ಭಂಗೀಭಣಿತಿ
ಎಷ್ಟೋ ಬಾರಿ ಮಹಾಕವಿಗಳು ತಮ್ಮ ಕಾವ್ಯದ ನಡುವೆ ಪ್ರೌಢವೂ ಸಾಭಿಪ್ರಾಯವೂ ಆದ ಹೇಳಿಕೆಗಳನ್ನು ಮಾಡುವುದುಂಟು. ಇವುಗಳೆಲ್ಲ ಕಟ್ಟಕಡೆಗೆ ರಸಧ್ವನಿಯಲ್ಲಿ ಪರ್ಯವಸಿಸುತ್ತವೆಂಬುದು ಸತ್ಯ. ಆದರೆ ರೂಪದ ಮಟ್ಟಿಗೆ ಇವನ್ನು ನಿರ್ದಿಷ್ಟವಾದ ಒಂದು ಸ್ಫುಟಾಲಂಕಾರದಲ್ಲಿ ಅಳವಡಿಸಲಾಗುವುದಿಲ್ಲ; ಲಕ್ಷಣೆ ಮತ್ತು ವ್ಯಂಜನೆಗಳಿಗೂ ನೇರವಾಗಿ ತಳುಕು ಹಾಕಲು ಅನುಕೂಲಿಸುವುದಿಲ್ಲ. ಇಂಥವನ್ನು ಕುಂತಕನ ಮಾತಿನಂತೆ ‘ಭಂಗೀಭಣಿತಿ’ ಎನ್ನಬಹುದು. ಕನ್ನಡದಲ್ಲಿ ಡಿ.ವಿ.ಜಿ., ಕುವೆಂಪು, ಪುತಿನ ಮೊದಲಾದವರಲ್ಲಿ ಇವನ್ನು ಹೇರಳವಾಗಿ ಕಾಣಬಹುದು. ಪೈಗಳೂ ಇವರ ಸಾಲಿಗೆ ಸೇರುತ್ತಾರೆ. ಅವರ ‘ಯಾರೆಂಬರು ಮುಗಿದುವೆಂದು ಬವರಂ?’ ಎಂಬ ಕವಿತೆಯಿಂದ ಕೆಲವು ಸಾಲುಗಳನ್ನು ಉದಾಹರಿಸಬಹುದು:
ಯುದ್ಧವೆ ಮೃತಜೀವನದುತ್ಥಾನಂ
ಯುದ್ಧವೆ ಉತ್ಕ್ರಾಂತಿಯ ಸೋಪಾನಂ (ಪು. ೩೦೩)
ದ್ವಿಜನಾಗದ ಮನುಜನನಾರ್ಯಂ!
ಪರರಳವಿನ ಪರಿಹರಿಕೆಗೆ ಸಂದು
ಹೊಸಬಾಳೆತ್ತಿದವನೆ ದ್ವಿಜನಿಂದು (೩೦೪)
ಬಾಳ್ವೆ ಬಾಳತಕ್ಕುದೊ ನಾನರಿಯೆ,
ಸಾವು ಸಾಯತಕ್ಕುದು ನೇರೆ!
ಧರ್ಮಯುದ್ಧವೊಂದಲ್ಲದೆ ಬೇರೆ
ದಾರಿಯೆ ವೀರಸ್ವರ್ಗವನೇರೆ (ಪು. ೩೦೫)
ಬಸುರಲಿ ಸೋಸಿಲ್ಲವೆ ನೀ ಸೆರೆಯಾ?
ಹೊಸ ಹುಟ್ಟಿನ ಬಸಿರಾ ಸೆರೆಯರಿಯಾ? (ಪು. ೩೦೫)
ಗೆದ್ದರೆ ಹೊಸ ಹೊತ್ತೆದ್ದುದು ಮುಂದೆ,
ಬಿದ್ದರೆ ನೇಸರಿನುದ್ದಕೆ ನಿಂದೆ! (ಪು. ೩೦೫)
ದುಡಿಯದೆ ಪಡೆದಾ ಬಿಡುಗಡೆಯಲ್ಲ
ರಣಹೇಡಿಗೆ ದೇವರ ನೆರವಿಲ್ಲ (ಪು. ೩೦೬)
ಜೀವನರಣರಂಗದಿ ಮುಂಬರಿಯಾ,
ಜಯ ಶಾಂತಿಯೆಂದಶಾತಿಯನಿರಿಯಾ! (ಪು. ೩೦೬)
ಇಲ್ಲಿಯ ಸಾಲುಗಳಲ್ಲಿ ಕಥಂಚಿತ್ ಅತಿಶಯೋಕ್ತಿ, ಪರ್ಯಾಯೋಕ್ತ, ಉದಾತ್ತ ಮುಂತಾದ ಅಲಂಕಾರಗಳ ನೆರಳನ್ನು ಕಾಣಿಸಬಹುದು. ಆದರೆ ಅವುಗಳ ಮೂಲಕ ಬರುವ ಸ್ವಾರಸ್ಯಕ್ಕಿಂತ ಮಿಗಿಲೂ ಭಿನ್ನವೂ ಆದ ಮತ್ತಾವುದೋ ಉಕ್ತಿವೈಚಿತ್ರ್ಯ ಇಲ್ಲಿ ತೋರುವಂತಿದೆ. ಇದು ಲಕ್ಷಣಶಾಸ್ತ್ರ ಎಷ್ಟೇ ಹೆಣಗಿದರೂ ಲಕ್ಷ್ಯವೆನಿಸಿದ ಕಾವ್ಯ ಅದಕ್ಕಿಂತ ಮುಂದೆಯೇ ಇರುತ್ತದೆಂಬ ಸತ್ಯಕ್ಕೊಂದು ನಿದರ್ಶನ. ನೆರಳು ಬೆಳಕನ್ನೆಷ್ಟು ಬೆಂಬತ್ತಿದರೂ ಅದರ ಹಿಂದೆಯೇ ಇದ್ದು ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಲ್ಲದೆ ಮುಂದೆ ಬರುವಂತಿಲ್ಲವಷ್ಟೆ!
ಗುಣ, ರೀತಿ ಮತ್ತು ಮಾರ್ಗ
ನಮ್ಮ ಆಲಂಕಾರಿಕರು ಶಬ್ದಗುಣ ಮತ್ತು ಅರ್ಥಗುಣಗಳೆಂದು ಅನೇಕಾಂಶಗಳನ್ನು ತಿಳಿಸಿದ್ದಾರೆ. ಇವುಗಳ ಸಂಖ್ಯೆ ಭರತನಿಂದ ಭೋಜರಾಜನವರೆಗೆ ಬೆಳೆಯುತ್ತಲೇ ಬಂದಿದೆ. ಆದರೆ ಭಾಮಹ, ಆನಂದವರ್ಧನ ಮತ್ತು ಮಮ್ಮಟರ ತೀರ್ಮಾನದಂತೆ ಓಜಸ್ಸು, ಪ್ರಸಾದ ಮತು ಮಾಧುರ್ಯಗಳೆಂಬ ಮೂರು ಗುಣಗಳಿಗೆ ಭಟ್ಟಿಯಿಳಿಸಿಕೊಳ್ಳುವುದು ಯುಕ್ತ. ಇವುಗಳ ಮೇಲೆ ರೂಪುಗೊಂಡಿರುವ ರೀತಿ-ಮಾರ್ಗಗಳನ್ನು ದಂಡಿ, ವಾಮನ, ರುದ್ರಟಾದಿಗಳಂತೆ ಪ್ರಾದೇಶಿಕತೆಯ ನೆಲೆಯಲ್ಲಿ ಕಾಣದೆ ಕುಂತಕನಂತೆ ಕವಿಮನೋಧರ್ಮದ ಮೂಲದಲ್ಲಿಯೇ ಗುರುತಿಸಿಕೊಳ್ಳುವುದು ಒಳಿತು. ಈ ಪ್ರಕಾರ ಮಾರ್ಗಗಳು ವಿಚಿತ್ರ, ಸುಕುಮಾರ ಮತ್ತು ಮಧ್ಯಮ ಎಂದು ಮುಬ್ಬಗೆಯಲ್ಲಿ ಸಂಕ್ಷೇಪಗೊಳ್ಳುತ್ತವೆ.
ಈ ನೇಪಥ್ಯದಲ್ಲಿ ಪೈಗಳ ಕಾವ್ಯವನ್ನು ಕಂಡಾಗ ಅದು ಪ್ರಧಾನವಾಗಿ ಓಜೋಗುಣವನ್ನು ಆಶ್ರಯಿಸಿಕೊಂಡ ವಿಚಿತ್ರಮಾರ್ಗದ್ದೆಂದು ಹೇಳಬಹುದು. ದಿಟವೇ, ಯಾವ ಕವಿಯಲ್ಲಿಯೂ ಒಂದೇ ಗುಣ, ಒಂದೇ ಮಾರ್ಗ ಆದ್ಯಂತ ವ್ಯಾಪಿಸಿಕೊಳ್ಳುವುದಿಲ್ಲ. ಪೈಗಳಲ್ಲಿಯೂ ಹೀಗೆಯೇ. ಕೆಲವೆಡೆ ಅದು ಮಾಧುರ್ಯಗುಣವನ್ನು ಮೈಗೂಡಿಸಿಕೊಂಡಿದೆ. ಉದಾಹರಣೆಗಳಾಗಿ ಅವರ ಹಲವು ಹಾಡುಗಳನ್ನೂ ‘ನಂದಾದೀಪ’ದ ಕೆಲವೊಂದು ಕವಿತೆಗಳನ್ನೂ ಕಾಣಬಹುದು. ಪ್ರಸಾದಗುಣಕ್ಕೆ ನಿದರ್ಶನವಾಗಿ ಮತ್ತೂ ಹೆಚ್ಚಿನ ಕವಿತೆಗಳನ್ನು ಉದಾಹರಿಸಬಹುದು. ಅಷ್ಟೇಕೆ, ಅವರಿಗೆ ಶಾಶ್ವತ ಕೀರ್ತಿಯನ್ನು ತಂದುಕೊಟ್ಟಿರುವ ‘ಗೊಲ್ಗೊಥಾ’ ಮತ್ತು ‘ವೈಶಾಖಿ’ಗಳಲ್ಲಿಯೇ ಈ ಗುಣ ಹೇರಳವಾಗಿದೆ. ‘ಗಿಳಿವಿಂಡು’ ಸಂಕಲನದ ‘ತೌಳವ ಮಾತೆ’, ‘ಕನ್ನಡಿಗರ ತಾಯಿ’, ‘ಹೊಲೆಯನು ಯಾರು?’ ಮುಂತಾದ ಎಷ್ಟೋ ರಚನೆಗಳು ಪ್ರಸಾದಗುಣಕ್ಕೆ ನಿದರ್ಶನ. ಇಂತಿದ್ದರೂ ಅವರ ಸಾಹಿತ್ಯದ ಪ್ರಧಾನ ಗುಣ ಓಜಸ್ಸು. ಇದು ಶಬ್ದಗತವೂ ಹೌದು, ಅರ್ಥಗತವೂ ಹೌದು. ಮೇಲ್ನೋಟಕ್ಕೆ ಶಬ್ದಗತವಾಗಿ ಎದ್ದುಕಂಡರೆ, ಒಳಗಿಳಿದು ನೋಡಿದಾಗ ಅರ್ಥಗತವಾಗಿಯೂ ಇರುವುದು ಸುವೇದ್ಯ. ಇದಕ್ಕೆ ಅವರ ನೂರಾರು ಕವಿತೆಗಳು ಸಾಕ್ಷಿ. ಯಾವಾಗ ಓಜೋಗುಣ ಮುನ್ನೆಲೆಗೆ ಬರುವುದೋ ಆಗ ವಿಚಿತ್ರಮಾರ್ಗ ತನ್ನಂತೆಯೇ ರೂಪುಗೊಳ್ಳುತ್ತದೆ. ವಸ್ತುತಃ ಗುಣದ ಸಾರ್ವತ್ರಿಕತೆಯನ್ನು ಮಾರ್ಗವೆನ್ನಬಹುದು. ವಿಚಿತ್ರಮಾರ್ಗಕ್ಕೆ ಸಹಜವಾಗಿ ಪ್ರೌಢವಾದ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳೂ ಬಿಕ್ಕಟ್ಟಾದ ಛಂದೋಬಂಧಗಳೂ ವ್ಯುತ್ಪತ್ತಿಮೂಲದ ಶಾಸ್ತ್ರಾಂಶಗಳೂ ನೈಘಂಟುಕ ಶಬ್ದಪ್ರಯೋಗಗಳೂ ಒದಗಿಬರುತ್ತವೆ. ಇವನ್ನೆಲ್ಲ ಪೈಗಳಲ್ಲಿ ಸಮೃದ್ಧವಾಗಿ ಕಾಣಬಹುದು. ಅಷ್ಟೇಕೆ, ನವೋದಯಕವಿಗಳ ಪೈಕಿ ವಿಚಿತ್ರಮಾರ್ಗದ ಪ್ರಥಮಾಚಾರ್ಯರೆಂದೇ ಅವರನ್ನು ಹೆಸರಿಸಲು ಸಾಧ್ಯ. ಹೀಗೆ ಹೇಳಿದೊಡನೆಯೇ ಇದು ಬರಿದೇ ಜಟಿಲವೆಂದೋ ನೀರಸವೆಂದೋ ತಾತ್ಪರ್ಯವಲ್ಲ. ವಸ್ತುತಃ ಗುಣ ಮತ್ತು ಮಾರ್ಗಗಳ ವಿಷಯದಲ್ಲಿ ತರತಮಭಾವವಿಲ್ಲ. ಇವು ಸಂದರ್ಭೌಚಿತ್ಯ ಮತ್ತು ಕವಿಮನೋಧರ್ಮಗಳನ್ನು ಅವಲಂಬಿಸಿ ರೂಪುಗೊಂಡಿವೆ. ಸಂದರ್ಭೌಚಿತ್ಯಕ್ಕೆ ಸ್ವಯಂಸಮರ್ಥನೆಯುಂಟು. ಕವಿಮನೋಧರ್ಮದ ವೈವಿಧ್ಯವನ್ನು ಸಹೃದಯನು ತನಗಿರುವ ಲೋಕಪರಿಜ್ಞಾನ ಮತ್ತು ಸಹಾನುಭೂತಿಗಳಿಂದ ಆದರಿಸಬೇಕಾದುದು ಕಾವ್ಯಲೋಕದ ವಿವೇಕ. ಆದುದರಿಂದ ಪೈಗಳ ಕವಿತಾಮಾರ್ಗದಲ್ಲಿ ದೋಷೈಕದೃಕ್ಕುಗಳಾಗುವುದು ಯುಕ್ತವೆನಿಸದು.
ಧ್ವನಿ
ಧ್ವನಿಯು ರಸಮಂದಿರದ ಹೆಬ್ಬಾಗಿಲು ಮತ್ತು ಔಚಿತ್ಯವೇ ಇದರ ಪ್ರವೇಶಕ್ಕಿರುವ ಅಪ್ಪಣೆಚೀಟಿ. ಹೀಗಾಗಿ ರಸಮಂದಿರಕ್ಕೆ ಸೇರಲಾಗದ ಧ್ವನಿಗೆ ನೆಲೆ-ಬೆಲೆಗಳಿಲ್ಲ. ಈ ದೃಷ್ಟಿಯಿಂದ ಕಂಡಾಗ ಮನಮುಟ್ಟುವಂಥ ಧ್ವನಿಯೆಲ್ಲ ಸಮುಚಿತ ಮತ್ತು ರಸನಿಷ್ಠ ಎಂದಲ್ಲಿ ವಿಚಾರ ಮತ್ತಷ್ಟು ಸ್ಪಷ್ಟವಾದೀತು.
ನವೋದಯಕಾವ್ಯವು ತನ್ನ ವಾಚ್ಯತೆಯ ಆಧಿಕ್ಯದಿಂದ ಸಂವೇದನಶೀಲರಿಗೆ ಸಪ್ಪೆಯೆನಿಸುವುದೆಂದು ನವ್ಯರು ಸಾಮಾನ್ಯವಾಗಿ ಹೇಳುವುದುಂಟು. ಆದರೆ ಹೀಗೆ ಆಕ್ಷೇಪಿಸುವ ನವ್ಯರ ಸಾಹಿತ್ಯದಲ್ಲಿ ಧ್ವನಿಯು ಪ್ರಹೇಳಿಕೆಯೇ (ಒಗಟು) ಆಗಿದೆಯೆಂದರೆ ಈ ಪರಿಶೀಲನೆ ಸತ್ಯದೂರವೆನಿಸದು. ಹಾಗೆ ನೋಡಿದರೆ ದಲಿತ, ಬಂಡಾಯ, ಸ್ತ್ರೀವಾದಿ ಮುಂತಾದ ಸಾಮಾಜಿಕ ನ್ಯಾಯದ ನೆಲೆಯಲ್ಲಿ ಹುಟ್ಟಿದ ವಾಙ್ಮಯ ಕೂಡ ವಾಚ್ಯತೆಯ ಹೆಚ್ಚಳದಿಂದಲೇ ಕೂಡಿದೆ. ದಿಟವೇ, ನವ್ಯಕಾವ್ಯಕ್ಕಿಂತ ನವೋದಯಸಾಹಿತ್ಯ ಹೆಚ್ಚು ವಾಚ್ಯವೆನಿಸುತ್ತದೆ. ಆದರೆ ಇದು ಧ್ವನಿರಾಹಿತ್ಯದಿಂದ ಆದದ್ದಲ್ಲ; ಯಾವುದೋ ಒಂದು ನಿರ್ದಿಷ್ಟ ಪ್ರಕಾರದ ಧ್ವನಿಯ ಪ್ರಾಚುರ್ಯದಿಂದ ಎಂದಲ್ಲಿ ಯುಕ್ತವಾದೀತು. ನವೋದಯಸಾಹಿತ್ಯದಲ್ಲಿ ರಸಧ್ವನಿಯ ಪಾರಮ್ಯ ಬಲುಮಿಗಿಲು. ಇದು ಹೇಳಿ ಕೇಳಿ ಅಸಂಲಕ್ಷ್ಯಕ್ರಮವ್ಯಂಗ್ಯವೆಂಬ ಧ್ವನಿಪ್ರಭೇದ. ಇಲ್ಲಿ ಧ್ವನಿಯು ಸಹೃದಯರಿಗೆ ಪ್ರತ್ಯೇಕವಾಗಿ ಗಮನಕ್ಕೆ ಬರದೆ ರಸದಲ್ಲಿಯೇ ತನ್ನನ್ನು ಮುಳುಗಿಸಿಕೊಂಡಿರುತ್ತದೆ. ಆದರೆ ನವ್ಯಸಾಹಿತ್ಯದಲ್ಲಿ ಸಂಲಕ್ಷ್ಯಕ್ರಮವ್ಯಂಗ್ಯದಿಂದ ಹೊಮ್ಮುವ ವಸ್ತುಧ್ವನಿಯೇ ಹೆಚ್ಚು. ಇದೂ ಕೆಲವೊಮ್ಮೆ ಒಗಟೆಯಷ್ಟು ದುರ್ಭೇದ್ಯವೆನಿಸುತ್ತದೆ. ಅನಂತರದ ದಲಿತ, ಬಂಡಾಯ, ಸ್ತ್ರೀವಾದಿ ಮುಂತಾದುವುಗಳಲ್ಲಿ ಹೆಚ್ಚಿನ ರಚನೆಗಳೆಲ್ಲ ಭಾವವಿಶ್ರಾಂತವೆಂದು ತೋರುತ್ತದೆ. ಈ ಎಲ್ಲ ಪ್ರಕಾರಗಳಲ್ಲಿಯೂ ಲಕ್ಷಣಾವೃತ್ತಿಯ ಎಳೆಗಳು ಇದ್ದೇ ಇರುತ್ತವೆ. ನವ್ಯ ಮತ್ತು ನವೋದಯಕಾವ್ಯಗಳಲ್ಲಿ ಇವು ಲಕ್ಷಣಾಮೂಲಧ್ವನಿಯ ಹಂತಕ್ಕೂ ಬರುತ್ತವೆ.
ಮೇಲಣ ಸ್ಥೂಲ ವಿವೇಚನೆ ಈಚಿನ ಒಂದು ಶತಾಬ್ದಿಗೂ ಹೆಚ್ಚಿನ ಕಾಲದಿಂದ ಬೆಳೆದು ಬಂದ - ತಕ್ಕಮಟ್ಟಿಗೆ ಒಳ್ಳೆಯದಾದ - ಯಾವುದೇ ಹೊಸಗನ್ನಡ ಸಾಹಿತ್ಯಕ್ಕೆ ಅನ್ವಯಿಸುವುದಲ್ಲದೆ ಕಳಪೆಯಾದುದಕ್ಕಲ್ಲ. ಮಾತ್ರವಲ್ಲ, ಕಳಪೆತನ ಯಾವೊಂದು ಕಾಲದ ಸಾಹಿತ್ಯಕ್ಕೂ ಸೀಮಿತವಲ್ಲ. ಆದರೂ ನವೋದಯಕಾವ್ಯದ ರಸಸಿದ್ಧಿ ಮಿಗಿಲೆಂಬುದರಲ್ಲಿ ಸಂಶಯವಿಲ್ಲ.
ಮತ್ತೊಂದು ಆಸಕ್ತಿಕರ ಸಂಗತಿಯೆಂದರೆ ಹೊಸಗನ್ನಡದ ಈ ಮೂರೂ ಪ್ರಕಾರದ ಸಾಹಿತ್ಯದಲ್ಲಿ ಅಲಂಕಾರಧ್ವನಿಯ ಅಸ್ತಿತ್ವ ಇಲ್ಲವೇ ಇಲ್ಲವೆಂಬಷ್ಟು ವಿರಳ. ಇದೇನಿದ್ದರೂ ಪ್ರಾಚೀನ ಕಾವ್ಯಪರಂಪರೆಯಲ್ಲಿ ದೃಷ್ಟಚರ.
ಇರಲಿ, ಈ ನೇಪಥ್ಯದಿಂದ ಕಂಡಾಗ ಪೈಗಳ ಕಾವ್ಯದಲ್ಲಿ ‘ಕೇವಲ ಧ್ವನಿ’ಯ ಅಥವಾ ವ್ಯಂಜನಾವ್ಯಪಾರದ ಉದಾಹರಣೆಗಳು ಸಹಜವಾಗಿಯೇ ಸೀಮಿತ. ಆದರೆ ರಸದಲ್ಲಿ ಕರಗಿಹೋದ ಹಾಗೂ ವ್ಯಂಜಕಾಂಶವಾಗಿ ಮೆರೆಯುವ ಧ್ವನನಶೀಲತೆ ಅಪಾರ. ಸದ್ಯದ ವಿವೇಚನೆಯಲ್ಲಿ ‘ಎದ್ದುಕಾಣುವಂಥ’ ಕೆಲವೊಂದು ಧ್ವನಿಸಂದರ್ಭಗಳನ್ನು ಸಂಕ್ಷಿಪ್ತವಾಗಿ ನಮೂದಿಸಬಹುದು.
ನೋಡದೆ ನಂಬಲು ಬಲ್ಲವನಲ್ಲ
ನೋಡಿಸಿ ನಂಬಿಸೊ ಬಲ್ಲವ ನಲ್ಲ! (‘ನಂಬಲೆಂತು?’ ಪು. ೪೦)
ಇಲ್ಲಿಯ ‘ಬಲ್ಲವನಲ್ಲ’ ಮತ್ತು ‘ಬಲ್ಲವ ನಲ್ಲ’ ಎಂಬ ಪದಪುಂಜಗಳು ಅರ್ಥಾಲಂಕಾರಗಳ ಚೌಕಟ್ಟಿನಿಂದ ಸಭಂಗ ಮತ್ತು ಅಭಂಗ ಶ್ಲೇಷಕ್ಕೆ ಉದಾಹರಣೆಗಳೆಂದು ಈ ಮುನ್ನವೇ ಕಂಡಿದ್ದೇವೆ. ಇವು ಶಬ್ದಶಕ್ತಿಮೂಲಧ್ವನಿಗೂ ಉದಾಹರಣೆಗಳು.
‘ಮಹಾತ್ಮರ ಉಪವಾಸ’ ಎಂಬ ಕವಿತೆಯಲ್ಲಿ (ಪು. ೪೨) ಗಾಂಧಿಯವರ ಉಪವಾಸ ಸತ್ಯಾಗ್ರಹಕ್ಕೆ ಹಿನ್ನೆಲೆಯಾಗಿ ನಾಲ್ಕು ಚರಣಗಳಲ್ಲಿ ವಿಸ್ತರಿಸಿಕೊಂಡಿರುವ ಶುಕ, ಬುದ್ಧ, ಯೇಸು ಮತ್ತು ಪೈಗಂಬರರ ನಿರಶನವ್ರತದ ಪ್ರಸ್ತಾವಗಳು ಪೈಗಳ ಬರಿಯ ವ್ಯುತ್ಪತ್ತಿಗಷ್ಟೇ ನಿದರ್ಶನವಾಗಿಲ್ಲ. ಇವು ಗಾಂಧಿಯವರ ಉಪವಾಸವು ಇನ್ನುಳಿದ ನಾಲ್ವರು ಪೂರ್ವಸೂರಿಗಳ ಉಪೋಷ್ಯದ ವಿಸ್ತರಣವೆಂದೂ ಶುಕಾದಿಗಳಿಗೆಲ್ಲ ಉಪವಾಸವು ಅದೆಂತು ಒಂದು ದಾರ್ಶನಿಕ ಮೌಲ್ಯವಾಗಿತ್ತೋ ಗಾಂಧಿಯವರ ಪಾಲಿಗೂ ಅದು ಹಾಗೆಯೇ ಎಂದೂ ಧ್ವನಿಸುತ್ತವೆ. ಅಲ್ಲದೆ ಗಾಂಧಿಯವರಿಗಿದ್ದ ಸರ್ವಮತಸಮನ್ವಯದ ಕನಸನ್ನೂ ಸೂಚಿಸುತ್ತವೆ. ಹೀಗೆ ಇಲ್ಲಿ ಅರ್ಥಶಕ್ತಿಮೂಲವೆಂಬ ಒಂದು ಪ್ರಕಾರಕ್ಕೆ ಸೇರುವ ವ್ಯಾಪಕವಾದ ವಸ್ತುಧ್ವನಿಯಿದ್ದು ಅದು ಕ್ರಮೇಣ ಪ್ರೇಯಸ್ಸು, ಊರ್ಜಸ್ವಿ, ಸಮಾಹಿತ ಮೊದಲಾದ ಅಲಂಕಾರಗಳು ನಿರ್ದೇಶಿಸುವ ಭಾವಗಳಿಗೂ ಕಟ್ಟಕಡೆಗೆ ಶಾಂತರಸಕ್ಕೂ ದಿಕ್ಸೂಚಿಯಾಗಿದೆ.
‘ಶ್ರೀವಿದ್ಯಾರಣ್ಯರ ಅಡಿದಾವರೆಗಳಲ್ಲಿ’ ಕವಿತೆಯ (ಪು. ೪೮) ಎಂಟನೆಯ ಪದ್ಯದ ಉತ್ತರಾರ್ಧ ‘ನಿಗಮದ ಗಂಗೆಗಾಗಮದ ಕಟ್ಟೆಯ ಕಟ್ಟಿದ ಬುದ್ಧಿಶಕ್ತಿಯಂ ಪೊಗಳ್ವೆನೆ? ಚೋದ್ಯಮೇಂ ಬಿಗುರ ಬೀರಿದ ಬೀರಮೊ? ಬಲ್ಲ ಬಿಜ್ಜೆಯೋ?’ ಎಂಬ ಸಾಲುಗಳು ವಿದ್ಯಾರಣ್ಯರ ಬ್ರಾಹ್ಮ-ಕ್ಷಾತ್ತ್ರಸಮಾಹಾರವೆಂಬ ವಸ್ತುವನ್ನು ಸೂಚಿಸುವ ಸತ್ತ್ವಪೂರ್ಣ ಧ್ವನಿಯನ್ನು ತಳೆದಿವೆಯಾದರೂ ಮುಂದಿನ ಪದ್ಯದಲ್ಲಿ ಒಡನೊಡನೆಯೇ ಬರುವ ಈ ತತ್ತ್ವದ ವಾಚ್ಯಪ್ರಸ್ತಾವವು ಇಲ್ಲಿಯ ಧ್ವನಿಯನ್ನು ಗೌಣವನ್ನಾಗಿಸಿದೆ.
‘ಯುಗಾದಿಯ ನೆನಪು’ ಎಂಬ ಹೃದಯವಿದ್ರಾವಕವಾದ ಕವಿತೆಯ (ಪು. ೫೩) ಒಂದು ಚರಣ ಹೀಗಿದೆ:
ಮದುವಳಿಗೆ ಲಗ್ನವೇದಿಕೆಯಂತೆ, ಚಿತಿಯ
ಪೊಗುತಗ್ನಿಯಂ ಮನ್ಮನೋರಣಿಯಿನಾಂತು
ನಮ್ಮೇಕ ಗಾರ್ಹಪತ್ಯವ್ರತವ ಸತಿಯ
ಧರ್ಮದಿಂದುದ್ಯಾಪಿಸಿದೆ ನೀಂ ಸಮಂತು
ಇಲ್ಲಿ ಹಸೆ ಮತ್ತು ಚಿತೆಗಳನ್ನೂ ವೈವಾಹಿಕಾಗ್ನಿ ಮತ್ತು ಶ್ಮಶಾನಾಗ್ನಿಗಳನ್ನೂ ಸಮೀಕರಿಸುವ ಅದ್ಭುತ ರೂಪಕಗಳೂ ಸೇರಿದಂತೆ ಇಡಿಯ ಚರಣವೇ ಉದ್ಯಾಪನೆ ಎಂಬ ಶಬ್ದದಿಂದ ಉನ್ಮೀಲಿಸುವ ವಸ್ತು-ರಸಧ್ವನಿಗಳಿಗಾಗಿ ದುಡಿದಿದೆ. ಕವಿ ಮತ್ತು ಅವರ ಅಕ್ಕರೆಯ ಮಡದಿ ಸಾಗಿಸಿದ ದಾಂಪತ್ಯ ಬರಿಯ ಕೂಡಿಕೆಯಲ್ಲ, ಅದೊಂದು ಗಾರ್ಹಪತ್ಯವ್ರತ. ಯಾವುದೇ ವ್ರತಕ್ಕೊಂದು ಉದ್ಯಾಪನೆ ಇರುತ್ತದೆ. ಇದು ಕವಿಗಳ ಪಾಲಿಗೆ ಅವರ ಅರ್ಧಾಂಗಿಯ ಅವಸಾನದಿಂದ ಒದಗಿದೆ. ಒಮ್ಮೆ ಉದ್ಯಾಪನೆ ಆದ ಬಳಿಕ ಮತ್ತೆ ಅದೇ ವ್ರತವನ್ನು ಹಿಡಿಯುವಂತಿಲ್ಲ; ಅಂದರೆ ಮಡದಿ ಮಡಿದ ಬಳಿಕ ಮತ್ತೊಂದು ಮದುವೆಗೆಂದು ಹಸೆಯನ್ನು ಏರುವಂತಿಲ್ಲ. ಹೀಗಾಗಿ ಈ ಧರ್ಮಶಾಸ್ತ್ರೀಯ ಶಬ್ದವು ಕವಿಯ ಶಾಶ್ವತ ವಿಧುರತೆಯನ್ನೂ ಏಕಪತ್ನೀವ್ರತವನ್ನೂ ಘನವಾಗಿ ಧ್ವನಿಸುತ್ತಿದೆ. ಈ ವಸ್ತುವು ಕವಿಯ ಧರ್ಮಪ್ರಜ್ಞೆಯೆಂಬ ಧರ್ಮವೀರ ಮತ್ತು ಪ್ರಕೃತ ಸಂದರ್ಭದ ಕರುಣ ಹಾಗೂ ಆದರ್ಶಜೀವನಶ್ರದ್ಧೆಯ ಶಾಂತದಲ್ಲಿ ಪರ್ಯವಸಿಸುವ ಕಾರಣ ರಸಧ್ವನಿಗೆ ಎಡೆ ನೀಡಿದೆ.
‘ಕೊಳುಗುಳದ ಮನವಿ’ಯಲ್ಲಿ (ಪು. ೬೫) ‘ನೀನೆ ವಿಜಯಧ್ವಜಂ! ನೀನೆ ಹೃದಯಸ್ರಜಂ! ನೀನೆ ವಿಷ್ವಕ್ಸೇನ ಸೇನಾನಿ ನನ್ನ!’ ಎಂಬ ಎರಡು ಸಾಲುಗಳಲ್ಲಿ ಸೊಗಸಾದ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳಲ್ಲದೆ ‘ವಿಷ್ವಕ್ಸೇನ’ ಎಂಬ ಶಬ್ದದಲ್ಲಿ ಧ್ವನಿಯೂ ಇದೆ. ನಮ್ಮ ಪುರಾಣ-ಆಗಮಗಳ ಪ್ರಕಾರ ವಿಷ್ವಕ್ಸೇನನು ಮಹಾವಿಷ್ಣುವಿನ ಸೇನಾಪತಿ. ಅಂದರೆ ಪ್ರಕೃತ ಪದ್ಯದ ಅನಾಮಧೇಯ ಸೈನಿಕನು ವಿಷ್ಣುವಿನ ಸೇನೆಗೆ ಸೇರಿದ ಯೋಧನೆಂಬ ಸೂಚನೆಯಿದೆ. ಮುಂದಿನ ಎರಡು ಸಾಲುಗಳಲ್ಲಿ ಕವಿಯು ಹೇಳುವ ‘ಸೋಲುಗೆಲುವೆನ್ನದೇಂ? ನಿನ್ನದೊಡೆಯಾ! ಕಾದುವುದೆ ನನ್ನದೊಡೆಯಾ!’ ಎಂಬ ಮಾತುಗಳು ತುಂಬ ಸೊಗಸಾಗಿ ಭಗವದ್ಗೀತೆಯ ಕರ್ಮಯೋಗವನ್ನೇ ಧ್ವನಿಸುತ್ತಿವೆ. ಹೀಗೆ ಇಲ್ಲಿಯೂ ವಸ್ತುಧ್ವನಿಯು ಧರ್ಮವೀರ ಮತ್ತು ಯುದ್ಧವೀರಗಳೆಂಬ ರಸಧ್ವನಿಯಲ್ಲಿ ಪರ್ಯವಸಿಸುತ್ತಿದೆ.
ಕೆಲವೊಮ್ಮೆ ಸೊಗಸಾದ ಧ್ವನಿಯು ಗುಣೀಭೂತವಾಗುವ ಅಪಾಯವೂ ಇಲ್ಲದಿಲ್ಲ. ಇದಕ್ಕೆ ಬಾಣ, ಭವಭೂತಿ, ಪಂಪ, ಕುಮಾರವ್ಯಾಸರಂಥ ಮಹಾಕವಿಗಳೂ ಬಲಿಯಾಗಿದ್ದಾರೆ. ಇಂಥ ಒಂದು ಸಂದರ್ಭವನ್ನು ‘ಹೆಂಗಸು’ ಎಂಬ ಸಾನೆಟ್ಟಿನಲ್ಲಿ ನೋಡುತ್ತೇವೆ (ಪು. ೮೩). ಹೆಣ್ಣಿನ ಮುಖ ನೋಡುವುದಿಲ್ಲವೆಂಬ ವ್ರತವನ್ನು ಹಿಡಿದ ರೂಪಗೋಸ್ವಾಮಿಯನ್ನು ಮೀರಾ ಬಾಯಿ ‘ಈ ಜಗತ್ತಿನಲ್ಲಿ ಕೃಷ್ಣನಲ್ಲದೆ ಮತ್ತೊಬ್ಬ ಗಂಡಾಗಿ ತಾನಿದ್ದೇನೆಂಬ ಹಮ್ಮುಳ್ಳ ನೀನು ಏತರ ಭಕ್ತ?’ ಎಂದು ಜಂಕಿಸಿ ತಿದ್ದುವ ಪ್ರಸಂಗವಿಲ್ಲಿದೆ. ಇದು ತುಂಬ ರಸಮಯವಾದ ಪ್ರಕರಣ. ಆದರೆ ಕಡೆಗೆ ಕವಿಯೇ ‘ರಾಧೆ ಯಾರೆಂಬುದಂ ಗೋಸಾಯಿ ಮರೆವಂ; ರಾಧೆಯಹ ಮುನ್ನಮೇಂ ಗಿರಿಧಾರಿ ದೊರೆವಂ?’ ಎಂದು ಬಾಯಿ ಬಿಟ್ಟು ವಿವರಿಸುವ ಮೂಲಕ ಇಡಿಯ ಸಂದರ್ಭದ ಮಹಾಧ್ವನಿಯನ್ನೇ ಗುಣೀಭೂತವ್ಯಂಗ್ಯದ ಮಟ್ಟಕ್ಕೆ ಕುಗ್ಗಿಸಿದ್ದಾರೆ. ಇಂಥ ಮತ್ತೂ ಹಲವಾರು ಉದಾಹರಣೆಗಳು ಪೈಗಳಲ್ಲಿವೆ. ಇಂಥವು ಕುವೆಂಪು, ಡಿ.ವಿ.ಜಿ., ಪುತಿನ, ಮಾಸ್ತಿ ಮುಂತಾದ ಹಲವರು ನವೋದಯ ಕವಿಗಳಲ್ಲಿಯೂ ಸಾಕಷ್ಟಿವೆ. ಇಂತಿದ್ದರೂ ಈ ಯುಗದ ಕವಿಗಳ ರಸಧ್ವನಿಯ ಸಿದ್ಧಿ ದೊಡ್ಡದು.
ಧ್ವನಿಯು ಬರಿಯ ಪದ, ವಾಕ್ಯ, ಪ್ರಕರಣ ಅಥವಾ ಇಡಿಯ ಪ್ರಬಂಧಗಳಲ್ಲಿ ಮಾತ್ರವಲ್ಲದೆ ಧಾತು, ಪ್ರತ್ಯಯ, ಪದಾಂಶ ಮುಂತಾದ ಅತ್ಯಲ್ಪಗಾತ್ರದ ಭಾಷಾಂಶಗಳಲ್ಲಿಯೂ ಸ್ಫುರಿಸುತ್ತದೆಂದು ಆನಂದವರ್ಧನ ಸೋದಾಹರಣವಾಗಿ ಸಾರುತ್ತಾನೆ. ಅಂಥ ಒಂದು ನಿದರ್ಶನವನ್ನು ‘ಎಣ್ಣೆಯ ಬಟ್ಟಲು’ (ಪು. ೧೯೯) ಎಂಬ ಕಥನಾತ್ಮಕ ಸಾನೆಟ್ಟಿನಲ್ಲಿ ಕಾಣಬಹುದು. ಇಲ್ಲಿ ನಾರದನು ತನ್ನ ಭಕ್ತಿಯನ್ನು ಕುರಿತು ಜಂಬ ಕೊಚ್ಚಿಕೊಳ್ಳುತ್ತ ಬಡರೈತನ ಶ್ರದ್ಧೆಯನ್ನು ಹೀಗೆಳೆಯುತ್ತಾನೆ: ‘ಹಾಡುವ ಮಹಾಭಕ್ತ ನಾನೆಲ್ಲಿ? ಮಲಗೇಳುವೆರಡೆ ಸಲ ರಾಮೆನುವ ಭವಿಯಾತನೆಲ್ಲಿ?’ ಎಂದು. ಇಲ್ಲಿ ಕವಿಯು ರಾಮ ಎಂಬ ಪೂರ್ಣ ಪದಕ್ಕೆ ಬದಲಾಗಿ ರಾಮ್ ಎಂಬ ಅಪೂರ್ಣ ಶಬ್ದವನ್ನು ಸೋದ್ದಿಷ್ಟವಾಗಿ ಬಳಸಿರುವುದು ಗಮನಾರ್ಹ. ಇದು ಆ ರೈತನು ‘ರಾಮ’ ಎಂದು ಮೂರು ಮಾತ್ರೆಗಳ ಕಾಲದವರೆಗೆ ಪೂರ್ತಿಯಾಗಿಯೂ ಉಚ್ಚರಿಸದೆ ‘ರಾಮ್’ ಎಂದು ಕೇವಲ ಎರಡೇ ಮಾತ್ರೆಗಳ ನಿಡವಿಯಲ್ಲಿ ಮುಗಿಸಿ ತನ್ನ ಭಕ್ತಿಯ ಉಸಾಬರಿ ಮುಗಿಯಿತೆಂದು ಕೈತೊಳೆದುಕೊಳ್ಳುವಷ್ಟು ಅಲಸಿ ಎಂಬ ಧ್ವನಿಯನ್ನು ಹೊಮ್ಮಿಸುವ ಮೂಲಕ ನಾರದನ ಅಸಹನೆ ಮತ್ತು ಅಹಂಕಾರಗಳನ್ನು ಚೆನ್ನಾಗಿ ಅನುರಣಿಸಿದೆ.
‘೩೫,೦೦,೦೦೦’ ಎಂಬ ಸಾನೆಟ್ಟಿನಲ್ಲಿ ಪೈಗಳು ಬಂಗಾಳದ ಬರಗಾಲದಲ್ಲಿ ಅಸುನೀಗಿದ ಮೂವತ್ತೈದು ಲಕ್ಷ ಪ್ರಜೆಗಳಿಗಾಗಿ ಕಂಬನಿ ಮಿಡಿಯುವಾಗ ಕಡೆಯಲ್ಲಿ ‘ಇನಿಸೆ ಭಾಗ್ಯಕೆ ಜೀಯ ಜನಿಸಿದೆವೆ ನಾವು? ಕೂಳಿದ್ದು ಉಪವಾಸ, ಬಾಳಿದ್ದು ಸಾವು.’ ಎಂದು ವಿಷಾದಿಸುತ್ತಾರೆ. ಈ ವಿರೋಧಮೂಲದ ಸಾಲುಗಳಲ್ಲಿ ವಿಭಾವನಾಲಂಕಾರವನ್ನು ಗುರುತಿಸಬಹುದು. ಆದರೆ ಇದು ಉನ್ಮೀಲಿಸುವ ಧ್ವನಿ ಮತ್ತೂ ಸೊಗಸಾದದ್ದು. ಇದು ಇಡಿಯ ಈ ಕವಿತೆಯ ಪ್ರಬಂಧಧ್ವನಿಯೇ ಆಗಿದೆ.
‘ಸಾಕು’ ಎಂಬ ಕವಿತೆಯಲ್ಲಿ ಕಡೆಗೆ ಕವಿ ತಮ್ಮ ಕಡೆಯ ಆಸೆಯನ್ನು ಹೀಗೆ ಹರಳುಗಟ್ಟಿಸುತ್ತಾರೆ: ‘ಅಂತು ಬಾಳ್ವೆಯ ಕೊನೆಗೆ ನಮ್ಮನಾ ಹಸೆಮನೆಗೆ ಹೊಸ ವಧೂವರರಂತೆ ಮೃತಿ ನಡಸೆ ಸಾಕು.’ (ಪು. ೨೬೭). ಒಲವಿನ ದಂಪತಿಯ ಸಾವು ಅವರಿಗೆ ಮತ್ತೊಂದು ಮದುವೆಯಂತೆ ಬರಲೆಂದು ಹೇಳುವ ಈ ಸಾಲುಗಳಲ್ಲಿ ಪ್ರೀತಿ ಉಳಿದಲ್ಲಿ ಸಾವು ಅಂಜಿಸದೆಂಬ ದಿವ್ಯವಾದ ಧ್ವನಿಯಿದೆ. ಮಾತ್ರವಲ್ಲ, ಇಲ್ಲಿ ಚಿತೆಯು ಹಸೆಮಣೆಯೆಂಬ ಮತ್ತೊಂದು ಅದ್ಭುತವಾದ ಧ್ವನಿಯೂ ಉಂಟು. ತನ್ಮೂಲಕ ಅದು ಬೆಂಕಿಯ ಬೇಗೆಯಲ್ಲ, ಹೂಗಳ ಹಾಸಿಗೆ ಎಂಬ ಸ್ಫುರಣೆ ತಾನಾಗಿಯೇ ಮೂಡುತ್ತದೆ. ಸಾವಿನ ಭೀತಿಯನ್ನು ನೀಗುವಲ್ಲಿ ಹೀಗೆ ಇದು ಅನನ್ಯವಾಗಿ ದುಡಿದಿದೆಯಲ್ಲದೆ ರೌದ್ರ, ಬೀಭತ್ಸ, ಭಯಾನಕ ಮುಂತಾದ ರಸಗಳಿಗೂ ಅವುಗಳ ಮೂಲದಲ್ಲಿರುವ ಭಾವಗಳಿಗೂ ಬದಲಾಗಿ ಉದಾತ್ತ ರಮಣೀಯವಾದ ಶೃಂಗಾರವೇ ಸ್ಫುರಿಸುವಂತೆ ಮಾಡಿದೆ.
‘ವಾಸವದತ್ತೆ’ ಎಂಬ ಕಥನಕವನದಲ್ಲಿ ಗೋವಿಂದ ಪೈಗಳು ತಮ್ಮ ಓದುಗರಿಗೆ ವಾಸವದತ್ತೆಯನ್ನು ಪರಿಚಯಿಸುವಾಗ ಅವಳನ್ನು ‘ಕುರಿಂಜಿ ಹೂವು’ (ಪು. ೨೬೮) ಎಂದು ಬಣ್ಣಿಸುತ್ತಾರೆ. ಇದು ನಿಜಕ್ಕೂ ಕವಿಗಳ ಅನೂಹ್ಯ ವ್ಯುತ್ಪತ್ತಿಯ ಮೂಲಕ ಜನಿಸಿದ ಧ್ವನಿ. ಕುರಿಂಜಿ ಹೂವು ಚಿಕ್ಕಮಗಳೂರಿನ ಬೆಟ್ಟ-ಕಣಿವೆಗಳಲ್ಲಿ, ತಮಿಳುನಾಡಿನ ಗುಡ್ಡಗಾಡುಗಳಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಮೂಡುವ ಅಪೂರ್ವ ಪುಷ್ಪ. ಕನ್ನಡದಲ್ಲಿ ಇದನ್ನು ಗುರುಗಿ ಹೂವೆಂದೂ ಕರೆಯುತ್ತಾರೆ. ವಾಸವದತ್ತೆ ವಿಟವರ್ಗಕ್ಕೆ ಇಷ್ಟು ವಿರಳವಾಗಿ ದೊರೆಯುವಂಥ ಬೆಲೆವೆಣ್ಣೆಂಬ ಧ್ವನಿ ಈ ಹೋಲಿಕೆಯ ಮೂಲಕ ಹೊಮ್ಮಿದೆ.
‘ನಿಃಸ್ವ’ ಎಂಬ ಸಾನೆಟ್ಟೊಂದರಲ್ಲಿ ಪೈಗಳು ಗಾಂಧಿಯವರನ್ನು ಕೊಂಡಾಡುವಾಗ ಶಿಬಿ, ದಧೀಚಿ, ಭರತಮಹರ್ಷಿ, ಬುದ್ಧ, ತೇಗ ಬಾಹಾದೂರ್, ರಾಣಿ ಪದ್ಮಿನಿ ಮುಂತಾದ ಹುತಾತ್ಮರನ್ನು ತಮ್ಮ ಕವಿತೆಯ ಆರಂಭದಲ್ಲಿ ನೆನೆಯುತ್ತಾರೆ. ಇದು ಗಾಂಧಿ ಇವರೆಲ್ಲರ ತ್ಯಾಗ-ಬಲಿದಾನಗಳ ಮುಂದುವರಿಕೆಯೆಂಬ ಧ್ವನಿಯನ್ನು ಉನ್ಮೀಲಿಸಿದೆಯಾದರೂ ಇದು ನಿರೀಕ್ಷಿತವಾದ ಜಾಡಿನಲ್ಲಿಯೇ ಸಾಗಿರುವ ಕಾರಣ ಸ್ವಾರಸ್ಯ ಕಡಮೆ. ಪೈಗಳ ಸಾಹಿತ್ಯವನ್ನು ವಿವೇಚಿಸುವಾಗ ಇಂಥ ಕೆಲವೊಂದು ಉದಾಹರಣೆಗಳೂ ನಮಗೆ ಎದುರಾಗುತ್ತವೆ. ಆದರೆ ಇವುಗಳನ್ನು ಮೀರಿಸುವ ಮತ್ತೆಷ್ಟೋ ಭವ್ಯವಾದ ಕವಿತೆ ಇಲ್ಲಿರುವ ಕಾರಣ ನಾವು ಇಂಥ ‘ಸಾಮಾನ್ಯ ಧ್ವನಿ’ ಸಂದರ್ಭಗಳನ್ನು ಬದಿಗಿಟ್ಟು ಸಾಗಬಹುದು.
ಒಟ್ಟಿನಲ್ಲಿ ಗೋವಿಂದ ಪೈಗಳ ಧ್ವನಿದೀಪ್ತಿ ಅಲ್ಪಪ್ರಮಾಣದಲ್ಲ; ಅದು ಸದಾ ರಸನಿಷ್ಠ, ಸಹೃದಯಹೃದಯಹಾರಿ.
ರಸ
ರಸದ ದೃಷ್ಟಿಯಿಂದ ನೋಡಿದಾಗ ಪೈಗಳಲ್ಲಿ ಎದ್ದುಕಾಣುವುದು ಶಾಂತದಲ್ಲಿ ಪರ್ಯವಸಿಸುವ ಕರುಣ ಮತ್ತು ಭಕ್ತಿಗಳು. ನವೋದಯದ ಹೆಚ್ಚಿನ ಕವಿಗಳಿಗೆ ಒದಗಿಬಂದ ದೇಶಭಕ್ತಿ, ಭಗವದ್ಭಕ್ತಿ ಮತ್ತು ಶೃಂಗಾರಗಳು ಪೈಗಳಿಗೂ ಅಭಿಮತವೆನಿಸಿವೆ; ಆದರೂ ಶೃಂಗಾರವು ವಿಪ್ರಲಂಭದ ಒಂದೇ ಆಯಾಮವನ್ನು ನಚ್ಚಿದೆ. ಇಲ್ಲಿಯೂ ಅದು ಆತ್ಯಂತಿಕ ವಿರಹದ ಕಾರಣ ಕರುಣದತ್ತಲೇ ವಾಲುತ್ತದೆ. ಕರುಣವು ಮತ್ತೊಬ್ಬರ ಕಷ್ಟಕ್ಕೆ ಮರುಗುವ ದಯೆಯ ರೂಪವನ್ನು ತಾಳುವುದು ಗಮನಾರ್ಹ. ದೇಶಭಕ್ತಿ ಮತ್ತು ಭಗವದ್ಭಕ್ತಿಗಳಲ್ಲಿ ಆತ್ಮಸಮರ್ಪಣೆಯ ಕರುಣಾಂಶದೊಡನೆ ಆದರ-ಅಭಿಮಾನಗಳ ವೀರವೂ ಎದ್ದುಕಾಣುತ್ತದೆ. ಪೈಗಳ ಪ್ರಕೃತಿಚಿತ್ರಣದಲ್ಲಿ ಪ್ರಸನ್ನತೆಯ ಪ್ರೇಯೋರಸವನ್ನು ಗುರುತಿಸಬಹುದು; ಅವ್ಯಾಜವಾದ ಬೆರಗಿನ ವಿಸ್ಮಯಭಾವವನ್ನೂ ನಾವು ಕಾಣಬಹುದು. ಒಟ್ಟಿನಲ್ಲಿ ಯಾವುದನ್ನು ಭರತಾದಿಗಳು ಸಾತ್ತ್ವತೀವೃತ್ತಿ ಎಂದು ಹೆಸರಿಸುವರೋ ಆ ಸತ್ತ್ವೋನ್ನತಿ ಪೈಗಳ ರಸಾವಿಷ್ಕರಣದಲ್ಲಿ ಎದ್ದುಕಾಣುತ್ತದೆ.
ಗೋವಿಂದ ಪೈಗಳ ಮನೋಧರ್ಮ ಪ್ರಧಾನವಾಗಿ ಉದಾತ್ತ, ಕರುಣಾರ್ದ್ರ ಮತ್ತು ಭಕ್ತಿನಮ್ರ. ಅವರನ್ನು ಇವೆಲ್ಲ ಕಡೆಗೆ ಉಪಶಾಂತಿಯತ್ತ ಕೊಂಡೊಯ್ಯುವ ಮಾತೂ ಸತ್ಯ. ಹೀಗಾಗಿ ಅವರ ಕವಿತೆಗಳಲ್ಲಿ ಈ ಭಾವಗಳನ್ನು ಆಶ್ರಯಿಸಿದ ರಸಗಳೇ ಹೆಚ್ಚಾಗಿ ಆವಿರ್ಭವಿಸಿರುವುದು ಅಚ್ಚರಿಯ ಸಂಗತಿಯಲ್ಲ. ಪೈಗಳ ಕಾವ್ಯದಲ್ಲಿ ಪ್ರಾಯಶಃ ‘ಬೇಲೂರಿನ ಮಂಗ’ ಮತ್ತು ‘ಬೇಲೂರಿನ ಚೇಳು’ ಎಂಬ ಎರಡು ರಚನೆಗಳಲ್ಲಿ (ಪು. ೨೩೩, ೨೩೪) ಮಾತ್ರ ಲಘುವಾದ ವೈನೋದಿಕ ಭಾವವನ್ನು ಕಾಣುತ್ತೇವೆ. ಉಳಿದಂತೆ ಎಲ್ಲ ಕವಿತೆಗಳಲ್ಲಿಯೂ ಕರುಣವೋ, ಭಕ್ತಿಯೋ, ವೀರವೋ ಮತ್ತಾವ ಗಂಭೀರ ಭಾವವೋ ಮಡುಗಟ್ಟಿದೆ.
ಭಕ್ತಿಯು ವಸ್ತುತಃ ಒಂದು ಸ್ವತಂತ್ರ ರಸವಲ್ಲ; ಅದೇನಿದ್ದರೂ ಸುಸಂಸ್ಕೃತವಾದ ಭಾವವಿಶೇಷ. ಈ ಬಗೆಗೆ ವಿಶದವಾದ ಸಮಾಲೋಚನೆ ಪ್ರತ್ಯೇಕವಾಗಿ ಅನ್ಯತ್ರ ನಡೆದಿರುವ ಕಾರಣ ಸದ್ಯದಲ್ಲಿ ಆ ಎಲ್ಲ ವಿವರಗಳೂ ಬೇಕಿಲ್ಲ. ಯಾವುದೇ ರಸವು ತನ್ನ ಅಸ್ತಿತ್ವವನ್ನು ಪ್ರಶ್ನಾತೀತವಾಗಿ ಸ್ಥಾಪಿಸಿಕೊಳ್ಳಬೇಕಾದರೆ ಅದು ಮಾನವನ ಮೂಲ ಪ್ರಾಕೃತಿಕ ಭಾವಗಳ ನೆಲೆಯಿಂದಲೇ ಅಭಿವ್ಯಕ್ತವಾಗಬೇಕು; ಮತ್ತಿದು ಪ್ರಾಣಿಮಾತ್ರದ ಮೂಲಚೋದನೆಗಳಾದ ಆಹಾರ, ನಿದ್ರೆ, ಭಯ, ಮೈಥುನಗಳಂಥವುಗಳಲ್ಲಿ ತನ್ನ ಬೇರನ್ನು ಕಂಡುಕೊಳ್ಳಬೇಕೆಂಬ ನಿಗಮನವನ್ನು ಮಾತ್ರ ನೆನೆದಲ್ಲಿ ಸಾಕು. ಈ ಅಳತೆಗೋಲನ್ನು ಹಿಡಿದು ನೋಡಿದರೆ ಭಕ್ತಿಯು ರಸವೆನಿಸದು. ಇಂತಿದ್ದರೂ ಅದಕ್ಕೆ ಅನ್ವಿತ ಭಾವಗಳ ಸ್ತರದಲ್ಲಿ ಅಸ್ತಿತ್ವವಿದೆ ಹಾಗೂ ಈ ಅಂಶವು ಅದನ್ನು ಆಸ್ವಾದ್ಯವಾಗಿಯೂ ಮಾಡಿದೆ. ಪೈಗಳ ಕವಿತೆ ಇಂಥ ಆಸ್ವಾದ್ಯವಾದ ಭಕ್ತಿಯನ್ನು ಸಮೃದ್ಧವಾಗಿ ಹೊಂದಿದೆ.
ಭಕ್ತಿಭಾವವನ್ನು ಪೈಗಳ ಕವಿತೆಗಳಲ್ಲಿ ಮಾತ್ರವಲ್ಲದೆ ಬದುಕಿನಲ್ಲಿಯೇ ಸ್ಥಾಯಿಯಾಗಿ ಕಾಣಬಹುದು. ಈ ನಿಟ್ಟಿನಿಂದ ಕಂಡಾಗ ಆಲಂಕಾರಿಕರ ದೃಷ್ಟಿಯಲ್ಲಿ ನಡೆದ ಭಕ್ತಿಯ ವಿಶ್ಲೇಷಣೆಯನ್ನು ನೆಮ್ಮುವುದಕ್ಕಿಂತ ಮಿಗಿಲಾಗಿ ಭಕ್ತಿಮಾರ್ಗಪ್ರವರ್ತಕರ ಕೆಲವು ವಿಚಾರಗಳನ್ನು ಸದ್ಯದ ಮೀಮಾಂಸೆಗೆ ಕಸಿ ಮಾಡಿಕೊಂಡರೆ ಹೆಚ್ಚಿನ ಪ್ರಯೋಜನವುಂಟು. ನಮ್ಮಲ್ಲಿ ಭಕ್ತಿಯ ಹಲವು ಪ್ರಕಾರಗಳನ್ನು ವೀರಭಕ್ತಿ, ಮಧುರಭಕ್ತಿ, ದಾಸ್ಯಭಕ್ತಿ, ಸಖ್ಯಭಕ್ತಿ ಮತ್ತು ವಾತ್ಸಲ್ಯಭಕ್ತಿಗಳೆಂದು ವಿಂಗಡಿಸಿದ್ದಾರೆ. ಇವೆಲ್ಲವುಗಳ ಛಾಯೆ ಪೈಗಳ ಕಾವ್ಯದಲ್ಲಿದೆ. ವಸ್ತುತಃ ಭಕ್ತಿಯು ರಸವಾಗಿ ಸ್ವತಂತ್ರ ರೂಪದಿಂದ ನಿಲ್ಲಲು ಅಸಾಧ್ಯವಾದ ಕಾರಣ ಇಂಥ ವಿವಿಧ ರಸ ಅಥವಾ ಉಪರಸಗಳ (ವೀರ, ಶೃಂಗಾರ, ಕರುಣ, ಪ್ರೇಯಸ್, ವಾತ್ಸಲ್ಯ) ನೆರವನ್ನು ಪಡೆಯುತ್ತದೆ. ಹೀಗಾಗಿಯೇ ಈ ಮುನ್ನ ತಿಳಿಸಿದ ಭಕ್ತಿಯ ಪ್ರಕಾರಗಳು ಸಾಹಿತ್ಯವಿಮರ್ಶೆಗೆ ಒದಗಿಬರುತ್ತವೆ.
ಪೈಗಳ ರಾಷ್ಟ್ರಪ್ರೇಮದಲ್ಲಿ ವೀರಭಕ್ತಿಯುಂಟು; ಭಗವಚ್ಛರಣಾಗತಿಯಲ್ಲಿ ದಾಸ್ಯ ಮತ್ತು ಸಖ್ಯಭಕ್ತಿಗಳ ಪಾರಮ್ಯವುಂಟು; ಅಳಿದ ಪತ್ನಿಯ ನೆನಪಿನ ಮೂಲಕ ತಮ್ಮ ದೈವವನ್ನು ಆರಾಧಿಸುವಲ್ಲಿ ಮಧುರಭಕ್ತಿಯ ಎಳೆಗಳುಂಟು; ಕೆಲವೊಂದು ಕವಿತೆಗಳಲ್ಲಿ ವಾತ್ಸಲ್ಯಭಕ್ತಿಯ ಪ್ರಸ್ಫುಟೀಕರಣವೂ ಉಂಟು. ಇವನ್ನು ಈ ಮುನ್ನ ನಾವು ನಡಸಿದ ‘ವಸ್ತು’ವಿನ ವಿವೇಚನೆಯಲ್ಲಿಯೇ ತಾಳೆ ನೋಡಿಕೊಳ್ಳಬಹುದು.
ಭಕ್ತಿಯ ಬಳಿಕ ಪೈಗಳಿಗೆ ವೀರರಸದಲ್ಲಿ ಹೆಚ್ಚಿನ ತಾತ್ಪರ್ಯವಿರುವುದು ಸ್ಪಷ್ಟವಾಗುತ್ತದೆ. ಆದರೆ ಇದು ಕೇವಲ ಯುದ್ಧವೀರ ಎಂಬ ಒಂದು ಪ್ರಕಾರಕ್ಕೆ ಸೀಮಿತವಾಗಿಲ್ಲ. ನಮ್ಮ ಆಲಂಕಾರಿಕರು ತಿಳಿಸುವ ಮಿಕ್ಕ ಮೂರು ಪ್ರಭೇದಗಳಾದ ದಾನವೀರ, ದಯಾವೀರ ಮತ್ತು ಧರ್ಮವೀರಗಳೂ ಪೈಗಳಲ್ಲಿ ತಮ್ಮ ಸಾರ್ಥಕ್ಯವನ್ನು ಕಂಡುಕೊಂಡಿವೆ. ಸ್ವಭಾವತಃ ಅಂತರ್ಮುಖಿಗಳೂ ಏಕಾಂತಜೀವಿಗಳೂ ಆದ ಗೋವಿಂದ ಪೈಗಳಿಗೆ ಉತ್ಸಾಹವೇ ಸ್ಥಾಯಿಯಾದ ವೀರರಸದಲ್ಲಿ ಅದೇಕಿಷ್ಟು ಅಭಿನಿವೇಶವೆಂಬ ಪ್ರಶ್ನೆ ಬಂದಾಗ - ಈ ರಸವು ಪ್ರತಿಪಾದಿಸುವ ಎರಡು ಪುರುಷಾರ್ಥಗಳಾದ ಧರ್ಮ ಮತ್ತು ಅರ್ಥಗಳ ಪೈಕಿ ನಮ್ಮ ಕವಿಗಳಿಗೆ ಧರ್ಮದಲ್ಲಿ ಮಿಗಿಲಾದ ಆಸ್ಥೆಯಿರುವುದರಿಂದಲೇ ವೀರದಲ್ಲಿ ಇಂಥ ಆದರ ಜನಿಸಿದೆಯೆಂದು ತಿಳಿಯುತ್ತದೆ. ಧರ್ಮವು ಮತ-ಕರ್ಮಕಾಂಡಗಳಿಗೆ ಅತೀತವಾಗಿ, ಜಗತ್ತನ್ನೆಲ್ಲ ತಾಳಿಸಿ ಬಾಳಿಸುವ ತತ್ತ್ವವೆಂದು ಬಲ್ಲವರಿಗೆ ಪೈಗಳ ಈ ಅಭಿನಿವೇಶ ಅವರ ಮಹನೀಯತೆಗೆ ಯುಕ್ತ ಮತ್ತು ಸಹಜವೆಂದು ಸ್ಪಷ್ಟವಾಗುತ್ತದೆ. ಈ ನೆಲೆಯಿಂದಲೇ ಅವರ ಸಾಹಿತ್ಯದಲ್ಲಿ ವೀರರಸದ ವ್ಯಾಪ್ತಿ-ಪರಿಣಾಮಗಳನ್ನು ಗಮನಿಸಬೇಕು.
‘ತುತೂರಿ’ (ಪು. ೨೦೫) ಎಂಬ ಕವಿತೆಯಲ್ಲಿ ಯುದ್ಧವೀರವನ್ನು ಕಾಣಬಹುದು. ‘ಕೊಳುಗುಳದ ಮನವಿ’ (ಪು. ೬೪) ಎಂಬ ಭಾಷಾಂತರಕವಿತೆಯಲ್ಲಿ ಯುದ್ಧವೀರ ಮತ್ತು ಧರ್ಮವೀರಗಳೆರಡರ ಸಾಮರಸ್ಯವನ್ನು ಗುರುತಿಸಬಹುದು. ‘ಹಳ್ಳಿಯ ಹುಡುಗಿ’ (ಪು. ೨೭೪) ಕಥನಕವನವು ಧರ್ಮವೀರದೊಡನೆ ಕರುಣ ಮತ್ತು ಅದ್ಭುತಗಳನ್ನು ಅಂಗರಸಗಳಾಗಿ ಹೊಂದಿದೆ. ‘ಯಾರೆಂಬರು ಮುಗಿದುವೆಂದು ಬವರಂ?’ (ಪು. ೩೦೩) ಕವನವಂತೂ ಧರ್ಮವೀರದಲ್ಲಿ ಬೇರೂರಿದ ಯುದ್ಧವೀರದ ವಿಶ್ವರೂಪವೇ ಆಗಿದೆ. ಈ ಕವಿತೆಯ ಆರಂಭದಲ್ಲಿಯೇ ಉಲ್ಲೇಖಗೊಳ್ಳುವ ಭಗವದ್ಗೀತೆಯ ಶ್ಲೋಕವೊಂದು (೨.೩೭) ಜಗತ್ತಿನ ಶಾಂತಿ-ಕ್ಷೇಮಗಳಿಗಾಗಿ ಯುದ್ಧವು ಅನಿವಾರ್ಯವಾದರೆ ಇದಕ್ಕಿಂತ ಒಳ್ಳೆಯ ಜೀವನಮಾರ್ಗವೇ ಇಲ್ಲವೆಂಬ ರಸಧ್ವನಿಯನ್ನು ಮೂಡಿಸಿದೆ. ಇಡಿಯ ಕವಿತೆ ಇದರ ಸರಸ ವ್ಯಾಖ್ಯಾನವೆನ್ನಬೇಕು. ಈಚಿನ ದಶಕಗಳಲ್ಲಿ ಕವಿಗಳೆಂದೂ ಲೇಖಕರೆಂದೂ ಪ್ರತಿಷ್ಠೆ ಪಡೆದ ಅನೇಕರು ಮತಾಂಧತೆ, ಭಯೋತ್ಪಾದನೆ ಮತ್ತು ಆರ್ಥಿಕ ಸಾರ್ವಭೌಮತೆಗಳ ಮೂಲಕ ಜಗತ್ತಿಗೆ ಒದಗಿದ ಕಂಟಕವನ್ನು ಜಾಣಕುರುಡಿನಿಂದ ಉಪೇಕ್ಷಿಸಿ ಇವಕ್ಕೆಲ್ಲ ಪರಿಹಾರರೂಪವಾದ ಸಾತ್ತ್ವಿಕ ಯುದ್ಧವನ್ನು ನಿಂದಿಸುವುದೊಂದು ಅಸಹ್ಯ ಪದ್ಧತಿಯಾಗಿಯೇ ಬೆಳೆದಿದೆ. ಇದಕ್ಕೆ ಮಾರುಹೋದ ಮುಗ್ಧರು ಪೈಗಳ ಈ ಕವಿತೆಯನ್ನು ಹೃದ್ಗತ ಮಾಡಿಕೊಂಡರೆ ವಸ್ತುಸ್ಥಿತಿಯ ಅರಿವಾಗುತ್ತದೆ; ಮೌಲ್ಯವಿವೇಕ ಜಾಗರಿತವಾಗುತ್ತದೆ. ಇಲ್ಲಿಯ ಸೊಲ್ಲೊಂದು ಸರ್ವದಾ ಸ್ಮರಣೀಯ:
ಯುದ್ಧವಿಲ್ಲದಭಿವೃದ್ಧಿಯದುಂಟೆ?
ಯುದ್ಧದೆ ಮನುಜತೆಯ ವಿಕಾಸಂ
ಬೆಂಕಿಯೊಳಲ್ಲವೆ ಕಬ್ಬಿಣ ದಾಂಟೆ
ಯಂತ್ರತಂತ್ರಶಕ್ತಿಯ ಸಾಸಂ!
ಯೋಧನಾದ ನರನಮರಸಮಾನಂ
ಯೋಧನೆಂದೆ ಸೃಷ್ಟಿಯ ಯಜಮಾನಂ (ಪು. ೩೦೩)
ಅಹಿಂಸೆಯ ವಕ್ತಾರರಾದ ಗಾಂಧಿಯವರನ್ನು ಪೈಗಳು ಅಪಾರವಾಗಿ ಆದರಿಸಿದ್ದರೂ ಅವರಿಗೆ ಎಂದೂ ಒಪ್ಪಿಗೆಯಾಗದ ಯುದ್ಧಪಾರಮ್ಯವನ್ನು ಇಲ್ಲಿ ಪ್ರತಿಪಾದಿಸಿರುವುದು ಗಮನಾರ್ಹ. ಬಹುಶಃ ಪೈಗಳ ಬಾಳಿನ ಕಡೆಕಡೆಯ ವರ್ಷಗಳಲ್ಲಿ ರಚಿತವಾದ ಈ ಕವಿತೆ ಅವರ ರಾಜಕೀಯ ದೃಷ್ಟಿಕೋನ ಮತ್ತು ವಿಚಾರಕ್ರಮಗಳಿಗೊಂದು ಒಳ್ಳೆಯ ಗಮ್ಯವೆನ್ನಬೇಕು.
ಬುದ್ಧ, ಗೊಮ್ಮಟ ಮುಂತಾದ ವಿಭೂತಿಪುರುಷರಲ್ಲಿ ಭಕ್ತಿ-ಶ್ರದ್ಧೆಗಳನ್ನು ಹೊಂದಿದ್ದ ಪೈಗಳಿಗೆ ಧರ್ಮವೀರದೊದನೆ ಹೊಂದಿಕೊಂಡು ಬರುವ ದಯಾವೀರದಲ್ಲಿಯೂ ವಿಶೇಷ ತಾತ್ಪರ್ಯವಿದ್ದಿತು. ಇದಕ್ಕೆ ನಿದರ್ಶನವಾಗಿ ಅವರ ಕೆಲವು ಕಥನಕವಿತೆಗಳಾದ ‘ಭಿಕ್ಷುವೂ ಪಕ್ಷಿಯೂ’ (ಪು. ೨೪೭), ‘ಮಾತಂಗಿ’ (ಪು. ೨೫೩), ‘ವಾಸವದತ್ತೆ’ (ಪು. ೨೬೮) ಮುಂತಾದುವನ್ನು ಗಮನಿಸಬಹುದು. ಇಲ್ಲಿ ದಯಾವೀರದೊಡನೆ ನಿರ್ವೇದಮೂಲದ ಶಾಂತರಸವೂ ಹಾಸುಹೊಕ್ಕಾಗಿದೆ. ಅಂಗರಸಗಳಾಗಿ ಕರುಣ, ರೌದ್ರ ಮತ್ತು ಬೀಭತ್ಸಗಳೂ ದುಡಿದಿವೆ. ಕರುಣದ ಪಾರಮ್ಯ ಶಾಂತಕ್ಕೆ ಒಳ್ಳೆಯ ಒತ್ತಾಸೆ ನೀಡಿದೆ. ಕರುಣವನ್ನೇ ತೀವ್ರವಾಗಿ ಪೋಷಿಸುವ ಚಿಕ್ಕ ಕವಿತೆ ‘ಅಂದಿನಿಂದಾಕೆ ನಕ್ಕಿಲ್ಲ ಅತ್ತಿಲ್ಲ’ (ಪು. ೧೯೫) ಪ್ರಾಯಶಃ ಅವರ ಉತ್ಕಟತಮ ರಚನೆಗಳಲ್ಲೊಂದು. ಇಲ್ಲಿಯ ಕರುಣವು ಕವಿಯ ಅಭಿವ್ಯಕ್ತಿಯ ಅಡಕ ಮತ್ತು ಸಂಯಮಗಳ ಕಾರಣ ಅಸಾಧಾರಣವಾದ ಮೊನಚನ್ನು ಪಡೆದುಕೊಂಡಿದೆ. ಹೀಗಾಗಿಯೇ ಇಲ್ಲಿ ಶೋಕಭಾವದ ಸಾಂದ್ರತೆಯೂ ಇದೆಯೆನ್ನಬೇಕು.
ಪೈಗಳ ಸಾಹಿತ್ಯದಲ್ಲಿ ಹಲವೊಮ್ಮೆ ಕರುಣ, ವಾತ್ಸಲ್ಯ ಮತ್ತು ಶಾಂತ ರಸಗಳು ಅದ್ಭುತದೊಡನೆ ಕೂಡಿಬರುವುದನ್ನು ಗಮನಿಸಬಹುದು. ಇದೊಂದು ವಿಚಿತ್ರಮನೋಹರವಾದ ರಸಪಾಕ. ಉದಾಹರಣೆಗೆ: ‘ತುರೀಯ’ (ಪು. ೨೨೮) ಸಾನೆಟ್ಟಿನಲ್ಲಿ ಭಕ್ತಿಭಾವಕ್ಕೆ ಅದ್ಭುತದ ಸಹಕಾರ ಆದ್ಯಂತವಾಗಿದೆ. ‘ತೆಂಕಾಫ್ರಿಕದ ಹಳ್ಳಿ’ (ಪು. ೨೩೧) ಎಂಬ ಮತ್ತೊಂದು ಸಾನೆಟ್ಟಿನಲ್ಲಿ ವಾತ್ಸಲ್ಯಕ್ಕೆ ಅದ್ಭುತ ಇದೇ ರೀತಿ ಸಹಕಾರ ನೀಡಿದೆ. ಪೈಗಳ ಸುಪ್ರಸಿದ್ಧ ಕವಿತೆ ‘ಶೂದ್ರರ್ಷಿ ಕವಷ’ದಲ್ಲಿ (ಪು. ೨೬೨) ಕೂಡ ಕರುಣ ಮತ್ತು ಶಾಂತ ರಸಗಳಿಗೆ ಅದ್ಭುತವು ಅರ್ಥಪೂರ್ಣವಾದ ಸೇತುವೆಯನ್ನು ಕಟ್ಟಿದೆ. ಅವರ ನಿಸರ್ಗಕವಿತೆಗಳಲ್ಲಿಯೇ ಅತಿಸುಂದರವಾದ ‘ಮಿಂಚುಳ್ಳಿ’ಯಲ್ಲಿ (ಪು. ೨೧೭) ಪ್ರೇಯೋರಸಕ್ಕೆ ಅದ್ಭುತವು ಅಂದವಾದ ಜರಿಯಂಚನ್ನು ಆದ್ಯಂತವೂ ಕಟ್ಟಿದೆ. ಹೀಗೆ ಗೋವಿಂದ ಪೈಗಳ ಅನೇಕ ಕವಿತೆಗಳಲ್ಲಿ ವೀರ, ಕರುಣ, ಅದ್ಭುತ ಮತ್ತು ಶಾಂತಗಳ ಅಭಿವ್ಯಕ್ತಿಯನ್ನು ಮನಗಾಣಬಹುದು.
ಚಿಕ್ಕ ವಯಸ್ಸಿಗೇ ಪ್ರೀತಿಯ ಮಡದಿಯನ್ನು ಕಳೆದುಕೊಂಡ ಪೈಗಳಿಗೆ ಆಕೆಯ ಕಾಡುವ ನೆನೆಪೇ ವಿಪ್ರಲಂಭದ ಉರಿಯಾಗಿ ‘ನಂದಾದೀಪ’ದ ಕವಿತೆಗಳನ್ನು ಬರೆಸಿತಷ್ಟೆ. ಇಲ್ಲಿರುವುದು ಮೇಲ್ನೋಟಕ್ಕೆ ವಿಪ್ರಲಂಭಶೃಂಗಾರ ಎಂದಾದರೂ ವಿರಹಿಗಳ ಪುನಸ್ಸಮಾಗಮದ ಯಾವ ಸಾಧ್ಯತೆಯೂ ಇಲ್ಲದ ಕಾರಣ ಅದು ಕರುಣವೇ ಆಗಿದೆ. ಇದೂ ಸಹ ಭಗವದರ್ಪಿತವಾಗಿ, ಭಗವದ್ವೈಷಯಿಕವಾಗಿ, ಭಗವಂತನಲ್ಲಿ ಸಲ್ಲಿಸಿದ ಪ್ರಾರ್ಥನೆಯಾಗಿ ತೋರಿಕೊಳ್ಳುವುದೇ ಆಗಿರುವ ಕಾರಣ ಮತ್ತೆ ಭಕ್ತಿಯ ಪಾರಮ್ಯವನ್ನೇ ತಳೆದಿದೆ. ಉಳಿದಂತೆ ಹತ್ತಾರು ವ್ಯಭಿಚಾರಿಭಾವಗಳೂ ಈ ಮಟ್ಟದಲ್ಲಿಯೇ ಕೆಲವೊಂದು ಸ್ಥಾಯಿಭಾವಗಳೂ ಬಂದಿರುವುದು ವಿಜ್ಞವೇದ್ಯ. ಹೀಗಲ್ಲದೆ ಪತ್ನೀವಿಯೋಗದ ಶೋಕವನ್ನೇ ಸ್ಥಾಯಿಯನ್ನಾಗಿ ಉಳ್ಳ ಕವಿತೆ ‘ಯುಗಾದಿಯ ನೆನಪು’ (ಪು. ೫೩). ಹೀಗಾಗಿಯೇ ಇಲ್ಲಿರುವುದು ಅಪ್ಪಟ ಕರುಣರಸ. ಇದರ ಗುಣಗಣ್ಯತೆಯೂ ಮಿಗಿಲಾಗಿದೆ.
ಒಟ್ಟಿನಲ್ಲಿ ಡಾ|| ಕೆ. ಕೃಷ್ಣಮೂರ್ತಿ ಅವರು ಹೇಳುವಂತೆ ಕವಿತೆಯೊಂದರ ಬಿಡಿಗಳ ವಿಮರ್ಶೆಗಾಗಿ ಅಲಂಕಾರಗಳು ಚೆನ್ನಾಗಿ ಒದಗಿಬರುತ್ತವೆ; ಇಡಿಯ ವಿಮರ್ಶೆಗೆ ರಸ-ಧ್ವನಿಗಳೇ ಶರಣ್ಯ (ಭಾರತೀಯ ಕಾವ್ಯಮೀಮಾಂಸೆ: ತತ್ತ್ವ ಮತ್ತು ಪ್ರಯೋಗ, ಪು. ೭). ಗುಣವು ಇವೆರಡಕ್ಕೆ ಸೇತುವೆಯಾಗಿ ಪರಿಣಮಿಸುತ್ತದೆ. ಇದು ಶಬ್ದಾಲಂಕಾರಗಳಂತೆ ವರ್ಣ ಮತ್ತು ಪದಗಳ ಹಂತದಿಂದ ರಸದಂತೆ ಪ್ರಬಂಧದವರೆಗೆ ವ್ಯಾಪಿಸಿಕೊಳ್ಳುವ ತತ್ತ್ವ. ರಸದ ಪ್ರಕಾರವನ್ನು ಸ್ಪಷ್ಟಪಡಿಸುವಲ್ಲಿ ಶಬ್ದಗುಣಗಳೂ ಅದರ ಅನುಭೂತಿಯನ್ನು ನಿಕಟಗೊಳಿಸುವಲ್ಲಿ ಅರ್ಥಗುಣಗಳೂ ದುಡಿಯುತ್ತವೆಂದರೆ ತಪ್ಪಾಗದು. ಪಾದೆಕಲ್ಲು ನರಸಿಂಹ ಭಟ್ಟರು ಗುಣ ಮತ್ತು ಅಲಂಕಾರಗಳನ್ನು ಗುರುತಿಸುವ ಕ್ರಮವಿಲ್ಲಿ ಸ್ಮರಣೀಯ. ಆ ಪ್ರಕಾರ ಭಾಷೆಯ ಸಮರ್ಥವಾದ ಪ್ರಯೋಗ ಗುಣವಾದರೆ, ಅದರ ಆಕರ್ಷಕ ಪ್ರಯೋಗ ಅಲಂಕಾರ (ಭಾರತೀಯ ಋಷಿಪರಂಪರೆ ಮತ್ತು ಸಂಸ್ಕೃತಸಾಹಿತ್ಯ, ಪು. ೬೧). ರಸವು ಇವೆಲ್ಲದರ ಪರಿಪಾಕವಾಗಿ ಒದಗಿಬರುವ ಆಸ್ವಾದಾನುಭವ.
ಈ ಹಿನ್ನೆಲೆಯಲ್ಲಿ ಪೈಗಳ ರಸಾವಿಷ್ಕರಣಶಕ್ತಿಯನ್ನು ಪೂರ್ಣವಾಗಿ ಮನಗಾಣಲು ನಾವು ಅವರ ಕಾವ್ಯಪ್ರಬಂಧಗಳೆನಿಸಿದ ‘ಗೊಲ್ಗೊಥಾ’ ಮತ್ತು ‘ವೈಶಾಖಿ’ಗಳನ್ನೇ ಮುಖ್ಯವಾಗಿ ಆಶ್ರಯಿಸಬೇಕು.
To be continued.