ನೈಷಧೀಯಚರಿತವು ಸಂಸ್ಕೃತಸಾಹಿತ್ಯದ ವಿದ್ವತ್ತೆಯ, ವಿದ್ಯಾಸ್ಪರ್ಧೆಯ, ಚಮತ್ಕಾರಪಾರಮ್ಯದ ಯುಗದ ಅಪ್ರತಿಮ ಪ್ರತಿನಿಧಿ. ವ್ಯಾಸ-ವಾಲ್ಮೀಕಿಗಳ ಮಹಾಕೃತಿಗಳಲ್ಲಿ ಕಂಡುಬರುವ ಕಥೆ-ಪಾತ್ರಗಳ ಆಳ-ಅಗಲಗಳನ್ನಾಗಲಿ, ಜೀವನಮೌಲ್ಯಗಳ ಸಹಜಗಂಭೀರ ಶೋಧನೆಯನ್ನಾಗಲಿ, ಅಕೃತಕವೂ ಉದಾರಮನೋಹರವೂ ಆದ ವಾಗ್ವಿಲಾಸವನ್ನಾಗಲಿ ಇದರಲ್ಲಿ ಕಾಣಲು ಬಯಸಿದರೆ ನಮಗೆ ನಿರಾಶೆಯಾಗದಿರದು. ಆ ಬಗೆಯ ದೃಷ್ಟಿ ಎಷ್ಟೇ ಉನ್ನತವಾಗಿದ್ದರೂ ಇಂಥ ಕಾವ್ಯಗಳ ಮಟ್ಟಿಗೆ ಅದನ್ನು ಅಳವಡಿಸಿಕೊಂಡರೆ ನಮಗೆ ಬೇರೊಂದು ಬಗೆಯ ನಷ್ಟವೇ ಎದುರಾಗುತ್ತದೆ. ಇದೇ ರೀತಿ ಭಾಸ, ಶೂದ್ರಕ, ಕಾಳಿದಾಸ, ಭರ್ತೃಹರಿ, ವಿಶಾಖದತ್ತರಂಥ ಅಭಿಜಾತ ಕವಿಗಳ ಕೃತಿಗಳೊಡನೆ ನೈಷಧೀಯವನ್ನು ಹೋಲಿಸಿ ನೋಡಿದಾಗ ಅಪ್ಪಟ ಸಹೃದಯರಿಗೆ ಬೇಸರವಾಗದಿರದು. ಹಾಗೆಂದು ವಿದ್ಯಾವಿದಗ್ಧರಿಗೆ ಅತ್ಯುತ್ಸಾಹವೂ ಮೂಡದಿರದು. ಹೀಗಾಗಿ ಶ್ರೀಹರ್ಷನನ್ನು ಉಪೇಕ್ಷಿಸುವ ಅಥವಾ ಅವನನ್ನೇ ಕೊಂಡಾಡಿ ಮೆರೆಯಿಸುವ ಅತಿರೇಕಗಳ ಅಪಾಯವುಂಟು. ಬಾಧ್ಯತೆಯುಳ್ಳ ರಸಿಕರು ಇಂಥ ಉಚ್ಚಾವಚಗಳಿಗೆ ಮಾರುಹೋಗದೆ ಕವಿಯ ಉದ್ದೇಶವೇನು? ಅದನ್ನು ನಾವು ಗುರುತಿಸಿಕೊಂಡು ಗಳಿಸಬಹುದಾದ ಬೋಧ-ಮೋದಗಳೇನು? ಎಂದು ಆಲೋಚಿಸಿ, ವಿವೇಕವನ್ನು ತಳೆದು ಕೃತಾರ್ಥರಾಗಬೇಕು. ಇಷ್ಟಂತೂ ದಿಟ. ಕಾಡೊಂದರಲ್ಲಿ ಆನೆ-ಸಿಂಹಗಳಿರುವಂತೆ ತೋಳ-ಕಾಡುಕೋಣಗಳೂ ಇರುತ್ತವೆ, ಮಂಗ-ಅಳಿಲುಗಳೂ ಇರುತ್ತವೆ. ಪ್ರತಿಯೊಂದು ಪ್ರಾಣಿಗೂ ತನ್ನದಾದ ಅರ್ಥವಂತಿಕೆ ಇದ್ದೇ ಇರುತ್ತದೆ. ಇದೇ ರೀತಿ ಶ್ರೀಹರ್ಷನ ಕವಿತೆಗೂ ಅನನ್ಯತೆ ಇದೆ.
ಸಾಮಾನ್ಯ ಕಾವ್ಯರಸಿಕನೊಬ್ಬನು ತನ್ನ ಬದುಕಿನ ಕರ್ತವ್ಯ-ಬಾಧ್ಯತೆಗಳ ನಡುವೆ ಸಂಸ್ಕೃತಸಾಹಿತ್ಯದಿಂದ ಪಡೆಯಲೇಬೇಕಾದ ಅರಿವು-ನಲವುಗಳ ವಲಯದೊಳಗೆ ನೈಷಧೀಯಚರಿತದ ಸಮಗ್ರ ಅಧ್ಯಯನಕ್ಕೆ ಸ್ಥಾನವಿಲ್ಲದೆ ಹೋಗಬಹುದು. ಆದರೆ ಅದರ ಪ್ರಾಥಮಿಕ ಪರಿಚಯ ಅಪೇಕ್ಷಿತ. ಇನ್ನು ಸಂಸ್ಕೃತ ಭಾಷೆ-ಸಾಹಿತ್ಯಗಳನ್ನೇ ಗಂಭೀರವಾಗಿ ಓದಿಕೊಳ್ಳಲು ಬಯಸುವವರಿಗೆ ಇದರ ಅಧ್ಯಯನ ನಿಜಕ್ಕೂ ಅಪೇಕ್ಷಣೀಯ. ಒಂದು ಮಾತಿನಲ್ಲಿ ಹೇಳುವುದಾದರೆ, ಶ್ರೀಹರ್ಷನನ್ನು ಓದಿಕೊಳ್ಳದ ಸಂಸ್ಕೃತಜ್ಞನ ಪ್ರಜ್ಞೆ ಆ ಮಟ್ಟಿಗೆ ಅಪೂರ್ಣ. ಕಾವ್ಯವೊಂದರ ಸಾರ್ಥಕತೆಗೆ ಇದಕ್ಕಿಂತ ಹೆಚ್ಚಿನ ಮನ್ನಣೆ ದಕ್ಕುವುದು ಕಷ್ಟ.
ಈ ಹಿನ್ನೆಲೆಯಲ್ಲಿ ನೈಷಧೀಯಚರಿತದ ವೈಚಿತ್ರ್ಯ-ವೈಭವಗಳನ್ನು ಮನಗಾಣಲು ಒಂದು ಚಿಕ್ಕ ಭಾಗವನ್ನು ಪರಿಶೀಲಿಸಬಹುದು. ಸಾಮಾನ್ಯವಾಗಿ ಈ ಕಾವ್ಯವನ್ನು ಉತ್ತಾನ ಶೃಂಗಾರದ ವಿಸ್ತರವಾಗಿ ವಿದ್ವಾಂಸರು ಗಣಿಸುತ್ತಾರೆ. ಈ ನಿಲವು ಯುಕ್ತವೂ ಹೌದು. ಆದರೆ ಶ್ರೀಹರ್ಷನ ಪ್ರತಿಭೆ ಇಷ್ಟಕ್ಕೇ ಸೀಮಿತವಲ್ಲ. ಆತನ ಕಲ್ಪನೆ-ವೈದುಷ್ಯಗಳು ಮತ್ತೂ ಹಲವು ನಿಟ್ಟುಗಳಲ್ಲಿ ದಾಂಗುಡಿ ಇಡುತ್ತವೆ. ಅಂಥದೊಂದು ಪ್ರಕರಣ ಈ ಕಾವ್ಯದ ಹತ್ತನೆಯ ಸರ್ಗದಲ್ಲಿ ಬರುವ ಸರಸ್ವತಿಯ ವರ್ಣನೆ. ಸಾಮಾನ್ಯವಾಗಿ ವಾಗ್ದೇವತೆಯನ್ನು ಮೂರ್ತಿಮತ್ತಾಗಿ ಚಿತ್ರಿಸುವಾಗ ಹೆಣ್ತನವನ್ನು ಮುಂದುಮಾಡುವುದುಂಟು. ಶ್ರೀಹರ್ಷನು ಇದನ್ನೂ ಮೀರಿ ಶಾರದೆಯ ಸಕಲವಿದ್ಯಾಸ್ವರೂಪವನ್ನು ತನ್ನದಾದ ಚಮತ್ಕಾರದರ್ಪಣದಲ್ಲಿ ಬಿಂಬಿಸಿರುವುದು ಇಲ್ಲಿಯ ವಿಶೇಷ. ಇದು ಈ ಕವಿಯ ಸಾಮರ್ಥ್ಯ-ದೌರ್ಬಲ್ಯಗಳಿಗೆ ಒಮ್ಮೆಲೆ ನಿದರ್ಶನವಾಗುವುದೊಂದು ಚೋದ್ಯ.
ಆಸೀದಥರ್ವಾ ತ್ರಿವಲಿತ್ರಿವೇದೀ-
ಮೂಲಾದ್ವಿನಿರ್ಗತ್ಯ ವಿತಾಯಮಾನಾ |
ನಾನಾಭಿಚಾರೋಚಿತಮೇಚಕಶ್ರೀಃ
ಶ್ರುತಿರ್ಯದೀಯೋದರರೋಮರೇಖಾ ||
ಸರಸ್ವತಿಯ ಕಿಬ್ಬೊಟ್ಟೆಯ ಮೇಲಣ ಮಾಂಗಲಿಕವಾದ ಮೂರು ಗೆರೆಗಳೆಂಬ ಯಜ್ಞವೇದಿಯಿಂದ ಹೊರಟ ರೋಮರಾಜಿಯೇ ಅಥರ್ವವೇದ. ಈ ವೇದದಲ್ಲಿ ಕಂಡುಬರುವ ಅಭಿಚಾರಪ್ರಯೋಗಗಳೇ ಆ ರೋಮರಾಜಿಯ ಶ್ಯಾಮಲಚ್ಛಾಯೆಗೆ ಕಾರಣ.
ಕವಿಯು ಸರಸ್ವತಿಯನ್ನು ವೇದಮಯಳೆಂದು ಕಲ್ಪಿಸಿಕೊಂಡಿರುವುದು ನಿಜಕ್ಕೂ ಸ್ತವನೀಯ. ಆದರೆ ದೇವಿಯ ಬಾಸೆಯೇ ಅಥರ್ವವೇದವೆಂದು ಹೇಳುವಲ್ಲಿ ಶೃಂಗಾರದ ಅವಾಂಛಿತ ಪ್ರಸಕ್ತಿ ಇಣಿಕಿದೆ. ಈ ಮೂಲಕ ವರ್ಣ್ಯವಿಷಯದ ಉದಾತ್ತತೆಗೆ ಭಂಗ ಬಂದಿದೆ. ಹೀಗೆ ಭವ್ಯತೆಯ ಶಿಖರಗಳೊಟ್ಟಿಗೆ ಅನೌಚಿತ್ಯದ ಕಂದರಗಳು ತೋರಿಕೊಳ್ಳುವುದು ನೈಷಧೀಯದಂಥ ಕಾವ್ಯಗಳ ಪಾಡಾಗಿದೆ.
ಶಿಕ್ಷೈವ ಸಾಕ್ಷಾಚ್ಚರಿತಂ ಯದೀಯಂ
ಕಲ್ಪಶ್ರಿಯಾಕಲ್ಪವಿಧಿರ್ಯದೀಯಃ |
ಯಸ್ಯಾಃ ಸಮಸ್ತಾರ್ಥನಿರುಕ್ತಿರೂಪೈ-
ರ್ನಿರುಕ್ತಿವಿದ್ಯಾ ಖಲು ಪರ್ಯಣಂಸೀತ್ ||
ಶಾರದೆಯ ನಡೆವಳಿಕೆಯೇ ಸರಿಯಾದ ಉಚ್ಚಾರಣೆಯನ್ನು ತಿಳಿಸುವ ಶಿಕ್ಷಾಶಾಸ್ತ್ರ. ವೇದವು ಹೇಳುವ ಗೃಹ್ಯ ಮತ್ತು ಶ್ರೌತ ಕರ್ಮಗಳ ಧರ್ಮಾಚರಣೆಗಳ ಸಂಗ್ರಹವಾದ ಕಲ್ಪಸೂತ್ರಗಳ ಸೌಭಾಗ್ಯವೇ ಆಕೆಯ ಅಲಂಕಾರ. ವೇದಮೂರ್ತಿಯಾದ ಅವಳ ಒಳತಿರುಳಿನ ನಿರೂಪಣೆಯೇ ನಿರುಕ್ತವೆಂಬ ವೇದಾಂಗವೆನಿಸಿದೆ.
ಜಾತ್ಯಾ ಚ ವೃತ್ತೇನ ಚ ಭಿದ್ಯಮಾನಂ
ಛಂದೋ ಭುಜದ್ವಂದ್ವಮಭೂದ್ಯದೀಯಮ್ |
ಶ್ಲೋಕಾರ್ಧವಿಶ್ರಾಂತಿಮಯೀಭವಿಷ್ಣು-
ಪರ್ವದ್ವಯೀಸಂಧಿಸುಚಿಹ್ನಮಧ್ಯಮ್ ||
ವಾಣಿಯ ಎರಡು ತೋಳುಗಳೇ ಛಂದಃಶಾಸ್ತ್ರ. ಇವು ಸ್ವಭಾವದಿಂದಲೇ ದುಂಡಾಗಿವೆ. ಪದ್ಯವೊಂದರಲ್ಲಿ ಇರುವ ಪೂರ್ವಾರ್ಧ ಮತ್ತು ಉತ್ತರಾರ್ಧಗಳೇ ಅವಳ ಮೊಳಕೈಗಳ ಆಚೀಚಿನ ಹಿಂದೋಳು ಮತ್ತು ಮುಂದೋಳುಗಳು.
ಇಲ್ಲಿ ಕವಿಯು ಒಂದೇ ಆಗಿರುವ ಛಂದಃಶಾಸ್ತ್ರವನ್ನು ಎರಡು ತೋಳುಗಳಿಗೆ ಒಪ್ಪವಿಡುವಾಗ ಏಕತೆಯನ್ನು ಸಾಧಿಸಲು ತೋಳುಗಳ ಜೋಡಿ (ಭುಜದ್ವಂದ್ವ) ಎಂಬ ಏಕವಚನವನ್ನು ಬಳಸಿರುವುದು ಗಮನಾರ್ಹ. ಸ್ವಭಾವ ಮತ್ತು ದುಂಡುತನ ಎಂಬ ಅರ್ಥಗಳನ್ನು ಹೊಮ್ಮಿಸಲು ‘ಜಾತ್ಯಾ’, ‘ವೃತ್ತೇನ’ ಎಂಬ ಪದಗಳನ್ನು ಪ್ರಯೋಗಿಸುವ ಮೂಲಕ ಪ್ರಮುಖ ಛಂದಃಪ್ರಭೇದಗಳಾದ ಮಾತ್ರಾಜಾತಿ ಮತ್ತು ವರ್ಣವೃತ್ತಗಳನ್ನು ಶ್ಲೇಷದಿಂದ ಸೂಚಿಸಿರುವುದು ಶ್ಲಾಘನೀಯ.
ಅಸಂಶಯಂ ಸಾ ಗುಣದೀರ್ಘಭಾವ-
ಕೃತಾಂ ದಧಾನಾ ವಿತತಿಂ ಯದೀಯಾ |
ವಿಧಾಯಿಕಾ ಶಬ್ದಪರಂಪರಾಣಾಂ
ಕಿಂ ಚಾರಚಿ ವ್ಯಾಕರಣೇನ ಕಾಂಚೀ ||
ವಾಗ್ದೇವತೆಯ ನಡುಪಟ್ಟಿ ವ್ಯಾಕರಣದಿಂದ ನಿರ್ಮಿತವಾಗಿದೆ. ಇದು ಉದ್ದವಾದ ನೂಲುಗಳಿಂದ ಕೂಡಿದ್ದು ಇನಿದನಿಯನ್ನು ಮೂಡಿಸುತ್ತಿದೆ.
ಕವಿಯು ಶ್ಲೇಷದ ಬಲದಿಂದ ಗುಣ, ದೀರ್ಘ, ಭಾವ(ಪ್ರತ್ಯಯ), ಕೃತ್(ಪ್ರತ್ಯಯ), ನಾಮ ಹಾಗೂ ಕ್ರಿಯಾಪದಗಳ ಪರಂಪರೆ ಮುಂತಾದ ವ್ಯಾಕರಣಶಾಸ್ತçದ ಅಂಶಗಳನ್ನು ಸೂಚಿಸಿದ್ದಾನೆ.
ಸ್ಥಿತೈವ ಕಂಠೇ ಪರಿಣಮ್ಯ ಹಾರ-
ಲತಾ ಬಭೂವೋದಿತತಾರವೃತ್ತಾ |
ಜ್ಯೋತಿರ್ಮಯೀ ಯದ್ಭಜನಾಯ ವಿದ್ಯಾ
ಮಧ್ಯೇಂಽಗಮಂಕೇನ ಭೃತಾ ವಿಶಂಕೇ ||
ಸರಸ್ವತಿಯ ಕೊರಳ ಏಕಾವಳಿ ಮೂಡುತ್ತಿರುವ ತಾರೆಗಳ ಶೋಭೆಯನ್ನು ಒಳಗೊಂಡಿದೆ. ಥಳಥಳಿಸುವ ಈ ಹಾರ ಕೊರಳಿಂದ ತೊಡೆಯವರೆಗೆ ಇಳಿಬಿದ್ದಿದೆ. ಇದು ಆಕೆಯನ್ನು ಆರಾಧಿಸಲು ಮುಂದಾದ ಜ್ಯೋತಿರ್ವಿದ್ಯೆಯೇ ಸರಿ.
‘ಉದಿತತಾರವೃತ್ತಾ’ (ಉನ್ಮೀಲಿಸುವ ನಕ್ಷತ್ರಗಳ ವರ್ತನೆ / ಎದ್ದುತೋರುವಂತೆ ದುಂಡಾದ ಮಣಿಗಳ ರಚನೆ), ‘ಜ್ಯೋತಿರ್ಮಯೀ’ (ಆಕಾಶಕಾಯಗಳ ಮೊತ್ತ / ಕಾಂತಿಯುಕ್ತ), ‘ಭಜನ’ (ನಕ್ಷತ್ರಗಳ ಸಮೂಹ / ಆರಾಧನೆ) ಎಂಬ ಮಾತುಗಳಲ್ಲಿ ಶ್ಲೇಷಾರ್ಥದ ಸ್ವಾರಸ್ಯವಿದೆ. ಈ ಪ್ರಮಾಣದ ಶ್ಲೇಷಾರ್ಥಕಲ್ಪನೆ ಅಲ್ಪಸ್ವಲ್ಪದ ಪಾಂಡಿತ್ಯಕ್ಕೆ ದಕ್ಕದ ಸಂಪದ. ಇದೂ ಸೇರಿದಂತೆ ನಾಲ್ಕು ಪದ್ಯಗಳಲ್ಲಿ ಆರೂ ವೇದಾಂಗಗಳ ಪ್ರಸ್ತಾವ ಬಂದಿರುವುದು ಗಮನಾರ್ಹ.
ಅವೈಮಿ ವಾದಿಪ್ರತಿವಾದಿಗಾಢ-
ಸ್ವಪಕ್ಷರಾಗೇಣ ವಿರಾಜಮಾನೇ |
ತೇ ಪೂರ್ವಪಕ್ಷೋತ್ತರಪಕ್ಷಶಾಸ್ತ್ರೇ
ರದಚ್ಛದೌ ಭೂತವತೀ ಯದೀಯೌ ||
ದೇವಿಯ ಚೆಂದುಟಿಗಳು ವಾದಿ-ಪ್ರತಿವಾದಿಗಳನ್ನು ಸಂಕೇತಿಸುವಂತೆ ನ್ಯಾಯಶಾಸ್ತ್ರದ ಪೂರ್ವಪಕ್ಷ ಮತ್ತು ಸಿದ್ಧಾಂತಗಳ ಸಾಕಾರಗಳಾಗಿವೆ.
ಇಲ್ಲಿಯ ‘ಗಾಢಸ್ವಪಕ್ಷರಾಗ’ ಎಂಬ ಪದಪುಂಜವು ತಮ್ಮ ತಮ್ಮ ಪಕ್ಷಗಳನ್ನು ಸಮರ್ಥಿಸಲು ವಾದಿ-ವಿವಾದಿಗಳಿಗಿರುವ ಗಾಢವಾದ ಅಭಿನಿವೇಶವನ್ನು ಸೂಚಿಸುವಂತೆಯೇ ತುಟಿಗಳ ಕಡುಗೆಂಪು ಬಣ್ಣವನ್ನೂ ವ್ಯಂಜಿಸುತ್ತಿದೆ. ಓಷ್ಠ ಮತ್ತು ಅಧರ ಎಂದು ಎರಡಾಗಿರುವ ಮೇಲ್ದುಟಿ ಮತ್ತು ಕೆಳದುಟಿಗಳು ಸಿದ್ಧಾಂತ ಹಾಗೂ ಪೂರ್ವಪಕ್ಷಗಳ ಸ್ಥಾನಗಳನ್ನು ಧ್ವನಿಸುತ್ತಿವೆ. ಅಧರ ಎಂಬುದಕ್ಕೆ ಕೆಳದುಟಿ ಮತ್ತು ಕೀಳಾದದ್ದು ಎಂಬ ಅರ್ಥಗಳಿರುವುದನ್ನು ನೆನೆದಾಗ ಈ ಹೋಲಿಕೆಯ ಸ್ವಾರಸ್ಯ ಮತ್ತಷ್ಟು ಅರ್ಥಪೂರ್ಣವೆನಿಸದಿರದು.
ಬ್ರಹ್ಮಾರ್ಥಕರ್ಮಾರ್ಥಕವೇದಭೇದಾ-
ದ್ದ್ವಿಧಾ ವಿಧಾಯ ಸ್ಥಿತಯಾತ್ಮದೇಹಮ್ |
ಚಕ್ರೇ ಪರಾಚ್ಛಾದನಚಾರು ಯಸ್ಯಾ
ಮೀಮಾಂಸಯಾ ಮಾಂಸಲಮೂರುಯುಗ್ಮಮ್ ||
ಕರ್ಮಕಾಂಡ ಮತ್ತು ಜ್ಞಾನಕಾಂಡ ಎಂದು ಎರಡಾದ ಮೀಮಾಂಸಾಶಾಸ್ತ್ರವೇ ಶಾರದೆಯ ತುಂಬುದೊಡೆಗಳು. ಇವು ಒಳ್ಳೆಯ ಬಟ್ಟೆಯಿಂದ ಅಲಂಕೃತವಾಗಿವೆ.
‘ಪರಾಚ್ಛಾದನ’ ಎಂಬ ಸಮಸ್ತಪದವು ವೇದೋಪವಸತಿಯುಳ್ಳ ಪೂರ್ವೋತ್ತರಮೀಮಾಂಸೆಗಳೆAಬ ದರ್ಶನಗಳು ಮಿಕ್ಕ ಅವೈದಿಕ ಮತಗಳ ಆಕ್ಷೇಪಕ್ಕೆ ತುತ್ತಾಗದೆ ಸುರಕ್ಷಿತವಾಗಿವೆ ಎಂಬ ಅರ್ಥವನ್ನು ಸೂಚಿಸುತ್ತಿದೆ.
ಉದ್ದೇಶಪರ್ವಣ್ಯಪಿ ಲಕ್ಷಣೇಽಪಿ
ದ್ವಿಧೋದಿತೈಃ ಷೋಡಶಭಿಃ ಪದಾರ್ಥೈಃ |
ಆನ್ವೀಕ್ಷಿಕೀಂ ಯದ್ದಶನದ್ವಿಮಾಲೀಂ
ತಾಂ ಮುಕ್ತಿಕಾಮಾಕಲಿತಾಂ ಪ್ರತೀಮಃ ||
ಸಾಲಿಗೆ ಹದಿನಾರರಂತೆ ಎರಡು ಪಂಕ್ತಿಗಳಾಗಿರುವ ವಾಗ್ದೇವತೆಯ ದಂತಗಳು ಮೊನಚಾಗಿ, ಸುಲಕ್ಷಣವಾಗಿ, ಮುತ್ತಿನ ಮಣಿಗಳಂತೆ ಬೆಳಗಿ ನ್ಯಾಯಶಾಸ್ತ್ರವನ್ನು ಹೋಲುತ್ತಿವೆ.
‘ಉದ್ದೇಶಪರ್ವ’ (ಚರ್ಚೆಯ ಸಂದರ್ಭ / ಎದ್ದುತೋರುವಂತೆ ಮೊನಚಾದ), ‘ಲಕ್ಷಣ’ (ಪದಾರ್ಥಗಳ ಅಸಾಧಾರಣ ಧರ್ಮ / ದೇಹಸಾಮುದ್ರಿಕವು ಹೇಳುವ ಶುಭಲಕ್ಷಣಗಳು), ‘ಮುಕ್ತಿಕಾಮಾಕಲಿತ’ (ಮುಕ್ತಿಯ ಬಯಕೆಯನ್ನು ಹೊಂದಿರುವ / ಮುತ್ತುಗಳ ಸೊಗಸನ್ನು ತಳೆದಿರುವ) ಎಂಬ ಪದಗಳಲ್ಲಿ ನ್ಯಾಯಶಾಸ್ತ್ರಕ್ಕೂ ದಂತಪಂಕ್ತಿಗೂ ಸಮಾನವಾಗಿ ಅನ್ವಯಿಸುವ ಸೊಗಸಾದ ಶ್ಲೇಷವಿದೆ. ಸಾಲೊಂದರ ಹದಿನಾರು ಹಲ್ಲುಗಳು ನ್ಯಾಯಶಾಸ್ತ್ರದ ಹದಿನಾರು ಪ್ರಮುಖ ಪ್ರಮೇಯಗಳನ್ನು ಪ್ರತಿನಿಧಿಸಿವೆ.
ತರ್ಕಾ ರದಾ ಯದ್ವದನಸ್ಯ ತರ್ಕ್ಯಾ
ವಾದೇಽಸ್ಯ ಶಕ್ತಿಃ ಕ್ವ ತಥಾನ್ಯಥಾ ತೈಃ |
ಪತ್ತ್ರಂ ಕ್ವ ದಾತುಂ ಗುಣಶಾಲಿಪೂಗಂ
ಕ್ವ ವಾದತಃ ಖಂಡಯಿತುಂ ಪ್ರಭುತ್ವಮ್ ||
ಸರಸ್ವತಿಯ ದಂತಗಳು ವಾದಪ್ರಧಾನವಾದ ತರ್ಕಶಾಸ್ತ್ರದಿಂದಲೇ ನಿರ್ಮಿತವಾಗಿರಬೇಕು. ಇಲ್ಲವಾದರೆ ಅವುಗಳಿಗೆ ಖಂಡನೆಯ ಶಕ್ತಿಯದರೂ ಹೇಗೆ ಬರಬೇಕು? ವೀಳೆಯವನ್ನೂ ಬಗೆಬಗೆಯ ರುಚಿ-ಪರಿಮಳಗಳನ್ನು ಕಟ್ಟಿದ ಅಡಕೆಯನ್ನೂ ಅಗೆಯುವ ಬಲ ಹಲ್ಲುಗಳಿಗೆ ಬಂದದ್ದು ತರ್ಕದಿಂದ ತಾನೆ!
ಇಲ್ಲಿ ಕವಿ ನ್ಯಾಯ-ವೈಶೇಷಿಕಗಳ ಸಮಾಹಾರವಾದ ತರ್ಕಶಾಸ್ತ್ರವನ್ನು ಪ್ರಸ್ತಾವಿಸಿದ್ದಾನೆ. ಮತ್ತೆ ಶ್ಲೇಷದ ಬಲದಿಂದಲೇ ತನ್ನ ಪ್ರತಿಭೆಯನ್ನು ಬೆಳಗಿದ್ದಾನೆ. ‘ಪತ್ತ್ರ’ (ವಾದಿಗಳು ತಮ್ಮ ಪಕ್ಷದ ನಿಲವನ್ನು ಬರೆದು ಮುಂದಿಡುವ ಪ್ರತಿಜ್ಞಾಲೇಖ / ವೀಳೆಯ), ‘ಗುಣಶಾಲಿಪೂಗ’ (ಸದ್ಗುಣಗಳನ್ನು ಹೊಂದಿದ ವಿದ್ವಾಂಸರ ವೃಂದ / ಭಾವನೆಗೊಂಡ ಅಡಕೆ), ‘ವಾದತಃ’ (ವಾದದ ಮೂಲಕ / ಅಗೆಯುವವನ), ‘ಖಂಡಯಿತುಮ್’ (ಪ್ರತಿಪಕ್ಷದ ವಾದವನ್ನು ನಿರಾಕರಿಸಲು / ತುಂಡರಿಸಲು) ಎಂಬೆಲ್ಲ ಶ್ಲಿಷ್ಟಪದಗಳಿಂದ ಇಷ್ಟಾರ್ಥವನ್ನು ಸಾಧಿಸಿದ್ದಾನೆ. ಜೊತೆಗೆ ಹಲ್ಲುಗಳಿಲ್ಲದಿದ್ದರೆ ದಂತ್ಯವರ್ಣಗಳಿರುವ ಪದಗಳನ್ನು ಸ್ಪಷ್ಟವಾಗಿ ಉಚ್ಚರಿಸಿ ವಾದಿಸಲಾಗುವುದಿಲ್ಲ; ತಾಂಬೂಲವನ್ನೂ ಜಗಿಯಲಾಗುವುದಿಲ್ಲ ಎಂಬ ಸೂಚನೆಯನ್ನೂ ಕೊಟ್ಟಿದ್ದಾನೆ.
ಸಪಲ್ಲವಂ ವ್ಯಾಸಪರಾಶರಾಭ್ಯಾಂ
ಪ್ರಣೀತಭಾವಾದುಭಯೀಭವಿಷ್ಣು |
ತನ್ಮತ್ಸ್ಯಪದ್ಮಾದ್ಯುಪಲಕ್ಷ್ಯಮಾಣಂ
ಯತ್ಪಾಣಿಯುಗ್ಮಂ ವವೃತೇ ಪುರಾಣಮ್ ||
ಶಾರದೆಯ ಅಂಗೈಗಳು ಚಿಗುರಿನಂತಿದ್ದು ಪದ್ಮರೇಖೆ-ಮತ್ಸ್ಯರೇಖೆಗಳಂಥ ಮಾಂಗಲಿಕ ಚಿಹ್ನೆಗಳನ್ನು ಹೊಂದಿವೆ. ಈ ಮೂಲಕ ಅವು ಪರಾಶರ ಮತ್ತು ವೇದವ್ಯಾಸ ಮಹರ್ಷಿಗಳು ನಿರೂಪಿಸಿದ ನಾನಾ ಆಖ್ಯಾನಗಳಿಂದ ಕೂಡಿದ ಮತ್ಸ್ಯ, ಪದ್ಮ ಮೊದಲಾದ ಮಹಾಪುರಾಣ ಮತ್ತು ಉಪಪುರಾಣಗಳನ್ನು ಹೋಲುತ್ತಿವೆ.
ಇಲ್ಲಿಯೂ ಕವಿ ಶ್ಲೇಷಬಲದಿಂದ ವಿವಕ್ಷಿತ ಅರ್ಥವನ್ನು ಸಾಧಿಸಿದ್ದಾನೆ. ಅವನು ಬಳಸಿರುವ ಶ್ಲಿಷ್ಟಪದಗಳ ಅರ್ಥ ತಿಳಿಯಾಗಿರುವುದು ಹೆಚ್ಚಿನ ವಿಶೇಷ. ಆದರೆ ‘ವ್ಯಾಸ’ ಮತ್ತು ‘ಪರಾಶರ’ ಎಂಬ ಶಬ್ದಗಳನ್ನು ಕೈಗಳಿಗೆ ಅನ್ವಯಿಸುವುದು ಕಷ್ಟ. ವ್ಯಾಸಶಬ್ದವು ವೈಶಾಲ್ಯ ಎಂಬ ಅರ್ಥದಲ್ಲಿ ಅಂಗೈಗಳಿಗೆ ಹೊಂದಿಕೊಳ್ಳುವುದಾದರೂ ಪರಾಶರಶಬ್ದಕ್ಕೆ ಸುಬೋಧವೂ ಪ್ರಸಿದ್ಧವೂ ಆದ ಹಸ್ತಸಂಬದ್ಧ ಅರ್ಥವಿಲ್ಲ. ಹೇಗೋ ಹೆಣಗಿ ಅರ್ಥವನ್ನು ಹೊಂದಿಸಬಹುದಾದರೂ ಅದು ಹೃದ್ಯವೆನಿಸದು. ಇಲ್ಲಿ ಪ್ರಸಿದ್ಧ ವ್ಯಾಖ್ಯಾನಕಾರರೂ ನಮಗೆ ನರವಾಗುತ್ತಿಲ್ಲ.
ಆಕಲ್ಪವಿಚ್ಛೇದವಿವರ್ಜಿತೋ ಯಃ
ಸ ಧರ್ಮಶಾಸ್ತ್ರವ್ರಜ ಏವ ಯಸ್ಯಾಃ |
ಪಶ್ಯಾಮಿ ಮೂರ್ಧಾ ಶ್ರುತಿಮೂಲಶಾಲೀ
ಕಂಠಸ್ಥಿತಃ ಕಸ್ಯ ಮುದೇ ನ ವೃತ್ತಃ ||
ವಾಣಿಯ ಶಿರಸ್ಸು ಧರ್ಮಶಾಸ್ತ್ರದ ಸಮೂಹದಂತಿದೆ. ಇದು ಸದಾ ಅಲಂಕಾರಗಳಿಂದ ಕೂಡಿದೆ. ಕಂಠದ ಮೇಲೆ ದುಂಡಾಗಿ ನಿಂತಿದೆ. ಇರ್ಕೆಲದಲ್ಲಿ ಕಿವಿಗಳಿಂದ ಕೂಡಿದೆ.
‘ಆಕಲ್ಪವಿಚ್ಛೇದವಿವರ್ಜಿತ’ (ಪ್ರಳಯದವರೆಗೆ ಭಂಗವಾಗದೆ ಉಳಿಯುವ / ಸದಾ ಅಲಂಕರಗಳನ್ನು ತಳೆದ), ‘ಶ್ರುತಿಮೂಲಶಾಲೀ’ (ವೇದಗಳನ್ನು ತನ್ನ ಆಧಾರವಾಗಿ ಹೊಂದಿರುವ / ತುದಿಯಲ್ಲಿ ಕಿವಿಗಳಿಂದ ಕೂಡಿರುವ), ‘ಕಂಠಸ್ಥಿತ’ (ಮೌಖಿಕ ಪರಂಪರೆಯಲ್ಲಿ ನೆಲೆನಿಂತದ್ದು / ಕೊರಳಿನ ಮೇಲೆ ಇರುವುದು), ‘ವೃತ್ತ’ (ಒಳ್ಳೆಯ ನಡೆವಳಿಯುಳ್ಳದ್ದು / ದುಂಡಾದುದು) ಎಂಬ ಸೊಗಸಾದ ಶ್ಲಿಷ್ಟಪದಗಳಿಂದ ಕವಿಯ ಉದ್ದೇಶ ನೆರವೇರಿದೆ.
ಭ್ರುವೌ ದಲಾಭ್ಯಾಂ ಪ್ರಣವಸ್ಯ ಯಸ್ಯಾ-
ಸ್ತದ್ಬಿಂದುನಾ ಭಾಲತಮಾಲಪತ್ತ್ರಮ್ |
ತದರ್ಧಚಂದ್ರೇಣ ವಿಧಿರ್ವಿಪಂಚೀ-
ನಿಕ್ವಾಣನಾಕೋಣಧನುಃ ಪ್ರಣಿನ್ಯೇ ||
ವಾಗ್ದೇವತೆಯ ಎರಡು ಹುಬ್ಬುಗಳು ದೇವನಾಗರೀಲಿಪಿಯ ಓಂಕಾರದ ಎರಡು ಬಾಗುಗಳಂತೆ ತೋರುತ್ತಿವೆ. ಇವುಗಳ ಜೊತೆಗೆ ಹಣೆಯ ತಿಲಕದ ಬಿಂದು ಮತ್ತದರ ಕೆಳಗಿನ ಚಂದ್ರರೇಖೆ ಸೇರಿ ಪೂರ್ಣರೂಪದ ಓಂಕಾರವೇ ತೋರುತ್ತಿದೆ. ಈ ಹುಬ್ಬುಗಳ ಜೋಡಿಯನ್ನು ಬ್ರಹ್ಮನು ವಾಣಿಯ ವೀಣಾವಾದನಕ್ಕೆ ಒದಗಿಬರುವ ಬಾಗಿದ ಕೋಣವನ್ನಾಗಿ ರೂಪಿಸಿದ್ದಾನೆ.
ದ್ವಿಕುಂಡಲೀ ವೃತ್ತಸಮಾಪ್ತಿಲಿಪ್ಯಾಃ
ಕರಾಂಗುಲೀ ಕಾಂಚನಲೇಖನೀನಾಮ್ |
ಕೈಶ್ಯಂ ಮಷೀಣಾಂ ಸ್ಮಿತಭಾ ಕಠಿನ್ಯಾಃ
ಕಾಯೇ ಯದೀಯೇ ನಿರಮಾಯಿ ಸಾರೈಃ ||
ಸರಸ್ವತಿಯ ಕೈಬೆರಳುಗಳು ಸ್ವರ್ಣಲೇಖನಿಯ ಸಾರದಿಂದ ನಿರ್ಮಿತವಾದಂತೆ, ದೇವನಾಗರೀಲಿಪಿಯಲ್ಲಿ ತೋರುವ ದುಂಡಾದ ಎರಡು ಬಿಂದುಗಳ ರೂಪದ ವಿಸರ್ಗಚಿಹ್ನೆಯಿಂದ ಮೂಡಿದಂತೆ ತೋರುತ್ತಿವೆ. ಆಕೆಯ ಕುರುಳು ಬರೆಯಲು ಬಳಸುವ ಕಪ್ಪುಮಸಿಯಿಂದ ರೂಪುಗೊಂಡಂತಿದೆ. ಅವಳ ನಗೆಯ ಬೆಳಕು ಬಳಪದ ಬೆಳ್ಪಿನಿಂದ ರಚಿತವಾದಂತಿದೆ.
ಇಲ್ಲಿ ಕವಿಯು ಸರಸ್ವತಿಯ ರೂಪನಿರ್ಮಿತಿಯಲ್ಲಿ ಬರೆಹದ ಸಾಧನಗಳು ನೆರವಾದುವೆಂದು ಚಮತ್ಕರಿಸಿದ್ದಾನೆ. ಇದಕ್ಕಾಗಿ ಬಳಪ, ಮಸಿ, ಲೇಖನಿ, ಲಿಪಿಚಿಹ್ನೆಗಳೆಲ್ಲ ಅವನಿಗೆ ಚೆನ್ನಾಗಿ ಒದಗಿಬಂದಿವೆ.
ಯಾ ಸೋಮಸಿದ್ಧಾಂತಮಯಾನನೇವ
ಶೂನ್ಯಾತ್ಮತಾವಾದಮಯೋದರೇವ |
ವಿಜ್ಞಾನಸಾಮಸ್ತ್ಯಮಯಾಂತರೇವ
ಸಾಕಾರತಾಸಿದ್ಧಿಮಯಾಖಿಲೇವ || (೧೦.೭೫-೮೮)
ಇಂಥ ಸರಸ್ವತಿಯು ಚಂದ್ರನ ಸತ್ತ್ವವನ್ನೇ ಮುಖವಾಗಿ ಉಳ್ಳಂತೆ, ಶೂನ್ಯತೆಯನ್ನೇ ನಡುವಾಗಿ ತಳೆದಂತೆ, ಸಮಸ್ತ ಜ್ಞಾನವನ್ನೇ ಅಂತರಂಗವಾಗಿ ಹೊಂದಿದಂತೆ, ಎಲ್ಲ ಸಿದ್ಧಿಗಳೇ ಮೈಯಾಂತಂತೆ ಆವಿರ್ಭವಿಸಿದಳು.
ಇಲ್ಲಿ ಕವಿಯು ‘ಸೋಮಸಿದ್ಧಾಂತ’, ‘ಶೂನ್ಯಾತ್ಮತಾವಾದ’, ‘ವಿಜ್ಞಾನಸಾಮಸ್ತ್ಯ’, ‘ಸಿದ್ಧಿ’ ಎಂಬ ಶಬ್ದಗಳ ಮೂಲಕ ಶೈವಾಗಮ, ಸೌತ್ರಾಂತಿಕ ಮತ್ತು ಮಾಧ್ಯಮಿಕ ಬೌದ್ಧದರ್ಶನಗಳು ಹಾಗೂ ಯೋಗಶಾಸ್ತ್ರಗಳನ್ನು ಕ್ರಮವಾಗಿ ಸೂಚಿಸಿದ್ದಾನೆ.
ಈ ಹದಿನಾಲ್ಕು ಪದ್ಯಗಳನ್ನು ಗಮನಿಸಿದರೆ ಸಾಕು, ಶ್ರೀಹರ್ಷನಿಗೆ ಹದಿನಾಲ್ಕು ವಿದ್ಯಾಸ್ಥಾನಗಳಲ್ಲಿದ್ದ ಪಾಂಡಿತ್ಯ ಎಂಥದ್ದೆಂದು ಸ್ಪಷ್ಟವಾಗುತ್ತದೆ. ಆದುದರಿಂದಲೇ ಇಷ್ಟು ಪ್ರೌಢವಾದ ಇವನ ಕಾವ್ಯವನ್ನು ವಿವರಿಸಲು ಕಾಲಕಾಲಕ್ಕೆ ಅನೇಕ ವ್ಯಾಖ್ಯಾನಗಳು ಬಂದಿವೆ. ವಿದ್ವಾಂಸರು ಇದಕ್ಕಿರುವ ಇಪ್ಪತ್ತಮೂರು ವ್ಯಾಖ್ಯಾನಗಳನ್ನು ಗುರುತಿಸಿದ್ದಾರೆ. ಇವುಗಳ ಪೈಕಿ ಕೆಲವಷ್ಟೇ ಅಚ್ಚಾಗಿವೆ. ಅವುಗಳಲ್ಲಿ ಮಲ್ಲಿನಾಥನ ‘ಜೀವಾತು’ ಮತ್ತು ನಾರಾಯಣನ ‘ನೈಷಧಪ್ರಕಾಶ’ಗಳು ಹೆಚ್ಚಿನ ಪ್ರಸಿದ್ಧಿಯನ್ನು ಗಳಿಸಿವೆ.
Concluded.