ಪ್ರತಿಕೃತಿ, ಪ್ರತಿಮಾ
ಸಾಹಿತ್ಯವೇ ಮೊದಲಾದ ಸಕಲ ಕಲೆಗಳಲ್ಲಿ ಸತ್ಯವು ಮೈದೋರುವ ಎರಡು ವಿಧಾನಗಳನ್ನು ಪುಟ್ಟಪ್ಪನವರು ಪ್ರತಿಕೃತಿ ಮತ್ತು ಪ್ರತಿಮಾ ಎಂದು ಹೆಸರಿಸಿದ್ದಾರೆ. ಅವರ ಪ್ರಕಾರ “ಇದ್ದುದನ್ನು ಇದ್ದಂತೆಯೆ, ನಡೆದುದನ್ನು ನಡೆದಂತೆಯೆ ಚಿತ್ರಿಸಲು ಪ್ರಯತ್ನಿಸುತ್ತದೆ ಪ್ರತಿಕೃತಿವಿಧಾನ ... ಇದ್ದುದನ್ನು ಇದ್ದಂತೆಯೆ, ನಡೆದುದನ್ನು ನಡೆದಂತೆಯೆ ಚಿತ್ರಿಸಬೇಕು ಎಂಬ ಪ್ರಯತ್ನಕ್ಕೆ ಹೋಗದೆ, ಇದ್ದದ್ದೂ ನಡೆದದ್ದೂ ತನಗೆ ಹೇಗೆ ಗೋಚರಿಸಿತೋ ಆ ಅನುಭವಕ್ಕೆ ಆಕಾರಕಲ್ಪನೆ ಮಾಡುವ ಪ್ರಯತ್ನದ ರೀತಿಯನ್ನು ಪ್ರತಿಮಾವಿಧಾನ ಎಂದು ಕರೆಯುತ್ತೇವೆ ... ಪ್ರತಿಕೃತಿಯ ದೃಷ್ಟಿ ಲೌಕಿಕ ದೃಷ್ಟಿ, ಅದರ ಪ್ರಯೋಜನವೂ ಸಾಮಾನ್ಯವಾಗಿ ಲೌಕಿಕವೆ. ಪ್ರತಿಮಾದೃಷ್ಟಿ ಅಪೂರ್ವವಾಗಿ ಲೌಕಿಕವಾಗಿದ್ದರೂ ಸಾಧಾರಣವಾಗಿ ಅಲೌಕಿಕ.”[1] ಇವು ಕ್ರಮವಾಗಿ ಅಭಿಧೆ ಮತ್ತು ಧ್ವನಿಗಳನ್ನು ಬೇರೆಯ ಮಾತುಗಳಲ್ಲಿ ಹೇಳುತ್ತಿವೆಯೆಂಬುದು ನಿಚ್ಚಳವಾಗಿದೆ.
ಪುಟ್ಟಪ್ಪನವರು ಪ್ರತಿಮೆಯ ಪರಿಕಲ್ಪನೆಯನ್ನು ಪಾಶ್ಚಾತ್ತ್ಯರ ‘ಇಮೇಜ್’ ಮತ್ತು ‘ಮಿಥ್’ಗಳಿಗೆ ಸಂವಾದಿಯಾಗಿ ಗ್ರಹಿಸಿದ್ದಾರೆ. ಇದು ಅವರ ಮುಂದಿನ ಮಾತುಗಳಿಂದ ಸ್ಪಷ್ಟವಾಗುತ್ತದೆ: “ಪ್ರತಿಮೆ ಯಾವ ಒಬ್ಬ ವ್ಯಕ್ತಿಯ ಒಂದು ಮನಸ್ಸಿನ ರಚನೆಯಲ್ಲ. ಅದು ಒಂದು ಧರ್ಮಕ್ಕೆ ಸೇರಿದ ಒಂದು ಜನಾಂಗದ ಸಮಷ್ಟಿಮನಸ್ಸಿನ ಸಾಮೂಹಿಕ ಸೃಜನೆ.”[2] “...ನಮ್ಮ ಪುರಾಣಗಳ ಅನಂತ ವಿಸ್ತೀರ್ಣದಲ್ಲಿ ಅರ್ಥಗರ್ಭಿತವಾದ ಅದ್ಭುತ ಕಥೋಪಕಥನ ಪ್ರತಿಮೆಗಳು ಅಸಂಖ್ಯವಾಗಿವೆ ... ದೇವಾಸುರರ ಅಮೃತಮಂಥನದ ಕಥಾಪ್ರತಿಮೆ, ಭಗೀರಥಪ್ರಯತ್ನದ ಗಂಗಾವತರಣದ ಕಥಾಪ್ರತಿಮೆ, ಬಲಿಚಕ್ರವರ್ತಿಯ ತಲೆಮೆಟ್ಟಿ ಪಾತಾಳಕ್ಕಟ್ಟಿದ ವಾಮನತ್ರಿವಿಕ್ರಮ ಕಥಾಪ್ರತಿಮೆ, ಹರನು ಮನ್ಮಥನನ್ನು ಸುಟ್ಟರೂ ಗಿರಿಜೆಯನ್ನು ಕೈಹಿಡಿದ ಕಥಾಪ್ರತಿಮೆ, ವಿಶ್ವಾಮಿತ್ರ ತ್ರಿಶಂಕು ಕಥಾಪ್ರತಿಮೆ, ಭಸ್ಮಾಸುರ ಮೋಹಿನೀ ಕಥಾಪ್ರತಿಮೆ, ಇತ್ಯಾದಿ ಇತ್ಯಾದಿ ಪ್ರಧಾನ ಪ್ರತಿಮೆಗಳೂ ಮಂದರಗಿರಿ, ವಾಸುಕಿ, ಹಾಲಾಹಲ, ಹಣೆಗಣ್ಣು, ತ್ರಿವಿಕ್ರಮಪಾದ, ಮೋಹಿನಿ ಇಂತಹ ಸಾವಿರಾರು ಅಂಗೋಪಾಂಗ ಪ್ರತಿಮೆಗಳೂ ವಿಪುಲ ಸಂಖ್ಯೆಯಲ್ಲಿ ನಮ್ಮ ಮಾತು, ಮತ, ಸಂಸ್ಕೃತಿ, ಸಾಹಿತ್ಯ, ಕಾವ್ಯ, ಕಲೆಗಳಲ್ಲಿ ಭಾವನೆಯ, ಚಿಂತನೆಯ, ಆಲೋಚನೆಯ, ಅನುಭವದ ರಕ್ತನಾಳಗಳಂತೆ, ಸ್ನಾಯುಗಳಂತೆ, ನರಗಳಂತೆ ಅವಯವೈಕ್ಯವಾಗಿವೆ.”[3]
ಕುವೆಂಪು ಪ್ರತಿಮೆಯನ್ನು ರೂಪಕಕ್ಕೆ ಸಂಬದ್ಧವಾಗಿಯೂ ಕಾಣಿಸುತ್ತಾರೆ. ಇದು ಪಾಶ್ಚಾತ್ತ್ಯ ಕಾವ್ಯಚಿಂತಕರು ಅಲಂಕಾರವಾಗಿ ಮಾತ್ರವಲ್ಲದೆ ವ್ಯಾಪಕವಾಗಿ ಗ್ರಹಿಸಿರುವ ‘ಮೆಟಫರ್’ ತತ್ತ್ವಕ್ಕೆ ಸಂವಾದಿಯಾಗಿದೆ. ವಿಶೇಷವೆಂದರೆ, ಪುಟ್ಟಪ್ಪನವರ ಪರಿಕಲ್ಪನೆಯಲ್ಲಿ ಉಪಮಾನ-ಉಪಮೇಯಗಳ ಅಭೇದವನ್ನು ಮೂಲವಾಗಿಸಿಕೊಂಡಿರುವ ರೂಪಕಾಲಂಕಾರವೂ ವಾಕ್ಯಮಾತ್ರವಿಶ್ರಾಂತವಾಗಿರದೆ ಹೆಚ್ಚಿನ ವ್ಯಾಪ್ತಿಯುಳ್ಳ ಮೆಟಫರ್ ತತ್ತ್ವವೂ ಸಮ್ಮಿಳಿತವಾಗಿವೆ. “ರೂಪಕ ಕಾವ್ಯದ ಜೀವಾಳದಂತಿದೆ ... ಕಾವ್ಯವೆಲ್ಲ ಪ್ರತಿಮಾಜಗತ್ತೆ ಆಗಿರುವುದರಿಂದ ಅಲ್ಲಿ ಅನಿವಾರ್ಯವಾಗಿ ರೂಪಕಕ್ಕೆ ಅಗ್ರಸ್ಥಾನ ... ಕಾವ್ಯದಲ್ಲಿ ರೂಪಕ ಕವಿಚೇತನದ ಶಕ್ತಿಮಾಪಕ ... ಅದೊಂದು ಶಬ್ದಪ್ರಕಾರ ಮಾತ್ರವಲ್ಲ; ಅರ್ಥಪ್ರಕಾರ ಮಾತ್ರವಲ್ಲ; ಅನುಭವಪ್ರಕಾರವೂ ಆಗಿದೆ ... ಇದ್ದುದು ಯಾವುದನ್ನಾದರೂ ತೀಕ್ಷ್ಣವಾಗಿ ಹೇಳುವುದಷ್ಟೆ ಅದರ ಕೆಲಸವಲ್ಲ; ಅದುವರೆಗೂ ಇಲ್ಲದುದನ್ನು ಸೃಷ್ಟಿಸುವುದೂ ಅದರ ಕರ್ತವ್ಯ ... ಅದೊಂದು ಅಪರೋಕ್ಷ ಸಾಕ್ಷಾತ್ಕಾರ. ಅನಿವಾರ್ಯತೆ, ಅಸದೃಶತೆ, ಏಕೈಕತಾಭಾವ - ಇವು ಉತ್ತಮ ರೂಪಕದ ಪ್ರಾಣಸ್ಪಂದನಗಳಾಗಿರುತ್ತವೆ.”[4] ಈ ಮಾತುಗಳು ನಮ್ಮಲ್ಲಿ ಬೆಳೆದುಬಂದ ರೂಪಕಾಲಂಕಾರವನ್ನು ಕುರಿತ ಚರ್ಚೆಯನ್ನು ಧನಾತ್ಮಕವಾಗಿ ಮುಂದುವರಿಸಿರುವುದಷ್ಟೇ ಅಲ್ಲದೆ ಅಲ್ಲಿ ಅವಿಮೃಷ್ಟವಾದ ಹೊಸ ವಿಷಯಗಳನ್ನೂ ಅರುಹಿವೆ. ಜೊತೆಗೆ ರೂಪಕಪ್ರಧಾನವಾದ ಪುಟ್ಟಪ್ಪನವರ ಕವಿತೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬುದನ್ನೂ ತಿಳಿಸುತ್ತಿವೆ. (ಮುಕ್ತಿರಾಹು, ಕೀರ್ತಿಶನಿ, ಕೃಪಾಕೃಪಾಣ, ಸಂಯಮಸಮ್ಮಾರ್ಜನಿ ಮುಂತಾದ ನೂರಾರು ವಿನೂತನ ರೂಪಕಗಳನ್ನು ಗಮನಿಸಬಹುದು.)
ಇದೇ ಸಂದರ್ಭದಲ್ಲಿ ‘ಡೆಡ್ ಮೆಟಫರ್ಸ್’ ಎಂದು ಪಶ್ಚಿಮದಲ್ಲಿ ಕೀಳಾಗಿ ಕಾಣಲ್ಪಟ್ಟ ಮೃತರೂಪಕಗಳನ್ನೂ ವಿವೇಚಿಸಿದ್ದಾರೆ. ಅವರ ದೃಷ್ಟಿಯಲ್ಲಿ “ಪ್ರತಿಮೆಯ ಪೌರಾಣಿಕತೆಯನ್ನಾಗಲಿ, ರೂಪಕದ ಪ್ರಾಚೀನತೆಯನ್ನಾಗಲಿ ಕಾವ್ಯದ ನಿಸ್ಸಾರತೆಗೆ ಸರ್ವಕಾರಣವನ್ನಾಗಿ ಒಡ್ಡುವುದರಲ್ಲಿ ಅರ್ಥವಿಲ್ಲ. ಮುಖ್ಯಕಾರಣವಿರುವುದು ಕವಿಶಕ್ತಿಯಲ್ಲಿ, ಕವಿಪ್ರತಿಭೆಯಲ್ಲಿ.” “ಪದಗಳನ್ನು ಮೃತಪದಗಳೆಂದು ಕೈಬಿಟ್ಟರೆ ಹೇಗೊ ಹಾಗೆಯೆ ರೂಪಕಗಳನ್ನೆಲ್ಲ ಮೃತರೂಪಕಗಳೆಂದು ಕೈಬಿಟ್ಟರೆ ಕಾವ್ಯಶ್ರೀ ದರಿದ್ರೆಯಾಗುತ್ತಾಳೆ.” “ನಿಜವಾಗಿಯೂ ಮೃತವಾಗಿರುವುದು ಆ ರೂಪಕಗಳಲ್ಲ; ಅವುಗಳನ್ನು ಶಕ್ತಿಯುತವಾಗಿ ಬಳಸಲಾರದ ಕವಿ, ಅಥವಾ ಅವುಗಳಿಗೆ ಜೀವತುಂಬಲಾರದ ಸಹೃದಯ.”[5] ಇದು ಸಾಹಿತ್ಯದ ಸ್ವಾಸ್ಥ್ಯವನ್ನು ಕಾಪಿಡುವ ನಿಲವು. ಮತ್ತಿದು ಮೃತರೂಪಕಗಳಿಗೆ ಮಾತ್ರವಲ್ಲದೆ ಕವಿಸಮಯವೇ ಮೊದಲಾದ ಸಾಂಪ್ರದಾಯಿಕ ಪರಿಕರಗಳಿಗೂ ಅನ್ವಯಿಸುತ್ತದೆ. ಒಟ್ಟಿನಲ್ಲಿ ಕುವೆಂಪು ಅವರು ಪರಂಪರೆಯನ್ನು ಬಲಿಗೊಡದೆ, ಕವಿಯ ಸ್ವಾತಂತ್ರ್ಯ-ಸ್ವೋಪಜ್ಞತೆಗಳನ್ನೂ ಗಾಸಿಗೊಳಿಸದೆ ಒಳ್ಳೆಯ ಹದವನ್ನು ಕಾಪಾಡಿಕೊಂಡಿದ್ದಾರೆ.
ಅಲಂಕಾರ, ಉಪಮೆ
ಅಲಂಕಾರಸಾಮಾನ್ಯವನ್ನು, ಕಾವ್ಯಕ್ಕೆ ಅಲಂಕಾರದ ಆವಶ್ಯಕತೆಯನ್ನು ಕುರಿತು ಕುವೆಂಪು ಬೆಲೆಯುಳ್ಳ ಮಾತನ್ನಾಡಿದ್ದಾರೆ: “ಕಾವ್ಯಕ್ಕೂ ಅಲಂಕಾರಗಳಿಗೂ ಇರುವ ಪ್ರಣಯವು ಚಿತ್ರಕಲೆಗೂ ವರ್ಣಗಳಿಗೂ ಇರುವ ಪರಸ್ಪರಾನುರಾಗದಂತೆ ಚಿರಸಂಯುತವಾದುದು. ವರ್ಣಶಿಲ್ಪಿಯ ಭಾವಪ್ರಕಾಶನಕ್ಕೆ ಬಣ್ಣಗಳ ಸಹಕಾರ ಸ್ನೇಹಗಳು ಎಷ್ಟರಮಟ್ಟಿಗೆ ಆವಶ್ಯಕವೊ ಹಾಗೆಯೆ ಕವಿಯ ಆತ್ಮದ ಸುರುಚಿರಾನುಭವಗಳ ಸುಂದರಾವಿರ್ಭಾವಕ್ಕೆ ಅಲಂಕಾರಗಳು ಆವಶ್ಯಕ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಾವ್ಯವೆಂಬುದೆಲ್ಲ ಅಲಂಕೃತಾನುಭವ ಎಂದು ಹೇಳಬಹುದು.”[6] ಕಡೆಯ ಮಾತು ಕಾವ್ಯಾನುಭವಕ್ಕೆ ಹೊಸ ಒಳನೋಟವನ್ನು ಒದಗಿಸಿದೆ. ನಮ್ಮಲ್ಲಿ ಅಲಂಕಾರವನ್ನು ನಿರ್ವಚಿಸುತ್ತ ಯಾವುದರಿಂದ ಉದ್ದಿಷ್ಟ ವಸ್ತು ಸುಂದರವಾಗುವುದೋ ಪರ್ಯಾಪ್ತಿಯನ್ನು ಕಾಣುವುದೋ ಅದು ಅಲಂಕಾರವೆಂದಿದ್ದಾರೆ (ಅರಂಭಾವಃ, ಅಲಂಭಾವಃ). “ಉತ್ಕರ್ಷ-ಅಪಕರ್ಷಗಳಿಲ್ಲದೆ ಯಾವ ವಿಷಯವೂ ಸೊಗಯಿಸುವುದಿಲ್ಲ; ಇದಕ್ಕಾಗಿಯೇ ಕವಿಗಳು ಅಲಂಕಾರಗಳನ್ನು ಆಶ್ರಯಿಸುತ್ತಾರೆ”[7] ಎಂದು ಮಹಿಮಭಟ್ಟ ಅಲಂಕಾರಪ್ರಯೋಗಕ್ಕೆ ಕಾರಣವನ್ನು ಕೊಟ್ಟಿದ್ದಾನೆ. ಇದರ ಪ್ರಕಾರ ಲೋಕದ ವಸ್ತುಗಳಿಗೆ ಸುಂದರವಾಗಿ ಏನನ್ನಾದರೂ ಸೇರಿಸಿಯೋ ಅವುಗಳಿಂದ ಏನನ್ನಾದರೂ ಕಳೆದೋ ವರ್ಣಿಸುವ ಮಾಧ್ಯಮ ಅಲಂಕಾರವೆಂದಾಗುತ್ತದೆ. ಕೂಡಿ ಕಳೆಯುವ ಕ್ರಿಯೆ ಸಮಂಜಸವಾಗಿದೆಯೇ ಇಲ್ಲವೇ ಎಂದು ನೋಡಿಕೊಳ್ಳುವುದು ಔಚಿತ್ಯ. ಈ ಹಿನ್ನೆಲೆಯಲ್ಲಿ ‘ಕಾವ್ಯವು ಅಲಂಕೃತಾನುಭವ’ ಎಂಬ ಮಾತು ಅರ್ಥಪೂರ್ಣವೆನಿಸದಿರದು. ಲೋಕದ ಅನುಭವವನ್ನೇ ಆಧರಿಸುವ ಕಾವ್ಯ ಅದನ್ನು ಇನ್ನಷ್ಟು ಏಕಾಗ್ರವಾಗಿ, ಸುಂದರವಾಗಿ ಕಟ್ಟಿಕೊಡುತ್ತದೆ. ಲೋಕಾನುಭವ ಬಂಗಾರದ ಗಟ್ಟಿಯಾದರೆ, ಕಾವ್ಯಾನುಭವ ಅದರಿಂದ ತಯಾರಿಸಿದ ಅಂದವಾದ ಆಭರಣ. ಇದೇ ಅಭಿಪ್ರಾಯವನ್ನು ವಿಖ್ಯಾತ ವಿದ್ವಾಂಸ ಡಾ|| ವಿ. ಎಸ್. ಸುಕಥನಕರ್ ಕೊಂಚ ಭಿನ್ನವಾಗಿ ವ್ಯಕ್ತಪಡಿಸಿದ್ದಾರೆ.[8]
ಅಲಂಕಾರಗಳ ಪೈಕಿ ಸಾದೃಶ್ಯಮೂಲದ ನುಡಿಬೆಡಗುಗಳು ಮೂಲಭೂತವಾದುವು. ಇವುಗಳಲ್ಲಿ ಪ್ರಮುಖವಾದುದು ಉಪಮೆ. ಹಿರಿದಾದ ವ್ಯಾಪ್ತಿಯನ್ನುಳ್ಳ ಉಪಮೆಯು “ವಿಸ್ಮಯವೆಸಗುವ ವಿವಿಧ ಪಾತ್ರಗಳನ್ನು ನಿರ್ವಹಿಸುವ ನಟಿಯಂತೆ ಕಾವ್ಯರಂಗದಲ್ಲಿ ಸಹೃದಯರ ಹೃದಯಗಳನ್ನು ತಣಿಸುತ್ತಾಳೆ” ಎಂದು ಅಪ್ಪಯ್ಯದೀಕ್ಷಿತರು ಕೊಂಡಾಡಿದ್ದಾರೆ.[9] ಇಷ್ಟು ಹಿರಿದಾದ ಅಲಂಕಾರವನ್ನು ಕುರಿತು ಕುವೆಂಪು ಹೊಸ ದಿಕ್ಕಿನಲ್ಲಿ ಆಲೋಚಿಸಿದ್ದಾರೆ. ಅವರ ಪ್ರಕಾರ “ಒಂದು ಪ್ರಕೃತ ವಿಷಯದ ಭಾವಕೋಶಕ್ಕೆ ಮತ್ತೊಂದು ಅನ್ಯವಿಷಯದ ಭಾವಕೋಶವನ್ನು ಸಂಗಗೊಳಿಸಿ, ಪ್ರಕೃತ ವಿಷಯದ ಭಾವಕೋಶದ ವೃದ್ಧಿಯಿಂದ ರಸವೃದ್ಧಿಯಾಗುವಂತೆ ಮಾಡುವುದೇ ಉಪಮಾ ಅಲಂಕಾರದ ಉದ್ದೇಶ. ಮೊದಲನೆಯದರ ಭಾವಕೋಶ ಪುಷ್ಟಿಗೊಳ್ಳಬೇಕಾದರೆ ಎರಡನೆಯದರ ಭಾವಕೋಶ ಅದಕ್ಕೆ ಅವಿರುದ್ಧವಾಗಿರಬೇಕೆಂದು ಬೇರೆ ಹೇಳಬೇಕಾಗಿಲ್ಲ ... ಭಾವಕೋಶವೆಂದರೆ ಪದದ ಅರ್ಥವನ್ನು ಕೇಂದ್ರಬಿಂದುವಾಗುಳ್ಳ ರಾಗಾನುಭವಗಳ, ನಿಷ್ಕೃಷ್ಟ ತೀರವಿಲ್ಲದ ಅಸ್ಪಷ್ಟ ಪಾರಾವಾರ ಅಥವಾ ಪರಿವೇಷ. ಭಾವಕೋಶವು ವ್ಯಕ್ತಿಯ ಸ್ವಯಂ ಅನುಭವದಿಂದ ಮಾತ್ರ ವೃದ್ಧಿಯಾಗುತ್ತದೆ.”[10] ಇಲ್ಲಿ ಪ್ರಕೃತ ವಿಷಯವೆಂದು ಉಪಮೇಯವನ್ನೂ ಅನ್ಯವಿಷಯವೆಂದು ಉಪಮಾನವನ್ನೂ ಸೂಚಿಸಲಾಗಿದೆ. ‘ಅವಿರುದ್ಧ’ ಎಂಬ ಮಾತಿನಲ್ಲಿ ಸಾಧಾರಣಧರ್ಮದ ಸೂಚನೆಯಿದೆ. ಹೀಗೆ ಉಪಮೆಯ ಘಟಕಗಳನ್ನು ಭಾವಕೇಂದ್ರಿತವಾಗಿ ವರ್ಣಿಸುವಲ್ಲಿ ಹೆಚ್ಚಿನ ಔಚಿತ್ಯವಿದೆ. ಪ್ರತಿಯೊಂದು ಶಬ್ದಕ್ಕೂ ತನ್ನದಾದ ಭಾವಕೋಶವಿರುತ್ತದೆ ಎಂಬ ಇಲ್ಲಿಯ ಕಾಣ್ಕೆ ಮಹತ್ತ್ವದ್ದು. ಪದಾರ್ಥವೊಂದನ್ನು ನಿರ್ದೇಶಿಸಲು ನಿರ್ದಿಷ್ಟವಾದ ಪದವೊಂದನ್ನು ಬಳಸುವಾಗ ಅದರ ಸಂಕೇತಿತ ಅರ್ಥ ನಮ್ಮ ಗಮನದಲ್ಲಿರುತ್ತದೆ. ಇದಲ್ಲದೆ ಶತಶತಮಾನಗಳಿಂದ ವಿವಿಧ ಸನ್ನಿವೇಶಗಳಲ್ಲಿ ಹಲವು ಬಗೆಯ ಜನರಿಂದ ಪ್ರಯುಕ್ತವಾದ ಆ ಶಬ್ದಕ್ಕೆ ನಿರ್ದಿಷ್ಟವಲ್ಲದ ಹೆಚ್ಚುವರಿ ಅರ್ಥವು ಪ್ರಾಪ್ತವಾಗಿರುತ್ತದೆ. ಇದನ್ನು ಪದಪರಮಾತ್ಮನ ಪ್ರಭಾವಳಿ ಎಂದು ಕರೆಯಬಹುದು. ಇದೇ ಅದರ ಭಾವಕೋಶ. ಭಾವಕೋಶಗಳಿಗೆ ಸಂವಾದವುಂಟಾದಾಗ ಉಪಮೆ ಆವಿರ್ಭವಿಸುತ್ತದೆ. ಒಟ್ಟಿನಲ್ಲಿ ಕುವೆಂಪು ಉಪಮೆಯ ನೆಲೆಯನ್ನು ವಸ್ತುಗಳ ಭೌತಸಾದೃಶ್ಯದಲ್ಲಿ ಕಾಣಿಸದೆ ಭಾವಸಾದೃಶ್ಯದಲ್ಲಿ ಕಾಣಿಸಿದ್ದಾರೆ.
ಉಪಮೆಯು ಸದೃಶವಸ್ತುಗಳನ್ನು ಕುರಿತ ಪ್ರಾಥಮಿಕ ಜ್ಞಾನಕ್ಕೂ ಸಹಕಾರಿಯಾಗುತ್ತದೆ. ಇದನ್ನು ಕುರಿತು ಅವರು ಹೀಗೆನ್ನುತ್ತಾರೆ: “ಉಪಮೆಯನ್ನು ಅಲಂಕಾರವೆಂದು ಕರೆದರೂ ಅದರಿಂದ ಒಂದೊಂದು ವೇಳೆ ಉಪಕಾರವೂ ಆಗುವ ಸಂಭವವಿದೆ. ಚೆನ್ನಾಗಿ ಅನುಭವಕ್ಕೆ ಬಂದ ವಸ್ತುವಿನ ಸಾದೃಶ್ಯವನ್ನು ಹೇಳಿ, ಚೆನ್ನಾಗಿ ಅನುಭವಕ್ಕೆ ಬಾರದ ವಸ್ತುವಿನ ಅನುಭವವನ್ನು ಆದಷ್ಟು ಮಟ್ಟಿಗಾದರೂ ಮಾಡಿಕೊಡಬಹುದು. ಆದರೆ ... ಕಾವ್ಯದಲ್ಲಿ ಉಪಕಾರಕ್ಕಾಗಿ ಉಪಮೆಯನ್ನು ಉಪಯೋಗಿಸುವುದಕ್ಕಿಂತಲೂ ಅಲಂಕಾರಕ್ಕಾಗಿ ಉಪಯೋಗಿಸುವುದೇ ಹೆಚ್ಚು. ಕೆಲವು ಸಾರಿ ಉಪಮೆ ಎರಡು ಕೆಲಸಗಳನ್ನೂ ಮಾಡುವುದು, ಗಂಗಾವಾರಿ ದೇಹದ ಕೊಳೆಯನ್ನು ತೊಳೆದು ಆತ್ಮದ ಪಾಪವನ್ನೂ ಪರಿಹರಿಸಿದಂತೆ.”[11] ಉಪಮೆಯ ಈ ಆಯಾಮವನ್ನು ಅನುಲಕ್ಷಿಸಿಯೇ ನಮ್ಮ ಪ್ರಾಚೀನ ದಾರ್ಶನಿಕರಲ್ಲಿ ಕೆಲವರು - ವಿಶೇಷವಾಗಿ ನೈಯಾಯಿಕರು - ಅದನ್ನೊಂದು ಪ್ರಮಾಣವಾಗಿ ಅಂಗೀಕರಿಸಿದರು.
ಉಪಮೆಯಲ್ಲಿ ರೂಪೋಪಮೆ, ಗುಣೋಪಮೆ ಮತ್ತು ಭಾವೋಪಮೆ ಎಂದು ಮೂರು ಬಗೆಗಳಿವೆ ಎಂದು ಕುವೆಂಪು ಹೇಳಿದ್ದಾರೆ: “ಸಾದೃಶ್ಯವು ರೂಪದಲ್ಲಿರಬಹುದು, ಗುಣದಲ್ಲಿರಬಹುದು ಅಥವಾ ರೂಪ ಗುಣಗಳಲ್ಲಿ ಸಂಪೂರ್ಣ ವ್ಯತ್ಯಾಸವಿರುವ ಎರಡು ವಸ್ತುಗಳು ಪ್ರೇಕ್ಷಕನ ಹೃದಯದಲ್ಲಿ ಉನ್ಮೇಷಗೊಳಿಸುವ ಒಂದೇ ತೆರನಾದ ಭಾವದಲ್ಲಿರಬಹುದು.”[12] ರೂಪೋಪಮೆ ಮತ್ತು ಗುಣೋಪಮೆಗಳ ಸ್ವರೂಪ ತೊಡಕಿಲ್ಲದೆ ತಿಳಿಯುತ್ತದೆ. ಭಾವೋಪಮೆಗೆ ಸ್ವಲ್ಪ ವಿವರಣೆ ಬೇಕಾಗುತ್ತದೆ. ಅದಕ್ಕಾಗಿ ಪುಟ್ಟಪ್ಪನವರ ನುಡಿಯನ್ನೇ ಅವಲಂಬಿಸೋಣ: “ಭಾವೋಪಮೆಯಲ್ಲಿ ವಸ್ತುವಿನಿಂದ ಉನ್ಮೇಷವಾಗುವ ಭಾವಕ್ಕೆ ತತ್ತ್ವತಃ ಅದರ ಗುಣಗಳೆಯೆ ಕಾರಣವಾದರೂ ಗುಣೋಪಮೆಯಲ್ಲಿರುವಂತೆ ಕಾರಣಗಳು ಅಷ್ಟು ಪ್ರತ್ಯಕ್ಷವಾಗಿರುವುದಿಲ್ಲ ... ಭಾವೋಪಮೆಯು ವ್ಯಕ್ತಿಯ ತಾತ್ಕಾಲಿಕ ಮನೋವೃತ್ತಿಗೆ ಅನುಸಾರವಾಗಿ ಮೈದೋರುವುದು.” ಇದಕ್ಕೆ ಉದಾಹರಣೆಗಳನ್ನೂ ಅವರೇ ನೀಡಿದ್ದಾರೆ: “ಬನದ ಕಣ್ಣೆಂಬಂತೆ ತಿಳಿಗೊಳವು ರಂಜಿಸಿತು,” “ಹಸುರ ಮೇಲೆ ಎಳೆಬಿಸಿಲು ಹಸುಳೆಯಂತೆ ನಲಿದಾಡಿತು,” “ಚಿಟ್ಟೆಯು ಬನದ ಬಣ್ಣಗಳ ಕವಿತೆಯಂತೆ ಶೋಭಿಸಿತು” ಇತ್ಯಾದಿ. ಇವುಗಳ ಜಾಡನ್ನು ಹಿಡಿದು ಭಾವೋಪಮೆಯನ್ನು ಅರ್ಥೈಸಲೆಳಸಿದರೆ ಅದು ದೃಷ್ಟಾಂತ, ನಿದರ್ಶನಾ, ಉತ್ಪ್ರೇಕ್ಷೆ, ಅತಿಶಯೋಕ್ತಿ ಮೊದಲಾದ ಇನ್ನಿತರ ಅಲಂಕಾರಗಳ ಛಾಯೆಯನ್ನು ಹೊಂದಿರುವಂತೆ ತೋರುತ್ತದೆ. ಆದರೆ ಇವುಗಳಲ್ಲಿ ಹೆಚ್ಚಿನವು ಸಾದೃಶ್ಯಮೂಲದವು ಎಂಬುದು ನಿರ್ವಿವಾದ. ಇನ್ನೂ ಮುಂದುವರಿದು ಆಲೋಚಿಸಿದರೆ, ಮೂರ್ತಕ್ಕೆ ಅಮೂರ್ತವನ್ನೂ ಅಮೂರ್ತಕ್ಕೆ ಮೂರ್ತವನ್ನೂ ಒಪ್ಪವಿಟ್ಟಾಗ ಅದು ಭಾವೋಪಮೆ ಎಂದು ಕರೆಸಿಕೊಳ್ಳುತ್ತದೆ ಎಂಬುದು ಕುವೆಂಪು ಅವರ ಇಂಗಿತ ಇದ್ದಿರಬೇಕೆಂದು ತೋರುತ್ತದೆ. ಇದು ಅವರಿಗೆ ಮೆಚ್ಚಾದ ಕಾವ್ಯಪದ್ಧತಿಯೂ ಹೌದು. ಈ ಪರಿಕಲ್ಪನೆಗಳಿಗೆ ಅವರು ಹೆಚ್ಚಾಗಿ ಪಾಶ್ಚಾತ್ತ್ಯ ಸರಣಿಯನ್ನು ಆಧರಿಸಿದ್ದಾರೆ; ತಮ್ಮ ಹೊಳಹುಗಳನ್ನೂ ನೆಮ್ಮಿದ್ದಾರೆ. ಇವುಗಳ ಜೊತೆಗೆ ಭಾರತೀಯ ಕಾವ್ಯಮೀಮಾಂಸೆಯ ಮೂಲಗ್ರಂಥಗಳನ್ನು ಅಭ್ಯಾಸ ಮಾಡಿದ್ದರೆ ವಿಚಾರಗಳಿಗೆ ನಿಷ್ಕೃಷ್ಟತೆ ಬರುತ್ತಿತ್ತು; ಈಗಾಗಲೇ ಪರಂಪರೆಯಲ್ಲಿ ವಿವೃತವಾಗಿರುವ ತತ್ತ್ವಗಳೊಡನೆ ಸಾಮ್ಯ ಕಂಡು ಚಿಂತನೆಯ ಅನುಸ್ಯೂತತೆ ಏರ್ಪಡುತ್ತಿತ್ತು.
ಅವರು ಉಪಮೆಯಲ್ಲಿ ಮಹೋಪಮೆಯೆಂಬ ಮತ್ತೊಂದು ಪ್ರಭೇದವನ್ನು ಪಾಶ್ಚಾತ್ತ್ಯಮೂಲದಿಂದ ಗ್ರಹಿಸಿದ್ದಾರೆ.
ಪಾಶ್ಚಾತ್ತ್ಯಪ್ರಭಾವ
ಮಹೋಪಮೆ ಎಂಬುದು ‘ಹೋಮರಿಕ್ ಸಿಮಿಲಿ’ ಅಥವಾ ‘ಎಪಿಕ್ ಸಿಮಿಲಿ’ ಎಂಬುದರ ಕನ್ನಡ ರೂಪ; ಪುಟ್ಟಪ್ಪನವರೇ ನಮ್ಮ ನುಡಿಗೆ ತಂದುಕೊಟ್ಟ ಸೊಬಗಿನ ಒಂದು ಪರಿ. ಇದರ ಗುಣ-ಲಕ್ಷಣಗಳನ್ನು ಅವರೇ ಹೀಗೆ ವಿವರಿಸಿದ್ದಾರೆ: “ಮಹೋಪಮೆ ಎಂದರೆ ಮಹಾ ಉಪಮೆ. ಮಹಾ ಎಂದರೆ ದೀರ್ಘ ಎಂದಷ್ಟೇ ಅರ್ಥವಾಗದಿದ್ದರೂ ದೀರ್ಘತೆಯೂ ಅದಕ್ಕೊಂದು ಅನಿವಾರ್ಯವಾದ ಆತ್ಮಲಕ್ಷಣ ... ಓದುಗನೇ ಬಹುಕಾಲದ ಪ್ರಯತ್ನದಿಂದಲೂ ಶ್ರಮದಿಂದಲೂ ಪಡೆಯಬಹುದಾದ ಅನುಭವಗಳನ್ನೆಲ್ಲ ಮಹೋಪಮೆ ಒಟ್ಟಿಗೆ ತಂದುಕೊಡುತ್ತದೆ ... ಪರಿಚಿತವಾದುದರ ಸಹಾಯದಿಂದ ಪರಿಚಯದೂರವಾದುದನ್ನೂ ಅನುಭವಕ್ಕೆ ತರುತ್ತದೆ ... ಸಂಸ್ಕಾರಗಳನ್ನು ಉದ್ದೀಪನಗೊಳಿಸಿ ಮಹೋಪಮೆ ತನ್ನ ಕಾರ್ಯಸಾಧನೆ ಮಾಡಿಕೊಳ್ಳುತ್ತದೆ. ಸಂಸ್ಕಾರಗಳನ್ನು ಹೊಸದಾಗಿ ಸೃಷ್ಟಿಸಲೂ ಪ್ರಯತ್ನಿಸುತ್ತದೆ.”[13] ಅದರ ಸಾಮೂಹಿಕ ಸೌಂದರ್ಯವನ್ನು ಒಟ್ಟಾಗಿ ಸವಿಯಬೇಕೇ ಹೊರತು ಒಂದೊಂದು ಅವಯವವನ್ನೂ ಸೀಳಿ ನೋಡಬಾರದೆಂಬ ಎಚ್ಚರಿಕೆಯನ್ನೂ ನೀಡುತ್ತಾರೆ: “ಸಾದೃಶ್ಯಸಂಪತ್ತಿಯ ಆಯವ್ಯಯದ ಪಟ್ಟಿಯನ್ನು ಲೆಕ್ಕಾಚಾರ ಹಾಕಿ ತರುವಾಯ ಉಪಮೆಯಿಂದ ರಸವನ್ನು ಹಿಂಡಲು ಹೊರಟರೆ ಉತ್ತಮ ಪರಿಣಾಮ ಲಭಿಸುವುದಿಲ್ಲ.”[14] ಮಹೋಪಮೆಯಲ್ಲಿ ನಾವು ಹಿಂದೆ ಗಮನಿಸಿದ ಭಾವೋಪಮೆಯ ಪಾಲೇ ಹೆಚ್ಚು. ಕುವೆಂಪು ಅವರು ಇದರ ಲಕ್ಷಣವನ್ನು ಮೊತ್ತಮೊದಲ ಬಾರಿಗೆ ಕನ್ನಡದಲ್ಲಿ ನಿರೂಪಿಸಿದ್ದಷ್ಟೇ ಅಲ್ಲದೆ ಅದರ ಹತ್ತಾರು ಲಕ್ಷ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಸ್ವಯಂ ರಚಿಸಿ ತೋರಿಸಿದ್ದಾರೆ. ಅವರ ‘ಚಿತ್ರಾಂಗದಾ’ ಎಂಬ ಖಂಡಕಾವ್ಯದಲ್ಲಿ ಮೊದಲ ಬಾರಿಗೆ ಬಳಕೆಯಾದ ಮಹೋಪಮೆ ‘ಶ್ರೀರಾಮಾಯಣದರ್ಶನಂ’ನಲ್ಲಿ ತನ್ನ ವಿಶ್ವರೂಪವನ್ನು ತೋರಿಸಿದೆ. ಇದು ಕಾವ್ಯಮೀಮಾಂಸೆಗೆ ಅವರಿತ್ತ ಕೊಡುಗೆ.
ಪಾಶ್ಚಾತ್ತ್ಯರ ಪ್ರಭಾವ ಕುವೆಂಪು ಅವರ ಮೇಲೆ ಆಗಿರುವ ರೀತಿಯನ್ನು ಪ್ರಭುಶಂಕರ, ಎಲ್. ಎಸ್. ಶೇಷಗಿರಿ ರಾವ್ ಮುಂತಾದ ವಿದ್ವಾಂಸರು ಚೆನ್ನಾಗಿ ಚರ್ಚಿಸಿದ್ದಾರೆ.[15] ಅವರಿಗೆ ಹೋಮರಿನ ವಿಶಾಲವಾದ ಹರಹು; ಶೆಲ್ಲಿಯ ಸ್ವತಂತ್ರಪ್ರವೃತ್ತಿ; ವರ್ಡ್ಸ್ವರ್ತ್ನ ಪ್ರಕೃತಿಪ್ರೀತಿ; ಮಿಲ್ಟನ್‌ನ ಪಾಂಡಿತ್ಯ, ಮತಶ್ರದ್ಧೆ ಮತ್ತು ಉದ್ದಾಮತೆಗಳು ಮೆಚ್ಚಾಗಿದ್ದುವು. ಈ ಗುಣಗಳನ್ನೇ ಆಯಾ ಕವಿಗಳಿಂದ ಗ್ರಹಿಸಿದ್ದಾರೆ. ಇವಲ್ಲದೆ ಮಿಲ್ಟನ್ ಮಾಡುವ ಸ್ಫೂರ್ತಿದೇವತೆಯ ಪ್ರಾರ್ಥನೆಯ ಪ್ರೇರಣೆಯಿಂದ ರಾಮಾಯಣದರ್ಶನದ ಹಲವೆಡೆ ಸೊಗಸಾದ ಪ್ರಾರ್ಥನೆಗಳನ್ನು ರಚಿಸಿದ್ದಾರೆ (ಆರಂಭದಲ್ಲಿ ಮಾತ್ರವಲ್ಲದೆ ಎಂಟನೆಯ ಸಂಚಿಕೆಯ ಮೊದಲಿನಲ್ಲಿ ಹಾಗೂ ಕಿಷ್ಕಿಂಧಾಸಂಪುಟದ ಮೊದಲ ಸಂಚಿಕೆಯ ಪ್ರಾರಂಭದಲ್ಲಿ). ಇನ್ನು ಮಹೋಪಮೆಯನ್ನು ಈಗಾಗಲೇ ಪರಿಶೀಲಿಸಿದ್ದೇವೆ. ನಾಟಕೀಯತೆ, ಎರಡು ಸಮಾನಾಂತರ ಸನ್ನಿವೇಶಗಳ ಕಥನ, “ಕೃತಿಯ ಕ್ರಿಯೆ ನಡೆಯಿತೆಂದು ಭಾವಿಸಬಹುದಾದ ಕಾಲದನಂತರ ನಡೆದ ಎಷ್ಟೋ ಘಟನೆಗಳನ್ನೂ ಕಾವ್ಯ ತನ್ನ ವೃತ್ತದೊಳಕ್ಕೆ ಸೆಳೆದುಕೊಳ್ಳುವುದು”[16] - ಇವೇ ಮುಂತಾದ ರಾಚನಿಕ ವಿಧಾನಗಳಿಗೂ ಪಾಶ್ಚಾತ್ತ್ಯ ಪ್ರಭಾವವನ್ನು ವಿಮರ್ಶಕರು ಕಾಣಿಸಿದರೂ ಇವು ಭಾರತೀಯ ಕಾವ್ಯಗಳಲ್ಲಿಯೂ ಕಾಣುವ ಕಾರಣ ಪ್ರತ್ಯೇಕವಾಗೇನೂ ಗಣಿಸಬೇಕಿಲ್ಲ.
ಏನೇ ಆಗಲಿ, ಪುಟ್ಟಪ್ಪನವರು ತಾವು ಪಡೆದ ಪ್ರೇರಣೆಯ ನೆರಳೂ ಕಾಣದಂತೆ ಅವುಗಳನ್ನು ಸ್ವಂತಿಕೆಯಿಂದ ಬಳಸಿಕೊಂಡಿದ್ದಾರೆ. ಇದು ಅವರ ಶಕ್ತಿ.
[1] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೨೩೫-೩೬
[2] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೪೯೯
[3] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೫೧೩
ಮಿಥ್‌ಗಳನ್ನು ಕುರಿತ ಪಾಶ್ಚಾತ್ತ್ಯರ ಆಲೋಚನೆಗಳನ್ನು ಸಂಗ್ರಹವಾಗಿ ತಿಳಿಯಲು ಥಾಮಸ್ ಕ್ಯಾಂಪ್‌ಬೆಲ್ ಬರೆದಿರುವ ‘ದ ಪವರ್ ಆಫ್ ಮಿಥ್’ ಕೃತಿಯನ್ನು ಓದಬಹುದು.
[4] ದಾರ್ಶನಿಕ ಕಾವ್ಯಮೀಮಾಂಸೆ, ಪು. ೮೩, ೮೮, ೯೨
[5] ದಾರ್ಶನಿಕ ಕಾವ್ಯಮೀಮಾಂಸೆ, ಪು. ೯೦, ೯೨, ೯೩
[6] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೫೮೫
[7] “ವಿನೋತ್ಕರ್ಷಾಪಕರ್ಷಾಭ್ಯಾಂ ಸ್ವದಂತೇಽರ್ಥಾ ನ ಜಾತುಚಿತ್ | ತದರ್ಥಮೇವ ಕವಯೋಽಲಂಕಾರಾನ್ ಪರ್ಯುಪಾಸತೇ ||” (ವ್ಯಕ್ತಿವಿವೇಕ, ೨.೧೪)
[8] “The value to us of a work of art or literature depends, I think, primarily on two factors: firstly, the intensity with which we are transported to a new world; and, secondly, the nature of the world to which we are transported.” (On the Meaning of the Mahābhārata, p. 35)
[9] “ಉಪಮೈಕಾ ಶೈಲೂಷೀ ಸಂಪ್ರಾಪ್ತಾ ಚಿತ್ರಭೂಮಿಕಾಭೇದಾನ್ | ರಂಜಯತಿ ಕಾವ್ಯರಂಗೇ ನೃತ್ಯಂತೀ ತದ್ವಿದಾಂ ಚೇತಃ ||” (ಚಿತ್ರಮೀಮಾಂಸಾ, ೨.೧)
[10] ದಾರ್ಶನಿಕ ಕಾವ್ಯಮೀಮಾಂಸೆ, ಪು. ೯೮
[11] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೫೮೮
[12] ಕುವೆಂಪು ಸಮಗ್ರ ಗದ್ಯ, ಸಂ. ೧, ಪು. ೫೮೯
[13] ದಾರ್ಶನಿಕ ಕಾವ್ಯಮೀಮಾಂಸೆ, ಪು. ೯೯, ೧೦೨, ೧೦೪, ೧೦೬
[14] ದಾರ್ಶನಿಕ ಕಾವ್ಯಮೀಮಾಂಸೆ, ಪು. ೧೦೦
[15] ನೋಡಿ: ‘ಪಾಶ್ಚಾತ್ಯ ರೊಮಾಂಟಿಕ್ ಕವಿಗಳು ಮತ್ತು ಕುವೆಂಪು’ - ಪ್ರಭುಶಂಕರ (ಶ್ರೀ ಕುವೆಂಪು, ಪು. ೭೧-೯೦); ‘ಪಾಶ್ಚಾತ್ಯ ಮಹಾಕಾವ್ಯಗಳಿಂದ ಕುವೆಂಪು ಪಡೆದ ಪ್ರೇರಣೆಗಳು’, ‘ಕುವೆಂಪು ಮತ್ತು ಹೋಮರ್’, ‘ಕುವೆಂಪು ಮತ್ತು ಮಹೋಪಮೆ’ - ಎಲ್. ಎಸ್. ಎಸ್. (ಪ್ರೊ|| ಎಲ್. ಎಸ್. ಶೇಷಗಿರಿ ರಾವ್ ಸಮಗ್ರ ವಿಮರ್ಶಾ ಸಾಹಿತ್ಯ, ಸಂ. ೧, ಪು. ೫೫೪-೫೮೧, ೬೦೫-೬೧೧)
[16] ಶ್ರೀ ಕುವೆಂಪು, ಪು. ೯೯
To be continued.