ವಾಲ್ಮೀಕಿಮುನಿಗಳು ಉತ್ಪ್ರೇಕ್ಷೆಯನ್ನು ಕಥಾನಿರೂಪಣೆಯ ಕಾಲದಲ್ಲಿಯೂ ಬಳಸಿಕೊಳ್ಳುತ್ತಾರೆ. ಅಷ್ಟೇಕೆ, ಸಾಮಾನ್ಯವಾದ ಸಂವಾದಗಳಲ್ಲಿಯೂ ಇದು ತಲೆದೋರುತ್ತದೆ. ತನ್ನ ಭುವನಕೋಶಪ್ರಜ್ಞೆಗೆ ಬೆರಗಾದ ರಾಮನನ್ನು ಕುರಿತು ಸುಗ್ರೀವನು ಹೇಳುತ್ತಾನೆ—ವಾಲಿಯು ಬೆನ್ನಟ್ಟಿ ಬರುವಾಗ ತಾನು ಜಗವನ್ನೆಲ್ಲ ಸುತ್ತಿದ ಕಾರಣ ಇಡಿಯ ಭೂಮಿಯೇ ಕೈಗನ್ನಡಿಯಂತೆ ಕಾಣುತ್ತಿತ್ತು, ಇಡಿಯ ಭೂಗೋಳವೇ ಅಲಾತಚಕ್ರದಂತೆ (ಕೊಳ್ಳಿಯೊಂದನ್ನು ಗಿರಗಿರನೆ ತಿರುಗಿಸಿದಾಗ ಮೂಡುವ ಬೆಳಕಿನ ವರ್ತುಲದಂತೆ) ತೋರುತ್ತಿತ್ತು, ಸಮುದ್ರವು ಹಸುವಿನ ಗೊರಸಿನ ಗುರುತಿನಲ್ಲಿ ಹಿಡಿಸುವ ನೀರಿನಷ್ಟಾಗಿತ್ತು:
ಆದರ್ಶತಲಸಂಕಾಶಾ ತತೋ ವೈ ಪೃಥಿವೀ ಮಯಾ |
ಅಲಾತಚಕ್ರಪ್ರತಿಮಾ ದೃಷ್ಟಾ ಗೋಷ್ಪದವತ್ತದಾ || (೪.೪೬.೧೩)
ವಾನರಯೂಥವು ಕಂಡ ಕಡಲು ಸಮಸ್ತಜಗತ್ತಿನ ಪ್ರತಿಬಿಂಬದಂತೆ ತೋರಿತಂತೆ!
ಕೃತ್ಸ್ನಂ ಲೋಕಸ್ಯ ಮಹತಃ ಪ್ರತಿಬಿಂಬಮಿವ ಸ್ಥಿತಮ್ | (೪.೬೪.೩)
ಹನೂಮಂತನು ಹಾರುವಾಗ ಆತನ ಅಬ್ಬರಕ್ಕಂಜಿದ ಹಾವುಗಳು ಮಹೇಂದ್ರಪರ್ವತದ ಬಿಲಗಳಿಂದ ಬುಸುಗುಟ್ಟುತ್ತ ಅರ್ಧಾರ್ಧವಾಗಿ ಹೊರಬಿದ್ದಾಗ ಇಡಿಯ ಬೆಟ್ಟವೇ ಪಟಪಟಿಸುವ ಪತಾಕೆಗಳಿಂದ ಸಿಂಗರಗೊಂಡಂತೆ ತೋರಿತಂತೆ!
ನಿಶ್ಶ್ವಸದ್ಭಿಸ್ತದಾರ್ತೈಸ್ತು ಭುಜಂಗೈರರ್ಧನಿಸ್ಸೃತೈಃ | (೪.೪೬.೪೮)
ಸಪತಾಕ ಇವಾಭಾತಿ ಸ ತದಾ ಧರಣೀಧರಃ || (೪.೪೬.೪೯)
ಇಲ್ಲಿಯ ಒಂದೊಂದು ಮಾತುಗಳೂ ವ್ಯಂಜಕ. ಆನಂದವರ್ಧನನು ಹೇಳುವ ಸಾರ್ಥಕಾಲಂಕಾರಗಳ ಸಮಸ್ತಲಕ್ಷಣಗಳೂ ಇಲ್ಲಿವೆ. ಹೆಚ್ಚೇನು, ವಾಲ್ಮೀಕಿಮುನಿಗಳ ಬಲುಮಟ್ಟಿನ ವಾಕ್ಯವಕ್ರತೆಯ ಪರಿಣಾಮವೇ ಇದು. ಇಲ್ಲಿ ಹೊಯ್ದಾಡುವ ಪತಾಕೆಗಳನ್ನು ಸೂಚಿಸುವ ಹಾವುಗಳ ಹೋಲಿಕೆಯಲ್ಲಿ ಪ್ರತ್ಯಂಗಸೌಂದರ್ಯವಿದೆ. ಆ ಹಾವುಗಳು ತಮ್ಮ ಬಿಲಗಳಿಂದ ಪೂರ್ಣವಾಗಿ ಹೊರಬಂದಿದ್ದಲ್ಲಿ ಈ ಹೋಲಿಕೆಗೆ ಔಚಿತ್ಯವಿರುತ್ತಿರಲಿಲ್ಲ. ಅವುಗಳ ಅರೆಬರೆಯಾದ ಹೊರಹೊಮ್ಮಿಕೆಯೇ ಇಲ್ಲಿಯ ಸೂಕ್ಷ್ಮಸ್ವಾರಸ್ಯ. ಇದಕ್ಕೆ ಬಣ್ಣಕಟ್ಟುವಂತೆ ಬಾವುಟಗಳ ಹೊಯ್ದಾಟವೂ ತನ್ಮೂಲಕ ಹೊಮ್ಮುವ ಸದ್ದೂ ಹಾವುಗಳ ಸಹಜವಾದ ಹೆಡೆಯಾಟ ಮತ್ತು ನುಲಿದಾಟಗಳಲ್ಲಿ ಬುಸುಗುಟ್ಟುವಿಕೆಯಲ್ಲಿ ಅನ್ಯಾದೃಶವಾಗಿ ಹೊಂದಿಬಂದಿವೆ. ಹೀಗೆ ಚಿಕ್ಕ ಶ್ಲೋಕವೊಂದರೊಳಗೆ ಪ್ರತಿಪದವನ್ನೂ ಧ್ವನನಶೀಲವಾಗಿ ಶಿಲ್ಪಿಸುವಲ್ಲಿ ಆದಿಕವಿ ತೋರಿದ ಕೌಶಲ ಮುಂದಿನ ಎಲ್ಲ ಕವಿಗಳಿಗೂ ನಿಲುಕಲಾಗದ ಎತ್ತರವೆನ್ನಬೇಕು.
ಸುಂದರಕಾಂಡವು ಕೂಡ ಉತ್ಪ್ರೇಕ್ಷಾವೀಚಿಗಳ ಆಕರವಾದ ಅಮೃತೋದಧಿ. ಆರಂಭದಲ್ಲಿಯೇ ಹನೂಮಂತನ ವ್ಯೋಮವ್ಯಾಪಕಲಂಘನವನ್ನು ವರ್ಣಿಸುವಾಗ ಆ ಭವ್ಯತೆಗೆ ಉತ್ಪ್ರೇಕ್ಷೆಗಳೇ ಶರಣ್ಯವೆಂದು ಆದಿಕವಿಗಳು ಭಾವಿಸಿದಂತಿದೆ. ಅಲ್ಲಿಯ ಒಂದೆರಡು ಸೂಕ್ತಿಗಳು ಸರ್ವಥಾ ಸ್ಮರಣೀಯ:
ಪಿಬನ್ನಿವ ಬಭೌ ಶ್ರೀಮಾನ್ ಸೋರ್ಮಿಮಾಲಂ ಮಹಾರ್ಣವಮ್ |
ಪಿಪಾಸುರಿವ ಚಾಕಾಶಂ ದದೃಶೇ ಸ ಮಹಾಕಪಿಃ || (೫.೧.೫೭)
ಹನೂಮಂತನು ಹಾರುತ್ತಿರುವಾಗ ತರಂಗಪರಿಪ್ಲುತವಾದ ಶರಧಿಯನ್ನೇ ಕುಡಿಯುವಂತೆ ಕಂಡನಂತೆ! ಆಗಸವನ್ನವನು ಎವೆಯಿಕ್ಕದೆ ನಿಟ್ಟಿಸುವಾಗ ಅದನ್ನೇ ಹೀರುತ್ತಿರುವನಂತೆ ತೋರಿದನಂತೆ! ಹೀಗಲ್ಲದೆ ವಾಯುಪುತ್ರನ ಅಮೇಯಗಾತ್ರ-ಪಾತ್ರಗಳ, ಕಾರ್ಯ-ಧೈರ್ಯಗಳ ಕಲ್ಪನೆ ನಮಗಾಗದು.
ಅವನ ವಾಯುವೇಗದ ಲಂಘನಕ್ಕೆ ಸಮುದ್ರದ ಮೇಲ್ಮೆಯು ತತ್ತರಿಸಿದ ಪರಿಯನ್ನೂ ಮುನಿಗಳು ಬಣ್ಣಿಸುತ್ತಾರೆ:
ಸ ತು ತಸ್ಯೋರುವೇಗೇನ ಸೋನ್ಮಾದ ಇವ ಲಕ್ಷ್ಯತೇ | (೫.೧.೬೮)
ಅಲೆಗೈಗಳಿಂದ ಹೊಯ್ದಾಡುತ್ತ, ನೊರೆಯನ್ನು ಕಕ್ಕುತ್ತ, ಮತ್ತೆ ಮತ್ತೆ ಮೊರೆಯುತ್ತ ತತ್ತರಿಸುವ ಬಡಗಡಲಿನ ಚಿತ್ರವು ನಮ್ಮೆದುರು ಸುಳಿದಾಗ ನಿಜಕ್ಕೂ ಅದು ಅಪಸ್ಮಾರಸಂತ್ರಸ್ತನಂತೆ ತೋರದಿರದು. ಇದನ್ನೇ ಮಾಘನು ತನ್ನ “ಶಿಶುಪಾಲವಧ”ಕಾವ್ಯದಲ್ಲಿ ಅನುವಾದಿಸಿಕೊಂಡಿದ್ದರೂ ಆದಿಕವಿಯ ಔಚಿತ್ಯವು ಅವನಿಗೆಟುಕದೆ ಅಲ್ಲಿ ಈ ಚಿತ್ರವು ಜುಗುಪ್ಸಾವಹವಾಗಿದೆ. ಮಹಾಕವಿಯಿಂದ ಅನಾಮತ್ತಾಗಿ ಉಕ್ತಿವೈಚಿತ್ರ್ಯಗಳನ್ನು ಲಪಟಾಯಿಸಬಹುದು; ಆದರೆ ಶಕ್ತಿಸಂಪೃಕ್ತಿಯು ಬೇಕಲ್ಲ! ಅದಿಲ್ಲದೆ ಔಚಿತ್ಯವೂ ತನ್ಮೂಲಕ ರಸಸಿದ್ಧಿಯೂ ಮೃಗಮರೀಚಿಕೆಯಷ್ಟೇ.
ಮುಂದೆ ರಾವಣಾಂತಃಪುರದ ರಮಣಿಯರನ್ನು ವರ್ಣಿಸುವಾಗ ಆದಿಕವಿಗಳ ಕಲ್ಪನಾಪ್ರಾವಣ್ಯವು ಮುಗಿಲುಮುಟ್ಟುತ್ತದೆ. ಅಲ್ಲಿಯ ಒಂದು ಅನರ್ಘಭಾಸ್ವರವಾದ ಉತ್ಪ್ರೇಕ್ಷೆ ಹೀಗಿದೆ:
ರಾವಣೇ ಸುಖಸಂವಿಷ್ಟೇ ತಾಸ್ತ್ರಿಯೋ ವಿವಿಧಪ್ರಭಾಃ | (೫.೯.೬೭)
ಜ್ವಲಂತಃ ಕಾಂಚನಾದೀಪಾಃ ಪ್ರೈಕ್ಷಂತಾನಿಮಿಷಾ ಇವ | (೫.೯.೬೮)
ರಾವಣನು ಮಲಗಿದ್ದ ಕಾರಣ ಶಂಕೆಯಿಲ್ಲದೆ ನಿದ್ರಾಮುದ್ರಿತಸುಂದರಿಯರನ್ನು ಕಾಣಬಹುದೆಂಬ ಕಾಂಕ್ಷೆಯಿಂದ ಅಂತಃಪುರದ ಹೊನ್ನ ಹಣತೆಗಳು ತಮ್ಮ ಸ್ತಬ್ಧಸ್ತಿಮಿತಜ್ವಾಲೆಗಳ ಮೂಲಕ ಅವರನ್ನು ಎವೆಯಿಕ್ಕದೆ ನಿಟ್ಟಿಸುವಂತೆ ತೋರುತ್ತಿತ್ತೆಂಬ ವರ್ಣನೆಯಲ್ಲಿ ಜಗತ್ತಿನ ಕವಿಕಲ್ಪಕತೆಯೆಲ್ಲ ಸಂತೋಷದಿಂದ ಸೆರೆಯಾಗಲು ಸಂಮತಿಸಿದೆ. ಇಲ್ಲಿಯ “ಅನಿಮಿಷ”ಪದವು ತನ್ನ ಶ್ಲಿಷ್ಟಾರ್ಥದಿಂದ ಮತ್ತೂ ಮಾದಕವಾಗಿದೆ. ಏಕೆಂದರೆ ದೀಪಗಳು ಎವೆಯಿಕ್ಕದೆ ನೋಡುತ್ತಿದ್ದುವೆಂಬ ಉತ್ಪ್ರೇಕ್ಷೆಯೊಡನೆ ಅನಿಮಿಷರ—ಅರ್ಥಾತ್ ದೇವತೆಗಳ—ಹಾಗೆ ದೀಪಗಳು ನಿರುಕಿಸುತ್ತಿದ್ದುವೆಂಬ ಅರ್ಥವೂ ಹೊಮ್ಮುತ್ತದೆ. ಇದು ಉಪಮೆಯೇ ಆಗಿದೆ. ಜೊತೆಗೆ ರಾವಣನ ಅಂಜಿಕೆಯ ಕಾರಣ ಅವನ ಅಂತಃಪುರದಲ್ಲಿದ್ದ ಸುರಸುಂದರಿಯರನ್ನು ಕಾಣಲು ದೇವತೆಗಳೂ ರೂಪಾಂತರದಿಂದ ಬಂದು ಕದ್ದುಮುಚ್ಚಿ ನೋಡಬೇಕೆಂಬ ಧ್ವನಿಯೂ ತಲೆದೋರಿ ಪ್ರಕಾರಾಂತರವಾಗಿ ರಾವಣನ ವಿಕ್ರಮವೇ ಅನುರಣಿಸುತ್ತದೆ. ಹೀಗೆ ಇದು ವಸ್ತುಧ್ವನಿ, ಅಲಂಕಾರಧ್ವನಿ ಮತ್ತು ರಸಧ್ವನಿಗಳಿಗೆ ಏಕಕಾಲದಲ್ಲಿ ಅನನ್ಯಾಯತನವೆನಿಸಿದೆ. ಇಂಥ ಕಾವ್ಯಸಿದ್ಧಿಯು ನಮ್ಮ ದೇಶದ ಆದಿಕವಿಗೆ ಸಂದಿರುವುದು ನಮ್ಮ ಪುಣ್ಯ!
ಅಶೋಕವನದಲ್ಲಿ ಸೀತಾನ್ವೇಷಣತತ್ಪರನಾದ ಹನೂಮಂತನಿಗೊಂದು ಕ್ರೀಡಾಶೈಲವು ಕಾಣುತ್ತದೆ. ಅಲ್ಲಿ ಹರಿಯುತ್ತಿದ್ದ ನಿರ್ಝರಿಣಿಯೂ ತತ್ಪರಿಸರದ ವನಸೌಂದರ್ಯವೂ ಅತಿಲೋಕಮನೋಹರತೆಯಿಂದ ಹೀಗೆ ಉತ್ಪ್ರೇಕ್ಷಿತವಾಗಿವೆ:
ದದರ್ಶ ಚ ನಗಾತ್ತಸ್ಮಾನ್ನದೀಂ ನಿಪತಿತಾಂ ಕಪಿಃ |
ಅಂಕಾದಿವ ಸಮುತ್ಪತ್ಯ ಪ್ರಿಯಸ್ಯ ಪತಿತಾಂ ಪ್ರಿಯಾಮ್ ||
ಜಲೇ ನಿಪತಿತಾಗ್ರೈಶ್ಚ ಪಾದಪೈರುಪಶೋಭಿತಾಮ್ |
ವಾರ್ಯಮಾಣಾಮಿವ ಕ್ರುದ್ಧಾಂ ಪ್ರಮದಾಂ ಪ್ರಿಯಬಂದುಭಿಃ || (೫.೧೪.೨೯,೩೦)
ಶೈಲದಿಂದ ಸುರಿದುಹೋಗುತ್ತಿದ್ದ ನಿರ್ಝರಿಣಿಯು ಪತಿಯ ತೊಡೆಯಿಂದ ಜಾರಿಹೋಗುತ್ತಿದ್ದ ಭಾಮಿನಿಯಂತೆ ತೋರುತ್ತಿತ್ತು! ಆ ಝರಿಯ ಪಾತ್ರದೊಳಗೆ ಕೊಂಬೆ-ರೆಂಬೆಗಳನ್ನು ಚಾಚಿದ ಇರ್ಕೆಲದ ಮರಗಳು ಹೀಗೆ ಕನಲಿ ದೂರ ಸರಿಯುತ್ತಿದ್ದ ಪ್ರಮದೆಯನ್ನು ಅನುನಯಿಸುವ ಬಂಧುವರ್ಗದಂತಿದ್ದುವು! ಇಂಥ ಶೃಂಗಾರಪಾರಮ್ಯದ ಚಿತ್ರಣವನ್ನು ರಾವಣನ ಪ್ರಮದವನದ ವರ್ಣನಾವಸರದಲ್ಲಿ ಕಲ್ಪಿಸಿದ ಆದಿಕವಿಯ ಕೌಶಲ ಅಸಮಾನ. ಪ್ರಿಯನ ತೊಡೆಯಿಂದ ಜಾರಿಹೋಗುತ್ತಿದ್ದ ಪ್ರಮದೆಗೆ ಬೆಟ್ಟದಬ್ಬಿಯನ್ನು ಒಪ್ಪವಿಟ್ಟ ಈ ಪ್ರತಿಭೆಗೆ ಶರಣಾಗಿಯೇ ಕಾಳಿದಾಸನು ತನ್ನ ಮೇಘದೂತಕಾವ್ಯದ ಪೂರ್ವಮೇಘಾಂತ್ಯದಲ್ಲಿ ಕೈಲಾಸದಿಂದ ಜಾರಿಹೋಗುತ್ತಿದ್ದ ದೇವಗಂಗೆಯ ಕೆಲದಲ್ಲಿದ್ದ ಅಲಕೆಯ ವರ್ಣನೆಯನ್ನು ಇದೇ ಜಾಡಿನಲ್ಲಿ ಮಾಡಿದ್ದಾನೆ.
ಹನೂಮಂತನು ಲಂಕೆಯಿಂದ ಮರಳಿಬರುವಾಗ ಪುನರ್ಲಂಘನಕ್ಕಾಗಿ ಅರಿಷ್ಟವೆಂಬ ಗಿರಿಯನ್ನು ಏರುತ್ತಾನೆ. ಆ ಶೈಲವನ್ನು ಆದಿಕವಿಗಳು ಅತಿಶಯವಾಗಿ ವರ್ಣಿಸುತ್ತಾರೆ. ಇಲ್ಲಿಯ ಪ್ರತಿಯೊಂದು ಪದ್ಯದ ಚತುರ್ಥಪಾದವೂ ಒಂದೊಂದು ಉತ್ಪ್ರೇಕ್ಷೆಯಾಗಿದೆ. ಮಾತ್ರವಲ್ಲ, ಇಡಿಯ ಪದ್ಯವೇ ಉಪಚಾರವಕ್ರತೆಗೆ ತವರಾಗಿದೆ. ಇಂಥ ಸಂಕೀರ್ಣಸುಂದರವಾದ ರಚನಾಶಿಲ್ಪವು ಯಾರಿಗೂ ಎಟುಕದ ಕೌಶಲ:
ಸೋತ್ತರೀಯಮಿವಾಂಭೋದೈಃ ಶೃಂಗಾಂತರವಿಲಂಬಿಭಿಃ | (೫.೫೬.೧೦)
ಬೋಧ್ಯಮಾನಮಿವ ಪ್ರೀತ್ಯಾ ದಿವಾಕರಕರೈಃ ಶುಭೈಃ | (೫.೫೬.೧೧)
ತೋಯೌಘನಿಸ್ಸ್ವನೈರ್ಮಂದ್ರೈಃ ಪ್ರಾಧೀತಮಿವ ಪರ್ವತಃ |
ಪ್ರಗೀತಮಿವ ವಿಸ್ಪಷ್ಟೈರ್ನಾನಾಪ್ರಸ್ರವಣಸ್ವನೈಃ || (೫.೫೬.೧೨)
ದೇವದಾರುಭಿರತ್ಯುಚ್ಚೈರೂರ್ಧ್ವಬಾಹುಮಿವ ಸ್ಥಿತಮ್ | (೫.೫೬.೧೩)
ವೇಪಮಾನಮಿವ ಶ್ಯಾಮೈಃ ಕಂಪಮಾನೈಃ ಶರದ್ವನೈಃ |
ವೇಣುಭಿರ್ಮಾರುತೋದ್ಧೂತೈಃ ಕೂಜಂತಮಿವ ಕೀಚಕೈಃ || (೫.೫೬.೧೪)
ನೀಹಾರಕೃತಗಂಭೀರೈರ್ಧ್ಯಾಯಂತಮಿವ ಗಹ್ವರೈಃ | (೫.೫೬.೧೫)
ಜೃಂಭಮಾಣಮಿವಾಕಾಶೇ ಶಿಖರೈರಭ್ರಶಾಲಿಭಿಃ | (೫.೫೬.೧೬)
ಆ ಗಿರಿಯು ತನ್ನ ಶಿಖರಗಳ ನಡುವೆ ಸುಳಿಯುವ ಮುಗಿಲುಗಳಿಂದ ಉತ್ತರೀಯವನ್ನು ಹೊದ್ದಂತೆ, ಮೇಲೆ ಸುಳಿಯುವ ಸೂರ್ಯಕಿರಣಗಳಿಂದ ತಟ್ಟಿ ಎಬ್ಬಿಸಲ್ಪಡುತ್ತಿರುವಂತೆ, ಮೊರೆಯುವ ಝರಿಗಳ ಮಂದ್ರಧ್ವನಿಯ ಮೂಲಕ ವೇದಾಧ್ಯಯನಕ್ಕೆ ತೊಡಗಿದಂತೆ, ಜುಳುಜುಳನೆ ಹರಿಯುವ ಹೊನಲುಗಳ ಮೂಲಕ ಹಾಡುತ್ತಿರುವಂತೆ, ನೇರವಾಗಿ ಬೆಳೆದ ದೇವದಾರುತರುಗಳ ಮೂಲಕ ಕೈಗಳನ್ನು ಮೇಲೆ ಚಾಚಿದಂತೆ, ಗಾಳಿಗೆ ಹೊಯ್ದಾಡುತ್ತಿರುವ ಹುಲ್ಲುಗಾವುಗಳ ಮೂಲಕ ಮೆಲ್ಲನೆ ಕಂಪಿಸುತ್ತಿರುವಂತೆ, ಬಿದಿರಿನ ಮೆಳೆಗಳಲ್ಲಿ ಸುಳಿದ ಗಾಳಿಗಳ ಮೂಲಕ ಶಿಳ್ಳು ಹಾಕುತ್ತಿರುವಂತೆ, ಇಬ್ಬನಿ ತುಂಬಿದ ಗುಹೆಗಳ ಮೂಲಕ ಪರಮಗಂಭೀರಧ್ಯಾನಕ್ಕೆ ತೊಡಗಿರುವಂತೆ, ಮೋಡಗಳಲ್ಲಿ ಮೈಚಾಚಿದ ಕೋಡುಗಲ್ಲುಗಳ ಮೂಲಕ ಮೈಮುರಿದು ಆಕಳಿಸುವಂತೆ ತೋರುತ್ತಿತ್ತು! ಇಲ್ಲಿಯ ಒಂದೊಂದು ಕಲ್ಪನೆಯೂ ಆ ಪರ್ವತದ ಮಾನುಷೀಕರಣಕ್ಕೆ ಸೂರ್ಯಸಾಕ್ಷಿ. ಹೀಗೆ ಜಡದಲ್ಲಿಯೂ ಚೈತನ್ಯವನ್ನು ಕಂಡು ಕಾಣಿಸಬಲ್ಲ ಶಕ್ತಿ ಕವಿಯದು; ಕಾಣುವ ಶಕ್ತಿ ಮಾತ್ರ ಋಷಿಯದು. ವಾಲ್ಮೀಕಿಮುನಿಗಳು ಎರಡೂ ಆದವರು. ನಮಗೂ ಕ್ಷಣಕಾಲ ಈ ಅನುಭೂತಿಯನ್ನು ತುಂಬಿಸಬಲ್ಲವರು. ನಾವು ಒಲಿದರೆ ಇದನ್ನು ಜೀವನವಿಡೀ ತುಂಬಿಕೊಡಬಲ್ಲ ಕಾವ್ಯೌದಾರ್ಯ ಅವರದು.
ಹನೂಮಂತನು ತನ್ನ ಪುನಃಪ್ರಯಾಣದಲ್ಲಿ ತೋರಿಕೊಂಡ ಬಗೆಯನ್ನು ಕವಿಗಳು ಹಲವು ಮಾಲೋತ್ಪ್ರೇಕ್ಷೆಗಳಲ್ಲಿ ವರ್ಣಿಸುತ್ತಾರೆ. ಅಲ್ಲಿಯ ಒಂದೆರಡು ಸೊಲ್ಲುಗಳು ತುಂಬ ಸ್ಮರಣೀಯ:
ಗ್ರಸಮಾನ ಇವಾಕಾಶಂ ತಾರಾಧಿಪಮಿವೋಲ್ಲಿಖನ್ |
ಹರನ್ನಿವ ಸನಕ್ಷತ್ರಂ ಗಗನಂ ಸಾರ್ಕಮಂಡಲಮ್ || (೫.೫೭.೫)
ಮಾರುತಸ್ಯಾತ್ಮಜಃ ಶ್ರೀಮಾನ್ ಕಪಿರ್ವ್ಯೋಮಚರೋ ಮಹಾನ್ |
ಹನೂಮಾನ್ಮೇಘಜಾಲಾನಿ ವಿಕರ್ಷನ್ನಿವ ಗಚ್ಛತಿ || (೫.೫೭.೬)
ಪ್ರಾಣಪುತ್ರನು ಆಗಸವನ್ನೇ ನುಂಗುವಂತೆ, ಸುಧಾಂಶುವನ್ನೇ ಪರಚುವಂತೆ, ಸೂರ್ಯನನ್ನೇ ಕಸಿಯುವಂತೆ, ನಕ್ಷತ್ರಗಳನ್ನೇ ಕಿತ್ತೊಯ್ಯುವಂತೆ, ಮೋಡಗಳನ್ನೇ ಸೆಳೆದೊಯ್ಯುವಂತೆ ಹಾರಿಹೋಗುತ್ತಿದ್ದನಂತೆ! ಈ ಹೊತ್ತಿಗೆ ಅವನು ಕಣ್ಣಾಮುಚ್ಚಾಲೆಯಾಡುವ ಚಂದ್ರನಂತೆ ಮೋಡಗಳ ನಡುವೆ ತೋರುತ್ತಿದ್ದನೆಂದೂ ಮುನಿಗಳು ಬಣ್ಣಿಸುತ್ತಾರೆ.
ಯುದ್ಧಕಾಂಡವು ಸಾಮಾನ್ಯಕವಿಗಳಿಗೆ ಸಖೇದಾಶ್ಚರ್ಯವನ್ನು ತರುವಂತೆ ಬಲುಮಟ್ಟಿಗೆ ಉತ್ಪ್ರೇಕ್ಷೆಗಳಿಲ್ಲದೆಯೇ ಸಾಗಿದೆ. ಇದು ರಸಿಕರ ಪಾಲಿಗೆ ಮತ್ತೂ ರೋಚಕ. ಅಲ್ಲಿಯ ವಿರಳೋತ್ಪ್ರೇಕ್ಷೆಗಳ ಪೈಕಿ ಒಂದೆರಡನ್ನು ಗಮನಿಸೋಣ. ಅವುಗಳಲ್ಲಿ ಕೆಲವು ತಮ್ಮ ಅಪೂರ್ವಾಭಿರಾಮತೆಯಿಂದ ನಮ್ಮ ಬಗೆಯನ್ನು ಸೆಳೆದರೆ, ಮತ್ತೆ ಕೆಲವು ಪೂರ್ವಕಲ್ಪಿತಚಮತ್ಕಾರದಿಂದ ಹಳೆಯ ಗೆಳೆಯರಂತೆ ನಮಗೆ ತೋರುತ್ತವೆ:
ಹಸಂತಮಿವ ಫೇನೋಘೈರ್ನೃತ್ಯಂತಮಿವ ಚೋರ್ಮಿಭಿಃ |
ಚಂದ್ರೋದಯಸಮುದ್ಭೂತಂ ಪ್ರತಿಚಂದ್ರಸಮಾಕುಲಮ್ ||
ಪಿನಷ್ಟೀವ ತರಂಗಾಗ್ರೈರರ್ಣವಃ ಫೇನಚಂದನಮ್ |
ತದಾದಾಯ ಕರೈರಿಂದುರ್ಲಿಂಪತೀವ ದಿಗಂಗನಾಃ || (೬.೪.೧೧೪,೧೧೫)
ಇಲ್ಲಿ ಚಂದ್ರೋದಯದಿಂದ ಉಕ್ಕೇರಿದ ಕಡಲಿನ ಮತ್ತು ಬೆಳುದಿಂಗಳಿನ ರೋಮಹರ್ಷಕವಾದ ವರ್ಣನೆಯುಂಟು. ಭೋರ್ಗರೆಯುವ ಸಮುದ್ರತರಂಗಗಳು ನೊರೆನಗೆಯಿಂದ ಸೊಗಯಿಸುತ್ತ ನರ್ತಿಸುವಂತಿದ್ದುವು, ಒಂದೊಂದು ಅಲೆಯಲ್ಲಿಯೂ ಚಂದ್ರಬಿಂಬವು ಪ್ರತಿಫಲಿಸಿ ಅನಂತಸಂಖ್ಯೆಯ ವಿಲಾಸವನ್ನು ಮಾಡುತ್ತಿತ್ತು!
ಹೀಗೆ ಉಕ್ಕಿ ಹರಿಯುವ ಅಲೆಗೈಗಳಿಂದ ಸಮುದ್ರವು ನೊರೆಯೆಂಬ ಚಂದನವನ್ನು ತೇಯ್ದು ಅದನ್ನು ಹಿಮಕಿರಣನ ರಶ್ಮಿಹಸ್ತಗಳಿಂದ ದಿಕ್ಸುಂದರಿಯರಿಗೆ ಲೇಪಿಸಿದಂತೆ ಬೆಳ್ದಿಗಳಿನ ಕಾಂತಿ ಕೋಡಿವರಿದಿತ್ತು! ಇಲ್ಲಿಯ ಕವಿತಾಸೌಂದರ್ಯವನ್ನು ಮೆಚ್ಚದ ರಸಿಕರಿಲ್ಲ. ಅಪ್ಪಯ್ಯದೀಕ್ಷಿತರಂಥ ಪರಿಪಕ್ವರಸಿಕರೂ ತಮ್ಮ ಕುವಲಯಾನಂದದಲ್ಲಿ ಈ ಶ್ಲೋಕವನ್ನು ಉದಾಹರಿಸಿದ್ದಾರೆ.
ಜಗಾಮ ಮೇರುಂ ನಗರಾಜಮಗ್ರ್ಯಂ
ದಿಶಃ ಪ್ರಕರ್ಶನ್ನಿವ ವಾಯುಸೂನುಃ | (೬.೭೪.೫೧)
ಸಂಜೀವನಿಯನ್ನು ತರಲೆಂದು ಹಿಮಾಲಯಕ್ಕೆ ಸಾಗಿದ ಹನೂಮಂತನು ಅಲ್ಲಿಯ ಮೇರುಪರ್ವತದಲ್ಲಿ ದಿಕ್ಕುಗಳನ್ನೇ ಸೆಳೆಯುವಂತೆ ಸುಳಿದಾಡಿದನಂತೆ!
ವಾಲ್ಮೀಕಿಮುನಿಗಳು ರಾವಣವಧೆಯ ಬಳಿಕ ವಿಲಪಿಸುವ ಮಂದೋದರಿಯ ಬಾಯಲ್ಲಿ ರಾವಣನ ಅಗ್ಗಳಿಕೆಯನ್ನು ಹಲವು ಬಗೆಯಾಗಿ ಹಾಡಿಸುತ್ತಾರೆ. ಅಲ್ಲೊಂದೆಡೆ ಆಕೆಯು ಯಾವ ಇಂದ್ರಿಯಗಳನ್ನು ಗೆದ್ದು ರಾವಣನು ಸಂಯಮಿಯಾಗಿ ತಪೋಬಲದಿಂದ ತ್ರಿಲೋಕವಿಜಯಿಯಾದನೋ ಆ ಇಂದ್ರಿಯಗಳೇ ಇದೀಗ ಸೇಡಿನಿಂದ ಅವನ ಮೇಲೆ ತಿರುಗಿಬಿದ್ದು ವಿಜಯಿಗಳಾಗಿ ಅವನಿಗೆ ಸಾವನ್ನು ತಂದಿವೆಯೆಂದು ದುಃಖಿಸುತ್ತಾಳೆ:
ಇಂದ್ರಿಯಾಣಿ ಪುರಾ ಜಿತ್ವಾ ಜಿತಂ ತ್ರಿಭುವನಂ ತ್ವಯಾ |
ಸ್ಮರದ್ಭಿರಿವ ತದ್ವೈರಮಿಂದ್ರಿಯೈರೇವ ನಿರ್ಜಿತಃ || (೬.೧೧೪.೧೮)
ಪ್ರವಿಶಂತೀವ ಗಾತ್ರಾಣಿ ಸ್ವಾನ್ಯೇವ ಜನಕಾತ್ಮಜಾ | (೬.೧೧೯.೩)
ರಾಮನ ಅಪಲಾಪವನ್ನು ಕೇಳಿ ಕಂಗೆಟ್ಟ ಸೀತೆಯು ತನ್ನ ಮೈಯೊಳಗೇ ತಾನು ಹುದುಗಿಹೋದಂತಾಗಿ ಮುಜುಗರಗೊಂಡಳಂತೆ! ಈ ಕಲ್ಪನೆಯನ್ನು ಚಿತ್ರಕೂಟಕ್ಕೆ ಭರತನು ಬರುತ್ತಿದ್ದಾಗ ಅವನನ್ನು ಶಂಕಿಸಿದ ಲಕ್ಷ್ಮಣನಿಗೆ ರಾಮನು ತಿಳಿಯಹೇಳುವ ಹೊತ್ತಿನಲ್ಲಿ ಕೂಡ ಆದಿಕವಿಗಳು ಬಳಸಿಕೊಂಡಿರುವುದನ್ನು ನಾವಿಲ್ಲಿ ನೆನೆಯಬಹುದು.
* * *
To be continued.