗಿಸುವಲ್ಲಿ ಪೈಗಳ ಪ್ರತಿಭಾ-ವ್ಯುತ್ಪತ್ತಿಗಳು ಚೆನ್ನಾಗಿ ದುಡಿದಿವೆ.
ಬುದ್ಧನಿಂದ ಕಟ್ಟಕಡೆಗೆ ಪ್ರವ್ರಜ್ಯೆಯನ್ನು ಪಡೆದ ಸುಭದ್ರನನ್ನು ಕವಿಗಳು ‘ಸಂಧ್ಯಾರ್ಕನಂತಿಕದೆ ಕೆಂಗಲಿಪ ಶುಕ್ರನೆನೆ, ದೀಪಿಕಾಸ್ತಂಭದಿಂ ಕರದೀಪ ಹಚ್ಚಿತೆನೆ’ (ಪು. ೩೮೪) ಎಂದು ಬಣ್ಣಿಸಿರುವುದು ಸೊಗಸಾದ ಉಪಮಾಲಂಕೃತಿ. ಮೊದಲ ಉಪಮೆಯಲ್ಲಿ ಬುದ್ಧ ಮತ್ತು ಸುಭದ್ರರ ಕಾಷಾಯವಸನವೂ ಧ್ವನಿತವಾಗಿದೆ. ಎರಡನೆಯ ಉಪಮೆಯಲ್ಲಿ ಜ್ಞಾನೋದಯದ ಬಳಿಕ ಗುರು-ಶಿಷ್ಯರೆಂಬ ಭೇದವಿಲ್ಲದೆ ಎಲ್ಲರೂ ಬುದ್ಧರೇ ಆಗುವರೆಂಬ ಸೂಚನೆಯಿದೆ.
ಕಟ್ಟಕಡೆಯಲ್ಲಿ ಬುದ್ಧನ ಪರಿನಿರ್ವಾಣವನ್ನು ಆರು ಉಪಮೆಗಳಿಂದ, ಅದರ ಪರಿಣಾಮವನ್ನು ಮೂರು ಉಪಮೆಗಳಿಂದ ಪೈಗಳು ವರ್ಣಿಸುತ್ತಾರೆ:
ನೀರ ಬುದ್ಬುದದಂತೆ, ಕರೆಗುರುಳ್ವ ತೆರೆಯಂತೆ,
ಉದುರ್ವ ತಾರಗೆಯಂತೆ, ಸುರಿದು ಬರಿದಹ ಮೋಡ-
ದಂತೆ, ಬತ್ತಿಯುಮೆಣ್ಣೆ ಮುಗಿದ ದೀವಿಗೆಯಂತೆ,
ಕ್ಷಿತಿಜದಿಂ ಸಿಡಿದ ಮಿಂಚಂಬರದೊಳಣೆವಂತೆ,
ಭಗವಂತನೊಡನೆ ಪರಿನಿರ್ವಾಣವಡೆದಂ.
ಗಡಗಡನೆ ಪೊಡವಿ ನಡುಗಿತು ಪಡಿಯಿನೊಡವೆಯಂ
ಸೆಳೆದ ತಕ್ಕಡಿಯಂತೆ, ಮುಂಗಾರ ವಾತಾಲಿ-
ಗೊಲೆವ ಕದಲಿಕೆಯಂತೆ, ಹೇರ್ದ ನಿಲುಭಾರವನ್
ಜಗ್ಗನೊಗೆದಾ ಹಡಗದಂತೆ! (ಪು. ೩೮೬-೮೭)
ಈ ಉಪಮೆಗಳ ಔಚಿತ್ಯ-ಸಾರ್ಥಕ್ಯಗಳು ಸ್ವಯಂವೇದ್ಯ. ಆದರೂ ಇವುಗಳ ಸ್ವಾರಸ್ಯವನ್ನು ಸ್ವಲ್ಪವಾದರೂ ವಿವರಿಸಬೇಕು. ನೀರ್ಗುಳ್ಳೆ ನೀರಿಂದಲೇ ಆಗಿರುವಂಥದ್ದು. ಅದರೊಳಗಿನ ಗಾಳಿ ಹೊರಗಿನ ಗಾಳಿಯೊಡನೆ ಸೇರುವುದೆಂದರೆ ನೀರ್ಗುಳ್ಳೆ ಒಡೆಯುವುದೆಂದೇ ಅರ್ಥ. ಬುದ್ಧನ ದೇಹೋಪಾಧಿ ನೀಗಿ ಚೈತನ್ಯವು ವಿಶ್ವವ್ಯಾಪಕವಾಗುವುದು ಇಲ್ಲಿಯ ಧ್ವನಿ. ಇದರ ಮುಂದಿನ ಉಪಮೆಯಲ್ಲಿ ದಡಕ್ಕೆ ಅಪ್ಪಳಿಸುವ ತೆರೆ ಮತ್ತು ಬಾನಿಂದ ಉದುರುವ ತಾರೆಗಳ ಪ್ರಸ್ತಾವವಿದೆ. ಇದರೊಟ್ಟಿಗೇ ಬಾನಲ್ಲಿ ಬರಿದಾಗುವ ಮೋಡದ ಹೋಲಿಕೆಯೂ ಬಂದಿದೆ. ಇವು ಭೂ-ವ್ಯೋಮ-ಅಂತರಿಕ್ಷಗಳಲ್ಲಿ ಕರಗಿಹೋಗುವ ಬುದ್ಧನ ಶರೀರದ ಧ್ವನಿಗಳಾಗಿವೆ. ಬೌದ್ಧ ದರ್ಶನದ ಪ್ರಕಾರ ಬುದ್ಧನ ಪೂತಿಕಾಯವಳಿದರೂ ಧರ್ಮಕಾಯಕ್ಕೆ ಅಳಿವಿಲ್ಲ. ಈ ಭಾವವೇ ಇಲ್ಲಿ ಧ್ವನಿತವಾಗಿದೆ. ಮುಂದೆ ಬುದ್ಧನ ಪರಿನಿರ್ವಾಣದಿಂದ ಕಳವಳಿಸಿ ನಡುಗಿದ ಭೂಮಿಯನ್ನು ಪೈಗಳು ವರ್ಣಿಸಿದ ಬಗೆಯಂತೂ ಬಲುಸೊಗಸು. ಸರಿಯಾಗಿ ತೂಕ ಮಾಡಿದ ತಕ್ಕಡಿಯಿಂದ ತೂಕದ ಬೊಟ್ಟನ್ನು ತೆಗೆಯದೆ ಬರಿಯ ತೂಗಿದ ಪದಾರ್ಥವನ್ನು ಮೇಲೆತ್ತಿದರೆ ತಕ್ಕಡಿಗೆ ಉಂಟಾಗುವ ತುಯ್ತ ತೀವ್ರವಾದದ್ದು. ಮುಂಗಾರ ಮಳೆಯಲ್ಲಿ ಗಾಳಿ ಹೆಚ್ಚು. ಅದು ಬೇಸಗೆಯ ಮಳೆಯಂತೆ ನಿರ್ವಾತವಲ್ಲ. ಈ ಗಾಳಿಮಳೆಯಲ್ಲಿ ಬಾಳೆಯ ಬಾಗು ತುಂಬ ತೀವ್ರ. ನೀರಲ್ಲಿ ನಿಂತ ಹಡಗಿಗೆ ಅಳವು ಮೀರಿದ ಭಾರವನ್ನು ಹೇರಿದರೆ ಅದು ತುಯ್ದಾಡುವ ಪರಿಯೂ ಮಿಗಿಲು. ಬುದ್ಧನಿಲ್ಲದ ಬುವಿಗೆ ಬಂದ ಕಂಪನವೂ ಇಂಥದ್ದೆಂದು ಪೈಗಳು ತುಂಬ ಮಾರ್ಮಿಕವಾಗಿ ತಿಳಿಸಿದ್ದಾರೆ. ಬುದ್ಧನಿಲ್ಲದ ಭವಕ್ಕೆ ಸ್ತಿಮಿತವಿಲ್ಲ, ನಿಲುಮೆಯಿಲ್ಲ, ತೇಲ್ಮೆಯೂ ಇಲ್ಲ ಎಂಬ ಧ್ವನಿಗಳಿಲ್ಲಿ ಹೃದ್ಯವಾಗಿ ಮೂಡಿವೆ.
‘ಗೊಲ್ಗೊಥಾ’ ಕಾವ್ಯದಂತೆಯೇ ಇಲ್ಲಿ ಕೂಡ ಕೃತಿಸಮಾಪ್ತಿಯು ಚಂದ್ರೋದಯದಿಂದ ಆಗುತ್ತದೆ. ಚಂದ್ರಿಕೆಯ ಕಾಂತಿಯು ಬೆಳ್ಳಿಯ ದೀಪದ ಮಲ್ಲಿಯಂತೆ ಬೆಳಗುತ್ತ ಬುದ್ಧನ ಕೀರ್ತಿಪ್ರಶಸ್ತಿಯ ಸ್ಫಟಿಕಭಿತ್ತಿಯನ್ನು ನೆನಪಿಗೆ ತರುತ್ತಿತ್ತೆಂದು ಪೈಗಳು ಉತ್ಪ್ರೇಕ್ಷಿಸುತ್ತಾರೆ. ಎರಡೂ ದಿನಗಳು ಪೂರ್ಣಿಮೆಯೆಂಬುದೊಂದು ಸುಂದರವಾದ ಐತಿಹಾಸಿಕ ತಥ್ಯ. ಇದನ್ನು ಪೈಗಳು ಸಾರ್ಥಕವಾಗಿ ದುಡಿಸಿಕೊಂಡಿದ್ದಾರೆ.
ಇವೆರಡೂ ಕಾವ್ಯಗಳು ತಮ್ಮ ಅನನ್ಯವಾದ ರೂಪ-ಸ್ವರೂಪಗಳ ಮೂಲಕ ಈ ಬಗೆಯ ಕವಿತಾಪ್ರಕಾರವನ್ನೇ ಸೃಜಿಸುವ ಸಾಮರ್ಥ್ಯವನ್ನು ಹೊಂದಿವೆಯೆಂದರೆ ಅತಿಶಯವಲ್ಲ. ಹೇಗೆ ಸಂಸ್ಕೃತದಲ್ಲಿ ‘ಮೇಘದೂತ’, ‘ಗೀತಗೋವಿಂದ’, ‘ನೀತಿಶತಕ’, ‘ಶೃಂಗಾರಶತಕ’ ಮುಂತಾದುವು ತಮ್ಮದಾದ ಹೊಸ ಬಗೆಯ ಕಾವ್ಯಪ್ರಕಾರಗಳಿಗೆ ಹೆದ್ದಾರಿಯಾದವೋ ಹಾಗೆಯೇ ಪೈಗಳ ಈ ಎರಡೂ ಕೃತಿಗಳು ಮಾರ್ಗದರ್ಶಕವಾಗಿವೆ. ಸ್ವತಃ ಗೋವಿಂದ ಪೈಗಳೇ ‘ಪ್ರಭಾಸ’ ಮತ್ತು ‘ದೇಹಲಿ’ ಎಂಬ ಇನ್ನೆರಡು ಖಂಡಕಾವ್ಯಗಳನ್ನು ಇದೇ ರೀತಿ ನಿರ್ಮಿಸುವ ಹವಣಿನಲ್ಲಿದ್ದರೆಂಬುದು ನಮಗೆ ತಿಳಿದೇ ಇದೆ. ಆದರೆ ಅದೇಕೋ ಈ ಪರಂಪರೆ ಮುಂದುವರಿಯಲಿಲ್ಲ. ದಿಟವೇ, ಎಂಥ ಉತ್ತಮಸ್ತರದ ಅನುಕರಣವೂ ಮೂಲದ ಮಾದರಿಯ ಮುಂದೆ ಮಂಕಾಗುತ್ತದೆ. ಆದರೂ ಈ ‘ಮರಣಕಾವ್ಯ’ದಲ್ಲಿ ಯಾವುದೋ ಒಂದು ಅಪೂರ್ವವಾದ ಅಮರ ಶೋಭೆಯಿದೆ. ಅದನ್ನು ಸಮರ್ಥರಾದವರು ಪೈಗಳಿಲ್ಲಿ ಕಟ್ಟಿಕೊಟ್ಟ ರೂಪದಂತಲ್ಲದೆ ಬೇರೊಂದು ಭಂಗಿಯಿಂದಲೂ ಸಾಧಿಸಬಹುದಾಗಿದೆ. ಈ ಮೂಲಕ ಇಂಥ ಪ್ರಕಲ್ಪಗಳ ಸತ್ತ್ವಾಸತ್ತ್ವಗಳನ್ನು ಪ್ರಾಯೋಗಿಕವಾಗಿಯೂ ತಿಳಿಯಬಹುದು. ಒಟ್ಟಿನಲ್ಲಿ ಕನ್ನಡವಿರುವವರೆಗೆ ಈ ಯಮಲಕಾವ್ಯಗಳಿಗೆ ಅಳಿವಿಲ್ಲ.
* * *
ಉಪಸಂಹಾರ
ಈವರೆಗೆ ಗೋವಿಂದ ಪೈಗಳ ಸಮಗ್ರ ಕಾವ್ಯವನ್ನು ಕೂಡಿದ ಮಟ್ಟಿಗೆ ವಿಶ್ಲೇಷಿಸಿದ್ದಾಯಿತು. ಈ ಹವಣಿನಲ್ಲಿ ಭಾರತೀಯ ಕಾವ್ಯಮೀಮಾಂಸೆಯ ಚಿರಂತನ ಮೂಲ ಮಾನಗಳನ್ನೇ ನೆಮ್ಮಿ ನಡಸುವ ವಿವೇಚನೆ ಅದೆಷ್ಟು ಫಲಕಾರಿಯೆಂಬುದನ್ನೂ ಗಮನಿಸಿದ್ದಾಯಿತು. ಈ ಮೂಲಕ ಪೈಗಳ ಕವಿತೆಯೂ ರಸ-ಧ್ವನಿ-ಔಚಿತ್ಯ-ವಕ್ರತೆ ಮುಂತಾದ ತತ್ತ್ವಗಳೂ ಎಷ್ಟು ಮೌಲಿಕವೆಂಬುದು ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಆಳವೂ ಅಗಲವೂ ಆದ ಅಧ್ಯಯನಗಳಿಗೆ ಸಾಕಷ್ಟು ಅವಕಾಶಗಳಿವೆ. ಉದಾಹರಣೆಗೆ: ಗೋವಿಂದ ಪೈಗಳ ಪದಪ್ರಯೋಗವನ್ನು ಕುರಿತ ನಿಘಂಟುವೇ ಬಂದಿದ್ದರೂ ಅಲ್ಲಿ ಅವರ ಶಬ್ದರೂಪಗಳ ಸಾಧಕ-ಬಾಧಕಗಳಾಗಲಿ, ಕಾವ್ಯದಲ್ಲಿ ಅವುಗಳಿಂದ ಬಂದಿರುವ ಸ್ವಾರಸ್ಯವಾಗಲಿ ಪರಾಮೃಷ್ಟವಾಗಿಲ್ಲ. ಇದೇ ತೆರನಾದದ್ದು ಅವರ ಉಕ್ತಿವೈಚಿತ್ರ್ಯಗಳಿಗೆ ಪೂರಕವಾಗಿ ಬಂದಿರುವ ಪಾಂಡಿತ್ಯದ ವಿವೇಚನೆ. ಇನ್ನು ಛಂದಸ್ಸನ್ನು ಕುರಿತಂತೆ ಕೂಡ ಪೂರ್ಣಪ್ರಮಾಣದ ಪ್ರತ್ಯೇಕ ಅಧ್ಯಯನ ಬೇಕೆನ್ನುವಷ್ಟು ಸಾಮಗ್ರಿಯುಂಟು. ಅವರ ಅನುವಾದಪದ್ಯಗಳನ್ನು ಮೂಲದ ಜೊತೆ ಹೋಲಿಸಿ ತೌಲನಿಕವಾದ ವ್ಯಾಸಂಗ ಮಾಡಬೇಕಿದೆ. ಇದಕ್ಕೆ ಆಯಾ ಭಾಷಾಪ್ರವೀಣರೇ ಒದಗಿಬರಬೇಕು. ತಮ್ಮ ಹತ್ತಾರು ಗೀತಗಳಿಗೆ ಅವರೇ ರಾಗ-ತಾಳಗಳನ್ನು ಸೂಚಿಸಿದ್ದಾರೆ. ಇವುಗಳಿಗೆ ಅನುಸಾರವಾಗಿ ಅವನ್ನು ಹಾಡಿದಾಗ ಉಂಟಾಗಬಲ್ಲ ಪರಿಣಾಮದ ವಿಮರ್ಶೆ ಕೂಡ ನಡೆಯಬೇಕಿದೆ. ಪೈಗಳು ತಮ್ಮ ಹೆಚ್ಚಿನ ಕವಿತೆಗಳಿಗೆ ಅಡಿಟಿಪ್ಪಣಿಗಳನ್ನು ಕೊಟ್ಟಿದ್ದಾರೆ. ‘ಗೊಲ್ಗೊಥಾ’, ‘ವೈಶಾಖಿ’ಗಳಂಥ ಖಂಡಕಾವ್ಯಗಳಿಗಂತೂ ವಿಸ್ತೃತವಾದ ಅಂತ್ಯಟಿಪ್ಪಣಿಗಳನ್ನು ನೀಡಿದ್ದಾರೆ. ಇನ್ನೂ ಹಲವು ಕವಿತೆಗಳಿಗೆ ಪರಿಚಯರೂಪದ ಅವತರಣಿಕೆಗಳನ್ನು ನೀಡಿದ್ದಾರೆ. ಇವುಗಳನ್ನೂ ಮೀರಿ ಮತ್ತೆಷ್ಟೋ ಪದಗಳೂ ವಾಕ್ಯಗಳೂ ಕಾವ್ಯಸಂದರ್ಭಗಳೂ ವಿವರಣಸಾಪೇಕ್ಷವಾಗಿವೆ. ಇದು ಸಾಮಾನ್ಯರಿಗೆ ಮಾತ್ರವಲ್ಲ; ಸಾಕಷ್ಟು ವ್ಯುಯತ್ಪನ್ನರಿಗೆ ಕೂಡ ಬೇಕಾಗುವ ಅಧ್ಯಯನಸಾಮಗ್ರಿ. ಇಂಥ ಮಲ್ಲಿನಾಥೀಯ ಕೈಂಕರ್ಯ ಅವಶ್ಯವಾಗಿ ಆಗಬೇಕಿದೆ.
ವಿಶೇಷತಃ ಪೈಗಳು ಹಳಗನ್ನಡವನ್ನು ಬಳಸುವಾಗ ‘ಮುರಾರೇಸ್ತೃತೀಯಃ ಪಂಥಾಃ’ (ಮುರಾರಿಯದು ಮೂರನೆಯ ದಾರಿ) ಎಂಬಂಥ ಭಾಷಿಕ ಸಾಹಸವನ್ನು ಮಾಡುತ್ತಾರೆ. ‘ಒಳಮಾರು’, ‘ಹೊರಮಾರು’, ‘ನಡೆನಿದ್ದೆ’ ಮೊದಲಾದ ನೂರಾರು ಪದಗಳನ್ನು ಅವುಗಳ ಇಂಗ್ಲಿಷ್ ಮೂಲಕ್ಕೆ ಸಂವಾದಿಯಾಗಿ ರೂಪಿಸಿಕೊಂಡ ಹಾಗೆಯೇ ‘ಅವಿಧೋ’, ‘ದಾಸೇಯ’, ‘ಜಲೇಹುತಂ’, ‘ಛಾಯಾದ್ವಿತೀಯಂ’ ಮುಂತಾದ ಅಸಂಖ್ಯ ಸಂಸ್ಕೃತಪದಗಳನ್ನೂ ನುಡಿಗಟ್ಟುಗಳನ್ನೂ ಧಾರಾಳವಾಗಿ ಬಳಸಿದ್ದಾರೆ. ಇವುಗಳ ಸ್ವಾರಸ್ಯಗಳನ್ನು ಚೆನ್ನಾಗಿ ತಿಳಿಯಲು ಆಯಾ ಭಾಷೆಗಳ ಪರಿಚಯವಿದ್ದಲ್ಲಿ ಒಳಿತು. ಅಂಥ ತಿಳಿವಳಿಕೆಯ ಹಿನ್ನೆಲೆಯಲ್ಲಿ ಪೈಗಳ ಕಾವ್ಯದ ಗುಣ-ರೀತಿಗಳನ್ನು ವಿಶ್ಲೇಷಿಸಬೇಕಿದೆ.
ಛಂದಸ್ಸು-ವ್ಯಾಕರಣಗಳಂಥ ವಿಷಯಗಳಲ್ಲಿ ಗಟ್ಟಿಯಾದ ತಿಳಿವಳಿಕೆ ಉಳ್ಳ ಪೈಗಳು ಹಲವು ಕಡೆ ರೂಢಿಯಲ್ಲಿರುವ ವ್ಯಾಕರಣಕ್ಕೆ ವಿರುದ್ಧವೋ ವಿನೂತನವೋ ಎಂಬಂಥ ಪ್ರಯೋಗಗಳನ್ನು ಮಾಡಿದ್ದಾರೆ. ಉದಾಹರಣೆಗೆ: ‘ಮುರಿಯಿರಿ’, ‘ಕಡಿಯಿರಿ’ ಎಂಬುವನ್ನು ‘ಮುರಿರಿ’, ‘ಕಡಿರಿ’ (ಪು. ೨೦೯) ಎಂದು ಬಳಸಿರುವುದೂ ‘ನಯನದನಿ’ (ಪು. ೧೬೨), ‘ಸುರಸತೊರೆ’ (ಪು. ೩೦೦) ‘ಉದ್ದಾಮಪೆಸರ್’ (ಪು. ೩೦೧) ಮೊದಲಾದ ಅರಿಸಮಾಸಗಳನ್ನು ಮಾಡಿರುವುದೂ ದೃಷ್ಟಚರ. ಇವುಗಳ ಯುಕ್ತಾಯುಕ್ತತೆಗಳನ್ನು ಆಯಾ ಶಾಸ್ತ್ರಜ್ಞರು ವಿವೇಚಿಸಬೇಕಿದೆ. ಪೈಗಳ ಅವಸಾನವಾಗಿ ಅರುವತ್ತು ವರ್ಷಗಳು ಕಳೆದರೂ ಅವರ ಕವಿತೆಯ ಪ್ರಾತಿನಿಧಿಕ ಭಾಗ ಕೂಡ ವಿವಿಧ ಭಾಷೆಗಳಲ್ಲಿ ಸಮರ್ಥ ಅನುವಾದಗಳನ್ನು ಕಂಡಿಲ್ಲ. ಈ ನಿಟ್ಟಿನಲ್ಲಿಯೂ ಕೆಲಸ ನಡೆಯಬೇಕಿದೆ. ಇದಕ್ಕಿರುವ ತೊಡಕು-ತೋಟಿಗಳನ್ನು ಕೂಡ ಆಲೋಚಿಸಬೇಕಿದೆ.
ಹೀಗೆ ಮತ್ತೂ ಹತ್ತು ಬಗೆಯಲ್ಲಿ ಪೈಗಳ ಕಾವ್ಯವನ್ನು ಕುರಿತೇ ಗಂಭೀರ ಅಧ್ಯಯನ ನಡೆಯುವುದು ಅಪೇಕ್ಷಣೀಯ. ಇಂಥ ಪ್ರಕಲ್ಪಗಳಿಗೆ ವಸ್ತುನಿಷ್ಠವೂ ರಾಚನಿಕವೂ ಆದ ನೆಲೆಯಲ್ಲಿ ಸಾಗಿದ ಪ್ರಕೃತ ವಿವೇಚನೆಯು ಸ್ವಲ್ಪವಾದರೂ ನೆರವನ್ನಿತ್ತಲ್ಲಿ ಇದಕ್ಕೆ ಧನ್ಯತೆ ದಕ್ಕೀತು. ಅದು ಹೇಗೇ ಇರಲಿ; ಗೊವಿಂದ ಪೈಗಳು ದೊಡ್ಡ ಕವಿಗಳು. ಅವರ ಕವಿತೆ ತನ್ನ ರೂಪ-ಸ್ವರೂಪಗಳಿಂದ ಸಹೃದಯರಿಗೆ ಉನ್ನತವಾದ ರಸಾನುಭೂತಿಯನ್ನು ನೀಡುತ್ತದೆ. ಭಾರತೀಯ ಕಾವ್ಯಮೀಮಾಂಸೆಯ ಮೂಲಕ ಪೈಗಳ ಕಾವ್ಯಲೋಕವನ್ನು ಪ್ರವೇಶಿಸಿದರೆ ಕವಿ-ಸಹೃದಯರಿಗೆಲ್ಲ ಹೆಚ್ಚಿನ ಪ್ರಯೋಜನವುಂಟು. ಇದನ್ನು ಮನಗಂಡು ನಮ್ಮ ಸಾಹಿತ್ಯಜಗತ್ತು ಸ್ಪಂದಿಸಲೆಂದು ಆಶಿಸೋಣ.
* * *
ಗ್ರಂಥಋಣ
೧. ಗೋವಿಂದ ಪೈ ಸಮಗ್ರ ಕವಿತೆಗಳು (ಸಂ. ಎಸ್. ಶಿವಾಜಿ ಜೋಯಿಸ್). ಮೈಸೂರು: ಕಾವ್ಯಾಲಯ, ೨೦೦೮
೨. ಹೆಬ್ಬೆರಳು (ಏಕಾಂಕ ನಾಟಕ). ಗೋವಿಂದ ಪೈ. ಮೈಸೂರು: ಕಾವ್ಯಾಲಯ, ೧೯೬೩
೩. ಗೋವಿಂದ ಪೈ ನಿಘಂಟು. ಪ್ರೊ|| ಎ. ವಿ. ನಾವಡ. ಮಂಗಳೂರು: ಶೋಧನ ಪ್ರಕಾಶನ, ೨೦೧೧
೪. ಕವಿ ಗೋವಿಂದ ಪೈ. ಜಿ. ಪಿ. ರಾಜರತ್ನಂ. ಬೆಂಗಳೂರು: ಜೀವನ ಕಾರ್ಯಾಲಯ, ೧೯೪೯
೫. ಛಂದೋವಿವೇಕ. ಶತಾವಧಾನಿ ಡಾ|| ಆರ್. ಗಣೇಶ್. ಬೆಂಗಳೂರು: ಪ್ರೇಕ್ಷಾ ಪ್ರತಿಷ್ಠಾನ, ೨೦೨೩
೬. ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ. ಎಸ್. ಅನಂತನಾರಾಯಣ. ಬೆಂಗಳೂರು: ರಾಜಲಕ್ಷ್ಮಿ ಪ್ರಕಾಶನ, ೧೯೭೬
೭. ಕೇತಕೀವನ. ಡಿ.ವಿ.ಜಿ. ಮೈಸೂರು: ಕಾವ್ಯಾಲಯ, ೧೯೭೩
೮. ಭಾರತೀಯ ಕಾವ್ಯಮೀಮಾಂಸೆ: ತತ್ತ್ವ ಮತ್ತು ಪ್ರಯೋಗ. ಕೆ. ಕೃಷ್ಣಮೂರ್ತಿ. ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ, ೧೯೭೧
೯. ಭಾರತೀಯ ಋಷಿಪರಂಪರೆ ಮತ್ತು ಸಂಸ್ಕೃತಸಾಹಿತ್ಯ. ಪಾದೆಕಲ್ಲು ನರಸಿಂಹ ಭಟ್ಟ. ಮಂಗಳೂರು: ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ೨೦೦೩
೧೦. ಯುಗಧರ್ಮ ಹಾಗೂ ಸಾಹಿತ್ಯದರ್ಶನ. ಕೀರ್ತಿನಾಥ ಕುರ್ತಕೋಟಿ. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ೧೯೮೩
೧೧. ಕಾವ್ಯಮೀಮಾಂಸಾ. ರಾಜಶೇಖರ (ಸಂ. ಸಿ. ಡಿ. ದಲಾಲ್ ಮತ್ತು ಆರ್. ಎ. ಶಾಸ್ತ್ರೀ). ಬರೋಡಾ: ಗಾಯಕ್‌ವಾಡ್ ಓರಿಯೆಂಟಲ್ ಸೀರೀಸ್, ೧೯೩೪
೧೨. ಧ್ವನ್ಯಾಲೋಕ. ಆನಂದವರ್ಧನ (ಸಂ. ಕೆ. ಕೃಷ್ಣಮೂರ್ತಿ). ನವದೆಹಲಿ: ಮೋತಿಲಾಲ್ ಬನಾರಸೀದಾಸ್, ೧೯೮೨
೧೩. ಮಹಾಭಾರತ. ವೇದವ್ಯಾಸ. ಪುಣೆ: ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್, ೧೯೭೧
೧೪. ವಕ್ರೋಕ್ತಿಜೀವಿತ. ಕುಂತಕ (ಸಂ. ಕೆ. ಕೃಷ್ಣಮೂರ್ತಿ). ಧಾರವಾಡ: ಕರ್ಣಾಟಕ ವಿಶ್ವವಿದ್ಯಾಲಯ, ೧೯೭೭
Concluded.