ಆನಂದವರ್ಧನನ ಔನ್ನತ್ಯ
ಆನಂದವರ್ಧನನು ವೈಯಾಕರಣರ ಸ್ಫೋಟಸಿದ್ಧಾಂತದಿಂದ ಸ್ಫೂರ್ತಿ ಪಡೆದು ಧ್ವನಿತತ್ತ್ವದ ಪ್ರತಿಪಾದನೆಗೆ ತೊಡಗಿದನೆಂದು ಹೇಳುತ್ತಾರೆ. ಇದು ನಿಜವೇ. ಈ ಅಂಶವನ್ನು ಕೆಲವೊಮ್ಮೆ ಎಣೆಮೀರಿ ವಿಸ್ತರಿಸುವುದಾಗುತ್ತದೆ; ಅದು ತಪ್ಪು. ವಸ್ತುತಃ ವೈಯಾಕರಣರಿಗೆ ಆನಂದವರ್ಧನ ಯಾವ ಮಟ್ಟಕ್ಕೆ ಋಣಿ ಎಂದು ಸ್ವಲ್ಪ ವಿಚಾರ ಮಾಡೋಣ. ವ್ಯಾಕರಣದರ್ಶನದಲ್ಲಿ “ಸ್ಫೋಟ” ಎಂಬ ಒಂದು ಶಬ್ದತತ್ತ್ವದ ಪ್ರಸ್ತಾವವಿದೆ. ಯಾವುದರಿಂದ ಅರ್ಥವು ಸ್ಫುಟವಾಗಿ ತಿಳಿಯುತ್ತದೆಯೋ ಅದು ಸ್ಫೋಟ. ಇದು ಅಖಂಡಶಬ್ದರೂಪದ್ದೆಂದೂ ಅದರ ಅನುಭವ ನಮಗಾಗುವ ವೇಳೆಯಲ್ಲಿ ಬಿಡಿಬಿಡಿಯಾದ ವರ್ಣಗಳು ಕ್ರಮವಾಗಿ ತೋರಿಕೊಂಡು ಆ ಮೂಲಕ ಅರ್ಥಪ್ರತೀತಿಯಾಗುತ್ತದೆಂದೂ ವೈಯಾಕರಣರ ಅಭಿಮತ. ಅಖಂಡಸ್ಫೋಟದ ಘಟಕಗಳಾದ ವರ್ಣಗಳಿಗೆ ಧ್ವನಿಯೆನ್ನುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಬಗೆಯ ಅಖಂಡಸ್ಫೋಟವನ್ನು ಎಲ್ಲರೂ ಒಂದೇ ಬಗೆಯಲ್ಲಿ ಗ್ರಹಿಸುತ್ತಾರೆ. ಇದಕ್ಕೆ ಆ ಇಡಿಯ ಪ್ರಕ್ರಿಯೆಯ ಅಭಿಧಾಮೂಲವೇ ಕಾರಣ. ಆದರೆ ಕಾವ್ಯದಲ್ಲಿ ವ್ಯಂಜಕಸಾಮಗ್ರಿಯ ಮೂಲಕ ಧ್ವನಿತವಾಗುವ ಅರ್ಥವು ಸಹೃದಯಸಂಸ್ಕಾರಕ್ಕೆ ಅನುಸಾರವಾಗಿ ಅನಂತಪ್ರಕಾರವಾಗಿರುತ್ತದೆ. ಹೀಗಾಗಿ “ಬೆರಳು ತೋರಿಸಿದರೆ ಹಸ್ತ ನುಂಗು” ಎಂಬಂತೆ ಸಾಹಿತ್ಯಶಾಸ್ತ್ರವು ಶಬ್ದಶಾಸ್ತ್ರದಿಂದ ಬಿಂದುಮಾತ್ರದ ಸ್ಫೂರ್ತಿ ಪಡೆದು ಅದರ ಮೂಲಕ ಸಿಂಧುಸದೃಶವಾದ ತತ್ತ್ವವನ್ನು ಸೃಜಿಸಿದೆ ಎಂದರೆ ಅತಿಶಯವಲ್ಲ. “ಕಾವ್ಯದ ತಿರುಳಾದ ರಸದ ವಿವರಣೆಯಾಗಬಲ್ಲ ಧ್ವನಿಪ್ರಕ್ರಿಯೆ ವೈಯಾಕರಣರಲ್ಲಿ ಲೇಶಮಾತ್ರವೂ ಇರಲಿಲ್ಲ. ಇದು ಆನಂದವರ್ಧನನ ಸ್ಫೋಪಜ್ಞ ಕೊಡುಗೆಯೇ”[1] ಎಂಬ ಡಾ|| ಕೆ. ಕೃಷ್ಣಮೂರ್ತಿಗಳ ಮಾತು ಇಲ್ಲಿ ಸ್ಮರಣೀಯ.
ವಸ್ತುಸ್ಥಿತಿ ಹೀಗಿರುವಾಗಲೂ ಆನಂದವರ್ಧನನು ವೈಯಾಕರಣರನ್ನು ಮುಕ್ತಕಂಠದಿಂದ ಪ್ರಶಂಸೆ ಮಾಡಿದ್ದಾನೆ. ಇದು ಅವನ ಪ್ರಶ್ರಯವನ್ನು ತೋರಿಸುತ್ತದೆ. ಅಲ್ಲದೆ ಪ್ರತಿಷ್ಠಿತಪರಂಪರೆಯುಳ್ಳ ವ್ಯಾಕರಣಶಾಸ್ತ್ರದ ನೆರವು ತನ್ನ ಸಿದ್ಧಾಂತಕ್ಕೆ ಇದೆಯೆಂದರೆ ಅದನ್ನು ಜನರು ಉದಾರಮನಸ್ಸಿನಿಂದ ಸ್ವೀಕರಿಸಿಯಾರು ಎಂಬ ಆಲೋಚನೆಯೂ ಆತನಿಗೆ ಇದ್ದಿರಬಹುದು.
ಇದೇ ಸಂದರ್ಭದಲ್ಲಿ ತನಗೆ ಸಮ್ಮತವಲ್ಲದ ಅಭಿಪ್ರಾಯಗಳನ್ನು ಮಂಡಿಸಿದ ಶಾಸ್ತ್ರಕಾರರನ್ನು ಅವನು ಹೇಗೆ ನಡಸಿಕೊಂಡಿದ್ದಾನೆಂದು ಗಮನಿಸಬಹುದು. ಧ್ವನಿಯನ್ನು ಎತ್ತಿಹಿಡಿಯುವ ಭರದಲ್ಲಿ ಅಲಂಕಾರವಾದಿಗಳ ಬಗೆಗೆ ಅಸೂಯೆ ಪಟ್ಟು ಅವರಿಗೆಲ್ಲ ಬುದ್ಧಿ ಕೆಟ್ಟಿರುವುದೆಂದು ಹೇಳುವುದು ಸೂಕ್ತವಲ್ಲವೆಂಬುದು ಆತನ ನಿಲವು:
ನ ಚ ತೇಷು ಕಥಂಚಿದೀರ್ಷ್ಯಯಾ ಕಲುಷಿತಶೇಮುಷೀತ್ವಮ್ ಆವಿಷ್ಕರಣೀಯಮ್ (೧.೧೬ ವೃತ್ತಿ)
ಅಂತೆಯೇ ಸ್ಪಷ್ಟವಾಗಿ ತಾನು ದೋಷವೆಂದು ಗಣಿಸುವ ಕೆಲವು ಸಂದರ್ಭಗಳು ಮಹಾಕವಿಗಳ ಕೃತಿಗಳಲ್ಲಿ ಇವೆಯೆಂಬ ಮಾತ್ರಕ್ಕೆ ಅವರನ್ನು ದೂಷಿಸುವುದು ತರವಲ್ಲವೆಂದು ಹೇಳುತ್ತಾನೆ. ಈ ಸಂದರ್ಭದಲ್ಲಿಯ ಅವನ ಮಾತುಗಳು ಮನನೀಯ. “ಅಸಂಖ್ಯಸೂಕ್ತಿಗಳ ಬೆಳಕಿನಲ್ಲಿ ಕಂಗೊಳಿಸುವ ಮಹಾತ್ಮರ ದೋಷಗಳನ್ನು ಉದ್ಘೋಷಿಸುವುದು ಪರ್ಯಂತದಲ್ಲಿ ನಮ್ಮ ದೂಷಣೆಯೇ ಆಗುತ್ತದೆ”:
ಸೂಕ್ತಿಸಹಸ್ರದ್ಯೋತಿತಾತ್ಮನಾಂ ಮಹಾತ್ಮನಾಂ ದೋಷೋದ್ಘಾಟನಮ್ ಆತ್ಮನ ಏವ ದೂಷಣಂ ಭವತಿ (೨.೨೦ ವೃತ್ತಿ)
ಈ ಬಗೆಯ ವಿನಯ ಮತ್ತು ಗುಣಗ್ರಹಣಗಳು ಶಂಕರಭಗವತ್ಪಾದರ ವ್ಯಕ್ತಿತ್ವವನ್ನು ನೆನಪಿಗೆ ತರುತ್ತದೆ. ಅಪ್ರತಿಮಪ್ರತಿಭಾಸಂಪನ್ನರಾದ ಆಚಾರ್ಯರು ಪೂರ್ವಪಕ್ಷಿಗಳ ನಿಲವುಗಳನ್ನು ಖಂಡಿಸುವಲ್ಲಿ ಅದೆಷ್ಟು ಸಂಯಮದಿಂದ ವರ್ತಿಸುವರೆಂದು ಅವರ ಎಲ್ಲ ಭಾಷ್ಯಗಳಲ್ಲಿಯೂ—ವಿಶೇಷತಃ ಶಾರೀರಕಭಾಷ್ಯದಲ್ಲಿ—ಗಮನಿಸಬಹುದು. ದೊಡ್ಡವರ ಜಾಡೇ ಹೀಗೆ. ಆನಂದವರ್ಧನನ ವಿಷಯಕ್ಕೇ ಮರಳುವುದಾದರೆ, ಅವನು ವಿನಯಶಾಲಿಯಾಗಿದ್ದರೂ ಆತನ ಸಿದ್ಧಾಂತವನ್ನು ಒಪ್ಪದವರು ಹಾಗಿರಲಿಲ್ಲ. ಅವರು ಗೇಲಿ, ಕುಹಕ, ಕಟಕಿ ಮುಂತಾದ ಎಲ್ಲ ವಾಗಸ್ತ್ರಗಳನ್ನೂ ಬಳಸಿ ಅವನನ್ನು ವಿನೋದ ಮಾಡಿದ್ದರು. ಇಂಥವರ ಮಾತುಗಳನ್ನು ಆನಂದವರ್ಧನನೇ ದಾಖಲಿಸಿದ್ದಾನೆ: “ಹೇಗಾದರೂ ಹಿಂದಿನ ಆಲಂಕಾರಿಕರು ತೋರಿಸದೆ ಬಿಟ್ಟಿರುವ ಯಾವುದೋ ಒಂದು ಕಾವ್ಯಪ್ರಕಾರದ ತುಣುಕು ಸಿಕ್ಕಿದರೂ ಸಿಕ್ಕಬಹುದು. ಅದನ್ನು ಧ್ವನಿ ಧ್ವನಿ ಎನ್ನುತ್ತ ತಾವೇ ಸಹೃದಯರೆಂಬ ಭ್ರಾಂತಿಯಿಂದ ಕಣ್ಣು ಮುಚ್ಚಿಕೊಂಡು ಏಕೆ ಕುಣಿಯಬೇಕೋ ನಮಗೆ ತಿಳಿಯದು”:
ಕಾವ್ಯಲಕ್ಷಣವಿಧಾಯಿಭಿಃ ಪ್ರಸಿದ್ಧೈರದರ್ಶಿತೇ ಪ್ರಕಾರಲೇಶೇ ಧ್ವನಿರ್ಧ್ವನಿರಿತಿ
ತದಲೀಕಸಹೃದಯತ್ವಭಾವನಾಮುಕುಲಿತಲೋಚನೈಃ ನೃತ್ಯತೇ (೧.೧ ವೃತ್ತಿ)
ಆನಂದವರ್ಧನನ ವೈಯಕ್ತಿಕ ಎತ್ತರವನ್ನು ವ್ಯತಿರೇಕಮಾರ್ಗದಿಂದ ಅರ್ಥಮಾಡಿಕೊಳ್ಳಲು ಅವನನ್ನು “ಪಂಡಿತರಾಜ” ಜಗನ್ನಾಥನೊಂದಿಗೆ ಹೋಲಿಸಿ ನೋಡಬೇಕು. ಶಾಸ್ತ್ರಸಾಕ್ಷಾತ್ಕಾರದ ಶಿಖರಾಗ್ರದಲ್ಲಿ ನಿಂತಿದ್ದರೂ ವಿನಯಧನನಾದ ಧ್ವನಿಕಾರನೆಲ್ಲಿ, ಅಪ್ಪಯ್ಯದೀಕ್ಷಿತರಂಥ ಮಹಾಮಹಿಮರನ್ನು ಕ್ಷುದ್ರವಾಗಿ ನಿಂದಿಸಿ “ಮನೋರಮಾಕುಚಮರ್ದನ”ದಂಥ ಹೇಯ ಆಶಯದ ಗ್ರಂಥ ರಚಿಸಿದ ಜಗನ್ನಾಥನೆಲ್ಲಿ? “ಪರ್ವತೇ ಪರಮಾಣೌ ಚ ಪದಾರ್ಥತ್ವಂ ಪ್ರತಿಷ್ಠಿತಮ್.”
ಇಷ್ಟಕ್ಕೂ ತಾನು ನಿರೂಪಿಸಲು ಹೊರಟ ಧ್ವನಿತತ್ತ್ವವು ಎಲ್ಲ ಸತ್ಕಾವ್ಯಗಳ ಹೃದಯಕಲ್ಪವಾದದ್ದು, ಮತ್ತು ರಾಮಾಯಣ-ಮಹಾಭಾರತಗಳಂಥ ಲಕ್ಷ್ಯಗಳು ಇರುವಾಗ ಅದರ ಸ್ವರೂಪ ಎಲ್ಲರಿಗೂ ತಿಳಿದೇ ಇದೆಯೆಂದು ಆನಂದವರ್ಧನ ಹೇಳುತ್ತಾನೆ (೧.೧ ವೃತ್ತಿ). ಹೀಗೆ ಎಲ್ಲರಿಗೂ ಸುವೇದ್ಯವಾದ ಈ ಸಂಗತಿಯನ್ನು ಕೆಲವರು ನಿರಾಕರಣೆ ಮಾಡುವುದುಂಟು; ಅಂಥವರ ಅಭಿಪ್ರಾಯಗಳು ಹೇಗೆ ಹುರುಳಿಲ್ಲದವೆಂದು ಶಾಸ್ತ್ರಶುದ್ಧವಾಗಿ ತಿಳಿಸಿ ಸಹೃದಯರಿಗೆ ಆನಂದ ಉಂಟುಮಾಡುವುದೇ ತನ್ನ ಉದ್ದೇಶವೆಂದು ಕೂಡ ಆತ ತಿಳಿಸುತ್ತಾನೆ (೧.೧). ಇದು ಮತ್ತೆ ಶಂಕರಭಗವತ್ಪಾದರನ್ನು ಜ್ಞಾಪಕಕ್ಕೆ ತರುತ್ತದೆ. ಏಕೆಂದರೆ, ತಾವು ಪ್ರತಿಪಾದಿಸುತ್ತಿರುವುದು ಔಪನಿಷದಸಿದ್ಧಾಂತವೆಂದು, ಅದು ತಮ್ಮ ಕಪೋಲಕಲ್ಪಿತವಲ್ಲವೆಂದು, ತಮ್ಮ ಉದ್ದೇಶವೆಲ್ಲ ಜಿಜ್ಞಾಸುಗಳ ಬೋಧಶುದ್ಧಿ ಉಂಟುಮಾಡಲೆಂದು ಆಚಾರ್ಯರು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಾರೆ.
ಆನಂದವರ್ಧನನಲ್ಲಿ ಕಂಡುಬರುವ ಮತ್ತೊಂದು ಮಹಾಗುಣವೆಂದರೆ ಅರ್ಹರಾದವರಿಗೆ ಸಲ್ಲಬೇಕಾದ ಗೌರವ ಸಲ್ಲಿಸುವಲ್ಲಿ ಕೃಪಣತೆ ತೋರದಿರುವುದು. ಕವಿಕುಲಗುರು ಕಾಳಿದಾಸನ ಬಗೆಗೆ ಅವನು ಆಡಿರುವ ಮಾತು ಎಷ್ಟು ಪ್ರಾಮಾಣಿಕವೋ ಅಷ್ಟೇ ಸತ್ಯ. ಅವನೆನ್ನುತ್ತಾನೆ, “ಈ ಪ್ರಪಂಚದಲ್ಲಿ ಎಷ್ಟೋ ತೆರನಾದ ಕವಿಗಳ ಪರಂಪರೆ ಆಗಿಹೋಗಿದ್ದರೂ ಕಾಳಿದಾಸನಂಥ ಎರಡು, ಮೂರು ಅಥವಾ ಐದು ಜನರನ್ನು ಮಾತ್ರ ನಾವು ಮಹಾಕವಿಗಳೆಂದು ಗಣಿಸುತ್ತೇವೆ”:
ಅಸ್ಮಿನ್ ಅತಿವಿಚಿತ್ರಕವಿಪರಂಪರಾವಾಹಿನಿ ಸಂಸಾರೇ ಕಾಲಿದಾಸಪ್ರಭೃತಯೋ ದ್ವಿತ್ರಾಃ ಪಂಚಷಾ ವಾ ಮಹಾಕವಯ ಇತಿ ಗಣ್ಯಂತೇ (೧.೬ ವೃತ್ತಿ)
ಇದೇ ರೀತಿ ಧ್ವನಿಯು ಪ್ರಧಾನವಾಗಿ ಪ್ರಬಂಧಗತವೇ ಆದರೂ ಮುಕ್ತಕಕವಿಗಳ ಬಗೆಗೆ ಅವನಿಗೆ ತಿರಸ್ಕಾರಭಾವನೆ ಸ್ವಲ್ಪವೂ ಇರಲಿಲ್ಲ. ಅವನು ಕೇವಲ ಮುಕ್ತಕಗಳನ್ನೇ ಬರೆದ ಅಮರುಕನನ್ನು ಸಂತೋಷದಿಂದ ಕೊಂಡಾಡಿದ್ದಾನೆ. “ಅಮರುಕಕವಿಯ ಮುಕ್ತಕಗಳು ಶೃಂಗಾರರಸದಿಂದ ತುಂಬಿದ್ದು ಸ್ವತಂತ್ರಪ್ರಬಂಧಗಳಂತೆ ತೋರುವುದು ಪ್ರಸಿದ್ಧವೇ ಆಗಿದೆ” ಎಂಬುದು ಅವನದ್ದೇ ಮಾತು:
ಅಮರುಕಸ್ಯ ಕವೇಃ ಮುಕ್ತಕಾಃ ಶೃಂಗಾರರಸಸ್ಯಂದಿನಃ ಪ್ರಬಂಧಾಯಮಾನಾಃ ಪ್ರಸಿದ್ಧಾ ಏವ (೩.೭ ವೃತ್ತಿ)
ಧ್ವನಿಕಾರನ ಸಾಧನೆಗಳ ಮತ್ತೊಂದು ಹೆಗ್ಗುರುತೆಂದರೆ ಮಹಾಕಾವ್ಯಗಳ ಪ್ರಾಯೋಗಿಕವಿಮರ್ಶೆ. ವ್ಯಾಸ, ವಾಲ್ಮೀಕಿ, ಕಾಳಿದಾಸ, ಬಾಣಭಟ್ಟ, ಅಮರುಕ, ಭಟ್ಟನಾರಾಯಣ, ಹರ್ಷವರ್ಧನ ಮೊದಲಾದವರ ಕಾವ್ಯಗಳಿಂದ ಸರಸವಾದ ಪದ್ಯಗಳನ್ನು ಉದ್ಧರಿಸಿ ಅವುಗಳ ಸ್ವಾರಸ್ಯವನ್ನು ಮನಮುಟ್ಟುವಂತೆ ಆನಂದವರ್ಧನ ವಿವರಿಸಿದ್ದಾನೆ. ಇವುಗಳ ಜೊತೆಗೆ ಅನಾಮಧೇಯರಾದ ಅನೇಕಸಂಖ್ಯೆಯ ಪ್ರಾಕೃತಕವಿಗಳ ಗಾಥೆಗಳನ್ನು ಉಲ್ಲೇಖಿಸಿ ಅವುಗಳ ಸೌಂದರ್ಯದತ್ತಲೂ ಗಮನ ಸೆಳೆದಿದ್ದಾನೆ. ಮುಖ್ಯವಾಗಿ ರಾಮಾಯಣ ಮತ್ತು ಮಹಾಭಾರತಗಳ ಅಂಗಿರಸಗಳನ್ನು ಕ್ರಮವಾಗಿ ಕರುಣ ಮತ್ತು ಶಾಂತಗಳೆಂದು ಗುರುತಿಸಿ ಅವುಗಳ ಇಡಿಯಾದ ವಿಮರ್ಶೆಯನ್ನು ನಡಸಿರುವ ಪರಿ ಸೊಗಸಾಗಿದೆ (೪.೫ ವೃತ್ತಿ). ಕೆಲವೊಮ್ಮೆ ಆನಂದವರ್ಧನನು ಆರಿಸಿಕೊಂಡ ಉದಾಹರಣೆಗಳು ಸಪ್ಪೆಯಾಗಿ ತೋರುತ್ತವೆ. ಆದರೆ ಇವುಗಳ ಅಸ್ವರಸತೆ ಅವು ಉಪಲಕ್ಷಿಸುವ ಸಿದ್ಧಾಂತದ ಪ್ರಾಮುಖ್ಯವನ್ನು ಯಾವ ರೀತಿಯಿಂದಲೂ ಕುಗ್ಗಿಸುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿರಿಸಿಕೊಳ್ಳಬೇಕು. ದೃಷ್ಟಾಂತ-ದಾರ್ಷ್ಟಾಂತಿಕಗಳ ಕಲಬೆರಕೆ ಶಾಸ್ತ್ರವ್ಯಭಿಚಾರವಾದೀತು.
ಈ ಕೆಲವು ಅಂಶಗಳಲ್ಲದೆ ಕವಿಪ್ರೌಢೋಕ್ತಿ, ಕವಿನಿಬದ್ಧಪ್ರೌಢೋಕ್ತಿ, ಸ್ವತಃಸಂಭವಿ, ಬಂಧಚ್ಛಾಯೆ, ಸಂಘಟನೆ ಮುಂತಾದ ಅನೇಕಪರಿಭಾಷೆಗಳನ್ನು ರೂಪಿಸಿಕೊಟ್ಟ ಕೀರ್ತಿ ಆನಂದವರ್ಧನನದು. ಇವೆಲ್ಲ ಪ್ರಾಯೋಗಿಕವಿಮರ್ಶೆಯಲ್ಲಿ ಮಿಗಿಲಾಗಿ ಒದಗಿಬರುತ್ತವೆಂದು ಪ್ರತ್ಯೇಕಿಸಿ ಹೇಳಬೇಕಿಲ್ಲವಷ್ಟೆ. ಇದೇ ತೆರನಾದದ್ದು ನಾಲ್ಕನೆಯ ಉದ್ದ್ಯೋತದಲ್ಲಿಯ “ಸಂವಾದ”ದ ಬಗೆಗಿನ ಚರ್ಚೆ. “ಪ್ರತಿಬಿಂಬ,” “ಆಲೇಖ್ಯ” ಮತ್ತು “ತುಲ್ಯದೇಹ” ಎಂಬ ಮೂರು ಬಗೆಯ ಕಾವ್ಯಸಂವಾದಗಳನ್ನು ಗುರುತಿಸಿ, ಒಳ್ಳೆಯ ಸಂವಾದದ ಸ್ವರೂಪವು ಯಮಳಪುರುಷರಂತೆ ಏಕರೂಪತೆಯನ್ನು ಹೊಂದಿದ್ದರೂ ಏಕತಾನತೆ ಹೊಂದಿರುವುದಿಲ್ಲವೆಂದು ಅವನು ವಿವರಿಸಿರುವುದು ಸೊಗಸಾಗಿದೆ.
ಇದೇ ರೀತಿ ತಾನು ಶ್ರಮವಹಿಸಿ ನಿರೂಪಿಸಿದ ಧ್ವನಿತತ್ತ್ವದ ಪಾರಮ್ಯವನ್ನು ಎತ್ತಿಹಿಡಿಯುತ್ತ ಧ್ವನಿಕಾವ್ಯವೇ ಶ್ರೇಷ್ಠವೆಂದು ಆತ ಅರುಹಿದ್ದರೂ “ಗುಣೀಭೂತವ್ಯಂಗ್ಯ” ಮತ್ತು “ಚಿತ್ರ”ಗಳೆಂಬ ಇನ್ನೆರಡು ಕಾವ್ಯಪ್ರಭೇದಗಳನ್ನು ಗಣಿಸದೆ ಬಿಡುವುದಿಲ್ಲ. ಧ್ವನಿಯ ಆದರ್ಶಕ್ಕೆ ಹೋಲಿಸಿದರೆ ಗುಣೀಭೂತವ್ಯಂಗ್ಯವು ಸೊರಗುವುದಾದರೂ ಅದಕ್ಕೆ ತನ್ನದೇ ಆದ ಮಹತ್ತ್ವವಿದೆ ಎಂಬುದನ್ನು ಆನಂದವರ್ಧನನ ಅಲ್ಲಗಳೆಯುವುದಿಲ್ಲ. ರಸತಾತ್ಪರ್ಯಕ್ಕೆ ಕೊಂಚ ಕುಂದೊದಗಿ ಕವಿಯ ರಚನಾಕೌಶಲವೇ ಮಿಗಿಲೆನಿಸಿದರೆ ಅಂಥ ಪದ್ಯ ಅಥವಾ ಕಾವ್ಯವು ಗುಣೀಭೂತವ್ಯಂಗ್ಯದ ಗುಂಪಿಗೆ ಸೇರುತ್ತದೆ. ಚಮತ್ಕಾರವಿರುವ ಎಲ್ಲ ಅರ್ಥಾಲಂಕಾರಗಳೂ ಇದರ ತೆಕ್ಕೆಗೇ ಬರುವ ಕಾರಣ ಅದನ್ನು ಎರಡನೆಯ ದರ್ಜೆಯ ಕಾವ್ಯಪ್ರಕಾರವೆಂದು ಕರೆಯುವುದು ಅಸಾಧು. ಅದೇನಿದ್ದರೂ ಎರಡನೆಯ ಬಗೆಯ ಕಾವ್ಯಪ್ರಭೇದ. ಆನಂದವರ್ಧನನ ಪ್ರಕಾರ ಚಿತ್ರವೆಂಬುದು ಸರ್ವಥಾ ರಸಭಾವರಹಿತವಾದ ರಚನೆಯಾದ ಕಾರಣ ಅದನ್ನು ಅಧಮಕಾವ್ಯವೆಂದು ನಿರೂಪಿಸಿರುವುದು ಯುಕ್ತವೇ ಆಗಿದೆ. "ದೇವೀಶತಕ"ದಂಥ ಉಚ್ಚಕೋಟಿಯ ಚಿತ್ರಕಾವ್ಯದ ನಿರ್ಮಾತೃವೇ ಆಡಿರುವ ಈ ಮಾತುಗಳಿಗೆ ಎಲ್ಲಿಲ್ಲದ ಬೆಲೆ ಬರುತ್ತದೆ. ಚಿತ್ರಕವಿತೆಯಲ್ಲಿ ಪ್ರಧಾನವಾಗಿ "ಶಬ್ದಚಿತ್ರ" ಮತ್ತು "ಅರ್ಥಚಿತ್ರ" ಎಂಬ ಎರಡು ವಿಭಾಗಗಳಿವೆ. ಬಗೆಬಗೆಯ ಶಬ್ದಾಲಂಕಾರಗಳನ್ನು ಸಾಧಿಸಲು (ಬಹುಶಃ ಸಭಂಗ ಮತ್ತು ಅಭಂಗಶ್ಲೇಷಗಳನ್ನು ಬಳಸಿ) ಪದಗಳನ್ನು ವಿಲಕ್ಷಣವಾಗಿ ಜೋಡಿಸುವುದು ಶಬ್ದಚಿತ್ರದ ಹುರುಳು. ಅರ್ಥಚಿತ್ರವಾದರೋ ವಿಕಟವಾದ ಕಲ್ಪನೆಯಿಂದ ಕೂಡಿದ್ದು ಗುಣೀಭೂತವ್ಯಂಗ್ಯದ ಜಾಡಿಗೆ ಸೇರದೆ ತನ್ನದೇ ಆದ ವೈಚಿತ್ರ್ಯದಿಂದ ಮೆರೆಯುತ್ತದೆ. ಇದರಲ್ಲಿ ಪ್ರಾಯಶಃ ಔಚಿತ್ಯಬಾಹಿರವಾದ ಅರ್ಥಾಲಂಕಾರ ನೆಲಸಿರುವುದನ್ನು ಗಮನಿಸಬಹುದು.[2]
[1] ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಗಾಗಿ ಸಿದ್ಧಪಡಿಸಿದ ಸಂಸ್ಕೃತ ಎಂ. ಎ. ಪಾಠ್ಯಕ್ರಮದ ಧ್ವನ್ಯಾಲೋಕವನ್ನು ಕುರಿತ ಪುಸ್ತಕ (ಸಂ. ೧, ಪು. ೮)
[2] ಈ ಸಂದರ್ಭದಲ್ಲಿ ಪ್ರೊ. ಕುಪ್ಪುಸ್ವಾಮಿಶಾಸ್ತ್ರಿ, ಡಾ|| ಕೆ. ಕೃಷ್ಣಮೂರ್ತಿ ಮೊದಲಾದ ಆಧುನಿಕರು ಕೂಡ ತಮ್ಮ ಹಲವು ಬರೆಹಗಳಲ್ಲಿ ಗುಣೀಭೂತವ್ಯಂಗ್ಯವನ್ನು ಸೊಗಸಾಗಿ, ಸಮರ್ಥವಾಗಿ ಎತ್ತಿಹಿಡಿದಿದ್ದಾರೆ ಎಂಬುದನ್ನು ಸ್ಮರಿಸಬೇಕು. ಅಂತೆಯೇ ಆನಂದವರ್ಧನನ ಮತದಂತೆ ಚಿತ್ರಕಾವ್ಯವು ಅಧಮವೆಂಬುದು ಅವನಿಗೆ ಲಭ್ಯವಿದ್ದ ಲಕ್ಷ್ಯಗಳ ಹಿನ್ನೆಲೆಯಲ್ಲಿ ಸತ್ಯವೇ ಆದರೂ ನಮ್ಮ ಕಾಲದಲ್ಲಿ ಈ ಅಭಿಪ್ರಾಯವನ್ನು ಸುಳ್ಳಾಗಿಸುವ ಲಕ್ಷ್ಯ ಸಿದ್ಧವಾಗಿರುವುದು ಸಂತಸದ ಸಂಗತಿ. ಡಾ|| ಶಂಕರ್ ರಾಜಾರಾಮನ್ ಅವರು ಚಿತ್ರಕಾವ್ಯನಿರ್ಮಾಣದಲ್ಲಿ ಸಿದ್ಧಹಸ್ತರು. "ದೇವೀದಾನವೀಯಮ್", "ಚಿತ್ರನೈಷಧಮ್" ಮುಂತಾದ ಅವರ ಕಾವ್ಯಗಳು ಅಕೃತಕಶೋಭೆಯಿಂದ ಕಂಗೊಳಿಸಿ ಚಿತ್ರಕಾವ್ಯಕ್ಕೆ ಅಂಟಿದ್ದ ಅಧಮತೆಯ ಕಳಂಕವನ್ನು ನಿಃಶೇಷವಾಗಿ ತೊಳೆದುಹಾಕಿವೆ. ಪ್ರಬಲವಾದ ಲಕ್ಷ್ಯದ ಮುಂದೆ ಯಾವ ಲಕ್ಷಣವೂ ಕೈಕಟ್ಟಿ ಕೂರಬೇಕಲ್ಲವೇ! ಏನೇ ಆಗಲಿ, ಶಂಕರ್ ಅವರ ರಚನೆಗಳು ಚಿತ್ರಕವಿತೆಯೆಂಬ ಮೋಡಕವಿದ ಆಕಾಶದಲ್ಲಿ ಆಗೀಗ ಸುಳಿಯುವ ಸೂರ್ಯಕಿರಣಗಳು; ಅಲ್ಲಿ ಸ್ಥಾಯಿಯಾಗಿ ನಿಂತಿರುವುದು ಮಬ್ಬುಗತ್ತಲೇ.