ಶ್ರೀರಾಮನ ಜನ್ಮಸ್ಥಾನವಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವುದು ಒಂದು ವಿಶೇಷ ಐತಿಹಾಸಿಕ ಘಟನೆ. ಅದಕ್ಕೆ ಸಂದ ಹೋರಾಟವೇ ಒಂದು ಪರ್ವ. ಬಹುಶಃ ಜಗತ್ತಿನ ಯಾವ ದೇವಾಲಯಕ್ಕೂ ನಡೆಯದ ಐದು ಶತಮಾನಗಳ ಹೋರಾಟ ಅಯೋಧ್ಯಾನಗರದ ರಾಮನ ದೇವಾಲಯಕ್ಕೆ ನಡೆದಿದೆ. ಹದಿನೈದನೆಯ ಶತಮಾನದಿಂದ ಬ್ರಿಟಿಷರ ಆಳ್ವಿಕೆಯ ಆರಂಭದವರೆಗೂ ಮೊಘಲರ ವಿರುದ್ಧ ಸೆಣಸಾಡಿದ್ದಾಗಲಿ, ಬ್ರಿಟಿಷರ ಕಾಲದಲ್ಲಿ ಅವರ ರಾಜಕೀಯ-ನ್ಯಾಯಾಂಗ ವ್ಯವಸ್ಥೆಗೆ ಅನುಗುಣವಾಗಿ ನಮ್ಮ ದೇವಾಲಯಕ್ಕೆ ನಡೆಸಿದ ಹೋರಾಟವಾಗಲಿ, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದೂ ಭಾರತೀಯರು ಸ್ವಧರ್ಮನಿಷ್ಠರಾಗಿ ಬದುಕಲಾಗದಿರುವ ದಶಕಗಳಲ್ಲಿ ನ್ಯಾಯಾಲಯದ ಕಟಕಟೆಯಲ್ಲಿ ನಮ್ಮ ದೇವರನ್ನು ನಿಲ್ಲಿಸಿ ವಾದಿಸಿದ್ದಾಗಲಿ - ಭಾರತದ ಒಂದು ದುರಂತ ಕಥೆಯನ್ನು ಹೇಳುತ್ತದೆ. ವಿಪರ್ಯಾಸವೆಂದರೆ ಭಾರತದಲ್ಲಿಯ ಬಹುಸಂಖ್ಯಾತ ಸನಾತನಧರ್ಮೀಯರು ತಮ್ಮದೇ ದೇಶದಲ್ಲಿ ತಮ್ಮ ದೇವರ ಮಂದಿರವನ್ನು ಅವನದ್ದೇ ಜನ್ಮಸ್ಥಾನದಲ್ಲಿ ಕಟ್ಟುವುದಕ್ಕೆ ಇಷ್ಟು ಹೋರಾಟ ಮಾಡಬೇಕಾಗಿ ಬಂದದ್ದು! ಇದು ಶ್ರೀರಾಮನಿಗಾಗಿ ಮಾಡಿದ ಹೋರಾಟ ಮಾತ್ರವಲ್ಲ, ನಾವು ನಮ್ಮ ಅಸ್ಮಿತೆಗಾಗಿ ಮಾಡಿದ ಹೋರಾಟ. ಈ ದೇವಾಲಯದ ನಿರ್ಮಾಣ ಕೇವಲ ಶ್ರದ್ಧೆಯ ಸಂಕೇತವಾಗಿಲ್ಲದೆ, ನಮ್ಮ ದೇಶದಲ್ಲಿ ನಶಿಸಿದ್ದ ಕ್ಷಾತ್ತ್ರಗುಣದ ಪುನರ್ನಿರ್ಮಾಣವಾಗಿ ರೂಪುಗೊಂಡಿದೆ.
ಈ ಕಾರಣಕ್ಕಾಗಿಯೇ ಈ ದೇವಾಲಯನಿರ್ಮಾಣಕ್ಕಾಗಿ ಮುಕ್ಕಾಲು ಪಾಲು ಸನಾತನಧರ್ಮೀಯರು - ಭಾರತೀಯರಾಗಲಿ, ಅಭಾರತೀಯರಾಗಲಿ - ಕಾದು ಕುಳಿತಿರುವುದಲ್ಲದೆ, ತಮ್ಮನ್ನು ತಾವು ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇವಾಲಯದ ಮೂಲಮೂರ್ತಿಯನ್ನೊಳಗೊಂಡು, ಅದರ ಕಟ್ಟಡಕ್ಕೆ ಬೇಕಾದ ಇಟ್ಟಿಗೆ, ಮಣ್ಣು, ವಿಗ್ರಹಗಳು, ದೇವರಿಗೆ ಸಲ್ಲಬೇಕಾದ ಪೂಜಾಸಾಮಗ್ರಿಗಳು, ಘಂಟೆಗಳು, ಚಾಮರಗಳು, ಅಭಿಷೇಕಕ್ಕಾಗಿ ಹಲವು ಪುಣ್ಯನದಿಗಳ ತೀರ್ಥ, ಇತ್ಯಾದಿ ಭಾರತದ ಮೂಲೆಮೂಲೆಯಿಂದ ಬಂದದ್ದಲ್ಲದೆ, ಬೃಹದ್ಭಾರತಕ್ಕೆ ಸೇರಿದ ನೇಪಾಳ, ಥಾಯ್‌ಲ್ಯಾಂಡ್, ಇಂಡೋನೇಷಿಯಾ ಇತ್ಯಾದಿ ಬೃಹದ್ಭಾರತ ದೇಶಗಳಿಂದ ಮತ್ತು ಹೊರಗಿನ ಕೊರಿಯಾ ದೇಶದಿಂದಲೂ ಬಂದಿವೆ. ಮಂದಿರನಿರ್ಮಾಣಕ್ಕೆ ದೇಶದ ಎಲ್ಲೆಡೆಗಳಿಂದಲೂ ಕಾಣಿಕೆಗಳು ಹರಿದು ಬಂದಿರುವುದಷ್ಟೇ ಅಲ್ಲದೆ, ದೇವಾಲಯದ ಮಂತ್ರಾಕ್ಷತೆ ಎಲ್ಲರ ಮನೆಗಳನ್ನೂ ಮುಟ್ಟಿ, ಭಕ್ತರ ಮನಸ್ಸನ್ನು ಸೆಳೆದಿದೆ.
ಶ್ರೀರಾಮದೇವಾಲಯದ ಪುನರ್ನಿರ್ಮಾಣವನ್ನು ಅಯೋಧ್ಯೆಯ ಮಟ್ಟಿಗೆ ಮಾತ್ರ ಉಳಿಸಿಕೊಳ್ಳುವ ಸಂಕುಚಿತ ಸಂಸ್ಕೃತಿ ನಮ್ಮದಲ್ಲ. ಭಾರತದ ಪ್ರತಿಯೊಂದು ಊರು-ಕೇರಿಯೂ ಬೀದಿ-ಬೀದಿಯೂ ರಾಮನ ಆಗಮನವನ್ನು ವಿಜೃಂಭಣೆಯಿಂದ ಸ್ವಾಗತಿಸಿದೆ; ಇಡಿಯ ಭಾರತವು ರಾಮಮಯವಾಗಿದೆ. ದೇಶವೇ ದೇವಾಲಯವಾಗಿ ಮಾರ್ಪಟ್ಟು, ರಾಮನಾಮವೇ ಮಾನಸಮೂರ್ತಿಯ ರೂಪ ತಳೆದು, ರಾಮನ ಯಾವುದೇ ಕೈಂಕರ್ಯಕ್ಕೆ ಪಣತೊಟ್ಟ ಸೇವಕರೆಲ್ಲರೂ ರಾಮದೂತರಾಗಿ ಪರಿಣಮಿಸಿ, ಸಮಸ್ತ ಭಾರತೀಯರಲ್ಲಿ ಭಕ್ತಿರಸವುಕ್ಕಿದೆ.
ದೇಶಾದ್ಯಂತ ನಡೆಯುತ್ತಿರುವ ಉತ್ಸವಗಳನ್ನು ಪತ್ರಿಕೆಗಳು ವರದಿ ಮಾಡಿವೆ. ಇದು ಹಾಗಿರಲಿ. ನಮ್ಮೆದುರಿಗೇ ನಡೆಯುತ್ತಿರುವ ರಾಮೋತ್ಸವವನ್ನು ಗಮನಿಸೋಣ. ನಮ್ಮೂರಿಗೆ ಅಯೋಧ್ಯೆಯಿಂದ ಮಂತ್ರಾಕ್ಷತೆ ಬಂದು ತಲುಪಿತು. ಈ ಮಂತ್ರಾಕ್ಷತೆಯನ್ನು ಹಲವು ಹಿಂದೂ ಸಂಘಟನೆಗಳು, ವಿಶ್ವ ಹಿಂದೂ ಪರಿಷತ್ತು ಮತ್ತು ರಾಷ್ಟ್ರಿಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಪ್ರತಿಯೊಬ್ಬ ಹಿಂದೂವಿನ ಮನೆಗೂ ಮುಟ್ಟಿಸಲು ಸಂಕಲ್ಪಿಸಿದ್ದರು. ಆ ಮಂತ್ರಾಕ್ಷತೆಯನ್ನು ಪೊಟ್ಟಣಗಳಲ್ಲಿ ಇರಿಸಿ ಎಲ್ಲರಿಗೂ ವಿತರಿಸಿದರೆ ಸಾಕಿತ್ತು. ಆದರೆ, ಅಯೋಧ್ಯೆಯಿಂದ ಅಕ್ಷತೆಯು ಬಂತೆಂದು, ಊರ ಜನರೆಲ್ಲ ಬಸ್ಸಿನ ನಿಲ್ದಾಣಕ್ಕೆ ಹೋಗಿ ಅಕ್ಷತೆಯ ಚೀಲಗಳನ್ನು ಒಂದು ವಾಹನಕ್ಕೆ ತುಂಬಿ, ರಾಮನ ಚಿತ್ರಪಟವೊಂದನ್ನು ಅದರ ಮುಂದಿರಿಸಿ ಮೆರವಣಿಗೆ ಮಾಡಿಕೊಂಡು ಊರಿನ ಮುಖ್ಯ ದೇವಸ್ಥಾನಕ್ಕೆ ಬಂದರು. ಆ ವಾಹನ ಬಂದ ಪ್ರತಿಯೊಂದು ಬೀದಿಯಲ್ಲಿಯೂ ಸುವಾಸಿನಿಯರು ರಾಮನಿಗೆ ಆರತಿಯೆತ್ತಿ, ಸಿಹಿಯನ್ನು ನೈವೇದ್ಯ ಮಾಡಿ, ಜನರಿಗೆ ಹಂಚಿ, ಅಕ್ಷತೆಯ ಆಗಮನವನ್ನೇ ಒಂದು ಉತ್ಸವದಂತೆ ಆಚರಿಸಿದರು. ಇನ್ನು ಮಂತ್ರಾಕ್ಷತೆಯು ಮನೆ ಮನೆಗೆ ಮುಟ್ಟಿದಾಗ, ಕಾರ್ಯಕರ್ತರು ಕಂಡ ಭಕ್ತಿಯ ಅಭಿವ್ಯಕ್ತಿಯ ಪಟ್ಟಿ ಬೇರೆಯೇ ಇದೆ. ಕೆಲವರು ಆರತಿಯೆತ್ತಿದರೆ, ಇನ್ನು ಕೆಲವರು ಕಾಣಿಕೆ ಕೊಟ್ಟರು. ಕೆಲವರು ಶಂಖನಾದ ಮಾಡಿ ಸಡಗರ ಪಟ್ಟರೆ, ಇನ್ನು ಕೆಲವರ ಆನಂದಬಾಷ್ಪ ಭಕ್ತಿಯ ಹೊಳೆ ಹರಿಸಿತು. ಹೀಗೆ ಹಲವು ಬಗೆಯಲ್ಲಿ ಸನಾತನಧರ್ಮೀಯರು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಆಚರಿಸಿದವರೆಲ್ಲರೂ ಯಾವುದೋ ರಾಜಕೀಯ ಪಕ್ಷದ ಕಾರ್ಯಕರ್ತರೇನಲ್ಲ! ಇವರೆಲ್ಲ ರಾಮನ ಭಕ್ತರಷ್ಟೇ. ಊರು ಚಿಕ್ಕದಾಗುತ್ತಿದ್ದಂತೆ ವಿಜೃಂಭಣೆ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ; ವ್ಯವಹಾರದ ಮನೋಭಾವ ಕಿರಿಯದಾಗಿ, ಭಾವನೆಗಳು ವ್ಯವಹರಿಸಿದ್ದನ್ನು ಗಮನಿಸುತ್ತೇವೆ. ಇವೆಲ್ಲದರಿಂದ ದೂರ ಉಳಿದವರಿಗೇ ನಷ್ಟ ಎನ್ನಬೇಕಷ್ಟೆ!
ಇವನ್ನು ಕಂಡಾಗ, ರಾಮಾಯಣ-ಮಹಾಭಾರತಗಳು ಸನಾತನಧರ್ಮೀಯರ ಮೇಲೆ ಎಷ್ಟು ಗಾಢವಾಗಿ ಪ್ರಭಾವ ಬೀರಿವೆಯೆಂದು ತಿಳಿಯುತ್ತದೆ. ದೇಶವನ್ನು ಒಗ್ಗೂಡಿಸುವುದಕ್ಕೆ ಹಬ್ಬ, ಹರಿದಿನ ಮತ್ತು ಧರ್ಮಾಚರಣೆಗಳಿಗಿಂತ ಬೇರೊಂದುಂಟೆ? ಪ್ರಸ್ತುತ ನಡೆಯುತ್ತಿರುವ ರಾಮದೇವಾಲಯದ ಪ್ರಾಣಪ್ರತಿಷ್ಠಾಪನಮಹೋತ್ಸವವೇ ಇದಕ್ಕೆ ಸಾಕ್ಷಿಯಾಗಿದೆ. ಭಾರತದ ಏಕತೆಯಿರುವುದು ಅದರ ಧರ್ಮದಲ್ಲಿ, ಸಂಸ್ಕೃತಿಯಲ್ಲಿ. ರಾಜಕೀಯವಾಗಲಿ, ಗಣತಂತ್ರವ್ಯವಸ್ಥೆಯಾಗಲಿ ಭಾರತದ ವಿಭಜನಾತ್ಮಕ ವಿಚಾರಕ್ಕೆ ಎಣೆಮಾಡುವುದೇ ಹೊರೆತು, ನಿಜವಾದ ಏಕೀಕರಣಕ್ಕಲ್ಲ. ಇದಕ್ಕೆ ನಮ್ಮ ದೇಶದ ಇತಿಹಾಸವೇ ಅಲ್ಲದೆ ಪ್ರಪಂಚದ ಇತಿಹಾಸವೂ ಸಾಕ್ಷಿಯಾಗಿದೆ. ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಂಸ್ಕೃತಿಗಳನ್ನು ವಸ್ತುಸಂಗ್ರಹಾಲಯಗಳಿಗೆ ಸೀಮಿತಗೊಳಿಸಿದ ಐರೋಪ್ಯ ದೇಶಗಳು ರಾಜಕೀಯವಾಗಿ ಎಷ್ಟು ಮಾತ್ರ ಒಗ್ಗಟ್ಟಾಗಿ ಉಳಿದಿವೆ? ಸಾವಿರಾರು ವರ್ಷಗಳಿಂದ ಬೆಳೆದು ಬಂದ ಭಾರತೀಯ ಸಂಸ್ಕೃತಿ ಇಂದಿಗೂ ಜೀವಂತವಾಗಿ ಪ್ರಜ್ವಲಿಸುತ್ತಿದೆ; ಇದರ ಹಲವು ಹೆಗ್ಗುರುತುಗಳಲ್ಲಿ ದೇವಾಲಯಸಂಸ್ಕೃತಿಯೂ ಒಂದು.
ಹಿಂದೂಗಳ ಮಟ್ಟಿಗೆ ಒಂದಂಶವನ್ನು ಹೇಳಬೇಕಿದೆ. ಹಲವರಿಗೆ ಗೋಜಲಾಗಿರುವ ಕೆಲವು ಸೂಕ್ಷ್ಮ ವಿಷಯಗಳನ್ನು ಎಣೆಮೀರಿ ವಿಸ್ತರಿಸಿ ಪರಮಾರ್ಥವನ್ನು ಮರೆಮಾಚುವುದು ಕಮ್ಯೂನಿಸ್ಟರು, ವಾಮಪಂಥೀಯರು ಹಲವು ಕಾಲದಿಂದ ಪಳಗಿಸಿಕೊಂಡಿರುವ ಕುಟಿಲ ಕಾರ್ಯವಿಧಾನ. ಇದಕ್ಕೆ ಇವರಿಟ್ಟ ಹೆಸರು ‘ವಿದ್ಯಾಭ್ಯಾಸ’! ಇದರ ಫಲವೇ ಶ್ರದ್ಧೆ ಮತ್ತು ಸ್ವಧರ್ಮನಿಷ್ಠೆಗಳ ಪತನ. ಜನಸಂಖ್ಯೆ ಹೆಚ್ಚಿರುವ ಊರುಗಳಲ್ಲಿ, ಶುಷ್ಕ ವ್ಯವಹಾರದ ಮೌಲ್ಯರಹಿತವೂ ಮಾಹಿತಿಬಹುಳವೂ ಆದ ವಿದ್ಯಾಭ್ಯಾಸವು ಬುದ್ಧಿಗೆ ಸಕಲ ಸಲಕರಣೆಗಳನ್ನು ನೀಡಿ, ಭಾವವನ್ನು ಬರಡಾಗಿಸಿ, ಜೀವಿಕೆಗೆ ಅಗ್ರಸ್ಥಾನವನ್ನಿತ್ತು ಜೀವನಮೌಲ್ಯಗಳನ್ನು ಕುಗ್ಗಿಸಿದೆ. ಇದರ ಪರಿಣಾಮವಾಗಿ ದೇವರೇ ಮೊದಲಾದ ಶ್ರದ್ಧಾವಿಚಾರಗಳಲ್ಲಿ ತಾತ್ಸಾರವುಂಟಾಗಿ, ದೇವರನ್ನು ಧಿಕ್ಕರಿಸುವ ಭರದಲ್ಲಿ ನಮ್ಮ ಜೀವನವನ್ನೇ ಪ್ರಶ್ನಿಸುವ ಅಪ್ರಬುದ್ಧ ಮನಸ್ಸುಗಳು ನಮ್ಮದಾಗಿವೆ.
“ಶ್ರೀರಾಮನು ‘ಕರುಣಾಮಯ’, ‘ಶಾಂತಿಯ ಪ್ರತೀಕ’. ಆತನನ್ನು ರಾಜಕೀಯಕ್ಕೆ ಎಳೆದು, ಅವನ ಹೆಸರಿನಲ್ಲಿ ಬೇರೊಬ್ಬರ ಆರಾಧನೆಯ ಕಟ್ಟಡವನ್ನು ಒಡೆದು ನಮ್ಮ ಮಂದಿರವನ್ನು ಕಟ್ಟುವುದು ಯಾವ ಮಾತ್ರದ ಪುರುಷಾರ್ಥ? ರಾಮನಿದ್ದಿದ್ದರೆ ಇಂತಹದಕ್ಕೆ ಒಪ್ಪುತ್ತಿರಲಿಲ್ಲ. ವಿಶಾಲ ಭಾರತದಲ್ಲಿ ಮಸೀದಿಯೊಂದನ್ನು ಬಿಟ್ಟರೆ ಬೇರಾವ ಜಾಗವೂ ಇರಲಿಲ್ಲವೇನು? ಇದೆಲ್ಲವೂ ರಾಜಕೀಯ ಪ್ರಕ್ರಿಯೆಯೇ ಹೊರೆತು ಧಾರ್ಮಿಕ ಪ್ರಕ್ರಿಯೆಯಲ್ಲ...” ಎಂಬಂಥ ‘ಹಿತನುಡಿ’ಗಳನ್ನು ನಮ್ಮವರೇ ಎನಿಸಿಕೊಂಡ ‘ಬುದ್ಧಿಜೀವಿ’ಗಳು ಹಲವೆಡೆ ಹಲವು ಬಾರಿ, ಹಲವು ರೀತಿಯಲ್ಲಿ ಆಡಿದ್ದಾರೆ. ಇವರ ವ್ಯಾವಹಾರಿಕ ಹುದ್ದೆಗಳೋ ಸ್ಥಾನ-ಮಾನಗಳೋ ಅಥವಾ ಅವರ ಹಿರಿಯ ವಯಸ್ಸನ್ನು ತೋರುವ ನೆರೆಗೂದಲೋ, ಇಂಥವರ ಮಾತನ್ನು ಇತರರಿಗೆ ಮುಟ್ಟಿಸುತ್ತದೆಯೇ ಹೊರತು ರಾಮಾಯಣ-ಮಹಾಭಾರತಗಳ ವ್ಯಾಸಂಗವಲ್ಲ. ಇವರಿಗೆ ರಾಮನ ಕಾರುಣ್ಯದ ಪರಿಚಯವಿದೆಯೇ ಹೊರೆತು, ಅವನ ಕ್ಷಾತ್ತ್ರಗುಣವಲ್ಲ. ಅಹಲ್ಯೆಗೆ ಕಾರುಣ್ಯವನ್ನು ತೋರಿದ ಶ್ರೀರಾಮನೇ ತಾಟಕೆ-ಮಾರೀಚರನ್ನು ಸಂಹರಿಸಿದ್ದು; ಸುಗ್ರೀವನಿಗೆ ಒಲಿದ ರಾಮನೇ ವಾಲಿಯನ್ನು ಕೊಂದದ್ದು, ವಿಭೀಷಣನಿಗೆ ಭ್ರಾತೃಸ್ವರೂಪನಾದ ರಾಮನೇ ರಾವಣನ ಸಂಹಾರ ಮಾಡಿದ್ದು. ವಾಮಪಂಥೀಯರ ಜಾಡಿನಲ್ಲಿ ನೋಡಿದರೆ, “ಪಾಪ, ರಾವಣನಿಗೆ ಸೀತೆಯ ಮೇಲೆ ನನಗಿಂತಲೂ ಹೆಚ್ಚು ಪ್ರೀತಿಯಿರಬಹುದು” ಎಂದು ರಾಮ ಸೀತೆಯನ್ನು ಆಕೆ ಅಪಹೃತೆಯಾದಂದೇ ತ್ಯಜಿಸಬೇಕಿತ್ತು! ಸತ್ಯಕ್ಕೆ ಸಂದವನು, ಅಧರ್ಮವನ್ನು ನಿರ್ಮೂಲಿಸಿದವನು ಶ್ರೀರಾಮ. ಧನುಸ್ಸನ್ನು ಹಿಡಿಯದ ರಾಮನಿಗೆ, ಚಕ್ರವನ್ನು ಧರಿಸದ ಕೃಷ್ಣನಿಗೆ, ತ್ರಿಶೂಲವನ್ನು ತ್ಯಜಿಸಿದ ಶಿವನಿಗೆ ಬೆಲೆ ಕೊಟ್ಟವರಾರು? ನಮ್ಮ ಧರ್ಮವಂತೂ ಅಲ್ಲ!
ಅಯೋಧ್ಯೆಯ ಶ್ರೀರಾಮಮಂದಿರವು ಕ್ರೌರ್ಯಕ್ಕೂ ವಿಕೃತಿಗೂ ರಾಜಕೀಯಕ್ಕೂ ಗುರಿಯಾದದ್ದು ಸುವಿದಿತ. ಮಿಥ್ಯಾಕಥೆಗಳ ಮಹಾಪೂರದಲ್ಲಿ ಸತ್ಯವೂ ಒಂದು ‘ದೃಷ್ಟಿಕೋನ’ದ ರೂಪ ತಾಳಿ ಬಡಕಲಾಗಿ ನಿಂತಿದೆ. ಈ ವಿಚಾರಪ್ರವಾಹಗಳು ಪತ್ರಿಕೆಗಳ ರೂಪದಲ್ಲಿ ಹರಿದು, ಹಲವು ‘ಇಸಂ’ಗಳ ಕೊಳಕನ್ನು ತನ್ನೊಡಲಿನಲ್ಲಿ ತಂದು ಭಾರತೀಯರ ಬುದ್ಧಿಗೆ ಮೆತ್ತುತ್ತ, ಮನಸ್ಸನ್ನು ಅಸ್ತವ್ಯಸ್ತವಾಗಿಸಿದೆ. ರಾಮನ ಮತ್ತು ಅಯೋಧ್ಯೆಯ ವಿಚಾರದಲ್ಲಿ ಯಾರು ಎಷ್ಟೇ ಪ್ರಾಮಾಣಿಕವಾಗಿ ನುಡಿದರೂ, ಅದಕ್ಕೊಂದು ರಾಜಕೀಯಾಂಶವನ್ನು ಅರೋಪಿಸುವ ಮಟ್ಟಿಗೆ ನಮ್ಮ ಬುದ್ಧಿ-ಭಾವಗಳು ಮಂಕಾಗಿವೆ. ನಿರಂತರವಾದ ವ್ಯಾಸಂಗವೊಂದೇ ಇದಕ್ಕಿರುವ ಮದ್ದು. ಇತಿಹಾಸ ಸ್ಪಷ್ಟವಾದಂತೆ, ರಾಜಕೀಯ ತಿಳಿದೀತು; ರಾಜಕೀಯ ಸ್ಪಷ್ಟವಾದಂತೆ ವಾಸ್ತವ ಮತ್ತು ತಥ್ಯಾಂಶಗಳ ದರ್ಶನವಾದೀತು. ಸೀತೆಯು ಇತಿಹಾಸವಾದ ಮೇಲೆಯೇ ಆಕೆಯ ಚಾರಿತ್ರ್ಯಶುದ್ಧತೆಯನ್ನು ಜಗವು ನಂಬಿದ್ದೆಂದ ಮೇಲೆ, ಇನ್ನು ಸ್ಥಾವರವಾದ ಬಡಪಾಯಿ ದೇವಾಲಯವು ಇದಕ್ಕೆ ಅಪವಾದವೇ! ಅದೂ ಕಾಲನಿಗೆ ಮೊರೆಹೊಕ್ಕು ಕಾದು ಕುಳಿತಂತಿತ್ತು. ಆದರೂ ಸತ್ಯವನ್ನು ಹೇಳದೆ ಇರುವುದು ತರವಲ್ಲ. ಅಸತ್ಯವನ್ನು ತಿವಿದು ನಿಂದಿಸುವುದು ಪ್ರತಿಯೊಬ್ಬ ರಾಷ್ಟ್ರಕನ ಕರ್ತವ್ಯವಾಗಿದೆ.
ಬಿದ್ದ ಬಾಬರಿ ಮಸೀದಿಯ ಬಗೆಗೆ ಗೋಳಿಡುವ ಕಾರುಣ್ಯಮಯಿಗಳು ಐದು ಶತಮಾನಗಳ ಹಿಂದೆ ಕೆಡವಿದ ರಾಮಮಂದಿರದ ಬಗೆಗೆ ಕಣ್ಣೀರು ಸುರಿಸರು. ಈ ದೇವಾಲಯದ ಪುನರ್ನಿರ್ಮಾಣಕ್ಕೆ ದುಡಿದ ರಾಮಭಕ್ತರು ಈಚೆಗೆ ಬಂದ ಯಾವುದೋ ರಾಜಕೀಯ ಪಕ್ಷದವರು ಮಾತ್ರವಲ್ಲ - ಐದು ಶತಮಾನದಿಂದ ಕ್ಷಾತ್ತ್ರಜ್ವಾಲೆಯನ್ನು ನಂದಾದೀಪದಂತೆ ಹಚ್ಚಿಟ್ಟ ಕೆಚ್ಚೆದೆಯ ಸನಾತನಧರ್ಮೀಯರು. ಇದಕ್ಕಾಗಿ ನಾವು ಸಂತಸಪಟ್ಟು ವಿಜೃಂಭಿಸಬೇಕೇ ಹೊರತು ಪಶ್ಚಾತ್ತಾಪದ ಹೊರೆ ಹೊತ್ತು ಕುಗ್ಗಬಾರದು. ಹೀಗಾಗಿ, ಪ್ರಸ್ತುತ ಶ್ರೀರಾಮಮಂದಿರವು ಸನಾತನಧರ್ಮೀಯರ ಧರ್ಮವಿಜಯವೇ ಸರಿ. ದೇವಾಲಯವನ್ನು ಕಟ್ಟುವುದು ಒಂದು ಉತ್ಸವವೇ ಹೌದು. ಇದಕ್ಕೆ ಸಾಕ್ಷಿಯಾದ ನಮ್ಮ ಪೀಳಿಗೆಯ ಜನರು ದಿಟವಾಗಿ ಪುಣ್ಯವಂತರು; ಆ ಪುಣ್ಯವನ್ನು ಅರಿತವರು ಸರ್ವಥಾ ಭಾಗ್ಯಶಾಲಿಗಳು.
ಸರ್ವಂ ಶಿವಂ