ಮರಣಾಸನ್ನನಾದ ವಾಲಿಯ ಪರಿಸ್ಥಿತಿಯನ್ನು ಮಹರ್ಷಿಗಳು ಮನಮುಟ್ಟುವಂತೆ ವರ್ಣಿಸುತ್ತ ಆತನು ಹೊಗರನ್ನು ಕಳೆದುಕೊಂಡ ಕಮಲಬಾಂಧವನಂತೆ, ನೀರೆಲ್ಲ ಸೋರಿಹೋದ ಬೆಳ್ಮೋಡದಂತೆ, ಆರಿಹೋಗುತ್ತಿರುವ ಅಗ್ನಿಯಂತೆ ತೋರುತ್ತಿದ್ದನೆಂದು ಚಿತ್ರಿಸುತ್ತಾರೆ. ಇಲ್ಲಿಯ ಒಂದೊಂದು ಉಪಮೆಗಳೂ ಸಹಜ, ಸಾರ್ಥಕ:
ತಂ ನಿಷ್ಪ್ರಭಮಿವಾದಿತ್ಯಂ ಮುಕ್ತತೋಯಮಿವಾಂಬುದಮ್ |
ಉಕ್ತವಾಕ್ಯಂ ಹರಿಶ್ರೇಷ್ಠಮುಪಶಾಂತಮಿವಾನಲಮ್ || (೪.೧೮.೨)
ಮುಮೂರ್ಷುವಾದ ವಾಲಿಯು ಮೊದಲಿಗೆ ಕಳೆಗುಂದಿದ್ದು ಕಾಂತಿಹೀನಸೂರ್ಯನ ಸದೃಶವಾದರೆ, ಆತನು ರಕ್ತವನ್ನೂ ಶಕ್ತಿಯನ್ನೂ ಬಸಿದುಕೊಂಡದ್ದು ನೀರಿಲ್ಲದ ಮುಗಿಲಿಗೆ ಸಲ್ಲುವ ಹೋಲಿಕೆ. ಇನ್ನು ಪ್ರಾಣಜ್ಯೋತಿಯ ನಿರ್ವಾಣವು ಆರಿಹೋಗುವ ಅಗ್ನಿಯಲ್ಲಿ ತನ್ನ ಸಾಮ್ಯವನ್ನು ಮಾರ್ಮಿಕವಾಗಿ ತೋರಿಸಿಕೊಂಡಿದೆ.
ಮಳೆಗಾಲವನ್ನು ಬಣ್ಣಿಸುತ್ತಾ, ಬೆಂದ ಬುವಿಯೊಡಲು ಮೊದಲ ಮಳೆಹನಿಗೆ ತನ್ನೊಳಗಿನ ಹಬೆಯನ್ನು ಹೊಮ್ಮುವ ಮೂಲಕ ತೋರುವ ಪ್ರತಿಕ್ರಿಯೆಗೆ ಸೀತೆಯ ಬೆಂದೊಡಲನ್ನು ಸಮೀಕರಿಸುವ ರಾಮನ ಸಂವೇದನಶೀಲತೆ ನಿರುಪಮಾನ. ಇದನ್ನು ಆದಿಕವಿಗಳು ಕವಿನಿಬದ್ಧಪ್ರೌಢೋಕ್ತಿಯಾಗಿಸಿರುವುದು ಅವರ ಕಾವ್ಯಕೌಶಲಕ್ಕೆ ಸಾಕ್ಷಿ:
ಸೀತೇವ ಶೋಕಸಂತಪ್ತಾ ಮಹೀ ಬಾಷ್ಪಂ ವಿಮುಂಚತಿ | (೪.೨೮.೭)
ಶರತ್ಕಾಲದ ವರ್ಣನೆಯಲ್ಲಿ ಮಹರ್ಷಿಗಳ ನುಡಿಬೆಡಗು ಮುಗಿಲುಮುಟ್ಟುತ್ತದೆ.
ಇಲ್ಲಿಯ ಕೆಲವೊಂದು ಉಪಮೆಗಳು ರೂಪಕದ ಬೆಂಬಲವನ್ನೂ ಗಳಿಸಿ ಮತ್ತಷ್ಟು ಪರಿಣಾಮಕಾರಿಯಾಗಿವೆ:
ದರ್ಶಯಂತಿ ಶರನ್ನದ್ಯಃ ಪುಲಿನಾನಿ ಶನೈಃ ಶನೈಃ |
ನವಸಂಗಮಸಂವ್ರೀಡಾ ಜಘನಾನೀವ ಯೋಷಿತಃ || (೪.೩೦.೨೫)
ವರ್ಷಾಕಾಲದಲ್ಲಿ ದಡವನ್ನು ಮೀರಿ ಉಕ್ಕಿಹರಿದ ನದಿಗಳು ಇದೀಗ ಶರತ್ಕಾಲದಲ್ಲಿ ವಿಪುಲವಾದ ಮಳಲದಿಣ್ಣೆಗಳ ದಡಗಳನ್ನು ಬಿಟ್ಟು ಮೆಲ್ಲಮೆಲ್ಲನೆ ಹರಿಯುತ್ತಿವೆ. ಇದು ಮೊದಲ ರಾತ್ರಿಯಲ್ಲಿ ಮಾನಿನಿಯರು ತಮ್ಮ ನಲ್ಲರಿಗೆ ಮೆಲ್ಲಮೆಲ್ಲನೆ ತಮ್ಮೊಡಲನ್ನು ತೆರೆದು ತೋರುವಂತೆ ಭಾಸವಾಗಿದೆ. ಇಂಥ ಉತ್ತಾನಶೃಂಗಾರದ ಸಭ್ಯಸೀಮೆಯನ್ನು ಚಿತ್ರಿಸಲು ಮಿಗಿಲಾದ ಔಚಿತ್ಯದ ಎದೆಗಾರಿಕೆ ಬೇಕು. ಅದು ಆದಿಕವಿಗಳದೇ ಸೊತ್ತು.
ರಾತ್ರಿಃ ಶಶಾಂಕೋದಿತಸೌಮ್ಯವಕ್ತ್ರಾ
ತಾರಾಗಣೋನ್ಮೀಲಿತಚಾರುನೇತ್ರಾ |
ಜ್ಯೋತ್ಸ್ನಾಂಶುಕಪ್ರಾವರಣಾ ವಿಭಾತಿ
ನಾರೀವ ಶುಕ್ಲಾಂಶುಕಸಂವೃತಾಂಗೀ || (೪.೩೦.೪೭)
ಇರುಳೆಂಬ ಚೆಲುವೆಯು ಚಂದ್ರಮುಖಿಯಾಗಿ, ನಕ್ಷತ್ರನೇತ್ರೆಯಾಗಿ, ಚಂದ್ರಾತಪವಸ್ತ್ರೆಯಾಗಿ ಮನವನ್ನು ಗೆಲ್ಲುತ್ತಿದ್ದಾಳೆಂಬ ಇಲ್ಲಿಯ ಚಿತ್ರಣವು ಸಾವಯವರೂಪಕವಾಗುವ ಹಂತದಲ್ಲಿ ಉಪಮೆಯಾದ ಒಂದು ವಾಗ್ವಿಲಾಸ. ಇಂಥ ಸಂಕೀರ್ಣಾಲಂಕಾರಗಳು ರಾಮಾಯಣದಲ್ಲಿ ಅಸಂಖ್ಯ.
ವಿಪಕ್ವಶಾಲಿಪ್ರಸವಾನಿ ಭುಕ್ತ್ವಾ
ಪ್ರಹರ್ಷಿತಾ ಸಾರಸಚಾರುಪಂಕ್ತಿಃ |
ನಭಃ ಸಮಾಕ್ರಾಮತಿ ಶೀಘ್ರವೇಗಾ
ವಾತಾವಧೂತಾ ಗ್ರಥಿತೇವ ಮಾಲಾ || (೪.೩೦.೪೭)
ಹಾಲುಕಾಳಿನ ಬತ್ತದ ತೆನೆಗಳನ್ನು ತಿಂದ ಕೊಕ್ಕರೆಗಳ ಸಾಲು ಉಲ್ಲಾಸದಿಂದ ವೇಗವಾಗಿ ಅಂಬರಕ್ಕೆ ನೆಗೆದಾಗ ಮಾಲೆಯೊಂದು ಗಾಳಿಯಲ್ಲಿ ತೇಲಿಬಂದಂತೆ ತೋರುವುದಂತೆ! ಇಲ್ಲಿಯ ಸರಸೋದಾರವಾದ ಉಪಮೆಯು ಸ್ವಭಾವೋಕ್ತಿಯ ಬೆಂಬಲವನ್ನು ಗಳಿಸಿ ಪರಿಪೂರ್ಣವಾದ ಶರಚ್ಚಿತ್ರವೊಂದನ್ನು ಕಲ್ಪಿಸಿರುವುದು ಪರಿಭಾವನೀಯ.
ಸುಪ್ತೈಕಹಂಸಂ ಕುಮುದೈರುಪೇತಂ
ಮಹಾಹ್ರದಸ್ಥಂ ಸಲಿಲಂ ವಿಭಾತಿ |
ಘನೈರ್ವಿಮುಕ್ತಂ ನಿಶಿ ಪೂರ್ಣಚಂದ್ರಂ
ತಾರಾಗಣಾಕೀರ್ಣಮಿವಾಂತರಿಕ್ಷಮ್ || (೪.೩೦.೪೯)
ಇದು ಶರತ್ಕಾಲದ ಒಂದು ಹೃದ್ಯಚಿತ್ರ. ನಿರ್ಮಲವಾದ ಸರೋವರದಲ್ಲಿ ಅರಳಿ ನಗುವ ಬೆಳ್ದಾವರೆಗಳ ನಡುವೆ ಹಂಸವೊಂದು ನೆಮ್ಮದಿಯಾಗಿ ನಿದ್ರಿಸಿದೆ. ಇದು ಮಳೆಮುಗಿಲುಗಳಿಲ್ಲದ ಬಾನಿನಲ್ಲಿ ತಾರೆಗಳ ನಡುವೆ ತೊಳಗುವ ತಿಂಗಳಿನಂತೆ ತೋರುತ್ತಿದೆ. ಇಲ್ಲಿಯ ನಿಸರ್ಗಚಿತ್ರಣದ ಅವ್ಯಾಜಮನೋಹರತೆ ಸರ್ವಹೃದಯಹಾರಿ.
ಮೀನೋಪಸಂದರ್ಶಿತಮೇಖಲಾನಾಂ
ನದೀವಧೂನಾಂ ಗತಯೋऽದ್ಯ ಮಂದಾಃ |
ಕಾಂತೋಪಭುಕ್ತಾಲಸಗಾಮಿನೀನಾಂ
ಪ್ರಭಾತಕಾಲೇಷ್ವಿವ ಕಾಮಿನೀನಾಮ್ || (೪.೩೦.೫೫)
ಶರತ್ಕಾಲದ್ದೇ ಮತ್ತೊಂದು ಚಿತ್ರವಿಲ್ಲಿದೆ. ಇದು ಉತ್ತಾನಶೃಂಗಾರಕಥಾನಕದ ಮಧುರೋಪಸಂಹಾರದಂತೆ ಕಾಣುತ್ತದೆ. ಶರದೃತುವಿನಲ್ಲಿ ತಿಳಿಯಾಗಿ, ದಡಗಳ ನಡುವೆ ಮೆಲ್ಲಮೆಲ್ಲನೆ ಹರಿಯುವ ನದಿಗಳು ತಮ್ಮಪಾತ್ರದೊಳಗೆ ಸುಳಿಯುವ ಮೀನುಗಳೂ ಕಾಣುವಷ್ಟು ಪಾರದರ್ಶಕವಾಗಿವೆ. ಅವುಗಳ ಲಲಿತಾಲಸಗತಿಯು ಇರುಳೆಲ್ಲ ರತಿಯಲ್ಲಿ ಮಿಂದೆದ್ದ ಸುಂದರಿಯರು ಮುಂಜಾನೆ ಮೆಲ್ಲಮೆಲ್ಲನೆ ಮೇಖಲೆಯ ಸೊಲ್ಲಿನೊಡನೆ ಸಾಗುತ್ತಿರುವಂತೆ ತೋರುತ್ತದೆ. ಮಹರ್ಷಿವರೇಣ್ಯರ ನಿತ್ಯಶಾಂತಸ್ವರೂಪವು ಮಾತ್ರ ಈ ಬಗೆಯ ಹೃದಯಂಗಮಶೃಂಗಾರವನ್ನು ಸಂನ್ಯಾಸಿಗಳೂ ಸಂತೋಷಪಡುವಂತೆ ರೂಪಿಸಬಲ್ಲುದು.
ಸಚಕ್ರವಾಕಾನಿ ಸಶೈವಲಾನಿ
ಕಾಶೈರ್ದುಕೂಲೈರಿವ ಸಂವೃತಾನಿ |
ಸಪತ್ರಲೇಖಾನಿ ಸರೋಚನಾನಿ
ವಧೂಮುಖಾನೀವ ನದೀಮುಖಾನಿ || (೪.೩೦.೫೬)
ಇದೂ ಶರದೃತುವಿನ ಮತ್ತೊಂದು ಮುಖ. ಇಲ್ಲಿರುವುದು ಸಮುದ್ರದತ್ತ ಸಾಗುವ ನದಿಗಳ ವರ್ಣನೆ. ಇವು ಮಳೆಗಾಲದ ನದಿಗಳಂತೆ ಕೊಬ್ಬಿ ಹರಿಯುವುದಿಲ್ಲ. ಆದುದರಿಂದ ಇವುಗಳ ಗತಿಯಲ್ಲಿ ಅಂಕೆ ಮೀರಿದ ಜಂಬಗಾರ್ತಿಯರ ಗಾಡಿಯಿಲ್ಲ. ಚಕ್ರವಾಕಪಕ್ಷಿಗಳನ್ನೊಳಗೊಂಡು, ಅಲ್ಲಲ್ಲಿ ದಟ್ಟಹಸುರಿನ ಜಲನೀಲಿಗಳನ್ನು ಸೆಳೆದುಕೊಂಡು, ಇರ್ಕೆಲದ ತೀರದಲ್ಲಿ ತೊನೆದಾಡುವ ನಸುಬಿಳಿಯ ನೊದೆಹುಲ್ಲಿನ ವಲಯವನ್ನು ಲಾಲಿಸುತ್ತ ಸಮುದ್ರವನ್ನು ಸೇರುವ ಈ ತರಂಗಿಣೀರಮಣಿಯರು ಚಕ್ರವಾಕಸದೃಶಸ್ತನೆಯರಾಗಿ, ಕಾಶಸಂಕಾಶದುಕೂಲೆಯರಾಗಿ, ಮಕರಿಕಾಪತ್ರಚಿತ್ರರಚನೆಯಿಂದೊಡಗೂಡಿ ನಾಚಿ ನಲಿಯುವ ನವವಧುಗಳು ತಮ್ಮ ವದನಕಮಲವನ್ನು ಪ್ರಿಯತಮರಿಗೆ ಒಪ್ಪಿಸುವಂತಿದೆ. ಇಲ್ಲಿಯ ಕಲ್ಪನೆ ಅದೆಷ್ಟು ಸುಕುಮಾರಮನೋಹರವೆಂಬುದು ವಿವರಣಾತೀತ. ಅಲ್ಲದೆ ಇಲ್ಲಿಯ ವಿಶೇಷಣಗಳು ಅದೆಂತು ಧ್ವನಿಸ್ಪೃಕ್ಕಾಗಿವೆಯೆಂಬುದೂ ಗಮನಾರ್ಹ.
ಸೀತಾನ್ವೇಷಣೆಗಾಗಿ ನಿಯುಕ್ತರಾದ ವಾನರವೀರರೆಲ್ಲ ರಾಮನ ಬಳಿ ಬಂದು ಕೈಮುಗಿದಾಗ ಅದು ಕಮಲಕೋರಕಗಳಿಂದ ಕಂಗೊಳಿಸುವ ಸರೋವರದ ನೋಟವನ್ನು ಕಟ್ಟಿಕೊಡುವಂತಿತ್ತೆಂದು ಆದಿಕವಿಗಳು ಕಲ್ಪಿಸುತ್ತಾರೆ:
ಕೃತಾಂಜಲೌ ಸ್ಥಿತೇ ತಸ್ಮಿನ್ ವಾನರಾಶ್ಚಾಭವಂಸ್ತದಾ |
ತಟಾಕಮಿವ ತದ್ದೃಷ್ಟ್ವಾ ರಾಮಃ ಕುಡ್ಮಲಪಂಕಜಮ್ || (೪.೩೮.೧೭)
ಈ ನಿಸರ್ಗರಮಣೀಯಚಿತ್ರವನ್ನು ಕಂಡು ಮನಸೋತ ಕಾಳಿದಾಸನು ಪ್ರಾಯಶಃ ಇದರ ಸ್ಫೂರ್ತಿಯಿಂದಲೇ ಕುಮಾರಸಂಭವಕಾವ್ಯದಲ್ಲಿ ಒಂದೆಡೆ ಸಾವಿರ ಕಂಗಳ ಇಂದ್ರನು ಬೃಹಸ್ಪತಿಯತ್ತ ನಿಟ್ಟಿಸಿದಾಗ ತಾವರೆಗಳಿಂದ ತುಂಬಿದ ಪುಷ್ಕರಿಣಿಯ ಮೇಲೆ ಮಂದಾನಿಲವೊಂದು ಬೀಸಿ ಹೂಗಳೆಲ್ಲ ಒತ್ತಟ್ಟಿಗೆ ಸಂದಂತ್ತಿತ್ತೆಂದು ವರ್ಣಿಸಿರಬಹುದು. ಎಲ್ಲರೂ ಆದಿಕವಿಗಳ ಕಾವ್ಯಾರ್ಥದ ಉಪಜೀವಿಗಳೇ. ಇದಕ್ಕೆ ಕವಿಕುಲಗುರುವೂ ಹೊರತಲ್ಲ. ದಿಟವೇ, ಇಲ್ಲಿ ಉಪಮಾನೋಪಮೇಯಗಳ ನಡುವೆ ವಚನೈಕ್ಯವಿಲ್ಲದಿದ್ದರೂ ಅದು ಕವಿಪ್ರತಿಭೆಯಲ್ಲಿ ಮುಚ್ಚಿಹೋಗಿದೆ.
ಹೀಗೆ ಅಣಿಗೊಂಡ ವಾನರವೃಂದವು ಎಲ್ಲೆಡೆಗೂ ಸೀತಾನ್ವೇಷಣತತ್ಪರತೆಯಿಂದ ಸುಳಿದಾಗ ಬುವಿಯೆಲ್ಲ ಮಿಡತೆಗಳಿಂದ ಮುಚ್ಚಿಹೋದಂತ್ತಿತ್ತೆಂದು ಆದಿಕವಿಗಳು ವರ್ಣಿಸುತ್ತಾರೆ. ಮಿಡತೆಗಳ ವ್ಯಾಪನಶೀಲತೆಯನ್ನು ಬಲ್ಲವರಿಗೆ ಈ ಉಪಮೆಯ ಔಚಿತ್ಯ ಮಿಗಿಲಾಗಿ ಮನಮುಟ್ಟದಿರದು:
ಶಲಭಾ ಇವ ಸಂಛಾದ್ಯ ಮೇದಿನೀಂ ಸಂಪ್ರತಸ್ಥಿರೇ | (೪.೪೫.೩)
ಸೀತೆಯನ್ನು ಸರ್ವತ್ರ ಅರಸಿ ನಿರಾಶರಾದ ಕಪಿಗಳು ಸಂಪಾತಿಯಲ್ಲಿ ತಮ್ಮ ವೈಫಲ್ಯವನ್ನು ಹೇಳಿಕೊಳ್ಳುವಾಗ ಈ ಪರಿಶ್ರಮವು ಇರುಳಿನಲ್ಲಿ ರವಿಕಾಂತಿಯನ್ನು ಹುಡುಕಿದಂತಾಯಿತೆಂದು ಹಳಹಳಿಸಿಕೊಳ್ಳುತ್ತಾರೆ. ಈ ಕಲ್ಪನೆಯು ತನ್ನ ಸಹಜತೆಯ ಕಾರಣ ಮತ್ತೂ ಮನೋಗ್ರಾಹಿಯಾಗಿದೆ:
ವೈದೇಹೀಂ ನಾಧಿಗಚ್ಛಾಮೋ ರಾತ್ರೌ ಸೂರ್ಯಪ್ರಭಾಮಿವ | (೪.೫೭.೨೩)
ಹನೂಮಂತನ ಸಮುದ್ರೋಲ್ಲಂಘನಕಾಲದಲ್ಲಿ ಕಂಪಿಸಿದ ಮಹೇಂದ್ರಪರ್ವತದ ನೆಲೆಯಿಂದ ಭಯಭೀತರಾದ ಮುನಿಗಳೆಲ್ಲ ದೂರಕ್ಕೆ ತೆರಳಿದಾಗ ಆ ಗಿರಿಯು ಸಾರ್ಥವನ್ನು ಕಳೆದುಕೊಂಡು ಒಂಟಿಯಾದ ಹಾದಿಗನಂತೆ ಕಂಗೆಟ್ಟಿತೆಂದು ಆದಿಕವಿಗಳು ವರ್ಣಿಸುವ ಪರಿಯಂತೂ ಅಭಿನವಕಲ್ಪನೆ:
ಋಷಿಭಿಸ್ತ್ರಾಸಸಂಭ್ರಾಂತೈಸ್ತ್ಯಜ್ಯಮಾನಶಿಲೋಚ್ಚಯಃ |
ಸೀದನ್ಮಹತಿ ಕಾಂತಾರೇ ಸಾರ್ಥಹೀನ ಇವಾಧ್ವಗಃ || (೪.೬೭.೪೯)
ಇಲ್ಲಿ ವರ್ತಕರ ಗುಂಪಾದ ಸಾರ್ಥವು ತನ್ನ ನಾಯಕನಾದ ಸಾರ್ಥವಾಹನ ನೇತೃತ್ವದಲ್ಲಿ ತನ್ನೊಡನೆ ಅನೇಕಪಾಂಥರನ್ನೂ ಕೊಂಡೊಯ್ಯುತ್ತಿದ್ದ ಪ್ರಾಚೀನಭಾರತದ ಚಿತ್ರ ಕಣ್ಣಿಗೆ ಕಟ್ಟದಿರದು. ಇಂಥ ಹೋಲಿಕೆಗಳು ಅಭಿಜಾತಸಾಹಿತ್ಯದಲ್ಲಿಯೂ ವಿರಳ.
ಸುಂದರಕಾಂಡವು ಹೆಸರೇ ಸೂಚಿಸುವಂತೆ ಸುಂದರಸಂನಿವೇಶಗಳ ತವನಿಧಿ. ಇಲ್ಲಿಯ ಉಪಮೆಗಳು ಎಂದಿನಂತೆ ರಸಿಕರ ಹೃದಯವನ್ನು ಸೆಳೆಯದಿರವು. ಇವುಗಳ ಸೊಗಸನ್ನಿಷ್ಟು ನೋಡೋಣ.
ಬಾನಿಗೆ ನೆಗೆದ ವಾಯುಪುತ್ರನ ಬಾಲವು ಗರುಡನಿಂದ ಕೊಂಡೊಯ್ಯಲ್ಪಡುತ್ತಿರುವ ಮಹಾಸರ್ಪದಂತೆ ತೋರಿತೆಂಬ ಒಂದೇ ಹೋಲಿಕೆಯಿಂದ ಮಹರ್ಷಿಗಳು ಹನೂಮಂತನ ಲಂಘನಲೀಲೆಯನ್ನೂ ಆಕಾರವಿಶೇಷವನ್ನೂ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ:
ತಸ್ಯ ಲಾಂಗೂಲಮಾವಿದ್ಧಮಾತ್ತವೇಗಸ್ಯ ಪೃಷ್ಠತಃ |
ದದೃಶೇ ಗರುಡೇನೇವ ಹ್ರಿಯಮಾಣೋ ಮಹೋರಗಃ || (೫.೧.೩೪)
ಕಡಲನ್ನು ದಾಟಲು ಆಗಸಕ್ಕೆ ನೆಗೆದ ಹನುಮನನ್ನು—ಅವನ ಪ್ರಬಲವೇಗದ ಸೆಳೆತಕ್ಕೆ ಸಿಲ್ಕಿ ಕಿತ್ತುಬಂದ—ಮಹೇಂದ್ರಪರ್ವತದ ಗಿಡ-ಮರಗಳು ಸ್ವಲ್ಪದೂರ ಅವನನ್ನು ಹಿಂಬಾಲಿಸಿ ಹಾರಿದುವಷ್ಟೆ. ಅವುಗಳು ಪ್ರಿಯಬಂಧುವನ್ನು ಬೀಳ್ಗೊಡುವ ಬಾಂಧವರಂತೆ, ದೊರೆಯನ್ನು ಬೀಳ್ಗೊಡುವ ಸೇನೆಯಂತೆ ಕಂಡವೆಂದು ಆದಿಕವಿಗಳ ಕಲ್ಪನೆ:
ಪ್ರಸ್ಥಿತಂ ದೀರ್ಘಮಧ್ವಾನಂ ಸ್ವಬಂಧುಮಿವ ಬಾಂಧವಾಃ |
ಅನುಜಗ್ಮುರ್ಹನೂಮಂತಂ ಸೈನ್ಯಾ ಇವ ಮಹೀಪತಿಮ್ | (೫.೧.೪೭,೪೮)
ಹೀಗೆಯೇ ತನ್ನ ವೇಗದ ಕಾರಣ ಅಲ್ಲಿಯ ಬನದ ಸುಮರಾಜಿಯನ್ನೆಲ್ಲ ಮೈಗಂಟಿಸಿಕೊಂಡ ಪವನಸುತನು ಮಿಂಚುಹುಳಗಳಿಂದ ಕಂಗೊಳಿಸುವ ಮಲೆಯಂತೆ ತೋರಿದನೆಂದು ವರ್ಣಿಸುವಲ್ಲಿ ವಾಲ್ಮೀಕಿಮುನಿಗಳ ಪ್ರಕೃತಿಪರಿಶೀಲನೆ ಅತ್ಯದ್ಭುತವಾಗಿ ಕಂಡಿದೆ:
ಸ ನಾನಾಕುಸುಮೈಃ ಕೀರ್ಣಃ ಕಪಿಃ ಸಾಂಕುರಕೋರಕೈಃ |
ಶುಶುಭೇ ಮೇಘಸಂಕಾಶಃ ಖದ್ಯೋತೈರಿವ ಪರ್ವತಃ || (೫.೧.೫೧)
ಬೆಟ್ಟಕ್ಕೆಲ್ಲ ಮಿಂಚುಹುಳುಗಳು ಮುತ್ತಿಕೊಳ್ಳುವುದು ಮಳೆಗಾಲದ ಮಲೆಸೀಮೆಯ ಪರಿಚಯವಿದ್ದವರಿಗೂ ಪುಣ್ಯವಿದ್ದಲ್ಲಿ ಮಾತ್ರ ಕಾಣಬಲ್ಲ ನೇತ್ರನಿರ್ವಾಣದೃಶ್ಯ. ಇದನ್ನು ಕಂಡವರು, ನಮಗೂ ಕಾಣಿಸಬಲ್ಲವರು, ಆದಿಕವಿಗಳು.
ಹನೂಮಂತನಿಗೆ ಮುಸ್ಸಂಜೆಯ ಮಾದಕಸಮಯದಲ್ಲಿ ಕನಕಲಂಕೆಯು ಸೊಗಸಾಗಿ ಸಿಂಗರಗೊಂಡ ಸುಂದರಿಯಂತೆ ಕಂಡಿದಂತೆ: ಪ್ರಮದಾಂ ಭೂಷಿತಾಮಿವ (೫.೩.೧೮). ಅದೆಷ್ಟು ಅಡಕದಲ್ಲಿ ಮಹರ್ಷಿಗಳು ಈ ಚಿತ್ರವನ್ನಿತ್ತಿದ್ದಾರೆ! ಲಂಕೆಯು ಅದೆಷ್ಟೇ ಶ್ರೀಮಂತಿಕೆಯ ಚೆಲುವಿನಿಂದ ಕಂಗೊಳಿಸಿದರೂ ನೈಷ್ಠಿಕಬ್ರಹ್ಮಚಾರಿಯ ಕಣ್ಣಿಗೆ ಹೆಣ್ಣು ಮಣ್ಣೇ ತಾನೆ!
ರಾವಣಾಂತಃಪುರದಲ್ಲಿ ಮಲಗಿದ್ದ ಮದವತಿಯರು ತಮ್ಮ ಜಘನಪುಲಿನಗಳಿಂದ, ಕಿಂಕಿಣೀಕಮಲಮುಕುಲಗಳಿಂದ, ವದನಪದ್ಮಗಳಿಂದ, ಹಾವ-ಭಾವಗಳೆಂಬ ನಕ್ರ-ಮಕರಗಳಿಂದ, ಚೆಲುವಿನ ಬಲ್ಮೆಯ ತೀರಗಳಿಂದ ಮನಸೆಳೆಯುವ ನದಿಗಳಂತಿದ್ದರಂತೆ:
ಅಪಗಾ ಇವ ತೇ ರೇಜುರ್ಜಘನೈಃ ಪುಲಿನೈರಿವ |
ಕಿಂಕಿಣೀಜಾಲಸಂಕೋಶಾಸ್ತಾ ಹೇಮವಿಪುಲಾಂಬುಜಾಃ || (೫.೯.೫೧)
ಭಾವಗ್ರಾಹಾ ಯಶಸ್ತೀರಾಃ ಸುಪ್ತಾ ನದ್ಯ ಇವಾಬಭುಃ | (೫.೯.೫೨)
ಇಲ್ಲಿಯ ಉಪಮೆಯು ಸಾವಯವರೂಪಕದಿಂದ ಗಳಿಸಿದ ಪರಿಣಾಮರಮಣೀಯತೆ ಪರಿಭಾವನೀಯ.
ಅಂಜನಾತನಯನಿಗೆ ನಿದ್ರೆಯಲ್ಲಿದ್ದ ದಶಗ್ರೀವನು ಕಂಡ ಪರಿಯನ್ನು ಆದಿಕವಿಗಳು ಅನ್ಯಾದೃಶವಾಗಿ ಚಿತ್ರಿಸಿದ್ದಾರೆ:
ಮಾಷರಾಶಿಪ್ರತೀಕಾಶಂ ನಿಶ್ಶ್ವಸಂತಂ ಭುಜಂಗವತ್ |
ಗಾಂಗೇ ಮಹತಿ ತೋಯಾಂತೇ ಪ್ರಸುಪ್ತಮಿವ ಕುಂಜರಮ್ || (೫.೧೦.೨೮)
ರಾವಣನು ಉದ್ದಿನಕಾಳಿನ ರಾಶಿಯಂತೆ ಕಪ್ಪಗಿದ್ದನು, ಕಾಳಸರ್ಪದಂತೆ ಬುಸುಗುಟ್ಟುತ್ತಿದ್ದನು, ಗಂಗಾನದಿಯ ತೀರದಲ್ಲಿ ಮಲಗಿದ್ದ ಮದ್ದಾನೆಯಂತೆ ತೋರುತ್ತಿದ್ದನು. ಇಲ್ಲಿಯ ಮೂರು ಉಪಮೆಗಳು ಕ್ರಮವಾಗಿ ರಾವಣನ ಶ್ಯಾಮವರ್ಣದ ಬೃಹದ್ಗಾತ್ರವನ್ನೂ ನಿದ್ರೆಯಲ್ಲಿ ಕೂಡ ಭಯಂಕರವಾಗಿ ತೋರುತ್ತಿದ್ದ ಪರಿಯನ್ನೂ ಹಾಸಿಗೆಯಲ್ಲಿ ಮೈಚೆಲ್ಲಿ ಮಲಗಿದ ವಿಲಾಸವಿಸ್ತಾರವನ್ನೂ ಬಿಂಬಿಸಿರುವ ಪರಿ ಅದೆಷ್ಟು ಸಾರ್ಥಕವೆಂಬುದು ಸಹೃದಯಸಮಾಜಕ್ಕೆ ಸುವೇದ್ಯ. ಹೀಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ವರ್ಣ್ಯವಿಷಯವನ್ನು ಮನಮುಟ್ಟಿಸುವುದೇ ಅಲಂಕಾರಗಳ ಮೂಲೋದ್ದೇಶ. ಇದು ವಾಲ್ಮೀಕಿಗಳಿಗೆ ಜನ್ಮಜಾತವಿದ್ಯೆ.
ಸೀತಾನ್ವೇಷಣೆಯಲ್ಲಿ ವ್ಯಗ್ರನಾಗಿದ್ದ ಹನೂಮಂತನಿಗೆ ಶಿಶಿರಾಂತ್ಯದಲ್ಲಿ ಹೂ-ಚಿಗುರುಗಳಿಲ್ಲದ ಅಶೋಕವನವೃಕ್ಷಗಳು ಜೂಜಿನಲ್ಲಿ ಸರ್ವಸ್ವವನ್ನೂ ಕಳೆದುಕೊಂಡ ಜೂಜಾಳಿಗಳಂತೆ ಕಂಡುವಂತೆ:
ನಿರ್ಧೂತಪತ್ರಶಿಖರಾಃ ಶೀರ್ಣಪುಷ್ಪಫಲಾ ದ್ರುಮಾಃ |
ನಿಕ್ಷಿಪ್ತವಸ್ತ್ರಾಭರಣಾ ಧೂರ್ತಾ ಇವ ಪರಾಜಿತಾಃ || (೫.೧೪.೧೫)
ತಪೋವನದಲ್ಲಿ ನಿತ್ಯಾನುಷ್ಠಾನಮಗ್ನರಾಗಿ ಬಹಿಃಪ್ರಪಂಚವನ್ನೇ ಮರೆತ ಮುನಿಗಳಿಗೆ ಕಿತವಸಭೆಯ ವಿವರಗಳೆಲ್ಲ ಅದು ಹೇಗೆ ಕರಗತವಾದುವೋ ತಿಳಿಯದು! ಇಂತಲ್ಲದೆ ಕವಿತ್ವ ದಕ್ಕುವುದುಂಟೇ?
To be continued.