ಭಾರತದಲ್ಲಿ ಶ್ರೀರಾಮೋತ್ಸವ
ಶ್ರೀರಾಮನ ಜನ್ಮಸ್ಥಾನವಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವುದು ಒಂದು ವಿಶೇಷ ಐತಿಹಾಸಿಕ ಘಟನೆ. ಅದಕ್ಕೆ ಸಂದ ಹೋರಾಟವೇ ಒಂದು ಪರ್ವ. ಬಹುಶಃ ಜಗತ್ತಿನ ಯಾವ ದೇವಾಲಯಕ್ಕೂ ನಡೆಯದ ಐದು ಶತಮಾನಗಳ ಹೋರಾಟ ಅಯೋಧ್ಯಾನಗರದ ರಾಮನ ದೇವಾಲಯಕ್ಕೆ ನಡೆದಿದೆ. ಹದಿನೈದನೆಯ ಶತಮಾನದಿಂದ ಬ್ರಿಟಿಷರ ಆಳ್ವಿಕೆಯ ಆರಂಭದವರೆಗೂ ಮೊಘಲರ ವಿರುದ್ಧ ಸೆಣಸಾಡಿದ್ದಾಗಲಿ, ಬ್ರಿಟಿಷರ ಕಾಲದಲ್ಲಿ ಅವರ ರಾಜಕೀಯ-ನ್ಯಾಯಾಂಗ ವ್ಯವಸ್ಥೆಗೆ ಅನುಗುಣವಾಗಿ ನಮ್ಮ ದೇವಾಲಯಕ್ಕೆ ನಡೆಸಿದ ಹೋರಾಟವಾಗಲಿ, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದೂ ಭಾರತೀಯರು ಸ್ವಧರ್ಮನಿಷ್ಠರಾಗಿ ಬದುಕಲಾಗದಿರುವ ದಶಕಗಳಲ್ಲಿ ನ್ಯಾಯಾಲಯದ ಕಟಕಟೆಯಲ್ಲಿ ನಮ್ಮ ದೇವರನ್ನು ನಿಲ್ಲಿಸಿ ವಾದಿಸಿದ್ದಾಗಲಿ - ಭಾರತದ ಒಂದು ದುರಂತ ಕಥೆಯನ್ನು ಹೇಳುತ್ತದೆ.