ಅಲಂಕಾರ
ಇನ್ನು ಅಲಂಕಾರಗಳತ್ತ ದೃಷ್ಟಿ ಹಾಯಿಸುವುದಾದರೆ, ಪೈಗಳಿಗೆ ಶಬ್ದ ಮತ್ತು ಅರ್ಥಗಳ ಸ್ತರದ ಅಲಂಕಾರಗಳೆರಡೂ ಪ್ರಿಯವೆಂದು ತಿಳಿಯುತ್ತದೆ. ತತ್ತ್ವತಃ ಛಂದಸ್ಸು ಕೂಡ ಶಬ್ದಾಲಂಕಾರವೇ ಆದರೂ ಅದನ್ನು ಪ್ರತ್ಯೇಕವಾಗಿ ಪರಿಗಣಿಸುವಷ್ಟು ಆ ಶಾಸ್ತ್ರ ಬೆಳೆದಿದೆ. ಅಲ್ಲಿಯೇ ಆದಿಪ್ರಾಸ ಮತ್ತು ಅಂತ್ಯಪ್ರಾಸಗಳಂಥ ಮೂಲಭೂತ ಶಬ್ದಾಲಂಕಾರಗಳೂ ವಿವೇಚನೆಗೆ ಬರುತ್ತವೆ. ಏಕೆಂದರೆ ಸಾಂಪ್ರದಾಯಿಕ ಬಂಧಗಳಲ್ಲಿ ಆದಿಪ್ರಾಸ ಅನಿವಾರ್ಯ. ನವೀನ ಬಂಧಗಳಲ್ಲಿ ಅಂತ್ಯಪ್ರಾಸವೇ ಅವುಗಳ ಛಂದೋನಿರ್ದಿಷ್ಟತೆಗೆ ದಿಕ್ಸೂಚಿ. ಹೀಗೆ ಈ ಎರಡು ಪ್ರಕಾರಗಳ ಪ್ರಾಸಗಳನ್ನು ಛಂದಸ್ಸಿನ ವಲಯಕ್ಕೆ ತಂದುಕೊಂಡ ಬಳಿಕ ಶಬ್ದಾಲಂಕಾರವಾಗಿ ಉಳಿಯುವುದು ಪ್ರಾಯಶಃ ಅನುಪ್ರಾಸ ಮಾತ್ರ. ವಡಿಯನ್ನೂ ಇದರ ಒಂದು ಪ್ರಕಾರವಾಗಿಯೇ ಭಾವಿಸಬಹುದು. ಗೋವಿಂದ ಪೈಗಳು ಇವೆಲ್ಲವನ್ನೂ ಸಮೃದ್ಧವಾಗಿ ಬಳಸಿಕೊಂಡಿರುವುದು ಅವರ ಭಾಷಾಪ್ರಭುತ್ವ ಮತ್ತು ಪದ್ಯಶಿಲ್ಪದ ಕೌಶಲಗಳಿಗೆ ಸಾಕ್ಷಿ.
ಇದೀಗ ಪೈಗಳ ಕಾವ್ಯದಲ್ಲಿ ತೋರಿಕೊಳ್ಳುವ ಕೆಲವೊಂದು ಶಬ್ದಾಲಂಕಾರಗಳನ್ನು ಪರಿಶೀಲಿಸಬಹುದು:
‘ಚಿಟ್ಟೆಗೆ’ (ಪು. ೪) ಎಂಬ ಕಿರುಗವಿತೆಯ ಮೊದಲ ಮೂರು ಚರಣಗಳಲ್ಲಿ ಎರಡೆರಡು ಪಾದಗಳಿಗೆ ಆದಿಪ್ರಾಸ ಮತ್ತು ಅಂತ್ಯಪ್ರಾಸಗಳ ಗೆಜ್ಜೆಯನ್ನು ಕಟ್ಟಿದ್ದಾರೆ. ಕಡೆಯ ಚರಣದಲ್ಲಿ ನಾಲ್ಕೂ ಪಾದಗಳಿಗೆ ಒಂದೇ ಆದಿಪ್ರಾಸವಿದೆ. ಈ ಕವಿತೆಯ ಒಟ್ಟಂದದ ಪದಪದ್ಧತಿ ತುಂಬ ಇಂಪಾಗಿದೆ. ‘ನಿಂದಿರು ಕುಲುಂಕದಿರೆರಂಕೆಗಳ ನಿನ್ನ’ ಎಂಬ ಸಾಲಿನ ಅನುಪ್ರಾಸದಲ್ಲಿಯ ತರಂಗಗತಿ ಗಮನೀಯ. ಇದು ಚಿಟ್ಟೆಯ ಹಾರಾಟವನ್ನು ಸೂಚಿಸುವ ಹಾಗೆ ಲಘೂತ್ತರ ಗತಿಗಳನ್ನು ಮೆರೆಯಿಸುತ್ತ ಅತ್ಯಂತ ವ್ಯಂಜಕವಾಗಿಯೂ ಇದೆ. ಈ ಕವಿತೆಯ ಅಂತ್ಯಪ್ರಾಸಗಳಾದರೂ ತುಂಬ ಚೆಲುವಾಗಿವೆ. ವಿಶೇಷತಃ ಕೆಳೆನುಡಿಯ-ಕವಿಯೊಡೆಯ, ಎಳವೆಯನುಳುಂಬಂ-ಎಮ್ಮಯ ಕುಟುಂಬಂ ಮುಂತಾದ ಪ್ರಾಸಗಳಲ್ಲಿ ಉನ್ಮೀಲಿಸಿದ ವರ್ಣಮೈತ್ರಿ ಪರಿಭಾವನೀಯ.
ಇದರೊಡನೆ ‘ಪರಮಾತ್ಮನೆಲ್ಲಿರುವನು?’ ಎಂಬ ಕವಿತೆಯ (ಪು. ೫) ಆದ್ಯಂತಪ್ರಾಸಗಳನ್ನು ಹೋಲಿಸಬಹುದು. ಇಲ್ಲಿ ಈ ಪ್ರಾಸಗಳು ದ್ವಿಪದೀರೂಪದ ಪ್ರತಿಯೊಂದು ಚರಣದಲ್ಲಿಯೂ ಸರಳವಾಗಿ ಬಂದಿವೆಯಾದರೂ ಅವುಗಳ ನಿರ್ವಿಶೇಷತೆಯ ಕಾರಣ ಯಾಂತ್ರಿಕವೆನಿಸಿವೆ.
ಇದೇ ರೀತಿ ಪೈಗಳ ಹಾಗೂ ಕನ್ನಡ ಸಾಹಿತ್ಯದ ಮೊದಲ ಆದಿಪ್ರಾಸರಹಿತ ರಚನೆಯೆಂದು ಪ್ರಸಿದ್ಧವಾದ ‘ಹೊಲೆಯನು ಯಾರು?’ (ಪು. ೧೬) ಎಂಬ ಕವಿತೆಯನ್ನು ಕಂಡಾಗ ‘ಹೊಲೆಯ’ ಎಂಬ ಒಂದೇ ಪದವನ್ನು ಪಲ್ಲವಿ ಮತ್ತು ಹತ್ತು ಚರಣಗಳಲ್ಲಿ ಅಂತ್ಯಪ್ರಾಸವಾಗಿ ಬಳಸಿದ ಕಾರಣ ಅಳವು ಮೀರಿದ ಏಕತಾನತೆ ಬಂದಿದೆಯೆಂದು ಭಾವಿಸಿದರೂ ಅವಧಾರಣೆ ಮತ್ತು ತತ್ಫಲಿತವಾದ ವ್ಯಂಜಕತೆಯ ದೃಷ್ಟಿಯಿಂದ ಇದು ಅರ್ಥಪೂರ್ಣವೆಂದು ಒಪ್ಪದೆ ಇರಲಾರೆವು.
ಒಂದೆಡೆ ಪೈಗಳು ‘ಬಲ್ಲವನಲ್ಲ-ಬಲ್ಲವ ನಲ್ಲ’ ಎಂಬ ಯಮಕವನ್ನು ತಂದಿದ್ದಾರೆ (ನಂಬಲೆಂತು? ಪು. ೪೦) ಬಹುಶಃ ಅವರಲ್ಲಿ ಇಂಥ ಉದಾಹರಣೆ ಇದೊಂದೇ. ಬಲ್ಲವ ಎಂಬ ಪದಕ್ಕೆ ವಲ್ಲವ ಅಥವಾ ಗೊಲ್ಲ ಎಂಬ ಅರ್ಥವಿರುವುದನ್ನು ಬಲ್ಲವರಿಗೆ ಇದು ಸುಬೋಧವಾದ ಚಮತ್ಕಾರ. ಇದೇ ರೀತಿ ಮನಃಶುಚಿ (ಮನಸ್ಸಿನ ನೈರ್ಮಲ್ಯ) ಎಂಬ ಪದವನ್ನು ಅನ್ಯಾರ್ಥದಲ್ಲಿ (ಮನದ ಬೆಂಕಿ) ಬಳಸಿ ಅಭಂಗಶ್ಲೇಷದ ಮೂಲಕ ಯಮಕವನ್ನು ಮತ್ತೊಂದು ಕವಿತೆಯಲ್ಲಿ ತಂದಿದ್ದಾರೆ (ಬರುವದೆಲ್ಲಂ ತನ್ನ ಮೇಲ್ಮೆಗಂತೆಂದು, ಪು. ೧೨೮).
ಗೋವಿಂದ ಪೈಗಳು ತಮ್ಮ ಎಷ್ಟೋ ಕವಿತೆಗಳಲ್ಲಿ ಪ್ರಾಸಾನುಪ್ರಾಸಗಳ, ವರ್ಣಮೈತ್ರಿಯ ವಿಶೇಷವೆನಿಸುವ ಶ್ರುತ್ಯನುಪ್ರಾಸಗಳ ಪ್ರಯೋಗಗಳನ್ನು ವಿಪುಲವಾಗಿ ಮಾಡಿದ್ದಾರೆ. ಅವೆಲ್ಲಕ್ಕೂ ಪ್ರತಿನಿಧಿಯೆಂಬಂತೆ ‘ಸಫಲ’ ಎಂಬ ಕವಿತೆಯ ಚರಣವೊಂದನ್ನು ಗಮನಿಸಬಹುದು:
ಮಿಂಚಿನ ಮರಿ ಮುಂಚಿ ಮರಸೆ
ಹೃದಯಶಿಖೆಯ ಹೊನ್ನ
ಗುಡುಗಿನ ಮಗು ಮುಡುಗಿ ಮೊರಸೆ
ಕಿನ್ನರಿಗರಿಯನ್ನ;
ಹತ್ತೆ ಹತ್ತೆಯುರುಳೆ ಮೊಳಗು
ಸುತ್ತು ಸುತ್ತು ಕುರುಳೆ ತೊಳಗು
ಬೆಳೆಯಿತು ಮಳೆ ಮುನ್ನ. (ಪು. ೮೫)
ಶ್ರುತಿಕಟುವಾದ ಖಂಡಪ್ರಾಸಗಳನ್ನು ಗೋವಿಂದ ಪೈಗಳು ಹೇರಳವಾಗಿ ಮಾಡಿದ್ದಾರೆಂಬುದು ಖೇದದ ಸಂಗತಿ. ಇದರ ವೈರಸ್ಯವನ್ನು ಸೂಚಿಸಲು ಒಂದೇ ಉದಾಹರಣೆಯನ್ನು ನೋಡಬಹುದು:
ಅಥವಾ ಪೊಗಳಿಕೆಗೆ ಹಿಗ್ಗ-
ಲೊಲ್ಲಡೆ, ತೆಗಳಿಕೆಗೆ ಕುಗ್ಗ-
ಲಾರಡೆ, ಲತೆ ಫಲಕೆ ಸಿಗ್ಗ-
ಲೇಕೆ? ಕಾಲದೆ (ಬಲ್ಲುದೆ ಲತೆ ಫಲಂ ತನ್ನ, ಪು. ೯೩)
ಮಾತ್ರಾಗಣಗಳ ಆವರ್ತಗಳ ಆದಿಯಲ್ಲಿ ತಾಳ ತಪ್ಪದಂತೆ ಬರುವ ವರ್ಣಸಾಮ್ಯವನ್ನು ವಡಿ ಎಂದು ಹೆಸರಿಸುವರಷ್ಟೆ. ಇಂಥ ವಡಿಯ ಸೊಗಸನ್ನು ಕಾಣಲು ಉದಾಹರಣೆಯೊಂದನ್ನು ಪರಿಶೀಲಿಸಬಹುದು:
ಬೇಸಗೆ ಬೆಚ್ಚನೆ ಬೇಯುತಿದೆ,
ಕೃತ್ತಿಕೆ ಕೆಚ್ಚನೆ ಕಾಯುತಿದೆ;
..................................
..................................
ಗದರುವ ಗುಡುಗು,
ಮಿಂಚಿನ ಮುಡುಗು.
ಬರಿದೀ ಬೆಡಗು (‘ಬೇಸಗೆ ಬೆಚ್ಚನೆ ಬೇಯುತಿದೆ’, ಪು. ೧೨೩)
ಪೈಗಳು ಶ್ರವಣಾಭಿರಾಮವಾದ ಪ್ರಾಸಾನುಪ್ರಾಸಗಳನ್ನು ತರುವಲ್ಲಿ ಸಿದ್ಧಹಸ್ತರೆಂಬುದಕ್ಕೆ ಸಾವಿರಾರು ನಿದರ್ಶನಗಳಿವೆ. ಅವುಗಳ ಪ್ರತಿನಿಧಿಯಾಗಿ ಒಂದು ಉದಾಹರಣೆಯನ್ನು ‘ಎಲ್ಲಿಂದಕಾಲಗ್ರೀಷ್ಮಮಿದೆನ್ನ ಮನದಿ’ (ಪು. ೧೪೬) ಎಂಬ ಕವಿತೆಯ ಕೆಲವು ಸಾಲುಗಳ ಮೂಲಕ ಮನಗಾಣಿಸಬಹುದು:
ಉಸುರಿಲ್ಲ, ಹಸುರಿಲ್ಲ, ನೆರಳ ಮರೆಯಿಲ್ಲ,
ತೊಳಗಿಲ್ಲ, ಮೊಳಗಿಲ್ಲ, ಮುಗಿಲಗೆರೆಯಿಲ್ಲ.
ಕನಸಿಲ್ಲ, ನನಸಿಲ್ಲ, ಮುನಿಸಿಲ್ಲವೆದೆಗೆ,
ಒರೆಯಿಲ್ಲ, ಕರೆಯಿಲ್ಲ, ಮೊರೆಯಿಲ್ಲ ಬೆದೆಗೆ-
ಇದನೊಡೆಯ ನೀ ನುಡಿಯ, ನಾ ತಡೆಯಲೆಂತು?
ಮಾಘದ ನಿದಾಘತರಮೇಘದುಬ್ಬರವೋ?
ಚಿಂತೆಯಂತೀ ಕ್ಲಾಂತಿಯಂ ತಳೆಯೆ ಸಲ್ಲ!
ಕಷ್ಟಮಿದವೃಷ್ಟಿ! ಇದನೆರೆಯ ಹಿಂಗರೆಯ!
ಸದಯದೃಷ್ಟಿಯ ವೃಷ್ಟಿಯನ್ನೆದೆಗೆ ಕರೆಯ!
ಹೀಗೆ ಪೈಗಳು ಬಳಸಿದ ಶಬ್ದಾಲಂಕಾರಗಳು ನಿಜವಾದ ಅರ್ಥದಲ್ಲಿ ಆವರ ಕವಿತೆಗಳ ಅಲಂಕಾರಗಳಾಗಿವೆ.
ಕವಿಯ ಕಿವಿ ಶಬ್ದಾಲಂಕಾರವಾದರೆ ಕಣ್ಣು ಅರ್ಥಾಲಂಕಾರ ಎನ್ನಬಹುದು. ಶಬ್ದಾಲಂಕಾರಗಳಲ್ಲಿ ಭಾಷೆಯೊಂದರ ಸಿದ್ಧರೂಪವಾದ ವರ್ಣ ಮತ್ತು ಪದಗಳೇ ಹೆಚ್ಚಾಗಿ ಒದಗಿಬರುವ ಕಾರಣ ಇವುಗಳ ನಿರ್ವಾಹದಲ್ಲಿ ಕವಿಯ ವ್ಯುತ್ಪತ್ತಿ ಹೆಚ್ಚಾಗಿ ದುಡಿಯುತ್ತದೆಂದು ಹೇಳಬಹುದು. ಆದರೆ ಅರ್ಥಾಲಂಕಾರಗಳ ಸಂಗತಿ ಹೀಗಲ್ಲ. ಇಲ್ಲಿ ಭಾಷೆಯ ಪರಿಧಿಯನ್ನು ಮೀರಿದ ಭಾವಗಳ ಮೇಲಾಟವಿರುತ್ತದೆ. ಶಾಸ್ತ್ರಾಧ್ಯಯನ, ಲೋಕಾವೇಕ್ಷಣೆ, ಬಲ್ಲವರ ಸಾಹಚರ್ಯ ಮುಂತಾದ ವ್ಯುತ್ಪತ್ತಿಗೆ ಸಂಬಂಧಿಸಿದ ಅಂಶಗಳು ಕೂಡ ಅರ್ಥಾಲಂಕಾರಗಳಿಗೆ ಒತ್ತಾಸೆ ನೀಡುತ್ತವೆ. ಇಂತಿದ್ದರೂ ಇಲ್ಲಿ ಪ್ರತಿಭೆಯದ್ದೇ ಪಾರಮ್ಯ. ಪೈಗಳ ಕಾವ್ಯದಲ್ಲಿ ಪ್ರತಿಭಾ-ವ್ಯುತ್ಪತ್ತಿಗಳಿಂದ ಪರಿಪುಷ್ಟವಾದ ಇಂಥ ಅರ್ಥಾಲಂಕಾರಗಳ ಸಮೃದ್ಧಿ ಎಲ್ಲರ ಅನುಭವಕ್ಕೂ ಬರುತ್ತದೆ. ಮುಖ್ಯವಾಗಿ ಅವರು ಉಪಮೆ, ದೃಷ್ಟಾಂತ, ಸಸಂದೇಹ, ರೂಪಕ, ಅಪ್ರಸ್ತುತಪ್ರಶಂಸೆ ಮೊದಲಾದ ಕೆಲವು ಮೂಲಭೂತ ಅಲಂಕಾರಗಳನ್ನು ಮತ್ತೆ ಮತ್ತೆ ಬಳಸುತ್ತಾರೆ. ಇಲ್ಲಿಯೂ ಉಪಮೆ ಮತ್ತು ದೃಷ್ಟಾಂತಗಳ ಪಾರಮ್ಯ ಎದ್ದುಕಾಣುತ್ತದೆ. ನವೋದಯದ ಅನೇಕ ಕವಿಗಳಿಗೆ ಒದಗಿಬಂದ ರೂಪಕ ಇಲ್ಲಿ ಆ ಪ್ರಮಾಣದಲ್ಲಿಲ್ಲ; ‘ಉಪಚಾರವಕ್ರತೆ’ಯ ಮೇಲಾಟವೂ ವಿರಳ. ಪೂರ್ವದ ಕವಿಗಳ ಕೃತಿಗಳಲ್ಲಿ ಧಾರಾಳವಾಗಿ ತೋರಿಕೊಳ್ಳುವ ಉತ್ಪ್ರೇಕ್ಷೆ ಮತ್ತು ಅತಿಶಯೋಕ್ತಿಗಳ ಬಳಕೆ ಮತ್ತೂ ಕಡಮೆ.
ಈ ಹಿನ್ನೆಲೆಯಲ್ಲಿ ಪೈಗಳ ಕಾವ್ಯಸ್ವಭಾವವನ್ನು ಹೀಗೆ ಕಂಡುಕೊಳ್ಳಬಹುದು: ಮೂಲತಃ ಪ್ರಬುದ್ಧ ಚಿಂತಕರೂ ಗಂಭೀರ ಸಂಶೋಧಕರೂ ಆದ ಗೋವಿಂದ ಪೈಗಳು ಸಹಜವಾಗಿಯೇ ಪ್ರಮಾಣ-ಪ್ರಮೇಯಗಳ ವ್ಯವಹಾರದಲ್ಲಿ ನಿಸ್ಸೀಮರು. ತಮ್ಮ ಅಭಿಪ್ರಾಯವನ್ನಾಗಲಿ, ಮನಸ್ಸಿನಲ್ಲಿ ಮೂಡಿದ ಹೊಳಹನ್ನಾಗಲಿ ಅಮೂರ್ತತೆ ಮತ್ತು ಅಸ್ಪಷ್ಟತೆಗಳ ಅತಂತ್ರ ಸ್ಥಿತಿಯಲ್ಲಿ ನಿಲ್ಲಿಸದೆ ಓದುಗರಿಗೆ ನಿಸ್ಸಂದಿಗ್ಧವಾಗಿ ಮುಟ್ಟಿಸಬೇಕೆಂಬ ಕಾಳಜಿ ಅವರದು. ಇದಕ್ಕೆ ಹೆಚ್ಚಾಗಿ ಒದಗಿಬರುವುದು ಉಪಮೆ ಮತ್ತು ದೃಷ್ಟಾಂತಗಳಂಥ ನೆಲಕ್ಕಂಟಿದ ಅಲಂಕಾರಗಳು.[1]
ಹೆಚ್ಚಿನ ಮಂದಿ ನವೋದಯದ ಕವಿಗಳಿಗಿಂತ ಗೋವಿಂದ ಪೈಗಳ ಪಾಂಡಿತ್ಯ ಮಿಗಿಲೆಂದು ಎಲ್ಲರೂ ಒಪ್ಪಿಯಾರು. ಈ ಕಾರಣದಿಂದಲೇ ಅವರ ಕವಿತೆಗಳಲ್ಲಿಯೂ ಟಿಪ್ಪಣಿಗಳ ಭಾರ ಹೆಚ್ಚು; ವ್ಯಾಸಂಗದ ಪರಿವಾರ ಮಿಗಿಲು ಎಂದು ಅನೇಕ ವಿಮರ್ಶಕರು ಗುರುತಿಸಿದ್ದಾರೆ. ಇಂಥ ಮೂರ್ತ ಪಾಂಡಿತ್ಯ ಮತ್ತು ಅದರ ಹಿಂದಿನ ಘನ ಮನೋಧರ್ಮ ಪೈಗಳ ಕವಿತೆಗಳಲ್ಲಿಯ ಉಪಮಾಪ್ರಾಚುರ್ಯಕ್ಕೆ ಕಾರಣವೆಂದರೆ ತಪ್ಪಾಗದು. ಮಿಕ್ಕ ನವೋದಯಕವಿಗಳ ರೊಮ್ಯಾಂಟಿಕ್ ಮನೋಧರ್ಮ ಹಾಗೂ ದ್ರವೀಯವಾದ ಕಲ್ಪನಾಶೀಲತೆ ರೂಪಕ ಮತ್ತು ಉಪಚಾರವಕ್ರತೆಗಳನ್ನು ಹೆಚ್ಚಾಗಿ ದುಡಿಸಿಕೊಂಡಿದೆ ಎಂದು ತರ್ಕಿಸಬಹುದು. ನಮ್ಮ ಪ್ರಾಚೀನ ಕವಿಗಳಿಗೆ ಅಚ್ಚುಮೆಚ್ಚಾಗಿದ್ದ ಶ್ಲೇಷ-ಉತ್ಪ್ರೇಕ್ಷೆ-ವ್ಯತಿರೇಕ-ವಿಭಾವನಗಳಂಥವು ಪೈಗಳಲ್ಲಿ ಹೆಚ್ಚಾಗಿ ಕಾಣದಿರುವುದಕ್ಕೆ ಕಾರಣ ಅವರ ಪಾಂಡಿತ್ಯದಲ್ಲಿದ್ದ ಪ್ರದರ್ಶನಕ್ಕಿಂತ ಮಿಗಿಲಾದ ದರ್ಶನದ ಅಂಶ ಹಾಗೂ ಅಕೃತಕವಾದ ಉದಾರ ಭಾವಪಾಕ.
ಯಾವ ಅಲಂಕಾರವನ್ನು ಬಳಸುವಾಗಲೂ ಗೋವಿಂದ ಪೈಗಳು ಗತಾನುಗತಿಕವಾದ ಕಲ್ಪನೆಗಳಿಗೆ ಜೋತುಬೀಳದಿರುವುದು ಅವರ ಕಾವ್ಯಪ್ರತಿಭೆಗೆ ಮಾಡಿದ ನೀರಾಜನವಾಗಿದೆ. ರಸ, ಪಾತ್ರ ಮತ್ತು ಸಂದರ್ಭಗಳನ್ನು ಅನುಲಕ್ಷಿಸಿ ಪೈಗಳು ಹವಣಿಸುವ ಅಲಂಕಾರಗಳು ಔಚಿತ್ಯದ ಅಂತರ್ದೀಪ್ತಿಯಿಂದ ಕೂಡಿರುತ್ತವೆ. ಇದನ್ನು ವಿಶೇಷತಃ ಅವರ ಉಪಮೆ ಮತ್ತು ದೃಷ್ಟಾಂತಗಳಲ್ಲಿ ಮನಗಾಣಬಹುದು.
ಇನ್ನು ಮುಂದೆ ಪೈಗಳ ಕಾವ್ಯಗಳಲ್ಲಿ ತೋರಿಕೊಳ್ಳುವ ಕೆಲವೊಂದು ಅಲಂಕಾರಗಳನ್ನು ಸೋದಾಹರಣವಾಗಿ ಪರಾಮರ್ಶಿಸಬಹುದು.
{ಉಪಮೆ} ಇದು ಮೂಲಭೂತ ಅಲಂಕಾರಗಳಲ್ಲಿ ಒಂದು. ಇದನ್ನು ಎಲ್ಲ ಅಲಂಕಾರಗಳ ಮಾತೆಯೆಂದು ಹೇಳುವುದುಂಟು. ಪೈಗಳು ತಮ್ಮ ‘ಹೆಬ್ಬೆರಳು’ ರೂಪಕದಲ್ಲಿ ಉಪಮೆಯನ್ನು ಬಳಸಿರುವ ಪರಿ ಮೆಚ್ಚುವಂತಿದೆ:
ಏನಾಣತಿಯೊ ತಾತ? ಬೇಟೆ ಮೂಸಿದ ನಾಯಿ
ತುಯ್ಯುತುಯ್ಯುತ ಹಾಸು ತಿವಿಯಲೂಳಿಡುವಂತೆ
ಎನ್ನ ಮನಸವನ ಕಡೆಗೆಳೆಯುತಿದೆ, ಆತನೊಳೆ
ಕಡುವಿಲ್ಲನಾಗಬೇಕೆನಿಸುತಿದೆ ...
... ನೇರ ನೀರಲಿ ಜಿಗುಳೆಯಂತೆ
ಕೊಂಕುವರಿಯದಿರಣ್ಣ! ಎಳೆಯಲೊಲ್ಲದ ಎತ್ತು
ಮಿಣಿಯ ಮೇಲ್ ಬೀಳ್ವಂತೆ ಬರಿದೆ ದೂರದಿರೆಮ್ಮ
ಬಿಲ್ಲುಗಾರಿಕೆಯನಿದೊ ತನ್ನ ಕಂಪರಿಯದಾ
ಕತ್ತುರಿಯ ಮಿಗದಂತೆ ... (‘ಹೆಬ್ಬೆರಳು’, ಪು. ೧೧-೧೨)
ಇಲ್ಲಿ ಏಕಲವ್ಯ ಮೇಳದವರೊಡನೆ, ಆ ಬಳಿಕ ತನ್ನ ತಂದೆ ಹಿರಣ್ಯಧನುವಿನೊಡನೆ ಮಾತನಾಡುತ್ತಿರುವ ಸಾಲುಗಳು ಉದ್ಧೃತವಾಗಿವೆ. ಮೊದಲಿಗೆ ಅವನು ದ್ರೋಣನೆಡೆ ಆಕರ್ಷಿತನಾದುದರ ಪ್ರಸ್ತಾವವಿದೆ. ಎರಡನೆಯ ಉದ್ಧೃತಿಯಲ್ಲಿ ತಂದೆಯ ರಂಧ್ರಾನ್ವೇಷಣೆಯ ದೃಷ್ಟಿಯನ್ನು ಆಕ್ಷೇಪಿಸುವ ಮಾತುಗಳಿವೆ. ಇವೆರಡರಲ್ಲಿಯೂ ಏಕಲವ್ಯನ ಜೀವನಾನುಭವದ ಪರಿಧಿಯೊಳಗೆ ಮೂಡಿ ಮಿಂಚಿದ ನಾಲ್ಕೈದು ಉಪಮೆಗಳು ತಳತಳಿಸುತ್ತಿವೆ. ಬೇಟೆನಾಯಿ, ಜಿಗಣೆ, ಎತ್ತು, ಕಸ್ತೂರಿಯ ಮೃಗ ಮುಂತಾದುವೆಲ್ಲ ಅವನಿಗೆ ಚಿರಪರಿಚಿತ. ಇವುಗಳ ಸೂಕ್ಷ್ಮ ವರ್ತನೆಗಳು ಅವನಿಗೆ ಕರತಲಾಮಲಕ. ಇಂಥ ಪಾತ್ರೋಚಿತವಾದ ಮಾತುಗಳಲ್ಲಿ ಮೂಡುವ ಅಲಂಕಾರಗಳೇ ಕಾವ್ಯದ ರಸಪುಷ್ಟಿಗೆ ಪ್ರಮುಖ ಸಾಧನಗಳು.
ಪೈಗಳು ಕುಮಾರವ್ಯಾಸನನ್ನು ಕೊಂಡಾಡುತ್ತ - ಅವನ ಬದುಕಿನ ವಿವರಗಳು ಬಯಲಾಗದಂತೆ ಮರೆಮಾಚುವಷ್ಟು ಅವನ ಕಾವ್ಯ ಪ್ರಖರವಾಯಿತೆಂದು ಮಾರ್ಮಿಕವಾಗಿ ಅಭಿಪ್ರಾಯಿಸುತ್ತಾರೆ:
ಅರಿಯೆವಣಮಿನ್ನಕಟ ನಿನ್ನನು
ಕುರಿತ ಹದನವನೇಂ ವಶಿಷ್ಠನ
ಮರೆಯರುಂಧತಿಯಂತೆ ಕಾವ್ಯವೆ ನಿನ್ನ ಮರಸಿದುದೆ? (‘ಮಹಾಕವಿ ಕುಮಾರವ್ಯಾಸನಿಗೆ’, ಪು. ೮೯)
ಸಸಂದೇಹದ ಸೋಂಕಿರುವ ಈ ಉಪಮೆ ಅದೆಷ್ಟು ಉಚಿತವೆಂಬುದನ್ನು ವಿಸ್ತರಿಸಬೇಕಿಲ್ಲ. ಸಪ್ತರ್ಷಿಮಂಡಲದಲ್ಲಿ ವಸಿಷ್ಠನಕ್ಷತ್ರದ ಬೆಳಕಿನ ನೆರಳಿನಲ್ಲಿ ಕಂಡೂ ಕಾಣದಂತಿರುವ ಅರುಂಧತೀನಕ್ಷತ್ರದ ಪ್ರಸ್ತಾವವಿಲ್ಲಿದೆ. ಖಗೋಲಶಾಸ್ತ್ರದ ಪ್ರಕಾರ ದ್ವಿಮುಖನಕ್ಷತ್ರಗಳಾದ ಇವೆರಡು ತಮ್ಮ ಪರಸ್ಪರ ಅನುರೂಪತೆಗೆ ಪ್ರಸಿದ್ಧವಾಗಿವೆ. ತನ್ನ ಕವಿತ್ವದಲ್ಲಿ ವ್ಯಕ್ತಿತ್ವವನ್ನೇ ಕರಗಿಸಿಕೊಂಡ ಕವಿ ನಿಜಕ್ಕೂ ಧನ್ಯ! ಇದು ಸಾಧ್ವಿಯಾದ ಅರುಂಧತಿಯು ಪ್ರಿಯ ಪತಿಯ ಆಸರೆಯಲ್ಲಿ ಅಸ್ತಿತ್ವವನ್ನು ಕರಗಿಸಿಕೊಂಡುದದಕ್ಕೆ ಸೊಗಸಾದ ಸಂವಾದಿ. ಹೇಗೆ ನವ ದಂಪತಿ ಅರುಂಧತೀನಕ್ಷತ್ರದ ದರ್ಶನದಿಂದಲೇ ತಮ್ಮ ದಾಂಪತ್ಯದ ಸಿದ್ಧಿಯನ್ನು ಕಾಣಬೇಕಿದೆಯೋ ಹಾಗೆಯೇ ಕವಿಗಳೂ ಕುಮಾರವ್ಯಾಸನ ಕೃತಿಯನ್ನು ಕಂಡುಕೊಳ್ಳಬೇಕು ಎಂಬ ದಿವ್ಯವಾದ ಧ್ವನಿ ಕೂಡ ಇಲ್ಲಿದೆ. ಹೀಗೆ ಇದೊಂದು ಸಾರ್ಥಕ ಅಲಂಕೃತಿ.
[1] ದಿಟವೇ, ಅಮೂರ್ತವಾದ ಉಪಮಾನಗಳನ್ನು ಒಳಗೊಂಡ ಉಪಮಾಲಂಕೃತಿಗಳಿಗೆ ನಮ್ಮ ಸಾಹಿತ್ಯದಲ್ಲಿ ಕೊರತೆಯಿಲ್ಲ. ದೃಷ್ಟಾಂತಕ್ಕೂ ಇದೇ ನ್ಯಾಯವನ್ನು ಅನ್ವಯಿಸಬಹುದು. ಅಮೂರ್ತವಾದ ಉಪಮಾನವನ್ನೊಳಗೊಂಡ ಉಪಮಾಲಂಕೃತಿಯ ಮುಂದೆ ಮೂರ್ತವಾದ ವಸ್ತುಗಳನ್ನು ಅವಲಂಬಿಸಿದ ರೂಪಕ ನೆಲಕ್ಕೆ ಹೆಚ್ಚು ಅಂಟಿರುವಂತೆ ತೋರುತ್ತದೆ. ಇಂತಿದ್ದರೂ ಈ ಎರಡು ಅಲಂಕಾರಗಳ ಆತ್ಯಂತಿಕ ರಾಚನಿಕ ಸ್ಥಿತಿಯಲ್ಲಿಯೇ ವ್ಯತ್ಯಾಸವಿರುವುದು ವಿದ್ವದ್ರಸಿಕರಿಗೆ ಸುವೇದ್ಯ. ಉಪಮಾನ, ಉಪಮೇಯ, ಸಾಧಾರಣಧರ್ಮ ಮತ್ತು ಉಪಮಾವಾಚಕಗಳೆಂಬ ನಾಲ್ಕೂ ಅಂಗಗಳು ಇರುವ ಪೂರ್ಣೋಪಮೆಯಾಗಲಿ, ಇವುಗಳಲ್ಲಿ ಒಂದೆರಡನ್ನು ಕಳೆದುಕೊಂಡ ಲುಪ್ತೋಪಮೆಯಾಗಲಿ ರೂಪಕದ ಎದುರು ಮೂರ್ತವಾಗಿಯೇ ತೋರುತ್ತವೆ. ಈ ಮಾತನ್ನು ಉಪಚಾರವಕ್ರತೆಗೂ ಅಚ್ಚುಕಟ್ಟಾಗಿ ಅನ್ವಯಿಸಬಹುದು. ಅಷ್ಟೇಕೆ, ಉತ್ಪ್ರೇಕ್ಷೆ-ಅತಿಶಯೋಕ್ತಿಗಳಲ್ಲಿಯೂ ಅಮೂರ್ತತೆಯ ಅಂಶ ಉಪಮೆಗಿಂತ ಹೆಚ್ಚು.
ಜಿ. ಪಿ. ರಾಜರತ್ನಂ ಅವರು ತಮ್ಮ ಬರೆಹವೊಂದರಲ್ಲಿ ನವೋದಯದ ಕೆಲವರು ಪ್ರಮುಖ ಕವಿಗಳ ವ್ಯಕ್ತಿತ್ವ-ಕೃತಿತ್ವಗಳನ್ನು ಪಂಚಭೂತಗಳಿಗೆ ಒಪ್ಪವಿಟ್ಟು ನೋಡುವ ವಿನೂತನ ಪ್ರಕಲ್ಪವನ್ನು ಕೈಗೊಂಡಿದ್ದಾರೆ (ನೋಡಿ: ಕವಿ ಗೋವಿಂದ ಪೈ, ಪು. ೨-೪). ಇಲ್ಲಿ ಗೋವಿಂದ ಪೈಗಳನ್ನು ಪೃಥ್ವೀಭೂತದೊಂದಿಗೆ ಸಮೀಕರಿಸಿ ವಿವೇಚಿಸಿರುವುದು ಸ್ವಾರಸ್ಯಕಾರಿ. ಈ ಪ್ರಕಾರ ವನನಿಬಿಡವಾದ ಬೆಟ್ಟವೊಂದನ್ನು ಏರಿ ವಿಹರಿಸಿದ ಅನುಭವ ಪೈಗಳ ಕಾವ್ಯಾಸ್ವಾದಕ್ಕೆ ಸಂವಾದಿ. ಇದಕ್ಕೆ ಸದ್ಯದ ಅಲಂಕಾರವಿವೇಚನೆಯನ್ನೂ ಒಪ್ಪವಿರಿಸಿ ನೋಡಬಹುದು.
To be continued.