ಈಗ ಕಾಂಡಾನುಸಾರವಾಗಿ ಪರಿಶೀಲಿಸೋಣ:
ಬಾಲಕಾಂಡದಲ್ಲಿ ಮನಮುಟ್ಟುವ ಉಪಮೆಗಳೇ ವಿರಳ. ಅಷ್ಟೇಕೆ, ಉಳಿದ ಅಲಂಕಾರಗಳೂ ಕಡಮೆ. ಆದರೂ ಪ್ರಾತಿನಿಧಿಕವಾಗಿ ಅತ್ಯುತ್ತಮವೆನ್ನಬಹುದಾದ ಒಂದು ಉದಾಹರಣೆಯನ್ನು ಕಾಣಬಹುದು:
ಅಕರ್ದಮಮಿದಂ ತೀರ್ಥಂ ಭರದ್ವಾಜ ನಿಶಾಮಯ |
ರಮಣೀಯಂ ಪ್ರಸನ್ನಾಂಬು ಸನ್ಮನುಷ್ಯಮನೋ ಯಥಾ || (೧.೨.೫)
ಇಲ್ಲಿ ಆದಿಕವಿಗಳು ತಮ್ಮ ಶಿಷ್ಯ ಭರದ್ವಾಜನಿಗೆ ತಮಸಾನದಿಯ ತಿಳಿನೀರನ್ನು ಪರಿಚಯಿಸುತ್ತಾರೆ. ನಿರ್ಮಲವಾದ ನದೀಜಲವು ಸಜ್ಜನರ ಮನಸ್ಸಿನಂತೆ ಕಾಣುತ್ತದೆಂದು ಹೇಳುವ ಕವಿಯ ಪ್ರತಿಭೆ ನಿಜಕ್ಕೂ ಅಸಾಧಾರಣ. ಮೂರ್ತವನ್ನು ಅಮೂರ್ತಕ್ಕೆ ಹೋಲಿಸುವ ಪರಿ ನಿತರಾಂ ಪ್ರಶಂಸನೀಯ. ಏಕೆಂದರೆ, ಸಾಮಾನ್ಯವಾಗಿ ಭಾವುಕೋಪಮೆಯು ಸದೃಶವಸ್ತುಗಳಲ್ಲಿಯೇ ಸಾದೃಶ್ಯವನ್ನು ಕಾಣುವಂಥ ಸರಳಸುಂದರಪ್ರಕಾರ. ಇಂಥ ಕುಸುಮಕೋಮಲಪ್ರಕಾರದಲ್ಲಿಯೂ ಮೂರ್ತಾಮೂರ್ತಗಳನ್ನು ಒಟ್ಟಿಗೆ ನಿರುಕಿಸಬಲ್ಲ, ಹಾಗೆ ನೋಡಿಯೂ ಅವುಗಳ ಪ್ರಸನ್ನತೆ ಮತ್ತು ಸಹಜತೆಗಳನ್ನು ಉಳಿಸಿಕೊಡಬಲ್ಲ ಕಾಣ್ಕೆ ಅಸಮಾನ. ರಾಮಾಯಣದ ಶಕ್ತಿಯು ಇಂಥ ದರ್ಶನದಲ್ಲಿಯೇ ನೆಲೆಯಾಗಿದೆಯೆಂದರೆ ಅತಿಶಯವಲ್ಲ. ಏಕೆಂದರೆ ಮೇಲ್ನೋಟಕ್ಕೆ ಮುಗ್ಧಮನೋಹರವಾಗಿ ತೋರುವ ಈ ಕಾವ್ಯದ ಆಳದಲ್ಲಿರುವುದು ಎಂಥ ವಿಕಟವಾಸ್ತವಗಳನ್ನೂ ಶೀತಲೋಜಸ್ವಿತೆಯಿಂದ ಗ್ರಹಿಸಬಲ್ಲ ಧೀರತೆ. ಅಲ್ಲದೆ ಈ ಶ್ಲೋಕದ ನಾಲ್ಕನೆಯ ಪಾದದಲ್ಲಿ ತೋರಿಕೊಳ್ಳುವ ಉಪಮೆಯು ವಕ್ರೋಕ್ತಿಯ ಪ್ರತಿನಿಧಿಯಾದರೆ, ಮೂರನೆಯ ಪಾದವಾದ “ರಮಣೀಯಂ ಪ್ರಸನ್ನಾಂಬು” ಎಂಬುದು ಸ್ವಯಂಪೂರ್ಣವಾದ ಸ್ವಭಾವೋಕ್ತಿಯ ಸಂಕೇತವೂ ಹೌದು. ಹೀಗೆ ಬಲುಚಿಕ್ಕದಾದ ಶ್ಲೋಕಾರ್ಧದ ಕುಕ್ಷಿಯಲ್ಲಿಯೂ ಅಲಂಕಾರಪ್ರಪಂಚದ ಎರಡು ಮುಖಗಳಾದ ವಕ್ರೋಕ್ತಿ-ಸ್ವಭಾವೋಕ್ತಿಗಳನ್ನು ಆದಿಕವಿಗಳು ಅಡಕಮಾಡಿರುವುದು ಅವರ ಕವಿತ್ವಶಕ್ತಿಗೇ ಎತ್ತಿದ ನೀರಾಜನ.
ಅಯೋಧ್ಯಾಕಾಂಡವು ರಾಮಾಯಣದ ಹೃದ್ಭಾಗವೆಂದೇ ಡಿ.ವಿ.ಜಿ.ಯವರ ನಿಶ್ಚಯ. ರಸಧ್ವನಿಯಲ್ಲಿ ಪರ್ಯವಸಿಸುವ ಮಾತುಗಳೇ ಇಲ್ಲಿ ಮೆರೆಯುವ ಕಾರಣ, ಗುಣೀಭೂತವ್ಯಂಗ್ಯದ ವಲಯಕ್ಕೆ ಬರುವ ಸ್ಫುಟಾಲಂಕಾರಗಳಿಗೆ ಹೆಚ್ಚಿನ ಅವಕಾಶವಿಲ್ಲದಿರುವುದು ಸಹಜವೇ ಆಗಿದೆ. ಆದರೂ ಅಲ್ಲಲ್ಲಿ ತೋರಿಕೊಳ್ಳುವ ಸಹಜಾಲಂಕಾರಗಳಿಗೆ ದಾರಿದ್ರ್ಯವಿಲ್ಲ. ಅಂಥ ಕೆಲವೊಂದು ಉಪಮೆಗಳನ್ನೀಗ ನೋಡೋಣ:
ಮಂಥರೆಯ ಮಾತನ್ನು ಕೇಳಿ ಬುದ್ಧಿಗೆಟ್ಟ ಕೈಕೇಯಿಯು ಹಾದಿತಪ್ಪಿದ ಹೆಣ್ಣು ಕುದುರೆಯಂತಾದಳೆಂದು ಮಹರ್ಷಿಗಳ ಒಕ್ಕಣೆ:
ಕಿಶೋರೀವೋತ್ಪಥಂ ಗತಾ | (೨.೯.೩೭)
ಈ ಮಾತಿನ ಸ್ವಾರಸ್ಯ ಸಹೃದಯರಿಗೆ ಸುಲಭವೇದ್ಯ. ವಿಶೇಷತಃ, ಅಂಕೆತಪ್ಪಿದ ಕುದುರೆಯ ಆಟಾಟೋಪವನ್ನು ಬಲ್ಲವರೇ ಬಲ್ಲರು. ಇನ್ನು ತನಗೆ ದುರ್ಬೋಧೆ ಮಾಡಿದ ವಿಕೃತಾಕಾರದ ಮಂಥರೆಯನ್ನು ಸ್ವಾರ್ಥದಿಂದ ಕುರುಡಾದ ಕೈಕೇಯಿ ಕಂಡ ಬಗೆಯಂತೂ ಅನ್ಯಾದೃಶ:
ತ್ವಂ ಪದ್ಮಮಿವ ವಾತೇನ ಸಂನತಾ ಪ್ರಿಯದರ್ಶನಾ | (೨.೯.೪೧)
ಮಂಥರೆಯ ಗೂನುಬೆನ್ನು ಕೈಕೇಯಿಯ ಕಣ್ಣಿಗೆ ಗಾಳಿಗೆ ಬಾಗಿದ ಕಮಲದಂತೆ ಕಂಡಿದಂತೆ! ಅರ್ಥ-ಕಾಮಕೃಪಣವಾದ ಮನಸ್ಸಿಗೆ ಯಾವುದೂ ಹೇಗೂ ಕಾಣುವುದೆಂಬುದಕ್ಕೆ ಇದಕ್ಕಿಂತಲೂ ಒಳ್ಳೆಯ ನಿದರ್ಶನ ಬೇಕಿಲ್ಲ. ಆದಿಕವಿಗಳ ಅಲಂಕಾರಗಳು ಹೀಗೆ ಬಹ್ವರ್ಥಗ್ರಾಸಿ. ದಿಟವೇ, ಇಲ್ಲಿ ಉಪಮಾನೋಪಮೇಯಗಳ ನಡುವೆ ಲಿಂಗೈಕ್ಯವಿಲ್ಲದಿದ್ದರೂ ಉದ್ವೇಜಕವಾಗಿಲ್ಲ.
ಕೈಕೇಯಿಯ ಮಾತನ್ನು ಕೇಳಿ ರಾಮನನ್ನು ಕಾಡಿಗಟ್ಟಿದರೆ ತನ್ನನ್ನು ಲೋಕವೆಲ್ಲ ಹಳಿಯುತ್ತದೆಂದು ದಶರಥನು ಹಲುಬುವಾಗ ಆತ ತನ್ನ ಪರಿಸ್ಥಿತಿಯು ಮದ್ಯಪಾನವನ್ನು ಮಾಡಿ ಬೀದಿಬೀದಿಗಳಲ್ಲಿಯೂ ಶಿಷ್ಟರ ದೂಷಣೆಗೆ ತುತ್ತಾದ ಬ್ರಾಹ್ಮಣನ ಪಾಡಾಗುತ್ತದೆಂದು ಹೇಳುವುದು ನಿಜಕ್ಕೂ ಮಾರ್ಮಿಕೋಪಮೆ:
ಧಿಕ್ಕರಿಷ್ಯಂತಿ ರಥ್ಯಾಸು ಸುರಾಪಂ ಬ್ರಾಹ್ಮಣಂ ಯಥಾ | (೨.೧೨.೭೮)
ಸೀತೆಯನ್ನೊಡಗೂಡಿದ ರಾಮನು ಚಿತ್ರಾನಕ್ಷತ್ರದೊಡನೆ ಸೇರಿಕೊಂಡ ಸುಧಾಂಶುವಂತಿದ್ದನೆಂದು ವಾಲ್ಮೀಕಿಮುನಿಗಳು ಕೊಡುವ ಚಿತ್ರಣವು ಮೇಲ್ನೋಟಕ್ಕೆ ಸಾಂಪ್ರದಾಯಿಕವೆಂಬಂತೆ ಕಂಡರೂ ವಸಂತರ್ತುವಿನಲ್ಲಿ ಮಾತ್ರ ಮಿಗಿಲಾಗಿ ಶೋಭಿಸುವ ಸಂಪೂರ್ಣಮಂಡಲನಾದ ಚಂದ್ರನ ಸ್ವರೂಪವನ್ನೂ ಆ ಋತುವಿನ ಲೋಕಮೋಹಕತೆಯನ್ನೂ ಚಿತ್ರಾಪೂರ್ಣಿಮೆಯಂದು ಶಶಿಬಿಂಬದ ಹತ್ತಿರ ನಮ್ರಸೌಮ್ಯತೆಯಿಂದ ನಿಲ್ಲುವ ಚಿತ್ರಾನಕ್ಷತ್ರದ ಸ್ನಿಗ್ಧಕಾಂತಿಯನ್ನೂ ಧ್ವನಿಸುವ ಬಗೆಯನ್ನು ಭಾವಿಸಿದಾಗ ಇಲ್ಲಿಯ ಕಾವ್ಯಕೌಶಲ ಮನಮುಟ್ಟದಿರದು:
ಉಪೇತಂ ಸೀತಯಾ ಭೂಯಶ್ಚಿತ್ರಯಾ ಶಶಿನಂ ಯಥಾ | (೨.೧೬.೧೦)
ಕಾಳಿದಾಸನು ರಘುವಂಶದ ಮೊದಲ ಸರ್ಗದಲ್ಲಿ ದಿಲೀಪ-ಸುದಕ್ಷಿಣೆಯರನ್ನು ವರ್ಣಿಸುವಾಗ ಇದೇ ಹೋಲಿಕೆಯನ್ನು ಮತ್ತಷ್ಟು ಸಿಂಗರಿಸಿ ಬಳಸಿರುವುದನ್ನು ನೆನೆದಾಗ ಆದಿಕವಿಯ ಚಾತುರಿಯನ್ನು ವರಕವಿಯಷ್ಟೇ ಅರಿಯಬಲ್ಲನೆಂಬ ಸ್ಫುರಣೆ ನಮಗಾಗದಿರದು.
ಕೈಕೇಯಿಯ ತಂತ್ರಕ್ಕೆ ಸಿಲುಕಿದ ತನ್ನ ತಂದೆಯನ್ನು ರಾಮನು ಕಂಡಾಗ ಆತನು ಸುಳ್ಳಾಡಿದ ಋಷಿಯಂತಿದ್ದನೆಂದು ವಾಲ್ಮೀಕಿಮುನಿಗಳು ಹೇಳುವ ಮಾತಂತೂ ಹೃದಯವೇಧಕ. ದಶರಥನು ಎಂಥ ದೌರ್ಬಲ್ಯಗಳ ನೆಲೆಯಾಗಿದ್ದರೂ ಅನೃತದೋಷ ಮಾತ್ರ ಆತನದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕೃತೋಪಮೆ ಅನನ್ಯ: ಉಕ್ತಾನೃತಮೃಷಿಂ ಯಥಾ (೨.೧೮.೬).
ತನ್ನನ್ನು ಕಾಡಿಗೆ ರಾಮನು ಕರದೊಯ್ಯುತ್ತಿಲ್ಲವೆಂಬ ಪ್ರೀತಿಯ ಕನಲಿಕೆಯಿಂದ ಸೀತೆಯು ಪತಿಯನ್ನು ಆಕ್ಷೇಪಿಸುವಾಗ ಆತನನ್ನು ನಟನೆಂದು ದೂಷಿಸುತ್ತಾಳೆ. ಹಿಂದಿನ ಕಾಲದಲ್ಲಿ ವೃತ್ತಿಪರನಟವರ್ಗವು ತನ್ನ ಕುಟುಂಬವನ್ನು ತವರಿನಲ್ಲಿಯೋ ಮತ್ತಾವ ಬಂಧುಗಳಲ್ಲಿಯೋ ಬಿಟ್ಟು ಊರೂರು ಸುತ್ತಿ ಹೊಟ್ಟೆಹೊರೆಯುತ್ತಿತ್ತಂತೆ. ಇದೀಗ ರಾಮನು ಒಂಟಿಯಾಗಿ ವನವಾಸಕ್ಕೆ ತೆರಳಿದರೆ ಅವನಿಎಗ್ ಈ ಪರಿಯ ಕಲಂಕವಂಟೀತೆಂದು ಸೀತೆಯ ಇಂಗಿತ:
ಶೈಲೂಷ ಇವ ಮಾಂ ರಾಮ ಪರೇಭ್ಯೋ ದಾತುಮರ್ಹಸಿ | (೨.೩೦.೮)
ಸಂಸ್ಕೃತದಲ್ಲಿ ನಟರಿಗೆ “ಕುಶೀಲವ”ರೆಂದೂ ಹೆಸರುಂಟು. ಇವರ ಶೀಲವೂ ಶಿಥಿಲವೆಂದು ಲೋಕಪ್ರಥೆ. ಹೀಗಾಗಿ ರಾಮನಂಥ ಮರ್ಯಾದಾಪುರುಷೋತ್ತಮನಿಗೆ ಶೈಲೂಷರ ಸಾದೃಶ್ಯ ಸಂದಲ್ಲಿ ಅದು ಅವನಿಗೆ ಸಲ್ಲದ ಆರೋಪ. ಆದುದರಿಂದ ಇಂತಾದರೂ ಮಾನಕ್ಕಂಜಿದ ಪತಿಯು ತನ್ನನ್ನು ಜೊತೆಗೆ ಕರೆದೊಯ್ದಾನೆಂದು ಸೀತೆಯ ಹವಣು. ಹೀಗೆ ಆಕೆಯ ಆಕ್ಷೇಪದ ಹಿಂದಿರುವುದು ಅನುರಾಗವು ಹೂಡಿದ ತಂತ್ರವಲ್ಲದೆ ಕುತ್ಸಿತವಾದ ನಿಂದೆಯಲ್ಲ.
ಕೈಕೇಯಿಯ ಅರ್ಥಲುಬ್ಧಸ್ವಭಾವವನ್ನೂ ಆಕೆಯ ಒರಟುತನವನ್ನೂ ಏಕಕಾಲದಲ್ಲಿ ಮಹರ್ಷಿಗಳು ನಿರೂಪಿಸುವ ಪರಿ ಮಾರ್ಮಿಕ. ರಾಮನೊಡನೆಯೇ ಅಯೋಧ್ಯೆಯ ಸಿರಿಯೆಲ್ಲ ಕಾಡಿಗೆ ಸಾಗಲೆಂದು ಹೇಳುವ ದಶರಥನಿಗೆ ಆಕೆ ಪ್ರತಿರೋಧ ತೋರುವ ಬಗೆ ಹೀಗಿದೆ:
ರಾಜ್ಯಂ ಗತಧನಂ ಸಾಧೋ ಪೀತಮಂಡಾಂ ಸುರಾಮಿವ |
ನಿರಾಸ್ವಾದ್ಯತಮಂ ಶೂನ್ಯಂ ಭರತೋ ನಾಭಿಪತ್ಸ್ಯತೇ || (೨.೩೬.೧೨)
ಸಿರಿಯಿಲ್ಲದ ಸಾಮ್ರಾಜ್ಯದಿಂದ ಭರತನಿಗೆ ಯಾವ ಸುಖ ತಾನೆ ಸಿಕ್ಕೀತು? ಅದೇನಿದ್ದರೂ ಸ್ವಾರಸ್ಯವಿಲ್ಲದ, ಮದವೇರದ ಹೆಂಡದ ಬುರುಡೆಯಂತೆಂದು ಆಕ್ಷೇಪಿಸುವ ಕೈಕೇಯಿಯ ಸಂಸ್ಕಾರ ಈ ಒಂದು ಉಪಮೆಯಿಂದಲೇ ಬಟ್ಟಬಯಲಾಗಿದೆ.
ಇಂಥ ಹಠಮಾರಿ ಹೆಣ್ಣನ್ನು ಕುರಿತು ಕೌಸಲ್ಯೆಯು ಹೇಳುವ ಮಾತೂ ಗಮನಾರ್ಹ. ಆ ಪ್ರಕಾರ ರಾಮನನ್ನು ಕಾಡಿಗಟ್ಟಿದ ಕೈಕೇಯಿ ಪೊರೆಕಳಚಿದ ಹಾವಿನಂತೆ ಮತ್ತಷ್ಟು ಮಿಂಚುತ್ತಾಳೆ, ಇನ್ನಷ್ಟು ಕ್ರೂರಿಯಾಗುತ್ತಾಳೆ:
ವಿಚರಿಷ್ಯತಿ ಕೈಕೇಯೀ ನಿರ್ಮುಕ್ತೇವ ಹಿ ಪನ್ನಗೀ | (೨.೪೩.೨)
ಆದಿಕವಿಗಳು ಶಾಸ್ತ್ರಪ್ರಸಿದ್ಧಸಂಗತಿಗಳನ್ನೂ ಉಪಮಾನಕ್ಕೆ ಬಳಸಿಕೊಳ್ಳುವುದರಲ್ಲಿ ಹಿಂದೆಗೆಯುವುದಿಲ್ಲ. ಅಂಥದ್ದೊಂದು ನಿದರ್ಶನವಿಲ್ಲಿದೆ:
ಪಾತಯಿತ್ವಾ ತು ಕೈಕೇಯ್ಯಾ ರಾಮಂ ಸ್ಥಾನಾದ್ಯಥೇಷ್ಟತಃ |
ಪ್ರವಿದ್ಧೋ ರಕ್ಷಸಾಂ ಭಾಗಃ ಪರ್ವಣೀವಾಹಿತಾಗ್ನಿನಾ || (೨.೪೩.೫)
ಕೌಸಲ್ಯೆಯು ಕೈಕೇಯಿಯ ತಂತ್ರದ ಕಾರಣ ತನ್ನ ಮಗನಿಗೆ ದಕ್ಕದೆಹೋದ ಸಾಮ್ರಾಜ್ಯವು ದೇವತೆಗಳ ಕೈಗೆ ದಕ್ಕದೆಹೋದ ಹವಿಸ್ಸು ರಾಕ್ಷಸರಿಗೆ ಸಂದಂತಾಯಿತೆಂದು ಸಂಕಟಪಡುವ ಭಾವ ಮೇಲಣ ಉದಾಹರಣೆಯಲ್ಲಿದೆ. ಇಲ್ಲಿಯ ಆರ್ಷೇಯಸಾದೃಶ್ಯ ಮನನೀಯ. ಈ ಮಾತನ್ನಾಡುವ ಹೊತ್ತಿಗೆ ಕೌಸಲ್ಯೆಯು ಅದೇ ತಾನೇ ಸ್ವಯಂ ಹೋಮವನ್ನು ಮಾಡಿ ಮುಗಿಸಿದ್ದಳೆಂಬುದನ್ನು ನೆನೆದಾಗ ಈ ಹೋಲಿಕೆಯ ಸ್ವಾರಸ್ಯ ಮತ್ತಷ್ಟು ಮನದಟ್ಟಾಗದಿರದು.
ಆದಿಕವಿಗಳು ಅಯೋಧ್ಯಾಕಾಂಡದಂಥ ಕರುಣನಿರ್ಭರಸಂದರ್ಭದಲ್ಲಿಯೂ ಸಮುಚಿತವಾಗಿ ಹಾಸ್ಯವನ್ನು ಹೊಮ್ಮಿಸಬಲ್ಲರೆಂಬುದಕ್ಕೆ ಕೈಕೇಯಿಯ ಸಮ್ಮಾನದಿಂದ ಸಿಂಗಾರಗೊಂಡ ಮಂಥರೆಯನ್ನು ವರ್ಣಿಸುವ ಪರಿಯೇ ಸಾಕ್ಷಿ. ಮೈಯೆಲ್ಲ ಒಡವೆಗಳನ್ನು ಹೇರಿಕೊಂಡ ಆಕೆಯು ಹಗ್ಗಗಳಿಂದ ಕಟ್ಟಲ್ಪಟ್ಟ ಹೆಣ್ಣುಕೋತಿಯಂತೆ ಕಂಡಳೆಂದು ಚಿತ್ರಿಸಿದ ಬಗೆ ಎಂದೂ ಮರೆಯುವಂತಿಲ್ಲ:
ಮೇಖಲಾದಾಮಭಿಶ್ಚಿತ್ರೈರನ್ಯೈಶ್ಚ ಶುಭಭೂಷಣೈಃ |
ಬಭಾಸೇ ಬಹುಭಿರ್ಬದ್ಧಾ ರಜ್ಜುಬದ್ಧೇವ ವಾನರೀ || (೨.೭೮.೭)
ವಾಲ್ಮೀಕಿಮುನಿಗಳು ಸಂದರ್ಭವೊದಗಿದಾಗ ಮಾಲೆಮಾಲೆಗಳಾಗಿ ಉಪಮೆಗಳನ್ನು ಹೆಣೆದು ಕಥಾಕಾಂತೆಯನ್ನು ಸಿಂಗರಿಸುವುದುಂಟು. ಇದು ಅವರ ಅನರ್ಗಲವಾಗ್ವಿಲಾಸಕ್ಕೊಂದು ಅರ್ಹಸಾಮರ್ಥ್ಯವೂ ಹೌದು. ಇಂಥ ಒಂದು ಸಂನಿವೇಶವನ್ನು ರಾಮ-ದಶರಥರಿಲ್ಲದ ಅಯೋಧ್ಯೆಯು ಭರತನಿಗೆ ಕಂಡ ಬಗೆಯಲ್ಲಿ ಭಾವಿಸಬಹುದು. ಆ ಪ್ರಕಾರ ಅಯೋಧ್ಯೆಯು ಪಾಪಗ್ರಹದಿಂದ ಪೀಡಿಸಲ್ಪಟ್ಟ ರೋಹಿಣಿಯಂತೆ, ಬೇಸಗೆಯಲ್ಲಿ ಬೆಂದ ಹಕ್ಕಿಯಂತೆ, ಗ್ರೀಷ್ಮದಲ್ಲಿ ಸೊರಗಿದ ನಿರ್ಝರಿಣಿಯಂತೆ, ಹವಿಸ್ಸಿಲ್ಲದೆ ಬಾಡುತ್ತಿರುವ ಹೋಮಾಗ್ನಿಶಿಖೆಯಂತೆ, ನಾಯಕನಿಲ್ಲದ ಸೇನೆಯಂತೆ, ಪ್ರಕ್ಷುಬ್ಧವಾದ ಅಲೆಯಂತೆ, ವೃಷಭದಿಂದ ದೂರವಾದ ಧೇನುವಿನಂತೆ, ಸೂತ್ರದಿಂದ ಜಾರಿಹೋದ ಮಣಿಯಂತೆ, ಪುಣ್ಯವು ನೀಗಿ ಭೂಮಿಗೆ ತಾರಾರೂಪದಲ್ಲಿ ಬಿದ್ದ ಜೀವಿಯಂತೆ, ದಾವಾಗ್ನಿಯಲ್ಲಿ ಬೆಂದ ವನಲತೆಯಂತೆ, ವಾಣಿಜ್ಯವು ಸೊರಗಿದ ಪೇಟೆಯ ಬೀದಿಯಂತೆ, ಮೋಡಕವಿದ ಬಾನಿನಂತೆ, ಮದ್ಯಪಾಯಿಗಳಿಲ್ಲದ ಪಾನಭೂಮಿಯಂತೆ, ನೀರಿಲ್ಲದ ಅರವಟ್ಟಿಗೆಯಂತೆ, ಬಿಲ್ಲಿಲ್ಲದ ಹೆದೆಯಂತೆ, ಯುದ್ಧದಲ್ಲಿ ಗಾಸಿಗೊಂಡ ಹೆಣ್ಣುಕುದುರೆಯಂತೆ, ಕಮಲಗಳನ್ನು ಕಳೆದುಕೊಂಡ ಕೊಳದಂತೆ, ಅಲಂಕಾರವಿಲ್ಲದ ಶರೀರದಂತೆ, ಸಿಂಹವಿಲ್ಲದ ಗುಹೆಯಂತೆ, ಸೂರ್ಯನಿಲ್ಲದ ಹಗಲಿನಂತೆ, ಜಡಿಮಳೆಯಿಂದ ಅಂದಗೆಟ್ಟ ಶುಕ್ಲಪಕ್ಷದ ರಾತ್ರಿಯಂತೆ ಕಳಾಹೀನವಾಗಿತ್ತು. ಇಲ್ಲಿಯ ಉಪಮೆಗಳ ವೈವಿಧ್ಯ-ಸಾರ್ಥಕ್ಯಗಳು ಸ್ವಯಂವೇದ್ಯ (೨.೧೧೪.೩-೨೧,೨೮-೨೯). ಮಹಾಕವಿಯಾದವನು ಸಮಾಸ-ವ್ಯಾಸಗಳೆರಡನ್ನೂ ಬಲ್ಲವನಾಗಿರಬೇಕೆಂಬ ಹಿನ್ನೆಲೆಯಲ್ಲಿ ಈ ಭಾಗವು ಮತ್ತೂ ಪರಿಭಾವನೀಯ.
To be continued.