೩
ಉತ್ಪ್ರೇಕ್ಷೆಯು ಪ್ರಾಥಮಿಕಾಲಂಕಾರಗಳ ಪೈಕಿ ತುಂಬ ಪರಿಣಾಮಕಾರಿ. ಇದು ಉಪಮೆಯಷ್ಟು ಸರಳವೂ ಅಲ್ಲ, ಅತಿಶಯೋಕ್ತಿಯಷ್ಟು ಅಬ್ಬರದ್ದೂ ಅಲ್ಲ. ಸಂಭವನೀಯತೆಯೇ ಈ ಅಲಂಕಾರದ ಜೀವಾಳ. ಅತಿಶಯೋಕ್ತಿಯಾದರೋ ಅಧ್ಯವಸಾಯಮೂಲದ್ದಾದ ಕಾರಣ ಸಂಭವನೀಯತೆಯನ್ನೂ ಮೀರಿ ಕಲ್ಪಿತವನ್ನು ಕೂಡ ವಾಸ್ತವವೆಂಬಂತೆ ಪ್ರತಿಪಾದಿಸುತ್ತದೆ. ಆದರೆ ಉತ್ಪ್ರೇಕ್ಷೆಯು ಕೆಲಮಟ್ಟಿಗೆ ಸಾದೃಶ್ಯವನ್ನೇ ನಚ್ಚುವ ಕಾರಣ ಇದೊಂದು ಬಗೆಯಲ್ಲಿ ಉಪಮೆ ಮತ್ತು ಅತಿಶಯಗಳ ನಡುವಣ ಸುವರ್ಣಸೇತುವೆಯಾಗಿ ವ್ಯವಹರಿಸುತ್ತದೆ. ವಾಲ್ಮೀಕಿಮುನಿಗಳಲ್ಲಿ ಉತ್ಪ್ರೇಕ್ಷೆಗಳಿಗೆ ಕೊರತೆಯಿಲ್ಲ. ಹೇಳಿ ಕೇಳಿ ಎತ್ತರದ ನೋಟವೇ “ಉತ್ಪ್ರೇಕ್ಷೆ”(ಉತ್+ಪ್ರೇಕ್ಷೆ)ಯಾದ ಕಾರಣ ಈ ದರ್ಶನವು ಅವರಲ್ಲಿ ಸಹಜವಾಗಿ ಮೈಗೂಡಿದೆ.
ಅಯೋಧ್ಯಾಕಾಂಡದಲ್ಲಿ ವಾಸ್ತವಜಗತ್ತಿನ ಏರಿಳಿತಗಳೇ ಪ್ರಧಾನವಾದ ಕಾರಣ ಇಲ್ಲಿ ಉತ್ಪ್ರೇಕ್ಷೆಗೆ ಹೆಚ್ಚಿನ ಎಡೆಯಿಲ್ಲ. ಆದರೂ ಎದ್ದುತೋರುವ ಒಂದೆರಡು ಮಾದರಿಗಳನ್ನು ಗಮನಿಸಲೇಬೇಕು.
ಪಟ್ಟಾಭಿಷೇಕಕ್ಕೆ ಸಜ್ಜಾಗುತ್ತಿರುವ ರಾಮನನ್ನು ತಂದೆ ದಶರಥನು ಕಾಣುವ ಪರಿ ಹೃದಯಂಗಮ:
ತಂ ಪಶ್ಯಮಾನೋ ನೃಪತಿಸ್ತುತೋಷ ಪ್ರಿಯಮಾತ್ಮಜಮ್ |
ಅಲಂಕಾರಮಿವಾತ್ಮಾನಮಾದರ್ಶತಲಸಂಸ್ಥಿತಮ್ || (೨.೩.೩೮)
ಇಲ್ಲಿರುವುದು ತನ್ನ ಮುದ್ದಿನ ಮಗ ಶ್ರೀರಾಮನನ್ನು ಕಂಡ ದಶರಥನ ಆನಂದಚಿತ್ರಣ. ಅವನಿಗೆ ಮಗನನ್ನು ಕಂಡಾಗ ಸಾಲಂಕೃತನಾದ ತಾನೇ ಕನ್ನಡಿಯಲ್ಲಿ ಪ್ರತಿಬಿಂಬಿಸಿದಂತೆ ತೋರುತ್ತಿತ್ತು. “ಆತ್ಮಾ ವೈ ಪುತ್ರನಾಮಾಸಿ” ಎಂಬ ಸೂಕ್ತಿಗೆ ಇದಕ್ಕಿಂತ ಸಮುಚಿತನಿದರ್ಶನ ಬೇಕೆ?
ರಾಮನು ಕಾಡಿಗೆ ಹೊರಟಾಗ ತಮಸಾನದಿಯು ಆತನನ್ನು ಅಕ್ಕರೆಯಿಂದ ತಡೆಯುವಂತೆ ಅಡ್ಡವಾಯಿತೆಂದು ಆದಿಕವಿಯು ವರ್ಣಿಸಿದ ಪರಿ ಅನ್ಯಾದೃಶ:
ದದೃಶೇ ತಮಸಾ ತತ್ರ ವಾರಯಂತೀವ ರಾಘವಮ್ | (೨.೪೫.೩೨)
ಇದೇ ಭಾವವನ್ನು ಮುಂದೆ ಕಾಳಿದಾಸನು ತನ್ನ ರಘುವಂಶದಲ್ಲಿ ಬಳಸಿಕೊಳ್ಳುತ್ತಾನೆ. ಸೀತೆಯನ್ನು ಪರಿತ್ಯಜಿಸಲು ಲಕ್ಷ್ಮಣನು ರಥದಲ್ಲಿ ಅವಳನ್ನು ಕೊಂಡೊಯ್ಯುತ್ತಿದ್ದಾಗ ಹಾದಿಯಲ್ಲೆದುರಾದ ಗಂಗೆಯು ಈ ದುಷ್ಕಾರ್ಯವು ಸಲ್ಲದೆಂದು ಅಲೆಗೈಗಳಿಂದ ತಡೆಯುವಂತಿತ್ತೆಂದು ಕವಿಯು ಮಾಡಿದ ಉತ್ಪ್ರೇಕ್ಷೆಯು ವಾಲ್ಮೀಕಿಮುನಿಗಳ ಪ್ರಸಾದವೇ ಆಗಿದೆ.
ಅಣ್ಣನನ್ನು ಅರಸಿ ಬರುತ್ತಿದ್ದ ಭರತನನ್ನು ಶಂಕಿಸಿದ ಲಕ್ಷ್ಮಣನಿಗೆ ರಾಮನು ತಿಳಿಯಹೇಳಿದಾಗ ಸೌಮಿತ್ರಿಯು ತನ್ನ ವರ್ತನೆಗೆ ತಾನೇ ಲಜ್ಜಿಸಿ ತನ್ನೊಳಗೆ ಹುದುಗಿಹೋದಂತಾದನಂತೆ!
ಲಕ್ಷ್ಮಣಃ ಪ್ರವಿವೇಶೇವ ಸ್ವಾನಿ ಗಾತ್ರಾಣಿ ಲಜ್ಜಯಾ | (೨.೯೭.೧೯)
ಇದಕ್ಕಿಂತಲೂ ಚೆನ್ನಾಗಿ ಪಶ್ಚಾತ್ತಾಪವನ್ನು ಚಿತ್ರಿಸಲು ಸಾಧ್ಯವಿಲ್ಲ. ಹೀಗೆ ಮಹರ್ಷಿಗಳ ವಾಕ್ಕು ಸರ್ವಭಾವಭಣಿತಿಸಮರ್ಥ.
ಅರಣ್ಯಕಾಂಡದಲ್ಲಿ ಕೂಡ ಉತ್ಪ್ರೇಕ್ಷೆಗಳಿಗೆ ಬರವಿಲ್ಲ. ಅಲ್ಲಿಯ ಎರಡು ಪರಿಣಾಮರಮಣೀಯೋತ್ಪ್ರೇಕ್ಷೆಗಳು ಹೀಗಿವೆ:
ಅವಶ್ಯಾಯತಮೋನದ್ಧಾ ನೀಹಾರತಮಸಾವೃತಾಃ |
ಪ್ರಸುಪ್ತಾ ಇವ ಲಕ್ಷ್ಯಂತೇ ವಿಪುಷ್ಪಾ ವನರಾಜಯಃ || (೩.೧೬.೨೩)
ಹೇಮಂತಸಮಯದಲ್ಲಿ ಸಮಸ್ತಲೋಕವೂ ಹಿಮವೆಂಬ ತಮಸ್ಸಿನಲ್ಲಿ ಮುಳುಗಿದ್ದಾಗ ಗಿಡ-ಮರಗಳಿಗೆ ಹೂಗಳಾದರೂ ಹೇಗೆ? ಹೀಗೆ ಚಳಿಗಾಲವೆಂಬ ಇರುಳಿನಲ್ಲಿ ವನವೆಲ್ಲ ಹೂಗಣ್ಣುಗಳನ್ನು ಮುಚ್ಚಿ ಮಲಗಿರುವಂತೆ ತೋರುತ್ತದೆ. ಆದಿಕವಿಗಳು ಅದ್ವಿತೀಯಕವಿಗಳೂ ಹೌದೆಂದು ಸಾಬೀತುಮಾಡಲು ಈ ಒಂದು ಉತ್ಪ್ರೇಕ್ಷೆ ಸಾಕು.
ಶರೈರಾವಾರಿತಸ್ತಸ್ಯ ಸಂಯುಗೇ ಪತಗೇಶ್ವರಃ |
ಕುಲಾಯಮುಪಸಂಪ್ರಾಪ್ತಃ ಪಕ್ಷೀವ ಪ್ರಬಭೌ ತದಾ || (೩.೫೧.೧೩)
ಸೀತೆಯ ರಕ್ಷಣೆಗಾಗಿ ಸೆಣೆಸಿದ ಜಟಾಯುವು ರಾವಣನ ಬಾಣಪಂಜರದಲ್ಲಿ ಸಿಲುಕಿದಾಗ ಗೂಡಿನಲ್ಲಿ ಸೀಮಿತವಾದ ಬಡಹಕ್ಕಿಯಂತೆ ಕಂಡನೆಂದು ಮಹರ್ಷಿಗಳು ಉತ್ಪ್ರೇಕ್ಷಿಸುತ್ತಾರೆ. ವಿಶೇಷತಃ ನಿಶಿತಶರಗಳೆಂಬ ಹುಲ್ಲುಕಡ್ಡಿಗಳ ಮೂಲಕ ಅಸ್ತವ್ಯಸ್ತವಾಗಿ ನಿರ್ಮಿತವಾದ ಗೂಡನ್ನು ಕಲ್ಪಿಸಿಕೊಂಡಾಗ ಈ ಚಿತ್ರಣದ ಸಾರ್ಥಕ್ಯ ಒಡಮೂಡದಿರದು. ಜೊತೆಗೆ ರಾವಣನ ಬಾಣಗಳು ಜಟಾಯುವಿನಂಥ ವಿಹಗೇಂದ್ರನಿಗೆ ಗೂಡಿನ ಹುಲ್ಲುಕಡ್ಡಿಗಳಷ್ಟೇ ನಿರುಪದ್ರವಿಗಳೆಂಬ ಧ್ವನಿಯೂ ಇಲ್ಲಿದೆ.
ಕಿಷ್ಕಿಂಧಾಕಾಂಡವನ್ನಂತೂ ಉತ್ಪ್ರೇಕ್ಷಾಲಂಕಾರಗಳ ತವನಿಧಿಯೆನ್ನಬೇಕು. ಇಲ್ಲಿ ಹೆಜ್ಜೆಹೆಜ್ಜೆಗೆ ಸುಂದರವಾದ ಉತ್ಪ್ರೇಕ್ಷೆಗಳು ತಾಂಡವಿಸುತ್ತವೆ. ಉತ್ಪ್ರೇಕ್ಷಾಲಂಕಾರವು ವರ್ಣನಾವ್ಯಾಪಾರದಲ್ಲಂತೂ ತನ್ನ ವಿಶ್ವರೂಪವನ್ನು ತೋರುವುದೆನ್ನಬೇಕು. ಅಂಥ ಕೆಲವು ಸಂದರ್ಭಗಳನ್ನು ಗಮನಿಸೋಣ. ಈ ಕಾಂಡದ ಮೊದಲಿಗೇ ಬರುವ ವಸಂತವರ್ಣನೆಯು ಶ್ರೀರಾಮನ ವಿಪ್ರಲಂಭಶೃಂಗಾರಕ್ಕೆ ಸಮರ್ಥವಾದ ಉದ್ದೀಪನವಿಭಾವವಾಗಿದೆ. ಅಲ್ಲಿಯ ಕೆಲವು ಸೊಲ್ಲುಗಳು ಹೀಗಿವೆ:
ಮತ್ತಕೋಕಿಲಸಂನಾದೈರ್ನರ್ತಯನ್ನಿವ ಪಾದಪಾನ್ |
ಶೈಲಕಂದರನಿಷ್ಕ್ರಾಂತಃ ಪ್ರಗೀತ ಇವ ಚಾನಿಲಃ || (೪.೧.೧೫)
ಅಮೀ ಸಂಸಕ್ತಶಾಖಾಗ್ರಾ ಗ್ರಥಿತಾ ಇವ ಪಾದಪಾಃ | (೪.೧.೧೬)
ಸ್ತಬಕೈಃ ಪವನೋತ್ಕ್ಷಿಪ್ತೈಸ್ತರ್ಜಯನ್ನಿವ ಮಾಂ ಸ್ಥಿತಃ | (೪.೧.೫೯)
ಪಾದಪಾತ್ಪಾದಪಂ ಗಚ್ಛನ್ ಶೈಲಾಚ್ಛೈಲಂ ವನಾದ್ವನಮ್ |
ವಾತಿ ನೈಕರಸಾಸ್ವಾದಸಂಮೋದಿತ ಇವಾನಿಲಃ || (೪.೧.೮೬)
ಪುಷ್ಪಮಾಸೇ ಹಿ ತರವಃ ಸಂಘರ್ಷಾದಿವ ಪುಷ್ಪಿತಾಃ | (೪.೧.೯೨)
ಆ ಮಧುಮಾಸದ ಮಾರುತವು ಕೋಗಿಲೆಗಳ ಹಾಡಿಗೆ ಮರ-ಗಿಡಗಳನ್ನು ಕುಣಿಸುವಂತಿತ್ತು, ಗಿರಿ-ಕಂದರಗಳಲ್ಲಿ ಸುತ್ತಿ ಸುಳಿದು ಬರುವಾಗ ತಾನೇ ಹಾಡುವಂತಿತ್ತು. ಈ ಕುಸುಮಸಮಯದಲ್ಲಿ ಕೊನರಿದ ತರು-ಲತೆಗಳು ತಮ್ಮ ಕೊಂಬೆ-ರೆಂಬೆಗಳನ್ನು ಅದೆಷ್ಟು ಚೆನ್ನಾಗಿ ಹೆಣೆದುಕೊಂಡಿದ್ದವೆಂದರೆ ಇಡಿಯ ವನರಾಜಿಯೇ ಒತ್ತಾಗಿ ಪೋಣಿಸಿದಂತಿತ್ತು. ಇಂಥ ವಸಂತವೈಭವದ ವಿಪಿನಸ್ಥಲಿಯು ತನ್ನ ಕೊಂಬೆ-ರೆಂಬೆಗಳ ಬೆರಳುಗಳನ್ನೆತ್ತಿ ಗಾಳಿಯ ಬೀಸಿನ ಮೂಲಕ ರಾಮನನ್ನೇ ಗದರಿಸುವಂತಿತ್ತು. ಮರದಿಂದ ಮರಕ್ಕೆ, ಬೆಟ್ಟದಿಂದ ಬೆಟ್ಟಕ್ಕೆ, ಕಾಡಿನಿಂದ ಕಾಡಿಗೆ ಸುಳಿದಾಡುತ್ತಿದ್ದ ತಂಗಾಳಿಯು ಅನೇಕರಸಗಳನ್ನು ಆಸ್ವಾದಿಸಿ ನಲಿಯುವ ರಸಿಕನಂತಿತ್ತು. ಈ ಸುಗ್ಗಿಯ ಸಂದರ್ಭದಲ್ಲಿ ಬನದ ತರು-ಲತೆಗಳೆಲ್ಲ ಪರಸ್ಪರಸ್ಪರ್ಧೆಯಿಂದ ಮಲರಾಂತು ಮೆರೆವಂತೆ ತೋರುತ್ತಿತ್ತು.
ಇದಕ್ಕಿಂತಲೂ ಉಜ್ಜ್ವಲವಾಗಿ, ನೈಜವಾಗಿ ವಸಂತದ ಪ್ರತೀತಿಯನ್ನು ಯಾವ ಕವಿ ತಾನೆ ಕಟ್ಟಿಕೊಟ್ಟಾನು?
ಮಳೆಗಾಲದ ಬಣ್ಣನೆಯಲ್ಲಂತೂ ಉತ್ಪ್ರೇಕ್ಷೆಗಳು ಸಾಲುಗಟ್ಟಿವೆ. ವರ್ಷಾವಿಜೃಂಭಣೆಗೆ ಉತ್ಪ್ರೇಕ್ಷೆಯಂಥ ಪ್ರಖರಾಲಂಕಾರವು ಸಾರ್ಥಕವಿಭೂಷಣ. ಇಲ್ಲಿಯ ಕೆಲವು ಸೊಲ್ಲುಗಳು ಹೀಗಿವೆ:
ಸ್ನಿಗ್ಧೈರಭ್ರಪಟಚ್ಛೇದೈರ್ಬದ್ಧವ್ರಣಮಿವಾಂಬರಮ್ | (೪.೨೮.೫)
ಸಂಧ್ಯಾಕಾಲದಲ್ಲಿ ಆಗಸವನ್ನು ಕವಿದ ಮಳೆಮುಗಿಲುಗಳು ಬಾನಿಗಾದ ಗಾಯಗಳಿಗೆ ಕಟ್ಟಿದ ಪಟ್ಟಿಗಳಂತೆ ತೋರುತ್ತಿದ್ದವಂತೆ! ಈ ಉತ್ಪ್ರೇಕ್ಷೆಯ ಹೊಸತನ ಇಂದಿಗೂ ಹಸುರಾಗಿದೆ. ರತ್ನಾಕರ, ಶಿವಸ್ವಾಮಿ ಮುಂತಾದ ಮುಂದಿನ ವಿದ್ವತ್ಕವಿಗಳೆಲ್ಲ ಈ ಕಲ್ಪನೆಯನ್ನು ತಮ್ಮ ಕೃತಿಗಳಲ್ಲಿ ಧಾರಾಳವಾಗಿ ಬಳಸಿಕೊಂಡಿದ್ದಾರೆ.
ಮಂದಮಾರುತನಿಶ್ಶ್ವಾಸಂ ಸಂಧ್ಯಾಚಂದನರಂಜಿತಮ್ |
ಆಪಾಂಡುಜಲದಂ ಭಾತಿ ಕಾಮಾತುರಮಿವಾಂಬರಮ್ || (೪.೨೮.೬)
ಆಗಸವು ಮಂದಮಾರುತವೆಂಬ ನೆಮ್ಮದಿಯ ನಿಟ್ಟುಸಿರಿನಿಂದ, ಸಂಜೆಗೆಂಪಿನ ರಕ್ತಚಂದನಲೇಪನದಿಂದ, ಬೆಳ್ಮುಗಿಲಿನ ಶುಭ್ರವಸ್ತ್ರದಿಂದ ಕಂಗೊಳಿಸುತ್ತಾ ಕಾಮಾತುರನಂತೆ ಭಾಸವಾಗಿದೆಯೆಂಬ ಈ ಉತ್ಪ್ರೇಕ್ಷೆಯು ಮೂರು ಪಾದಗಳಲ್ಲಿ ರೂಪಕದ ಬೆಂಬಲವನ್ನು ಪಡೆದು, ಮೃದುಮಧುರವಾದ ದಂತ್ಯಾಕ್ಷರಗಳ ಹಾಗೂ ಅನುನಾಸಿಕಗಳ ಅಂದವನ್ನೂ ಗಳಿಸಿ ಮತ್ತಷ್ಟು ಸೊಗಸಾಗಿದೆ. ಇಂಥ ಚಿತ್ರಗಳನ್ನು ಕೊಡುವಲ್ಲಿ ಮಹರ್ಷಿಗಳ ಲೇಖನಿ ಗಳಿಸಿದ ಸಿದ್ಧಿ ಅನ್ಯಾದೃಶ.
ಮೇಘಕೃಷ್ಣಾಜಿನಧರಾ ಧಾರಾಯಜ್ಞೋಪವೀತಿನಃ |
ಮಾರುತಾಪೂರಿತಗುಹಾಃ ಪ್ರಾಧೀತಾ ಇವ ಪರ್ವತಾಃ || (೪.೨೮.೧೦)
ಕಾರ್ಮುಗಿಲೆಂಬ ಕೃಷ್ಣಾಜಿನವನ್ನು ಹೊದ್ದು, ಬೆಳ್ಳಗೆ ಭೋರ್ಗರೆದು ಸುರಿಯುವ ಅಬ್ಬಿಗಳೆಂಬ ಯಜ್ಞೋಪವೀತಗಳನ್ನು ಧರಿಸಿ, ಪರ್ವತವಟುಗಳು ತಮ್ಮ ಗುಹಾವದನಗಳಲ್ಲಿ ಸುಳಿದಾಡುವ ಕಾರ್ಗಾಳಿಯ ಮೂಲಕ ವೇದಾಧ್ಯಯನವನ್ನು ಮಾಡುವಂತಿದೆ! ಈ ಉತ್ಪ್ರೇಕ್ಷೆಯಂತೂ ಸಂಸ್ಕೃತಸಾಹಿತ್ಯದ ಮಾತ್ರವಲ್ಲ, ಭಾರತೀಯಸಾಹಿತ್ಯದ ಸೀಮೆಯಲ್ಲಿಯೇ ನಿರುಪಮವಾದ ಆರ್ಷೇಯಚಿತ್ರಣ. ಈ ಶ್ಲೋಕದ ಪೂರ್ವಾರ್ಧವು ರೂಪಕಾಲಂಕಾರದಿಂದ ಕೂಡಿದ್ದರೂ ತಾತ್ಪರ್ಯದಿಂದ ಉತ್ಪ್ರೇಕ್ಷೆಯನ್ನೇ ಪ್ರಧಾನವಾಗಿ ಪ್ರತಿನಿಧಿಸುವುದು ಶಾಸ್ತ್ರಜ್ಞರಿಗೆ ಸುವೇದ್ಯ.
ಕಶಾಭಿರಿವ ಹೈಮೀಭಿರ್ವಿದ್ಯುದ್ಭಿರಭಿತಾಡಿತಮ್ |
ಅಂತಸ್ತನಿತನಿರ್ಘೋಷಂ ಸವೇದನಮಿವಾಂಬರಮ್ || (೪.೨೮.೧೧)
ತನಿಮಿಂಚುಗಳೆಂಬ ಹೊನ್ನಚಾವಟಿಗಳಿಂದ ಬಡಿಯಲ್ಪಟ್ಟ ಕಾರ್ಮುಗಿಲು ಗುಡುಗಿದಾಗಲೆಲ್ಲ ಅದು ನೋವಿಗೆ ಚೀರಿಡುವಂತಿತ್ತು! ಈ ಉಕ್ತಿವೈಚಿತ್ರ್ಯವು ಪ್ರಕೃತಿಯನ್ನೇ ಜೀವಂತವಾಗಿ ಪರಿಭಾವಿಸದೆ ಸಿದ್ಧಿಸದ ಸೌಂದರ್ಯ. ಇಂಥ ಚೆಲುವಿಗೆ ಕಾಳಿದಾಸನಂಥವನೂ ಮರುಳಾಗಿರುವುದು ಆತನ ಮೊದಲ ಕಾವ್ಯದಲ್ಲಿಯೇ ದೃಷ್ಟಚರ.
ಮೇಘಾಭಿರಾಮಾ ಪರಿಸಂಪತಂತೀ
ಸಂಮೋದಿತಾ ಭಾತಿ ಬಲಾಕಪಂಕ್ತಿಃ |
ವಾತಾವಧೂತಾ ವರಪೌಂಡರೀಕೀ
ಲಂಬೇವ ಮಾಲಾ ರಚಿತಾಂಬರಸ್ಯ || (೪.೨೮.೨೩)
ಮಳೆಮುಗಿಲಿನೆಡೆ ಮುದದಿಂದ ಹಾರುತ್ತಿರುವ ಕೊಕ್ಕರೆಸಾಲು ಬಾನ್ದೇವಿಯು ತಳೆದ, ಮಳೆಗಾಳಿಗೆ ತೊನೆವ ಬೆಳ್ದಾವರೆಗಳ ಮಾಲೆಯೋ ಎಂಬಂತಿತ್ತಂತೆ! ಉಪಮೆಯೋ ಎಂಬಷ್ಟು ನೈಜವಾಗಿರುವ ಈ ಉತ್ಪ್ರೇಕ್ಷೆಯ ಮಂದ್ರಶ್ರುತಿಗಾನವು ನಿಜಕ್ಕೂ ಅಭಿರಾಮ.
ಬಾಲೇಂದ್ರಗೋಪಾಂತರಚಿತ್ರಿತೇನ
ವಿಭಾತಿ ಭೂಮಿರ್ನವಶಾದ್ವಲೇನ |
ಗಾತ್ರಾನುವೃತ್ತೇನ ಶುಕಪ್ರಭೇಣ
ನಾರೀವ ಲಾಕ್ಷೋಕ್ಷಿತಕಂಬಲೇನ || (೪.೨೮.೨೪)
ಕೆಂಬಣ್ಣದ ಇಂದ್ರಗೋಪಕ್ರಿಮಿಗಳ ಚಿತ್ತಾರದಿಂದ ಚೆಲುವಾದ ಹುಲ್ಲಿನ ಹಾಸು ಅರಗಿನ ಕಸೂತಿಯಿಂದ ಸೊಗಯಿಸಿದ ಹಸುರುಪತ್ತಲವನ್ನು ತಿರೆತಾಯಿಗೆ ತೊಡಿಸಿದಂತಿತ್ತು! ಈ ಉತ್ಪ್ರೇಕ್ಷೆಯ ಅಂದ ಅಸಮಾನ. ಭೂದೇವಿಗೆ ತಾಯ್ತನವು ತುಂಬಿ ಬರುವುದು ಮಳೆಗಾಲದಲ್ಲಿಯೇ. ನಮ್ಮಲ್ಲಿ ಗರ್ಭವತಿಗೆ ತುಂಬುಹಸುರಿನ ಸೀರೆಯುಡಿಸುವುದು ಚಿರಸಿದ್ಧಸಂಪ್ರದಾಯ. ಇಂಥ ಜಾನಪದಜೀವನಸೌಂದರ್ಯವನ್ನು ನಮ್ಮ ನಮ್ಮ ಸಂಸ್ಕೃತಿಯ ಸಂಸ್ಕಾರಾನುಸಾರ ಆದಿಕವಿಯಲ್ಲಿ ಅನುಭವಿಸಬಹುದು.
ಅಂಗಾರಚೂರ್ಣೋತ್ಕರಸಂನಿಕಾಶೈಃ
ಫಲೈಃ ಸುಪರ್ಯಾಪ್ತರಸೈಃ ಸಮೃದ್ಧೈಃ |
ಜಂಬೂದ್ರುಮಾಣಾಂ ಪ್ರವಿಭಾಂತಿ ಶಾಖಾ
ನಿಲೀಯಮಾನಾ ಇವ ಷಟ್ಪದೌಘೈಃ || (೪.೨೮.೩೧)
ಇದ್ದಿಲ ತುಂಡುಗಳನ್ನು ಅಂಟಿಸಿದಂತೆ ನೇರಿಳೆಮರಗಳಲ್ಲಿ ತನಿವಣ್ಣುಗಳು ತೋರುತ್ತಿವೆ. ಅವು ಆ ಮರಗಳಿಗೆ ಮುತ್ತಿಕೊಂಡ ದುಂಬಿಗಳೋ ಎಂಬಂತೆ ಭಾಸವಾಗುತ್ತಿವೆ! ಇದಂತೂ ಅತ್ಯದ್ಭುತಕಲ್ಪನೆ. ಈ ಪದ್ಯದ ಪೂರ್ವಾರ್ಧದಲ್ಲಿ ಉಪಮೆಯಿದ್ದರೂ ಪ್ರಧಾನವ್ಯಪದೇಶವು ಉತ್ಪ್ರೇಕ್ಷೆಯಲ್ಲಿಯೇ. ಇಂಥ ಕಲ್ಪನೆಗಳು ಮುಂದೆ ಕಾವ್ಯ-ನಾಟಕಗಳಲ್ಲಿ ಕೋಡಿವರಿದದ್ದನ್ನು ಅಸಂಖ್ಯಸುಭಾಷಿತಕೋಶಗಳ ಮೂಲಕ ಮನಗಾಣಬಹುದು.
ಕ್ವಚಿತ್ಪ್ರಗೀತಾ ಇವಾ ಷಟ್ಪದೌಘೈಃ
ಕ್ವಚಿತ್ಪ್ರನೃತ್ತಾ ಇವ ನೀಲಕಂಠೈಃ |
ಕ್ವಚಿತ್ಪ್ರಮತ್ತಾ ಇವ ವಾರಣೇಂದ್ರೈ-
ರ್ವಿಭಾಂತ್ಯನೇಕಾಶ್ರಯಿಣೋ ವನಾಂತಾಃ || (೪.೨೮.೩೩)
ಮಳೆಗಾಲದ ವಿಪಿನಪರಿಸರವು ಅಲ್ಲಲ್ಲಿಯ ಭ್ರಮರಝಂಕಾರದಿಂದ ಹಾಡುತ್ತಿದ್ದಂತೆ, ಅಲ್ಲಲ್ಲಿಯ ಮತ್ತಮಯೂರಗಳ ಚಲನೆಯಿಂದ ನೃತ್ತಕ್ಕೆ ಸಜ್ಜಾದಂತೆ, ಅಲ್ಲಲ್ಲಿಯ ಗಂಧಸಿಂಧುರಗಳ ಉನ್ಮತ್ತವರ್ತನೆಯಿಂದ ಮದಿಸಿದಂತೆ ಪರಿಪರಿಯಾಗಿ ತೋರುತ್ತಿತ್ತು! ಇಲ್ಲಿ ಇಡಿಯ ಕಾಡೇ ಮಳೆಯೆಂಬ ಮದ್ಯವನ್ನು ಕುಡಿದು ಅಮಲೇರಿದಂತೆ ಕಲ್ಪಿಸಿದ ಚಿತ್ರಣವು ಹೃದಯಂಗಮ.
ಕದಂಬಸರ್ಜಾರ್ಜುನಕಂದಲಾಢ್ಯಾ
ವನಾಂತಭೂಮಿರ್ನವವಾರಿಪೂರ್ಣಾ |
ಮಯೂರಮತ್ತಾಭಿರುತಪ್ರನೃತ್ತೈ-
ರಾಪಾನಭೂಮಿಪ್ರತಿಮಾ ವಿಭಾತಿ || (೪.೨೮.೩೪)
ಕದಂಬ, ಸರ್ಜ, ಬಿಳಿಮತ್ತಿ, ನೀರುಬಾಳೆ ಮುಂತಾದ (ಮದ್ಯವನ್ನು ತಯಾರಿಸಲು ಬಳಕೆಯಾಗುವ) ಮರ-ಗಿಡಗಳಿಂದ ಕೂಡಿ, ಮಾದಕವಾಗಿ ಕೇಕೆ ಹಾಕಿ ಕುಣಿಯುವ ನವಿಲುಗಳಿಂದ ಒಡಗೂಡಿ, ಇಡಿಯ ವನಭೂಮಿಯೇ ಹೆಂಡದಂಗಡಿಯಾಗಿ ತೋರುತ್ತಿತ್ತು! ಇಂಥ ಅವೆಷ್ಟೋ ಚಿತ್ರಗಳ ಮೂಲಕ ಆದಿಕವಿಗಳು ತಮ್ಮ ಮಡಿವಂತಿಕೆಯ ಸೊಲ್ಲೂ ಇಲ್ಲದ ಕಲ್ಪಕತೆಯನ್ನು ಮೆರೆದಿದ್ದಾರೆ; ನಿಜವಾದ ಕವಿಗೆ ಬೇಕಾದ ಹೃದ್ವೈಶಾಲ್ಯವನ್ನು ನಿರೂಪಿಸಿದ್ದಾರೆ.
ಷಡ್ಪಾದತಂತ್ರೀಮಧುರಾಭಿಧಾನಂ
ಪ್ಲವಂಗಮೋದೀರಿತಕಂಠತಾಲಮ್ |
ಆವಿಷ್ಕೃತಂ ಮೇಘಮೃದಂಗನಾದೈ-
ರ್ವನೇಷು ಸಂಗೀತಮಿವ ಪ್ರವೃತ್ತಮ್ || (೪.೨೮.೩೬)
ತುಂಬಿಗಳ ಝಂಕಾರವೆಂಬ ತಂತ್ರೀವಾದ್ಯಗಳಿಂದ, ಕಪ್ಪೆಗಳ ವಟಗುಟ್ಟುವಿಕೆಯೆಂಬ ಶುಷ್ಕಾಕ್ಷರಪಾಠದಿಂದ (ಇದನ್ನೇ ಸಮಸಾಮಯಿಕಸಂಗೀತದಲ್ಲಿ “ಜತಿ” ಅಥವಾ “ಸೊಲ್ಲುಕಟ್ಟು” ಎನ್ನುತ್ತಾರೆ), ಮೊಳಗುವ ಮುಗಿಲುಗಳ ಮೃದಂಗನಾದದಿಂದ ಕಾಡುಗಳಲ್ಲಿ ವಾದ್ಯಗೋಷ್ಠಿಯ ಸಂಗೀತಕಾರ್ಯಕ್ರಮವೇ ಪ್ರವರ್ತಿಸಿದಂತಿತ್ತು! ಇದು ಆದಿಕವಿಗಳ ಕಲಾಭಿಜ್ಞತೆಗೂ ಸಾಕ್ಷಿ.
ಶರತ್ಕಾಲದ ವರ್ಣನೆಯಲ್ಲಿಯೂ ವಾಲ್ಮೀಕಿಮುನಿಗಳ ಉತ್ಪ್ರೇಕ್ಷಾದೀಕ್ಷೆಯು ಮುಂದುವರೆದಿದೆ. ಅಲ್ಲಿಯ ಒಂದು ಶ್ಲೋಕ ಉಲ್ಲೇಖನೀಯ:
ಅಭಿವೃಷ್ಟಾ ಮಹಾಮೇಘೈರ್ನಿರ್ಮಲಾಶ್ಚಿತ್ರಸಾನವಃ |
ಅನುಲಿಪ್ತಾ ಇವಾಭಾಂತಿ ಗಿರಯಶ್ಚಂದ್ರರಶ್ಮಿಭಿಃ || (೪.೩೦.೨೭)
ಮಳೆಗಾಲದಲ್ಲಿ ಮಹಾಮಜ್ಜನವನ್ನು ಮಾಡಿದ ಪರ್ವತಪ್ರವರಗಳು ಇದೀಗ ಶರತ್ಕಾಲದ ನಿರ್ಮಲೇಂದುಕಾಂತಿಯಲ್ಲಿ ಚಂದನಲೇಪನವನ್ನು ಮಾಡಿಕೊಂಡಂತಿದೆಯಂತೆ! ಬೆಳ್ದಿಂಗಳಿನಲ್ಲಿ ಬೆಟ್ಟ-ಬೆಟ್ಟಗಳೂ ಮಿಂದೆದ್ದ ಭವ್ಯದೃಶ್ಯವನ್ನು ಕಾಣದ ಮನಸ್ಸು ಇಂಥ ವರ್ಣನೆಯನ್ನು ಮಾಡಲಾರದು.
To be continued.