ಹೀಗೆ ಆನಂದವರ್ಧನನ ಮತ್ತು ಅವನ ಕೃತಿಯ ಮೌಲಿಕತೆಯನ್ನು ಮನಗಂಡ ಬಳಿಕ ಧ್ವನ್ಯಾಲೋಕವು ಪ್ರತಿಪಾದಿಸುವ ಕೆಲವು ಅಮೂಲ್ಯಸಂಗತಿಗಳನ್ನು ಗಮನಿಸಬಹುದು.[1] ಈಗಾಗಲೇ ಧ್ವನ್ಯಾಲೋಕವನ್ನು ಕುರಿತು ಕನ್ನಡದಲ್ಲಿ ವಿಪುಲವಾದ ಕೃಷಿ ನಡೆದಿರುವುದರಿಂದ ಆ ಗ್ರಂಥದ ಮುಖ್ಯಪ್ರಮೇಯಗಳನ್ನಷ್ಟೇ ಇಲ್ಲಿ ನಿರೂಪಿಸುವುದಾಗುತ್ತದೆ. ಇದಾದರೂ ನನಗೆ ಕಂಡುಬಂದ ಸ್ವಾರಸ್ಯಗಳನ್ನು ಒಂದೆಡೆ ಕ್ರೋಡೀಕರಿಸುವ ಪ್ರಯತ್ನವಷ್ಟೇ.
ಅಲಂಕಾರ
ಅಲಂಕಾರತತ್ತ್ವದ ನಿರೂಪಣೆಯು ಧ್ವನ್ಯಾಲೋಕದ ಪ್ರಧಾನ ಉದ್ದೇಶವಲ್ಲದಿದ್ದರೂ ಅದನ್ನು ಕುರಿತು ಆನಂದವರ್ಧನ ಮೌಲಿಕವಾದ ಹೊಳಹುಗಳನ್ನು ನೀಡಿದ್ದಾನೆ. ರಸ-ಭಾವಗಳಿಗೆ ಅನುಗುಣವಾಗಿ ನುಡಿಬೆಡಗನ್ನು ರೂಪಿಸುವುದರಿಂದ ಮಾತ್ರ ಅಲಂಕಾರಕ್ಕೆ ಅಲಂಕಾರತ್ವವನ್ನು ದೊರಕಿಸಲು ಸಾಧ್ಯವೆಂಬುದು ಸಾರ್ವತ್ರಿಕಸತ್ಯ:
ರಸಭಾವಾದಿತಾತ್ಪರ್ಯಮಾಶ್ರಿತ್ಯ ವಿನಿವೇಶನಮ್ |
ಅಲಂಕೃತೀನಾಂ ಸರ್ವಾಸಾಮಲಂಕಾರತ್ವಸಾಧನಮ್ || (೨.೬)
ಇದೇ ರೀತಿಯಲ್ಲಿ ಕೇವಲ ರಸಾವೇಶದ ಪ್ರಭಾವದಿಂದ ಯಾವುದರ ನಿರ್ಮಿತಿ ಶಕ್ಯವಾಗುವುದೋ, ಯಾವುದನ್ನು ನಿರ್ಮಿಸಲು ಪ್ರತ್ಯೇಕವಾದ ಪ್ರಯತ್ನ ಬೇಕಿಲ್ಲವೋ, ಅದನ್ನಷ್ಟೇ ಅಲಂಕಾರವೆಂದು ವ್ಯವಹರಿಸುವುದು ಸೂಕ್ತವೆನ್ನುತ್ತಾನೆ:
ರಸಾಕ್ಷಿಪ್ತತಯಾ ಯತ್ರ ಬಂಧಃ ಶಕ್ಯಕ್ರಿಯೋ ಭವೇತ್ |
ಅಪೃಥಗ್ಯತ್ನನಿರ್ವರ್ತ್ಯಃ ಸೋऽಲಂಕಾರೋ ಧ್ವನೌ ಮತಃ || (೨.೧೭)
ಇಲ್ಲಿ ಆನಂದವರ್ಧನನು ಬಳಸಿರುವ “ಅಪೃಥಗ್ಯತ್ನನಿರ್ವರ್ತ್ಯಃ” ಎಂಬ ಮಾತು ನಿಜಕ್ಕೂ ಅಲಂಕಾರಗಳ ಆಂತರ್ಯವನ್ನೇ ನಮ್ಮ ಮುಂದೆ ತೆರೆದಿಟ್ಟಿದೆ. ಸಹಜಾಲಂಕಾರಗಳನ್ನು ಕುರಿತು ವಿವರಿಸುತ್ತ, “ಅವು ರಸಸಮಾಧಿಯಲ್ಲಿ ಲೀನನಾಗಿರುವ ಪ್ರತಿಭಾಶಾಲಿಯಾದ ಕವಿಗೆ ನಾನು ಮುಂದು ತಾನು ಮುಂದೆ ಎಂಬಂತೆ ಸ್ಫುರಿಸುತ್ತವೆ” ಎನ್ನುತ್ತಾನೆ:
ರಸಸಮಾಹಿತಚೇತಸಃ ಪ್ರತಿಭಾನವತಃ ಕವೇಃ ಅಹಂಪೂರ್ವಿಕಯಾ ಪರಾಪತಂತಿ (೨.೧೭ ವೃತ್ತಿ)
ರಸಕ್ಕೆ ಅನುಗುಣವಾಗಿ ಅಲಂಕಾರಗಳನ್ನು ಹೊಂದಿಸಬೇಕೆಂದು ಹೇಳಿದ ಬಳಿಕ ಅದನ್ನು ಸಾಧಿಸುವ ವಿಧಾನವನ್ನೂ ಆನಂದವರ್ಧನ ತಿಳಿಸುತ್ತಾನೆ. ಅವನ ಪ್ರಕಾರ ಅಲಂಕಾರಗಳನ್ನು ರಸಪರಾಯಣವಾಗಿಯೇ—ರಸಪೋಷಕವಾಗಿಯೇ—ರಚಿಸಬೇಕು. ಅವೇ ಪ್ರಧಾನವೆಂಬಂತೆ ಎಂದೂ ಕಲ್ಪಿಸಬಾರದು. ಸಮಯವರಿತು ಬಳಸಬೇಕು, ಸಮಯವರಿತು ಬಿಡಬೇಕು. ಉಪಯೋಗಿಸಿದಾಗ ಕೂಡ ಅತಿಯಾಗಿ ಬೆಳೆಸಬಾರದು. ಒಂದು ವೇಳೆ ವಿಸ್ತರಿಸಿದರೂ ರಸಕ್ಕೆ ಹೊಂದುವಂತೆ ಎಚ್ಚರ ವಹಿಸಬೇಕು:
ವಿವಕ್ಷಾತತ್ಪರತ್ವೇನ ನಾಂಗಿತ್ವೇನ ಕಥಂಚನ |
ಕಾಲೇ ಚ ಗ್ರಹಣತ್ಯಾಗೌ ನಾತಿನಿರ್ವಹಣೈಷಿತಾ ||
ನಿರ್ವ್ಯೂಢಾವಪಿ ಚಾಂಗತ್ವೇ ಯತ್ನೇನ ಪ್ರತ್ಯವೇಕ್ಷಣಮ್ |
ರೂಪಕಾದೇರಲಂಕಾರವರ್ಗಸ್ಯಾಂಗತ್ವಸಾಧನಮ್ || (೨.೧೯, ೨೦)
ಎಲ್ಲಕ್ಕಿಂತ ಮುಖ್ಯವಾಗಿ ಅತಿಶಯತ್ವವೇ ಎಲ್ಲ ಅಲಂಕಾರಗಳ ಪ್ರಧಾನಧರ್ಮವೆಂಬುದು ಅಮೂಲ್ಯವಾದ ಒಳನೋಟ:
ಅತಿಶಯೋಕ್ತಿಗರ್ಭತಾ ಸರ್ವಾಲಂಕಾರೇಷು ಶಕ್ಯಕ್ರಿಯಾ (೩.೩೭ ವೃತ್ತಿ)[2]
ದೋಷ, ರಸಭಂಗ ಮತ್ತು ರಸವಿರೋಧಿಗಳು
ಕಾವ್ಯದ ಆಕರಗಳಲ್ಲಿ ಪ್ರಮುಖವಾದದ್ದು ಪ್ರತಿಭೆ. ಇದು ಕವಿಯ ನೈಜಧರ್ಮಗಳಲ್ಲೊಂದು. ಯಾವ ಕೃತಕವಿಧಾನದಿಂದಲೂ ಅದನ್ನು ಉನ್ಮೀಲಿಸಲು ಸಾಧ್ಯವಿಲ್ಲ. ಗಣನೀಯಪ್ರಮಾಣದಲ್ಲಿ ಪ್ರತಿಭೆಯಿದ್ದರೆ ಅದನ್ನು ವ್ಯುತ್ಪತ್ತಿ ಮತ್ತು ಅಭ್ಯಾಸಗಳ ಮೂಲಕ ಒಂದಿಷ್ಟು ಪರಿಷ್ಕರಿಸಬಹುದು. ಪ್ರತಿಭೆಯೊಂದಿದ್ದರೆ ಅದು ಕವಿಯ ಮಿಕ್ಕ ಕೊರತೆಗಳನ್ನು ಮರೆಗೊಳಿಸುತ್ತದೆ. ಆನಂದವರ್ಧನನ ಮಾತಿನಲ್ಲಿ ಹೇಳುವುದಾದರೆ, “ಕವಿಯ ಅವ್ಯುತ್ಪತ್ತಿಯಿಂದ ಸಂಭವಿಸಿದ ದೋಷವನ್ನು ಆತನ ಶಕ್ತಿ ಮುಚ್ಚುತ್ತದೆ. ಪ್ರತಿಭಾರಾಹಿತ್ಯದಿಂದ ಏನಾದರೂ ದೋಷ ಸಂಭವಿಸಿದರೆ ಅದು ತತ್ಕ್ಷಣ ಕಣ್ಣಿಗೆ ಬೀಳುತ್ತದೆ”:
ಅವ್ಯುತ್ಪತ್ತಿಕೃತೋ ದೋಷಃ ಶಕ್ತ್ಯಾ ಸಂವ್ರಿಯತೇ ಕವೇಃ |
ಯಸ್ತ್ವಶಕ್ತಿಕೃತಸ್ತಸ್ಯ ಸ ಝಟಿತ್ಯವಭಾಸತೇ || (೩.೬ ವೃತ್ತಿಯಲ್ಲಿಯ ಪರಿಕರಶ್ಲೋಕ)
ಪ್ರತಿಭೆಯಂತೆಯೇ ಔಚಿತ್ಯವು ಕಾವ್ಯತತ್ತ್ವಗಳಲ್ಲಿ ಪ್ರಮುಖವಾದದ್ದು. ಇದನ್ನು ಪ್ರೊ|| ತೀ. ನಂ. ಶ್ರೀಕಂಠಯ್ಯನವರು ಹೀಗೆ ವಿವರಿಸುತ್ತಾರೆ: “ಕಾವ್ಯದ ಸಾರವಾದ ರಸವು ಸರಿಯಾಗಿ ಅಭಿವ್ಯಕ್ತವಾಗಬೇಕಾದರೆ ಕಾವ್ಯದ ಅಂಶಗಳಲ್ಲಿ ಪ್ರತಿಯೊಂದೂ ಅದಕ್ಕೆ ಅನುಗುಣವಾಗಿಯೇ ಇರಬೇಕಷ್ಟೆ. ಅಂಗಿಗೂ ಅಂಗಕ್ಕೂ ಇರುವ ಈ ಆನುಗುಣ್ಯವೇ—ಹೊಂದಿಕೆಯೇ—ಔಚಿತ್ಯ.”[3] ಈ ತಥ್ಯದ ಹಿನ್ನೆಲೆಯಲ್ಲಿ ಆನಂದವರ್ಧನನ ಮಾತುಗಳನ್ನು ಗಮನಿಸಬೇಕು. ಅವನ ಪ್ರಕಾರ ಅನೌಚಿತ್ಯವೇ ರಸಭಂಗಕ್ಕೆ ಮೂಲಕಾರಣ; ರಸದ ಪರಮರಹಸ್ಯವಿರುವುದು ಲೋಕ ಮತ್ತು ಶಾಸ್ತ್ರಗಳಲ್ಲಿ ಪ್ರಸಿದ್ಧವಾಗಿರುವ ಔಚಿತ್ಯವನ್ನು ಅರಿತು ಕಾವ್ಯಾಂಗಗಳನ್ನು ಹೊಂದಿಸುವುದರಲ್ಲಿ:
ಅನೌಚಿತ್ಯಾದೃತೇ ನಾನ್ಯದ್ರಸಭಂಗಸ್ಯ ಕಾರಣಮ್ |
ಪ್ರಸಿದ್ಧೌಚಿತ್ಯಬಂಧಸ್ತು ರಸಸ್ಯೋಪನಿಷತ್ ಪರಾ || (೩.೧೪ ವೃತ್ತಿಯಲ್ಲಿಯ ಪರಿಕರಶ್ಲೋಕ)
ರಸಭಂಗವನ್ನು ಉಂಟುಮಾಡುವ ಮತ್ತೊಂದು ಅಂಶದತ್ತ ಧ್ವನಿಕಾರ ನಮ್ಮ ಅವಧಾರಣೆಯನ್ನು ಸೆಳೆಯುತ್ತಾನೆ. ಅದೆಂದರೆ, “ರಾಮಾಯಣವೇ ಮೊದಲಾದ ಗ್ರಂಥಗಳಲ್ಲಿ ರಸವು ಸ್ವಯಂಸಿದ್ಧವಾಗಿರುತ್ತದೆ. ಅವುಗಳಲ್ಲಿ ತಮ್ಮ ಇಚ್ಛೆ ತೋರಿದಂತೆ [ಮೂಲರಸಕ್ಕೆ ವಿರುದ್ಧವಾಗಿ] ಕಲ್ಪನೆಗಳನ್ನು ಬೆರಸಬಾರದು, ಬೆಳಸಬಾರದು”:
ಸಂತಿ ಸಿದ್ಧರಸಪ್ರಖ್ಯಾ ಯೇ ಚ ರಾಮಾಯಣಾದಯಃ |
ಕಥಾಶ್ರಯಾ ನ ತೈರ್ಯೋಜ್ಯಾ ಸ್ವೇಚ್ಛಾ ರಸವಿರೋಧಿನೀ || (೩.೧೪ ವೃತ್ತಿಯಲ್ಲಿಯ ಪರಿಕರಶ್ಲೋಕ)
ಈ ಮೂರು ಪದ್ಯಗಳನ್ನೂ ಕಾವ್ಯಶಾಸ್ತ್ರಕ್ಕೆ ಸಂಬಂಧಿಸಿದ ಎಲ್ಲ ಗ್ರಂಥಗಳಲ್ಲಿಯೂ ಸುವರ್ಣಾಕ್ಷರಗಳಲ್ಲಿ ಮುದ್ರಿಸಬೇಕು.
ಕಾವ್ಯದಲ್ಲಿ ರಸಕ್ಕೆ ವಿರೋಧವೊದಗಿಸುವ ಸಂಗತಿಗಳ ಪಟ್ಟಿಯನ್ನು ಕೂಡ ಆನಂದವರ್ಧನ ನೀಡಿದ್ದಾನೆ. ಅವೆಂದರೆ ಶೃಂಗಾರ-ಬೀಭತ್ಸ, ವೀರ-ಭಯಾನಕ, ಶಾಂತ-ರೌದ್ರ, ಶಾಂತ-ಶೃಂಗಾರಗಳೇ ಮೊದಲಾದ ವಿರುದ್ಧರಸಗಳ ವಿಭಾವಗಳನ್ನು ಸಲ್ಲದ ಕಡೆಯಲ್ಲಿ ವಿಸ್ತರಿಸುವುದು, ಪ್ರಕೃತಕ್ಕೆ ಸಂಬಂಧಪಡದ ಯಾವುದೋ ವಸ್ತುವನ್ನು ವರ್ಣಿಸುವುದು, ಅಕಾಲದಲ್ಲಿ ರಸವನ್ನು ಮೊಟಕು ಮಾಡುವುದು ಅಥವಾ ಹಿಗ್ಗಿಸುವುದು, ಈಗಾಗಲೇ ಪುಷ್ಟಿಗೊಂಡ ಸಂಗತಿಯನ್ನು ಮತ್ತೆ ಮತ್ತೆ ಉದ್ದೀಪಿಸುವುದು ಮತ್ತು ವೃತ್ತಿಗಳನ್ನು ಅಸಮರ್ಪಕವಾಗಿ ಬಳಸುವುದು:
ವಿರೋಧಿರಸಸಂಬಂಧಿವಿಭಾವಾದಿಪರಿಗ್ರಹಃ |
ವಿಸ್ತರೇಣಾನ್ವಿತಸ್ಯಾಪಿ ವಸ್ತುನೋऽನ್ಯಸ್ಯ ವರ್ಣನಮ್ ||
ಅಕಾಂಡ ಏವ ವಿಚ್ಛಿತ್ತಿರಕಾಂಡೇ ಚ ಪ್ರಕಾಶನಮ್ |
ಪರಿಪೋಷಂ ಗತಸ್ಯಾಪಿ ಪೌನಃಪುನ್ಯೇನ ದೀಪನಮ್ |
ರಸಸ್ಯ ಸ್ಯಾದ್ವಿರೋಧಾಯ ವೃತ್ತ್ಯನೌಚಿತ್ಯಮೇವ ಚ || (೩.೧೮, ೧೯)
ಕವಿಗಳಿಗೆ ಕಿವಿಮಾತು
ಧ್ವನ್ಯಾಲೋಕವನ್ನು ಸಾಮಾನ್ಯವಾಗಿ ಸಹೃದಯಕೇಂದ್ರಿತವಾದ ಗ್ರಂಥವೆಂದು ಗುರುತಿಸುವುದಾಗುತ್ತದೆ. ಆದರೆ ಈ ಕೃತಿಯಲ್ಲಿ ಕವಿಗಳಿಗೆ ಉಪಯುಕ್ತವಾದ ಹಲವಾರು ವಿಷಯಗಳು ಅನನ್ಯವಾಗಿ ನಿರೂಪಿತವಾಗಿವೆ. ಇವುಗಳನ್ನೆಲ್ಲ ವಿಸ್ತರಿಸುವಾಗ ಆನಂದವರ್ಧನ ಮತ್ತೆ ಮತ್ತೆ ರಸಪಾರಮ್ಯದತ್ತ ನಮ್ಮ ಗಮನ ಸೆಳೆಯುತ್ತಾನೆ. ತನ್ನ ಪ್ರಧಾನ ಉದ್ದೇಶ ರಸದ ಸಮುನ್ನತಿಯನ್ನು ತೋರ್ಪಡಿಸುವುದೇ ಹೊರತು ಕೇವಲ ಧ್ವನಿಯೆಂಬ ಪ್ರಕ್ರಿಯೆಯ ನಿರೂಪಣೆಯಲ್ಲವೆಂದು ಅವನೇ ಸ್ಪಷ್ಟವಾಗಿ ನುಡಿದಿದ್ದಾನೆ (೩.೧೯ ವೃತ್ತಿ).
ಈ ಹಿನ್ನೆಲೆಯಲ್ಲಿ “ವಾಚಕಶಬ್ದಗಳನ್ನೂ ವಾಚ್ಯಾರ್ಥಗಳನ್ನೂ ರಸಾದಿಗಳ ದೃಷ್ಟಿಯಿಂದ ಯುಕ್ತವಾಗುವಂತೆ ಹೊಂದಿಸುವುದೇ ಮಹಾಕವಿಯ ಮುಖ್ಯಕಾರ್ಯ” ಎನ್ನುತ್ತಾನೆ:
ವಾಚ್ಯಾನಾಂ ವಾಚಕಾನಾಂ ಚ ಯದೌಚಿತ್ಯೇನ ಯೋಜನಮ್ |
ರಸಾದಿವಿಷಯೇಣೈತತ್ ಕರ್ಮ ಮುಖ್ಯಂ ಮಹಾಕವೇಃ || (೩.೩೨)
ಇನ್ನೊಂದೆಡೆ ರಸೋತ್ಕರ್ಷವನ್ನು ಸಾಧಿಸಬಯಸುವವರು ಒಂದು ರಸವನ್ನು ಅಂಗಿಯಾಗಿ (ಪ್ರಧಾನವಾಗಿ) ಸ್ವೀಕರಿಸಿ ಮಿಕ್ಕ ರಸಗಳನ್ನು ಅದರ ಪೋಷಕಗಳಾಗಿ ಬಳಸಬೇಕು ಎನ್ನುತ್ತಾನೆ (೩.೨೧). ಅಂತೆಯೇ ರಸವ್ಯಂಜಕವಾಗಬಲ್ಲ ಪ್ರಬಂಧವನ್ನು ಹೇಗೆ ರಚಿಸಬೇಕು ಎಂದು ತಿಳಿಸುತ್ತಾನೆ: “ಹಿಂದೆ ನಡೆದ ಸಂಗತಿಯನ್ನೇ ಆಗಲಿ ಅಥವಾ ಕವಿಯು ಕಲ್ಪಿಸಿಕೊಂಡ ಸಂಗತಿಯನ್ನೇ ಆಗಲಿ ಕಥಾಶರೀರವಾಗಿ ಮಾಡಿಕೊಳ್ಳುವಾಗ ವಿಭಾವ, ಭಾವ, ಅನುಭಾವ, ಸಂಚಾರಿಭಾವ—ಇವುಗಳೆಲ್ಲವುಗಳ ಔಚಿತ್ಯವನ್ನೂ ಗಮನಿಸಿ ಸೌಂದರ್ಯವನ್ನು ತರುವುದು; ಪ್ರಸಿದ್ಧವಾದ ಕಥೆಯನ್ನು ಆಶ್ರಯಿಸುವಾಗ, ಅದರಲ್ಲಿ ಉದ್ದಿಷ್ಟರಸಕ್ಕೆ ಅನನುಗುಣವಾದ ಘಟನೆಗಳು ಇದ್ದ ಪಕ್ಷದಲ್ಲಿ ಅವುಗಳನ್ನು ಬಿಟ್ಟು ಅಭೀಷ್ಟರಸಕ್ಕೆ ಪೋಷಕಗಳಾಗುವಂತಹ ವಸ್ತುವನ್ನೇ ಕಲ್ಪಿಸಿಕೊಂಡಾದರೂ ಕಥೆಯನ್ನು ಬೆಳೆಸುವುದು; ಸಂಧಿ-ಸಂಧ್ಯಂಗಗಳನ್ನು ರಸಾಭಿವ್ಯಕ್ತಿಯ ದೃಷ್ಟಿಯಿಂದ ರಚಿಸುವುದೇ ಹೊರತು ಸುಮ್ಮನೆ ಶಾಸ್ತ್ರನಿಯಮಗಳನ್ನು ಪಾಲಿಸುವ ಅಭಿಪ್ರಾಯದಿಂದ ರಚಿಸದೆ ಇರುವುದು; ರಸದ ದೀಪ್ತಿ ಮತ್ತು ಶಾಂತಿಗಳನ್ನು ಯಥೋಚಿತವಾಗಿ ಕಾವ್ಯದ ಮಧ್ಯದಲ್ಲಿಯೂ ತರುವುದು; ಪ್ರಧಾನರಸವನ್ನು ಮಾತ್ರ ಆರಂಭದಿಂದ ಹಿಡಿದು ಅಂತ್ಯದವರೆಗೂ ಅನುಸಂಧಾನ ಮಾಡುವುದು; ಅಲಂಕಾರಗಳನ್ನು ಪ್ರಯೋಗಿಸುವ ಸಾಮರ್ಥ್ಯವಿದ್ದರೂ ಮಿತಿಮೀರದೆ ಅನುರೂಪವಾಗುವಂತಹವನ್ನು ಮಾತ್ರ ಪ್ರಯೋಗಿಸುವುದು—ಇವೆಲ್ಲವೂ ಪ್ರಬಂಧವು ರಸಾದಿಗಳನ್ನು ಧ್ವನಿಸುವುದಕ್ಕೆ ನಿಯಾಮಕಗಳು” (ಅನುವಾದ: ಡಾ|| ಕೆ. ಕೃಷ್ಣಮೂರ್ತಿ):
ವಿಭಾವಭಾವಾನುಭಾವಸಂಚಾರ್ಯೌಚಿತ್ಯಚಾರುಣಃ |
ವಿಧಿಃ ಕಥಾಶರೀರಸ್ಯ ವೃತ್ತಸ್ಯೋತ್ಪ್ರೇಕ್ಷಿತಸ್ಯ ವಾ ||
ಇತಿವೃತ್ತವಶಾಯಾತಾಂ ತ್ಯಕ್ತ್ವಾನನುಗುಣಾಂ ಸ್ಥಿತಿಮ್ |
ಉತ್ಪ್ರೇಕ್ಷ್ಯೋऽಪ್ಯಂತರಾಭೀಷ್ಟರಸೋಚಿತಕಥೋನ್ನಯಃ ||
ಸಂಧಿಸಂಧ್ಯಂಗಘಟನಂ ರಸಾಭಿವ್ಯಕ್ತ್ಯಪೇಕ್ಷಯಾ |
ನ ತು ಕೇವಲಯಾ ಶಾಸ್ತ್ರಸ್ಥಿತಿಸಂಪಾದನೇಚ್ಛಯಾ ||
ಉದ್ದೀಪನಪ್ರಶಮನೇ ಯಥಾವಸರಮಂತರಾ |
ರಸಸ್ಯಾರಬ್ಧವಿಶ್ರಾಂತೇರನುಸಂಧಾನಮಂಗಿನಃ ||
ಅಲಂಕೃತೀನಾಂ ಶಕ್ತಾವಪ್ಯಾನುರೂಪ್ಯೇಣ ಯೋಜನಮ್ |
ಪ್ರಬಂಧಸ್ಯ ರಸಾದೀನಾಂ ವ್ಯಂಜಕತ್ವೇ ನಿಬಂಧನಮ್ || (೩.೧೦–೧೪)
ಇದಕ್ಕಿಂತಲೂ ಸರ್ವಗ್ರಾಸಿಯಾದ ನಿಯಾಮಕನೀತಿಯನ್ನು ಕಂಡರಿಸುವುದು ಅಸಾಧ್ಯ. ಶಾಸ್ತ್ರವಿಧಿಯು ಒಂದು ಬಗೆಯಾಗಿ ಇದೆಯೆಂಬ ಕಾರಣದಿಂದ ಅದನ್ನೇ ಅಂಧವಾಗಿ ಅನುಸರಿಸುವುದರಲ್ಲಿ ಅರ್ಥವಿಲ್ಲ; ಶಾಸ್ತ್ರಸದ್ಭಾವವನ್ನು ಗ್ರಹಿಸಿ ಮುನ್ನಡೆಯಬೇಕೆಂದು ಸ್ವಯಂ ಮಹಾಶಾಸ್ತ್ರಕಾರನಾದ ಆನಂದವರ್ಧನ ಹೇಳಿರುವುದು ನಿಜಕ್ಕೂ ಶ್ಲಾಘನೀಯ. ಈ ಹಿನ್ನೆಲೆಯಲ್ಲಿ “ನ ಸರ್ವತ್ರ ಧ್ವನಿರಾಗಿಣಾ ಭವಿತವ್ಯಮ್” (ಎಲ್ಲೆಡೆಯೂ ಧ್ವನಿಯನ್ನು ಹುಡುಕಬಾರದು; ೩.೪೦ ವೃತ್ತಿ) ಎಂಬ ಅವನ ಎಚ್ಚರಿಕೆ ಅರ್ಥಪೂರ್ಣವಾಗಿದೆ. ಸತ್ಯನಿಷ್ಠೆ ಮತ್ತು ನಿರ್ಮಮತೆಗಳು ಪಕ್ವವಾದ ಹೊರತು ಇಂಥ ಸಾರೋಕ್ತಿಗಳನ್ನು ಆಡಲಾಗುವುದಿಲ್ಲ.
ಹೀಗೆ ಕಾವ್ಯದ ರಚನೆಗೆ ಒಟ್ಟಂದದಲ್ಲಿ ಸಹಕಾರಿಯಾಗುವ ದೃಷ್ಟಿಕೋನವನ್ನು ಪರಿಚಯಿಸುವುದರ ಜೊತೆಗೆ ಕೆಲವು ವಿಶೇಷಸಂದರ್ಭಗಳನ್ನು ಹೇಗೆ ನಿರ್ವಾಹ ಮಾಡಬೇಕೆಂದು ಕೂಡ ಆನಂದವರ್ಧನ ರಮ್ಯವಾಗಿ ನಿರೂಪಿಸಿದ್ದಾನೆ. ಉದಾಹರಣೆಗೆ: ವಿಪ್ರಲಂಭಶೃಂಗಾರದಂಥ ಕುಸುಮಸುಕುಮಾರವಾದ ರಸಕ್ಕೆ ಸಂಬಂಧಿಸಿದ ಘಟನೆಯ ಹೆಣಿಗೆಯಲ್ಲಿ ಯಮಕವೇ ಮೊದಲಾದ ಕೃತಕ ಅಲಂಕಾರಗಳನ್ನು ಸರ್ವಥಾ ಬಳಸಕೂಡದು ಎಂಬುದು ಅವನ ನಿಶ್ಚಿತ ಅಭಿಪ್ರಾಯ:
ಧ್ವನ್ಯಾತ್ಮಭೂತೇ ಶೃಂಗಾರೇ ಯಮಕಾದಿನಿಬಂಧನಮ್ |
ಶಕ್ತಾವಪಿ ಪ್ರಮಾದಿತ್ವಂ ವಿಪ್ರಲಂಭೇ ವಿಶೇಷತಃ || (೨.೧೬)
“ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ತಮ್ಮ ಇಚ್ಛೆಯಂತೆ ಕಾವ್ಯ ರಚಿಸಿದ ಕೆಲವು ಕವಿಗಳಿಗೆ ಈ ಹಿಂದೆ ಕೀರ್ತಿ ದಕ್ಕಿರುವುದುಂಟು. ಆದರೆ ವಿವೇಕಿಗಳು ಅಂಥವರನ್ನು ಅನುಕರಿಸತಕ್ಕದ್ದಲ್ಲ; ಈ ನಮ್ಮ ಅಭಿಪ್ರಾಯವು ವ್ಯಾಸ-ವಾಲ್ಮೀಕಿಗಳ ಮೇಲ್ಪಂಕ್ತಿಗೆ ಅನುಗುಣವಾಗಿಯೇ ಇದೆ” ಎಂದು ಹೇಳುವಲ್ಲಿ ಸಾರ್ವಕಾಲಿಕ ಆದರ್ಶಗಳು ಯಾವ ಬಗೆಯಾದವೆಂದು ಆನಂದವರ್ಧನ ತಿಳಿಸಿದ್ದಾನೆ:
ಪೂರ್ವೇ ವಿಶೃಂಖಲಗಿರಃ ಕವಯಃ ಪ್ರಾಪ್ತಕೀರ್ತಯಃ |
ತಾನ್ ಸಮಾಶ್ರಿತ್ಯ ನ ತ್ಯಾಜ್ಯಾ ನೀತಿರೇಷಾ ಮನೀಷಿಣಾ ||
ವಾಲ್ಮೀಕಿವ್ಯಾಸಮುಖ್ಯಾಶ್ಚ ಯೇ ಪ್ರಖ್ಯಾತಾಃ ಕವೀಶ್ವರಾಃ |
ತದಭಿಪ್ರಾಯಬಾಹ್ಯೋऽಯಂ ನಾಸ್ಮಾಭಿರ್ದರ್ಶಿತೋ ನಯಃ || (೩.೧೯ ವೃತ್ತಿಯಲ್ಲಿಯ ಪರಿಕರಶ್ಲೋಕಗಳು)
ಪ್ರತಿಭೆಯ ಆನಂತ್ಯ
ಧ್ವನಿಸಿದ್ಧಾಂತವನ್ನು ಅಂಗೀಕರಿಸುವುದರಿಂದ ಕವಿಪ್ರತಿಭೆಯ ಅಪಾರತೆ ನಮಗೆ ಮನಮುಟ್ಟುತ್ತದೆ. ಇದು ಮುಖ್ಯವಾಗಿ ಅನುರಣನಾತ್ಮಕವಾದ ಅಸಂಲಕ್ಷ್ಯಕ್ರಮವ್ಯಂಗ್ಯದ ಪ್ರಕ್ರಿಯೆಯಲ್ಲಿ ಸ್ಫುಟವಾಗುತ್ತದೆ. ಧ್ವನಿಯ ಚರಮಗಮ್ಯವಾದ ರಸವು ಸ್ಫುರಿಸಿದಾಗ ನಾವು ಈ ಮುನ್ನ ಕಂಡ ಅರ್ಥಗಳು ವಸಂತದ ವೃಕ್ಷಗಳಂತೆ ಅಭಿನವವಾಗಿ ತೋರುತ್ತವೆ:
ದೃಷ್ಟಪೂರ್ವಾ ಅಪಿ ಹ್ಯರ್ಥಾಃ ಕಾವ್ಯೇ ರಸಪರಿಗ್ರಹಾತ್ |
ಸರ್ವೇ ನವಾ ಇವಾಭಾಂತಿ ಮಧುಮಾಸ ಇವ ದ್ರುಮಾಃ || (೪.೪)
ಈ ತೆರನಾದ ಸೌಂದರ್ಯವನ್ನು ಸೃಷ್ಟಿಸಲು ಕವಿಗಳಿಗೆ ಅನಂತಾವಕಾಶವಿದೆ. ವಾಲ್ಮೀಕಿಯಂಥ ಮಹಾಕವಿಯ ಬಳಿಕ ಮತ್ತೊಬ್ಬನು ಕವಿಯಾಗಿ ಹುಟ್ಟಿ ಹೆಸರಾಗುವುದಕ್ಕೆ ಸಾಧ್ಯವಾಯಿತೆಂದರೆ ಪ್ರತಿಭೆಯ ಹರಹು ನಿಜಕ್ಕೂ ಅಪಾರವೆಂದು ತಿಳಿಯದಿರದು. ಇಂಥ ಪ್ರತಿಭೆಗೆ ವಿಷಯವಾಗಬಲ್ಲ ಜೀವನಸಂದರ್ಭಗಳು ಕೂಡ ಅನಂತ. ಸಹಸ್ರ ಸಹಸ್ರ ಮಂದಿ ಬೃಹಸ್ಪತಿಗಳು ಪ್ರಯತ್ನಪಟ್ಟು ಇವುಗಳನ್ನು ಕಾವ್ಯವಸ್ತುಗಳಾಗಿ ಬಳಸಿಕೊಂಡರೂ ಅವು ಕ್ಷಯಿಸುವುದಿಲ್ಲ; ಪ್ರಕೃತಿಯಂತೆ ಅನಂತವಾಗಿರುತ್ತವೆ:
ವಾಲ್ಮೀಕಿವ್ಯತಿರಿಕ್ತಸ್ಯ ಯದ್ಯೇಕಸ್ಯಾಪಿ ಕಸ್ಯಚಿತ್ |
ಇಷ್ಯತೇ ಪ್ರತಿಭಾನಂತ್ಯಂ ತತ್ತದಾನಂತ್ಯಮಕ್ಷಯಮ್ || (೪.೭ ವೃತ್ತಿಯಲ್ಲಿಯ ಪರಿಕರಶ್ಲೋಕ)
ವಾಚಸ್ಪತಿಸಹಸ್ರಾಣಾಂ ಸಹಸ್ರೈರಪಿ ಯತ್ನತಃ |
ನಿಬದ್ಧಾಪಿ ಕ್ಷಯಂ ನೈತಿ ಪ್ರಕೃತಿರ್ಜಗತಾಮಿವ || (೪.೧೦)
ಹೀಗೆ ಮೊಗೆದಷ್ಟೂ ವಿಚಾರರತ್ನಗಳನ್ನು ಒದಗಿಸುವ ಧ್ವನ್ಯಾಲೋಕವು ಕವಿಗಳಿಗೆಲ್ಲ ಪ್ರಚೋದಕವಾದ ಆಶಂಸೆಯಿಂದ, ಆಶ್ವಾಸನೆಯಿಂದ ಸಂಪನ್ನವಾಗುತ್ತದೆ:
ಪ್ರತಾಯಂತಾಂ ವಾಚೋ ನಿಮಿತವಿವಿಧಾರ್ಥಾಮೃತರಸಾ
ನ ಸಾದಃ ಕರ್ತವ್ಯಃ ಕವಿಭಿರನವದ್ಯೇ ಸ್ವವಿಷಯೇ |
ಪರಸ್ವಾದಾನೇಚ್ಛಾವಿರತಮನಸೋ ವಸ್ತು ಸುಕವೇಃ
ಸರಸ್ವತ್ಯೈವೇಷಾ ಘಟಯತಿ ಯಥೇಷ್ಟಂ ಭಗವತೀ ||
(ಬಗೆಬಗೆಯ ಅರ್ಥಗಳ ಸುಧಾಸಾರದಿಂದ ತುಂಬಿ ತುಳುಕುವ ಮಾತುಗಳನ್ನು ಯಥೇಚ್ಛವಾಗಿ ವಿಸ್ತರಿಸಿರಿ! ಕವಿಗಳಿಗೆ ನಿಷ್ಕಲಂಕವಾದ ತಮ್ಮ ಉದ್ಯೋಗದಲ್ಲಿ ಯಾವ ಕೀಳರಿಮೆಯೂ ಇರಬೇಕಾಗಿಲ್ಲ; ಅದಕ್ಕಾಗಿ ಅವರು ಎಂದಿಗೂ ವಿಷಾದಿಸಬೇಕಿಲ್ಲ. ಸದಾ ಜಾಗರಿತರಾದ, ಪರರ ಸ್ವತ್ತನ್ನು ಅಪಹರಿಸುವ ಮನಸ್ಸಿಲ್ಲದ ಸುಕವಿಗಳಿಗೆ ಆವಶ್ಯಕವಾದ ವಸ್ತುವನ್ನು ಸರಸ್ವತಿಯು ತಾನಾಗಿಯೇ ಕರುಣಿಸುತ್ತಾಳೆ!)
ಸೋऽಯಂ ಕಲ್ಪತರೂಪಮಾನಮಹಿಮಾ ಭೋಗ್ಯೋऽಸ್ತು ಭವ್ಯಾತ್ಮನಾಮ್
ಗ್ರಂಥಋಣ
೧. “ಧ್ವನ್ಯಾಲೋಕ” (ಲೋಚನಸಹಿತ). ಸಂ. ದುರ್ಗಾಪ್ರಸಾದ, ಕಾಶೀನಾಥ ಪಾಂಡುರಂಗ ಪರಬ್. ನವದೆಹಲಿ: ಮುನ್ಷಿರಾಮ್ ಮನೋಹರಲಾಲ್ ಪ್ರಕಾಶನ, ೧೯೯೮ [ಪ್ರಕೃತಲೇಖನದಲ್ಲಿಯ ಎಲ್ಲ ಉಲ್ಲೇಖಗಳೂ ಈ ಪುಸ್ತಕದವೇ.]
೨. “ಕನ್ನಡ ಧ್ವನ್ಯಾಲೋಕ ಮತ್ತು ಲೋಚನಸಾರ.” ಕೆ. ಕೃಷ್ಣಮೂರ್ತಿ. ಮೈಸೂರು: ಡಾ. ಕೆ. ಲೀಲಾಪ್ರಕಾಶ್, ೨೦೧೩
೩. “ಭಾರತೀಯ ಕಾವ್ಯಮೀಮಾಂಸೆ.” ತೀ. ನಂ. ಶ್ರೀಕಂಠಯ್ಯ. ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ, ೨೦೧೦
೪. ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಗಾಗಿ ಸಿದ್ಧಪಡಿಸಿದ ಸಂಸ್ಕೃತ ಎಂ. ಎ. ಪಾಠ್ಯಕ್ರಮದ ಧ್ವನ್ಯಾಲೋಕವನ್ನು ಕುರಿತ ಪುಸ್ತಕ (ಸಂಪುಟ ೧). ಕೆ. ಕೃಷ್ಣಮೂರ್ತಿ, ೧೯೮೯
೫. “ಅಲಂಕಾರಶಾಸ್ತ್ರ.” ಆರ್. ಗಣೇಶ್. ಬೆಂಗಳೂರು: ಭವನದ ಗಾಂಧೀ ಕೇಂದ್ರ, ೨೦೦೨
೬. “ಭಾರತೀಲೋಚನ.” ಆರ್. ಗಣೇಶ್. ಬೆಂಗಳೂರು: ಪ್ರೇಕ್ಷಾ ಪ್ರತಿಷ್ಠಾನ, ೨೦೧೮
೭. “ಎರಡನೆಯ ನಾಗವರ್ಮ” (ಕವಿ-ಕಾವ್ಯ ಪರಂಪರೆ - ೩). ಸಂ. ವಿ. ಸೀತಾರಾಮಯ್ಯ. ಬೆಂಗಳೂರು: ಐ. ಬಿ. ಎಚ್. ಪ್ರಕಾಶನ, ೧೯೭೩
[1] ಧ್ವನ್ಯಾಲೋಕವನ್ನು ಕುರಿತು ವಿವೇಚಿಸುವಾಗ ಅದಕ್ಕೆ ಅಭಿನವಗುಪ್ತರು ಬರೆದ ವ್ಯಾಖ್ಯಾನವನ್ನು ಪರಿಗಣಿಸದಿರುವುದು ದೊಡ್ಡ ಅಪಚಾರ. ಶತಾವಧಾನಿ ಡಾ|| ಆರ್. ಗಣೇಶ್ ಅವರು “ಲೋಚನ”ವನ್ನು ಕುರಿತು ಸಮಗ್ರವೂ ಉದ್ಬೋಧಕವೂ ಆದ ಬರೆವಣಿಗೆಯನ್ನು ಈಗಾಗಲೇ ಮಾಡಿರುವುದರಿಂದ ಅದನ್ನೇ ಗಮನಿಸಬೇಕಾಗಿ ಆಸಕ್ತರಾದ ಸಹೃದಯರಲ್ಲಿ ವಿನಂತಿ. ಆ ಲೇಖನವು “ಭಾರತೀಲೋಚನ” ಎಂಬ ಪುಸ್ತಕದ ಮೊದಲ ಬರೆಹವಾಗಿ ಮುದ್ರಿತವಾಗಿದೆ.
[2] ಅಲಂಕಾರಗಳ ಆಂತರ್ಯವನ್ನು ವಿವರಿಸುವಾಗ ಅಸ್ಖಲಿತವಾಗಿದ್ದ ಆನಂದವರ್ಧನನ ಪ್ರಜ್ಞೆ ಗುಣಗಳ ವಿಷಯಕ್ಕೆ ಬಂದಾಗ ಸ್ವಲ್ಪ ತೂಕಡಿಸಿದಂತೆ ತೋರುತ್ತದೆ. ಏಕೆಂದರೆ, ಗುಣಗಳನ್ನು ರಸಾಶ್ರಿತಗಳೆಂದು ಗುರುತಿಸಿ ಆ ಭೂಮಿಕೆಯಲ್ಲಿ ಅಲಂಕಾರಗಳನ್ನು ಕಡಗವೇ ಮುಂತಾದ ಬಾಹ್ಯ ಆಭರಣಗಳಿಗೆ ಒಪ್ಪವಿಟ್ಟಿರುವುದು (೨.೭) ವಿಚಾರಕ್ಷಮವಲ್ಲ. ವಸ್ತುತಃ ಗುಣಕ್ಕಿಂತ ಅರ್ಥಾಲಂಕಾರವೇ ಮೂಲಭೂತವಾದ ಕಾವ್ಯತತ್ತ್ವ. ಏಕೆಂದರೆ, ಶಬ್ದಾರ್ಥಗಳ ಜೋಡನೆಗೆ ಸಂಬಂಧಿಸಿದ ಗುಣವು ತನ್ನತನವನ್ನು ಎಷ್ಟು ಹಿಗ್ಗಿಸಿಕೊಂಡರೂ ಕಲೆಯ ಕೇಂದ್ರದಲ್ಲಿರುವ ಕವಿಕಲ್ಪನೆಗೆ ನೆರವೀಯಲು ಸಾಧ್ಯವಿಲ್ಲ; ಅದನ್ನು ಪರಿಷ್ಕರಿಸಲೂ ಸಾಧ್ಯವಿಲ್ಲ. ಇನ್ನೂ ಒಂದು ಹೆಜ್ಜೆ ಮುಂದುವರಿದು ಹೇಳುವುದಾದರೆ, ಗುಣವನ್ನು ವರ್ಣಧರ್ಮವೆಂದು ಪರಿಗಣಿಸುವುದೇ ಯುಕ್ತ. ಅರ್ಥಗುಣಗಳೆಂದು ದಂಡಿಯೇ ಮೊದಲಾದವರು ಹೆಸರಿಸುವ ಸಂಗತಿಗಳು ಹೆಚ್ಚಾಗಿ ವ್ಯಾಕರಣಶುದ್ಧಿಗೆ ಸಂಬಂಧಿಸಿವೆ (ಪ್ರಸಾದವೇ ಮೊದಲಾದವು); ಮತ್ತವು ರಸದತ್ತಲೇ ವಾಲುತ್ತವೆ. ಓಜಸ್ಸು-ಮಾಧುರ್ಯಗಳನ್ನು ಅರ್ಥದಲ್ಲಿ ಗುರುತಿಸುವ ಬಗೆಯಾದರೂ ಹೇಗೆ? ಆದುದರಿಂದ ಅವುಗಳನ್ನು ಪ್ರತ್ಯೇಕವಾಗಿ ಗಣಿಸಬೇಕಿಲ್ಲ. ಹೀಗೆ ಕಂಡಾಗ ಗುಣವೇನಿದ್ದರೂ ಕಾವ್ಯದ ಆಕೃತಿಯ ಸ್ತರದಲ್ಲಿ ದುಡಿಯುವ ತತ್ತ್ವವೆಂದು ತಿಳಿಯುತ್ತದೆ. ಅರ್ಥಾಲಂಕಾರವಾದರೋ ಕಾವ್ಯದ ಆಶಯದ ಸ್ತರದಲ್ಲಿ ತೆರೆದುಕೊಳ್ಳುವ ತತ್ತ್ವ. ಹೀಗಾಗಿ ಅವುಗಳ ಉಚ್ಚ-ನೀಚಭಾವವನ್ನು ಪ್ರತಿಪಾದಿಸುವಲ್ಲಿ ಆನಂದವರ್ಧನನು ಎಡವಿದ್ದಾನೆಂದು ಹೇಳಲೇಬೇಕಾಗುತ್ತದೆ. ಓಜಸ್ಸು, ಪ್ರಸಾದ ಮತ್ತು ಮಾಧುರ್ಯಗಳೆಂಬ ಮೂರು ಗುಣಗಳನ್ನು ಆತ ಅಂಗೀಕರಿಸಿದ್ದರೂ ಪ್ರಸಾದಗುಣವನ್ನು ಕೊಂಡಾಡುವ ಭರದಲ್ಲಿ ಓಜಸ್ಸಿಗೆ ಸಲ್ಲಬೇಕಾದ ಗೌರವವನ್ನು ಪ್ರಾಯಶಃ ಸಲ್ಲಿಸಿಲ್ಲ. ಪ್ರಸಾದಗುಣವು ಸರ್ವರಸವ್ಯಾಪಿಯೆಂದು ಒಪ್ಪಿದರೂ ಓಜಸ್ಸಿನ ಅಸ್ತಿತ್ವ ಅಸ್ತಂಗತಿಸುವುದಿಲ್ಲ.
ಇದೇ ತೆರನಾದದ್ದು ರಸವದಲಂಕಾರವನ್ನು ಕುರಿತ ಅವನ ಆಲೋಚನೆ (೨.೫). ಇದೊಂದು ಬೇಕಿಲ್ಲದ ಪರಿಭಾಷೆ. ಕಾವ್ಯಶೋಭಾಕರಗಳಾದ ಉಪಕರಣಗಳಲ್ಲಿ ಅಲಂಕಾರ ಒಂದೆಂದು ತಿಳಿದೇ ಇದೆ. ಇಂಥ ಅಲಂಕಾರವು ಧ್ವನಿಸ್ಪರ್ಶದ ಮೂಲಕ ಸೊಗಸೆನಿಸಿದರೆ ಅದನ್ನು ಅಲಂಕಾರಧ್ವನಿಯೆಂದೂ ತಾನಾಗಿಯೇ ಪ್ರಕಾಶಿಸಿ ಅತಿಶಯವೆನಿಸಿದರೆ ಗುಣೀಭೂತವ್ಯಂಗ್ಯದ ಕಕ್ಷೆಗೆ ಸೇರುವುದೆಂದೂ ವ್ಯವಹರಿಸುವುದು ಸಮುಚಿತ. ಅಲ್ಲದೆ ಅಲಂಕಾರಗಳಿಗೆ ಅಲಂಕಾರತ್ವ ಬರುವುದೇ ಅವು ರಸಾನುಗುಣವಾಗಿ ರೂಪುಗೊಂಡಾಗ ಎಂದು ಆನಂದವರ್ಧನನೇ ವಿವರಿಸಿದ್ದಾನೆ. ಅಲಂಕಾರಸಾಮಾನ್ಯದ ವ್ಯಾಖ್ಯೆಯೇ ಇದಾಗಿರುವಾಗ ರಸವದಲಂಕಾರವೆಂಬ ಮತ್ತೊಂದು ಪರಿಭಾಷೆಯನ್ನು ಸೃಜಿಸುವುದು ರಸಿಕರಿಗೆ ಯಾವ ಬಗೆಯ ಸಾಹ್ಯವನ್ನೂ ದೊರಕಿಸುವುದಿಲ್ಲ; ಬದಲಾಗಿ ಗೊಂದಲವನ್ನೇ ಉಂಟುಮಾಡುತ್ತದೆ.
ಧ್ವನಿಕಾರನ ಕೊಡುಗೆಯನ್ನು ಕುಗ್ಗಿಸುವ ಉದ್ದೇಶದಿಂದ ಮೇಲಣ ಮಾತುಗಳನ್ನು ನಾನು ಬರೆದಿಲ್ಲ. ಆತನ ಕೃತಿಯನ್ನೋದಿ ಗಳಿಸಿದ ಜ್ಞಾನಲೇಶದಿಂದಲೇ ವಿಚಾರಸಹವಲ್ಲವೆಂದು ತೋರಿದ ಕೆಲವು ಅಂಶಗಳನ್ನು ಸ್ಪಷ್ಟಪಡಿಸುವುದಾಯಿತು. “ತಸ್ಮಾತ್ ಸತಾಮತ್ರ ನ ದೂಷಿತಾನಿ ಮತಾನಿ ತಾನ್ಯೇವ ತು ಶೋಧಿತಾನಿ.”
ಆನಂದವರ್ಧನನು ತನ್ನ ಕೃತಿಯನ್ನು ರಚಿಸುವ ಕಾಲದಲ್ಲಿ ಹೆಜ್ಜೆಹೆಜ್ಜೆಗೂ ಪದ-ವಾಕ್ಯ-ಪ್ರಮಾಣಶಾಸ್ತ್ರಗಳ ಸವಾಲುಗಳನ್ನು ಎದುರಿಸಬೇಕಿತ್ತು. ಧ್ವನ್ಯಾಲೋಕದ ಮೂರನೆಯ ಉದ್ದ್ಯೋತದ ಹೆಚ್ಚಿನ ಭಾಗವೆಲ್ಲ (ಮುಖ್ಯವಾಗಿ ೩.೩೩ ವೃತ್ತಿ) ವಾದಭೂಮಿಯಾಗಿರುವುದೇ ಇದಕ್ಕೆ ಸಾಕ್ಷಿ. ಇಂಥ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಗಟ್ಟಿಯಾದ ಆಧಾರಗಳ ಮೂಲಕ ಸೂಕ್ತಸಮಾಧಾನಗಳನ್ನು ಧ್ವನಿಕಾರನು ಒದಗಿಸಿದ್ದಾನೆ. ಇದಕ್ಕಾಗಿ ಅವನಿಗೆ ನಾವು ಸದಾ ಕೃತಜ್ಞರಾಗಿರಬೇಕು. ಹೀಗಾಗದಿದ್ದ ಪಕ್ಷದಲ್ಲಿ ಶಾಸ್ತ್ರಕಾರರ ಅವಜ್ಞೆಗೆ ನಮ್ಮೀ ಗ್ರಂಥವು ತುತ್ತಾಗಿ ಕಾಲಪ್ರವಾಹದಲ್ಲಿ ನಶಿಸಿಹೋಗಬಹುದಿತ್ತು. ಹೀಗಿದ್ದರೂ ಈ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳು ನಮ್ಮ ಕಾಲಕ್ಕೆ ಎಷ್ಟು ಪ್ರಸ್ತುತ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ಅವುಗಳಲ್ಲಿ ಬಲುಪಾಲು ಅಪ್ರಸ್ತುತವೇ ಎಂದು ತೋರುತ್ತದೆ. ಒಂದು ಶಾಸ್ತ್ರದ ನಿರ್ಮಾಣಸ್ತರದಲ್ಲಿ ವಾದ-ಉಪವಾದಗಳು ನಡೆಯುವುದು ಸಹಜ. ಅನಂತರದ ಕಾಲದಲ್ಲಿ ಆ ಎಲ್ಲ ವಾದಗಳನ್ನೂ ಅದೇ ಬೇಡದ ಬಿಗಿಯಲ್ಲಿ ಮುಂದುವರಿಸುವುದು ಅವಿವೇಕವಾಗುತ್ತದೆ.
[3] ಭಾರತೀಯ ಕಾವ್ಯಮೀಮಾಂಸೆ, ಪು. ೩೫೧