ಇಲ್ಲೊಬ್ಬಳು ಕಲಹಾಂತರಿತೆಯು ತನ್ನ ಮುನಿಸಿನ ಕೆಡುಕನ್ನು ತಾನೇ ವಿಮರ್ಶಿಸಿಕೊಳ್ಳುತ್ತಿದ್ದಾಳೆ. ಅದನ್ನು ಏಕಾಂತವಾಗಿ ಮಾಡದೆ ಎಲ್ಲ ಗೆಳತಿಯರ ನಡುವೆ ಲೋಕಾಂತದಲಿ ನಡಸಿದ್ದಾಳೆಂದರೆ ಆಕೆಯ ಪಶ್ಚಾತ್ತಾಪದ ತೀವ್ರತೆ ತಿಳಿಯದಿರದು. ಹಲುಬುವ ಆಕೆಯ ಮಾತುಗಳು ಕರುಳು ಕುಯ್ಯುವಂತಿವೆ: “ಅಯ್ಯೋ, ನಿಟ್ಟುಸಿರು ಈ ಮೊಗವನ್ನೇ ಬಾಡಿಸಿದೆ. ಹೃದಯವು ಧಮನಿಗಳ ಸಮೇತ ಕಿತ್ತುಬರುವಂತಿದೆ. ನಿದ್ರೆಯು ಅಪ್ಪಿತಪ್ಪಿ ಕೂಡ ಸುಳಿಯುತ್ತಿಲ್ಲ. ನಲ್ಲನ ಮೊಗ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಹಗಲೂ ಇರುಳೂ ಅಳುವುದೊಂದೇ ಪಾಳಿಯಾಯಿತು. ಈ ಕಾಯವು ಕರಗುತ್ತಿದೆ. ಎಂಥ ಕೆಲಸ ಮಾಡಿದೆ, ಕಾಲಿಗೆ ಬಿದ್ದವನನ್ನು ದೂರ ದೂಡಿದೆನಲ್ಲ! ಗೆಳತಿಯರೇ, ಅದಾವ ಗುಣವಿದೆಯೆಂದು ಭ್ರಮಿಸಿ ನಲ್ಲನಲ್ಲಿ ಈ ಪರಿಯ ಮುನಿಸು ನನ್ನಿಂದ ಘಟಿಸುವಂತಾಯಿತು?” ಇಲ್ಲಿ ಆಕೆಯ ಮುನಿಸನ್ನು ಮತ್ತಾರೋ ಮಾಡಿಸಿದರೆಂಬ ಸೂಚನೆಯುಂಟು. ಅಲ್ಲವೇ ಮತ್ತೆ? ಪ್ರೇಮಿಯು ತಾನಾಗಿ ಮುನಿದರೆ ಅದು ಪ್ರೇಮವೇ ಅಲ್ಲ.
ಇತ್ತ ಬನ್ನಿ. ಇಲ್ಲಿಯೇ ಒಬ್ಬ ಮುಗುದೆಯಿದ್ದಾಳೆ. ಇವಳಿಗೊಂದು ಗೊಂದಲ. ಅದೇನೆಂದರೆ ಕಾದಲನು ಅವಳ ಬಳಿ ಸಾರಿದಾಗಲೆಲ್ಲ ಅಕೆಯ ಮೈಯೆಲ್ಲ ಕಿವಿಯಾಗುವುದೋ ಅಥವಾ ಕಣ್ಣಾಗುವುದೋ ಎಂಬ ಶಂಕೆ! ಇಂಥ ಸಂದೇಹಗಳನ್ನು ಸುಮಸಾಯಕನೂ ಪರಿಹರಿಸಲಾರ. ಅವರು ಹೀಗೆಯೇ ಹಿತಸಂಶಯದಲ್ಲಿ ಮುಳುಗಿ ಮೈಮರೆಯಲಿ. ನಾವು ಮುಂದೆ ಸಾಗೋಣ.
ಅಯ್ಯೋ, ಈ ಲಲನೆಯ ಕಣ್ಣೀರು ಕಲ್ಲನ್ನಿರಲಿ, ಕಬ್ಬಿಣವನ್ನೂ ಕರಗಿಸುವಂತಿದೆ! ಅವರ ಗೋಳನ್ನಿಷ್ಟು ಆಲಿಸಿ ತೆರಳೋಣ. ಯಾರದೇ ಸಂಕಟವನ್ನು ಸಹಾನುಭೂತಿಯಿಂದ ಕೇಳಿದರೆ ಅವರಿಗೂ ಸ್ವಲ್ಪ ಹಿತವಾದೀತಷ್ಟೆ. ಇದೊ ನೋಡಿ, ಗೆಳತಿಯ ಕೊರಳಿಗೆ ಕೈಜೋಡಿಸಿ ಕಂಬನಿಮಿಡಿದಿದ್ದಾಳೆ: “ಸಖಿ, ಹೋಗುವೆನೆಂದು ಹೇಳಿ ಅವನು ಆಸನದಿಂದ ಎದ್ದಾಗ ನಾನು ಏನೂ ನಡೆದಿಲ್ಲವೆಂಬಂತೆ ಆ ಮಾತು ಕೇಳಿದೆ. ಅವನು ಹೊರಟು ನಾಲ್ಕು ಹೆಜ್ಜೆ ಹಾಕಿದಾಗ ಉಪೇಕ್ಷೆಯನ್ನೇ ಮಾಡಿದೆ. ಮತ್ತೂ ಸಾಗಿ ಅವನು ಹಿಂತಿರುಗಿ ನೋಡಿದಾಗ ನಾನು ಎತ್ತಲೋ ನೋಡುತ್ತಿದ್ದೆ. ಇದೀಗ ಅವನಿಲ್ಲದೆ ಶೂನ್ಯವಾದ ಈ ಭವನದಲ್ಲಿ ಇವೇ ನನ್ನ ಪ್ರಾಣಗಳು ಗಟ್ಟಿಯಾಗಿ ಗೂಟ ಹೊಡೆದುಕೊಂಡು ನಿಂತಿವೆ. ಈ ನನ್ನ ಬಾಳಿಗೆ ಧಿಕ್ಕಾರವಿರಲಿ! ನಾನೀಗ ಅಳುವುದಾದರೂ ಬದುಕುವ ಆಸೆಯಿಂದ, ಬರಿಯ ಬೂಟಾಟಿಕೆಯಿಂದ!” ಅಬ್ಬಾ, ಇದಕ್ಕಿಂತಲೂ ಕಠೋರವಾದ ಆತ್ಮವಿಮರ್ಶೆ ಸಾಧ್ಯವೇ, ಸಾಧುವೇ?
ಪ್ರೀತಿ ಹಳಸಿಕೊಂಡಾಗ ಆಗುವಷ್ಟು ಸಂಕಟ ಸಾವಿನಲ್ಲೂ ಇಲ್ಲವೇನೋ. ಅದರಲ್ಲಿಯೂ ಸ್ವಾಧೀನಪತಿಕೆಯರಿಗೆ ವಿರಹೋತ್ಕಂಠಿತೆಯರ ದುರ್ಗತಿ ಬಂದಾಗ ಮತ್ತೇನು ಹೇಳುವುದು? ಈ ಮೂಲೆಯಲ್ಲೊಬ್ಬಳು ಮುಳುಮುಳನೆ ಅಳುತ್ತಿದ್ದಾಳೆ. ಅವಳ ಬಿಕ್ಕಳಿಕೆಯ ನಡುವೆ ಮಾತುಗಳನ್ನು ಅವಗತ ಮಾಡಿಕೊಳ್ಳುವುದೇ ಕಷ್ಟ. ಆದರೂ ಹೊಂಚಿ ಕೇಳಿ ಅರ್ಥೈಸಿಕೊಂಡದ್ದಾಯಿತು. ಪಾಪ, ಬಲು ನೊಂದ ಜೀವವಿದು. ಆತ್ಮೀಯಳಲ್ಲಿ ಹೇಳಿಕೊಳ್ಳುತ್ತಿದ್ದಾಳೆ: “’ಇದು ಕಪ್ಪು’ ’ಹೌದು, ಇದು ಕಪ್ಪೇ’ ’ಇದೇನಿದು ನಲ್ಲ! ಬಿಳುಪಲ್ಲವೇ ಇಲ್ಲಿರುವುದು?’ ’ಅಲ್ಲವೇ ಮತ್ತೆ?’ ’ನಾವಿನ್ನು ಹೊರಡೋಣವೇ?’ ’ಹೌದು ಹೌದು, ಹೊರಡಲೇಬೇಕು’ ’ಬೇಡ ಬೇಡ; ಇನ್ನೂ ಇಲ್ಲಿ ನಿಲ್ಲಬೇಕಿದೆ’ ’ಅವಶ್ಯವಾಗಿ ನಿಲ್ಲೋಣ; ಹೊರಟೇನು ಮಾಡುವುದು?’ ಹೀಗೆ ಯಾರು ನನ್ನ ಮನವನ್ನೇ ನಚ್ಚಿ ನಡೆದಿದ್ದನೋ ಅವನೇ ಇಂದು ಬೇರೊಬ್ಬನಾಗಿಹೋದ. ಗೆಳತಿ, ಗಂಡಸರು ಯಾರಿಗೆ ತಾನೆ ಅರ್ಥವಾಗಿದ್ದಾರೆ?” ಪ್ರೀತಿಯು ಪರಿಚಯದ ಮಟ್ಟಕ್ಕಿಳಿದಾಗ, ಪರಿಚಯವು ಪ್ರಾಣಿಮಾತ್ರತೆಗೆ ಜಾರಿದಾಗ ಮತ್ತೇನು ಹೇಳಬೇಕಿದೆ, ಇನ್ನೇನು ಬಾಳಬೇಕಿದೆ?
ಅಬ್ಬಾ, ಈ ಹೆಣ್ಣುಗಳ ಪಾಡನ್ನು ಮತ್ತೂ ಹೆಚ್ಚು ಕೇಳಲಾಗದು. ಈ ಪ್ರಾಕಾರದಿಂದಲೇ ಹೊರಗೆ ಸಾಗೋಣ. ಪ್ರಣಯವೈಫಲ್ಯದ ನೋವಿಗಿಂತ ಅದರ ಸಹಾನುಭೂತಿಭಾಸುರವಾದ ಕೇಳ್ಮೆಯು ಯಾವುದೇ ರೀತಿಯಲ್ಲಿ ಕಡಮೆಯಲ್ಲವೇನೋ. ಅರೆ, ಇದೇನಿದು? ಇಲ್ಲೊಬ್ಬಳು ನಮ್ಮ ನಿರ್ಗಮನಕಾಲದಲ್ಲಿ ಸ್ವಲ್ಪಮಟ್ಟದ ಸಮಾಧಾನವನ್ನೀಯುವಂತೆ ಸಂದಿಗ್ಧಮನೋಹರವಾದ ಸ್ಥಿತಿಯಲ್ಲಿದ್ದಾಳೆ! ಇವಳ ಪ್ರಶ್ನೆ ಒಳ್ಳೆಯ ಬೀಜ-ವೃಕ್ಷಸಮಸ್ಯೆಯಂಥದ್ದು. ಹಗಲು ಒಳಿತೋ ಇರುಳು ಒಳಿತೋ ಎಂಬುದೀಕೆಯ ವಿಚಿಕಿತ್ಸೆ. ಕಡೆಗೆ ಬಂದ ತೀರ್ಮಾನವನ್ನೂ ಸಾರುತ್ತಿದ್ದಾಳೆ. ಅದನ್ನು ಯಾರೂ ಒಪ್ಪಿ ತಲೆದೂಗಬೇಕು: ಯಾವ ಹೊತ್ತಿನಲ್ಲಿ ಪ್ರಿಯತಮನೊಡನೆ ಸಮಾಗಮವಾಗುವುದೋ ಆ ಹೊತ್ತೇ ಚೆನ್ನ; ಉಳಿದದ್ದು ಭಿನ್ನ.
ಯಾವುದೇ ಕಾವ್ಯದಲ್ಲಿ ಕವಿಯೇ ಆಡುವ ಮಾತುಗಳಿಗೆ ಹೆಚ್ಚಿನ ಬೆಲೆ. ಮತ್ತೂ ಹೆಚ್ಚಿನ ಕಲೆಯು ಪಾತ್ರಗಳ ಮೂಲಕ ಹೊಮ್ಮುವ ಮಾತುಗಳಲ್ಲಿಯೇ ಇರುವುದೆಂಬುದು ಸತ್ಯವಾದರೂ ಯಾವ ಕವಿಯೂ ಕೂಡ ತನಗಿಂತ ಮಿಗಿಲಾದ ಪಾತ್ರಗಳನ್ನು ಸೃಜಿಸಲಾರನಷ್ಟೆ. ಹಾಗೊಂದು ವೇಳೆ ಆದಲ್ಲಿ ಅದು ಪೂರ್ವದ ಮಹಾಕವಿಗಳ ಸಿದ್ಧಪಾತ್ರಗಳನ್ನೇ ಬಳಸಿಕೊಂಡು ಮಾಡಿದ ಯತ್ನಗಳಾಗುವ ಕಾರಣ ನಮ್ಮ ಮೊದಲಿನ ನಿಲವೇ ಸಲ್ಲುತ್ತದೆ. ವಿಶೇಷತಃ ಇದು ನಿರೂಪಣಪ್ರಧಾನವಾಗಿ, ವರ್ಣನಪ್ರಧಾನವಾಗಿ, ಸಂನಿವೇಶದ ಎಲ್ಲ ಮಗ್ಗುಲುಗಳನ್ನೂ ತೆರೆದು ತೋರುವ ಸಂದರ್ಭಗಳಲ್ಲಿ ಎದ್ದುಕಾಣುತ್ತದೆ. ಅಮರುಕನು ಇಂಥ ಕವಿಪ್ರೌಢೋಕ್ತಿಯನ್ನು ರೂಪಿಸುವಲ್ಲಿ ಗಟ್ಟಿಗ. ಬಹುಶಃ ಈ ಕಾರಣದಿಂದಲೇ ಆತನ ಕೃತಿಯಲ್ಲಿ ಅವನದಾದ ಮಾತುಗಳ, ಸಂನಿವೇಶಚಿತ್ರಣಗಳ ಗುಣ-ಗಾತ್ರಗಳೇ ಮಿಗಿಲು. ಪ್ರಕೃತ ಇಂಥ ಕೆಲವು ಕವಿಕಥನಗಳನ್ನು ಪರಿಶೀಲಿಸೋಣ. ಈ ಚಿತ್ರಣಗಳಲ್ಲಿ ಶೃಂಗಾರಪ್ರಪಂಚದ, ನಾಯಕ-ನಾಯಿಕೆಯರ ಪ್ರಣಯಲೋಕದ ಊಹಾತೀತಸ್ವಾರಸ್ಯಗಳೆಷ್ಟೋ ಹರಳುಗಟ್ಟಿವೆ.
ಇತ್ತ ಬನ್ನಿ. ಇಲ್ಲೊಬ್ಬ ದಿಟ್ಟನಾದ ತರುಣನು ಎಂಥ ರಸಮಯವೈಷಮ್ಯಕ್ಕೆ ಸಿಲುಕಿದ್ದಾನೆಂದು ನೋಡೋಣ. ಅವನು ಗೈದ ಅಪಚಾರಕ್ಕೆ ಮುನಿದ ಮಾನಿನಿಯು ತನ್ನ ಮನೆಗೆ ನಿಶ್ಶಂಕೆಯಿಂದ ಬಂದ ಆತನನ್ನು ನಳಿದೋಳುಗಳಲ್ಲಿ ಬಿಗಿಯಾಗಿ ಬಳಸಿ, ಸಖಿಯರೆದುರೇ ಸಿಟ್ಟಿನಿಂದ ಅಭ್ಯಂತರಮಂದಿರಕ್ಕೆ ಸೆಳೆದೊಯ್ದು, ದುಃಖ-ಸಂಕಟಗಳ ಮೃದುಗದ್ಗದಸ್ವರದಲ್ಲಿ ಅವನ ಅಕಾರ್ಯಗಳನ್ನು ಎತ್ತಿ ತಿವಿಯುತ್ತ, ಕಂಬನಿ ಮಿಡಿಯುತ್ತ, ಕೋಮಲಕರಗಳಿಂದ ಬಡಿಯುತ್ತಲೂ ಇದ್ದಾಳೆ. ಅವನಿದೆಲ್ಲವನ್ನೂ ನಗುನಗುತ್ತ ಅನುಭವಿಸುತ್ತಿದ್ದಾನೆ, ಆಸ್ವಾದಿಸುತ್ತಿದ್ದಾನೆ ಕೂಡ. ಆಹಾ, ಧನ್ಯರಿಗಷ್ಟೇ ಇಂಥ ಸತ್ಕಾರ ಲಭ್ಯ!
ಅಯ್ಯೋ, ಈ ನಾಯಿಕೆಯ ಮುಗ್ಧತೆಗೆ ಮೇರೆಯೇ ಇಲ್ಲ. ಪಯಣಕ್ಕೆ ಸಿದ್ಧನಾದ ನಲ್ಲನನ್ನು ಅವಳು ಕಂಬನಿಯ ಕಂಗಳಿಂದ ಕೇಳುತ್ತಿದ್ದಾಳೆ: “ಪ್ರಿಯ, ಈಗ ಹೋಗಿ ನೀನು ಮತ್ತೊಂದು ಪ್ರಹರದೊಳಗೆ, ಅಥವಾ ಮಧ್ಯಾಹ್ನದೊಳಗೆ, ಇಲ್ಲವೇ ಸಂಜೆಯೊಳಗೆ ಮರಳಿಬರುವೆಯಲ್ಲವೇ?” ಎಂದು. ಆದರೆ ಆ ಬಡಪಾಯಿಗೆ ಅವನು ಹೋಗಲಿರುವ ಪ್ರಾಂತವು ನೂರಾರು ದಿನಗಳ ಹಾದಿಯದೆಂಬ ವಾಸ್ತವದ ಅರಿವಿಲ್ಲ. ಈಗ ಬಹುಶಃ ಅಳುವ ಸರದಿ ನಾಯಕನದು.
ಮುದ್ದಿಗಾಗಿ ಸಾಕಿಕೊಳ್ಳುವ ಅರಗಿಳಿಗಳೂ ಕೆಲವೊಮ್ಮೆ ತೀರದ ಮುಜುಗರಗಳಿಗೆ ಕಾರಣವಾಗುತ್ತವೆ. ಅಂಥ ಒಂದು ಸಂನಿವೇಶ ಇದೋ ಕಣ್ಣೆದುರು ಬರಲಿದೆ. ನವದಂಪತಿಗಳ ನಟ್ಟಿರುಳ ಸರಸವನ್ನು ನಿರ್ನಿಮೇಷನೇತ್ರಗಳಿಂದ ಆಲಿಸಿದ ರಸಿಕಶುಕವೊಂದು ಮುಂಜಾನೆ ಹಿರಿಯರ ಸಮಕ್ಷದಲ್ಲಿ ನಿಶ್ಶಂಕೆಯಿಂದ ಆ ಎಲ್ಲ ಏಕಾಂತಸಂಭಾಷಣೆಯನ್ನು ಲೋಕಾಂತವಾಗಿಸುತ್ತಿದೆ! ಪಾಪ, ಇದನ್ನು ಕೇಳಿದ ನವವಧುವಿನ ಗತಿ ಏನಾಗಿರಬೇಡ? ಆದರೂ ಪ್ರತ್ಯುತ್ಪನ್ನಮತಿಯಾದ ಆ ಜಾಣೆ ದಾಳಿಂಬೆಯ ಬೀಜಗಳನ್ನು ತಿನ್ನಿಸುವ ನೆವದಿಂದ ಆ ಹೊತ್ತಿಗೆ ಕೈಗೆಟುಕಿದ ತನ್ನ ಬೆಲೆಬಾಳುವ ಮಾಣಿಕ್ಯದ ಹರಳುಗಳನ್ನೇ ಕಿವಿಯೋಲೆಯಿಂದ ಸುಲಿದು ಧೂರ್ತಶುಕದ ಬಾಯನ್ನು ಮುಚ್ಚಿಸಿದ್ದಾಳೆ! ಅಂತೂ ಮರ್ಯಾದೆ ಉಳಿಯಿತು.
ಈ ಮುನ್ನ ಕಂಡ ಗಿಳಿಗಿಂತ ಕುಟಿಲಬುದ್ಧಿಯ ಧೂರ್ತಶುಕವನ್ನು ಗಮನಿಸಿ. ಇದು ಕೂಡ ನವದಂಪತಿಗಳ ಗುಟ್ಟಿನ ಲಲ್ಲೆವಾತನ್ನು ಕದ್ದುಕೇಳಿದೆ. ಅಷ್ಟೇ ಅಲ್ಲ, ನಾನಿಂತು ಕದ್ದುಕೇಳಿದ ಮಾತುಗಳನ್ನು ಗಟ್ಟಿಯಾಗಿ ಹೇಳಿ ಮನೆಗೆಲ್ಲ ಹಬ್ಬಿಸಬಾರದೆಂದರೆ ನಾನಿಚ್ಛಿಸಿದ ತಿಂಡಿ-ತಿನಿಸನ್ನೆಲ್ಲ ನನಗೀಗ ತಂದೊಪ್ಪಿಸೆಂದು ನಮ್ಮ ನಾಯಿಕೆಯನ್ನು ದಬಾಯಿಸುತ್ತಿದೆ! ಹಿಡಿಯಷ್ಟಿರುವ ಈ ಗಿಳಿಯ ಬೆದರಿಕೆಗೆ ಅಂಜುವಳೇ ನಮ್ಮ ಹುಡುಗಿ? ಆದರೆ ನೈಜವಾದ ಲಜ್ಜೆ ಮಾತ್ರ ಅವಳನ್ನು ತಂಗಾಳಿಗೆ ತೊನೆಯುವ ಕಮಲಿನಿಯಂತೆ ಬಾಗಿಸಿದೆ. ಒಟ್ಟಿನಲ್ಲಿ ಇಂಥ ಪಕ್ಷಿಗಳನ್ನು ಸಾಕುವಲ್ಲಿ ಪ್ರಣಯಿಗಳಿಗೆ ಎಚ್ಚರವಿರಬೇಕು. ದಿಟವೇ, ಅವರ ಸಂದೇಶಗಳನ್ನು ಪರಸ್ಪರ ತಂದೊಪ್ಪಿಸಬಹುದು; ಆದರೆ ಅವುಗಳನ್ನೆಲ್ಲ ಈ ರೀತಿ ಬಟಾಬಯಲು ಮಾಡಿ ಮಾನವನ್ನೂ ತೆಗೆಯಬಹುದು. ಅಂತೂ ಈ ಜೀವಿಗಳು ನಿಗ್ರಹಾನುಗ್ರಹಸಮರ್ಥರು.
ಪತಿವ್ರತೆಯರ, ಸೌಜನ್ಯಶೀಲೆಯರ ಮುನಿಸಿನ ಅಭಿವ್ಯಕ್ತಿ ತುಂಬ ಇಕ್ಕಟ್ಟಿನದು. ಆದರೆ ಇಂಥ ಸುಗುಣೆಯರು ಜಾಣೆಯರೂ ಆದಾಗ ಈ ಬಗೆಯ ಚಟುವಟಿಕೆಗೆ ಎಲ್ಲಿಲ್ಲದ ಸೊಗಸು ಬರುತ್ತದೆ. ಇಲ್ಲೊಬ್ಬಳು ಸಾಧ್ವಿಯು ಮನೆಗೆ ಬಂದ ಪ್ರಿಯತಮನನ್ನು ಮಿಗಿಲಾದ ಬುದ್ಧಿವಂತಿಕೆಯಿಂದ ದೂರವಿಡುತ್ತಿದ್ದಾಳೆ: ಏಕಾಸನದಲ್ಲಿ ಕುಳಿತುಕೊಳ್ಳಬೇಕೆಂದು ನುಗ್ಗಿದ ಅವನನ್ನು ಸ್ವಾಗತಿಸುವ ನೆವದಲ್ಲಿ ನಿಂತು ಒಂಟಿಯಾಗಿಸಿದ್ದಾಳೆ; ಆತುರದಿಂದ ಬರ ಸೆಳೆದುಕೊಳ್ಳಲು ಕೈಚಾಚಿದ ಅವನಿಗೆ ತಾಂಬೂಲವನ್ನು ತರುವ ನೆವದಲ್ಲಿ ತಾನೇ ದೂರವಾಗಿದ್ದಾಳೆ; ಬಾಯ್ತುಂಬುವಂತೆ ಲಲ್ಲೆವಾತುಗಳನ್ನಾಡಲು ಮುಂದಾದ ಆ ಮಾತಾಳಿಯನ್ನು ಪರಿಪರಿಯಾಗಿ ಸೇವಿಸಲೆಂದು ಪರಿಜನರಿಗೆಲ್ಲ ಆಣತಿ ನೀಡುವ ಭರದಲ್ಲಿ ಬೇಕೆಂದೇ ಕಿವುಡುಗೇಳುತ್ತಿದ್ದಾಳೆ. ಅಂತೂ ಉಪಚಾರದ ನೆವದಿಂದ ಪ್ರಿಯತಮನ ಅಪಚಾರಕ್ಕೆ ಸೊಗಸಾಗಿ ಸೇಡುತೀರಿಸಿಕೊಳ್ಳುತ್ತಿದ್ದಾಳೆ.
ಪ್ರಮದೆಯರಿಗೆ ಮಾತ್ರ ಜಾಣ್ಮೆಯು ಗುತ್ತಿಗೆಯಾಗಿಲ್ಲವಷ್ಟೆ. ನಾಯಕರಿಗೂ ಬುದ್ಧಿವಂತಿಕೆ ಒಲಿದುಬಂದ ಸಂದರ್ಭಗಳು ಹತ್ತಾರು. ಪ್ರಾಯಶಃ ಪೇಚಿಗೆ ಸಿಲುಕಿದಂತೆಲ್ಲ ಇಂಥ ಜಾಣ್ಮೆಗಳು ಎಂಥವರಿಗೂ ಕೊನರುತ್ತವೇನೋ. ಅದೋ, ಅಲ್ಲಿ ಕಾಣುವ ತರುಣನು ಬಹುವಲ್ಲಭ. ನಮಗಂತೂ ಸದ್ಯಕ್ಕೆ ತೋರುವಂತೆ ಅವನಿಗಿರುವವರು ಇಬ್ಬರು ಹೆಂಡಿರು. ಕಾಣದವರಿನ್ನು ಮತ್ತೆಷ್ಟೋ! ಆ ವಿವರ ನಮಗೇಕೆ? ಅದರ ಗೂಢಚರ್ಯೆಯನ್ನು ಅವನೊಲಿದ ಹೆಣ್ಣುಗಳೇ ಮಾಡಿಕೊಳ್ಳಲಿ. ದುರ್ದೈವದಿಂದ ಆ ಇಬ್ಬರು ಹೆಂಡಿರೂ ಒಂದೇ ಶಿಲಾತಲದ ಮೇಲೆ ಕುಳಿತು ಲೀಲೋದ್ಯಾನದಲ್ಲಿ ಆತನನ್ನು ನಿರೀಕ್ಷಿಸಿದ್ದಾರೆ. ಹಿಂದಿನಿಂದ ಇದನ್ನು ಕಂಡ ನಮ್ಮ ಧೂರ್ತನಾಯಕನು ಸದ್ದಾಗದಂತೆ ಬಂದವನೇ ಒಬ್ಬಳನ್ನು ನಸುಬಾಗಿಸಿ, ಗಟ್ಟಿಯಾಗಿ ಕಣ್ಮುಚ್ಚಿ, ಮತ್ತೊಬ್ಬಳ ಹರ್ಷಪ್ರಫುಲ್ಲವೂ ರೋಮಾಂಚಿತವೂ ಆದ ಕದಪುಗಳನ್ನು ಸವರುತ್ತ ಗಾಡವಾಗಿ ಚುಂಬಿಸಿದ್ದಾನೆ. ಅಂತೂ ಒಂದು ಕಲ್ಲಿನಲ್ಲಿ ಎರಡು ಹಣ್ಣುಗಳನ್ನು, ಅಲ್ಲಲ್ಲ ಹೆಣ್ಣುಗಳನ್ನು, ಹೊಡೆದಿದ್ದಾನೆ! ಅದೂ ನೋವಾಗದಂತೆ, ರಸವೇ ಒಸರುವಂತೆ ಈ ಚೇಷ್ಟೆಯನ್ನೆಸಗಿದ್ದಾನೆ. ಇಲ್ಲಿಯ ಸ್ವಾರಸ್ಯವೆಂದರೆ ಒಟ್ಟಂದದ ಘಟನೆಯು ಮೂವರಿಗೂ ಸಂತಸ ತಂದಿದೆ. ಅಬ್ಬಾ, ವಂಚನೆಯ ಬೀಜದಿಂದ ಅದೆಷ್ಟು ಹರ್ಷಾಂಕುರಗಳು ಮೊಳೆತಿವೆ! ಸತ್ಯವೂ ಆನಂದವೂ ಅವಿನಾಭಾವಗಳೆಂದು ವೇದಾಂತಿಗಳ ನಿಲುಮೆ. ಆದರೆ ಇಲ್ಲಿ ಅಸತ್ಯವೂ ಆನಂದವೂ ಅದು ಹೇಗೆ ಸೇರಿಹೋಗಿವೆಯೆಂಬುದನ್ನು ಬ್ರಹ್ಮನೂ ಬಗೆಹರಿಸಲಾರ.
ಅಮರುಕನ ಕೈಹಿಡಿದು ಸಾಗುವ ನಮಗೆ ಯಾವುದೇ ಪ್ರಣಯಿಗಳ ಶಯನಗೃಹಕ್ಕಿರಲಿ, ಹೃದಯಗಹ್ವರಕ್ಕೂ ಮುಕ್ತವಾದ ರಹದಾರಿಯುಂಟು. ಅಲ್ಲದೆ, ನಾವೇನೂ ಅವರನ್ನು ಕುರಿತು ಕೆಟ್ಟದಾಗಿ ಆಡಿಕೊಂಡು ನಗುವುದಿಲ್ಲವಷ್ಟೆ. ಹತ್ತು ಮಂದಿ ಹಿರಿಯರ ಮುಂದೆ ಮಾನವನ್ನು ತೆಗೆಯುವುದೂ ಇಲ್ಲವಷ್ಟೆ. ಇದಕ್ಕೆ ಬದಲಾಗಿ ನಮ್ಮ ಸಹಾನುಭೂತಿಯ ಮೆಚ್ಚುಗೆಯೇ ಅವರೆಲ್ಲರಿಗೆ ಸಲ್ಲುತ್ತಿದೆ. ಆದುದರಿಂದ ಇದೀಗ ನಿರ್ಭರಪ್ರಣಯಿಗಳಾದ ದಂಪತಿಗಳ ಮಲಗುವ ಮನೆಯೊಳಗೆ ನುಸುಳುವುದೇನೂ ತಪ್ಪಲ್ಲ. ಅರೆ, ಇದೇನಿದು? ಏಕದೇಹನ್ಯಾಯದ ಈ ಜೋಡಿಯಿಂದು ಬೆನ್ನುಹಾಕಿಕೊಂಡು ಮಲಗಿದೆ? ಹಾ, ತಿಳಿಯಿತು. ಅದಾವುದೋ ಕ್ಷುದ್ರಕಾರಣಕ್ಕೆ ಮುನಿದು ಬಿಗುಮಾನದಿಂದ ಮುಖಮುರಿದುಕೊಂಡಿದ್ದಾರೆ. ಆದರೆ ನಾವು ನಿರಾಶರಾಗಬೇಕಿಲ್ಲ. ಇದೊ, ನೋಡುನೋಡುತ್ತಿರುವಂತೆಯೇ ಮೆಲ್ಲಮೆಲ್ಲನೆ ಅವರು ಮತ್ತೊಬ್ಬರ ಚರ್ಯೆಯನ್ನು ನಿಗೂಢವಾಗಿ ಗಮನಿಸುವ ಕುತೂಹಲದಿಂದ ತಿರುಗಿ ನೋಡುತ್ತ ಬರುತ್ತಿದ್ದಂತೆಯೇ ನೋಟಗಳು ಪರಸ್ಪರ ತೆಕ್ಕೆಹಾಕಿಕೊಂಡಿವೆ. ಅಬ್ಬಾ, ಈ ನೇತ್ರಸೂತ್ರಗಳ ಗೋಜಲೇ ಗೋಜಲು! ಇನ್ನೆಲ್ಲಿಯ ಬಿಂಕದ ಆಧಿಪತ್ಯ? ಫಕ್ಕನೆ ಮುಗುಳ್ನಗೆಯುಕ್ಕಿದೆ; ಬಿರಿದ ಚೆಂದುಟಿಗಳು ಮತ್ತೆ ಪರಸ್ಪರ ಬೆಸೆದುಕೊಳ್ಳುತ್ತಿವೆ; ಹಸಿದ ತೋಳುಗಳು ಹಿಗ್ಗಿ ಆವರಿಸಿಕೊಳ್ಳುತ್ತಿವೆ. ನಾವಿನ್ನಿಲ್ಲಿ ನಿಲ್ಲುವುದು ಸರಿಯಲ್ಲ. ಈ ಜೋಡಿಗೆ ಚಿರಸಂತೋಷದ ಹರಕೆಯ ಹೊದಿಕೆಯನ್ನು ಹೊದ್ದಿಸಿ ಮೆಲ್ಲನೆ ಹೊರಗೆ ಜಾರಿಕೊಳ್ಳೋಣ.