ಉಪಗುಪ್ತ ಮತ್ತು ವಾಸವದತ್ತೆಯರನ್ನು ಕುರಿತ ಕಥನಕವನವೊಂದರಲ್ಲಿ ಪೈಗಳು ವಾಸವದತ್ತೆಯ ಮೇಲೆ ಬಂದೆರಗಿದ ಕೊಲೆಯ ಆರೋಪವನ್ನು ಬಣ್ಣಿಸುತ್ತಾರೆ. ಈ ಪ್ರಸಂಗದಲ್ಲಿ ಊರಿನ ಜನರು ಗಾಳಿಸುದ್ದಿಗಳಿಗೆಲ್ಲ ದಿಕ್ಕುದೆಸೆಯನ್ನು ಕಲ್ಪಿಸಿ ಅವೆಲ್ಲ ಕಡೆಗೆ ವಾಸವದತ್ತೆಯೇ ಅಪರಾಧಿನಿ ಎಂಬತ್ತ ಬೆರಳು ಚಾಚುವ ಬಗೆಯನ್ನು ಹೀಗೆ ಕವನಿಸಿದ್ದಾರೆ:
ಸೂಚಿಸುತಿದೆಲ್ಲವೀ ಸುದ್ದಿ ವಾಸವದತ್ತೆ-
ಯನೆ, ಉದೀಚಿಯನೆಂತೊ ಸೂಜಿಗಲ್ಲಂತೆ (‘ವಾಸವದತ್ತೆ’, ಪು. ೨೭೦)
ಸ್ವತಂತ್ರವಾಗಿ ಇಳಿಬಿಟ್ಟ ಅಯಸ್ಕಾಂತ ತನ್ನಂತೆಯೇ ಉತ್ತರಮುಖಿಯಾಗುವ ವಾಸ್ತವವಿಲ್ಲಿ ಉಪಮಾನವಾಗಿದೆ. ಇಲ್ಲಿಯ ಅಯಸ್ಕಾಂತ ಜನತೆ; ಅದು ಗಾಳಿಸುದ್ದಿಗಳ ನೇಣಿಗೆ ಸಿಲುಕಿದಾಗ ವಾಸವದತ್ತೆಯೇ ಕೊಲೆಗಾರ್ತಿಯೆಂಬ ಉತ್ತರದಿಕ್ಕಿನತ್ತ ತಿರುಗುತ್ತದೆ. ಮೇಲ್ನೋಟಕ್ಕೆ ಜನತೆ ಸ್ವತಂತ್ರ ವಿಚಾರದಿಂದಲೇ ಈ ನಿಲವಿಗೆ ಬಂದಂತೆ ತೋರುತ್ತದೆ. ಆದರೆ ಅದು ಗಾಳಿಸುದ್ದಿಯ ನೇಣಿಗೆ ಸಿಲುಕಿದಾಗ ಹೀಗೆ ದಿಕ್ಕಾಪಾಲಾಗಿದೆ! ಈ ಉಪಮೆಯ ಧ್ವನಿ ಅನನ್ಯ. ಅಂತೆಯೇ ಪೈಗಳ ವ್ಯುತ್ಪತ್ತಿ ಕೂಡ ಪ್ರಶಂಸನೀಯ.
ಮಂತ್ರದ್ರಷ್ಟಾರ ಕವಷನನ್ನು ಧಿಕ್ಕರಿಸಿದ ಋಷಿಗಳು ಕಡೆಗೆ ಅವನ ಹಿರಿಮೆಯನ್ನರಿತು ಕ್ಷಮೆ ಬೇಡುವ ಪರಿ ಹೀಗಿದೆ:
ನಮ್ಮೊಳುತ್ತಮನೆ, ಕ್ಷಮಿಸಪರಾಧವತಿ ಚರುವ
ತುರುಕೆ ಹೋಮಾಗ್ನಿ ಹೊಗೆವಂತೆ ದ್ಯುತಿಗೆಟ್ಟು,
ನಿಬ್ಬರಿಸೆ ಮನದಿ ವರ್ಣೋತ್ತಮತೆಯತಿ ಗರುವ
ನಿನ್ನನವಮಾನಿಸಿದೆವಕಟ ಮತಿಗೆಟ್ಟು! (‘ಶೂದ್ರರ್ಷಿ ಕವಷ’, ಪು. ೨೬೪)
ನಿರಂತರವೂ ಅಗ್ನಿಪರಿಚರ್ಯೆ ಮಾಡುವ ಯಾಜ್ಞಿಕರು - ಹೋಮಾಗ್ನಿಯಲ್ಲಿ ಚರುವನ್ನು ಅರ್ಪಿಸಿದಾಗ ಹೊಗೆಯೆದ್ದು ಕವಿಯುವ ಹೋಲಿಕೆಯನ್ನು ತಮ್ಮ ವರ್ಣೋನ್ನತಿಯೆಂಬ ಮನೋಮಾಲಿನ್ಯಕ್ಕೆ ನೀಡಿರುವುದು ಪಾತ್ರೋಚಿತವಾಗಿದೆ. ಇಲ್ಲಿಯ ಚರುಶಬ್ದದ ಔಚಿತ್ಯ ಮತ್ತೂ ಸ್ವಾರಸ್ಯಕಾರಿ. ಅಗ್ನಿಗೆ ಆಜ್ಯವನ್ನೋ ಸಮಿತ್ತನ್ನೋ ಸುರಿದಾಗ ಏಳದಷ್ಟು ಹೊಗೆ ನೀರಿನಲ್ಲಿ ಬೇಯಿಸಿದ ಚರುವನ್ನು ಅರ್ಪಿಸಿದಾಗ ಕವಿದುಕೊಳ್ಳುತ್ತದೆ. ಹಸಿತನವಿದ್ದಲ್ಲಿ ಹೊಗೆ ತಪ್ಪದು, ಮಾಗದಿದ್ದಲ್ಲಿ ಅಜ್ಞಾನ-ಅಹಂಕಾರಗಳು ತಪ್ಪವು ಎಂಬ ಧ್ವನಿ ತನ್ನಂತೆಯೇ ಉನ್ಮೀಲಿಸುತ್ತದೆ.
ಹೀಗೆ ಪೈಗಳ ಉಪಮೆಗಳು ಆನಂದವರ್ಧನನು ಒಪ್ಪಿದ ನಿಜವಾದ ಅಲಂಕಾರಗಳು ಸಾಲಿಗೆ ಸೇರುತ್ತವೆ. ಅವರ ಉಪಮಾಸೃಷ್ಟಿಯ ವಿಶ್ವರೂಪವನ್ನು ಕಾಣಲು ‘ಗೊಲ್ಗೊಥಾ’ ಮತ್ತು ‘ವೈಶಾಖಿ’ ಕಾವ್ಯಗಳನ್ನು ವಿಶೇಷವಾಗಿ ಪರಿಶೀಲಿಸಬೇಕು. ಇವನ್ನು ಮುಂದೆ ನೋಡೋಣ.
{ರೂಪಕ} ಇದು ಎಲ್ಲ ಸಹಜ ಕವಿಗಳಿಗೆ ಪ್ರಿಯವಾದ ಅಲಂಕಾರ. ಪೈಗಳಿಗೂ ಇದು ಪ್ರಿಯವಾಗಿದೆ.
ಅವರು ತಮ್ಮ ‘ನಂದಾದೀಪ’ ಕವನಸಂಕಲನದ ಮೊದಲಿಗೆ ಹೀಗೆ ಹೇಳುತ್ತಾರೆ: “ಸ್ನೇಹದೆದೆ ಬಟ್ಟಲಲಿ ಬೇಯೆ ನಂದಾದೀಪ” (‘ನೀನಿನ್ನವರಮೆನ್ನ ಬಾಗಲಿಗೆ ಬಂದಿಲ್ಲ’, ಪು. ೧೨೧). ಸಾಕಷ್ಟು ಪರಿಚಿತವಾದ ಈ ಬಗೆಯ ರೂಪಕದಲ್ಲಿ ಸ್ನೇಹ ಎಂಬ ಶ್ಲಿಷ್ಟ ಪ್ರಯೋಗ ಸ್ವಾರಸ್ಯವನ್ನು ಹೆಚ್ಚಿಸಿದೆ. ಇದಕ್ಕಿಂತಲೂ ‘ಬೇಯೆ’ ಎಂಬ ಮಾತಿನಲ್ಲಿ ಮೂಡುವ ಉಪಚಾರವಕ್ರತೆ ಸದ್ಯದ ರೂಪಕಕ್ಕೆ ಮಿಗಿಲಾದ ಸೊಗಸನ್ನು ತುಂಬಿದೆ. ನಂದದ ದೀಪ ನಂದಾದೀಪ ಬೇಯುವುದೆಂದರೆ ಏನರ್ಥ? ಸ್ನೇಹದ ಬಟ್ಟಲಲ್ಲಿ ಬೆಳಗುವ ನೆನಪೆಂಬ ದೀಪ ತನ್ನ ಉರಿಯ ಝಳಕ್ಕೆ ತಾನೇ ಬೇಯುತ್ತಿಯೆಂದಲ್ಲವೇ ಇದರ ಧ್ವನಿ! ಹೀಗೆ ಸ್ನೇಹದ ಎದೆಬಟ್ಟಲು ಎಂಬ ಸಾಮಾನ್ಯ ರೂಪಕದಲ್ಲಿ ಅಸಾಮಾನ್ಯತೆಯ ಛಾಯೆ ಮೆರೆದಿದೆ.
ಚಿಕ್ಕ ರೂಪಕವೊಂದರಲ್ಲಿ ಗೋವಿಂದ ಪೈಗಳು ಮಾರ್ಮಿಕವಾದ ಧ್ವನಿಯನ್ನು ಅದರ ಅಪೂರ್ಣತೆಯ ಮೂಲಕ ಇರಿಸಿರುವುದಕ್ಕೆ ಸೊಗಸಾದ ಉದಾಹರಣೆ ಹೀಗಿದೆ: “ವಿಷಯವಲ್ಮೀಕದಲಿ ನುಸುಳಿರುವ ಚಿಂತೆ” (‘ಒಲ್ಲೆನಾದೊಡಮೆರೆಯ! ಬೇಸರದ ಸೆರೆಯ’, ಪು. ೧೪೭). ಇಲ್ಲಿ ವಿಷಯವನ್ನು ವಲ್ಮೀಕವೆಂದು ರೂಪಕೀಕರಿಸಿದ ಕವಿ ಅಲ್ಲಿ ನುಸುಳಿರುವ ಚಿಂತೆಯನ್ನು ಹಾವೆಂದು ವಾಚ್ಯವಾಗಿ ಹೇಳದೆಯೇ ವಸ್ತುಧ್ವನಿಯನ್ನು ಸಾಧಿಸಿರುವುದು ಗಮನಾರ್ಹ. ಸಾವಯವರೂಪಕದ ಅಚ್ಚುಕಟ್ಟಿಗೆ ಈ ವಾಕ್ಯ ಎರವಾದರೂ ಅದರ ಒಂದೇ ರೂಪಕವು ಧ್ವನನಶೀಲವಾಗಿರುವುದು ಕಾವ್ಯಕೌಶಲಕ್ಕೆ ನಿದರ್ಶನ.
‘ನಂದಾದೀಪ’ ಕವನಸಂಕಲನದಲ್ಲಿ ಕವಿ ಸಾವಯವರೂಪಕವೊಂದನ್ನು ರೂಪಿಸಿದ್ದಾರೆ:
ನನ್ನ ಜೀವನದಾಲವಾಲದಲಿ ನಿನ್ನ
ನಟ್ಟೆನ್ನ ಕಂಬನಿಯ ಹಂಬಿನಿಂದೊಂದೆ
ಹೂತ ಹೂವನದೇಕೆ ಮುರಿಯೆ ಮನಸಂದೆ?
ಹಂಬಲ ಕಲಂಬದಿಂ ತುಂಬೆಸಳ ಮುನ್ನ? -
ನೆನವ ಗಂಧಮನಿನಿತೆ ಸಲಿಸಿ ಕಾಮನೆಗೆ
ಸಂದ ಮಧುಲಕ್ಷ್ಮಿ ಇನ್ನಿಲ್ಲಿ ನನಗೆಲ್ಲಿ? (‘ನನ್ನ ಜೀವನದಾಲವಾಲದಲಿ ನಿನ್ನ’, ಪು. ೧೨೫)
ಸಾಮಾನ್ಯವಾಗಿ ಆಧುನಿಕ ಕವಿಗಳು ಸಾವಯವರೂಪಕವನ್ನು ರೂಪಿಸುವುದಿಲ್ಲ. ಇದು ಪ್ರಯತ್ನಸಾಧ್ಯವಾದ ಕಾರಣ ಕೃತಕವೆನ್ನಿಸಬಹುದೆಂಬ ಅಳುಕು ಅವರಿಗೆ. ಆದರೆ ಕೃತವಿದ್ಯನಾದ ಕವಿ ಸಹೃದಯರ ಮೇಲೆ ಸಾಂದ್ರವಾದ ಪರಿಣಾಮ ಉಂಟಾಗುವಂತೆ ಇದನ್ನು ಚಿತ್ರವತ್ತಾಗಿ ರಚಿಸಬಲ್ಲ. ಹೀಗಾಗಿ ಇದು ಅಭಿಜಾತ ಕವಿಗಳಿಗೆ ಹೆಚ್ಚಾಗಿ ಅಭಿಮತವಾದದ್ದು. ಪೈಗಳು ಈ ಜೀವನಾಡಿಯನ್ನು ತೊರೆದವರಲ್ಲ. ಆದುದರಿಂದಲೇ ಇಲ್ಲಿ ಒಳ್ಳೆಯ ಸಾವಯವರೂಪಕ ಮೂಡಿದೆ. ಕಂಬನಿಯನ್ನು ಹಂಬಿನೊಡನೆ ಸಮೀಕರಿಸಿದ ಕವಿ ಹೂತ ಹೂವು ಯಾವುದೆಂದು ಹೇಳದೆ ಅನುಕ್ತಿಯಲ್ಲಿಯೇ ಮುಗಿಸಿರುವುದೊಂದು ಸ್ವಾರಸ್ಯ. ಇಲ್ಲಿ ಅವರ ಒಲವೇ ಧ್ವನಿತವಾಗಿದೆ. ನೆನಪನ್ನು ಪರಿಮಳಕ್ಕೆ ಸಮೀಕರಿಸಿರುವುದು ಮತ್ತಷ್ಟು ರಸಮಯವೆನಿಸಿದೆ. ಏಕೆಂದರೆ ಎಷ್ಟೋ ಬಾರಿ ಪರಿಮಳದ ಮೂಲ ಮರೆಯಾಗಿದ್ದರೂ ಅದರ ಪ್ರಭಾವ ಅನುಭವಕ್ಕೆ ಬರುತ್ತಲೇ ಇರುತ್ತದೆ. ಇದು ಅಳಿದ ಮಡದಿಯನ್ನು ಪೈಗಳು ಧ್ವನಿಸುವ ಬಗೆ. ಕಡೆಗೆ ಬರುವ ಮಧುಲಕ್ಷ್ಮಿಯಂತೂ ಅವರ ಗೃಹಲಕ್ಷ್ಮಿಯೇ ಹೌದು.
ಮಾಲಾರೂಪಕದ ಒಂದು ಮಾದರಿ ಹೀಗಿದೆ:
ಹರೆಯದಲರ ವಸಂತ,
ಬಿಗುಭುಜದ ಹೇಮಂತ,
ಕ್ಷಣವಿರಹ ಘರ್ಮ, ಜೇನ್ನುಡಿಯ ಮಳೆ ಸಾಕು
ನಗೆಯ ಚಿಲಿಮಿಲಿವಗಲು
ಮೊಗದ ಜೊನ್ನದ ಮಿಗಿಲು-
ಕಳ್ಳನಾ ಕಾಲನೆನಗಿನಿತೆಣಿಕೆ ಸಾಕು (‘ಸಾಕು’, ಪು. ೨೬೬)
ಇಲ್ಲಿ ಕಾಲವನ್ನು ಬಣ್ಣಿಸುವಾಗ ಬದುಕಿನ ವಿವಿಧ ಅವಸ್ಥೆಗಳನ್ನು ಕಾಲದ ವಿವಿಧ ಮುಖಗಳೆನಿಸಿದ ಹಗಲು-ಇರುಳು ಮತ್ತು ಋತುಗಳೊಡನೆ ರೂಪಕೀಕರಿಸಿರುವುದು ವಿಶೇಷವೆನಿಸಿದೆ.
ಇನ್ನೊಂದು ಮಾಲಾರೂಪಕದ ಪ್ರಸ್ತಾವದಿಂದ ಈ ಅಲಂಕಾರವನ್ನು ಮುಗಿಸಬಹುದು. ಇದು ಸಹಜವಾಗಿಯೇ ಅಭಿಜಾತ ಕಾವ್ಯಪರಂಪರೆಗೆ ಒಗ್ಗಿಬಂಧಂಥದ್ದು. ಈ ಮೂಲಕ ಪೈಗಳು ಸರಸ್ವತಿಯನ್ನು ಹೀಗೆ ಸ್ತುತಿಸಿದ್ದಾರೆ:
ನಿನ್ನ ಕೃಪಾಂಜನಂ ತೊಡೆಯೆ ಬಯ್ತ ಮನೋನಿಧಿ ಕಣ್ಗೆ ಬಾರದೇ?
ನಿನ್ನ ದಯಾಧನಂ ಪಡೆಯೆ ಬಲ್ನುಡಿಯಾಳ್ತನಮೆಯ್ದಲಾರದೇ?
ನಿನ್ನ ಸುಧಾಸ್ಮಿತಂ ಹನಿಸೆ ಮೋಹದ ಮಾಗಿಗೆ ಸುಗ್ಗಿ ಸಾರದೇ?
ನಿನ್ನ ಪದಾಂಕಿತಂ ಮನಸೆ ಮೂವಡಿ ರತ್ನದ ದಾರಿ ಶಾರದೆ! (‘ಶ್ರೀಶಾರದಾದೇವಿಗೆ’, ಪು. ೨೯೬)
ಇದು ಪೈಗಳ ಆರಂಭಿಕ ರಚನೆಗಳಲ್ಲೊಂದೆಂಬುದನ್ನು ಆದಿಪ್ರಾಸದಿಂದ ಅನುಮಾನಿಸಬಹುದು. ಪೂರ್ವಕವಿಗಳ ಸಂಪ್ರದಾಯದಿಂದ ಸಿದ್ಧವಾದ ಕೃಪಾಂಜನ, ಮನೋನಿಧಿ, ದಯಾಧನ, ಸುಧಾಸ್ಮಿತ ಮೊದಲಾದ ರೂಪಕಗಳಿದ್ದರೂ ಬಲ್ನುಡಿಯಾಳ್ತನ ಮೋಹದ ಮಾಗಿ ಮೊದಲಾದ ಕೆಲವೊಂದು ರೂಪಕಗಳಲ್ಲಿ ಸ್ವಾರಸ್ಯದ ಸ್ಪರ್ಶವಿದೆ. ಒಟ್ಟಿನಲ್ಲಿ ಪೈಗಳು ರಾಚನಿಕವಾಗಿ ಏನೆಲ್ಲ ಪ್ರಯೋಗಗಳನ್ನು ಮಾಡಿದ್ದರೆಂಬುದಕ್ಕೆ ಇದೂ ಒಂದು ಸಾಕ್ಷಿ.
{ದೃಷ್ಟಾಂತ} ಗೋವಿಂದ ಪೈಗಳಲ್ಲಿ ಇದರ ಪ್ರಾಚುರ್ಯ ಎದ್ದುಕಾಣುವಂತಿದೆ. ಇದಕ್ಕೆ ಕವಿಯ ಲೋಕಪ್ರಬೋಧನೋತ್ಸಾಹ ಕೂಡ ಕಾರಣವೆನ್ನಬಹುದು. ಏಕೆಂದರೆ ಹೆಚ್ಚಿನ ನೀತಿಕಾವ್ಯಗಳಲ್ಲಿ, ಉಪದೇಶಕವಿತೆಗಳಲ್ಲಿ ದೃಷ್ಟಾಂತಾಲಂಕೃತಿಯ ಪಾರಮ್ಯ ಕಾಣಸಿಗುತ್ತದೆ. ಚಾಣಕ್ಯನೀತಿ, ಬಸವಣ್ಣನವರ ವಚನಗಳು, ಸರ್ವಜ್ಞನ ತ್ರಿಪದಿಗಳು ಮುಂತಾದುವು ಇಲ್ಲಿ ಸ್ಮರಣೀಯ. ಪೈಗಳ ಕಾವ್ಯದ ಹಲವೆಡೆಗಳಲ್ಲಿ ಲಕ್ಷಣಶುದ್ಧವಾದ ದೃಷ್ಟಾಂತದ ಎಲ್ಲ ಅಂಶಗಳೂ ಕಾಣುವುದಿಲ್ಲ. ಇಂಥ ‘ಲೋಪ’ವನ್ನು ಎಲ್ಲ ಸಹಜ ಕವಿಗಳಲ್ಲಿಯೂ ಕಾಣಬಹುದಾದ ಕಾರಣ ಈ ಬಗೆಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.
‘ನಂದಾದೀಪ’ ಕವನಸಂಕಲನದ ಒಂದು ದೃಷ್ಟಾಂತ ಹೀಗಿದೆ:
ಮುತ್ತುಮುಳುಕನ ಕಣ್ಣದೊಂದೆ
ನಂದೆ, ತತ್ತನೆ ಮುತ್ತ ಮುಂದೆ? -
ಮರಸಲೆನ್ನೊಳಬೆಳಕನೊಂದೆ,
ಕತ್ತಲಲಿ ತತ್ತರಿಸೆನೆ? (‘ಗೆಯ್ಯದಾಂ ಗಡ ಹೊಲ್ಲಮಿಲ್ಲ’, ಪು. ೧೩೨)
ಇಲ್ಲಿ ಕವಿಯ ಒಳಬೆಳಕೆಂಬ ಮನೆಬೆಳಕು ನಂದಿಹೋದಾಗ ಉಂಟಾದ ತತ್ತರಿಕೆಯನ್ನು ಮುತ್ತಿಗಾಗಿ ಮುಳುಗುವವನ ಕಣ್ಣು ಮಂಜಾದಾಗ ಎದುರಾಗುವ ನಷ್ಟದ ದೃಷ್ಟಾಂತಕ್ಕೆ ಒಪ್ಪವಿಡಲಾಗಿದೆ. ಮುತ್ತುಮುಳುಕನ ಕಸುಬನ್ನು ಬಲ್ಲವರಿಗೆ ಅವನು ಕಡಲಾಳಕ್ಕೆ ಧುಮುಕುವಾಗ ಅದೆಷ್ಟು ಉಸಿರ್ಗಟ್ಟಬೇಕೆಂಬುದನ್ನೂ ನೀರಿನೊಳಗೆ ನೋಟ ಸಹಜವಾಗಿಯೇ ಮಂಜಾಗುವ ಬಗೆಯನ್ನೂ ವಿವರಿಸಬೇಕಿಲ್ಲ. ತುಂಬ ಹೊಸತಾದ ಈ ದೃಷ್ಟಾಂತ ಯುಕ್ತವಾಗಿಯೇ ಪರಿಣಾಮಕಾರಿಯೆನಿಸಿದೆ.
ಪೈಗಳು ಒಂದೆಡೆ ಮಾಲಾದೃಷ್ಟಾಂತವನ್ನು ಹೀಗೆ ಮಾಡುತ್ತಾರೆ:
ಹಳತಿಂದಲ್ಲವೆ ಹೊಸತರ ಹುಟ್ಟು? -
ಹಳೆಯ ಗದ್ದೆಯೊಳೆ ಹೊಸಹೊಸತಕ್ಕಿ,
ಹಳೆಯರಣ್ಯದೊಳೆ ಹೊಸ ಹೊಸ ಹಕ್ಕಿ
ಹಳೆಗಡಲೊಳೆ ಹೊಸ ತೆರೆ ಬಹವುಕ್ಕಿ (‘ತುತೂರಿ’, ಪು. ೨೦೭)
ಇಲ್ಲಿಯ ದೃಷ್ಟಾಂತಗಳಲ್ಲಿ ಮೊದಲನೆಯದು ಹೆಚ್ಚು ಸ್ವೋಪಜ್ಞವಾಗಿದೆ. ಹಳೆಯ ಗದ್ದೆಯಲ್ಲಿ ಹೊಸ ಬತ್ತದ ಇಳುವರಿ ಎಂಬ ಕಲ್ಪನೆಯೇ ಅಭಿರಾಮವಾದದ್ದು. ಇದೇ ರೀತಿ ಹಳೆಯ ಕಡಲಿನಲ್ಲಿ ಪ್ರತಿಕ್ಷಣವೂ ಹುಟ್ಟುವ ಹೊಸ ಅಲೆಗಳ ವಾಸ್ತವವಂತೂ ಅದ್ಭುತವೆನಿಸುತ್ತದೆ.
ಪೈಗಳ ಸೂಕ್ಷ್ಮ ನಿರೀಕ್ಷಣೆಯ ಫಲವಾದ ದೃಷ್ಟಾಂತವೊಂದು ಹೀಗಿದೆ:
ಹೊರ ವಲಯದಲಿ ಜ್ಯೋತಿ ಬೆಳರ್ವರಂ ಬತ್ತಿ-
ಯೊಳಗುಡಿಗೆ ಕರುಪೆಂತು ನಡುಗುಡಿಗೆ ಮಿರುಕಂ
ಉರಿದಂತೆ ಸವೆಯುವೀ ಬಾಳ್ವೆ ನಿನಗೆತ್ತಿ-
ದುಚ್ಛಿಖ ಮನಂ ದಿವಂ ಸ್ಪಂದನವೆ ನರಕಂ! (‘ಸ್ವರ್ಗನರಕಂಗಳಿನ್ನೆತ್ತಲೆನ್ನೊಡೆಯಾ’, ಪು. ೧೬೫)
ಈ ದೃಷ್ಟಾಂತಕ್ಕೆ ಪೈಗಳೇ ವಿವರಣೆಯ ಟಿಪ್ಪಣಿ ನೀಡಿದ್ದಾರೆ. ಆ ಪ್ರಕಾರ ಉರಿಯುವ ಜ್ಯೋತಿಯಲ್ಲಿ ಮೂರು ವಲಯಗಳು ಅಥವಾ ಗುಡಿಗಳು ಇರುತ್ತವೆ. ಒಳಗಿನ ವಲಯದಲ್ಲಿ ಜ್ವಾಲೆ ಇನ್ನೂ ಮೊದಲಾಗುವ ಕಾರಣ ಅದರಲ್ಲಿ ಕಾಳಿಮೆಯ ಅಂಶ ಹೆಚ್ಚು. ನಡುವಿನ ವಲಯದಲ್ಲಿ ಬೆಳಕಿದ್ದರೂ ಅದು ಕೆಂಬಣ್ಣದ್ದು. ಹೊರಗಿನ ಆವರಣದಲ್ಲಿ ಉರಿಯ ಬಣ್ಣ ಬಿಳುಪಿಗೆ ಹತ್ತಿರ ಬರುವ ಹೊಂಗಾಂತಿಯದು. ಈ ದೃಷ್ಟಾಂತವನ್ನು ಕವಿ ಬದುಕಿಗೆ ನೀಡಿದ್ದಾರೆ. ಆ ಪ್ರಕಾರ ಇಲ್ಲಿ ತಮಸ್ಸು, ರಜಸ್ಸು ಮತ್ತು ಸತ್ತ್ವಗಳ ಧ್ವನಿಯಿದೆ.
ದಾಂಪತ್ಯವನ್ನು ಕವಿ ದೃಷ್ಟಾಂತದ ಮೂಲಕ ಹೀಗೆ ವರ್ಣಿಸುತ್ತಾರೆ:
ಕದವೆರಡು ಕೀಲೊಂದೆ,
ಮೊಲೆಯೆರಡು ಹಾಲೊಂದೆ
ತನುವೆರಡರೊಳಗಂತೆ ಮನವೊಂದೆ ಸಾಕು (‘ಸಾಕು’, ಪು. ೨೬೫)
ಇಲ್ಲಿ ಅಭಿನವವಾದ ದೃಷ್ಟಾಂತಗಳಿವೆ. ಎರಡು ಬಾಗಿಲುಗಳನ್ನು ಬೆಸೆಯುವುದು ಒಂದೇ ಅಗುಳಿ; ಎರಡು ಮೊಲೆಗಳಲ್ಲಿ ಒಸರುವುದು ಒಂದೇ ಹಾಲು. ಇದೇ ರೀತಿ ಎರಡು ಮೈಗಳಲ್ಲಿ ಒಂದೇ ಮನಸ್ಸು ಎಂಬ ಕವಿಯ ಭಾವ ತುಂಬ ಹೃದ್ಯ. ಬಾಗಿಲುಗಳನ್ನು ಬೆಸೆಯುವ ಅಗುಳಿ ಹಾಗೂ ಸ್ತನಗಳಲ್ಲಿ ಮಗುವನ್ನು ಪೋಷಿಸುವ ಜೀವಧಾತುವಾದ ಹಾಲು ದಾಂಪತ್ಯದ ಸಾಮರಸ್ಯಕ್ಕೆ ಬೇಕಾದ ಬೆಸುಗೆ ಮತ್ತು ಪೋಷಣೆಗಳನ್ನು ಧ್ವನಿಸುತ್ತಿವೆ.
ಕವಷನನ್ನು ಗೌರವಿಸುವ ಋಷಿಗಳ ಪಶ್ಚಾತ್ತಾಪ ಹೀಗಿದೆ:
... “ಋಷಿವರ್ಯ, ಬರೆವಾಗ”
ಲೇಖನಿಯ ನೋಡೆ ಬರೆಹದೊಳೆಡಹುವಂತೆ
ಜಾತಿಯನೆ ಬಗೆದೆಮಗೆ ನಿನ್ನ ಗುಣ ಮರೆಯಾಗ-
ಲಟ್ಟಿದೆವಕಟ ನಿನ್ನ ತೃಷೆ ಮಡಹುವಂತೆ!” (ಶೂದ್ರರ್ಷಿ ಕವಷ’, ಪು. ೨೬೪)
ಬರೆಹವನ್ನು ನೋಡದೆ ಲೇಖನಿಯನ್ನೇ ಗಮನಿಸುತ್ತ ಬರೆದಾಗ ಲಿಪಿಯು ಕೆಡುವ ದೃಷ್ಟಾಂತವನ್ನು ಗುಣಕ್ಕೆ ಬದಲಾಗಿ ಜಾತಿಗೆ ಮಣೆ ಹಾಕಿದಾಗ ಉಂಟಾಗುವ ಅನರ್ಥಕ್ಕೆ ಸಂವಾದಿಯಾಗಿ ನೀಡಿದ ಕವಿಯ ಲೋಕಾವೇಕ್ಷಣೆ ಮೆಚ್ಚುವಂಥದ್ದು.
{ಸಸಂದೇಹ} ಪೂರ್ವಕವಿಗಳಲ್ಲಿಯೂ ಪ್ರಸಿದ್ಧವಾಗಿರುವ ಈ ಅಲಂಕಾರ ನವೋದಯದ ಕವಿಗಳಿಂದ ಈಚೆಗೂ ಸಾಕಷ್ಟು ಕವಿಜನಪ್ರಿಯವಾಗಿದೆ. ಸಂದೇಹವೇ ಪ್ರಮುಖವೆನಿಸಿದ ಆಧುನಿಕ ಯುಗದಲ್ಲಿ ಸಸಂದೇಹ ಅಲಂಕಾರಕ್ಕೆ ಪ್ರಾಚುರ್ಯ ಬರುವುದು ಸಹಜವೆಂದು ತರ್ಕಿಸಿದಲ್ಲಿ ಅದು ಅಲಂಕಾರತತ್ತ್ವವನ್ನು ಅರಿಯದೆಯೇ ಬಂದ ಆಲೋಚನೆಯೆನ್ನಬೇಕು. ಏಕೆಂದರೆ ಕಾವ್ಯದಲ್ಲಿ ಬರುವ ಸಾದೃಶ್ಯ, ವಿರೋಧ, ಸಂದೇಹ, ಭ್ರಾಂತಿ ಮುಂತಾದ ಯಾವುದೂ ಭವನಿಷ್ಠವಲ್ಲ, ಭಾವನಿಷ್ಠ; ಇಲ್ಲಿರುವುದು ವ್ಯಾವಹಾರಿಕ ಸತ್ತೆಯಲ್ಲ, ಆಹಾರ್ಯಸತ್ತೆ. ಈ ಕಾರಣದಿಂದಲೇ ಕವಿಪ್ರತಿಭೆಯ ಫಲವೂ ಔಚಿತ್ಯಭರಿತವೂ ಆದ ಯಾವ ಕಲ್ಪನೆಯಾಗಲಿ, ಎಂಥ ಉಕ್ತಿವಿಲಾಸವಾಗಲಿ ಆಸ್ವಾದ್ಯವೆನಿಸುತ್ತದೆ.
ಪೈಗಳು ವಿದ್ಯಾರಣ್ಯರನ್ನು ಸ್ತುತಿಸುತ್ತ ಬಿಲ್ಲುಂಬೆರಗಾಗುತ್ತಾರೆ. ಅವರ ಬೆರಗೇ ವಾಚ್ಯವಾದ ಸಸಂದೇಹದ ಮೂಲಕ ವ್ಯಂಗ್ಯವಾದ ನಿಶ್ಚಯಕ್ಕೆ ನೆಲೆಯಾಗುತ್ತದೆ:
ಜ್ಞಾನವೆ ಮಾನವೀ ತನುವನಾಂತುದೆ? ಭಕ್ತಿಯೆ ಭಿಕ್ಷುವಾದುದೇ?
ವಾಣಿಯ ಜಾಣೆ ಆಣೆರಕಗೊಂಡುದೆ? ಗೆಲ್ಲಿನ ಬಿಲ್ಲೆ ಮೂಡಿತೇ?
ಕನ್ನಡನಾಡೆ ತನ್ನ ಮನಮೊಟ್ಟಿಸಿ ಸೃಷ್ಟಿಸೆ ಸ್ರಷ್ಟಗಿತ್ತುದೇ?
ಧರ್ಮಮೆ ಕರ್ಮಮಾಗಿ ನೆರವೇರಿತೆ ನಿನ್ನಲಿ ಪೇಳ ಮಾಧವಾ (‘ಶ್ರೀವಿದ್ಯಾರಣ್ಯರ ಅಡಿದಾವರೆಯಲ್ಲಿ’, ಪು. ೪೮)
ಕುಮಾರವ್ಯಾಸನ ಕವಿತೆಯನ್ನು ಕೊಂಡಾಡುವಾಗಲೂ ಕವಿ ಸಂದೇಹದಿಂದ ನಿಶ್ಚಯನ್ನು ಧ್ವನಿಸುತ್ತಾರೆ:
ನಿಡುಗತೆಯೊ ಬಾನೆಡೆಯೊ? ಬೆಡಗಿನ
ನುಡಿಯ ಠೀವಿಯೊ ಗುಡುಗೊ? ಬಣ್ಣದ
ಮಿಡುಕೊ ಮಿಸುಕುವ ಮಿಂಚೊ? ಕವಿತಾರಸವೊ ತನಿಮಳೆಯೋ?
ತಡಿವರಿಯುವರ್ಥಪ್ರವಾಹವೊ?
ಮಡಲ್ವ ನಿರತೆಯೊ ಹಸುರ ನೆರತೆಯೊ?
ನಡೆನಲಿವ ಮನ್ಮನವೊ ಸೋಗೆಯೊ? ನಿನ್ನ ಕಾವ್ಯದಲಿ! (‘ಮಹಾಕವಿ ಕುಮಾರವ್ಯಾಸನಿಗೆ’, ಪು. ೮೭)
ಇಲ್ಲಿ ಸಾವಯವಸಸಂದೇಹಾಲಂಕಾರ ಇರುವುದು ಗಮನಾರ್ಹ. ಈ ಪ್ರಕಾರವನ್ನು ಹಿಂದಿನ ಲಾಕ್ಷಣಿಕರಾರೂ ನಿರೂಪಿಸಿಲ್ಲ. ಆದರೆ ಕವಿಪ್ರತಿಭೆಗೆ ಕೊರತೆಯೇ! ಪೈಗಳು ಕುಮಾರವ್ಯಾಸನ ಕಾವ್ಯವನ್ನು ಬಾನಲ್ಲಿ ಮೂಡುವ ಮೋಡದಿಂದ ಮೊದಲ್ಗೊಂಡು ನೆಲದಲ್ಲಿ ಹರಿದು ಹಸುರನ್ನು ಹೆಚ್ಚಿಸುವ ಹೊಳೆಯವರೆಗೆ ಸಂದೇಹಶೃಂಖಲೆಯಿಂದ ಬೆಸೆದು ತಮ್ಮ ಮನವನ್ನು ಈ ಕಾರ್ಗಾಲದಲ್ಲಿ ಕುಣಿಯುವ ನವಿಲಿಗೆ ಒಪ್ಪವಿಟ್ಟಿರುವುದು ಗಮನಾರ್ಹ. ಮಾತ್ರವಲ್ಲ, ಇಲ್ಲಿಯ ಒಂದೊಂದು ಅಂಶವೂ ರೂಪಕಸ್ಪರ್ಶವನ್ನು ಹೊಂದಿ ವಿವಿಧ ಕಾವ್ಯಾಂಗಗಳನ್ನು ಸಮುಚಿತವಾಗಿ ಬಿಂಬಿಸಿದೆ. ಕಥೆಯನ್ನು ಬಾನಿಗೂ ನುಡಿಯ ಠೀವಿಯನ್ನು ಗುಡುಗಿಯೂ ವರ್ಣವೈಚಿತ್ರ್ಯವನ್ನು ಮಿಂಚಿಗೂ ಕಾವ್ಯರಸವನ್ನು ಹೊಸ ಮಳೆಗೂ ಧ್ವನ್ಯರ್ಥಗಳ ಹರಿವನ್ನು ಪ್ರವಾಹಕ್ಕೂ ಒಪ್ಪವಿಡುವಲ್ಲಿ ಪೈಗಳ ಅಸಮಾನ ಪ್ರತಿಭೆ ಚೆನ್ನಾಗಿ ದುಡಿದಿದೆ.
ಇಂಥದ್ದೇ ಭಾವವನ್ನು ಗೋವಿಂದ ಪೈಗಳು ಗೊಮ್ಮಟನಲ್ಲಿಯೂ ಕಾಣುತ್ತಾರೆ:
ಕಲ್ಲಿನ ಗೊಂಬೆಯಲ್ಲಮಿದು - ಕಲ್ನಗಲಾರ್ಪುದೆ? ಗುಂಗುರಪ್ಪುದೇ?
ಮುಚ್ಚಲು ಬಿಚ್ಚಲೇಂಬಹುದೆ? ಕೊಕ್ಕಲು ಸುಕ್ಕಲು ಕಲ್ಲು ಬಲ್ಲುದೇ?
ಎಲ್ಲಿಳಿಯಾಲಗೆಯ್ವೆಗಲ ತಪ್ಪಲುರೋಂಬುದ ತಾಳೆಗಾಲಿವುಂ?
ಮೊಂಡನೆ ಕಲ್ಲದೆಲ್ಲಿ ಎನುತೆಲ್ಲರ ಬೆಕ್ಕಸಕಾದೆ ಗೊಮ್ಮಟಾ
ಕನಸೇ ಕಲ್ಲಲಿ ರೂಪವೆತ್ತಿತೊ? ಚಿಕೀರ್ಷಾಭಕ್ತಿಯೀ ಭಕ್ತರಾ
ತನುವನ್ನಾಂತನುವಾಯ್ತೊ? ಗಂಡುವರಿಜಂ ಜೈನಾಗಮಂ ಬೆತ್ತುದೋ?
ಕೊಡಗೂಸನ್ನಿಳೆಯೀದಳೇ? ಸೊಡರ ಕಂಬಂ ನಟ್ಟುದೇ ಧರ್ಮಮೇ?-
ನೆನುತಂ ಕಂಡವರೆಲ್ಲ ಮೂವದಿಮೆಯಂ ಬೆಪ್ಪಾದರೇ? ಗೊಮ್ಮಟಾ (‘ಶ್ರೀಗೊಮ್ಮಟಜಿನಸ್ತುತಿ’, ಪು. ೨೨೪)
ಸಸಂದೇಹಾಲಂಕಾರಕ್ಕೆ ಸೊಗಸು ಬರುವುದು ಅದರಲ್ಲಿ ಮೂಲಭೂತವಾಗಿ ಇರುವ ಸಾದೃಶ್ಯಕ್ಕಿಂತ ಮಿಗಿಲಾಗಿ ಅದರ ಮೂಲಕ ಸೂಚಿಸಲ್ಪಡುವ ಸಂಭಾವ್ಯತೆಯಿಂದಲೇ. ಅಂದರೆ ಇಲ್ಲಿ ಉಪಮೆಯ ಸ್ಪರ್ಶಕ್ಕಿಂತ ಉತ್ಪ್ರೇಕ್ಷೆಯ ಸ್ಪರ್ಶವೇ ಹೆಚ್ಚಾಗಿ ತೋರುವುದೆನ್ನಬೇಕು. ಇದನ್ನು ಪೈಗಳು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಭೂಮವಾದುದನ್ನು ಇತಿಮಾರ್ಗದಿಂದ ಹೇಳಲು ಸಾಧ್ಯವಿಲ್ಲ. ಅದೇನಿದ್ದರೂ ನೇತಿಮಾರ್ಗದ ಸೊತ್ತು. ಇವೆರಡರ ನಡುವೆ ಇತಿ ವಾ? ನೇತಿ ವಾ? ಎಂಬ ಕಿರುದಾರಿಯೂ ಉಂಟು. ಇದನ್ನು ಹೆದ್ದಾರಿಯಾಗಿಸಿಕೊಂಡ ಹದವನ್ನಿಲ್ಲಿ ಕಾಣಬಹುದು.
ಪೈಗಳ ಸಮುದ್ರವರ್ಣನೆ ನಿರುಪಮವಾದದ್ದು. ಅಲ್ಲಿಯ ಕೆಲವು ಸಾಲುಗಳು ಈ ಅಲಂಕಾರಕ್ಕೆ ಒಳ್ಳೆಯ ಉದಾಹರಣೆಗಳು:
ನೀ ನೀರ ಸಾಗರವೊ? ನಿರ್ಘೋಷದಾಗರವೊ?
ಮಂದರಂ ನಿನ್ನ ಕಡೆದುದಕೆ ನರಳುವಿಯೊ? ಹದಿ-
ನಾಲ್ಕು ರತ್ನವ ಸುರರು ಕಸಿದುದಕೆ ಮರುಳುವಿಯೊ? (‘ಪ್ರಭಾಸ’, ಪು. ೩೯೮)
ಕವಿ ಇಲ್ಲಿ ಕಡಲಿಗೇ ತಮ್ಮ ಸಂದೇಹಗಳನ್ನು ನಿವೇದಿಸುತ್ತಾರೆ. ಇಲ್ಲಿ ಸಮುದ್ರಮಥನದ ಪುರಾಣಕಥೆ ಚೆನ್ನಾಗಿ ಒದಗಿಬಂದಿದೆ.
ಪೈಗಳ ಸಸಂದೇಹ ಅಲಂಕಾರದ ವಿನಿಯೋಗಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಇಡಿಯ ಕವಿತೆ ‘ಯೇಸು-ಕೃಷ್ಣ’ನನ್ನು ಕಾಣಬಹುದು. ಇಲ್ಲಿರುವುದು ಒಂದು ಭಾವುಕ ಸಾಧ್ಯತೆಯಾದ ಕಾರಣ, ಯೇಸು-ಕೃಷ್ಣರ ಸಮೀಕರಣಕ್ಕೆ ಬಾಹ್ಯಾಧಾರಗಳೇ ಇಲ್ಲದ ಕಾರಣ ಈ ಅಲಂಕಾರ ತುಂಬ ಚೆನ್ನಾಗಿ ಒದಗಿಬಂದಿದೆ. ಯಾವುದೇ ಒಂದು ಅಲಂಕಾರ ಚಿಕ್ಕ ಪದ್ಯದ ಚೌಕಟ್ಟನ್ನೂ ಮೀರಿ ಹಲವು ಚರಣಗಳಲ್ಲಿ ವ್ಯಾಪಿಸಿಕೊಂಡಿತೆಂದರೆ ಅದರಲ್ಲಿ ವೈವಿಧ್ಯ ಮತ್ತು ಸ್ವಾರಸ್ಯಗಳನ್ನು ಮೈಗೂಡಿಸಲು ಮಿಕ್ಕ ಹಲಕೆಲವು ಅಲಂಕಾರಗಳ ಸ್ಪರ್ಶವೂ ಅನಿವಾರ್ಯವಾಗುತ್ತದೆ. ಅಂತೆಯೇ ಇಲ್ಲಿ ವಿರೋಧ, ವಿಷಮ ಮತ್ತು ವ್ಯತಿರೇಕ ಅಲಂಕಾರಗಳ ಛಾಯೆಗಳು ಕಾಣಸಿಗುತ್ತವೆ. ರಸಾರ್ದ್ರನಾದ ಕವಿಯ ಸಂದೇಹವು ಭಾವಾರ್ದ್ರನಾದ ಭಕ್ತನ ನಿಶ್ಚಯವಾಗಿ ಸಾಕ್ಷಾತ್ಕರಿಸುವುದನ್ನು ಈ ಹಾಡಿನ ಪಲ್ಲವಿ ಮತ್ತು ಕಡೆಯ ಮೂರು ಚರಣಗಳಲ್ಲಿ ಕಾಣಬಹುದು. ಈ ಎಲ್ಲ ಸೊಗಸುಗಳಿಗೆ ಕೃಷ್ಣಜೀವನದ ಹಾಗೂ ಕ್ರಿಸ್ತಜೀವನದ ಎಲ್ಲ ವಿವರಗಳನ್ನೂ ಬಲ್ಲ ಪೈಗಳ ವ್ಯುತ್ಪತ್ತಿ ಪೋಷಕವಾಗಿದೆ. ಇದರ ಒಂದೆರಡು ಸೊಲ್ಲುಗಳನ್ನು ಪರಾಂಪರಿಸಬಹುದು:
ರಾಧೆ ಬಿಗಿದ ಭುಜಬಂಧದ ಬಂದಿಯೊ?
ಮರಿಯಳ ಮುತ್ತುಗಳಂದುಗವೊ?
ಕುರುರಾಯನ ಹೆಡೆಮುರಿ ಕೇಯೂರವೊ?
ಮುಳ್ಳುಮುಕುಟ ಮುಡಿಸಿದ ಮೊಗವೊ?
ಬಿಲ್ಲಿನ ಹಬ್ಬದ ಗೆಲ್ಲಿನ ಪಯಣಕೆ
ಮರಿಗತ್ತೆಯೆ ಮೆರೆತದ ರಥವೆ?
ಯೂದನ ಮುತ್ತಿನ ಸ್ವಾಗತವೆ? ಚೈ-
ದ್ಯನ ಬೈಯ ಸೇಸೆಯವಭೃಥವೆ?
ನಲವತ್ತು ದಿನದುಪೋಷ್ಯಕೆ ಹಿಡಿ-
ಯವಲಕ್ಕಿಯ ಪಾರಣೆ ಸಾಕೆ?
ವಿದುರನ ಕುಡುತೆಯ ಕುಡಿದ ತೇಗಿಗೆ ಸ-
ಮಾರ್ಯಳು ಮೊಗೆದಾ ಜಲವೇಕೆ?
ಹರ್ಮೋನಲಿ ರೂಪಾಂತರವಾಂತಗೆ
ಮೂವತ್ತು ಬೆಳ್ಳಿಗಳ ಬೆಲೆಯೆ?
ಪಾರ್ಥನೀಕ್ಷಿಸಿದ ವಿಶ್ವಶರೀರಿಗೆ
ಜೋಡೆಲೆ ತುಳಸಿಯೆನಿತೆ ತೊಲೆಯೆ?
ಕಳ್ಳನೆಂಬ ಹಳಿ ಮೆರಸಲೇಂ ನೀಂ
ಕಳ್ಳರ ನಡು ತೂಗಾಡಿದೆಯಾ?
ಬೆರಳಲಿ ಬೇಡನ ಬಾಣ ಬೇಯುತಿರೆ
ಸಿಲುವೆ ಮೊಳೆಗೆ ಕೆಯ್ ನೀಡಿದೆಯಾ? (‘ಯೇಸು-ಕೃಷ್ಣ’, ಪು. ೩೮-೩೯)
ಕೇವಲ ಘಟನೆಗಳನ್ನು ಸಂವಿಧಾನಿಸಿದ ದೃಷ್ಟಿಯಿಂದಲೂ ಈ ಕವಿತೆ ಅಧ್ಯಯನಯೋಗ್ಯವಾಗಿದೆ. ಕವಿ ಸುಮ್ಮನೆ ಕೃಷ್ಣ-ಕ್ರಿಸ್ತರ ಬಾಳುಗಳನ್ನು ಜೋಡಿಸದೆ ಜಡೆಯಂತೆ ಅಂದವಾಗಿ ಹೆಣೆದಿದ್ದಾರೆ; ಅವರ ಜೀವನದ ವಿವಿಧ ಘಟನೆಗಳನ್ನು ಕಾರ್ಯ-ಕಾರಣಭಾವದ ವಿಡಂಬನೆಯೆಂಬಂತೆ ಬೆಸೆಯುತ್ತಲೇ ಅನನ್ಯವಾದ ಸಮನ್ವಯವನ್ನು ಕಾಣಿಸಿದ್ದಾರೆ. ಇದು ಹಿರಿದಾದ ಸಾಧನೆ.
To be continued.