ದೇವಾಲಯತತ್ತ್ವ
ಭಾರತೀಯ ದೇವಾಲಯಪರಂಪರೆಗೆ ವೇದವೇ ಮೂಲ. ವೇದಗಳಲ್ಲಿ ಬರುವ ಯಜ್ಞತಂತ್ರದ ರೂಪ-ಸ್ವರೂಪಗಳೇ ದೇವಾಲಯಗಳ ನಿರ್ಮಾಣ-ನಿರ್ವಹಣಗಳ ಮೂಲಧಾತು. ಶ್ರೌತಯಾಗಗಳ ತ್ರೇತಾಗ್ನಿಗಳೇ ದೇವಾಲಯಗಳ ಮೂಲಮೂರ್ತಿ, ಉತ್ಸವಮೂರ್ತಿ, ಭೋಗಮೂರ್ತಿ ಮುಂತಾದುವು. ಯೂಪಸ್ತಂಭವನ್ನೂ ಒಳಗೊಂಡಂತೆ ನಿರ್ಮಿತವಾಗುವ ಯಜ್ಞಶಾಲೆಯೇ ಧ್ವಜಸ್ತಂಭಾದಿಗಳನ್ನು ಒಳಗೊಂಡ ದೇವಾಲಯದ ಪ್ರಾಚೀನ ರೂಪ. ವೇದಾಂಗವಾದ ಕಲ್ಪಸೂತ್ರಗಳ ವಿಸ್ತರಣವೇ ದೇವಾಲಯಕೇಂದ್ರಿತವಾದ ಆಗಮವಾಙ್ಮಯ. ಜ್ಞಾನ, ಯೋಗ, ಕ್ರಿಯಾ ಮತ್ತು ಚರ್ಯಾ ಎಂಬ ನಾಲ್ಕು ಪಾದಗಳಾಗಿ ವಿಭಕ್ತವಾಗಿರುವ ಆಗಮಗಳು ಕ್ರಮವಾಗಿ ದೇವತಾತತ್ತ್ವ, ದೇವತಾಧ್ಯಾನ, ದೇವತಾಮಂದಿರ ಮತ್ತು ದೇವತಾಪೂಜೆ-ಉತ್ಸವಗಳ ವಿಸ್ತೃತ ವಿವರಗಳನ್ನು ಒಳಗೊಂಡಿವೆ. ಇವು ಆರ್ಷದರ್ಶನದ ಸಹಜವಾದ ವಿಸ್ತರಣಗಳು. ವೇದಸಂಹಿತೆಗಳಲ್ಲಿಯೇ ಕಂಡುಬರುವ ವಿವಿಧ ದೇವತೆಗಳ ರೂಪ-ಗುಣವಿಶೇಷಗಳು ದೇವಮಂದಿರಗಳ ಮೂರ್ತಿಗಳ ನಿರ್ಮಾಣಕ್ಕೆ ಮೂಲಮಾತೃಕೆಗಳು. ಹೀಗಾಗಿ ದೇವಾಲಯಸಂಸ್ಕೃತಿಯನ್ನು ಸನಾತನಧರ್ಮದ ಅವಿಭಾಜ್ಯ ಅಂಗವೆಂದು ನಾವು ಮನದಟ್ಟು ಮಾಡಿಕೊಳ್ಳಬೇಕು.
ಸನಾತನಧರ್ಮವು ದೇಶ-ಕಾಲಗಳಿಗೆ ಅತೀತವಾದ ಶಾಶ್ವತವೆನಿಸಿದ ಸಚ್ಚಿದಾನಂದವನ್ನು ಮುಖ್ಯವಾಗಿ ಪ್ರತಿಪಾದಿಸಿದರೂ ಈ ಮಹಾತತ್ತ್ವವನ್ನು ಕೈಗೆಟುಕಿಸಿಕೊಳ್ಳುವ ಸಾಧನಗಳಾಗಿ ದೇಶ-ಕಾಲಗಳ ಚೌಕಟ್ಟಿನಲ್ಲಿ ಅಡಗುವ ಅನೇಕ ಸದಂಶಗಳನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿದೆ. ಇಂಥ ಮೌಲ್ಯಗಳಲ್ಲೊಂದು ವಿಭೂತಿಪೂಜೆ. ವಿಭೂತಿ ಎಂದರೆ ವಿಶೇಷವಾದ ಅಸ್ತಿತ್ವ ಎಂದು ತಾತ್ಪರ್ಯ. ಇದು ಪ್ರಕೃತಿಯಲ್ಲಿಯೇ ಇರುವ ಪಂಚಭೂತಗಳು ಮತ್ತು ಅವುಗಳಿಂದ ಆಗಿರುವ ಎಲ್ಲ ಚರಾಚರ ವಸ್ತುಗಳಿಗೆ ಸಂಬಂಧಿಸಿರುವುದಲ್ಲದೆ ಮಾನವಸಂಸ್ಕೃತಿಯಿAದ ರೂಪುಗೊಂಡ ಸಂಗತಿಗಳನ್ನೂ ಒಳಗೊಂಡಿದೆ. ಹೀಗಾಗಿ ಪ್ರಕೃತಿಯ ಆರಾಧ್ಯ ಅಂಶಗಳೆನಿಸಿದ ಇಂದ್ರ (ಮಳೆಯ ದೇವತೆ), ವರುಣ (ನೀರಿನ ದೇವತೆ), ಅಗ್ನಿ ಮತ್ತು ಆದಿತ್ಯ (ಶಕ್ತಿ ಮತ್ತು ಬೆಳಕಿನ ದೇವತೆಗಳು), ಅರಣ್ಯಾನಿ (ಕಾಡಿನ ದೇವತೆ), ಆಪೋದೇವಿಯರು (ನದಿ ಮತ್ತು ಸರೋವರಗಳ ದೇವತೆಗಳು) ಮುಂತಾದ ದೈವಿಕ ಮೌಲ್ಯಗಳನ್ನು ಯಜ್ಞಗಳ ಮೂಲಕ ಅದು ಗೌರವಿಸಿದೆ. ಅಂತೆಯೇ ಇವುಗಳ ಮೂರ್ತಿರೂಪದ ಸಾಕ್ಷಾತ್ಕಾರವನ್ನು ದೇವಮಂದಿರಗಳ ಮೂಲಕ ಮಾಡಿಕೊಂಡಿದೆ.
ಪುಣ್ಯಕ್ಷೇತ್ರ-ದೇವಮಂದಿರ
ಇಂಥ ದೇವಮಂದಿರಗಳು ನಮ್ಮ ದೇಶದ ಉದ್ದಗಲಕ್ಕೂ ಹಬ್ಬಿರುವುದನ್ನು ಶತಶತಮಾನಗಳಿಂದ ಕಾಣುತ್ತೇವೆ. ಇವು ವೇದ, ಇತಿಹಾಸ ಮತ್ತು ಪುರಾಣಗಳಲ್ಲಿ ಕಂಡುಬರುವ ತೀರ್ಥಕ್ಷೇತ್ರಗಳ ಜೊತೆಗೆ ಬೆಸೆದುಕೊಂಡಿವೆ. ಮಾತ್ರವಲ್ಲ, ತಾವೇ ಅಂಥ ಪುಣ್ಯಕ್ಷೇತ್ರಗಳಾಗಿವೆ. ಈ ಬಗೆಯ ದೇವಾಲಯಗಳು ತಮ್ಮ ಕಟ್ಟಡದ ಮಟ್ಟಿಗಲ್ಲದೆ ತಾವಿರುವ ಊರುಗಳಿಗೂ ಪಾವನತೆಯನ್ನು ತಂದುಕೊಟ್ಟಿವೆ. ಆದುದರಿಂದ ಕಾಶೀ-ರಾಮೇಶ್ವರಗಳಾಗಲಿ, ಕಾಮಾಖ್ಯ-ದ್ವಾರಕೆಗಳಾಗಲಿ, ಬದರೀ-ಕೇದಾರಗಳಾಗಲಿ ತಮ್ಮಂತೆಯೇ ಪವಿತ್ರ ಭೂಮಿಗಳೆನಿಸಿವೆ. ಇಂಥ ಸಾವಿರಾರು ಕ್ಷೇತ್ರಗಳಲ್ಲಿ ನಮ್ಮ ವೇದಾಗಮಗಳ ಹಾಗೂ ಪುರಾಣೇತಿಹಾಸಗಳ ಎಷ್ಟೋ ಮಹತ್ತ್ವದ ಘಟನೆಗಳು ನಡೆದಿವೆ; ಇಂಥ ಘಟನೆಗಳಿಗೆ ಕಾರಣಕರ್ತರಾದ ಮಹಾಪುರುಷರ ಹಾಗೂ ಮಹಾಮಹಿಳೆಯರ ಬಾಳುಗಳೂ ಬೆಸೆದುಕೊಂಡಿವೆ.
ಅಯೋಧ್ಯೆ ಇಂಥ ಒಂದು ಪಾವನ ಪುರಿ; ಪುರುಷೋತ್ತಮನ ಜನ್ಮಭೂಮಿ. ಭಾರತದೇಶವನ್ನು ದೈವಿಕವಾದ ಒಂದು ಭೂಭಾಗವೆಂದು ಸಾಕ್ಷಾತ್ಕರಿಸಿಕೊಳ್ಳುವಾಗ ಇಲ್ಲಿಯ ಚತುರ್ಧಾಮಗಳು, ಚತುರಾಮ್ನಾಯಪೀಠಗಳು, ದ್ವಾದಶ ಜ್ಯೋತಿರ್ಲಿಂಗಗಳು, ಐವತ್ತೊಂದು ಶಕ್ತಿಪೀಠಗಳು, ನೂರೆಂಟು ದಿವ್ಯದೇಶಗಳು ಮತ್ತು ಋಷಿ-ಆಚಾರ್ಯರ, ಸಾಧು-ಸಂತರ ಜನ್ಮ-ಕರ್ಮಭೂಮಿಗಳು ನಮ್ಮ ಕಣ್ಣೆದುರು ನಿಲ್ಲುತ್ತವೆ. ಈ ಸಾಲಿಗೆ ಸೇರುವ ಅಯೋಧ್ಯೆ ಏಳು ಮೋಕ್ಷದಾಯಕ ಪುರಗಳಲ್ಲಿ ಒಂದೆಂದು ಮಾನ್ಯತೆ ಗಳಿಸಿದೆ. ಆಧಿಭೌತಿಕ ಸ್ತರದಲ್ಲಿ ಭೌಗೋಳಿಕವಾದ ಒಂದು ಊರೆನಿಸುವ ಅಯೋಧ್ಯೆ ಆಧಿದೈವಿಕವಾಗಿ ಮರ್ಯಾದಾಪುರುಷೋತ್ತಮನೆನಿಸಿದ ಶ್ರೀರಾಮನ ಜನ್ಮಭೂಮಿ. ಇದೇ ಆಧ್ಯಾತ್ಮಿಕ ಸ್ತರದಲ್ಲಿ ‘ಅಷ್ಟಾಚಕ್ರಾ ನವದ್ವಾರಾ ದೇವಾನಾಂ ಪೂರಯೋಧ್ಯಾ’ ಎಂದು ಅಥರ್ವವೇದವು (೧೦.೨.೩೧) ಹೇಳುವ ನಮ್ಮ ದೇಹವೇ ಆಗಿದೆ. ಹೀಗೆ ಅಯೋಧ್ಯೆಯಲ್ಲಿ ಮಂದಿರವೆಂದರೆ ನಮ್ಮ ದೇಹದ ಕೇಂದ್ರವೆನಿಸಿದ ಹೃದಯವೆಂದು ತಾತ್ಪರ್ಯ. ಇಲ್ಲಿರುವ ಶ್ರೀರಾಮ ಹೃದಯದಲ್ಲಿ ನೆಲೆಸಿದ ಚೈತನ್ಯವೆಂಬುದರಲ್ಲಿ ಸಂದೇಹವಿಲ್ಲ. ಅಯೋಧ್ಯೆಯಿಂದ ಲಂಕೆಯವರೆಗೆ ಸಂಚರಿಸಿದ್ದಲ್ಲದೆ ಸಮಗ್ರ ಭಾರತದೇಶದಲ್ಲಿ ಧರ್ಮವನ್ನು ಸಂಸ್ಥಾಪಿಸಿದ ಶ್ರೀರಾಮನ ಸಾತ್ತ್ವಿಕ ಚರ್ಯೆಯೇ ಹೃದಯದಿಂದ ಪ್ರವಹಿಸಿ ನಮ್ಮ ದೇಹವನ್ನೆಲ್ಲ ಸಚೇತನಗೊಳಿಸುವ ಜೀವಧಾತುವಿನ ನಿರಂತರ ಪ್ರಸಾರ. ಹೀಗೆ ನಮ್ಮ ದೇಹದಲ್ಲಿಯೂ ದೇಶದಲ್ಲಿಯೂ ಧರ್ಮದ್ರವದ ಸಂಚಾರವಾಗಲು ಶ್ರೀರಾಮತತ್ತ್ವ ಮತ್ತದರ ಮೂರ್ತರೂಪವಾದ ಶ್ರೀರಾಮಮಂದಿರ ಅತ್ಯವಶ್ಯ.
ಇದು ತತ್ತ್ವದ ಮಾತಾಯಿತು. ಇನ್ನು ಅನ್ವಯದತ್ತ ನೋಡುವುದಾದರೆ, ದೇವಾಲಯವೊಂದರ ಅನೇಕ ಆಯಾಮಗಳು ತೆರೆದುಕೊಳ್ಳುತ್ತವೆ. ಈ ಪ್ರಕಾರ ಸಾರ್ಥಕವಾದ ಪುಣ್ಯಮಂದಿರವೊಂದು ಸಾಂಸ್ಕೃತಿಕ ಕೇಂದ್ರವಾಗಿ, ರಾಜನೀತಿಯ ಆದರ್ಶವಾಗಿ, ಅರ್ಥವ್ಯವಸ್ಥೆಯ ಅಂಗವಾಗಿ, ಸಾಮಾಜಿಕ ಸೌಹಾರ್ದದ ನೆಲೆಯಾಗಿ, ಸಂವೇದನಶೀಲತೆಯ ಸೆಲೆಯಾಗಿ ಸಲ್ಲುತ್ತದೆ. ಇದರ ಸಾಂಸ್ಕೃತಿಕ ಆಯಾಮದಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಚಿತ್ರ, ಶಿಲ್ಪ ಮೊದಲಾದ ಲಲಿತ ಕಲೆಗಳಲ್ಲದೆ, ಅಡುಗೆ, ಅಲಂಕಾರ, ಕ್ರೀಡೆ, ವ್ಯಾಯಾಮ ಮುಂತಾದ ಮತ್ತೆಷ್ಟೋ ಅಂಶಗಳು ಬೆಸೆದುಕೊಂಡಿವೆ. ಹೀಗೆ ದೇವಾಲಯವೊಂದು ವಿಶ್ವವಿದ್ಯಾಲಯವಾಗುತ್ತದೆ, ಸಜೀವ ವಸ್ತುಸಂಗ್ರಹಾಲಯವಾಗುತ್ತದೆ, ರಾಷ್ಟ್ರವೊಂದರ ಪ್ರತಿನಿಧಿಯೇ ಆಗುತ್ತದೆ. ಇಷ್ಟೆಲ್ಲ ಪ್ರಯೋಜನಗಳು ಇಹ-ಪರಗಳ ಕ್ಷೇಮಕ್ಕಾಗಿ ಒದಗುತ್ತಿರುವಾಗ ದೇವಾಲಯಗಳ ಪ್ರಾಮುಖ್ಯವನ್ನು ಅಲ್ಲಗೆಳೆಯುವುದಾದರೂ ಹೇಗೆ?
ಅಯೋಧ್ಯೆ
ಪ್ರಕೃತ ಅಯೋಧ್ಯೆಯನ್ನೇ ಅನುಲಕ್ಷಿಸಿದಾಗ ಈ ಅಂಶ ಮತ್ತಷ್ಟು ಪ್ರಸ್ಫುಟವಾಗುತ್ತದೆ. ಮನುವೇ ತನ್ನ ಮನಸ್ಸಿನಿಂದ ನಿರ್ಮಿಸಿದ ಈ ಊರನ್ನು ವಿಸ್ತರಿಸಿ ಬೆಳೆಸಿದವನು ಆತನ ಮಗನಾದ ಇಕ್ಷ್ವಾಕುವೆಂದು ನಮ್ಮ ಪರಂಪರೆಯ ಶ್ರದ್ಧೆ. ಋಗ್ವೇದವೇ ಹೆಸರಿಸುವ ಪವಿತ್ರ ನದಿಗಳಲ್ಲಿ ಒಂದಾದ ಸರಯೂತಟಿನಿಯ ತೀರದಲ್ಲಿ ಅಯೋಧ್ಯೆ ನೆಲೆಸಿದೆ. ನಮ್ಮ ವೇದ-ಇತಿಹಾಸ-ಪುರಾಣಗಳು ಕೊಂಡಾಡುವ ಎರಡು ಮುಖ್ಯ ವಂಶಗಳಲ್ಲಿ ಒಂದಾದ ಸೂರ್ಯವಂಶದ ರಾಜರು ಇದನ್ನೇ ರಾಜಧಾನಿಯಾಗಿ ಮಾಡಿಕೊಂಡು ಧರ್ಮದಿಂದ ಪ್ರಜಾಪಾಲನೆ ಮಾಡಿದ ವಿಷಯ ನಾಲ್ಕು ಯುಗಗಳ ಕಥೆಗಳಲ್ಲಿಯೂ ಕಂಡುಬಂದಿದೆ. ಹೀಗೆ ಸನಾತನಧರ್ಮೀಯರಿಗೆ ಪೂಜ್ಯವೆನಿಸಿದ ಅಯೋಧ್ಯೆ ಜೈನ ಮತ್ತು ಬೌದ್ಧ ಮತೀಯರಿಗೂ ಪವಿತ್ರ ಕ್ಷೇತ್ರವಾಗಿದೆ. ಜಾತಕಕಥೆಗಳು ಭಗವಾನ್ ಬುದ್ಧನ ಪೂರ್ವಜನ್ಮಗಳಲ್ಲಿ ಶ್ರೀರಾಮನದನ್ನು ಒಂದೆಂದು ಹೇಳಿವೆ. ಮಾತ್ರವಲ್ಲ, ಗೌತಮಬುದ್ಧನೇ ಸೂರ್ಯವಂಶಕ್ಕೆ ಸೇರಿದವನೆಂದು ಆ ಪರಂಪರೆ ಒಪ್ಪಿದೆ. ಇನ್ನು ಜೈನಮತದ ಪ್ರಥಮ ತೀರ್ಥಂಕರನಾದ ಭಗವಾನ್ ವೃಷಭದೇವನ ರಾಜಧಾನಿ ಅಯೋಧ್ಯೆಯೇ ಆಗಿತ್ತು. ಇದನ್ನೇ ಆತನ ಹಿರಿಯ ಮಗ ಭರತಚಕ್ರವರ್ತಿ ಆಳಿದನೆಂದು ಜೈನರ ಮಹಾಪುರಾಣ ಒಕ್ಕಣಿಸಿದೆ. ಹೀಗೆ ಅಯೋಧ್ಯೆಯ ಪ್ರಾಮುಖ್ಯ-ಪ್ರಾಚೀನತೆಗಳು ಅದರ ಹೆಸರಿನಂತೆಯೇ ಪ್ರಶ್ನಾತೀತ, ದುರ್ಭೇದ್ಯ.
ಅಯೋಧ್ಯೆಯನ್ನು ಕೋಸಲ ಎಂಬ ದೇಶವಿಶೇಷಕ್ಕೆ ಸೇರಿದ ನಗರವೆಂದು ನಮ್ಮ ಪುರಾಣೇತಿಹಾಸಗಳು ಹೇಳಿವೆ. ಕೋಸಲವು ತನ್ನ ಭೌತಿಕ ಸಮೃದ್ಧಿಗೆ ಮಾತ್ರವಲ್ಲದೆ ಆಧ್ಯಾತ್ಮಿಕ ಸಮೃದ್ಧಿಗೂ ಹೆಸರಾಗಿದ್ದ ಸಂಗತಿ ಛಾಂದೋಗ್ಯ, ಬೃಹದಾರಣ್ಯಕ ಮೊದಲಾದ ಉಪನಿಷತ್ತುಗಳಲ್ಲಿ ಬರುವ ಕೋಸಲದೇಶೀಯರಾದ ಬ್ರಹ್ಮಜ್ಞಾನಿಗಳಿಂದಲೇ ತಿಳಿಯುತ್ತಿದೆ. ಇದರ ತೆಂಕಣ ಭಾಗವನ್ನು ದಕ್ಷಿಣಕೋಸಲವೆಂದೂ ಬಡಗಣ ಭಾಗವನ್ನು ಉತ್ತರಕೋಸಲವೆಂದೂ ವ್ಯವಹರಿಸುತ್ತಿದ್ದರು. ಕೌಸಲ್ಯೆ ದಕ್ಷಿಣಕೋಸಲದವಳು. ದಶರಥ ಉತ್ತರಕೋಸಲದವನು. ಹೀಗೆ ಶ್ರೀರಾಮನ ಕೋಸಲದೇಶೀಯತೆ ಆತನ ತಂದೆ-ತಾಯಿಗಳಿಬ್ಬರ ಮೂಲದಿಂದಲೂ ಸ್ಪಷ್ಟವಾಗುತ್ತದೆ. ಸೂರ್ಯವಂಶದ ಒಂದು ಶಾಖೆಯಾದ ನಿಮಿಕುಲದಲ್ಲಿ ಹುಟ್ಟಿದವನು ಜನಕ. ಅವನ ಮಗಳಾದ ಸೀತೆ ಪ್ರಕಾರಾಂತರವಾಗಿ ರಾಮನ ಬಂಧುವರ್ಗಕ್ಕೆ ಸೇರಿರುವುದು ಮತ್ತೊಂದು ಸ್ವಾರಸ್ಯ.
ಶ್ರೀರಾಮನ ಗುರುವರ್ಗ
ಅಯೋಧ್ಯೆಯ ಅರಸರಿಗೆಲ್ಲ ಕುಲಗುರುಗಳಾದ ವಸಿಷ್ಠರು ಋಕ್ಸಂಹಿತೆಯ ಒಂದು ಮಂಡಲಕ್ಕೇ ದ್ರಷ್ಟಾರರು; ಕರ್ಮ-ಬ್ರಹ್ಮಗಳ ಸಮನ್ವಯಕ್ಕೆ ಹೆಸರಾದವರು; ವೇದಾಂತವಿದ್ಯೆಯ ಮಹಾಚಾರ್ಯರು. ವಸಿಷ್ಠರ ಮರಿಮಕ್ಕಳಾದ ಭಗವಾನ್ ವೇದವ್ಯಾಸರಂತೂ ವೇದಾಂತದರ್ಶನಕ್ಕೆ ಗಂಗೋತ್ತರಿ ಎನಿಸಿದವರು. ವಸಿಷ್ಠರು ನಿಮಿಕುಲದ ಅರಸರಿಗೂ ಗುರುಗಳಾಗಿದ್ದವರು. ಜನಕನಿಗೆ ರಾಜಗುರುಗಳಾಗಿದ್ದವರು ಭಗವಾನ್ ಯಾಜ್ಞವಲ್ಕ್ಯರು. ಇವರೂ ವಸಿಷ್ಠರಂತೆಯೇ ಕರ್ಮ-ಬ್ರಹ್ಮಗಳ ಸುಂದರ ಸಮನ್ವಯದ ಸಂಕೇತ. ಇವರು ಸೂರ್ಯನಿಂದಲೇ ಸಂಹಿತೆ, ಬ್ರಾಹ್ಮಣ ಮತ್ತು ಉಪನಿಷತ್ತುಗಳೆಂದು ವಿಭಕ್ತವಾದ ವೇದವನ್ನು ಗಳಿಸಿದ ಮಹಿಮಾತ್ಮರು. ಇವರಿಂದ ವೇದಾಂತವಿದ್ಯೆಯನ್ನು ಕಲಿತ ಜನಕನ ಕಥೆ ಉಪನಿಷತ್ತುಗಳಲ್ಲಿಯೇ ಶ್ರೇಷ್ಠವೆನಿಸಿದ ಬೃಹದಾರಣ್ಯಕದ ಹೃದಯವಾಗಿದೆ. ಶ್ರೀರಾಮನಿಗೆ ಶಸ್ತ್ರಾಸ್ತ್ರವಿದ್ಯೆಯನ್ನು ಕರುಣಿಸಿದ ಮಹರ್ಷಿ ವಿಶ್ವಾಮಿತ್ರರು ಬ್ರಾಹ್ಮ-ಕ್ಷಾತ್ತ್ರಗಳ ದಿವ್ಯ ಸಮಾಯೋಗ. ಇವರೂ ಋಕ್ಸಂಹಿತೆಯ ಒಂದು ಮಂಡಲದ ದ್ರಷ್ಟಾರರು. ಇವರಂತೆಯೇ ಶ್ರೀರಾಮನಿಗೆ ಆಯುಧಗಳನ್ನು ನೀಡಿದ ಅಗಸ್ತ್ಯಮಹರ್ಷಿಗಳು ಮಂತ್ರದ್ರಷ್ಟಾರರು; ನಮ್ಮ ದೇಶ ಮತ್ತು ಧರ್ಮಗಳಿಗೆ ಕಷ್ಟ ಒದಗಿದಾಗ ತಮ್ಮ ಧೀಬಲ-ದೇಹಬಲಗಳಿಂದ ಅದನ್ನು ನಿವಾರಿಸಿದ ತೇಜಃಶಾಲಿಗಳು. ಶ್ರೀರಾಮನನ್ನು ಅನುಗ್ರಹಿಸಿದ ಮತ್ತೂ ಹಲವರು ಮಹರ್ಷಿಗಳಿದ್ದಾರೆ. ಅವರ ಪೈಕಿ ಗೌತಮರು ಮತ್ತು ಅತ್ರಿಗಳು ಮುಖ್ಯರು. ಇವರೂ ಸಹ ಋಗ್ವೇದದಲ್ಲಿ ಕಂಡುಬರುವ ಮಂತ್ರದ್ರಷ್ಟಾರರು. ಹೀಗೆ ಶ್ರೀರಾಮನಿಗೆ ಭಾರತೀಯ ಪರಂಪರೆಯ ಋಷಿಗಳೆಲ್ಲರ ಅನುಗ್ರಹ ದಕ್ಕಿದೆ; ಅದರ ಪ್ರತಿನಿಧಿತ್ವವೇ ಸಿಕ್ಕಿದೆ.
ಈ ದಿವ್ಯ ದರ್ಶನದ ಕಾರಣದಿಂದಲೇ ಶ್ರೀರಾಮನಿಗೆ ಭೂಮವಾದ ಅದ್ವೈತದೃಷ್ಟಿ ಮೈಗೂಡಿದೆ. ಇದು ಸರ್ವಪ್ರೀತಿಯ, ಸರ್ವಾಂಗೀಕೃತಿಯ ಭವ್ಯ ಲಕ್ಷಣ. ಆದುದರಿಂದಲೇ ಆತ ಲಿಂಗ, ವರ್ಣ, ಜಾತಿ, ಕುಲ, ಯೋನಿ ಎಂಬ ಭೇದಗಳಿಲ್ಲದೆ ಕೇವಲ ಮಾನವವರ್ಗವನ್ನು ಮಾತ್ರವಲ್ಲ, ವಾನರ, ದಾನವ, ತಿರ್ಯಗ್‌ಜಂತುಗಳ ವರ್ಗವನ್ನೂ ತನ್ನ ಅಕ್ಕರೆಯ ತೆಕ್ಕೆಗೆ ತೆಗೆದುಕೊಂಡ. ಅಯೋಧ್ಯೆಯಲ್ಲಿ ಶ್ರೀರಾಮನು ಪಟ್ಟಕ್ಕೇರಿದಾಗ ಈ ಎಲ್ಲ ಜೀವಸಮುದಾಯಗಳೂ ಅಲ್ಲಿಗೆ ಬಂದು ಅವನ ಅಭ್ಯುದಯವನ್ನು ಕಂಡು ಆನಂದಿಸಿದವು; ಆ ಆನಂದದಲ್ಲಿ ತಮ್ಮ ಬಾಳುಗಳನ್ನು ಕಟ್ಟಿಕೊಂಡವು. ಆದುದರಿಂದಲೇ ಶ್ರೀರಾಮನ ಕಥೆ ಜಗನ್ಮಂಗಲವೆನಿಸಿತು.
ರಾಮಾಯಣಸಂಸ್ಕೃತಿ
ಶ್ರೀರಾಮ ಕೇವಲ ಉತ್ತರಭಾರತದ ಊರೊಂದಕ್ಕೆ ಸೀಮಿತನಾದವನಲ್ಲ. ರಾಮಾಯಣದಲ್ಲಿಯೇ ಬರುವಂತೆ ಆತನ ಸಾಮ್ರಾಜ್ಯದ ವ್ಯಾಪ್ತಿಯೊಳಗೆ ಸಮಗ್ರ ಭಾರತವೇ ಬರುತ್ತದೆ: “ಇಕ್ಷ್ವಾಕೂಣಾಮಿಯಂ ಭೂಮಿಃ ಸಶೈಲವನಕಾನನಾ” (೪.೧೮.೬). ಹಾಗೆಂದು ಯಾವೊಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನಾಗಲಿ, ಯಾವೊಂದು ಪ್ರಾಂತದ ಸ್ವಾಯತ್ತೆಯನ್ನಾಗಲಿ ಅವನು ಕಸಿದವನಲ್ಲ. ಆದುದರಿಂದಲೇ ವಾಲಿಯನ್ನು ಸಂಹರಿಸಿದ ಬಳಿಕ ಮಧ್ಯಭಾರತದವರೆಗೆ ವ್ಯಾಪಿಸಿದ ಅವನ ರಾಜ್ಯವನ್ನಾಗಲಿ, ರಾವಣನನ್ನು ವಧಿಸಿದ ಬಳಿಕ ಲಂಕೆಯಿಂದ ಜನಸ್ಥಾನದವರೆಗೆ ಹಬ್ಬಿದ ಅವನ ಭೂಮಿಯನ್ನಾಗಲಿ ಅವರವರ ಒಡಹುಟ್ಟುಗಳಾದ ಸುಗ್ರೀವ ಮತ್ತು ವಿಭೀಷಣರಿಗೇ ಬಿಟ್ಟುಕೊಟ್ಟನಲ್ಲದೆ ತನಗೆಂದು ಉಳಿಸಿಕೊಳ್ಳಲಿಲ್ಲ. ಹೀಗಾಗಿಯೇ ಭಾರತೀಯ ನೀತಿಸಂಹಿತೆ ತಿಳಿಸುವಂತೆ ಅವನದು ಧರ್ಮವಿಜಯವಾಗಿತ್ತು; ಅಸುರವಿಜಯವೂ ಅಲ್ಲ, ಲೋಭವಿಜಯವೂ ಅಲ್ಲ. ಇಂಥ ಹೃದಯವೈಶಾಲ್ಯ ಅಯೋಧ್ಯಾರಾಮನದಾದ ಕಾರಣದಿಂದಲೇ ರಾಮಸಂಸ್ಕೃತಿ ಇಡಿಯ ದೇಶದಲ್ಲಿ ತಾನಾಗಿ ಪಸರಿಸಿತು. ಇಲ್ಲವಾದರೆ ತೆಲುಗಿನ ತ್ಯಾಗರಾಜರ ನೂರಾರು ರಾಗಗಳಲ್ಲಿ ರೂಪಿತವಾದ ಕೀರ್ತನಗಳಾಗಲಿ, ತಮಿಳಿನ ಕಂಬನ ಸಾವಿರಾರು ಪದ್ಯಗಳಲ್ಲಿ ಹವಣುಗೊಂಡ ಕಾವ್ಯವಾಗಲಿ ಹುಟ್ಟುತ್ತಿರಲಿಲ್ಲ. ಕೇರಳದ ಪ್ರಾತಿನಿಧಿಕ ರಂಗಕಲೆಯಾದ ಕಥಕಳಿಗೆ ರಾಮನಾಟ್ಟಂ ಎಂಬ ಮತ್ತೊಂದು ಹೆಸರು ಬರುತ್ತಿರಲಿಲ್ಲ. ತುಳುನಾಡಿನ ಶ್ರೇಷ್ಠ ಕಲೆ ಯಕ್ಷಗಾನ ಪಾರ್ತಿಸುಬ್ಬನ ರಾಮಾಯಣಪ್ರಸಂಗಗಳಿಂದ ಹೆಸರಾಗುತ್ತಿರಲಿಲ್ಲ. ಕನ್ನಡನಾಡಿನಲ್ಲಿ ಪೊನ್ನ, ನಾಗಚಂದ್ರ, ಬತ್ತಲೇಶ್ವರ, ತೊರವೆ ನರಹರಿ ಮುಂತಾದ ಎಷ್ಟೋ ಕವಿಗಳಿಂದ ಬಗೆಬಗೆಯ ರಾಮಾಯಣಗಳು ಹುಟ್ಟುತ್ತಿರಲಿಲ್ಲ; ಕುಮಾರವ್ಯಾಸನು ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ’ ಎಂದು ವಿನೋದಿಸುವ ಮಟ್ಟಿಗೆ ರಾಮಕಥೆ ವಿಸ್ತರಿಸುತ್ತಿರಲಿಲ್ಲ. ಹೀಗೆ ಉತ್ತರ-ದಕ್ಷಿಣಗಳ ಶಾಶ್ವತ ಸ್ನೇಹಕ್ಕೆ ರಾಮಕಥೆ ಕಾರಣವಾಯಿತು. ಈ ದೃಷ್ಟಿಯಿಂದ ಕಂಡಾಗ ರಾಮನ ಸೇತುವಿಗಿಂತ ರಾಮಾಯಣದ ಸೇತುವೆಯೇ ವಿಭಿನ್ನ ದೇಶ-ಕಾಲಗಳನ್ನು ಮಾತ್ರವಲ್ಲ, ಮನಸ್ಸುಗಳನ್ನೂ ಶಾಶ್ವತವಾಗಿ ಬೆಸೆದಿದೆ.
ರಾಮಕಥೆಯ ವ್ಯಾಪ್ತಿ
ಶ್ರೀರಾಮನ ಕಥೆ ಭಾರತದಲ್ಲಿ ಮಾತ್ರವಲ್ಲ, ಬೃಹತ್ತರ ಭಾರತದ ಅನೇಕ ಪ್ರಾಂತಗಳಲ್ಲಿ ತಾನಾಗಿ ಹಬ್ಬಿತು. ಯಾವುದೇ ಒತ್ತಡವಿಲ್ಲದೆ, ಪ್ರಲೋಭನೆಯಿಲ್ಲದೆ, ಹಿಂಸೆ-ಧ್ವಂಸಗಳ ಬೆದರಿಕೆಯಿಲ್ಲದೆ ರಾಮತತ್ತ್ವ ಮತ್ತು ರಾಮಾಯಣಕಥೆಗಳು ಸಮಸ್ತರ ಪ್ರೀತಿ-ಗೌರವಗಳಿಗೆ ಪಾತ್ರವಾದುವು. ಈ ಅರ್ಥದಲ್ಲಿ ಕೂಡ ಅಯೋಧ್ಯೆಯ ರಾಮನ ವಿಕ್ರಮ ‘ಅಯೋಧ್ಯಾ’ - ಯುದ್ಧವಿಲ್ಲದೆ ಸ್ನೇಹಾನುರಾಗಗಳಿಂದ ಸಂಪನ್ನಗೊಂಡದ್ದೆನಿಸಿತು! ಇದರ ಸಾರ್ಥಕ ಲಕ್ಷಣಗಳನ್ನು ಬಲಿದ್ವೀಪ (ಬಾಲಿ), ಯವದ್ವೀಪ (ಜಾವಾ), ಸುವರ್ಣದ್ವೀಪ (ಥಾಯ್‌ಲ್ಯಾಂಡ್), ಚಂಪಾ (ವಿಯೆಟ್ನಾಮ್), ಕಂಬುಜ (ಕ್ಯಾಂಬೋಡಿಯಾ) ಮುಂತಾದ ಅನೇಕ ಪ್ರದೇಶಗಳಲ್ಲಿ ಕಾಣಬಹುದು. ಸುವರ್ಣದ್ವೀಪದಲ್ಲಿ ಇಂದೂ ಒಂದು ಅಯೋಧ್ಯೆಯನ್ನು ಕಾಣುತ್ತೇವೆ! ಅದು ಆ ನಾಡಿನ ಭಾಷೆಯಲ್ಲಿ ‘ಅಯುಥಿಯ’ ಎಂದು ರೂಪಾಂತರಗೊಂಡಿದೆ. ಮಾತ್ರವಲ್ಲ, ಅಲ್ಲಿಯ ರಾಜರು ತಾವು ರಾಮನ ವಂಶದವರೆಂದು ಹೆಮ್ಮೆ ಪಡುತ್ತಾರೆ; ಆ ಹೆಸರನ್ನೇ ತಮ್ಮದಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಇವೆಲ್ಲ ಅಯೋಧ್ಯೆಯ ವಿಕ್ರಮಗಳೆನ್ನಬಹುದು.
ಇಡಿಯ ಜಗತ್ತನ್ನು ಪೂರ್ವಾರ್ಧಗೋಳ ಮತ್ತು ಪಶ್ಚಿಮಾರ್ಧಗೋಳಗಳೆಂದು ವಿಭಾಗಿಸುವುದಾದರೆ, ಪೂರ್ವಾರ್ಧಗೋಳದ ಸಾಂಸ್ಕೃತಿಕ ಮೂಲ ಭಾರತದಲ್ಲಿರುವುದು ನಿರ್ವಿವಾದ. ಅದು ಇಂದಿಗೂ ಅವಿಚ್ಛಿನ್ನವಾಗಿ ಮುಂದುವರಿದಿರುವುದು ಮುಖ್ಯವಾಗಿ ರಾಮಾಯಣದಿಂದ, ಅದರ ನಾಯಕನಾದ ಶ್ರೀರಾಮನಿಂದ. ಈತನ ಆರಾಧ್ಯಕೇಂದ್ರವಿರುವುದು ಅಯೋಧ್ಯೆಯಲ್ಲಿ.
ಹೀಗೆ ಅಯೋಧ್ಯಾಮೂಲದಿಂದ ಸಮಗ್ರ ಪೌರಸ್ತ್ಯ ಜಗತ್ತಿನ ಚೈತನ್ಯ ಸ್ಪಂದಿಸುತ್ತಿದೆ. ಇದನ್ನು ವಿಶ್ವಕ್ಕೆಲ್ಲ ಸಾರಲು ಇಲ್ಲಿಯ ಶ್ರೀರಾಮಮಂದಿರ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಶ್ರೀರಾಮನ ಪ್ರತಿಷ್ಠಾಪನಮಹೋತ್ಸವ ಮಂಗಳಮಯ ನಾಂದಿಯಾಗಿ ಪರಿಣಮಿಸುವುದರಲ್ಲಿ ಸಂದೇಹವಿಲ್ಲ. ಇದರಿಂದ ಮೊದಲಾಗುವ ಜಗತ್ಕಲ್ಯಾಣದ ರೂಪಕ ರಸಮಯವಾಗಿ ಸಾಗಲೆಂದು ನಾವು ಆಶಿಸೋಣ. ಅದರಲ್ಲಿ ಪಾತ್ರಗಳಾಗಿ, ಪ್ರೇಕ್ಷಕರಾಗಿ ನಮ್ಮ ನಲವನ್ನು ಕಾಣೋಣ.