Navilugari
ಭಾರತೀಯ ಕಾವ್ಯಮೀಮಾಂಸೆ ಮತ್ತು ಕಲಾಮೀಮಾಂಸೆಗಳ ಕ್ಷೇತ್ರದಲ್ಲಿ ಭಟ್ಟತೌತನ ಹೆಸರು ಅಜರಾಮರ.[1] ಕಾಶ್ಮೀರದಲ್ಲಿ ಬಾಳಿ ಬೆಳಗಿದ ಈ ವಿದ್ವದ್ವಿಭೂತಿ ಒಂಬತ್ತು-ಹತ್ತನೆಯ ಶತಮಾನಗಳ ಆಸುಪಾಸಿನಲ್ಲಿ ಇದ್ದವನೆಂದು ತಿಳಿದುಬರುತ್ತದೆ. ಈತನ ‘ಕಾವ್ಯಕೌತುಕ’ದ ಹೊರತಾಗಿ ಮತ್ತಾವ ಗ್ರಂಥದ ಕುರುಹೂ ನಮಗೆ ಉಳಿದಿಲ್ಲ. ಇದಾದರೂ ನಮಗಿಂದು ಸಿಕ್ಕಿಲ್ಲ. ಕೇವಲ ಅವರಿವರು ಉದ್ಧರಿಸುವ ಶ್ಲೋಕಭಾಗಗಳಿಂದ ನಮಗೆ ಈ ಕೃತಿಯ ಮಹತ್ತ್ವ ತಿಳಿಯುತ್ತಿದೆ.[2] ಹೀಗೆ ತಿಳಿದಾಗ ನಾವೆಂಥ ಅದ್ಭುತ ಶಾಸ್ತ್ರನಿಧಿಯನ್ನು ಕಳೆದುಕೊಂಡೆವೆಂಬ ದುಃಖ ಉಮ್ಮಳಿಸಿ ಬರದಿರದು. ಇಂತಿದ್ದರೂ ಈಗ ನಮಗೆ...