ಅರಣ್ಯಕಾಂಡದ ಉಪಮಾಪ್ರಪಂಚ ಸಾಕಷ್ಟು ವಿಸ್ತಾರವಾದುದು. ವಿಶೇಷತಃ ಅಲ್ಲಿಯ ಹೇಮಂತವರ್ಣನೆಯಲ್ಲಿ ಉಪಮೆಯ ವಿಶ್ವರೂಪವನ್ನು ಕಾಣಬಹುದು.
ಸೂರ್ಯನು ದಕ್ಷಿಣದಿಕ್ಕಿಗೆ ತಿರುಗಿದ ಕಾರಣ ಉತ್ತರದಿಕ್ಕಿನಲ್ಲಿ ಕಾಂತಿ ಕುಂದಿ ಅದು ತಿಲಕವಿಲ್ಲದ ಹೆಣ್ಣಿನಂತೆ ಹತಪ್ರಭೆಯಾಗಿದೆ. ಇದನ್ನು ಆದಿಕವಿಗಳ ಮಾತು ಅಡಕವಾಗಿ ತಿಳಿಸಿದೆ:
ವಿಹೀನತಿಲಕೇವ ಸ್ತ್ರೀ ನೋತ್ತರಾ ದಿಕ್ಪ್ರಕಾಶತೇ | (೩.೧೬.೮)
ಚಳಿಗಾಲದಲ್ಲಿ ಹಿಮದ ಆವರಣದೊಳಗೆ ಹುದುಗಿದ ವಿಧುಮಂಡಲವು ಕುರುಡುಗನ್ನಡಿಯಂತೆ ಮಂಕಾಗಿದೆಯೆಂದೂ ಚಂದ್ರನ ಕಾಂತಿಯೆಲ್ಲವೂ ಸೂರ್ಯನಿಗೇ ಸೇರಿಹೋಗಿದೆಯೆಂದೂ ವರ್ಣಿಸುವಲ್ಲಿ ಅತ್ಯಂತವಿನೂತನಕಲ್ಪನೆಯಿದೆ. ವಿಶೇಷತಃ “ಕುರುಡುಗನ್ನಡಿ”ಯೆಂಬ ನುಡಿಯಲ್ಲಿ ತೋರುವ ಅತ್ಯಂತತಿರಸ್ಕೃತವಾಚ್ಯಧ್ವನಿಯನ್ನು ಆನಂದವರ್ಧನನು ಮಿಗಿಲಾಗಿ ಕೊಂಡಾಡಿದ್ದಾನೆ. ಇದು ಕುಂತಕನ ಪ್ರಕಾರ ಉಪಚಾರವಕ್ರತೆಯ ಒಂದು ವಿಲಾಸ. ಹೀಗೆ ಅಲಂಕಾರವೊಂದರಲ್ಲಿ ಧ್ವನಿ-ವಕ್ರತೆಗಳ ಹಲವಂಶಗಳು ಸೇರುವುದು ಸಂಕೀರ್ಣಕಾವ್ಯಶಿಲ್ಪದ ಸೊಗಸು. ಇದು ಮಹಾಕವಿತ್ವದ ಹೆಗ್ಗುರುತು:
ರವಿಸಂಕ್ರಾಂತಸೌಭಾಗ್ಯಸ್ತುಷಾರಾವೃತಮಂಡಲಃ |
ನಿಶ್ಶ್ವಾಸಾಂಧ ಇವಾದರ್ಶಶ್ಚಂದ್ರಮಾ ನ ಪ್ರಕಾಶತೇ || (೩.೧೬.೧೩)
ಇದೇ ಸಂದರ್ಭದಲ್ಲಿ ಬೆಳದಿಂಗಳು ಕೂಡ ಹಿಮದ ಕಾರಣ ಮಂಕಾಗಿರುವುದನ್ನು ಆದಿಕವಿಗಳು ವರ್ಣಿಸುತ್ತ ಮಾಗಿಯ ಬಿಸಿಲಿಗೆ ಬಣ್ಣ ಕಳೆದುಕೊಂಡ ಸೀತೆಯಂತೆ ಬೆಳದಿಂಗಳು ಬಿಳಿಚಿಕೊಂಡಿದೆಯೆಂದು ಹೇಳುವ ಪರಿಯಂತೂ ಅಸಾಧಾರಣ:
ಜ್ಯೋತ್ಸ್ನಾತುಷಾರಮಲಿನಾ ಪೌರ್ಣಮಾಸ್ಯಾಂ ನ ರಾಜತೇ |
ಸೀತೇವ ಚಾತಪಶ್ಯಾಮಾ ಲಕ್ಷ್ಯತೇ ನ ತು ಶೋಭತೇ || (೩.೧೬.೧೪)
ಇಲ್ಲಿ ರಾಮನು ವರ್ಣಿಸುವ ಹೇಮಂತದ ಹಿನ್ನೆಲೆಯಲ್ಲಿ ಸೀತೆಯ ಪ್ರಸ್ತಾವ ಅವನಿಂದಲೇ ಬಂದಿರುವುದು ರಸೋಚಿತವಾಗಿದೆ. ಮಾತ್ರವಲ್ಲ, ಆತನ ಲಘುಹಾಸ್ಯದ ಸ್ವಾರಸ್ಯವನ್ನೂ ಧ್ವನಿಸಿದೆ. ಜೊತೆಗೆ “ತುಷಾರಮಲಿನಾ” ಎಂಬ ವಿಶೇಷಣವು ತನ್ನ ಉಪಚಾರವಕ್ರತೆಯ ಕಾರಣ ಇಡಿಯ ಪದ್ಯವನ್ನು ಇನ್ನಷ್ಟು ಅಂದಗೊಳಿಸಿದೆ.
ಹೇಮಂತದ ಚಳಿಗೆ ಅಂಜಿದ ಜಲಪಕ್ಷಿಗಳು ಕೂಡ ನೀರಿಗಿಳಿಯಲು ಸಾಹಸಿಸುತ್ತಿಲ್ಲ. ಇದು ಕೈಲಾಗದವರು ಯುದ್ಧಕ್ಕೆ ಮುಂದಾಗದಂತಿದೆಯೆಂದು ರಾಮನ ಕಲ್ಪನೆ. ಇದರ ಸೌಂದರ್ಯವಂತೂ ನಿರುಪಮಾನ. ಸುಕ್ಷತ್ರಿಯನಾದ ರಾಮನಿಗಲ್ಲದೆ ಮತ್ತಾರಿಗೆ ತಾನೇ ವೀರರ ಹಾಗೂ ಹೇಡಿಗಳ ಪರಿಚಯ ಚೆನ್ನಾಗಿ ಇರಲು ಸಾಧ್ಯ?
ಏತೇ ಹಿ ಸಮುಪಾಸೀನಾ ವಿಹಗಾ ಜಲಚಾರಿಣಃ |
ನಾವಗಾಹಂತಿ ಸಲಿಲಮಪ್ರಗಲ್ಭಾ ಇವಾಹವಮ್ || (೩.೧೬.೨೨)
ಕಿವಿ-ಮೂಗುಗಳನ್ನು ಕಳೆದುಕೊಂಡ ಶೂರ್ಪಣಖೆಯು ಖರನ ಬಳಿ ಬಂದು ಅಲವತ್ತುಕೊಳ್ಳುವಾಗ ಅವಳ ರಕ್ತಸಿಕ್ತಮುಖವು ನಿರ್ಯಾಸದಿಂದ ಜುಗುಪ್ಸಾವಹವಾದ ಸಲ್ಲಕೀತರುವಿನಂತೆ ತೋರಿತೆಂಬ ಹೋಲಿಕೆಯಂತೂ ಆದಿಕವಿಗಳ ಪ್ರಕೃತಿಪರಿಶೀಲನಕ್ಕೆ ಸುಂದರನಿದರ್ಶನ. ಏಕೆಂದರೆ ಖರನ ಬಳಿ ಬರುವ ಹೊತ್ತಿಗಾಗಲೇ ಅವಳ ಮುಖದಲ್ಲಿ ಸುರಿಯುತ್ತಿದ್ದ ನೆತ್ತರು ಸ್ವಲ್ಪ ಹೆಪ್ಪುಗಟ್ಟಿ ಒಣಗಿತ್ತು. ಇದು ಸಲ್ಲಕಿಯ ನಿರ್ಯಾಸವನ್ನು ಹೋಲುತ್ತಿತ್ತು ಎಂಬಲ್ಲಿ ಹೊಂದಿಕೊಳ್ಳುವ ಸಮಾನಧರ್ಮವು ಕೇವಲ ಸೂಕ್ಷ್ಮನಿರೀಕ್ಷಣೆಗಷ್ಟೇ ದಕ್ಕಬಲ್ಲುದು:
ಉಪಗಮ್ಯ ಖರಂ ಸಾ ತು ಕಿಂಚಿತ್ಸಂಶುಷ್ಕಶೋಣಿತಾ |
ಪಪಾತ ಪುನರೇವಾರ್ತಾ ಸನಿರ್ಯಾಸೇವ ಸಲ್ಲಕೀ | (೩.೨೦.೨೪,೨೫)
ಇದೇ ಶೂರ್ಪಣಖೆಯು ರಾವಣನ ಬಳಿ ಸಾರಿ ಆತನನ್ನು ರಾಮನ ವಿರುದ್ಧ ಎತ್ತಿಕಟ್ಟುವಾಗ ತೋರುವ ತಂತ್ರಗಾರಿಕೆಯು ಆಕೆಯ ರಾಜಧರ್ಮವ್ಯಾಖ್ಯಾನದ ಮಿಥ್ಯಾಗಾಂಭೀರ್ಯದ ನಡುವೆ ಮಿಂಚುವ ಹೋಲಿಕೆಗಳಲ್ಲಿ ಅತಿಶಯಿಸುತ್ತದೆ. ಅವಳ ಪ್ರಕಾರ ಅರ್ಥೈಕಪರಾಯಣನಾಗಿ ಮೈಮರೆತ ಪ್ರಭುವನ್ನು ಪ್ರಜೆಗಳು ಸುಡುಗಾಡಿನ ಬೆಂಕಿಯಂತೆ ತಿರಸ್ಕರಿಸುತ್ತಾರೆ; ಕೆಸರು ತುಂಬಿದ ಕೊಳವನ್ನು ಆನೆಗಳು ಉಪೇಕ್ಷಿಸುವಂತೆ ದೂರವಿಡುತ್ತಾರೆ. ಇಂಥ ದೊರೆಯು ಹಿರಿಮೆಯನ್ನು ಗಳಿಸಿದರೂ ಸಾಗರದಲ್ಲಿ ಮುಳುಗಿದ ಪರ್ವತದಂತೆ ಹೊರಗೆ ತೋರುವುದೇ ಇಲ್ಲ:
ಲುಬ್ಧಂ ನ ಬಹುಮಂನ್ಯಂತೇ ಶ್ಮಶಾನಾಗ್ನಿಮಿವ ಪ್ರಜಾಃ |
ವರ್ಜಯಂತಿ ನರಾ ದೂರಾನ್ನದೀಪಂಕಮಿವ ದ್ವಿಪಾಃ |
ತೇ ನ ವೃದ್ಧ್ಯಾ ಪ್ರಕಾಶಂತೇ ಗಿರಿಯಃ ಸಾಗರೇ ಯಥಾ | (೩.೩೩.೩,೫,೬)
ಇಂಥ ಬೆಲೆಬಾಳುವ ಮಾತುಗಳನ್ನು ಕೇವಲ ಸ್ವಾರ್ಥಪ್ರೇರಿತೆಯಾಗಿ ಶೂರ್ಪಣಖೆಯು ಸೊಲ್ಲಿಸುತ್ತಿದ್ದಾಳೆಂಬ ಹಿನ್ನೆಲೆಯಲ್ಲಂತೂ ಇವುಗಳ ವಿಪರೀತಾರ್ಥವು ಮತ್ತೂ ಸ್ವಾರಸ್ಯಕರ.
ರಾಮ-ಲಕ್ಷ್ಮಣರ ಅನುಪಸ್ಥಿತಿಯಲ್ಲಿ ರಾವಣನು ಸೀತೆಯನ್ನು ಸೆಳೆದೊಯ್ಯಲು ಕಪಟಸಂನ್ಯಾಸಿಯಾಗಿ ಬಂದ ಪರಿಯನ್ನು ಆದಿಕವಿಗಳು ವರ್ಣಿಸುತ್ತ ಸೂರ್ಯ-ಚಂದ್ರರಿಲ್ಲದಿರುವಾಗ ಸಂಧ್ಯೆಯನ್ನು ನುಂಗಿ ನೊಣೆಯಲು ಬಂದ ಕತ್ತಲಿನಂತಿದ್ದನೆಂದು ಹೇಳುತ್ತಾರೆ:
ರಹಿತಾಂ ಚಂದ್ರಸೂರ್ಯಾಭ್ಯಾಂ ಸಂಧ್ಯಾಮಿವ ಮಹತ್ತಮಃ |
ತಾಮಪಶ್ಯತ್ತತೋ ಬಾಲಾಂ ರಾಮಪತ್ನೀಂ ಯಶಸ್ವಿನೀಮ್ || (೩.೪೬.೫)
ಇಲ್ಲಿಯ ಔಚಿತ್ಯ, ಸಾಮರ್ಥ್ಯ, ಸೌಂದರ್ಯಗಳೆಲ್ಲ ಪರಿಪೂರ್ಣತೆಯ ಪದವನ್ನು ಮುಟ್ಟಿವೆಯೆಂಬುದು ನಿಸ್ಸಂದೇಹ. ಈ ಅಡಕದಲ್ಲಿ ಇಂಥ ಸಮಗ್ರತೆಯನ್ನು ಚಿತ್ರಿಸುವುದು ಎಲ್ಲ ಕಾಲದ ಕವಿಗಳ ಹಂಬಲ, ಆದರ್ಶ. ಆದರೆ ಕೃತಪುಣ್ಯರಿಗಷ್ಟೇ ಇದು ಕರಗತ. ಈ ಹೋಲಿಕೆಯ ಸ್ವಾರಸ್ಯವೇ ಬಹುಶಃ ಕಾಳಿದಾಸನನ್ನು ತನ್ನ ರಘುವಂಶಕಾವ್ಯದ ಎರಡನೆಯ ಸರ್ಗದಲ್ಲಿ ದಿಲೀಪ-ಸುದಕ್ಷಿಣೆಯರ ನಡುವೆ ನಂದಿನೀಧೇನುವು ರಾಜಿಸಿದ ಪರಿಯು ಹಗಲಿರುಳುಗಳ ಮಧ್ಯೆ ಸಂಜೆಯಂತೆ ತೋರಿತೆಂದು ಬಣ್ಣಿಸುವಲ್ಲಿ ಪ್ರೇರಿಸಿದೆಯೆನ್ನಬೇಕು.
ರಾವಣನು ಸೀತೆಯನ್ನು ತುಡುಕಲು ಹೋದಾಗ ಅವನು ತೋರಿದ ಬಗೆಯನ್ನು ಆದಿಕವಿಗಳು ಹೀಗೆ ಹೇಳುತ್ತಾರೆ:
ಅಭ್ಯವರ್ತತ ವೈದೇಹೀಂ ಚಿತ್ರಾಮಿವ ಶನೈಶ್ಚರಃ |
ಸ ಪಾಪೋ ಭವ್ಯರೂಪೇಣ ತೃಣೈಃ ಕೂಪ ಇವಾವೃತಃ || (೩.೪೬.೧೦)
ಈ ಪ್ರಕಾರ ಆ ಪಾಪಿಯು ಶನಿಗ್ರಹವು ಚಿತ್ರಾನಕ್ಷತ್ರದತ್ತ ದಾಪಿಡುವಂತೆ ಸಾಗಿದ. ಹುಲ್ಲುಮುಚ್ಚಿದ ಹಾಳುಬಾವಿಯಂತೆ ತೋರುವ ಆ ಧೂರ್ತನು ಸಂನ್ಯಾಸಿಯ ವೇಷವನ್ನು ತಳೆದದ್ದೊಂದು ವಿಡಂಬನೆಯಾಗಿತ್ತು. ಇಲ್ಲಿಯ ಹೋಲಿಕೆ ಹೃದಯಂಗಮ. ಚೈತ್ರಮಾಸದಲ್ಲಿ ಚಂದ್ರನೊಡನೆ ಸೇರಿ ಪೂರ್ಣಮೆಯ ತುಂಬುತನವನ್ನು ಕಾಣಲಿರುವ ಚಿತ್ರಾನಕ್ಷತ್ರಕ್ಕೆ ಪಾಪಗ್ರಹವಾದ ಶನೈಶ್ಚರನ ಛಾಯೆ ಬರುವುದು ನಿಜಕ್ಕೂ ಖಗೋಲಶಾಸ್ತ್ರದ ವಿಪರ್ಯಾಸ. ಇಂಥ ವೈಜ್ಞಾನಿಕಸ್ವಾರಸ್ಯದ ಉಪಮೆ ಆದಿಕವಿಗಳ ಬತ್ತಳಿಕೆಯಲ್ಲಿ ಹಲವೊಮ್ಮೆ ತೋರುತ್ತದೆ. ಇದೇ ಶ್ಲೋಕದ ಮತ್ತೊಂದು ಹೋಲಿಕೆ “ತೃಣೈಃ ಕೂಪ ಇವಾವೃತಃ” ತನ್ನ ಸ್ವಾರಸ್ಯದ ಕಾರಣ ಕಾಳಿದಾಸನನ್ನೂ ಮರುಳುಮಾಡಿದೆ. ಇಲ್ಲವಾದಲ್ಲಿ ಅವನ ಅನರ್ಘರೂಪಕ ಶಾಕುಂತಲದ ಪಂಚಮಾಂಕದಲ್ಲಿ ದುಷ್ಯಂತನನ್ನು ದೂಷಿಸಲು ಶಕುಂತಲೆಯ ಬಾಯಲ್ಲಿ ಇದೇ ಮಾತುಗಳನ್ನೇಕೆ ತರುತ್ತಿದ್ದ? ರಾಮಾಯಣದ ಭುವನೋಪಜೀವ್ಯಮಹತ್ತ್ವವನ್ನು ಕುರಿತಾದ “ಪರಂ ಕವೀನಾಮಾಧಾರಮ್” ಎಂಬ ಬ್ರಹ್ಮನ ಶಾಸನವನ್ನು ಎಲ್ಲರೂ ಶಿರೋಧಾರ್ಯವಾಗಿ ಪಾಲಿಸುವವರೇ ಸರಿ!
ಇದೇ ಸಂದರ್ಭದಲ್ಲಿ ರಾವಣನು ತನ್ನ ಮನಸ್ಸನ್ನು ಸೀತೆಯು ಸೆಳೆದ ಪರಿ ನದಿಯು ದಡವನ್ನು ಕೊಚ್ಚಿಹಾಕುವಂತಿದೆಯೆಂದು ಹೇಳುವುದಂತೂ ಬಹುಮಾರ್ಮಿಕ. ಇಲ್ಲಿ ಪ್ರವಾಹಪುಷ್ಟನದಿಯ ವೇಗಕ್ಕೆ ಕುಸಿದುಬೀಳುವ ದಡವು ತಾನೇ ಹಾಳಾಗುವುದಲ್ಲದೆ ನದಿಗೆ ಯಾವುದೇ ಕುಂದಿಲ್ಲವೆಂಬ ಧ್ವನಿ ಅನ್ಯಾದೃಶವಾಗಿದೆ. ಜೊತೆಗೆ ದಡವನ್ನು ಆಶ್ರಯಿಸಿದ ವಿಸ್ತಾರವಾದ ವನಪ್ರಪಂಚವೂ ಪ್ರವಾಹದಲ್ಲಿ ಕೊಚ್ಚಿಹೋಗುವ ಚಿತ್ರವನ್ನು ನೆನೆದಾಗ ರಾವಣನೊಬ್ಬನ ಅವಿವೇಕದಿಂದ ಇಡಿಯ ಲಂಕೆಯೇ ಬೆಂಕಿಗೆ ಬಿದ್ದು ಮಸಣವಾದ ವಿಪರ್ಯಾಸವು ಕೂಡ ಅನುರಣಿಸದಿರದು. ಮಹಾಕವಿಯ ಮಾತು ಹೀಗೆ ಬಹ್ವರ್ಥಗ್ರಾಸಿ:
ಮನೋ ಹರಸಿ ಮೇ ಕಾಂತೇ ನದೀಕೂಲಮಿವಾಂಭಸಾ | (೩.೪೬.೨೧)
ಹೀಗಿದ್ದೂ ರಾವಣನು ಸೀತೆಯನ್ನು ಕದ್ದೊಯ್ದು ಲಂಕೆಯಲ್ಲಿರಿಸಿ, ಅಲ್ಲಿಯ ರಾಕ್ಷಸಿಯರಿಗೆ ನಯ-ಭಯಗಳಿಂದಾದರೂ ಹೆಣ್ಣಾನೆಯನ್ನು ಪಳಗಿಸುವಂತೆ ಇವಳನ್ನು ತನಗೊಲಿಯುವಂತೆ ಮಾಡಿರೆಂದು ಆದೇಶವನ್ನೀಯುವ ಬಗೆ ವಿಭಾವನೀಯ:
ಆನಯಧ್ವಂ ವಶಂ ಸರ್ವಾ ವನ್ಯಾಂ ಗಜವಧೂಮಿವ | (೩.೫೬.೩೧)
ಈ ಹೋಲಿಕೆಯ ಸಾರ್ಥಕ್ಯ ಸ್ಪೃಹಣೀಯ. ಮದಿಸಿದ ಕಾಡಾನೆಯನ್ನು ಪಳಗಿಸುವ ಕಷ್ಟ ಮತ್ತು ಅಂಥ ಮತಂಗಜವು ಸೈನ್ಯಕ್ಕೆ ಅದೆಷ್ಟು ಅನಿವಾರ್ಯವೆಂಬ ತಥ್ಯ ರಾವಣನಂಥ ಸಂಗ್ರಾಮಕೋವಿದನಲ್ಲದೆ ಮತ್ತಾರು ತಾನೇ ತಿಳಿದಾರು? ಅಲ್ಲದೆ, ಅದೊಂದು ಹಂತದ ಬಳಿಕ ವನ್ಯಗಜಗಳನ್ನು ಪಳಗಿಸುವಂಥ ಅಪಾಯಕಾರಿಕ್ರೀಡೆಯೇ ಅಧಿಕಾರಸ್ಥರಿಗೆ ಬಲುಮಟ್ಟಿಗೆ ಮಾದಕವಾದ ಚಟವೂ ಆದೀತೆಂಬ ಧ್ವನಿಯೂ ಇಲ್ಲಿದೆ.
ಆದಿಕವಿಗಳ ಅನ್ನರಸಪ್ರೀತಿ ಅನ್ಯಾದೃಶ. ಮಿತಾಹಾರಿಗಳಾದ ತಪಸ್ವಿಗಳೇ ಅವರಾದರೂ ತಮ್ಮ ಪಾತ್ರಗಳ ಜಿಹ್ವಾಚಾಪಲ್ಯವನ್ನು ಚೆನ್ನಾಗಿ ಗಮನಸಿಕೊಂಡವರವರು. ಹಾಗಲ್ಲದೆ ಕವಿಗಳಾಗಲು ಸಾಧ್ಯವೇ? ಶಾಪವಿಮುಕ್ತನಾದ ಕಬಂಧನು ರಾಮ-ಲಕ್ಷ್ಮಣರಿಗೆ ಪಂಪಾಸರಸ್ಸಿನ ಹಾದಿಯನ್ನು ಹೇಳುವಾಗ ಅಲ್ಲಿಯ ಕೊಕ್ಕರೆಗಳ ರುಚಿಯನ್ನು ಮರೆಯುವುದಿಲ್ಲ! ಅವು ಹೆಪ್ಪುಗಟ್ಟಿದ ತುಪ್ಪದ ಗಡ್ಡೆಗಳಂತೆ ತೋರುತ್ತವೆಂದು ಬಾಯಲ್ಲಿ ನೀರೂರುವಂತೆ ಬಣ್ಣಿಸುತ್ತಾನೆ:
ಘೃತಪಿಂಡೋಪಮಾನ್ ಸ್ಥೂಲಾಂಸ್ತಾನ್ದ್ವಿಜಾನ್ ಭಕ್ಷಯಿಷ್ಯಥಃ | (೩.೭೩.೧೪)
ಕಿಷ್ಕಿಂಧಾಕಾಂಡವಂತೂ ಉಕ್ತಿಕಲ್ಪನೆಯ ತವನಿಧಿ. ಇಲ್ಲಿ ಬರುವ ಮೂರು ಋತುಗಳ ಬಣ್ಣನೆಯಲ್ಲಿ ಅಲಂಕಾರನಿಧಿಯೆಲ್ಲ ಸೂರೆಯಾಗಿದೆ. ಇವುಗಳಿಂದ ಆಯ್ದ ಕೆಲವು ಸೌಂದರ್ಯಶಕಲಗಳನ್ನು ಪರಿಭಾವಿಸೋಣ.
ಪಂಪಾಸರಸ್ಸಿನ ಕಮಲಗಳು ನೀರಿನಲ್ಲಿ ಬಾಲಸೂರ್ಯರಂತೆ ಬೆಳಗುತ್ತಿವೆಯೆಂದು ರಾಮನು ಹೇಳುತ್ತಾನೆ:
ನಲಿನಾನಿ ಪ್ರಕಾಶಂತಿ ಜಲೇ ತರುಣಸೂರ್ಯವತ್ | (೪.೧.೫೯)
ಅಲ್ಲಿ ಬೀಸಿಬರುವ ಗಾಳಿಯೂ ಸೀತೆಯ ನಿಟ್ಟುಸಿರಿನಂತೆ ಹೃದಯಂಗಮವಾಗಿತ್ತು:
ನಿಶ್ಶ್ವಾಸ ಇವ ಸೀತಾಯಾ ವಾತಿ ವಾಯುರ್ಮನೋಹರಃ | (೪.೧.೭೨)
ವಾಲಿಯೊಡನೆ ಸೆಣಸುವಾಗ ಪ್ರತ್ಯಭಿಜ್ಞೆಗಾಗಿ ಸುಗ್ರೀವನ ಕೊರಳಿಗೆ ರಾಮನು ಗಜಪುಷ್ಪೀಮಾಲೆಯನ್ನು ಹಾಕಿಸುವನಷ್ಟೆ. ಆಗ ಅವನು ಸಂಧ್ಯಾಕಾಂತಿಯಲ್ಲಿ ಕಂಗೊಳಿಸುವ ಕಾರ್ಮೋಡದ ಮೇಲೆ ಬೆಳ್ಹಕ್ಕಿಗಳು ಹಾರಿದ ಹಾಗೆ ತೋರುತ್ತಿದ್ದನೆಂದು ಆದಿಕವಿಗಳು ಬಣ್ಣಿಸಿರುವುದಂತೂ ಅಸಮಾನವಾದ ಪ್ರಕೃತಿನಿರೀಕ್ಷಣೆ:
ಸ ತಯಾ ಶುಶುಭೇ ಶ್ರೀಮಾನ್ ಲತಯಾ ಕಂಠಸಕ್ತಯಾ |
ಮಾಲಯೇವ ಬಲಾಕಾನಾಂ ಸಸಂಧ್ಯ ಇವ ತೋಯದಃ || (೪.೧೨.೪೧)
ಇಲ್ಲಿ ಬಿಳುಪಾದ ಗಜಪುಷ್ಪೀಮಾಲೆಯ ಹೂಗಳು ಬೆಳ್ಹಕ್ಕಿಗಳ ಸಾಲಿಗೂ ಸುಗ್ರೀವನ ಎಣ್ಣೆಗೆಂಪುಬಣ್ಣವು ಸಂಜೆಗೆಂಪಿನಲ್ಲಿ ಸೊಗಯಿಸುವ ಮೋಡದ ಕಾಂತಿಗೂ ಸಮೀಕೃತವಾಗಿರುವುದು ಮನೋಹರವಾದ ಧರ್ಮೈಕ್ಯಪ್ರಕಾರದ ಉಪಮೆಯೆನ್ನಬೇಕು.
ಹೀಗೆ ಮಾಲಾಧಾರಿಯಾದ ಸೂರ್ಯಪುತ್ರನು ಕಂಡ ಬಗೆಯನ್ನು ಮಹರ್ಷಿಗಳು ಮತ್ತೂ ವಿನೂತನವಾಗಿ ಬಣ್ಣಿಸುತ್ತಾರೆ:
ವಿಪರೀತ ಇವಾಕಾಶೇ ಸೂರ್ಯೋ ನಕ್ಷತ್ರಮಾಲಯಾ | (೪.೧೪.೧೦)
ಬೆಳ್ಳಗಿನ ಹೂಗಳ ಮಾಲೆಯನ್ನು ತೊಟ್ಟ ಸುಗ್ರೀವನು ತಾರೆಗಳ ಹಾರದಿಂದ ಕಂಗೊಳಿಸಿದ ಸೂರ್ಯನಂತೆ ಕಂಡನೆಂಬ ಈ ಅಲಂಕಾರವು ಉಪಮೆಯೇ ಉತ್ಪ್ರೇಕ್ಷೆಯೇ ಎಂದು ಆಲಂಕಾರಿಕರೂ ವ್ಯಾಖ್ಯಾನಕಾರರೂ ಮಿಗಿಲಾಗಿ ತಲೆಕೆಡಸಿಕೊಂಡಿದ್ದಾರೆ. ಕಾರಣವಿಷ್ಟೇ: ಉಪಮೆಯು ಇರುವುದನ್ನು ಇದ್ದ ಮತ್ತೊಂದರೊಡನೆ ಹೋಲಿಸುವುದರಲ್ಲಿದೆ. ಅಂದರೆ, ಅದು ವರ್ತಮಾನಸಂಗತಿಗಳ ಸಾದೃಶ್ಯವನ್ನಷ್ಟೇ ತೋರುವ ಉಕ್ತಿವೈಚಿತ್ರ್ಯ. ಉತ್ಪ್ರೇಕ್ಷೆಯಾದರೋ ಇರದಿರಬಹುದಾದುದನ್ನು ಅಥವಾ ಇರಲೂ ಸಾಧ್ಯವೆಂದು ಒಪ್ಪಬಹುದಾದುದನ್ನು ಸಾದೃಶ್ಯದಿಂದ ಬೆಸೆಯುವ ನುಡಿಬೆಡಗು. ಈ ಪದ್ಯವಾದರೋ ಇವೆರಡು ಪ್ರಕಾರಗಳಿಗಿಂತಲೂ ಸ್ವಲ್ಪ ವಿಭಿನ್ನವೆಂದು ವಿಜ್ಞರ ಮತ. ದಿಟವೇ, ವಿಜ್ಞಾನವನ್ನು ಬಲ್ಲವರಿಗೆ ಸೂರ್ಯನ ಉದಯಾಸ್ತನಿರಪೇಕ್ಷವಾಗಿ ತಾರೆಗಳು ಸುತ್ತುವರಿದಿರುತ್ತವೆಂದೂ ಸ್ವಯಂ ಸೂರ್ಯನೇ ಒಂದು ತಾರೆಯೆಂದೂ ತಿಳಿದಿರುತ್ತದೆ. ಆದರೆ ಏನು ಮಾಡುವುದು, ಈ ವಾಸ್ತವಜ್ಞಾನವೂ ಸದ್ಯದ ಸೌಂದರ್ಯಮೀಮಾಂಸೆಗೆ ಯಾವುದೇ ರೀತಿಯಲ್ಲಿ ನೆರವಾಗದು! ಆದುದರಿಂದ ವಿದ್ವಾಂಸರು ಕಡೆಗೆ ಇದಕ್ಕಾಗಿಯೇ ಒಂದು ಹೊಸತಾದ ಉಪಮಾಪ್ರಕಾರವನ್ನೇ ಸೃಷ್ಟಿಸಿದ್ದಾರೆ. ಆ ಪ್ರಕಾರ ಇದು “ಅಭೂತೋಪಮೆ” ಅಥವಾ “ಕಲ್ಪಿತೋಪಮೆ”. ಒಂದು ವೇಳೆ ಸೂರ್ಯನ ಪ್ರಭೆಯಿಂದ ಇದೀಗ ಮರೆಯಾದ ತಾರೆಗಳು ತೋರಿಕೊಳ್ಳುವಂತಾಗಿದ್ದಲ್ಲಿ ಆ ದೃಶ್ಯವು ಹೇಗಿರುತ್ತಿತ್ತೋ ಹಾಗೆ ಹಾರವನ್ನು ಧರಿಸಿದ ಸುಗ್ರೀವನು ತೋರಿದನೆಂದು ತಾತ್ಪರ್ಯವನ್ನಿಟ್ಟುಕೊಳ್ಳಬೇಕು. ಈ ಹೆಸರಾದರೂ ನಿರ್ದುಷ್ಟವೆಂದು ಹೇಳುವಂತಿಲ್ಲ. ಸಕಲಾಂಲಂಕಾರಗಳೂ ಕಲ್ಪಿತವಷ್ಟೆ. ಏನೇ ಆದರೂ ಇಂಥ ಚೆಲುವನ್ನು ಸಾಕ್ಷಾತ್ಕರಿಸಿದ ಆದಿಕವಿಯ ಪ್ರತಿಭೆ ಮಾತ್ರ ಅಭಿನಂದನೀಯ, ಅಭಿವಂದನೀಯ. ಮಹಾಕವಿಯ ರಸಸೃಷ್ಟಿಯು “ನಿಯತಿಕೃತನಿಯಮರಹಿತ”ವಷ್ಟೇ ಅಲ್ಲ, ಶುಷ್ಕಶಾಸ್ತ್ರಕಾರರ ಮನೋಬುದ್ಧಿಗಳಿಗೂ ಅತೀತವೆಂದು ಇದೊಂದು ಸಂದರ್ಭದ ಮೂಲಕವೇ ಸಿದ್ಧವಾಗದಿರದು.
ರಾಮನ ಶರಾಘಾತಕ್ಕೆ ತುತ್ತಾಗಿ ಭೂಮಿಗೆ ಬಿದ್ದ ವಾಲಿಯನ್ನು ಆದಿಕವಿಗಳು ಅಭಿಜಾತಯುಗದ ಪರ್ವಗಳಿಗೆ ಸಂಬಂಧಿಸಿದ ಒಂದೇ ಹೋಲಿಕೆಯಿಂದ ಚಿತ್ರಿಸಿ ಮನಮುಟ್ಟಿಸುತ್ತಾರೆ:
ಇಂದ್ರಧ್ವಜ ಇವೋದ್ಧೂತಃ ಪೌರ್ಣಿಮಾಸ್ಯಾಂ ಮಹೀತಲೇ |
ಆಶ್ವಯುಕ್ ಸಮಯೇ ಮಾಸಿ ಗತಶ್ರೀಕೋ ವಿಚೇತನಃ || (೪.೧೬.೩೭)
ಪ್ರಾಚೀನಭಾರದಲ್ಲಿ ಮಳೆಗಾಲವು ಮುಗಿದ ಬಳಿಕ, ಒಳ್ಳೆಯ ಮಳೆಯನ್ನು ಅನುಗ್ರಹಿಸಿದ ಕಾರಣ ಇಂದ್ರನಿಗೆ ಕೃತಜ್ಞತೆಯನ್ನು ಸಲ್ಲಿಸುವ ರೂಪದಲ್ಲಿ “ಇಂದ್ರಧ್ವಜೋತ್ಸವ”ವೆಂಬ ಹಬ್ಬವು ಶರತ್ಕಾಲವಿಡೀ ಸಂಭ್ರಮೋತ್ಸಾಹಗಳಿಂದ ಸಾಗುತ್ತಿತ್ತು. ಇದೇ ಈ ಹೊತ್ತಿನ ನವರಾತ್ರ-ದೀಪಾವಳಿಗಳ ಪೂರ್ವರೂಪ. ಆಗ ಇಂದ್ರನ ಗೌರವಾರ್ಥ ಧ್ವಜಸ್ತಂಭವೊಂದನ್ನು ನೆಟ್ಟು, ಅದನ್ನು ಅಲಂಕರಿಸಿ, ಪೂಜಿಸಿ ಸಮಗ್ರಸಮಾಜವು ನಲಿದಾಡುತ್ತಿತ್ತು. ಅನಂತರ ಹುಣ್ಣಿಮೆಯ ಹೊತ್ತಿಗೆ ಈ ಧ್ವಜವನ್ನು ಇಳಿಸಿ, ಧ್ವಜಸ್ತಂಭವನ್ನು ವಿಧ್ಯುಕ್ತವಾಗಿ ನೆಲಕ್ಕೊರಗಿಸುತ್ತಿದ್ದರು. ಹೀಗೆ ಸಮುನ್ನತವಾದ ಪತಾಕಾಸ್ತಂಭವು ಹಲವು ಕಾಲ ಮಲೆತು ನಿಂತು ಮಾನ್ಯತೆಯನ್ನು ಗಳಿಸಿ ಅನಂತರ ನೆಲಕ್ಕೊರಗುವ ಚಿತ್ರಣವನ್ನು ಕಂಡವರಿಗೆ ಮಹಾವೀರನಾದ ವಾಲಿಯ ಪತನವು ಅದೆಂಥ ಅನುರೂಪಸಾದೃಶ್ಯವೆಂದು ತೋರುವಲ್ಲಿ ಸಂದೇಹವಿಲ್ಲ. ಆದಿಕವಿಗಳು ಇಂಥ ಇಂದ್ರಧ್ವಜಪತನಚಿತ್ರವನ್ನು ತಮ್ಮ ಕಾವ್ಯದಲ್ಲಿ ಹಲವೆಡೆ ಬಳಸಿಕೊಂಡಿದ್ದಾರೆ. ಇದು ಅವರದೇ ಸ್ವೋಪಜ್ಞಸಾಕ್ಷಾತ್ಕಾರವಾದ ಕಾರಣ ಪುನರಾವೃತ್ತಿ ಸಹಜ. ಅಲ್ಲದೆ ಇದು ತಾಳುವಂಥದ್ದೂ ಹೌದು. ಇಂಥ ಪ್ರವೃತ್ತಿಯನ್ನು ಕವಿಲೋಕಸಾಮಾನ್ಯದಲ್ಲಿ ಸಮೃದ್ಧವಾಗಿ ಕಾಣಬಹುದು. ಪರವರ್ತಿಗಳಾದ ಕವಿಗಳೆಲ್ಲ ಈ ಹೋಲಿಕೆಯನ್ನು ಯಥೋಚಿತವಾಗಿ ಅಳವಡಿಸಿಕೊಂಡಿದ್ದಾರೆ.
ವಾಲಿಯು ರಾಮನನ್ನು ನಿಂದಿಸುವಾಗ ಆತನು ಹುಲ್ಲುಮುಚ್ಚಿದ ಹಾಳುಬಾವಿಯಂತೆ, ಗುಟ್ಟಾಗಿ ಉರಿಯುವ ಬೆಂಕಿಯಂತೆ, ಸಾಧುಗಳ ವೇಷವನ್ನು ಧರಿಸಿದ ಪಾಪಿಷ್ಠನಂತೆ ಅನಾಚಾರಿಯೆಂದು ಹೇಳುವುದಂತೂ ತುಂಬ ತೀಕ್ಷ್ಣವಾದ ಹೋಲಿಕೆಗಳ ಸಾಲು:
ಜಾನೇ ಪಾಪಸಮಾಚಾರಂ ತೃಣೈಃ ಕೂಪಮಿವಾವೃತಮ್ |
ಸತಾಂ ವೇಷಧರಂ ಪಾಪಂ ಪ್ರಚ್ಛನ್ನಮಿವ ಪಾವಕಮ್ || (೪.೧೭.೨೧)
ಈ ಶ್ಲೋಕದ “ಪ್ರಚ್ಛನ್ನಮಿವ ಪಾವಕಂ” ಎಂಬ ಸೊಲ್ಲು ತುಂಬ ಮಾರ್ಮಿಕ. ಅಗ್ನಿಪ್ರಮಾದಗಳ ಬಗೆಯನ್ನು ಬಲ್ಲವರಿಗೆ ಇದರ ಪರಿಣಾಮರಮಣೀಯತೆ ಸುವೇದ್ಯ. ಗುಟ್ಟಾಗಿ ಹೊತ್ತಿಕೊಂಡ ಬೆಂಕಿಯು ದಳ್ಳುರಿಯಾದ ಬಳಿಕವೇ ಅರಿವಿಗೆ ಬರುತ್ತದೆ. ಆದರೆ ಆ ಹೊತ್ತಿಗೆ ಪರಿಸ್ಥಿತಿ ಕೈಮೀರಿರುತ್ತದೆ. ಇದೇ ವಿಧಿವೈಕಟ್ಯ.
To be continued.