ವಾಲ್ಮೀಕಿಮುನಿಗಳ ಅಲಂಕಾರಸೌಭಾಗ್ಯ—ಅತಿಶಯೋಕ್ತಿ, ರೂಪಕ

ಅತಿಶಯೋಕ್ತಿಯನ್ನು ಕಾವ್ಯಲೋಕದ ಜೀವಾಳವೆಂದೇ ಆನಂದವರ್ಧನನು ಆದರಿಸಿದ್ದಾನೆ. ಅಧ್ಯವಸಾಯ ಅಥವಾ ಮಿಗಿಲಾದ ಕಲ್ಪನೆಯೇ ಇದರ ಹೃದಯ. ಕವಿಪ್ರತಿಭೆಯು ಸಾದೃಶ್ಯ-ಸಂಭಾವ್ಯಗಳ ಗಡಿಗಳನ್ನೂ ಮೀರಿ ನಿರಂಕುಶವಾಗಿ ಅಪರಪ್ರಜಾಪತಿಯಂತೆ ಸೌಂದರ್ಯಮಹಾಕಾಶದಲ್ಲಿ ಅಗ್ನಿಹಂಸಗತಿಯಿಂದ ಹಾರುವುದು ಇಲ್ಲಿಯ ಸ್ವಾರಸ್ಯ. ಯಾವುದೇ ಅಲಂಕಾರದಲ್ಲಿ ಇಂಥ ಸೀಮೋಲ್ಲಂಘನಸತ್ತ್ವವಿಲ್ಲದಿದ್ದಲ್ಲಿ ಅದು ಹೊಳಪಿಲ್ಲದ ಒಡವೆಯಾಗಿ, ಅದನ್ನು ತೊಡಿಸಿಕೊಂಡ ಕಾವ್ಯವನಿತೆಗೆ ಬರಿಯ ಭಾರವಾಗಿ ತೋರದಿರದು. ಈ ಶಕ್ತಿಯನ್ನು “ಚಮತ್ಕಾರ”ವೆಂದೂ ಹೇಳಬಹುದು.

ವಾಲ್ಮೀಕಿರಾಮಾಯಣದಲ್ಲಿ ಮೇಲೆ ಕಾಣಿಸಿದ ಅತಿಶಯತೆಯು ಬಲುಮಟ್ಟಿನ ಅಲಂಕಾರಗಳ ಜೀವಾಳವಾಗಿದ್ದರೂ ತಾಂತ್ರಿಕವಾಗಿ ಅತಿಶಯೋಕ್ತಿಯೆನಿಸುವ ನಿದರ್ಶನಗಳು ವಿರಳ. ಸಹಜಸೌಂದರ್ಯದ ಹರಿಕಾರರಾದ ಆದಿಕವಿಗಳಿಗೆ ಉಪಮೋತ್ಪ್ರೇಕ್ಷೆಗಳ ಮೇಲಿರುವ ಅಕ್ಕರೆ ಸ್ವಲ್ಪ ಅಬ್ಬರದ್ದೆನ್ನಬಹುದಾದ ಅಳತೆಯ ಅತಿಶಯೋಕ್ತಿಯ ಕಡೆ ಇಲ್ಲ. ಹಾಗೆಂದು ಅವರು ಕಲ್ಪಿಸಿದ ಈ ಮಾದರಿಗಳಲ್ಲಿ ಅಂದವೇನೂ ಕುಂದಿಲ್ಲ.

ರಾಮನನ್ನು ಇಡಿಯ ಕಾವ್ಯದಲ್ಲಿ ಮತ್ತೆ ಮತ್ತೆ ಧರ್ಮದ ಸಾಕಾರವೆಂದು ಕೊಂಡಾಡಿದ್ದಾರೆ: ರಾಮೋ ವಿಗ್ರಹವಾನ್ ಧರ್ಮಃ (೩.೩೭.೧೩). ತಾಂತ್ರಿಕವಾಗಿ ಇದು ಅತಿಶಯೋಕ್ತಿಯಾದರೂ ತತ್ತ್ವತಃ ಇಲ್ಲಿರುವುದು ಸ್ವಭಾವೋಕ್ತಿಯೇ! ಇದು ಮಹರ್ಷಿಗಳ ಇಂಗಿತವೂ ಹೌದು. ಆದರೆ ಶಾಸ್ತ್ರನಿರ್ಬಂಧದ ಕಾರಣ ನಾವಿದನ್ನು ಅತಿಶಯೋಕ್ತಿಯೆನ್ನಬೇಕಿದೆ.

ಕಿಷ್ಕಿಂಧಾಕಾಂಡದಲ್ಲಿ ಸೀತಾವಿರಹಸಂತಪ್ತನಾದ ರಾಮನ ಪಾಲಿಗೆ ಪುಷ್ಪಪಲ್ಲವಪರಿಪ್ಲುತವಾದ ಅಶೋಕವು ಸುಡುಬೆಂಕಿಯಾಗಿ ತೋರಿತು:

ಅಶೋಕಸ್ತಬಕಾಂಗಾರಃ ಷಟ್ಪದಸ್ವನನಿಸ್ಸ್ವನಃ | (೪.೧.೨೯)

ಮಾಂ ಹಿ ಪಲ್ಲವತಾಮ್ರಾರ್ಚಿರ್ವಸಂತಾಗ್ನಿಃ ಪ್ರಧಕ್ಷ್ಯತಿ | (೪.೧೩೦)

ಈ ಉದಾಹರಣೆಯಲ್ಲಿ ಸಾವಯವರೂಪಕದ ಒತ್ತಾಸೆಯಿರುವುದಾದರೂ “ವಸಂತಾಗ್ನಿಃ ಪ್ರಧಕ್ಷ್ಯತಿ” (ವಸಂತವಹ್ನಿಯು ಸುಡುತ್ತದೆ) ಎಂಬ ಮಾತಿನಲ್ಲಿ ಸುಡುವಿಕೆಯೇ ಅತಿಶಯದ ಜೀವಾಳವಾಗಿದೆ. ಮತ್ತಿದು ಇಡಿಯ ಪದ್ಯವನ್ನು ಪರ್ಯಂತಭೂಮಿಯಲ್ಲಿ ನಡಸಿದೆ ಕೂಡ. ಆದುದರಿಂದ ಇದನ್ನು ತಾತ್ಪರ್ಯತಃ ಅತಿಶಯೋಕ್ತಿಯೆನ್ನಬೇಕು.

ಇದೇ ಕಾಂಡದಲ್ಲಿ ಮಳೆಗಾಲವನ್ನು ಬಣ್ಣಿಸುತ್ತ ರಾಮನು ಕೇದಗೆಯ ಹೂಗಳ ಪರಿಮಳವನ್ನೊಳಗೊಂಡ ಗಾಳಿಯನ್ನು ಬೊಗಸೆಯಲ್ಲಿ ತುಂಬಿಕೊಂಡು ಹೀರಬಹುದೆನ್ನುತ್ತಾನೆ:

ಶಕ್ಯಮಂಜಲಿಭಿಃ ಪಾತುಂ ವಾತಾಃ ಕೇತಕಗಂಧಿನಃ | (೪.೨೮.೮)

ಸರಲೋದಾರವಾದ ಈ ಅತಿಶಯೋಕ್ತಿಯ ಪ್ರತಿನವತೆ ಅಸಮಾನ. ಮುಂದೆ ಎಷ್ಟೋ ಕವಿಗಳು ಇದೇ ಜಾಡಿನಲ್ಲಿ ಬೆಳುದಿಂಗಳು, ಮುಂಜಾನೆಯ ಹೊಂಬೆಳಕು, ಸವಿಯುಲಿಯ ಇಂಪು-ಸೊಂಪುಗಳನ್ನೆಲ್ಲ ಬೊಗಸೆಯಲ್ಲಿ ತುಂಬಿ ತುಂಬಿ ಕುಡಿಯಬಹುದೆಂದು ಅತಿಶಯಗಳನ್ನು ರಚಿಸಿದ್ದಾರೆ.

ಸುಂದರಕಾಂಡದಲ್ಲಿ ಸೀತಾನ್ವೇಷಣತತ್ಪರನಾದ ಮಾರುತಿಯು ರಾವಣಾಂತಃಪುರದ ರಮಣಿಯರನ್ನು ನೋಡುವಾಗ ಪರಸ್ಪರ ತೋಳುಗಳನ್ನು ಬೆಸೆದುಕೊಂಡು ಮಲಗಿದ್ದ ಅವರು ಚೆಲುವಾದ ಸ್ತ್ರೀಮಾಲೆಯೇ ಆಗಿದ್ದರೆಂದು ಭಾವಿಸುವಲ್ಲಿ ರುಚಿರವಾದ ಅತಿಶಯವಿದೆ. ಇಲ್ಲಿಯ “ಗ್ರಥನ”ಶಬ್ದವೇ ಪ್ರಸ್ತುತಾಲಂಕಾರದ ಕೀಲಕ:

ಅನ್ಯೋನ್ಯಭುಜಸೂತ್ರೇಣ ಸ್ತ್ರೀಮಾಲಾ ಗ್ರಥಿತಾ ಹಿ ಸಾ | (೫.೯.೬೩)

ರಾವಣಸಂಹಾರದ ಬಳಿಕ ತನ್ನೆದುರು ನಿಂತ ಸೀತೆಯನ್ನು ರಾಮನು ಪರಿಪರಿಯಾಗಿ ಹಳಿದಾಗ ನಾಚಿದ ಅವಳು ಮೈಯೆಲ್ಲ ಹಿಂಜಿಕೊಂಡು ತನ್ನ ಮೈಯೊಳಗೇ ಹುದುಗಿಹೋದಳಂತೆ:

ಲಜ್ಜಯಾ ತ್ವವಲೀಯಂತೀ ಸ್ವೇಷು ಗಾತ್ರೇಷು ಮೈಥಿಲೀ | (೬.೧೧೭.೩೩)

ಹಿಂದೆ ಅಯೋಧ್ಯಾಕಾಂಡದಲ್ಲಿಯೂ ಭರತಾಗಮನಪ್ರಸಂಗದಲ್ಲಿ ಇಂಥ ಚಿತ್ರಣ ಬಂದಿತ್ತು. ಆದರೆ ಅದು ತಾಂತ್ರಿಕವಾಗಿ ಉತ್ಪ್ರೇಕ್ಷೆಯ ಕಕ್ಷೆಗೆ ಸಂದಿತ್ತು. ಇದೀಗ ಅದೇ ಕಲ್ಪನೆ ಅತಿಶಯೋಕ್ತಿಯಾಗಿದೆ. ಕಾವ್ಯಕರ್ಮದಲ್ಲಿ ಇವೆಲ್ಲ ದೃಷ್ಟಚರ.

ಉಪಮೆಯು ಅಲಂಕಾರಜಗತ್ತಿನ ಮಹಾಮಾತೆಯಾದರೆ ರೂಪಕವು ಈ ಲೋಕದ ಮಹಾರಾಜ. ಉತ್ಪ್ರೇಕ್ಷೆಯನ್ನು ಈ ಸಾಮ್ರಾಜ್ಯದ ಪಟ್ಟಮಹಿಷಿಯೆನ್ನಬಹುದು. ಅತಿಶಯೋಕ್ತಿಯಂತೂ ಸಮ್ರಾಜ್ಞಿಯೇ ಸರಿ. ಆದರೆ ಮತ್ತಾವ ಅಲಂಕಾರಗಳಿಗೂ ಇಲ್ಲದ ಅಂದ, ಅಡಕ, ಔನ್ನತ್ಯ, ಭವ್ಯತೆ ಮತ್ತು ಪರಿಣಾಮಪ್ರಜ್ವಲತೆಗಳು ರೂಪಕಕ್ಕುಂಟು. ಮಾತ್ರವಲ್ಲ, ಇದರ ನಿರ್ಮಾಣವೂ ತಾಂತ್ರಿಕವಾಗಿ ಸರಳ, ಸುಲಭ. ಈ ಎಲ್ಲ ಕಾರಣಗಳಿಂದಲೇ ಆಧುನಿಕಕವಿಗಳೂ ಸೇರಿದಂತೆ ಎಲ್ಲ ಕಾಲದ ಲೇಖಕರೂ ರೂಪಕಕ್ಕೆ ಅಗ್ರತಾಂಬೂಲವನ್ನಿತ್ತಿದ್ದಾರೆ. ಆದರೆ ಎಚ್ಚರವಿಲ್ಲದಿದ್ದಲ್ಲಿ ಏಕತಾನತೆಯ ಅಪಾಯ ತಪ್ಪದು.

ತಾಂತ್ರಿಕವಾಗಿ ಹೇಳುವುದಾದರೆ, ಪ್ರಕೃತಾಪ್ರಕೃತಗಳೆರಡಕ್ಕೂ (ಹೋಲಿಕೆ ಮತ್ತು ಹೋಲಿಸಲ್ಪಡುವ ವಸ್ತುಗಳು) ರೋಮಹರ್ಷಕವಾದ ಅಭೇದವನ್ನು ಅನಿರೀಕ್ಷಿತವೇಗದಲ್ಲಿ ತಂದಿರಿಸುವ ರೂಪಕದ ಸಾಮರ್ಥ್ಯ ಅವರ್ಣನೀಯ. ಸಾಮಾನ್ಯವಾಗಿ ವ್ಯಾವಹಾರಿಕಲೋಕದಲ್ಲಿ ಹೋಲಿಕೆಯೇ ಅಷ್ಟಾಗಿ ಕೈಗೆಟುಕದ ಮೌಲ್ಯ. ಏಕೆಂದರೆ ಅನುದಿನದ ಜಗತ್ತು ನಿಂತಿರುವುದೇ ದ್ವೈತಬುದ್ಧಿಯ ಮೇಲೆ. ಇದಕ್ಕಿಂತ ಸ್ವಲ್ಪ ಮೇಲ್ಮಟ್ಟಕ್ಕೇರುವ ಸಾದೃಶ್ಯಸಂವೇದನೆಯು ಅದೊಂದು ರೀತಿಯಲ್ಲಿ ವಿಶಿಷ್ಟಾದ್ವೈತತತ್ತ್ವವೆನ್ನಬಹುದು. ರೂಪಕವಾದರೋ ಒಮ್ಮೆಲೇ ಪರಮಾದ್ವೈತಸ್ತರಕ್ಕೇರುತ್ತದೆ. ಹೀಗಾಗಿ ಇದರ ಪರಿಣಾಮ ದೊಡ್ಡದು. ಅನುದಿನದ ಸುಷುಪ್ತ್ಯವಸ್ಥೆಯಲ್ಲಿ ಯಾವ ಅಭೇದಾನುಭವದ ಫಲವಾದ ಆನಂದವು ಉದಿಸಿಯೂ ಜಾಗ್ರತ್ತಿನಲ್ಲಿ ನಮ್ಮರಿವಿಗೆ ಬಾರದಂತೆ ಮರೆಯಾಗುವುದೋ, ಅದು ಕ್ಷಣಮಾತ್ರವಾದರೂ ಲವಮಾತ್ರವಾದರೂ ರೂಪಕಾಲಂಕಾರದ ಸಂವೇದನೆಯಲ್ಲಿ ನಮ್ಮೊಳಗೆ ಮಿಂಚಿ ಮಾಯವಾಗುವುದು. ಇಂಥ ಸಂವಿತ್ಸ್ಪಂದವು ವಕ್ರೋಕ್ತಿಪ್ರಪಂಚದ ಭಾಗ್ಯ. ಜೊತೆಗೆ ಸಮಾನಧರ್ಮವೆಂಬುದಿಲ್ಲಿ ಸಂಪೂರ್ಣವಾಗಿ ಧ್ವನಿತವಾಗುವ ಕಾರಣ ಧ್ವನನಶೀಲತೆಯ ಸಾಮರ್ಥ್ಯ ಮಿಗಿಲಾದುದು. ಇದೇ ಆನಂದದ ಮೀಟುಗೋಲೂ ಹೌದು. ಈ ಕಾರಣದಿಂದಲೇ ಪ್ರಾಯಿಕವಾಗಿ ಎಲ್ಲ ರೂಪಕಾಲಂಕಾರಗಳೂ ಗುಣೀಭೂತವ್ಯಂಗ್ಯಗಳೇ. ಇದು ಮಿಕ್ಕ ಅಲಂಕಾರಗಳಿಗೆ ಸುಲಭವಾಗಿ ದಕ್ಕದ ಸಾಮರ್ಥ್ಯ. ರೂಪಕದ ಈ ಶಕ್ತಿಯನ್ನು ಅರಿತೋ ಏನೋ ಪ್ರಾಯಶಃ ಕವಿಗಳೆಲ್ಲ ಮಿಗಿಲಾಗಿ ಇದನ್ನೇ ಆಶ್ರಯಿಸುತ್ತಾರೆ. ಪಾಶ್ಚಾತ್ಯಸಾಹಿತ್ಯಪ್ರಪಂಚದಲ್ಲಿ ರೂಪಕವನ್ನು ಒಂದು ಸ್ವತಂತ್ರಸಾಹಿತ್ಯಮೌಲ್ಯದ ಮಟ್ಟಕ್ಕೇ ಏರಿಸಿದ್ದಾರೆ. ಆದರೆ ಹೀಗೆ ರೂಪಕವನ್ನು ಎಣೆಮೀರಿ ಬಳಸಿದಾಗ ಅದೊಂದು ಬಗೆಯಲ್ಲಿ ದುಂದಿನ ವ್ಯವಹಾರವೂ ಆದೀತು; ಕಾವ್ಯಭಾಷೆಯಲ್ಲಿ ವೈವಿಧ್ಯವೂ ಸೊರಗೀತು. ಏನೇ ಆಗಲಿ, ರೂಪಕದ ಶಕ್ತಿ ಅಪಾರ. ನಮ್ಮ ಆಲಂಕಾರಿಕರು ಇದಕ್ಕೆ ಹೆಚ್ಚಿನ ಮನ್ನಣೆ ಸಲ್ಲಿಸದಿದ್ದರೂ ಹೆಚ್ಚಿನ ಅಂತರ್ದೃಷ್ಟಿಯ ಅಧ್ಯಯನವನ್ನು ಈ ನಿಟ್ಟಿನಲ್ಲಿ ಮಾಡದಿದ್ದರೂ ಕವಿಗಳು ಮಾತ್ರ ತಮಗೆ ಸಹಜವಾಗಿ ಸಿದ್ಧವಿರುವ ಪ್ರತಿಭಾದೃಷ್ಟಿಯ ಕಾರಣ ರೂಪಕದ ಮಹತ್ತ್ವವನ್ನು ಮನಗಂಡು ಅದನ್ನು ಚೆನ್ನಾಗಿಯೇ ದುಡಿಸಿಕೊಂಡು ಬಂದಿದ್ದಾರೆ. ಇಂಥ ಬೆಳೆವಣಿಗೆಗೆ ಬೇಕಾದ ಬುನಾದಿಯನ್ನು ಹಾಕಿಕೊಟ್ಟವರಲ್ಲಿ ಆದಿಕವಿಗಳ ಸ್ಥಾನ ಅನುಪಮ.

ಇದೀಗ ವಾಲ್ಮೀಕಿಮುನಿಗಳ ಕೆಲವೊಂದು ರೂಪಕಗಳನ್ನು ಪರಿಶೀಲಿಸೋಣ.

ಅಯೋಧ್ಯಾಕಾಂಡದ ರಾಮವನಗಮನದ ಸಂದರ್ಭದಲ್ಲಿ ಅಣ್ಣನನ್ನು ಹಿಂಬಾಲಿಸುವ ಸೌಮಿತ್ರಿಗೆ ತಾಯಿ ಸುಮಿತ್ರೆಯು ಮಾಡಿ ಕಳುಹುವ ಮಂಗಲಾಶಾಸನದಲ್ಲಿ ಹೃದ್ಯವಾದ ರೂಪಕವು ಹುದುಗಿದೆ:

ರಾಮಂ ದಶರಥಂ ವಿದ್ಧಿ ಮಾಂ ವಿದ್ಧಿ ಜನಕಾತ್ಮಜಾಮ್ |

ಅಯೋಧ್ಯಾಮಟವೀಂ ವಿದ್ಧಿ ಗಚ್ಛ ತಾತ ಯಥಾಸುಖಮ್ || (೨.೪೦.೯)

ರಾಮನನ್ನೇ ದಶರಥನೆಂದು ಭಾವಿಸು, ಸೀತೆಯನ್ನೇ ನಾನೆಂದು ಭಾವಿಸು, ಕಾಡನ್ನೇ ನಾಡೆಂದು ಭಾವಿಸು; ಕಂದ, ಹಾಯಾಗಿ ಹೋಗಿ ಬಾ. ಎಂದು ಸರಳವಾಗಿ ಹೇಳುವ ಸುಮಿತ್ರೆಯ ಮಾತಿನಲ್ಲಿ ಅದೆಷ್ಟು ಸಹಜವಾಗಿ ಈ ಅಲಂಕಾರವು ಸಂದಿದೆ! ಆದಿಕವಿಗಳ ಅನೂಹ್ಯಸರಳಸೌಂದರ್ಯಕ್ಕೂ ಪಾರಿಣಾಮಿಕಭವ್ಯತೆಗೂ ಈ ಶ್ಲೋಕವು ಸಮರ್ಥದೃಷ್ಟಾಂತ.

ಪ್ರಾಯಶಃ ಸಾವಯವರೂಪಕಾಲಂಕಾರಕ್ಕೆ ಆದಿಕವಿಗಳೇ ಆದ್ಯಾಯತನ. ರಾಮಾಯಣದಲ್ಲಿ ಇಂಥ ಹಲವು ರಚನೆಗಳಿವೆ. ಅವುಗಳ ಪೈಕಿ ದಶರಥವಿಲಾಪಕಾಲದಲ್ಲಿ ಹೊಮ್ಮಿರುವ ಶೋಕಸಾಗರದ ಸಮಗ್ರರೂಪಕವು ಹೃದಯಸ್ಪರ್ಶಿ. ಇಲ್ಲಿ ಪುತ್ರವಿಯೋಗವಿಹ್ವಲನಾದ ಅಸಹಾಯಕರಾಜನು ತಾನು ಈಜಲಾಗದೆ ಮುಳುಗುತ್ತಿರುವ ಶೋಕಸಮುದ್ರದ ಸೆಳವೇ ರಾಮವಿಯೋಗ, ಕುಸಿಯುವ ದಡವೇ ಸೀತಾವಿಯೋಗ, ಸಂಕಟದ ನಿಟ್ಟುಸಿರೇ ತೆರೆಸುಳಿಗಳು, ಕಣ್ಣೀರೇ ನೊರೆ, ಅಸಹಾಯಕತೆಯಿಂದ ಕೈಚೆಲ್ಲುವುದೇ ಜಲಚರಸಂಚಾರ, ವ್ಯಾಕುಲತೆಯ ಹಾಹಾಕಾರವೇ ಸಾಗರಘೋಷ, ದಿಕ್ಕೆಟ್ಟು ಕೆದರಿದ ತಲೆಗೂದಲೇ ಶೈವಲ, ಕುಟಿಲೆ ಕೈಕೇಯಿಯ ತಂತ್ರವೇ ಬಡವಾಗ್ನಿ, ಕುಬ್ಜೆ ಮಂಥರೆಯ ಮಸಲತ್ತೇ ಮೊಸಳೆ, ಸಂತಾಪಾಶ್ರುವೇ ಲವಣೋದಕವೆಂದು ಪರಿಪರಿಯಾಗಿ ಹಲುಬುತ್ತಾನೆ:

ರಾಮಶೋಕಮಹಾವೇಗಃ ಸೀತಾವಿರಹಪಾರಗಃ | (೨.59.33)

ಶ್ವಸಿತೋರ್ಮಿಮಹಾವರ್ತೋ ಬಾಷ್ಪಫೇನಜಲಾವಿಲಃ |

ಬಾಹುವಿಕ್ಷೇಪಮೀನೌಘೋ ವಿಕ್ರಂದಿತಮಹಾಸ್ವನಃ || (೨.59.34)

ಪ್ರಕೀರ್ಣಕೇಶಶೈವಾಲಃ ಕೈಕೇಯೀವಡವಾಮುಖಃ |

ಮಮಾಶ್ರುವೇಗಪ್ರಭವಃ ಕುಬ್ಜಾವಾಕ್ಯಮಹಾಗ್ರಹಃ || (೨.59.35)

ಕವಿನಿಬದ್ಧಪ್ರೌಢೋಕ್ತಿಯಾಗಿರುವ ಈ ಭಾಗವು ಕವಿಪ್ರೌಢೋಕ್ತಿಯಾಗಿದ್ದಲ್ಲಿ ಮತ್ತೂ ಔಚಿತ್ಯವಿರುತ್ತಿತ್ತು. ಏಕೆಂದರೆ ದುಃಖದಲಿತನಾಗಿದ್ದ ದಶರಥನು ಇಷ್ಟು ವ್ಯವಸ್ಥಿತವಾದ ಸಾವಯವರೂಪಕಪ್ರಪಂಚವನ್ನು ತೆರೆದಿಡುವುದು ಅಷ್ಟಾಗಿ ಸಂಭಾವ್ಯವೆನಿಸದು.

ವಾಲ್ಮೀಕಿಮುನಿಗಳು ಕೆಲವೊಮ್ಮೆ ಶಬ್ದವನ್ನನುಸರಿಸಿ ಅರ್ಥಾಲಂಕಾರವನ್ನು ರೂಪಿಸುವುದುಂಟು. ಇದು ಬಲುಮಟ್ಟಿಗೆ ವಿರಳವೇ. ಆದರೆ ಸಾಮಾನ್ಯವಾಗಿ ಸತ್ಕವಿಲೋಕವು ರೂಪಕನಿರ್ಮಾಣಕಾಲದಲ್ಲಿ ಇಂಥ ಜಾಡನ್ನು ಅನುಸರಿಸುತ್ತದೆ. ಪ್ರಕೃತಾಪ್ರಕೃತವಸ್ತುಗಳ ವಾಚಕಗಳಲ್ಲಿ ವರ್ಣಮೈತ್ರಿಯೊದಗಿದಾಗ ಅರ್ಥಾಲಂಕಾರವೆನಿಸಿದ ರೂಪಕದಲ್ಲಿ ಅದೊಂದು ಬಗೆಯ ಶಬ್ದಾಲಂಕಾರಸ್ವಾರಸ್ಯವೂ ಮೈದುಂಬಿಕೊಂಡು ಇಡಿಯ ಬಂಧವು ಅತಿಶಯಿಸುತ್ತದೆ. ಅಂಥ ಒಂದು ಅಡಕವಾದ ರೂಪಕ: ವ್ಯಸನವಾಗುರಾ (೩.೬೭.೨೭). ರಾವಣನ ಸೆರೆಗೆ ಸಿಲುಕಿದ ಸೀತೆಯು ತನ್ನನ್ನು ರಕ್ಷಿಸಲು ಬಂದು ಗತಾಯುವಾದ ಜಟಾಯುವನ್ನು ಕಂಡು ದುಃಖಿಸುತ್ತಾ ತಾನೀಗ ಭೀಕರಸಂಕಟದ ಬಲೆಯಲ್ಲಿ ಸಿಲುಕಿದೆನೆಂದು ಹಳಹಳಿಸುತ್ತಾಳೆ. ಸಾಮಾನ್ಯವಾಗಿ ಬಲೆಗೆ ಸಿಲುಕುವ ಹಕ್ಕಿಗಳಿಗೆ ಬದಲಾಗಿ, ತನಗಾಗಿ ಬಲಿಯಾದ ಹಕ್ಕಿಗಿಂತ ಮಿಗಿಲಾಗಿ ತಾನೇ ಬಲೆಗೆ ಬಿದ್ದೆನೆಂದು ಸೀತೆಯು ಭಾವಿಸುವಲ್ಲಿ ಈ ರೂಪಕದ ಔಚಿತ್ಯ ನಿರತಿಶಯವಾಗಿದೆ. ಅಲ್ಲದೆ ಕವಿನಿಬದ್ಧಪ್ರೌಢೋಕ್ತಿಯಾಗಿ ಹೊಮ್ಮಿದ ಈ ಸೊಲ್ಲಿನ ಅಂದ-ಅಡಕಗಳೂ ಮೆಚ್ಚುವಂತಿವೆ.

ಕಿಷ್ಕಿಂಧಾಕಾಂಡದಲ್ಲಿ ಬರುವ ಒಂದು ರೂಪಕವು ತನ್ನ ವಿನೂತನತೆಯ ಕಾರಣ ಸ್ಮರಣೀಯವಾಗಿದೆ. ತಾರೆಯು ವಾಲಿಗೆ ಸುಗ್ರೀವನಲ್ಲಿ ವೈರವು ಸಲ್ಲದೆಂದು ಹಿತವನ್ನು ಹೇಳುವಾಗ ಶ್ರೀರಾಮನನ್ನು ವರ್ಣಿಸುತ್ತಾಳೆ. ಆತನ ಗುಣಗಳನ್ನು ಗಣಿಸುವಾಗ ಅವನು ಸಜ್ಜನರಿಗೆ ಆಶ್ರಯತರುವೆಂದು ಹೃದಯಂಗಮವಾಗಿ ಹೆಸರಿಸುತ್ತಾಳೆ: ನಿವಾಸವೃಕ್ಷಃ ಸಾಧೂನಾಮ್ (೪.೧೫.೧೯). ಇಲ್ಲಿ ಸಜ್ಜನರೇ ಹಕ್ಕಿಗಳೆಂಬ ಧ್ವನಿಯು ಸಹಜವಾಗಿ ಉನ್ಮೀಲಿಸುತ್ತದೆ. ಸಾಹಿತ್ಯಪ್ರಪಂಚದಲ್ಲಿ ಮುಂದೆ “ನಿವಾಸವೃಕ್ಷ”ವೆಂಬ ರೂಪಕವು ವ್ಯಾಪಕವಾಗಿ ಬೆಳೆದುಬಂದದ್ದನ್ನಿಲ್ಲಿ ನೆನೆಯಬಹುದು.

ರಾಮನ ಬಾಣಕ್ಕೆ ತುತ್ತಾದ ವಾಲಿಯು ಆತನನ್ನು ಪರಿಪರಿಯಾಗಿ ನಿಂದಿಸುವಾಗ ತಾನು ಧರ್ಮವೆಂಬ ಅಂಕುಶವಿಲ್ಲದ ರಾಮನೆಂಬ ಮತ್ತಮಾತಂಗದಿಂದ ತುಳಿಯಲ್ಪಟ್ಟೆನೆಂಬ ಆಕ್ಷೇಪವನ್ನು ಮಾಡುತ್ತಾನೆ:

ತ್ಯಕ್ತಧರ್ಮಾಂಕುಶೇನಾಹಂ ನಿಹತೋ ರಾಮಹಸ್ತಿನಾ | (೪.೧೭.೪೩)

ಇದರ ಸೌಂದರ್ಯ-ಸ್ವಾರಸ್ಯಗಳು ಸ್ವಯಂವೇದ್ಯ. ವಿಶೇಷತಃ ದೋಷಿಯು ದಂಡನೆಗೆ ತುತ್ತಾದಾಗ ಅಸಹಾಯಕತೆಯಿಂದ ಕನಲಿ ಆಕ್ರೋಶಿಸುವ ಹಿನ್ನೆಲೆಯಲ್ಲಿ ಈ ಮಾತು ಮತ್ತೂ ಮನೋಗ್ರಾಹಿ.

ಸೋದರನ ವಧೆಯ ಬಳಿಕ ಸುಗ್ರೀವನು ಪಶ್ಚಾತ್ತಾಪದಿಂದ ವ್ಯಥಿಸುವಾಗ ಅವನ ಬಾಯಲ್ಲಿ ವಾಲ್ಮೀಕಿಮುನಿಗಳು ಸಾವಯವರೂಪಕಪ್ರಧಾನವಾದ ಶ್ಲೋಕವೊಂದನ್ನು ಹೇಳಿಸುತ್ತಾರೆ. ಇದು ಕವಿಪ್ರೌಢೋಕ್ತಿಯಾಗಿದ್ದಲ್ಲಿ ಮತ್ತೂ ನೈಜತೆಯಿಂದ ಸೊಗಯಿಸುತ್ತಿತ್ತು. ಆದರೂ ಇಲ್ಲಿಯ ಚಿತ್ರಣ ಪರಿಣಾಮರಮಣೀಯ:

ಸೋದರ್ಯಘಾತಾಪರಗಾತ್ರವಾಲಃ

ಸಂತಾಪಹಸ್ತಾಕ್ಷಿಶಿರೋವಿಷಾಣಃ |

ಏನೋಮಯೋ ಮಾಮಭಿಹಂತಿ ಹಸ್ತೀ

ದೃಪ್ತೋ ನದೀಕೂಲಮಿವ ಪ್ರವೃದ್ಧಃ || (೪.೨೪.೧೭)

ಅಣ್ಣನ ಸಾವಾಗಿ ಮೈದಳೆದು, ಸಂಕಟವೆಂಬ ಸೊಂಡಿಲು-ದಂತಗಳನ್ನು ಹೊಂದಿ, ನನ್ನ ಪಾತಕವೆಂಬ ಮದ್ದಾನೆಯು ನನ್ನನ್ನು ನದೀತೀರವನ್ನು ಕೆಡಹುವಂತೆ ತಿವಿಯುತ್ತಿದೆಯೆಂದು ಸುಗ್ರೀವನು ಶೋಕಿಸುತ್ತಾನೆ.

ಇಲ್ಲಿ ಕಡೆಯ ಪಾದವು ಉಪಮೆಯೆಂಬಂತೆ ತೋರಿದರೂ ಪಾತಕಹಸ್ತಿಯ ಸಾವಯವರೂಪಕವೇ ಪ್ರಧಾನವಾಗಿ ಸ್ಫುರಿಸುವ ಕಾರಣ ಇದನ್ನು ಉಪಮೆಯ ವಲಯಕ್ಕೆ ಸೇರಿಸಿಲ್ಲ.    

ಯುದ್ಧಕಾಂಡದಲ್ಲಿ ರೂಪಕಾಲಂಕಾರವು ಸಾವಯವರೂಪಕರೂಪದಿಂದ ಹಲವು ಕಡೆ ವ್ಯಾಪಿಸಿಕೊಂಡಿದೆ. ಇದು ವಾಲ್ಮೀಕಿಗಳ ಪ್ರಿಯಪಥವೆಂದೂ ಹೇಳಬಹುದು. ಅಲ್ಲಿಯ ಕೆಲವು ಶ್ಲೋಕಗಳನ್ನು ಮನನಿಸೋಣ:

ಧನುರ್ಜ್ಯಾತಂತ್ರಿಮಧುರಂ ಹಿಕ್ಕಾತಾಲಸಮನ್ವಿತಮ್ |

ಮಂದಸ್ತನಿತಸಂಗೀತಂ ಯುದ್ಧಗಾಂಧರ್ವಮಾಬಭೌ || (೬.೫೨.೨೫)

ಲಂಕಾಸಂಗ್ರಾಮವು ಮೊದಲಾದಾಗ ವಾನರವೀರರ ಅಬ್ಬರಕ್ಕೆ ತಬ್ಬಿಬ್ಬಾದ ಅಸುರಸೇನೆಯು ತನ್ನ ಪ್ರತಿರೋಧವನ್ನು ತುಮ್ಬ ತಗ್ಗಿಸಿಕೊಂಡಿತು. ಆಗ ಅವರ ಬಿಲ್ಲಿನ ಹೆದೆಗಳ ಮೀಟು ತಂತ್ರೀವಾದ್ಯಕೋಮಲವಾದುವು, ಭಯದ ಬಿಕ್ಕಳಿಕೆಗಖೇ ತಾಲಾಸ್ಫಾಲಕ್ಕೆ ಸಂವಾದಿಯೆನಿಸದುವು, ಅಂಜಿಕೆಯ ಪಿಸುಗುಟ್ಟುವಿಕೆಯೇ ಮಂದ್ರಸ್ಥಾಯಿಯ ಮೆಲ್ಲುಲಿಯಾಯಿತು. ಹೀಗೆ ವಾನರವೀರರ ಮುಂದೆ ರಾಕ್ಷಸವೀರರ ಯುದ್ಧ ಸಂಗೀತದಂತಾಯಿತು. ರಣರಂಗದಲ್ಲಿಯೂ ರಸರಂಗದ ಪ್ರಸ್ತಾವವನ್ನು ಸಂದರ್ಭಶುದ್ಧಿಗೆ ಚ್ಯುತಿಯಿಲ್ಲದೆ ತಂದ ಆದಿಕವಿಗಳ ಚಾತುರ್ಯ ಪ್ರೇಕ್ಷಣೀಯ.

ಪ್ರಹಸ್ತವಧೆಯ ಸಂದರ್ಭದಲ್ಲಿ ಸಾಗಿದ ಭೀಕರಸಂಗ್ರಾಮವನ್ನು ಆದಿಕವಿಗಳು ಮೈ-ಮನಗಳು ಜುಮುಗುಟ್ಟುವಂತೆ ವರ್ಣಿಸಿದ್ದಾರೆ. ಇಲ್ಲಿಯ ರಣತರಂಗಿಣಿಯ ಸಾವಯವರೂಪಕವಂತೂ ಅವಿಸ್ಮರಣೀಯ:

ಹತವೀರೌಘವಪ್ರಾಂ ತು ಭಗ್ನಾಯುಧಮಹಾದ್ರುಮಾಮ್ |

ಶೋಣಿತೌಘಮಹಾತೋಯಾಂ ಯಮಸಾಗರಗಾಮಿನೀಮ್ ||

ಯಕೃತ್ಪ್ಲೀಹಮಹಾಪಂಕಾಂ ವಿನಿಕೀರ್ಣಾಂತ್ರಶೈವಲಾಮ್ |

ಭಿನ್ನಕಾಯಶಿರೋಮೀನಾಮಂಗಾವಯವಶಾದ್ವಲಾಮ್ ||

ಗೃಧ್ರಹಂಸಗಣಾಕೀರ್ಣಾಂ ಕಂಕಸಾರಸಸೇವಿತಾಮ್ |

ಮೇದಃಫೇನಸಮಾಕೀರ್ಣಾಮಾರ್ತಸ್ತನಿತನಿಸ್ಸ್ವನಾಮ್ ||

ತಾಂ ಕಾಪುರುಷದುಸ್ತಾರಾಂ ಯುದ್ಧಭೂಮಿಮಯೀಂ ನದೀಮ್ |

ರಾಕ್ಷಸಾಃ ಕಪಿಮುಖ್ಯಾಶ್ಚ ತೇರುಸ್ತಾಂ ದುಸ್ತರಾಂ ನದೀಮ್ || (೬.೫೮.೨೯-೩೩)

ಮೃತವೀರರೆಂಬ ದಡಗಳಿಂದ, ಮುರಿದ ಕೈದುಗಳೆಂಬ ತೇಲಿಬರುವ ಮರಗಳಿಂದ, ರಕ್ತಪ್ರವಾಹದಿಂದ, ಪಿತ್ತಕೋಶ-ಮೇದೋಜೀರಕಗಳೆಂಬ ಕೆಸರಿನಿಂದ, ಚೆಲ್ಲಾಪಿಲ್ಲಿಯಾದ ಕರುಳೆಂಬ ಪಾಚಿಯಿಂದ, ಕತ್ತರಿಸಲ್ಪಟ್ಟ ಕೈ-ಕಾಲುಗಳೆಂಬ ಮೀನುಗಳಿಂದ, ಹಾರಿಬರುವ ಹದ್ದುಗಳೆಂಬ ಹಂಸಗಳಿಂದ, ರಣಹದ್ದುಗಳೆಂಬ ಕೊಕ್ಕರೆಗಳಿಂದ, ಕೊಬ್ಬೆಂಬ ನೊರೆಯಿಂದ, ಚೀತ್ಕಾರವೆಂಬ ಮೊರೆತದಿಂದ ಭೀಕರವಾದ ಸಂಗ್ರಾಮಸ್ರವಂತಿಯನ್ನು ಹೇಡಿಗಳು ದಾಟಲಾರರು. ಅದು ಹೇಗೋ ಕಪಿ-ರಾಕ್ಷಸವೀರರು ಅದನ್ನು ದಾಟಿದರು!

ಶ್ರೀರಾಮನೇ ಅಪ್ರತಿಮಪ್ರಾಕ್ರಮದಿಂದ ಹೋರಾಡುತ್ತಿರುವಾಗ ಆತನ ವೀರವಿಹಾರವು ಕಾಲಚಕ್ರಸದೃಶವಾಗಿ ವೈರಿಗಳ ಪಾಲಿಗೆ ತೋರಿತಂತೆ. ಇದನ್ನು ಆದಿಕವಿಗಳು ಸಾವಯವರೂಪಕವಾಗಿ ಹೀಗೆ ವರ್ಣಿಸಿದ್ದಾರೆ:

ಶರೀರನಾಭಿ ಸತ್ತ್ವಾರ್ಚಿಃ ಶರಾರಂ ನೇಮಿಕಾರ್ಮುಕಮ್ |

ಜ್ಯಾಘೋಷತಲನಿರ್ಘೋಷಂ ತೇಜೋಬುದ್ಧಿಗುಣಪ್ರಭಮ್ || (೫.೧೪.೧೫)

ದಿವ್ಯಾಸ್ತ್ರಗುಣಪರ್ಯಂತಂ ನಿಘ್ನಂತಂ ಯುಧಿ ರಾಕ್ಷಸಾನ್ |

ದದೃಶೂ ರಾಮಚಕ್ರಂ ತತ್ಕಾಲಚಕ್ರಮಿವ ಪ್ರಜಾಃ || (೬.೯೭.೨೯-೩೦)

ರಾಮಚಕ್ರಕ್ಕೆ ಅವನ ಒಡಲೇ ಕೇಂದ್ರವಾಗಿತ್ತು, ಬಾಣಗಳೇ ಅರಗಳಾಗಿದ್ದವು, ಬಿಲ್ಲೇ ನೇಮಿಯಾಗಿತ್ತು, ಬಲವೇ ಬೆಂಕಿಯಾಗಿತ್ತು, ಬಿಲ್ಲಿನ ಹೆದೆಯ ಸದ್ದೇ ಚಕ್ರಚೀತ್ಕೃತಿಯಾಗಿತ್ತು, ಆತನ ಬುದ್ಧಿಪರಾಕ್ರಮಗಳೇ ಪ್ರಭೆಗಳಾಗಿದ್ದುವು.

ರಾವಣಸಂಹಾರದ ಬಳಿಕ ವಿಭೀಷಣನು ವಿಲಪಿಸುತ್ತಾ ಅಣ್ಣನ ಗುಣಗಳನ್ನು ಕೊಂಡಾಡುವಾಗ ಮಹರ್ಷಿಗಳು ಸಾವಯವರೂಪಕಗಳ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ: ಧೈರ್ಯವೆಂಬ ಚಿಗುರನ್ನು, ಛಲವೆಂಬ ಹೂಗಳನ್ನು, ತಪಸ್ಸೆಂಬ ದಾರ್ಢ್ಯವನ್ನು, ಶೌರ್ಯವೆಂಬ ಬೇರನ್ನು ತಳೆದು ಬೆಳೆದ ರಾಕ್ಷಸರಾಜವೃಕ್ಷವನ್ನು ರಾಘವಮಾರುತವು ಮುರಿದುಹಾಕಿತು; ಪರಾಕ್ರಮದಂತವನ್ನು, ಅನುಗ್ರಹಶುಂಡವನ್ನು, ಸತ್ಕುಲೀನತೆಯೆಂಬ ಪೂರ್ವಕಾಯವನ್ನು, ಕೋಪವೆಂಬ ಅಪರಗಾತ್ರವನ್ನು ತಳೆದ ರಾವಣಮಾತಂಗವು ರಾಮಸಿಂಹದಿಂದ ಸಿಗಿದುಹೋಯಿತು; ಪರಾಕ್ರಮಜ್ವಾಲೆಯಿಂದ, ನಿಶ್ಶ್ವಾಸಧೂಮದಿಂದ, ಪ್ರಾಬಲ್ಯಪ್ರತಾಪದಿಂದ ಬೆಳಗುತ್ತಿದ್ದ ರಾವಣಾಗ್ನಿಯು ರಾಮಜಲಧರದ ಮಳೆಯಿಂದ ಆರಿಹೋಯಿತು; ಸೇನಾಶೃಂಗವನ್ನು ತಳೆದು ಚಾಪಲ್ಯವೆಂಬ ಕಿವಿ-ಕಣ್ಣುಗಳಿಂದ ಕೂಡಿದ ವೈರಿಭೀಕರವಾದ ರಾವಣವೃಷಭವನ್ನು ರಾಮಶಾರ್ದೂಲವು ಕೊಂದುಹಾಕಿತು (೬.೧೧೨.೧೦-೧೩) ... ಹೀಗೆ ಸಾಗುವ ಅಸಂಖ್ಯರೂಪಕಪರಂಪರೆಯು ಪ್ರತಿಯೊಂದು ಹಂತದಲ್ಲಿಯೂ ಸಮಗ್ರಚಿತ್ರಣವನ್ನು ಕೊಡುತ್ತದೆ. ಇದರ ವಿಸ್ತಾರವನ್ನೇ ಗ್ರೀಕರ ಆದಿಕವಿ ಹೋಮರನ “ಮಹೋಪಮೆ”ಯೆಂದು ಹೆಸರಾದ ಹೋಲಿಕೆಗಳಲ್ಲಿ ಕಾಣಬಹುದು.  

ಹೀಗೆ ರಾಮಾಯಣದ ರೂಪಕಗಳು ಮನಮುಟ್ಟುವಂತೆ ರಚಿತವಾಗಿವೆ.

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Karnataka’s celebrated polymath, D V Gundappa brings together in the eighth volume of reminiscences character sketches of his ancestors teachers, friends, etc. and portrayal of rural life. These remarkable individuals hailing from different parts of South India are from the early part of the twentieth century. Written in Kannada in the 1970s, these memoirs go beyond personal memories and offer...