ನಮ್ಮ ದೇಶದಲ್ಲಿ ಹಿಂದೆ ವಿದ್ಯಾಭ್ಯಾಸಪದ್ಧತಿ ಹೇಗಿತ್ತೆಂಬ ವಿಚಾರ ಕುತೂಹಲಕರವಾಗಿದೆ. ಈ ವಿಷಯವನ್ನು ನೇರವಾಗಿ ವಿವರಿಸುವ ಗ್ರಂಥಗಳು ನಮ್ಮಲ್ಲಿ ಇಲ್ಲ. ನಾಲಂದ, ತಕ್ಷಶಿಲೆ, ವಿಕ್ರಮಶಿಲೆ, ವಲಭಿ ಮೊದಲಾದ ಕೆಲವು ಸ್ಥಳಗಳಲ್ಲಿ ಸುಪ್ರಸಿದ್ಧವಾದ ವಿದ್ಯಾಶಾಲೆಗಳಿದ್ದವೆಂದೂ ಅವು ಈಗಿನ ವಿಶ್ವವಿದ್ಯಾಲಯಗಳಂತೆ ವಿಭಿನ್ನ ಶಾಸ್ತ್ರಗಳ ಪ್ರೌಢ ಅಧ್ಯಾಪನವನ್ನು ನಡೆಸುತ್ತಿದ್ದವೆಂದೂ ತಿಳಿದುಬರುತ್ತದೆ. ಆದರೆ ಅಲ್ಲಿಯ ವಿದ್ಯಾರ್ಥಿಗಳು ಯಾವ ಕ್ರಮದಿಂದ ವಿದ್ಯೆಯನ್ನು ಕಲಿಯುತ್ತಿದ್ದರು, ಶಿಕ್ಷಣವಿಧಾನ ಹೇಗೆ, ಪಠ್ಯಪುಸ್ತಕಗಳ ವ್ಯವಸ್ಥೆ ಹೇಗಿತ್ತು, ಗುರುಶಿಷ್ಯರ ಸಂಬಂಧ ಯಾವ ಬಗೆಯದು - ಇತ್ಯಾದಿ ವಿವರ ಸರಿಯಾಗಿ ದೊರೆಯುವುದಿಲ್ಲ. ಇದಕ್ಕೆ ಸಂಬಂಧಿಸಿದ ಅಂಶಗಳನ್ನು ನಾವು ವಿಭಿನ್ನ ಮೂಲಗಳಿಂದ ಸಂಗ್ರಹಿಸಬೇಕಾಗಿದೆ. ಕೆಲವನ್ನು ಊಹಿಸಬೇಕಾಗಿದೆ. ಉಪನಿಷತ್ತುಗಳು, ವೇದಾಂಗಗಳಾದ ವ್ಯಾಕರಣಾದಿ ಶಾಸ್ತ್ರಗ್ರಂಥಗಳು, ಸ್ಮೃತಿಗಳು, ಕೌಟಿಲ್ಯನ ಅರ್ಥಶಾಸ್ತ್ರ, ಭಾರತ-ರಾಮಾಯಣಗಳು, ಪುರಾಣಗಳು, ಕಾಳಿದಾಸಾದಿ ಪ್ರಾಚೀನ ಕವಿಗಳ ಕಾವ್ಯಗಳು, ನಾಟ್ಯಶಾಸ್ತ್ರ, ವೈದ್ಯಶಾಸ್ತ್ರ ಮುಂತಾದ ಪ್ರಾಚೀನ ಗ್ರಂಥಗಳಲ್ಲಿ ಬಿಡಿಬಿಡಿಯಾಗಿ ಕೆಲವು ಆಧಾರಗಳು ದೊರೆಯುತ್ತವೆ. ಅವುಗಳಿಂದ ಆಗಿನ ವಿದ್ಯಾಭ್ಯಾಸಪದ್ಧತಿಯ ವಿಷಯವಾಗಿ ಒಂದು ಕಲ್ಪನೆಯನ್ನು ಮಾಡಿಕೊಳ್ಳಲು ಸಾಧ್ಯವಿದೆ. ಈ ಕಲ್ಪನೆಗೆ ಮೂಲಭೂತ ಪ್ರಮಾಣಗಳಿರುವುದರಿಂದ ಅದು ವಿಶ್ವಾಸಯೋಗ್ಯವಾದದ್ದು. ಈ ದಿಶೆಯಲ್ಲಿ ವ್ಯಾಕರಣಶಾಸ್ತ್ರವು ಯಾವ ಆಧಾರಗಳನ್ನು ಒದಗಿಸುತ್ತದೆಯೆಂಬುದು ಈ ಪ್ರಬಂಧದಲ್ಲಿ ಪ್ರಸ್ತುತವಾಗಿದೆ.
ವ್ಯಾಕರಣಶಾಸ್ತ್ರದ ಹಲವಾರು ಶಾಖೆಗಳು ಈಗ ನಷ್ಟವಾಗಿವೆ. ಕೆಲವು ಪ್ರಚಾರದಲ್ಲಿಲ್ಲ. ಆದ್ದರಿಂದ ಪ್ರಾಚೀನವೂ ಸುಪ್ರಸಿದ್ಧವೂ ಆದ ಪಾಣಿನೀಯಶಾಖೆಯನ್ನಿಲ್ಲಿ ಪರಿಶೀಲನೆಗೆ ಬಳಸಲಾಗಿದೆ. ಅದರಲ್ಲಿಯೂ ಪಾಣಿನಿಯ ಅಷ್ಟಾಧ್ಯಾಯಿ ಮತ್ತು ಪತಂಜಲಿಯ ಮಹಾಭ್ಯಾಷ್ಯ - ಇವೆರಡೇ ನಮಗೆ ಹೆಚ್ಚು ಆಧಾರಗಳನ್ನು ಒದಗಿಸಬಲ್ಲವು. ಪಾಣಿನಿಯ ಕಾಲ ಕ್ರಿ.ಪೂ. ಸುಮಾರು ೬೦೦. ಪತಂಜಲಿಯ ಕಾಲ ಕ್ರಿ.ಪೂ. ಸುಮಾರು ೧೫೦.
ವಿದ್ಯೆ ಎಂದರೆ ಯಾವುದು?
ಪ್ರಾಚೀನ ಭಾರತೀಯರು ಈ ಹದಿನಾಲ್ಕು ವಿದ್ಯಾಪ್ರಕಾರಗಳೆಂದು ಗ್ರಹಿಸಿದ್ದರು:
ಅಂಗಾನಿ ವೇದಾಶ್ಚತ್ವಾರೋ ಮೀಮಾಂಸಾ ನ್ಯಾಯವಿಸ್ತರಃ |
ಪುರಾಣಂ ಧರ್ಮಶಾಸ್ತ್ರಂ ಚ ವಿದ್ಯಾ ಹ್ಯೇತಾಶ್ಚತುರ್ದಶ ||
ನಾಲ್ಕು ವೇದಗಳು, ವ್ಯಾಕರಣ, ಶಿಕ್ಷಾ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ ಎಂಬ ಆರು ವೇದಾಂಗಗಳು, ಮೀಮಾಂಸಾ, ತರ್ಕಶಾಸ್ತ್ರ, ಪುರಾಣ, ಧರ್ಮಶಾಸ್ತ್ರ - ಈ ಹದಿನಾಲ್ಕು ವಿದ್ಯೆಗಳು.
ಆಯುರ್ವೇದ, ಧನುರ್ವೇದ, ಗಾಂಧರ್ವವೇದ, ಅರ್ಥಶಾಸ್ತ್ರ - ಈ ನಾಲ್ಕು ಉಪವೇದಗಳು ಸೇರಿ ಹದಿನೆಂಟು ವಿದ್ಯೆಗಳೆಂದೂ ಹೇಳಿರುವುದುಂಟು. ಇನ್ನು ವಾಣಿಜ್ಯ, ಪಶುಪಾಲನೆ, ಕೃಷಿ, ವಾಸ್ತುಶಿಲ್ಪ, ಕೈಗಾರಿಕೆ ಮೊದಲಾದವು ಅರ್ಥಶಾಸ್ತ್ರದಲ್ಲಿ ಸೇರುತ್ತವೆ. ಇಂಥವು ೬೪. ಇವೇ ಚತುಷ್ಷಷ್ಟಿ ಕಲೆಗಳು. ಇವುಗಳ ಅಧ್ಯಯನಕ್ಕೆ ಕೆಲವು ನಿಯಮಗಳನ್ನು ಧರ್ಮಶಾಸ್ತ್ರ ವಿಧಿಸಿತ್ತು.
‘ಆಖ್ಯಾತೋಪಯೋಗೇ’ (೧.೪.೨೯) ಎಂದು ಪಾಣಿನಿಸೂತ್ರ. ಉಪಯೋಗವೆಂದರೆ ನಿಯಮಪೂರ್ವಕ ವಿದ್ಯಾಸ್ವೀಕಾರ. ಅದು ತೋರುವಾಗ ಉಪದೇಶಕರ್ತೃವಾಚಕದ ಮೇಲೆ ಪಂಚಮೀವಿಭಕ್ತಿ ಬರುತ್ತದೆ. ಉದಾ: ಉಪಾಧ್ಯಾಯಾದಧೀತೇ. ಇಲ್ಲಿ ಭಿಕ್ಷಾಚರ್ಯೆ, ಬ್ರಹ್ಮಚರ್ಯ ಮೊದಲಾದವು ನಿಯಮಗಳು.
ವಿದ್ಯಾರಂಭ
ಮಗುವಿಗೆ ಐದು ವರ್ಷವಾದಾಗ ವಿದ್ಯಾರಂಭ ಎಂಬ ಒಂದು ಸಂಸ್ಕಾರ ನಡೆಯುತ್ತದೆ. ಇದಕ್ಕೆ ಅಕ್ಷರಾಭ್ಯಾಸ ಅಥವಾ ಅಕ್ಷರಸ್ವೀಕರಣ ಎಂದೂ ಹೆಸರಿದೆ. ಮಗುವಿಗೆ ಬರವಣಿಗೆ ಕಲಿಸುವುದು ಇಲ್ಲಿಂದ ಪ್ರಾರಂಭ. ಬಹಳ ಹಿಂದೆ ನಮ್ಮವರಿಗೆ ಲಿಪಿಯ ಪರಿಚಯವಿರಲಿಲ್ಲ ಎಂಬ ವಾದ ಪ್ರಶ್ನಾರ್ಹವಾದದ್ದು. ಸಿಂಧುನದೀತೀರದ ಪರಿಶೋಧನೆಗಳಿಂದ ಕ್ರಿ.ಪೂ. ೧೬೦೦ರಲ್ಲಿ ಭಾರತೀಯರು ಲಿಪಿಯನ್ನು ಬಳಸುತ್ತಿದ್ದರೆಂದು ಪರಿಶೋಧನಕಾರರು ನಿರ್ವಿವಾದವಾಗಿ ಸ್ಥಾಪಿಸಿದ್ದಾರೆ. ಅಲ್ಲದೆ ಪಾಣಿನಿಯ ಅಷ್ಟಾಧ್ಯಾಯಿಯಲ್ಲಿ ೩೯೮೩ ಸೂತ್ರಗಳಿವೆ. ಅಸಂಖ್ಯಾತ ಶಬ್ದಗಳಿರುವ ಧಾತುಪಾಠ, ಗಣಪಾಠಗಳು ಬೇರೆ. ಸುಮಾರು ೨೦೦೦ ಧಾತುಗಳ ೨೫೬ ಗಣಗಳು - ಇವೆಲ್ಲವನ್ನೂ ಲಿಪಿಯ ಸಹಾಯವಿಲ್ಲದೆ ಬಾಯಿಂದಲೇ ರಚಿಸಿ ಕಲಿಸಲಾಗುತ್ತಿದ್ದೆಂಬುದು ಊಹೆಗೂ ನಿಲುಕುವುದಿಲ್ಲ. ‘ಲಿಖ್’ ಧಾತು ಬರೆಯುವುದು ಎಂಬ ಅರ್ಥದಲ್ಲಿ ರೂಢವಾಗಿದೆ. ‘ದಿವಾವಿಭಾನಿಶಾ-’ (೩.೨.೨೧) ಎಂಬ ಪಾಣಿನಿಸೂತ್ರದಲ್ಲಿ ಲಿಪಿ, ಲಿಬಿ ಎಂಬೆರಡು ಶಬ್ದಗಳಿವೆ. ‘ಲಿಪಿಕರ’ಶಬ್ದ ಇದರಿಂದ ಸಿದ್ಧವಾಗುತ್ತದೆ. ಲಿಪಿ - ಬರೆದ ಅಕ್ಷರ, ಲಿಪಿಕರ - ಅಕ್ಷರಗಳನ್ನು ಬರೆಯುವವನು. ಹಿಂದೆ ಬರವಣಿಗೆ ಇರಲಿಲ್ಲ ಎನ್ನುವವರು ಈ ಶಬ್ದಗಳು ಯಾವಾಗ ಹುಟ್ಟಿದವು ಎಂಬುದನ್ನು ಹೇಳಬೇಕು. “ಮಹಾನ್ ಶಬ್ದಸ್ಯ ಪ್ರಯೋಗವಿಷಯಃ” ಎಂದು ಹೇಳಿ ಪತಂಜಲಿಯು ಅಪಾರವಾದ ವಾಙ್ಮಯವನ್ನು ಉದಾಹರಿಸುತ್ತಾನೆ. ಛಂದೋಬದ್ಧವೂ ಸ್ವರಸಹಿತವೂ ಆದ ವೇದರಾಶಿಯನ್ನು ಲಿಪಿ ಇಲ್ಲದೆ ನಿರ್ಮಿಸಬಹುದೆಂಬುದೂ ಋಕ್, ಯಜುಸ್, ಸಾಮ, ಅಥರ್ವ - ಎಂದು ವಿಂಗಡಿಸಲು ಸಾಧ್ಯವೆಂಬುದೂ ನನ್ನ ಪ್ರಜ್ಞೆಗಂತೂ ನಿಲುಕುವುದಿಲ್ಲ. ವೇದಗಳನ್ನು ಬರೆದಿಡುತ್ತಿರಲಿಲ್ಲವೆಂಬುದು ನಿಜ. ಅದಕ್ಕೆ ಎರಡು ಕಾರಣಗಳುಂಟು - ಅನಧಿಕಾರಿಗಳು ವೇದಾಧ್ಯಯನ ಮಾಡಬಾರದು ಎಂಬುದೊಂದು. ಅತಿಸೂಕ್ಷ್ಮವಾದ ಉಚ್ಚಾರಣಭೇದವನ್ನು ಲಿಪಿಯಿಂದ ತೋರಿಸಲು ಸಾಧ್ಯವಿಲ್ಲ, ಪುಸ್ತಕದಿಂದ ಅಭ್ಯಾಸ ಮಾಡಿದರೆ ಉಚ್ಚಾರಣೆಯ ಕ್ರಮ ತುಂಬ ಕೆಟ್ಟುಹೋಗುತ್ತದೆ ಎಂಬ ಭಯ ಇನ್ನೊಂದು. ಷೋಡಶ ಸಂಸ್ಕಾರಗಳಲ್ಲಿ ಅಕ್ಷರಾಭ್ಯಾಸವನ್ನು ಸೇರಿಸಿರುವುದೇ ಲಿಪಿ ಇತ್ತೆನ್ನುವುದಕ್ಕೆ ಸಾಕ್ಷಿಯಾಗಬಲ್ಲದು.
ಉಪನಯನವಾದ ಮೇಲೆ ಕ್ರಮವಾದ ಅಧ್ಯಯನ ಪ್ರಾರಂಭವಾಗುತ್ತಿತ್ತು. ಸಾಮಾನ್ಯವಾಗಿ ಎಂಟನೆಯ ವಯಸ್ಸಿನಲ್ಲಿ ಉಪನಯನ. ವಿದ್ಯಾಭ್ಯಾಸದ ಗುರಿ ಮುಖ್ಯವಾಗಿ ಮಾನವನ ನಡೆನುಡಿಗಳನ್ನು ತಿದ್ದುವುದೂ ಸಮಾಜದಲ್ಲಿ ನಾಲ್ಕು ಜನರಿಗೆ ಉಪಕಾರಿಯಾಗಿ ಬಾಳುವುದೂ ಮನುಷ್ಯಜನ್ಮದ ಧ್ಯೇಯವಾದ ನಾಲ್ಕು ಪುರುಷಾರ್ಥಗಳನ್ನು ಸಾಧಿಸುವುದೂ ಆಗಿತ್ತು. ಇದನ್ನು Humanistic Education ಎಂದು ಕರೆಯಬಹುದಾಗಿ ತೋರುತ್ತದೆ. “ವಿದ್ಯಾ ದದಾತಿ ವಿನಯಮ್” - ವಿನಯ ಎಂದರೆ ವಿಶಿಷ್ಟವಾದ ನಯ-ನೀತಿ. ಕೌಟಿಲ್ಯವಿಲ್ಲದ ಋಜು ವ್ಯವಹಾರ ಅದು.
“ಬ್ರಾಹ್ಮಣೇನ ನಿಷ್ಕಾರಣಂ ಷಡಂಗೋ ವೇದೋಽಧ್ಯೇಯೋ ಜ್ಞೇಯಶ್ಚ” ಎಂದು ಮಹಾಭಾಷ್ಯಕಾರ ಪತಂಜಲಿ ಹೇಳಿದ್ದಾನೆ. “ಷಡಂಗಸಹಿತವಾಗಿ ವೇದಾಧ್ಯಯನವನ್ನು ಕಡ್ಡಾಯವಾಗಿ ಮಾಡತಕ್ಕದ್ದು. ಅದರ ಅರ್ಥವನ್ನು ತಿಳಿದಿರಬೇಕು. ಈ ವಿದ್ಯಾಭ್ಯಾಸಕ್ಕೆ ಲೌಕಿಕವಾಗಿ ಯಾವ ಪ್ರತಿಫಲವನ್ನೂ ಬಯಸತಕ್ಕದ್ದಲ್ಲ” ಎಂದು ಆ ಮಾತಿನ ಅಭಿಪ್ರಾಯ. ವಿದ್ಯಾಭ್ಯಾಸದಲ್ಲಿ ಕಂಠಪಾಠ, ಅರ್ಥಜ್ಞಾನ - ಇವೆರಡೂ ಸೇರುತ್ತವೆ. ಬರಿಯ ಪುಸ್ತಕದ ವಿದ್ಯೆ ವಿದ್ಯೆಯಲ್ಲ. ಅದು ಮುಖೋದ್ಗತವಾಗಿರಬೇಕು. ಅರ್ಥಜ್ಞಾನವಿಲ್ಲದ ಕಂಠಪಾಠವೂ ನಿರರ್ಥಕ. ಪತಂಜಲಿ ಪಸ್ಪಶಾಹ್ನಿಕದಲ್ಲಿ ಹೇಳುತ್ತಾನೆ-
ಯದಧೀತಮವಿಜ್ಞಾತಂ ನಿಗದೇನೈವ ಶಬ್ದ್ಯತೇ |
ಅನಗ್ನಾವಿವ ಶುಷ್ಕೈಧೋ ನ ತಜ್ಜ್ವಲತಿ ಕರ್ಹಿಚಿತ್ ||
ಬೆಂಕಿ ಇಲ್ಲದಿದ್ದರೆ ಕಟ್ಟಿಗೆ ಹೇಗೆ ಉರಿಯುವುದಿಲ್ಲವೋ ಅದು ವ್ಯರ್ಥವೋ ಹಾಗೆ ಅರ್ಥಜ್ಞಾನವಿಲ್ಲದ ಅಭ್ಯಾಸ ನಿರರ್ಥಕ.
‘ತದಧೀತೇ ತದ್ವೇದ’ (೪.೨.೫೯) ಎಂದು ಪಾಣಿನಿಸೂತ್ರ. “ವ್ಯಾಕರಣಮಧೀತೇ ವೇದ ವಾ ಇತಿ ವೈಯಾಕರಣಃ”. ವ್ಯಾಕರಣಸೂತ್ರಗಳನ್ನೇ ಕಂಠಪಾಠ ಮಾಡಿದವನು, ಅವುಗಳ ಅರ್ಥವನ್ನರಿತವನು - ಇಬ್ಬರೂ ವೈಯಾಕರಣರೇ. ಅಷ್ಟಾಧ್ಯಾಯಿಯಲ್ಲಿ ಈ ಪ್ರಕರಣದ ಸೂತ್ರ-ವಾರ್ತ್ತಿಕಗಳನ್ನು ಪರಿಶೀಲಿಸಿದರೆ ವೈದಿಕ ಸಾಹಿತ್ಯವನ್ನಲ್ಲದೆ ನ್ಯಾಯ, ಲೋಕಾಯತ, ವಾಯಸವಿದ್ಯೆ, ಗೋಲಕ್ಷಣ, ಅಶ್ವಲಕ್ಷಣ, ಕ್ಷತ್ತ್ರವಿದ್ಯೆ, ಯವಕ್ರೀತವೆಂಬ ಆಖ್ಯಾನ, ವಾಸವದತ್ತಾ ಮೊದಲಾದ ಆಖ್ಯಾಯಿಕೆಗಳು ಮುಂತಾದವನ್ನೂ ಅಧ್ಯಯನ ಮಾಡತಕ್ಕವರಿದ್ದರೆಂದು ಗೊತ್ತಾಗುತ್ತದೆ.
ವೇದಗಳನ್ನು ಹೊರತಾಗಿ ಉಳಿದ ವಿದ್ಯಾಭ್ಯಾಸಪದ್ಧತಿಯಲ್ಲಿ ಜಾತೀಯವಾದ ಯಾವ ನಿರ್ಬಂಧವೂ ಇದ್ದಂತೆ ಕಂಡುಬರುವುದಿಲ್ಲ. ‘ಪ್ರತ್ಯಭಿವಾದೇಽಶೂದ್ರೇ’ (೮.೨.೮೩) ಮುಂತಾದ ಸೂತ್ರಗಳನ್ನೂ ಅವುಗಳ ಭಾಷ್ಯವನ್ನೂ ಅವಲೋಕಿಸಿದರೆ ಆಗ ಸಂಸ್ಕೃತವು ವ್ಯವಹಾರಭಾಷೆಯಾಗಿತ್ತೆಂದೂ ಶೂದ್ರನೂ ಸಂಸ್ಕೃತದಲ್ಲಿ ಮಾತಾಡುತ್ತಿದ್ದನೆಂದೂ ನಿರ್ಬಾಧವಾಗಿ ಹೇಳಬಹುದು. ‘ಅಜೇರ್ವ್ಯಘಞಪೋಃ’ (೨.೪.೫೬) ಎಂಬ ಸೂತ್ರದ ಮಹಾಭಾಷ್ಯದಲ್ಲಿ ಒಬ್ಬ ವೈಯಾಕರಣನಿಗೂ ಕುದುರೆಗಾಡಿ ಹೊಡೆಯುವವನಿಗೂ ನಡೆದ ಸಂವಾದವನ್ನು ಪತಂಜಲಿ ಉದಾಹರಿಸಿದ್ದಾನೆ. ಅವರಿಬ್ಬರಿಗೂ ವ್ಯಾಕರಣದ ಒಂದು ವಿಷಯದಲ್ಲಿ ವಾಗ್ವಾದ ನಡೆಯುತ್ತದೆ. ಕುದುರೆಗಾಡಿಯವನು ವ್ಯಾಕರಣಪಂಡಿತನನ್ನು ಸೋಲಿಸಿಬಿಡುತ್ತಾನೆ. ‘ಸೂತ’ ಎಂಬ ಶಬ್ದದ ವಿಷಯವಾಗಿ ನಡೆದ ವಾಗ್ವಾದ ಅದು. ವ್ಯಾಕರಣಪಂಡಿತನಿಗೆ ಬರಿಯ ವ್ಯಾಕರಣ ಗೊತ್ತಿತ್ತೇ ಹೊರತು ಲೋಕಪ್ರಯೋಗ-ವ್ಯವಹಾರಗಳು ಹೇಗಿವೆಯೆಂದು ಗೊತ್ತಿಲ್ಲ. ಕುದುರೆಗಾಡಿಯವನಿಗೆ ಶಾಸ್ತ್ರವೂ ಗೊತ್ತಿದೆ, ಲೋಕವ್ಯವಹಾರವೂ ಗೊತ್ತಿದೆಯೆಂದು ಅಲ್ಲಿ ಪತಂಜಲಿ ತೋರಿಸಿಕೊಟ್ಟಿದ್ದಾನೆ.
ಸ್ತ್ರೀವಿದ್ಯಾಭ್ಯಾಸ
‘ಅನುಪಸರ್ಜನಾತ್’ (೪.೧.೧೪) ಎಂಬ ಸೂತ್ರದಲ್ಲಿ ಭಾಷ್ಯಕಾರನು “ಕಾಶಕೃತ್ಸ್ನಿನಾ ಪ್ರೋಕ್ತಾ ಮೀಮಾಂಸಾ ಕಾಶಕೃತ್ಸ್ನೀ. ಕಾಶಕೃತ್ಸ್ನಿನಮಧೀತೇ ಕಾಶಕೃತ್ಸ್ನಾ ಬ್ರಾಹ್ಮಣೀ” ಎಂದು ಉದಾಹರಿಸಿದ್ದಾರೆ. ಕಾಶಕೃತ್ಸ್ನನು ರಚಿಸಿದ ಮೀಮಾಂಸಾಶಾಸ್ತ್ರವನ್ನು ಸ್ತ್ರೀಯರು ಕಲಿಯುತ್ತಿದ್ದರೆಂಬುದಕ್ಕೆ ಇದು ಸಾಕ್ಷಿ. ಅಧ್ಯಾಪನ ಮಾಡುವ ಸ್ತ್ರೀಯರೇ ಇದ್ದಿರುವಾಗ ಸ್ತ್ರೀವಿದ್ಯಾಭ್ಯಾಸ ಪ್ರಚುರವಾಗಿತ್ತೆಂದು ನಿಶ್ಚಿತವಾಗುತ್ತದೆ. “ಯಾ ತು ಸ್ವಯಮೇವಾಧ್ಯಾಪಿಕಾ ತತ್ರ ವಾ ಙೀಷ್ ವಾಚ್ಯಃ” ಎಂದು ವಾರ್ತ್ತಿಕ. “ಉಪೇತ್ಯ ಅಧೀಯತೇ ತಸ್ಯಾ ಉಪಾಧ್ಯಾಯೀ, ಉಪಾಧ್ಯಾಯಾ ವಾ” (ವಿದ್ಯಾರ್ಥಿಗಳು ಯಾರ ಬಳಿಗೆ ಬಂದು ಅಧ್ಯಯನ ಮಾಡುತ್ತಾರೋ ಅವಳು ಉಪಾಧ್ಯಾಯೀ ಅಥವಾ ಉಪಾಧ್ಯಾಯಾ). ಉಪಾಧ್ಯಾಯನ ಪತ್ನಿ ಉಪಾಧ್ಯಾಯಾನೀ. ಆಚಾರ್ಯಾನೀ ಎಂದರೆ ಆಚಾರ್ಯನ ಪತ್ನಿ. “ಆಚಾರ್ಯಾ ಸ್ವಯಂ ವ್ಯಾಖ್ಯಾತ್ರೀ” (ಸ್ವಯಂ ಅಧ್ಯಾಪನ ಮಾಡಿಸತಕ್ಕವಳು ಆಚಾರ್ಯಾ).
ಅಧ್ಯಾಪಕರಲ್ಲಿ ಆಚಾರ್ಯ, ಗುರು, ಉಪಾಧ್ಯಾಯ, ಶಿಕ್ಷಕ ಎಂದು ನಾಲ್ಕು ವರ್ಗಗಳಿದ್ದಂತೆ ಕಂಡುಬರುತ್ತದೆ - professor, reader, lecturer, teacher ಎಂದು ವಿಭಾಗವಿದ್ದ ಹಾಗೆ. ಆದರೆ ಅವರ ದರ್ಜೆ ಏನು, ಯಾವ ಪಾಠ ಹೇಳುತ್ತಿದ್ದವರಿಗೆ ಯಾವ ಹೆಸರು ಎಂದು ಸ್ಪಷ್ಟವಾಗಿ ತಿಳಿಯುವುದಿಲ್ಲ.
“ಪ್ರಧಾನಂ ಷಟ್ಸ್ವಂಗೇಷು ವ್ಯಾಕರಣಮ್” ಎನ್ನುತ್ತಾನೆ ಪತಂಜಲಿ. ವೇದದ ಷಡಂಗಗಳಲ್ಲಿ ವ್ಯಾಕರಣವು ಮುಖ್ಯವಾದದ್ದೆಂದು ಆತನ ಅಭಿಪ್ರಾಯ. ಪತಂಜಲಿಗಿಂತಲೂ ಪೂರ್ವದಲ್ಲಿ ಉಪನಯನಸಂಸ್ಕಾರವಾದೊಡನೆ ವ್ಯಾಕರಣವನ್ನು ಕಲಿತು ಅನಂತರ ವೇದಾಧ್ಯಯನ ಮಾಡುತ್ತಿದ್ದರು. ಆಮೇಲೆ ಮೊದಲು ಮುಖ್ಯವಾದ ವೇದಾಧ್ಯಯನವನ್ನು ಆರಂಭಿಸುತ್ತಿದ್ದರು. ಅದು ಮುಗಿದ ಮೇಲೆ ವ್ಯಾಕರಣವನ್ನು ಕಲಿಯಲು ಕೆಲವರು ಹಿಂಜರಿಯುತ್ತಿದ್ದರೆಂದು ಕಾಣುತ್ತದೆ. ಅವರಿಗಾಗಿ ವ್ಯಾಕರಣದ ಪ್ರಯೋಜನಗಳನ್ನು ವಾರ್ತ್ತಿಕಕಾರ ಕಾತ್ಯಾಯನನು ಹೇಳಬೇಕಾಗಿ ಬಂದಿತು ಎನ್ನುತ್ತಾನೆ ಭಾಷ್ಯಕಾರ - “ಪುರಾಕಲ್ಪ ಏತದಾಸೀತ್. ‘ಸಂಸ್ಕಾರೋತ್ತಕರಕಾಲಂ ಬ್ರಾಹಣಾ ವ್ಯಾಕರಣಂ ಸ್ಮಾಧೀಯತೇ. ತೇಭ್ಯಸ್ತತ್ತತ್ಸ್ಥಾನಕರಣನಾದಾನುಪ್ರದಾನಜ್ಞೇಭ್ಯೋ ವೈದಿಕಾಃ ಶಬ್ದಾ ಉಪದಿಶ್ಯಂತೇ.’ ತದದ್ಯತ್ವೇ ನ ತಥಾ. ವೇದಮಧೀತ್ಯ ತ್ವರಿತಾ ವಕ್ತಾರೋ ಭವಂತಿ - ‘ವೇದಾನ್ನೋ ವೈದಿಕಾಃ ಶಬ್ದಾಃ ಸಿದ್ಧಾ ಲೋಕಾಚ್ಚ ಲೌಕಿಕಾಃ. ಅನರ್ಥಕಂ ವ್ಯಾಕರಣಮ್’ ಇತಿ. ತೇಭ್ಯ ಏವಂ ವಿಪ್ರತಿಪನ್ನಬುದ್ಧಿಭ್ಯೋಽಧ್ಯೇತೃಭ್ಯಃ ಸುಹೃದ್ಭೂತ್ವಾ - ಆಚಾರ್ಯ ಇದಂ ಶಾಸ್ತ್ರಮನ್ವಾಚಷ್ಟೇ – ‘ಇಮಾನಿ ಪ್ರಯೋಜನಾನ್ಯಧ್ಯೇಯಂ ವ್ಯಾಕರಣಮ್’ ಇತಿ.” (ಪಸ್ಪಶಾಹ್ನಿಕ)
ಈ ಸಂದರ್ಭದಲ್ಲಿ ಭಾಷ್ಯವ್ಯಾಖ್ಯಾನಕಾರನಾದ ಕೈಯಟನು ಹೀಗೆ ವಿವರಣೆ ಕೊಡುತ್ತಾನೆ: “ಹಿಂದೆ ಜನರು ದೀರ್ಘಾಯುಷ್ಯರಾಗಿದ್ದರು. ಆದ್ದರಿಂದ ಮೊದಲು ವ್ಯಾಕರಣವನ್ನು ಕಲಿತು ಆಮೇಲೆ ವೇದವನ್ನು ಕಲಿಯುತ್ತಿದ್ದರು. ಈಗಲಾದರೋ ಜನರು ಅಲ್ಪಾಯುಷ್ಯರಾಗಿದ್ದರಿಂದ ಪ್ರಧಾನವಾದ ವೇದವನ್ನು ಮೊದಲು ಕಲಿಯುತ್ತಾರೆ” ಎಂದು. ಇದಕ್ಕೆ ಭಟ್ಟೋಜೀದೀಕ್ಷಿತನು ಶಬ್ದಕೌಸ್ತುಭದಲ್ಲಿ ಇನ್ನೊಂದು ಮಾತನ್ನು ಸೇರಿಸಿದ್ದಾನೆ - “ವಿವಾಹಾಯ ತ್ವರಮಾಣಾಃ” ಎಂದು.
ವಿದ್ಯೆಯ ವಿನಿಯೋಗ
ವಿದ್ಯೆಗೆ ನಾಲ್ಕು ಅವಸ್ಥೆಗಳಿದ್ದು ನಾಲ್ಕು ಸಮಯಗಳಲ್ಲಿ ಅದರ ವಿನಿಯೋಗವಾಗುತ್ತದೆಯೆಂದು ಭಾಷ್ಯಕಾರನು ಹೇಳಿದ್ದಾನೆ. ಆಗಮಕಾಲ, ಸ್ವಾಧ್ಯಾಯಕಾಲ, ಪ್ರವಚನಕಾಲ, ವ್ಯವಹಾರಕಾಲ - ಎಂಬಿವೇ ನಾಲ್ಕು ಪ್ರಕಾರಗಳು. ಗುರುವಿನಿಂದ ವಿದ್ಯೆಯನ್ನು ಕಲಿಯುವ ಸಮಯ ಆಗಮಕಾಲ. ಈ ಕಾಲದಲ್ಲಿ ಗುರುವು ಎಷ್ಟು ಆಸಕ್ತಿಯಿಟ್ಟು ಹೇಳಿಕೊಡುತ್ತಾನೋ ಶಿಷ್ಯನು ಎಷ್ಟು ಶ್ರದ್ಧೆಯಿಂದ ಕಲಿಯುತ್ತಾನೋ ಅದನ್ನವಲಂಬಿಸಿ ವಿದ್ಯೆಗೆ ತೇಜಸ್ಸು ಬರುತ್ತದೆ. ಸ್ವಾಧ್ಯಾಯಕಾಲವೆಂದರೆ ವಿದ್ಯಾರ್ಥಿ ಪಾಠವನ್ನು ಸ್ವತಃ ಓದಿ, ಚಿಂತಿಸಿ, ತನ್ಮಯನಾಗಿ ದೃಢಪಡಿಸಿಕೊಳ್ಳುತ್ತಾನೆ. ಅವನ ಮನಸ್ಸಿನಲ್ಲಿ ಗಟ್ಟಿಯಾಗಿ ವಿದ್ಯೆ ನಿಲ್ಲುವ ಸಮಯವಿದು. ಮುಂದೆ ಪ್ರವಚನಕಾಲ. ಆಗ ವಿದ್ಯಾರ್ಥಿಯೇ ವಿದ್ವಾಂಸನಾಗಿ ಶಿಷ್ಯರಿಗೆ ಪಾಠ ಹೇಳುತ್ತಾನೆ. ಆತನು ಕಲಿತ ವಿದ್ಯೆ ಇನ್ನೂ ಸ್ಥಿರವಾಗಿ ವಿಸ್ತೃತವಾಗುತ್ತದೆ. ತಾನು ಕಲಿತಿದ್ದನ್ನು ಇನ್ನೊಬ್ಬರಿಗೆ ಹೇಳಿಕೊಡಲೇಬೇಕೆಂದೂ ಅದರಿಂದಲೇ ಆತನು ಋಷಿಋಣದಿಂದ ಬಿಡುಗಡೆ ಹೊಂದುತ್ತಾನೆಂದೂ ನಂಬಿಕೆ ಇತ್ತು. ಒಬ್ಬ ವ್ಯಾಕರಣಪಂಡಿತನು ಶಿಷ್ಯರಿಗೆ ಸರಿಯಾಗಿ ಪಾಠ ಹೇಳಿಕೊಡದೆ ಇದ್ದುದರಿಂದ ಬ್ರಹ್ಮರಾಕ್ಷಸನಾದನೆಂದು ಆ ಸ್ಥಿತಿಯಲ್ಲಿಯೇ ನಾಗೇಶಭಟ್ಟನಿಗೆ ಪಾಠ ಹೇಳಿ ತನ್ನ ನೀಚಜನ್ಮವನ್ನು ಕಳೆದುಕೊಂಡನೆಂದೂ ಒಂದು ಕಥೆಯಿದೆ. ನಾಲ್ಕನೆಯದು ವ್ಯವಹಾರಕಾಲ. ಕಲಿತ ವಿದ್ಯೆಯನ್ನು ತನ್ನ ಜೀವನದಲ್ಲಿ ಅಳವಡಿಸಿ ಸದುಪಯೋಗ ಪಡಿಸಿಕೊಳ್ಳಬೇಕಾದ ಕಾಲವದು. ಇವುಗಳಲ್ಲಿ ಆಗಮಕಾಲ-ಸ್ವಾಧ್ಯಾಯಕಾಲಗಳು ವಿದ್ಯಾರ್ಜನೆಗೆ ಸಂಬಂಧಿಸಿದವು. ಪ್ರವಚನಕಾಲ-ವ್ಯವಹಾರಕಾಲಗಳು ವಿದ್ಯಾಪ್ರಯೋಜನಕ್ಕೆ ಸಂಬಂಧಿಸಿದವು. ಇನ್ನೊಂದೆಡೆ-
ಆಚಾರ್ಯಾತ್ಪಾದಮಾದತ್ತೇ ಪಾದಂ ಶಿಷ್ಯಃ ಸ್ವಮೇಧಯಾ |
ಪಾದಂ ಸಬ್ರಹ್ಮಚಾರಿಭ್ಯಃ ಪಾದಂ ಕಾಲೇನ ವಿಂದತಿ ||
ಎಂಬ ಶ್ಲೋಕವನ್ನು ವ್ಯಾಖ್ಯಾನಕಾರರು ಉದಾಹರಿಸಿದ್ದಾರೆ. ಶಿಷ್ಯನು ಗುರುವಿನಿಂದ ಕಲಿಯುವುದು ಕಾಲುಭಾಗ ಮಾತ್ರ. ತನ್ನ ಬುದ್ಧಿಶಕ್ತಿಯಿಂದ ಇನ್ನು ಕಾಲುಭಾಗವನ್ನು ಸಂಪಾದಿಸಿಕೊಳ್ಳುತ್ತಾನೆ. ಕಾಲುಭಾಗವು ಸಹಪಾಠಿಗಳೊಡನೆ ಚಿಂತನೆ ಮಾಡುವುದರಿಂದ ಲಭಿಸುತ್ತದೆ. ಹೀಗೆ ಮುಕ್ಕಾಲು ಭಾಗ ಮಾತ್ರ ವಿದ್ಯಾಭ್ಯಾಸದಿಂದ ಲಭಿಸುತ್ತದೆ. ಅವನ ವಿದ್ಯೆ ಪೂರ್ಣವಾಗುವುದಿಲ್ಲ. ಮುಂದೆ ವ್ಯವಹಾರದಿಂದಲೂ ಸ್ವಾನುಭವದಿಂದಲೂ ಉಳಿದ ಭಾಗವನ್ನು ಗಳಿಸಿಕೊಳ್ಳಬೇಕು.
ವ್ಯಾಕರಣಾದಿ ಶಾಸ್ತ್ರಗ್ರಂಥಗಳು ಹಿಂದೆ ಅಲ್ಪಪರಿಮಾಣದಲ್ಲಿ ಸಂಕ್ಷೇಪವಾಗಿದ್ದವೆಂದೂ ವ್ಯಾಖ್ಯಾನಕಾರರು ಹುಟ್ಟಿಕೊಂಡು ಅವನ್ನು ದೊಡ್ಡದಾಗಿ ಬೆಳೆಸಿಬಿಟ್ಟರೆಂದೂ ವಿಕಾಸವಾದಿಗಳಾದ ಕೆಲವು ಆಧುನಿಕ ವಿದ್ವಾಂಸರ ಅಭಿಪ್ರಾಯವಿದೆ. ಇದಕ್ಕೆ ವ್ಯತಿರಿಕ್ತವಾಗಿ ಒಂದು ನಿದರ್ಶನವನ್ನಿಲ್ಲಿ ಕೊಡಬಹುದು. ವ್ಯಾಡಿಯೆಂಬ ಆಚಾರ್ಯನು ಪತಂಜಲಿಗಿಂತ ಹಿಂದಿನವನು. ಅವನು ಲಕ್ಷಶ್ಲೋಕಪರಿಮಿತವಾದ ಒಂದು ವ್ಯಾಕರಣಗ್ರಂಥವನ್ನು ರಚಿಸಿದ್ದನು. ಶ್ಲೋಕವೆಂದರೆ ೩೨ ಅಕ್ಷರವೆಂದರ್ಥ. ಅವನ ಗ್ರಂಥದಲ್ಲಿ ೩೨ ಲಕ್ಷ ಅಕ್ಷರಗಳಿದ್ದವು. ಈಗಿನ ಮಹಾಭಾರತದಷ್ಟು. ಆ ವ್ಯಾಕರಣಗ್ರಂಥದ ಹೆಸರು ‘ಸಂಗ್ರಹ’! ಪತಂಜಲಿಯು “ಸಂಗ್ರಹೇ ಏತತ್ ಪ್ರಾಧಾನ್ಯೇನ ಪರೀಕ್ಷಿತಮ್, ನಿತ್ಯೋ ವಾ ಸ್ಯಾತ್ ಕೃತಕೋ ವೇತಿ” ಎಂದು ವ್ಯಾಡಿಯ ಸಂಗ್ರಹವನ್ನು ಸ್ಮರಿಸಿದ್ದಾನೆ. ವಾಕ್ಯಪದೀಯಕಾರ ಭರ್ತೃಹರಿಗೆ ಈ ಗ್ರಂಥ ದೊರಕಿರಲಿಲ್ಲ. ಈ ಮಹಾಗ್ರಂಥವು ಅಲ್ಪಮತಿಗಳಾದ ವೈಯಾಕರಣರ ದೆಸೆಯಿಂದ ನಷ್ಟವಾಗಿಹೋಯಿತೆಂದು ಆತನು ತುಂಬ ಖೇದದಿಂದ ಹೇಳುತ್ತಾನೆ-
ಪ್ರಾಯೇಣ ಸಂಕ್ಷೇಪರುಚೀನಲ್ಪವಿದ್ಯಾಪರಿಗ್ರಹಾನ್ |
ಸಂಪ್ರಾಪ್ಯ ವೈಯಾಕರಣಾನ್ ಸಂಗಹೇಽಸ್ತಮುಪಾಗತೇ || (ವಾಕ್ಯಪದೀಯ, ೨.೪೭೬)
ಎಂದು. ಪಂಡಿತರೆನಿಸಿಕೊಳ್ಳತಕ್ಕವರು ಬರಬರುತ್ತ ಸಂಕ್ಷೇಪಪ್ರಿಯರೂ ಅಲ್ಪವಿದ್ಯರೂ ಆಗಿಬಿಟ್ಟರೆಂದು ನೊಂದುಕೊಳ್ಳುತ್ತಾನೆ ಭರ್ತೃಹರಿ.
ಗುರುಶಿಷ್ಯಸಂಬಂಧ
ಗುರುಶಿಷ್ಯರಿಗೆ ಅನ್ಯೋನ್ಯವಾಗಿ ಪ್ರೀತಿವಿಶ್ವಾಸಗಳೂ ಸೌಹಾರ್ದವೂ ನೆಲೆಸಿದ್ದವೆನ್ನಲು ಅಡ್ಡಿಯಿಲ್ಲ. ಉಪಾಧ್ಯಾಯನು ಶಿಷ್ಯರಿಗೆ ಹೇಳಿದ್ದನ್ನೇ ಮತ್ತೆ ಮತ್ತೆ ಬಿಡಿಸಿ ಹೇಳುವ ಪದ್ಧತಿಯಿತ್ತು. “ಆಚಾರ್ಯಃ ಸುಹೃದ್ಭೂತ್ವಾ ಅನ್ವಾಚಷ್ಟೇ” ಎಂಬ ಮಾತನ್ನು ಭಾಷ್ಯಕಾರನು ಹಲವು ಬಾರಿ ಹೇಳಿದ್ದಾನೆ.
ಶಿಷ್ಯರು ಗುರುವಿನಲ್ಲಿ ಭಕ್ತಿ-ವಿಧೇಯತೆಗಳಿಂದ ನಡೆದುಕೊಳ್ಳುತ್ತಿದ್ದರು. ಉಪಾಧ್ಯಾಯರ ಪ್ರೀತಿಯನ್ನು ಗಳಿಸಿದರೆ ನಮಗೆ ಚೆನ್ನಾಗಿ ಪಾಠ ಹೇಳಿಕೊಡುತ್ತಾರೆ, ಗುರುಸೇವೆಯಿಂದ ನಮಗೆ ಪುಣ್ಯವೂ ಉಂಟು ಎಂದು ಅವರು ತಿಳಿದಿದ್ದರು. ‘ಹೇತುಮತಿ ಚ’ (೩.೧.೨೬) ಎಂಬ ಸೂತ್ರದ ಭಾಷ್ಯದಲ್ಲಿ “ಯೇ ತಾವದೇತೇ ಗುರುಶುಶ್ರೂಷವೋ ನಾಮ ತೇಽಪಿ ಸ್ವಭೂತ್ಯರ್ಥಂ ಪ್ರವರ್ತಂತೇ, ಪಾರಲೌಕಿಕಂ ಚ ನೋ ಭವಿಷ್ಯತಿ, ಇಹ ಚ ನಃ ಪ್ರೀತೋ ಗುರುರಧ್ಯಾಪಯಿಷ್ಯತೀತಿ” ಎಂದಿದ್ದಾನೆ ಪತಂಜಲಿ.
ಗುರುವಿನ ಬಳಿಗೆ ಹೋಗಿ ಅವನ ಸೇವೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡಬೇಕಾಗಿತ್ತೇ ಹೊರತು ಗುರುವೇ ಶಿಷ್ಯನ ಮನೆಗೆ ಹೋಗಿ ಟ್ಯೂಷನ್ ಹೇಳುವ ಪದ್ಧತಿ ಇರಲಿಲ್ಲ. ವಿದ್ಯಾರ್ಥಿಗೆ ಅಂತೇವಾಸಿ ಎಂದು ಹೆಸರು. ಗುರುವಿನ ಹತ್ತಿರ ವಾಸ ಮಾಡುವವನು ಎಂದು ಶಬ್ದಾರ್ಥ. ‘ಶಯವಾಸವಾಸಿಷ್ವಕಾಲಾತ್’ (೬.೩.೧೮) ಎಂಬ ಪಾಣಿನಿಸೂತ್ರದಿಂದ ಈ ಶಬ್ದ ಸಿದ್ಧವಾಗುತ್ತದೆ. ಒಂದು ಕಡೆ ಭಾಷ್ಯದಲ್ಲಿ “ಗ್ರಾಮೇ ಗುರುನಿಮಿತ್ತಂ ವಸಾಮಃ, ಗ್ರಾಮೇ ಅಧ್ಯಯನನಿಮಿತ್ತಂ ವಸಾಮಃ” ಎಂದು ಉದಾಹರಣೆ ಕೊಡಲಾಗಿದೆ. ‘ಯೋಜನಂ ಗಚ್ಛತಿ’ (೫.೧.೭೪) ಎಂಬ ಸೂತ್ರದಲ್ಲಿ “ಯೋಜನಶತಾದಭಿಗಮನಮರ್ಹತಿ ಯೋಜನಶತಿಕೋ ಗುರುಃ” ಎಂದು ಭಾಷ್ಯಕಾರನು ಉದಾಹರಿಸಿದ್ದಾನೆ. ಯಾವ ಗುರುವಿನ ಬಳಿಗೆ ನೂರಾರು ಯೋಜನಗಳ ದೂರದಿಂದ ವಿದ್ಯಾರ್ಥಿಗಳು ಬಂದು ಸೇರುತ್ತಾರೋ ಆ ಗುರು ಯೋಜನಶತಿಕ.
ಅಧ್ಯಯನಕಾಲ
ವೇದಗಳ ಅಧ್ಯಾಪನ ರಾತ್ರಿ ಹೊತ್ತು ನಿಷಿದ್ಧವಾಗಿದೆ. ಈ ನಿಷೇಧ ವ್ಯಾಕರಣಶಾಸ್ತ್ರಕ್ಕೂ ಅನ್ವಯಿಸುತ್ತಿದ್ದೆಂದು ತೋರುತ್ತದೆ. ಅಇಉಣ್, ಋಲೃಕ್ ಮುಂತಾದ ಅಕ್ಷರಸಮಾಮ್ನಾಯದ ವಿಷಯವಾಗಿ ಕಾತ್ಯಾಯನನು “ಯತ್ರ ಚ ಬ್ರಹ್ಮ ವರ್ತತೇ” ಎಂದಿದ್ದಾನೆ. ಪತಂಜಲಿಯು “ಸೋಽಯಮಕ್ಷರಸಮಾಮ್ನಾಯೋ ವಾಕ್ಸಮಾಮ್ನಾಯಃ ಪುಷ್ಪಿತಃ ಫಲಿತಶ್ಚಂದ್ರತಾರಕವತ್ ಪ್ರತಿಮಂಡಿತೋ ವೇದಿತವ್ಯೋ ವೇದರಾಶಿಃ” ಎನ್ನುತ್ತಾನೆ. ಋಕ್ತಂತ್ರವ್ಯಾಕರಣದಲ್ಲಿ ಇದನ್ನು ಉದ್ದೇಶಿಸಿ “ನ ಭುಕ್ತ್ವಾ ನ ನಕ್ತಂ ಪ್ರಬ್ರೂಯಾದ್ಬ್ರಹ್ಮರಾಶಿಃ” ಎಂದು ಬರೆದಿದೆ. ಮಹಾಭಾಷ್ಯದಲ್ಲಿ ಒಂದೊಂದು ವಿಭಾಗಕ್ಕೆ ಆಹ್ನಿಕ ಎಂಬ ಹೆಸರಿರುವುದನ್ನು ಗಮನಿಸಿದರೂ ಈ ಅಭಿಪ್ರಾಯ ಹೊರಡುತ್ತದೆ. ‘ಅಹ್ನಾ ನಿರ್ವೃತ್ತಮಾಹ್ನಿಕಮ್’ - ಒಂದು ಹಗಲಿನಲ್ಲಿ ರಚಿತವಾದ ಗ್ರಂಥಭಾಗ ಆಹ್ನಿಕ. ಆದರೆ ಈ ನಿಷೇಧ ಅಧ್ಯಾಪನಕ್ಕೆ ಮಾತ್ರ. ವಿದ್ಯಾರ್ಥಿಗಳು ಹಗಲಿರುಳೂ ವಿದ್ಯಾಭ್ಯಾಸ ಮಾಡುತ್ತಿದ್ದರು. ಭಾಷ್ಯದಲ್ಲಿ ‘ಇಮಕಾಭ್ಯಾಂ ಛಾತ್ರಾಭ್ಯಾಂ ರಾತ್ರಿರಧೀತಾ ಅತೋ ಅಭ್ಯಾಮಹರಪ್ಯಧೀತಮ್’ ಎಂದು ಪ್ರಯೋಗವಿದೆ. “ಈ ಇಬ್ಬರು ವಿದ್ಯಾರ್ಥಿಗಳು ರಾತ್ರಿಯೆಲ್ಲ ಅಭ್ಯಾಸ ಮಾಡಿದರು, ಅಲ್ಲದೆ ಹಗಲೂ ಪೂರ್ತಿಯಾಗಿ ಅಭ್ಯಾಸ ಮಾಡಿದರು” ಎಂದು ಅದರ ಅರ್ಥ. ರಾತ್ರಿಯ ಹೊತ್ತು ಬೆರಣಿಗಳನ್ನು ಉರಿಸುತ್ತ ಅದರ ಬೆಳಕಿನಲ್ಲಿ ಕುಳಿತು ಏಕಾಂತವಾಗಿ ಅಭ್ಯಾಸ ಮಾಡುತ್ತಿದ್ದರೆಂದು ಸೂಚಿಸುತ್ತ, ‘ಹೇತುಮತಿ ಚ’ (೩.೧.೨೬) ಎಂಬ ಸೂತ್ರದಲ್ಲಿ “ಕಾರೀಷೋಽಗ್ನಿಃ ನಿರ್ವಾತೇ ಏಕಾಂತೇ ಸುಪ್ರಜ್ವಲಿತೋಽಧ್ಯಯನಂ ಪ್ರಯೋಜಯತಿ” ಎಂದು ಭಾಷ್ಯಕಾರನು ಹೇಳಿದ್ದಾನೆ.
ಪರೀಕ್ಷೆ
ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿತ್ತು. ‘ಕರ್ಮಾಧ್ಯಯನೇ ವೃತ್ತಮ್’ (೪.೪.೬೩) ಎಂಬ ಸೂತ್ರದ ವ್ಯಾಖ್ಯಾನದಲ್ಲಿ “ಯಸ್ಯಾಧ್ಯಯನೇ ಪ್ರವೃತ್ತಸ್ಯ ಪರೀಕ್ಷಾಕಾಲೇ ವಿಪರೀತೋಚ್ಚಾರಣರೂಪಂ ಸ್ಖಲಿತಮೇಕಂ ಜಾತಂ ಸ ಐಕಾನ್ಯಿಕಃ” – “ಪರೀಕ್ಷೆಯಲ್ಲಿ ಒಂದು ತಪ್ಪು ಮಾಡಿದನು ಐಕಾನ್ಯಿಕ.” ಏಕ - ಒಂದು, ಯಾರಿಗೆ ಅನ್ಯವಾಯಿತೋ – ತಪ್ಪಾಯಿತೋ, ಅವನು ಐಕಾನ್ಯಿಕ. ಎರಡು ತಪ್ಪು ಮಾಡಿದವನು ‘ದ್ವಾಯನಿಕ’. ಮೂರು ತಪ್ಪು ಮಾಡಿದವನು ‘ತ್ರಾಯನ್ಯಿಕ’. ಹನ್ನೆರಡು ತಪ್ಪು ಮಾಡಿದವನೂ ಇರುತ್ತಿದ್ದ. ವನು ‘ದ್ವಾದಶಾನ್ಯಿಕ’.
ವಿದ್ಯಾರ್ಥಿಗಳಲ್ಲಿ ಸೋಮಾರಿಗಳೂ ಇದ್ದರು. ಗೃಹಸ್ಥರು ವಿದ್ಯಾರ್ಥಿಗಳಿಗೆ ಅನ್ನ-ವಸ್ತ್ರಾದಿಗಳನ್ನಿತ್ತು ಸಹಾಯ ಮಾಡುತ್ತಿದ್ದರು. ವ್ಯಾಕರಣವನ್ನೋದುತ್ತೇನೆಂದು ಬಂದು ಸರಿಯಾಗಿ ವ್ಯಾಸಂಗ ಮಾಡದೆ ಕೂಳು ದಂಡ ಮಾಡುತ್ತಿದ್ದವರನ್ನು ಪತಂಜಲಿಯು ‘ಓದನಪಾಣಿನೀಯಾಃ’ ಎಂದು ಹಂಗಿಸಿದ್ದಾನೆ. ಓದನಕ್ಕಾಗಿ - ಅನ್ನಕ್ಕಾಗಿ, ವ್ಯಾಕರಣದ ತರಗತಿಯನ್ನು ಸೇರಿದವರು ಅವರು. ಹಾಗೆಯೇ ಕೆಲವರು ‘ಘೃತರೌಢೀಯರು’. ರೌಢದೇಶದವರು ರೌಢೀಯರು. ರೌಡಿಗಳಲ್ಲ! ಅವರು ತುಪ್ಪಕ್ಕಾಗಿ ಹಾತೊರೆಯುತ್ತಿದ್ದರು, ವಿದ್ಯೆಗಲ್ಲ. ಕಂಬಳಿ ಹೊದ್ದು ಬೆಚ್ಚಗೆ ಮಲಗುತ್ತಿದ್ದವರು ‘ಕಂಬಲಚಾರಾಯಣೀಯ’ರು. ಚಾರಾಯಣ ಎಂಬ ವೇದಶಾಖೆಯನ್ನು ಕಲಿಯುತ್ತಿದ್ದವರು ಚಾರಾಯಣೀಯರು. ತುಂಟ ವಿದ್ಯಾರ್ಥಿಗಳೂ ಇದ್ದರು. ಉಪಾಧ್ಯಾಯರು ಕಂಡರೆ ತಮ್ಮನ್ನು ಗದರಿಸುತ್ತಾರೆ, ಇಲ್ಲವೇ ಶಾಲೆಯಿಂದ ಓಡಿಸುತ್ತಾರೆ ಎಂದು ತಿಳಿದು ಕಣ್ಣಿಗೆ ಕಾಣದಂತೆ ತಪ್ಪಿಸಿಕೊಳ್ಳುತ್ತಿದ್ದರು. ಪತಂಜಲಿ ಹೇಳುತ್ತಾನೆ - “ಉಪಾಧ್ಯಾಯಾದಂತರ್ಧತ್ತೇ. ಪಶ್ಯತ್ಯಯಂ ಯದಿ ಮಾಮುಪಾಧ್ಯಾಯಃ ಪಶ್ಯತಿ ಧ್ರುವಂ ಮೇ ಪ್ರೇಷಣಮುಪಾಲಂಭೋ ವೇತಿ” (೧.೪.೨೮).
ವಿದ್ಯಾಭ್ಯಾಸದ ನಿಯಮ
ವಿದ್ಯಾಭ್ಯಾಸಕ್ಕಾಗಿ ಬಂದವನು ಪೂರ್ಣವಾಗಿ ಕಲಿತು ಗುರುವಿನಿಂದ ಅನುಜ್ಞೆಯನ್ನು ಪಡೆದು ತೆರಳಬೇಕು. ನಡುವೆ ಗುರುಕುಲವನ್ನು ಬಿಟ್ಟು ಹೋಗಿ ಮದುವೆ ಮಾಡಿಕೊಳ್ಳುವುದು ನಿಂದ್ಯವಾಗಿತ್ತು. ಅಂಥವನನ್ನು ‘ಖಟ್ವಾರೂಢ’ ಎಂದು ನಿಂದಿಸುತ್ತಿದ್ದರು. ಮಂಚವನ್ನು ಹತ್ತಿದವನು ಎಂದು ಶಬ್ದಾರ್ಥ. ‘ಖಟ್ವಾ ಕ್ಷೇಪೇ’ (೨.೧.೨೬) ಎಂದು ಪಾಣಿನಿಸೂತ್ರ. ಕ್ಷೇಪವೆಂದರೆ ನಿಂದೆ. ಪತಂಜಲಿ ಹೇಳುತ್ತಾನೆ - “ಅಧೀತ್ಯ ಸ್ನಾತ್ವಾ ಗುರುಭಿರನುಜ್ಞಾತೇನ ಖಟ್ವಾ ಆರೂಢೋ ವಾ. ಯ ಇದಾನೀಮನ್ಯಥಾ ಕರೋತಿ ಸ ಉಚ್ಯತೇ ಖಟ್ವಾರೂಢೋಽಯಂ ಜಾಲ್ಮ ಇತಿ.” ಬ್ರಹ್ಮಚಾರಿಯಾಗಿ ವಿದ್ಯೆಯನ್ನು ಕಲಿಯಬೇಕಾದವನು ಮಂಚವನ್ನು ಹತ್ತಿದವನೆಂದರೆ ಅವನಿಗೆ ನಿಂದೆ.
ಶಿಷ್ಯನು ಗುರುಕುಲವನ್ನು ಸೇರಿದ ಮೇಲೆ ಅಲ್ಲಿಯೇ ತನ್ನ ವಿದ್ಯಾಭ್ಯಾಸವನ್ನು ಮುಗಿಸುವುದು ನೀತಿಯಾಗಿತ್ತು. ಹಾಗಿಲ್ಲದೆ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಅಲೆಯತಕ್ಕವನನ್ನು ‘ತೀರ್ಥಕಾಕ’ ಎಂದು ಭಾಷ್ಯಕಾರನು ನಿಂದಿಸಿದ್ದಾನೆ. “ಯಥಾ ತೀರ್ಥಕಾಕಾ ನ ಚಿರಂ ಸ್ಥಾತಾರೋ ಭವಂತಿ, ಏವಂ ಯೋ ಗುರುಕುಲಾನಿ ಗತ್ವಾ ನ ಚಿರಂ ತಿಷ್ಠತಿ ಸ ಉಚ್ಯತೇ ತೀರ್ಥಕಾಕ ಇತಿ”. ‘ಧ್ವಾಂಕ್ಷೇಣ ಕ್ಷೇಪೇ’ (೨.೧.೪೨) ಎಂಬ ಸೂತ್ರದಿಂದ ಪಾಣಿನಿಯು ಇದನ್ನು ಸೂಚಿಸಿದ್ದಾನೆ. ಪಟ್ಟಣದ ಮೋಜಿಗೆ ಮರುಳಾದ ವಿದ್ಯಾರ್ಥಿ ‘ನಗರಕಾಕ’.
ದಂಡನೆ
ಶಿಷ್ಯರು ತಪ್ಪು ಮಾಡಿದರೆ ಉಪಾಧ್ಯಾಯರು ಗದರಿಸುತ್ತಿದ್ದರು. ಶಿಷ್ಯರನ್ನು ಹೊಡೆಯುತ್ತಿದ್ದರೆ? ಎಂಬುದೊಂದು ಕುತೂಹಲಕರವಾದ ಪ್ರಶ್ನೆ. ಹೊಡೆಯುವ ಸಂದರ್ಭವೂ ಇತ್ತು. “ಯ ಉದಾತ್ತೇ ಕರ್ತವ್ಯೇ ಅನುದಾತ್ತಂ ಕರೋತಿ ಖಂಡಿಕೋಪಾಧ್ಯಾಯಸ್ತಸ್ತ್ಮೈ ಚಪೇಟಾಂ ದದಾತಿ” ಎಂದಿದ್ದಾನೆ ಪತಂಜಲಿ. ಉದಾತ್ತಸ್ವರವನ್ನು ಹೇಳಬೇಕಾದಾಗ ಒಬ್ಬ ವಿದ್ಯಾರ್ಥಿ ಅನುದಾತ್ತಸ್ವರವನ್ನು ಹೇಳಿಬಿಡುತ್ತಾನೆ. ಆಗ ಖಂಡಿಕೋಪಾಧ್ಯಯನು ಅವನ ಕೆನ್ನಗೆ ಹೊಡೆಯುತ್ತಾನೆ ಎಂದರ್ಥ. ಈ ಸಂದರ್ಭದಲ್ಲಿ ಒಂದು ನುಡಿ ಮನನೀಯವಾದದ್ದು: “ನನು ಚ ಭೋಃ, ಅಕುಪಿತಾ ಅಪಿ ದೃಶ್ಯಂತೇ ದಾರಕಾನ್ ಭರ್ತ್ಸಯಮಾನಾಃ. ಅಂತತಸ್ತೇ ತಾಂ ಶರೀರಾಕೃತಂ ಕುರ್ವಂತಿ ಯಾ ಕುಪಿತಸ್ಯ ಭವತಿ” – ಕೋಪಗೊಳ್ಳದಿದ್ದರೂ ಬಾಲಕರನ್ನು ಗದರಿಸುತ್ತಾರೆ. ಕೋಪಗೊಂಡವರಂತೆ ತೋರಿಸಿಕೊಳ್ಳುತ್ತಾರೆ.
ಸಾಮೃತೈಃ ಪಾಣಿಭಿರ್ಘ್ನಂತಿ ಗುರವೋ ನ ವಿಷೋಕ್ಷಿತೈಃ |
ಲಾಲನಾಶ್ರಯಿಣೋ ದೋಷಾಸ್ತಾಡನಾಶ್ರಯಿಣೋ ಗುಣಾಃ ||
ಎನ್ನುತ್ತಾನೆ ಪತಂಜಲಿ - “ಗುರುಗಳು ಕೈಗೆ ಅಮೃತವನ್ನು ಹಚ್ಚಿಕೊಂಡು ಹೊಡೆಯುತ್ತಾರೆ. ವಿಷವನ್ನು ಹಚ್ಚಿಕೊಂಡಲ್ಲ. ಶಿಷ್ಯರನ್ನು ಲಾಲಿಸುವುದರಲ್ಲಿ ದೋಷವುಂಟು, ತಾಡನೆಯಲ್ಲಿ ಗುಣವುಂಟು”.
ಉಪಾಧ್ಯಾಯರೆಲ್ಲರೂ ಶಾಂತ ಸ್ವಭಾವದವರಾಗಿದ್ದರೆಂದು ಹೇಳಲಾಗುವುದಿಲ್ಲ. ಕಠೋರ ಸ್ವಭಾವದವರೂ ಇದ್ದರು. ಸದಾ ಗದರಿಸುತ್ತ ಹೊಡೆಯುತ್ತ ಇರುವ ಅಧ್ಯಾಪಕ ‘ದಾರುಣಾಧ್ಯಾಪಕಃ’. ಒರಟು ಸ್ವಭಾವದ ಉಪಾಧ್ಯಾಯ ‘ಜಟಿಲತಾಧ್ಯಾಪಕ’! ಅವನಿಗೆ ತಕ್ಕವನಾದ ಒರಟು ಶಿಷ್ಯ ‘ಜಟಿಲಕಾಭಿರೂಪ’. ಒಳ್ಳೆಯ ಉಪಾಧ್ಯಾಯನನ್ನು ‘ಶೋಭನಾಧ್ಯಾಪಕ’ ಎಂದು ಶ್ಲಾಘಿಸುತ್ತಿದ್ದರು.