ಅಮರುಕನ ಹೆಣ್ಣುಗಳ ಹಠ ಕಾವ್ಯಪರಿಧಿಯನ್ನೂ ಮೀರಿದ ಅತಿಕವಿತಾಭೂಮಿಕೆ. ಮನಸ್ಸನ್ನು ಕಲ್ಲಾಗಿಸಿಕೊಂಡು ನಲ್ಲರನ್ನು ಮುನಿದ ಹೆಣ್ಣುಗಳು ಹೊರದೂಡುವರೆಂದು ಬಲ್ಲವರ ಅಭಿಪ್ರಾಯ. ಆದರೆ ಅಮರುಕನ ಹೆಣ್ಣುಗಳು ಮೊದಲು ತಮ್ಮೊಡಲಿನಿಂದ ಪ್ರಾಣವನ್ನು ದೂಡಲು ನಿಶ್ಚಯ ಮಾಡಿಕೊಂಡ ಬಳಿಕವೇ ಪ್ರಾಣೇಶ್ವರರನ್ನು ಮನಸ್ಸಿನಿಂದ, ಮಂದಿರದಿಂದ ಹೊರಡಿಸಬಲ್ಲರು. ಇಂಥ ನಾಯಿಕೆಯ ಬಳಿ ಮುಂಜಾನೆ ಪ್ರಿಯತಮನು ಬಂದು ಬಾಗಿಲು ತಟ್ಟಿದ್ದಾನೆ. ಇರುಳೆಲ್ಲ ಅವನಿಗಾಗಿ ಕಾದು ಕಳವಳಿಸಿದ್ದ ಆಕೆ ಅಗುಳಿ ತೆಗೆದು ನೋಡಿದಾಗ ಅವಳಿಗೆ ಕಂಡದ್ದೇನು? ಅಲತಿಗೆಯ ಬಣ್ಣವನ್ನು ಹಣೆಯಲ್ಲಿ, ತೋಳಬಂದಿಯ ಒತ್ತುಗುರುತನ್ನು ಕೊರಳಿನಲ್ಲಿ, ಕಾಡಿಗೆಯ ಕಾಲುವೆಯನ್ನು ತುಟಿಯಂಚಿನಲ್ಲಿ, ತಂಬುಲದ ಕೆಂಪನ್ನು ಕಣ್ಣಂಚಿನಲ್ಲಿ ಮೆತ್ತಿಸಿಕೊಂಡು ಬಂದ ವಿಕಟಶೃಂಗಾರದ ಮನದಾಣ್ಮ! ಸಾಧ್ವಿಯಾದ ಆಕೆ ಮತ್ತೇನು ತಾನೇ ಮಾಡಬಲ್ಲಳು? ಬಾಗಿಲು ತೆರೆದೊಡನೆ ಸುಳಿದ ಬಾಲಭಾಸ್ಕರನ ಕಿರಣಗಳಿಗೆ ಅರಳಿದ ತನ್ನ ಕೈದಾವರೆಯ ಬಿರಿದೊಡಲಿನಲ್ಲಿ ನಿಟ್ಟುಸಿರ ಬೇಗೆಯೊಡನೆ ಬಿಸಿಗಂಬನಿಗಳೂ ಸುರಿದುಹೋದುವು; ಹೂವಿನಂಥ ಅನುಬಂಧವೂ ಸೀದುಹೋಯಿತು.
ಈ ಮನೆಯಲ್ಲೊಬ್ಬಳು ನವವಧುವಿದ್ದಾಳೆ. ಮನೆ ತುಂಬ ಜನ. ಏಕಾಂತವಿನ್ನು ದುರ್ಲಭವೆಂದು ಹೇಳಬೇಕಿಲ್ಲ. ಆದರೆ ಅದು ಹೇಗೋ ಇರುಳು ಕೊನೆಯಾಗುತ್ತಿರುವ ಹೊತ್ತಿನಲ್ಲಿ ಸುತ್ತಮುತ್ತಲ ಪರಿಸರವೆಲ್ಲ ನಿದ್ರಾಸಮುದ್ರದಲ್ಲಿ ನಷ್ಟವಾದುದನ್ನರಿತು ಹಿಗ್ಗಿನಿಂದ ಹತ್ತಿರದಲ್ಲಿ ಮಲಗಿದ್ದ ಪತಿಯತ್ತ ನೋಡಿದಳು. ಅಂದಿನವರೆಗೆ ಬಿಗಿಹಿಡಿದ ನಾಚಿಕೆಯನ್ನು ಈ ಹೊತ್ತಿನ ಮಟ್ಟಿಗೆ ಬಿಟ್ಟು ನೆಮ್ಮದಿಯಾಗಿ ಆತನ ಮುಚ್ಚಿದೆವೆಗಳ ಮಧ್ಯದಲ್ಲಿಯೂ ಮುಕ್ಕುಳಿಸುವ ಮೊಗದ ಚೆಲುವನ್ನು ಎವೆಯಿಕ್ಕದೆ ನೋಡಿದಳು. ಮತ್ತೂ ಧೈರ್ಯವಾಗಿ ತುಸು ಮುಂದುವರಿದು ಬಾಗಿ ಅವನನ್ನು ಮುದ್ದಿಸಿಯೇಬಿಟ್ಟಳು. ಅವಳ ಆ ಮುಟ್ಟಿಯೂ ಮುಟ್ಟದಂತಿದ್ದ ಹೂಮುತ್ತು ಮುಗಿಯಿತೋ ಇಲ್ಲವೋ ಆವರೆಗೆ ನಿದ್ರೆಯನ್ನು ಚೆನ್ನಾಗಿ ನಟಿಸಿದ್ದ ನಲ್ಲನು ಗಲಗಲನೆ ಜಕ್ಕುಲಿಸಿ ನಗುತ್ತ ಮುದ್ದಿನ ಮಳೆಯಲ್ಲಿ ಅವಳನ್ನು ಮುಳುಗಿಸಿ ಮದುವಣಗಿತ್ತಿಯ ಸಂಕೋಚವನ್ನು ಸಡಲಿಸಿದ. ಪಾಪ, ಆ ಶಯನಮಂದಿರದ ಪರಿಸರವೆಲ್ಲ ನಿರ್ಜನವಾಗಿತ್ತೆಂದು ಆ ಮುಗುದೆಯ ಭ್ರಾಂತಿ. ನಾವು ಅಮರುಕನ ಬೆನ್ನಿಗಂಟಿ ಅಲ್ಲಿ ಇಣಿಕುತ್ತಲೇ ಇದ್ದೆವಲ್ಲ! ದಿಟವೇ, ಆದರೆ ಉಸಿರು ಬಿಗಿಹಿಡಿದು, ಕಣ್ಣು ಮಿಟುಕಿಸದೆ, ಭಿತ್ತಿಕುಡ್ಯಗಳೆಂಬಂತೆ ನಾವು ನಿಂತದ್ದು ಮರೆಯುವಂತಿಲ್ಲ.
ಪ್ರೀತಿಗೆ ಭೀತಿಯೂ ಇಲ್ಲ, ಲಜ್ಜೆಯೂ ಇಲ್ಲ. ಹಾಗೆಂದು ಕೆಲವೊಮ್ಮೆ ಭೀತಿಯೇ ಎಲ್ಲವಾಗಿ, ಲಜ್ಜೆಯೇ ಸರ್ವಸ್ವವಾಗಿ ಪರಿಣಮಿಸಿದ ಸಂದರ್ಭಗಳೂ ಇಲ್ಲದಿಲ್ಲ. ಒಟ್ಟಿನಲ್ಲಿ ಪ್ರಣಯವು ಅನುಭವಕ್ಕಲ್ಲದೆ ಅರಿವಿಗಾಗಿ ಇಲ್ಲವೇ ಇಲ್ಲ. ಹೀಗಾಗಿಯೇ ಇಲ್ಲಿ ಸರಿ-ತಪ್ಪುಗಳ ತರ್ಕಕ್ಕೆ ಕುರುಡುಕಾಸಿನ ಬೆಲೆಯೂ ಇಲ್ಲ. ಇಂತಲ್ಲವಾದರೆ ಇಲ್ಲೊಬ್ಬಳು ಹುಡುಗಿ ಹೀಗೇಕೆ ಹಲುಬುತ್ತಿದ್ದಳು? “ಎದೆ ಸಿಡಿದುಹೋಗಲಿ, ಮದನ ತನ್ನಿಚ್ಛೆಗೆ ಬಂದಂತೆ ದಂಡಿಸಲಿ, ಈ ಹಾಳು ಮೈ ಸೊರಗಿ ಸೊಪ್ಪಾಗಲಿ. ಗೆಳತಿ, ಆ ಚಂಚಲನ, ಆ ನಿಷ್ಠುರನ ಹೊಲಬೇ ನನಗಿನ್ನು ಬೇಡ”. ಸರಿ ಸರಿ. ಹೀಗೆಂದು ರಭಸದಿಂದ ಅಬ್ಬರಿಸುತ್ತಿದ್ದ ಇವಳ ಕಣ್ಣು ಅದೆತ್ತ ತಿರುಗಿದೆ? ಓ, ತಿಳಿಯಿತು ತಿಳಿಯಿತು! ಅವನು ಬರುವನೆಂದು ಭಾವಿಸಿದ ಬಾಗಿಲತ್ತಲೇ ಕೀಲಿಸಿದೆ. ಪ್ರಣಯದ ಪರಿ ಹೀಗೆಯೇ. ಇಲ್ಲಿ ವಾಚಿಕ-ಆಂಗಿಕಗಳಿಗೂ ಸಾತ್ತ್ವಿಕ-ವಾಚಿಕಗಳಿಗೂ ಹೊಂದಾಣಿಕೆಯೇ ಇಲ್ಲ. ಹಾಗಿದ್ದಲ್ಲಿ ಅದು ನಟನೆಯಾದೀತಲ್ಲದೆ ಬದುಕಾದೀತೇ? ಶೃಂಗಾರರಸಕ್ಕೆ ಯಾವುದು ಸರಿಯೋ ಅದು ರತಿಭಾವಕ್ಕೆ ತಪ್ಪೂ ಆಗಬಹುದೇನೋ.
ಅಬ್ಬಾ, ಈ ಗಂಡಸರ ತೊಂಡುತನವೇ! ಗಾಯಗೊಂಡ ತುಟಿಯಿಂದ ಮನೆಗ ಬಂದ ನಲ್ಲನನ್ನು ಯಾವ ಹೆಣ್ಣು ತಾನೇ ಶಂಕಿಸುವುದಿಲ್ಲ? ಆದುದರಿಂದ ಮುನಿದ ಮುಗುದೆಯು ಕೈಯಲ್ಲಿದ್ದ ಲೀಲಾಕಮಲದಿಂದಲೇ ಆತನ ಮೊಗವನ್ನು ರಪ್ಪನೆ ಬಡಿದಳು. ಹೆಣ್ಣು ಬಡಿದ ಹೂವಿನ ಪೆಟ್ಟು ಯಾವ ಮಾತ್ರದ ನೋವನ್ನು ತಾನೇ ತಂದೀತು? ಆದರೆ ಆ ಧೂರ್ತನು ಅಷ್ಟಕ್ಕೇ ಕಣ್ಣಿಗೆ ಪೆಟ್ಟಾಯಿತೆಂದು ಕಣ್ಣುಮುಚ್ಚಿ ಮುಖವನ್ನು ಹಿಂಡಿಕೊಂಡ. ಗಾಬರಿಗೊಂಡ ಈ ತನ್ವಿ ಅವನ ಕಣ್ಣಿಗೆ ತಂಗಾಳಿಯೂದುತ್ತ, ತುಟಿಯಿಂದ ಶಾಖವೀಯುತ್ತ ಅವನಿಚ್ಛಿಸಿದ ಚುಂಬನೋಪಚಾರವನ್ನು ತಾನಾಗಿ ಮಾಡಿಬಿಟ್ಟಳು. ಆ ಪಾಪಿ ಮಾತ್ರ ತನ್ನ ತಪ್ಪನ್ನು ಒಪ್ಪಿಕೊಳ್ಳದೆ, ಅವಳ ಕಾಲುಗಳಿಗೆ ಬಿದ್ದು ಬೇಡದೆ, ತನ್ನ ಇಂಗಿತವನ್ನು ಸಾಧಿಸಿಯೇಬಿಟ್ಟ.
ಇಂಥ ಮುಗ್ಧೆಯನ್ನೂ ಮೀರಿಸಿದ ಪರಮಮುಗ್ಧೆ ಇಲ್ಲೊಬಳಿದ್ದಾಳೆ. ಈ ಮೂಲೆಯಲ್ಲವಳನ್ನು ಕೂರಿಸಿಕೊಂಡು ಅನುಭವವೃದ್ಧೆಯಾದ ಗೆಳತಿಯೊಬ್ಬಳು ಹಿತೋಪದೇಶಕ್ಕೆ ತೊಡಗಿದ್ದಾಳೆ. ಅವರ ಮಾತನ್ನು ಗೋಡೆಯೇ ಕಿವಿಯಾಗಿ ಆಲಿಸೋಣ: “ಅಯ್ಯೋ ನಿನ್ನ ಪೆದ್ದುತನವೇ! ಹೀಗೆಲ್ಲ ಕಾಲಹರಣ ಮಾಡಿಕೊಳ್ಳಬೇಡ. ಆನನ್ನು ತೊಂಡುತಿರುಗಲು ಬಿಡಬೇಡ. ಅವನನ್ನು ಸುಮ್ಮನೆ ಒಪ್ಪಿಕೊಳ್ಳಬೇಡ. ಬಿಂಕ ಮಾಡು, ಬಿಗುಮಾನವಿರಲಿ; ಧೈರ್ಯ ಮಾಡು, ಕೊಂಕುತನ ಬರಲಿ”. ಹೀಗೆ ಸಖಿಯು ಸಾವಿರ ಮಾತಾಡಿದರೂ ಅವಳದೊಂದೇ ಪಿಸುಮಾತು: “ಲೇ, ಮೆಲ್ಲಗೆ ನುಡಿಯೇ! ನನ್ನೊಳಗೇ ಇರುವ ನನ್ನ ದಯಿತನು ನಿನ್ನ ಮಾತು ಕೇಳಿ ಮುನಿದಾನು!” ಅಬ್ಬಾ, ಇಂಥವರನ್ನು ತಿದ್ದಲು ಸತ್ಯಭಾಮೆಗೂ ಸಾಧ್ಯವಿಲ್ಲ.
ಕೆಲವೊಮ್ಮೆ ಅನುಕೂಲೆಯರಾದ ಗೆಳತಿಯರು ಏಕಾಂತವಿರೋಧಿಗಳಾಗಿ ಪ್ರತಿಕೂಲವೆನಿಸುವುದುಂಟು. ಆಗೆಲ್ಲ ನಾಯಿಕೆಯರೇ ಕೌಟಿಲ್ಯ-ನಯಗಳಿಂದ ಅವರನ್ನು ದೂರಮಾಡಿಕೊಳ್ಳಬೇಕು. ಅಲ್ಲವೇ ಮತ್ತೆ, ಮೃಷ್ಟಾನ್ನವನ್ನೇ ಬಡಿಸುವ ಸೌಟಾದರೂ ಅದು ತುತ್ತೆತ್ತುವಾಗ ಅಡ್ಡ ಬಂದರೆ ಹೇಗೆ? ಅದೊ, ಅಲ್ಲೊಬ್ಬ ಹರಿಣಾಕ್ಷಿಯು ಹಲವು ಕಾಲದ ಬಳಿಕ ಬಂದ ಚಿರಕಾಂಕ್ಷಿತಕಾಂತನನ್ನು ಅಂತಃಪುರದೊಳಗೆ ಕುಳ್ಳಿರಿಸಿ ಉಪಚರ್ಯೆಗೆ ತೊಡಗಿದಳು. ಆದರೆ ಹಾಳುಗೆಳತಿಯರ ಗುಂಪು ಕೊನೆಯಿಲ್ಲದ ಹರಟೆಯಲ್ಲಿ ಅವನನ್ನು ಸೆಳೆಯಿತು. ಇನ್ನೇನು ಹೊತ್ತು ಕಂತಿ ಕೈದೀವಿಗೆಯನ್ನೂ ಹೊತ್ತಿಸಿದ್ದಾಯಿತು. ಆದರೂ ಈ ಅರಸಿಕಸಖಿಯರ ತಂಡ ತೆರಳುತ್ತಿಲ್ಲ. ತತ್ಕ್ಷಣವೇ ನಮ್ಮೂ ಜಾಣೆ ಚಿಟ್ಟನೆ ಚೀರಿ ಚೇಳು ಚೇಳೆಂದು ಕೂಗುತ್ತ ಚೇಲಾಂಚಲದ ಮೂಲಕ ದೀಪವನ್ನೇ ಆರಿಸಿಬಿಟ್ಟಳು! ಈ ಕಡುಗತ್ತಲಲ್ಲಿ ಮುಂದೆ ನಡೆದದ್ದು ನಮಗೆ ಕಾಣಿಸಲಿಲ್ಲ; ಕವಿಗಷ್ಟೇ ಕಂಡಿರಬಹುದು. ಆದರೆ ಏನೋ ಮಣಿತ-ರಣಿತಗಳು, ಕುಲುಕು-ಮುಲುಗುಗಳು ನಮ್ಮ ಕಿವಿಗೆ ಬೀಳದೆಹೋಗಿಲ್ಲ. ಬಿಡಿ, ನಮಗೂ ಊಹಾಪೋಹವೈಶಾರದ್ಯವಿದೆ.
ಇದೇನಿದು? ಒಬ್ಬಳು ಪ್ರೋಷಿತಪತಿಕೆ ಇಲ್ಲೊಂದು ಪರ್ಣಕುಟಿಯಲ್ಲಿ ಕುಳಿತು ಕಾಯುತ್ತಿದ್ದಾಳೆ. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು, ಆಶಾತಂತುವನ್ನೇ ಬತ್ತಿಯಾಗಿ ಹೊಸೆದು, ಪ್ರೇಮಾಗ್ನಿಯಲ್ಲಿ ಹೊತ್ತಿಸಿದೊಂಡು ನಿರೀಕ್ಷೆಯಲ್ಲಿದ್ದಾಳೆ! ಇವಳು ನೋಟವು ಸಾಗುವವರೆಗೆ ದಿಗಂತವನ್ನೂ ಮೀರಿ ಹಾದಿಗೆಲ್ಲ ತನ್ನ ಕಣ್ಣಳತೆಯನ್ನು ಹರಡಿದ್ದಾಳೆ. ಮುತ್ತಿಬರುವ ಕತ್ತಲಲ್ಲಿ ಹೆಜ್ಜೆ ಹಾಕುವ ಗಂಡನಿಗೆ ತೊಡಕಾಗಬಾರದೆಂದು ಒಲವಿನ ಬೆಳಕನ್ನೇ ಎರಚಿದ್ದಾಳೆ. ಕಂಬನಿಯೊತ್ತಿಬಂದಾಗ ಒಂದು ಕ್ಷಣ ಮುಖವನ್ನು ಹೊರಳಿಸಿದರೂ ಅವನು ಬರುವ ನೋಟ ತಪ್ಪಿಹೋದೀತೆಂಬ ಕಳವಳದಿಂದ ಮಂಜುಗಣ್ಣಿನಲ್ಲಿಯೇ ಎವೆಯಿಕ್ಕದೆ ನೋಡುತ್ತಿದ್ದಾಳೆ! ಇದಲ್ಲದೆ ಪರಿಣತಪ್ರೇಮಕ್ಕೆ ಮತ್ತಾವುದು ತಾನೇ ನಿದರ್ಶನ?
ಈಕೆಯ ಪತಿಯೂ ಕೂಡ ಇವಳಷ್ಟೇ ಪ್ರೀತಿವ್ರತ. ದೇಶಾಂತರ ತೆರಳಿದ್ದರೂ ದ್ವೀಪಾಂತರ ಸಾಗಿದ್ದರೂ ತಮ್ಮಿಬ್ಬರ ನಡುವೆ ನದ-ನದೀ-ಸಾಗರಗಳೂ ಕಾಂತಾರ-ಪರ್ವತಗಳೂ ಅಡ್ದಬಿದ್ದು ಮಲೆತಿದ್ದರೂ ಅವನು ಇವೆಲ್ಲವನ್ನೂ ಭೇದಿಸುವ ಪ್ರೀತಿವೀಕ್ಷಣದಿಂದ ಹೃದಯದಲ್ಲಿರುವ ಕಾಂತೆಯನ್ನು ಕಾಣುತ್ತ ಮನೆಯತ್ತ ಮರಳಿದ್ದಾನೆ. ಈ ಪಾಂಥನು ಅದೇಕೋ ಮತ್ತೆ ಮತ್ತೆ ನೆಲದಲ್ಲಿ ಕಾಲನ್ನು ಕೀಲಿಸಿ ಹನಿಗಣ್ಣಾಗಿ ಏನನ್ನೋ ನೆನೆಯುತ್ತ ನಿಟ್ಟುಸಿರು ಬಿಡುತ್ತಿದ್ದಾನೆ. ಹೀಗೆ ಅನ್ಯೋನ್ಯಚಿಂತನೆಗಿಂತ ಮಿಗಿಲಾದ ನೋಂಪಿಯು ವಿರಹಿಗಳಿಗಿಲ್ಲ.
ಆಹಾ, ಇವಳಾರು ಬಲು ಗಡಸುಗಾರ್ತಿ. ತನಗೆ ಸಲ್ಲದಂತೆ ನಡೆದ, ತಾನೊಲ್ಲದ ನಲ್ಲನು ಮನೆಗೆ ನುಗ್ಗಿದಾಗ ಅದೆಂಥ ಅನೂಹ್ಯಪ್ರತಿಕ್ರಿಯೆ ನೀಡಿದ್ದಾಳೆ. ಒಳಗೆ ಕಾಲಿಡಬೇಡವೆಂದು ತಡೆಯಲಿಲ್ಲ, ಬಂದುದೇಕೆಂದು ಕಟುವಾಗಿ ನುಡಿಯಲೂ ಇಲ್ಲ. ಅಷ್ಟೇಕೆ, ಯಾವುದೇ ಬಗೆಯಲ್ಲಿ ಒರಟಾಗಿ ವರ್ತಿಸಿಲ್ಲ. ಅವಳು ತನ್ನ ಮನೆಗೆ ಬರುವ ಯಾವುದೇ ಜನಸಾಮಾನ್ಯವನ್ನು ಹೇಗೆ ನೋಡುವಳೋ ಹಾಗೆ ಸರಳವಾಗಿ, ನಿರ್ವಿಶೇಷವಾಗಿ ಉಪಚರಿಸಿದ್ದಾಳೆ! ಇದಲ್ಲವೇ ಸವಿಯಾದ ಸೇಡೆಂದರೆ! ಇದನ್ನು ಸವಿಗಬ್ಬನ್ನೇ ಬಿಲ್ಲಾಗಿ ಹಿಡಿದು ಮರಂದಭರಿತಸುಮಗಳನ್ನೇ ಬಾಣಗಳನ್ನಾಗಿ ತಳೆದ ನಲ್ಮೆಯ ದೇವರು ಮನ್ಮಥನೇ ಹೇಳಿಕೊಟ್ಟಿರಬೇಕು.
ಈ ಹೆಣ್ಣು-ಗಂಡುಗಳ ಉತ್ತಾನಪ್ರಣಯದ ಕಾಮನ ಬಿಲ್ಲನ್ನು ಪರಿಕಿಸುತ್ತಿದ್ದಂತೆಯೇ ನಮ್ಮೆದುರು ತೆರೆದುಕೊಳ್ಳುವ ಬಣ್ಣಗಳು ಏಳಲ್ಲ, ಏಳೇಳು ಕೋಟಿಗಳೆಂದೆನಿಸದಿರದು. ಅಬ್ಬಾ! ಈ ಮದನಾಗ್ನಿಯಬಿರುಬೇ ಬಿರುಬು, ಬಿಸುಪೇ ಬಿಸುಪು! ವಿರಹಿಗಳು ತಮ್ಮ ವಿರಹತಾಪದ ಉಪಶಾಂತಿಗಾಗಿ ತಂಪಾದ ಮುತ್ತಿನ ಸರಗಳನ್ನು ತೊಟ್ಟರೂ ಹಿಮಶೀತಲವಾದ ಕಮಲದಳಗಳಲ್ಲಿ ಮಲಗಿದರೂ ತಂಗದಿರನ ಚೆಂಬೆಳಕಿನಲ್ಲಿ ಮಿಂದೆದ್ದರೂ ಚಂದನದ ರಸದಲ್ಲಿ ಹೊರಳಾಡಿದರೂ ಇವೆಲ್ಲ ತಮ್ಮ ತಮ್ಮ ಬಯಕೆಯ ಬೆಂಕಿಗೇ ಉರುವಲಾಗುತ್ತವೆ; ಒಲವಿನ ಜೀವಗಳನ್ನು ಇಡಿಯಾಗಿ ಸುಡುತ್ತವೆ. ಆದರೇನು ಮಾಡೋಣ? ಯಾವುದೇ ಪ್ರಾಣಿಗೂ ಈ ಬಾಧೆ ತಪ್ಪದಲ್ಲಾ! ಇಲ್ಲ, ಜಿತೇಂದ್ರಿಯರೆಷ್ಟೋ ಮಂದಿ ಇದ್ದಾರೆ; ಜಿತಕಾಮರಿಗೆ ಕೊರತೆಯಿಲ್ಲ ಎಂಬುದು ಅಭಿಜ್ಞರ ಮಾತು. ಇರಲಿ, ಇತ್ತ ಜಿತೇಂದ್ರಿಯರೂ ಅಲ್ಲದೆ, ಅತ್ತ ಮೃತೇಂದ್ರಿಯರೂ ಅಲ್ಲದೆ ಇರುವ ಜೀವಿಗಳೇ ಹೆಚ್ಚಲ್ಲವೇ! ಇವರ ಕಥೆಯೇನು? ಇವರ ವ್ಯಥೆಯೇನು? ಹೌದು, ಇವರಿಗೆಲ್ಲ ಹೆಚ್ಚೋ ಕಡಮೆಯೋ, ವಿರಹದ ವೇಧೆ ಸಲ್ಲುತ್ತದೆ; ಮಿಲನದ ಮೋದ ಗೆಲ್ಲುತ್ತದೆ.
ಇತ್ತ ಕಡೆ ಬಂದರೆ ಅಗಲಲಿರುವ ಜೋಡಿಯೊಂದರ ಸಂಭಾಷಣೆಯು ಕೇಳದಿರದು. ಅದನ್ನಿಷ್ಟು ಕಿವಿಗೆ ಹಾಕಿಕೊಳ್ಳೋಣ.
“ನಲ್ಲೆ, ಹೇಗಾದರೂ ಮಾಡಿ ಕೆಲವೊಂದು ದಿನಗಳನ್ನು ಕಣ್ಣು ಮುಚ್ಚಿಕೊಂಡು ನೂಕಿಬಿಡು” “ನಲ್ಲ, ಆಗಲಾಗಲಿ, ಆದರೆ ಕಣ್ಣುಮುಚ್ಚಿಕೊಂಡರೆ ಅದೆಲ್ಲಿಯವರೆಗೆ ದಿಕ್ಕುಗಳೆಲ್ಲ ಶೂನ್ಯವೆನಿಸವೋ ಅಲ್ಲಿಯವರೆಗೆ ಹಾಗೆ ಮಾಡುವೆ” “ನಾನು ಮರಳಿ ಬಂದೇಬಿಟ್ಟೆನೆಂದೆಣಿಸು” “ನಿನ್ನೆಲ್ಲ ಗೆಳೆಯರ ಭಾಗ್ಯವು ಫಲಿಸಿದಾಗ ನೀನು ಬರುವೆ” “ಇರಲಿ, ಪ್ರಿಯೇ, ನನ್ನೀ ಪಯಣದಲ್ಲಿ ನಿನಗೆ ನಾನೇನು ಉಡುಗೊರೆ ತರಲಿ?” “ಪ್ರಿಯತಮ, ನಿನಗೊಪ್ಪಿದ ತೀರ್ಥಕ್ಷೇತ್ರಗಳಲ್ಲೆಲ್ಲ ನನಗೆ ಜಲಾಂಜಲಿಯನ್ನು ನೀಡು.”
ಅಬ್ಬಾ! ಪ್ರೀತಿಯು ಇಷ್ಟು ಕಠಿನವೇ? ಪ್ರೇಮವಿಷ್ಟು ನಿರ್ದಯವೇ? ಏನು ಮಾಡುವುದು? ಅದು ಇರುವುದು ಹಾಗೆಯೇ. ಅಯ್ಯೋ! ಇಂತಾದರೆ ಈ ಜಗದ ಪ್ರೇಮಿಕರ ಗತಿಯೇನು? ಸ್ಥಿತಿಯೇನು? ಇದಕ್ಕೆ ಮಹಾಕವಿ ಅಮರುಕನು ನಿಶ್ಚಯದ ಚರಮನಿರ್ಣಯವನ್ನು ಹೇಳುತ್ತಾನೆ: ನಿತ್ಯನಿರ್ಮಲವಾದ ಮುಕ್ತಾವಲಿಯು ಕೂಡ ಮದಿರಾಕ್ಷಿಯರ ಬಿಣ್ಮೊಲೆಗಳ ನಡುವೆ ಹೊಯ್ದಾಡುತ್ತಿರುತ್ತದೆ. ಇಂತಿರಲು ಬದ್ಧರಾದ ನಮ್ಮ ನಿಮ್ಮಂಥ ಜನರ ಮಾತೇನು? ಇದು ಬರಿಯ ಗಂಡುಗಳಿಗೆ ಮಾತ್ರವೆಂದಿರೋ? ಇಲ್ಲ, ಇಲ್ಲ; ಹೆಣ್ಣುಗಳಿಗೂ ಇದೇ ನ್ಯಾಯ. ಮೈಥುನಕ್ಕೆ ಲಿಂಗವುಂಟಲ್ಲದೆ ಪ್ರಣಯಕ್ಕೆ ಲಿಂಗವಿಲ್ಲ. ಅಲ್ಲಿರುವುದು ಬರಿಯ ಭಾವ. ಇಂಥ ಭಾವಗಳ ಮಹಾನುಭಾವನೇ ಅಮರುಕ. ಇವುಗಳ ಸತ್ತ್ವೋದ್ರಿಕ್ತರೂಪವಾದ ರಸದ ಪರ್ಯಂತಭೂಮಿಯೇ ಅವನ ಅಮರಕಾವ್ಯ ಅಮರುಕಶತಕ.
ಉಪಸಂಹಾರ
ಕೆಲವೊಂದು ಐತಿಹ್ಯಗಳ ಪ್ರಕಾರ ಈ ಶತಕವನ್ನು ರಚಿಸಿದವರು ಶ್ರೀಶಂಕರಭಗವಾತ್ಪಾದರು. ಉಭಯಭಾರತಿಯ ವಿಪರೀತವಾದಕ್ಕೆ ಪ್ರತಿಯಾಗಿ ವಾದಿಸುವ ಅನಿವಾರ್ಯತೆಯು ಒದಗಿದಾಗ ತಮ್ಮ ಉತ್ತರವಾಗಿ ಈ ಲೋಕೋತ್ತರಕೃತಿಯನ್ನು ರಚಿಸಿದರೆಂದೂ ಉದಂತಗಳಿವೆ. ಸಂನ್ಯಾಸಧರ್ಮಕ್ಕೆ ಉಗ್ರವಿರೋಧಿಯಾದ ಶೃಂಗಾರವನ್ನು ಇಷ್ಟು ವಿವರವಾಗಿ ಚಿತ್ರಿಸಿದ ಕಾರಣ ಶಂಕರರು ಆರೂಢಪತಿತರೆಂದು ಉಭಯಭಾರತಿಯು ಆಗ ವಾದಿಸಿದಾಗ ಆಚಾರ್ಯರು ಈ ಶತಕದ ಪ್ರತಿಯೊಂದು ಪದ್ಯಕ್ಕೂ ವೈರಾಗ್ಯಪರವಾದ ಅರ್ಥವನ್ನು ಹೇಳಿ ತಮ್ಮ ಪಾವಿತ್ರ್ಯವನ್ನು ದಕ್ಕಿಸಿಕೊಂಡರೆಂದೂ ಕಥೆಗಳುಂಟು. ಅಷ್ಟೇಕೆ, ಈ ಕೃತಿಗೆ ಇಂಥದ್ದೊಂದು ವ್ಯಾಖ್ಯಾನವೂ ಉಪಲಬ್ಧವಿದೆಯೆಂದು ಕೇಳಿಬಲ್ಲೆ. ಆದರೆ ವಸ್ತುತಃ ಈ ಎಲ್ಲ ವೃತ್ತಾಂತಗಳೂ ಕಟ್ಟುಕಥೆಗಳೆಂಬುದು ಇದೀಗ ಇತಿಹಾಸವಿದಿತ, ಸಂಶೋಧನಸಿದ್ಧ. ಹೀಗಾಗಿ ಅಮರುಕಶತಕಕ್ಕೂ ಆದಿಶಂಕರರಿಗೂ ಯಾವುದೇ ಸಂಬಂಧವಿಲ್ಲ.
ಆದರೆ ಭಾವಸತ್ಯವಾಗಿ ಇಷ್ಟನ್ನಂತೂ ಹೇಳಬಹುದು: ಈ ಕೃತಿಯು ಸುಮ್ಮನೆ ಹಸಿಹಸಿಯಾದ ರತಿಮಾತ್ರದ ಶೃಂಗಾರವನ್ನು ಚಿತ್ರಿಸುವ ಲಂಪಟರಚನೆಯಲ್ಲ; ಜೀವ-ಜಗತ್ತುಗಳ ಜೀವಾಳವನ್ನು ಚೆನ್ನಾಗಿ ಅನುಭವಿಸಿ ಬಲ್ಲ, ಪ್ರತಿಭಾ-ಪಾಂಡಿತ್ಯಗಳ ಪರಿಪಾಕವೂ ಉಳ್ಳ ಅಪ್ಪಟ ಅಧ್ಯಾತ್ಮವಾದಿಯ ಸಾಕ್ಷಾತ್ಕಾರ. ಹೀಗಾಗಿಯೇ ಅಮರುಕಶತಕಕ್ಕೆ ಶೃಂಗಾರ-ವೈರಾಗ್ಯಗಳ ಉಭಯಸಿದ್ಧಿಯನ್ನು ತತ್ತ್ವತಃ ಧ್ವನಿಸಬಲ್ಲ ಬಲ್ಮೆಯುಂಟು. ಕಾಮಿಯಾಗದವನು ಮೋಕ್ಷಗಾಮಿಯಾಗಲಾರನಷ್ಟೆ! ಸವಿಷಯವಾದ ಕಾಮವನ್ನು ನಿರ್ವಿಷಯೀಕರಿಸಿದರೆ ಮೋಕ್ಷ ಸಿದ್ಧ. ದಿಟವೇ, ಅದು ಅಂಥ ಸುಲಭದ ಕೆಲಸವೇನಲ್ಲ. ಆದರೆ ಇಲ್ಲಿಯ ದಾರಿಗಿಂತ ಸುಲಭವಾದುದೂ ಬೇರೊಂದಿಲ್ಲ. ಬ್ರಹ್ಮವನ್ನರಿಯಲು ಶಾಸ್ತ್ರವು ಸಾಕು. ಆದರೆ ಮಾಯೆಯನ್ನರಿಯಲು ಕಾವ್ಯವೇ ಬೇಕು. ಮಾಯೆಯಿಲ್ಲದೆ ಮುಕ್ತಿಯ ಕಲ್ಪನೆಯಾದರೂ ನಮಗೆ ಹೇಗೆ ದಕ್ಕೀತು?