ದೇವಾಲಯಗಳು ಭಾರತೀಯ ಸಂಸ್ಕೃತಿಯ ಕೇಂದ್ರಬಿಂದು ಎಂಬುದು ಸಕಲ ಭಾರತೀಯರೂ ಬಲ್ಲ ತಥ್ಯವೇ ಆಗಿದೆ. ಸುಂದರ ದೇವಾಲಯಗಳ ನಿರ್ಮಾಣವು ಆಡಳಿತ ವರ್ಗದ ದಕ್ಷತೆಯ ಹಾಗೂ ರಾಷ್ಟ್ರದ ಆರ್ಥಿಕ ಸಮೃದ್ಧಿಯ ಸಂಕೇತವೂ ಹೌದು. ಪ್ರಾಚೀನ ಕಾಲದಿಂದಲೂ ಭಾರತಾದ್ಯಂತ ನಿರ್ಮಾಣವಾಗಿರುವ ದೇವಾಲಯಗಳು ಇದಕ್ಕೆ ಪುರಾವೆಯಾಗಿ ನಿಂತಿವೆ. ರಾಮಾಯಣದಲ್ಲಿಯೇ ದೇವಾಯತನಗಳ, ಚೈತ್ಯಗಳ ಹಾಗೂ ಅಧಿಷ್ಠಾನಗಳ ಉಲ್ಲೇಖವಿದೆ. ರಾಮನ ಕಾಲದಲ್ಲಿಯೂ ಅಯೋಧ್ಯೆಯಲ್ಲಿ ದೇವಾಲಯಗಳಿದ್ದವು ಎಂದು ಊಹಿಸಲು ರಾಮಾಯಣದಲ್ಲಿ ಆಧಾರಗಳಿವೆ.
ದೇವಾಲಯವನ್ನು ನಿರ್ಮಾಣ ಮಾಡುವ ಮುನ್ನ ಭೂಮಿಪೂಜೆ ಹಾಗೂ ವಾಸ್ತುಶಮನಗಳೆಂಬ ಆಚರಣೆಗಳನ್ನು ಮಾಡುವುದುಂಟು. ಈ ಪ್ರಕ್ರಿಯೆಗಳಲ್ಲಿ ಇರುವ ಅನೇಕ ಸಾಂಕೇತಿಕ ಸ್ವಾರಸ್ಯಗಳ ಪೈಕಿ ಒಂದನ್ನು ಇಲ್ಲಿ ಗಮನಿಸಬಹುದು. ಮನುಷ್ಯನು ಯಾವುದೇ ಭೂಭಾಗದಲ್ಲಿ ತನ್ನ ಇಷ್ಟದಂತೆ ಒಂದಾನೊಂದು ಕಟ್ಟಡವನ್ನು ನಿರ್ಮಿಸುವ ಮುನ್ನ ಆ ಭಾಗದಲ್ಲಿ ಬಹುಕಾಲದಿಂದಲೂ ಅನೇಕ ಜೀವರಾಶಿಗಳು ವಾಸಿಸುತ್ತಿರುತ್ತವೆಯಷ್ಟೆ. ಮರ-ಗಿಡಗಳು, ಪ್ರಾಣಿ-ಪಕ್ಷಿಗಳು, ಕ್ರಿಮಿ-ಕೀಟಗಳೂ ಸೇರಿದಂತೆ ಆ ಜಾಗವನ್ನು ಪಂಚಭೂತಗಳು ರಕ್ಷಿಸಿಕೊಂಡು ಬಂದಿರುತ್ತವೆ. ಮಾನವನು ತನ್ನ ಇಚ್ಛೆಯಂತೆ ಆ ಭಾಗವನ್ನು ಬಳಸುವ ಮುನ್ನ ಈ ಎಲ್ಲ ಜೀವರಾಶಿಗಳಿಂದಲೂ ಪಂಚಭೂತಗಳಿಂದಲೂ ಅನುಮತಿಯನ್ನು ಪಡೆಯಬೇಕೆಂಬ ನಂಬಿಕೆಯುಂಟು. ವಸ್ತುತಃ ಅಲ್ಲಿರುವ ಜೀವರಾಶಿಗಳಿಗೆ ಸಾಧ್ಯವಾದಷ್ಟು ಹಾನಿಯಾಗದಂತೆ ಕಟ್ಟಡವನ್ನು ನಿರ್ಮಿಸಬೇಕು. ಹಾಗೆಯೇ ಅಲ್ಲಿ ನೆಲಸಿರುವ ಜೀವಿಗಳಿಗೆ ಮತ್ತೊಂದು ವಸತಿಯನ್ನು ಕಲ್ಪಿಸಿಕೊಡಬೇಕು. ಹೀಗಾಗಿ ಸುಮ್ಮನೆ ಹಣವನ್ನು ಕೊಟ್ಟು ಭೂಭಾಗವನ್ನು ಕೊಂಡ ಮಾತ್ರಕ್ಕೆ ಅದು ನಮ್ಮ ವಶಕ್ಕೆ ಬಂದಂತೆ ಆಗದು. ದೇವಾಲಯವನ್ನು ನಿರ್ಮಿಸುವ ಪ್ರಕ್ರಿಯೆಯ ಪ್ರಾರಂಭದಿಂದಲೂ ಹಣಕಾಸನ್ನು ಮೀರಿದ ಅಮೇಯ ತತ್ತ್ವವನ್ನು ಮಾನವರು ಗುರುತಿಸಿ ಗೌರವಿಸಬೇಕೆಂಬುದು ಇದರಿಂದ ಸುವೇದ್ಯ. ಜೊತೆಗೆ ದೇವಾಲಯವನ್ನು ನಿರ್ಮಾಣ ಮಾಡುವ ಸಕಲ ಸಲಕರಣೆಗಳನ್ನೂ ಸ್ಥಪತಿಗಳು, ಶಿಲ್ಪಿಗಳು, ಮರಗೆಲಸದವರಿಂದ ಮೊದಲುಗೊಂಡು ಎಲ್ಲ ಕಾರ್ಮಿಕರು ಪೂಜಿಸುವುದೂ ಉಂಟು. ಸನಾತನ ಸಂಸ್ಕೃತಿಯ ದೃಷ್ಟಿಯಲ್ಲಿ ಎಲ್ಲವೂ ದೈವಾಂಶಸಂಭೂತವೇ.
ದೇವಾಲಯನಿರ್ಮಾಣದ ಕಲಾಪಗಳಲ್ಲಿ ಮತ್ತೊಂದು ಪ್ರಕ್ರಿಯೆ ವಾಸ್ತುಶಾಂತಿ ಅಥವಾ ವಾಸ್ತುಪುರುಷಶಾಂತಿ. ಇದರ ಹಿನ್ನೆಲೆಯ ತತ್ತ್ವದ ದ್ಯೋತಕವಾಗಿ ಆಗಮ-ಪುರಾಣಗಳಲ್ಲಿ ಹಾಗೂ ಬೃಹತ್ಸಂಹಿತೆಯಲ್ಲಿ ಕಥೆಗಳಿವೆ. ಮತ್ಸ್ಯಪುರಾಣದ ಪ್ರಕಾರ ಹಿಂದೊಮ್ಮೆ ಪರಮೇಶ್ವರನು ಅಂಧಕಾಸುರನನ್ನು ಸಂಹಾರ ಮಾಡಿದಾಗ ಭಗವಂತನ ಬೆವರಿನ ಕಣವೊಂದು ಭೂಮಿಯ ಮೇಲೆ ನಾಮರಹಿತವಾದ ರಾಕ್ಷಸನೊಬ್ಬನ ರೂಪದಲ್ಲಿ ಬಿದ್ದಿತು. ತಲೆ ಕೆಳಗಾಗಿ ಬಿದ್ದ ಈತನ ದೇಹವು ಚತುರಶ್ರದ (ಚೌಕದ) ಆಕೃತಿಯಲ್ಲಿದ್ದು ತಲೆಯು ಈಶಾನ್ಯದಿಕ್ಕಿನಲ್ಲಿದ್ದಿತು. ಈತನೇ ಮುಂದೆ ವಾಸ್ತುಪುರುಷ ಅಥವಾ ವಾಸ್ತೋಷ್ಪತಿ ಎನಿಸಿದನು. ವಾಸ್ತೋಷ್ಪತಿ ಮತ್ತು ಭೂಮಿಯ ಸಮಾಗಮದಿಂದ ಉದ್ಭವವಾಗುವುದು ದೇವಾಲಯವೆನಿಸಿತು. ವಾಸ್ತುಪುರುಷನ ಬೀಜ ಹಾಗೂ ಭೂಮಿಯ ಕ್ಷೇತ್ರದ ಸಂಸರ್ಗವನ್ನು ಅಂಕುರಾರ್ಪಣ ಎಂಬ ಪ್ರಕ್ರಿಯೆ ಸಂಕೇತಿಸುತ್ತದೆ. ಈ ಕಥೆಯ ಸ್ವಾರಸ್ಯವನ್ನು ಹೀಗೆ ಮನಗಾಣಬಹುದು - ಅಂಧಕಾಸುರನು ಅಜ್ಞಾನ, ಅಹಂಕಾರ ಹಾಗೂ ತಮೋಗುಣಗಳ ಸಂಕೇತ. ಅವನ ಸಂಹಾರದ ಪರಿಣಾಮದಿಂದಾಗಿ ಭೂಮಿಯ ಮೇಲೆ ದೇವಾಲಯದ ಅವತಾರವಾಯಿತು. ಇಂತಹ ದೇವಾಲಯವು ಅನಾದ್ಯನಂತನಾದ ಪರಮಾತ್ಮನ ಒಂದು ಕಣದಂತೆ. ಅಜ್ಞಾನ, ಅಹಂಕಾರ ಹಾಗೂ ತಮೋಗುಣಗಳ ನಾಶವೇ ದೇವಾಲಯದ ಮೂಲ ಉದ್ದೇಶ. ಎಲ್ಲೆಡೆಯೂ ಇರುವ ಪರಮಾತ್ಮನನ್ನು ಒಂದೆಡೆಯಲ್ಲಿ ಕಾಣುವುದರ ಮಾರ್ಗ.
ವಾಸ್ತುಪುರುಷ-ಭೂಮಿಯರ ಸಂಯೋಗಸ್ಥಾನವನ್ನು ಬ್ರಹ್ಮಸ್ಥಾನವೆಂದು ಕರೆಯುವರು. ಆ ಜಾಗದಲ್ಲಿಯೇ ಅಂಕುರಾರ್ಪಣವನ್ನು ಮಾಡಿ, ಅಲ್ಲಿಯೇ ಮೂಲಬೇರವನ್ನು - ಅರ್ಥಾತ್ ಗರ್ಭಗೃಹದ ಮೂಲಮೂರ್ತಿಯನ್ನು - ಪ್ರತಿಷ್ಠಾಪಿಸುವರು. ವಾಸ್ತುಮಂಡಲದ ವಿವಿಧ ಭಾಗಗಳಲ್ಲಿ ವಿವಿಧ ದೇವತೆಗಳ ಆವಾಹನೆಯನ್ನು ಮಾಡುವರು. ಹೀಗಾಗಿ ಪ್ರತಿಯೊಂದು ಮೂಲಬೇರವೂ ಪರಬ್ರಹ್ಮದ ಸಂಕೇತವೆಂದೂ ಪ್ರತಿಯೊಂದು ದೇವಾಲಯವೂ ಸಕಲ ದೇವತೆಗಳ ಆಯತನವೆಂದೂ ತಿಳಿಯುತ್ತದೆ. ಹೀಗಿದ್ದರೂ ಬಗೆಬಗೆಯ ಜನರ ಶ್ರದ್ಧೆಯ ಅನುಕೂಲಕ್ಕಾಗಿ ಒಂದೊಂದು ದೇವಾಲಯವೂ ಪ್ರಧಾನವಾಗಿ ಒಂದೊಂದು ದೇವತಾಸ್ವರೂಪಕ್ಕೆ ಮೀಸಲಾಗಿರುವುದೆಂದು ಪರಿಗಣಿಸುವ ವಾಡಿಕೆಯುಂಟು.
ಪ್ರಾಣಪ್ರತಿಷ್ಠಾಪನೆಯಿಂದಾಗಿ ಮೂಲಬೇರವು ಬರಿಯ ಕಲ್ಲಿನ ಆಕೃತಿಯಾಗಿ ಉಳಿಯದೆ ದೇವರ ಸಾಕ್ಷಾತ್ ಸ್ವರೂಪವೇ ಆಗುವುದು. ಕಾರಣಾಗಮವು ತಿಳಿಸುವಂತೆ ಪೂಜಾಪದದ ನಿಷ್ಪತ್ತಿಯೇ ‘ಪೂರ್ಯಂತೇ ಸರ್ವಕರ್ಮಾಣಿ ಜಾಯತೇ ಜ್ಞಾನಮಾತ್ಮನಿ’ ಎಂದು. ಈ ಅರ್ಥದಲ್ಲಿ ಪೂಜಾವಿಧಾನವು ಅಧಿಭೂತವನ್ನು ಅಧ್ಯಾತ್ಮದೊಂದಿಗೆ ಬೆಸೆಯುವ ಆಧಿದೈವಿಕ-ಆಧಿಯಾಜ್ಞಿಕ ಸೇತುವೆ. ಷೋಡಶೋಪಚಾರಾದಿ ಪೂಜಾವಿಧಾನಗಳನ್ನೂ ಸಹ ‘ಸೋಽಹಂಭಾವೇನ ಪೂಜಯೇತ್’ ಎಂಬ ಭಾವನೆಗೆ ಅನುಸಾರವಾಗಿ ಮಾಡಬೇಕೆಂಬ ವಿಧಿಯುಂಟು. ಸಂಗ್ರಹವಾಗಿ ಹೇಳುವುದಾದರೆ ಸಕಲ ದೇವತಾಪೂಜೆಯೂ ಅಂತಃಕರಣಶುದ್ಧಿಗಾಗಿ, ಆತ್ಮೋದ್ಧಾರಕ್ಕಾಗಿ.
ಅಯೋಧ್ಯೆಯಲ್ಲಿ ಇಂದು ನಿರ್ಮಾಣವಾಗಿರುವ ಮಂದಿರವು ಉತ್ತರಭಾರತದ ಸಂಪ್ರದಾಯಕ್ಕನುಗುಣವಾಗಿ ನಾಗರ ಶೈಲಿಯನ್ನು ಹೋಲುವಂತಿದೆ. ಅಭಿಜಾತಯುಗದಲ್ಲಿ ಘೂರ್ಜರ ಪ್ರತಿಹಾರರು, ಕಳಿಂಗರು ಹಾಗೂ ಚಂದೇಲರು ನಿರ್ಮಿಸಿರುವ ದೇವಾಲಯಗಳ ವಾಸ್ತು ಈ ನೂತನ ಮಂದಿರಕ್ಕೆ ಸ್ಫೂರ್ತಿಯಾಗಿರುವುದು ಸುವೇದ್ಯ. ನಾಗರ ಶೈಲಿಯ ದೇವಾಲಯದ ವಿಮಾನದ ಲಂಬವಿನ್ಯಾಸದಲ್ಲಿ ಕೆಳಭಾಗದ ಉಪಪೀಠದಿಂದ ಶಿಖರದವರೆಗೂ ಸಮರೇಖೆಯು ಪಾಲಿತವಾಗಿದ್ದು ಮೇಲಕ್ಕೆ ಹೋಗುತ್ತ ಕಿಂಚಿತ್ತಾಗಿ ಬಾಗಿರುವುದನ್ನು ಕಾಣಬಹುದು. ಈ ಬಾಗುವಿಕೆಯು ಹಾವಿನ ಹೆಡೆಯ ಆಕಾರವನ್ನು ಹೋಲುವುದರಿಂದ ಅದಕ್ಕೆ ನಾಗರ ಶೈಲಿಯೆಂಬ ಹೆಸರು ಎಂದು ಕೆಲವರ ಅಭಿಪ್ರಾಯ. ನಗರಗಳ ಮಧ್ಯದಲ್ಲಿ ಸಂಸ್ಕೃತಿಯ ಕೇಂದ್ರಬಿಂದುವಾಗಿ ಕಟ್ಟಲ್ಪಡುತ್ತಿದ್ದುದ್ದರಿಂದ ನಾಗರ ಶೈಲಿ ಎಂಬ ನಾಮಕರಣವಾಯಿತೆಂದು ಇನ್ನಿತರರ ಅಭಿಪ್ರಾಯ.
ರಾಮಮಂದಿರದ ವಿಮಾನವು ಸಾಂಪ್ರದಾಯಿಕವಾದ ಷಡ್ವರ್ಗಗಳನ್ನು ಹೊಂದಿರುವುದನ್ನು ಗಮನಿಸಬಹುದು. ಔತ್ತರಾಹ ಪರಿಭಾಷೆಯಲ್ಲಿ ಹೇಳುವುದಾದರೆ, ಗರ್ಭಗೃಹದ ವಿಮಾನದ ವರ್ಗಗಳು: ಪೀಠ (ಅಧಿಷ್ಠಾನ), ಬಾಡ (ಭಿತ್ತಿ), ಜಂಘಾ (ಪ್ರಸ್ತರ), ಕಂಠ (ಗ್ರೀವಾ), ಆಮಲಕ (ಶಿಖರ) ಮತ್ತು ಕಲಶ (ಸ್ತೂಪಿ). ದೇವಾಲಯದ ಪ್ರವೇಶದ್ವಾರದಿಂದ ಪ್ರಾರಂಭವಾಗಿ ಗರ್ಭಗೃಹದವರೆಗಿನ ಎಲ್ಲ ಪ್ರಮುಖ ಅಂಗಗಳೂ ಸಮರೇಖೆಯೊಂದಕ್ಕೆ ಅನುಗುಣವಾಗಿ ನಿರ್ಮಾಣಗೊಂಡಿರುವುದನ್ನು ಕಾಣಬಹುದು. ತಲವಿನ್ಯಾಸದಲ್ಲಿ ತೋರುವ ಈ ರೇಖೆಯನ್ನು ಮಾನಸೂತ್ರವೆಂದು ಕರೆಯುವರು. ಅಯೋಧ್ಯೆಯ ರಾಮಮಂದಿರದಲ್ಲಿ ಮಾನಸೂತ್ರಕ್ಕೆ ಅನುಗುಣವಾಗಿ ಜಗನ್ಮೋಹನ, ನಟಮಂದಿರ ಹಾಗೂ ಭೋಗಮಂದಿರಗಳು ರಚಿತವಾಗಿವೆ. ಜಗನ್ಮೋಹನ ಎಂಬ ಭಾಗವು ಭಕ್ತರು ಒಗ್ಗೂಡಿ ದೇವರ ಪ್ರತಿಮೆಯನ್ನು ದರ್ಶಿಸಲು ಇರುವ ಭಾಗ. ಹೆಸರೇ ಹೇಳುವಂತೆ ನಟಮಂದಿರವು ನೃತ್ಯ-ಸಂಗೀತ-ಹರಿಕಥಾದಿ ಸೇವೆಗಳಿಗಾಗಿ ಮೀಸಲಾಗಿರುವ ಅಂಗ. ಹಾಗೆಯೇ ಭೋಗಮಂದಿರವು ನೈವೇದ್ಯದ ಸಿದ್ಧತೆ ಹಾಗೂ ಪ್ರಸಾದವಿತರಣೆಗಾಗಿ ನಿರ್ಮಿಸಿರುವ ಭಾಗ. ಇದಲ್ಲದೆ ಕೀರ್ತನ ಹಾಗೂ ಪ್ರಾರ್ಥನಾಮಂದಿರಗಳು ಪ್ರತ್ಯೇಕವಾಗಿ ನಿರ್ಮಾಣಗೊಂಡಿರುವುದು ತಿಳಿಯುತ್ತದೆ. ಸಾಂಪ್ರದಾಯಿಕ ದೇವಾಲಯಗಳಂತೆ ರಾಮಮಂದಿರದ ಲಂಬವಿನ್ಯಾಸ ಹಾಗೂ ತಲವಿನ್ಯಾಸಗಳು ಪ್ರಾಸಾದಪುರುಷ ಹಾಗೂ ವಾಸ್ತುಪುರುಷರ ಅಂಗೋಪಾಂಗಗಳಿಗೆ ಅನುಗುಣವಾಗಿ ನಿರ್ಮಾಣಗೊಂಡಿರುವುದನ್ನೂ ಸಹ ಕಾಣಬಹುದು. ‘ದೇಹೋ ದೇವಾಲಯಃ ಪ್ರೋಕ್ತಃ, ಜೀವೋ ದೇವಸ್ಸನಾತನಃ’ ಎಂಬ ಆಗಮೋಕ್ತಿಯ ಅನುವಾದದಂತೆ ರಾಮಮಂದಿರದ ವಾಸ್ತುವನ್ನು ಗುರುತಿಸಬಹುದು.
ಮೋಕ್ಷದಾಯಕ ಪುರಿಗಳಲ್ಲಿ ಒಂದಾದ ಅಯೋಧ್ಯಾನಗರಿಯು ತೀರ್ಥಕ್ಷೇತ್ರವೇ ಸರಿ. “ತರಣಾತ್ ತೀರ್ಥಮ್ ಉಚ್ಯತೇ” ಎಂಬ ಮಾತಿನಂತೆ ಇಹವನ್ನು ಪರದೊಂದಿಗೆ ಬೆಸೆಯುವ ತಾಣವೇ ತೀರ್ಥಕ್ಷೇತ್ರ. ಶ್ರೀರಾಮನಾದರೂ ವೇದವೇದ್ಯವಾದ ಪರಮಾತ್ಮತತ್ತ್ವದ ಸಾಕಾರರೂಪ -
ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ |
ವೇದಃ ಪ್ರಾಚೇತಸಾದಾಸೀತ್ ಸಾಕ್ಷಾದ್ರಾಮಾಯಣಾತ್ಮನಾ ||
ಎಂಬ ಪ್ರಸಿದ್ಧ ಮಾತಿನಂತೆ ಇಂದು ಮತ್ತೊಮ್ಮೆ ಈ ಪರಮಾತ್ಮನ ಅವತಾರವನ್ನು ಕಾಣುವ ಸುಯೋಗವನ್ನು ಭಾರತವು ಪಡೆದಿದೆ. ಅಂಧಕಾರದ ನಿರ್ಮೂಲನ ಹಾಗೂ ರಮಣೀಯತೆಯ ಪುನರಾವಿಷ್ಕಾರವೇ ಪ್ರಬುದ್ಧ ರಾಜನೀತಿಯ ಸಂಕೇತ; ಅದೇ ಧರ್ಮ.