ಮೀಮಾಂಸಕರು ಮೊದಲಿನಿಂದಲೂ ಕಾವ್ಯವಿರೋಧಿಗಳು. ಅವರತ್ತ ಕವಿ ಹೀಗೆ ಕಟಾಕ್ಷಿಸುತ್ತಾನೆ:
ಅರ್ಥೇಷ್ವಲಂಕಾರವಿದಃ ಪ್ರಮಾಣಂ
ಶಬ್ದೇಷು ನಃ ಶಬ್ದವಿದೋ ಮುನೀಂದ್ರಾಃ |
ಕೇ ತಾಂತ್ರಿಕಾಣಾಂ ಕವಯೋ ಭವಂತಿ
ಕೇ ವಾ ಕವೀನಾಮಪಿ ತಾಂತ್ರಿಕಾಃ ಸ್ಯುಃ || (೧.೭೦)
ಕಾವ್ಯಾರ್ಥವನ್ನು ಕುರಿತಂತೆ ಆಲಂಕಾರಿಕರು ಪ್ರಮಾಣ. ಪದಶುದ್ಧಿಯನ್ನು ಕುರಿತಂತೆ ಮುನಿತ್ರಯವೇ ಪ್ರಮಾಣ. ಆದರೆ ಮೀಮಾಂಸಕರ ಪೈಕಿ ಯಾರು ಕವಿಗಳಾದಾರು? ಅಂತೆಯೇ ಕವಿಗಳ ಪೈಕಿ ಯಾರು ತಾನೆ ಮೀಮಾಂಸಕರಾದಾರು?
ಮೀಮಾಂಸಾಶಾಸ್ತ್ರಕ್ಕೆ “ತಂತ್ರ”ವೆಂಬ ಹೆಸರು ಬಹುಪ್ರಾಚೀನ. “ತಂತ್ರವಾರ್ತ್ತಿಕ”, “ಭಾಟ್ಟತಂತ್ರರಹಸ್ಯ”, “ತಂತ್ರದೀಪಿಕಾ” ಮುಂತಾದ ಗ್ರಂಥನಾಮಗಳೇ ಇದಕ್ಕೆ ಪ್ರಮಾಣ. ಸ್ವಯಂ ಪೂರ್ವಮೀಮಾಂಸೆಯ ಉದ್ದಾಮಪಂಡಿತರ ವಂಶದಲ್ಲಿ ಜನಿಸಿ ಆ ಶಾಸ್ತ್ರವನ್ನು ತಾನೂ ಚೆನ್ನಾಗಿ ಬಲ್ಲವನಾದ ನೀಲಕಂಠದೀಕ್ಷಿತ ತುಂಬ ನಿರ್ಮಮತೆಯಿಂದ ಅದರ ಮಿತಿಗಳನ್ನಿಲ್ಲಿ ಧ್ವನಿಸಿದ್ದಾನೆ. ಜಗತ್ಸತ್ಯವಾದಿಗಳೂ ಕಲಾವಿರೋಧಿಗಳೂ ಆದ ಮೀಮಾಂಸಕರು ಮೊದಲಿನಿಂದಲೂ ಕಾವ್ಯ-ಕಲೆಗಳು ಕರ್ಮಕಾಂಡಕ್ಕೆ ವಿಘ್ನಕಾರಿಗಳೆಂದು ಬಗೆದವರು; ಮಾನವಜೀವನವನ್ನು ಹಾಳುಮಾಡುವ ವಿಮೌಲ್ಯಗಳೆಂದು ಸಾರಿದವರು. ಕಾವ್ಯಾಲಾಪಾಂಶ್ಚ ವರ್ಜಯೇತ್ ಎಂಬುದು ಇವರ ಪ್ರಸಿದ್ಧಸಿದ್ಧಾಂತ. ಹೀಗಾಗಿಯೇ ಇವರಿಗೆ ಅಂಜಿದ ಕಾವ್ಯವ್ಯಾಖ್ಯಾತೃಗಳು ತಮ್ಮ ಕೃತಿಗಳ ಉಪಕ್ರಮಗಳಲ್ಲಿ ತಾವು ವಿವರಿಸಲಿರುವ ಕಾವ್ಯಗಳು ದುಷ್ಕಾವ್ಯಗಳಲ್ಲ, ಮೀಮಾಂಸಕರ ಆಕ್ಷೇಪವಿರುವುದು ಅಂಥವಕ್ಕೆ ಮಾತ್ರ ಎಂದು ಹಿಂಜರಿಕೆಯಿಂದಲೇ ಸಮಜಾಯಿಷಿ ಕೊಡುವ ಪ್ರಯತ್ನ ಮಾಡಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ನಾವು ಗಮನಿಸಬೇಕಾದ ಅಂಶವೆಂದರೆ ಪೂರ್ವಮೀಮಾಂಸಕರು ಜಗತ್ಸತ್ಯವಾದಿಗಳಾಗಿ ಇರುತ್ತಲೇ ಪರಮಾರ್ಥತಃ “ಕರ್ತೃತಂತ್ರ”ವಾದ ಕರ್ಮಕಾಂಡವನ್ನು ಕಟ್ಟುನಿಟ್ಟಾಗಿ ಪ್ರತಿಪಾಡಿಸುವ ಕಾರಣ ಅವರು ಅನಿವಾರ್ಯವೆಂಬಂತೆ ರಸವಿರೋಧಿಗಳಾಗಿದ್ದಾರೆ.
ದಿಟವಾದ ಕಲೆ ಎಂದಿಗೂ ಬರ್ಬರವಾಸ್ತವವಾದಿಗಳ ವಲಯದಲ್ಲಾಗಲಿ, ಕಠೋರಕರ್ಮಠರ ನಡುವೆಯಾಗಲಿ ಬಾಳಲಾರದು. ಇದಕ್ಕೆ ಮುಖ್ಯಕಾರಣ ಇವೆರಡು ಪಂಥಗಳು ಕಲೆಯ ಆಹಾರ್ಯಸತ್ತೆಯನ್ನು ಆಗ್ರಹದಿಂದ ವಿರೋಧಿಸುವುದು. ಇಂಥ ಆಗ್ರಹಕ್ಕೆ ಆ ಪಂಥಗಳು ಕೊಡುವ ಕಾರಣವನ್ನು ಗಮನಿಸಬಹುದು. ವಾಸ್ತವವಾದಿಗಳ ದೃಷ್ಟಿಯಲ್ಲಿ ಕಲೆಯು ಜಗತ್ಸತ್ಯಕ್ಕೆ ವಿರುದ್ಧ; ಅದು ಕಲ್ಪನೆಯ ಹೆಸರಿನಲ್ಲಿ ಹುಸಿಯನ್ನೇ ತನ್ನ ಮಾಧ್ಯಮವಾಗಿ ಮಾಡಿಕೊಳ್ಳುತ್ತದೆ. ಕರ್ಮಠರ ದೃಷ್ಟಿಯಲ್ಲಿ ಕಲೆ ವಿಧಿ-ನಿಷೇಧಗಳನ್ನು ಉಪಪ್ಲವಗೊಳಿಸುವ ಲೋಲುಪತೆಯನ್ನೇ ಆನಂದವೆಂದು ಪ್ರತಿಪಾದಿಸುವ ಶ್ರದ್ಧಾರಹಿತ ಪ್ರಕಲ್ಪ. ಇವನ್ನೆಲ್ಲ ನಮ್ಮ ಆಲಂಕಾರಿಕರು ನೇರವಾಗಿ ಪ್ರಸ್ತಾವಿಸಿಲ್ಲ; ಆದರೂ ಅವರು ಅಲ್ಲಲ್ಲಿ ಇಂಥ ಆಕ್ಷೇಪಕ್ಕೆ ಉತ್ತರವನ್ನಿತ್ತಿರುವುದು ಸ್ಮರಣೀಯ. ಮುಖ್ಯವಾಗಿ ರಾಜಶೇಖರನ “ಕಾವ್ಯಮೀಮಾಂಸೆ”ಯು ಮೊದಲಿಗೆ ಸಾಹಿತ್ಯವನ್ನು “ಪಂಚದಶಂ ವಿದ್ಯಾಸ್ಥಾನಂ”, “ಪಂಚಮೀ ವಿದ್ಯಾ” ಎಂದು ಕೀರ್ತಿಸಿರುವುದೂ ಬಳಿಕ ಅಶ್ಲೀಲತೆಯು ಇದರಲ್ಲಿ ಮಾತ್ರ ಇರುವುದಲ್ಲವಂದು ಸಾರಿರುವುದೂ ಗಮನಾರ್ಹ (ಆರನೆಯ ಅಧ್ಯಾಯದ ಕಡೆಗೆ). ಮಧುಸೂದನಸರಸ್ವತಿಗಳಂಥ ಯತಿಗಳು ಅಷ್ಟಾದಶವಿದ್ಯಾಸ್ಥಾನಗಳನ್ನು ವಿವರಿಸುವಾಗ ಸಾಹಿತ್ಯಕಲೆಗಳ ಮೂಲವಾದ ಗಾಂಧರ್ವವೇದವನ್ನು ಸಾಮವೇದದ ಉಪವೇದವೆಂದು ಲೆಕ್ಕಿಸಿದ ಸಂಗತಿಯೂ ಸ್ಮರಣೀಯ.[1] ಎಲ್ಲಕ್ಕಿಂತ ಮಿಗಿಲಾಗಿ ಅಭನವಗುಪ್ತನ ಬಳಿಕ ಆಲಂಕಾರಿಕಜಗತ್ತು ನಿರಪವಾದವಾಗಿ ರಸಸ್ವರೂಪವನ್ನು ವೇದಾಂತದೃಷ್ಟಿಯಿಂದ ನಿರ್ವಚಿಸಿರುವುದು ಮೀಮಾಂಸಕರಿಗೆ ನೀಡಿದ ಸಮರ್ಥಪ್ರತ್ಯುತ್ತರ. ವೇದಾಂತದ ಆದರ್ಶದೃಷ್ಟಿಗೆ ರಸವು ಬ್ರಹ್ಮಾಸ್ವಾದಸಹೋದರ, ಪಾರಮಾರ್ಥಿಕಸತ್ತೆಯನ್ನು ಎಟುಕಿಸಿಕೊಳ್ಳುವಲ್ಲಿ ಅನುಕೂಲಿಸಬಲ್ಲ ಆಹಾರ್ಯಸತ್ತೆ. ಇದನ್ನೆಲ್ಲ ಬಲುಮಟ್ಟಿಗೆ ಮನದಲ್ಲಿರಿಸಿಕೊಂಡೇ ನೀಲಕಂಠದೀಕ್ಷಿತನು ತನ್ನ ಅಭಿಪ್ರಾಯವನ್ನು ರೂಪಿಸಿಕೊಂಡಿರಬಹುದು.
ಹೀಗೆ “ಶಿವಲೀಲಾರ್ಣವ”ದ ಉಪಕ್ರಮದಲ್ಲಿ ವಿನೋದಮಾರ್ಗವನ್ನು ಹಲವೊಮ್ಮೆ ಆಶ್ರಯಿಸಿದರೂ ಕಾವ್ಯತತ್ತ್ವವನ್ನು ತುಂಬ ಗಂಭೀರವಾಗಿ ವಿವೇಚಿಸಿದ ಕವಿ ಮುಂದೆ ಇಪ್ಪತ್ತನೆಯ ಸರ್ಗದಲ್ಲಿ ಕಾವ್ಯಾಕ್ಷೇಪವನ್ನು ವಿತಂಡಾವಾದದ ರೂಪದಿಂದ ರೋಚಕವಾಗಿ ಮಾಡಿರುವುದು ಕುತೂಹಲಕಾರಿ. ಇದೆಲ್ಲ ವಿಶುದ್ಧ ಕಾವ್ಯತತ್ತ್ವಕ್ಕೆ ಪೂರ್ವಪಕ್ಷ ಮಾತ್ರ. ಇಲ್ಲಿಯ ಕೆಲವೊಂದು ಮಾತುಗಳನ್ನು ವಿನೋದಕ್ಕಾಗಿಯಾದರೂ ಪರಿಶೀಲಿಸಬಹುದು.
ಸಾಹಿತ್ಯಶಾಸ್ತ್ರವು ತ್ರೈಸ್ವರ್ಯವನ್ನು ಉಪೇಕ್ಷಿಸುವುದರ ಬಗೆಗೆ ಅಧಿಕ್ಷೇಪವಿಂತಿದೆ:
ಆದ್ಯಂ ಹಿ ಶಬ್ದದೋಷಾಣಾಮಸಾಧುತ್ವಂ ಮತಂ ಚ ವಃ |
ಸ್ವರಮಶ್ರದ್ದಧಾನಾನಾಂ ಸ್ವರೂಪೇ ಕೇವ ಸಾಧುತಾ || (೨೦.೭)
ನೀವು ಹೇಳುವ ಶಬ್ದದೋಷಗಳ ಪೈಕಿ ಮುಖ್ಯವೆನಿಸಿದ ಅಸಾಧುತ್ವವೆಂಬ ದೋಷವನ್ನೇ ಗಮನಿಸುವುದಾದರೆ ಪದಗಳಿಗಿರುವ ಸ್ವರವನ್ನೇ ಲೆಕ್ಕಿಸದ ನಿಮಗೆ ಶಬ್ದಗಳ ಸ್ವರೂಪದಲ್ಲಿರುವ ಸಾಧುತ್ವ-ಅಸಾಧುತ್ವವಾದರೂ ಹೇಗೆ ತಿಳಿಯಬೇಕು?
ಇದು ವೇದಪ್ರಾಮಾಣ್ಯವಾದಿಗಳು ಲೌಕಿಕಶಾಬ್ದಿಕರ ಮೇಲೆಯೂ ಅವರನನ್ನು ಅನುಸರಿಸುವ ಆಲಂಕಾರಿಕರ ಮೇಲೆಯೂ ಮಾಡಬಹುದಾದ ಆಕ್ಷೇಪ. ಆಲಂಕಾರಿಕರು ತಮ್ಮ ಗ್ರಂಥಗಳ ದೋಷಪ್ರಕರಣಗಳಲ್ಲಿ ಎಷ್ಟೆಲ್ಲ ಬಗೆಯ ವ್ಯಾಕರಣದೋಷಗಳನ್ನು ಹೇಳುವಾಗಲೂ ಶಿಕ್ಷಾಶಾಸ್ತ್ರದಲ್ಲಿ ಪ್ರಸಿದ್ಧವಾದ ಸ್ವರಗಳನ್ನು ಕುರಿತ ದೋಷಗಳನ್ನು ಗಣಿಸುವುದಿಲ್ಲ. ಪದಗಳ ಒಳತಿರುಳಿನ ಸಾಧುತ-ಅಸಾಧುತ್ವಕ್ಕಿಂತ ಮೊದಲು ಬರುವುದು ಹೊರಗೇ ಕೇಳಿಬರುವ ಸ್ವರಗಳ ಯುಕ್ತಾಯುಕ್ತತೆ. ಇದನ್ನೇ ಲೆಕ್ಕಿಸದವರ ಶಾಸ್ತ್ರಕ್ರಮವಾದರೂ ಎಂಥದ್ದೆಂಬುದು ಸದ್ಯದ ತಿವಿತ.
ವಸ್ತುತಃ ಇದು ಆಕ್ಷೇಪವೇ ಅಲ್ಲ. ಏಕೆಂದರೆ ಶಿಕ್ಷಾಶಾಸ್ತ್ರಾನುಸಾರವಾಗಿ ಯಾವುದೇ ಶಬ್ದದ ಸ್ವರಗಳನ್ನು ಗುರುತಿಸಿಕೊಳ್ಳಬಹುದು. ವ್ಯಾಕರಣದಲ್ಲಿ ಕೂಡ ಧಾತುಗಳ ಸ್ತರದಲ್ಲಿ ಸ್ವರಗಳನ್ನು ಗಮನಿಸಲಾಗಿದೆ. ಇದರ ಮೇಲೆ ಸ್ವರವಿಲ್ಲದೆ ಮಾಡಿದ ಉಚ್ಚಾರಕ್ಕೆ ದೋಷವಿಲ್ಲವೆಂದೂ ಲೌಕಿಕಸಂಸ್ಕೃತಕ್ಕೆ ಸ್ವರವು ಅನಿವಾರ್ಯವಲ್ಲವೆಂದೂ ಶಾಸ್ತ್ರಜ್ಞರು ತಿಳಿಸಿದ್ದಾರೆ.
ಧ್ವನಿಗೆ ನಿದರ್ಶನವಾಗುವ ಅಶ್ಲೀಲಕವಿತೆಯನ್ನು ಹೀಗೆ ಆಕ್ಷೇಪಿಸಲಾಗಿದೆ:
ಅಥಾನ್ಯ ಏವ ಕಲ್ಪ್ಯಂತೇ ಗುಣದೋಷಾ ನಿಜೇಚ್ಛಯಾ |
ಕಾಕದಂತಾಃ ಪರೀಕ್ಷ್ಯಂತಾಂ ಗೃಹ್ಯಂತಾಂ ಗ್ರಾಮ್ಯಸೂಕ್ತಯಃ || (೨೦.೯)
ನಿಮ್ಮ ಇಚ್ಛೆಗೆ ಬಂದ ಹಾಗೆ ಗುಣ-ದೋಷಗಳನ್ನು ಊಹಿಸತೊಡಗುತ್ತೀರಿ. ಆದುದರಿಂದಲೇ ಗ್ರಾಮ್ಯಕವಿತೆಗಳು ಸ್ವೀಕೃತವಾಗುತ್ತವೆ, ಕಾಗೆಯ ಹಲ್ಲುಗಳೂ ಎಣಿಕೆಗೆ ಬರುತ್ತವೆ.
ಧ್ವನಿನಿರೂಪಣೆಗಾಗಿ ಪ್ರಾಕೃತಗಾಥೆಗಳನ್ನು ಬಳಸಿಕೊಳ್ಳುವ ಪರಿಪಾಟಿ ಆನಂದವರ್ಧನನಿಂದ ಮೊದಲ್ಗೊಂಡು ಸಾಗಿಬಂದಿದೆ. ಇವೆಲ್ಲ ಕೆಲಮಟ್ಟಿಗೆ ಹಳ್ಳಿಯ ಹೆಂಗಸರ ಹಾದರದ ಗುಟ್ಟುಗಳನ್ನು ಅವಲಂಬಿಸಿವೆ. ಆದರೆ ಇವನ್ನು ಧ್ವನಿಯ ಸ್ಥಾಪನೆಗಾಗಿ ಬಳಸಿಕೊಂಡಿರುವುದಲ್ಲದೆ ಅತ್ಯುತ್ತಮಕಾವ್ಯಕ್ಕೆ ಉದಾಹರಣೆಗಳಾಗಿ ಹೇಳಿಲ್ಲ. ಧ್ವನಿಪ್ರಭೇದಗಳ ಪೈಕಿ ರಸಧ್ವನಿ ಸರ್ವೋಚ್ಚವಾಗಿ ಸರ್ವತ್ರ ಸಂದಿದ್ದರೂ ಅದು ಬ್ರಹ್ಮವಸ್ತುವಿನಂತೆ ನಿರ್ವಚನಕ್ಕೆ ದಕ್ಕುವುದಿಲ್ಲ. ವಸ್ತುಧ್ವನಿಯಾದರೋ ಸಗುಣಬ್ರಹ್ಮದಂತೆ ಮುಷ್ಟಿಮೇಯ, ಸುನಿರ್ದೇಶ್ಯ. ಹೀಗಾಗಿ ವಸ್ತುಧ್ವನಿಯೇ ವಿಪುಲವಾಗಿರುವ ಅಸತೀಚಾರಿತ್ರ್ಯದ ಚಮತ್ಕಾರೋಕ್ತಿಗಳನ್ನು ವಿಷಯಗ್ರಹಣೆಗಾಗಿ ಬಳಸಿಕೊಳ್ಳುತ್ತಾರೆ. ಇದನ್ನು ತಿಳಿದೂ ಸೋದ್ದಿಷ್ಟವಾಗಿ ಮಾಡಿದ ಕುತರ್ಕ ಸದ್ಯದ ಪದ್ಯದಲ್ಲಿದೆ. ಧ್ವನಿಯೆಂಬುದು ವಸ್ತುತಃ ಇಲ್ಲದ ತತ್ತ್ವ; ಅದು ಕಾಗೆಯ ಹಲ್ಲಿನಂತೆ ವಿಕಲ್ಪಜ್ಞಾನ; ಇಂಥದ್ದನ್ನು ವಿವೇಚಿಸುವುದಾದರೂ ಏಕೆ, ಹೇಗೆ ಎಂಬುದು ಮನೋರಥ, ಜಯಂತಭಟ್ಟ ಮುಂತಾದ ಹಳಬರ ಲೇವಡಿಮಾತು.[2] ಇದಕ್ಕೆಲ್ಲ ಆನಂದವರ್ಧನಾದಿಗಳು ತಕ್ಕ ಉತ್ತರವನ್ನು ನೀಡಿರುವುದು ಇತಿಹಾಸಪ್ರಸಿದ್ಧ.
ವ್ಯಂಜನಾವ್ಯಾಪಾರಕ್ಕಿರುವ ಅನುರಣನಶೀಲತೆಯನ್ನು ಹೀಗೆ ವಿಡಂಬಿಸಲಾಗಿದೆ:
ಅರ್ಥಾನಪಿ ವ್ಯಾಪ್ನುವತೀ ಹತಸರ್ವನಿಯಂತ್ರಣಾ |
ವ್ಯಂಜನಾ ಶಬ್ದವೃತ್ತಿಶ್ಚೇದ್ವೇಶ್ಯಾ ಪತ್ನೀ ನ ಕಿಂ ಭವೇತ್ || (೨೦.೧೫)
ವ್ಯಂಜನಾವ್ಯಾಪಾರವು ಎಲ್ಲ ನಿಯಂತ್ರಣವನ್ನೂ ಮೀರಿ ಅನೇಕಾರ್ಥಗಳನ್ನು ಹೊಮ್ಮಿಸಬಲ್ಲುದಾದರೆ ವೇಶ್ಯೆಯೇ ಏಕೆ ಪತ್ನಿಯೆನಿಸಬಾರದು?
ಅಭಿಧಾವೃತ್ತಿಯಲ್ಲಿ ಈ ಪದಕ್ಕೆ ಇದೇ ಅರ್ಥವೆಂಬ ನಿಶ್ಚಯವಿರುತ್ತದೆ. ಹೀಗಾಗಿ ಇದು ಶಬ್ದವೆಂಬ ಪತಿಗೆ ಧರ್ಮಪತ್ನಿ ಇದ್ದಂತೆ. ಆದರೆ ವ್ಯಂಜನೆಯಲ್ಲಿ ಇಂಥ ಶಬ್ದಕ್ಕೆ ಇಂಥದ್ದೇ ಅರ್ಥವೆಂಬ ನೈಯತ್ಯವೆಂದೂ ಇಲ್ಲದ ಕಾರಣ ಧ್ವನಿಯು ವಿವಾಹದ ಕಟ್ಟುಪಾಡಿಲ್ಲದ ಹೆಣ್ಣಿನಂತೆ ಸ್ವೈರಿಣಿಯೆನಿಸುತ್ತದೆ! ಈ ಆಕ್ಷೇಪವೂ ಹುರುಳಿಲ್ಲದ್ದು. ವ್ಯಂಜನಾವ್ಯಾಪಾರ ಔಚಿತ್ಯವೆಂಬ ಅಂಕುಶದಿಂದ ಸದಾ ನಿಯಂತ್ರಿತ; ಇಲ್ಲವಾದಲ್ಲಿ ರಸಕ್ಕೆ ಅವಕಾಶವೇ ಇರುವುದಿಲ್ಲ.
[1] ಪ್ರಸ್ಥಾನಭೇದ, ಪು. ೨
[2] ಯಸ್ಮಿನ್ನಸ್ತಿ ನ ವಸ್ತು ಕಿಂಚನ ಮನಃಪ್ರಹ್ಲಾದಿ ಚಾಲಂಕೃತಿ
ವ್ಯುತ್ಪನ್ನೈ ರಚಿತಂ ಚ ನೈವ ವಚನೈರ್ವಕ್ರೋಕ್ತಿಶೂನ್ಯಂ ಚ ಯತ್ |
ಕಾವ್ಯಂ ತದ್ಧ್ವನಿನಾ ಸಮನ್ವಿತಮಿತಿ ಪ್ರೀತ್ಯಾ ಪ್ರಶಂಸಞ್ಜಡೋ
ನೋ ವಿದ್ಮೋऽಭಿದಧಾತಿ ಕಿಂ ಸುಮತಿನಾ ಪೃಷ್ಟಃ ಸ್ವರೂಪಂ ಧ್ವನೇಃ || (ಧ್ವನ್ಯಾಲೋಕ, ೧.೧ ವೃತ್ತಿಯಲ್ಲಿ ಉದ್ಧೃತ)
ಏತೇನ ಶಬ್ದಸಾಮರ್ಥ್ಯಮಹಿಮ್ನಾ ಸೋऽಪಿ ವಾರಿತಃ | ಯಮನ್ಯಃ ಪಂಡಿತಂಮನ್ಯಃ ಪ್ರಪೇದೇ ಕಂಚನ ಧ್ವನಿಮ್ ||
ಅಥವಾ ನೇದೃಶೀ ಚರ್ಚಾ ಕವಿಭಿಃ ಸಹ ಶೋಭತೇ | ವಿದ್ವಾಂಸೋऽಪಿ ವಿಮುಹ್ಯಂತಿ ವಾಕ್ಯಾರ್ಥಗಹನೇऽಧ್ವನಿ || (ನ್ಯಾಯಮಂಜರಿ, ೧.೧೪೮,೧೫೧)
To be continued.