ಮಾಘ
ಮಾಘನು “ಶಿಶುಪಾಲವಧ”ಮಹಾಕಾವ್ಯದ ಎರಡನೆಯ ಸರ್ಗದಲ್ಲಿ ಅನೇಕಶಾಸ್ತ್ರಗಳನ್ನು ಉದಾಹರಣೆಗಳಾಗಿ ಬಳಸಿಕೊಳ್ಳುತ್ತ ರಾಜನೀತಿಯನ್ನು ಪೋಷಿಸುತ್ತಾನೆ. ಈ ಶಾಸ್ತ್ರಸಮೂಹದಲ್ಲಿ ಅಲಂಕಾರಶಾಸ್ತ್ರಕ್ಕೂ ಅವಕಾಶವನ್ನು ಕೊಟ್ಟಿರುವುದು ಕವಿಯ ಔಚಿತ್ಯಪ್ರಜ್ಞೆಗೆ ಸಾಕ್ಷಿ. ಇಲ್ಲಿಯ ಕೆಲವು ಮಾತುಗಳು ನಿಜಕ್ಕೂ ಮನನೀಯವಾಗಿವೆ. ಅವನ್ನೀಗ ಪರಿಶೀಲಿಸೋಣ.
ಬಹ್ವಪಿ ಸ್ವೇಚ್ಛಯಾ ಕಾಮಂ ಪ್ರಕೀರ್ಣಮಭಿಧೀಯತೇ |
ಅನುಜ್ಝಿತಾರ್ಥಸಂಬಂಧಃ ಪ್ರಬಂಧೋ ದುರುದಾಹರಃ || (೨.೭೩)
ಅಸ್ತವ್ಯಸ್ತವಾದ ವಿಷಯಗಳನ್ನು ಮನಬಂದಂತೆ ಎಷ್ಟೂ ಹೇಳಬಹುದು. ಆದರೆ ಪರಸ್ಪರಸಾಂಗತ್ಯವಿರುವ ವಿವರಗಳನ್ನುಳ್ಳ ಸಾರ್ಥಕವಾದ ಪ್ರಬಂಧವನ್ನು ಪ್ರಸ್ತಾವಿಸುವುದು ಬಹಳ ಕಷ್ಟ.
ಇಲ್ಲಿ ಕವಿಯು ಪ್ರಸಂಗೋಚಿತವಾದ ರೀತಿಯಲ್ಲಿ ವ್ಯವಸ್ಥಿತವಾದ ಮಾತುಗಳ ಮಹತ್ತ್ವವನ್ನು ಹೇಳಿದ್ದರೂ ಇದು ಕಾವ್ಯಮೀಮಾಂಸೆಯ ವಿಷಯಗಳಲ್ಲೊಂದಾದ ಮುಕ್ತಕ ಮತ್ತು ಪ್ರಬಂಧಗಳ ನಿರ್ಮಾಣಕ್ಕೂ ಸಂಬಂಧಿಸಿದೆ. ಮುಕ್ತಕಗಳ ಕಾವ್ಯಸೌಂದರ್ಯವು ಅದೆಷ್ಟೇ ಆಕರ್ಷಕವೆನಿಸಿದರೂ ಪ್ರಬಂಧನಿರ್ಮಿತಿಗೆ ಹೋಲಿಸಿದರೆ ಇವುಗಳ ರಚನೆ ಸರಳ. ಮುಕ್ತಕದಲ್ಲಿ ಯಾವುದೋ ಒಂದು ಸಂದರ್ಭದ ಭಾವತೀವ್ರತೆಯನ್ನೋ ಮತ್ತಿನ್ನಾವುದೋ ಉಕ್ತಿವೈಚಿತ್ರ್ಯವನ್ನೋ ಹರಳುಗಟ್ಟಿಸಿದರೆ ಕವಿಯ ಕೆಲಸ ಮುಗಿದಂತೆ. ಆದರೆ ಪ್ರಬಂಧದಲ್ಲಿ ಹೀಗಲ್ಲ. ಅದು ಇತಿವೃತ್ತ ಮತ್ತು ಪಾತ್ರಚಿತ್ರಣಗಳೆಂಬ ಮತ್ತೂ ಎರಡು ಹಿರಿಯ ಬಾಧ್ಯತೆಗಳನ್ನು ಹೊರಬೇಕಾಗುತ್ತದೆ. ಇಂಥ ಭಾರವನ್ನು ಹೊತ್ತಾಗ ಪ್ರತಿ ಪದ್ಯದಲ್ಲಿಯೂ ಚಮತ್ಕಾರವನ್ನು ತರುವುದು ದುಃಸಾಧ್ಯ. ಆದುದರಿಂದಲೇ ಕಥನ ಮತ್ತು ವರ್ಣನಗಳೆರಡನ್ನೂ ನಿರ್ವಹಿಸಿಕೊಂಡು ಹೋಗುವ ಜಾಣ್ಮೆ ಪ್ರಬಂಧಕವಿಯನ್ನು ಮುಕ್ತಕಕವಿಗಿಂತ ಮಿಗಿಲಾಗಿಸುತ್ತದೆ. ಈ ಅಂಶವನ್ನು ವಾಮನನಂಥ ಆಲಂಕಾರಿಕರೂ ಗಮನಿರುವುದು ಸ್ಮರಣೀಯ. ಆ ಪ್ರಕಾರ ಅನಿಬದ್ಧವಾದ ಕಾವ್ಯಕ್ಕೆ ಹೆಚ್ಚಿನ ಸೊಗಸಿಲ್ಲ; ಬೆಳಕಿನ ಕಿಡಿಗಳು ಮಿಗಿಲಾಗಿ ಹೊಳೆಯುವುದಿಲ್ಲವಷ್ಟೆ. ಇದನ್ನವನು ಶ್ಲೋಕರೂಪದಲ್ಲಿಯೂ ಸಂಗ್ರಹಿಸಿದ್ದಾನೆ:
ಅಸಂಕಲಿತರೂಪಾಣಾಂ ಕಾವ್ಯಾನಾಂ ನಾಸ್ತಿ ಚಾರುತಾ |
ನ ಪ್ರತ್ಯೇಕಂ ಪ್ರಕಾಶಂತೇ ತೈಜಸಾಃ ಪರಮಾಣವಃ || (ಕಾವ್ಯಾಲಂಕಾರಸೂತ್ರವೃತ್ತಿ, ೧.೩.೨೯)
ಇದೇ ಸರ್ಗದ ಮುಂದಿನ ಒಂದು ಪದ್ಯದಲ್ಲಿ ಕಾವ್ಯಗುಣಗಳ ಪರಾಮರ್ಶೆಯಿದೆ:
ತೇಜಃ ಕ್ಷಮಾ ವಾ ನೈಕಾಂತಂ ಕಾಲಜ್ಞಸ್ಯ ಮಹೀಪತೇಃ |
ನೈಕಮೋಜಃ ಪ್ರಸಾದೋ ವಾ ರಸಭಾವವಿದಃ ಕವೇಃ || (೨.೮೩)
ಸಮಯಾಸಮಯವಿವೇಕವುಳ್ಳ ದೊರೆಗೆ ಸಂಧಿ-ವಿಗ್ರಹಗಳ ಅನ್ವಯ ಹೇಗೆಂಬ ತಿಳಿವಳಿಕೆಯಿರುತ್ತದೆ. ರಸ-ಭಾವಗಳನ್ನು ಬಲ್ಲ ಕವಿಯು ಓಜಸ್ಸನ್ನೋ ಪ್ರಸಾದವನ್ನೋ ನಿರಪೇಕ್ಷವಾಗಿ ನೆಮ್ಮುವುದಿಲ್ಲ.
ಇದೂಂದು ಮಿಗಿಲಾದ ಒಳಣೋಟವಿರುವ ಅನುಭವನಿಷ್ಠ ಉಕ್ತಿ. ಏಕೆಂದರೆ, ಆಲಂಕಾರಿಕರು ಅದೆಷ್ಟೋ ಬಾರಿ ಯಾವುದೋ ಒಂದು ಗುಣವನ್ನೋ ಮತ್ತಾವುದೋ ಒಂದು ರೀತಿಯನ್ನೋ ಶ್ರೇಷ್ಠವೆಂಬಂತೆ ಪ್ರತಿಪಾದಿಸಿ ಅದು ಸರ್ವತ್ರ ಸಲ್ಲಬೇಕೆಂದು ಆಗ್ರಹಿಸುವುದುಂಟು. ಆದರೆ ಕಾವ್ಯರಚನಾಪ್ರಬುದ್ಧನಾದ ಸತ್ಕವಿಗೆ ಸಂದರ್ಭೋಚಿತವಾಗಿ ಎಲ್ಲ ಬಗೆಯ ಗುಣಗಳೂ ಎಲ್ಲ ಬಗೆಯ ರೀತಿಗಳೂ ಹೃದ್ಯವಾಗುತ್ತವೆಂಬ ಅರಿವಿರುತ್ತದೆ. ದಂಡಿ, ವಾಮನ ಮೊದಲಾದವರು ವೈದರ್ಭಮಾರ್ಗವನ್ನು (ವೈದರ್ಭೀ ರೀತಿಯನ್ನು) ಸರ್ವಶ್ರೇಷ್ಠವೆಂದು ಎತ್ತಿಹಿಡಿಯುತ್ತಾರೆ. ಆದರೆ ಭಾಮಹನು ಇದು ಅಂಧಾನುಸರಣೆಯೆಂದು ಆಕ್ಷೇಪಿಸುತ್ತಾನೆ.[1] ಅಷ್ಟೇಕೆ, ಆನಂದವರ್ಧನನೇ ಸಮಾಸಗತವಾದ ಓಜಸ್ಸಿನಂತೆಯೇ ಅಸಮಸ್ತವಾದ ಪದಗಳುಳ್ಳ ಪ್ರಸನ್ನಶೈಲಿಯಲ್ಲಿಯೂ ಓಜಸ್ಸು ಮೆರೆಯುವುದೆಂದು ಹೇಳುವ ಮೂಲಕ ಪ್ರಸಾದಗುಣಕ್ಕೆ ಓಜಸ್ಸಿನಲ್ಲಿ ಸಹಭಾಗವನ್ನಿತ್ತಿದ್ದಾನೆ. ಇದೂ ಅವಿಚಾರಿತ. ಕುಂತಕನು ಮಾತ್ರ ಇಂಥವೆಲ್ಲ ಕವಿವಿವಕ್ಷಾಧೀನವೆಂದು ಹೇಳುವ ಮೂಲಕ[2] ಪ್ರಾಯಿಕವಾಗಿ ಶಬ್ದಗತವಾದ ಓಜಸ್ಸನ್ನು ಅಷ್ಟಾಗಿ ಆಶ್ರಯಿಸದೆ ರಚಿಸುವ ಕಾಳಿದಾಸನಂತೆಯೇ ಇದನ್ನು ಆಶ್ರಯಿಸಿಯೇ ಮಿಗಿಲಾಗಿ ಮೆರೆಯುವ ಬಾಣನು ಶ್ರೇಷ್ಠಕವಿಯೆಂದು ನಿರೂಪಿಸುತ್ತಾನೆ. ಈ ಎಲ್ಲ ವಿಮರ್ಶನಕ್ಕೆ ಬೇಕಾದ ಅನುಭವದ್ರವ್ಯ ಮಾಘನಲ್ಲಿ ಹೆಪ್ಪುಗಟ್ಟಿದೆ.
ದಂಡಿ-ಭಾಮಹರ ಕಾಲದಿಂದಲೂ ಕಾವ್ಯಲಕ್ಷಣವನ್ನು ಶಬ್ದಪ್ರಧಾನವಾಗಿ ಹೇಳುವುದೇ ಉಭಯಪ್ರಧಾನವಾಗಿ ಹೇಳುವುದೇ ಎಂಬ ವಿವಾದ ಬೆಳೆದುಬಂದಿದೆ. ದಂಡಿ, ಜಗನ್ನಾಥ ಮೊದಲಾದವರು ಶಬ್ದಪ್ರಧಾನವಾದಿಗಳಾದರೆ ಭಾಮಹ, ವಾಮನ, ಆನಂದವರ್ಧನ, ಮಮ್ಮಟ ಮುಂತಾದವರು ಉಭಯಪ್ರಧಾನವಾದಿಗಳು. ಮಾಘ ಎರಡನೆಯ ಮತವೇ ಯುಕ್ತಿಮತ್ತರವೆಂಬಂತೆ ಭಾವಿಸುವುದು ಮಹತ್ತ್ವದ ಸಂಗತಿ. ಈ ನಿಟ್ಟಿನಲ್ಲಿ ಅವನು ಕಾಳಿದಾಸಾದಿಗಳ ಹಾದಿಯಲ್ಲಿ ಸಾಗಿದ್ದಾನೆ:
ನಾಲಂಬತೇ ದೈಷ್ಟಿಕತಾಂ ನ ನಿಷೀದತಿ ಪೌರುಷೇ |
ಶಬ್ದಾರ್ಥೌ ಸತ್ಕವಿರಿವ ದ್ವಯಂ ವಿದ್ವಾನಪೇಕ್ಷತೇ || (೨.೮೬)
ವಿಜಿಗೀಷುವು ಕೇವಲ ದೈವವನ್ನೂ ನಚ್ಚುವುದಿಲ್ಲ, ಬರಿಯ ಪೌರುಷಕ್ಕೆ ಅಂಟಿಕೊಳ್ಳುವುದೂ ಇಲ್ಲ. ಸತ್ಕವಿಯು ಶಬ್ದ-ಅರ್ಥಗಳೆರಡನ್ನೂ ಆದರಿಸುವಂತೆ ಅವನು ದೈವ-ಪೌರುಷಗಳನ್ನು ಸ್ವೀಕರಿಸುತ್ತಾನೆ.
ಸ್ವಯಂವೇದ್ಯವಾದ ಈ ಸಿದ್ಧಾಂತಕ್ಕೆ ಹೆಚ್ಚಿನ ವಿವರಣೆ ಬೇಕಿಲ್ಲ.
ರಸ-ಭಾವಗಳನ್ನು ಕುರಿತ ಮಾಘನ ಒಳನೋಟ ಒಪ್ಪುವಂತಿದೆ:
ಸ್ಥಾಯಿನೋऽರ್ಥೇ ಪ್ರವರ್ತಂತೇ ಭಾವಾಃ ಸಂಚಾರಿಣೋ ಯಥಾ |
ರಸಸ್ಯೈಕಸ್ಯ ಭೂಯಾಂಸಸ್ತಥಾ ನೇತುರ್ಮಹೀಭೃತಃ || (೨.೮೭)
ಹೇಗೆ ಒಂದೇ ಸ್ಥಾಯಿಭಾವಕ್ಕೆ ಪೋಷಕವಾಗಿ ಹತ್ತಾರು ವ್ಯಭಿಚಾರಿಭಾವಗಳು ಒದಗಿಬಂದು ರಸನಿಷ್ಪತ್ತಿಗೆ ಕಾರಣವಾಗುವುವೋ ಹಾಗೆಯೇ ಒಬ್ಬ ನಾಯಕನಿಗೆ ಹಲವರು ಸಹಕಾರಿಗಳು ಒದಗಿಬಂದು ಅವನ ಅಭ್ಯುದಯಕ್ಕೆ ಕಾರಣವಾಗುವರು.
ಇಲ್ಲಿ ಭರತೋದಿತವಾದ ರಸಸೂತ್ರದ ಸುಬೋಧವ್ಯಾಖ್ಯಾನವೇ ಇದೆಯೆಂದರೆ ತಪ್ಪಲ್ಲ. ಜೊತೆಗೆ, ಭಾವವು ರಸವಾಗಿ ನಿಷ್ಪನ್ನಗೊಳ್ಳುವ ಮಾಂತ್ರಿಕಪ್ರಕ್ರಿಯೆಯೂ ಧ್ವನಿತವಾಗಿದೆ. ವಿಜಿಗೀಷುವಿನ ಪ್ರಭುಶಕ್ತಿ, ಮಂತ್ರಿಶಕ್ತಿ ಮತ್ತು ಉತ್ಸಾಹಶಕ್ತಿಗಳೆಲ್ಲ ಅರ್ಥಸಿದ್ಧಿಯಾಗಿ ಅಭಿವ್ಯಕ್ತವಾಗುವುದೇ ಭಾವವು ರಸರೂಪದಲ್ಲಿ ಆವಿಷ್ಕೃತವಾಗುವ ಪರಿ. ಅಂದರೆ, ಸಾಧ್ಯದ ಸಾಫಲ್ಯವೇ ಸಿದ್ಧಿಯಲ್ಲದೆ ಅದು ಸಾಧ್ಯಕ್ಕಿಂತ ಅತ್ಯಂತವಿಭಿನ್ನವೂ ಅಲ್ಲ, ಹಾಗೆಂದು ಅದೇ ಸಾಧ್ಯವೂ ಅಲ್ಲ. ಹೀಗೆಯೇ ಭಾವವೇ ರಸದ ಮೂಲಸಾಮಗ್ರಿಯಾದರೂ ರಸವು ಭಾವವಲ್ಲ. ಏಕೆಂದರೆ, ಭಾವವು ವೈಯಕ್ತಿಕವಾದರೆ ರಸವು ಅವೈಯಕ್ತಿಕ. ಇದೇ ನ್ಯಾಯವನ್ನು ವಿಜಿಗೀಷುವಿನ ಶಕ್ತಿ-ಸಾಮರ್ಥ್ಯಗಳಿಗೂ ಅರ್ಥಪ್ರಾಪ್ತಿಗೂ ಒಪ್ಪವಿಡಬಹುದು.
ರೈವತಕಪರ್ವತವನ್ನು ವರ್ಣಿಸುವ ಸಂದರ್ಭದಲ್ಲಿ ಮಾಘನು ಅರ್ಥಾಂತರನ್ಯಾಸದ ರೂಪದಲ್ಲಿ ನೀಡಿರುವ ಒಂದು ಹೇಳಿಕೆ ಕಾವ್ಯಮೀಮಾಂಸೆಗಷ್ಟೇ ಅಲ್ಲ, ಸೌಂದರ್ಯಮೀಮಾಂಸೆಗೇ ಮಿಗಿಲಾದ ಕೊಡುಗೆಯಾಗಿದೆ:
ದೃಷ್ಟೋऽಪಿ ಶೈಲಃ ಸ ಮುಹುರ್ಮುರಾರೇ-
ರಪೂರ್ವವದ್ವಿಸ್ಮಯಮಾತತಾನ |
ಕ್ಷಣೇ ಕ್ಷಣೇ ಯನ್ನವತಾಮುಪೈತಿ
ತದೇವ ರೂಪಂ ರಮಣೀಯತಾಯಾಃ || (೪.೧೭)
ಕೃಷ್ಣ ಆ ಬೆಟ್ಟವನ್ನು ಮತ್ತೆ ಮತ್ತೆ ಕಂಡಾಗಲೂ ಅವನಿಗದು ಹೊಸಹೊಸತೆಂಬಂತೆ ಬೆರಗನ್ನು ಉಂಟುಮಾಡಿತು. ಯಾವುದು ಪ್ರತಿಕ್ಷಣಕ್ಕೂ ಹೊಸತನವನ್ನು ಹೊಂದುವುದೋ ಅದೇ ರಮಣೀಯತೆಯ ಲಕ್ಷಣ.
ಇದೊಂದು ಮಂತ್ರಸದೃಶವಾದ ಮಾತು. ಇಲ್ಲಿ ಸೌಂದರ್ಯದ ಜೀವಾಳವನ್ನು ಅನುಲಕ್ಷಿಸಿ ಲಕ್ಷಣೀಕರಿಸುವ ರಸಸಾಹಸವನ್ನು ಕಾಣಬಹುದು. ಚೆಲುವನ್ನು ಸೌಂದರ್ಯವೆಂಬ ಪದದಿಂದ ಗುರುತಿಸುವುದು ಒಂದು ಬಗೆಯಾದರೆ ರಮಣೀಯತೆಯೆಂಬ ಶಬ್ದದಿಂದ ಸೂಚಿಸುವುದು ಮತ್ತೊಂದು ಬಗೆ. ಸೌಂದರ್ಯಶಬ್ದವು ಆರ್ದ್ರತೆ ಮತ್ತು ಆದರಗಳೆಂಬ ಅರ್ಥಗಳನ್ನುಳ್ಳ ಧಾತುಗಳಿಂದ ಹೊಮ್ಮಿದ್ದರೆ ರಮಣೀಯತೆಯು ಕೇಳಿಯೆಂಬ ಅರ್ಥವನ್ನುಳ್ಳ ಧಾತುವಿನಿಂದ ಹುಟ್ಟಿದೆ.[3] ಸೌಂದರ್ಯಶಬ್ದವು ಚೆಲುವಾದ ವಸ್ತುಗಳ ಸನ್ನಿಕರ್ಷದಿಂದ ಉಂಟಾದ ಸಹೃದಯರ ಅನುಭವವನ್ನೂ ಆ ಮೂಲಕ ಅವರು ಚೆಲುವಿಗೆ ತೋರುವ ಕೃತಜ್ಞತೆಯನ್ನೂ ಧ್ವನಿಸಿದರೆ, ರಮಣೀಯಶಬ್ದವು ಚೆಲುವಾದ ವಸ್ತುಗಳ ಆಸ್ವಾದಕಾಲದ ಕೌತುಕ-ಆನಂದಗಳನ್ನು ಧ್ವನಿಸುವುದೆನ್ನಬಹುದು. ನಿಮಜ್ಜನಾರ್ಥಕವಾದ ಸೌಂದರ್ಯಶಬ್ದವು ರಸಾಸ್ವಾದದ ವಿಗಲಿತವೇದ್ಯಾಂತರತ್ವವನ್ನು ಹೆಚ್ಚಾಗಿ ಸೂಚಿಸಿದರೆ ಕ್ರೀಡಾರ್ಥಕವಾದ ರಮಣೀಯಶಬ್ದವು ಅದರ ಉಲ್ಲಸನರೂಪವನ್ನು ಧ್ವನಿಸುತ್ತದೆ. ಇವೆರಡೂ ರಸಾಸ್ವಾದದ ಆಯಾಮಗಳೇ. ಮೊದಲು ರಮಣೀಯತೆ, ಅನಂತರ ಸೌಂದರ್ಯ. ರಮಣೀಯತೆಯಲ್ಲಿರುವ ವಿಹರಣಬುದ್ಧಿ ಸೌಂದರ್ಯದಲ್ಲಿ ಕರಗಿ ಹೋಗಿರುತ್ತದೆ. ಮತ್ತೂ ಸ್ಪಷ್ಟವಾಗಿ ಹೇಳುವುದಾದರೆ, ರಮಣೀಯತೆಯು ವಿಸ್ತಾರ. ಸೌಂದರ್ಯ ಆಳ. ಇವೆರಡೂ ಸೇರಿದಾಗ ಮೂರು ಆಯಾಮಗಳ ಘನತೆ ಸಿದ್ಧಿಸುತ್ತದೆ. ಸೌಂದರ್ಯಮೀಮಾಂಸಕರು ಚೆಲುವಿನ ಲಕ್ಷಣವನ್ನು ಶತಶತಮಾನಗಳಿಂದ ಚರ್ಚಿಸಿದ್ದಾರೆ. ಅವರ ಅನ್ವೇಷಣದ ಸಾರವೇ ಈ ಎರಡು ಶಬ್ದಗಳಲ್ಲಿದೆಯೆಂದರೆ ಅತಿಶಯವಲ್ಲ. ಸೌಂದರ್ಯವು ಸ್ವತಾವಿಸ್ಮೃತಿಯ ಶಿಖರವಾದರೆ ರಮಣೀಯತೆಯು ಅದನ್ನು ಸಿದ್ಧಿಸಿಕೊಳ್ಳಲು ಸ್ವಯಂಪ್ರೇರಣೆಯಿಂದ ಕಲಾನುಭವಕ್ಕೆ ತೆತ್ತುಕೊಳ್ಳುವ ಹವಣು. ರಮಣೀಯತೆಯಲ್ಲಿ ವ್ಯಾಪಾರಪ್ರಾಧಾನ್ಯವನ್ನು ಸ್ಫುಟವಾಗಿ ಕಾಣಬಹುದಾದರೆ ಸೌಂದರ್ಯದಲ್ಲಿ ಅನುಭೂತಿಪ್ರಾಧಾನ್ಯವನ್ನು ಗುರುತಿಸಬಹುದು. ವ್ಯಾಪಾರದ ಪ್ರಾಧಾನ್ಯದಿಂದಲೇ ರಮಣೀಯತೆಯಲ್ಲಿ ಗುಣ-ಅಲಂಕಾರಗಳು, ರೀತಿ-ವಕ್ರತೆಗಳು ಮತ್ತು ಧ್ವನಿ-ಔಚಿತ್ಯಗಳೆಲ್ಲ ತೆರೆದುಕೊಳ್ಳುತ್ತವೆ. ಸೌಂದರ್ಯವಾದರೋ ಸರ್ವಾತ್ಮನಾ ರಸದತ್ತ ಕೇಂದ್ರಿತವಾಗುತ್ತದೆ. ನಮಗೆ ಕಲಾಸ್ವಾದದ ಕಾಲದಲ್ಲಿ ಕಲಾಕೃತಿ-ಕಲಾವಿದರನ್ನು ಕುರಿತು ಉಂಟಾಗುವ ಮೆಚ್ಚಿಕೆಗಳೆಲ್ಲ ವಿಸ್ಮಯವೆಂಬ ಮನೋವ್ಯಾಪಾರದಲ್ಲಿ ಅಡಗುತ್ತವೆ. ಈ ವಿಸ್ಮಯವನ್ನೂ ಮೀರಿ ಉಂಟಾಗುವ ಆನಂದೈಕಸ್ಥಿತಿಯನ್ನು ಸೌಂದರ್ಯವು ಅವಧರಿಸುತ್ತದೆ. ಹೀಗೆ ಇವೆರಡೂ ಶಬ್ದಗಳು ಕಾವ್ಯಮೀಮಾಂಸೆಯ ಎಲ್ಲ ತತ್ತ್ವಗಳನ್ನು ಒಳಗೊಂಡಿವೆಯೆಂದರೆ ಅತಿಶಯವಲ್ಲ. ರಮಣೀಯತೆಯಲ್ಲಿ ಕಾವ್ಯತತ್ತ್ವದ ರೂಪಸ್ತರದ ವಿವರಗಳು ಸ್ಫುರಿಸುತ್ತಿದ್ದರೂ ಅವು ಸರ್ವಥಾ ಸ್ವರೂಪಕ್ಕೇ ತೆತ್ತುಕೊಂಡಿರುವ ಕಾರಣ ಆಸ್ವಾದಸಮಾಧಿಯ ಭಂಜನೆಗೆ ಕಾರಣವಾಗುವುದಿಲ್ಲ. ಇನ್ನು ಸೌಂದರ್ಯದಲ್ಲಾದರೋ ಸ್ವರೂಪವೇ ಮೈದುಂಬಿಕೊಂಡಿರುತ್ತದೆ; ಆದುದರಿಂದ ಇಂಥ ಪ್ರಶ್ನೆಯೇ ಏಳುವುದಿಲ್ಲ. ಕಲಾನುಭವವು ಜಗತ್ತನ್ನು ಆಧರಿಸಿ ಅದನ್ನು ತಾತ್ಕಾಲಿಕವಾಗಿಯಾದರೂ ಮೀರುವ ಹವಣಾದ ಕಾರಣ ಇಲ್ಲಿ ರಮಣೀಯತೆ ಮತ್ತು ಸೌಂದರ್ಯಗಳೆರಡೂ ಸಮಾನವಾಗಿ ಮಾನಿತ. ರಮಣೀಯತೆಯನ್ನು ಉಪೇಕ್ಷಿಸಿದರೆ ಸೌಂದರ್ಯಸಿದ್ಧಿಯೇ ಅಸಾಧ್ಯ. ಸೌಂದರ್ಯಲಕ್ಷ್ಯವಿಲ್ಲದ ರಮಣೀಯತೆ ಅಗ್ಗದ ಚಮತ್ಕಾರವಾಗಿ ತನ್ನ ನವತೆಯನ್ನು ನೀಗಿಕೊಳ್ಳುತ್ತದೆ. ಹೀಗೆ ಹೊಸಹೊಸತಾಗಿ ತೋರಿಕೊಳ್ಳುವುದರಲ್ಲಿಯೇ ರಮಣೀಯತೆಯ ನಿಶ್ಚಯೀಕರಣವಿದೆ. ಜೊತೆಗೆ ಅನುಭವಕ್ಕೆ ಇಂಬಾಗುವ ಸಂಗತಿಗಳೆಲ್ಲ ನಾವೀನ್ಯವನ್ನು ಗಳಿಸುವುದರಲ್ಲಿ ಸಂದೇಹವಿಲ್ಲ. ಅನುಭವದಲ್ಲಿ ಪರ್ಯವಸಿಸದ ರಮಣೀಯತೆಗೆ ನವೋನವತೆ ಸಾಧ್ಯವಾಗದು. ಹೀಗೆ ಸೌಂದರ್ಯ-ರಮಣೀಯತೆಗಳ ಯಮಲಸಾಹಚರ್ಯವು ಕಲಾಮೀಮಾಂಸೆಯ ಜೀವಾಳ. ಲೋಕಾನುಭವಗಳೆಲ್ಲ ಕಾಮ-ಕರ್ಮಗಳಿಂದ ದೂಷಿತವಾದ ಕಾರಣ ಅವುಗಳಲ್ಲಿ ಮತ್ತೆ ಮತ್ತೆ ತೊಡಗಿಕೊಂಡಾಗ ನವೀನವತೆಯ ಪ್ರಮಾಣ ಏರುಪೇರಾಗುತ್ತದೆ; ಹಲವೊಮ್ಮೆ ಇಲ್ಲವೇ ಆಗುತ್ತದೆ. ಆದರೆ ಸಾರ್ಥಕವಾದ ಕಲಾನುಭವಕ್ಕೆ ಇಂಥ ಕೊರತೆ ಎದುರಾಗದು. ಒಂದು ವೇಳೇ ಕೊರತೆ ಕಂಡಲ್ಲಿ ಅದು ಆ ಮಟ್ಟಿಗೆ ಆಯಾ ಕಲಾಕೃತಿಯ ಮೌಲ್ಯಮಾಪನವನ್ನು ಮಾಡಿ ಅದರ ಸ್ಥಾನನಿರ್ದೇಶನಕ್ಕೆ ನೆರವಾಗುತ್ತದೆ. ಆದುದರಿಂದ ನವೋನವತೆಯ ಸಮೃದ್ಧಿಯೇ ಮಹಾಕಲೆಯ ಮಾನದಂಡ. ಇಲ್ಲಿ ಮಾಘನು ಪ್ರಸ್ತಾವಿಸುವ ನವೋನವತೆಯು ರೂಪಕ್ಕಿಂತ ಮಿಗಿಲಾಗಿ ಸ್ವರೂಪಕ್ಕೆ ಬದ್ಧವಾಗಿದೆಯೆಂಬುದನ್ನು ಅನುಭವಪಾರಮ್ಯದಿಂದಲೇ ನಾವಿಲ್ಲಿ ಮನಗಂಡಿದ್ದೇವೆ. ಒಟ್ಟಿನಲ್ಲಿ ಮಾಘನ ಈ ಸೂಕ್ತಿ ಪ್ರಾಚ್ಯ-ಪಾಶ್ಚಾತ್ತ್ಯವೆಂಬ ಭೇದವಿಲ್ಲದೆ ಎಲ್ಲೆಡೆ ಸಲ್ಲುತ್ತದೆ.
ಹೀಗೆ ಮಾಘನು ಕೆಲವೇ ಮಾತುಗಳಲ್ಲಿ ವ್ಯಾಪಕವಾದ ಸೌಂದರ್ಯತತ್ತ್ವವನ್ನಲ್ಲದೆ ಕಾವ್ಯಮೀಮಾಂಸೆಯ ಮೂರು ಮಜಲುಗಳಾದ ವಾಗರ್ಥವಿವೇಕ, ಗುಣ-ಅಲಂಕಾರವಿವೇಚನೆ ಮತ್ತು ರಸ-ಭಾವಪರಾಮರ್ಶೆಗಳನ್ನು ನಿಃಸಂದಿಗ್ಧವಾಗಿ ಮಾಡಿ ಶಾಸ್ತ್ರಕ್ಕೆ ಬೇಕಾದ ತಿಳಿವನ್ನು ಕೊಟ್ಟಿದ್ದಾನೆಂದರೆ ಸ್ವಲ್ಪ ಮಾತಲ್ಲ.
[1] ಕಾವ್ಯಾಲಂಕಾರ, ೧.೩೧–೩೬, ೨.೧–೩
[2] ವಕ್ರೋಕ್ತಿಜೀವಿತ, ೧.೨೪–೫೮
[3] ಉಂದೀ–ಕ್ಲೇದನೇ, ದೃಙ್–ಆದರೇ; ರಮು–ಕ್ರೀಡಾಯಾಮ್
To be continued.