ಹಸ್ತಿಮಲ್ಲ
ಕನ್ನಡ-ಸಂಸ್ಕೃತಗಳೆರಡರಲ್ಲಿಯೂ ವಿದ್ವತ್ಕವಿಯಾಗಿದ್ದ ಹಸ್ತಿಮಲ್ಲನ ಕಾಲ ಇನ್ನೂ ಅನಿಶ್ಚಿತ. ಈತನ “ಅಂಜನಾಪವನಂಜಯ” ಎಂಬ ನಾಟಕದ ಪ್ರಸ್ತಾವನೆಯಲ್ಲಿ ಬರುವ ಕೆಲವೊಂದು ಮಾತುಗಳು ವಿವೇಚನೀಯ:
ಸಮೀಚೀನಾ ವಾಚಃ ಸರಲಸರಲಾ ಕಾಪಿ ರಚನಾ
ಪರಾ ವಾಚೋಯುಕ್ತಿಃ ಕವಿಪರಿಷದಾರಾಧನಪರಾ |
ಅನಾಲೀಢೋ ಗಾಢಃ ಪರಮನತಿಗೂಢೋऽಪಿ ಚ ರಸಃ
ಕವೀನಾಂ ಸಾಮಗ್ರೀ ಝಟಿತಿ ಚಲಿತಂ ಕಂ ನ ಕುರುತೇ || (೧.೨)
ಮಿಗಿಲಾಗಿ ಸರಳವಾದ ಮಾತುಗಳ ಮನೋಹರರಚನೆ, ಕವಿಪಂಡಿತರನ್ನು ಮೆಚ್ಚಿಸಬಲ್ಲ ಅತಿಶಯವಾದ ನುಡಿಗಟ್ಟಿನ ಬೆಡಗು, ಹೊಸತೂ ಸಾಂದ್ರವೂ ಪ್ರಸ್ಫುಟವೂ ಆದ ರಸವಿಸ್ತರಗಳನ್ನುಳ್ಳ ಕವಿಗಳ ಕೃತಿ ಯಾರನ್ನು ತಾನೆ ಒಡನೆಯೇ ಪರವಶಗೊಳಿಸವು?
ಹಸ್ತಿಮಲ್ಲನು ಇಲ್ಲಿ ಕಟಾಕ್ಷಿಸಿರುವ ಅಂಶಗಳ ಪೈಕಿ ಸರಳವಾದರೂ ಸಶಕ್ತವಾದ ಮಾತು ಮಹತ್ತ್ವದ್ದಾಗಿದೆ. ಇದು ನುಡಿಗಟ್ಟಿನ ಬೆಡಗಿನಿಂದಲೂ ಕೂಡಿರಬೇಕೆಂಬ ಅಂಶ ಮತ್ತಷ್ಟು ಗ್ರಾಹ್ಯವೆನಿಸಿದೆ. ಏಕೆಂದರೆ ಮಾತಿಗೆ ಸೊಗಸು ಬರುವುದೇ ಅದರ ಸಾಂಸ್ಕೃತಿಕನೇಪಥ್ಯವಾದ ನುಡಿಗಟ್ಟಿನಿಂದ. ಇದು ಸಹಜವಾಗಿ ಮಾತನ್ನು ಸರಳಗೊಳಿಸುತ್ತದೆ; ಅದಕ್ಕೆ ಚೆಲುವನ್ನೂ ತುಂಬುತ್ತದೆ. ಆದರೆ ಆಯಾ ಭಾಷೆಗಳ ನುಡಿಗಟ್ಟು ಅವಕ್ಕೇ ವಿಶಿಷ್ಟವೆಂಬುದು ಮರೆಯಬಾರದ ಸತ್ಯ. ಹೀಗಾಗಿಯೇ ವ್ಯಾಕರಣದೃಷ್ಟಿಯಿಂದ ಸ್ಥೂಲವಾದ ಏಕರೂಪತೆಯುಳ್ಳ ಹಲವು ಭಾಷೆಗಳು ನುಡಿಗಟ್ಟಿನ ಮೂಲಕ ತಮ್ಮ ವ್ಯಕ್ತಿತ್ವವನ್ನು ಮೆರೆಸುತ್ತವೆ. ಇದರಿಂದಾಗಿ ಆಯಾ ಭಾಷೆಗಳಿಗೆ ಅನುವಾದಾತೀತವಾದ ಅದೊಂದು ಬಗೆಯ ಸೌಂದರ್ಯ ಸಿದ್ಧವಾಗುತ್ತದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಕವಿ ತನ್ನ ವೈಯಕ್ತಿಕತೆಯನ್ನು ಸ್ಥಾಪಿಸುವುದಲ್ಲದೆ ತಾನು ಬಳಸಿದ ಭಾಷೆಯು ರಸಿಕರಿಗೆ ಅನಿವಾರ್ಯವಾಗುವಂಥ ಕಲಾತ್ಮಕವಾದ ಒತ್ತಡವನ್ನೂ ತರುತ್ತಾನೆ. ಈ ಅಂಶಗಳನ್ನು ಕುರಿತು ನಮ್ಮ ಆಲಂಕಾರಿಕರು ಏನನ್ನೂ ಪ್ರಪಂಚಿಸಿಲ್ಲ. ಇದನ್ನು ಲಕ್ಷಣಾವೃತ್ತಿಯಲ್ಲಿ ವೈಯಾಕರಣರೂ ಕಾವ್ಯಮೀಮಾಂಸಕರೂ ಕಟಾಕ್ಷಿಸುವರಾದರೂ ಅದು ಲಕ್ಷಣಾಮೂಲದ ಧ್ವನಿಗಳತ್ತ ಹೆಚ್ಚು ಸರಿದು ವಾಚೋಯುಕ್ತಿಯನ್ನು ಗೌಣವಾಗಿಸುತ್ತದೆ. ಈ ನಿಟ್ಟಿನಲ್ಲಿ ಆಧುನಿಕರಾದ ಚಾರುದೇವಶಾಸ್ತ್ರಿ, ರಂಗನಾಥಶರ್ಮಾ ಮತ್ತು ಪುಲ್ಲೆಲ ಶ್ರೀರಾಮಚಂದ್ರುಡು ಅಂಥವರು ಹೆಚ್ಚಾಗಿ ದುಡಿದಿದ್ದಾರೆ. ಇವರೆಲ್ಲ ಉಭಯಶಾಸ್ತ್ರಪಂಡಿತರೆಂಬುದು ಗಮನಾರ್ಹ.
ಹೀಗೆ ಕಾವ್ಯದ ರೂಪದಲ್ಲಿ ಮುಖ್ಯವಾಗುವ ಸರಳಸುಂದರ ಪದವಿನ್ಯಾಸ ಮತ್ತು ನುಡಿಗಟ್ಟುಗಳನ್ನು ಉಲ್ಲೇಖಿಸಿದ ಬಳಿಕ ಹಸ್ತಿಮಲ್ಲನು ಕವಿತೆಯ ಹೂರಣವಾದ ರಸವನ್ನು ಕುರಿತು ಹೇಳಿರುವ ಮಾತುಗಳೂ ಮನನೀಯವಾಗಿವೆ. ಅಸ್ಫುಟವಾದ ರಸ ಕಾವ್ಯಪುಷ್ಟಿಗೆ ಮಾರಕವೇ ಸರಿ. ಹಾಗೆಂದು ರಸವು ವಾಚ್ಯವಾಗುವಂತಿಲ್ಲ. ಆದುದರಿಂದಲೇ ರಸಧ್ವನಿಯಲ್ಲಿ ಪರ್ಯವಸಿಸದ ಮಿಕ್ಕ ಧ್ವನಿಪ್ರಕಾರಗಳಿಗೆ ಮಹತ್ತ್ವ ಕಡಮೆ. ರಸಪುಷ್ಟಿಯಾಗುವುದು ಇತಿವೃತ್ತ ಮತ್ತು ಪಾತ್ರಗಳ ಪಾರಮ್ಯದಿಂದ. ಹೀಗಾಗಿ ಗಾಢವಾದ ರಸಾನುಭೂತಿಗೆ ಇವುಗಳ ಯೋಗದಾನ ದೊಡ್ಡದು. ಆದರೆ ಹೊಸತನವಿಲ್ಲದ ಕಥೆ ಮತ್ತು ಅದನ್ನು ನಡಸುವ ಪಾತ್ರಗಳು ಎಷ್ಟರ ಮಟ್ಟಿಗೆ ತಾನೆ ರಸಸ್ಫೂರ್ತಿಯನ್ನಿತ್ತಾವು? ಆದುದರಿಂದ ಇವೆಲ್ಲವನ್ನೂ ಗಮನಿಸಿ ಹಸ್ತಿಮಲ್ಲನು ಗಾಢ, ಅನಾಲೀಢ ಮತ್ತು ಅನತಿಗೂಢವೆನಿಸಿದ ರಸದ ಪ್ರಸ್ತಾವ ಮಾಡಿದ್ದಾನೆ.
ಇವೆಲ್ಲವೂ ಸಹೃದಯರಿಗೆ ಸುಲಭದಲ್ಲಿ ಸಿದ್ಧಿಸುವುದು ದೃಶ್ಯಕಾವ್ಯವರ್ಗದ ಪೈಕಿ ಶ್ರೇಷ್ಠವೆನಿಸಿದ ನಾಟಕದಲ್ಲಿಯೇ. ದಿಟವೇ, ಪಂಚಸಂಧಿಗಳ ಸತ್ತ್ವವನ್ನುಳ್ಳ ಶ್ರವ್ಯಕಾವ್ಯದಲ್ಲಿಯೂ ಇದು ಸಾಧ್ಯ. ಆದರೆ ಗೀತ-ನಾಟ್ಯಗಳಿಂದ ಕಂಗೊಳಿಸುವ ರೂಪಕಕ್ಕೆ ಸಹಜವಾಗಿಯೇ ಹೆಚ್ಚಿನ ಅನುಕೂಲತೆಯುಂಟು. ಇದನ್ನು ಕವಿಯು ಪಾರಿಪಾರ್ಶ್ವಕನ ಮೂಲಕ ಹೀಗೆ ಹೇಳಿಸಿದ್ದಾನೆ:
ಏವಮೇತತ್ | ಯತ್ ಸತ್ಯಂ ನಾಟಕಾಂತಾಃ ಕವಯಃ || (೧.೨ ಬಳಿಕ)
ಈ ಅಂಶವನ್ನು ವಾಮನನಿಂದ ಮೊದಲ್ಗೊಂಡು ಅಭಿನವಗುಪ್ತನೂ ಸೇರಿದಂತೆ ಅನೇಕ ಆಲಂಕಾರಿಕರು ಗುರುತಿಸಿದ್ದಾರೆ.[1] ಹೀಗಾಗಿಯೇ ನಾಟಕಾಂತಂ ಕವಿತ್ವಮ್ ಎಂಬ ನಾಣ್ನುಡಿಯೇ ಅವತರಿಸಿದೆ. ಬಹುಶಃ ಈ ಗಾದೆಯ ಮೂಲ ಹಸ್ತಿಮಲ್ಲನ ಮೇಲ್ಕಂಡ ಮಾತಿನಲ್ಲಿದೆಯೆಂದರೆ ತಪ್ಪಾಗದು.
ಹೀಗೆ ಕೆಲವೇ ಮಾತುಗಳಲ್ಲಿ ಬೆಲೆಯುಳ್ಳ ವಿಚಾರವನ್ನು ತಿಳಿಸಿದ ಹಸ್ತಿಮಲ್ಲನಿಗೆ ನಾವು ಋಣಿಗಳು.
“ಪೀಯೂಷವರ್ಷೀ” ಜಯದೇವ
“ಗೀತಗೋವಿಂದ”ದ ಮೂಲಕ ವಿಖ್ಯಾತನಾದ ಜಯದೇವನಿಗಿಂತ ಭಿನ್ನನಾದ ಈತ ತಾರ್ಕಿಕನೂ ಆಲಂಕಾರಿಕನೂ ಆಗಿದ್ದ ಸರಸಕವಿ. ಇವನ ಸುಕುಮಾರಮನೋಹರವಾದ ನಾಟಕ “ಪ್ರಸನ್ನರಾಘವ”ದ ಕೆಲವೊಂದು ಮಾತುಗಳು ಮನನೀಯವಾಗಿವೆ. ಮೊದಲಿಗೆ ಕಾವ್ಯ-ಶಾಸ್ತ್ರಗಳ ಸೀಮೆಗಳಲ್ಲಿ ಸ್ವೈರವಿಹಾರ ಮಾಡುವ ಲೇಖಕನ ಮನೋಧರ್ಮ ವ್ಯಾಘಾತಕವಾಗದೆಂಬ ಅಭಿಪ್ರಾಯ ನಿರೂಪಿತವಾಗಿದೆ:
ಏಷಾಂ ಕೋಮಲಕಾವ್ಯಕೌಶಲಕಲಾಲೀಲಾವತೀ ಭಾರತೀ
ತೇಷಾಂ ಕರ್ಕಶತರ್ಕವಕ್ರವಚನೋದ್ಗಾರೇऽಪಿ ಕಿಂ ಹೀಯತೇ |
ಯೈಃ ಕಾಂತಾಕುಚಮಂಡಲೇ ಕರರುಹಾಃ ಸಾನಂದಮಾರೋಪಿತಾ-
ಸ್ತೈಃ ಕಿಂ ಮತ್ತಕರೀಂದ್ರಕುಂಭಶಿಖರೇ ನಾರೋಪಣೀಯಾಃ ಶರಾಃ || (೧.೧೮)
ಯಾರ ನುಡಿಯು ಕೋಮಲವಾದ ಕಾವ್ಯಕೌಶಲದಲ್ಲಿ ಲೀಲೆಯಿಂದ ಪ್ರವರ್ತಿಸುವುದೋ ಅದು ಕರ್ಕಶವಾದ ತರ್ಕದಲ್ಲಿ ದುಡಿದರೆ ನಷ್ಟವೇನುಂಟು? ಸುಂದರಿಯರ ಎದೆಯಲ್ಲಿ ಹಿಗ್ಗಿನಿಂದ ನಲಿದಾಡುವ ಸೆಳ್ಳುಗುರುಳ್ಳ ಕೈಗಳು ಗಂಧಸಿಂಧುರಗಳ ಕುಂಭಸ್ಥಳಗಳ ಮೇಲೆ ನಿಶಿತನಾರಾಚಗಳನ್ನು ಪ್ರಯೋಗಿಸಲು ಆಗುವುದಿಲ್ಲವೇ?
ಸಂಸ್ಕೃತಕವಿಗಳಿಗೆ ಲಾಗಾಯ್ತಿನಿಂದ ಒಗ್ಗಿಬಂದ ಅಗ್ಗದ ದೃಷ್ಟಾಂತವನ್ನು ಮುಂದಿಟ್ಟುಕೊಂಡು ಕಾವ್ಯ-ಶಾಸ್ತ್ರಗಳ ಮಾಧ್ಯಮಗಳಲ್ಲಿ ಒಂದೇ ಮನಸ್ಸು ಚೆನ್ನಾಗಿ ದುಡಿಯಬಲ್ಲ ಸಂಭವನೀಯತೆಯನ್ನು ಜಯದೇವನು ರೂಪಿಸಿದ ಬಗೆ ಸ್ವೀಕಾರ್ಯವೇ ಹೌದು. ಏಕೆಂದರೆ ಕಾವ್ಯ-ಶಾಸ್ತ್ರಗಳ ಮಾರ್ಗಗಳು ವಿಭಿನ್ನವೇ ಆದರೂ ವಿರುದ್ಧವೇನಲ್ಲ.[2] ಇದನ್ನು ಕುರಿತು ನಮ್ಮ ಆಲಂಕಾರಿಕರು ಹೇಳಿಯೂ ಇದ್ದಾರೆ. ಇವರೆಲ್ಲ ನಿರಪವಾದವಾಗಿ ಕಾವ್ಯರಚನೆಗೆ ಶಾಸ್ತ್ರವ್ಯುತ್ಪತ್ತಿಯ ಸಂಸ್ಕಾರ ಮುಖ್ಯವೆಂದು ಸಾರಿದ್ದಾರೆ. ಇಂತಿರಲು ಶಾಸ್ತ್ರನಿರ್ಮಾಣದಲ್ಲಿ ಕವಿಯು ತೊಡಗಿಕೊಂಡರೆ ತಪ್ಪೇನಿಲ್ಲ. ಆದರೆ ಉಭಯಮಾರ್ಗಗಳನ್ನು ಸರಿಯಾಗಿ ನಿರ್ವಹಿಸುವ ಪ್ರಜ್ಞೆ-ಔಚಿತ್ಯಗಳು ಬೇಕೇ ಬೇಕು. ಪ್ರಸಿದ್ಧಕವಿಗಳಾದ ಶ್ರೀಹರ್ಷ-ವೇದಾಂತದೇಶಿಕರಂಥ ಎಷ್ಟೋ ಮಂದಿ ಶಾಸ್ತ್ರನಿರ್ಮಾಣದಲ್ಲಿಯೂ ಹೆಸರಾದವರು. ಶಾಸ್ತ್ರಪ್ರಪಂಚಕ್ಕೆ ಮಿಗಿಲಾಗಿ ತೆತ್ತುಕೊಂಡಿದ್ದರೂ ಕವಿಹೃದಯವನ್ನು ಉಳ್ಳವರಾಗಿದ್ದ ವಿದ್ವಾಂಸರು ಮತ್ತೂ ಅನೇಕರಿದ್ದಾರೆ. ಈ ಪಂಕ್ತಿ ಭಗವತ್ಪಾದ ಶಂಕರರಿಂದ ಮೊದಲ್ಗೊಂಡು ಅಪ್ಪಯ್ಯದೀಕ್ಷಿತರವರೆಗೆ ವಿಸ್ತರಿಸಿಕೊಂಡಿದೆ. ಇನ್ನು ಆಲಂಕಾರಿಕರ ಪೈಕಿ ದಂಡಿ, ಆನಂದವರ್ಧನ, ರಾಜಶೇಖರ, ಕ್ಷೇಮೇಂದ್ರ, ವಿಶ್ವನಾಥ, ಜಗನ್ನಾಥರಂಥ ಅಸಂಖ್ಯರು ಸ್ವಯಂ ಕವಿಗಳಾಗಿದ್ದು ಕಾವ್ಯಮೀಮಾಂಸೆಯನ್ನು ಬೆಳೆಸಿದ್ದಾರೆ. ತೀರ ಈಚೆಗಷ್ಟೇ—ಅದೂ ಪಾಶ್ಚಾತ್ತ್ಯಪ್ರಭಾವದ ಕಾರಣ—ಕಾವ್ಯ-ಶಾಸ್ತ್ರಗಳ ನಿರ್ವಾಹ ಒಬ್ಬನಿಂದಲೇ ಸಾಧ್ಯವಿಲ್ಲವೆಂಬ ಪ್ರಥೆ ಹುಟ್ಟಿದೆ. ಆದರೆ ಪಾಶ್ಚಾತ್ತ್ಯರಲ್ಲಿಯೂ ಇದಕ್ಕೆ ಸಾಕಷ್ಟು ಅಪವಾದಗಳುಂಟು.
ಜಯದೇವನು ಮುಂದಿನ ಪದ್ಯದಲ್ಲಿ ವಿಪುಲವಾದ ಸರ್ಜನಶೀಲತೆಯುಳ್ಳ ಕವಿಯೂ ಮತ್ತೊಬ್ಬ ಕವಿಯ ನುಡಿಗಳನ್ನು ನಿರಾಕರಿಸಬೇಕಿಲ್ಲವೆಂಬ ಬೆಲೆಯುಳ್ಳ ಮಾತನ್ನಾಡಿದ್ದಾನೆ:
ಅಪಿ ಮುದಮುಪಯಾಂತೋ ವಾಗ್ವಿಲಾಸೈಃ ಸ್ವಕೀಯೈಃ
ಪರಭಣಿತಿಷು ತೋಷಂ ಯಾಂತಿ ಸಂತಃ ಕಿಯಂತಃ |
ನಿಜಘನಮಕರಂದಸ್ಯಂದಪೂರ್ಣಾಲವಾಲಃ
ಕಲಶಸಲಿಲಸೇಕಂ ನೇಹತೇ ಕಿಂ ರಸಾಲಃ || (೧.೧೯)
ಸತ್ಕವಿಗಳು ತಮ್ಮದೇ ಆದ ನುಡಿಬೆಡಗಿನಲ್ಲಿ ನಲವನ್ನು ಕಾಣುತ್ತಿದ್ದರೂ ಮತ್ತೊಬ್ಬರ ಮಾತುಗಳಲ್ಲಿ ಸಂತಸವನ್ನು ಪಡೆಯದಿರುವುದಿಲ್ಲ. ಮಾವಿನ ಮರವು ತನ್ನದೇ ಆದ ಮಕರಂದದ ಧಾರೆಯಿಂದ ತುಂಬಿತುಳುಕುವ ಪಾತಿಯನ್ನು ಹೊಂದಿದ್ದರೂ ಒಂದು ಕೊಡ ನೀರಿನ ಸೇಚನವನ್ನು ನಿರಾಕರಿಸುವುದೇನು?
ಕವಿಗೆ ಕವಿ ಮುನಿಯುವನೆಂದು ಗಾದೆಯ ಮಾತು. ಆದರೆ ಹೃದಯವೈಶಾಲ್ಯವಿರುವ ಮಹನೀಯರಿಗೆ ಇದು ಅನ್ವಯಿಸದು. ಜೊತೆಗೆ ಒಳ್ಳೆಯ ಕವಿಯಾಗಲೆಳಸುವವನು ಪರಕವಿಗಳ ಕೃತಿಗಳನ್ನು ಆಲಿಸಿಯೇ ಬೆಳೆಯಬೇಕು. ಇದನ್ನು ಕ್ಷೇಮೇಂದ್ರನು ಸೊಗಸಾಗಿ ಉಟ್ಟಂಕಿಸಿದ್ದಾನೆ.[3] ಭಾವಯಿತ್ರೀ ಪ್ರತಿಭೆಯೇ ಇಲ್ಲದ ಕವಿಯ ಕಾರಯಿತ್ರೀ ಪ್ರತಿಭೆ ಯಾವ ಮಾತ್ರದ್ದು?
ಮುಂದಿನ ಪದ್ಯದಲ್ಲಿ ವಕ್ರೋಕ್ತಿಯ ಮಾಹಾತ್ಮ್ಯ ವಿವೃತವಾಗಿದೆ:
ನಿಂದ್ಯಂತೇ ಯದಿ ನಾಮ ಮಂದಮತಿಭಿರ್ವಕ್ರಾಃ ಕವೀನಾಂ ಗಿರಃ
ಸ್ತೂಯಂತೇ ನ ಚ ನೀರಸೈರ್ಮೃಗದೃಶಾಂ ವಕ್ರಾಃ ಕಟಾಕ್ಷಚ್ಛಟಾಃ |
ತದ್ವೈದಗ್ಧ್ಯವತಾಂ ಸತಾಮಪಿ ಮನಃ ಕಿಂ ನೇಹತೇ ವಕ್ರತಾಂ
ಧತ್ತೇ ಕಿಂ ನ ಹರಃ ಕಿರೀಟಶಿಖರೇ ವಕ್ರಾಂ ಕಲಾಮೈಂದವೀಮ್ || (೧.೨೦)
ಮಂದಮತಿಗಳು ಸತ್ಕವಿಗಳ ಸೂಕ್ತಿಗಳನ್ನು ನಿಂದಿಸಿದರೆ ನಷ್ಟವೇನು? ಸುಂದರಿಯರ ಕುಡಿನೋಟಗಳನ್ನು ಅರಸಿಕರು ಮೆಚ್ಚುವುದಿಲ್ಲವಷ್ಟೆ. ಆದರೆ ವಿದ್ವದ್ರಸಿಕರ ಮನಸ್ಸು ವಕ್ರೋಕ್ತಿಗಳಿಗೆ ಸದಾ ತೆರೆದಿರುತ್ತದೆ. ಸರ್ವಜ್ಞನೆನಿಸಿದ ಶಿವನು ವಕ್ರವಾದ ಬಾಲೇಂದುಲೇಖೆಯನ್ನು ಮುಡಿಗೇರಿಸಿಕೊಂಡೇ ಇರುವನಷ್ಟೆ.
ಕಾವ್ಯದಲ್ಲಿ ಪ್ರೌಢಿಮೆಯ ಪಾಲು ಎಷ್ಟಿರಬೇಕೆಂಬ ಚರ್ಚೆ ಇಂದು-ನಿನ್ನೆಯದಲ್ಲ. ಸುಹೃತ್ಸಂಮಿತೆಗಳಾದ ಇತಿಹಾಸ-ಪುರಾಣಗಳಲ್ಲಿ ವಕ್ರೋಕ್ತಿಗೆ ಅವಕಾಶ ಸಹಜವಾಗಿಯೇ ಕಡಮೆ. ಆದರೆ ಕಲಾಪಕ್ಷಪಾತವೇ ಮಿಗಿಲಾಗಿರುವ ಕಾಂತಾಸಂಮಿತೆಯೆನಿಸಿದ ಕಾವ್ಯದಲ್ಲಿ ಇದಕ್ಕೆ ಎಡೆಯಿಲ್ಲದಿದ್ದರೆ ಹೇಗೆ? ಈ ಕಾರಣದಿಂದಲೇ ವಿದಗ್ಧರಸಿಕರ ಮನಸ್ಸನ್ನು ರಂಜಿಸಬಲ್ಲ ಕಲೆಗೆ ಹೆಚ್ಚಿನ ಪ್ರಾಶಸ್ತ್ಯ ಸಂದಿದೆ. ಯಾವುದೇ ಸಂಸ್ಕೃತಿಯಲ್ಲಿ ಇಂಥ ಪರಿಣಾಮವನ್ನು ಗಮನಿಸಬಹುದು. ಪ್ರಜಾತಂತ್ರದ ಸಮಾನತೆಯ ಸೂತ್ರಗಳನ್ನು ಇಲ್ಲೆಲ್ಲ ಅವಿಚಾರಿತವಾಗಿ ಅನ್ವಯಿಸಲಾಗದು. ಆದರೆ ರಸದಲ್ಲಿ ಪರ್ಯವಸಿಸದೆ ಅಗ್ಗದ ಚಮತ್ಕಾರದಲ್ಲಿಯೇ ಅಸ್ತಂಗತಿಸುವ ವಕ್ರೋಕ್ತಿ ಅವಾಂಛಿತ. ಈ ಅರ್ಥದಲ್ಲಿ ಜಯದೇವನು ಸೂಚಿಸುವ ವಕ್ರೋಕ್ತಿಯನ್ನು ಭಾಮಹ-ಕುಂತಕರಂಥವರ ತಿಳಿವಿನ ಬೆಳಕಿನಲ್ಲಿ ಗ್ರಹಿಸಬೇಕಲ್ಲದೆ ಮಮ್ಮಟಾದಿಗಳು ಹೇಳುವ ಸಂಕುಚಿತವಾದ ವಕ್ರೋಕ್ತ್ಯಲಂಕಾರವೆಂಬ ರೂಪದಲ್ಲಿ ಅಲ್ಲ.
ಬಳಿಕ ಜಯದೇವನು ಕವಿತೆ ಕವಿಗೀಯಬಲ್ಲ ತೃಪ್ತಿಯನ್ನು ಕುರಿತು ಪ್ರಪಂಚಿಸುತ್ತಾನೆ:
ನ ಬ್ರಹ್ಮವಿದ್ಯಾ ನ ಚ ರಾಜಲಕ್ಷ್ಮೀ-
ಸ್ತಥಾ ಯಥೇಯಂ ಕವಿತಾ ಕವೀನಾಮ್ |
ಲೋಕೋತ್ತರೇ ಪುಂಸಿ ನಿವೇಶ್ಯಮಾನಾ
ಪುತ್ರೀವ ಹರ್ಷಂ ಹೃದಯೇ ತನೋತಿ || (೧.೨೩)
ಉದಾತ್ತನಾದ ನಾಯಕನನ್ನಾಶ್ರಯಿಸಿ ರೂಪಿಸುವ ಕವಿತೆ ಸುಕವಿಗಳ ಪಾಲಿಗೆ ಬ್ರಹ್ಮವಿದ್ಯೆಗಿಂತ, ಸಾಮ್ರಾಜ್ಯಪ್ರಾಪ್ತಿಗಿಂತ ಮಿಗಿಲೆನ್ನಬೇಕು. ಇದು ಸತ್ಪಾತ್ರನಿಗೆ ಸಮರ್ಪಿಸಿದ ಮಗಳು ತಂದೆಗೆ ಹರ್ಷವನ್ನು ಕೊಡುವಂತೆಯೇ ಸರಿ.
ಯಾರಿಗಾದರೂ ತಮ್ಮದಾದ ವೃತ್ತಿ-ಪ್ರವೃತ್ತಿಗಳ ವಿಷಯದಲ್ಲಿ ಹೆಚ್ಚಿನ ಅಭಿಮಾನವಿರುತ್ತದೆ. ಇದಕ್ಕೆ ಕವಿಗಳೂ ಹೊರತಲ್ಲ. ವಾಗ್ವಿಲಾಸದ ಮೂಲ-ಚೂಲಗಳನ್ನು ಬಲ್ಲವರಾದ ಕಾರಣ ಅವರು ಈ ಹೆಮ್ಮೆಯನ್ನು ಹಲವು ಬಗೆಯಲ್ಲಿ ಹೇಳಿಕೊಳ್ಳುವುದರಲ್ಲಿಯೂ ಅಗ್ರಗಣ್ಯರು.[4] ಹೀಗಾಗಿ ಪ್ರಕೃತಪದ್ಯವನ್ನು ಗಂಭೀರವಾಗಿ ಸ್ವೀಕರಿಸಬೇಕಿಲ್ಲವೆಂದು ಹಲವರು ಬಗೆಯಬಹುದು. ಆದರೆ ಇಲ್ಲಿರುವ ಆಶಯ ಹೆಮ್ಮೆಗಿಂತ ಹೆಚ್ಚಾಗಿ ತೃಪ್ತಿಯನ್ನು ಕುರಿತದ್ದು. ಇದು ಇಲ್ಲಿಯ ದೃಷ್ಟಾಂತದಿಂದಲೇ ಸುಸ್ಪಷ್ಟ. ಕವಿಯಾದವನಿಗೆ ಖ್ಯಾತಿ, ಲಾಭ, ಸಮ್ಮಾನಗಳಿಗಿಂತ ಈ ಬಗೆಯ ಸ್ವಸಂತೃಪ್ತಿಯೇ ಮಿಗಿಲೆನಿಸಬೇಕು. ಇಲ್ಲವಾದಲ್ಲಿ ಅವನ ಕೈಯಲ್ಲಿಲ್ಲದ ಕೀರ್ತಿ-ಪ್ರತಿಷ್ಠೆಗಳು ದಕ್ಕದೆ ಹೋದಾಗ ಸಂಕಟ ತಪ್ಪದು. ಸ್ವಸಂತೋಷವಿಲ್ಲದ ಯಾವುದೇ ವ್ಯಕ್ತಿ ಮತ್ತೊಬ್ಬರಿಗೆ ಸಂತೋಷವನ್ನು ಕೊಡಲಾರನೆಂದ ಬಳಿಕ ಇದಕ್ಕೆ ಕವಿಯು ಹೇಗೆ ತಾನೆ ಅಪವಾದವಾದಾನು? ಆದುದರಿಂದಲೇ ಮಮ್ಮಟಾದಿಗಳು ಕಾವ್ಯವು ಯಶಸ್ಸು, ಸಂಪತ್ತಿ, ವ್ಯವಹಾರಕೌಶಲಗಳಂಥ ಪ್ರಯೋಜನಗಳನ್ನು ಕೊಡುವುದೆಂದು ಒಕ್ಕಣಿಸಿದ್ದರೂ ಸ್ವತಂತೋಷಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದಾರೆ. ಭಟ್ಟನಾಯಕ-ಧನಂಜಯರಂಥವರು ಕಾವ್ಯಕ್ಕೆ ಆನಂದವಲ್ಲದೆ ಬೇರೆಯ ಪ್ರಯೋಜನವೇ ಇಲ್ಲವೆಂದು ಸಾರಿದ್ದಾರೆಂಬುದನ್ನು ನಾವು ಈಗಾಗಲೇ ಗಮನಿಸಿದ್ದೇವೆ.
ಒಟ್ಟಿನಲ್ಲಿ ಜಯದೇವನ ಒಳನೋಟದಲ್ಲಿ ಹೆಚ್ಚಿನ ಹೊಸಬೆಳಕಿಲ್ಲದಿದ್ದರೂ ಸಿದ್ಧವಿಷಯಗಳ ಸ್ಫುಟೀಕರಣ ಸೊಗಸಾಗಿ ಸಾಗಿದೆ.
[1] ಸಂದರ್ಭೇಷು ದಶರೂಪಕಂ ಶ್ರೇಯಃ || (ಕಾವ್ಯಾಲಂಕಾರಸೂತ್ರವೃತ್ತಿ, ೧.೩.೩೦); ನಾಟ್ಯಾತ್ ಸಮುದಾಯರೂಪಾದ್ರಸಾಃ | ಯದಿ ವಾ ನಾಟ್ಯಮೇವ ರಸಾಃ | ರಸಸಮುದಾಯೋ ಹಿ ನಾಟ್ಯಮ್ ... ಕಾವ್ಯೇऽಪಿ ನಾಟ್ಯಾಯಮಾನ ಏವ ರಸಾಃ ... ಕಾವ್ಯಂ ತಾವನ್ಮುಖ್ಯತೋ ದಶರೂಪಾತ್ಮಕಮೇವ ... ಕಾವ್ಯಂ ಚ ನಾಟ್ಯಮೇವ || (ಅಭಿನವಭಾರತಿ, ಸಂ. ೧, ಪು. ೨೮೮–೮೯)
[2] ದ್ವೇ ವರ್ತ್ಮನೀ ಗಿರೋ ದೇವ್ಯಾಃ ಶಾಸ್ತ್ರಂ ಚ ಕವಿಕರ್ಮ ಚ | ಪ್ರಜ್ಞೋಪಜ್ಞಂ ತಯೋರಾದ್ಯಂ ಪ್ರತಿಭೋದ್ಭವಮಂತಿಮಮ್ ||
(ಕಾವ್ಯಪ್ರಕಾಶದ “ಸಂಪ್ರದಾಯಪ್ರದರ್ಶಿನೀ” ಟೀಕೆಯಲ್ಲಿ ಉದ್ಧೃತ, ಪು. ೧೩)
ಸಾಹಿತ್ಯೇ ಸುಕುಮಾರವಸ್ತುನಿ ದೃಢನ್ಯಾಯಗ್ರಹಗ್ರಂಥಿಲೇ
ತರ್ಕೇ ವಾ ಮಯಿ ಸಂವಿಧಾತರಿ ಸಮಂ ಲೀಲಾಯತೇ ಭಾರತೀ |
ಶಯ್ಯಾ ವಾಸ್ತು ಮೃದೂತ್ತರಚ್ಛದವತೀ ದರ್ಭಾಂಕುರೈರಾಸ್ತೃತಾ
ಭೂಮಿರ್ವಾ ಹೃದಯಂಗಮೋ ಯದಿ ಪತಿಸ್ತುಲ್ಯಾ ರತಿರ್ಯೋಷಿತಾಮ್ ||
(ನೈಷಧೀಯಚರಿತದ ಪ್ರಸ್ತಾವನೆಯಲ್ಲಿ ಉಲ್ಲಿಖಿತ, ಪು. ೩)
[3] ಸಹವಾಸಃ ಕವಿವರೈರ್ಮಹಾಕಾವ್ಯಾರ್ಥಚರ್ವಣಮ್ ... ಪರಸೂಕ್ತಿಪರಿಗ್ರಹಃ || (ಕವಿಕಂಠಾಭರಣ, ೨.೪,೧೬)
[4] ಚತುರ್ವರ್ಗಫಲಾಸ್ವಾದಮಪ್ಯತಿಕ್ರಮ್ಯ ತದ್ವಿದಾಮ್ | ಕಾವ್ಯಾಮೃತರಸೇನಾಂತಶ್ಚಮತ್ಕಾರೋ ವಿತನ್ಯತೇ || (ವಕ್ರೋಕ್ತಿಜೀವಿತ, ೧.೫)
To be continued.