ಪರಿಮಳಪದ್ಮಗುಪ್ತ
ಪರಿಮಳಗುಪ್ತ ಅಥವಾ ಪರಿಮಳಪದ್ಮಗುಪ್ತನು ಬರೆದ ಐತಿಹಾಸಿಕಮಹಾಕಾವ್ಯ “ನವಸಾಹಸಾಂಕಚರಿತ.” ಇದು ಭೋಜದೇವನ ತಂದೆ ಸಿಂಧುಲನ ಸಾಧನೆಗಳನ್ನು ಕೊಂಡಾಡುವ ಕೃತಿ. ಇದರ ಒಂದು ಶ್ಲೋಕವು ನಮ್ಮ ಪ್ರಕೃತೋದ್ದೇಶಕ್ಕೆ ಒದಗಿಬರುವಂತಿದೆ:
ಚಕ್ಷುಸ್ತದುನ್ಮೇಷಿ ಸದಾ ಮುಖೇ ವಃ
ಸಾರಸ್ವತಂ ಶಾಶ್ವತಮಾವಿರಸ್ತು |
ಪಶ್ಯಂತಿ ಯೇನಾವಹಿತಾಃ ಕವೀಂದ್ರಾ-
ಸ್ತ್ರಿವಿಷ್ಟಪಾಭ್ಯಂತರವರ್ತಿ ವಸ್ತು || (೧.೪)
ಕವಿಗಳ ವದನಗಳಲ್ಲಿ ಸಾರಸ್ವತನೇತ್ರವು ಸದಾ ತೆರೆದಿದ್ದು ಬೆಳಗಲಿ. ಇದರ ಮೂಲಕವೇ ಮಹಾಕವಿಗಳು ಸಾವಧಾನವಾಗಿ ಮೂಜಗದ ಸಂಗತಿಗಳನ್ನೆಲ್ಲ ಕಾಣುತ್ತಾರೆ.
ಇದು ನೇರವಾಗಿ ಪ್ರತಿಭೆಯ ಮಹತ್ತ್ವವನ್ನು ಕೀರ್ತಿಸುವ ಪದ್ಯ. ಪ್ರತಿಭಾಪಾರಮ್ಯವು ಯಾವುದೇ ಸತ್ಕವಿಗಾಗಲಿ, ಆಲಂಕಾರಿಕನಿಗಾಗಲಿ ಪರೋಕ್ಷವಾಗಿಲ್ಲದಿದ್ದರೂ ಅದನ್ನು ಪ್ರತ್ಯಕ್ಷವಾಗಿ ಮಹಾಕವಿಗಳ ಮೂರನೆಯ ಕಣ್ಣಿಗೆ ಒಪ್ಪವಿಟ್ಟಿರುವುದು ಇಲ್ಲಿಯ ಹೊಸತನ. ಇದೇ ಅಂಶವನ್ನು ಮಹಿಮಭಟ್ಟನೂ ಒಕ್ಕಣಿಸಿರುವುದು ಸ್ಮರಣೀಯ.[1]
ಭೋಜದೇವ
ಭೋಜರಾಜನ “ಚಂಪೂರಾಮಾಯಣ”ವು ಆ ಪ್ರಕಾರದಲ್ಲಿಯೇ ಅದ್ವಿತೀಯವಾದ ಕೃತಿ. ವಾಲ್ಮೀಕಿಮುನಿಗಳಿಗೆ ಮಧುಮಯಭಣಿತೀನಾಂ ಮಾರ್ಗದರ್ಶೀ ಮಹರ್ಷಿಃ (೧.೮) ಎಂದು ಗೌರವ ಸಲ್ಲಿಸಿದ ಈ ಕವಿ ಸ್ವಯಂ ಇಂಥ ಮಧುಮಯವಾದ ಮಾತುಗಳಿಗೆ ಮಾರ್ಗದರ್ಶಿಯಾಗಿ ಮೆರೆದಿದ್ದಾನೆ. ಹೀಗಾಗಿಯೇ ಇವನು ತನ್ನ ಕಾವ್ಯದ ಆರಂಭದಲ್ಲಿ ನಿರೂಪಿಸಿರುವ ಚಂಪೂಕಾವ್ಯಲಕ್ಷಣವು ಗಮನಾರ್ಹ:
ಗದ್ಯಾನುಬಂಧರಸಮಿಶ್ರಿತಪದ್ಯಸೂಕ್ತಿ-
ರ್ಹೃದ್ಯಾ ಹಿ ವಾದ್ಯಕಲಯಾ ಕಲಿತೇವ ಗೀತಿಃ |
ತಸ್ಮಾದ್ದಧಾತು ಕವಿಮಾರ್ಗಜುಷಾಂ ಸುಖಾಯ
ಚಂಪೂಪ್ರಬಂಧರಚನಾಂ ರಸನಾ ಮದೀಯಾ || (೧.೩)
ಗದ್ಯದೊಡನೆ ಸಮರಸವಾಗಿ ಹೊಂದಿಕೊಂಡು ಬರುವ ಪದ್ಯಗಳ ನಲ್ವಾತುಗಳು ವಾದ್ಯಗೋಷ್ಠಿಯ ಸಹಕಾರದಿಂದ ರಂಜಿಸುವ ಹಾಡುಗಳಂತಿರುತ್ತವೆ. ಆದುದರಿಂದ ಕಾವ್ಯಮಾರ್ಗವನ್ನು ಹಿಡಿಯಲೆಳಸುವ ಸಹೃದಯರಿಗೆ ಸಂತೋಷವಾಗಲೆಂದು ನನ್ನ ನಾಲಗೆ ಈ ಬಗೆಯ ಚಂಪೂಪ್ರಬಂಧವನ್ನು ಹವಣಿಸಲಿ.
ನಮ್ಮ ಆಲಂಕಾರಿಕರ ಪೈಕಿ ದಂಡಿ ಮೊತ್ತಮೊದಲಿಗೆ ಚಂಪೂಕಾವ್ಯವನ್ನು ಹೆಸರಿಸಿ ಲಕ್ಷಣೀಕರಿಸಿದ್ದಾನೆ.[2] ಇಲ್ಲಿ ಬರುವ “ಕಾಚಿತ್” ಎಂಬ ಮಾತು ಚಂಪೂಕಾವ್ಯದ ಅಪ್ರಸಿದ್ಧಿಯನ್ನೂ ಅದರತ್ತ ಸಾಹಿತ್ಯಜಗತ್ತಿಗಿರುವ ಅನಾದರವನ್ನೂ ಧ್ವನಿಸುವಂಥದ್ದೆಂದು ಕೆಲವರು ತರ್ಕಿಸುತ್ತಾರೆ. ಈ ಮಾತು ಕ್ಷೋದಕ್ಷಮವಾಗಿ ತೋರದು. ಏಕೆಂದರೆ, ಯಾವ ಆಲಂಕಾರಿಕರೂ ಚಂಪೂಕಾವ್ಯಕ್ಕೆ ಇದಕ್ಕಿಂತ ಮಿಗಿಲಾದ ಲಕ್ಷಣವನ್ನು ಹೇಳಿಲ್ಲ. ಅಲ್ಲದೆ ಆರ್ಯಶೂರನ ಜಾತಕಮಾಲೆಯಿಂದ ಮೊದಲಾಗಿ ಚಂಪೂಕಾವ್ಯವೆನ್ನಬಹುದಾದ ರಚನಾಕ್ರಮ ಬೆಳೆದು ಬಂದಿರುವುದು ಸುವೇದ್ಯ. ಕೇವಲ ಗದ್ಯ-ಪದ್ಯಗಳ ಮಿಶ್ರಣವೇ ಚಂಪೂಕಾವ್ಯವಾದರೆ ಯಜುರ್ವೇದದಿಂದ ಮೊದಲ್ಗೊಂಡು ಎಲ್ಲ ಬಗೆಯ ದೃಶ್ಯಕಾವ್ಯಗಳವರೆಗೆ ಈ ಲಕ್ಷಣವನ್ನು ಅನ್ವಯಿಸಬೇಕಾದೀತು! ಆದರೆ ನಮ್ಮ ಆಲಂಕಾರಿಕರಿಗೆ ಈ ಮಟ್ಟದ ಅಜ್ಞಾನವಿರಲಿಲ್ಲವೆಂಬುದು ಸ್ಪಷ್ಟ. ದಂಡಿಯಿಂದ ಮೊದಲ್ಗೊಂಡು ಎಲ್ಲರೂ ಸಾರಿದ ಲಕ್ಷಣಕ್ಕೆ ಸ್ವಯಂಪೂರ್ಣತೆ ಇಲ್ಲವೆಂಬುದಂತೂ ಸತ್ಯ. ಇಂತಿದ್ದರೂ ಅವರೆಲ್ಲರ ಇಂಗಿತದ ಪ್ರಕಾರ ಚಂಪೂಕಾವ್ಯವು ರಸಪಾರಮ್ಯವುಳ್ಳ ಪ್ರೌಢಶೈಲಿಯ ಗದ್ಯ-ಪದ್ಯಗಳ ಸಂಯೋಜನೆ, ಮತ್ತಿದು ಅಂಕ-ಪಾತ್ರಗಳಲ್ಲಿ ವಿಭಕ್ತವಾಗದ ಸಾಹಿತ್ಯವುಳ್ಳ ರೂಪಕಸದೃಶ ರಚನೆಯೆಂದು ಊಹಿಸಬಹುದು. ಅಂದರೆ ಚಂಪುವು ಕಥೆ, ಆಖ್ಯಾಯಿಕೆ, ಖಂಡಕಾವ್ಯ, ಮಹಾಕಾವ್ಯಗಳಂಥ ವರ್ಣನ-ಇತಿವೃತ್ತಗಳ ಸಮೃದ್ಧಿಯುಳ್ಳ ಗದ್ಯ-ಪದ್ಯಮಿಶ್ರಣವೆಂದು ಸ್ಥಿರವಾಗುತ್ತದೆ. ಈ ಅಂಶವನ್ನೇ ಭೋಜದೇವನು ಸದ್ಯದ ಪದ್ಯದ ಮೂಲಕ ಸೂಚಿಸಿದ್ದಾನೆ. ಇಲ್ಲಿಯ “ಗದ್ಯಾನುಬಂಧರಸ” ಎಂಬ ಮಾತು ಕೇವಲ ಪದ್ಯಗಳಿಗೆ ಕೊಂಡಿಹಾಕುವಂಥ ತುಂಡುತುಣುಕಾದ ಮಾತುಗಳಲ್ಲದೆ ಸ್ವಯಂ ಸಾಹಿತ್ಯಸತ್ತ್ವವುಳ್ಳ ಅನಿಬದ್ಧರಚನೆಯೆಂಬುದನ್ನು ಸೂಚಿಸುತ್ತದೆ. “ಪದ್ಯಸೂಕ್ತಿ” ಎಂಬ ಮತ್ತೊಂದು ಸೊಲ್ಲು ಚಂಪೂಕಾವ್ಯಗಳ ಪದ್ಯಶೈಲಿಗೆ ಹಿಡಿದ ರನ್ನಗನ್ನಡಿ. ಈ ಪ್ರಕಾರ ಹೆಚ್ಚಿನ ಪದ್ಯಗಳು ಮುಕ್ತಕಸದೃಶವಾದ ಸ್ವಯಂಪೂರ್ಣತೆಯನ್ನು ಹೊಂದಿರಬೇಕು; ಕಥನಕ್ಕಿಂತ ವರ್ಣನೆಗೆ ಮನ್ನಣೆ ನೀಡಬೇಕೆಂದು ತಿಳಿಯುತ್ತದೆ. ಇದನ್ನು ಪ್ರಮುಖಚಂಪುಗಳ ಪರಿಶೀಲನೆಯಿಂದ ಮನಗಾಣಬಹುದು. ಭೋಜನು ತನ್ನ ಈ ಲಕ್ಷಣಕ್ಕೆ ಸೊಗಸಾದ ದೃಷ್ಟಾಂತವನ್ನೂ ನೀಡಿದ್ದಾನೆ. ಆ ಪ್ರಕಾರ ಸುಂದರವಾದ ಮಾತು-ಧಾತುಗಳುಳ್ಳ ಹಾಡಿಗೆ ಹಿನ್ನೆಲೆಯ ವಾದ್ಯಗೋಷ್ಠಿ ಇರುವಂತೆ ಪದ್ಯಗಳಿಗೆ ಗದ್ಯಖಂಡಗಳು ಪೂರಕವಾಗಬೇಕು. ಆದರೆ ಉಭಯತ್ರ ಶ್ರುತಿ-ಲಯಗಳ ಐಕ್ಯವಿರಬೇಕು; ಅದೆಂದರೆ ವಾಗರ್ಥಗಳಲ್ಲಿ ಪ್ರೌಢಿಮೆ. ಇದನ್ನು ಕವಿಯೇ ತನ್ನ ಕಾವ್ಯದಲ್ಲಿ ನಿರಪವಾದವೆಂಬಂತೆ ಆದ್ಯಂತ ತೋರಿಸಿದ್ದಾನೆ.
ಹೀಗೆ ಭೋಜದೇವನ ಚಂಪೂಲಕ್ಷಣ ಅಡಕವಾಗಿದೆ; ಆದರಣೀಯವೂ ಆಗಿದೆ.
ಕ್ಷೇಮೇಂದ್ರ
ಬಹುಮುಖಪ್ರತಿಭೆಯ ಕ್ಷೇಮೇಂದ್ರ ಬಹುಗ್ರಂಥಕರ್ತನಾಗಿ ಪ್ರಸಿದ್ಧ. ಎಲ್ಲ ಬಗೆಯ ಕಾವ್ಯರಚನೆಯಲ್ಲಿ ಪಳಗಿದ್ದ ಆತನಿಗೆ ಶಾಸ್ತ್ರಕೃಷಿಯಿದ್ದಿತಾದರೂ ಅದರಲ್ಲಿ ಹೆಚ್ಚಿನ ಯಶಸ್ಸು ದಕ್ಕಿದಂತೆ ತೋರದು. ಬಹುಶಃ ಈ ಕಾರಣದಿಂದಲೇ ಅವನ ಉಪಲಬ್ಧಕಾವ್ಯಗಳಲ್ಲಿ ಸಾಹಿತ್ಯಮೀಮಾಂಸೆಯ ದೃಷ್ಟಿಯಿಂದ ತುಂಬ ಬೆಲೆಯುಳ್ಳ ಒಳನೋಟಗಳು ಕಾಣುವುದಿಲ್ಲ. ಆದರೆ ವಿಪುಲವಾದ ವಾಙ್ಮಯಸಿದ್ಧಿ ಈತನದಾದ ಕಾರಣ ಕೆಲವೊಂದು ಸ್ವಾರಸ್ಯಗಳಿಗಂತೂ ಕೊರತೆಯಿಲ್ಲ.
ಕ್ಷೇಮೇಂದ್ರನ ಪರಿಹಾಸಕಾವ್ಯಗಳಲ್ಲಿ ಒಂದಾದ “ದೇಶೋಪದೇಶ”ವು ಆರಂಭದಲ್ಲಿಯೇ ತನ್ನ ಉದ್ದೇಶವನ್ನು ಹೀಗೆ ಸಾರುತ್ತದೆ:
ಹಾಸೇನ ಲಜ್ಜಿತೋऽತ್ಯಂತಂ ನ ದೋಷೇಷು ಪ್ರವರ್ತತೇ |
ಜನಸ್ತದುಪಕಾರಾಯ ಮಮಾಯಂ ಸ್ವಯಮುದ್ಯಮಃ || (೧.೪)
ಗೇಲಿಗೆ ತುತ್ತಾಗಿ ನಾಚಿಕೊಂಡ ಮನುಜನು ಅನ್ಯಾಯಗಳಿಗೆ ಕೈಹಾಕುವುದಿಲ್ಲ. ಇದು ಲೋಕಕ್ಕೊಂದು ಉಪಕಾರ. ಇದಕ್ಕಾಗಿಯೇ ನನ್ನ ಈ ಪ್ರಯತ್ನ ಸಾಗಿದೆ.
ಕಾವ್ಯವನ್ನು ಉಪದೇಶಕ್ಕಾಗಿಯೂ ಬಳಸಿಕೊಳ್ಳುವರೆಂಬ ಸಂಗತಿ ಎಲ್ಲ ಆಲಂಕಾರಿಕರಿಗೂ ಅಪರೋಕ್ಷ. ಕವಿಗಳಂತೂ ಉಪದೇಶಿಸಲು ಉತ್ಸುಕರಾಗಿಯೇ ಇರುತ್ತಾರೆ! ಆದರೆ ಹಿಂದಿನ ಕಾಲದಲ್ಲಿ ಹಾಸ್ಯವನ್ನು ಹಿಡಿದು ಗೇಲಿ ಮಾಡುವ ಮೂಲಕ ದುಷ್ಟರನ್ನು ಅಂಕೆಯಲ್ಲಿಡುವ ಹವಣು ಹೆಚ್ಚಾಗಿ ಕಾಣಸಿಗದು. ಇದಕ್ಕೆ ಎಣೆಮೀರಿದ ಎದೆಗಾರಿಕೆ ಬೇಕು; ಚುರುಕಾದ ಹಾಸ್ಯಪ್ರಜ್ಞೆಯೂ ಬೇಕು. ಇದೆಲ್ಲವನ್ನೂ ಸಮಧಿಕಪ್ರಮಾಣದಲ್ಲಿ ಉಳ್ಳವನು ಕ್ಷೇಮೇಂದ್ರ. ಹೀಗೆ ಶುಷ್ಕೋಪದೇಶಕ್ಕೆ ಕೈಹಾಕದೆ ಹಾಸ್ಯದ ಚಾವಟಿಯೇಟಿನ ಮೂಲಕ ಪರ್ಯಾಯವಾಗಿ ಲೋಕಕ್ಕೊಂದು ಉಪದೇಶವನ್ನೂ ಅದಕ್ಕೆ ಉಪಷ್ಟಂಭಕವಾಗಿ ವಿನೋದವನ್ನೂ ಕಲ್ಪಿಸುವ ಕವಿಯ ಕೌಶಲ ಸ್ತುತ್ಯ. ಸಮಾಜದ ವ್ಯಕ್ತಿಗಳನ್ನು ನೇರವಾಗಿಯೇ ಹೆಸರಿಸಿ ತಿವಿಯುವುದಕ್ಕಿಂತ ಕಲ್ಪಿತಪಾತ್ರಗಳ ಮೂಲಕ ನಗೆಯುಕ್ಕಿಸುವ ಹಾಗೆ ಸಾಹಿತ್ಯಮಾಧ್ಯಮದಿಂದ ಉದ್ದೇಶವನ್ನು ಸಾಧಿಸುವುದು ಒಳ್ಳೆಯ ಜಾಣ್ಮೆ. ಇಂಥ ಪ್ರಕಲ್ಪಕ್ಕೆ ವ್ಯಾಪಕವಾಗಿ ದುಡಿದು ಯಶಸ್ವಿಯಾದ ಆದ್ಯನೆಂದರೆ ಕ್ಷೇಮೇಂದ್ರನೇ. ಪೂರ್ವಸೂರಿಗಳಾದ ಶೂದ್ರಕ, ಶ್ಯಾಮಿಲಕ, ಭಲ್ಲಟ, ದಾಮೋದರಗುಪ್ತರಂಥವರಿದ್ದರೂ ಅವನ ಕೊಡುಗೆ ಗುಣ-ಗಾತ್ರಗಳಲ್ಲಿ ವಿಸ್ಮಯಾವಹ. ಹೀಗೆ ಸಾಹಿತ್ಯಶಾಸ್ತ್ರದ ಅಚುಂಬಿತವಿಭಾಗವೊಂದನ್ನು ವಿಮರ್ಶನಕ್ಕಾಗಿ ಉದ್ಘಾಟಿಸಿದ ಶ್ರೇಯಸ್ಸು ಕ್ಷೇಮೇಂದ್ರನದು.
ಪಾಶ್ಚಾತ್ತ್ಯಸಾಹಿತ್ಯದಲ್ಲಿ ಅರಿಸ್ಟೋಫೆನೀಸನ ಕಾಲದಿಂದ ಸಾಗಿಬಂದಂತೆ ತೋರುವ ವಿಡಂಬನಝರಿ ಪುನರುತ್ಥಾನಯುಗದ ಹೊತ್ತಿಗೇ ಮಹಾನದಿಯಾಗಿತ್ತು. ಈ ಸಮೃದ್ಧಿಗೆ ಹೋಲಿಸಿದರೆ ನಮ್ಮ ಪ್ರಾಚೀನಸಾಹಿತ್ಯದ ಸಾಧನೆ ಹೆಚ್ಚಿನದಲ್ಲ. ಕ್ಷೇಮೇಂದ್ರನಂಥ ಒಬ್ಬಿಬ್ಬರೂ ಇಲ್ಲದಿದ್ದ ಪಕ್ಷದಲ್ಲಿ ನಮ್ಮ ಸ್ಥಿತಿ ಮತ್ತೂ ಶೋಚನೀಯವಾಗಿ ಪರಿಣಮಿಸುತ್ತಿತ್ತು. ಆದುದರಿಂದ ರಸಕ್ಕೆವಿರೋಧವಾಗದ ರೀತಿಯಲ್ಲಿ ಉಪದೇಶವನ್ನು ತರುವ ಕಲಾಮಾರ್ಗಕ್ಕೆ ಕ್ಷೇಮೇಂದ್ರನ ತತ್ತ್ವ-ಪ್ರಯೋಗಗಳ ಯೋಗದಾನ ಅವಿಸ್ಮಾರ್ಯ.
ಕ್ಷೇಮೇಂದ್ರನು “ಬೃಹತ್ಕಥಾಮಂಜರಿ”ಯ ಮೊದಲಿನಲ್ಲಿ ಕಾವ್ಯಕ್ಕೆ ಚಮತ್ಕೃತಿಯೇ ಮಿಗಿಲಾದ ಶೋಭೆಯೆಂದು ಒಕ್ಕಣಿಸಿದ್ದಾನೆ:
ಓಜೋ ರಂಜನಮೇವ ವರ್ಣರಚನಾಶ್ಚಿತ್ರಾ ನ ಕಸ್ಯ ಪ್ರಿಯಾ
ನಾನಾಲಂಕೃತಯಶ್ಚ ಕಸ್ಯ ನ ಮನಃಸಂತೋಷಮಾತನ್ವತೇ |
ಕಾವ್ಯೇ ಕಿಂತು ಸತಾಂ ಚಮತ್ಕೃತಿಕೃತಃ ಸೂಕ್ತಿಪ್ರಬಂಧಾಃ ಸ್ಫುಟಂ
ತೀಕ್ಷ್ಣಾಗ್ರಾ ಝಟಿತಿ ಶ್ರುತಿಪ್ರಣಯಿನಃ ಕಾಂತಾಕಟಾಕ್ಷಾ ಇವ || (೧.೧.೪)
ಓಜೋಗುಣವು ರಂಜಕವೇ ಹೌದು. ಆಕರ್ಷಕವಾದ ವರ್ಣಗುಂಫನ ಯಾರಿಗೆ ತಾನೆ ಇಷ್ಟವಾಗದು? ಬಗೆಬಗೆಯ ಅಲಂಕಾರಗಳು ಯಾರ ಮನಸ್ಸನ್ನು ತಾನೆ ಮುದಗೊಳಿಸವು? ಹೀಗಿದ್ದರೂ ಚಮತ್ಕಾರವುಳ್ಳ ಕಾವ್ಯಗಳು ಚೆಲುವೆಯರ ಕುಡಿನೋಟಗಳಂತೆ ಅಪೂರ್ವತೀಕ್ಷ್ಣತೆಯಿಂದ ಕೂಡಿ, ಶ್ರುತಿಪ್ರಣಯಿಗಳೆನಿಸಿ (ಕಿವಿಯವರೆಗೂ ವಿಸ್ತರಿಸಿಕೊಂಡು, ಕಿವಿಗಳಿಗೆ ಇಂಪೆನಿಸಿ) ಮೆರೆಯುತ್ತವೆ.
ಇಲ್ಲಿ ಕ್ಷೇಮೇಂದ್ರನು ಕಾವ್ಯದ ಹಲಕೆಲವು ಆಕರ್ಷಣೆಗಳೆನಿಸಿದ ವರ್ಣಗುಣ, ಶಬ್ದಗುಣ, ಅಲಂಕಾರಾದಿಗಳಿಗಿಂತ ವಿಭಿನ್ನವೂ ವಿಶಿಷ್ಟವೂ ಆದ ಚಮತ್ಕಾರದತ್ತ ಗಮನ ಸೆಳೆದಿದ್ದಾನೆ. ಬಿಡಿಗವಿತೆಯ ಒಟ್ಟಂದದ ಚೆಲುವನ್ನು ಚಮತ್ಕಾರವೆಂದು ಹೇಳಬಹುದು. ಮತ್ತೂ ನಿರ್ದಿಷ್ಟವಾಗಿ ನಿರೂಪಿಸುವುದಾದರೆ, ಯಾವ ಕಾವ್ಯದ ಆಸ್ವಾದನೆಯಲ್ಲಿ ನಾವು ಕಳೆದುಹೋಗದೆ, ಕರಗಿಹೋಗದೆ ಸಾಭಿಮಾನವಾಗಿ ಅದನ್ನು ಮೆಚ್ಚಿಕೊಳ್ಳುವೆವೋ ಅಂಥದ್ದೇ ಚಮತ್ಕಾರ ಉಳ್ಳ ಕವಿತೆ. ಇಲ್ಲಿ ಕವಿಯ ಕೌಶಲದ ಬಗೆಗೆ ಪ್ರಜ್ಞಾಪೂರ್ವಕವಾದ ಪ್ರಶಂಸೆಯಿರುತ್ತದೆ. ಮಾತ್ರವಲ್ಲ, ಅದು ನಮ್ಮ ತನವನ್ನು ಮರೆಯದೆ ಮಾಡಿದ ಮೆಚ್ಚುಗೆಯಾಗಿಯೂ ನಿಲ್ಲುತ್ತದೆ. ಜೊತೆಗೆ ಗುಣ, ರೀತಿ, ಅಲಂಕಾರಗಳಂಥ ವೈಶಿಷ್ಟ್ಯಗಳನ್ನು ಇದಮಿತ್ಥಂ ಎಂದು ನಿರ್ದೇಶಿಸಲಾಗದೆ ಒಟ್ಟಾರೆ ಮಾಡಿದ ಅಳತೆಯಾಗಿಯೂ ಸಲ್ಲುತ್ತದೆ. ಇಷ್ಟೆಲ್ಲ ಸ್ವಾರಸ್ಯಗಳು ಚಮತ್ಕಾರದಲ್ಲಿದ್ದರೂ ಅದು ವಸ್ತುಮಾಹಾತ್ಮ್ಯಕ್ಕಿಂತ ಮಿಗಿಲಾಗಿ ಕವಿಕೌಶಲವನ್ನೇ ಎತ್ತಿಹಿಡಿಯುವ ಕಾರಣ ರಸಧ್ವನಿಗಿಂತ ಮಿಗಿಲಾಗಿ ಗುಣೀಭೂತವ್ಯಂಗ್ಯದ ವಲಯದಲ್ಲಿಯೇ ಸುಳಿಸುತ್ತುತ್ತಿರುತ್ತದೆ. ಇಂಥ ಚಮತ್ಕಾರತತ್ತ್ವವು ಸಹಜವಾಗಿಯೇ ಸಮಗ್ರಪ್ರಬಂಧಕ್ಕಿಂತ ಮಿಗಿಲಾಗಿ ಮುಕ್ತಕಸದೃಶ ರಚನೆಗಳಲ್ಲಿ, ಚಿಕ್ಕಚಿಕ್ಕ ಕಾವ್ಯಖಂಡಗಳಲ್ಲಿ ಎದ್ದುತೋರುತ್ತದೆ. ಹೀಗಾಗಿ ಚಮತ್ಕಾರವನ್ನು ಸಮಗ್ರಕಾವ್ಯದ ವಿಮರ್ಶೆಗಿಂತ ಸ್ಫುಟಪದ್ಯಗಳ ವಿಮರ್ಶೆಗೆ ಸಮರ್ಥವಾಗಿ ಬಳಸಿಕೊಳ್ಳಬಹುದು.
ಚಮತ್ಕಾರಶಬ್ದವು ಮೂಲತಃ ಒಂದು ಅನುಕರಣಶಬ್ದವಾಗಿದ್ದು (ಚಮತ್-ಕಾರ) ಪಾಕಶಾಸ್ತ್ರಕ್ಕೆ ಸಂಬಂಧಿಸಿತ್ತೆಂದು ವಿ. ರಾಘವನ್ ಅವರು ಸಹೇತುಕವಾಗಿ ತರ್ಕಿಸುತ್ತಾರೆ. ಈ ಅಂಶವನ್ನು ಅವರು ಲಕ್ಷ್ಮಣಸೂರಿಗಳ ಯುದ್ಧಕಾಂಡಕ್ಕೆ ರಾಮಚಂದ್ರಬುಧೇಂದ್ರ ಬರೆದ ವ್ಯಾಖ್ಯಾನದ ಉದ್ಧರಣವೊಂದರಿಂದ ಗ್ರಹಿಸಿದ್ದಾರೆ. [3] ಈ ಪ್ರಕಾರ ಯಾವುದೇ ಆಸ್ವಾದವನ್ನು ಚಪ್ಪರಿಸಿ ತೋರ್ಪಡಿಸುವುದೇ ಚಮತ್ಕಾರ. ಲೋಕರೂಢಿಯಲ್ಲಿ “ಲೊಟ್ಟೆ ಹಾಕುತ್ತ ತಿನ್ನುವುದು” ಎಂಬ ಮಾತುಂಟಷ್ಟೆ. ಇದು ಚಮತ್ಕಾರಶಬ್ದದ ಮೂಲ. ಆ ಮಾತ್ರಕ್ಕೆ ಬಂದರೆ ರಸಶಬ್ದವೂ ಪಾಕಶಾಸ್ತ್ರಮೂಲದ್ದು. ಇದನ್ನು ಶಂಕರಭಗವತ್ಪಾದರು ಕೂಡ ಈ ಅರ್ಥದಲ್ಲಿಯೇ ಗ್ರಹಿಸಿದ್ದಾರೆ.[4] ಹೀಗಾಗಿ ರಸಶಬ್ದವು ಚಮತ್ಕಾರಶಬ್ದಕ್ಕಿಂತ ಹೇಗೆ ತಾನೆ ಮಿಗಿಲೆಂಬ ಪ್ರಶ್ನೆ ಉದಿಸೀತು. ಇದಕ್ಕೆ ಉತ್ತರವಿಷ್ಟೇ: ರಸವು ಸರ್ವಾತ್ಮನಾ ಅನುಭವ; ಚಮತ್ಕಾರವು ಅದರ ಅಭಿವ್ಯಕ್ತಿ. ಅನುಭವಕಾಲದಲ್ಲಿ ಇಲ್ಲದ ತ್ರಿಪುಟೀಜಾಗರಣ ಅಭಿವ್ಯಕ್ತಿಕಾಲದಲ್ಲಿ ಉಳಿಯುವುದು ಸರ್ವವೇದ್ಯ. ಕಲಾಮೀಮಾಂಸೆಯ ಪರಮತಾತ್ಪರ್ಯವಿರುವುದು ಅನುಭವದಲ್ಲಿಯೇ.
ಕ್ಷೇಮೇಂದ್ರನ ಗುರುವಾದ ಅಭಿನವಗುಪ್ತನೇ ಚಮತ್ಕಾರಶಬ್ದವನ್ನು ವ್ಯಾಪಕವಾಗಿ ಬಳಸಿದ್ದಾನೆ. ಅವನ ಪರವರ್ತಿಗಳಾದ ವಿಶ್ವೇಶ್ವರ, ಜಗನ್ನಾಥ ಮೊದಲಾದವರು ಕೂಡ ಇದನ್ನು ಉಲ್ಲೇಖಿಸಿದ್ದಾರೆ. ಅಷ್ಟೇಕೆ, ಸ್ವಯಂ ಕ್ಷೇಮೇಂದ್ರನೇ ತನ್ನ “ಕವಿಕಂಠಾಭರಣ”ದಲ್ಲಿ ಚಮತ್ಕಾರವನ್ನು ಉಲ್ಲೇಖಿಸಿದ್ದಾನೆ. ಇವರೆಲ್ಲ ಪ್ರಾಯಿಕವಾಗಿ ಈ ಶಬ್ದಕ್ಕೆ ಅತಿವ್ಯಾಪ್ತಿಯನ್ನು ಕಲ್ಪಿಸಿದಂತೆ ತೋರುತ್ತದೆ.[5] ಇದಕ್ಕೆ ಕಾರಣ ಅವರೆಲ್ಲ ಬಹುಶಃ ರಸವನ್ನು ಆಸ್ವಾದ್ಯವೆಂದೂ ಆಸ್ವಾದ್ಯಪದಾರ್ಥವನ್ನು ಅನುಭವಿಸುವಾಗ ಸಾವು ತೋರುವ ಸಶಬ್ದಪ್ರತಿಕ್ರಿಯೆಯನ್ನು ಚಮತ್ಕಾರವೆಂದೂ ಗ್ರಹಿಸಿರುವುದು. ವಸ್ತುತಃ ಇಂಥ ಬಾಹ್ಯಪ್ರತಿಕ್ರಿಯೆಗಳನ್ನು ಮೀರಿದ ಸ್ಥಿತಿಯೆಂದರೆ ರಸವೇ ಆಸ್ವಾದವಾಗುವ ಹಂತ. ಇಲ್ಲಿ ತ್ರಿಪುಟೀವಿಲಯವು ಸಾಧಿತವಾಗಿರುತ್ತದೆ. ರಸ್ಯಂತೇ ಇತಿ ರಸಾಃ ಎಂಬುದು ರಸಶಬ್ದದ ಸವಿಕಲ್ಪಸ್ತರದ ನಿರ್ವಚನವಾದರೆ ರಸನಂ ರಸಃ ಎಂಬುದು ಅದರ ನಿರ್ವಿಕಲ್ಪಸ್ತರದ ನಿರ್ವಚನ. ಈ ಹಂತದಲ್ಲಿ ಚಮತ್ಕಾರವೆಂಬ ಬಹಿರಂಗದ ಪರಿಭಾಷೆ ಅನವಶ್ಯ ಮಾತ್ರವಲ್ಲ, ಅನಪೇಕ್ಷಿತ ಕೂಡ. ನಮ್ಮೆಲ್ಲರ ಲೋಕಾನುಭವದಲ್ಲಿಯೂ ಚಮತ್ಕಾರವನ್ನು ಉನ್ನತೋನ್ನತಸ್ಥಿತಿಯಾಗಿ ಲಕ್ಷಿಸದಿರುವುದು ಗಮನಾರ್ಹ. ಏಕೆಂದರೆ ಚಮತ್ಕಾರವು ಮೂಲತಃ ಭೋಗೀಕರಣದ ಸ್ಥಿತಿ. ರಸವು ಅದನ್ನು ಮೀರಿದ ಸ್ವಸ್ವರೂಪಕ್ಕೆ ನಿಕಟವಾದ ಅನುಭವ.
[1] ರಸಾನುಗುಣಶಬ್ದಾರ್ಥಚಿಂತಾಸ್ತಿಮಿತಚೇತಸಃ | ಕ್ಷಣಂ ಸ್ವರೂಪಸ್ಪರ್ಶೋತ್ಥಾ ಪ್ರಜ್ಞೈವ ಪ್ರತಿಭಾ ಕವೇಃ | ಸಾ ಹಿ ಚಕ್ಷುರ್ಭಗವತಸ್ತೃತೀಯಮಿತಿ ಗೀಯತೇ | ಯೇನ ಸಾಕ್ಷಾತ್ಕರೋತ್ಯೇಷ ಭಾವಾಂಸ್ತ್ರೈಲೋಕ್ಯವರ್ತಿನಃ || (ವ್ಯಕ್ತಿವಿವೇಕ, ೨.೧೧೭,೧೧೮)
[2] ಗದ್ಯಪದ್ಯಮಯೀ ಕಾಚಿಚ್ಚಂಪೂರಿತ್ಯಭಿಧೀಯತೇ || (ಕಾವ್ಯಾದರ್ಶ, ೧.೩೧)
[3] Studies on Some Concepts of the Alaṅkāraśāstra, pp. 293–94
ಚಮದಿತ್ಯನುಕರಣಶಬ್ದಃ | ಚಮತ್ಕಾರಲಕ್ಷಣಂ ತು “ಸುಖದುಃಖಾದ್ಭುತಾನಂದೈರ್ಹರ್ಷಾದ್ಯೈಶ್ಚಿತ್ತವಿಕ್ರಿಯಾ ಚಮತ್ಕಾರಃ ಸಸೀತ್ಕಾರಃ ಶರೀರೋಲ್ಲಾಸನಾದಿಭಿಃ” || (ಚಂಪೂರಾಮಾಯಣ, ಪು. ೩೪೯)
[4] ರಸೋ ನಾಮ ತೃಪ್ತಿಹೇತುರಾನಂದಕರೋ ಮಧುರಾಮ್ಲಾದಿಃ ಪ್ರಸಿದ್ಧೋ ಲೋಕೇ || (ತೈತ್ತಿರೀಯೋಪನಿಷದ್ಭಾಷ್ಯ, ಬ್ರಹ್ಮಾನಂದವಲ್ಲೀ, ೭.೧)
[5] ಸಾ ಚಾವಿಘ್ನಾ ಸಂವಿಚ್ಚಮತ್ಕಾರಃ | ತಜ್ಜೋಪಿ ಕಂಪಪುಲಕೋಲ್ಲಾಸನಾದಿವಿಕಾರಶ್ಚಮತ್ಕಾರಃ || (ಅಭಿನವಭಾರತಿ, ೬.೩೨); ರಸೇ ಸಾರಶ್ಚಮತ್ಕಾರಃ ಸರ್ವತ್ರಾಪ್ಯನುಭೂಯತೇ || (ಸಾಹಿತ್ಯದರ್ಪಣ, ೩.೩ ವೃತ್ತಿ); ವಾಗರ್ಥೌ ಸಚಮತ್ಕಾರೌ ಕಾವ್ಯಮ್ (ಚಮತ್ಕಾರಚಂದ್ರಿಕಾ, ೧.೧೧); ಸ್ವವಿಶಿಷ್ಟಜನಕಾವಚ್ಛೇದಕಪ್ರತಿಪಾದಕತಾಸಂಸರ್ಗೇಣ ಚಮತ್ಕಾರತ್ವಂ ಕಾವ್ಯತ್ವಮ್ || (ರಸಗಂಗಾಧರ, ೧.೧ ವೃತ್ತಿ); ನ ಹಿ ಚಮತ್ಕಾರವಿರಹಿತಸ್ಯ ಕವೇಃ ಕವಿತ್ವಮ್, ಕಾವ್ಯಸ್ಯ ವಾ ಕಾವ್ಯತ್ವಮ್ || (ಕವಿಕಂಠಾಭರಣ, ೩.೧ ವೃತ್ತಿ)
To be continued.