ಕಾವ್ಯ-ನಾಟ್ಯ
ಅನುಭಾವವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ |
ತೇಷಾಮೇವ ಪ್ರಯೋಗಸ್ತು ನಾಟ್ಯಂ ಗೀತಾದಿರಂಜಿತಮ್ || (ವ್ಯಕ್ತಿವಿವೇಕ, ಪು. ೯೬)
ಪ್ರಯೋಗತ್ವಮನಾಪನ್ನೇ ಕಾವ್ಯೇ ನಾಸ್ವಾದಸಂಭವಃ ||
ವರ್ಣನೋತ್ಕಲಿಕಾಭೋಗಪ್ರೌಢೋಕ್ತ್ಯಾ[1] ಸಮ್ಯಗರ್ಪಿತಾಃ |
ಉದ್ಯಾನಕಾಂತಾಚಂದ್ರಾದ್ಯಾ ಭಾವಾಃ ಪ್ರತ್ಯಕ್ಷವತ್ ಸ್ಫುಟಾಃ || (ಅಭಿನವಭಾರತೀ, ಸಂ. ೧, ಪು. ೨೯೧-೯೨)
ವಿಭಾವ ಮತ್ತು ಅನುಭಾವಗಳ ವಾಗ್ರೂಪದ ವರ್ಣನೆಯನ್ನು ಕಾವ್ಯವೆನ್ನುತ್ತಾರೆ. ಇವುಗಳನ್ನೇ ಗೀತ-ವಾದ್ಯ-ನರ್ತನಾದಿಗಳ ಮೂಲಕ ಪುಷ್ಟಿಗೊಳಿಸಿ ರಂಗಕ್ಕೇರಿಸಿದರೆ ಆ ಪ್ರಸ್ತುತಿ ನಾಟ್ಯವೆನಿಸುತ್ತದೆ. ಕಾವ್ಯವೊಂದು ದೃಶ್ಯತ್ವವನ್ನು ಪಡೆಯದೆ ಅದು ಆಸ್ವಾದ್ಯವೆನಿಸದು. ವರ್ಣನೆ, ಉತ್ಕಲಿಕೆ ಮತ್ತು ಆಭೋಗಗಳಿಂದ ಒಡವರಿದ ಪ್ರೌಢೋಕ್ತಿಯಿಂದ ವ್ಯವಸ್ಥಿತವಾಗಿ ನಿರೂಪಣೆಗೊಂಡ ಉದ್ಯಾನ, ಕಾಂತೆ, ಚಂದ್ರ ಮುಂತಾದ ‘ಭಾವ’ಗಳು ನಮ್ಮೆದುರು ಮೈದಳೆದಂತೆ ತೋರುತ್ತವೆ.
ಈ ಶ್ಲೋಕಗಳ ಪೈಕಿ ಮೊದಲನೆಯದು ಭಟ್ಟತೌತನ ಹೆಸರಿನೊಡನೆ ಎಲ್ಲಿಯೂ ಉಲ್ಲೇಖಗೊಂಡಿಲ್ಲ. ಇಂತಿದ್ದರೂ ಹೆಚ್ಚಿನ ವಿದ್ವಾಂಸರು ಇದನ್ನು ಆತನ ರಚನೆಯೆಂದೇ ಆದರಿಸಿದ್ದಾರೆ. ಮಾತ್ರವಲ್ಲ, ಈ ಶ್ಲೋಕವು ಉಲ್ಲೇಖಗೊಳ್ಳುವ ರೀತಿ ಮತ್ತಿದರ ಶೈಲಿ-ವಿಷಯಗಳೂ ಇದರ ಕರ್ತೃ ತೌತನೇ ಇರಬೇಕೆಂಬ ನಿಗಮನವನ್ನು ಪೋಷಿಸುತ್ತವೆ. ಆದುದರಿಂದ ಈ ನಿಲವನ್ನು ಒಪ್ಪಿ ಸದ್ಯದ ವಿವೇಚನೆಯನ್ನು ನಡಸಲಾಗಿದೆ.
ಈ ಕೆಲವು ಮಾತುಗಳಲ್ಲಿ ದೃಶ್ಯಕಾವ್ಯ ಮತ್ತು ಶ್ರವ್ಯಕಾವ್ಯಗಳಿಗಿರುವ ಅವಿನಾಭಾವಸಂಬಂಧವನ್ನು ಭಟ್ಟತೌತ ಬಗೆದು ತೋರಿಸಿದ್ದಾನೆ. ಅಷ್ಟೇ ಅಲ್ಲದೆ ಆಸ್ವಾದ್ಯವಾಗುವ ಹಂತದಲ್ಲಿ ಎಲ್ಲ ಶ್ರವ್ಯಕಾವ್ಯವೂ ಸಹೃದಯರ ಮನಸ್ಸಿನಲ್ಲಿ ದೃಶ್ಯಕಾವ್ಯದ ರೂಪವನ್ನು ಪಡೆಯುವುದೆಂದು ಸೂಚಿಸಿದ್ದಾನೆ. ಹೀಗೆ ಸಹೃದಯರ ಹೃದಯದಲ್ಲಿ ದೃಶ್ಯತ್ವಕ್ಕೇರದ ಶ್ರವ್ಯಕಾವ್ಯಕ್ಕೆ ಕಾವ್ಯತ್ವವೇ ಸಿದ್ಧಿಸದೆಂಬ ಧ್ವನಿಯೂ ಇಲ್ಲಿದೆ. ಈ ಮೂಲಕ ನಾಟ್ಯಶಾಸ್ತ್ರವು ಕೇವಲ ನೋಡುಗಬ್ಬದ ಮಾರ್ಗದರ್ಶಿ ಗ್ರಂಥವಲ್ಲ; ಅದು ಓದುಗಬ್ಬಕ್ಕೂ ಸಮಗ್ರವಾಗಿ ಅನ್ವಯಿಸುವ ಸೌಂದರ್ಯಸಂಹಿತೆ ಎಂದು ಮನವರಿಕೆಯಾಗುತ್ತದೆ.
ನಾಟ್ಯಶಾಸ್ತ್ರದ ಪ್ರಕಾರ ವಿಭಾವ ಎಂದರೆ ಕಾರಣ, ಅನುಭಾವ ಎಂದರೆ ಕಾರ್ಯ. ವಿಭಾವ-ಅನುಭಾವ ಎನ್ನದೆ ನೇರವಾಗಿ ಕಾರಣ-ಕಾರ್ಯ ಎಂದು ಭರತಮುನಿ ವ್ಯವಹರಿಸದಿರುವುದರ ಗುಟ್ಟು ಹೀಗಿದೆ: ಲೋಕವ್ಯವಹಾರವೆಲ್ಲ ಕಾರಣ ಮತ್ತು ಕಾರ್ಯಗಳಿಂದ ಕೂಡಿದೆ. ಆದರೆ ಕಲಾವ್ಯವಹಾರ ಹೀಗಲ್ಲ. ಲೋಕವ್ಯವಹಾರದಲ್ಲಿ ಪ್ರಕ್ರಿಯೆಗಿಂತ ಫಲಕ್ಕೆ ಬೆಲೆ; ಆಸ್ವಾದಕ್ಕಿಂತ ಆರ್ಜನೆಗೆ ಬೆಲೆ. ಕಲಾವ್ಯವಹಾರದಲ್ಲಾದರೋ ಪ್ರಕ್ರಿಯೆಯೇ ಮುಖ್ಯ. ಇದು ಅನುಭವರೂಪದ್ದು; ಹೀಗಾಗಿ ವರ್ತಮಾನದಲ್ಲಿಯೇ ನೆಲೆ ನಿಲ್ಲುವಂಥದ್ದು. ಭಗವದ್ಗೀತೆಯು ಹೇಳುವಂತೆ ಇದು ‘ಫಲಕೃಪಣ’ವಲ್ಲ. ಈ ಕಾರಣದಿಂದಲೇ ಕಲಾನುಭವವನ್ನು ‘ಅಲೌಕಿಕ’ ಎನ್ನುತ್ತಾರೆ. ನಮ್ಮ ರಾಗ-ದ್ವೇಷಮೂಲದ ಭಾವಗಳು ಲೋಕಕ್ಕೆ ಅಂಟಿಕೊಂಡಿವೆ; ಹೀಗಾಗಿ ಸುಖ-ದುಃಖಾತ್ಮಕವಾಗಿವೆ. ರಸ ಹೀಗಲ್ಲ. ಅದು ಲೋಕೋತ್ತರ, ಸುಖ-ದುಃಖಾತೀತ, ಕೇವಲ ಆನಂದ. ಇದನ್ನೆಲ್ಲ ಅಭಿನವಗುಪ್ತನು ತನ್ನ ವ್ಯಾಖ್ಯಾನದಲ್ಲಿ ಸ್ಪಷ್ಟಪಡಿಸಿದ್ದಾನೆ. ಅಭಿನವಗುಪ್ತನ ಈ ಕಾಣ್ಕೆಗೆ ಭಟ್ಟತೌತನ ಯೋಗದಾನ ಬಹಳಷ್ಟು ಇದೆಯೆಂಬುದು ನಮಗೆ ತಿಳಿದೇ ಇದೆ. ಈ ಹಿನ್ನೆಲೆಯಲ್ಲಿ ಸದ್ಯದ ಮಾತುಗಳನ್ನು ಅರ್ಥೈಸಿಕೊಳ್ಳಬೇಕು.
ಭರತಮುನಿ ಹೇಳಿದ ರಸಸೂತ್ರದ ಬಳಿಕ ಭಟ್ಟತೌತನು ಒಕ್ಕಣಿಸಿರುವ ಮೇಲಣ ಮೊದಲ ಶ್ಲೋಕ ಕಲಾಜಗತ್ತಿನಲ್ಲಿಯೇ ಅತ್ಯಂತ ಮೌಲಿಕವಾದ ಮಾರ್ಗದರ್ಶಕ ಸೂಕ್ತಿ ಎನ್ನಬಹುದು.[2] ಇಲ್ಲಿ ಅವನು ಕಾವ್ಯರಚನೆ, ನೃತ್ಯಸಂಯೋಜನೆ, ನಾಟ್ಯನಿರ್ದೇಶನ, ಚಿತ್ರ-ಶಿಲ್ಪಗಳ ರಚನಾವಿಧಾನ ಮೊದಲಾಗಿ ಸಕಲ ಕಲೆಗಳ ನಿರ್ಮಾಣಪ್ರಕ್ರಿಯೆಯನ್ನು ಏಕಕಾಲದಲ್ಲಿ ಅಡಕವಾಗಿ ನಿರೂಪಿಸಿದ್ದಾನೆ. ಇದು ನಿಃಸಂದಿಗ್ಧವಾಗಿಯೂ ಇದೆ. ಜೊತೆಗೆ ‘ವರ್ಣನೆ’ ಎಂಬುದರ ನೆಪದಲ್ಲಿ ಮನಬಂದಂತೆ ಕಲ್ಪನೆಗಳನ್ನು ಹರಿಯಬಿಡುವ ಕವಿಬ್ರುವರ ಹಾಗೂ ಒಳ್ಳೆಯ ವರ್ಣನೆಗಳನ್ನೂ ತಳ್ಳಿಹಾಕುವ ವಿಮರ್ಶಕಂಮನ್ಯರ ಅಪಕಲ್ಪನೆಗಳನ್ನು ತೊಡೆದುಹಾಕುವಂತೆಯೂ ಇದೆ. ಭಟ್ಟತೌತನ ಪ್ರಕಾರ ವಿಭಾವ-ಅನುಭಾವಗಳ ಸರಣಿಯ ಆಕರ್ಷಕ ವರ್ಣನೆಯೇ ಕಾವ್ಯ. ಕೇವಲ ಅಷ್ಟಾದಶ ವರ್ಣನೆಗಳ ಹೆಸರಿನಲ್ಲಿ ವಿಭಾವ-ಅನುಭಾವಗಳ ಸರಣಿಗೆ ಕವಡೆಯಷ್ಟೂ ಬೆಲೆ ಕೊಡದೆ ವಿಕಟ ಕಲ್ಪನೆಗಳನ್ನು ಬೆಳೆಸುವುದು ದಿಟವಾದ ವರ್ಣನೆಯಾಗದು. ಇಂದಿಗೂ ಎಷ್ಟೋ ಮಂದಿ ಈ ಸೂಕ್ಷ್ಮವನ್ನು ತಿಳಿಯದ ಕಾರಣ ಒಳ್ಳೆಯ ಕಲೆ ಬರುತ್ತಿಲ್ಲ; ಬಂದದ್ದು ಆದರಕ್ಕೆ ಪಾತ್ರವಾಗುತ್ತಲೂ ಇಲ್ಲ.
ಕವಿಯ ಕೈಯಲ್ಲಿ ತನ್ನದಾಗಿ ಉಳಿದಿರುವ ರಚನಾಸಾಮಗ್ರಿ ವಾಗರ್ಥಗಳು ಮಾತ್ರ. ಆತ ಇವನ್ನೇ ಬಳಸಿ ತನ್ನ ಕಲೆಯ ಪರಮಾರ್ಥವಾದ ರಸವನ್ನು ಸಹೃದಯರಲ್ಲಿ ಕಾಣಿಸಬೇಕು. ಗಾಯಕ-ವಾದಕರಿಗೆ ಶ್ರುತಿ-ಲಯಗಳೂ ಅವುಗಳ ಮತ್ತೂ ಮೂರ್ತರೂಪಗಳಾದ ರಾಗ-ತಾಳಗಳೂ ಅಲ್ಲದೆ ಬೇರೆ ಸಾಧನಗಳಿರುವುದಿಲ್ಲ. ಇದೇ ರೀತಿ ಚಿತ್ರಕಾರರಿಗೆ ರೇಖೆ-ವರ್ಣಗಳು ಮಾತ್ರ ಸಾಧನ; ಶಿಲ್ಪಿಗಳಿಗೆ ಮೂರು ಆಯಾಮಗಳಲ್ಲಿ ಸೆರೆಹಿಡಿಯುವ ನೆರಳು-ಬೆಳಕುಗಳಷ್ಟೇ ಸಾಧನ. ನಟ-ನರ್ತಕರಿಗೆ ಸ್ಥಿತಿ-ಗತಿಗಳು ಸಾಧನ. ಇವರೆಲ್ಲರಿಗೂ ಮೂಲಭೂತವಾಗಿ ತಮ್ಮೊಳಗಿನ ಭಾವಗಳೂ ಅವನ್ನು ಕಲಾಸ್ಫುರಣೆಯ ಕಾಲದಲ್ಲಿ ರಸವಾಗಿ ಸಾಕ್ಷಾತ್ಕರಿಸಿಕೊಂಡ ಆನಂದಾನುಭವವೂ ಮೀಟುಗೋಲುಗಳಾಗಿರುತ್ತವೆ. ಇವುಗಳ ಮೂಲಕವೇ ಅವರು ತಮ್ಮ ತಮ್ಮ ಮಾಧ್ಯಮಗಳಿಗೆ ಎಟುಕುವ ವಾಗರ್ಥಗಳೇ ಮೊದಲಾದ ಸಾಧನಗಳ ಬಲದಿಂದ ತಮ್ಮದಾದ ಕಲೆಯನ್ನು ಸೃಜಿಸುತ್ತಾರೆ. ಒಟ್ಟಿನಲ್ಲಿ ಭಟ್ಟತೌತನ ಪ್ರಕಾರ ವರ್ಣನೆ ಮತ್ತು ಪ್ರಯೋಗಗಳು ವಿಜಾತೀಯವಲ್ಲ. ಇವುಗಳೇ ಆಯಾ ಕಲೆಗಳ ಮೂರ್ತರೂಪಗಳು. ಈ ಮೂರ್ತರೂಪಗಳಿಂದ ಅಮೂರ್ತವಾದ ರಸವು ಸಹೃದಯರಲ್ಲಿ ಸಾಕ್ಷಾತ್ಕರಿಸುತ್ತದೆ.
ಭಟ್ಟತೌತನು ಮುಂದಿನ ಶ್ಲೋಕಾರ್ಧದಲ್ಲಿ ಮನೋರಂಗದಲ್ಲಿ ಅಭಿನೀತವಾಗದ ಕಾವ್ಯ ರಸಾವಹವಾಗದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.[3] ಯಾವ ಸಹೃದಯನೇ ಆಗಲಿ, ಸಾಹಿತ್ಯವನ್ನು ಓದುವಾಗ ಅದರ ಕಥೆ, ಕಲ್ಪನೆ, ಪಾತ್ರ, ಘಟನೆಗಳನ್ನು ತನ್ನ ಮನಸ್ಸಿನಲ್ಲಿ ಪುನಾರೂಪಿಸಿಕೊಳ್ಳದೆ ಇರಲಾರ. ಉನ್ನತ ಮಟ್ಟದ ಸಹೃದಯರು ತಮ್ಮೊಳಗೆ ರೂಪಿಸಿಕೊಂಡ ಇಂಥ ದೃಶ್ಯಗಳು ಅವರು ಓದಿದ ಅವೇ ಕೃತಿಗಳನ್ನು ಆಧರಿಸಿ ನಿರ್ಮಿತವಾದ ರೂಪಕ ಅಥವಾ ಚಲನಚಿತ್ರಗಳಿಗಿಂತ ಉತ್ತಮವಾಗಿರುವ ಸಾಧ್ಯತೆಯೂ ಇಲ್ಲದಿಲ್ಲ. ಇವೆಲ್ಲ ನಮ್ಮ ಅನುಭವಕ್ಕೆ ಬಂದ ಸಂಗತಿಗಳೇ. ಇಂಥ ಸ್ವಾರಸ್ಯವನ್ನು ಭಟ್ಟತೌತ ಇಲ್ಲಿ ಕಟಾಕ್ಷಿಸುತ್ತಿದ್ದಾನೆ. ಹೀಗಾಗಿ ಇವನ ಕಲಾಮೀಮಾಂಸೆಯ ಪ್ರಕ್ರಿಯೆ ಅದೆಷ್ಟು ಅನುಭವನಿಷ್ಠ ಎಂಬ ಅರಿವು ನಮಗಾಗದಿರದು. ವಸ್ತುತಃ ಭಾರತೀಯ ಕಾವ್ಯ-ಕಲಾಮೀಮಾಂಸೆಯ ಬಲವೇ ಇಲ್ಲಿದೆ.
ನಮ್ಮ ಆಲಂಕಾರಿಕರಲ್ಲಿ ವಾಮನನಂಥ ಕೆಲವರು ದೃಶ್ಯಕಾವ್ಯವನ್ನು ಎತ್ತಿಹಿಡಿದಿದ್ದಾರೆ. ಇನ್ನು ಭೋಜನಂಥ ಒಬ್ಬಿಬ್ಬರು ಶ್ರವ್ಯಕಾವ್ಯವನ್ನು ಪುರಸ್ಕರಿಸಿದ್ದಾರೆ. ಈ ಎರಡು ಅಭಿಪ್ರಾಯಗಳಿಗೂ ಸಮನ್ವಯವನ್ನು ಕಲ್ಪಿಸುವಲ್ಲಿ ಭಟ್ಟತೌತನ ನಿಲವು ನಮಗೆ ನೆರವಾಗುತ್ತದೆ. ವಿಶೇಷತಃ ಪ್ರಕೃತ ಶ್ಲೋಕವನ್ನು ಉದ್ಧರಿಸುವ ಅಭಿನವಭಾರತಿಯ ಭಾಗವನ್ನು ಕಂಡಾಗ ಈ ನಿಟ್ಟಿನಲ್ಲಿ ಹೆಚ್ಚಿನ ತಿಳಿವು ದಕ್ಕುತ್ತದೆ (ಸಂ. ೧, ಪು. ೨೮೮-೮೯).
ಕಡೆಯ ಶ್ಲೋಕದಲ್ಲಿ ಪೂರ್ವೋಕ್ತ ವಿಚಾರವನ್ನೇ ಮತ್ತಷ್ಟು ಬಲಪಡಿಸಲಾಗಿದೆ. ಇಲ್ಲಿ ಹಲವು ಪಾರಿಭಾಷಿಕ ಶಬ್ದಗಳಿವೆ. ‘ವರ್ಣನೆ’ ಎಂದರೆ ವಿಭಾವ-ಅನುಭಾವಗಳ ಆಕರ್ಷಕ ನಿರೂಪಣೆ ಎಂದರ್ಥ. ‘ಉತ್ಕಲಿಕಾ’ ಎಂದರೆ ಆಂಗಿಕಸ್ತರದ ಹಾವ-ಭಾವಗಳೆಂದು ತಾತ್ಪರ್ಯ. ‘ಆಭೋಗ’ ಎಂದರೆ ಹಾಡುಗಳಲ್ಲಿ ಬರುವ ಆಕರ್ಷಕವಾದ ಭಾಗಗಳ (ಪಲ್ಲವಿ ಅಥವಾ ಮುಗಿತಾಯದ ಮುದ್ರಿಕೆ) ವಿನಿಕೆಯೆಂದು ಅರ್ಥ. ‘ಪ್ರೌಢೋಕ್ತಿ’ ಎಂಬುದು ಕವಿಯ ವಿಶಿಷ್ಟವಾದ ನುಡಿಬೆಡಗು. ಇದು ಕವಿಯದೇ ಮಾತಾಗಿ, ಕವಿ ಕಲ್ಪಿಸಿದ ಪಾತ್ರಗಳ ಮಾತಾಗಿ ಎರಡು ಬಗೆಯಾಗಿದೆ. ಈ ಎಲ್ಲ ಅಂಶಗಳು ವಿಭಾವ ಮತ್ತು ಅನುಭಾವಗಳ ಪೋಷಣೆಗೇ ಮೀಸಲಾಗಬೇಕೆಂಬುದು ಆದರ್ಶ. ಹೀಗೆ ರೂಪಿತವಾದ ಭಾವಸಾಮಗ್ರಿ ವಾಗರ್ಥ, ಶ್ರುತಿ-ಲಯ, ವರ್ಣ-ರೇಖೆ, ಸ್ಥಿತಿ-ಗತಿ, ನೆರಳು-ಬೆಳಕು ಎಂಬ ಯಾವುದೇ ಮಾಧ್ಯಮದ ಮೂಲಕ ವ್ಯಕ್ತವಾಗುತ್ತಿರಲಿ, ಅದು ಜೀವಂತವಾಗಿರುತ್ತದೆ; ಕಣ್ಣಿಗೆ ಕಟ್ಟಿದಂತಿರುತ್ತದೆ; ಹೃದಯಕ್ಕೆ ಹತ್ತಿರವಾಗುತ್ತದೆ.
ರಸ
ಭಾವಸಂಯೋಜನಾವ್ಯಂಗ್ಯಪರಿಸಂವಿತ್ತಿಗೋಚರಃ[4] |
ಆಸ್ವಾದನಾತ್ಮಾನುಭವೋ ರಸಃ ಕಾವ್ಯಾರ್ಥ ಉಚ್ಯತೇ || (ವ್ಯಕ್ತಿವಿವೇಕ, ಪು. ೬೭)
ವಿಭಾವ-ಅನುಭಾವಗಳ (ಔಚಿತ್ಯಪೂರ್ಣವಾದ) ಸಂಯೋಜನೆಯಿಂದ ವ್ಯಂಜನಾವ್ಯಾಪಾರದ ಮೂಲಕ ನಮ್ಮ ಅಂತರಂಗದ ಅರಿವಿಗೆ ಬರುವ ಆಸ್ವಾದಾನುಭವವೇ ರಸ. ಇದನ್ನೇ ಕಾವ್ಯಾರ್ಥವೆಂದು ಹೇಳುತ್ತಾರೆ.
ಈ ಶ್ಲೋಕವನ್ನು ಉದಾಹರಿಸುವ ಅಭಿನವಗುಪ್ತನಾಗಲಿ, ಮಹಿಮಭಟ್ಟನಾಗಲಿ ಇದರ ಕರ್ತೃವಿನ ಹೆಸರನ್ನಾಗಲಿ, ಅದರ ಆಕರವನ್ನಾಗಲಿ ಹೇಳಿಲ್ಲ. ಆದರೆ ಮತ್ತಾವ ಲೇಖಕರೂ ಇದಕ್ಕೆ ಅನ್ಯಮೂಲವನ್ನು ಸೂಚಿಸಿ ಉಲ್ಲೇಖಿಸಿಯೂ ಇಲ್ಲ. ಹೀಗಾಗಿ ಇದು ಭಟ್ಟತೌತನದೇ ಇರಬಹುದೆಂಬ ಊಹೆ ನಮ್ಮದು. ಈ ಊಹೆಗೊಂದು ಆಂತರಿಕ ಆಧಾರವೂ ಇದೆ. ಅದೆಂದರೆ, ಇಲ್ಲಿ ಬರುವ ‘ವ್ಯಂಗ್ಯ’ಶಬ್ದ. ರಸಪ್ರತೀತಿಯು ತಾತ್ಪರ್ಯವೃತ್ತಿಯಿಂದ ಉಂಟಾಗುವುದೇ, ಅನುಮಾನದಿಂದ ಸಿದ್ಧಿಸುವುದೇ, ಅಥವಾ ವ್ಯಂಜನಾವ್ಯಾಪಾರದಿಂದ ಸಾಕ್ಷಾತ್ಕರಿಸುವುದೇ ಎಂಬ ಬಿರುಸಾದ ಚರ್ಚೆ ನಡೆಯುತ್ತಿದ್ದ ಕಾಲದಲ್ಲಿ ಆ ವಾದ-ವಿವಾದಗಳ ಕೇಂದ್ರದಲ್ಲಿದ್ದ ಅಭಿನವಗುಪ್ತ ಮತ್ತು ಮಹಿಮಭಟ್ಟರು ಇದನ್ನು ಉಲ್ಲೇಖಿಸಿರುವ ಕಾರಣ ಪ್ರಕೃತ ಶ್ಲೋಕ ಮಹತ್ತ್ವದ್ದೆಂಬುದರಲ್ಲಿ ಸಂದೇಹವಿಲ್ಲ. ಆ ಕಾಲದಲ್ಲಿ ರಸವನ್ನು ಕುರಿತು ಚರ್ಚಿಸಿದ ಅಗ್ರಗಣ್ಯರ ಪೈಕಿ ಲೋಲ್ಲಟ, ಶ್ರೀಶಂಕುಕ, ಭಟ್ಟನಾಯಕ ಮತ್ತು ಭಟ್ಟತೌತರೇ ಪ್ರಮುಖರು. ಇವರೊಬ್ಬರ ಕೃತಿಯೂ ಉಳಿದುಬರದಿರುವುದು ವಿಷಾದದ ಸಂಗತಿ. ಲೋಲ್ಲಟ ಮತ್ತು ಶ್ರೀಶಂಕುಕರ ಹೆಸರಿನಲ್ಲಿ ವ್ಯಂಗ್ಯವನ್ನು ಪುರಸ್ಕರಿಸುವ ಯಾವುದೇ ಶ್ಲೋಕ ನಮಗೆ ಈವರೆಗೆ ದೊರೆತಿಲ್ಲ. ಹೀಗಾಗಿ ಸದ್ಯದ ಶ್ಲೋಕದ ಕರ್ತೃ ಭಟ್ಟನಾಯಕನೋ ಭಟ್ಟತೌತನೋ ಆಗಿರಬೇಕು. ವ್ಯಂಗ್ಯವೆಂಬ ಶಬ್ದವನ್ನು ಭಟ್ಟನಾಯಕನು ಖಂಡನೆಗಲ್ಲದೆ ಮಂಡನೆಗಾಗಿ ಬಳಸಲು ಸಾಧ್ಯವಿಲ್ಲವಷ್ಟೆ. ಮಾತ್ರವಲ್ಲ, ಇದಕ್ಕೆ ಬದಲಾಗಿ ‘ಭಾವಕತ್ವ’ ಮತ್ತು ‘ಭೋಗಕೃತ್ತ್ವ’ಗಳೆಂಬ ಅಥವಾ ‘ಸಾಧಾರಣೀಕರಣ’ ಎಂಬ ತನ್ನವೇ ಪರಿಭಾಷೆಗಳನ್ನು ಅವನು ಬಳಸಿಕೊಂಡಿರುತ್ತಿದ್ದ. ಆದುದರಿಂದ ಈ ಶ್ಲೋಕ ಭಟ್ಟತೌತನೆಂಬುದರಲ್ಲಿ ಸಂದೇಹ ತೋರದು.
ಪ್ರಕೃತ ಶ್ಲೋಕ ಕವಿಕರ್ಮವಾದ ವಿಭಾವಾನುಭಾವಗಳ ಸಂಯೋಜನೆಯಿಂದ ಮೊದಲ್ಗೊಂಡು ವ್ಯಂಜನಾವ್ಯಾಪಾರವೆಂಬ ರಸಪ್ರತೀತಿಯ ಪ್ರಕ್ರಿಯೆಯನ್ನೂ ಹಾಯ್ದು ರಸಾನುಭವ ಎಂಬ ಸಹೃದಯನ ಆಸ್ವಾದದ ಹಂತದವರೆಗೆ ಎಲ್ಲ ಅಂಶಗಳನ್ನೂ ಕ್ರಮಬದ್ಧವಾಗಿ ನಿರೂಪಿಸಿರುವ ಹದವಾಗಲಿ, ರಸವೇ ಕಾವ್ಯಾರ್ಥವೆಂದು ಧ್ವನಿಕಾರನ ಮತವನ್ನು ಭರತನ ನಿಲವಿನೊಡನೆ[5] ಬೆಸೆದು ಸಾರಿರುವ ಬಗೆಯಾಗಲಿ ಮಹಾಶಾಸ್ತ್ರಜ್ಞನ ಸಾರೋಕ್ತಿಯ ಸಾಕಾರವಾಗಿದೆ. ಇದು ಅಲ್ಪಸ್ವಲ್ಪದ ಪಂಡಿತರ ಕಾಣ್ಕೆಯಲ್ಲ. ವಿಶೇಷತಃ ಶಾಸ್ತ್ರವೊಂದರ ಕೇಂದ್ರತತ್ತ್ವಗಳ, ಪ್ರಕ್ರಿಯಾಸೂಕ್ಷ್ಮಗಳ ನಿರ್ಮಾಣದ ಹಂತದಲ್ಲಿ ಇಷ್ಟು ವ್ಯವಸ್ಥಿತವಾದ ತೀರ್ಮಾನವನ್ನು ಹರಳುಗಟ್ಟಿಸಲು ತೌತನಂಥ ಮಹಾಪ್ರತಿಭಾಶಾಲಿಗಷ್ಟೇ ಸಾಧ್ಯ.
ಈ ಶ್ಲೋಕವು ಅಭಿನವಭಾರತಿಯಲ್ಲಿ ಉಲ್ಲೇಖಗೊಂಡ ಸಂದರ್ಭವೂ ಮಹತ್ತ್ವದ್ದಾಗಿದೆ. ಅಭಿನವಗುಪ್ತನು ರಸಸೂತ್ರವನ್ನು ವ್ಯಾಖ್ಯಾನಿಸುವಾಗ ಮಿಕ್ಕೆಲ್ಲ ವ್ಯಾಖ್ಯಾತೃಗಳ ಅಭಿಪ್ರಾಯಗಳನ್ನು ಸಾಧಾರವಾಗಿ ನಿರಾಕರಿಸಿದ ಬಳಿಕ ತನ್ನದಾದ ಮತವನ್ನು ಸಾರುವ ಮುನ್ನ, ತನ್ನ ವಿವರಣಮಂದಿರಕ್ಕೆ ಅಧಿಷ್ಠಾನವೆಂಬಂತೆ ಈ ಶ್ಲೋಕವನ್ನು ಬಳಸಿಕೊಂಡಿದ್ದಾನೆ. ಭಟ್ಟತೌತನ ಪಟ್ಟ ಶಿಷ್ಯನಿಗೆ ಇದು ತಕ್ಕ ವರ್ತನೆಯೇ ಆಗಿದೆ. ಅವನು ಮುಂದೆ ಹೇಳಿರುವುದೆಲ್ಲ ಈ ಶ್ಲೋಕಸೂತ್ರದ ಭಾಷ್ಯವೇ.
ಭಟ್ಟತೌತನು ಈ ಶ್ಲೋಕದಲ್ಲಿ ಇಡಿಯ ಕಲಾಜಗತ್ತನ್ನು ನಿಃಸಂದಿಗ್ಧವಾಗಿ ಸಂಗ್ರಹಿಸಿಕೊಟ್ಟಿದ್ದಾನೆ. ಮೊದಲಿಗೆ ಬರುವ ‘ಭಾವಸಂಯೋಜನಾ’ ಎಂಬ ಪದಪುಂಜವು ಈ ಮುನ್ನ ನಾವು ನೋಡಿದ ಅವನದೇ ಆದ ‘ಅನುಭಾವವಿಭಾವಾನಾಂ ವರ್ಣನಾ’ ಎಂಬ ಮಾತಿನ ಸಂಗ್ರಹ. ‘ವ್ಯಂಗ್ಯ’ಶಬ್ದವು ಧ್ವನಿಯನ್ನು ಸೂಚಿಸುವುದು ಸುವೇದ್ಯ. ‘ಪರಿಸಂವಿತ್ತಿ’ (ಇದು ‘ಪರಸಂವಿತ್ತಿಃ’ ಎಂದಿರಬೇಕೆಂದು ಪಾಠಾಂತರಗಳಿಂದ ತಿಳಿಯುತ್ತದೆ) ಎಂಬ ಪದವು ನಮ್ಮೊಳಗಿನ ಚಿದ್ರೂಪದ ಚೈತನ್ಯವನ್ನು ಸಂಕೇತಿಸುತ್ತದೆ. ಇಂಥ ಚೈತನ್ಯದ ಅರಿವಿಗೆ ಬರುವಂಥದ್ದು ರಸ. ಇದು ಬರಿಯ ಅರಿವಲ್ಲ; ಇರವು ಮತ್ತು ನಲವುಗಳೂ ಹೌದೆಂಬುದನ್ನು ಮುಂದಿನದಾದ ‘ಆಸ್ವಾದನಾತ್ಮಾ ಅನುಭವಃ’ ಎಂಬ ಪದಗಳು ಸ್ಪಷ್ಟೀಕರಿಸಿವೆ. ಇಲ್ಲಿ ಜ್ಞಾನ ಮತ್ತು ಆನಂದ ಆತ್ಮನ ಸ್ವರೂಪವೇ ಆಗಿವೆ. ಇದನ್ನು ಕಲೆಯ ಮೂಲಕ ತತ್ಕಾಲದಲ್ಲಿ ನಮ್ಮ ಅನುಭವಕ್ಕೆ ತಂದುಕೊಡುವುದು ರಸ. ಕಾವ್ಯವೂ ಸೇರಿದಂತೆ ಎಲ್ಲ ಕಲೆಗಳ ಉದ್ದೇಶ್ಯವೂ ರಸವೇ. ಇದನ್ನೇ ‘ಕಾವ್ಯಾರ್ಥ’ ಎಂಬ ಶಬ್ದ ಸೂಚಿಸಿದೆ.
‘ವ್ಯಕ್ತಿವಿವೇಕ’ದ ವ್ಯಾಖ್ಯಾನಕಾರನಾದ ರುಯ್ಯಕನು ಪ್ರಕೃತ ಶ್ಲೋಕವನ್ನು ವಿವರಿಸಿರುವ ಪರಿಯೂ ಮನನೀಯ. ಆಸಕ್ತರು ಅದನ್ನು ಅಲ್ಲಿಯೇ ಅವಲೋಕಿಸಬಹುದು (ಪು. ೬೭-೬೮)
* * *
ಕಾವ್ಯಾತ್ಮ ಏನೆಂಬುದರ ಬಗೆಗೆ ಬಹುಕಾಲದಿಂದ ಚರ್ಚೆ ನಡೆದಿದೆ. ನಮಗೆ ತಿಳಿದಿರುವಂತೆ ವಾಮನನಿಂದ ಇದು ಮೊದಲಾಗಿದೆ. ಇದಕ್ಕೆ ಹೆಚ್ಚಿನ ವ್ಯಾಪ್ತಿಯನ್ನು ಒದಗಿಸಿದವನು ಆನಂದವರ್ಧನ. ಅವನಿಂದಾಚೆಗೆ ಧ್ವನ್ಯಮಾನವಾದ ರಸಾದಿಗಳೇ ಕಾವ್ಯಾತ್ಮವೆಂದು ಪ್ರತಿಷ್ಠಿತವಾಯಿತು. ಈ ನಿಟ್ಟಿನಲ್ಲಿ ಅಭಿನವಗುಪ್ತನ ದುಡಿಮೆ ಬಲುಮಿಗಿಲು. ಅವನಿಗೆ ಇಂಥ ಕಾಣ್ಕೆಯನ್ನು ಒದಗಿಸಿದ ಭಟ್ಟತೌತನ ಮಾತೆಂಬಂತೆ ಕೆಳಗಿನ ಅಜ್ಞಾತಮೂಲದ ಶ್ಲೋಕವನ್ನು ಪರಿಗಣಿಸಬಹುದು:
ರಸಾದ್ಯಧಿಷ್ಠಿತಂ ಕಾವ್ಯಂ ಜೀವದ್ರೂಪತಯಾ ಯತಃ |
ಕಥ್ಯತೇ ತದ್ರಸಾದೀನಾಂ ಕಾವ್ಯಾತ್ಮತ್ವಂ ವ್ಯವಸ್ಥಿತಮ್ || (ಕಾವ್ಯಾಲಂಕಾರಸಾರಸಂಗ್ರಹವ್ಯಾಖ್ಯೆ, ಪು. ೮೩)
ರಸಾದಿಗಳಿಂದ ನೆಲೆಗೊಂಡ ಕಾವ್ಯವು ಜೀವಂತವೆನಿಸುತ್ತದೆ. ಈ ಕಾರಣದಿಂದಲೇ ರಸಾದಿಗಳು ಕಾವ್ಯದ ಆತ್ಮವೆಂದು ಸಾಬೀತಾಗುತ್ತದೆ.
ಪ್ರತೀಹಾರೇಂದುರಾಜನು ಉದ್ಭಟನ ಕೃತಿಯನ್ನು ವಿವರಿಸುವಾಗ ಮೇಲಣ ಶ್ಲೋಕವನ್ನು ಉಲ್ಲೇಖಿಸಿದ್ದಾನೆ. ಅವನು ತನ್ನ ದೃಷ್ಟಿಗೆ ಅನುಕೂಲಿಸುವಂತೆ ಇದನ್ನು ಉದಾಹರಿಸಿದ್ದರೂ ಇದರ ಋಜ್ವರ್ಥವನ್ನು ಗ್ರಹಿಸಿದಾಗ, ರಸಾದಿಗಳೇ ಕಾವ್ಯಾತ್ಮವಲ್ಲದೆ ಗುಣಾಲಂಕಾರಗಳಂಥ ಮಿಕ್ಕ ಯಾವುವೂ ಅಲ್ಲವೆಂದು ಸ್ಪಷ್ಟವಾಗುತ್ತದೆ. ಅಲ್ಲದೆ ‘ರಸಾದಿ’ ಎಂಬ ಪರಿಭಾಷೆಯನ್ನು ಕಾವ್ಯಮೀಮಾಂಸೆಯಲ್ಲಿ ಮುನ್ನೆಲೆಗೆ ತಂದವನು ಆನಂದವರ್ಧನ; ಇವನ ಪರಂಪರೆಗೆ ಸಲ್ಲುವವನು ಭಟ್ಟತೌತ. ಹೀಗಾಗಿ ಪ್ರಕೃತ ಶ್ಲೋಕವನ್ನು ಈತನದೆಂದು ಅನುಮಾನಿಸಬಹುದು. ಧ್ವನ್ಯಾಲೋಕ, ಲೋಚನ ಮತ್ತು ಅಭಿನವಭಾರತಿಗಳಲ್ಲಿ ರಸಾದಿಗಳೇ ಕಾವ್ಯಾತ್ಮವೆಂಬ ಸಂಗತಿ ಹಲವು ಕಡೆಗಳಲ್ಲಿ ಬಂದಿದೆ.[6] ಈ ಪ್ರಕಾರ ರಸ, ಭಾವ, ರಸಾಭಾಸ, ಭಾವಾಭಾಸ, ಭಾವೋದಯ, ಭಾವಶಾಂತಿ, ಭಾವಸಂಧಿ ಮತ್ತು ಭಾವಶಬಲತೆ ಎಂಬ ಎಂಟೂ ಆಸ್ವಾದ್ಯವಾಗುತ್ತವೆ. ಇವನ್ನೇ ಅಡಕವಾಗಿ ‘ರಸಾದಿ’ ಎನ್ನುತ್ತಾರೆ.[7]
* * *
ಭಟ್ಟತೌತನ ರಸಪಕ್ಷಪಾತ ಅನ್ಯಾದೃಶ. ರಸವನ್ನವನು ಕಾವ್ಯಕೌತುಕದಲ್ಲಿ ವಿಸ್ತರಿಸಿ ವಿವರಿಸಿದ್ದಿರಬೇಕು. ನಮಗೆ ಈಗ ಸಿಗುವ ಆ ಗ್ರಂಥದ ತುಂಡು-ತುಣುಕುಗಳಿಂದಲೂ ಇದು ಸ್ಪಷ್ಟವಾಗುತ್ತದೆ ಎಂಬುದಕ್ಕೆ ಕೆಳಗಿನ ಶ್ಲೋಕ ಸಾಕ್ಷಿ:
ರಸೋದ್ದೇಶಪರಃ ಶ್ಲೋಕೋ ರಸಾಧ್ಯಾಯೇ ಮುನೇಸ್ತು ಯಃ |
ಪೂರ್ಣಃ ಸರ್ವರಸಾಸ್ವಾದಾತ್[8] ಸ ಏವ ಸ್ಯಾಚ್ಚ ನಾಟಕಮ್ || (ಕಾವ್ಯಪ್ರಕಾಶದೀಪಿಕಾ, ಪು. ೨೧೮)
ಭರತಮುನಿಯು ರಸಗಳನ್ನು ಕುರಿತು (ನಾಟ್ಯಶಾಸ್ತ್ರದ) ರಸಾಧ್ಯಾಯದಲ್ಲಿ ಹೇಳಿರುವ ಶ್ಲೋಕ ಯಾವುದುಂಟೋ (೬.೧೫), ಅದು ಆಸ್ವಾದಕ್ಕೆ ಸಂಬಂಧಿಸಿದೆ. ಅಂಥ ಆಸ್ವಾದ್ಯವಾದ ರಸಗಳಿಂದ ಕೂಡಿರುವುದೇ ನಾಟಕ ಎನಿಸುತ್ತದೆ.
ಈ ಶ್ಲೋಕವನ್ನು ಉಲ್ಲೇಖಿಸುವ ಚಂಡೀದಾಸನಾಗಲಿ, ಶ್ರೀಧರನಾಗಲಿ ಆಕರ-ಲೇಖಕರನ್ನು ಹೆಸರಿಸಿಲ್ಲ. ಆದರೆ ಇದರ ಭಾವವನ್ನು ಗ್ರಹಿಸಿರುವ ಅಭಿನವಗುಪ್ತನ ಮಾತುಗಳಲ್ಲಿ ಹಾಗೂ ಅವನೇ ಉದಾಹರಿಸುವ ಭಟ್ಟತೌತನ ಮತ್ತೊಂದು ಶ್ಲೋಕಾರ್ಧದಲ್ಲಿ ಮೇಲಣ ಹೇಳಿಕೆ ತೌತನದೆಂದು ಅನುಮಾನಿಸಲು ಅವಕಾಶವಿದೆ.[9]
ಭಟ್ಟತೌತನ ಮಾತಿನಲ್ಲಿ ರಸವು ಆಸ್ವಾದ್ಯವಷ್ಟೇ ಅಲ್ಲ, ಆಸ್ವಾದವೇ ಆಗಿದೆಯೆಂಬ ಹೊಳಹು ಸಿಗುತ್ತದೆ. ಇದನ್ನೇ ಅಭಿನವಗುಪ್ತನು ಮತ್ತಷ್ಟು ವಿಸ್ತರಿಸಿದ್ದಾನೆ. ಇಲ್ಲಿ ಬರುವ ‘ನಾಟಕ’ ಎಂಬ ಶಬ್ದಕ್ಕೆ ರೂಪಕಸಾಮಾನ್ಯ ಎಂಬ ಅರ್ಥವಷ್ಟೇ ಅಲ್ಲದೆ ಎಲ್ಲ ಬಗೆಯ ಸಾಹಿತ್ಯರಚನೆ ಹಾಗೂ ಸಕಲ ವಿಧದ ಕಲೆಗಳು ಎಂಬ ತಾತ್ಪರ್ಯವೂ ಇದೆ.
[1] ಇಲ್ಲಿರುವುದು ಗಾಯಕವಾಡ್ ಪ್ರಾಚ್ಯವಿದ್ಯಾಸಂಸ್ಥೆ ಪ್ರಕಟಿಸಿದ ನಾಟ್ಯಶಾಸ್ತ್ರದ ಮೊದಲ ಆವೃತ್ತಿಯ ಪಾಠ. ಅದರ ನಾಲ್ಕನೆಯ ಆವೃತ್ತಿಯಲ್ಲಿ “ವರ್ಣನೋತ್ಕಲಿತಾಭೋಗಪ್ರೌಢೋಕ್ತ್ಯಾ” ಎಂಬ ಪಾಠವಿದೆ. ಇದನ್ನೇ ಪ್ರಕೃತ ಲೇಖನದ ಆದ್ಯಂತ ನಾವು ಆಧರಿಸಿದ ಆರ್. ಎಸ್. ನಾಗರ್ ಅವರ ಸಂಸ್ಕರಣ ಸ್ವೀಕರಿಸಿದೆ. ಆದರೆ ನಾಟ್ಯ ಮತ್ತು ಸಂಗೀತಶಾಸ್ತ್ರಗಳ ಹಿನ್ನೆಲೆಯಲ್ಲಿ ಕಂಡಾಗ ‘ಉತ್ಕಲಿತ’ ಎಂಬುದಕ್ಕೆ ಬದಲಾಗಿ ‘ಉತ್ಕಲಿಕಾ’ ಎಂಬ ಪಾಠವೇ ಹೆಚ್ಚು ಅರ್ಥವತ್ತಾಗಿ ತೋರುತ್ತದೆ.
[2] ತೀ.ನಂ.ಶ್ರೀ. ಅವರು ಈ ಶ್ಲೋಕವನ್ನು ವಿವರಿಸುತ್ತ, “ಕಲಾಮೀಮಾಂಸೆ ಇದಕ್ಕಿಂತ ಹೆಚ್ಚು ದೂರ ಹೋಗಲಾರದು” ಎಂಬ ಮಹತ್ತ್ವದ ಮಾತುಗಳನ್ನು ಆಡಿರುವುದಿಲ್ಲಿ ಸ್ಮರಣೀಯ (ಭಾರತೀಯ ಕಾವ್ಯಮೀಮಾಂಸೆ, ಪು. ೬೯)
[3] ಕುವೆಂಪು ಅವರು ‘ಕಾನೂರು ಹೆಗ್ಗಡಿತಿ’ಯ ಮೊದಲಿಗೆ “ಕಾದಂಬರಿ ಕರತಲ ರಂಗಭೂಮಿ: ಅಂಗೈ ಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ ... ವಾಚಕರು ಸಿನಿಮಾ ವಾಕ್ಚಿತ್ರವನ್ನು ತತ್ಪರತೆಯಿಂದ ನೋಡುತ್ತಿರುವ ಪ್ರೇಕ್ಷಕರಂತಾಗುತ್ತದೆ. ಹಾಗೆ ಮಾಡದಿದ್ದರೆ ಓದು ಸಾರ್ಥಕವಾಗುವುದಿಲ್ಲ” (ಅರಿಕೆ, ಪು. iii) ಎಂದು ಒಕ್ಕಣಿಸಿರುವುದನ್ನು ಇಲ್ಲಿ ನೆನೆಯಬಹುದು
[4] ಈ ಶ್ಲೋಕ ಅಭಿನವಭಾರತಿಯಲ್ಲಿಯೂ ಉದ್ಧೃತವಾಗಿದೆ. ಆರ್. ಎಸ್. ನಾಗರ್ ಅವರ ಆವೃತ್ತಿಯಲ್ಲಿ ಪೂರ್ವಾರ್ಧವು “ಸಂವೇದನಾಖ್ಯ(ಖ್ಯಯಾ)ವ್ಯಂಗ್ಯಪರಸಂವಿತ್ತಿಗೋಚರಃ” ಎಂದು ಮಾರ್ಪಟ್ಟಿದೆ (ಸಂ. ೧, ಪು. ೨೮೬). ಆದರೆ ಬರೋಡೆಯ ಆವೃತ್ತಿಯಲ್ಲಿ ನಾವು ಆಶ್ರಯಿಸಿರುವ ವ್ಯಕ್ತಿವಿವೇಕದ ಪಾಠವೇ ಇದೆ (ಸಂ. ೧, ಪು. ೨೭೧)
[5] ಕಾವ್ಯಸ್ಯಾತ್ಮಾ ಸ ಏವಾರ್ಥಃ (ಧ್ವನ್ಯಾಲೋಕಃ, ೧.೫); ನ ಹಿ ರಸಾದೃತೇ ಕಶ್ಚಿದರ್ಥಃ ಪ್ರವರ್ತತೇ (ನಾಟ್ಯಶಾಸ್ತ್ರ, ೬.೩೧ ಗದ್ಯ)
[6] “ರಸಾದಯೋ ಹಿ ದ್ವಯೋರಪಿ ತಯೋಃ [ಕಾವ್ಯನಾಟಕಯೋಃ] ಜೀವಭೂತಃ” (ಧ್ವನ್ಯಾಲೋಕ, ೩.೩೩ ವೃತ್ತಿ); “ಯೋ ರಸಾದಿರರ್ಥಃ ಸ ಏವ ಕ್ರಮೋ ಧ್ವನೇರಾತ್ಮಾ” (ಲೋಚನ, ಪು. ೭೮); “...ಪ್ರಾಣಾ ರಸಭಾವಾದ್ಯಾಃ” (ಅಭಿನವಭಾರತೀ, ಸಂ. ೨, ಪು. ೨೯೩)
[7] ರಸಾದಿಯ ಮಹತ್ತ್ವವನ್ನು ಮತ್ತಷ್ಟು ಅರಿಯಲು ಆಸಕ್ತರು ‘ಭಾರತೀಲೋಚನ’ ಕೃತಿಯನ್ನು (ಪು. ೩೧-೩೨) ಗಮನಿಸಬಹುದು.
[8] “ಪೂರ್ಣೋ ನವರಸಾದ್ವಾತ್” ಎಂಬ ಪಾಠ ಕಾವ್ಯಪ್ರಕಾಶದ ಮೇಲಣ ಶ್ರೀಧರನ ವ್ಯಾಖ್ಯೆ ‘ವಿವೇಕ’ದಲ್ಲಿದೆ (ಸಂ. ೨, ಪು. ೧೫೨)
[9] “ಯತ್ತೂಪಾಧ್ಯಾಯೈಃ ಕಾವ್ಯಕೌತುಕೇ ರಸೋದ್ದೇಶಪರಶ್ಲೋಕೇ - ‘ತಾಸಾಂ ತು ಪರಿ(ಪೂರ್ಣತ್ವೇ) ಸಿದ್ಧ ಏವ ರಸೋ ಮತಃ’ ಇತ್ಯಾದಿ ನಿರೂಪಿತಮ್” (ಅಭಿನವಭಾರತೀ, ಸಂ. ೨, ಪು. ೧೬೯); “ತೇನ ರಸ ಏವ ನಾಟ್ಯಮ್” (ಅಭಿನವಭಾರತೀ, ಸಂ. ೧, ಪು. ೨೬೬)
ಗ್ರಂಥಋಣ
• ಈಶಾದಿದಶೋಪನಿಷದಃ ಶಾಂಕರಭಾಷ್ಯಸಮೇತಾಃ. ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೬೪
• ಋಗ್ವೇದಸಂಹಿತಾ (ಸಂ. ಶ್ರೀಪಾದ ದಾಮೋದರ ಸಾತವಳೇಕರ್). ಆರ್ಯ ಸಾಹಿತ್ಯಮಂಡಲ, ಅಜಮೇರ್, ೧೯೫೨
• ಕಲ್ಪಲತಾವಿವೇಕ (ಸಂ. ಮುರಾರಿಲಾಲ್ ನಾಗರ್, ಹರಿಶಂಕರಶಾಸ್ತ್ರೀ). ಲೇಖಕ ಅಜ್ಞಾತ. ಭಾರತೀಯ ಸಂಸ್ಕೃತಿ ವಿದ್ಯಾಮಂದಿರ, ಅಹಮದಾಬಾದ್, ೧೯೬೮
• ಕಾನೂರು ಹೆಗ್ಗಡಿತಿ. ಕುವೆಂಪು. ಉದಯರವಿ ಪ್ರಕಾಶನ, ಮೈಸೂರು, ೨೦೦೦
• ಕಾವ್ಯಪ್ರಕಾಶ (ಶ್ರೀಧರನ ‘ವಿವೇಕ’ವ್ಯಾಖ್ಯಾನದ ಸಮೇತ; ಸಂ. ಎಸ್. ಪಿ. ಭಟ್ಟಾಚಾರ್ಯ; ಎರಡು ಸಂಪುಟಗಳು). ಮಮ್ಮಟ. ಕಲ್ಕತ್ತಾ ಸಂಸ್ಕೃತ ಮಹಾವಿದ್ಯಾಲಯ ಸಂಶೋಧನಮಾಲಿಕೆ, ಕಲ್ಕತ್ತಾ, ೧೯೫೯, ೧೯೬೧
• ಕಾವ್ಯಪ್ರಕಾಶ (ಚಂಡೀದಾಸನ ‘ದೀಪಿಕಾ’ವ್ಯಾಖ್ಯಾನದ ಸಮೇತ; ಸಂ. ಎಸ್. ಪಿ. ಭಟ್ಟಾಚಾರ್ಯ; ಸಂ. ೨). ಮಮ್ಮಟ. ವಾರಾಣಸೀ ಸಂಸ್ಕೃತವಿಶ್ವವಿದ್ಯಾಲಯ, ವಾರಾಣಸೀ, ೧೯೬೫
• ಕಾವ್ಯಪ್ರಕಾಶ (ಶ್ರೀವಿದ್ಯಾಚಕ್ರವರ್ತಿಯ ‘ಸಂಪ್ರದಾಯಪ್ರಕಾಶಿನೀ’, ಭಟ್ಟಗೋಪಾಲನ ‘ಸಾಹಿತ್ಯಚೂಡಾಮಣಿ’ಗಳ ಸಮೇತ; ಸಂ. ೧; ಸಂ. ರಾ. ಹರಿಹರಶಾಸ್ತ್ರೀ). ಮಮ್ಮಟ. ಅನಂತಶಯನಸಂಸ್ಕೃತಗ್ರಂಥಾವಲಿ, ತಿರುವನಂತಪುರ, ೧೯೨೬
• ಕಾವ್ಯಮೀಮಾಂಸಾ (ಸಂ. ಸಿ. ಡಿ. ದಲಾಲ್, ಆರ್. ಎ. ಶಾಸ್ತ್ರೀ; ಪರಿಷ್ಕಾರ: ಕೆ. ಎಸ್. ರಾಮಸ್ವಾಮಿ ಶಾಸ್ತ್ರೀ). ರಾಜಶೇಖರ. ಗಾಯಕವಾಡ ಪ್ರಾಚ್ಯವಿದ್ಯಾಸಂಸ್ಥೆ, ವಡೋದರಾ, ೧೯೩೪
• ಕಾವ್ಯಾಲಂಕಾರಸಾರಸಂಗ್ರಹ (ಪ್ರತೀಹಾರೇಂದುರಾಜನ ವ್ಯಾಖ್ಯೆಯ ಸಮೇತ; ಸಂ. ನಾರಾಯಣ ದಶರಥ ಬನಹಟ್ಟಿ). ಉದ್ಭಟ. ಭಂಡಾರಕರ್ ಪ್ರಾಚ್ಯವಿದ್ಯಾಸಂಸ್ಥೆ, ಪುಣೆ, ೧೯೮೨
• ಕಾವ್ಯಾಲಂಕಾರಸೂತ್ರವೃತ್ತಿ (ಗೋಪೇಂದ್ರನ ‘ಕಾಮಧೇನು’ವ್ಯಾಖ್ಯೆಯ ಸಮೇತ; ಸಂ. ಕೇದಾರನಾಥ ಮಿಶ್ರ). ವಾಮನ. ಚೌಖಂಬಾ ಅಮರಭಾರತೀ ಪ್ರಕಾಶನ, ವಾರಾಣಸಿ, ೧೯೭೯
• ಕ್ಷೇಮೇಂದ್ರಲಘುಕಾವ್ಯಸಂಗ್ರಹ (ಸಂ. ಶ್ರೀನಿವಾಸಶರ್ಮಾ ಮತ್ತು ಕೆ. ವಿ. ಸೂರ್ಯಪ್ರಕಾಶ). ಕ್ಷೇಮೇಂದ್ರ. ಸಂಸ್ಕೃತಪರಿಷತ್, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್, ೨೦೦೯
• ಚಂದ್ರಾಲೋಕ (ಸಂ. ಮಹಾದೇವ ಗಂಗಾಧರ ಬಾಕ್ರೆ). ಜಯದೇವ. ಗುಜರಾತಿ ಮುದ್ರಣಾಲಯ, ಬಾಂಬೆ, ೧೯೩೯
• ಧ್ವನ್ಯಾಲೋಕ (ಸಂಪಾದನೆ ಮತ್ತು ಆಂಗ್ಲ ಅನುವಾದ: ಕೆ. ಕೃಷ್ಣಮೂರ್ತಿ). ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೮೨
• ಧ್ವನ್ಯಾಲೋಕ (ಅಭಿನವಗುಪ್ತನ ‘ಲೋಚನ’ದ ಸಮೇತ; ಸಂ. ಪಂಡಿತ ದುರ್ಗಾಪ್ರಸಾದ, ಕಾಶೀನಾಥ ಪಾಂಡುರಂಗ ಪರಬ್. ಪರಿಷ್ಕಾರ: ವಾಸುದೇವ ಲಕ್ಷ್ಮಣಶಾಸ್ತ್ರೀ ಪಣಶೀಕರ್). ಮುನ್ಶೀರಾಮ್ ಮನೋಹರಲಾಲ್ ಪ್ರಕಾಶನ, ನವದೆಹಲಿ, ೧೯೯೮
• ನಾಟ್ಯಶಾಸ್ತ್ರ (ಅಭಿನವಗುಪ್ತನ ‘ಅಭಿನವಭಾರತಿ’ಯ ಸಮೇತ; ಸಂ. ಆರ್. ಎಸ್. ನಾಗರ್; ೪ ಸಂಪುಟಗಳು). ಭರತಮುನಿ. ಪರಿಮಳ ಪ್ರಕಾಶನ, ದೆಹಲಿ, ೧೯೮೮
• ನಾಟ್ಯಶಾಸ್ತ್ರ (ಅಭಿನವಗುಪ್ತನ ‘ಅಭಿನವಭಾರತಿ’ಯ ಸಮೇತ; ಸಂ. ಕೆ. ಕೃಷ್ಣಮೂರ್ತಿ; ಸಂ. ೧). ಭರತಮುನಿ. ಗಾಯಕವಾಡ ಪ್ರಾಚ್ಯವಿದ್ಯಾಸಂಸ್ಥೆ, ವಡೋದರಾ, ೧೯೯೨
• ಭಾರತೀಯ ಋಷಿ ಪರಂಪರೆ ಮತ್ತು ಸಂಸ್ಕೃತ ಸಾಹಿತ್ಯ. ಪಾದೆಕಲ್ಲು ನರಸಿಂಹ ಭಟ್ಟ. ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು, ೨೦೦೩
• ಭಾರತೀಯ ಕಾವ್ಯಮೀಮಾಂಸೆ. ತೀ. ನಂ. ಶ್ರೀಕಂಠಯ್ಯ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೭೩
• ಭಾರತೀಲೋಚನ. ಆರ್. ಗಣೇಶ್. ಪ್ರೇಕ್ಷಾ ಪ್ರತಿಷ್ಠಾನ, ಬೆಂಗಳೂರು, ೨೦೧೮
• ಭಾವಪ್ರಕಾಶನ, (ಸಂ. ಯದುಗಿರಿ ಯತಿರಾಜ ಸ್ವಾಮಿ ಮತ್ತು ಕೆ. ಎಸ್. ರಾಮಸ್ವಾಮಿಶಾಸ್ತ್ರೀ) ಶಾರದಾತನಯ. ಪ್ರಾಚ್ಯವಿದ್ಯಾಸಂಸ್ಥೆ, ಬರೋಡಾ, ೧೯೬೮
• ವಕ್ರೋಕ್ತಿಜೀವಿತ (ಸಂಪಾದನೆ ಮತ್ತು ಆಂಗ್ಲಾನುವಾದ: ಕೆ. ಕೃಷ್ಣಮೂರ್ತಿ). ಕುಂತಕ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೭
• ವಾಗರ್ಥವಿಸ್ಮಯಾಸ್ವಾದಃ. ಆರ್. ಗಣೇಶ್. ಪ್ರೇಕ್ಷಾ ಪ್ರತಿಷ್ಠಾನ, ಬೆಂಗಳೂರು, ೨೦೧೮
• ವ್ಯಕ್ತಿವಿವೇಕ. ಮಹಿಮಭಟ್ಟ. ಚೌಖಂಬಾ ಸಂಸ್ಕೃತಸರಣಿ ಕಾರ್ಯಾಲಯ, ವಾರಾಣಸಿ, ೧೯೩೬
• ಸಾಹಿತ್ಯದರ್ಪಣ. ವಿಶ್ವನಾಥ. ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೭೭
• ಸೌಂದರನಂದ (ಸಂ. ಸೂರ್ಯನಾರಾಯಣ ಚೌಧರಿ). ಅಶ್ವಘೋಷ. ಮೋತಿಲಾಲ್ ಬನಾರಸಿದಾಸ್ ಪ್ರಕಾಶನ, ದೆಹಲಿ, ೧೯೮೬
• ಹದನು-ಹವಣು. ಆರ್. ಗಣೇಶ್. ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು, ೨೦೧೮
- Abhinavagupta and his Works. Raghavan, V. Chaukhambha Orientalia, Varanasi, 1981
- Bhoja’s Śrṅgāraprakāśa. Raghavan, V. Punarvasu, Madras, 1978
- Essays in Sanskrit Criticism. Krishnamoorthy, K. Karnatak University, Dharwar, 1974
- Some Aspects of Literary Criticism in Sanskrit. Sankaran, A. Oriental Books Reprint Corporation, New Delhi, 1973
- Studies in Indian Poetics. Bhattacharyya, Sivaprasad. Firma KLM Publishers, Calcutta, 1981
To be continued.