‘ಮಣ್ಣಿನ ಕನಸು’: ಒಂದು ಸಮೀಕ್ಷೆ - 3

This article is part 3 of 8 in the series ಮಣ್ಣಿನ ಕನಸು ವಿಮರ್ಶೆ

ಆಮ್ರಪಾಲಿಯ ಕಲಾಮೀಮಾಂಸೆ

ಉಜ್ಜಯಿನಿಯಲ್ಲಿ ಪಾಲಕ, ಅವನ ವೇಶ್ಯೆ ಕಾಮಲತೆ ಮತ್ತು ಆಕೆಯ ಅಣ್ಣ ಸಂಸ್ಥಾನಕ (ಶಕಾರ) - ಇವರಿಂದಾಗಿ ಪ್ರಜೆಗಳ, ಸಾರ್ಥವಾಹರ ಮತ್ತು ಗಣಿಕೆಯರ ನೆಮ್ಮದಿ ಕೆಡತೊಡಗಿದಾಗ ವಸಂತಸೇನೆಯ ತಾಯಿ ತನ್ನ ಮಗಳನ್ನು ವೈಶಾಲಿಯ ನಗರವಧು ಆಮ್ರಪಾಲಿಯ ಬಳಿಗೆ ಕಳುಹಿಸುತ್ತಾಳೆ. ಈಕೆ ವಸಂತಸೇನೆಯ ತಾಯಿಯ ಶಿಷ್ಯೆ. ಈ ಪ್ರಸಂಗದ ಮೂಲಕ ವೈಶಾಲಿಯ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚಿತ್ರಣಗಳು ನಮ್ಮೆದುರು ತೆರೆದುಕೊಳ್ಳುತ್ತವೆ. ಇಲ್ಲಿ ಆಮ್ರಪಾಲಿಯು ಗಣಭೋಗ್ಯೆಯಾಗಿ ಬಾಳಬೇಕಾದ ಪರಿಸ್ಥಿತಿಯನ್ನು ಲೇಖಕರು ಅವಳ ಮೂಲಕವೇ ಹೇಳಿಸಿದ್ದಾರೆ. ಹೀಗಾಗಿ ಇಲ್ಲಿಯ ವಿವರಗಳಿಗೆ ಅಧಿಕೃತತೆ ಬಂದಿದೆ.

ಮಾವಿನ ಮರದ ಕೆಳಗೆ ಸಿಕ್ಕಿದ ಅನಾಥಶಿಶುವನ್ನು ತಂದು ಸಾಕಿದವರು ಲಿಚ್ಛವಿಗಳ ಪ್ರಮುಖರಲ್ಲಿ ಒಬ್ಬರಾದ ಮಹಾನಾಮರು. ಆ ಮಗುವನ್ನು ಬಹಳ ಪ್ರೀತಿಯಿಂದ ಸಾಕಿದರು. ತಂದೆಯ ಸ್ಥಾನ-ಮಾನ, ತಾನೇ ಕಲಿತ ವಿದ್ಯೆ-ವರ್ತನೆ ಎಲ್ಲ ಸೇರಿ ಆಮ್ರಪಾಲಿ ಕೇವಲ ವೈಶಾಲಿಯಲ್ಲಿ ಮಾತ್ರವಲ್ಲ, ಇಡಿಯ ವೃಜಿಗಣದಲ್ಲಿ ‘ಜನಪದಕಲ್ಯಾಣಿ’ ಎಂಬ ಗೌರವವನ್ನು ಗಳಿಸಿದಳು. ಅವಳನ್ನು ಮದುವೆಯಾಗಲು ವರರ ಪ್ರವಾಹವೇ ಹರಿದುಬಂದಿತ್ತು. ‘ವರತಿಲೋತ್ತಮ’ನ ನಿರೀಕ್ಷೆಯಲ್ಲಿದ್ದ ಆಮ್ರಪಾಲಿ ಯಾರನ್ನೂ ಒಪ್ಪಲಿಲ್ಲ. ನಿರಾಶರಾದ ಆಕಾಂಕ್ಷಿಗಳು ಇವಳ ಕುಟುಂಬದ ವಿರುದ್ಧ ಅಧಿಕ್ಷೇಪ ಹೂಡಿ “ಇವಳು ಯಾರನ್ನೂ ಒಪ್ಪದೆ ಎಲ್ಲರ ಆಸೆಗಳನ್ನು ಕೆರಳಿಸಿ ವಿಕೃತವಿನೋದ ಕಾಣುತ್ತಿದ್ದಾಳೆ; ಇದು ಗಣತಂತ್ರದ ಐಕಮತ್ಯಕ್ಕೇ ಅಪಾಯ” ಎಂದು ವಾದಿಸಿದರು. ಈ ಕೋಲಾಹಲಕ್ಕೆ ಅಂಜಿದ ಗಣಪತಿಗಳು ಗಣತಂತ್ರದ ಸಂವಿಧಾನನಿಯಮವನ್ನು ಹೆಣ್ಣಿನ ವೈಯಕ್ತಿಕ ಜೀವನಕ್ಕೂ ಅನ್ವಯಿಸಿಬಿಟ್ಟರು:

ಎಲ್ಲರೂ ಆಮ್ರಪಾಲಿಯನ್ನು ಮದುವೆಯಾಗಲು ಸಾಧ್ಯವಿಲ್ಲ. ಆದರೆ ಅವಳು ಮಾತ್ರ ಎಲ್ಲರಿಗೂ ಎಟುಕಲು ಸಾಧ್ಯ. ನಮ್ಮ ಗಣತಂತ್ರದ ಸಂವಿಧಾನದಲ್ಲಿ ಈ ನೆಲಕ್ಕೆ ಸೇರಿದ ಯಾವುದೇ ಅಮೂಲ್ಯವೂ ಅದ್ವಿತೀಯವೂ ಆದ ಸಂಪತ್ತಿ ಕೂಡ ಸಮಸ್ತಗಣದ ಸೊತ್ತು ಅಂತ ನಿಯಮವಿದ್ದೇ ಇದೆ. ಆಮ್ರಪಾಲಿ ಅಂಥ ರತ್ನ. ಅವಳು ಸಂಪೂರ್ಣವಾಗಿ ಯಾವೊಬ್ಬನ ಸೊತ್ತಾದರೂ ಉಳಿದೆಲ್ಲ ಗಣಪ್ರಜೆಗಳಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಆಕೆಯನ್ನು “ಗಣಭೋಗ್ಯಾ” ಎಂದು ನಿಶ್ಚಯಿಸಲೇಬೇಕು. (ಪು. ೩೨೭)

ಈ ಆಘಾತದಿಂದ ಚೇತರಿಸಿಕೊಂಡ ಆಮ್ರಪಾಲಿ ಗಣಮುಖ್ಯರೆದುರು ತನ್ನವೇ ಆದ ಶರತ್ತುಗಳನ್ನೂ ಬೇಡಿಕೆಗಳನ್ನೂ ಇಟ್ಟು ಅವರನ್ನು ಒಪ್ಪಿಸಿಯೂಬಿಡುತ್ತಾಳೆ. ಹೀಗೆ ಆಮ್ರಪಾಲಿ ಗಣಭೋಗ್ಯೆಯಾಗಿ ಖ್ಯಾತಿ ಗಳಿಸಿ ವೈಶಾಲಿಯ ಹೆಮ್ಮೆಯೂ ಆಗಿಬಿಡುತ್ತಾಳೆ. ಈ ಮೂಲಕ ಗಣತಂತ್ರದ ವ್ಯವಸ್ಥೆ ಮತ್ತು ಕಲೆಯನ್ನು ಕುರಿತ ಅವಳ ಅಭಿಪ್ರಾಯಗಳಿಗೆ ಮಾನ್ಯತೆ ಕೂಡ ಬರುತ್ತದೆ.

ಆಮ್ರಪಾಲಿ ಗಣಭೋಗ್ಯೆಯಾದ ತನ್ನ ಅನುಭವಗಳನ್ನು ಬಿಚ್ಚುಮಾತಿನಲ್ಲಿ ವಿವರಿಸುತ್ತಾಳೆ:

ಬರಿಯ ಕಾವ್ಯ-ಗೀತ-ನೃತ್ಯಗಳಲ್ಲಷ್ಟೇ ಪ್ರಣಯ-ಶೃಂಗಾರಗಳನ್ನು ಕಂಡು, ಕಾಣಿಸಿದ್ದ ನನಗೆ ಗಣಭೋಗ್ಯೆಯಾದ ಬಳಿಕ ಉಂಟಾದ ವಿಪುಲವಾದ ಪುರುಷಸಂಪರ್ಕ ಬೇರೆಯೇ ಆದ ಅನುಭವವನ್ನ ಕೊಟ್ಟಿತ್ತು. (ಪು. ೩೩೪)

ಪರಸ್ಪರ ಕೊಟ್ಟು-ಕೊಳ್ಳುವ ಸುಖ ಗಂಡು-ಹೆಣ್ಣುಗಳ ಸಂಪರ್ಕದಲ್ಲಿ ಅತ್ಯಂತ ಪ್ರಿಯವೂ ಆವಶ್ಯಕವೂ ಆದದ್ದು.

ಇದನ್ನ ಸಮೃದ್ಧವಾಗಿ ಅನುಭವಿಸೋದಿಕ್ಕೆ ಸ್ವಲ್ಪ ಹಮ್ಮು-ಬಿಮ್ಮು ಬಿಡಬೇಕು. ಮುಖ್ಯವಾಗಿ ಇದರ ಹೆಚ್ಚಳವನ್ನ ಗುರುತಿಸಿಕೊಳ್ಳೋದಿಕ್ಕೆ ಅದೊಂದು ಬಗೆಯ ಜೀವಸಂಸ್ಕಾರ, ಭಾವಸಂಸ್ಕಾರ ಬೇಕು. (ಪು. ೩೩೪)

ಇಂಥ ಅವಕಾಶಕ್ಕೆ ತನಗೆ ಬಿಡುವೇ ಆಗಲಿಲ್ಲವೆಂದು ಆಮ್ರಪಾಲಿ ನೆನೆಯುತ್ತಾಳೆ; ಪ್ರಿಯ-ಅಪ್ರಿಯ, ವಾಂಛಿತ-ಅವಾಂಛಿತ ಅನುಭವಗಳಲ್ಲಿಯೂ ತನ್ನ ಹೆಮ್ಮೆ ಕರಗಲಿಲ್ಲವೆಂದೂ ಹೇಳುತ್ತಾಳೆ. ಪ್ರಣಯದ ಹತ್ತಾರು ಸಿಹಿ-ಕಹಿ ಮುಖಗಳ ಅನುಭವ ಆಗಿದ್ದರೂ ಯಾವುದೂ ಸಾಂದ್ರವಾಗಿ, ಸ್ಥಾಯಿಭಾವವಾಗಿ ಅವಳಲ್ಲಿ ಹೆಪ್ಪುಗಟ್ಟಲಿಲ್ಲ: 

ಹೀಗಾಗಿಯೇ ಎಲ್ಲರಿಗೂ ಮೀಸಲಾದ ಹೆಣ್ಣು ತನ್ನದಾದ ಭಾವಗಳ ಮಟ್ಟದಲ್ಲಿ ಕೂಡ ಸ್ಥಾಯಿಯನ್ನ ಕಳೆದುಕೊಂಡು ವ್ಯಭಿಚಾರಿಗಳಲ್ಲೇ ಅಳಿದುಹೋಗ್ತಾಳೆ. ಈ ಅರ್ಥದಲ್ಲಿ ಅವಳು ವ್ಯಭಿಚಾರಿಣಿ. ಅದರಲ್ಲೂ ಅವಳು ತುಂಬ ಸುಂದರಿಯಾಗಿ, ಕಲೆ-ವಿಲಾಸಗಳಲ್ಲಿ ನುರಿತು, ಹಣ-ಹೆಸರುಗಳನ್ನೂ ಮಾಡಿಕೊಂಡ ಹೆಮ್ಮೆಯ ಹೆಣ್ಣೂ ಆಗಿದ್ದ ಪಕ್ಷದಲ್ಲಿ ಸರ್ವಾರ್ಥಗಳಲ್ಲಿ ವ್ಯಭಿಚಾರಿಣಿ. (ಪು. ೩೩೫)

ಹೀಗೆ ಆಮ್ರಪಾಲಿಯು ತನ್ನ ಬದುಕಿನ ಬಗೆಗೆ ತಾನೇ ಅಭಿವ್ಯಕ್ತಿಸಿರುವ ಅಭಿಪ್ರಾಯಗಳು ಸ್ತ್ರೀ-ಪುರುಷರ ಸಂಬಂಧದ ಹಲವಾರು ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತವೆ. ಶ್ರೇಣ್ಯಕನೊಡನೆ ತನಗೆ ಉಂಟಾದ ವಿಶಿಷ್ಟ ಸಂಬಂಧದ ಬಗೆಗೂ ವಸಂತಸೇನೆ-ಮದನಿಕೆಯರೊಡನೆ ನಿಸ್ಸಂಕೋಚವಾಗಿ ಹೇಳಿಕೊಳ್ಳುತ್ತಾಳೆ: “ಅವನ ಸಹವಾಸ ನನ್ನ ಪಾಲಿಗೆ ಉಂಡು, ಉಣಿಸುವ ಸೊಗಸಾಯಿತು.” ಹೀಗೆ ಹೇಳಿ ಪರಸ್ಪರ ಕೊಟ್ಟು ಪಡೆದುಕೊಳ್ಳುವ ಮೈಥುನ ಒಂದು ಸಮೃದ್ಧ ಸಂತರ್ಪಣ ಎಂಬ ಅರಿವಾಯಿತು ಎನ್ನುತ್ತಾಳೆ.

ಕಲೆಯ ವಿಕಾಸಕ್ಕೆ, ಅದರ ಪರಿಪೂರ್ಣತೆಯ ಸಾಧನೆಗೆ ಯಾವ ಬಗೆಯ ಆಡಳಿತ ಉತ್ತಮ? ಅದು ಗಣತಂತ್ರವೆ, ನಿರಂಕುಶ ಪ್ರಭುತ್ವವೆ, ನಿರಂಕುಶನಾದರೂ ಒಳ್ಳೆಯವನಾದ ಪ್ರಭುವೆ? ಈ ವಿಷಯದಲ್ಲಿ ಆಮ್ರಪಾಲಿಯ ಅಭಿಪ್ರಾಯ ಸ್ಪಷ್ಟವಾಗಿದೆ. ಕಲೆ ವೈಯಕ್ತಿಕವಾಗಿದ್ದಾಗ ಅದರ ಪರಿಪೂರ್ಣತೆಗೆ ಹೆಚ್ಚಿನ ಅವಕಾಶ ಉಂಟೆ, ಅಥವಾ ಇದು ಸಾಮೂಹಿಕವಾಗಿದ್ದಾಗಲೆ? ಎಂಬ ಮತ್ತೊಂದು ಪ್ರಶ್ನೆ ವರ್ತಮಾನದಲ್ಲಿ ಕೂಡ ಗಮನ ಸೆಳೆಯುವಂಥದ್ದಾಗಿದೆ. ಆಮ್ರಪಾಲಿ ಹೇಳುತ್ತಾಳೆ:

ನಮ್ಮ ಗಣತಂತ್ರಗಳಲ್ಲಿ ಸಾಮೂಹಿಕವಾದ ದುಡಿಮೆ, ತಲೆಮಾರುಗಳಿಂದ ಬಂದಿರೋ ಕಟ್ಟು-ಕಟ್ಟಲೆಗಳ ಕೋಲಾಹಲ ಹೆಚ್ಚು. ಹೀಗಾಗಿ ವೈಯಕ್ತಿಕವಾದ ಕಲಾಸಾಧನೆಗೆ ಅವಕಾಶ ಕಡಮೆ. ಎಲ್ಲರೂ ಸೇರಿ ಮಾಡೋ ಕಲೆ ಎಷ್ಟೇ ಚೆನ್ನ ಅಂತ ಅನ್ನಿಸಿದ್ರೂ ಅದೆಷ್ಟೇ ಉಲ್ಲಾಸವನ್ನ ಕೊಟ್ಟರೂ ಹೊಸ ಹೊಸ ಕಲೆ ಅರಳೋದಿಕ್ಕಾಗಲಿ, ಇರುವ ಕಲೆಯಲ್ಲೇ ಉತ್ಕೃಷ್ಟತೆಯನ್ನ ಸಾಧಿಸೋದಿಕ್ಕಾಗಲಿ ಹೆಚ್ಚು ಅವಕಾಶವಿಲ್ಲ. ಅಭಿಜಾತಕಲೆ ಯಾವತ್ತೂ ಏಕಲ, ಒಂದು ಬಾರಿಗೆ ಒಂದೇ ಮಹಾಪ್ರತಿಭೆಯನ್ನ ತನ್ನ ವೇದಿಕೆಯ ಮೇಲೆ ಸಹಿಸುತ್ತೆ. ಯಾವುದೇ ಮೂಲಭೂತಕಲೆ ತನ್ನ ಸೂಕ್ಷ್ಮತೆ-ಸಂಕೀರ್ಣತೆಗಳನ್ನ ಕಳಕೊಂಡು ಸುಲಭವಾಗ್ತಾ ಇದ್ರೆ ಅದು ಜನಪ್ರಿಯವಾಗ್ತಿದೆ ಅಂತ ಮೊದಮೊದಲಿಗೆ ಅನ್ನಿಸಿದರೂ ವಾಸ್ತವದಲ್ಲಿ ಅದು ಅಗ್ಗವಾಗುತ್ತಾ ಇದೆ ಅಂತಲೇ ಅರ್ಥ. ಎಲ್ಲರೂ ಸುಲಭವಾಗಿ ಮಾಡಲಾಗುವ ಕಲೆ ಮೂಲಭೂತವಾಗಿ ಯಾರಿಗೂ ಬೇಕಾಗಿರೋಲ್ಲ ಅನ್ನೋದು ಪರಮಸತ್ಯ. (ಪು. ೩೧೬)

ಕಲೆಯ ಯಾವುದೇ ಪ್ರಕಾರವನ್ನಾಗಲಿ ತೀರ ಸರಳಗೊಳಿಸುವ, ಸುಲಭಗೊಳಿಸುವ, ಸುಲಭಗೊಳಿಸಬೇಕೆನ್ನುವ ಪ್ರಕ್ರಿಯೆಯ ಬಗೆಗಿನ ಈ ವಿಶ್ಲೇಷಣೆ ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿದೆ ಎನ್ನಬಹುದು. ಅಭಿರುಚಿಯನ್ನು, ಕಲೆಯನ್ನು ಅರ್ಥ ಮಾಡಿಕೊಂಡು ಆನಂದಿಸುವ ಹಾಗೂ ಕಲಾಭಿಜ್ಞತೆಯನ್ನು ಉನ್ನತೀಕರಿಸುವ ಯತ್ನಕ್ಕೆ ಬದಲಾಗಿ ಕಲೆಯ ಉತ್ಕೃಷ್ಟತೆಯ ಮಟ್ಟವನ್ನೇ ಸ್ವಲ್ಪಸ್ವಲ್ಪವಾಗಿ ಕೆಳಗಿಳಿಸಿ ಜನಪ್ರಿಯಗೊಳಿಸುವ ಪ್ರಯತ್ನಗಳಿಂದ ಕಲೆಯ ಶ್ರೇಷ್ಠತೆಗೂ ಜನರ ಅಭಿರುಚಿಯ ಶ್ರೇಷ್ಠತೆಗೂ ನಷ್ಟವಾಗುತ್ತದೆ. ಸ್ವತಃ ಕಲಾವಿದರೂ ರಸಜ್ಞರೂ ಆದ ಲೇಖಕರು ಈ ಸಂಗತಿಯನ್ನು ನಿಶಿತವಾಗಿ ವಿಶ್ಲೇಷಿಸಿದ್ದಾರೆ.

ಆಮ್ರಪಾಲಿ ಗಣತಂತ್ರಗಳ ಕಲಾದೃಷ್ಟಿಯನ್ನು ವಿಮರ್ಶಿಸುತ್ತ ಸುಲಭಕಲೆಗಳ ಸ್ಥಾನವನ್ನು ಹೀಗೆ ನಿರ್ದೇಶಿಸುತ್ತಾಳೆ:

ಸುಲಭದ ಕಲೆಗಳಿಗೂ ಅವುಗಳದ್ದೇ ಆದ ನೆಲೆಯಿದೆ, ಅರ್ಥವಿದೆ. ಆದರೆ ಇವೆಲ್ಲ ನಮ್ಮ ನಮ್ಮ ಅನುದಿನದ ಹೊಟ್ಟೇಪಾಡಿನ ಕೆಲಸಗಳ ಆವಿಭಾಜ್ಯಾಂಗ ಅನ್ನೋ ಥರ ಸಾಗಬೇಕಾಗಿವೆ; ಮತ್ತಿವನ್ನ ನಾವು ನಾವೇ ಮಾಡಿಕೊಂಡು ನಲಿಯಬೇಕಾಗಿದೆ. ಇವನ್ನೆಲ್ಲ ನೋಡಿ, ಕೇಳಿ ಆಸ್ವಾದಿಸೋದಿಕ್ಕೆ ಯಾರೂ ಬೇಕಿಲ್ಲ; ಅದು ಸಾಧ್ಯವೂ ಅಲ್ಲ. ಆದರೆ ನಾವೆಲ್ಲ ಕುಳಿತು ನೋಡಿ, ಕೇಳಿ ಆಸ್ವಾದ ಮಾಡಬೇಕಾದಂಥ ಕಲೆ ನಮಗೆ ಬೇಕು ಅಂತಂದ್ರೆ ಅದು ಗಂಭೀರವಾಗಬೇಕು, ಸಂಕೀರ್ಣವಾಗಬೇಕು, ನಮ್ಮ ಬಾಳಿನ ಜೀವಾಳವನ್ನೇ ಬಸಿದು ನಮ್ಮ ಮುಂದೆ ಇಡುವ ಹಾಗಿರಬೇಕು. ಇಂಥ ಕಲೆಯನ್ನ ಚೆನ್ನಾಗಿ ಕಲಿತು ಪ್ರದರ್ಶಿಸೋದಿಕ್ಕೆ ನಮ್ಮ ಇಡಿಯ ಜೀವಮಾನವನ್ನೇ ಮೀಸಲಿಡಬೇಕಾಗುತ್ತೆ. ಅದರ ಅನುಸಂಧಾನವನ್ನೇ ಒಂದು ತಪಸ್ಸಾಗಿ, ಸಾಧನೆಯಾಗಿ ಮಾಡಿಕೊಳ್ಳದೆ, ನಮ್ಮನ್ನೇ ನಾವು ಅದಕ್ಕೆ ಸಮರ್ಪಿಸಿಕೊಳ್ಳದೆ ಅದು ಎಂದಿಗೂ ಒಲಿಯೋದಿಲ್ಲ. (ಪು. ೩೧೬)

ಕಲೆ ಸಂಕೀರ್ಣವಾಗಬೇಕು, ಗಂಭೀರವಾಗಬೇಕು ಎಂದಾಗ ಅದು ಕೃತಕವಾಗಿ, ನಿತ್ಯಜೀವನಕ್ಕೆ ದೂರವಾಗಬೇಕೆ? ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಆಮ್ರಪಾಲಿಯ ಉತ್ತರ ಹೀಗೆ:

ನಮ್ಮ ನಮ್ಮ ಭಾವಗಳ ಆಳಕ್ಕೆ ಇಳಿದೂ ಆಕರ್ಷಕವಾಗಿ ಇರಬೇಕು. ಎಲ್ಲರ ಭಾವಗಳಿಗೂ ಇವು ಮುಟ್ಟುವ ಕಾರಣ, ಎಷ್ಟು ಸಂಕೀರ್ಣವಾದರೂ ಮನಸ್ಸಿಗೆ ಭಾರ ಅಂತ ಅನ್ನಿಸೋಲ್ಲ. ಹೀಗೆ ತನ್ನ ರಚನೆಯಲ್ಲೇ ಆಕರ್ಷಕವಾಗಿರೋದ್ರಿಂದ ಇಂಥ ಕಲೆಯ ತಂತ್ರಗಾರಿಕೆಯನ್ನ ಮೆಚ್ಚೋದಿಕ್ಕೆ, ಕಲಿಯೋದಿಕ್ಕೆ ಸ್ವಲ್ಪವಾದರೂ ಜನ ಬರ್ತಾರೆ. ದುರ್ದೈವ ಏನಂದ್ರೆ ಗಣತಂತ್ರಗಳಲ್ಲಿ ಇಂಥ ಕಲೆ ಚೆನ್ನಾಗಿ ಬೆಳೆಯುವ ಅವಕಾಶ ತೀರ ಕಡಮೆ; ಇಲ್ಲ ಅಂತಲೇ ಹೇಳಬೇಕು. ಆದರೆ ಸಾಮ್ರಾಜ್ಯಗಳಲ್ಲಿ ಪರಿಸ್ಥಿತಿ ಹೀಗಲ್ಲ. (ಪು. ೩೧೭)

ಹೀಗಿದ್ದಲ್ಲಿ ಯಾವ ರೀತಿಯ ಆಡಳಿತಪದ್ಧತಿ ಕಲೆಯನ್ನು ಸರ್ವಾಂಗೀಣವಾಗಿ ಅರಳಿಸಲು ಸಹಕಾರಿಯಾಗಿರುತ್ತದೆ?

ಕೆಟ್ಟ ನಿರಂಕುಶಪ್ರಭುವಿಗಿಂತ ಕೆಟ್ಟ ಗಣತಂತ್ರ ಮೇಲು. ಆದರೆ ಒಳ್ಳೆಯ ಗಣತಂತ್ರಕ್ಕಿಂತ ನಿರಂಕುಶನಾದರೂ ಒಳ್ಳೆಯವನಾದ ಪ್ರಭು ಸರ್ವಥಾ ಮೇಲು. (ಪು. ೩೧೭)

ಆಮ್ರಪಾಲಿಯ ಮಾತುಗಳು ಅವಳ ಅನುಭವದಿಂದ ಮೂಡಿಬಂದು ವಿಚಾರಾರ್ಹವಾಗಿವೆ. ಕಡೆಯದಾಗಿ ಅವಳ ಕಲಾಮೀಮಾಂಸೆ ಹೀಗಿದೆ:

ಕಲೆಯಲ್ಲಿ ಭಾವನಿರ್ಭರತೆ ಬೇಕಂದ್ರೆ ಅದು ಬದುಕಿನಲ್ಲಿ ಭಾವಗಳ ದಳ್ಳುರಿಯನ್ನ ಆಪೋಶನ ತೆಗೆದುಕೊಂಡಾಗ ಮಾತ್ರ ಸಾಧ್ಯ. ಹಾಗಂತ ಸುಮ್ಮನೆ ಬಾಳೆಲ್ಲ ಗೋಳಾಡಿ, ಆ ಗೋಳಾಟವನ್ನೇ ಕಲೆಯಲ್ಲಿ ಕೂಡ ಹೊಳೆಯಾಗಿ ಹರಿಸಿದರೂ ಭಾವನಿರ್ಭರತೆ ಸಾಧ್ಯವಾಗೊಲ್ಲ. ನಮ್ಮ ಬಾಳಿನ ಕಷ್ಟ-ಸುಖಗಳು ಎಷ್ಟೇ ಘನವಾಗಿದ್ದರೂ ನಾವು ಅವನ್ನ ಮತ್ತೆಷ್ಟೇ ಪ್ರಾಮಾಣಿಕತೆಯಿಂದ ಅನುಭವಿಸಿದ್ದರೂ ಅವುಗಳ ಹಸಿಹಸಿ ನೋವನ್ನೇ ನಾವು ನಮ್ಮ ಕಲಾಮಾಧ್ಯಮದಲ್ಲಿ ತುಂಬಿಬಿಟ್ಟರೆ ಅದು ರಸವಾಗೋದಿಲ್ಲ. ವಿರಹವೇ ಜೀವದ ಲಕ್ಷಣ. ಕಲಾನುಸಂಧಾನ ಮಾಡೋವಾಗ ವೈಯಕ್ತಿಕವಾದ ವೇದನೆ ವೈಶ್ವಿಕವಾದ ಸಂವೇದನೆಯಲ್ಲಿ ವಿಲಯಿಸಿ, ತನ್ಮೂಲಕ ನಮ್ಮ ಅಹಂಕಾರ-ಮಮಕಾರಗಳು ಸ್ವಲ್ಪ ಹೊತ್ತಾದರೂ ಮರೆಯಾಗಬೇಕು. ಅಂದರೆ ವಿರಹವೇ ಲಕ್ಷಣವಾದ ಜೀವತ್ವ-ಜಗತ್ತ್ವಗಳು ಸ್ವಲ್ಪ ಕಾಲವಾದರೂ ಕರಗಿ ಮಾಯವಾಗಬೇಕು. ಇದರ ತಾತ್ಪರ್ಯ ಏನು? ಕಲೆಯಲ್ಲಿ ಭಾವೋನ್ನತಿ ಗಳಿಸೋದಿಕ್ಕೆ ಸುಮ್ಮನೆ ಬದುಕಿನಲ್ಲಿ ನೊಂದರೆ ಸಾಲದು; ಆ ನೋವಿನಿಂದ ಆಚೆ ಬಂದರಷ್ಟೇ ಸಾಲದು; ಆ ನೋವಿನಿಂದಾದ ಜೀವಸಂಸ್ಕಾರ ನಮ್ಮೊಳಗೆ ಸದಾ ಮಿಡಿಯುತ್ತಿರಬೇಕು. (ಪು. ೩೩೯)

ಕಲೆಗೆ ನಮ್ಮನ್ನು ಟ್ರಾನ್ಸ್ಪೋರ್ಟ್ ಮಾಡುವ, ನಮ್ಮಲ್ಲಿ ಕೆಥಾರ್ಟಿಕ್ ಎಫೆಕ್ಟ್ ಉಂಟುಮಾಡುವ ಸಾಮರ್ಥ್ಯವಿರಬೇಕು. ಆಗಲೇ ಶ್ರೇಷ್ಠ ಕಲೆಯಾಗುತ್ತದೆ ಎಂಬುದನ್ನು ಈ ಮಾತುಗಳು ಸೂಚಿಸುತ್ತಿವೆ.

ನಮ್ಮ ನೋವು ಮರದ ತೊಲೆ ಇದ್ದ ಹಾಗೆ. ಕಲೆ ಒಂದು ನದಿಯ ಹಾಗೆ. ಅದರ ಒಂದು ದಡ ಜಗತ್ತು ಮತ್ತೊಂದು ದಡ ಆನಂದ. ನಾವೆಲ್ಲ ನೋವಿನ ಜೊತೆ ಈ ಜಗತ್ತಿನಲ್ಲಿ ಇದ್ದೀವಿ. ಜಗತ್ತಿಗೇ ಅಂಟಿಕೊಂಡಿದ್ದರೆ ನಮಗೆ ನೆಮ್ಮದಿ ಇಲ್ಲ. ನಮ್ಮ ನೋವಿನ ಜೊತೆ ಕಲೆಯ ನದಿಯಲ್ಲಿ ಬಿದ್ದು, ಉಪಾಯವಾಗಿ ತೇಲಿದರೆ ಕಡೆಗೆ ಆ ಮರದ ತೊಲೆಯ ನೆರವಿಂದಲೇ ಆನಂದ ಅನ್ನೋ ಆಚೆಯ ದಡ ಮುಟ್ಟಬಹುದು. ಆದರೆ ನೋವೇ ಇಲ್ಲದೆ ಕಲೆಯ ನದಿಗೆ ಬಿದ್ದರೆ ಮುಳುಗಿಹೋಗ್ತೀವಿ; ಆನಂದದ ದಡವನ್ನ ಸೇರೋದೇ ಇಲ್ಲ. ಆನಂದವನ್ನ ಮುಟ್ಟದೆ ಸುಮ್ಮನೆ ಕಲೆಯ ನದಿಯಲ್ಲಿ ಮುಳುಗೋದು ಅಂತಂದ್ರೆ ಅದು ಜಗತ್ತು ಅನ್ನೋ ದಡದ ಬದುಕಿಗಿಂತ ಮತ್ತೂ ಅಸಹ್ಯ, ಅಪಾಯ. ಇದು ನಾನು ನನ್ನ ಮಟ್ಟಿಗೆ ಕಂಡುಕೊಂಡ ಸತ್ಯ. (ಪು. ೩೪೦)

ನೋವು ನಮ್ಮನ್ನು ಎಷ್ಟೋ ಬಾರಿ ಕಲೆಯೆಡೆಗೆ ಕೊಂಡೊಯ್ಯಬಹುದಾದರೂ ಕಲೆಯ, ಕಲಾಸಾಧನೆಯ ಮತ್ತು ಕಲಾಸ್ವಾದನೆಯ ಚರಮ ಗುರಿ, ಚರಮ ಫಲ ಆನಂದವೇ ಎಂಬುದನ್ನು ಬಗೆಬಗೆಯ ಪ್ರತಿಮೆಗಳ ಮೂಲಕ ಸ್ವತಃ ಅಭಿಜಾತಕಲೆಗಳಲ್ಲಿ ಪರಿಣತರೂ ಅವುಗಳ ಅಧಿಕೃತ ವಕ್ತಾರರೂ ಆಗಿರುವ ಲೇಖಕರು ಆಮ್ರಪಾಲಿಯ ಮಾತುಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಇದನ್ನು ‘ಕವಿನಿಬದ್ಧಪ್ರೌಢೋಕ್ತಿ’ ಎನ್ನಬಹುದು. ಇಲ್ಲಿ ಕಂಡರಿಸಿರುವ ಸೂಕ್ತಿಪ್ರಾಯವಾದ ಮಾತುಗಳನ್ನು ಸಂಗೀತ, ಸಾಹಿತ್ಯ, ನೃತ್ಯಗಳಂಥ ಕಲೆಗಳಲ್ಲಿ ಆಸಕ್ತರಾದ ರಸಿಕರು ಮನನ ಮಾಡಿಕೊಳ್ಳಬೇಕು.

ಆಮ್ರಪಾಲಿ ತನ್ನ ಕಾಲಘಟ್ಟದ ಸಮಾಜವನ್ನು, ಬಲಿಷ್ಠ ಗಣತಂತ್ರದ ಪ್ರಮುಖರನ್ನು ಎದುರಿಸಿ ತಾನು ಗಣಭೋಗ್ಯೆಯಾದರೂ ಲೋಕವಿಖ್ಯಾತೆಯಾದ ದಿಟ್ಟ ಮಹಿಳೆ. ಇಂಥ ಧೀಶಕ್ತಿ ಮತ್ತು ದೃಢತೆಗಳಿಂದಾಗಿಯೇ ಕಟ್ಟಕಡೆಗೆ ಆಕೆ ಗಟ್ಟಿಯಾದ ಮನಸ್ಸಿನಿಂದ ಎಲ್ಲ ಸುಖ-ವೈಭವಗಳನ್ನೂ ತೊರೆದು ಗೌತಮಬುದ್ಧನ ಶಿಷ್ಯೆಯಾಗಲು ಸಾಧ್ಯವಾಯಿತು. ಈ ಘಟನೆ ಕಾದಂಬರಿಯ ಆಚಿನ ಸಂಗತಿ.

To be continued.

 

Author(s)

About:

Prof. Shantakumari is a teacher, writer, translator and literary critic. Her seminal work ‘Yugasaakshi’ is a critical and definitive study of S. L. Bhyrappa’s Kannada novels. ‘Chaitanyada Chilume’ and ‘Nenapu gari bicchidaaga’ are her autobiographical works. ‘Satyapathika-Socrates’ and ‘Kaggada-Kaanike’ are some of her major works. She has co-translated many of Bhyrappa's novels into English and parts of Will Durant's 'Story of Civilization' into Kannada.

Prekshaa Publications

Karnataka’s celebrated polymath, D V Gundappa brings together in the eighth volume of reminiscences character sketches of his ancestors teachers, friends, etc. and portrayal of rural life. These remarkable individuals hailing from different parts of South India are from the early part of the twentieth century. Written in Kannada in the 1970s, these memoirs go beyond personal memories and offer...