೯
ಅರ್ಥಾಲಂಕಾರಗಳು ವಾಕ್ಯವಿಶ್ರಾಂತವಾದರೆ ಶಬ್ದಾಲಂಕಾರಗಳು ಶಬ್ದವಿಶ್ರಾಂತ. ಅಂದರೆ, ಇವುಗಳಿಗೆ ಶಬ್ದರೂಪದಲ್ಲಿಯೇ ತಾತ್ಪರ್ಯ. ಅರ್ಥಾಲಂಕಾರಗಳು ಬುದ್ಧಿಗಮ್ಯವಾಗಿ ಭಾವವನ್ನು ಮೀಟಿದರೆ ಶಬ್ದಾಲಂಕಾರಗಳು ಶ್ರವಣಗಮ್ಯವಾಗಿ ಭಾವವನ್ನು ತಟ್ಟುತ್ತವೆ. ಈ ಕಾರಣದಿಂದಲೇ ಇವುಗಳಿಗೆ ಪರಿವೃತ್ತಿಸಹತ್ವವಿಲ್ಲ. ಅಂದರೆ ಕವಿತೆಯಲ್ಲಿ ಬಳಕೆಯಾದ ಶಬ್ದಗಳಿಗೆ ಪರ್ಯಾಯಪದಗಳನ್ನಿಟ್ಟರೆ ಶಬ್ದಾಲಂಕಾರವೇ ಮರೆಯಾಗುವ ಸಾಧ್ಯತೆಯುಂಟು. ಇವುಗಳ ನಿರ್ಮಾಣದಲ್ಲಿ ಕಲ್ಪನೆಗಿಂತ ವ್ಯುತ್ಪತ್ತಿಯ ಪ್ರಮಾಣ ಹೆಚ್ಚು. ವಿಶೇಷತಃ ಇವುಗಳು ಪದಮಾತ್ರವಿಶ್ರಾಂತವಾದ ಕಾರಣ ನಿಘಂಟುಮೂಲದ ವ್ಯುತ್ಪತ್ತಿಯೇ ಇಲ್ಲಿ ಮಿಗಿಲಾಗಿ ಬೇಕು. ಸಮುದ್ಗಯಮಕದಂಥ ವಾಕ್ಯವ್ಯಾಪಕವಾಗುವ ಶಬ್ದಾಲಂಕಾರಗಳಲ್ಲಿಯೂ ವಾಕ್ಯದ ಬಿಡಿಬಿಡಿಯಾದ ಘಟಕಗಳೆನಿಸಿದ ಶಬ್ದಗಳೇ ಮತ್ತೆ ಪ್ರಾಮುಖ್ಯ ವಹಿಸುವ ಕಾರಣ ಸುಬಂತ-ತಿಙಂತಾದಿಸಮಸ್ತಪದಪ್ರಕಾರಗಳಿಗೂ ಇಲ್ಲಿ ವರ್ಣಸಾಮ್ಯೈಕಲಕ್ಷ್ಯವಿರುವುದಲ್ಲದೆ ಇಡಿಯ ವಾಕ್ಯಾರ್ಥದಲ್ಲಲ್ಲ. ಈ ಕಾರಣದಿಂದಲೇ ಶ್ರೇಷ್ಠಮಟ್ಟದ ಕವಿಗಳೂ ಆಲಂಕಾರಿಕರೂ ಶಬ್ದಾಲಂಕಾರಗಳನ್ನು ಗೌಣವಾಗಿ ನೋಡುತ್ತಾರೆ. ಆದರೆ ಇವುಗಳಿಗೆ ತಮ್ಮದೇ ಆದ ಚೆಲುವಿದೆ, ಸಾರ್ಥಕ್ಯವಿದೆ. ಸಹಜಕವಿಯ ವಾಗ್ಧೋರಣೆಯಲ್ಲಿ ಸರಳಸುಭಗವಾದ ಅರ್ಥಾಲಂಕಾರಗಳ ಸಮೃದ್ಧಿಯು ಹೇಗೆ ತುಂಬಿಬರುವುದೋ ಹಾಗೆಯೇ ಸಹಜಸುಂದರವಾದ ಶಬ್ದಾಲಂಕಾರಗಳೂ ಸೇರಿಕೊಳ್ಳುತ್ತವೆ. ಉಪಮೆ, ರೂಪಕ, ಉತ್ಪ್ರೇಕ್ಷೆ, ಅತಿಶಯೋಕ್ತಿ ಮುಂತಾದ ಮೂಲಾಲಂಕಾರಗಳ ಹಾಗೆಯೇ ಅನುಪ್ರಾಸದ ಕೆಲವು ಪ್ರಾಥಮಿಕರೂಪಗಳಾದ ವೃತ್ತ್ಯನುಪ್ರಾಸ, ಲಾಟಾನುಪ್ರಾಸ, ಛೇಕಾನುಪ್ರಾಸಾದಿಗಳು ಶ್ರಮವಿಲ್ಲದೆ ಕವಿಯ ನಿರ್ಮಾಣದಲ್ಲಿ ಸಹಕರಿಸುತ್ತವೆ; ಸಹೃದಯರ ಪಾಲಿಗೆ ಸುಬೋಧವೂ ಆಗುತ್ತವೆ.
ಛಂದಸ್ಸೂ ತಾತ್ತ್ವಿಕವಾಗಿ ಶಬ್ದಾಲಂಕಾರವೇ. ಆದರೆ ಹೆಚ್ಚಿನ ಮಂದಿಗೆ ಈ ನಿಟ್ಟಿನ ಅರಿವಿರುವುದಿಲ್ಲ. ಹೀಗಾಗಿ ಬಗೆಬಗೆಯ ವೃತ್ತಗಳು ಮತ್ತವುಗಳಲ್ಲಿಯ ಗುರು-ಲಘುವಿನ್ಯಾಸವೈಚಿತ್ರ್ಯಗಳು ಕೂಡ ಶಬ್ದಾಲಂಕಾರಕ್ಕೆ ತಮ್ಮದಾದ ಗಣನೀಯವಾದ ಗುಣ-ಗಾತ್ರಗಳ ಪ್ರಾಭೃತವನ್ನೀಯುತ್ತವೆ. ಇದನ್ನು ಮರೆತಲ್ಲಿ ಪದ್ಯಕಾವ್ಯಕ್ಕೂ ಗದ್ಯಕಾವ್ಯಕ್ಕೂ ವ್ಯತ್ಯಾಸವೇ ಉಳಿಯಲಾರದು. ದಿಟವೇ, ಒಳ್ಳೆಯ ಗದ್ಯದಲ್ಲಿಯೂ ತನ್ನದೇ ಆದ ಗತಿಲಯವುಂಟು. ಆದರೆ ಅದು ಬಲುಮಟ್ಟಿಗೆ ಅನಿಬದ್ಧ. ಪದ್ಯದ ಸಂಗತಿ ಹೀಗಲ್ಲ. ಇಲ್ಲಿಯ ನಿಬದ್ಧತೆಯು ತಂದೀಯುವ ಛಂದೋಗತಿಸ್ವಾರಸ್ಯವು ಅದೆಷ್ಟೋ ಬಾರಿ ಅರ್ಥಾಲಂಕಾರಗಳಿಗಿಂತ ಮಿಗಿಲಾದ ಪರಿಣಾಮವನ್ನುಂಟುಮಾಡಿ, ಮೊದಲ ಕೇಳ್ಮೆಯಲ್ಲಿಯೇ ಕಾವ್ಯಭಾಸವನ್ನು ಯಾರ ಪಾಲಿಗೂ ದಕ್ಕಿಸುತ್ತವೆ. ಇದನ್ನು ಮೀರಿದ ಸ್ವಾರಸ್ಯಸಿದ್ಧಿ ಬೇಕೆಂದಲ್ಲಿ ವ್ಯಂಜಕಸಾಮಗ್ರಿಯಾಗಿ ಛಂದಸ್ಸಿನ ಬಳಕೆಯನ್ನು ದತ್ತಾವಧಾನರಾಗಿ ಮಾಡಬೇಕು. ಇದು ವಶ್ಯವಾಕ್ಕುಗಳಾದ ಮಹಾಕವಿಗಳಿಗೆ ಜನ್ಮಜಾತವಿದ್ಯೆ.
ಆದಿಕವಿಗಳ ಶಬ್ದಾಲಂಕಾರಪದ್ಧತಿ ಈ ತೆರನಾದದ್ದು. ಅವರ ಶ್ರುತಿಪ್ರಸಾದನವಿದ್ಯೆ ಕಣ್ಣುಕೋರೈಸುವಂಥದ್ದಲ್ಲವಾದರೂ ಮನಮುಟ್ಟುವಂಥದ್ದು. ಇಷ್ಟು ವಿಸ್ತರದ ಕಾವ್ಯದಲ್ಲಿಯೂ ನಾದಮಾಧುರ್ಯವು ಅವಿಚ್ಛಿನ್ನವಾಗಿ ಹರಿದುಬಂದಿದೆ. ಮಹರ್ಷಿಗಳ ಅನುಷ್ಟುಪ್ ಶ್ಲೋಕದ ಸಕಲಭಾವಸ್ಫೋರಕವಾದ ಸಮೃದ್ಧಘೋಷವು ಅವರ ಅಸಾಮಾನ್ಯಶಕ್ತಿಗಳಲ್ಲೊಂದು. ಸುಮಾರು ಇಪ್ಪತ್ತಮೂರು ಸಾವಿರಕ್ಕೂ ಹೆಚ್ಚು ಪದ್ಯಗಳು ಇದೊಂದು ಛಂದಸ್ಸಿನಲ್ಲಿಯೇ ರೂಪುಗೊಂಡಿದ್ದು ಮಿಕ್ಕಂತೆ ಅಲ್ಲೊಂದು ಇಲ್ಲೊಂದು ಎಂಬ ರೀತಿಯಲ್ಲಿ ಉಪಜಾತಿಯೋ ವಂಶಸ್ಥವೋ ಪುಷ್ಪಿತಾಗ್ರವೋ ಇಣಿಕುತ್ತವೆ; ತೀರ ಕ್ವಾಚಿತ್ಕವಾಗಿ ರುಚಿರಾ, ಮಾಲಿನೀ, ವಸಂತತಿಲಕಾದಿಗಳು ತಲೆದೋರುತ್ತವೆ. ಹೀಗಿದ್ದರೂ ಅವರ ಅನುಷ್ಟುಪ್ಪಿನಲ್ಲಿ ತಿಲಮಾತ್ರದ ಏಕತಾನತೆಯೂ ಇಲ್ಲ. ಮಾತ್ರವಲ್ಲ, ಅನುಷ್ಟುಪ್ ಛಂದಸ್ಸಿನ ನೈಸರ್ಗಿಕನಾದದಲ್ಲಿ ಸ್ವಲ್ಪವೂ ಕೊರತೆಯಾಗುವುದಿಲ್ಲ. ಹಾಗೆಂದು ವಾಲ್ಮೀಕಿಮುನಿಗಳು ಲೆಕ್ಕಾಚಾರದಂತೆ ಬರೆದವರಲ್ಲ; ಆದರೆ ಅವರು ಬರೆದದ್ದೆಲ್ಲ ಲೆಕ್ಕಕ್ಕೆ ಚೆನ್ನಾಗಿ ದಕ್ಕುತ್ತದೆ. ಈ ಕಾರಣದಿಂದಲೇ ಒಳ್ಳೆಯ ನಿಸರ್ಗಸಹಜಸಂಸ್ಕೃತವಾಣಿಗೆ ಅವರ ಕಾವ್ಯವು ಹೇಗೆ ಅನನ್ಯವಾದ ಆಯತನವೋ ಸೊಗಸಾದ ಶ್ಲೋಕರಚನೆಗೂ ಅವರ ಕೃತಿಯೇ ಶರಣ್ಯ. ಪ್ರಕೃತಲೇಖನದಲ್ಲಿ ಉದ್ಧೃತವಾದ ಉದಾಹರಣಪದ್ಯಗಳಿಂದಲೇ ಆದಿಕವಿಗಳ ಛಂದೋನಿರ್ವಾಹನಯವು ನಿರೂಪಿತವಾಗಿರುವ ಕಾರಣ ಪ್ರತ್ಯೇಕವಾದ ವಿಚೇಚನೆ ಸದ್ಯಕ್ಕೆ ಬೇಕಿಲ್ಲ. ಆದುದರಿಂದ ಕೇವಲ ಮಿಕ್ಕ ಶಬ್ದಾಲಂಕಾರಗಳತ್ತ ಒಂದು ಸಂಕ್ಷಿಪ್ತವೀಕ್ಷಣೆಯನ್ನು ಮಾಡೋಣ.
ಮಹರ್ಷಿಗಳಿಗೆ ಸಹಜವಾಗಿ ಬರುವ ಅನುಪ್ರಾಸಗಳಲ್ಲಿ ಹೆಚ್ಚಿನ ಪ್ರೀತಿ. ಇದು ವೃತ್ತ್ಯನುಪ್ರಾಸರೂಪದ್ದು:
ಸಮುದಗ್ರಶಿರೋಗ್ರೀವೋ ಗವಾಂಪತಿರಿವಾಬಭೌ | (೫.೧.೨)
ಮುಮೋಚ ಚ ಶಿಲಾಃ ಶೈಲೋ ವಿಶಾಲಾಃ ಸುಮನಶ್ಶಿಲಾಃ | (೫.೧.೧೬)
ಹಾರನೂಪುರಕೇಯೂರಪಾರಿಹಾರ್ಯಧರಾಃ ಸ್ತ್ರಿಯಃ | (೫.೧.೨೬)
ತಾರಾಭಿರಭಿರಾಮಾಭಿರುದಿತಾಭಿರಿವಾಂಬರಮ್ | (೫.೧.೫೫)
ಇವೆಲ್ಲ ಕೇವಲ ಒಂದೇ ಸರ್ಗದಿಂದ ಯಾದೃಚ್ಛಿಕವಾಗಿ ಹೆಕ್ಕಿದ ಉದಾಹರಣೆಗಳು. ಇಷ್ಟು ಧಾರಾಳವಾದ ವಾಕ್ಕು ಅವರದಾದ ಕಾರಣದಿಂದಲೇ “ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್” ಎಂದದ್ದು. ಇದು ಸುಲಭದ ಸಿದ್ಧಿಯಲ್ಲ.
ಇನ್ನು ಲಾಟಾನುಪ್ರಾಸ-ಛೇಕಾನುಪ್ರಾಸಗಳ ಒಂದೆರಡು ಮಾದರಿಗಳನ್ನು ನೋಡೋಣ:
ಹಾರಂ ಚ ಹೇಮಸೂತ್ರಂ ಚ ಭಾರ್ಯಾಯೈ ಸೌಮ್ಯ ಹಾರಯ | (೨.೩೨.೭)
ಗಚ್ಛಂತಮನುಗಚ್ಛಾಮೋ ಯೇನ ಗಚ್ಛತಿ ರಾಘವಃ | (೨.೩೩.೧೬)
ಮಹೇಂದ್ರಪುತ್ರಂ ಪತಿತಂ ವಾಲಿನಂ ಹೇಮಮಾಲಿನಮ್ | (೪.೧೭.೧೧)
ಇತ್ಯುಕ್ತಃ ಪ್ರಶ್ರಿತಂ ವಾಕ್ಯಂ ಧರ್ಮಾರ್ಥಸಹಿತಂ ಹಿತಮ್ | (೪.೧೮.೧)
ನಿಯತಿಃ ಕಾರಣಂ ಲೋಕೇ ನಿಯತಿಃ ಕರ್ಮಸಾಧನಮ್ |
ನಿಯತಿಃ ಸರ್ವಭೂತಾನಾಂ ನಿಯೋಗೇಷ್ವಿಹ ಕಾರಣಮ್ || (೪.೨೫.೪)
ವಾಲ್ಮೀಕಿಮುನಿಗಳ ಶಬ್ದಾಲಂಕೃತಿಕೌಶಲವು ಮುಗಿಲುಮುಟ್ಟುವುದು ಕಿಷ್ಕಿಂಧಾಕಾಂಡದಲ್ಲಿ ಬರುವ ಋತುಗಳ ವರ್ಣನೆಯಲ್ಲಿ ಮತ್ತು ಸುಂದರಕಾಂಡದ ಹತ್ತಾರು ಸರ್ಗಗಳಲ್ಲಿ. ತತ್ರಾಪಿ ಉಪಜಾತಿವೃತ್ತದ ನಿರ್ವಾಹಕಾಲದಲ್ಲಿಯೇ ಹೆಚ್ಚಿನ ಶಬ್ದಾಲಂಕಾರವು ತಲೆದೋರುತ್ತದೆ. ಈಗಾಗಲೇ ಕಿಷ್ಕಿಂಧಾಕಾಂಡದ ಋತುವರ್ಣನಪದ್ಯಗಳಲ್ಲಿ ಸಾಕಷ್ಟು ಉದಾಹರಣೆಗಳು ಅರ್ಥಾಲಂಕಾರವಿವೇಚನಾಂಗವಾಗಿ ಬಂದಿರುವ ಕಾರಣ ಸುಂದರಕಾಂಡದ ಒಂದೆರಡು ಪದ್ಯಗಳನ್ನು ಗಮನಿಸೋಣ:
ತತಃ ಸ ಮಧ್ಯಂ ಗತಮಂಶುಮಂತಂ
ಜ್ಯೋತ್ಸ್ನಾವಿತಾನಂ ಮಹದುದ್ವಮಂತಮ್ |
ದದರ್ಶ ಧೀಮಾನ್ ದಿವಿ ಭಾನುಮಂತಂ
ಗೋಷ್ಠೇ ವೃಷಂ ಮತ್ತಮಿವ ಭ್ರಮಂತಮ್ || (೫.೫.೧)
ಹಂಸೋ ಯಥಾ ರಾಜತಪಂಜರಸ್ಥಃ
ಸಿಂಹೋ ಯಥಾ ಮಂದರಕಂದರಸ್ಥಃ |
ವೀರೋ ಯಥಾ ಗರ್ವಿತಕುಂಜರಸ್ಥ-
ಶ್ಚಂದ್ರೋऽಪಿ ಬಭ್ರಾಜ ತಥಾಂಬರಸ್ಥಃ || (೫.೫.೪)
ವಿನಷ್ಟಶೀತಾಂಬುತುಷಾರಪಂಕೋ
ಮಹಾಗ್ರಹಗ್ರಾಹವಿನಷ್ಟಪಂಕಃ |
ಪ್ರಕಾಶಲಕ್ಷ್ಮ್ಯಾಶ್ರಯನಿರ್ಮಲಾಂಕೋ
ರರಾಜ ಚಂದ್ರೋ ಭಗವಾನ್ ಶಶಾಂಕಃ || (೫.೫.೬)
10
ಇದೊಂದು ಸಾಮಾನ್ಯವಾದ—ಆದರೆ ತಕ್ಕಮಟ್ಟಿಗೆ ಸಮಗ್ರವೆನ್ನಬಹುದಾದ—ಅಲಂಕಾರವಿವೇಚನೆ. ಈ ಮೂಲಕ ಆದಿಕವಿಗಳ ಅಪ್ಪಟ ಕಾವ್ಯದ ಒಂದು ವಿಹಂಗವೀಕ್ಷಣೆಯೂ ಆಗುತ್ತದೆ. ಏಕೆಂದರೆ, ಸಾಮಾನ್ಯವಾಗಿ ಸಂಸ್ಕೃತವಿದ್ವಾಂಸರೂ ಸೇರಿದಂತೆ ಅನೇಕರು ಶ್ರೀಮದ್ರಾಮಾಯಣದ ಕಥೆ, ಇತಿವೃತ್ತ, ಪಾತ್ರಚಿತ್ರಣ, ಮೌಲ್ಯಮೀಮಾಂಸೆ ಮುಂತಾದುವುಗಳ ಕಡೆಗೆ ಅವಧಾನವಿರಿಸಿದಂತೆ ಅದರ ಮುಕ್ತಕಪ್ರಾಯಪದ್ಯಗಳಲ್ಲಿ, ಅವುಗಳಲ್ಲಿ ತೋರಿಕೊಳ್ಳುವ ವಿವಿಧಾಲಂಕಾರಗಳಲ್ಲಿ ಗಮನವಿರಿಸಿರುವುದಿಲ್ಲ. ಮಾತ್ರವಲ್ಲ, ಗುಣ-ರೀತಿ-ಧ್ವನಿ-ವಕ್ರತೆಗಳಂಥ ಇನ್ನಿತರ ಕಾವ್ಯಮೀಮಾಂಸಾತತ್ತ್ವಗಳಲ್ಲಿಯೂ ತೇರ್ಗಡೆಯಾಗಬಲ್ಲ ಆದಿಕವಿಸೂಕ್ತಿಗಳತ್ತ ಮನವಿಡುವುದಿಲ್ಲ. ಇದೊಂದು ಬಗೆಯಲ್ಲಿ ಸೂರ್ಯೋದಯ-ಚಂದ್ರೋದಯಗಳ ನಿತ್ಯನವೀನವಾದ ಕಾವ್ಯೋಪಮಸೌಂದರ್ಯವನ್ನು ಕಾಣದೆಹೋಗುವ ಪ್ರಯೋಜನೈಕಕೃಪಣರ ವರ್ತನೆಯಂತೆಯೇ ಸರಿ. ಸದ್ಯದ ಅಲ್ಪಾರಂಭವು ಈ ನಿಟ್ಟಿನಲ್ಲಿ ಆಸಕ್ತರ ಅವಧಾನವನ್ನು ಸೆಳೆಯುವ ನಮ್ರಯತ್ನ.
ಪ್ರಕೃತಪರಿಶೀಲನೆಯಿಂದ ತಿಳಿದುಬರುವ ಮತ್ತೊಂದು ಅಂಶವೆಂದರೆ, ಉಭಯಾಲಂಕಾರಗಳ ಪಾರಮ್ಯವು ಬಾಲಕಾಂಡ ಮತ್ತು ಉತ್ತರಕಾಂಡಗಳಲ್ಲಿ ಎದ್ದುತೋರುವಂತೆ ಮರೆಯಾಗಿದೆ. ಇವುಗಳಲ್ಲಿ ಇಡಿಕಿರಿದ ಉಪಕಥೆಗಳ ಪುರಾಣಸದೃಶವಾದ ನಿರೂಪಣೆಯೂ ಇದಕ್ಕೆ ಕಾರಣವಿರಬಹುದು. ಆದರೂ ಈ ಅಂಶವು ಇವುಗಳ ಪ್ರಕ್ಷೇಪಸಂಭವನೀಯತೆಗೆ ದಿಕ್ಸೂಚಿಯಾಗಿ ಒದಗಬಹುದು. ಅಲ್ಲದೆ ಇಂಥ ಉಪಕಥೆಗಳೂ ಅತಿಲೋಕ-ಅತಿಮಾನುಷವೃತ್ತಾಂತಗಳೂ ಬಂದಾಗ ಮಿಕ್ಕ ಕಾಂಡಗಳಲ್ಲಿಯೂ ಅಲಂಕಾರಗಳು ಕೆಲಮಟ್ಟಿಗೆ ಸೊರಗಿವೆ. ಅವು ಕೂಡ ಈ ನಿಗಮನವನ್ನು ಬಲಪಡಿಸಬಹುದು. ವರ್ಣನಪ್ರಧಾನವಾದ ಭಾಗಗಳಿರುವ ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡಗಳಂಥವಲ್ಲಿ ಅಲಂಕಾರಗಳ ಹೆಚ್ಚಳ ನಿಚ್ಚಳವಾಗಿದೆ. ಇದು ನಿರೀಕ್ಷಿತವೂ ಹೌದು. ಆದರೆ ಭಾವೈಕಪ್ರಧಾನವಾದ ಅಯೋಧ್ಯಾಕಾಂಡದಲ್ಲಿಯೂ ಘಟನೈಕಪ್ರಧಾನವಾದ ಯುದ್ಧಕಾಂಡದಲ್ಲಿಯೂ ಅಲಂಕಾರಗಳು ತೀರ ಸೊರಗಿಲ್ಲ. ಇದನ್ನೆಲ್ಲ ಪರಿಭಾವಿಸಿದಾಗ ಆದಿಕವಿಗಳ ವಾಕ್ಕು ಮುಖ್ಯಕಥಾನಕವನ್ನು ನಡಸುವಲ್ಲಿ ಬಲುಮಟ್ಟಿಗೆ ಏಕಾಗ್ರಪ್ರತಿಭೆಯಿಂದ ಸಾಗಿದೆಯೆಂದೂ “ವರ್ಣನಾನಿಪುಣಃ ಕವಿಃ” ಎಂಬ ಮಾತಿಗೆ ಸಲ್ಲುವಂತೆ ಸರ್ವತ್ರ ಶುದ್ಧಕಾವ್ಯಸ್ವಾರಸ್ಯವು ಬೆಳೆಗಿದೆಯೆಂದೂ ಹೇಳಬಹುದು. ಈ ಕಾರಣದಿಂದಲೇ ಪರಂ ಕವೀನಾಮಾಧಾರಮ್ ಎಂಬ ಚತುರ್ಮುಖನ ಮಾತಿಗೆ ಎದುರಿಲ್ಲ.
ಚೇತಸೋऽಸ್ತು ಪ್ರಸಾದಾಯ ಸತಾಂ ಪ್ರಾಚೇತಸೋ ಮುನಿಃ |
ಪೃಥಿವ್ಯಾಂ ಪದ್ಯನಿರ್ಮಾಣವಿದ್ಯಾಯಾಃ ಪ್ರಥಮಂ ಪದಮ್ ||
(ಮಧುರಾವಿಜಯಮ್, ೧.೫)
[ಇಲ್ಲಿಯ ಪದ್ಯಗಳನ್ನೆಲ್ಲ ಎನ್. ಆರ್. ಕಾಲೋನಿಯ ಶ್ರೀರಾಮಂದಿರವು ಪ್ರಕಟಿಸಿದ ವಿದ್ವಾನ್ ಎನ್. ರಂಗನಾಥಶರ್ಮರ ಕನ್ನಡಾನುವಾದದಿಂದ ಕೂಡಿದ “ಶ್ರೀಮದ್ವಾಲ್ಮೀಕಿರಾಮಾಯಣಮ್” ಸಂಪುಟಗಳಿಂದ ಉದ್ಧರಿಸಿಕೊಳ್ಳಲಾಗಿದೆ.]
Concluded.